Tag: ಲೋಕಸಭೆ ಚುನಾವಣೆ

  • ತುಮಕೂರಲ್ಲಿ ಕಾಂಗ್ರೆಸ್ ಬೇರು ಕಿತ್ತುಕೊಂಡು ಹೋಗಿದೆ: ವಿ.ಸೋಮಣ್ಣ

    ತುಮಕೂರಲ್ಲಿ ಕಾಂಗ್ರೆಸ್ ಬೇರು ಕಿತ್ತುಕೊಂಡು ಹೋಗಿದೆ: ವಿ.ಸೋಮಣ್ಣ

    ತುಮಕೂರು: ಸೋಮಣ್ಣನಂತವರು ನೂರು ಜನ ಬಂದರು ತುಮಕೂರು ಕ್ಷೇತ್ರವನ್ನ ಅಲುಗಾಡಿಸೋಕೆ ಆಗಲ್ಲ. ಬೇರು ಸಮೇತ ಕಿತ್ತು ಹಾಕ್ತಿವಿ ಎಂಬ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆಗೆ ಮಾಜಿ ಸಚಿವ ಸೋಮಣ್ಣ ಖಡಕ್ ತಿರುಗೇಟು ನೀಡಿದ್ದಾರೆ.

    ಸಿದ್ದಗಂಗಾ ಮಠಕ್ಕೆ ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಜೊತೆ ಬಂದಿದ್ದ ವಿ.ಸೋಮಣ್ಣ ಅವರು ಮಾಧ್ಯಮಗಳ ಜೊತೆ ಮಾತನಾಡಿ, ತಮ್ಮ ಬಗ್ಗೆ ಡಿಸಿಎಂ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು. ನಮ್ಮನ್ನ ಬೇರು ಸಮೇತ ಕಿತ್ತಾಕೋದು ಇರಲಿ ಪರಮೇಶ್ವರ್ ಅವರ ಬೇರೇ ಕಿತ್ತುಕೊಂಡು ಹೋಗಿದೆ. ತುಮಕೂರು ಲೋಕಸಭಾ ವ್ಯಾಪ್ತಿಯಲ್ಲಿ ಅವರ ಪಕ್ಷದ ಗುರುತು ಇಲ್ಲ. ಅವರು ಕಳೆದು ಹೋಗಿದ್ದಾರೆ. ಪರಮೇಶ್ವರ್ ಡಾಕ್ಟರೆಟ್ ಮಾಡಿದ್ದಾರೆ. ದೇವೆಗೌಡರ ಸ್ಪರ್ಧೆಯಿಂದ ಯಾರಿಗೆ ಲಾಸ್ ಎಂದು ನನಗಿಂತ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಕಾಲೆಳೆದರು.

    ಪರಮೇಶ್ವರ್, ಮುದ್ದಹನುಮೇಗೌಡರಿಗೆ, ರಾಜಣ್ಣರಿಗೆ ಎಚ್‍ಡಿಡಿ ಅವರು ತುಮಕೂರಿನಿಂದ ಸ್ಪರ್ಧಿಸಿದರೇ ಲಾಸ್ ಆಗುತ್ತೆ. ಡಾಕ್ಟರ್ ಹೇಳಿದ್ದನ್ನ ಸ್ವೀಕಾರ ಮಾಡುತ್ತೇವೆ. ಎಲ್ಲೆಡೆ ಮೋದಿಯ ಸುನಾಮಿ ಗಾಳಿ ಬೀಸುತ್ತಿದೆ ಎಂದು ಹೇಳಿದರು.

  • ಸಾಲಮನ್ನಾ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತ: ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ

    ಸಾಲಮನ್ನಾ ಹೆಸರಿನಲ್ಲಿ ರಾಜ್ಯದ ಅಭಿವೃದ್ಧಿ ಸ್ಥಗಿತ: ಸರ್ಕಾರದ ವಿರುದ್ಧ ಬಿಎಸ್‍ವೈ ಕಿಡಿ

    ಬಳ್ಳಾರಿ: ಸಾಲಮನ್ನಾದ ಹೆಸರಿನಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ಈ ನೆಪದಲ್ಲಿ ರಾಜಕೀಯ ಆಟ ಮಾಡಿಕೊಂಡು ಅಪ್ಪ ಮಕ್ಕಳು ಆಡಳಿತ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ 46 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುತ್ತೇವೆ ಎಂದರು. ಎಲ್ಲಿ ಸಾಲಮನ್ನಾವಾಗಿದೆ? ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದು 9 ತಿಂಗಳು ಕಳೆದಿದೆ. ಆದ್ರೆ ಈವರೆಗೆ ಕೇವಲ 4.5 ಸಾವಿರ ಕೋಟಿ ರೂ. ಸಾಲಮನ್ನಾ ಮಾಡಿದ್ದಾರೆ. ರೈತರ ಸಾಲಮನ್ನಾ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ. ಈ ನೆಪದಲ್ಲಿ ರಾಜ್ಯದಲ್ಲಿ ಎಲ್ಲಾ ಅಭಿವೃದ್ಧಿ ಕಾರ್ಯ ಸ್ಥಗಿತವಾಗಿದೆ. ರಾಜ್ಯದಲ್ಲಿ ರಾಜಕೀಯ ಆಟ ಆಡಿಕೊಂಡು ಅಪ್ಪ ಮಕ್ಕಳು ಆಡಳಿತ ನಡೆಸುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಸ್ಥಿತಿ ಎಲ್ಲಿಗೆ ಬಂದಿದೆ ನೋಡಿ. ದೇವೇಗೌಡರು ಕೊನೆಗಳಿಗೆಯವರೆಗೂ ಕಾದು ನಂತರ ತುಮಕೂರಿನಲ್ಲಿ ಸ್ಪರ್ಧೆ ಮಾಡುವಂತಾಗಿದೆ ಎಂದು ಟೀಕಿಸಿದರು.

    ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಕಾಂಗ್ರೆಸ್ ಒಂದಾಗಿರುವುದು ಬಿಜೆಪಿಗೆ ವರದಾನವಾಗಿದೆ. ಈ ವಿಚಾರವೇ ನಾವು ಹೆಚ್ಚು ಸೀಟು ಗೆಲ್ಲಲು ಲಾಭವಾಗುತ್ತದೆ. ಕಲ್ಬುರ್ಗಿಯಲ್ಲಿ ನೂರಕ್ಕೂ ನೂರರಷ್ಟು ಗೆಲ್ಲುತ್ತೇವೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

    ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದೇಶದಲ್ಲಿ 300ಕ್ಕೂ ಸ್ಥಾನ ಗೆಲ್ಲಲಿದೆ. ರಾಜ್ಯದಲ್ಲಿ ಮಂಡ್ಯ ಸೇರಿದಂತೆ 22 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ನಾನು 1,800 ಕೋಟಿ ಹಣ ಕೇಂದ್ರ ನಾಯಕರಿಗೆ ನೀಡಿದ್ದೇನೆ ಅಂತಾ ರಾಹುಲ್ ಹೇಳುತ್ತಿರುವುದು ಶೋಭೆ ತರಲ್ಲ. ಹಣ ನೀಡಿರುವುದನ್ನು ಬಹಿರಂಗಪಡಿಸಿ. ಆಗ ನಾನು ರಾಜಕೀಯ ನಿವೃತ್ತಿ ಪಡೆಯುತ್ತೆನೆ. ಇಲ್ಲದಿದ್ದರೆ ರಾಹುಲ್ ಗಾಂಧಿ ದೇಶದ ಜನರ ಮುಂದೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ ನಡೆದುಕೊಳ್ಳುತ್ತಿರುವ ರೀತಿ ಸರಿಯಲ್ಲ. ಅವರಿಗೆ ಸೋಲಿನ ಭೀತಿ ಶುರುವಾಗಿದೆ. ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಎನೂ ಅಂತಾ ಪ್ರಶ್ನೆ ಮಾಡುತ್ತಿರುವುದು ಸರಿಯಲ್ಲ. ಅಂಬರೀಶ್ ಇದ್ದಾಗ ಅವರ ಪರವಾಗಿದ್ದು, ಅವರು ನಿಧನರಾದ ನಂತರ ಪಾರ್ಥಿವ ಶರೀರ ತಗೆದುಕೊಂಡು ಹೋಗಿದ್ದರು. ಇದೀಗ ಅವರ ಕೊಡುಗೆ ಎನು ಎಂದು ಪ್ರಶ್ನೆ ಮಾಡುವುದು ಜನರು ಗಮನಿಸುತ್ತಿದ್ದಾರೆ. ಸುಮಲತಾ ಹಾಗೂ ಚಿತ್ರನಟರ ಬಗ್ಗೆ ಕೀಳಾಗಿ ಮಾತನಾಡುವುದು ಸರಿಯಲ್ಲ. ನಾವು ಸುಮಲತಾರಿಗೆ ಬೆಂಬಲ ನೀಡುತ್ತೇವೆ ಎಂದರು.

    2014ರ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಅಲೆ ಹೆಚ್ಚಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಿದೆ. ಶ್ರೀರಾಮುಲು ಸೇರಿದಂತೆ ಎಲ್ಲರೂ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಆದರಿಂದ ಭಾರಿ ಅಂತರದಿಂದ ಬಳ್ಳಾರಿಯಲ್ಲಿ ಗೆಲುವು ಸಾಧಿಸುತ್ತೇವೆ. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಸರ್ಕಾರ ಉಳಿಯಲ್ಲ. 22 ಸ್ಥಾನ ಗೆದ್ದ ನಂತರ ನೀವೇ ನೋಡಿ ಎಂದರು.

  • ಮದ್ಯಪ್ರಿಯರಿಗೆ ಶಾಕ್- ವೈನ್‍ಶಾಪ್, ಬಾರ್‌ಗಳಲ್ಲಿ ನೋ ಸ್ಟಾಕ್!

    ಮದ್ಯಪ್ರಿಯರಿಗೆ ಶಾಕ್- ವೈನ್‍ಶಾಪ್, ಬಾರ್‌ಗಳಲ್ಲಿ ನೋ ಸ್ಟಾಕ್!

    ಚಾಮರಾಜನಗರ: ಲೋಕಸಭಾ ಚುನಾವಣಾ ಎಫೆಕ್ಟ್ ಎಂಬಂತೆ ಜಿಲ್ಲೆಯಾದ್ಯಂತ ಎಣ್ಣೆಗೆ ಬರ ಬಂದಿದ್ದು, ನಗರದ ಮದ್ಯದಂಗಡಿಗಳಲ್ಲಿ ಸ್ಟಾಕ್ ಇಲ್ಲದ ಕಾರಣಕ್ಕೆ ಮದ್ಯಪ್ರಿಯರಿಗೆ ಚುನಾವಣೆ ತಲೆನೋವಾದಂತಾಗಿದೆ.

    ಹೌದು, ಲೋಕಸಭೆ ಚುನವಾಣೆ ಹತ್ತಿರ ಬರುತ್ತಿದಂತೆ ಮದ್ಯಪಾನಕ್ಕೆ ಜಿಲ್ಲೆಯಲ್ಲಿ ಬರಗಾಲ ಬಂದಂತಾಗಿದೆ. ಬಹುಬೇಗನೆ ಬಾರ್, ವೈನ್ ಶಾಪ್‍ಗಳಲ್ಲಿದ್ದ ಸ್ಟಾಕ್‍ಗಳು ಖಾಲಿಯಾಗುತ್ತಿವೆ. ಚುನಾವಣೆಯ ಹಿನ್ನೆಲೆ ಅಬಕಾರಿ ಇಲಾಖೆ ಸರಾಸರಿಗಿಂತ ಹೆಚ್ಚಿನ ಪ್ರಮಾಣದ ಮದ್ಯಕ್ಕೆ ಬ್ರೇಕ್ ಹಾಕಿದ್ದು, ಒಂದು ವೇಳೆ ಹೆಚ್ಚಿನ ಪ್ರಮಾಣದ ಮದ್ಯ ಸರಬರಾಜು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮದ್ಯದಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.

    ಚುನಾವಣೆಯ ವೇಳೆ ಜನರಿಗೆ ಮದ್ಯ ಹಾಗೂ ಹಣದ ಆಮಿಷವೊಡ್ಡಿ ಮತವನ್ನು ಪಡೆಯಲು ಕೆಲವರು ಮುಂದಾಗುತ್ತಾರೆ ಎಂಬ ಕಾರಣಕ್ಕೆ ಅಕ್ರಮ ಮದ್ಯ ಸಾಗಾಣಿಕೆ, ಅಕ್ರಮ ದಾಸ್ತಾನಿನ ಮೇಲೆ ಅಬಕಾರಿ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ನೀತಿಸಂಹಿತೆ ಜಾರಿಯಾದ ದಿನದಿಂದ ಈವರೆಗೆ ಅಬಕಾರಿ ಇಲಾಖೆ ವಿವಿಧೆಡೆ ದಾಳಿ ನಡೆಸಿ 8373 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಈವರೆಗೂ 356 ಕಡೆ ದಾಳಿ ಮಾಡಿ, 176 ಆರೋಪಿಗಳನ್ನು ಬಂಧಿಸಿದ್ದು, ಸುಮಾರು 45 ಲಕ್ಷ ರೂ. ಮೌಲ್ಯದ ಮದ್ಯವನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆ ಉಪ ಆಯುಕ್ತ ಮುರಳಿ ಮಾಹಿತಿ ನೀಡಿದ್ದಾರೆ.

  • ಮೈತ್ರಿ ನಾಯಕರು ಒಟ್ಟಾದ್ರೂ ಕಾರ್ಯಕರ್ತರು ಮಾತ್ರ ಸಾಥ್ ಕೊಡ್ತಿಲ್ಲ!

    ಮೈತ್ರಿ ನಾಯಕರು ಒಟ್ಟಾದ್ರೂ ಕಾರ್ಯಕರ್ತರು ಮಾತ್ರ ಸಾಥ್ ಕೊಡ್ತಿಲ್ಲ!

    ಬೆಂಗಳೂರು: ಜೆಡಿಎಸ್-ಕಾಂಗ್ರೆಸ್ ನಡುವೆ ಚುನಾವಣಾ ಮೈತ್ರಿಯೇನೋ ಆಗಿರಬಹುದು. ಆದ್ರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಮೈತ್ರಿಯಲ್ಲಿ ಅಸಹಕಾರದ ಭಯ ಕಾಡುತ್ತಿದೆಯಾ ಅನ್ನೋ ಅನುಮಾನ ಶುರುವಾಗಿದೆ.

    ಹೌದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯನ್ನ ಮಣಿಸಲೇಬೇಕೆಂದು ಹಠಕ್ಕೆ ಬಿದ್ದು ಮೈತ್ರಿ ಮಾಡಿಕೊಂಡಿರೋ ಜೆಡಿಎಸ್ – ಕಾಂಗ್ರೆಸ್ ಸ್ಥಿತಿ ಇದೀಗ ಅಕ್ಷರಃ ಗೊಂದಲದ ಗೂಡಾಗಿದೆ. ಮೇಲ್ನೋಟಕ್ಕೆ ಮೈತ್ರಿ ನಾಯಕರ ನಡುವೆ ಕೊಂಚ ಸಮನ್ವಯತೆ ಕಂಡರೂ ಬಹುತೇಕ ಜಿಲ್ಲೆಗಳಲ್ಲಿ ಕಾರ್ಯಕರ್ತರ ನಡುವಿನ ಒಗ್ಗಟ್ಟು ಹೇಳತೀರದು. ಹಾವು-ಮುಂಗುಸಿಯಂತಿದ್ದ ಕೈ ಹಾಗೂ ತೆನೆ ಹೊತ್ತ ಕಾರ್ಯಕರ್ತರು ಸದ್ಯಕ್ಕೆ ಒಂದಾಗೋ ಲಕ್ಷಣಗಳು ಕಾಣಿಸ್ತಾ ಇಲ್ಲ. ಇದರಿಂದ ಮೈತ್ರಿ ನಾಯಕರಲ್ಲಿ ಆತಂಕ ಶುರುವಾಗಿದೆ. ಹೀಗಾಗಿಯೇ ರಾಹುಲ್ ಗಾಂಧಿ ಭಾನುವಾರ ಬೆಂಗಳೂರಿನಲ್ಲಿ ನಡೆದ ಮೈತ್ರಿ ನಾಯಕರ ಪ್ರಚಾರ ಸಭೆಯಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರ ಸಮನ್ವಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದ್ದರು.

    ರಾಹುಲ್ ತಮ್ಮ ಮಾತಿನುದ್ದಕ್ಕೂ ಜೆಡಿಎಸ್ ಗೆಲುವಿಗೆ ಕಾಂಗ್ರೆಸ್ ಕಾರ್ಯಕರ್ತರು ಸಹಕರಿಸಬೇಕು. ಮೈತ್ರಿ ಪಕ್ಷದ ಪರ ಪ್ರಚಾರ ನಡೆಸಬೇಕು ಅನ್ನೋದನ್ನೇ ಹೈಲೈಟ್ ಮಾಡಿದ್ದರು. ಅಂದಹಾಗೆ ರಾಹುಲ್ ಸಮನ್ವಯತೆ ಜಪ ಮಾಡೋದರ ಹಿಂದೆ ದಳಪತಿಗಳ ಮನವಿ ಇತ್ತಾ ಅನ್ನೋದು ಇದೀಗ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಯಾಕೆಂದರೆ ಮಂಡ್ಯದಲ್ಲಿ ರಾಜ್ಯ ನಾಯಕರ ಎಚ್ಚರಿಕೆ ನಡುವೆಯೂ ಕೈ ಕಾರ್ಯಕರ್ತರು ಜೆಡಿಎಸ್‍ಗೆ ಸಾಥ್ ನೀಡ್ತಿಲ್ಲ. ಹೀಗಾಗಿ ರಾಹುಲ್ ಬಾಯಿಂದಲೇ ಕಾರ್ಯಕರ್ತರಿಗೆ ಮೈತ್ರಿ ನಾಯಕರು ಸಮನ್ವಯತೆಯ ಪಾಠ ಮಾಡಿಸಿದ್ದಾರೆ ಎನ್ನಲಾಗಿದೆ. ಹಾಗೆಯೇ ಈ ವೇಳೆ ಸಿಎಂ ಕುಮಾರಸ್ವಾಮಿ ಕೂಡ ಕೈ ಅಭ್ಯರ್ಥಿಗಳು ಇರೋ ಕಡೆ ದಳ ಕಾರ್ಯಕರ್ತರು ಹೆಗಲು ಕೊಟ್ಟು ದುಡಿಯಿರಿ ಎಂದು ಕರೆ ನೀಡಿದರು.

    ಇದಿಷ್ಟೇ ಅಲ್ಲ ಸಮಾವೇಶದ ಬಳಿಕ ನಡೆದ ಸಭೆಯಲ್ಲೂ 2 ಪಕ್ಷಗಳ ಕಾರ್ಯಕರ್ತರ ನಡುವಿನ ಸಹಕಾರದ ಬಗ್ಗೆಯೇ ಹೆಚ್ಚು ಚರ್ಚೆ ನಡೆಯಿತೆನ್ನಲಾಗಿದೆ. ಅಲ್ಲದೆ ಜಂಟಿ ಸಮಾವೇಶದ ಮೂಲಕ ದೇಶಕ್ಕೆ ಮಹಾಮೈತ್ರಿಯ ಸಂದೇಶ ಕಳುಹಿಸಲು ಸಜ್ಜಾಗಿದ್ದ ಮೈತ್ರಿ ನಾಯಕರಿಗೆ ಕಾರ್ಯಕರ್ತರ ಮುನಿಸು ತಲೆನೋವಾಗಿ ಪರಿಣಮಿಸಿದೆ.

  • ಲೋಕಸಮರದ ಬಳಿಕ ಬಿಎಸ್‍ವೈಗೆ ಫುಲ್ ರೆಸ್ಟ್- ಸಚಿವ ಡಿಕೆಶಿ ಭವಿಷ್ಯ

    ಲೋಕಸಮರದ ಬಳಿಕ ಬಿಎಸ್‍ವೈಗೆ ಫುಲ್ ರೆಸ್ಟ್- ಸಚಿವ ಡಿಕೆಶಿ ಭವಿಷ್ಯ

    ಶಿವಮೊಗ್ಗ: ಕಾಂಗ್ರೆಸ್ ನಾಯಕ ಹಾಗೂ ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ರಾಘವೇಂದ್ರ ಅವರ ಮೇಲೆ ದಿಢೀರ್ ಪ್ರೀತಿ, ಅನುಕಂಪ ಹುಟ್ಟಿದೆ. ಲೋಕಸಭಾ ಚುನಾವಣೆಯ ನಂತರ ಬಿಎಸ್‍ವೈ ಫುಲ್ ರೆಸ್ಟ್ ತೆಗೆದುಕೊಳ್ಳುತ್ತಾರೆ ಎಂದು ಡಿಕೆಶಿ ಭವಿಷ್ಯ ನುಡಿದಿದ್ದಾರೆ.

    ಶಿವಮೊಗ್ಗ ಮೈತ್ರಿ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರಕ್ಕೆ ಶಿವಮೊಗ್ಗ ಜಿಲ್ಲೆಗೆ ಡಿಕೆಶಿ ಕಾಲಿಟ್ಟಿದ್ದಾರೆ. ಶನಿವಾರ ಭದ್ರಾವತಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನಂಗೆ ಬೇಸರ ಇರೋದು ಬಿಜೆಪಿ ಹೈಕಮಾಂಡ್ ಮೇಲೆ ಹೊರತಾಗಿ ಬಿಎಸ್‍ವೈ, ಬಿವೈಆರ್ ಮೇಲಲ್ಲ. ಬಿಎಸ್‍ವೈ ಮೇಲೆ ಬಿಜೆಪಿ ಹೈಕಮಾಂಡ್‍ಗೆ ಲವ್ ಇದ್ದಿದ್ರೆ ಕೇಂದ್ರದಲ್ಲಿ ಮಂತ್ರಿ ಆಗಿರುತ್ತಿದ್ದರು. ಆದ್ರೆ ಇನ್ನೂ ರಾಜ್ಯ ರಾಜಕಾರಣದಲ್ಲೇ ಇದ್ದಾರೆ. ಪಾರ್ಲಿಮೆಂಟ್‍ನಲ್ಲಿ ಇಲ್ಲಿವರೆಗೂ ರಾಘವೇಂದ್ರ ಒಂದೂ ಮಾತಾಡಿಲ್ಲ. ಅದಕ್ಕೆ ನನ್ನ ತಮ್ಮ ರಾಘವೇಂದ್ರ ಸ್ವಲ್ಪ ರೆಸ್ಟ್ ತೆಗೆದುಕೊಳ್ಳಲಿ. ಅಣ್ಣ ವಿಪಕ್ಷ ನಾಯಕರಾಗೇ ಇರಲಿ. ನಾನು ಮಂತ್ರಿಯಾಗೇ ಇರುತ್ತೇನೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಬಿಎಸ್‍ವೈ ಭದ್ರಕೋಟೆಗೆ ಡಿಕೆಶಿ ಎಂಟ್ರಿ

    ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್‍ಕುಮಾರ್‍ಗೆ ಬಿಜೆಪಿ ಟಿಕೆಟ್ ನೀಡದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ತೇಜಸ್ವಿನಿ ಅನಂತ್‍ಕುಮಾರ್ ಗೆ ಎಂಥಾ ಸ್ಥಿತಿ ಬಂತು ನೋಡಿ. ಇನ್ನು ಬಿಎಸ್‍ವೈ ಸ್ಥಿತಿ ಏನಾಗುತ್ತೇ ಯೋಚನೆ ಮಾಡಿ ಎಂದು ಕುಟುಕಿದ್ದಾರೆ.

    ಡಿಕೆಶಿ ಅವರ ಈ ಮಾತುಗಳಿಂದ ಯಡಿಯೂರಪ್ಪ ಬಗ್ಗೆ ಬಿಜೆಪಿ ಹೈಕಮಾಂಡ್‍ಗೆ ಪ್ರೀತಿ ಇಲ್ವಾ, ಲೋಕಸಮರದ ಬಳಿಕ ಬಿಎಸ್‍ವೈರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಹೈಕಮಾಂಡ್ ಕಿತ್ತೊಗೆಯುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಅಲ್ಲದೆ ಯಡಿಯೂರಪ್ಪನ ಬಗ್ಗೆ ಸಚಿವ ಡಿಕೆ ಶಿವಕುಮಾರ್‍ಗೆ ಬೇಸರಾನೇ ಇಲ್ವಾ, ಡಿಕೆ ಶಿವಕುಮಾರ್ ತಮ್ಮನಾ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರ ಎನ್ನುವ ಹಲವು ಪ್ರಶ್ನೆ ಸದ್ಯ ಹುಟ್ಟುಕೊಂಡಿದ್ದು, ರಾಜಕೀಯ ಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

  • ರಾಹುಲ್ ಗಾಂಧಿ `ಕೈ’ ಸೇರಿದ ಬಿಟೌನ್ ಬೆಡಗಿ ಉರ್ಮಿಳಾ

    ರಾಹುಲ್ ಗಾಂಧಿ `ಕೈ’ ಸೇರಿದ ಬಿಟೌನ್ ಬೆಡಗಿ ಉರ್ಮಿಳಾ

    ನವದೆಹಲಿ: ಬಾಲಿವುಡ್ ತಾರೆ ಉರ್ಮಿಳಾ ಮಾತೋಂಡ್ಕರ್ ಅವರು ಬುಧವಾರದಂದು ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಅವರ ನಿವಾಸದಲ್ಲಿಯೇ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

    ಲೋಕಸಭೆ ಚುನಾವಣೆ ಸಮಯದಲ್ಲಿಯೇ ಉರ್ಮಿಳಾ ಅವರು ಕಾಂಗ್ರೆಸ್ ಸೇರ್ಪಡೆಯಾಗಿ, ಪಕ್ಷಕ್ಕಾಗಿ ಕೆಲಸ ಮಾಡಲು ಇಚ್ಚಿಸಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖ್ಯ ವಕ್ತಾರ ರಣ್‍ದೀಪ್ ಸುರ್ಜೆವಾಲ ಅವರು, ಕಾಂಗ್ರೆಸ್ ಪಕ್ಷ ಸೇರಿರುವ ಉರ್ಮಿಳಾ ಅವರು ಇನ್ಮುಂದೆ ಪಕ್ಷದ ಸಿದ್ದಾಂತವನ್ನು ಅರಿತು, ಪಕ್ಷವನ್ನು ಬಲಗೊಳಿಸುವ ಕಾರ್ಯ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಉರ್ಮಿಳಾ ಅವರು, ನಾನು ಕಾಂಗ್ರೆಸ್ ಸಿದ್ದಾಂತವನ್ನು ನಂಬುತ್ತೇನೆ. ಆದರಿಂದ ನಾನು ಕೈ ಪಕ್ಷ ಸೇರಿದ್ದೇನೆ. ನಾನು ಕೇವಲ ಚುನಾವಣಾ ಉದ್ದೇಶಕ್ಕಾಗಿ ಪಕ್ಷಕ್ಕೆ ಸೇರಿಲ್ಲ ಎಂದರು. ಅಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಭಾಗಿಯಾಗಿತ್ತು. ಹಾಗೆಯೇ ಕಾಂಗ್ರೆಸ್ ಸೇರುವ ಮೂಲಕ ದೇಶದೊಳಗಡೆ ಕಳೆದು ಐದು ವರ್ಷಗಳಿಂದ ನಡೆಯುತ್ತಿರುವ ಆಂತರಿಕ ದಾಳಿ ಹಾಗೂ ಇನ್ನು ಹಲವು ವಿಚಾರಗಳ ಬಗ್ಗೆ ಧ್ವನಿಯೆತ್ತುವ ಅವಕಾಶ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ.

    ಲೋಕಸಮರಕ್ಕೆ ಮುಂಬೈ ಉತ್ತರ ಕ್ಷೇತ್ರದಿಂದ ಉರ್ಮಿಳಾ ಅವರಿಗೆ ಕಾಂಗ್ರೆಸ್ ಟಿಕಿಟ್ ನೀಡಲಿದೆ ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದೆ.

  • ಜನಪ್ರತಿನಿಧಿಗೆ ಐಟಿ ಬೆದರಿಕೆ: ಸಚಿವ ತುಕಾರಾಂ

    ಜನಪ್ರತಿನಿಧಿಗೆ ಐಟಿ ಬೆದರಿಕೆ: ಸಚಿವ ತುಕಾರಾಂ

    ಬಳ್ಳಾರಿ: ಕಂಪ್ಲಿಯ ಓರ್ವ ಜನಪ್ರತಿನಿಧಿಗೆ ಐಟಿ ಇಲಾಖೆ, ನಾವು ಹೇಳಿದ ಹಾಗೆ ಕೇಳಬೇಕು. ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ತಟಸ್ಥರಾಗಿ ಉಳಿಯುವಂತೆ ಬೆದರಿಕೆ ಹಾಕಿದೆ ಎಂದು ಸಚಿವ ತುಕಾರಾಂ ಗಂಭೀರ ಆರೋಪ ಮಾಡಿದ್ದಾರೆ.

    ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಪ್ರಧಾನಿ ನರೇಂದ್ರ ಮೋದಿ ರಿಪಬ್ಲಿಕ್ ಆಪ್ ಇಂಡಿಯಾ ಮಾಡಲು ಹೊರಟ್ಟಿದ್ದಾರೆ. ಹೀಗಾಗಿಯೇ ಐಟಿ ಅಧಿಕಾರಿಗಳು ಆದಾಯಗಳಿಕೆ ಬಗ್ಗೆ ನೋಟಿಸ್ ನೀಡದೇ, ವಿಪಕ್ಷಗಳ ಶಾಸಕರು ಹಾಗೂ ನಾಯಕರಿಗೆ ರಾಜಕೀಯ ವಿಚಾರದಲ್ಲಿ ನೋಟಿಸ್ ನೀಡಿದ್ದಾರೆ. ಎಷ್ಟು ಸಲ ಗೆಲುವು ಸಾಧಿಸಿದ್ದೀರಿ? ಎಷ್ಟು ಮತಗಳ ಅಂತರದಿಂದ ಗೆದ್ದಿದ್ದೀರಿ? ಎಷ್ಟು ಆಸ್ತಿ ಇದೆ ಅಂತಾ ಜನಪ್ರತಿನಿಧಿಗಳಿಗೆ ಐಟಿ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಐಟಿ ಅಧಿಕಾರಿಗಳ ಕಾರ್ಯವೈಖರಿಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

    ನಮ್ಮ ಆಸ್ತಿ ಎಷ್ಟಿದೆ? ಹೇಗೆ ಆಸ್ತಿ ಗಳಿಸಿದ್ದೀರಿ ಅನ್ನೋ ಬಗ್ಗೆ ಐಟಿ ಅಧಿಕಾರಿಗಳು ಕೇಳಲಿ. ಆದ್ರೆ ಎಷ್ಟು ಸಾರಿ ಗೆದ್ದಿದ್ದೀರಿ. ಎಷ್ಟು ಮತಗಳಿಂದ ಗೆದ್ದಿದ್ದೀರಿ ಅಂತಾ ನೋಟಿಸ್ ನೀಡೋದು ಎಷ್ಟು ಸರಿ ಎಂದು ಕಿಡಿಕಾರಿದರು. ಅಲ್ಲದೇ ನಮ್ಮ ಆಸ್ತಿ ವಿಚಾರ ಲೋಕಾಯುಕ್ತರು ಕೇಳಲಿ. ಆದರೆ ಐಟಿಯವರಿಗೆ ಈ ವಿಚಾರ ಯಾಕೆ? ನಾವು ಯಾವ ಪಾರ್ಟಿಯಿಂದ ಗೆದ್ದರೇ ಎನೂ? ಐಟಿಯವರಿಗೆ ಯಾಕೆ ಬೇಕು ಇದೆಲ್ಲಾ ಅಂತ ಐಟಿ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದರು. ಅಷ್ಟೇ ಅಲ್ಲದೇ ತಮಗೆ ಮೂರುವರೆ ತಿಂಗಳ ಹಿಂದೆ ಬಂದಿದ್ದ ನೋಟಿಸ್ ಗೆ ಉತ್ತರ ನೀಡಿರುವುದಾಗಿ ತಿಳಿಸಿದರು.

  • ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಮದ್ಯ ನಿಷೇಧಿಸಿದ ರಾಜ್ಯದಲ್ಲೇ ಕುಡಿದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ ಅಂದರ್

    ಪಟ್ನಾ: ಬಿಹಾರ ರಾಜ್ಯದಲ್ಲಿ ಮದ್ಯ ಮಾರಾಟವನ್ನು ಬ್ಯಾನ್ ಮಾಡಲಾಗಿದೆ. ಆದ್ರೆ ಇಲ್ಲಿನ ಪುರ್ನಿಯಾ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕಂಠ ಪೂರ್ತಿ ಕುಡಿದು ಬಂದು ನಾಮಪತ್ರ ಸಲ್ಲಿಸಿ, ಪೊಲೀಸರ ಅತಿಥಿಯಾಗಿದ್ದಾರೆ.

    ಹೌದು, ಪುರ್ನಿಯಾ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿರುವ ರಾಜೀವ್ ಕುಮಾರ್ ಸಿಂಗ್ ಮಂಗಳವಾರ ನಾಮಪತ್ರ ಸಲ್ಲಿಕೆ ವೇಳೆ ಮದ್ಯಪಾನ ಮಾಡಿಕೊಂಡು ಬಂದು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೀವ್ ಮೂಲತಃ ಭಗಲ್‍ಪುರ ಜಿಲ್ಲೆಯವರು. ಮಂಗಳವಾರ ನಾಮಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಗೆ ಬಂದ ಸಂದರ್ಭದಲ್ಲಿ ಅಧಿಕಾರಿಗಳಿಗೆ ಅಭ್ಯರ್ಥಿಯ ವರ್ತನೆ ಕಂಡು ಅನುಮಾನ ಬಂದಿದೆ. ಆಗ ಆಲ್ಕೋ ಮೀಟರ್ ನಿಂದ ಅಭ್ಯರ್ಥಿಯನ್ನು ಪರೀಕ್ಷಿಸಿದಾಗ ಆತ ಕುಡಿದಿರುವುದು ಖಚಿತವಾಗಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

    ಈ ಬಗ್ಗೆ ಖಚಿತವಾದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ರಾಜೀವ್ ಕುಮಾರ್‍ನನ್ನು ಬಂಧಿಸಿದ್ದಾರೆ. ಅಲ್ಲದೆ ರಾಜ್ಯದಲ್ಲಿರುವ ಕಾನೂನನ್ನು ಉಲ್ಲಂಘಿಸಿದಕ್ಕೆ ಆರೋಪಿ ಮೇಲೆ ಪ್ರಕರಣ ಕೂಡ ದಾಖಲಿಸಲಾಗಿದೆ. 2016 ರಲ್ಲಿ ನಿತೀಶ್ ಕುಮಾರ್ ಸರ್ಕಾರ ಆಡಳಿತದಲ್ಲಿದಾಗ, ಬಿಹಾರದಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಿತ್ತು. ಆದರೂ ಕೂಡ ಬಿಹಾರದಲ್ಲಿ ಮದ್ಯ ಮಾರಾಟ ನಿಂತಿಲ್ಲ ಅನ್ನುವುದಕ್ಕೆ ಈ ಘಟನೆಯೇ ಸಾಕ್ಷಿಯಾಗಿದ್ದು, ಈ ಕುರಿತು ರಾಜಕೀಯ ಪಾಳಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ.

    ಬಿಹಾರದ ಪುರ್ನಿಯಾ ಕ್ಷೇತ್ರದಿಂದ ಒಟ್ಟು 18 ಅಭ್ಯರ್ಥಿಗಳು ಲೋಕಸಮರಕ್ಕೆ ಕಣಕ್ಕಿಳಿಯಲಿದ್ದಾರೆ. ಅವರಲ್ಲಿ ಈಗಾಗಲೇ 11 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

  • ಮಂಡ್ಯ ಜನ್ರ ಸೇವೆ ಮಾಡಲು ನಿಂತಿದ್ದೇನೆ – ಸುಮಲತಾಗೆ ಸುಮಲತಾ ಸವಾಲು

    ಮಂಡ್ಯ ಜನ್ರ ಸೇವೆ ಮಾಡಲು ನಿಂತಿದ್ದೇನೆ – ಸುಮಲತಾಗೆ ಸುಮಲತಾ ಸವಾಲು

    ಮಂಡ್ಯ: ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ರೆ ನಾವ್ಯಾರು ನಿಲ್ಲೋದೆ ಬೇಡವಾ? ಜೆಡಿಎಸ್ ನ ನಾಯಕರು ಯಾರೂ ನನಗೆ ಕಣಕ್ಕೆ ನಿಲ್ಲಲು ಸೂಚಿಸಿಲ್ಲ. ನಾನೇ ಪಕ್ಷೇತರವಾಗಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಶ್ರೀರಂಗಪಟ್ಟಣ ತಾಲೂಕಿನ ಟಿಎಂ ಹೊಸೂರು ಸುಮಲತಾ ಹೇಳಿದ್ದಾರೆ.

    ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಹೆಸರಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ, ಸುಮಲತಾ ಅಂಬರೀಶ್ ಅವರ ವಿರುದ್ಧ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಜನತೆಗೆ ಸೇವೆ ಸಲ್ಲಿಸಬೇಕು ಎಂದು ಸ್ಪರ್ಧಿಸಲು ತೀರ್ಮಾನಿಸಿದ್ದೆ. ಹಾಗೆಯೇ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ ಎಂದರು. ಬಳಿಕ ಬೇಕು ಅಂತಲೇ ತಮ್ಮ ವಿರುದ್ಧ ತಮ್ಮ ಹೆಸರಿನ ಅಭ್ಯರ್ಥಿಯನ್ನೆ ಕಣಕ್ಕಿಳಿಸಿದ್ದಾರೆ ಎಂಬ ಸುಮಲತಾ ಅಂಬರೀಶ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿ, ಎಲ್ಲಾ ಗೋತ್ತಿದೆ ಅಂದಮೇಲೆ ಸುಮ್ಮನಿರಲಿ. ಎಲ್ಲಾ ತಿಳಿದುಕೊಂಡಿರುವ ಮೇಲೆ ಸುಮಲತಾ ಅವರು ಮಾತನಾಡುವ ಅವಶ್ಯಕತೆಯೇ ಎಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ

    ಈ ಹಿಂದೆ ನಾನು ತಾಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆಯಾಗಿದ್ದೆ. ಹೀಗಾಗಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡೋಣ ಅಂತ ಮನಸಾಯ್ತು. ಆದರಿಂದ ಸ್ಪರ್ಧೆ ಮಾಡಿದ್ದೇನೆ ಎಂದರು. ಈಗಾಗಲೇ ಜೆಡಿಎಸ್‍ನಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಆದ್ರೆ ನನಗೂ ಜನಸೇವೆ ಮಾಡಬೇಕು ಎಂದನಿಸಿತ್ತು, ಈಗ ಅವಕಾಶ ಸಿಕ್ಕಿದೆ. ನನಗೆ ಜೆಡಿಎಸ್ ಹಾಗೂ ಕಾಂಗ್ರೆಸ್ಸಿನಿಂದ ಯಾರು ಚುನಾವಣೆಗೆ ನಿಲ್ಲಿ ಅಂತ ಒತ್ತಡ ಹಾಕಿಲ್ಲ. ನನಗೆ ಚುನಾವಣೆಗೆ ಸ್ಪರ್ಧೆ ಮಾಡಬೇಕು ಅಂತ ಅನಿಸಿತು ಅದಕ್ಕೆ ನಿಂತಿದ್ದೇನೆ ಎಂದು ತಿಳಿಸಿದರು.

    ಬಳಿಕ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ರೆ ನಾವ್ಯಾರು ನಿಲ್ಲುವುದು ಬೇಡವಾ? ನಾವು ರಾಜಕೀಯ ಮಾಡಬಾರದಾ. ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದೇನೆ, ಚುನಾವಣೆ ಎದುರಿಸ್ತೇನೆ. ನಾಮಪತ್ರ ಸಲ್ಲಿಸುವ ವೇಳೆ ಕೂಡ ಜೆಡಿಎಸ್‍ನವರು ಬೆಂಬಲ ನೀಡಿಲ್ಲ. ನಾನು ನನ್ನ ಮಗ ಹೋಗಿ ನಾಮಪತ್ರ ಸಲ್ಲಿಸಿ ಬಂದಿದ್ದೇವೆ. ರಾಜಕೀಯದಿಂದ ದೂರ ಇದ್ದು 8 ವರ್ಷ ಆಗಿದೆ. ಆದ್ರೆ ಈಗ ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ಜನರು ಯಾರು ಮೂರ್ಖರಲ್ಲ. ಜನರಿಗೆ ಯಾರ ಮೇಲೆ ವಿಶ್ವಾಸವಿದೆಯೋ ಅವರಿಗೆ ಮತ ಹಾಕುತ್ತಾರೆ. ನಾನು ನಾಮಪತ್ರ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಅಂತ ಟಿಎಂ ಹೊಸೂರು ಸುಮಲತಾ ಹೇಳಿದ್ದಾರೆ.

  • ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ

    ಸುಮಲತಾಗೆ ಬಿಗ್ ಶಾಕ್ ಕೊಟ್ಟ ದಳಪತಿಗಳು- ಮಂಡ್ಯದಲ್ಲಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ

    ಮಂಡ್ಯ: ದಿನ ದಿನಕ್ಕೆ ಮಂಡ್ಯ ಲೋಕಸಭಾ ಕ್ಷೇತ್ರ ರಂಗೇರುತ್ತಲೇ ಇದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ನಡುವೆ ಭಾರೀ ಸ್ಪರ್ಧೆ ನಡೆಯುತ್ತಿದೆ. ಈ ನಡುವೆ ಇದೀಗ ಸುಮಲತಾ ಎಂಬ ಹೆಸರಿನ ನಾಲ್ಕು ಅಭ್ಯರ್ಥಿಗಳು ಮಂಡ್ಯ ಚುನಾವಣೆ ಕಣದಲ್ಲಿದ್ದಾರೆ.

    ಲೋಕಸಭೆ ಚುನಾವಣೆ ದಿನಾಂಕ ನಿಗದಿಯಾದ ದಿನದಿಂದಲೂ ಮಂಡ್ಯ ಕ್ಷೇತ್ರ ಪ್ರತಿ ದಿನ ಸದ್ದು ಮಾಡುತ್ತಿದೆ. ಹಾಗೆಯೇ ಚುನಾವಣಾ ಅಭ್ಯರ್ಥಿಗಳ ಹೆಸರಿನಿಂದ ಮಂಡ್ಯ ಸುದ್ದಿಯಾಗಿದೆ. ಹೌದು, ಮಂಡ್ಯ ಕ್ಷೇತ್ರದಲ್ಲಿ ಈ ಬಾರಿ ಒಂದೇ ಹೆಸರಿನ 4 ಮಂದಿ ಸ್ಪರ್ಧೆ ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವೇನೆಂದರೆ ಸುಮಲತಾ ಎನ್ನುವ ಹೆಸರಿನವರೇ ಸ್ಪರ್ಧೆ ಮಾಡುತ್ತಿದ್ದಾರೆ.

    ಸುಮಲತಾ ಹೆಸರಿನ ಅಭ್ಯರ್ಥಿಗಳು:
    1. ಸುಮಲತಾ ಅಂಬರೀಶ್
    2. ಕೆಆರ್ ಪೇಟೆ ತಾಲೂಕಿನ ಗೊರವಿ ಗ್ರಾಮದ ಎಂ.ಸುಮಲತಾ
    3. ರಾಮನಗರ ಜಿಲ್ಲೆಯ ಕನಕಪುರದ ಪಿ.ಸುಮಲತಾ
    4. ಶ್ರೀರಂಗಪಟ್ಟಣ ತಾಲೂಕಿನ, ಟಿಎಂ ಹೊಸೂರು ಗ್ರಾಮದ ಸುಮಲತಾ

    ಮತದಾರರಲ್ಲಿ ಗೊಂದಲ ಸೃಷ್ಟಿ ಮಾಡೋಕೆ ಸುಮಲತಾ ಎಂಬ ಹೆಸರಿನ ಮೂರು ಮಂದಿಯನ್ನು ಕಣಕ್ಕಿಳಿಸಲಾಗಿದೆ ಎಂಬ ಮಾತುಗಳು ಮಂಡ್ಯದಲ್ಲಿ ಕೇಳಬರತೊಡಗಿವೆ. ಇದರಿಂದ ಸುಮಲತಾ ಅಂಬರೀಶ್ ಅವರಿಗೆ ಬೀಳುವ ಮತಗಳು ವಿಭಜನೆಯಾಗಿ, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಈ ತಂತ್ರ ಮಾಡಲಾಗಿದೆ ಎನ್ನಲಾಗುತ್ತಿದೆ.

    ಈ ಬಾರಿ ಮಂಡ್ಯ ಕ್ಷೇತ್ರದತ್ತ ಇಡೀ ರಾಜ್ಯವೇ ನೋಡುತ್ತಿದೆ. ಮಂಡ್ಯದಲ್ಲಿ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದ್ದಾರೆ.