Tag: ಲೋಕಸಭೆ ಚುನಾವಣೆ

  • ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

    ರಾಮಮಂದಿರಕ್ಕೆ ಪಾಯ ಹಾಕಿ ಎಂಪಿ ಚುನಾವಣೆ ಎದುರಿಸಿ: ಮೋದಿಗೆ ಬೆಳ್ಳುಬ್ಬಿ ಸವಾಲ್

    ಬಾಗಲಕೋಟೆ: ರಾಮಮಂದಿರ ಹೆಸರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಮಾಡುತ್ತಿದ್ದಾರೆ. ನಿಮ್ಮ ಹತ್ತಿರ ದಮ್ ಇದ್ದರೆ ರಾಮಮಂದಿರಕ್ಕೆ ಪಾಯಾ ಹಾಕಿ. ನಂತರ ಲೋಕಸಭಾ ಚುನಾವಣೆ ಎದುರಿಸಿ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಅವರು ಸವಾಲು ಹಾಕಿದ್ದಾರೆ.

    ನಗರದಲ್ಲಿ ನಡೆದ ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಪದಗ್ರಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸವಾಲು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಷ್ಟೇ ಅಲ್ಲ, ರಾಜ್ಯ ಹಾಗೂ ಕೇಂದ್ರ ಬಿಜೆಪಿ ಮುಖಂಡರಿಗೂ ಅನ್ವಯವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

    ಬಿಜೆಪಿಯವರು ಯುವಕರನ್ನು ಬಲಿ ಕೊಟ್ಟರು, ಬ್ರಾಹ್ಮಣ ಕುಟುಂಬಗಳನ್ನು ಸರ್ವನಾಶ ಮಾಡಿದರು. ಕಳೆದ ವರ್ಷವೇ ಕೃಷಿ ಉತ್ಪನ್ನದ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಈಗ ಲೋಕಸಭೆ ಚುನಾವಣೆ ಉದ್ದೇಶದಿಂದ ಈ ನಿರ್ಧಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ದೂರಿದರು.

    ಪ್ರಧಾನಿ ಮೋದಿ ಅವರ ಹೆಸರಿನ ಮೇಲೆ ಕತ್ತೆಗೂ ಟಿಕೆಟ್ ಕೊಟ್ಟರೆ ಆಯ್ಕೆಯಾಗುತ್ತಾರೆಯೇ? ಅನೇಕ ನಾಯಕರಿದ್ದರೂ ಅವರಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ನಾನು ಬಿಜೆಪಿ ಬಿಟ್ಟು ಬಂದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಟಿಕೆಟ್ ದೊರೆತರೆ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ನಾನು ಸಿದ್ದರಾಮಯ್ಯನವರನ್ನು ಮನವೊಲಿಸುವ ಅವಶ್ಯಕತೆ ಇಲ್ಲ: ಖರ್ಗೆ

    ನಾನು ಸಿದ್ದರಾಮಯ್ಯನವರನ್ನು ಮನವೊಲಿಸುವ ಅವಶ್ಯಕತೆ ಇಲ್ಲ: ಖರ್ಗೆ

    ನವದೆಹಲಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನವೊಲಿಸಲು ಹೈಕಮಾಂಡ್ ನನಗೆ ಸೂಚಿಸಿಲ್ಲ ಎಂದು ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟೀಕರಣ ನೀಡಿದ್ದಾರೆ.

    ನವದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಅವರ ಮನವೊಲಿಸುವ ಅವಶ್ಯಕತೆ ಇಲ್ಲ. ಏಕೆಂದರೆ ಅವರು ಪಕ್ಷದಲ್ಲಿ ಯಾರ ಮೇಲೂ ಮುನಿಸಿಕೊಂಡಿಲ್ಲ. ಅವರಿಗೆ ಸಾಕಷ್ಟು ಅನುಭವವಿದ್ದು, ರಾಜಕೀಯ ಬೆಳವಣಿಗೆಯ ಬಗ್ಗೆ ಅರಿತುಕೊಂಡಿದ್ದಾರೆ. ಹೀಗಾಗಿ ನಾನು ಅವರಿಗೆ ಏನನ್ನು ಹೇಳುವ ಅವಶ್ಯಕತೆ ಇಲ್ಲ. ಅವರು ಪಕ್ಷಕ್ಕೆ ನಿಷ್ಠೆಯಿಂದ ಕೆಲಸ ಮಾಡುತ್ತಿರುವ ನಾಯಕರು ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

    ಮಾಧ್ಯಮಗಳಲ್ಲಿ ಬಂದ ಕೆಲವು ಸುದ್ದಿಗಳ ಕುರಿತಾಗಿ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡುವುದಾಗಿ ಹೇಳಿಕೆ ನೀಡಿದ್ದೆ ಅಷ್ಟೇ. ಆದರೆ ಈಗ ಯಾವುದೇ ದ್ವಂದ್ವಗಳಿಲ್ಲ ಎಂದು ಹೇಳಿದರು.

    ಅವಧಿಪೂರ್ವ ಚುನಾವಣೆ: ಇತ್ತೀಚಿನ ಬೆಳವಣಿಗೆ ನೋಡಿದರೆ ಬಿಜೆಪಿಯು ಅವಧಿ ಪೂರ್ವ ಚುನಾವಣೆ ನಡೆಸುವ ಚಿಂತನೆ ಇದೆ. ಅಲ್ಲದೇ ಮಹಾರಾಷ್ಟ್ರ ಸೇರಿದಂತೆ ಕೆಲವು ಸಣ್ಣ ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದ್ದು, ಅದೇ ವೇಳೆ ಲೋಕಸಭೆ ಚುನಾವಣೆ ನಡೆಸಲು ಬಿಜೆಪಿ ಚಿಂತನೆ ನಡೆಸಿದೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಅವಧಿ ಪೂರ್ವ ಚುನಾವಣೆ ನಡೆಸುವ ಮೂಲಕ ಬಿಜೆಪಿ ತನ್ನ ಹಿತಾಸಕ್ತಿ ಸಾಧನೆಗೆ ಯೋಜನೆ ರೂಪಿಸಿದೆ ಎಂದು ಅವರು ಆರೋಪಿಸಿದರು.

    ಬಿಜೆಪಿ ಯೋಜನೆಯಂತೆ ಅವಧಿ ಪೂರ್ವ ಚುನಾವಣೆ ನಡೆಯಲು ಸಾಧ್ಯವಿಲ್ಲ. ಇತ್ತೀಚೆಗೆ ನಡೆದ ಲೋಕಸಭೆ ಉಪಚುನಾವಣೆಗಳಲ್ಲಿ ಬಿಜೆಪಿ ಅತ್ಯಂತ ಹಿನ್ನಡೆ ಅನುಭವಿಸಿದೆ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈಡೇರಿಸಿಲ್ಲ. ಹೀಗಾಗಿ ದೇಶದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದ್ದಿದ್ದು, ಅವಧಿ ಪೂರ್ವ ಚುನಾವಣೆಗೆ ಅವರು ಮುಂದಾಗುವುದು ಅನುಮಾನ ಎಂದು ಅವರು ಆರೋಪಿಸಿದರು.

  • ಲೋಕಸಭೆಯಲ್ಲಿ ಮೋದಿ ಸೋಲಿಸಲು ತನ್ನ ರಣತಂತ್ರವನ್ನು ಬಿಚ್ಚಿಟ್ಟ ದೇವೇಗೌಡ

    ಲೋಕಸಭೆಯಲ್ಲಿ ಮೋದಿ ಸೋಲಿಸಲು ತನ್ನ ರಣತಂತ್ರವನ್ನು ಬಿಚ್ಚಿಟ್ಟ ದೇವೇಗೌಡ

    ನವದೆಹಲಿ: ರಾಜ್ಯದಲ್ಲಿ ಬಿಜೆಪಿಯನ್ನು ದೂರವಿಟ್ಟು ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ಮುಖ್ಯ ಪಾತ್ರವಹಿಸಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರು ಲೋಕಸಭೆಯಲ್ಲೂ ಮೋದಿಯನ್ನು ಸೋಲಿಸಲು ರಣತಂತ್ರ ಹೆಣೆಯುತ್ತಿದ್ದಾರೆ.

    ಬಿಜೆಪಿಯನ್ನು ಸೋಲಿಸಲೇಬೇಕೆಂಬ ಹಠದಲ್ಲಿರುವ ಕಾಂಗ್ರೆಸ್ ನಿರ್ಧಾರಕ್ಕೆ ಬೆಂಬಲವಾಗಿರುವ ದೇವೇಗೌಡರು ಈಗ ರಾಷ್ಟ್ರ ರಾಜಕಾರಣದಲ್ಲಿ ಮುಂದೆ ನಡೆಯಬಹುದಾದ ಮೈತ್ರಿಯ ಬಗ್ಗೆ ಸುಳಿವು ನೀಡಿದ್ದಾರೆ. ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ವೇಳೆ ಚುನಾವಣೆ ಯಾವ ರೀತಿಯ ಸಿದ್ಧತೆ ನಡೆಸಲಾಗುತ್ತಿದೆ ಎನ್ನುವ ಬಗ್ಗೆ ಕಿರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಕಾಂಗ್ರೆಸ್ ಸಹಭಾಗಿತ್ವದಲ್ಲಿಯೇ ಲೋಕಸಭೆ ಚುನಾವಣೆಯನ್ನು ಎದುರಿಸುತ್ತೇವೆ. ನಮ್ಮ ಮೈತ್ರಿಯಲ್ಲಿ ಬಿಎಸ್‍ಪಿ ಕೂಡಾ ಇರಲಿದೆ. ಹೀಗಾಗಿ ಜೆಡಿಎಸ್ ಪಾಲಿನ ಸೀಟುಗಳಲ್ಲಿ ಒಂದು ಸ್ಥಾನವನ್ನು ಬಿಎಸ್‍ಪಿಗೆ ಬಿಟ್ಟುಕೊಡುತ್ತೇವೆ. ಅಷ್ಟೇ ಅಲ್ಲದೇ ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ ತನ್ನ ಕೆಲವು ಕ್ಷೇತ್ರಗಳನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಡಲಿದ್ದು, ಈ ಕುರಿತು ಮೈತ್ರಿ ಪಕ್ಷಗಳಲ್ಲಿ ಚಿಂತನೆ ನಡೆದಿವೆ. ಲೋಕಸಭೆ ಚುನಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚೆ ಮಾಡಬೇಕಾಗುತ್ತದೆ ಎಂದು ತಮ್ಮ ತಯಾರಿಯನ್ನು ದೇವೇಗೌಡ ಅವರು ತೆರೆದಿಟ್ಟರು.

    ಬಿಹಾರದಲ್ಲಿ ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ಹಾಗೂ ಜನತಾ ದಳ ಯುನೈಟೆಡ್ (ಜೆಡಿಯು) ನಾಯಕ ನಿತೀಶ್ ಕುಮಾರ್ ಒಂದಾಗಲಿದ್ದಾರೆ. ಮೈತ್ರಿ ಕೂಟದಲ್ಲಿ ಬಿಎಸ್‍ಪಿಗೂ ಜವಾಬ್ದಾರಿಯುತ ಸ್ಥಾನ ಕೊಡಲಾಗಿದ್ದು, ಕರ್ನಾಟಕದಲ್ಲಿ ಬಿಎಸ್‍ಪಿ ಸ್ಪರ್ಧಿಸುವ ಆಸಕ್ತಿ ತೋರಿದರೆ ಜೆಡಿಎಸ್ ಕೋಟಾದಲ್ಲಿ ಕೆಲವು ಸ್ಥಾನ ನೀಡುವ ಯೋಜನೆ ಇದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‍ಗೆ ಎಷ್ಟು ಸ್ಥಾನ ಅಂತಾ ಇನ್ನು ಚರ್ಚೆಯಾಗಿಲ್ಲ. ನಾನು ಮಂಡ್ಯದಿಂದ ಸ್ವರ್ಧಿಸುವ ಬಗ್ಗೆಯೂ ಚರ್ಚೆಯಾಗಿದೆ. ರಾಜ್ಯದಲ್ಲಿ ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳು ಬಗೆಹರಿದ ಮೇಲೆ ಮಾತುಕತೆ ನಡೆಸಲಾಗುತ್ತೆ ಎಂದು ಎಂದು ತಮ್ಮ ಕಾರ್ಯತಂತ್ರದ ಬಗ್ಗೆ ವಿವರ ನೀಡಿದರು.

    ಲೋಕಸಭೆ ಚುನಾವಣೆ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿ ಭಾರೀ ಸಿದ್ಧತೆ ನಡೆಸುತ್ತಿದೆ. ಆದರೆ ಎನ್‍ಡಿಎ ಪರ್ಯಾಯ ಪಕ್ಷಗಳು ಒಡೆದು ಹೋಗಿವೆ ಎಂದು ಅರ್ಥೈಸಿಕೊಳ್ಳುವ ಅವಶ್ಯಕತೆ ಇಲ್ಲ. ಸಣ್ಣ ರಾಜ್ಯಗಳಲ್ಲಿ ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆಸುವ ತಂತ್ರವನ್ನು ಬಿಜೆಪಿ ಹೂಡುತ್ತಿದೆ. ಈಗಾಗಲೇ ಪ್ರತಿಯೊಂದು ರಾಜ್ಯಕ್ಕೂ ಚುನಾವಣೆಯ ಸೂಚನೆಯನ್ನು ಬಿಜೆಪಿ ನೀಡುತ್ತಿದೆ. ಹೀಗಾಗಿ ಮುಂಗಾರು ಅಧಿವೇಶನವೇ ಕೊನೆಯ ಅಧಿವೇಶನ ಆದರೂ ಅಚ್ಚರಿ ಇಲ್ಲ. ಇನ್ನೇನು ಕೆಲವೇ ದಿನಗಳಲ್ಲಿ ನಾನು ಎನ್‍ಡಿಎ ಹೊರತಾದ ಪಕ್ಷಗಳ ನಾಯಕರನ್ನು ಭೇಟಿ ಮಾಡಲಿದ್ದೇನೆ ಎಂದು ಅವರು ತಿಳಿಸಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಹೀಗಾಗಿ ಅವರ ಮಾತುಗಳಿಗೆ ನಾನು ಪ್ರತಿಕ್ರಿಯೆ ಕೊಡಲ್ಲ. ಮಾತುಕತೆ ಆಗಿರುವುದು ಕಾಂಗ್ರೆಸ್-ಜೆಡಿಎಸ್ ನಡುವೆ. ಒಪ್ಪಂದ ಪ್ರಕಾರವೇ ಸರ್ಕಾರ ನಡೆಯಲಿದ್ದು, ಈ ಬಗ್ಗೆ ರಾಹುಲ್ ಗಾಂಧಿ- ಮುಖ್ಯಮಂತ್ರಿ ಕುಮಾರಸ್ವಾಮಿ ಚರ್ಚೆ ಮಾಡುತ್ತಾರೆ ಎಂದು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟರು.

    ಸಿದ್ದರಾಮಯ್ಯನವರನ್ನು ಕಡೆಗಣಿಸಿದರೆ ಸರ್ಕಾರ ಉಳಿಯುತ್ತಾ ಎಂದು ಪ್ರಶ್ನಿಸಿದ್ದ ಬಸವ ಕಲ್ಯಾಣ ಶಾಸಕ ನಾರಾಯಣ ರಾವ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಾರಾಯಣ ರಾವ್ ನನ್ನ ಸ್ನೇಹಿತ. ಹೀಗಾಗಿ ಮಾಧ್ಯಮದವರು ಆತಂಕ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ಬೀಳಲ್ಲ ಸುಭದ್ರವಾಗಿರುತ್ತದೆ ಎಂದರು.

    ಪಕ್ಷದಲ್ಲಿ ಕೆಲವರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ಸೇತರ ಮೈತ್ರಿ ಬಗ್ಗೆ ಯೋಚನೆ ಇಲ್ಲ ಎಂದು ಹೇಳಿದರು.

  • ಮೋದಿ ವಿರುದ್ಧ ಲೋಕಸಭಾ ಚುನಾವಣೆ ಮುಗಿಯೋವರೆಗೆ ಪ್ರಾರ್ಥನೆ ಮಾಡಲಿದ್ದಾರೆ ದೆಹಲಿ ಕ್ರೈಸ್ತರು!

    ಮೋದಿ ವಿರುದ್ಧ ಲೋಕಸಭಾ ಚುನಾವಣೆ ಮುಗಿಯೋವರೆಗೆ ಪ್ರಾರ್ಥನೆ ಮಾಡಲಿದ್ದಾರೆ ದೆಹಲಿ ಕ್ರೈಸ್ತರು!

    ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ಮೋದಿ ಸೋಲಿಸಲು ಮೈತ್ರಿ ಮಾತುಕತೆಗೆ ಒಲವು ತೋರಿಸುತ್ತಿದ್ದರೆ ದೆಹಲಿಯ ಕ್ರೈಸ್ತರು ಎನ್‍ಡಿಎ ಸರ್ಕಾರದ ವಿರುದ್ಧ ಪರೋಕ್ಷವಾಗಿ ಪ್ರಚಾರ ಆರಂಭಿಸಿದ್ದಾರೆ.

    ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಗೆ ಸವಾಲು ಹಾಕುವ ಅಸ್ಥಿರ ರಾಜಕೀಯವನ್ನು ದೇಶ ಎದುರಿಸುತ್ತಿದೆ. ದೇಶದ ಉಳಿವಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು ಎಂದು ದೆಹಲಿಯ ಆರ್ಚ್ ಬಿಷಪ್ ಒಬ್ಬರು ಬರೆದ ಪತ್ರವೊಂದು ಈಗ ವಿವಾದಕ್ಕೆ ಕಾರಣವಾಗಿದೆ.

    ಆರ್ಚ್ ಬಿಷಪ್ ಅನಿಲ್ ಕೌಟೋ ಅವರು, ಮೇ 8ರಂದು ಈ ಪತ್ರವನ್ನು ಬರೆದಿದ್ದು ರಾಜಧಾನಿಯ ವಿವಿಧ ಚರ್ಚ್ ಗಳಿಗೆ ಕಳುಹಿಸಲಾಗಿದೆ. ಮೇ 13 ರಿಂದ 2019ರ ಲೋಕಸಭೆ ಚುನಾವಣೆವರೆಗೆ ಪ್ರಾರ್ಥನೆ ಮಾಡಬೇಕು ಹಾಗೂ ಶುಕ್ರವಾರ ಉಪವಾಸ ಆರಂಭಿಸಬೇಕು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ದೇಶವು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತಗೆ ಸವಾಲು ಹಾಕುವ ಅಸ್ಥಿರ ರಾಜಕೀಯವನ್ನು ಎದುರಿಸುತ್ತಿದೆ. 2019ರಲ್ಲಿ ನಾವು ಹೊಸ ಸರ್ಕಾರ ಹೊಂದಲು ಹಾಗೂ ದೇಶದ ಉಳಿವಿಗೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಬೇಕು. 2019ರ ಲೋಕಸಭೆ ಚುನಾವಣೆವರೆಗೆ ಚರ್ಚ್ ಗಳಲ್ಲಿ ಪ್ರಾರ್ಥನೆ ಕೈಗೊಳ್ಳಬೇಕು ಹಾಗೂ ಶುಕ್ರವಾರ ಉಪವಾಸ ಆರಂಭಿಸಬೇಕು ಎನ್ನುವ ಅಂಶ ಪತ್ರದಲ್ಲಿದೆ.

    ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಅನೇಕ ಕಡೆಗಳಲ್ಲಿ ಕ್ರೈಸ್ತರ ಮೇಲಿನ ದಾಳಿಯಾಗಿದೆ. 2017ರಲ್ಲಿಯೇ 736 ದಾಳಿಯಾಗಿವೆ. ಹೀಗಾಗಿ, ಸರ್ಕಾರದ ವಿರುದ್ಧ ಪ್ರಾರ್ಥನಾ ಸಭೆಗೆ ಹಾಗೂ ಉಪವಾಸಕ್ಕೆ ಕರೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ದೇಶಾದ್ಯಂತ ಈ ಪ್ರಾರ್ಥನೆಯನ್ನು ಕೈಗೊಳ್ಳಬೇಕು ಎನ್ನುವ ಬೇಡಿಕೆ ಎಲ್ಲಡೆ ವ್ಯಕ್ತವಾಗಿದೆ.

    ನರೇಂದ್ರ ಮೋದಿ ಅವರು ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರ ಹಿತವನ್ನು ಕಡೆಗಣಿಸಿದ್ದಾರೆ. ಹಿಂದು ರಾಷ್ಟ್ರ ಸ್ಥಾಪಿಸುವ ಉದ್ದೇಶದಿಂದ ಹಿಂದು ಸಂಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಕ್ರೈಸ್ತ ಮುಖಂಡರು ಆರೋಪಿಸಿದ್ದಾರೆ.

    ಈ ಪತ್ರದ ಮೂಲಕ ಜಾತಿ ಹಾಗೂ ಸಮುದಾಯಗಳಿಗೆ ಪ್ರೇರೇಪಣೆ ನೀಡಲಾಗುತ್ತಿದೆ. ಒಂದು ಪಕ್ಷ ಇಲ್ಲವೇ, ಅಭ್ಯರ್ಥಿಗೆ ಮತದಾನ ಮಾಡಲು ಸಲಹೆ ನೀಡಬಹುದು. ಆದರೆ ಬಿಜೆಪಿಗೆ ಮಾತ್ರ ಮತದಾನ ಮಾಡಬೇಡಿ ಎನ್ನುತ್ತಿರುವ ನಡೆ ಸರಿಯಲ್ಲ ಎಂದು ಬಿಜೆಪಿಯ ವಕ್ತಾರೆ ಎನ್.ಸಿ.ಶೈನಾ ಹೇಳಿದ್ದಾರೆ.

  • ಲೋಕಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ – ಕೋರ್ಟ್‍ಗೆ ಹಾಜರಾದ ಶಿವರಾಜ್‍ಕುಮಾರ್ ದಂಪತಿ

    ಲೋಕಸಭೆ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ – ಕೋರ್ಟ್‍ಗೆ ಹಾಜರಾದ ಶಿವರಾಜ್‍ಕುಮಾರ್ ದಂಪತಿ

    ಶಿವಮೊಗ್ಗ: ಕಳೆದ ಲೋಕಸಭೆ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಇಂದು ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದರು.

    2013 ರ ಲೋಕಸಭಾ ಚುನಾವಣೆಯಲ್ಲಿ ಮತದಾನದ 48 ಗಂಟೆಗಳ ಮೊದಲು ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಅವರು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣದ ವಿಚಾರಣೆಗೆ ಖುದ್ದಾಗಿ ಹಾಜರಾಗುವಂತೆ ನ್ಯಾಯಾಲಯ ಇಬ್ಬರಿಗೂ ಸೂಚನೆ ನೀಡಿತ್ತು.

    ಈ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗದ ಜೆಎಂಎಫ್‍ಸಿ ಹೆಚ್ಚುವರಿ ನ್ಯಾಯಾಲಯಕ್ಕೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಹಾಜರಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರು ಮಾರ್ಚ್ 1ಕ್ಕೆ ವಿಚಾರಣೆ ಮುಂದೂಡಿದ್ದಾರೆ.