Tag: ಲೋಕಸಭೆ ಚುನಾವಣೆ

  • ಜೆಡಿಎಸ್ ಅಂದ್ರೆ ಎಚ್‍ಡಿಡಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಬಣ್ಣಿಸಿದ ಶಿವರಾಮೇಗೌಡ!

    ಜೆಡಿಎಸ್ ಅಂದ್ರೆ ಎಚ್‍ಡಿಡಿ ಕೃಪಾಪೋಷಿತ ನಾಟಕ ಮಂಡಳಿ ಎಂದು ಬಣ್ಣಿಸಿದ ಶಿವರಾಮೇಗೌಡ!

    ಮಂಡ್ಯ: ಜೆಡಿಎಸ್ ಅಂದರೆ ಎಚ್.ಡಿ.ದೇವೇಗೌಡ ಕೃಪಾಪೋಷಿತ ನಾಟಕ ಮಂಡಳಿ, ನಾವು ಅದರ ಸದಸ್ಯರು ಎಂದು ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಹೇಳಿದ್ದಾರೆ.

    ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ನನ್ನು ಮಂಡ್ಯ ಕ್ಷೇತ್ರ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಕುಟುಂಬದವರು ಮಂಡ್ಯದಿಂದ ಸ್ಪರ್ಧೆಗೆ ಇಳಿದರೆ ನಾನು ಸ್ಥಾನ ಬಿಟ್ಟುಕೊಟ್ಟು, ಸ್ವಾಗತಿಸುತ್ತೇನೆ. ಆದರೆ ಮಂಡ್ಯ ಲೋಕಸಭೆ ಕ್ಷೇತ್ರದಿಂದ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವೆ ಎಂದು ಟಾಂಗ್ ಕೊಟ್ಟಿದ್ದಾರೆ.

    ಪ್ರಜ್ವಲ್ ರೇವಣ್ಣ ಮಂಡ್ಯ ಕ್ಷೇತ್ರದಿಂದ ಕಣಕ್ಕೆ ಇಳಿಯದಿದ್ದರೆ ನನಗೆ ಅವಕಾಶ ಕೊಡಲಿ ಎಂದು ಕೇಳಿದ್ದೇನೆ. ಒಂದು ವೇಳೆ ಟಿಕೆಟ್ ಸಿಗದಿದ್ದರೆ ಎಲ್ಲವನ್ನು ತ್ಯಾಗ ಮಾಡಿ, ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ಪಕ್ಷದಲ್ಲಿ ಈಗಾಗಲೇ ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.

    ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ನಡೆಸುತ್ತಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಹೊಂದಾಣಿಕೆ ಸಾಧ್ಯವೋ ಅಲ್ಲಿ ಎರಡು ಪಕ್ಷಗಳ ನಾಯಕರು ಸೇರಿ ಚರ್ಚೆ ಮಾಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ ಎಂದರು.

  • 56 ಇಂಚಿನ ಎದೆಯುಳ್ಳ ಮೋದಿಜಿ ನಿಮ್ಮಲ್ಲಿ ಧೈರ್ಯವಿದ್ರೆ ಸಾಲಮನ್ನಾ ಮಾಡಿ ತೋರಿಸಿ: ರಾಗಾ ಚಾಲೆಂಜ್

    56 ಇಂಚಿನ ಎದೆಯುಳ್ಳ ಮೋದಿಜಿ ನಿಮ್ಮಲ್ಲಿ ಧೈರ್ಯವಿದ್ರೆ ಸಾಲಮನ್ನಾ ಮಾಡಿ ತೋರಿಸಿ: ರಾಗಾ ಚಾಲೆಂಜ್

    – ಚೌಕಿದಾರ ಅಲ್ಲ, ಎಲ್ಲ ಭ್ರಷ್ಟತೆಯಲ್ಲೂ ಭಾಗೀದಾರ
    – ರಫೆಲ್ ಡೀಲ್ ನಲ್ಲಿ ಕೋಟಿ ಕೋಟಿ ಹಣ ಗುಳಂ

    ಬೀದರ್: ನೀವು ಮಾಡುವ ದೊಡ್ಡ ದೊಡ್ಡ ಭಾಷಣಗಳಲ್ಲಿರುವ ಪ್ರತಿಯೊಂದು ಶಬ್ದವೂ ಸತ್ಯವಾಗಿದ್ದರೆ ನಾನು ನಿಮಗಿಂದು ಚಾಲೆಂಜ್ ಕೊಡುತ್ತಿದ್ದೇನೆ. ಕರ್ನಾಟಕ ಸರ್ಕಾರ ರೈತರ ಸಾಲಮನ್ನಾ ಮಾಡಿದೆ. ನಿಮ್ಮವರೇ ತಮ್ಮ ಪ್ರಣಾಳಿಕೆಯಲ್ಲಿ ಸಾಲಮನ್ನಾ ಮಾಡ್ತೀವಿ ಅಂತಾ ಬರೆದುಕೊಂಡಿದ್ದರು. ನಿಮ್ಮಲ್ಲಿ ಧೈರ್ಯ, 56 ಇಂಚಿನ ಎದೆಯುಳ್ಳ ನೀವು ಕರ್ನಾಟಕದ ಸಾಲಮನ್ನಾದ ಅರ್ಧ ಹಣವನ್ನು ಕೊಟ್ಟು ತೋರಿಸಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.

    ಬೀದರ್ ನಲ್ಲಿ ನಡೆದ ಜನಧ್ವನಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಹುಲ್ ಗಾಂಧಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ನೀವು ರೈತರ ಸಾಲಮನ್ನಾ ಮಾಡಲ್ಲ. ಭಾರತದ ಅತಿ ಶ್ರೀಮಂತ ವ್ಯಕ್ತಿಗಳ 2.5 ಲಕ್ಷ ಕೋಟಿ ರೂ. ಸಾಲಮನ್ನಾ ಮಾಡುತ್ತೀರಿ. ಕರ್ನಾಟಕದ ರೈತರಿಗಾಗಿ ಒಂದು ರೂಪಾಯಿ ನೀವು ಕೊಡುವುದಿಲ್ಲ ಎಂದು ಮೋದಿ ಅವರನ್ನು ಟೀಕಿಸಿದರು.

    ಹುಸಿ ಭರವಸೆ:
    2014ರ ಲೋಕಸಭಾ ಚುನಾವಣೆ ಮುನ್ನ 2 ಕೋಟಿ ಯುವಕರಿಗೆ ಉದ್ಯೋಗದ ಭರವಸೆಯನ್ನು ನೀಡಿದ್ದರು. ಆದ್ರೆ ಇಂದು ಪಕೋಡಾ ಮಾರಾಟ ಮಾಡಿ ಅಂತಾ ಸಲಹೆ ನೀಡುತ್ತಿದ್ದಾರೆ. ಎಲ್ಲಿಯೇ ಹೋದರು ಏನಾದ್ರೂ ಸುಳ್ಳು ಹೇಳುತ್ತಾ ತಿರುಗಾಡುತ್ತಿದ್ದಾರೆ. ಚುನಾವಣೆಗೆ ಮೊದಲು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ನೀಡಲಾಗುವುದು ಎಂಬ ಭರವಸೆಯನ್ನು ನೀಡಿದ್ದರು. ಆದ್ರೆ ಇದೂವರೆಗೂ ಯಾವ ವ್ಯಕ್ತಿಗೂ 10 ರೂ. ಸಿಕ್ಕಿಲ್ಲ. ನೆರೆಯ ಚೀನಾ ಸರ್ಕಾರ ಗಂಟೆಗೆ 24 ಸಾವಿರ ನೌಕರರಿಗೆ ಉದ್ಯೋಗ ನೀಡುತ್ತಿದ್ದರೆ ಮೋದಿಯವರು ಗಂಟೆಗೆ 450 ಜನರಿಗೆ ಉದ್ಯೋಗ ಕೊಡುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ದೊಡ್ಡ ಭಾಷಣ ಮಾಡುತ್ತೀರಿ ಅಲ್ಲಿಯ ಆಡಳಿತವನ್ನು ನೋಡಿ ಕಲಿತುಕೊಳ್ಳಿ ಎಂದು ಸಲಹೆ ನೀಡಿದರು.

    ನನ್ನನ್ನು ಪ್ರಧಾನಿ ಮಂತ್ರಿ ಮಾಡಬೇಡಿ, ದೇಶದ ಚೌಕಿದಾರರನ್ನಾಗಿ ಮಾಡಿ ಎಂದು ಮೋದಿ ಮೇಲ್ನೋಟಕ್ಕೆ ಹೇಳ್ತಾರೆ. ರಫೆಲ್ ಡೀಲ್‍ನಲ್ಲಿಯೂ ಮೋದಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ. ಕರ್ನಾಟಕದ ಬೆಂಗಳೂರಿನಲ್ಲಿಯೇ ಯುದ್ಧ ವಿಮಾನಗಳನ್ನು ತಯಾರಿಸಬಹುದಿತ್ತು. ಆದರೂ ದೂರದ ಫ್ರಾನ್ಸ್ ದೇಶದಿಂದ ಯುದ್ಧ ವಿಮಾನ ಖರೀದಿಸಿದರು. ಒಂದು ವೇಳೆ ಯುದ್ಧ ವಿಮಾನಗಳ ತಯಾರಿಕೆ ನಮ್ಮ ದೇಶದಲ್ಲಿ ನಡೆದಿದ್ದರೆ, ಏರೋನಾಟಿಕಲ್ ಇಂಜೀನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿತ್ತು ಎಂದು ವಾಗ್ದಾಳಿ ನಡೆಸಿದರು.

    ಎಚ್‍ಎಎಲ್ ನಲ್ಲಿ 524 ಕೋಟಿ ರೂ. ವೆಚ್ಚದಲ್ಲಿ ಒಂದು ಯುದ್ಧ ವಿಮಾನ ತಯಾರಿಸಲಾಗುತ್ತಿತ್ತು. ನರೇಂದ್ರ ಮೋದಿ ಬಂದ ಮೇಲೆ ಒಪ್ಪಂದವನ್ನು ರದ್ದುಗೊಳಿಸಿ, ಪ್ಯಾರಿಸ್ ಗೆ ತೆರಳಿ ಒಪ್ಪಂದ ಮಾಡಿಕೊಂಡು ಬಂದರು. ಪ್ಯಾರಿಸ್ ಒಂದು ಯುದ್ಧ ವಿಮಾನಕ್ಕೆ 16 ಸಾವಿರ ಕೋಟಿ ರೂ.ಗೆ ಭಾರತೀಯ ಚೌಕಿದಾರ ಒಪ್ಪಂದ ಮಾಡಿಕೊಂಡು ಬಂದರು. ರಫೆಲ್ ಒಪ್ಪಂದ ಮಾಡಿಕೊಂಡ ಬಂದ ಬಳಿಕ ಉತ್ಪದನಾ ಕೆಲಸವನ್ನು 10 ದಿನಗಳ ಹಿಂದೆ ಹುಟ್ಟಿದ್ದ ಅಂಬಾನಿ ಕಂಪೆನಿಗೆ ನೀಡಿದ್ರು ಎಂದು ಕಿಡಿಕಾರಿದರು.

    ಮೋದಿಗೆ ಧೈರ್ಯ ಇಲ್ಲ:
    ಸಂಸತ್ತಿನಲ್ಲಿ ನಾನು ಮೋದಿಯವರ ಮುಂದೆಯೇ ರೆಫೆಲ್ ಒಪ್ಪಂದದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಹೇಳಿದ್ದೇನೆ. ಯಾರು ಕಳ್ಳತನ ಮಾಡುತ್ತಾರೊ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲ್ಲ. ನಾನು ಆರೋಪಗಳನ್ನು ಮಾಡುತ್ತಿದ್ದರೆ, ಮೋದಿ ನನ್ನನ್ನು ನೋಡದೇ ಭಯದಿಂದ ಒಮ್ಮೆ ಮೇಲೆ, ಮತ್ತೊಮ್ಮೆ ಕೆಳಗಡೆ, ಎಡ-ಬಲ ನೋಡುತ್ತಿದ್ದರೆ ವಿನಃ ನನ್ನ ಕಣ್ಣುಗಳನ್ನು ನೋಡಲಿಲ್ಲ. ಕಾರಣ ಇಷ್ಟೇ, ಚೌಕಿದಾರ ಎಂದು ಹೇಳಿಕೊಳ್ಳುವ ಮೋದಿ ಎಲ್ಲದರಲ್ಲಿಯೂ ಭಾಗೀದಾರರೂ ಹೌದು. ನಿಮ್ಮೆಲ್ಲರ ಹಣವನ್ನು ಕದ್ದು, ಅನಿಲ್ ಅಂಬಾನಿಗೆ ನೀಡಿದ್ದಾರೆ. ನಿಮ್ಮ ಉದ್ಯೋಗ, ಕನಸು, ಹಣವನ್ನೆಲ್ಲಾ ತೆಗೆದುಕೊಂಡು ಹೋಗಿ ಗೆಳೆಯ ಅಂಬಾನಿಗೆ ನೀಡಿದರು. ರಫೆಲ್ ವಿಚಾರಕ್ಕೆ ಸಂಬಂಧಿಸಿದಂತೆ ಮೋದಿ ಮತ್ತು ನನ್ನ ಮಧ್ಯೆ ಚರ್ಚೆ ನಡೆಯಲಿ. ನನ್ನ ಮಾತುಗಳಿಗೆ ಉತ್ತರಿಸಲು ಮೋದಿ ಅವರಿಂದ ಸಾಧ್ಯವಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ನಮ್ಮೆಲ್ಲಾ ಆರೋಪಗಳಿಗೆ ಉತ್ತರಿಸಲು ಮೋದಿ ಸೇರಿದಂತೆ ಹಿಂದೇಟು ಹಾಕುತ್ತಿದ್ದಾರೆ. ಚೌಕಿದಾರರಾಗಿರುವ ಮೋದಿ ಎಲ್ಲದರಲ್ಲಿಯೂ ಭಾಗಿದಾರ ಆಗಿರೋದ್ರಿಂದ ಅವರ ಬಳಿ ನಮ್ಮ ಪ್ರಶ್ನೆಗೆ ಉತ್ತರವಿಲ್ಲ. ಕಾಂಗ್ರೆಸ್ ಸರ್ಕಾರ ನಿಮಗಾಗಿ ಹೈದ್ರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ 371(ಜೆ) ಕಲಂ ಜಾರಿಗೆ ತಂದಿದೆ. ಈ ಮೊದಲು ಇದೇ ಬಿಜೆಪಿ ನಾಯಕರು ಈ ಕಲಂ ಅನ್ನು ವಿರೋಧಿಸಿದ್ದರು ಎಂದು ವಾಗ್ದಾಳಿ ನಡೆಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಡೆಡ್‍ಲೈನ್- ಅಮಿತ್ ಶಾ ಖಡಕ್ ಸೂಚನೆ

    ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಡೆಡ್‍ಲೈನ್- ಅಮಿತ್ ಶಾ ಖಡಕ್ ಸೂಚನೆ

    -ನವೆಂಬರ್ ಒಳಗೆ ಉರುಳುತ್ತಾ ದೋಸ್ತಿ ಸರ್ಕಾರ..?

    ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ಬಳಿಕ ಕರ್ನಾಟಕ ರಾಜಕೀಯ ಹಲವು ಬದಲಾಣೆಗಳನ್ನು ಕಂಡಿದೆ. ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ರೂ, ಅಧಿಕಾರ ಹಿಡಿಯುವಲ್ಲಿ ವಿಫಲವಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಿ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದ್ದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ. ಇತ್ತ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ರಾಜ್ಯ ಬಿಜೆಪಿ ನಾಯಕರಿಗೆ ನವೆಂಬರ್ ಒಳಗಾಗಿ ದೋಸ್ತಿ ಸರ್ಕಾರ ಬೀಳಿಸಬೇಕೆಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂದೇಶ ರವಾನಿಸಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭಿಸಿವೆ.

    ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಹೆಚ್ಚು ದಿನಗಳಿದ್ದರೆ, ನಮಗೆ ಉಳಿಗಾಲವಿಲ್ಲ. ಲೋಕಸಭೆ ಚುನಾವಣೆ ತನಕ ಕರ್ನಾಟಕದಲ್ಲಿ ಸಮ್ಮಿಶ್ರ ಸರ್ಕಾರ ಇರಬಾರದು. ಹಾಗಾಗಿ ಕೈ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ನವೆಂಬರ್ ವರೆಗೂ ಮಾಡಿ. ದೋಸ್ತಿ ಸರ್ಕಾರ ಇದ್ದುಕೊಂಡು ಲೋಕಸಭೆ ಚುನಾವಣೆಗೆ ಹೋದರೆ ಕರ್ನಾಟಕದಲ್ಲಿ ನಮಗೆ 11 ರಿಂದ 13 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಗೆ ನಮ್ಮ ಸರ್ಕಾರ ಬರುವ ರೀತಿ ಆಪರೇಷನ್ ನಡೆಸಿ ಎಂದು ಅಮಿತ್ ಶಾ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಕೇವಲ ಲಿಂಗಾಯತ ಶಾಸಕರ ಬಗ್ಗೆ ಮಾತ್ರ ಗಮನ ಕೊಡದೇ ಹಿಂದುಳಿದ ವರ್ಗಗಳ ಶಾಸಕರನ್ನು ಬಿಜೆಪಿಗೆ ಸೆಳೆಯುವ ಪ್ರಯತ್ನ ನಡೆಸಿ. ಸಚಿವ ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡಿರುವ ಶಾಸಕರು ನಿಮ್ಮ ಗುರಿ. ಸಚಿವ ಸಂಪುಟದ ಬಳಿಕ ಉಂಟಾಗುವ ಅಸಮಾಧಾನ ಲಾಭವನ್ನು ನಯವಾಗಿ ನಾವು ಪಡೆದುಕೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಮಿತ್ ಶಾ ಸಂದೇಶ ಕಳುಹಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಕೆಲವು ದಿನಗಳಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿ ಆಪರೇಷನ್ ಕಮಲ ನಡೆಸುತ್ತಿದೆ ಎಂದು ಆರೋಪಿಸಿದ್ದರು. ಈ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ, ಆಪರೇಷನ್ ಕಮಲ ನಡೆಸುವ ಅಗತ್ಯ ನಮಗಿಲ್ಲ. ಆರು ತಿಂಗಳಲ್ಲಿಯೇ ಸಮ್ಮಿಶ್ರ ಸರ್ಕಾರ ಬೀಳಲಿದೆ ಎಂದು ಭವಿಷ್ಯ ನುಡಿದಿದ್ದರು. ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಬಿ.ಎಸ್‍ಯಡಿಯೂರಪ್ಪ ಮಾತನಾಡಿ, ನಾವು ಯಾವ ಶಾಸಕರನ್ನು ಸಂಪರ್ಕಿಸಿಲ್ಲ. ವಿರೋಧ ಪಕ್ಷದಲ್ಲಿ ಇದ್ದಕೊಂಡೇ ನಾವು ಕೆಲಸ ಮಾಡುತ್ತೇವೆ ಅಂದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಭತ್ತ ನಾಟಿ ನಾಟಕ ಬಿಟ್ಟು, ರೈತರ ಭೂಮಿಗೆ ನೀರು ಹರಿಸಲಿ: ಬಿಎಸ್‍ವೈ

    ಭತ್ತ ನಾಟಿ ನಾಟಕ ಬಿಟ್ಟು, ರೈತರ ಭೂಮಿಗೆ ನೀರು ಹರಿಸಲಿ: ಬಿಎಸ್‍ವೈ

    ರಾಯಚೂರು: ಸಿಎಂ ಭತ್ತ ನಾಟಿ ಮಾಡುವ ನಾಟಕವನ್ನು ಬಿಟ್ಟು, ರೈತರ ಭೂಮಿಗೆ ನೀರು ಹರಿಸಲಿ ಎಂದು ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಲೋಕಸಭೆ ಹಾಗೂ ಸ್ಥಳೀಯ ಚುನಾವಣೆ ಹಿನ್ನಲೆಯಲ್ಲಿ ನಗರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬರದ ವಾತಾವರಣ ನಿರ್ಮಾಣವಾಗಿದ್ದು, ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ರಾಜ್ಯದಲ್ಲಿ ತುಘಲಕ್ ಆಡಳಿತ ನಿರ್ಮಾಣವಾಗಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.

    ಬರ ಎದುರಿಸುತ್ತಿರುವ ಜಿಲ್ಲೆಗಳಿಗೆ ಭೇಟಿ ಪರಿಶೀಲನೆ ನಡೆಸದೆ, ನೀರು ಬಿಟ್ಟಿರುವ ಜಿಲ್ಲೆಯಲ್ಲಿ ಭತ್ತ ಮಾಡುತ್ತಿದ್ದಾರೆ. ಬರದಿಂದ ಪರದಾಡುತ್ತಿರುವ ಜಿಲ್ಲೆಗಳ ರೈತರ ಭೂಮಿಗೆ ನೀರು ಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಮ್ಮಿಶ್ರ ಸರ್ಕಾರ ಮಾಡುತ್ತಿಲ್ಲ. ಭತ್ತದ ನಾಟಿ ಮಾಡಲು ನಿಮ್ಮನ್ನು ಮುಖ್ಯಮಂತ್ರಿ ಮಾಡಿಲ್ಲ. ರಾಜ್ಯದ ಎಲ್ಲ ಭಾಗದ ರೈತರು ಸಮೃದ್ಧವಾಗಿ ಬೆಳೆ ಬೆಳೆಯಲು ಶ್ರಮಿಸಲಿ ಅಂತಾ ನಿಮಗೆ ಜನರು ಅಧಿಕಾರ ನೀಡಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

    ಜಿಲ್ಲೆಯ ಸಮಸ್ಯೆಗೆ ಸರ್ಕಾರ ಸ್ಪಂದಿಸದಿದ್ದರೆ ರಾಯಚೂರು ಬಂದ್‍ಗೆ ಕರೆ ನೀಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಅವರು, 2019ರ ಲೋಕಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸಿದ್ದು, ರಾಜ್ಯದ 23 ರಿಂದ 24 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆಕೊಟ್ಟರು.

  • ಮಂದಿರ, ಆಶ್ರಮ, ಮಠಗಳ ಲೆಕ್ಕಾಚಾರದಲ್ಲಿ ಬಿಜೆಪಿ- 29 ಲಕ್ಷ ಕಾರ್ಯಕರ್ತರ ಟೀಂ ರೆಡಿ

    ಮಂದಿರ, ಆಶ್ರಮ, ಮಠಗಳ ಲೆಕ್ಕಾಚಾರದಲ್ಲಿ ಬಿಜೆಪಿ- 29 ಲಕ್ಷ ಕಾರ್ಯಕರ್ತರ ಟೀಂ ರೆಡಿ

    ನವದೆಹಲಿ: ಲೋಕಸಭಾ ಚುನಾವಣೆಗೆ ಪಕ್ಷಗಳು ಸಜ್ಜಾಗುತ್ತಿದ್ದು, ಗೆಲುವು ಸಾಧಿಸುವುದು ಹೇಗೆ ಎಂಬುದರ ಬಗ್ಗೆ ರಾಜಕೀಯ ತಂತ್ರಗಳನ್ನು ರೂಪಿಸುತ್ತಿವೆ. ಕಾಂಗ್ರೆಸ್ ಹೈಕಮಾಂಡ್ ಸಹ ಸಭೆಯ ಮೇಲೆ ಸಭೆಗಳನ್ನು ನಡೆಸುತ್ತಿದ್ದರೆ, ಇತ್ತ ಬಿಜೆಪಿ ದೇಶದಲ್ಲಿಯ ಮಂದಿರ, ಮಠ, ಆಶ್ರಮಗಳಿಗೆ ಸಂಬಂಧಪಟ್ಟ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ವರದಿಯಾಗಿದೆ.

    2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಸಕಲ ತಯಾರಿಗಳನ್ನು ಮಾಡಿಕೊಳ್ಳಲು ಬಿಜೆಪಿ ಕಚೇರಿಯಲ್ಲಿ ಸಭೆಗಳು ನಡೆಯುತ್ತಿವೆ. ಹಿಂದೂ ವೋಟ್ ಗಳನ್ನು ಕೇಂದ್ರೀಕರಿಸಿರುವ ಬಿಜೆಪಿ ಚುನಾವಣೆ ಸಮಯದಲ್ಲಿ ಮತಗಳ ವಿಭಜನೆಗೊಳ್ಳದಂತೆ ಎಚ್ಚರಿಕೆ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಕಚೇರಿಯಲ್ಲಿ ಇದೇ ತಿಂಗಳು ಸಭೆ ನಡೆಯಲಿವೆ ಎನ್ನಲಾಗುತ್ತಿದೆ. ಸಭೆಗೂ ಮುನ್ನ ಬಿಜೆಪಿ ನಾಯಕರು ತಮ್ಮ ರಾಜ್ಯದಲ್ಲಿ ಬರುವ ಪ್ರಸಿದ್ಧ ಮಠ, ದೇವಾಲಯ, ಆಶ್ರಮ ಸೇರಿದಂತೆ ಇತರೆ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳನ್ನು ಸಂಗ್ರಹಿಸುತ್ತಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.

    ರಣತಂತ್ರವೇನು?:
    ಎಲ್ಲ ಧಾರ್ಮಿಕ ಕೇಂದ್ರಗಳ ಅಂಕಿ ಅಂಶಗಳು ದೊರೆತ ಮೇಲೆ ಸ್ಥಳಕ್ಕನುಗುಣವಾಗಿ ವಿಭಾಗಿಸುವುದು. ಬೂತ್ ಗಳಿಗೆ ಅನುಗುಣವಾಗಿ ಧಾರ್ಮಿಕ ಕೇಂದ್ರಗಳ ವಿಂಗಡನೆ ಬಳಿಕ ಅಲ್ಲಿಯ ಅರ್ಚಕ ಅಥವಾ ಪ್ರಧಾನ ವ್ಯವಸ್ಥಾಪಕ ಅಥವಾ ಆಡಳಿತ ಮಂಡಳಿ ಮುಖಂಡರ ಫೋನ್ ನಂಬರ್ ಕಲೆ ಹಾಕುವುದು. ಎಲ್ಲ ಧಾರ್ಮಿಕ ಕೇಂದ್ರಗಳ ಪ್ರಮುಖರ ಫೋನ್ ನಂಬರ್ ಸಂಗ್ರಹಿಸಿದ ಬಳಿಕ ಎಲ್ಲರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲು ಬಿಜೆಪಿ ಈಗಾಗಲೇ 29 ಲಕ್ಷ ಕಾರ್ಯಕರ್ತರನ್ನ ನೇಮಿಸಿದೆ. ಈ ಎಲ್ಲ ಕಾರ್ಯಕರ್ತರು ತಮ್ಮ ವ್ಯಾಪ್ತಿಗೆ ಒಳಪಡುವ ಧಾರ್ಮಿಕ ಕೇಂದ್ರಗಳ ಪ್ರಮುಖರೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇದೇ ಆಗಸ್ಟ್ 16ರಿಂದ 25ರವರೆಗೆ ಹಂತ ಹಂತವಾಗಿ ಎಲ್ಲ ಕಾರ್ಯಕರ್ತರೊಂದಿಗೆ ಬಿಜೆಪಿ ಹಿರಿಯ ನಾಯಕರು ಬೈಟಕ್ (ಸಭೆ) ನಡೆಸಲಿದ್ದಾರೆ ಎಂದು ಹೇಳಲಾಗಿದೆ.

    ಈ ಬೈಟಕ್ ನಲ್ಲಿ ಎಲ್ಲ ಕಾರ್ಯಕರ್ತರು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗುವುದು. ಎಲ್ಲ ಕಾರ್ಯಕರ್ತರನ್ನು ಬೂತ್ ಮಟ್ಟ, ತಾಲೂಕು, ಜಿಲ್ಲಾವಾರು ರೀತಿಯಲ್ಲಿ ವಿಂಗಡಿಸಲಾಗುತ್ತದೆ. ಹೀಗೆ ವಿಂಗಡನೆಯಾದ ತಂಡಗಳಿಗೆ ಪಕ್ಷವೇ ವಿವಿಧ ಕೋಡ್‍ಗಳನ್ನು ನೀಡಲಿದೆ. ಕೋಡ್ ಗಳಿಗೆ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲಿದ್ದಾರೆ.

  • ಹೈಕಮಾಂಡ್ ಗೆ ಮಾಜಿ ಸಿಎಂರಿಂದ ಸ್ಪಷ್ಟ ಮಾಹಿತಿ ರವಾನೆ!

    ಹೈಕಮಾಂಡ್ ಗೆ ಮಾಜಿ ಸಿಎಂರಿಂದ ಸ್ಪಷ್ಟ ಮಾಹಿತಿ ರವಾನೆ!

    ಬೆಂಗಳೂರು: ಇನ್ಮುಂದೆ ಯಾವುದೇ ಚುನಾವಣೆಗೆ ಸ್ವರ್ಧಿಸದಿರಲು ಮಾಜಿ ಸಿಎಂ ಸಿದ್ದರಾಮಯ್ಯ ತಿರ್ಮಾನಿಸಿದ್ದಾರೆ. ಈ ಬಗ್ಗೆ ಹೈಕಮಾಂಡ್‍ಗೆ ಮಾಹಿತಿ ರವಾನಿಸುವ ಮೂಲಕ ಲೋಕಸಭೆಗೆ ಸಿದ್ದರಾಮಯ್ಯ ಸ್ವರ್ಧಿಸುತ್ತಾರೆ ಎನ್ನುವ ಸುದ್ದಿಗಳಿಗೆ ಬ್ರೇಕ್ ಹಾಕಿದ್ದಾರೆ.

    ಲೋಕಸಭೆ ಅಥವಾ ರಾಜ್ಯಸಭೆಯಿಂದ ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡುತ್ತಾರೆ ಅನ್ನೊ ಮಾತುಗಳು ಕೇಳಿ ಬಂದಿದ್ದವು. ಜೊತೆಗೆ ಹೈಕಮಾಂಡ್ ಕೂಡಾ ಲೋಕಸಭೆ ಕುಸ್ತಿಗೆ ತಯಾರಾಗುವಂತೆ ಸೂಚನೆ ನೀಡಿತ್ತು ಎನ್ನಲಾಗಿತ್ತು.

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕೊನೆಯ ಚುನಾವಣೆ ಅಂತಾ ಘೋಷಿಸಿಕೊಂಡ ಹಿನ್ನೆಲೆಯಲ್ಲಿ ಮುಂದಿನ ಯಾವುದೇ ಚುನಾವಣೆಗೆ ಸ್ವರ್ಧಿಸದಿರಲು ಸಿದ್ದರಾಮಯ್ಯ ಯೋಚಿಸಿದ್ದಾರಂತೆ. ವಯಸ್ಸು 75ರ ಆಸುಪಾಸಿನಲ್ಲಿದ್ದು, ಚುನಾವಣಾ ರಾಜಕೀಯದಿಂದ ದೂರ ಸರಿದು ಕೇವಲ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿರಲು ಸಿದ್ದರಾಮಯ್ಯ ಯೋಚಿಸಿದ್ದಾರೆ ಅಂತ ಕಾಂಗ್ರೆಸ್ ಮೂಲಗಳು ತಿಳಿಸಿವೆ.

    ಶನಿವಾರ ದೆಹಲಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದು, ಹೈಕಮಾಂಡ್ ಬಳಿ ಸಾಕಷ್ಟು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಆಷಾಢ ಮುಗಿಯುತ್ತಿದ್ದಂತೆಯೇ ಸಂಪುಟ ವಿಸ್ತರಣೆ ಹಾಗೂ ನಿಗಮಂಡಳಿಗೆ ಮುಹೂರ್ತ ನಿಗದಿ ಪಡಿಸುವ ಸಂಬಂಧ ಕೂಡ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

    ಸಿದ್ದರಾಮಯ್ಯಗೇಕೆ `ಲೋಕ’ ಜವಾಬ್ದಾರಿ??
    2014ರ ಚುನಾವಣೆಯಲ್ಲಿ 9 ಸಂಸದರನ್ನು ಗೆಲ್ಲಿಸಿದ ಹೆಗ್ಗಳಿಕೆ ಸಿದ್ದರಾಮಯ್ಯನವರಿಗಿದ್ದು, ಅಹಿಂದ ಮತಗಳನ್ನು ಸೆಳೆಯಬಲ್ಲ ರಾಜ್ಯದ ಏಕೈಕ ನಾಯಕರಾಗಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಖರ್ಗೆ ಬ್ಯುಸಿ ಆಗಿದ್ದು ಮೋದಿ ಅಲೆಯನ್ನು ಹಿಮ್ಮೆಟ್ಟಿಸುವ ಶಕ್ತಿ ಸಿದ್ದರಾಮಯ್ಯನವರಿಗಿದೆ ಎನ್ನುವುದನ್ನು ಕಾಂಗ್ರೆಸ್ ಅರಿತಿದೆ. ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಅನುಭವ ಸ್ವಲ್ಪ ಕಡಿಮೆ ಇದೆ. ಇದರ ಜೊತೆ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿರುವ ಕಾರಣ ಸಿದ್ದರಾಮಯ್ಯನವರಿಗೆ ಈ ಜವಾಬ್ದಾರಿ ಸಿಕ್ಕಿದೆ.

  • ಹೊಸ ಗೆಟಪ್ ನಲ್ಲಿ ಪೊಲಿಟಿಕಲ್ ರೀ ಎಂಟ್ರಿಯ ಸಿದ್ಧತೆಯಲ್ಲಿ ಮಂಡ್ಯದ ಗಂಡು

    ಹೊಸ ಗೆಟಪ್ ನಲ್ಲಿ ಪೊಲಿಟಿಕಲ್ ರೀ ಎಂಟ್ರಿಯ ಸಿದ್ಧತೆಯಲ್ಲಿ ಮಂಡ್ಯದ ಗಂಡು

    -ಸಕ್ಕರೆ ನಾಡಿನ ಸಿಹಿ ಬಿಟ್ಟು, ಮೈಸೂರು ಪಾಕ್ ಸೇವಿಸ್ತಾರಾ ಅಂಬರೀಶ್?

    ಬೆಂಗಳೂರು: ಮಾಜಿ ಸಚಿವ ಅಂಬರೀಶ್ ಅವರು ಹೊಸ ಗೆಟಪ್‍ನಲ್ಲಿ ಮತ್ತೆ ರಾಜಕೀಯಕ್ಕೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದು, ಸಕ್ಕರೆ ನಾಡಿನ ಸಿಹಿ ಬಿಟ್ಟು, ಮೈಸೂರು ಪಾಕ್ ಸವಿಯಲಿದ್ದಾರಂತೆ.

    ನನಗೆ ವಯಸ್ಸಾಗಿದೆಯೆಂದು ಮಂಡ್ಯ ರಾಜಕಾರಣ ಹಾಗೂ ವಿಧಾನಸಭೆ ಚುನಾವಣೆಯಿಂದ ಹಿಂದೆ ಸರಿದಿದ್ದರು. ಆದರೆ ಈಗ ಲೋಕಸಭೆ ಚುನಾವಣೆ ಉದ್ದೇಶದಿಂದ ಮೈಸೂರು ಮತಕ್ಷೇತ್ರದ ಅಭ್ಯರ್ಥಿಯನ್ನಾಗಿ ಅಂಬರೀಶ್‍ರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ಸಿನ ಕೆಲವು ನಾಯಕರು ಲೆಕ್ಕಾಚಾರ ನಡೆದಿದೆ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ರಾಜಕೀಯ ಸತ್ವ ಪರೀಕ್ಷೆಗೆ ರೆಬೆಲ್ ಸ್ಟಾರ್ ಮುಂದಾಗಲಿದ್ದಾರೆ ಎಂದು ಅಂಬರೀಶ್ ಆಪ್ತ ವಲಯವೇ ಮಾತನಾಡಿಕೊಳ್ಳುತ್ತಿದೆ.

    ಈಗಾಗಲೇ ಅಂಬರೀಶ್ ಕೂಡಾ ಇದರ ಸಾಧಕ ಬಾಧಕಗಳ ಬಗ್ಗೆ ತಮ್ಮ ಆಪ್ತರ ಬಳಿ ಚರ್ಚಿಸಿದ್ದಾರಂತೆ. ಎಲ್ಲಾ ಓಕೆ ಆದರೆ ಮೈಸೂರು ಲೋಕಸಭಾ ಕ್ಷೇತ್ರದಿಂದ ಅಂಬರೀಶ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಖಾಡಕ್ಕೆ ಧಮುಕೋದು ಬಹುತೇಕ ಖಚಿತ ಎಂದು ಕಾಂಗ್ರೆಸ್ ವಲಯದಲ್ಲಿ ಸುದ್ದಿಯೊಂದು ಕೇಳಿ ಬರುತ್ತಿದೆ.

    ಇತ್ತ ಜೆಡಿಎಸ್ ನಾಯಕರು ಕೂಡಾ ಅಂಬರೀಶ್‍ಗೆ ಮಂಡ್ಯ ಲೋಕಸಭಾ ಮತಕ್ಷೇತ್ರದ ಟಿಕೆಟ್ ನೀಡುವ ಲೆಕ್ಕಾಚಾರ ಹಾಕುತ್ತಿದೆ ಎಂದು ಹೇಳಲಾಗುತ್ತಿದ್ದು, ಒಂದು ವೇಳೆ ಜೆಡಿಎಸ್ ಸೇರ್ಪಡೆಗೆ ಅಂಬರೀಶ್ ಒಪ್ಪಿಕೊಂಡರೆ ಮಂಡ್ಯದಿಂದ ಅವರ ಸ್ಪರ್ಧೆ ಖಚಿತ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಪಕ್ಷಕ್ಕೆ ಬರುವಂತೆ ಅಂಬರೀಶ್‍ಗೆ ಆಹ್ವಾನ ನೀಡಿದ್ದಾರಂತೆ. ಆದರೆ ಅಂಬರೀಶ್ ಮಾತ್ರ ಜೆಡಿಎಸ್ ಪಕ್ಷ ಸೇರ್ಪಡೆ ಹಾಗೂ ಲೋಕಸಭೆ ಚುನಾವಣೆ ಸ್ಪರ್ಧೆ ಕುರಿತಾಗಿ ಅಂಬರೀಶ್ ಎಲ್ಲಿಯೂ ಮಾತನಾಡಿಲ್ಲ.

    ವಿಧಾನಸಭಾ ಚುನಾವಣೆಯಂತೆ ಲೋಕಸಭೆಗೂ ಮೌನವಾಗಿಯೇ ಉಳಿಯುತ್ತಾರೆಯೇ, ಮೈಸೂರ್ ಪಾಕಿಗೆ ಕೈ ಹಾಕಿ ಬಾಯಿ ಸಿಹಿ ಮಾಡಿಕೊಳುತ್ತಾರಾ ಅಥವಾ ಸಕ್ಕರೆ ನಾಡಿನಲ್ಲಿ ತೆನೆ ಹೊತ್ತು ಜೈ ಎನ್ನುತ್ತಾರಾ ಎನ್ನುವುದು ಸದ್ಯದ ಕುತೂಹಲ ಮೂಡಿಸಿದೆ.

  • ಲೋಕಸಭೆ ಚುನಾವಣೆ ಸಿದ್ಧತೆ- 3 ತಂಡಗಳಲ್ಲಿ ಬಿಜೆಪಿ ನಡೆಸಲಿದೆ ರಾಜ್ಯ ಪ್ರವಾಸ

    ಲೋಕಸಭೆ ಚುನಾವಣೆ ಸಿದ್ಧತೆ- 3 ತಂಡಗಳಲ್ಲಿ ಬಿಜೆಪಿ ನಡೆಸಲಿದೆ ರಾಜ್ಯ ಪ್ರವಾಸ

    ಬೆಂಗಳೂರು: ವಿಧಾನ ಸಭೆ ಚುನಾವಣೆಯ ನೋವು ಮರೆತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಲೋಕಸಭೆ ಚುನಾವಣೆಗೆ ಭಾರೀ ಸಿದ್ಧತೆ ನಡೆಸಿದ್ದಾಗಿ ಹೇಳಿಕೊಂಡಿದ್ದು, ಅದನ್ನು ಶನಿವಾರ ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

    ಆಗಸ್ಟ್ 9 ಕ್ರಾಂತಿ ದಿನ, ಅವತ್ತೇ ನಮ್ಮ ರಾಜ್ಯ ಪ್ರವಾಸ ಆರಂಭ ಮಾಡುತ್ತೇವೆ. ರಾಜ್ಯ ಬಿಜೆಪಿ ನಾಯಕರ ನೇತೃತ್ವದಲ್ಲಿ ಒಟ್ಟು 3 ತಂಡಗಳು ರಚನೆಯಾಗಿವೆ. ಒಂದನೇ ತಂಡದ ನೇತೃತ್ವವನ್ನು ನಾನು ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಗೋವಿಂದ ಕಾರಜೋಳ ವಹಿಸಿಲಿದ್ದೇವೆ. ನಾವು ಉತ್ತರ ಕರ್ನಾಟಕದ 13 ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದೇವೆ. ಉಳಿದಂತೆ ಎರಡನೇ ತಂಡದಲ್ಲಿ ಜಗದೀಶ್ ಶೆಟ್ಟರ್, ಆರ್.ಅಶೋಕ್, ಅರವಿಂದ ಲಿಂಬಾವಳಿ ಹಾಗೂ ಕೊನೆಯ ತಂಡ ನೇತೃತ್ವವನ್ನು ಈಶ್ವರಪ್ಪ, ಸಿ.ಟಿ.ರವಿ, ಲಕ್ಷ್ಮಣ ಸವದಿ ಅವರು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

    ಲೋಕಸಭೆ ಅಧಿವೇಶನದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳಿಂದ ಬಿಜೆಪಿ ಸ್ಪರ್ಧೆಗೆ ಇಳಿಯಲಿದೆ. ಆದರೆ ಶೋಭಾ ಕರಂದ್ಲಾಜೆ ಮತ್ತು ಡಿ.ವಿ.ಸದಾನಂದಗೌಡ ಅವರ ಮತಕ್ಷೇತ್ರಗಳ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಊಹಾಪೋಹ ಅಷ್ಟೇ. ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

    ಡಿಸೆಂಬರ್ ಒಳಗಾಗಿ ಬಿಜೆಪಿ ಸರ್ಕಾರ ಬರುತ್ತೆ ಎನ್ನುವ ಬಗ್ಗೆ ನಾನು ಭವಿಷ್ಯ ಹೇಳುವುದಿಲ್ಲ. ಆದರೆ ಕಾಂಗ್ರೆಸ್-ಜೆಡಿಎಸ್ ಜಗಳ, ಬಡಿದಾಟದಿಂದ ಸರ್ಕಾರ ಬಿದ್ದರೆ ನಾವೇನು ಮಾಡುವುದಕ್ಕೆ ಆಗುತ್ತದೆ ಎಂದ ಅವರು, ಪುತ್ರ ವಿಜಯೇಂದ್ರ ಅಗತ್ಯವಿರುವ ಕಡೆ ರಾಜ್ಯ ಪ್ರವಾಸ ಮಾಡುತ್ತಾರೆ. ಆದರೆ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು.

    ಪ್ರತ್ಯೇಕ ರಾಜ್ಯ:
    ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಬಗ್ಗೆ ಬಿಜೆಪಿ ನಾಯಕರು ಬೆಂಬಲ ನೀಡುವುದಿಲ್ಲ. ಶಾಸಕ ಶ್ರೀರಾಮುಲು ಅವರ ಜೊತೆ ನಾನು ಮಾತನಾಡಿರುವೆ. ಅಖಂಡ ಕರ್ನಾಟಕ ಬಿಜೆಪಿಯ ಸ್ಪಷ್ಟ ನಿಲುವು. ಉತ್ತರ ಹಾಗೂ ದಕ್ಷಿಣ ಕರ್ನಾಟಕ ಎಂದು ಒಡೆದು ಆಳುವ ನೀತಿಯನ್ನು ಸಿಎಂ ಕುಮಾರಸ್ವಾಮಿ ತೋರುತ್ತಿದ್ದಾರೆ. ಇದರ ಬಗ್ಗೆ ಕಾಂಗ್ರೆಸ್ ತನ್ನ ನಿಲುವುವನ್ನು ಸ್ಪಷ್ಟಪಡಿಸಬೇಕು. ಒಂದು ರೀತಿಯಲ್ಲಿ ಪ್ರತ್ಯೇಕ ರಾಜ್ಯದ ಕೂಗಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನೇರ ಕಾರಣ ಎಂದು ಆರೋಪಿಸಿದರು.

    ಹಿರಿಯ ಸಾಹಿತಿಗಳು, ಹೋರಾಟಗಾರರು ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದ್ದಾರೆ. ಆದರೆ ಕುಮಾರಸ್ವಾಮಿ ಅದನ್ನು ಅಧಿಕಾರ ದಾಹದಿಂದ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಅವರು ಕೇವಲ 37 ಕ್ಷೇತ್ರಗಳಿಗೆ ಮಾತ್ರ ಮುಖ್ಯಂಮಂತ್ರಿ ಎನ್ನುವ ರೀತಿ ಇರುವುದು ರಾಜ್ಯದ ದುರ್ದೈವ. ಕುಮಾರಸ್ವಾಮಿ ಕುಟುಂಬದ ಕೆಟ್ಟ ಸ್ವಾರ್ಥಕ್ಕಾಗಿ ಕೈ ಹಿಡಿದವರಿಗೆ ದ್ರೋಹ ಮಾಡಿ, ಈಗ ರಾಜ್ಯ ಒಡೆಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಮುಂದಿನ ಪೀಳಿಗೆ ಅವರನ್ನು ಎಂದೆಂದೂ ಕ್ಷಮಿಸುವುದಿಲ್ಲ ಎಂದು ಹರಿಹಾಯ್ದರು.

    ಸಂಪೂರ್ಣ ಸಾಲ ಮನ್ನಾದ ಹೋರಾಟದಿಂದ ಬಿಜೆಪಿ ಹಿಂದೆ ಸರಿಯುವುದಿಲ್ಲ. ಸರ್ಕಾರ ಈಗಾಗಲೇ ಘೋಷಣೆ ಮಾಡಿರುವ ಸಾಲಮನ್ನಾ ತಕ್ಷಣ ಆಗಬೇಕು. ಸಂಪೂರ್ಣ ಸಾಲಮನ್ನ ಆಗದೇ ಇರಬಹುದು. ಆದರೆ ಸಹಕಾರಿ ಬ್ಯಾಂಕುಗಳಲ್ಲಿ 1 ಲಕ್ಷ ರೂ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 2 ಲಕ್ಷ ರೂ. ಸಾಲಮನ್ನಾ ಶೀಘ್ರವೆ ಮಾಡುವಂತೆ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದ ಬಿಎಸ್ ಯಡಿಯೂರಪ್ಪ ಅವರು, ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಿಂದ ನಾವು ಪಾಠ ಕಲಿಯಬೇಕಿಲ್ಲ ಎಂದು ಟಾಂಗ್ ಕೊಟ್ಟರು.

  • 2019ರ ಚುನಾವಣೆಯಲ್ಲಿ ಮೋದಿ ಗೆಲ್ಲಬೇಕು: ಕಂಗನಾ ರಣಾವತ್

    2019ರ ಚುನಾವಣೆಯಲ್ಲಿ ಮೋದಿ ಗೆಲ್ಲಬೇಕು: ಕಂಗನಾ ರಣಾವತ್

    ಮುಂಬೈ: 2019ರ ಲೋಕಸಭೆ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಗೆಲ್ಲಬೇಕು ಅಂತ ಬಾಲಿವುಡ್ ನಟಿ ಕ್ವೀನ್ ಕಂಗನಾ ರಣಾವತ್ ಹೇಳಿದ್ದಾರೆ.

    ದೇಶದ ಅಭಿವೃದ್ಧಿಗೆ 5 ವರ್ಷ ಸಾಕಾಗಲ್ಲ. ಇನ್ನಷ್ಟು ವರ್ಷಗಳು ಬೇಕು. ಹಾಗಾಗಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಸೂಕ್ತವಾದ ವ್ಯಕ್ತಿ ಅಂತ ಕಂಗನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇತ್ತಿಚೆಗಷ್ಟೇ ಕಂಗನಾ ನಾನು ಪ್ರಧಾನಿಯವರ ಬಹುದೊಡ್ಡ ಅಭಿಮಾನಿ ಅವರ ಯಶಸ್ವಿ ಜೀವನ ನಮಗೆ ರೋಲ್ ಮಾಡೆಲ್ ಅಂತಲೂ ಹೇಳಿದ್ದರು.

    ಪ್ರಧಾನಿ ಮೋದಿಯವರ ಬಾಲ್ಯ ಆಧಾರಿತ ‘ಚಲೋ ಜೀತೆ ಹೈಂ’ ಕಿರುಚಿತ್ರ ಪ್ರದರ್ಶನದಲ್ಲಿ ಕಂಗನಾ ಭಾಗಿಯಾಗಿದ್ದರು. ಪ್ರಧಾನಿ ಮೋದಿ ಇಂದು ಈ ಸ್ಥಾನಕ್ಕೆ ತಲುಪಿದ್ದು, ತಂದೆ-ತಾಯಿಯ ಹೆಸರಿನಿಂದಲ್ಲ. ತಮ್ಮ ಸತತ ಪರಿಶ್ರಮ, ಹೋರಾಟದಿಂದ ಇಂದು ದೇಶದ ಪ್ರಧಾನಿಗಳಾಗಿದ್ದಾರೆ. ಕಿರುಚಿತ್ರ ಕೇವಲ ಮೋದಿಯವರ ಇಡೀ ಜೀವನದ ಒಂದು ಸಣ್ಣ ತುಣುಕಾಗಿದ್ದು, ತೆರೆಯ ಮೇಲೆ ಅದ್ಭುತವಾಗಿ ಮೂಡಿ ಬಂದಿದೆ.

    ಮಂಗೇಶ್ ಹದಿವಾಲಾ ನಿರ್ದೇಶನದಲ್ಲಿ ಕಿರುಚಿತ್ರ ಮೂಡಿಬಂದಿದೆ. ಇದೇ ಕಿರುಚಿತ್ರ ಶೋನಲ್ಲಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್, ಹುಲಶನ್ ಗ್ರೋವರ್, ಅಮಿಷಾ ಪಟೇಲ್ ಮತ್ತು ಸಂಜಯ್ ಖಾನ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಉದ್ಯಮಿ ಮುಖೇಶ್ ಅಂಬಾನಿ ಸಹ ಭಾಗಿಯಾಗಿ, ಚಿತ್ರ ಜನರಿಗೆ ಪ್ರೇರಣೆ ಆಗಲಿದೆ ಎಂದು ತಿಳಿಸಿದರು.

  • ರಾಹುಲ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮತ್ತೊಂದು ವಿಕೆಟ್ ಪತನ!

    ರಾಹುಲ್ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಮತ್ತೊಂದು ವಿಕೆಟ್ ಪತನ!

    ಪಾಟ್ನಾ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಉಪಾಧ್ಯಕ್ಷರನ್ನೇ ಬಿಎಸ್‍ಪಿ ನಾಯಕಿ ಮಾಯಾವತಿ ವಜಾ ಮಾಡಿದ್ದರು. ಇದರ ಬೆನ್ನಲ್ಲೇ ಈಗ ಬಿಹಾರದ ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ವಕ್ತಾರರೊಬ್ಬರು ಪಕ್ಷದಿಂದ ವಜಾಗೊಂಡಿದ್ದಾರೆ.

    ಆರ್‌ಜೆಡಿ ಪಕ್ಷದ ರಾಷ್ಟ್ರೀಯ ವಕ್ತಾರ ಶಂಕರ್ ಚರಣ್ ತ್ರಿಪಾಠಿ ಪಕ್ಷ ವಿರೋಧಿ ಹೇಳಿಕೆ ನೀಡಿದ್ದಾರೆ. ಹೀಗಾಗಿ ಅವರನ್ನು ಪಕ್ಷದಿಂದ ವಜಾ ಮಾಡಲಾಗಿದೆ ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಎಂ.ಖಮರ್ ಆಲಂ ದಿಢೀರ್ ನಿರ್ಧಾರ ಕೈಗೊಂಡಿದ್ದಾರೆ.

    ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಶಂಕರ್ ಚರಣ್ ತ್ರಿಪಾಠಿ ಅವರು, ಲೋಕಸಭೆ ಅವಿಶ್ವಾಸ ಗೊತ್ತುವಳಿ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯನ್ನು ತಬ್ಬಿಕೊಂಡಿದ್ದು ಹಾಗೂ ಕಣ್ಣು ಸನ್ನೆ ಮಾಡಿರುವ ಕುರಿತು ವ್ಯಂಗ್ಯವಾಡಿದ್ದರು. ರಾಹುಲ್ ಗಾಂಧಿ ಮಗುವಿನಂತೆ ವರ್ತಿಸಿದ್ದಾರೆ ಹಾಗೂ ಲೋಕಸಭೆ ಚುನಾವಣೆಗೆ ತಮ್ಮನ್ನು ತಾವೇ ಪ್ರಧಾನಿ ಅಭ್ಯರ್ಥಿ ಅಂತಾ ಗುರುತಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.

    ಕೆಲದಿನಗಳ ಹಿಂದಷ್ಟೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ರಾಹುಲ್ ಗಾಂಧಿ ಭಾಷಣಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಈ ಮೂಲಕ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಪರೋಕ್ಷವಾಗಿ ಆರ್‌ಜೆಡಿ ಬೆಂಬಲ ಸೂಚಿಸಿತ್ತು. ಆದರೆ ಶಂಕರ್ ಚರಣ್ ತ್ರಿಪಾಠಿ ಹೇಳಿಕೆಯಿಂದ ಮೈತ್ರಿಗೆ ಹೊಡೆತ ಬೀಳಬಹುದು ಎನ್ನುವ ಕಾರಣಕ್ಕೆ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎಂದು ವರದಿಯಾಗಿದೆ.

    2017ರ ನವೆಂಬರ್ 4ರಂದು ಲಾಲು ಪ್ರಸಾದ್ ಯಾದವ್ ಶಂಕರ್ ತ್ರಿಪಾಠಿ ಅವರನ್ನು ರಾಷ್ಟ್ರೀಯ ವಕ್ತಾರರನ್ನಾಗಿ ನೇಮಕ ಮಾಡಿದ್ದರು.