Tag: ಲೋಕಸಭೆ ಚುನಾವಣೆ

  • ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಮುಂದಾಗುವವರಿಗೆ ಜನರೇ ಉತ್ತರ ನೀಡಿದ್ದಾರೆ: ಎಚ್‍ಡಿಡಿ

    ಮೈತ್ರಿ ಸರ್ಕಾರ ಅಸ್ಥಿರಗೊಳಿಸಲು ಮುಂದಾಗುವವರಿಗೆ ಜನರೇ ಉತ್ತರ ನೀಡಿದ್ದಾರೆ: ಎಚ್‍ಡಿಡಿ

    ಬೆಂಗಳೂರು: ಇಂದು ಕರ್ನಾಟಕ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೇ ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಅವರು ಟ್ವೀಟ್ ಮೂಲಕ ರಾಜ್ಯದ ಜನತೆಗೆ ಅಭಿನಂದನೆಯನ್ನು ತಿಳಿಸಿದ್ದಾರೆ.

    ಉಪಚುನಾವಣೆಯಲ್ಲಿ ಮೈತ್ರಿ ಸರ್ಕಾರ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಎಚ್‍ಡಿ ದೇವೇಗೌಡ ಅವರು “ಅಭಿವೃದ್ಧಿ ಕೇಂದ್ರಿತ ಆಡಳಿತವನ್ನು ಬೆಂಬಲಿಸುತ್ತಿರುವ ರಾಜ್ಯದ ಜನತೆಗೆ ನನ್ನ ಅಭಿನಂದನೆಗಳು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಮುಂದಾಗುವವರಿಗೆ ಜನರೇ ಉತ್ತರ ನೀಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

    ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರ ಇಡಲು ನಾವು ಒಂದಾಗಿದ್ದೇವೆ ಎಂದು ವಿಧಾನಸಭಾ ಚುನಾವಣೆಯ ಫಲಿತಾಂಶದ ವೇಳೆ ಹೇಳಿದ್ದ ಎಚ್‍ಡಿಡಿ ಈ ಚುನಾವಣೆಯ ಸಮಯದಲ್ಲಿ ಮೋದಿಯನ್ನು ಸೋಲಿಸಲು ಒಂದಾಗಿದ್ದೇವೆ. ಲೋಕಸಭಾ ಚುನಾವಣೆಗೆ ಇಲ್ಲಿಂದಲೇ ಸ್ಪಷ್ಟ ಸಂದೇಶ ರವಾನಿಸುತ್ತೇವೆ ಎಂದು ಪ್ರಚಾರದ ವೇಳೆ ಭಾಷಣ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕರಾದ ದೇವೇಗೌಡರದ್ದು: ಶಿವರಾಮೇಗೌಡ

    ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕರಾದ ದೇವೇಗೌಡರದ್ದು: ಶಿವರಾಮೇಗೌಡ

    ಮಂಡ್ಯ: ಮಂಡ್ಯದ ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಪಡೆದ ಜೆಡಿಎಸ್ ಶಿವರಾಮೇಗೌಡ ಅವರು ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ಮಾಜಿ ಪ್ರಧಾನಿ ದೇವೇಗೌಡರಿಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಐತಿಹಾಸಿಕ ಗೆಲುವು ನಮ್ಮ ನೆಚ್ಚಿನ ನಾಯಕಾರದ ದೇವೇಗೌಡರು, ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ಜಿಲ್ಲೆಯ ಎಲ್ಲ ನಾಯಕರಿಗೂ ಸೇರಿದ್ದಾಗಿದೆ. ಚೆಲುವರಾಯಸ್ವಾಮಿ ಆದಿಯಾಗಿ ಎಲ್ಲರ ಶ್ರಮದ ಗೆಲುವು ಇದಾಗಿದೆ. ಇದನ್ನು ಅಂತರ ಎಂದು ನಾವು ಅಂದುಕೊಂಡಿಲ್ಲ. ಎರಡು ಪಕ್ಷಗಳು ಸೇರಿ ಹೆಚ್ಚಿನ ಗೆಲುವು ಬೇಕಿತ್ತು. ಶೇ.75 ರಷ್ಟು ಓಟ್ ಆಗಿದ್ರೆ ಇನ್ನೂ ಅಂತರದ ಗೆಲುವು ಸಿಗುತಿತ್ತು ಎಂದು ಹೇಳಿದರು.

    ಈ ಗೆಲುವು ನನ್ನದಲ್ಲ. ನಮ್ಮ ಪಕ್ಷದ್ದು, ಮೈತ್ರಿ ಸರ್ಕಾರದ್ದು, 22 ವರ್ಷದಿಂದ ಅಧಿಕಾರ ಇರಲಿಲ್ಲ. ದೇವರ ಆಶಿರ್ವಾದ ಇರಲಿಲ್ಲ. ನಾಯಕರು ಅಧಿಕಾರ ಇಲ್ಲ ಎಂದು ಟಿಕೆಟ್ ಕೊಡಿಸಿದರು. ಜನರ ಒಲವಿಗೆ ಚ್ಯುತಿ ಆಗದಂತೆ ಕೆಲಸ ಮಾಡುತ್ತೇನೆ. ಈ ಚುನಾವಣೆಗೆ ಮಾತ್ರ ಟಿಕೆಟ್ ಎಂದಿದ್ದಾರೆ. ಮುಂದಿನ ಚುನಾವಣೆಗೆ ಟಿಕೆಟ್ ನೀಡುವ ವಿಚಾರ ವರಿಷ್ಠರಿಗೆ ಬಿಟ್ಟಿದ್ದು, ಸಂಸದರಾಗಿ ಇಡೀ ರಾಜ್ಯ, ದೇಶ ಮಾಡದೇ ಇರುವಂತಹ ಕೆಲಸವನ್ನು ನಮ್ಮ ದೇವೇಗೌಡರು ಮಾಡಿಕೊಂಡು ಬಂದಿದ್ದಾರೆ. ಅವರು ಮುಂದೆ ಹೋದರೆ ಅವರೊಂದಿಗೆ ಬ್ಯಾಗ್ ಹಿಡಿದುಕೊಂಡು ಅವರೊಂದಿಗೆ ಹಿಂದೆ ಹೋಗುತ್ತೇನೆ. ಅವರು ಏನೆಲ್ಲಾ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದಾರೋ ಅವೆಲ್ಲಾ ನಮ್ಮ ಕಾರ್ಯಕ್ರಮ ಎಂದು ತಿಳಿಸಿದರು.

    ಮಂಡ್ಯ ಜಿಲ್ಲೆಯ ಅಭಿವೃದ್ಧಿ ವಿಚಾರ ಕುರಿತು ಮಾತನಾಡಿದ ಅವರು ಮಂಡ್ಯ ಜನರ ಜ್ವಲಂತ ಸಮಸ್ಯೆ ಬಗೆಹರಿಸಲು ಗಮನ ಹರಿಸುತ್ತೇನೆ. ನಮ್ಮ ಜಿಲ್ಲಾ ಮಂತ್ರಿಗಳೊಂದಿಗೆ ಸೇರಿ ಶಾಸಕರೊಂದಿಗೆ ಸೇರಿ ಜನರ ಬಗ್ಗೆ ಹೆಚ್ಚು ಗಮನ ಹರಿಸುತ್ತೇನೆ. ದೀಪಾವಳಿ ಹಬ್ಬದಂದು ನೀಡಿದ ಸಿಹಿಯನ್ನು ಅವರ ಸೇವೆಗೆ ಮೀಸಲಿಡುತ್ತೇನೆ. ಪಕ್ಷದ ಮತ್ತು ಮೈತ್ರಿ ಪಕ್ಷದ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರ್ನಾಟಕದಲ್ಲೇ ಲೋಕಸಭಾ ಉಪಚುನಾವಣೆ ಯಾಕೆ: ಕಾರಣ ತಿಳಿಸಿದ ಚುನಾವಣಾ ಆಯೋಗ

    ಕರ್ನಾಟಕದಲ್ಲೇ ಲೋಕಸಭಾ ಉಪಚುನಾವಣೆ ಯಾಕೆ: ಕಾರಣ ತಿಳಿಸಿದ ಚುನಾವಣಾ ಆಯೋಗ

    ಬೆಂಗಳೂರು: ಒಂದು ವರ್ಷಕ್ಕೂ ಹೆಚ್ಚು ಅವಧಿಯವರೆಗೆ ಕ್ಷೇತ್ರಗಳು ಖಾಲಿ ಇದ್ದರೆ ಉಪಚುನಾವಣೆ ಅನಿವಾರ್ಯ. ಹೀಗಾಗಿ ಬಳ್ಳಾರಿ, ಮಂಡ್ಯ, ಶಿವಮೊಗ್ಗಕ್ಕೆ ಲೋಕಸಭೆ ಉಪಚುನಾವಣೆ ನಡೆಯುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.

    ಲೋಕಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಈಗ ಉಪಚುನಾವಣೆ ಅಗತ್ಯವಿತ್ತೆ ಎನ್ನುವ ಚರ್ಚೆ ಭಾರೀ ಸದ್ಧು ಮಾಡಿತ್ತು. ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣೆಗೆ ಆಯೋಗವು ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳು ಈ ವರ್ಷದ ಮೇ ತಿಂಗಳಿಂದ ಖಾಲಿ ಉಳಿದಿವೆ. ಈಗ ಅಸ್ತಿತ್ವದಲ್ಲಿರುವ 16ನೇ ಲೋಕಸಭೆಯ ಅವಧಿ 2019ರ ಜೂನ್ 3ಕ್ಕೆ ಅಂತವಾಗಲಿದೆ. ಹೀಗಾಗಿ ಉಪಚುನಾವಣೆ ಅನಿವಾರ್ಯವಾಗಿದೆ ಎಂದು ಹೇಳಿದೆ.

    ಆಂಧ್ರಪ್ರದೇಶದಲ್ಲಿ ಖಾಲಿ ಇರುವ ಲೋಕಸಭಾ ಕ್ಷೇತ್ರಗಳಿಗೆ ಏಕೆ ಚುನಾವಣೆ ನಡೆಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಚುನಾವಣೆ ಆಯೋಗವು, ಸೆಕ್ಷನ್ 154ಎ ಪ್ರಕಾರ ಒಂದು ವರ್ಷಕ್ಕಿಂತ ಕಡಿಮೆ ಅಂತರ ಇರುವ ಕೇತ್ರಗಳಲ್ಲಿ ಉಪಚುನಾವಣೆ ಅಗತ್ಯವಿಲ್ಲ. ಆಂಧ್ರ ಪ್ರದೇಶದಲ್ಲಿ ಖಾಲಿ ಇರುವ ಕ್ಷೇತ್ರಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಅಂತರವಿದೆ. ಆಂಧ್ರದಲ್ಲಿ ಜೂನ್ 20ರ ನಂತರ ಕ್ಷೇತ್ರ ತೆರವಾಗಿದ್ದರೆ ಕರ್ನಾಟಕದ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಕ್ರಮವಾಗಿ ಮೇ 18 ಮತ್ತು 21 ರಿಂದ ತೆರವಾಗಿದೆ. ಹೀಗಾಗಿ ಆಂಧ್ರದಲ್ಲಿ ಚುನಾವಣೆ ಅನಿವಾರ್ಯವಲ್ಲ ಎಂದು ತಿಳಿಸಿದೆ.

    ಎರಡು ಸಂದರ್ಭದಲ್ಲಿ ಉಪಚುನಾವಣೆ ಆಗಲ್ಲ:
    ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಪ್ರಕಾರ ಎರಡು ಸಂದರ್ಭದಲ್ಲಿ ಉಪ ಚುನಾವಣೆ ನಡೆಯುವುದಿಲ್ಲ. ಮೊದಲನೆಯದಾಗಿ, ತೆರವಾದ ನಿರ್ದಿಷ್ಟ ಲೋಕಸಭೆ ಕ್ಷೇತ್ರದ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಉಪ ಚುನಾವಣೆ ನಡೆಸಲು ಅವಕಾಶ ಇಲ್ಲ. ಎರಡನೆಯದಾಗಿ, ಚುನಾವಣೆ ಆಯೋಗ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಉಳಿಕೆ ಅವಧಿಯಲ್ಲಿ ಉಪ ಚುನಾವಣೆ ನಡೆಸುವುದು ಕಷ್ಟ ಎಂದು ಹೇಳಿದರೆ ಚುನಾವಣೆ ನಡೆಯುವುದಿಲ್ಲ. ಈಗ ಅಸ್ತಿತ್ವದಲ್ಲಿರುವ 16ನೇ ಲೋಕಸಭೆಯ ಅವಧಿ 2019ರ ಜೂನ್ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3 ರಂದು ನಡೆದರೆ ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ. ಅಂದರೆ ಈ ಫಲಿತಾಂಶ ಬಂದ ಬಳಿಕ ಗೆದ್ದವರಿಗೆ ಸಿಗುವುದು ಕೇವಲ 4 ತಿಂಗಳು ಮಾತ್ರ. ಯಾಕೆಂದರೆ ಏಪ್ರಿಲ್ ನಿಂದಲೇ ಚುನಾವಣಾ ಪ್ರಕ್ರಿಯೆ ಜಾರಿಯಾಗುತ್ತದೆ. ಸದಸ್ಯರು ರಾಜೀನಾಮೆ ನೀಡಿದ 6 ತಿಂಗಳ ಒಳಗಡೆ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. ಆದರೆ 3-4 ತಿಂಗಳ ಅವಧಿಗಾಗಿ ಹಣವನ್ನು ಖರ್ಚು ಮಾಡಿ ಈ ಚುನಾವಣೆ ನಡೆಸಬೇಕೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.

    ಈ ವಿಚಾರಕ್ಕೆ ಹಿರಿಯ ವಕೀಲ ಬಿವಿ. ಆಚಾರ್ಯ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಚುನಾವಣೆ ಮಾಡಬಾರದು ಎಂದು ನಿಯಮವಿಲ್ಲ. ಸದ್ಯ ಉಪ ಚುನಾವಣೆ ಘೋಷಣೆ ಮಾಡಿರುವುದರಲ್ಲಿ ಚುನಾವಣಾ ಆಯೋಗದ ತಪ್ಪಿಲ್ಲ. ಆದರೆ ಯಾವುದೇ ಕಾರಣದಿಂದ ತೆರವಾದ ಸ್ಥಾನಗಳಿಗೆ 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು ಕಾನೂನಿದೆ. ಅದ್ದರಿಂದ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ತನ್ನ ಕೆಲಸ ಮಾಡಿದೆ. 151 ಎ ಸೆಕ್ಷನ್ ವಿಧಾನಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ, ರಾಜ್ಯಸಭೆಗಳಿಗೂ ಅನ್ವಯಿಸುತ್ತದೆ ಎಂದರು. ರಾಜಕೀಯ ಪಕ್ಷಗಳು ಮನಸ್ಸು ಮಾಡಿ ಚುನಾವಣೆ ಬೇಡ ಎಂದು ಹೇಳಿದರೆ ಆಯೋಗ ತನ್ನ ನಿರ್ಧಾರವನ್ನು ಪರಿಶೀಲಸಬಹುದು ಎಂದು ತಿಳಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ

    ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ

    ಮಂಡ್ಯ: ಕುಟುಂಬ ರಾಜಕಾರಣದ ವಿರುದ್ಧ ರಾಜ್ಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ಹಾಗೂ ನಟ ನಿಖಿಲ್ ಕುಮಾರಸ್ವಾಮಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಇಂಗಿತವನ್ನು ಹೊರ ಹಾಕಿದ್ದಾರೆ.

    ಮಂಡ್ಯ ನಗರದ ಗುತ್ತಲು ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸಾಂತ್ವಾನ ಹೇಳಲು ನಿಖಿಲ್ ಕುಮಾರಸ್ವಾಮಿ ಹೊರಟಿದ್ದರು. ಮಾರ್ಗಮಧ್ಯದಲ್ಲಿ ಮಾತನಾಡಿದ ಅವರು, ರಾಮನಗರ ಅಥವಾ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ತಿಳಿಸಿದರು. ಇದನ್ನು ಓದಿ: ಕುಮಾರಸ್ವಾಮಿ ಮಕ್ಕಳು, ಮೊಮ್ಮಕ್ಕಳು ಮಾತ್ರ ಶಾಸಕರಾಗಬೇಕೇ- ಸಾಹಿತಿ ವೀರಭದ್ರಪ್ಪ ಪ್ರಶ್ನೆ

    ಗುತ್ತಲು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ರಫಿ, ರಾಹುಲ್, ಶಶಾಂಕ್ ಹಾಗೂ ಗಿರಿಜಮ್ಮ ಕುಟುಂಬಕ್ಕೆ ನಿಖಿಲ್ ಕುಮಾರಸ್ವಾಮಿ ಸಾಂತ್ವಾನ ಹೇಳಿದರು. ಎರಡು ವರ್ಷದಲ್ಲಿ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ನಮಗೆ ಆಸ್ತಿ ಬೇಡ, ಏನೂ ಬೇಡ ಮಗ ಬೇಕು ಎಂದು ಮೃತ ಶಶಾಂಕ್ ಕುಟುಂಬಸ್ಥರು ಅಳಲು ತೋಡಿಕೊಂಡು, ನಿಖಿಲ್ ಕಾಲಿಗೆ ಬೀಳಲು ಮುಂದಾದರು. ಆಗ ಅವರನ್ನು ತಡೆದ ನಿಖಿಲ್, ಸಾಂತ್ವಾನ ಹೇಳಿದರು. ಇದನ್ನು ಓದಿ: ಮಂಡ್ಯದಲ್ಲಿ ಲಾರಿ ಹರಿದು ಐವರು ಪಾದಚಾರಿಗಳ ದಾರುಣ ಸಾವು

    ಶಶಾಂಕ್ ಮತ್ತು ರಾಹುಲ್ ಮನೆಯ ಓರ್ವ ಸದಸ್ಯರಿಗೆ ಎಲ್ಲಿಯಾದರೂ ಉದ್ಯೋಗ ಕೊಡಿಸುವ ಭರವಸೆ ನೀಡಿದರು. ಜೊತೆಗೆ ಕುಟುಂಬ ನಿರ್ವಹಣೆಗೆ ಅಂತ ಒಂದಿಷ್ಟು ಆರ್ಥಿಕ ನೆರವು ನೀಡಿದ್ದಾರೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದವರ ಭೇಟಿಗೆ ಮುಂದಾದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಮೋದಿ ವಿರುದ್ಧ ರಾಗಾ ರಣಕಹಳೆ

    ಮೋದಿ ವಿರುದ್ಧ ರಾಗಾ ರಣಕಹಳೆ

    -ಕಾಂಗ್ರೆಸ್ ಹಿರಿಯರ ನಾಯಕರ ಸಭೆ ಹಿಂದಿನ ರಹಸ್ಯವೇನು?

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಯುದ್ಧ ಸಾರಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆಗೆ ಭರ್ಜರಿ ತಾಲೀಮು ಮಾಡುತ್ತಿದ್ದಾರೆ. ಇತ್ತಿಚೇಗೆ ಕಾಂಗ್ರೆಸ್ ಮುಖಂಡರೊಂದಿಗೆ ಸಭೆ ನಡೆಸಿದ್ದ ರಾಹುಲ್ ಈಗ ಮತ್ತೊಮ್ಮೆ ಹಿರಿಯ ನಾಯಕರ ಸಭೆ ಕರೆದಿದ್ದಾರೆ.

    ಲೋಕಸಭೆ ಚುನಾವಣೆಗೆ ಎಳೆಂಟು ತಿಂಗಳು ಬಾಕಿ ಇರುವಾಗಲೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಣ ಕಹಳೆ ಮೊಳಗಿಸಿದ್ದಾರೆ. ರಫೇಲ್ ಯುದ್ದ ವಿಮಾನ ಖರೀದಿಯಲ್ಲಿ ಭಾರೀ ಹಗರಣ ನಡೆದಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ದೇಶದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ. ಆಡಳಿತ ಪಕ್ಷದ ಮೇಲೆ ಮುಗಿಬಿದ್ದಿರುವ ಕಾಂಗ್ರೆಸ್ ನ ಯುವರಾಜ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

    ವಾರದ ಹಿಂದಷ್ಟೇ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ನಡೆಸಿದ್ದ ರಾಹುಲ್ ಗಾಂಧಿ ಈಗ ಮತ್ತೆ ಕಾಂಗ್ರೆಸ್ ಹಿರಿಯ ನಾಯಕರ ಸಭೆ ಕರೆದಿದ್ದಾರೆ. ಎಲ್ಲ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಕಮೀಟಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಹಾಗೂ ರಾಜ್ಯ ಉಸ್ತುವಾರಿಗಳ ಸಭೆ ಕರೆದಿದ್ದಾರೆ. ಬೆಳಗ್ಗೆ ನವದೆಹಲಿಯ ಎಐಸಿಸಿ ಕಚೇರಿಯಲ್ಲಿ ಸಭೆ ಏರ್ಪಾಡು ಮಾಡಲಾಗಿದ್ದು ರಾಹುಲ್ ಗಾಂಧಿ ಅಧ್ಯಕ್ಷತೆ ವಹಿಸಲಿದ್ದು, ರಾಜ್ಯದಿಂದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ ವೇಣುಗೋಪಾಲ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ.

    ರಾಜ್ಯ ರಾಜಕಾರಣಕ್ಕೆ ಬೀಳುತ್ತಾ ಬ್ರೇಕ್?
    ಈಗಾಗಲೇ ಕರ್ನಾಟಕದಲ್ಲಿ ಮೈತ್ರಿ ಮಂತ್ರ ಪಠಿಸಿರುವ ರಾಹುಲ್ ಗಾಂಧಿ ರಾಷ್ಟ್ರೀಯ ಮಟ್ಟದಲ್ಲೂ ಮಹಾಮೈತ್ರಿ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಗೆ ಬೆಂಬಲವೂ ನೀಡಿದ್ದು, ಇನ್ನುಳಿದ ಸಾಧ್ಯಸಾಧ್ಯತೆ ಕುರಿತು ಹಿರಿಯ ನಾಯಕರೊಂದಿಗೆ ರಾಹುಲ್ ಚರ್ಚಿಸಲಿದ್ದಾರೆ. ಕಾಂಗ್ರೆಸ್ ಬಲಿಷ್ಠ ಹಾಗೂ ದುರ್ಬಲ ಹೊಂದಿರುವ ರಾಜ್ಯಗಳ ಕುರಿತು ಚರ್ಚೆ ನಡೆಸಿ ಅಲ್ಲಿರುವ ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿ ಕುರಿತು ಚರ್ಚೆ ನಡೆಯಲಿದೆ. ಮೈತ್ರಿ ಜೊತೆಗೆ ಸೀಟು ಹೊಂದಾಣಿಕೆ ಹಾಗೂ ಮೋದಿ ಸರ್ಕಾರದ ರಾಜ್ಯ ಮಟ್ಟದಲ್ಲಿ ಕಾರ್ಯತಂತ್ರ ರೂಪಿಸುವ ಬಗ್ಗೆ ರಾಹುಲ್ ಗಾಂಧಿ ದೀರ್ಘ ಸಮಾಲೋಚನೆ ನಡೆಸಲಿದ್ದಾರೆ.

    ಆಪರೇಷನ್ ಕಮಲದ ಭೀತಿಯಲ್ಲಿ ಹೈರಾಣಗಿರುವ ರಾಜ್ಯ ಕಾಂಗ್ರೆಸ್ ನಾಯಕರು ಇಂದು ಮತ್ತೊಮ್ಮೆ ಹೈಕಮಾಂಡ್ ಮನೆ ಕದ ತಟ್ಟುವ ಸಾಧ್ಯತೆ ಇದೆ. ನಿಗಮ ಮಂಡಳಿ ನೇಮಕ ಸಂಪುಟ ವಿಸ್ತರಣೆ ಹೈಕಮಾಂಡ್ ತಡೆ ನೀಡಿದ ಬೆನ್ನೆಲ್ಲೆ ದೊಡ್ಡ ಮಟ್ಟದ ಅಸಮಾಧಾನ ಹೊರ ಬಂದಿದೆ. ಹೈಕಮಾಂಡ್ ಬಿಸಿ ಮುಟ್ಟಿಸಲೇಂದು ಮೊನ್ನೆ ಚೆನೈ ನತ್ತ ಮುಖ ಮಾಡಿದ ಕೆಲ ಶಾಸಕರು ಮುಂದಿನ ಪರಿಣಾಮದ ಬಗ್ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರಂತೆ.

    ಶಾಸಕ ಎಂಟಿಬಿ ನಾಗರಾಜ್ ಸೇರಿ ಹಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಈ ಪರಿಸ್ಥಿತಿ ಯನ್ನು ಗಂಭೀರವಾಗಿ ಪರಿಗಣಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಜೊತೆಗೆ ಚರ್ಚೆ ಮಾಡುವ ಸಾಧ್ಯತೆ ಇದೆ. ಅಕ್ಟೋಬರ್ 10 ಕ್ಕೆ ಸಂಪುಟ ವಿಸ್ತರಣೆಗೆ ಕಾದರೆ ಮೈತ್ರಿ ಸರ್ಕಾರಕ್ಕಿರುವ ಆಪತ್ತಿನ ಬಗ್ಗೆ ರಾಹುಲ್ ಗಾಂಧಿ ಗಮನಕ್ಕೆ ತರಲಿದ್ದಾರೆ. ಇದರ ಜೊತೆಗೆ ರಾಜ್ಯದ ಹಲವು ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿ ಶೀಘ್ರ ಸಂಪುಟ ವಿಸ್ತರಣೆ ಒಪ್ಪಿಗೆ ಪಡೆದುಕೊಳ್ಳುವ ಸಾಧ್ಯತೆ ಕೂಡಾ ಇದೆ.

    ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಾದರಿ ಸರ್ಕಾರ ಎನ್ನಿಸಿಕೊಂಡಿರುವ ರಾಜ್ಯ ಮೈತ್ರಿ ಸರ್ಕಾರದ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವ ರಾಹುಲ್ ಗಾಂಧಿ ಸರ್ಕಾರ ಉಳಿಸಿಕೊಳ್ಳಲು ಮುಂದೇನು ಪ್ಲಾನ್ ಮಾಡುತ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ನಾವು ಕೇಳಿದಷ್ಟು ಸೀಟ್ ನೀಡಿದ್ರೆ ಮಾತ್ರ ಮೈತ್ರಿ- ಮಾಯಾವತಿ

    ನಾವು ಕೇಳಿದಷ್ಟು ಸೀಟ್ ನೀಡಿದ್ರೆ ಮಾತ್ರ ಮೈತ್ರಿ- ಮಾಯಾವತಿ

    ನವದೆಹಲಿ: ನಾವು ಕೇಳಿದಷ್ಟು ಕ್ಷೇತ್ರಗಳನ್ನು ಬಿಟ್ಟುಕೊಟ್ಟರೆ ಮಾತ್ರ ಎಲ್ಲ ಚುನಾವಣೆಯಲ್ಲಿಯೂ ಮೈತ್ರಿಗೆ ಸಿದ್ಧ. ಇಲ್ಲದಿದ್ದರೆ ಏಕಾಂಗಿಯಾಗಿ ಸ್ಪರ್ಧಿಸುತ್ತೇವೆ ಎಂದು ಷರತ್ತು ವಿಧಿಸುವ ಮೂಲಕ ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಕಠಿಣ ಸಂದೇಶ ಕಳುಹಿಸಿದ್ದಾರೆ.

    ಭಾನುವಾರ ಲಕ್ನೋದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ಬೇಡಿಕೆ ಸ್ಪಂದಿಸುವ ಯಾವುದೇ ಪಕ್ಷವಾದರೂ ಸರಿ ಮೈತ್ರಿ ಸಿದ್ಧ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಜಂಟಿಯಾಗಿ ಕಣಕ್ಕೆ ಇಳಿಯುತ್ತೇವೆ. ಇಲ್ಲದಿದ್ದರೆ ಏಕಾಂಗಿಯಾಗಿಯೇ ಮುಂಬರುವ ಚುನಾವಣೆ ಎದುರಿಸುತ್ತೇವೆ ಎಂದಿದ್ದಾರೆ.

    ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ತಮ್ಮ ವಿಫಲತೆಗಳನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ. ಮುಂಬರುವ ಲೋಕಸಭೆ ಚುನಾವಣೆಗೆ ಅಟಲ್ ಬಿಹಾರಿ ವಾಜಪೇಯಿ ನಿಧನವನ್ನೇ ಅಸ್ತ್ರವಾಗಿ ಬಳಸುತ್ತಿವೆ ಎಂದು ದೂರಿದರು.

    ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಸ್ಥಾನಗಳಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 71 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಹೀಗಾಗಿ 2019ರಲ್ಲಿ ಮೋದಿ ಸರ್ಕಾರವನ್ನು ಸೋಲಿಸಲು ಉತ್ತರ ಪ್ರದೇಶದಲ್ಲಿ ಬಿಎಸ್‍ಪಿ, ಎಸ್‍ಪಿ, ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಚುನಾವಣೆ ಘೋಷಣೆಯಾಗುವ ಮುನ್ನವೇ ಮಾಯಾವತಿ ಸ್ಥಾನ ಹಂಚಿಕೆ ಸಂಬಂಧ ಮಾತನಾಡಿದ್ದು ಕಾಂಗ್ರೆಸ್ ಮತ್ತು ಎಸ್‍ಪಿ ಈ ಷರತ್ತನ್ನು ಹೇಗೆ ಸ್ವೀಕರಿಸುತ್ತದೆ ಎನ್ನುವ ಕುತೂಹಲ ಹೆಚ್ಚಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಂತೆ ಹುಚ್ಚ ವೆಂಕಟ್

    ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸ್ತಾರಂತೆ ಹುಚ್ಚ ವೆಂಕಟ್

    ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ನನ್ನ ತವರೂರು ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಮಂಡ್ಯದ ಜನರು ನನ್ನ ಕೈ ಹಿಡಿಯುತ್ತಾರೆ. ಒಂದು ವೇಳೆ ಕೈ ಬಿಟ್ಟರೂ ಅದಕ್ಕೆ ಬಲವಾದ ಕಾರಣ ಇರುತ್ತದೆ ಎಂದು ನಟ ಹುಚ್ಚ ವೆಂಕಟ್ ಹೇಳಿದ್ದಾರೆ.

    ನೆಲಮಂಗಲದ ಮಾರುತಿನಗರದಲ್ಲಿ ಗಣೇಶ ಚತುರ್ಥಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿ, ಮಂಡ್ಯ ಜೆಡಿಎಸ್ ಭದ್ರಕೋಟೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನನಗೆ ಮಾತ್ರ ಮಂಡ್ಯ ಭದ್ರ ಕೋಟೆ ಎಂದ ಅವರು, ರಾಜ್ಯ ಸಮ್ಮಿಶ್ರ ಸರ್ಕಾರ ಶೀಘ್ರವೇ ಪತನವಾಗುತ್ತದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇರುವುದು ರಾಜ್ಯ ಸರ್ಕಾರಕ್ಕೆ ತೊಂದರೆ ಎಂದು ಹೇಳಿದರು.

    ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಅವರು ಮತ್ತೇ ಪ್ರಧಾನಿ ಆಗುತ್ತಾರೆ ಎಂದ ಹುಚ್ಚ ವೆಂಕಟ್, ತಕ್ಷಣವೇ ಮಾತು ಬದಲಿಸಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಅವಕಾಶ ಕೊಟ್ಟರೆ ತಪ್ಪೇನು ಇಲ್ಲ ಎಂದರು.

    ವೇದಿಕೆ ಮೇಲೆ ಡೈಲಾಗ್ ಹೇಳುತ್ತಿದ್ದಾಗ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬರಿಗೆ ಕ್ಲಾಸ್ ತೆಗೆದುಕೊಂಡ ಹುಚ್ಚ ವೆಂಕಟ್, ನಾನು ನಿನಗಿಂತ ಜಾಸ್ತಿನೇ ಕುಡಿಯುತ್ತೇನೆ ಕಣೋ. ಕುಡಿದಿರುವೆ ಅಂತಾ ಜಾಸ್ತಿ ಮಾತನಾಡಬಾರದು, ಸುಮ್ಮನೆ ನಿಂತಕೋ ಎಂದು ಖಡಕ್ ವಾರ್ನಿಂಗ್ ಕೊಟ್ಟರು.

    ಬಳಿಕ ಕಾರ್ಯಕ್ರಮ ಆಯೋಜಕರು ಹುಚ್ಚ ವೆಂಕಟ್‍ಗೆ ಸನ್ಮಾನ ಮಾಡಿ, ಪ್ರಶಸ್ತಿ ನೀಡಿದ್ದಾರೆ. ಅಲ್ಲಿಂದ ಹೊರ ಬಂದ ಹುಚ್ಚವೆಂಕಟ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಯುವಕರ ದಂಡೇ ಮುಗಿಬಿದ್ದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಪ್ಪಳ ಎಂಪಿ ಟಿಕೆಟ್‍ಗೆ ರಾಹುಲ್ ಜೊತೆ ರಾಯರೆಡ್ಡಿ ಕೈಲಾಸ ಯಾತ್ರೆ ಮಾಡಿದ್ರಾ?

    ಕೊಪ್ಪಳ ಎಂಪಿ ಟಿಕೆಟ್‍ಗೆ ರಾಹುಲ್ ಜೊತೆ ರಾಯರೆಡ್ಡಿ ಕೈಲಾಸ ಯಾತ್ರೆ ಮಾಡಿದ್ರಾ?

    ಕೊಪ್ಪಳ: ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಪ್ರಯಾಣ ಮಾಡಿರುವುದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

    ಬಸವರಾಜ ರಾಯರೆಡ್ಡಿ ಅವರು ರಾಹುಲ್ ಗಾಂಧಿ ಜೊತೆಗೆ ಕೈಲಾಸನಾಥ ಪರ್ವತ ಪ್ರವಾಸ ಕೈಗೊಂಡ ಫೋಟೋ ವೈರಲ್ ಆಗಿವೆ. ಇದರಿಂದಾಗಿ ರಾಯರೆಡ್ಡಿ ಅವರು ಲೋಕಸಭೆ ಟಿಕೇಟ್ ಗಿಟ್ಟಿಸಿಕೊಳ್ಳುವ ಉದ್ದೇಶದಿಂದಲೇ ರಾಹುಲ್ ಗಾಂಧಿ ಜೊತೆ ಪ್ರವಾಸ ಮಾಡಿರಬಹುದು ಎನ್ನುವ ಮಾತನ್ನು ಜಿಲ್ಲೆಯ ಕಾಂಗ್ರೆಸ್ ನಾಯಕರು ಆಡಿಕೊಳ್ಳುತ್ತಿದ್ದಾರೆ.

    2018ರ ವಿಧಾನಸಭೆ ಚುನಾವಣೆ ಸೋಲಿನ ಕಹಿ ಅನುಭವ ಮರೆಯಲು ಕೈಲಸನಾಥ ದರ್ಶನ ಮಾಡುತ್ತಿರುವೆ ಎಂದು ರಾಯರೆಡ್ಡಿ ಹೇಳಿದ್ದರು. ಇತ್ತ ರಾಹುಲ್ ಗಾಂಧಿ ಭೇಟಿ ಆಕಸ್ಮಿಕ ಅಂತಾ ರಾಯರೆಡ್ಡಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಇಬ್ಬರು ಮಹಿಳಾಮಣಿಯರ ಕಾರಣಕ್ಕೆ ಚರ್ಚೆಯಾಗುತ್ತಿದೆ ಮಂಡ್ಯ ಲೋಕಸಭೆ ಉಪಚುನಾವಣೆ!

    ಇಬ್ಬರು ಮಹಿಳಾಮಣಿಯರ ಕಾರಣಕ್ಕೆ ಚರ್ಚೆಯಾಗುತ್ತಿದೆ ಮಂಡ್ಯ ಲೋಕಸಭೆ ಉಪಚುನಾವಣೆ!

    ಮಂಡ್ಯ: ಜಿಲ್ಲೆಯ ಲೋಕಸಭೆ ಉಪಚುನಾವಣೆ ದಿನಾಂಕ ಸದ್ಯದಲ್ಲೇ ಪ್ರಕಟವಾಗುವ ಸಾಧ್ಯತೆಯಿದ್ದು, ಮಂಡ್ಯ ರಾಜಕಾರಣ ಇಬ್ಬರು ಮಹಿಳೆಯರ ಕಾರಣಕ್ಕೆ ಕುತೂಹಲ ಮೂಡಿಸುತ್ತಿದೆ.

    ಒಬ್ಬರು ಮಾಜಿ ಸಂಸದೆ ರಮ್ಯಾ, ಮತ್ತೊಬ್ಬರು ರಾಜಕೀಯದಲ್ಲಿ ಸಕ್ರಿಯರಾಗಲು ತಮ್ಮ ಐಆರ್ ಎಸ್ ಹುದ್ದೆಗೆ ರಾಜೀನಾಮೆ ನೀಡಿ ಬಂದಿರುವ ಲಕ್ಷ್ಮಿ ಅಶ್ವಿನ್ ಗೌಡ. ಇಬ್ಬರು ಮಹಿಳಾಮಣಿಯರಿಗೆ ಮಂಡ್ಯ ಲೋಕಸಭಾ ಉಪಚುನಾವಣೆ ವರವಾಗುತ್ತಾ? ಇಲ್ಲವೇ ಶಾಪವಾಗುತ್ತಾ? ಈ ಬಗ್ಗೆ ಜಿಲ್ಲೆಯ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

    ಸಚಿವ ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿರುವ ಮಂಡ್ಯ ಸಂಸದ ಸ್ಥಾನಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಉಪಚುನಾವಣೆ ನಡೆಯುವ ಸಾಧ್ಯತೆಯಿದೆ. ಈ ಉಪಚುನಾವಣೆ ಕಾಂಗ್ರೆಸ್ ಮುಖಂಡೆ, ಮಾಜಿ ಸಂಸದೆ ರಮ್ಯಾ ಹಾಗೂ ಇತ್ತೀಚೆಗಷ್ಟೇ ಜೆಡಿಎಸ್ ಪಕ್ಷಕ್ಕೆ ಸೇರಿರುವ ಲಕ್ಷ್ಮಿ ಅಶ್ವಿನ್ ಗೌಡ ಅವರ ರಾಜಕೀಯ ಅಳಿವು ಉಳಿವಿನ ಪ್ರಶ್ನೆಯಾಗಿದೆ.

    ರಮ್ಯಾ ಈ ಬಾರಿಯೂ ಮಂಡ್ಯದಿಂದಲೇ ಸ್ಪರ್ಧಿಸುವ ಆಸೆಯಿಟ್ಟುಕೊಂಡಿದ್ದಾರೆ. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ಮೈತ್ರಿ ಮಾಡಿಕೊಂಡು ಒಟ್ಟಾಗಿ ಚುನಾವಣೆ ಎದುರಿಸಲಿವೆ ಎಂಬ ಮಾತು ಕೇಳಿ ಬರುತ್ತಿದೆ. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ತನಗೆ ಬಿಟ್ಟು ಕೊಡಿ ಅಂತಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹಾಗೇನಾದರು ಆದರೆ ಮಂಡ್ಯದಿಂದಲೇ ಸ್ಪರ್ಧಿಸಬೇಕು ಎಂದು ಆಶಾಭಾವನೆಯಿಂದ ಕಾಯುತ್ತಿರುವ ರಮ್ಯಾಗೆ ರಾಜಕೀಯವಾಗಿ ಹಿನ್ನಡೆಯಾಗೋದಂತೂ ಗ್ಯಾರಂಟಿ. ಹೀಗಾಗಿ ರಮ್ಯಾ ತಾಯಿ ರಂಜಿತಾ ಸೇರಿದಂತೆ ರಮ್ಯಾ ಅವರ ಬೆಂಬಲಿಗರು ಮಂಡ್ಯದಲ್ಲಿ ಮೈತ್ರಿಯೇ ಬೇಡ ಅಂತಿದ್ದಾರೆ.

    ಮತ್ತೊಂದು ಕಡೆ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುವ ಆಶಾಭಾವನೆಯಿಂದ ಜಿಲ್ಲೆಯಾದ್ಯಂತ ಓಡಾಡುತ್ತಿದ್ದಾರೆ. ಮಂಡ್ಯದಲ್ಲಿ ರಮ್ಯಾಗೆ ಟಾಂಗ್ ಕೊಡಲು ಜೆಡಿಎಸ್ ವರಿಷ್ಠರೇ ಲಕ್ಷ್ಮಿ ಅಶ್ವಿನ್ ಗೌಡ ಅವರನ್ನು ರಾಜಕೀಯಕ್ಕೆ ಕರೆತಂದ್ರು ಎಂಬ ಮಾತು ಕೂಡ ಕೇಳಿ ಬಂದಿತ್ತು. ಆದರೆ ಇದೀಗ ಲಕ್ಷ್ಮಿ ಅಶ್ವಿನ್‍ಗೌಡ ಅವರಿಗೆ ಸ್ವಪಕ್ಷದಲ್ಲೇ ವಿರೋಧಿಗಳು ಹುಟ್ಟಿಕೊಂಡಿದ್ದಾರೆ.

    ಲಕ್ಷ್ಮಿ ಅಶ್ವಿನ್‍ಗೌಡ ಅವರಿಗೆ ಟಿಕೆಟ್ ತಪ್ಪಿಸುವ ಸಲುವಾಗೇ ಮಾಜಿ ಪ್ರಧಾನಿ ದೇವೇಗೌಡರು, ಪ್ರಜ್ವಲ್ ರೇವಣ್ಣ ಅವರನ್ನು ಮಂಡ್ಯಕ್ಕೆ ಕರೆತರುವ ಪ್ರಯತ್ನ ಸದ್ದಿಲ್ಲದೆ ಸಾಗುತ್ತಿದೆ. ಮತ್ತೊಂದು ಕಡೆ ಸೋಲಿನ ಮೇಲೆ ಸೋಲು ಕಂಡು ನಿರಾಶರಾಗಿರುವ ಮಾಜಿ ಶಾಸಕ ಶಿವರಾಮೇಗೌಡ ಕೂಡ, ಜೆಡಿಎಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇಷ್ಟೆಲ್ಲ ಸವಾಲುಗಳ ನಡುವೆಯೂ ಲಕ್ಷ್ಮಿ ಅಶ್ವಿನ್‍ ಗೌಡ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಹರಸಾಹಸ ಪಡುತ್ತಿದ್ದಾರೆ.

    ಈ ಬಾರಿ ಮಂಡ್ಯ ಲೋಕಸಭೆ ಉಪಚುನಾವಣೆ ಇಬ್ಬರು ಮಹಿಳಾ ಮಣಿಯರಾದ ಮಾಜಿ ಸಂಸದೆ ರಮ್ಯಾ ಮತ್ತು ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಆದರೆ ಇವರಿಬ್ಬರಿಗೂ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈತಪ್ಪುತ್ತಾ? ಅಥವಾ ಇಬ್ಬರು ಪ್ರತಿಸ್ಪರ್ಧಿಗಳಾಗಿ ಕಣಕ್ಕಿಳಿತಾರ? ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಂಪಿ ಚುನಾವಣೆಯಲ್ಲಿ ಮತ್ತೇ ಸಮಸ್ಯೆ ಕಾಣಿಸಿಕೊಳ್ಳುತ್ತೆ: ಹೈಕಮಾಂಡ್‍ಗೆ ಸತೀಶ್ ಎಚ್ಚರಿಕೆ

    ಎಂಪಿ ಚುನಾವಣೆಯಲ್ಲಿ ಮತ್ತೇ ಸಮಸ್ಯೆ ಕಾಣಿಸಿಕೊಳ್ಳುತ್ತೆ: ಹೈಕಮಾಂಡ್‍ಗೆ ಸತೀಶ್ ಎಚ್ಚರಿಕೆ

    ಬೆಳಗಾವಿ: ಪಿಎಲ್‍ಡಿ ಬ್ಯಾಂಕ್ ಚುನಾವಣೆಯನ್ನು 6 ಕೋಟಿ ಜನ ನೋಡುವಂತಾಯಿತು. ಇದೊಂದು ಮುಗಿದ ಅಧ್ಯಾಯವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಮತ್ತೇ ಸಮಸ್ಯೆ ಕಾಣಿಸಿಕೊಳ್ಳಲಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ, ಹೈಕಮಾಂಡ್‍ಗೆ ಎಚ್ಚರಿಕೆ ನೀಡಿದ್ದಾರೆ.

    ಪಕ್ಷದ ಹಿತದೃಷ್ಟಿಯಿಂದ ಹಾಗೂ ಎಲ್ಲರ ಸಹಮತದಿಂದ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷರ ಆಯ್ಕೆಯಾಗಿದೆ. ಇದು ಯಾರ ಗೆಲುವು ಅಲ್ಲ, ಯಾರ ಸೋಲು ಅಲ್ಲ. ಜಿಲ್ಲೆಯ ನಾಯಕರಲ್ಲಿ ಕಾಣಿಸಿಕೊಂಡಿದ್ದ ಬೆಂಕಿಯನ್ನು ಆರಿಸಬೇಕಿತ್ತು, ಹೀಗಾಗಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಸಲಹೆ ಮೇರೆಗೆ ಸಮಸ್ಯೆ ಇತ್ಯರ್ಥ ಪಡಿಸಲಾಗಿದೆ ಎಂದು ಹೇಳಿದರು.

    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಲೋಕಸಭಾ ಚುನಾವಣೆ ವೇಳೆ ಮತ್ತೇ ಸಮಸ್ಯೆ ಬರಲಿದ್ದು, ಅದನ್ನು ಪಕ್ಷದ ವರಿಷ್ಠರೇ ಬಗೆಹರಿಸುವರು. ಆದರೆ ನಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾದರೆ ನಾವು ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೈಕಮಾಂಡ್‍ಗೆ ಖಡಕ್ ಎಚ್ಚರಿಕೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv