Tag: ಲೋಕಸಭೆ ಚುನಾವಣೆ 2019

  • ಮೈಸೂರು-ಕೊಡಗು ಲೋಕ ಅಖಾಡ: ದೋಸ್ತಿ, ಬಿಜೆಪಿ ಸಮೀಕ್ಷೆಯಲ್ಲಿ ಯಾರಿಗೆ ಮುನ್ನಡೆ?

    ಮೈಸೂರು-ಕೊಡಗು ಲೋಕ ಅಖಾಡ: ದೋಸ್ತಿ, ಬಿಜೆಪಿ ಸಮೀಕ್ಷೆಯಲ್ಲಿ ಯಾರಿಗೆ ಮುನ್ನಡೆ?

    ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದೋಸ್ತಿಗಳಿಗೆ ಆಂತರಿಕ ಕಲಹಕ್ಕೆ ಸಾಕ್ಷಿಯಾಗಿತ್ತು. ಕೊನೆ ಕ್ಷಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ತವರು ಕ್ಷೇತ್ರವನ್ನು ಕೈ ವಶ ಮಾಡಿಕೊಂಡು, ಆಪ್ತ ವಿಜಯ್ ಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಇತ್ತ ಬಿಜೆಪಿಯಿಂದ ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ. ಹಾಗಾಗಿ ಮೈಸೂರು-ಕೊಡಗು ಹಲವು ಚುನಾವಣಾ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತು.

    ಚುನಾವಣೆ ಅಂತ್ಯಗೊಂಡು ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರ ಪೆಟ್ಟಿಗೆಯಲ್ಲಿ ಭದ್ರವಾಗಿ ಸ್ಟ್ರಾಂಗ್ ರೂಮ್ ಸೇರಿಕೊಂಡಿದೆ. ಇತ್ತ ಎರಡೂ ಪಕ್ಷಗಳು ಖಾಸಗಿ ಏಜೆನ್ಸಿಗಳ ಮೂಲಕ ಚುನಾವಣೋತ್ತರ ಸಮೀಕ್ಷೆಯನ್ನು ನಡೆಸಿದ್ದು, ಸರ್ವೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ದೋಸ್ತಿ ಲೆಕ್ಕ: ಕಾಂಗ್ರೆಸ್ ಮತ್ತು ಜೆಡಿಎಸ್ ಜೊತೆಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ದಾಖಲಿಸುತ್ತಾರೆ. ವಿಜಯ್ ಶಂಕರ್ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳಲ್ಲಿ ಅಲ್ಪ ಹಿನ್ನಡೆ ಕಂಡರೂ ಗೆಲುವು ದಾಖಲಿಸುತ್ತಾರೆ. ಮಡಿಕೇರಿಯಲ್ಲಿ 6 ಸಾವಿರ, ವಿರಾಜಪೇಟೆಯಲ್ಲಿ 10 ಸಾವಿರ, ಚಾಮುಂಡೇಶ್ವರಿಯಲ್ಲಿ 9 ಸಾವಿರ, ಕೃಷ್ಣರಾಜದಲ್ಲಿ 16 ಸಾವಿರ ಮತ್ತು ಚಾಮರಾಜದಲ್ಲಿ 12 ಸಾವಿರ ಮತಗಳ ಹಿನ್ನಡೆಯನ್ನು ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಕಾಣಲಿದ್ದಾರೆ. ಉಳಿದ ಕ್ಷೇತ್ರಗಳಾದ ಪಿರಿಯಾಪಟ್ಟಣದಲ್ಲಿ 24 ಸಾವಿರ, ಹುಣಸೂರು 26 ಸಾವಿರ ಮತ್ತು ನರಸಿಂಹರಾಜದಲ್ಲಿ 46 ಸಾವಿರ ಮತಗಳ ಅಂತರ ಕಾಯ್ದುಕೊಂಡು ಒಟ್ಟಾರೆಯಾಗಿ 43 ಸಾವಿರ ಮತಗಳ ಲೀಡ್‍ನಿಂದ ವಿಜಯ್ ಶಂಕರ್ ಗೆಲ್ಲುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳುತ್ತಿದೆ.

    ಬಿಜೆಪಿ ಲೆಕ್ಕ: ಕಮಲ ನಾಯಕರ ಸಮೀಕ್ಷೆ ಪ್ರತಾಪ್ ಸಿಂಹ ಗೆಲುವು ಪಡೆಯಲಿದ್ದಾರೆ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಲಿದ್ದಾರೆ. ಪಿರಿಯಾಪಟ್ಟಣದಲ್ಲಿ 25 ಸಾವಿರ, ಹುಣಸೂರಿನಲ್ಲಿ 25 ಸಾವಿರ ಮತ್ತು ನರಸಿಂಹಹರಾಜ ಕ್ಷೇತ್ರದಲ್ಲಿ 50 ಸಾವಿರ ಮತಗಳ ಹಿನ್ನಡೆಯನ್ನು ಪ್ರತಾಪ್ ಸಿಂಹ ಹೊಂದಲಿದ್ದಾರೆ. ಉಳಿದಂತೆ ಮಡಿಕೇರಿಯಲ್ಲಿ 70 ಸಾವಿರ, ವಿರಾಜಪೇಟೆಯಲ್ಲಿ 30 ಸಾವಿರ, ಚಾಮುಂಡೇಶ್ವರಿಯಲ್ಲಿ 20 ಸಾವಿರ, ಕೃಷ್ಣರಾಜದಲ್ಲಿ 19 ಸಾವಿರ, ಚಾಮರಾಜದಲ್ಲಿ 20 ಸಾವಿರ ಮುನ್ನಡೆ ಪಡೆದು ಅಂದಾಜು 65 ಸಾವಿರ ಮತಗಳ ಅಂತರದಿಂದ ಪ್ರತಾಪ್ ಸಿಂಹ ಗೆಲುವು ಕಾಣುತ್ತಾರೆ ಎಂದು ಬಿಜೆಪಿ ಸಮೀಕ್ಷೆ ತಿಳಿಸಿದೆ

  • ಚುನಾವಣೆಗೆ ನಿಲ್ಲದಂತೆ ಸೂಚನೆ ಬಂದಿದೆ – ಮುರಳಿ ಮನೋಹರ್ ಜೋಶಿ ಪತ್ರ

    ಚುನಾವಣೆಗೆ ನಿಲ್ಲದಂತೆ ಸೂಚನೆ ಬಂದಿದೆ – ಮುರಳಿ ಮನೋಹರ್ ಜೋಶಿ ಪತ್ರ

    ನವದೆಹಲಿ: ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಈ ಬಾರಿ ನಾನು ಲೋಕಸಭೆ ಚುನಾವಣೆಗೆ ನಿಲ್ಲದಂತೆ ಬಿಜೆಪಿ ಸೂಚಿಸಿದೆ. ಆದರಿಂದ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ 85 ವರ್ಷದ ಮುರಳಿ ಮನೋಹರ್ ಜೋಶಿ ಸ್ಪಷ್ಟಪಡಿಸಿದ್ದಾರೆ.

    ಬಿಜೆಪಿ ಹೈಕಮಾಂಡ್ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಯಕರನ್ನು ರಾಷ್ಟ್ರೀಯ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಈ ಮೂಲಕ ಬಿಜೆಪಿಯ ಪ್ರಭಾವಿ ಹಿರಿಯ ನಾಯಕರಲ್ಲಿ ಒಬ್ಬರಾದ ಎಂ.ಎಂ ಜೋಶಿ ಅವರ ಲೋಕಸಭೆಯ ರಾಜಕೀಯ ಪಯಣ ಮುಕ್ತಾಯವಾಗಿದೆ.

    ಈ ಬಗ್ಗೆ ಕಾನ್ಪುರ ಜನತೆಗೆ ಪತ್ರ ಬರೆದಿರುವ ಎಂ.ಎಂ ಜೋಶಿ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ನನ್ನನ್ನು ಭೇಟಿ ಮಾಡಿ, ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರುವಂತೆ ಸೂಚಿಸಿದ್ದಾರೆ. ಕಾನ್ಪುರ ಮಾತ್ರವಲ್ಲ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬಾರದು ಎಂದು ಹೇಳಿದ್ದಾರೆ. ಆದರಿಂದ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

    ಜೋಶಿ ಅವರು ಕೇಂದ್ರ ಸಚಿವರಾಗಿ ಹಾಗೂ ಬಿಜೆಪಿ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 2014ರಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರಧಾನಿ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದರು. ಬಳಿಕ 2014ರಲ್ಲಿ ಕಾನ್ಪುರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.

    ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ ಆಡ್ವಾಣಿ ಅವರ ಜೊತೆ ಸೇರಿ ಪಕ್ಷ ಕಟ್ಟುವಲ್ಲಿ ಜೋಶಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಡ್ವಾಣಿ ಸಹ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅಡ್ವಾಣಿ ಕ್ಷೇತ್ರವಾದ ಗುಜರಾತಿನ ಗಾಂಧಿನಗರದಿಂದ ಅಮಿತ್ ಶಾ ಕಣಕ್ಕೆ ಇಳಿಯಲಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೇಲೆ 75 ವರ್ಷ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಮಾರ್ಗದರ್ಶಕ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ್ ಜೋಷಿ ಈ ಮಾರ್ಗದರ್ಶನ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರು.

  • ಕೊಪ್ಪಳದಿಂದ ಶ್ರೀರಾಮುಲು ಕಣಕ್ಕೆ?

    ಕೊಪ್ಪಳದಿಂದ ಶ್ರೀರಾಮುಲು ಕಣಕ್ಕೆ?

    ಕೊಪ್ಪಳ: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದ ಹಿನ್ನಲೆ ಕೊಪ್ಪಳದಿಂದ ಮೊಳಕಾಲ್ಮುರು ಶಾಸಕ ಶ್ರೀರಾಮುಲುರನ್ನ ಕಣಕ್ಕೆ ಇಳಿಸಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಸೋಮವಾರ ತಡರಾತ್ರಿ ನಡೆದ ಬಿಜೆಪಿ ಸಭೆಯಲ್ಲಿ ವರಿಷ್ಠರು ತೀರ್ಮಾನ ಕೈಗೊಂಡಿರುವ ಮಾಹಿತಿ ಪ್ರಕಾರ, ಕೊಪ್ಪಳದಿಂದ ಶ್ರೀರಾಮುಲು ಅವರು ಸ್ಪರ್ಧಿಸಿದರೆ ಕೊಪ್ಪಳ, ಬಳ್ಳಾರಿ, ರಾಯಚೂರು, ಹಾವೇರಿ-ಗದಗ, ಬಾಗಲಕೋಟೆ ಕ್ಷೇತ್ರಗಳಿಗೆ ಅನುಕೂಲವಾಗುವ ಸಾಧ್ಯತೆ ಹೆಚ್ಚಿದೆ. ಆದರಿಂದ ಶ್ರೀರಾಮುಲುಗೆ ಕೊಪ್ಪಳದಿಂದ ಕಣಕ್ಕೆ ಇಳಿಯಲು ಬಿಜೆಪಿ ವರಷ್ಠರು ಒತ್ತಾಯ ಮಾಡುತ್ತಿದ್ದಾರಂತೆ. ಈಗಾಗಲೇ ಕೊಪ್ಪಳ ಲೋಕಸಭೆ ಟಿಕೆಟ್‍ಗಾಗಿ ಹಾಲಿ ಸಂಸದ ಕರಡಿ ಸಂಗಣ್ಣರಿಂದ ತೀವ್ರ ಕಸರತ್ತು ನಡೆಯುತ್ತಿದೆ.

    ಕರಡಿ ಸಂಗಣ್ಣ ಸೇರಿದಂತೆ ಸಿ.ವಿ ಚಂದ್ರಶೇಖರ್, ಡಾ.ಕೆ ಬಸವರಾಜ ಟಿಕೆಟ್‍ಗಾಗಿ ತೀವ್ರ ಲಾಬಿ ನೆಡಸಿದ್ದಾರೆ. ಈ ಕಡೆ ಸ್ಪರ್ಧೆ ಮಾಡುವಂತೆ ವರಿಷ್ಠರಿಂದ ತೀವ್ರ ಒತ್ತಡ ಎದರುಸುತ್ತಿರುವ ಶ್ರೀರಾಮುಲು ಅವರು ಲೋಕಸಭೆ ಸ್ಪರ್ಧೆಗೆ ನಿರಾಸಕ್ತಿ ತೋರಿಸುತ್ತಿದ್ದಾರೆ ಎನ್ನುವ ಮಾಹಿತಿ ದೊರಕಿದೆ.

    2014ರ ಚುನಾವಣೆಯಲ್ಲಿ ಶ್ರೀರಾಮುಲು ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿ 85,144 ಮತಗಳ ಅಂತರದಿಂದ ಜಯಗಳಿಸಿದ್ದರು. ಶ್ರೀರಾಮುಲು 5,34,406 ಮತಗಳನ್ನು ಪಡೆದರೆ ಹನುಮಂತಪ್ಪ 4,49,262 ಮತಗಳನ್ನು ಪಡೆದಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೊಳಕಾಲ್ಮೂರು ಮತ್ತು ಬದಾಮಿಯಿಂದ ಸ್ಪರ್ಧಿಸಿದ್ದರು. ಮೊಳಕಾಲ್ಮುರು ಕ್ಷೇತ್ರದಲ್ಲಿ ಗೆದ್ದಿದ್ದರೆ ಬದಾಮಿಯಲ್ಲಿ ಸಿದ್ದರಾಮಯ್ಯ ಮುಂದೆ ಸೋತಿದ್ದರು. ವಿಧಾನಸಭೆಗೆ ಆಯ್ಕೆಯಾದ ಬಳಿಕ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು.

  • ರಿಜ್ವಾನ್ ನಾಮಪತ್ರ ಸಲ್ಲಿಕೆ ವೇಳೆ ಕೇಸರಿ ಆರ್ಭಟ!

    ರಿಜ್ವಾನ್ ನಾಮಪತ್ರ ಸಲ್ಲಿಕೆ ವೇಳೆ ಕೇಸರಿ ಆರ್ಭಟ!

    ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಾಮಪತ್ರ ಸಲ್ಲಿಕೆಯ ವೇಳೆ ಅವರ ಬೆಂಬಲಿಗರು ಕೇಸರಿ ಪೇಟಾ ತೊಟ್ಟು, ಕುಂಕುಮ ಇಟ್ಟುಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

    ಇಂದು ರಿಜ್ವಾನ್ ಅರ್ಷದ್ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಬೆಂಬಲಿಗರೊಂದಿಗೆ ಸಾಗುತ್ತಿದ್ದರು. ಈ ವೇಳೆ ಅವರ ಬೆಂಬಲಿಗರೇ ಕೇಸರಿ ಪೇಟ ಹಾಗೂ ಕೇಸರಿ ಕುಂಕುಮ ತೊಟ್ಟು ರ್ಯಾಲಿಯಲ್ಲಿ ಭಾಗಿಯಾಗಿದ್ದ ದೃಶ್ಯ ಕಂಡುಬಂದಿತ್ತು. ಬಿಜೆಪಿ ಮಾತ್ರ ಹಿಂದೂಗಳ ಧ್ವನಿಯಲ್ಲ, ಕಾಂಗ್ರೆಸ್ ಕೂಡ ಹಿಂದೂಗಳ ಪರವಿದೆ ಎಂದು ಸಂದೇಶ ಸಾರಲು ರಿಜ್ವಾನ್ ಅರ್ಷದ್ ಬೆಂಬಲಿಗರು ಕುಂಕುಮ, ಪೇಟಾ ಧರಿಸಿದ್ದರು.

    ರಿಜ್ವಾನ್ ಅವರು ಕೇವಲ ಮುಸ್ಲಿಮರ ಪರವಾಗಿ ಮಾತ್ರ ಇರಲ್ಲ, ಹಿಂದೂಗಳ ಪರ ಕೂಡ ನಿಲ್ಲುತ್ತಾರೆ. ಇದರ ಸಂಕೇತವಾಗಿ ಕೇಸರಿ ಪೇಟಾ, ಕೇಸರಿ ಕುಂಕುಮ ತೊಟ್ಟಿದ್ದೇವೆ ಎಂದು ಹೇಳಿದ ರಿಜ್ವಾನ್ ಬೆಂಬಲಿಗರು ಕೇಸರಿ ಕೇವಲ ಬಿಜೆಪಿಯ ಸ್ವತ್ತಲ್ಲ ಎಂದು ಹೇಳಿ ಕಿಡಿಕಾರಿದರು.

  • ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಣಕ್ಕೆ ಇಳಿದ ತಂದೆ!

    ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಣಕ್ಕೆ ಇಳಿದ ತಂದೆ!

    ದಾವಣಗೆರೆ: ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಲೋಕ ಕಣಕ್ಕೆ ಧುಮುಕಲು ತಂದೆ ಸಿದ್ಧರಾಗಿದ್ದು, ಲೋಕಸಭಾ ಅಖಾಡಕ್ಕೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಫೈನಲ್ ಆಗಿದ್ದಾರೆ.

    ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ದಕ್ಷಿಣ ಕ್ಷೇತ್ರವನ್ನ ಪುತ್ರನಿಗೆ ಬಿಟ್ಟುಕೊಡಲು ಶಾಮನೂರು ಸಂಕಲ್ಪ ತೊಟ್ಟಿದ್ದಾರೆ ಎನ್ನಲಾಗುತ್ತಿದೆ. ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಈಗಾಗಲೇ ಮೂರು ಬಾರಿ ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸೋಲು ಕಂಡಿದ್ದಾರೆ. ಆದ್ರೆ ಈ ಬಾರಿ ಸ್ವತಃ ಶಾಮನೂರು ಅವರೇ ಕಣಕ್ಕೆ ಇಳಿದು ಜಿ.ಎಂ.ಸಿದ್ದೇಶ್ವರ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಸೋತಿರುವ ಭಯದಿಂದ ಈ ಬಾರಿ ಲೋಕಸಮರಕ್ಕೆ ಎಸ್.ಎಸ್.ಮಲ್ಲಿಕಾರ್ಜುನ್ ಹಿಂದೇಟು ಹಾಕಿದ್ದಾರೆ.

    ಸದ್ಯ ಬೀಗರ ಜಿದ್ದಾಜಿದ್ದಿಗೆ ದಾವಣಗೆರೆ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಲಿದೆ. ಯಾಕೆಂದರೆ ಶಾಮನೂರು ಹಾಗೂ ಸಿದ್ದೇಶ್ವರ್ ಇಬ್ಬರೂ ಸಂಬಂಧದಲ್ಲಿ ಮಾವ-ಅಳಿಯ ಆಗುತ್ತಾರೆ. ಆದ್ರೆ ಅಳಿಯನ ಹ್ಯಾಟ್ರಿಕ್ ಗೆಲುವಿಗೆ ಬ್ರೇಕ್ ಹಾಕ್ತಾರಾ ಮಾವ ಅನ್ನೋದನ್ನ ಕಾದು ನೋಡಬೇಕಾಗಿದೆ.

  • ಮೊಮ್ಮಗನಿಗೆ ಕ್ಷೇತ್ರ ಬಿಟ್ಟ ಗೌಡರಿಗೆ ‘ಗಂಗೆ’ ಕಂಟಕ!

    ಮೊಮ್ಮಗನಿಗೆ ಕ್ಷೇತ್ರ ಬಿಟ್ಟ ಗೌಡರಿಗೆ ‘ಗಂಗೆ’ ಕಂಟಕ!

    ತುಮಕೂರು: ಮೊಮ್ಮಗನಿಗಾಗಿ ಕ್ಷೇತ್ರ ತ್ಯಾಗ ಮಾಡಿರುವ ದೇವೇಗೌಡರಿಗೆ ಈ ಬಾರಿ ಅಗ್ನಿ ಪರೀಕ್ಷೆ ಎದುರಾದಂತೆ ಕಾಣುತ್ತಿದೆ. ಅಳೆದೂ ತೂಗಿ ತುಮಕೂರು ಕ್ಷೇತ್ರ ಆರಿಸಿಕೊಂಡಿರೋ ಗೌಡರಿಗೆ ಹಲವು ಕಂಟಕಗಳು ಎದುರಾಗಿವೆ. ಒಂದೆಡೆ ಗಂಗೆಯ ಕಂಟಕವಿದ್ದರೆ, ಇನ್ನೊಂದೆಡೆ ದೋಸ್ತಿ ಪಕ್ಷದವರೇ ಸೆಡ್ಡು ಹೊಡೆಯುತ್ತಿದ್ದಾರೆ. ಹೀಗಾಗಿ ಗೌಡರಿಗೆ ತುಮಕೂರು ಕ್ಷೇತ್ರದಿಂದ ಗೆಲುವು ಸಾಧಿಸುವುದು ಸುಲಭವಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

    ಹೌದು, ದೇವೇಗೌಡರು ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿದ ಬಳಿಕ ಹಾಸನದ ಗೊರೂರು ಜಲಾಶಯದಿಂದ ತುಮಕೂರಿಗೆ ನೀರು ಹರಿಸುವ ವಿಚಾರದಲ್ಲಿ ಗೌಡರ ಕುಟುಂಬ ಅಡ್ಡಗಾಲಗಿದೆ ಎನ್ನುವ ವಿಷಯ ಈಗ ಚರ್ಚೆಗೆ ಬಂದಿದೆ. ಹೀಗಾಗಿ ಜನ ‘ದೇವೇಗೌಡರು ಅಂದರೆ ತುಮಕೂರು ವಿರೋಧಿಗಳು’ ಎನ್ನುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

    ಈ ನಡುವೆ ಜಿಲ್ಲೆಯಲ್ಲಿ ಮೂರು ಶಾಸಕರನ್ನು ಹೊಂದಿರುವ ಜೆಡಿಎಸ್ ಬಲ ನೆಚ್ಚಿಕೊಂಡೇ ದೇವೇಗೌಡರು ಕಣಕ್ಕಿಳಿದಿದ್ದಾರೆ ನಿಜ. ಆದರೆ ಕ್ಷೇತ್ರದಲ್ಲಿ ದೋಸ್ತಿ ಪಕ್ಷ ಕಾಂಗ್ರೆಸ್ ಬೆಂಬಲವಿಲ್ಲದೆ ಗೆಲುವು ಸಾಧಿಸುವುದು ಕಷ್ಟವಿದೆ. ಎದುರಾಳಿ ಬಿಜೆಪಿ ನಾಲ್ವರು ಶಾಸಕರನ್ನು ಹೊಂದಿದ್ದು, ಕ್ಷೇತ್ರದ ಮೇಲೆ ಬಲವಾದ ಹಿಡಿತ ಹೊಂದಿದೆ. ಹೀಗಾಗಿ ಬಿಜೆಪಿ ಮಣಿಸಬೇಕಾದರೆ ಜೆಡಿಎಸ್‍ಗೆ ಕಾಂಗ್ರೆಸ್ ಬೆಂಬಲ ಬೇಕಾಗಿದೆ. ಆದ್ರೆ ಸದ್ಯದ ಮಟ್ಟಿಗೆ ಆ ಯಾವ ಲಕ್ಷಣಗಳು ಕಾಣಸಿಗುತ್ತಿಲ್ಲ. ಇನ್ನೊಂದೆಡೆ ಹಾಲಿ ಸಂಸದ ಮುದ್ದುಹನುಮೇಗೌಡ ಗೌಡರ ವಿರುದ್ಧ ಸಿಟ್ಟಾಗಿದ್ದು, ಸ್ಪರ್ಧೆ ಮಾಡೋದಾಗಿ ಗುಡುಗಿದ್ದಾರೆ.

    ಇದಕ್ಕೆ ಕೈ ಮಾಜಿ ಶಾಸಕ ಕೆ.ಎನ್ ರಾಜಣ್ಣ ಕೂಡ ಸಾಥ್ ನೀಡಿದ್ದು ದೊಡ್ಡ ಮೀನು ಸಣ್ಣ ಮೀನನ್ನ ನುಂಗಲು ಬರುತ್ತಿದೆ ಅಂತ ಗೌಡರ ವಿರುದ್ಧ ಕಿಡಿ ಕಾರಿದ್ದಾರೆ. ಇದೆಲ್ಲದರ ನಡುವೆ ಜಾತಿ ಲೆಕ್ಕಾಚಾರ ಕೂಡ ದೇವೇಗೌಡರ ನಿದ್ದೆಗೆಡಿಸಿದೆ.

    ಜಾತಿ ಲೆಕ್ಕಾಚಾರ ಹೇಗಿದೆ?
    ತುಮಕೂರು ಕ್ಷೇತ್ರದಲ್ಲಿ ವೀರಶೈವರು ಪ್ರಬಲರಾಗಿದ್ದು 3.5 ಲಕ್ಷ ಜನಸಂಖ್ಯೆ ಹೊಂದಿದ್ದಾರೆ. ಒಕ್ಕಲಿಗರು 3.20 ಲಕ್ಷ, ದಲಿತರು 2.80 ಲಕ್ಷ, ಮುಸ್ಲಿಂ 1.8 ಲಕ್ಷ, ಕುರುಬರು 1.7 ಲಕ್ಷ, ಯಾದವರು 90 ಸಾವಿರ ಹಾಗೂ ತಿಗಳರು 80 ಸಾವಿರ ಮತದಾರರಿದ್ದಾರೆ.

    ಒಂದು ವೇಳೆ ಮುದ್ದುಹನುಮೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಒಕ್ಕಲಿಗರ ಮತಗಳು ವಿಭಜನೆ ಆಗಲಿವೆ. ಇದು ದೇವೇಗೌಡರಿಗೆ ಹೊಡೆತ ಕೊಡಲಿದೆ. ಜೊತೆಗೆ ಜಿಲ್ಲಾ ಕಾಂಗ್ರೆಸ್ ನಾಯಕರಾದ ಮುದ್ದುಹನುಮೇಗೌಡರ ಜೊತೆ ನಿಂತರೆ ಹಿಂದುಳಿದ, ದಲಿತ ಮತಗಳು ಸಹ ವಿಭಜನೆ ಆಗಲಿವೆ. ಇದು ಸಹ ಗೌಡರು ಭಯ ಬೀಳಲು ಕಾರಣವಾಗಿದೆ. ಹಾಸನ ಬಿಟ್ಟು ತುಮಕೂರಿಗೆ ವಲಸೆ ಬಂದಿರೋ ದೇವೇಗೌಡರಿಗೆ ದೊಡ್ಡ ಅಗ್ನಿ ಪರೀಕ್ಷೆ ಎದುರಾಗಿದೆ ಅನ್ನೋ ಮಾತು ಎಲ್ಲೆಡೆ ಕೇಳಿ ಬರುತ್ತಿದೆ.

  • ಸುಮಲತಾ ಬೆಂಬಲಿಗರಿಗೆ ಬೆದರಿಕೆ ಕರೆ- ಬಿಜೆಪಿಯಿಂದ ಬೆಂಬಲ ಪಡೆಯಲು ಮುಂದಾದ ಮಂಡ್ಯ ಗೌಡ್ತಿ

    ಸುಮಲತಾ ಬೆಂಬಲಿಗರಿಗೆ ಬೆದರಿಕೆ ಕರೆ- ಬಿಜೆಪಿಯಿಂದ ಬೆಂಬಲ ಪಡೆಯಲು ಮುಂದಾದ ಮಂಡ್ಯ ಗೌಡ್ತಿ

    ಮಂಡ್ಯ: ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಕಣಕ್ಕಿಳಿದಿರುವ ಹಿನ್ನೆಲೆ ಅವರ ಬೆಂಬಲಿಗರಿಗೆ ನಿತ್ಯವೂ ಬೆದರಿಕೆ ಕರೆ ಬರುತ್ತಿದೆ. ಅಲ್ಲದೇ ತಮ್ಮ ಒಂಟಿ ಹೋರಾಟಕ್ಕೆ ಬೆಂಬಲಬೇಕು ಅಂತ ಬಿಜೆಪಿ ನಾಯಕರ ಬೆಂಬಲ ಕೇಳಲು ಸುಮಲತಾ ಮುಂದಾಗಿದ್ದಾರೆ.

    ಇಂದು ನಗರದ ಭಾರತಿನಗರ ವ್ಯಾಪ್ತಿಯಲ್ಲಿ ಮತಯಾಚಿಸುವಾಗ ಸುಮಲತಾ ಈ ಹೇಳಿಕೆಯನ್ನು ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸ್ಟ್ರೈಟ್ ಫಾರ್ವಡ್ ಫೈಟ್ ಆದ್ರೆ ಯಾವ ಭಯವಿಲ್ಲ. ಅದನ್ನ ನಾನು ಗೆಲ್ಲಬಹುದು ಅನ್ನೋ ನಂಬಿಕೆಯಿದೆ. ಆದ್ರೆ ಹಿಂದಿನಿಂದ ಚುಚ್ಚುವ ಪ್ರಯತ್ನ ಆಗುತ್ತಿದೆ. ಯುದ್ಧದಲ್ಲೂ ಒಂದು ಧರ್ಮವಿದೆ. ಧರ್ಮ ಪಾಲನೆ ಬಿಟ್ಟು ಬೆನ್ನಿಗೆ ಚೂರಿ ಹಾಕ್ತಿದ್ದಾರೆ ಅನಿಸುತ್ತಿದೆ. ನನಗಿರುವ ಜನ ಬೆಂಬಲ ನೋಡಿ, ಕೆಬಲ್, ಕರೆಂಟ್ ಕಡಿತ ಮಾಡ್ತಾರೆ. ಇದು ಸರಿನಾ? ನೀವು ಜನರನ್ನ ಸೇರಿಸಿ, ನೀವು ಪ್ರಚಾರ ಮಾಡಿ. ಅದನ್ನ ತಡೆಯೋಲ್ಲ. ನಾವು ಖುಷಿಪಡುತ್ತೀವಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಉದ್ದೇಶಪೂರ್ವಕವಾಗಿಯೇ ದರ್ಶನ್ ಮನೆ ಮೇಲೆ ಕಲ್ಲು ತೂರಿದ್ದಾರೆ: ಸುಮಲತಾ

    ಅಷ್ಟೇ ಅಲ್ಲದೆ, ನನ್ನ ಒಂಟಿ ಹೋರಾಟಕ್ಕೆ ಎಲ್ಲರ ಬೆಂಬಲ ಬೇಕು. ಈ ಬಗ್ಗೆ ಬಿಜೆಪಿ ನಾಯಕರ ಬೆಂಬಲ ಕೇಳುತ್ತೇನೆ. ಬಿಜೆಪಿ ಬೆಂಬಲ ಕೊಟ್ಟರೆ ಮತ್ತಷ್ಟು ಧೈರ್ಯ ಸಿಗುತ್ತೆ. ಹೀಗಾಗಿ ನಾನು ಬಿಜೆಪಿ ನಾಯಕರನ್ನ ಭೇಟಿ ಮಾಡುತ್ತೇನೆ ಎಂದು ಸುಮಲತಾ ತಿಳಿಸಿದ್ದಾರೆ.

    ದಿನ ಕಳೆದಂತೆ ಮಂಡ್ಯ ಚುನಾವಣಾ ಕಣ ರಂಗೇರುತ್ತಿದೆ. ಜೆಡಿಎಸ್- ಕಾಂಗ್ರೆಸ್ ಮೈತ್ರಿಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧಿಸುತ್ತಿದ್ದರೆ, ಇತ್ತ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅವರು ಕಣಕಿಳಿದಿದ್ದಾರೆ. ಇಬ್ಬರ ನಡುವೆ ಭಾರೀ ಪೈಪೋಟಿ ನಡೆಯುತ್ತಿದೆ. ಈ ನಡುವೆ ಸುಮಲತಾ ಪರ ನಿಂತ ಕೆಲವು ಕಾಂಗ್ರೆಸ್ ನಾಯಕರನ್ನು ಪಕ್ಷ ಉಚ್ಚಾಟನೆ ಮಾಡಿದೆ.

  • ಉಡುಪಿ- ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮೀನುಗಾರ ಮುಖಂಡ ಯಶ್ ಪಾಲ್‍ಗೆ ನೀಡಿ..!

    ಉಡುಪಿ- ಚಿಕ್ಕಮಗಳೂರು ಲೋಕಸಭಾ ಟಿಕೆಟ್ ಮೀನುಗಾರ ಮುಖಂಡ ಯಶ್ ಪಾಲ್‍ಗೆ ನೀಡಿ..!

    – ಬಿಜೆಪಿ ಕಾರ್ಯಕರ್ತರ ಒತ್ತಾಯ

    ಉಡುಪಿ: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಗೆ ಬಿಜೆಪಿ ಪಕ್ಷದಿಂದ ಹೊಸ ಅಭ್ಯರ್ಥಿಯ ಹೆಸರು ಕೇಳಿಬಂದಿದೆ. ತೀವ್ರ ವಿರೋಧದ ನಡುವೆಯೂ ಶೋಭಾ ಕರಂದ್ಲಾಜೆ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದರೂ ಕೂಡ ಮೀನುಗಾರ ಸಮುದಾಯದ ಮುಖಂಡರ ಹೆಸರು ಬಿಜೆಪಿ ವಲಯದಲ್ಲಿ ಓಡಾಡುತ್ತಿದೆ.

    ಉಡುಪಿ-ಚಿಕ್ಕಮಗಳೂರಿಗೆ ಜಯಪ್ರಕಾಶ್ ಹೆಗ್ಡೆ ಅವರನ್ನು ಅಭ್ಯರ್ಥಿಯಾಗಿ ಘೋಷಿಸಬೇಕು ಎಂಬ ಒತ್ತಾಯವೂ ಇಲ್ಲಿ ಜೋರಾಗಿ ಕೇಳಿಬರುತ್ತಿದೆ. ಎರಡೂ ಬಣಗಳ ಲಾಬಿಯೂ ಜೋರಾಗಿರುವಾಗಲೇ ಯಶ್ ಪಾಲ್ ಸುವರ್ಣ ಹೆಸರು ಈ ನಡುವೇ ಪ್ರಸ್ತಾಪವಾಗುತ್ತಿದೆ. ಮೊಗವೀರ ಮುಖಂಡ ಯಶಪಾಲ್ ಸುವರ್ಣ ಅವರು ಸಂಘ ಪರಿವಾರದ ಹಿನ್ನೆಲೆ ಇರುವ ಮೀನುಗಾರಿಕಾ ಫೆಡರೇಷನ್‍ನ ನಾಯಕನಾಗಿದ್ದಾರೆ. ಹಾಗೆಯೇ ಮೀನುಗಾರ ಸಮುದಾಯದ ಮುಂಚೂಣಿ ಮುಖಂಡ ಎನಿಸಿದ್ದಾರೆ.

    ಶೋಭಾ ಕರಂದ್ಲಾಜೆ ಅವರು ರಾಜ್ಯ ರಾಜಕಾರಣಕ್ಕೆ ಮರಳಲು ಬಯಸಿದರೆ, ಯಶಪಾಲ್ ಹೆಸರನ್ನು ಮುಂಚೂಣಿಗೆ ತರಲು ಕಾರ್ಯಕರ್ತರು ಉತ್ಸುಕತೆ ತೋರಿದ್ದಾರೆ. ಆರ್.ಎಸ್.ಎಸ್ ನಾಯಕ ಬಿ.ಎಲ್.ಸಂತೋಷ್ ಅವರ ಮೂಲಕ ಒತ್ತಾಯ ಹೇರಲು ತಯಾರಿಗಳು ನಡೆಯುತ್ತಿವೆ. ಜಯಪ್ರಕಾಶ್ ಹೆಗ್ಡೆಯನ್ನು ಒಪ್ಪದ ಬಿಜೆಪಿ ಮುಖಂಡರು ಶೋಭಾ ಕರಂದ್ಲಾಜೆ ಬದಲಾಗಿ ಯಶ್ ಪಾಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂದು ಜನರು ಹೇಳಿದ್ದಾರೆ. ಶೋಭಾ ಕರಂದ್ಲಾಜೆಗೆ ರಾಜ್ಯ ರಾಜಕಾರಣದಲ್ಲಿ ಉನ್ನತ ಸ್ಥಾನ ಕೊಡುವ ಮೂಲಕ ಸ್ಪರ್ಧೆಯಿಂದ ಹಿಂದಕ್ಕೆ ಸರಿಯಲು ಸೂಚಿಸುವ ಸಾಧ್ಯತೆ ಇದೆ ಎಂದು ಕರಾವಳಿಯ ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿದೆ. ವಾಟ್ಸಾಪ್, ಫೇಸ್‍ಬುಕ್‍ನಲ್ಲಿ ಇಂತಹ ಸಂದೇಶ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಯಶ್ ಪಾಲ್ ಸುವರ್ಣ, ನಾನೊಬ್ಬ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಹೋರಾಟದಿಂದ ಬಂದವನು. ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡು ಪಕ್ಷ ಬಲವರ್ಧನೆಗೆ ಹಗಲು ರಾತ್ರಿ ದುಡಿದಿದ್ದೇನೆ. ದೇಶ ಸೇವೆ, ಜನಸೇವೆ ಮಾಡಬೇಕೆಂಬ ಉದ್ದೆಶದಿಂದ ಮದುವೆಯಾಗದೆ ಬ್ರಹ್ಮಚಾರಿಯಾಗಿದ್ದೇನೆ. ಜೀವದ ಕೊನೆಯ ಉಸಿರು ಇರೋವರೆಗೆ ಜನರ ಕಷ್ಟ ಸುಖದ ಜೊತೆ ಇರುತ್ತೇನೆ. ಪಕ್ಷ, ನಾಯಕರು ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv