ನವದೆಹಲಿ: ಜೂನ್ 9 ರ ಭಾನುವಾರ ಸಂಜೆ 6 ಗಂಟೆಗೆ ನರೇಂದ್ರ ಮೋದಿ (Narendra Modi) ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಪ್ರಹ್ಲಾದ್ ಜೋಶಿ (Pralhad Joshi) ತಿಳಿಸಿದ್ದಾರೆ.
ಇಂದು ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಎನ್‌ಡಿಎ (NDA) ಸಂಸದರ ಸಭೆ ನಡೆಯಿತು. ಈ ವೇಳೆ ಪ್ರಹ್ಲಾದ್ ಜೋಶಿ ಜೂನ್ 9 ರಂದು ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಆರಂಭದಲ್ಲಿ ಶನಿವಾರ ಪ್ರಮಾಣ ವಚನ ನಡೆಯಲಿದೆ ಎಂದು ವರದಿಯಾಗಿತ್ತು. ಆದದರೆ ಈಗ ಭಾನುವಾರ ಪ್ರಮಾಣ ವಚನ ನಡೆಯಲಿದೆ ಎನ್ನುವುದು ಅಧಿಕೃತವಾಗಿ ಪ್ರಕಟವಾಗಿದೆ. ಯಾರೆಲ್ಲ ಪ್ರಮಾಣ ವಚನ ನಡೆಸಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಇದನ್ನೂ ಓದಿ: ರಾಹುಲ್ ಗಾಂಧಿಗೆ ಜಾಮೀನು ಮಂಜೂರು – ಡಿಕೆಸು ಪ್ರಾಪರ್ಟಿ ಶ್ಯೂರಿಟಿ
ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ನಾಗಾಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ, ನಾನು ಈಗಾಗಲೇ ಮೋದಿಯವರಿಗೆ ಅಭಿನಂದನೆ ಸಲ್ಲಿಸಿದ್ದೇನೆ ಎಂದರು. ಇನ್ನು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಗೋವಾದಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲು ಸಾಧ್ಯವಾಯಿತು. ಆದರೆ ಇನ್ನೊಂದು ಸ್ಥಾನ ಗೆಲ್ಲಲು ಸಾಧ್ಯವಾಗದಿರುವುದು ಬೇಸರ ತಂದಿದೆ ಎಂದರು.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 293 ಸ್ಥಾನಗಳನ್ನು ಗೆದ್ದಿದೆ. ಚಂದ್ರಬಾಬು ನಾಯ್ಡು ಅವರ ಟಿಡಿಪಿ ಮತ್ತು ನಿತೀಶ್ ಕುಮಾರ್ ಅವರ ಜೆಡಿಯು ಕ್ರಮವಾಗಿ 16 ಮತ್ತು 12 ಸ್ಥಾನಗಳನ್ನು ತಮ್ಮ ರಾಜ್ಯಗಳಲ್ಲಿ ಗೆದ್ದುಕೊಂಡಿದ್ದಾರೆ.
ನವದೆಹಲಿ: ಎನ್‌ಡಿಎ ಮೈತ್ರಿಕೂಟದ (NDA) ನಾಯಕನಾಗಿರುವ ನರೇಂದ್ರ ಮೋದಿ (Narendra Modi) ಅವರು ಇದೇ ಜೂ.9 ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಗ್ಗೆ 10:30ಕ್ಕೆ ಸಭೆ ನಡೆಸಲು ಬಿಜೆಪಿಯ ಎಲ್ಲಾ ಸಂಸದರು ಮತ್ತು ಎನ್‌ಡಿಎ ಮಿತ್ರ ಪಕ್ಷಗಳ ಸಿಎಂಗಳನ್ನು ಇಂದು ರಾತ್ರಿ ದೆಹಲಿಗೆ ಕರೆಸಲಾಗುತ್ತಿದೆ ಎಂದು ಮೂಲಗಳು ಹೇಳಿವೆ.
ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಎರಡೂ ಪಕ್ಷಗಳಿಂದ ಬುಧವಾರ ತೀವ್ರ ಮಾತುಕತೆಗಳು ಮತ್ತು ಪ್ರಮುಖ ಸಭೆಗಳು ನಡೆದಿವೆ. ಯಾವುದೇ ಪಕ್ಷವು ಸ್ವತಂತ್ರವಾಗಿ ಸರ್ಕಾರ ರಚಿಸಲು ಜನಾದೇಶ ಪಡೆದುಕೊಂಡಿಲ್ಲ.
ಎನ್‌ಡಿಎ ಒಕ್ಕೂಟದ ಮಿತ್ರ ಪಕ್ಷಗಳ ನಾಯಕರು ತಮ್ಮ ಬೆಂಬಲ ಭರವಸೆ ನೀಡಿದ್ದು, ಮೋದಿ ಅವರು ಭಾನುವಾರದಂದು ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲು ಸಿದ್ಧರಾಗಿದ್ದಾರೆ.
ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯಲ್ಲಿ ಕೆ. ಸುಧಾಕರ್ (K sudhakar) ಗೆಲುವಿನ ಬೆನ್ನಲ್ಲೇ ಶಾಸಕ ಪ್ರದೀಪ್ ಈಶ್ವರ್ ಹೆಸರಿನ ರಾಜೀನಾಮೆ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಸಂಬಂಧ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೊಂದು ನಕಲಿ ಪತ್ರ. ಆ ಪತ್ರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಕಿಡಿಗೇಡಿಗಳು ನಕಲಿ ರಾಜೀನಾಮೆ ಪತ್ರ ಹರಿಬಿಟ್ಟಿದ್ದಾರೆ. ಈ ಬಗ್ಗೆ ನಾನು ಕಾನೂನು ರೀತಿಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ರಾಜೀನಾಮೆ ನೀಡ್ತೀನಿ ಅಂದಿದ್ದ ಶಾಸಕರು: ಚಿಕ್ಕಬಳ್ಳಾಪುರ (Chikkaballapur) ಲೋಕಸಭಾ ಚುನಾವಣಾ ಪ್ರಚಾರದ ವೇಳೆ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್ ಒಂದು ಮತ ಹೆಚ್ಚಿಗೆ ಲೀಡ್ ಪಡೆದರೆ ನಾನು ರಾಜೀನಾಮೆ ನೀಡುವುದಾಗಿ ಹೇಳಿಕೆ ಕೊಟ್ಟಿದ್ದರು. ಆ ಹೇಳಿಕೆ ಜೊತೆಯಲ್ಲಿ ಇದನ್ನ ಮಾಜಿ ಸಚಿವ ಡಾಕ್ಟರ್ ಕೆ ಸುಧಾಕರ್ ಸವಾಲಾಗಿ ಸ್ವೀಕರಿಸಬೇಕು ಎಂಬ ಆಗ್ರಹವನ್ನು ಕೂಡ ಮಾಡಿದ್ದರು. ಆದರೆ ಪ್ರದೀಪ್ ಈಶ್ವರ್ ಸವಾಲಿಗೆ ಡಾಕ್ಟರ್ ಕೆ ಸುಧಾಕರ್ ಯಾವುದೇ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಇದನ್ನೂ ಓದಿ: ಎರಡಂಕಿ ಫಲಿತಾಂಶ ಬರದಿರಲು ನಮ್ಮ ನಾಯಕರ ಓವರ್ ಕಾನ್ಫಿಡೆನ್ಸ್ ಕಾರಣ – ಸತೀಶ್ ಜಾರಕಿಹೊಳಿ
ಇತ್ತ ಕೆಲವು ಕಡೆ ಪ್ರದೀಪ್ ಈಶ್ವರ್ (Pradeep Eshwar) ತಮ್ಮ ಹಳೆಯ ಹೇಳಿಕೆಯನ್ನೇ ಮರು ಉಚ್ಚರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಹೇಳಿಕೆಯನ್ನು ಸಹ ಕೊಟ್ಟಿದ್ದರು. ಮಂಗಳವಾರ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮತ ಎಣಿಕೆ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾಕ್ಟರ್ ಕೆ ಸುಧಾಕರ್ 20,941 ಮತಗಳ ಅಂತರವನ್ನು ಕಾಯ್ದುಕೊಂಡಿದ್ದಾರೆ. ಹೀಗಾಗಿ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ಕೊಡಬೇಕು ಅಂತ ಹಲವರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇಂದು ನಕಲಿ ರಾಜೀನಾಮೆ ಪತ್ರವೊಂದು ಸಾಕಷ್ಟು ವೈರಲ್ ಆಗಿ ಚರ್ಚೆಗೀಡಾಗಿದೆ.
– ಸರ್ಕಾರ ರಚನೆಗೆ ರಾಷ್ಟ್ರಪತಿ ಬಳಿ ಇಂದು ಸಂಜೆ ಹಕ್ಕು ಮಂಡಿಸುವ ಸಾಧ್ಯತೆ
ನವದೆಹಲಿ: ದೆಹಲಿಯಲ್ಲಿ ಎನ್‌ಡಿಎ (NDA) ನಾಯಕರು ಅಂಗೀಕರಿಸಿದ ಪ್ರಸ್ತಾವನೆಯಲ್ಲಿ ನರೇಂದ್ರ ಮೋದಿ (Narendra Modi) ಅವರನ್ನು ತಮ್ಮ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಸರ್ಕಾರ ರಚನೆ ಸಂಬಂಧ ಚರ್ಚೆಗಾಗಿ ಎನ್‌ಡಿಎ ನಾಯಕರ ಸಭೆ ಕರೆಯಲಾಗಿತ್ತು. ನರೇಂದ್ರ ಮೋದಿ ಅವರ ನಿವಾಸದಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸೇರಿದಂತೆ ಎಲ್ಲಾ ಎನ್‌ಡಿಎ ನಾಯಕರು ಸಭೆಯಲ್ಲಿ ಹಾಜರಿದ್ದರು. ಇದನ್ನೂ ಓದಿ: ಮೋದಿ ನಿವಾಸದಲ್ಲಿ ಇಂದು ಎನ್‌ಡಿಎ ಮಿತ್ರಪಕ್ಷಗಳ ಸಭೆ
ಸಭೆಯಲ್ಲಿ ಎಲ್ಲಾ ನಾಯಕರು ಮೋದಿ ನಾಯಕತ್ವಕ್ಕೆ ಬಹುಪರಾಕ್ ಎಂದಿದ್ದಾರೆ. ‘ನರೇಂದ್ರ ಮೋದಿ ಪ್ರಧಾನಿಯಾಗಲಿ. ನಮ್ಮ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಾಧ್ಯವಾದಷ್ಟು ಬೇಗ ಸರ್ಕಾರ ರಚನೆಯಾಗಲಿ. ಸರ್ಕಾರ ರಚನೆಯಲ್ಲಿ ವಿಳಂಬ ಧೋರಣೆ ಬೇಡ ಎಂದು ನಿತೀಶ್ ಕುಮಾರ್ ಸಲಹೆ ನೀಡಿದ್ದಾರೆ.
ಖಾತೆ ಹಂಚಿಕೆ ಬಗ್ಗೆ ಬೇಡಿಕೆ ಇದ್ದರೂ ಸಹ ಸರ್ಕಾರ ರಚನೆಗೆ ಮುಖ್ಯ ಎಂದು ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ. ಎನ್‌ಡಿಎ ಸರ್ಕಾರ ರಚನೆಗೆ ಒಕ್ಕೂಟದ ನಾಯಕರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಇದನ್ನೂ ಓದಿ: 50ಕ್ಕೂ ಹೆಚ್ಚು ವಿಶ್ವನಾಯಕರಿಂದ ಮೋದಿಗೆ ಅಭಿನಂದನೆಗಳ ಮಹಾಪೂರ!
ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) ಇಂದು ಸಂಜೆ 7 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ: ಲೋಕಸಭಾ ಚುನಾವಣೆಯ ಫಲಿತಾಂಶ ಜೂನ್ 4 ರಂದು ಹೊರಬಿದ್ದಿದ್ದು, ಇದರಲ್ಲಿ ನಾಲ್ವರು ಅತ್ಯಂತ ಕಿರಿಯ ಸಂಸದರಾಗಿ ಸಂಸತ್ ಪ್ರವೇಶಿಸಲು ಸಿದ್ಧರಾಗಿದ್ದಾರೆ.
ಪುಷ್ಪೇಂದ್ರ ಸರೋಜ್ ಮತ್ತು ಪ್ರಿಯಾ ಸರೋಜ್ ಸಮಾಜವಾದಿ ಪಕ್ಷದ (SP) ಟಿಕೆಟ್‌ನಲ್ಲಿ ಸ್ಪರ್ಧಿಸಿದರೆ, ಶಾಂಭವಿ ಚೌಧರಿ ಮತ್ತು ಸಂಜನಾ ಜಾತವ್ ಅವರನ್ನು ಕ್ರಮವಾಗಿ ಲೋಕ ಜನಶಕ್ತಿ ಪಕ್ಷ (LJP) ಮತ್ತು ಕಾಂಗ್ರೆಸ್‌ನಿಂದ ಕಣಕ್ಕಿಳಿಸಲಾಗಿದೆ. ಇದೀಗ ಈ 4 ಅಭ್ಯರ್ಥಿಗಳು ಬಿಹಾರ, ಯುಪಿ, ರಾಜಸ್ಥಾನದ ಸ್ಥಾನಗಳಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇವರೆಲ್ಲರೂ 25 ವರ್ಷ ವಯಸ್ಸಿನವರಾಗಿದ್ದು, ಲೋಕಸಭೆ ಪ್ರವೇಶಿಸುವ ಅತ್ಯಂತ ಕಿರಿಯ ಸದಸ್ಯರು ಎನಿಸಿಕೊಂಡಿದ್ದಾರೆ.
ನಾಲ್ವರ ವಿವರ ಇಲ್ಲಿದೆ: * ಶಾಂಭವಿ ಚೌಧರಿ: ಬಿಹಾರದ ನಿತೀಶ್ ಕುಮಾರ್ ಸಂಪುಟದ ಸಚಿವ ಅಶೋಕ್ ಚೌಧರಿ ಅವರ ಪುತ್ರಿಯಾಗಿರುವ ಶಾಂಭವಿ (Shambhavi Choudhary), ಬಿಹಾರದ ಸಮಸ್ತಿಪುರ್ ಕ್ಷೇತ್ರದಲ್ಲಿ LJP ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆಲುವಿನ ನಗೆ ಬೀರಿದ್ದಾರೆ.
ಶಾಂಭವಿ ಚೌಧರಿಯವರು ಕಾಂಗ್ರೆಸ್‌ನ ಸನ್ನಿ ಹಜಾರಿಯವರನ್ನು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಸನ್ನಿ ಹಜಾರಿ ಜೆಡಿಯು ಸಚಿವ ಮಹೇಶ್ವರ್ ಹಜಾರಿ ಅವರ ಪುತ್ರ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಶಾಂಭವಿ ಎನ್‌ಡಿಎ ಕಿರಿಯ ಅಭ್ಯರ್ಥಿ ಎಂದು ಹಾಡಿ ಹೊಗಳಿದ್ದರು.
* ಸಂಜನಾ ಜಾತವ್: ಇವರು ರಾಜಸ್ಥಾನದ ಭರತ್‌ಪುರ ಕ್ಷೇತ್ರದಿಂದ ಗೆದ್ದಿದ್ದಾರೆ. 25ರ ಹರೆಯದ ಸಂಜನಾ, ಬಿಜೆಪಿಯ ರಾಮಸ್ವರೂಪ್ ಕೋಲಿ ಅವರನ್ನು 51,983 ಮತಗಳ ಅಂತರದಿಂದ ಸೋಲಿಸಿದ್ದಾರೆ. ಕಳೆದ ವರ್ಷ ರಾಜಸ್ಥಾನದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗಿಳಿದ ಸಂಜನಾ (Sanjana Jatav), ಬಿಜೆಪಿಯ ರಮೇಶ್ ಖೇಡಿ ವಿರುದ್ಧ ಕೇವಲ 409 ಮತಗಳಿಂದ ಸೋತಿದ್ದರು. ಸಂಜನಾ ರಾಜಸ್ಥಾನದ ಪೊಲೀಸ್ ಪೇದೆ ಕಪ್ತಾನ್ ಸಿಂಗ್ ಅವರನ್ನು ವಿವಾಹವಾಗಿದ್ದಾರೆ.
* ಪುಷ್ಪೇಂದ್ರ ಸರೋಜ್: ಉತ್ತರಪ್ರದೇಶದ ಕೌಶಂಬಿ ಸಂಸದೀಯ ಸ್ಥಾನದಿಂದ ಸಮಾಜವಾದಿ ಪಕ್ಷದ (SP) ಅಭ್ಯರ್ಥಿಯಾಗಿ ಪುಷ್ಪೇಂದ್ರ (Pushpendra Saroj) ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ವಿನೋದ್ ಕುಮಾರ್ ಸೋಂಕರ್ ಅವರನ್ನು ಪುಷ್ಪೇಂದ್ರ ಅವರು 1,03,944 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಪುಷ್ಪೇಂದ್ರ ಅವರು ಎಸ್‌ಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, 5 ಬಾರಿ ಶಾಸಕ ಮತ್ತು ಉತ್ತರ ಪ್ರದೇಶದ ಮಾಜಿ ಸಚಿವ ಇಂದರ್‌ಜಿತ್ ಸರೋಜ್ ಅವರ ಪುತ್ರ. ಪುಷ್ಪೇಂದ್ರ ಸರೋಜ್ ಬಿಎಸ್‌ಸಿ ಮುಗಿಸಿದ ನಂತರ ರಾಜಕೀಯಕ್ಕೆ ಧುಮುಕಿದರು.
* ಪ್ರಿಯಾ ಸರೋಜ್: 25 ವರ್ಷದ ಪ್ರಿಯಾ ಸರೋಜ್ (Priya Saroj) ಅವರು 2024 ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮಚ್ಲಿಶಹರ್ ಕ್ಷೇತ್ರದಲ್ಲಿ ಎಸ್‌ಪಿ ಟಿಕೆಟ್‌ನಲ್ಲಿ ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಹಾಲಿ ಬಿಜೆಪಿ ಸಂಸದ ಭೋಲಾನಾಥ್ ಅವರನ್ನು 35,850 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರಿಯಾ ಸರೋಜ್ ಅವರ ತಂದೆ ತೂಫಾನಿ ಸರೋಜ್ ಮೂರು ಬಾರಿ ಸಂಸದರಾಗಿದ್ದಾರೆ.
ನವದೆಹಲಿ: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೆದ್ದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿಯವರು (HD Kumaraswamy) ಇದೀಗ ಕೃಷಿ ಖಾತೆಗಾಗಿ ಬೇಡಿಕೆ ಇಟ್ಟಿದ್ದಾರೆ.
ಎನ್‍ಡಿಎ ಸಭೆ ಹಿನ್ನೆಲೆಯಲ್ಲಿ ದೆಹಲಿಗೆ ಆಗಮಿಸಿದ ಕುಮಾರಸ್ವಾಮಿಯವರು ಪ್ರತಿಕ್ರಿಯಿಸಿ, ಕೃಷಿ ಕ್ಷೇತ್ರದಲ್ಲಿ ನನಗೆ ಆಸಕ್ತಿ ಇದೆ. ಪ್ರಧಾನಿ ಮೋದಿ ಜೊತೆಗೆ ಮೀಟಿಂಗ್ ಆದ ಬಳಿಕ ಎಲ್ಲವೂ ನಿರ್ಧಾರ ಆಗಲಿದೆ. ಈ ಹಂತದಲ್ಲಿ ಯಾವುದೇ ರೀತಿ ನೆಗೆಟಿವ್ ಆದ ನಿರ್ಧಾರ ನಿತೀಶ್ ಕುಮಾರ್ ಹಾಗೂ ಚಂದ್ರಬಾಬು ನಾಯ್ಡು ಮಾಡುವುದಿಲ್ಲ ಎಂದು ಅನಿಸುತ್ತದೆ. ನನ್ನ ಪ್ರಜ್ಞೆ ಪ್ರಕಾರ ಅವರು ಯಾವುದೇ ನೆಗೆಟಿವ್ ತೀರ್ಮಾನ ಮಾಡುವುದಿಲ್ಲ ಎಂದುಕೊಂಡಿದ್ದೇನೆ ಎಂದರು. ಇದನ್ನೂ ಓದಿ: ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಒಂದೇ ನಾಣ್ಯದ ಎರಡು ಮುಖಗಳ ರೀತಿ ಕೆಲಸ ಮಾಡಿದ್ದಾರೆ: ಸೋಮಣ್ಣ
ನಮ್ಮ ಡಿಮ್ಯಾಂಡ್ ಏನಿಲ್ಲ. ಹಲವಾರು ಸಮಸ್ಯೆ ಎದುರಿಸುತ್ತೇವೆ. ನಮ್ಮ ಮೊದಲ ಆದ್ಯತೆ ಹಲವಾರು ಸಮಸ್ಯೆಗಳಿಗೆ ಪರಿಹಾರ ಬೇಕು. ನಮ್ಮ ಪಕ್ಷದ ಪ್ರಮುಖ ಆಸಕ್ತಿ ಇರೋದು ರೈತರಿಗೆ ಸಹಾಯ ಮಾಡಬೇಕು ಅನ್ನೋದು. ನೋಡೋಣ ಏನು ತೀರ್ಮಾನ ಆಗುತ್ತೆ ಎಂದರು.
ರಾಜ್ಯದ ಹಿತದೃಷ್ಟಿಯಿಂದ ಏನು ಮಾಡಬೇಕೆಂದು ಬಿಜೆಪಿ ನಾಯಕರಿಗೆ ಗೊತ್ತಿದೆ. ಅದರ ಪ್ರಕಾರ ಸಚಿವ ಸ್ಥಾನ ನೀಡುವ ನಿರ್ಧಾರ ಆಗಲಿದೆ. ಇಂಡಿಯಾ ಮೈತ್ರಿಕೂಟ ದೇಶಕ್ಕೆ ಒಳ್ಳೆಯದಲ್ಲ. ದೇಶದ ಅಭಿವೃದ್ಧಿಗೆ ಇಂಡಿಯಾ ಮೈತ್ರಿಕೂಟದಿಂದ ಅನುಕೂಲ ಇಲ್ಲ ಎಂದು ಹೇಳಿದರು.
– 3ನೇ ಅವಧಿ ಕಠಿಣ ನಿರ್ಧಾರಗಳ ಹೊಸ ಅಧ್ಯಾಯ ಬರೆಯಲಿದೆ: ನಮೋ
ನವದೆಹಲಿ: ಎರಡು ಅವಧಿಯಲ್ಲೂ ದೇಶದ ಜನತೆಯಲ್ಲಿ ವಿಶ್ವಾಸ ಮೂಡಿಸಿದೆವು. ಈಗ ಮೂರನೇ ಬಾರಿ ಎನ್‌ಡಿಎಗೆ ಆಶೀರ್ವಾದ ಸಿಕ್ಕಿದೆ. ಇದಕ್ಕಾಗಿ ನಾನು ತಲೆ ಬಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಕೃತಜ್ಞತೆ ಸಲ್ಲಿಸಿದರು.
ಫಲಿತಾಂಶದ ಬಳಿಕ ಬಿಜೆಪಿ ಕಚೇರಿಯಲ್ಲಿ ಇಂದು ಪಕ್ಷದ ಕಾರ್ಯಕರ್ತರು ಹಾಗೂ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಈ ಪ್ರೀತಿ, ಈ ಆಶೀರ್ವಾದಕ್ಕಾಗಿ ನಾನು ದೇಶದ ಜನರಿಗೆ ಋಣಿ. ಇಂದು ಮಂಗಳಕರ ದಿನ, ಈ ಪಾವನ ದಿನದಂದು ಮೂರನೇ ಬಾರಿ ಸರ್ಕಾರ ರಚನೆಗೆ ತಯಾರಿದೆ. ನಾವೆಲ್ಲರೂ ಜನರಿಗೆ ಅಭಾರಿಯಾಗಿದ್ದೇವೆ. ದೇಶದ ಜನರು ಬಿಜೆಪಿ, ಎನ್‌ಡಿಎ ಮೇಲೆ ಪೂರ್ಣ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ವಿಜಯ ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ಜಯ. ಇದು ವಿಕಸಿತ ಭಾರತದ ಜಯ. ಇದು ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌ಗೆ ಸಿಕ್ಕ ಜಯ. 140 ಕೋಟಿ ಜನರ ಗೆಲುವಾಗಿದೆ ಎಂದು ನಮಿಸಿದರು. ಇದನ್ನೂ ಓದಿ: ಕೊಟ್ಟ ಗ್ಯಾರಂಟಿಗಳನ್ನು ಪೂರೈಸುತ್ತೇವೆ – ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ರಾಗಾ ಭರವಸೆ
ನಾನು ಚುನಾವಣಾ ಆಯೋಗಕ್ಕೂ ಅಭಿನಂಧನೆ ಸಲ್ಲಿಸುತ್ತೇನೆ. ವಿಶ್ವದ ದೊಡ್ಡ ಚುನಾವಣೆಯನ್ನು ಅಚ್ಚುಕಟ್ಟಾಗಿ ಮಾಡಿದೆ. ನೂರು ಕೋಟಿ ಮತದಾರರು, 11 ಕೋಟಿ ಬೂತ್, 55 ವೋಟಿಂಗ್ ಮಷಿನ್, ತೀವ್ರ ಬಿಸಿಲಿನ ನಡುವೆ ಕರ್ತವ್ಯ ನಿಭಾಯಿಸಿದ್ದಾರೆ. ಭದ್ರತಾ ಪಡೆಗಳು ನಿಷ್ಠೆಯಿಂದ ಕೆಲಸ ಮಾಡಿವೆ. ಚುನಾವಣೆಯ ಪೂರ್ಣ ವ್ಯವಸ್ಥೆ, ಎಲ್ಲ ಭಾರತೀಯರಿಗೆ ಹೆಮ್ಮೆ ಪಡುವ ಸಂಗತಿ. ಇದಕ್ಕೆ ವಿಶ್ವದಲ್ಲಿ ಮತ್ತೇಲ್ಲಿ ಉದಾಹರಣೆ ಇಲ್ಲ ಎಂದು ಸ್ಮರಿಸಿದರು.
ಜಮ್ಮು ಕಾಶ್ಮೀರದ ಮತದಾರರು ದಾಖಲೆಯ ಮತದಾನದ ಮೂಲಕ ಉತ್ಸಾಹ ತೋರಿದ್ದಾರೆ. ಈ ವಿಜಯದ ದಿನದಂದು ದೇಶದ ಜನರಿಗೆ, ಎಲ್ಲ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸುತ್ತೇನೆ. 1962 ನಂತರ ಯಾವುದೇ ಪಕ್ಷ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಮೊದಲ ಬಾರಿಗೆ ಎರಡು ಅವಧಿಯ ಬಳಿಕ ಮೂರನೇ ಬಾರಿಗೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ವಿಧಾನಸಭೆ ಚುನಾವಣೆಗಳಲ್ಲಿ ಎನ್‌ಡಿಎಗೆ ಭವ್ಯ ವಿಜಯ ಸಿಕ್ಕಿದೆ. ಅರುಣಾಚಲ, ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂನಲ್ಲಿ ಕಾಂಗ್ರೆಸ್ ನಾಶವಾಗಿದೆ. ಅವರಿಗೆ ಠೇವಣಿ ಪಡೆಯುವುದು ಕಷ್ಟವಾಗಿದೆ. ಬಿಜೆಪಿ ಒಡಿಶಾದಲ್ಲಿ ಸರ್ಕಾರ ಮಾಡುತ್ತಿದೆ. ಜಗನ್ನಾಥನ ಕೃಪೆಯಿಂದ ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಕೇರಳದಲ್ಲಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದೇವೆ. ಕೇರಳದಲ್ಲಿ ಸೇವೆ ಜೊತೆಗೆ ನಮ್ಮ ಕಾರ್ಯಕರ್ತರು ಸಂಘರ್ಷ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಇದು ಮೋದಿ ವಿರುದ್ಧದ ಸ್ಪಷ್ಟ ಜನಾದೇಶ: ಫಲಿತಾಂಶದ ಬಗ್ಗೆ ಖರ್ಗೆ ಮಾತು
ತೆಲಂಗಾಣದಲ್ಲಿ ನಮ್ಮ ಸಂಖ್ಯೆ ದ್ವಿಗುಣವಾಗಿದೆ. ಛತ್ತೀಸಗಢ, ದೆಹಲಿ, ಹಿಮಾಚಲ, ಮಧ್ಯಪ್ರದೇಶ ಸೇರಿದಂತೆ ಹಲವು ಕಡೆ ಕ್ಲೀನ್ ಸ್ವೀಪ್ ಮಾಡಿದೆ. ವಿಧಾನಸಭೆ ಮತದಾರರಿಗೂ ವಿಶೇಷ ಧನ್ಯವಾದಗಳು. ನಿಮ್ಮ ವಿಶ್ವಾಸಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ. ನಾನು ಭರವಸೆ ನೀಡುತ್ತೇನೆ. ಆಂಧ್ರಪ್ರದೇಶ, ಬಿಹಾರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ದೇಶ ನಿರಾಸೆಯಲ್ಲಿ ಮುಳುಗಿತ್ತು. ಪ್ರತಿದಿನ ಪತ್ರಿಕೆ ಭ್ರಷ್ಟಾಚಾರದಿಂದ ತುಂಬಿತ್ತು. ನಮ್ಮ ಸರ್ಕಾರ ವಿಶ್ವಾಸ ಮೂಡಿಸುವ ಕೆಲಸ ಮಾಡಿತು. ನಿಯತ್ತಿನಿಂದ ನಾವು ಕೆಲಸ ಮಾಡಿದೆವು. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದೆವು. ಎರಡನೇ ಅವಧಿಯೂ ವಿಶ್ವಾಸ ಮೂಡಿಸಿದೆವು. ಈಗ ಮೂರನೇ ಬಾರಿ ಎನ್‌ಡಿಎಗೆ ಆಶೀರ್ವಾದ ಸಿಕ್ಕಿದೆ. ಇದಕ್ಕಾಗಿ ನಾನು ತಲೆ ಬಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ನನ್ನ ತಾಯಿ ಹೋದ ಮೇಲೆ ಇದು ಮೊದಲ ಚುನಾವಣೆ. ನಾನು ಹೋದ ಕಡೆಯೆಲ್ಲಾ ನನಗೆ ತಾಯಂದಿರಿಗೇನು ಕಮ್ಮಿ ಇರಲಿಲ್ಲ. ತಾಯಂದಿರು, ಸಹೋದರಿಯರು ಅಭೂತಪೂರ್ವವಾದ ಪ್ರೀತಿಯನ್ನು ನೀಡಿದರು. ಮಹಿಳೆಯರು ಎಲ್ಲಾ ದಾಖಲೆ ಮೀರಿ ಮತದಾನ ಮಾಡಿದರು. ಇದನ್ನ ಶಬ್ದದಲ್ಲಿ ಹೇಳಲು ಸಾಧ್ಯವಿಲ್ಲ. ದೇಶದಲ್ಲಿ ಕೋಟಿ ಕೋಟಿ ತಾಯಂದಿರಿರುವ ಹೊಸ ಪ್ರೇರಣೆ ನೀಡಿದ್ದಾರೆ ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಆಡಳಿತಾರೂಢ ವೈಎಸ್‌ಆರ್‌ಸಿಪಿ ಧೂಳಿಪಟ – ಟಿಡಿಪಿ ತೆಕ್ಕೆಗೆ ಆಂಧ್ರ
ನಮ್ಮ ಮುಂದೆ ವಿಕಸಿತ ಭಾರತದ ದೊಡ್ಡ ಸಂಕಲ್ಪ ಇದೆ. ನಮಗೆ ಮೂರನೇ ಬಾರಿಗೆ ನಮ್ಮ ಸಂಕಲ್ಪಕ್ಕೆ ಪ್ರೇರಣೆ ನೀಡಿದ್ದಾರೆ. ಬಿಜೆಪಿ ಗಳಿಸಿದಷ್ಟು ಸ್ಥಾನಗಳನ್ನು ನಮ್ಮ ವಿರೋಧಿಗಳು ಒಂದಾದರೂ ಆ ಪ್ರಮಾಣದ ಸ್ಥಾನಗಳನ್ನು ಗಳಿಸಿಲ್ಲ. ನಿಮ್ಮ ಶ್ರಮ ನನಗೆ ನಿರಂತರ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ನೀವೂ ಎರಡು ಹೆಜ್ಜೆ ಇಟ್ಟರೆ ನಾನು ನಾಲ್ಕು ಹೆಜ್ಜೆ ಇಡುತ್ತೇನೆ. ದೇಶವನ್ನು ಮುಂದೆ ನಡೆಸೋಣ. ಮೂರನೇ ಅವಧಿ ಕಠಿಣ ನಿರ್ಧಾರಗಳ ಹೊಸ ಅಧ್ಯಾಯ ಬರೆಯಲಿದೆ. ಎಲ್ಲ ವರ್ಗಗಳ ಅಭಿವೃದ್ಧಿಯಾಗಲಿದೆ. ಎಸ್ಸಿ-ಎಸ್ಟಿ, ಒಬಿಸಿ ಸಮುದಾಯದ ಅಭಿವೃದ್ಧಿಯಾಗಲಿದೆ ಎಂದು ಭರವಸೆ ನೀಡಿದರು.
ನಮ್ಮ ರಕ್ಷಣಾ ಇಲಾಖೆ ಎಲ್ಲಿವರೆಗೆ ಸ್ವಾವಲಂಬಿಯಾಗುವುದಿಲ್ಲವೋ ಅಲ್ಲಿವರೆಗೂ ನಿಲ್ಲುವುದಿಲ್ಲ. ಪ್ರತಿ ಕ್ಷೇತ್ರವನ್ನು ಆತ್ಮನಿರ್ಭರ ಮಾಡಲಿದ್ದೇವೆ. ಮುಂದಿನ ಅವಧಿ ಹಸಿರು ಶಕ್ತಿ ಕಾಲ, ಇದಕ್ಕೆ ಆದ್ಯತೆ ನೀಡಲಿದ್ದೇವೆ. ಇಂದಿನ ಭಾರತ ವಿಶ್ವದ ಭಾಗವಾಗಿದೆ. ಕೊರೊನಾ ಅವಧಿಯಲ್ಲಿ ವ್ಯಾಕ್ಸಿನ್ ಮೂಲಕ ವಿಶ್ವಕ್ಕೆ ನೆರವು ನೀಡಿತು ಭಾರತ. ಕೆಲಸ ಮಾಡುವುದು ನಮ್ಮ ಜವಾಬ್ದಾರಿ ಎಂದು ಭಾವಿಸಿದ್ದೇವೆ. ಭ್ರಷ್ಟಾಚಾರದ ವಿರುದ್ಧ ವೇಗವಾಗಿ ಪ್ರಹಾರ ಮಾಡಬೇಕಿದೆ. ಡಿಜಿಟಲ್ ಇಂಡಿಯಾ ಭ್ರಷ್ಟಾಚಾರವನ್ನು ತಡೆದಿದೆ. ಭ್ರಷ್ಟಾಚಾರ ವಿರುದ್ಧದ ಕ್ರಮ ದಿನದಿಂದ ದಿನಕ್ಕೆ ಕಠಿಣವಾಗುತ್ತಿದೆ. ಸೇವಾ ಭಾವನೆಯ ಮುಂದೆ ರಾಜಕೀಯ ಏನು ಅಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಒಡಿಶಾದಲ್ಲಿ ಬಿಜೆಡಿ ಕೋಟೆ ಛಿದ್ರ – ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ
ಬೆಂಗಳೂರು: ಲೋಕಸಭಾ ಚುನಾವಣೆಯ ಬೆಂಗಳೂರು ದಕ್ಷಿಣ (Bengaluru South) ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಹಾಲಿ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಮತ್ತೊಮ್ಮೆ ಗೆದ್ದು ಬೀಗಿದ್ದಾರೆ.
ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ (Sowmya Reddy) ವಿರುದ್ಧ 2,77,083 ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಸೂರ್ಯ ಅವರು ಎರಡನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ.
ಈ ಬಾರಿಯ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ (Tejasvi Surya) ಅವರಿಗೆ 7,50,830 ಮತಗಳು ಬಿದ್ದಿದೆ. ವಿಧಾನಸಭೆ ಸೋಲಿನ ಬಳಿಕ ಲೋಕಸಭೆಯಲ್ಲಿ ಗೆಲುವಿನ ನಿರೀಕ್ಷೆಯಲಿದ್ದ ಸೌಮ್ಯಾ ರೆಡ್ಡಿಯವರು 4,73,747 ಮತಗಳನ್ನು ಪಡೆಯುವ ಮೂಲಕ ಮತ್ತೊಮ್ಮೆ ಸೋಲಿನ ರುಚಿ ಕಂಡಿದ್ದಾರೆ. ಇನ್ನು 7830 ಮತಗಳು ನೋಟಾ ಚಲಾವಣೆಯಾಗಿದೆ.
ಕಳೆದ ಮೂರು ದಶಕಗಳಿಂದ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿ ಉಳಿದಿದೆ. ಮುಖ್ಯವಾಗಿ ಇದು ದಿ. ಅನಂತ್ ಕುಮಾರ್ ಅವರ ಭದ್ರಕೋಟೆಯಾಗಿತ್ತು. 2019ರ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ ಅವರಿಗೆ 7,39,229 ಮತಗಳು ಬಿದ್ದಿದ್ದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಬಿ.ಕೆ ಹರಿಪ್ರಸಾದ್ ಅವರು 4,08,037 ಮತಗಳನ್ನು ಪಡೆದು 3 ಲಕ್ಷಕ್ಕೂ ಅಧಿಕ ಮತಗಳ ಅಂತರದ ಸೋಲು ಅನುಭವಿಸಿದ್ದರು.
ಬೆಂಗಳೂರು: ಈ ಚುನಾವಣೆಯಿಂದ ರಾಹುಲ್ ಗಾಂಧಿ (Rahul Gandhi) ಅವರ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ಆದ್ರೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನ (Bengaluru) ಗೃಹಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಮತದಾರರಿಗೆ ಧನ್ಯವಾದ ಸಲ್ಲಿಸಿದರು. ಜೊತೆಗೆ ರಾಜ್ಯದಲ್ಲಿ ಚುನಾವಣೆ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ ಅಧಿಕಾರಿಗಳು ಮತ್ತು ರಾಜ್ಯದ ಎಲ್ಲ ಸಂಸತ್ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.
ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ (Congress) ನಿರೀಕ್ಷೆ ಮಾಡಿದ ಸ್ಥಾನಗಳನ್ನು ಗೆಲ್ಲಲು ಆಗಲಿಲ್ಲ. 15-20 ಸ್ಥಾನಗಳಲ್ಲಿ ಗೆಲ್ಲುವ ಲೆಕ್ಕಾಚಾರ ಇತ್ತು. ನಮ್ಮ ಲೆಕ್ಕಾಚಾರದಂತೆ ಆಗಲಿಲ್ಲ. ಆದರೆ 2019 ರಲ್ಲಿ ನಾವು ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ವೋಟಿಂಗ್ ಶೇರ್ ಸಹ ನಮಗೆ 45.34% ಬಂದಿದೆ. ಬಿಜೆಪಿಗೆ 46.04% ವೋಟ್ ಶೇರ್ ಬಂದಿದೆ. 2019ರಲ್ಲಿ ಅವರಿಗೆ 51.38%, ನಮಗೆ 31.88% ಬಂದಿತ್ತು. ಈ ಬಾರಿ ನಮ್ಮ ವೋಟ್ ಶೇರ್ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ (BJP JDA Alliance) ವೋಟ್ ಶೇರ್ ಕಡಿಮೆ ಬಂದಿದೆ. ಜೆಡಿಎಸ್ 5.72% ವೋಟ್ ಶೇರ್ ಪಡೆದಿದೆ. ಕಳೆದ ಸಲ ಜೆಡಿಎಸ್‌ಗೆ 9.67% ವೋಟ್ ಶೇರ್ ಸಿಕ್ಕಿತ್ತು ಎಂದು ವಿವರಿಸಿದರು.
ಮೋದಿ ಜನಪ್ರಿಯತೆ ಕುಗ್ಗಿದೆ:
ಬಿಜೆಪಿ ಅಧಿಕಾರದಲ್ಲಿದೆ ಅಂತ ಮೋದಿ ಅವರ ಮುಖ ನೋಡಿ ಮತ ಕೇಳುತ್ತಿದ್ದರು. 2019ರಲ್ಲಿ ಬಿಜೆಪಿಗೆ 303 ಸ್ಥಾನ ಬಂದಿತ್ತು. 2014ರಲ್ಲಿ 282 ಸ್ಥಾನ ಪಡೆದಿತ್ತು. ಈ ಸಲ 246 ಸ್ಥಾನಗಳನ್ನ ಬಿಜೆಪಿಗೆ ಗೆದ್ದಿದೆ. ಅಂದ್ರೆ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಎಲ್ಲಿಯೂ ಮೋದಿ ಅಲೆ ಇಲ್ಲ. ಮೋದಿ ಜನಪ್ರಿಯತೆ ಕುಗ್ಗಿದೆ ಅನ್ನೋದು ಫಲಿತಾಂಶ ನೋಡಿದಾಗ ಸ್ಪಷ್ಟವಾಗುತ್ತದೆ. ಸರ್ಕಾರ ಅವರು ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಬಹುಮತ ಬಿಜೆಪಿಗೆ ಬಂದಿಲ್ಲ ಎಂದು ಒತ್ತಿ ಹೇಳಿದರು.
ದೇಶದಲ್ಲಿ ಮೋದಿ ಅಲೆ ಇಲ್ಲ ಅನ್ನೋದು ಗೊತ್ತಾಗಿಯೇ ಅವರು ಕೊನೆಕೊನೆಗೆ ಧರ್ಮ, ಜಾತಿ ಹೆಸರಲ್ಲಿ ಮತ ಕೇಳಲು ಶುರು ಮಾಡಿದರು. ಮುಸ್ಲಿಮರ ವಿರುದ್ಧ ನೇರ ವಾಗ್ದಾಳಿ ನಡೆಸಲು ಶುರು ಮಾಡಿದರು. ಸೋಲ್ತೀವಿ ಅಂತ ಗೊತ್ತಾಗಿಯೇ ಮೋದಿ ಇದೆಲ್ಲವನ್ನ ಮಾಡಿದರು. ಇದ್ಯಾವುದೂ ಕೈಗೂಡಲಿಲ್ಲ. ಕೋಮುವಾದ ಸುಳ್ಳುಗಳ ಮೇಲೆ ಮತ ಕೇಳಿದ್ದು ವರ್ಕೌಟ್ ಆಗಲಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಗೆ ದೊಡ್ಡ ಹಿನ್ನಡೆ:
ಒಟ್ಟಾರೆಯಾಗಿ ಈ ಚುನಾವಣೆಯಿಂದ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿ ಅವರ ಪಾದಯಾತ್ರೆ, ಭಾರತ್ ಜೋಡೋ ಯಾತ್ರೆ, ನ್ಯಾಯ್ ಯಾತ್ರೆಗಳು ಕೈ ಹಿಡಿದಿವೆ. ಹಾಗಾಗಿಯೇ ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸ್ಥಾನ ಬಂದಿವೆ. ಅದಕ್ಕಾಗಿ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿರುವ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಅಂತಿಮ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಅಭ್ಯರ್ಥಿ ಪಿ.ಸಿ ಗದ್ದಿಗೌಡರ್ (P. C. Gaddigoudar) ಅವರು ಗೆಲುವು ಸಾಧಿಸಿದ್ದು, ಈ ಮೂಲಕ 5ನೇ ಬಾರಿ ಗೆಲುವಿನ ಗದ್ದುಗೆ ಏರಿದ್ದಾರೆ.
ಲಿಂಗಾಯತ ಸಮುದಾಯದ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಲಿಂಗಾಯತ ಅಭ್ಯರ್ಥಿಗಳೇ ಅಖಾಡದಲ್ಲಿದ್ದರು. ಹೀಗಾಗಿ ಪೈಪೋಟಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಪಿಸಿ ಗದ್ದಿಗೌಡರ್ ಅವರು ಸ್ಪರ್ಧಿಸಿದರೆ, ಇತ್ತ ಕಾಂಗ್ರೆಸ್‍ನಿಂದ ಮೊದಲ ಬಾರಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ (Samyukta Patil) ಅದೃಷ್ಟ ಪರೀಕ್ಷೆಗೆ ಇಳಿದು ಸೋತಿದ್ದಾರೆ.
ಗದ್ದಿಗೌಡರ್ ಅವರು ಸಂಯುಕ್ತಾ ಪಾಟೀಲ್ ವಿರುದ್ಧ 6,83,99 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಗದ್ದಿಗೌಡರಿಗೆ 6,71,039 ಮತಗಳು ಬಿದ್ದರೆ, ಸಂಯುಕ್ತಾ ಪಾಟೀಲ್ ಅವರು 6,02,640 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಸಂಯುಕ್ತಾ ಪಾಟೀಲ್ ಅವರು ಮೊದಲ ಪ್ರಯತ್ನದಲ್ಲಿ ಸಂಸತ್ ಪ್ರವೇಶಿಸಲು ವಿಫಲರಾದರು.
ಕಳೆದ ಚುನಾವಣೆಯಲ್ಲಿ ಏನಾಗಿತ್ತು?: 2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಪಿ.ಸಿ.ಗದ್ದಿಗೌಡರ್ 1,68,187 ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ನಾಲ್ಕನೆಯ ಬಾರಿ ಸಂಸದರಾಗಿ ಆಯ್ಕೆಯಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಭಾರೀ ಅಂತರದ ಸೋಲು ಅನುಭವಿಸಿದರು. ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಬಿಜೆಪಿ ಅಭ್ಯರ್ಥಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.