Tag: ಲೋಕಸಭಾ ಚುನಾವಣೆ 2019

  • ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

    ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

    ಬೆಂಗಳೂರು: ಕಳೆದ ಒಂದು ವಾರದಿಂದ ಮೈತ್ರಿ ಸರ್ಕಾರದ ದೋಸ್ತಿಗಳಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಬಹಿರಂಗವಾಗಿ ಹೇಳಿಕೆಯನ್ನು ನೀಡಲಾರಂಭಿಸಿದ್ದಾರೆ. ಸಚಿವ ಜಿ.ಟಿ.ದೇವೇಗೌಡರು ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರೆ, ಮಾಜಿ ಸಿಎಂ ಸಿದ್ದರಾಮಯ್ಯ ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಪ್ರಯೋಜನವಿಲ್ಲ ಎಂದು ಹೇಳುವ ಪರೋಕ್ಷವಾಗಿ ತಿರುಗೇಟು ನೀಡಿದ್ದರು. ಪಂಚಕರ್ಮ ಚಿಕಿತ್ಸೆ ಬಳಿಕ ಸಿಎಂ ಕುಮಾರಸ್ವಾಮಿ ಹೊಸ ಹುಮ್ಮಸ್ಸಿನಲ್ಲಿ ದೋಸ್ತಿ ನಾಯಕರ ವಿರುದ್ಧವೇ ‘ಪಂಚ್‍ತಂತ್ರ’ದ ದಾಳ ಪ್ರಯೋಗಿಸಲು ಮುಂದಾಗಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಪಂಚ್‍ತಂತ್ರ 1:
    * ಸುಮಲತಾ ಜೊತೆ ಕಾಣಿಸಿಕೊಂಡ ಮಂಡ್ಯ ರೆಬೆಲ್ಸ್ ವಿರುದ್ಧ ಕ್ರಮಕ್ಕೆ ಆಗ್ರಹ
    * ಚಲುವರಾಯಸ್ವಾಮಿ ಮೇಲೆ ಕ್ರಮಗೊಳ್ಳಿ, ಆಮೇಲೆ ಮಾತಾಡಿ – ‘ಕೈ’ಗೆ ಒತ್ತಡ


    ಚಲುವರಾಯಸ್ವಾಮಿ ಅಂಡ್ ಟೀಮ್ ಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮೊದಲ ಪಂಚ್ ಕೊಡಲು ಸಿದ್ಧತೆ ನಡೆಸಿಕೊಂಡಿದ್ದಾರೆ. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಜೊತೆ ಸಭೆ ನಡೆಸಿದ ಚಲುವರಾಯಸ್ವಾಮಿ ಹಾಗೂ ಮಂಡ್ಯದ ಇತರೆ ಕಾಂಗ್ರೆಸ್ ನಾಯಕರು ಚುನಾವಣೆಯಲ್ಲಿ ಕೈ ಕೊಟ್ಟಿದ್ದಾರೆ. ಈಗ ಸುಮಲತಾ ಜೊತೆ ಬಹಿರಂಗವಾಗಿ ಕಾಣಿಸಿಕೊಂಡು ತಮ್ಮ ಬೆಂಬಲ ಯಾರಿಗೆ ಇತ್ತು ಎಂಬುದನ್ನು ಸಾಬೀತು ಪಡಿಸಿದ್ದಾರೆ. ಮೊದಲು ಅವರ ವಿರುದ್ಧ ಕ್ರಮ ಕೈಗೊಳ್ಳಿ ಆಮೇಲೆ ಮಾತನಾಡಿ ಎಂದು ಪಟ್ಟು ಹಿಡಿಯಲು ಸಿಎಂ ನಿರ್ಧರಿಸಿದ್ದಾರೆ ಎನ್ನಲಾಗಿದೆ.

    ಪಂಚ್‍ತಂತ್ರ 2:
    * ಮಾಜಿ ಸಿಎಂ ಸಿದ್ದರಾಮಯ್ಯರನ್ನು ನಿಯಂತ್ರಣದಲ್ಲಿಡಿ
    * ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂತ್ರ
    ಮಂಡ್ಯ ಬೆಳವಣಿಗೆ, ಶಾಸಕರ ಪ್ರತ್ಯೇಕ ಸಭೆಯ ಯತ್ನ ಇದೆಲ್ಲದರ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದಾರೆ ಎನ್ನುವುದು ಕುಮಾರಸ್ವಾಮಿಯವರ ಅನುಮಾನ. ಸಹಜವಾಗಿಯೆ ಮೈತ್ರಿ ಗಟ್ಟಿಯಾಗಬೇಕಾದರೆ ಸಿದ್ದರಾಮಯ್ಯರನ್ನ ನಿಯಂತ್ರಣದಲ್ಲಿ ಇಡಿ ಎಂಬ ದೂರನ್ನ ಕಾಂಗ್ರೆಸ್ ಹೈಕಮಾಂಡ್ ಗೆ ತಲುಪಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

    ಪಂಚ್‍ತಂತ್ರ 3:
    * ಮೈತ್ರಿ ಸರ್ಕಾರ ಉಳಿಸಿಕೊಳ್ಳಬೇಕು ಎಂಬುದು ನಮ್ಮ ನಿಲುವು.
    * ಮುನ್ನೆಚ್ಚರಿಕೆ ಕ್ರಮವಾಗಿ ಕಾಂಗ್ರೆಸ್ ಅಸಹಕಾರದ ಬಗ್ಗೆ ದೂರು
    ರಾಜ್ಯ ಕಾಂಗ್ರೆಸ್ ನಾಯಕರುಗಳು ಲೋಕಸಭಾ ಫಲಿತಾಂಶದ ನಂತರ ಹೇಗೆ ನಡೆದುಕೊಳ್ಳುತ್ತಾರೆ ಅಂತ ಹೇಳೋದು ಕಷ್ಟ. ಆದ್ದರಿಂದ ಫಲಿತಾಂಶಕ್ಕೂ ಮುನ್ನವೇ ರಾಜ್ಯ ಕಾಂಗ್ರೆಸ್ ನಾಯಕರುಗಳ ವರ್ತನೆ ಬಗ್ಗೆ ಕಾಂಗ್ರೆಸ್ ಹೈ ಕಮಾಂಡ್ ಗೆ ದೂರು ನೀಡಲು ನಿರ್ಧಾರ. ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಮೈತ್ರಿ ಸೂತ್ರ ಪಾಲಿಸಿದ್ರು? ಎಷ್ಟರ ಮಟ್ಟಿಗೆ ಅಸಹಕಾರ ತೋರಿದ್ರು? ಎಲ್ಲಿ ಏನೇನು ಸಮಸ್ಯೆ ಆಯ್ತು ಅನ್ನೋದನ್ನ ವಿವರವಾಗಿ ಕಾಂಗ್ರೆಸ್ ಹೈ ಕಮಾಂಡ್‍ಗೆ ದೂರು ನೀಡಲು ಸಿಎಂ ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಪಂಚತಂತ್ರ 4:
    * ಕಾಂಗ್ರೆಸ್ ಶಾಸಕರ ಒಗ್ಗಟ್ಟು ಮುರಿಯುವುದು.
    * ಸಿದ್ದರಾಮಯ್ಯ ಗ್ಯಾಂಗ್ ಕಡೆಗಣಿಸಿ, ಉಳಿದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು.
    ಸಮಾನ ಮನಸ್ಕ ಶಾಸಕರ ಹೆಸರಲ್ಲಿ ಮೈತ್ರಿ ಸರ್ಕಾರದ ವಿರುದ್ಧ ಧ್ವನಿ ಎತ್ತಲು ಮುಂದಾದ ಶಾಸಕರ ಒಗ್ಗಟ್ಟನ್ನ ಮುರಿಯುವುದು. ಎಸ್.ಟಿ.ಸೋಮಶೇಖರ್, ಬೈರತಿ ಬ್ರದರ್ಸ್, ಆನೇಕಲ್ ಶಿವಣ್ಣ, ಅಖಂಡ ಶ್ರೀನಿವಾಸ ಮೂರ್ತಿಯಂತವರನ್ನ ಕಡೆಗಣಿಸಿ ಬಿಸಿ ಮುಟ್ಟಿಸುವುದು. ಇದೇ ವೇಳೆ ಅಜಯ್ ಸಿಂಗ್, ಮುನಿರತ್ನ, ಹ್ಯಾರಿಸ್, ಶಿವರಾಮ ಹೆಬ್ಬಾರ್‍ರಂತಹ ಶಾಸಕರನ್ನ ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಕಾರ್ಯ ಮಾಡಿಸಿಕೊಡುವುದು.

    ಪಂಚ್‍ತಂತ್ರ 5:
    * ‘ಕೈ’ ವಿರುದ್ಧ ಪ್ರತಿದಾಳಿ ಮೂಲಕ ವಿವಾದದ ಕಾವು ಉಳಿಸಿಕೊಳ್ಳುವುದು.
    * ‘ಲೋಕ’ ಅಸಹಕಾರದ ಮೂಲಕ ಕಾಂಗ್ರೆಸ್ ಮೈತ್ರಿ ಧರ್ಮ ಪಾಲಿಸ್ತಿಲ್ಲ ಎಂದು ಬಿಂಬಿಸುವುದು
    ಎಲ್ಲದಕ್ಕಿಂತ ಮುಖ್ಯವಾಗಿ ಸಿಎಂ ಬತ್ತಳಿಕೆಯಲ್ಲಿರುವ ಇನ್ನೊಂದು ಅಸ್ತ್ರವೆಂದರೆ ಎದ್ದಿರುವ ವಿವಾದದ ಕಾವನ್ನ ಹಾಗೇ ಉಳಿಸಿಕೊಳ್ಳುವುದು. ಮಂಡ್ಯದಲ್ಲಿ ಕಾಂಗ್ರೆಸಿಗರು ಕೈ ಕೊಟ್ಟರು, ಮೈಸೂರಲ್ಲಿ ಜೆಡಿಎಸ್ ನ್ನ ವಿಶ್ವಾಸಕ್ಕೆ ತಗೆದುಕೊಳ್ಳಲಿಲ್ಲ ಎಂಬ ವಿವಾದದ ಕಾವು ತಣ್ಣಗಾಗದಂತೆ ನೋಡಿಕೊಂಡು ಪರಸ್ಪರ ಮಾತಿನ ದಾಳಿ ಪ್ರತಿದಾಳಿ ಮೂಲಕ ವಿವಾದದ ಕಾವು ಹೆಚ್ಚಿಸುವುದು. ಆ ಮೂಲಕ ಕಾಂಗ್ರೆಸ್ ನವರೇ ಮೈತ್ರಿಯಲ್ಲಿ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ಬಿಂಬಿಸುವುದು ಹೆಚ್ ಡಿಕೆ ಮಾಸ್ಟರ್ ಪ್ಲಾನ್ ಎನ್ನಲಾಗುತ್ತಿದೆ.

  • ಅಧಿಕಾರಕ್ಕೆ ಬರುತ್ತೇವೆಂದು ಹೇಳಿಕೊಳ್ಳಬಾರದೆಂದು ನಾಯಕರಿಗೆ ತಿಳಿಸಿದ್ದೇನೆ- ಬಿಎಸ್‍ವೈ

    ಅಧಿಕಾರಕ್ಕೆ ಬರುತ್ತೇವೆಂದು ಹೇಳಿಕೊಳ್ಳಬಾರದೆಂದು ನಾಯಕರಿಗೆ ತಿಳಿಸಿದ್ದೇನೆ- ಬಿಎಸ್‍ವೈ

    ಹುಬ್ಬಳ್ಳಿ: ನಾವು ಅಧಿಕಾರಕ್ಕೆ ಬರುತ್ತೇವೆ ಎಂಬುದಾಗಿ ಎಲ್ಲಿಯೂ ಹೇಳಿಕೊಳ್ಳಬಾರದು ಎಂದು ಬಿಜೆಪಿ ನಾಯಕರಿಗೆ ಈಗಾಗಲೇ ತಿಳಿಸಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 22 ಸ್ಥಾನ ಗೆದ್ದ ಮೇಲೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸ್ಥಿತಿ ಏನಾಗಲಿದೆ ಎಂದು ನಿವೇ ಯೋಚನೆ ಮಾಡಿ. ಅಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರಾಗಿ ನಾನು ಮುಂದುವರೆಯಲು ಸಾಧ್ಯವಿಲ್ಲ. ಹೀಗಾಗಿ ಆ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.

    ಕುಂದಗೋಳ ಚಿಂಚೋಳಿ ಜನ ಸರಿಯಾದ ಉತ್ತರ ಕೊಡುತ್ತಾರೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಗೆಲ್ಲಲಿದ್ದೇವೆ. ಕಾಂಗ್ರೆಸ್ ಹಣ ಬಲದ ಮೇಲೆ ಚುನಾವಣೆ ಗೆಲ್ಲಲು ಹೊರಟಿದೆ. ಬಿಜೆಪಿಯವರನ್ನ ಬಂಧಿಸಿ ಕಿರುಕುಳ ನೀಡುವ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ಮಾಡಲಿದೆ. ಗೃಹ ಸಚಿವರಾಗಿ ಅವರು ಅಧಿಕಾರ ದುರುಪಯೋಗ ಮಾಡಿಕೊಳ್ಳಬಾರದು ಎಂದು ತಿಳಿಸಿದರು.

    ಸಿಎಂ ರೈತರ ಸಾಲಮನ್ನ ಮಾಡುವ ಮಾತು ಹೇಳಿದ್ದರು. ಆದರೆ ಇದುವರೆಗೂ ಆಗಿಲ್ಲ. ಋಣಮುಕ್ತ ಪತ್ರ ಬರೆಯುವ ಮಾತು ಹೇಳಿದ್ದರು, ಈಗ ಸಾಂತ್ವನ ಪತ್ರ ಬರೆಯುತ್ತಾರಂತೆ. ಇದು ನಗೆಪಾಟಿಲಿಗೆ ಕಾರಣವಾಗಿದೆ ಎಂದರು.

    ಈ ದೇಶದ ಪ್ರಧಾನಿ ಬಗ್ಗೆ ಇಡೀ ಜಗತ್ತೇ ಗೌರವದಿಂದ ಕಾಣುತ್ತಿದೆ. ನಾವು ದೇಶದಲ್ಲಿ 280 ಕ್ಷೇತ್ರಗಳನ್ನು ಗೆಲ್ಲುತ್ತೇವೆ. ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ. ಮೋದಿ ಅವರ ಬಗ್ಗೆ ಕೇವಲ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲದೆ ಹಲವು ಜನರು ಹಗುರವಾಗಿ ಮಾತನಾಡುತ್ತಾರೆ. ಇದಕ್ಕೆ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದರು.

    ಸಾಲಮನ್ನಾ ನಾವು ಮಾಡಿದ್ದೇವೆ. ನಾನು ಈಗಲೇ ಏನೂ ಮಾತನಾಡಲ್ಲ. ಚುನಾವಣೆ ಫಲಿತಾಂಶ ನಂತರ ಮಾತನಾಡುವೆ. ಜನರ ವಿಶ್ವಾಸದಿಂದ ನಾವು ಚುನಾವಣೆಯಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿಎಸ್‍ವೈ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸಚಿವ ಅರುಣ್ ಜೇಟ್ಲಿ ಜೇಟ್ಲಿ ಮಾಡಿದ ಆರೋಪಕ್ಕೆ ಉತ್ತರ ನೀಡಲಿ ಎಂದು ಇದೇ ವೇಳೆ ಒತ್ತಾಯಿಸಿದರು.

  • ಸಾಧ್ವಿ ಪ್ರಜ್ಞಾ ಸಿಂಗ್ ಪ್ರಚಾರಕ್ಕೆ ನಿರ್ಬಂಧ ಹೇರಿದ ಚುನಾವಣೆ ಆಯೋಗ

    ಸಾಧ್ವಿ ಪ್ರಜ್ಞಾ ಸಿಂಗ್ ಪ್ರಚಾರಕ್ಕೆ ನಿರ್ಬಂಧ ಹೇರಿದ ಚುನಾವಣೆ ಆಯೋಗ

    ಭೋಪಾಲ್: ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದ ಪರಿಣಾಮ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಚುನಾವಣಾ ಆಯೋಗ 72 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ಹೇರಿದೆ.

    ಸಾಧ್ವಿ ಪ್ರಜ್ಞಾ ಸಿಂಗ್ ಅವರು ಮಾಜಿ ಐಪಿಎಸ್ ಅಧಿಕಾರಿ ಹೇಮಂತ್ ಕರ್ಕರೆ ವಿರುದ್ಧ ಮತ್ತು ಬಾಬ್ರಿ ಮಸೀದಿ ಧ್ವಂಸ ವಿಚಾರದ ಬಗ್ಗೆ ವಿವಾದತ್ಮಾಕ ಹೇಳಿಕೆ ನೀಡಿದರು. ಇದರಂತೆ ಪ್ರಜ್ಞಾರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಆಯೋಗ ಗುರುವಾರ ಬೆಳಗ್ಗೆ 6 ರಿಂದ ಮುಂದಿನ 72 ಗಂಟೆಗಳ ಕಾಲ ಪ್ರಚಾರ ಮಾಡದಂತೆ ನಿಷೇಧ ವಿಧಿಸಿದೆ.

    ಈ ನಿಷೇದ ಹೇರಿರುವ ಬಗ್ಗ ಪ್ರತಿಕ್ರಿಯೆ ನೀಡಿರುವ ಸಾಧ್ವಿ ಪ್ರಜ್ಞಾ ಸಿಂಗ್, ಇದರಿಂದ ಯಾವುದೇ ಸಮಸ್ಯೆ ಇಲ್ಲ ನಾನು ಚುನಾವಣಾ ಆಯೋಗಕ್ಕೆ ಗೌರವ ನೀಡುತ್ತೇನೆ ಎಂದು ಹೇಳಿದ್ದಾರೆ.

    2008 ರಲ್ಲಿ ನಡೆದ ಮಾಲೆಗಾಂವ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಆಗಿರುವ ಸಾಧ್ವಿ ಠಾಕೂರ್ ಅವರು, 2011 ರಲ್ಲಿ ಮುಂಬೈ ಭಯೋತ್ಪಾದಕರ ದಾಳಿಯಲ್ಲಿ ನಿಧನರಾದ ಮಾಜಿ ಭಯೋತ್ಪಾದಕ ನಿಗ್ರಹ ದಳ (ಎಟಿಎಸ್)ದ ಮುಖ್ಯಸ್ಥರಾದ ಹೇಮಂತ್ ಕರ್ಕರೆ ಅವರು ಮಾಡಿದ ಕರ್ಮಕ್ಕೆ ಅವರಿಗೆ ಆ ರೀತಿಯ ಸಾವು ಬಂತು ಎಂದು ಹೇಳಿಕೆ ನೀಡಿದ್ದರು. 1992 ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಮಾಡಿದವರಲ್ಲಿ ನಾನು ಒಬ್ಬಳು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ದಿಗ್ವಿಜಯ್ ಸಿಂಗ್‍ರನ್ನ ಭಯೋತ್ಪಾದಕ ಎಂದು ಕರೆದಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಆಯೋಗ ಸಾಧ್ವಿ ಅವರಿಗೆ ಮೂರನೇ ನೋಟಿಸ್ ಜಾರಿ ಮಾಡಿದೆ.

    48 ವರ್ಷದ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಭೋಪಾಲ್‍ನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.

  • ಕಲಬುರಗಿ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕದಲ್ಲಿ ಯಾರಿಗೆ ಎಷ್ಟು ಅಂತರದ ಗೆಲುವು?

    ಕಲಬುರಗಿ ಯಾರಿಗೆ? ದೋಸ್ತಿ, ಬಿಜೆಪಿ ಲೆಕ್ಕದಲ್ಲಿ ಯಾರಿಗೆ ಎಷ್ಟು ಅಂತರದ ಗೆಲುವು?

    – ಗುಪ್ತಚರ ವರದಿ ಏನ್ ಹೇಳುತ್ತೆ?

    ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಕಲಬುರಗಿ ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿ ಏರ್ಪಟ್ಟಿತ್ತು. ಸೋಲಿಲ್ಲದ ಸರದಾರ ಖ್ಯಾತಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲು ಕೈ ನಾಯಕ ಉಮೇಶ್ ಜಾಧವ್ ಅವರನ್ನೇ ಹೈಜಾಕ್ ಮಾಡಿಕೊಂಡು ಕಣಕ್ಕಿಳಿಸಿತ್ತು. ಹಾಗಾಗಿ ಮೊದಲಿಗಿಂತಲೂ ಈ ಬಾರಿ ಕಲಬುರಗಿ ಕ್ಷೇತ್ರ ಕೊಂಚ ದೇಶದ ಗಮನವನ್ನೇ ಸೆಳೆದಿತ್ತು.

    ಇದೀಗ ಕಾಂಗ್ರೆಸ್ ಮತ್ತು ಬಿಜೆಪಿ ಖಾಸಗಿ ಏಜೆನ್ಸಿ ಮುಖಾಂತರ ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇತ್ತ ರಾಜ್ಯ ಸರ್ಕಾರ ಗುಪ್ತಚರ ಇಲಾಖೆಯ ಸಮೀಕ್ಷೆ ಸಹ ತನ್ನ ವರದಿಯನ್ನು ಸಿಎಂ ಮುಂದೆ ನೀಡಿದೆ.

    ದೋಸ್ತಿ ಲೆಕ್ಕ: ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದು, ಅಫಜಲಪುರ ಹಾಗೂ ಜೇವರ್ಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ಉಮೇಶ್ ಜಾಧವ್ ಸಮಬಲದ ಮತ ಪಡೆಯುವ ಸಾಧ್ಯತೆಗಳಿವೆ ಎಂದು ದೋಸ್ತಿ ನಾಯಕರು ನಡೆಸಿರುವ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

    ಕಲಬುರಗಿ ದಕ್ಷಿಣದಲ್ಲಿ 3 ಸಾವಿರ, ಕಲಬುರಗಿ ಉತ್ತರದಲ್ಲಿ 25 ಸಾವಿರ, ಕಲಬುರಗಿ ಗ್ರಾಮಾಂತರದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಠಕಲ್ ನಲ್ಲಿ 3 ಸಾವಿರ, ಚಿತ್ತಾಪುರದಲ್ಲಿ 10 ಸಾವಿರ ಮುನ್ನಡೆ ಪಡೆದು ಒಟ್ಟು 70 ಸಾವಿರ ಮತಗಳ ಅಂತರದಲ್ಲಿ ಮಲ್ಲಿಕಾರ್ಜುನ ಖರ್ಗೆ 12ನೇ ಬಾರಿ(ವಿಧಾನಸಭಾ + ಲೋಕಸಭಾ ಸೇರಿ) ಗೆಲುವು ದಾಖಲಿಸುತ್ತಾರೆ ಎಂದು ದೋಸ್ತಿ ಸಮೀಕ್ಷೆ ಹೇಳಿದೆ.

    ಬಿಜೆಪಿ ಲೆಕ್ಕ: ಕಮಲ ನಾಯಕರು ನಡೆಸಿರುವ ಸಮೀಕ್ಷೆ ಪ್ರಕಾರ, ಕಲಬುರಗಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಉಮೇಶ್ ಜಾಧವ್ 5ರಲ್ಲಿ ಮುನ್ನಡೆ ಪಡೆದು ಗೆಲುವು ಕಾಣುತ್ತಾರೆ. ಉಳಿದ ಮೂರು ಕ್ಷೇತ್ರಗಳಾದ ಕಲಬುರಗಿ ಉತ್ತರದಲ್ಲಿ 20 ಸಾವಿರ, ಗುರುಮಿಠಕಲ್ ನಲ್ಲಿ 4 ಸಾವಿರ, ಚಿತ್ತಾಪುರದಲ್ಲಿ 5 ಸಾವಿರ ಲೀಡ್ ನಲ್ಲಿ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳುತ್ತಾರೆ ಎನ್ನುವ ವರದಿ ನೀಡಿದೆ.

    ಕಲಬುರಗಿ ದಕ್ಷಿಣದಲ್ಲಿ 10 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 10 ಸಾವಿರ, ಸೇಡಂನಲ್ಲಿ 10 ಸಾವಿರ, ಜೇವರ್ಗಿಯಲ್ಲಿ 10 ಸಾವಿರ ಮತ್ತು ಅಫಜಲಪುರದಲ್ಲಿ 12 ಸಾವಿರ ಮತಗಳ ಲೀಡ್ ಉಮೇಶ್ ಜಾಧವ್ ಪಡೆದುಕೊಂಡು ಕನಿಷ್ಠ 20 ಸಾವಿರ ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ಸಮೀಕ್ಷೆ ಹೇಳಿದೆ.

    ಗುಪ್ತಚರ ವರದಿ: ಗುಪ್ತಚರ ಇಲಾಖೆ ಮಲ್ಲಿಕಾರ್ಜುನ ಖರ್ಗೆಯವರ ಗೆಲುವು ನಿಶ್ಚಿತ ಎಂದು ಹೇಳಿದೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿನಲ್ಲಿ ಮೂರರಲ್ಲಿ ಉಮೇಶ್ ಜಾಧವ್ ಮತ್ತು 5ರಲ್ಲಿ ಮಲ್ಲಿಕಾರ್ಜುನ ಖರ್ಗೆ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.

    ಕಲಬುರಗಿ ದಕ್ಷಿಣದಲ್ಲಿ 5 ಸಾವಿರ, ಜೇವರ್ಗಿಯಲ್ಲಿ 7 ಸಾವಿರ, ಅಫಜಲಪುರದಲ್ಲಿ 8 ಸಾವಿರ ಮತಗಳ ಮುನ್ನಡೆಯನ್ನು ಉಮೇಶ್ ಜಾಧವ್ ಕಾಣಲಿದ್ದಾರೆ. ಉಳಿದಂತೆ ಮಲ್ಲಿಕಾರ್ಜುನ ಖರ್ಗೆ ಕಲಬುರಗಿ ದಕ್ಷಿಣದಲ್ಲಿ 15 ಸಾವಿರ, ಕಲಬುರಗಿ ಗ್ರಾಮೀಣದಲ್ಲಿ 5 ಸಾವಿರ, ಸೇಡಂನಲ್ಲಿ 10 ಸಾವಿರ, ಗುರುಮಿಠಕಲ್ ನಲ್ಲಿ 35 ಸಾವಿರ ಮತ್ತು ಚಿತ್ತಾಪುರದಲ್ಲಿ 10 ಸಾವಿರ ಮತಗಳ ಮುನ್ನಡೆ ಪಡೆದುಕೊಂಡು ಸುಮಾರು 55 ಸಾವಿರ ಲೀಡ್ ನಲ್ಲಿ ಸಂಸದೀಯ ನಾಯಕ 12ನೇ ಗೆಲುವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಎಂದು ಗುಪ್ತಚರ ವರದಿಯಲ್ಲಿ ತಿಳಿಸಿದೆ ಎಂಬ ಮಾಹಿತಿ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

  • ಶಿವಮೊಗ್ಗದಲ್ಲಿ ಗೆಲುವಿನ ಮಾಲೆ ಯಾರಿಗೆ? – ದೋಸ್ತಿ, ಬಿಜೆಪಿ ಲೆಕ್ಕ ರಿವೀಲ್

    ಶಿವಮೊಗ್ಗದಲ್ಲಿ ಗೆಲುವಿನ ಮಾಲೆ ಯಾರಿಗೆ? – ದೋಸ್ತಿ, ಬಿಜೆಪಿ ಲೆಕ್ಕ ರಿವೀಲ್

    – ಭಿನ್ನ ಉತ್ತರ ನೀಡಿತಾ ಗುಪ್ತಚರ ವರದಿ!

    ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಕೊನೆಗೊಂಡಿದ್ದು, ಅಭ್ಯರ್ಥಿಗಳ ಭವಿಷ್ಯ ಇವಿಎಂ ಯಂತ್ರದಲ್ಲಿ ಅಡಕವಾಗಿದೆ. ಆದ್ರೆ ಚುನಾವಣೋತ್ತರ ಸಮೀಕ್ಷೆಗಳು ಹೊರ ಬರುತ್ತಿವೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಸಹ ಖಾಸಗಿ ಏಜೆನ್ಸಿಗಳಿಂದ ಸರ್ವೆ ಮಾಡಿಸಿವೆ. ಈ ಮೂರು ಪಕ್ಷಗಳ ಸರ್ವೆ ಒಂದೆಡೆಯಾದ್ರೆ ರಾಜ್ಯ ಸರ್ಕಾರದ ಗುಪ್ತಚರ ಇಲಾಖೆ ಸಹ ತನ್ನ ಸಮೀಕ್ಷೆಯನ್ನು ನೀಡಿದೆ.

    ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸಿರುವ ಸಮೀಕ್ಷೆಗಳ ಅಂಕಿ ಅಂಶಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಮಾಜಿ ಸಿಎಂ ಪುತ್ರರಿಬ್ಬರಾದ ಬಿ.ವೈ.ರಾಘವೇಂದ್ರ ಮತ್ತು ಮಧು ಬಂಗಾರಪ್ಪ ಸ್ಪರ್ಧೆ ಮಾಡಿರುವ ಶಿವಮೊಗ್ಗ ಹೈ ವೋಲ್ಟೇಜ್ ಕಣವಾಗಿತ್ತು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಯಾರು ಮುನ್ನಡೆ ಸಾಧಿಸಲಿದ್ದಾರೆ ಎಂದು ದೋಸ್ತಿ ಲೆಕ್ಕ ಹೀಗಿದೆ.

    ದೋಸ್ತಿ ಲೆಕ್ಕ:
    ದೋಸ್ತಿ ಲೆಕ್ಕದ ಪ್ರಕಾರ ಶಿವಮೊಗ್ಗ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಲೀಡ್ ಕಾಯ್ದುಕೊಂಡಿದ್ದಾರೆ. ಶಿವಮೊಗ್ಗ ಗ್ರಾಮಾಂತರದಲ್ಲಿ 1,70,635 ಮತಗಳು ಚಲಾವಣೆಯಾಗಿವೆ. ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಧು ಬಂಗಾರಪ್ಪ 10 ರಿಂದ 15 ಸಾವಿರ ಮತಗಳ ಲೀಡ್ ಪಡೆದುಕೊಳ್ಳುತ್ತಿದ್ದಾರೆ ಎಂದು ದೋಸ್ತಿ ಲೆಕ್ಕ ಹೇಳುತ್ತಿದೆ. ಉಳಿದಂತೆ ಶಿವಮೊಗ್ಗ ನಗರದಲ್ಲಿ 5ರಿಂದ 10 ಸಾವಿರ, ತೀರ್ಥಹಳ್ಳಿಯಲ್ಲಿ 10 ಸಾವಿರ, ಶಿಕಾರಿಪುರದಲ್ಲಿ 5 ಸಾವಿರ, ಸೊರಬದಲ್ಲಿ 15 ಸಾವಿರ, ಸಾಗರದಲ್ಲಿ 15 ಸಾವಿರ, ಬೈಂದೂರಿನಲ್ಲಿ 10 ಸಾವಿರ ಮತ್ತು ಭದ್ರಾವತಿಯಲ್ಲಿ 25 ಸಾವಿರ ಅಂತರದಲ್ಲಿ ಮಧು ಬಂಗಾರಪ್ಪ ಗೆಲುವು ದಾಖಲಿಸಲಿದ್ದಾರೆ ದೋಸ್ತಿ ಸಮೀಕ್ಷೆ ಹೇಳುತ್ತಿದೆ. ಒಟ್ಟಾರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 75ರಿಂದ 1 ಲಕ್ಷಗಳ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ 75 ಸಾವಿರದಿಂದ 1 ಲಕ್ಷ ಮತಗಳ ಅಂತರದಲ್ಲಿ ಗೆಲುವು ಕಾಣುತ್ತಾರೆ ಎಂದು ದೋಸ್ತಿ ಲೆಕ್ಕ ಹೇಳುತ್ತಿದೆ.

    ಬಿಜೆಪಿ ಲೆಕ್ಕ:
    ಬಿಜೆಪಿ ಲೆಕ್ಕದ ಪ್ರಕಾರ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿ.ವೈ.ರಾಘವೇಂದ್ರ ಗೆಲುವಿನ ನಗೆ ಬೀರಲಿದ್ದಾರೆ ಎಂದು ಕಮಲ ಸರ್ವೆ ಹೇಳುತ್ತಿದೆ. ಶಿವಮೊಗ್ಗ ಗ್ರಾಮಾಂತರ 20 ಸಾವಿರ, ಭದ್ರಾವತಿ 10 ರಿಂದ 15 ಸಾವಿರ, ಶಿವಮೊಗ್ಗ ನಗರ 25 ಸಾವಿರ, ತೀರ್ಥಹಳ್ಳಿ 15 ರಿಂದ 20 ಸಾವಿರ, ಶಿಕಾರಿಪುರ 10 ರಿಂದ 15 ಸಾವಿರ, ಸೊರಬ 17 ರಿಂದ 20 ಸಾವಿರ, ಸಾಗರ 17 ರಿಂದ 20 ಸಾವಿರ, ಬೈಂದೂರು 10 ರಿಂದ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ರೆ ಒಟ್ಟಾರೆ 1 ರಿಂದ 1.5 ಲಕ್ಷ ಮತಗಳ ಅಂತರದಿಂದ ಬಿ.ವೈ.ರಾಘವೇಂದ್ರ ಗೆಲುವು ಕಾಣ್ತಾರೆ ಎಂದು ಬಿಜೆಪಿ ಸಮೀಕ್ಷೆ ಹೇಳುತ್ತಿದೆ.

    ಗುಪ್ತಚರ ವರದಿ: ರಾಜ್ಯ ಸರ್ಕಾರ ಗುಪ್ತಚರ ಇಲಾಖೆ ಮೈತ್ರಿ  ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವು ಕಾಣ್ತಾರೆ ಎಂದು ಹೇಳಿ ಕೆಲವು ಅಂಕಿ ಅಂಶಗಳನ್ನು ಸಿಎಂಗೆ ಒಪ್ಪಿಸಿದೆಯಂತೆ. ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಸೊರಬದಲ್ಲಿ ಮಧು ಬಂಗಾರಪ್ಪ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ. ಸಾಗರದಲ್ಲಿ ಎರಡೂ ಪಕ್ಷಗಳ ಸಮಬಲ ಸಾಧಿಸಲಿವೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಮೊಗ್ಗ ಗ್ರಾಮಾಂತರ 6 ಸಾವಿರ, ಭದ್ರಾವತಿ 5 ಸಾವಿರ, ಶಿವಮೊಗ್ಗ ನಗರ 12 ರಿಂದ 14 ಸಾವಿರ, ತೀರ್ಥಹಳ್ಳಿ 6 ರಿಂದ 7 ಸಾವಿರ, ಶಿಕಾರಿಪುರ 14 ಸಾವಿರ, ಬೈಂದೂರು 8 ರಿಂದ 10 ಸಾವಿರ ಮತಗಳ ಅಂತರದಲ್ಲಿ ಬಿ.ವೈ.ರಾಘವೇಂದ್ರ ಮುನ್ನಡೆ ಕಾಯ್ದುಕೊಂಡು ಅಂದಾಜು 50 ರಿಂದ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಗುಪ್ತಚರ ವರದಿ ತಿಳಿಸಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಸಿಎಂ ರಿಲ್ಯಾಕ್ಸ್ ಮೂಡ್ ಬದಲಿಸಿದ ಗುಪ್ತಚರ ವರದಿ!

    ಸಿಎಂ ರಿಲ್ಯಾಕ್ಸ್ ಮೂಡ್ ಬದಲಿಸಿದ ಗುಪ್ತಚರ ವರದಿ!

    ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಗೆಲುವಿನ ಸಾಧ್ಯತೆ ಹೆಚ್ಚಿದೆ ಎಂಬ ನಂಬಿಕೆಯಲ್ಲಿ ಸಿಎಂ ಕುಮಾರಸ್ವಾಮಿ ಸಮಾಧಾನದಿಂದ ಇದ್ದರು. ಆದರೆ, ಸಿಎಂ ಸಮಾಧಾನಕ್ಕೆ ಕೊಳ್ಳಿ ಇಡುವಂತ ವರದಿಯನ್ನು ಅವರದೇ ಸರ್ಕಾರದ ಸಂಸ್ಥೆಯಾದ ಗುಪ್ತಚರ ಇಲಾಖೆ ನೀಡಿದೆ. ಅಂದರೆ ಮಧು ಗೆಲವು ಅಷ್ಟು ಸಲೀಸಲ್ಲ, ಬಿಜೆಪಿಯ ರಾಘವೇಂದ್ರ ಗೆಲುವಿನ ಹತ್ತಿರ ಇದ್ದಾರೆ ಎಂಬ ವರದಿಯನ್ನು ಇಂಟಲಿಜೆನ್ಸ್ ವಿಭಾಗ ಸಿಎಂಗೆ ನೀಡಿದೆ ಎಂದು ತಿಳಿದು ಬಂದಿದೆ.

    ಗುಪ್ತಚರ ಇಲಾಖೆ ನೀಡಿದ ವರದಿಯಿಂದ ಸಮಾಧಾನಗೊಳ್ಳದ ಸಿಎಂ ಕುಮಾರಸ್ವಾಮಿ ಈಗ ಖಾಸಗಿ ಏಜೆನ್ಸಿಯೊಂದರ ಮೂಲಕ ಮತ್ತೊಮ್ಮೆ ಅಮೂಲಾಗ್ರವಾಗಿ ಸಮೀಕ್ಷೆ ನಡೆಸಿ ವರದಿ ಪಡೆಯಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ವರದಿ ಮೈತ್ರಿ ಅಭ್ಯರ್ಥಿಗೆ ವಿರುದ್ಧವಾಗಿದ್ದಲ್ಲಿ ಮುಂದೆ ಸಮ್ಮಿಶ್ರ ಸರ್ಕಾರದ ಮೇಲಾಗುವ ಪರಿಣಾಮಗಳು, ಅವುಗಳ ನಿರ್ವಹಣೆ ಬಗ್ಗೆ ಕುಮಾರಸ್ವಾಮಿ ಈಗಲೇ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಶಿವಮೊಗ್ಗ ಫಲಿತಾಂಶ ನೇರವಾಗಿ ಮುಖ್ಯಮಂತ್ರಿ ಗಾದಿಗೇ ತೊಂದರೆ ತಂದೊಡ್ಡುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರಿಲಾಕ್ಸ್ ಗಾಗಿ ರೆಸಾರ್ಟ್ ತಲುಪಿರುವ ಕುಮಾರಸ್ವಾಮಿ ಅವರ ದೇಹ ಅಲ್ಲಿದ್ರೆ, ಮನಸ್ಸು ಇನ್ನೆಲ್ಲೋ ಇದೆ ಎಂಬಂತಾಗಿದೆ. ಫಲಿತಾಂಶದ ಹೊರತಾಗಿ ಸಿಎಂ ತಲೆಯಲ್ಲಿ ಬೇರೆ ಯಾವ ಚಿಂತನೆಯೂ ಬರಲು ಸಾಧ್ಯವಿಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೂಲಗಳು ತಿಳಿಸಿವೆ.

    ಶಿವಮೊಗ್ಗ ಕ್ಷೇತ್ರದಲ್ಲಿ ನಿಜಕ್ಕೂ ಸ್ಪರ್ಧೆ ಇದ್ದದ್ದು ಮೈತ್ರಿ ಸರ್ಕಾರ ಹಾಗೂ ಯಡಿಯೂರಪ್ಪ ನಡುವೆ. ಇಲ್ಲಿ ಬಿಜೆಪಿಯ ರಾಘವೇಂದ್ರ, ಸಮ್ಮಿಶ್ರ ಅಭ್ಯರ್ಥಿ ಜೆಡಿಎಸ್ ನ ಮಧು ಬಂಗಾರಪ್ಪ ನೆಪ ಮಾತ್ರ. ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಸೋತಲ್ಲಿ ಸಮ್ಮಿಶ್ರ ಸರ್ಕಾರವನ್ನು ಅತಂತ್ರಗೊಳಿಸುವಂತ ಪ್ರಯತ್ನಕ್ಕೆ ಕೈಹಾಕುವ ಇನ್ನೊಬ್ಬ ನಾಯಕ ಬಿಜೆಪಿಯಲ್ಲಿ ಇಲ್ಲ. ಗೆದ್ದರೆ, ಸಮ್ಮಿಶ್ರ ಸರ್ಕಾರಕ್ಕೆ ಮತ್ತೆ ಅನಿಶ್ಚತತೆ ಖಂಡಿತಾ. ಇದೇ ಕಾರಣಕ್ಕೆ ದೇವೇಗೌಡರ ಹಾಗೂ ಡಿಕೆ ಶಿವಕುಮಾರ್ ಸಕುಟುಂಬ ಪರಿವಾರ ಸಮೇತ ಶಿವಮೊಗ್ಗದಲ್ಲೇ ಇದ್ದು, ತಮ್ಮೆಲ್ಲಾ ಸಾಮರ್ಥ್ಯವನ್ನು ಧಾರೆ ಎರೆದಿದ್ದಾರೆ. ಯಾವ ವರದಿ ಏನೇ ಹೇಳಲಿ ಮೇ 23ರವರೆಗೆ ಕಾಯುವುದು ಅನಿವಾರ್ಯ.

    2014ರ ಚುನಾವಣೆಯಲ್ಲಿ ಶೇ.72.3 ಮತದಾನ ನಡೆದಿದ್ದರೆ ಈ ಬಾರಿ ಶೇ.76.40 ಮತದಾನ ನಡೆದಿದೆ. ಶಿವಮೊಗ್ಗ ಗ್ರಾಮೀಣದಲ್ಲಿ ಶೇ.80.28, ಭದ್ರಾವತಿ ಶೇ.69.56, ಶಿವಮೊಗ್ಗ ಶೇ.67.59, ತೀರ್ಥಹಳ್ಳಿ ಶೇ.80.39, ಶಿಕಾರಿಪುರ ಶೇ.80.64, ಸೊರಬ ಶೇ.82.59, ಸಾಗರ ಶೇ.78.78, ಬೈಂದೂರಿನಲ್ಲಿ ಶೇ.75.26 ರಷ್ಟು ಮತದಾನ ನಡೆದಿತ್ತು.

  • ರಾಗಾ ರ‍್ಯಾಲಿಗೆ ‘ಮೈ ಭೀ ಚೌಕಿದಾರ್’ ಟೀ ಶರ್ಟ್ ತೊಟ್ಟು ಬಂದ ಯುವಕರು

    ರಾಗಾ ರ‍್ಯಾಲಿಗೆ ‘ಮೈ ಭೀ ಚೌಕಿದಾರ್’ ಟೀ ಶರ್ಟ್ ತೊಟ್ಟು ಬಂದ ಯುವಕರು

    -ಚೌಕಿದಾರ್ ಯುವಕರಿಗೆ ರಾಹುಲ್ ಗಾಂಧಿ ಪ್ರಶ್ನೆ

    ಜೈಪುರ: ರಾಜಸ್ಥಾನದ ಚುರು ಜಿಲ್ಲೆಯ ಸರ್ದಾರಶಹರ್ ನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದ ಸಮಾವೇಶಕ್ಕೆ ಕೆಲ ಯುವಕರು ‘ಮೈ ಭೀ ಚೌಕಿದಾರ್’ ಬರಹವುಳ್ಳ ಟೀ ಶರ್ಟ್ ಧರಿಸಿಕೊಂಡು ಬಂದಿದ್ದರು. ಸಮಾವೇಶದಲ್ಲಿ ಯುವಕರನ್ನು ಗಮನಿಸಿದ ರಾಹುಲ್ ಗಾಂಧಿ ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದರು.

    ‘ಮೈ ಭೀ ಚೌಕಿದಾರ್’ ಟೀ ಶರ್ಟ್ ಧರಿಸಿ ಕಾಂಗ್ರೆಸ್ ಸಮಾವೇಶಕ್ಕೆ ಬಂದಿರುವ ಯುವಕರನ್ನು ಸ್ವಾಗತ ಮಾಡಿಕೊಳ್ಳುತ್ತೇನೆ. ನಿಮ್ಮ ಚೌಕಿದಾರ್ ಜೀ, 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಅಂತ ಹೇಳಿದ್ದರು. ಆ ಎರಡು ಕೋಟಿ ಉದ್ಯೋಗ ಎಲ್ಲಿವೆ? ನಿಮ್ಮ ಖಾತೆಗೆ 15 ಲಕ್ಷ ರೂ. ಬಂದಿದೆಯಾ ಎಂದು ಪ್ರಶ್ನಿಸಿದರು.

    ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ರಾಹುಲ್ ಗಾಂಧಿ, 2014ರ ಚುನಾವಣೆ ವೇಳೆ ಮೋದಿ ಜನತೆಗೆ 15 ಲಕ್ಷ ರೂ. ನೀಡುತ್ತೇನೆ ಎಂದು ಸುಳ್ಳು ಹೇಳಿದ್ದರು. ಸರ್ಕಾರ ರಚನೆಯ ಬಳಿಕ ಕಾಂಗ್ರೆಸ್ ‘ನ್ಯಾಯ’ ಯೋಜನೆಯಲ್ಲಿ ಬಡವರ ಖಾತೆಗೆ ಕನಿಷ್ಠ ಆದಾಯವನ್ನು ಹಾಕಲು ನಿರ್ಧರಿಸಿದೆ. ಈ ಯೋಜನೆಯಡಿ 5 ಕೋಟಿ ಬಡವರಿಗೆ ವಾರ್ಷಿಕ 72 ಸಾವಿರ ರೂ. ಸಿಗಲಿದೆ ಎಂದು ತಿಳಿಸಿದರು.

  • ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಅಮೇಥಿಯಲ್ಲಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ರಾಜಕೀಯ ನಿವೃತ್ತಿ- ನವಜೋತ್ ಸಿಂಗ್ ಸಿಧು

    ಲಕ್ನೋ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಗೆ ಹಿನ್ನಡೆಯಾದ್ರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಕ್ರಿಕೆಟಿಗ, ಸಚಿವ ನವಜೋತ್ ಸಿಂಗ್ ಸಿಧು ಹೇಳಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿಯವರಿಂದ ರಾಷ್ಟ್ರೀಯತೆಯ ಪಾಠವನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

    70 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಬಿಜೆಪಿ ಪದೇ ಪದೇ ಹೇಳಿಕೆ ನೀಡುತ್ತಿರುವುದರ ವಿರುದ್ಧ ಸಿಂಗ್ ಹರಿಹಾಯ್ದರು. ಅಲ್ಲದೆ ಒಂದು ಚಿಕ್ಕ ಸೂಜಿಯಿಂದ ಹಿಡಿದು ದೊಡ್ಡ ವಿಮಾನದವರೆಗಿನ ಅಭಿವೃದ್ಧಿಯನ್ನು ಕಾಂಗ್ರೆಸ್ ಅವಧಿಯಲ್ಲೇ ಮಾಡಲಾಗಿತ್ತು ಎಂದು ತಿರುಗೇಟು ನೀಡಿದರು.

    ಇದೇ ವೇಳೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ಹತ್ಯೆಯ ಬಳಿಕ ಕಾಂಗ್ರೆಸ್ಸನ್ನು ಮುನ್ನಡೆಸಿದ ಸೋನಿಯಾ ಗಾಂಧಿಯವರನ್ನು ಹೊಗಳಿದ ಸಿಧು, ಸೋನಿಯಾ ಗಾಂಧಿಯವರಿಂದಾಗಿಯೇ ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ 10 ವರ್ಷ (2004-2014) ರವರೆಗೆ ಆಡಳಿತ ನಡೆಸಲು ಸಾಧ್ಯವಾಯಿತು ಎಂದರು.

    ರಫೇಲ್ ಯುದ್ಧ ವಿಮಾನ ವಿವಾದವೇ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ಸೋಲಿಗೆ ಕಾರಣವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುವ ನವಜೋತ್ ಸಿಂಗ್ ಅವರು ಮೊದಲು ಬಿಜೆಪಿಯಲ್ಲಿದ್ದು, ಪಂಜಾಬ್ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಇದೀಗ ಅವರು ಪಂಜಾಬ್ ಸಚಿವರಾಗಿದ್ದಾರೆ.

  • ಹೊಳೆನರಸೀಪುರದಲ್ಲಿ ಅಕ್ರಮ ಮತದಾನ- ಮೂವರು ಸಿಬ್ಬಂದಿ ಅಮಾನತು

    ಹೊಳೆನರಸೀಪುರದಲ್ಲಿ ಅಕ್ರಮ ಮತದಾನ- ಮೂವರು ಸಿಬ್ಬಂದಿ ಅಮಾನತು

    ಹಾಸನ: ಅಕ್ರಮ ಮತದಾನದ ತನಿಖೆಯ ಪರಿಣಾಮ ಇದೀಗ ಹಾಸನದಲ್ಲಿ ಮೂವರು ಸಿಬ್ಬಂದಿ ಅಮಾನತುಗೊಂಡಿದ್ದಾರೆ.

    ಮತಗಟ್ಟೆ ಅಧಿಕಾರಿಯಾಗಿದ್ದ ಯೋಗೇಶ್, ರಾಮಚಂದ್ರ ರಾವ್ ಹಾಗೂ ದಿನೇಶ್ ಅಮಾನತುಗೊಂಡ ಸಿಬ್ಬಂದಿ. ಇವರನ್ನು ಜಿಲ್ಲಾ ಚುನಾವಣಾ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ.

    ಏಪ್ರಿಲ್ 18 ರಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಪಡುವಲಹಿಪ್ಪೆ ಗ್ರಾಮದಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮೈತ್ರಿ ಅಭ್ಯರ್ಥಿ ಪ್ರಜ್ವಲ್, ಸಚಿವ ರೇವಣ್ಣ ಮತದಾನ ಮಾಡಿದ ನಂತರ ಯುವಕರು ಅಕ್ರಮ ಮತದಾನ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಬಿಜೆಪಿ ಬೂತ್ ಏಜೆಂಟ್ ರಾಜು ಹಾಗೂ ಮಾಯಣ್ಣ ಅವರು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿಯವರಿಗೆ ದೂರು ನೀಡಿದ್ದರು.

    ದೂರು ಸ್ವೀಕರಿಸಿದ್ದ ಜಿಲ್ಲಾಧಿಕಾರಿ ಭಾನುವಾರ ಸಿಸಿಟಿವಿ ದೃಶ್ಯವನ್ನು ಪರಿಶೀಲನೆ ಮಾಡಿದ್ದರು. ಈ ವೇಳೆ ಅಕ್ರಮ ಮತದಾನ ನಡೆದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿ ಅದೇಶ ಹೊರಡಿಸಿದ್ದಾರೆ.

  • ನಾಲ್ಕನೇ ಹಂತದ ಮತದಾನ -72 ಲೋಕಸಭಾ ಕ್ಷೇತ್ರಗಳಲ್ಲಿ ಮತ ಹಬ್ಬ

    ನಾಲ್ಕನೇ ಹಂತದ ಮತದಾನ -72 ಲೋಕಸಭಾ ಕ್ಷೇತ್ರಗಳಲ್ಲಿ ಮತ ಹಬ್ಬ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗ್ತಾರಾ..? ಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತಾ..? ಈ ಪ್ರಶ್ನೆಗೆ ಲೋಕಸಭಾ ಚುನಾವಣೆಯಲ್ಲಿ ಬಾಕಿ ಉಳಿದಿರುವ ನಾಲ್ಕು ಹಂತಗಳು ಉತ್ತರ ನೀಡಲಿದೆ. ಈಗಾಗ್ಲೇ 543 ಕ್ಷೇತ್ರಗಳ ಪೈಕಿ 303 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಿದೆ. 240 ಲೋಕಸಭಾ ಕ್ಷೇತ್ರಗಳಿಗಷ್ಟೇ ಮತದಾನ ಬಾಕಿಯಿದೆ. ಇಂದು 72 ಕ್ಷೇತ್ರಗಳಲ್ಲಿ ನಾಲ್ಕನೇ ಹಂತದ ಮತದಾನ ನಡೆಯಲಿದೆ.

    ಇಂದು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಲೋಕ ಕದನಕ್ಕೆ ಚಾಲನೆ ಸಿಗಲಿದ್ದು, ಒಡಿಶಾ, ಮಹಾರಾಷ್ಟ್ರದಲ್ಲಿ ಮತದಾನ ಮುಕ್ತಾಯವಾಗಲಿದೆ. ಮಹಾರಾಷ್ಟ್ರ-17, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ 13, ಪಶ್ಚಿಮ ಬಂಗಾಳ-8, ಮಧ್ಯ ಪ್ರದೇಶ ಮತ್ತು ಓಡಿಶಾಗಳಲ್ಲಿ ತಲಾ 6, ಬಿಹಾರ-5, ಜಾರ್ಖಂಡ್-3 ಹಾಗೂ ಜಮ್ಮು & ಕಾಶ್ಮೀರದ ಒಂದು ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದೆ.

    ಕನ್ನಯ್ಯ ಕುಮಾರ್, ಊರ್ಮಿಳಾ ಮಾಂತೋಡ್ಕರ್, ಮಿಲಿಂದ್ ದಿಯೋರಾ, ಅಖಿಲೇಶ್ ಸಿಂಗ್, ಮನೇಕಾ ಗಾಂಧಿ ಸೇರಿ 961 ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ಇವತ್ತಿಂದ ಮತದಾನ ಆಗುತ್ತಿರುವ ಕ್ಷೇತ್ರಗಳನ್ನು ಕಳೆದ ಬಾರಿ ಬಿಜೆಪಿ ಗೆದ್ದುಕೊಂಡಿತ್ತು. ಮತ್ತೆ ಅಧಿಕಾರಕ್ಕೆ ಬರಬೇಕಾದ್ರೆ ಈ ಕ್ಷೇತ್ರಗಳನ್ನು ಮತ್ತೆ ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.