Tag: ಲೋಕಸಭಾ ಚುನಾವಣೆ 2019

  • ಮಾರ್ಗ ಮಧ್ಯೆ ಮೋದಿ ಘೋಷಣೆ- ಬಿಜೆಪಿ ಬೆಂಬಲಿಗರಿಗೆ ಸರ್ಪ್ರೈಸ್ ನೀಡಿದ ಪ್ರಿಯಾಂಕ ಗಾಂಧಿ

    ಮಾರ್ಗ ಮಧ್ಯೆ ಮೋದಿ ಘೋಷಣೆ- ಬಿಜೆಪಿ ಬೆಂಬಲಿಗರಿಗೆ ಸರ್ಪ್ರೈಸ್ ನೀಡಿದ ಪ್ರಿಯಾಂಕ ಗಾಂಧಿ

    ಭೋಪಾಲ್: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮಧ್ಯ ಪ್ರದೇಶದ ಇಂದೋರ್ ಕ್ಷೇತ್ರದಲ್ಲಿ ಪ್ರಚಾರದಲ್ಲಿ ಸೋಮವಾರ ಭಾಗಿಯಾಗಿದ್ದರು. ಈ ವೇಳೆ ಕೆಲ ಬಿಜೆಪಿ ಬೆಂಬಲಿಗರು ಮಾರ್ಗ ಮಧ್ಯೆ ‘ಮೋದಿ.. ಮೋದಿ..’ ಎಂದು ಘೋಷಣೆ ಕೂಗುತ್ತಿದ್ದರು. ದಿಢೀರ್ ಅಂತಾ ಕಾರಿನಿಂದ ಇಳಿದು ಬಂದು ಪ್ರಿಯಾಂಕ ಎಲ್ಲರ ಕೈ ಕುಲುಕಿ ಆಲ್ ದಿ ಬೆಸ್ಟ್ ಹೇಳಿ ಎಲ್ಲ ಬಿಜೆಪಿ ಬೆಂಬಲಿಗರಿಗೆ ಅಚ್ಚರಿ ಮೂಡಿಸಿದ್ದಾರೆ.

    ಈ ವಿಡಿಯೋವನ್ನು ಮಧ್ಯಪ್ರದೇಶ ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದೆ. ಕಾರಿನಿಂದ ಹೊರಬಂದ ಪ್ರಿಯಾಂಕ ಗಾಂಧಿ, ನೀವು ನಿಮ್ಮ ಜಾಗದಲ್ಲಿ, ನಾನು ನನ್ನ ಜಾಗದಲ್ಲಿ ಸರಿಯಾಗಿದ್ದೇವೆ. ನಿಮಗೆಲ್ಲರಿಗೂ ಒಳ್ಳೆಯದಾಗಲಿ ಎಂದು ಕೈ ಕುಲುಕಿದ್ದಾರೆ. ಒಂದು ಕ್ಷಣ ಗಲಿಬಿಲಿಗೊಂಡ ಬಿಜೆಪಿ ಕಾರ್ಯಕರ್ತರು ಕೈ ಕುಲುಕುತ್ತಾ ನಿಮಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

    ಟ್ವೀಟ್ ಮೂಲಕ ಬಿಜೆಪಿಯ ಕಾಲೆಳೆದಿರುವ ಮಧ್ಯ ಪ್ರದೇಶ ಕಾಂಗ್ರೆಸ್, ಇಂದೋರ್ ನಲ್ಲಿ ಎಂದಿನಂತೆ ಬಿಜೆಪಿ ಬೆಂಬಲಿತ ಕೆಲವರು ಮೋದಿ ಘೋಷಣೆ ಕೂಗಿದರು. ಎಲ್ಲರ ಕೈ ಕುಲುಕಿ ಆಲ್ ದಿ ಬೆಸ್ಟ್ ಹೇಳಿದ್ದಾರೆ. ಇದು ನಮ್ಮ ದೇಶದಲ್ಲಿರುವ ಮಣ್ಣಿನ ಗುಣ ಮತ್ತು ದೇಶದಲ್ಲಿಯ ಪ್ರತಿಯೊಬ್ಬರನ್ನು ಪ್ರೀತಿಯಿಂದ ಕಾಣುವಂತೆ ತೋರಿಸುತ್ತದೆ. ಬಹುಶಃ ಮೋದಿ ನಮ್ಮ ದೇಶವನ್ನು ಅರ್ಥ ಮಾಡಿಕೊಳ್ಳಬಹುದಿತ್ತು ಎಂದು ಬರೆದುಕೊಂಡಿದೆ.

    ಸೋಮವಾರ ಪ್ರಚಾರಕ್ಕೂ ಮುನ್ನ ಮಧ್ಯಪ್ರದೇಶದ ಉಜ್ಜಯಿನಿಯ ಮಹಾಕಾಳೇಶ್ವರನಿಗೆ ಪ್ರಿಯಾಂಕ ಗಾಂಧಿ ವಿಶೇಷ ಪೂಜೆ ಸಲ್ಲಿಸಿದ್ದರು. ಪೂಜೆಯ ಬಳಿಕ ನೇರವಾಗಿ ರತ್ಲಂ ಲೋಕಸಭಾ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದರು. ಕೊನೆಯ ಹಂತದ ಮತದಾನವು ಮೇ 19ರಂದು ನಡೆಯಲಿದೆ. ಅಂದು ಮಧ್ಯಪ್ರದೇಶದ ಇಂದೋರ್, ಉಜ್ಜೈನಿ, ರತ್ಲಂ ಸೇರಿದಂತೆ 8 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರ ಬೀಳಲಿದೆ.

    ಈ ಹಿಂದೆ ರಾಹುಲ್ ಗಾಂಧಿ ಅವರ ಸಮಾವೇಶಕ್ಕೆ ಕೆಲ ಯುವಕರು ‘ಮೈ ಭೀ ಚೌಕಿದಾರ್’ ಬರಹವುಳ್ಳ ಟೀ ಶರ್ಟ್ ಧರಿಸಿ ಬಂದಿದ್ದರು. ಬೃಹತ್ ಸಮಾವೇಶದಲ್ಲಿ ಯುವಕರನ್ನ ಗುರಿಯಾಗಿಸಿಕೊಂಡು, ‘ಮೈ ಭೀ ಚೌಕಿದಾರ್’ ಟೀ ಶರ್ಟ್ ಧರಿಸಿ ಕಾಂಗ್ರೆಸ್ ಸಮಾವೇಶಕ್ಕೆ ಬಂದಿರುವ ಯುವಕರನ್ನು ಸ್ವಾಗತ ಮಾಡಿಕೊಳ್ಳುತ್ತೇನೆ. ನಿಮ್ಮ ಚೌಕಿದಾರ್ ಜೀ, 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಅಂತ ಹೇಳಿದ್ದರು. ಆ ಎರಡು ಕೋಟಿ ಉದ್ಯೋಗ ಎಲ್ಲಿವೆ? ನಿಮ್ಮ ಖಾತೆಗೆ 15 ಲಕ್ಷ ರೂ. ಬಂದಿದೆಯಾ ಎಂದು ಪ್ರಶ್ನಿಸಿದ್ದರು.

  • ಮೋದಿ ‘ನೀಚ ವ್ಯಕ್ತಿ’-ಹಳೆಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಮಣಿಶಂಕರ್ ಅಯ್ಯರ್

    ಮೋದಿ ‘ನೀಚ ವ್ಯಕ್ತಿ’-ಹಳೆಯ ಹೇಳಿಕೆಯನ್ನ ಸಮರ್ಥಿಸಿಕೊಂಡ ಮಣಿಶಂಕರ್ ಅಯ್ಯರ್

    ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲಿದೆ. ಮೇ 19ರ ಕೊನೆಯ ಸುತ್ತಿನ ಬಳಿಕ ಮೇ 23ಕ್ಕೆ ಫಲಿತಾಂಶ ಬರಲಿದೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್, ಮೋದಿ ನೀಚ ವ್ಯಕ್ತಿ ಎಂಬ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    2017ರ ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ಮಣಿಶಂಕರ್ ಅಯ್ಯರ್, ಪ್ರಧಾನಿ ಮೋದಿ ವಿರುದ್ಧ ಹರಿಹಾಯುತ್ತಾ ಅವರೊಬ್ಬ ನೀಚ ವ್ಯಕ್ತಿ ಎಂದು ಹೇಳಿದ್ದರು. ಇದೀಗ ಲೇಖನವೊಂದರಲ್ಲಿ ಮಣಿಶಂಕರ್ ಅಯ್ಯರ್ ಅದೇ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಒಳಪಟ್ಟಿದೆ.

    2017ರಲ್ಲಿ ಬಿಜೆಪಿ ಹಾಗೂ ಮಿತ್ರ ಪಕ್ಷಗಳು ಮಣಿಶಂಕರ್ ಹೇಳಿಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಂದೋಲನವನ್ನ ಆರಂಭಿಸಿದ್ದರಿಂದ ಕ್ಷಮೆ ಕೇಳಿ ವಿವಾದವನ್ನು ತಣ್ಣಗಾಗಿಸಿದ್ದರು. ಈಗ ಮೋದಿ ಅವರ ಸಮಾವೇಶ ಮತ್ತು ಭಾಷಣಗಳ ಕುರಿತು ಮಾತನಾಡುವಾಗ 2017ರಲ್ಲಿ ನಾನು ಪ್ರಧಾನಿ ಬಗ್ಗೆ ಹೇಳಿದ್ದನು ನೆನಪು ಮಾಡಿಕೊಳ್ಳಿ. ಅಂದು ನಾನು ಹೇಳಿದ್ದ ಮಾತುಗಳು ಇಂದು ನಿಜವಾಗಿವೆ ಅಲ್ವಾ ಎಂದು ಹೇಳಿದ್ದಾರೆ.

    ಅಯ್ಯರ್ ಹೇಳಿಕೆ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರಾ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಪ್ರೀತಿಯ ರಾಜಕಾರಣ ಕುಟುಂಬದ ‘ಮಣಿ’ಯೊಂದು ಮೋದಿ ವಿರುದ್ಧದ ನೀಚ ಹೇಳಿಕೆಯ್ನು ಸಮರ್ಥಿಸಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    2017ರಲ್ಲಿ ರಾಹುಲ್ ಗಾಂಧಿ ಟ್ವೀಟ್ ಮಾಡಿ, ಪ್ರಧಾನಿ ಮೋದಿ ಅವರನ್ನು ಉದ್ದೇಶಿಸಿ ಮಣಿಶಂಕರ್ ಅಯ್ಯರ್ ಬಳಸಿದ ಭಾಷೆ ಸರಿಯಲ್ಲ, ಕಾಂಗ್ರೆಸ್ ಈ ಸಂಸ್ಕೃತಿಯನ್ನು ಬಯಸುವುದಿಲ್ಲ. ಹೀಗಾಗಿ ಮಣಿಶಂಕರ್ ಅಯ್ಯರ್ ಕ್ಷಮೆ ಕೇಳಬೇಕು ಎಂದು ಹೇಳಿದ್ದಾರೆ. ಈ ಟ್ವೀಟ್ ಬೆನ್ನಲ್ಲೇ ಮಣಿಶಂಕರ್ ಅಯ್ಯರ್ ಪ್ರತಿಕ್ರಿಯಿಸಿ ಕ್ಷಮೆ ಕೇಳಿ ನಾನು ಆ ಪದವನ್ನು ಜಾತಿ ಆಧಾರದಲ್ಲಿ ಬಳಸಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    2014ರ ಲೋಕಸಭೆ ಚುನಾವಣೆಯಲ್ಲಿ ಮಣಿ ಶಂಕರ್ ಅಯ್ಯರ್ ಚಾಯ್ ವಾಲಾ ಎಂದು ಟೀಕೆ ಮಾಡಿದ್ದರು. ಮೋದಿ ಪ್ರಧಾನಿ ಅಭ್ಯರ್ಥಿಯೇ ಅಲ್ಲ. ಚಹಾ ಮಾರುವುದಕ್ಕೆ ಸೂಕ್ತ ವ್ಯಕ್ತಿ ಎಂದಿದ್ದರು. ಇದನ್ನು ಬಳಸಿಕೊಂಡಿದ್ದ ಬಿಜೆಪಿ `ಚಾಯ್ ಪೇ ಚರ್ಚಾ’ ಹೆಸರಿನಲ್ಲಿ ಹೊಸ ಅಭಿಯಾನ ಹುಟ್ಟು ಹಾಕಿತ್ತು. ಈ ಅಭಿಯಾನ ದೊಡ್ಡಮಟ್ಟದಲ್ಲಿ ಜನ ಮಾನಸದಲ್ಲಿ ಉಳಿದುಕೊಳ್ಳುವ ಮೂಲಕ ಯಶಸ್ವಿಯಾಗಿತ್ತು.

  • ದೋಸ್ತಿ ಸರ್ಕಾರ ಬೀಳಿಸಲು ಹೊಸ ಮುಹೂರ್ತ ನೋಡಿದ್ರಾ ಬಿಎಸ್‍ವೈ!

    ದೋಸ್ತಿ ಸರ್ಕಾರ ಬೀಳಿಸಲು ಹೊಸ ಮುಹೂರ್ತ ನೋಡಿದ್ರಾ ಬಿಎಸ್‍ವೈ!

    ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚನೆಯಾಗಿ ಮೇ 23ಕ್ಕೆ ಒಂದು ವರ್ಷವಾಗುತ್ತದೆ. ಸರ್ಕಾರ ರಚನೆಯಾದಗಿನಿಂದಲೂ ರಾಜ್ಯದಲ್ಲಿ ಆಪರೇಷನ್ ಕಮಲದ ಮಾತುಗಳು ಕೇಳಿ ಬರುತ್ತಿವೆ. ಶಾಸಕರನ್ನು ರೆಸಾರ್ಟಿನಲ್ಲಿ ಇರಿಸೋದು, ತೆರೆಮರೆಯಲ್ಲಿ ರಾಜಕೀಯ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದೀಗ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮೈತ್ರಿ ಸರ್ಕಾರ ಬೀಳಲಿದೆ ಎಂದು ಬಿಜೆಪಿ ನಾಯಕರು ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮೇ 23ರ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಮಲ ನಾಯಕರು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ ಸರ್ಕಾರ ಬೀಳಿಸಲು ಹೊಸ ಮುಹೂರ್ತ ನೋಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಲೋಕಸಭಾ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ರಾಜಕೀಯ ಧೃವೀಕರಣ ನಡೆಯಲಿದೆ ಎಂಬ ಮಾತುಗಳು ಹರಿದಾಡುತ್ತಿವೆ. ಆದ್ರೆ ಯಡಿಯೂರಪ್ಪ ಮೇ 23ರಂದು ಮೈತ್ರಿ ಸರ್ಕಾರದ ಗೂಡಿಗೆ ಕೈ ಹಾಕೋದು ಬೇಡ. ಫಲಿತಾಂಶ ಬಂದ ಎಂಟು ದಿನಗಳ ಕಾಲ ದೋಸ್ತಿಗಳಲ್ಲಿ ಏನೆಲ್ಲಾ ಬದಲಾವಣೆ ಆಗುತ್ತೆ ಎಂಬುದನ್ನು ಗಮನಿಸೋಣ ಎಂಬ ಸಂದೇಶವನ್ನು ಪಕ್ಷದ ನಾಯಕರಿಗೆ ಯಡಿಯೂರಪ್ಪ ರವಾನಿಸಿದ್ದಾರಂತೆ.

    ಫಲಿತಾಂಶ ಬಂದ ಎಂಟನೇ ದಿನ ಅಂದ್ರೆ ಮೇ 31ರಂದು ನಮ್ಮ ಮುಂದಿನ ನಡೆಯನ್ನು ನಿರ್ಧರಿಸೋಣ. ಅಲ್ಲಿಯವರೆಗೂ ಎಲ್ಲ ನಾಯಕರು ಶಾಂತಿಯುತವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕೆಂಬ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರೆ ಎನ್ನಲಾಗಿದೆ.

    ಮೇ 23ರಿಂದ ಮೇ 31ರವರೆಗೆ ಕಾಂಗ್ರೆಸ್ ಅತೃಪ್ತರನ್ನು ಸೆಳೆಯುವುದು. ಈ ತಂತ್ರ ಯಶಸ್ವಿಯಾದ ಬಳಿಕ ಎಲ್ಲ ಕೈ ಬಂಡಾಯ ಶಾಸಕರನ್ನು ಒಂದೆಡೆ ಸೇರಿಸಿ ಮೇ 31ರ ಶುಭ ಶುಕ್ರವಾರ ಸಂಜೆ 5 ಗಂಟೆಗೆ ಮೈತ್ರಿ ಸರ್ಕಾರಕ್ಕೆ ಬಹುಮತವಿಲ್ಲ ಎಂಬುದನ್ನ ರಾಜ್ಯದ ಜನತೆಯ ಮುಂದೆ ಹೇಳಲು ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

  • ಸಿದ್ದು ಸಿಎಂ ಕೂಗು ಬೆನ್ನಲ್ಲೇ ಅಖಾಡಕ್ಕಿಳಿದ ರಾಜಕೀಯ ಗುರು

    ಸಿದ್ದು ಸಿಎಂ ಕೂಗು ಬೆನ್ನಲ್ಲೇ ಅಖಾಡಕ್ಕಿಳಿದ ರಾಜಕೀಯ ಗುರು

    ಬೆಂಗಳೂರು: ದೋಸ್ತಿ ಕಾಂಗ್ರೆಸ್‍ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕೆಂದು ಕೂಗು ಕೇಳಿ ಬರುತ್ತಿದೆ. ಸಿದ್ದರಾಮಯ್ಯ ಸಹ ಯಾವುದೇ ಪ್ರತಿಕ್ರಿಯೆ ನೀಡದೇ ತೆರೆಮರೆಯಲ್ಲಿ ಸಿಎಂ ಕುರ್ಚಿಯತ್ತ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಶಿಷ್ಯ ಸಿದ್ದರಾಮಯ್ಯರ ಏಟಿಗೆ ತಿರುಗೇಟು ನೀಡಲು ಸ್ವತಃ ಗುರು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಅಖಾಡಕ್ಕೆ ಇಳಿದಿದ್ದಾರೆ.

    ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ದೊಡ್ಡ ರಾಜಕೀಯ ಆಟವನ್ನು ದೇವೇಗೌಡರು ಸಿದ್ಧತೆ ನಡೆಸಿಕೊಂಡಿದ್ದಾರೆ. 2004ರಲ್ಲಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿರುದ್ಧ ಕಾಂಗ್ರೆಸ್ ರಚಿಸಿದ್ದ ತಂತ್ರವನ್ನೇ ದೇವೇಗೌಡರು ಪ್ರಯೋಗಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ತಂತ್ರವನ್ನೇ ಪ್ರಯೋಗಿಸಿ ಶಿಷ್ಯ ಸಿದ್ದರಾಮಯ್ಯರಿಗೆ ಶಾಕ್ ನೀಡಲು ದೊಡ್ಡಗೌಡರು ಪ್ಲಾನ್ ಮಾಡಿ, ಮೈತ್ರಿ ಸರ್ಕಾರ ಉಳಿಸಲು ರಣವ್ಯೂಹ ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಏನಿದು ಪ್ಲಾನ್?
    2004ರಲ್ಲಿ ಎಸ್.ಎಂ.ಕೃಷ್ಣ ಸೋತಾಗ ಅಂದು ಅವರನ್ನು ಕಾಂಗ್ರೆಸ್ ರಾಜ್ಯಪಾಲರನ್ನಾಗಿ ಮಾಡಿ ಮಹಾರಾಷ್ಟ್ರಕ್ಕೆ ಕಳುಹಿಸಲಾಗಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ದೇವೇಗೌಡರು ನಾಂದಿ ಹಾಡಿದ್ದರು. ಈಗ ಇದೇ ಅಸ್ತ್ರವನ್ನು ಪ್ರಯೋಗಿಸಿ ಸಿದ್ದರಾಮಯ್ಯರನ್ನು ರಾಷ್ಟ್ರ ರಾಜಕಾರಣಕ್ಕೆ ಕರೆಸಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಹೇಳುವ ಸಾಧ್ಯತೆಯಿದೆ. ಲೋಕ ಫಲಿತಾಂಶದಲ್ಲಿ ಮೋದಿ ವಿರುದ್ಧ ಜನಾದೇಶ ಬಂದು ಎನ್‍ಡಿಎಗೆ ಹಿನ್ನಡೆಯಾದರೆ ಆಗ ಗೌಡರ ತಮ್ಮ ದಾಳವನ್ನು ಉರುಳಿಸಲು ಆರಂಭಿಸಲಿದ್ದಾರೆ ಎನ್ನಲಾಗಿದೆ.

    ಚಂದ್ರಬಾಬು ನಾಯ್ಡು, ಶರದ್ ಪವಾರ್ ಮುಂದಿಟ್ಟುಕೊಂಡು ದೇವೇಗೌಡರ ಚದುರಂಗದಾಟ ಆಡಲು ಮುಂದಾಗಿದ್ದು, ಸಿದ್ದರಾಮಯ್ಯರನ್ನು ದೆಹಲಿ ರಾಜಕೀಯಕ್ಕೆ ಕರೆಸಿಕೊಳ್ಳಿ ಅಂತಾ ಕೈ ನಾಯಕರ ಮೇಲೆ ಒತ್ತಡ ಹಾಕಲು ಪ್ಲಾನ್ ಮಾಡಿಕೊಂಡಿದ್ದಾರೆ. ಒಂದು ವೇಳೆ ಮೋದಿ ಮತ್ತೆ ಪಿಎಂ ಆದ್ರೂ ಕರ್ನಾಟಕ ಕಾಂಗ್ರೆಸ್‍ಗೆ ದೋಸ್ತಿ ಅನಿವಾರ್ಯ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಸೇಫ್ ಆಗಿರಬೇಕಾದ್ರೆ ಸಿದ್ದರಾಮಯ್ಯನವರು ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯರಾಗುವುದು ಉತ್ತಮ ಎಂಬ ಸಂದೇಶವನ್ನು ಕಾಂಗ್ರೆಸ್ ಹೈಕಮಾಂಡ್ ಗೆ ಮನದಟ್ಟು ಮಾಡಲು ದೇವೇಗೌಡರು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

  • ಜೈ ಶ್ರೀರಾಮ್ ಹೇಳೋ ಬಿಜೆಪಿ ಬಾಬುಗಳೇ ಒಂದಾದ್ರೂ ರಾಮಮಂದಿರ ಕಟ್ಟಿದ್ರಾ?: ಮಮತಾ ಬ್ಯಾನರ್ಜಿ

    ಜೈ ಶ್ರೀರಾಮ್ ಹೇಳೋ ಬಿಜೆಪಿ ಬಾಬುಗಳೇ ಒಂದಾದ್ರೂ ರಾಮಮಂದಿರ ಕಟ್ಟಿದ್ರಾ?: ಮಮತಾ ಬ್ಯಾನರ್ಜಿ

    ಕೋಲ್ಕತ್ತಾ: ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತಿನ ಸಮರ ನಡೆಯುತ್ತಲೇ ಇದೆ. ಇಬ್ಬರು ನಾಯಕರು ತಮ್ಮ ಪ್ರಚಾರದ ಸಮಾವೇಶದಲ್ಲಿ ಒಬ್ಬರ ಮೇಲೋಬ್ಬರು ಹರಿಹಾಯುತ್ತಿದ್ದಾರೆ. ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಬಿಜೆಪಿ ನಾಯಕರೇ ಇದುವರೆಗೆ ಒಂದಾದರೂ ರಾಮಮಂದಿರವನ್ನು ಕಟ್ಟಿದ್ದೀರಾ ಎಂದು ಮಮತಾ ಪ್ರಶ್ನೆ ಮಾಡಿದ್ದಾರೆ.

    ಪಶ್ಚಿಮ ಬಂಗಾಳದ ವಿಷ್ಣುಪುರದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಬಾಬುಗಳು ಜೈ ಶ್ರೀರಾಮ್ ಎಂದು ಹೇಳುತ್ತಾರೆ. ಚುನಾವಣೆ ಸಮಯದಲ್ಲಿ ಶ್ರೀ ರಾಮಚಂದ್ರ ತಮ್ಮ ಪಕ್ಷದ ಏಜೆಂಟ್ ನನ್ನಾಗಿ ಮಾಡಿಕೊಳ್ಳುತ್ತೀರಿ. ನೀವು ಘೋಷಣೆ ಕೂಗುವುದರ ಜೊತೆಗೆ ಬೇರೆಯವರ ಮೇಲೆಯೂ ಒತ್ತಡ ಹಾಕುತ್ತೀರಿ. ಆದರೆ ಇದುವರೆಗೆ ಒಂದಾದರೂ ರಾಮಮಂದಿರವನ್ನ ಕಟ್ಟಿದ್ದೀರಾ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

    ಮಿದಾನಪುರ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಕೆಲ ಯುವಕರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಘೋಷಣೆ ಕೇಳುತ್ತಿದ್ದಂತೆಯೇ ಕಾರು ನಿಲ್ಲಿಸಿದ ಮಮತಾ ಬ್ಯಾನರ್ಜಿ, ಯುವಕರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಸೋಮವಾರ ಪಶ್ಚಿಮ ಬಂಗಾಳದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ್ದ ಮೋದಿ, ಪಶ್ಚಿಮ ಬಂಗಾಳದಲ್ಲಿ ಜೈ ಶ್ರೀರಾಮ್ ಅನ್ನೋದು ದೊಡ್ಡ ಅಪರಾಧವಾಗಿದೆ. ಜೈ ಶ್ರೀರಾಮ್ ಘೋಷಣೆ ಕೂಗುವವರನ್ನು ಇಲ್ಲಿ ಜೈಲಿಗೆ ಹಾಕಲಾಗುತ್ತದೆ ಎಂದು ಆರೋಪಿಸಿದ್ದರು.

  • ಇಂದು ಐದನೇ ಹಂತದ ಮತದಾನ-ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಚುನಾವಣೆ

    ಇಂದು ಐದನೇ ಹಂತದ ಮತದಾನ-ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಚುನಾವಣೆ

    ನವದೆಹಲಿ: ಸೋಮವಾರ ಐದನೇ ಹಂತದ ಚುನಾವಣೆಗೆ ಮತದಾನ ನಡೆಯಲಿದೆ. ಹೈವೊಲ್ಟೇಜ್ ಕ್ಷೇತ್ರಗಳಲ್ಲಿ ವೋಟಿಂಗ್ ನಡೆಯಲಿದ್ದು ಇಂದು ಘಟಾನುಘಟಿ ನಾಯಕರ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ. ಇದಕ್ಕಾಗಿ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಒಟ್ಟು 51 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು 674 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿಲಿದ್ದಾರೆ.

    ಉತ್ತರ ಪ್ರದೇಶದ 14 ಕ್ಷೇತ್ರ, ರಾಜಸ್ತಾನದ 12, ಪಶ್ಚಿಮ ಬಂಗಾಳ, ಮಧ್ಯಪ್ರದೇಶದಲ್ಲಿ ತಲಾ ಏಳು ಹಾಗೂ ಬಿಹಾರದಲ್ಲಿನ 5, ಜಾರ್ಖಂಡ್ ನಲ್ಲಿನ 4 ಹಾಗೂ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಹಾಗೂ ಲಡಾಖ್ ಸೇರಿ ಒಟ್ಟು 7 ರಾಜ್ಯಗಳ 51 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಐದನೇ ಹಂತದ ಚುನಾವಣೆಯಲ್ಲಿ ಸುಮಾರು 8.75 ಕೋಟಿ ಮತದಾರರು ಮತ ಚಲಾಯಿಸುವ ಮೂಲಕ 674 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ. 51 ಲೋಕಸಭಾ ಕ್ಷೇತ್ರಗಳಲ್ಲಿ 96 ಸಾವಿರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

    ಐದನೇ ಹಂತದ ಮತದಾನದಲ್ಲಿ ದೇಶದ ರಾಜಕೀಯ ಘಟಾನುಘಟಿಗಳು ಕಣದಲ್ಲಿದ್ದಾರೆ. ವಯನಾಡ್ ನಿಂದ ಸ್ವರ್ಧೆ ಎದುರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮತ್ತೊಂದು ಅಗ್ನಿ ಪರೀಕ್ಷೆ. ಈಗಾಗಲೇ ಮೂರು ಬಾರಿ ಅಮೇಥಿಯಿಂದ ಆಯ್ಕೆಯಾಗಿರುವ ರಾಹುಲ್ ಗಾಂಧಿ ಮತ್ತೊಮ್ಮೆ ಆಯ್ಕೆ ಬಯಸಿದ್ದಾರೆ. ರಾಹುಲ್ ಗಾಂಧಿ ಗೆ ಟಕ್ಕರ್ ಕೊಡಲು ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಹ ಸಾಕಷ್ಟು ಬೆವರು ಹರಿಸಿದ್ದಾರೆ. ಅಲ್ಲದೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿ ಹಲವು ನಾಯಕರು ಅಮೇಥಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈಗಾಗಲೇ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ರಾಹುಲ್ ಗಾಂಧಿಗೆ ತಮ್ಮ ನಂಬಿಕಸ್ಥ ಕ್ಷೇತ್ರದಲ್ಲಿ ಇಂದು ನಡೆಯಲಿರುವ ಮತದಾನ ಅತಿ ಮುಖ್ಯವಾಗಿದೆ.

    ಕಾಂಗ್ರೆಸ್ ಅಧಿನಾಯಕಿ ಯುಪಿಎ ಒಕ್ಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿಗೂ ಸಂಕಷ್ಟ ತಪ್ಪಿದಲ್ಲ. ನಾಲ್ಕು ಬಾರಿ ರಾಯ್ ಬರೇಲಿಯಿಂದ ಸಂಸದೆಯಾಗಿರುವ ಸೋನಿಯಾಗಾಂಧಿಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೊಟಿ ನೀಡಿದೆ. ಬಿಜೆಪಿಯ ಪರಿಷತ್ ಸದಸ್ಯ ದಿನೇಶ್ ಪ್ರತಾಪ್ ಸಿಂಗ್ ಸೋನಿಯಾಗಾಂಧಿ ವಿರುದ್ಧ ಸೆಣಸಲಿದ್ದಾರೆ.

    ಅದೃಷ್ಟದ ಕ್ಷೇತ್ರ ಲಕ್ನೊದಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಶತುಘ್ನ ಸಿನ್ಹಾ ಪತ್ನಿ ಪೂನಂ ಸಿನ್ಹಾ ಮಹಾಘಟಬಂಧನ್ ಅಭ್ಯರ್ಥಿಯಾಗಿ ಸ್ವರ್ಧೆ ಮಾಡಿದ್ದಾರೆ. ಅಲ್ಲದೇ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಸೇರಿ ಇತರ ಘಟಾನುಘಟಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

    ವಿವಾದಿತ ರಾಮ ಜನ್ಮಭೂಮಿ ಸ್ಥಳ ಅಯೋಧ್ಯೆ ಒಳಗೊಂಡ ಫೈಜಬಾದ್ ನಲ್ಲಿ ಮತದಾನ ನಡೆಯಲಿದ್ದು ಕುತೂಹಲ ಮೂಡಿಸಿದ್ದು ಉತ್ತರ ಪ್ರದೇಶದಲ್ಲಿ ಐದನೇ ಹಂತದಲ್ಲಿ ನಡೆಯುತ್ತಿರುವ ಈ 14 ಕ್ಷೇತ್ರಗಳಲ್ಲಿ ರಾಯ್‍ಬರೇಲಿ, ಅಮೇಠಿ ಹೊರತುಪಡಿಸಿ ಬಿಜೆಪಿ 12 ಕ್ಷೇತ್ರಗಳಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ ಈ ಬಾರಿ ಮಹಾಘಟಬಂಧನ್ ತೀವ್ರ ಪೈಪೋಟಿ ನೀಡಿದ್ದು ಇಂದಿನ ಮತದಾನದ ಮೇಲೆ ಎಲ್ಲರ ಕುತೂಹಲ ಕಣ್ಣಿದೆ.

  • ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ಮೋದಿ ಗೆಲುವು ನಿಶ್ಚಿತ: ವಿವೇಕ್ ಓಬೇರಾಯ್

    ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಗೆಲುವು ನಿಶ್ಚಿತ ಎಂದು ನಟ ವಿವೇಕ್ ಓಬೇರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ದೆಹಲಿಯ ಇಂಡಿಯಾ ಗೇಟ್ ಬಳಿಯ ‘ಏಳು ಕ್ಷೇತ್ರ ಮೋದಿಗೆ ನೀಡಿ’ ಎಂಬ ಬಿಜೆಪಿ ಅಭಿಯಾನದಲ್ಲಿ ವಿವೇಕ್ ಓಬೇರಾಯ್ ಭಾಗಿಯಾಗಿದ್ದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಿವೇಕ್, ಭಾರತವನ್ನು ಆಳಿದ ಬಹುತೇಕ ರಾಜರು ಅಥವಾ ವಿದೇಶಿಗರು ನಮ್ಮ ದೇಶವನ್ನು ದೋಚುವ ಕೆಲಸ ಮಾಡಿದ್ದಾರೆ. ಇದೀಗ ದೇಶದ ಪ್ರತಿಯೊಬ್ಬ ನಾಗರಿಕರನು ಚೌಕಿದಾರ್ ಆಗಿದ್ದಾರೆ. ಮತ್ತೊಮ್ಮೆ ದೇಶವನ್ನು ಲೂಟಿ ಮಾಡುವವರ ಕೈಗೆ ನೀಡಲ್ಲ. ಮೋದಿ ಅವರ ಗೆಲುವು ನಿಶ್ಚಿತವಾಗಿದ್ದು, ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದರು.

    ಪಿಎಂ ನರೇಂದ್ರ ಮೋದಿ ಚಿತ್ರದಲ್ಲಿ ಪ್ರಧಾನಿ ಪಾತ್ರದಲ್ಲಿ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಏಪ್ರಿಲ್ 11ರಂದು ಸಿನಿಮಾ ಬಿಡುಗಡೆಯಾಗಲು ಸಿದ್ಧಗೊಂಡಿತ್ತು. ಆದರೆ ಚುನಾವಣಾ ಆಯೋಗ ಸಿನಿಮಾ ಬಿಡುಗಡೆ ತಡೆ ನೀಡಿತ್ತು. ಚುನಾವಣಾ ಫಲಿತಾಂಶ ಮರುದಿನ ಮೇ 24ರಂದು ಚಿತ್ರ ಬಿಡುಗಡೆಯಾಗಲಿದೆ.

  • ಸಿಎಂ ‘ಪಂಚ್’ತಂತ್ರಕ್ಕೆ ಪ್ರತ್ಯಸ್ತ್ರ-ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಚದುರಂಗದಾಟ

    ಸಿಎಂ ‘ಪಂಚ್’ತಂತ್ರಕ್ಕೆ ಪ್ರತ್ಯಸ್ತ್ರ-ಕುತೂಹಲ ಮೂಡಿಸಿದ ಸಿದ್ದರಾಮಯ್ಯ ಚದುರಂಗದಾಟ

    ಬೆಂಗಳೂರು: ಕಾಂಗ್ರೆಸ್ ಮುಖಂಡರ ವಿರುದ್ಧವೇ ಸಿಎಂ ಪಂಚ್‍ತಂತ್ರ ದಾಳ ಉರುಳಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿವೆ. ಈ ಬೆನ್ನಲ್ಲೇ ಮಾಜಿ ಸಿಎಂ ಸಿದ್ದರಾಮಯ್ಯ ಪಂಚ್‍ತಂತ್ರಕ್ಕೆ ತಿರುಗುಬಾಣವನ್ನು ಸಿದ್ಧಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

    ಮಂಡ್ಯ ಕ್ಷೇತ್ರದ ರೆಬಲ್ ಕೈ ಮುಖಂಡರು ಸುಮಲತಾ ಅಂಬರೀಶ್ ಜೊತೆ ಸಭೆ ನಡೆಸಿದ ವಿಡಿಯೋ ಲೀಕ್ ಆಗಿದ್ದಕ್ಕೆ ತಿರುಗೇಟು ನೀಡಲು ಸಿದ್ದರಾಮಯ್ಯ ಮೆಗಾ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ನಾಯಕರ ಕೆಲಸದ ವೈಖರಿಯ ಮಾಹಿತಿಯನ್ನು ಸಿದ್ದರಾಮಯ್ಯರು ತರಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆ ಬಂದಾಗ ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿದ್ದ ಸ್ಥಳೀಯ ಮುಖಂಡರು ಇದೀಗ ಸಚಿವ ಜಿ.ಟಿ.ದೇವೇಗೌಡರಿಗೆ ಆಪ್ತರಾಗಿದ್ದಾರಂತೆ. ಹಾಗಾಗಿ ಜಿ.ಟಿ.ದೇವೇಗೌಡರೇ ಸ್ವಕ್ಷೇತ್ರ ಧರ್ಮ ಪಾಲಿಸಿಲ್ಲ ಎಂದು ತಿರುಗೇಟು ನೀಡಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಪಂಚಕರ್ಮ ಚಿಕಿತ್ಸೆಯ ಬಳಿಕ ‘ಕೈ’ ಮುಖಂಡರ ವಿರುದ್ಧ ಸಿಎಂ ‘ಪಂಚತಂತ್ರ’ದ ಬಲೆ

    ಮಂಡ್ಯದಲ್ಲಿ ಮೈತ್ರಿ ಪಾಲನೆ ಆಗಿಲ್ಲ ಎಂದು ದಳಪತಿಗಳು ಆರೋಪಿಸಿದರೆ, ಚಾಮುಂಡೇಶ್ವರಿಯಲ್ಲಿ ಜೆಡಿಎಸ್ ನಾಯಕರ ನಡೆಯನ್ನು ಪ್ರಶ್ನಿಸಲು ಕಾಂಗ್ರೆಸ್ ಸಿದ್ಧಗೊಂಡಿದೆ. ಚಾಮುಂಡೇಶ್ವರಿಯಲ್ಲಿ ಜೆಡಿಎಸ್‍ನಿಂದಲೇ ಮೈತ್ರಿ ಪಾಲನೆಯಾಗಿಲ್ಲ ಎಂಬ ಅಸ್ತ್ರವನ್ನೇ ಸಿದ್ದರಾಮಯ್ಯ ಪ್ರಯೋಗಿಸಲು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕಾಂಗ್ರೆಸ್ ಅಭ್ಯರ್ಥಿ ವಿಜಯ್ ಶಂಕರ್ ಅವರಿಗೆ ಹಿನ್ನಡೆಯಾದರೆ ಈ ವಿಚಾರವನ್ನು ಮುಂದಿಟ್ಟುಕೊಂಡು ದಳ ನಾಯಕರಿಗೆ ತಿರುಗೇಟು ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎನ್ನಲಾಗಿದೆ.