Tag: ಲೋಕಸಭಾ ಚುನಾವಣೆ 2019

  • ಮಕ್ಕಳೊಂದಿಗೆ ಬಂದು ಬಿಜೆಪಿ ನಾಯಕನನ್ನು ಕೊಂದ ಕಾಂಗ್ರೆಸ್ಸಿಗ!

    ಮಕ್ಕಳೊಂದಿಗೆ ಬಂದು ಬಿಜೆಪಿ ನಾಯಕನನ್ನು ಕೊಂದ ಕಾಂಗ್ರೆಸ್ಸಿಗ!

    ಭೋಪಾಲ್: ಕಾಂಗ್ರೆಸ್ ನಾಯಕನೊಬ್ಬ 60 ವರ್ಷದ ಬಿಜೆಪಿ ನಾಯಕನನ್ನು ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಪಲಿಯಾ ಗ್ರಾಮದಲ್ಲಿ ನಡೆದಿದೆ.

    ಈ ಘಟನೆ ಭಾನುವಾರ ಸಂಜೆ 5.30ರ ಸುಮಾರಿಗೆ ನಡೆದಿದ್ದು, ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇಂದೋರ್ ನಲ್ಲಿ ಮತದಾನ ಕೊನೆಯಾಗುತ್ತಿದ್ದಂತೆಯೇ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಿಜೆಪಿ ನಾಯಕ ನೇಮಿಚಂದ್ ತನ್ವಾರ್‍ನನ್ನು ಕಾಂಗ್ರೆಸ್ ನಾಯಕ ಅರುಣ್ ಶರ್ಮಾ ಆತನ ಮನೆಯ ಹೊರಗಡೆಯೇ ಪಿಸ್ತೂಲ್ ನಿಂದ ಗುಂಡಿಕ್ಕಿ ಕೊಲೆ ಮಾಡಿದ್ದಾನೆ. ಇದೇ ಸಮಯದಲ್ಲಿ ಆರೋಪಿ ಅರುಣ್ ಶರ್ಮಾನ ಇಬ್ಬರು ಗಂಡು ಮಕ್ಕಳು ಕೂಡ ಜೊತೆಗಿದ್ದರು ತನ್ವಾರ ಪತ್ನಿ ಆರೋಪಿಸಿದ್ದಾರೆ.

    ಈ ಮಧ್ಯೆ ರಾಜಕೀಯ ದ್ವೇಷದಿಂದಲೇ ಬಿಜೆಪಿ ನಾಯಕನನ್ನು ಕೊಲೆ ಮಾಡಲಾಗಿದೆ. ತನ್ವರ್ ಬಿಜೆಪಿಯ ಸಕ್ರೀಯ ಕಾರ್ಯಕರ್ತನಾಗಿದ್ದನು ಎಂದು ಅಲ್ಲಿನ ಬಿಜೆಪಿ ರಾಜ್ಯಾಧ್ಯಕ್ಷ ರಾಕೇಶ್ ಸಿಂಗ್ ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದಕ್ಕೆ ಭಾನುವಾರ ಮಧ್ಯಾಹ್ನದ ಬಳಿಕ ತನ್ವರ್ ಹಾಗೂ ಆತನ ಮಕ್ಕಳಿಗೆ ಬೆದರಿಕೆ ಹಾಕಲಾಗಿತ್ತು. ಇದರಿಂದ ತಾವು ಮುಂದೆ ಕೆಟ್ಟ ಪರಿಣಾಮ ಎದರಿಸಬೇಕಾಗುತ್ತದೆ ಎಂದು ತನ್ವರ್ ತಿಳಿಸಿದ್ದರು ಎಂದು ಸಿಂಗ್ ಹೇಳಿದರು.

    ಪ್ರಕರಣ ಸಂಬಂಧ ಆರೋಪಿ ಕಾಂಗ್ರೆಸ್ ನಾಯಕನನ್ನು ಕೂಡಲೇ ಬಂಧಿಸಲಾಗುವುದು ಅಲ್ಲದೆ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಂಗ್ ಭರವಸೆ ನೀಡಿದ್ದಾರೆ.

     

  • ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲ್ಲ: ಮಮತಾ ಬ್ಯಾನರ್ಜಿ

    ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲ್ಲ: ಮಮತಾ ಬ್ಯಾನರ್ಜಿ

    – ಆಯೋಗ ಮೋದಿಗೆ ಶರಣಾಗಿದೆ ಅಂದ್ರು ರಾಗಾ

    ನವದೆಹಲಿ: ಭಾನುವಾರ ಲೋಕಸಭಾ ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿದೆ. 10ರಲ್ಲಿ 9 ಸಮೀಕ್ಷೆಗಳು ಕೇಂದ್ರದಲ್ಲಿ ಮತ್ತೊಮ್ಮೆ ಎನ್‍ಡಿಎ ಸರ್ಕಾರ ರಚನೆ ಮಾಡಲಿದೆ ಎಂದು ಸ್ಪಷ್ಟವಾಗಿ ಹೇಳಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಟಿಎಂಸಿ ನಾಯಕಿ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲ್ಲ ಎಂದು ಹೇಳಿದ್ದಾರೆ.

    ದೆಹಲಿಯಲ್ಲಿರುವ ಮಾಧ್ಯಮಗಳು ವಿಶ್ವಾಸರ್ಹತೆಯನ್ನು ಕಳೆದುಕೊಳ್ಳುತ್ತಿವೆ. ಎಕ್ಸಿಟ್ ಪೋಲ್ ಹೆಸರಿನಲ್ಲಿ ಸುಳ್ಳನ್ನು ಪ್ರಚಾರ ಮಾಡುತ್ತಿದ್ದಾರೆ. ಹಾಗಾಗಿ ಜನಮತಕ್ಕಾಗಿ ನಾವು ಕಾಯುತ್ತೇವೆ. ಪ್ರಧಾನಿ ಮೋದಿಜಿ ಏಳನೇ ಹಂತದ ಚುನಾವಣೆಗೂ ಮುನ್ನವೇ ಎನ್‍ಡಿಎ ಒಕ್ಕೂಟ 300ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಹೇಳುತ್ತಾರೆ. ಪೋಲ್ ಸರ್ವೆಗಳ ಅಂಕಿಅಂಶಗಳು ಮೋದಿ ಹೇಳಿಕೆಯೊಂದಿಗೆ ಹೋಲಿಕೆಯಾಗುತ್ತಿವೆ. ಇವಿಎಂನಲ್ಲಿ ಮತ್ತೆ ಗೊಂದಲ ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

    ಟ್ವೀಟ್ ಮೂಲಕ ಸಹ ಅಸಮಾಧಾನ ಹೊರ ಹಾಕಿರುವ ಮಮತಾ ಬ್ಯಾನರ್ಜಿ, ಎಕ್ಸಿಟ್ ಪೋಲ್ ಎಂಬ ಗಾಸಿಪ್ ನಂಬಲಾರೆ. ಸಾವಿರಾರು ಇವಿಎಂಗಳು ಬದಲಾವಣೆ ಮಾಡಿರುವ ಸಾಧ್ಯತೆಗಳಿವೆ. ಎಲ್ಲ ವಿರೋಧ ಪಕ್ಷಗಳು ಒಂದಾಗಿ ಈ ಅನ್ಯಾಯದ ವಿರುದ್ಧ ಹೋರಾಟದಲ್ಲಿ ಭಾಗಿಯಾಗಲು ಮನವಿ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಚುನಾವಣೆ ಸಂದರ್ಭದಲ್ಲಿ ಎಲೆಕ್ಟೋಲ್ ಬಾಂಡ್ ಮತ್ತು ಇವಿಎಂಗಳನ್ನು ಬದಲಾವಣೆ ಮಾಡಲಾಗಿದೆ. ಚುನಾವಣಾ ಆಯೋಗ ನಮೋ ಟಿವಿ, ಮೋದಿ ಸೇನೆ ಮತ್ತು ಕೇದಾರನಾಥದಲ್ಲಿಯ ಡ್ರಾಮಾ, ಮೋದಿ ಹಾಗು ಗ್ಯಾಂಗ್ ಮುಂದೆ ಶರಣಾಗಿರೋದನ್ನು ಎಲ್ಲ ಭಾರತೀಯರು ನೋಡಿದ್ದಾರೆ. ಚುನಾವಣಾ ಆಯೋಗ ಮೋದಿ ಗ್ಯಾಂಗ್ ಮುಂದೆ ಗೌರವಾನ್ವಿತವಾಗಿ ಭಯಗೊಂಡಿದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

    ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಉಮರ್ ಅಬ್ದುಲ್ಲಾ, ಯಾವುದೇ ಎಕ್ಸಿಟ್ ಪೋಲ್ ಗಳು ಸುಳ್ಳು ಹೇಳುವುದಿಲ್ಲ. ಟಿವಿ ಬಂದ್ ಮಾಡಿ, ಸೋಶಿಯಲ್ ಮೀಡಿಯಾದಿಂದ ದೂರ ಉಳಿಯುವ ಸಮಯ ಇದಾಗಿದೆ. ಮೇ 23ರ ಫಲಿತಾಂಶ ಇಡೀ ಜಗತ್ತೇ ನೋಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.

  • ಎಕ್ಸಿಟ್ ಪೋಲ್ ಬೆನ್ನಲ್ಲೇ ದೋಸ್ತಿ ಕೂಟದಲ್ಲಿ ಆತಂಕ!

    ಎಕ್ಸಿಟ್ ಪೋಲ್ ಬೆನ್ನಲ್ಲೇ ದೋಸ್ತಿ ಕೂಟದಲ್ಲಿ ಆತಂಕ!

    ಬೆಂಗಳೂರು: ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಭಾನುವಾರ ಸಂಜೆ ಹೊರಬಿದ್ದಿದ್ದು, ಸರಿ ಸುಮಾರು ಎಲ್ಲಾ ಸಮೀಕ್ಷೆಗಳೂ ಬಿಜೆಪಿಯೇ ಬಹುಮತ ಸಾಧಿಸುವುದಾಗಿ ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇದೀಗ ಕಾಂಗ್ರೆಸ್‍ನಲ್ಲಿ ಅಸಮಾಧಾನ ಮತ್ತಷ್ಟು ಭುಗಿಲೆದ್ದಿದೆ ಎನ್ನಲಾಗಿದೆ.

    ಸಮೀಕ್ಷೆಯಿಂದಾಗಿ ಇಬ್ಬರು ಸೇರಿಕೊಂಡು ಮೈತ್ರಿ ಮಾಡಿದರೆ ಹೆಚ್ಚು ಲೋಕಸಭಾ ಸೀಟು ಗೆಲ್ಲಬಹುದೆಂಬ ಲೆಕ್ಕಾಚಾರ ಸುಳ್ಳಾಗುತ್ತಾ ಅನ್ನೋ ಆತಂಕ ಕಾಂಗ್ರೆಸ್ ನಾಯಕರಲ್ಲಿ ಶುರುವಾಗಿದೆ. ಇರೋ ಸೀಟನ್ನೇ ಉಳಿಸಿಕೊಳ್ಳುವುದು ಕಷ್ಟವಾದರೆ ಇಂತಹ ಮೈತ್ರಿ ಯಾಕೆ ಬೇಕು. ಹತ್ತು ಸೀಟೂ ಜಯಿಸೋಕೆ ಆಗಲ್ಲ ಅಂದರೆ ಈ ಮೈತ್ರಿಯ ಅನಿವಾರ್ಯತೆ ಏನು ಎಂಬ ಪ್ರಶ್ನೆಗಳು ಕಾಂಗ್ರೆಸ್ ನಾಯಕರಲ್ಲಿ ಮೂಡಿದ್ದು, ಈ ಹಿನ್ನೆಲೆಯಲ್ಲಿ `ಮೈತ್ರಿ ಮುರಿಯೋಣ, ಪಕ್ಷ ಉಳಿಸೋಣ’ ಎಂಬ ಕಾಂಗ್ರೆಸ್ ನಾಯಕರ ಅಭಿಯಾನ ಚುರುಕುಗೊಳ್ಳಲಿದೆ ಎಂಬುದಾಗಿ ತಿಳಿದುಬಂದಿದೆ.

    ಮೈತ್ರಿಯಿಂದಾದ ನಷ್ಟದ ಲೆಕ್ಕ ಇಡಲು ಮುಂದಾದ ರಾಜ್ಯ ನಾಯಕರು!
    1. ಜೆಡಿಎಸ್‍ಗೆ ಬಿಟ್ಟುಕೊಟ್ಟ ಏಳೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯವಿತ್ತು. ಈಗ ಅಲ್ಲೇ ಕಾಂಗ್ರೆಸ್ ಅಸ್ತಿತ್ವದ ಪ್ರಶ್ನೆ ಎದ್ದಿದೆ.
    2. ಮಂಡ್ಯ, ಹಾಸನದಲ್ಲಿ ಜೆಡಿಎಸ್‍ಗೆ ಕಾಂಗ್ರೆಸ್ ಎದುರಾಳಿ ಆಗಿತ್ತು. ಆ ಸ್ಥಾನ ಈಗ ಬಿಜೆಪಿ ಪಾಲಾಗಿದೆ.
    3. ತುಮಕೂರಲ್ಲಿ ಕಾಂಗ್ರೆಸ್ ಗೆಲ್ಲುವ ಕ್ಷೇತ್ರ, ಆದರೆ ಜೆಡಿಎಸ್‍ಗೆ ಬಿಟ್ಟು ಕೊಟ್ಟು ಕಾಂಗ್ರೆಸ್ ಕಣ್ಮರೆ ಆಗಿದೆ.
    4. ಮಂಡ್ಯದಲ್ಲಿ ಸುಮಲತಾ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರೆ ನಮ್ಮದೇ ಗೆಲುವಾಗುತ್ತಿತ್ತು. ಆದರೆ ಮೈತ್ರಿಯಿಂದಾಗಿ ಕಾಂಗ್ರೆಸ್ ಮುಖಂಡರೇ ಮೈತ್ರಿ ಅಭ್ಯರ್ಥಿ ವಿರುದ್ಧ ತಿರುಗಿ ಬೀಳುವಂತಾಯ್ತು.
    5. ಮೈಸೂರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲದಂತೆ ಬಿಜೆಪಿ ಜೊತೆಗೆ ಜೆಡಿಎಸ್ ಒಪ್ಪಂದ ಮಾಡಿಕೊಂಡಿತ್ತು.
    6. ಕೋಲಾರ, ಚಿಕ್ಕಬಳ್ಳಾಪುರದಲ್ಲೂ ನಮ್ಮ ಅಭ್ಯರ್ಥಿಯ ಬೆನ್ನಿಗೆ ಜೆಡಿಎಸ್ ಚೂರಿ ಹಾಕಿದೆ.
    7. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದರೆ ಕನಿಷ್ಠ 12 ಸ್ಥಾನವನ್ನಾದರೂ ಸುಲಭವಾಗಿ ಗೆಲ್ಲಬಹುದಿತ್ತು.
    8. ಮೈತ್ರಿ ಧರ್ಮ ಪಾಲಿಸುವ ಅನಿವಾರ್ಯತೆಯಲ್ಲಿ ಕೈಯಲ್ಲಿದ್ದಿದ್ದನ್ನೂ ಕಳೆದುಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
    9. ಹೀಗೆ ಆದ್ರೆ ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ಅಸ್ತಿತ್ವನೇ ಹೊರಟು ಹೋಗುತ್ತದೆ.

    ಒಟ್ಟಿನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಉಳಿಯಬೇಕಾದರೆ ಮೈತ್ರಿ ಮುರಿದುಕೊಳ್ಳುವುದು ಒಳ್ಳೆಯದು. ಎಕ್ಸಿಟ್ ಪೋಲ್ ಪ್ರಕಾರ ಕಾಂಗ್ರೆಸ್‍ಗೆ ಹೀನಾಯ ಸೋಲಾದರೆ ಮೈತ್ರಿ ಖತಂ ಆಗಲಿದ್ದು, ಮೇ 23ರ ಫಲಿತಾಂಶ ಬಳಿಕ `ಮೈತ್ರಿ ಹಠಾವೋ, ಕಾಂಗ್ರೆಸ್ ಬಚಾವೋ’ ಅಭಿಯಾನ ಜೋರಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

  • ರಾಜ್ಯದಲ್ಲಿ ಮೊಳಗಲಿದೆ ಕೇಸರಿ ಕಹಳೆ – ಮಂಡ್ಯದಲ್ಲಿ ಯಾರು `ಎಕ್ಸಿಟ್’?

    ರಾಜ್ಯದಲ್ಲಿ ಮೊಳಗಲಿದೆ ಕೇಸರಿ ಕಹಳೆ – ಮಂಡ್ಯದಲ್ಲಿ ಯಾರು `ಎಕ್ಸಿಟ್’?

    ಬೆಂಗಳೂರು/ಮಂಡ್ಯ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಬಹುತೇಕ ಜನರು ಬಿಜೆಪಿಗೆ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ರಾಜ್ಯ ಬಿಜೆಪಿ, ಕಾಂಗ್ರೆಸ್- ಜೆಡಿಎಸ್ ಮೈತ್ರಿಗೆ ಟಕ್ಕರ್ ಕೊಡಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳಿಗೆ 2 ಹಂತದಲ್ಲಿ ನಡೆದ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ಹೆಚ್ಚಿನ ಒಲವು ತೋರಿದ್ದಾನೆ. ಕಳೆದ ಚುನಾವಣೆಯಲ್ಲಿ 17 ಸ್ಥಾನಗಳಿಗೆ ತೃಪ್ತಿ ಪಟ್ಟಿದ್ದ ಬಿಜೆಪಿ ಈ ಬಾರಿ 20ರ ಗಡಿ ದಾಟಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

    ಪಕ್ಷೇತರ ಅಭ್ಯರ್ಥಿಗಿದೆ ಗೆಲುವಿನ ಅದೃಷ್ಟ!:
    ಸಾಕಷ್ಟು ಕುತೂಹಲ ಕೆರಳಿಸಿದ್ದ ಮಂಡ್ಯದಲ್ಲಿ ಕೆಲವೊಂದು ಸಮೀಕ್ಷೆಗಳು ಸುಮಲತಾ ಗೆಲುವನ್ನ ಸಾರಿ ಹೇಳುತ್ತಿವೆ. ಮತ್ತೆ ಕೆಲವು ನಿಖಿಲ್ ಗೆಲುವಿನ ಸುಳಿವು ನೀಡಿದೆ. ಕರ್ನಾಟಕದಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಒಂಬತ್ತರಲ್ಲಿ ಮತ್ತು ಪಕ್ಷೇತರ ಅಂದರೆ ಸುಮಲತಾ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಸೀ ವೋಟರ್ ಸರ್ವೆ ಹೇಳಿದೆ.

    ಇಂಡಿಯಾ ಟುಡೇ ಆಕ್ಸಿಸ್ ಸರ್ವೆ ಕೂಡ ಮಂಡ್ಯದ ಬಗ್ಗೆ ಕುತೂಹಲಕಾರಿ ಫಲಿತಾಂಶವನ್ನೇ ಕೊಟ್ಟಿದೆ. ಇವರ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿಗೆ 21ರಿಂದ 25 ಸೀಟುಗಳು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ 3ರಿಂದ 6 ಸೀಟುಗಳು ಸಿಗಲಿದ್ದು, ಸ್ವತಂತ್ರ ಅಭ್ಯರ್ಥಿ ಮಂಡ್ಯದಲ್ಲಿ ಗೆಲ್ಲಬಹುದು ಎಂದು ಹೇಳಿದೆ.

    ಟೈಮ್ಸ್ ನೌ ವಿಎಂಆರ್ ಸಮೀಕ್ಷೆಯಲ್ಲಿ ಕೂಡ ಬಿಜೆಪಿಗೆ ಕರ್ನಾಟಕದಲ್ಲಿ 21 ಸ್ಥಾನಗಳ ಸಿಗಲಿವೆಯಂತೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಗೆ ಬರೀ ಏಳೂ ಸ್ಥಾನಗಳು ದೊರಕಲಿದ್ದು ಇತರ ಪಕ್ಷಗಳಿಗಾಗಲಿ ಪಕ್ಷೇತರರಿಗಾಗ್ಲಿ ಯಾವುದೇ ಸ್ಥಾನಗಳು ಸಿಗಲ್ಲ ಅಂದಿದೆ. ಈ ಸಮೀಕ್ಷೆಯಲ್ಲಿ ಸುಮಲತಾಗೆ ಯಾವುದೇ ಸ್ಥಾನಗಳನ್ನ ಕೊಟ್ಟಿಲ್ಲ. ಆದರೆ ಬಿಜೆಪಿ 20ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನ ಗಳಿಸುತ್ತದೆ ಅಂದಿದ್ದು, ಇದೀಗ ಕುತೂಹಲ ಮೂಡಿಸಿದೆ.

    ಚಾಣಾಕ್ಯ ಸಮೀಕ್ಷೆಯ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ, ಬಿಜೆಪಿಗೆ 23 ಸೀಟುಗಳು ಬಂದರೆ, 5 ಸೀಟುಗಳು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟಕ್ಕೆ ಸಿಗಲಿವೆ. ಪಕ್ಷೇತರ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ನೋಡಿದರೆ ಮಂಡ್ಯದಲ್ಲಿ ಸುಮಲತಾ ಸೋಲು ಕಾಣುತ್ತಾರೆ ಅನ್ನೋದು ಸಮೀಕ್ಷಾ ವರದಿಯಾಗಿದೆ.

    ಎಬಿಪಿ ಸಮೀಕ್ಷೆ ಪ್ರಕಾರ ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 15 ಕ್ಷೇತ್ರಗಳನ್ನ ಬಾಚಿಕೊಂಡ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟ 13 ಕ್ಷೇತ್ರಗಳಲ್ಲಿ ಜಯಭೇರಿಯಾಗಲಿದೆ. ಪಕ್ಷೇತರರಿಗೆ ಯಾವುದೇ ಸ್ಥಾನ ಇಲ್ಲ. ಈ ಪ್ರಕಾರ ಹಾಸನ, ಮಂಡ್ಯ, ತುಮಕೂರು ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

    ಇಂಡಿಯಾ ಟಿವಿ ಸಮೀಕ್ಷೆಯಲ್ಲಿ ಬಿಜೆಪಿಗೆ 17 ಸ್ಥಾನಗಳು ಸಿಕ್ರೆ, ಕಾಂಗ್ರೆಸ್‍ಗೆ 8 ಸ್ಥಾನಗಳು ಸಿಗಲಿವೆಯಂತೆ. ಜೆಡಿಎಸ್‍ಗೆ 3 ಸೀಟುಗಳು, ಇತರೆ 0 ಅನ್ನೋ ವರದಿಯನ್ನ ಕೊಟ್ಟಿದೆ. ಈ ಪ್ರಕಾರ ಕರ್ನಾಟಕದಲ್ಲಿ ಜೆಡಿಎಸ್‍ಗೆ ಸಿಗಲಿರೋ 3 ಸೀಟುಗಳು ಹಾಸನ, ಮಂಡ್ಯ, ತುಮಕೂರು ಎನ್ನಲಾಗುತ್ತಿದೆ.

    ಈ ಎಲ್ಲಾ ಮತಗಟ್ಟೆಯ ಸಮೀಕ್ಷೆಗಳನ್ನ ನೋಡಿದರೆ ಕರ್ನಾಟಕದಲ್ಲಿ ಬಿಜೆಪಿ ಪಾಳಯ, ದೋಸ್ತಿಗಳನ್ನ ಸೋಲಿಸುವಂತೆ ಕಾಣಿಸುತ್ತಿದೆ. ಒಟ್ಟಾರೆ ಇದೆಲ್ಲದಕ್ಕೂ ಫೈನಲ್ ಉತ್ತರ ಮೇ 23ಕ್ಕೆ ಸಿಗಲಿದೆ.

  • ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

    ಕರ್ನಾಟಕದಲ್ಲಿ ಬಿಜೆಪಿ ಜಯಭೇರಿ

    ಬೆಂಗಳೂರು: ಲೋಕಸಭಾ ಚುನಾವಣೆ ಎಲ್ಲ ಹಂತದ ಮತದಾನ ಅಂತ್ಯಗೊಂಡಿದ್ದು ಚುನಾವಣೋತ್ತರ ಸಮೀಕ್ಷೆಗಳು ಬಹಿರಂಗಗೊಂಡಿವೆ. ಎಲ್ಲ ಸಮೀಕ್ಷೆಗಳ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಸುಮಾರು 21 ರಿಂದ 22 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಭವಿಷ್ಯ ನುಡಿದಿವೆ.

    ಕಾಂಗ್ರೆಸ್-ಜೆಡಿಎಸ್ ನಾಯಕರ ಕಿತ್ತಾಟ ನೇರವಾಗಿ ಬಿಜೆಪಿ ಲಾಭ ಪಡೆದುಕೊಂಡಿದೆ. 2014ರ ಚುನಾವಣೆಯಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿಕೊಂಡಿತ್ತು. ಇದೀಗ 2019ರ ಚುನಾವಣೆಯಲ್ಲಿ ತನ್ನ ಸ್ಥಾನಗಳನ್ನು ಏರಿಸಿಕೊಂಡಂತೆ ಕಾಣುತ್ತಿದೆ. ಹಾಗಾದ್ರೆ ಸಮೀಕ್ಷೆಗಳ ಅಂಕಿ-ಅಂಶಗಳು ಹೀಗಿವೆ.

    1. ಟೈಮ್ಸ್ ನೌ: ಬಿಜೆಪಿ-21, ಕಾಂಗ್ರೆಸ್+ಜೆಡಿಎಸ್-9, ಇತರೆ-0
    2. ಸಿ ವೋಟರ್: ಬಿಜೆಪಿ-18, ಕಾಂಗ್ರೆಸ್+ಜೆಡಿಎಸ್-09 ಇತರೆ-01
    3. ಇಂಡಿಯಾ ಟುಡೇ: ಬಿಜೆಪಿ-21ರಿಂದ25, ಕಾಂಗ್ರೆಸ್+ಜೆಡಿಎಸ್-05 ಇತರೆ-1
    4. ಚಾಣಕ್ಯ: ಬಿಜೆಪಿ-23, ಕಾಂಗ್ರೆಸ್-05, ಇತರೆ-00
    5. ನ್ಯೂಸ್ 18: ಬಿಜೆಪಿ-22, ಕಾಂಗ್ರೆಸ್+ಜೆಡಿಎಸ್-6, ಇತರೆ-0
    6. ಎನ್‍ಡಿಟಿವಿ: ಬಿಜೆಪಿ-18ರಿಂದ20, ಕಾಂಗ್ರೆಸ್+ಜೆಡಿಎಸ್-08, ಇತರೆ-00
    7. ಸಿಎನ್‍ಎನ್: ಬಿಜೆಪಿ-22, ಕಾಂಗ್ರೆಸ್-06, ಇತೆರೆ-00
    8. ಎಬಿಪಿ: ಬಿಜೆಪಿ-15, ಕಾಂಗ್ರೆಸ್-13, ಇತರೆ-00

    2014ರ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 17, ಕಾಂಗ್ರೆಸ್ 9, ಜೆಡಿಎಸ್ 2 ಸ್ಥಾನಗಳನ್ನು ಗೆದ್ದುಕೊಂಡಿತ್ತು.

  • ತೇಜ್ ಪ್ರತಾಪ್ ಯಾದವ್ ಭದ್ರತಾ ಸಿಬ್ಬಂದಿಯಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

    ತೇಜ್ ಪ್ರತಾಪ್ ಯಾದವ್ ಭದ್ರತಾ ಸಿಬ್ಬಂದಿಯಿಂದ ಕ್ಯಾಮೆರಾಮನ್ ಮೇಲೆ ಹಲ್ಲೆ

    ಪಾಟ್ನಾ: ಆರ್ ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಅವರ ಭದ್ರತಾ ಸಿಬ್ಬಂದಿ ಮಾಧ್ಯಮದ ಕ್ಯಾಮೆರಾಮನ್ ಹಲ್ಲೆ ನಡೆಸುವ ಮೂಲಕ ಗೂಂಡಾ ವರ್ತನೆಯನ್ನು ತೋರಿದ್ದಾರೆ.

    ಮಾಜಿ ಸಚಿವರಾಗಿರುವ ತೇಜ್ ಪ್ರತಾಪ್ ಯಾದವ್ ಎಲೆಕ್ಟ್ರಿಕ್ ರಿಕ್ಷಾ ಮೂಲಕ ಮತ ಚಲಾಯಿಸಿ ಹೊರಟಿದ್ದರು. ಈ ವೇಳೆ ಕ್ಯಾಮೆರಾಮನ್ ರಂಜನ್ ಎಂಬವರ ಕಾಲಿಗೆ ರಿಕ್ಷಾದ ಗಾಲಿ ತಾಗಿದೆ. ಈ ವೇಳೆ ರಿಕ್ಷಾ ಚಾಲಕನಿಗೆ ಸ್ವಲ್ಪ ಹಿಂದೆ ಹೋಗುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ಯಾದವ್ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ.

    ಹಲ್ಲೆಯ ಬಳಿಕ ಮಾತನಾಡಿದ ತೇಜ್ ಪ್ರತಾಪ್ ಯಾದವ್, ಮಾಧ್ಯಮದವರ ಮೇಲೆ ಆಕ್ರೋಶ ಹೊರಹಾಕಿದರು. ನನ್ನ ಭದ್ರತಾ ಸಿಬ್ಬಂದಿ ಯಾವುದೇ ತಪ್ಪು ಮಾಡಿಲ್ಲ. ಮತ ಹಾಕಿ ಬಂದಾಗ ಎಲ್ಲ ಫೋಟೋಗ್ರಾಫರ್ ಗಳು ನನ್ನ ಕಾರ್ ಮುಂದೆ ನಿಂತು ಫೋಟೋ ಕ್ಲಿಕ್ಕಿಸಿತೊಡಗಿದರು. ಹೀಗಾಗಿ ನನ್ನ ಕಾರಿನ ಗ್ಲಾಸ್ ಸಹ ಒಡೆದಿದೆ. ನನ್ನ ಕೊಲೆಗೆ ಕೆಲವರು ಸಂಚು ರೂಪಿಸುತ್ತಿದ್ದಾರೆ. ಈ ಗಲಾಟೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ.

  • ದೇವರಲ್ಲಿ ನಾನು ಏನನ್ನೂ ಬೇಡಿಲ್ಲ – ಧ್ಯಾನದ ಬಳಿಕ ಮೋದಿ ಮಾತು

    ದೇವರಲ್ಲಿ ನಾನು ಏನನ್ನೂ ಬೇಡಿಲ್ಲ – ಧ್ಯಾನದ ಬಳಿಕ ಮೋದಿ ಮಾತು

    ಡೆಹ್ರಾಡೂನ್: ನಾನು ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದಾಗ ಹಾಗೂ ಧ್ಯಾನದ ವೇಳೆ ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

    ಕೇದಾರನಾಥ ಗುಹೆಯಲ್ಲಿ 20 ಗಂಟೆ ಧ್ಯಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಮತಗಿಟ್ಟಿಸಲು ಗುಹೆಯೊಳಗೆ ಧ್ಯಾನ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಶಾಂತಿ, ಪ್ರಾರ್ಥನೆ ಹಾಗೂ ಧ್ಯಾನ ಮಾಡುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಈ ಸಂದರ್ಭದಲ್ಲಿ ನಾನು ದೇವರಲ್ಲಿ ಏನನ್ನೂ ಬೇಡಿಕೊಂಡಿಲ್ಲ ಎಂದು ಹೇಳುವ ಮೂಲಕ ತನ್ನ ಮೇಲೆ ಕೇಳಿ ಬಂದ ಆರೋಪಗಳಿಗೆ ತಿರುಗೇಟು ನೀಡಿದರು.

    ಕೇದಾರನಾಥ ದೇವಾಲಯವನ್ನು ಅಭಿವೃದ್ಧಿ ಪಡಿಸುವುದೇ ನನ್ನ ಮೂಲ ಉದ್ದೇಶವಾಗಿದೆ. ಈ ಪುಣ್ಯ ಸ್ಥಳವನ್ನು ಪ್ರವಾಸಿ ತಾಣವನ್ನಾಗಿ ಇನ್ನಷ್ಟು ಅಭಿವೃದ್ಧಿಪಡಿಸಬೇಕೆಂಬುದೇ ನನ್ನ ಗುರಿಯಾಗಿದೆ. ಪವಿತ್ರ ಧಾರ್ಮಿಕ ಕ್ಷೇತ್ರ ಕೇದಾರನಾಥ ನನ್ನ ಅವಧಿಯಲ್ಲಿ ಅಭಿವೃದ್ಧಿಯಾಗುತ್ತಿರುವುದು ನನಗೆ ಸಂತಸ ತಂದಿದೆ. ದೇವಾಲಯದ ಅಭಿವೃದ್ಧಿಗಾಗಿ ತಂಡ ಕಠಿಣ ಪರಿಶ್ರಮ ಪಡುತ್ತಿದೆ. ಒಟ್ಟಿನಲ್ಲಿ ಈ ಪ್ರದೇಶದ ಬಗ್ಗೆ ವರದಿ ಮಾಡುವ ಮೂಲಕ ಪ್ರವಾಸಿ ತಾಣವನ್ನಾಗಿ ಮಾಡಲು ಮಾಧ್ಯಮ ಕೂಡ ಸಹಾಯ ಮಾಡಿದೆ. ಅದಕ್ಕಾಗಿ ಮಾಧ್ಯಮ ಮಿತ್ರರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.

    ಲೋಕಸಮರದ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಲೇ ಶನಿವಾರ ಪಹರಿ ಉಡುಗೆಯಲ್ಲಿ ಕೇದಾರನಾಥದಲ್ಲಿ ಪ್ರಧಾನಿ ಮೋದಿ ಪೂಜೆ ಸಲ್ಲಿಸಿದ್ದರು. ಅಲ್ಲಿಂದ ಮಳೆಯಲ್ಲೇ ನಡೆದು ಸುಮಾರು ಎರಡು ಕಿ.ಮೀ ದೂರವಿರುವ ಗುಹಾಲಯಕ್ಕೆ ತೆರಳಿ ಗವಿಯೊಳಗೆ ಧ್ಯಾನಸ್ಥರಾಗಿ ಮಹಾತಪಸ್ಸು ಮಾಡಿದ್ದರು. ಶನಿವಾರ ಮಧ್ಯಾಹ್ನ 2.45 ರಿಂದ ಧ್ಯಾನಸ್ಥರಾಗಿರುವ ಮೋದಿ ಇಂದು ಬೆಳಗ್ಗೆ 10.45ಕ್ಕೆ ಮುಗಿಸಿದ್ದಾರೆ. ಬರೋಬ್ಬರಿ 20 ಗಂಟೆ ಕಾಲ ಮೋದಿ ತಪಸ್ಸು ಕೈಗೊಂಡಿದ್ದಾರೆ. ಮೋದಿಯವರು 2014ರಲ್ಲಿ ಬಿಜೆಪಿಯಿಂದ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕೇದಾರನಾಥಕ್ಕೆ ನಾಲ್ಕನೇ ಬಾರಿ ಭೇಟಿ ಮಾಡಿದ್ದಾರೆ.

  • ಮೋದಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಮೆಗಾ ತಂತ್ರ!

    ಮೋದಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್ ಮೆಗಾ ತಂತ್ರ!

    -ಕೇಂದ್ರದಲ್ಲಿ ಕರ್ನಾಟಕ ಫಾರ್ಮುಲಾ..?

    ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆ ಕೊನೆಯ ಹಂತದಲ್ಲಿದ್ದು, ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ತಂತ್ರಗಳನ್ನು ರಚಿಸುತ್ತಿದೆ. ಇದೀಗ ಯಾವ ಪಕ್ಷಕ್ಕೂ ಬಹುಮತ ಸಿಗದೇ ಇದ್ದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಕರ್ನಾಟಕದ ಫಾರ್ಮೂಲಾ ಜಾರಿಗೆ ತರಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

    2018ರಲ್ಲ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ ಟ್ರೆಂಡ್ ಗೊತ್ತಾಗುತ್ತಿದ್ದಂತೆ ಜೆಡಿಎಸ್ ಬಾಗಿಲನ್ನು ಕಾಂಗ್ರೆಸ್ ತಟ್ಟಿತ್ತು. ಕಾಂಗ್ರೆಸ್ 80 ಕ್ಷೇತ್ರಗಳನ್ನು ಗೆದ್ದಿದ್ದರೂ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಬಿಟ್ಟುಕೊಟ್ಟು ಮೈತ್ರಿ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಿದೆ. ಇದೇ ಫಾರ್ಮೂಲಾವನ್ನು ಕೇಂದ್ರದಲ್ಲಿ ತರಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಮೆಗಾ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಬಿಜೆಪಿಯೇತರ ಪಕ್ಷಗಳನ್ನು ಒಗ್ಗೂಡಿಸಲು ಸೋನಿಯಾ ಗಾಂಧಿ ಮುಂದಾಗಿದ್ದು, ಈಗಾಗಲೇ ಜಗನ್, ಕೆಸಿಆರ್, ನವೀನ್ ಪಟ್ನಾಯಕ್ ರಿಗೆ ಪತ್ರ ಬರೆದಿದ್ದಾರೆ. ಫಲಿತಾಂಶ ಬರೋ ಸಮಯದಲ್ಲಿ ಎಲ್ಲರನ್ನು ಒಗ್ಗೂಡಿಸಿ ಮೋದಿ ವಿರುದ್ಧ ರಣತಂತ್ರಕ್ಕೆ ಕಾಂಗ್ರೆಸ್ ಮುಂದಾಗಿದೆ. ಒಂದು ವೇಳೆ ಬಿಜೆಪಿಯೇತರ ಪಕ್ಷಗಳು ರಾಹುಲ್ ಗಾಂಧಿ ಪ್ರಧಾನಿ ಆಗೋದನ್ನು ವಿರೋಧಿಸಿದ್ರೆ ಬಿಎಸ್‍ಪಿ ನಾಯಕಿ ಉಮಾವತಿ ಅಥವಾ ಪಶ್ವಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಪಿಎಂ ಸ್ಥಾನ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧರಿಸಿದೆ ಎನ್ನಲಾಗಿದೆ.

  • ಮೋದಿ ಎಂಜಿನೀಯರ್ ಪದವೀಧರರಾ? ಮರುಜೀವ ಪಡೆದುಕೊಂಡ ಪ್ರಧಾನಿ ಶೈಕ್ಷಣಿಕ ಚರ್ಚೆ

    ಮೋದಿ ಎಂಜಿನೀಯರ್ ಪದವೀಧರರಾ? ಮರುಜೀವ ಪಡೆದುಕೊಂಡ ಪ್ರಧಾನಿ ಶೈಕ್ಷಣಿಕ ಚರ್ಚೆ

    -ವೈರಲ್ ಪೇಪರ್ ತುಣುಕಿನ ರಹಸ್ಯ ರಿವೀಲ್

    ಉಡುಪಿ: ಪ್ರಧಾನಿ ನರೇಂದ್ರ ಮೋದಿಯ ಕುಟುಂಬ ಮತ್ತು ಶಿಕ್ಷಣ ಸಾಕಷ್ಟು ಚರ್ಚೆಗೆ ಗ್ರಾಸವಾದ ವಿಚಾರ. ಪ್ರತಿಪಕ್ಷಗಳು ಇವತ್ತಿಗೂ ಈ ಎರಡು ವಿಚಾರವನ್ನಿಟ್ಟುಕೊಂಡು ಬಿಜೆಪಿ ಮೇಲೆ ಟೀಕಾಸ್ತ್ರ ಪ್ರಯೋಗ ಮಾಡುತ್ತಿದೆ. ಈ ನಡುವೆ ನರೇಂದ್ರ ಮೋದಿ ಇಂಜಿನಿಯರಿಂಗ್ ಪದವೀಧರರೇ..? ಅನ್ನೋ ಚರ್ಚೆಗೆ ಮರುಜೀವ ಬಂದಿದೆ.

    ಮೋದಿ ಚಹಾ ಮಾರುತ್ತಿದ್ದರಂತೆ, ಮೋದಿ ಹಿಮಾಲಯದಲ್ಲಿ ನಾಲ್ಕು ವರ್ಷ ತಪಸ್ಸು ಮಾಡಿದ್ದರಂತೆ, ಮೋದಿ ಹಾಗೆ ಮಾಡಿದ್ರಂತೆ, ಮೋದಿ ಹೀಗೆ ಮಾಡಿದ್ರಂತೆ. ಪ್ರಧಾನಿ ನರೇಂದ್ರ ಮೋದಿಯ ಜೀವನದ ಸಾಕಷ್ಟು ವಿಷಯಗಳು ಚರ್ಚೆಯಲ್ಲಿದೆ. ಕೆಲವು ವಿಷಯಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿದೆ. ಇನ್ನು ಕೆಲವಕ್ಕೆ ಸಿಕ್ಕಿಲ್ಲ. ಈ ನಡುವೆ ಮೋದಿ ಇಂಜಿನಿಯರಿಂಗ್ ಪದವೀಧರ ಅನ್ನೋ ವಿಚಾರ ಚರ್ಚೆಗೆ ಬಂದಿದೆ.

    ಈ ಇಂಜಿನಿಯರ್ ವಿಚಾರ ಚರ್ಚೆಗೆ ಬರಲು ಕಾರಣ ತರಂಗ ವಾರಪತ್ರಿಕೆಯ ವರದಿಯೊಂದರ ತುಣುಕು. 1992ರಲ್ಲಿ ಪ್ರಕಟವಾಗಿದ್ದ ಲೇಖನವೊಂದರಲ್ಲಿ ನರೇಂದ್ರ ಮೋದಿ ಉಡುಪಿಗೆ ಬಂದಿದ್ದರ ಬಗ್ಗೆ ಮಾಹಿತಿಗಳಿವೆ. ಈ ಸಂದರ್ಭ ತರಂಗದ ವರದಿಗಾರರು ಮೋದಿ ಅವರ ಸಂದರ್ಶನ ಮಾಡಿದ್ದಾರೆ. ಆರ್ ಎಸ್‍ಎಸ್ ನ ಸೌರಾಷ್ಟ್ರದ ಕಾರ್ಯಾವಾಹಕ, ಸಂಘಟನಾ ಚತುರ, ಇಂಜಿನಿಯರ್ ಪದವೀಧರ, ಅವಿವಾಹಿತ ಅಂತ ಉಲ್ಲೇಖ ಮಾಡಿದ್ದಾರೆ.

    2019ರ ಲೋಕಸಮರ ಸಂದರ್ಭ ಈ ಪೇಪರ್ ಕಟ್ಟಿಂಗ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಿದೆ. ಇದರ ಸತ್ಯಾಸತ್ಯತೆ ಹುಡುಕಲು ಹೋದ ಪಬ್ಲಿಕ್ ಟಿವಿಗೆ ಕೆಲವಷ್ಟು ಮಾಹಿತಿಗಳು ಸಿಕ್ಕಿದೆ. ನರೇಂದ್ರ ಮೋದಿ ಇಂಜಿನಿಯರ್ ಪದವೀಧರರಲ್ಲ. ಇದು ಪ್ರಮಾದದಿಂದಾದ ವರದಿ ಎಂಬುದನ್ನು ಮೋದಿ ಜೊತೆಗಿದ್ದ ಉಡುಪಿ ನಗರಸಭೆಯ ಆಗಿನ ಅಧ್ಯಕ್ಷ ಗುಜ್ವಾಡಿ ಪ್ರಭಾಕರ ನಾಯಕ್ ಸ್ಪಷ್ಟಪಡಿಸಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ 1992ರಲ್ಲಿ ಉಡುಪಿಗೆ ಬಂದದ್ದು ಹೌದು. ಎಲ್.ಕೆ. ಅಡ್ವಾಣಿಯವರ ರಥಯಾತ್ರೆಯ ಉಸ್ತುವಾರಿಯನ್ನು ಮೋದಿಯವರು ನೋಡಿಕೊಂಡಿದ್ದರು. ಯಾತ್ರೆಯ ರೂಪುರೇಷೆಯ ಸಭೆ ಆದದ್ದು ಗೃಹಸಚಿವರಾಗಿದ್ದ, ದಿವಂಗತ ವಿಎಸ್ ಆಚಾರ್ಯರ ಮನೆಯಲ್ಲಿ. ಅಲ್ಲೇ ಈ ಫೋಟೋ ಕ್ಲಿಕ್ ಆಗಿದ್ದು. ಮೋದಿಯವರ ಸಂದರ್ಶನ ಮಾಡುತ್ತಿರುವಾಗ ಅವರ ಜೊತೆಗೆ ಎಂಜಿನಿಯರ್ ಒಬ್ಬರಿದ್ದರು. ಅವರ ಕ್ವಾಲಿಫಿಕೇಶನ್ ಮೋದಿ ಹೆಸರಿನ ಮುಂದೆ ಬಿದ್ದಿದ್ದಂತೆ. ಆದ್ರೆ ಸಂದರ್ಶನ ಮಾತ್ರ ಡಾ. ವಿಎಸ್ ಆಚಾರ್ಯ ಮನೆ ಮುಂದೆ ನಡೆದಿತ್ತು. ಇದನ್ನು ವಿಎಸ್ ಆಚಾರ್ಯ ಪತ್ನಿ ಶಾಂತಾ ಆಚಾರ್ಯ ಕೂಡಾ ಒಪ್ಪಿಕೊಳ್ಳುತ್ತಾರೆ. ಆ ಫೋಟೋ ಅವರ ಬಳಿಯೂ ಇದೆ.

    ಮೋದಿ ರಾಜ್ಯ ಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ ಅಂತ ಗೂಗಲ್ ಹೇಳುತ್ತಿದೆ. ಅವರ ನಾಮಪತ್ರದಲ್ಲೂ ಉಲ್ಲೇಖವಿದೆ. ವರದಿಯ ತುಣುಕನ್ನು ಮೋದಿ ವಿರೋಧಿಗಳು ಗೇಲಿ ಮಾಡಲು- ಟೀಕಿಸಲು ಬಳಸುತ್ತಿದ್ದಾರೆ.

  • ಮೋದಿ ರೆಡಾರ್ ಹೇಳಿಕೆಯನ್ನ ಅಸ್ತ್ರವಾಗಿಸಿಕೊಂಡ ರಾಹುಲ್-ಪ್ರಿಯಾಂಕ

    ಮೋದಿ ರೆಡಾರ್ ಹೇಳಿಕೆಯನ್ನ ಅಸ್ತ್ರವಾಗಿಸಿಕೊಂಡ ರಾಹುಲ್-ಪ್ರಿಯಾಂಕ

    ನವದೆಹಲಿ: 2019ರ ಲೋಕಸಭಾ ಚುನಾವಣೆಯ ಅಂತಿಮಘಟ್ಟ ತಲುಪಿದ್ದು, ಮೇ 19ರಂದು ಕೊನೆಯ ಹಂತದ ಚುನಾವಣೆ ನಡೆಯಲಿದೆ. ಕೊನೆಯ ಹಂತದ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್-ಬಿಜೆಪಿ ಭರ್ಜರಿ ಪ್ರಚಾರ ನಡೆಸುತ್ತಿದೆ. ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ತಮ್ಮ ಭಾಷಣಗಳಲ್ಲಿ ಪ್ರಧಾನಿ ಮೋದಿಯವರ ಹೇಳಿಕೆಗಳನ್ನು ಬಳಸಿ ಕುಟುಕುತ್ತಿದ್ದಾರೆ.

    ವಾತಾವರಣ ಸರಿ ಇಲ್ಲದಿದ್ರೆ ವಿಮಾನಗಳು ರೆಡಾರ್ ಸಂಪರ್ಕವನ್ನು ಕಳೆದುಕೊಳ್ಳುತ್ತವೆ ಎಂದು ಪ್ರಧಾನಿ ಮೋದಿ ಹೇಳ್ತಾರೆ. ಭಾರತದಲ್ಲಿ ಮಳೆಯಿಂದಾಗಿ ಹವಾಮಾನದಲ್ಲಿ ವೈಪರೀತ್ಯ ಉಂಟಾದ್ರೆ ನಮ್ಮ ವಿಮಾನಗಳು ರೆಡಾರ್ ಸಂಪರ್ಕವನ್ನ ಕಳೆದುಕೊಳ್ಳುತ್ತವಾ ಎಂದು ರಾಹುಲ್ ಗಾಂಧಿ ಪ್ರಶ್ನೆ ಮಾಡಿದರು.

    ಮಧ್ಯ ಪ್ರದೇಶದ ಸಮಾವೇಶದಲ್ಲಿ ಮಾತನಾಡುತ್ತಾ, ಮೋದಿಜೀ ಅಧಿಕಾರಿಗಳಿಗೆ ಮತ್ತು ವಾಯಸೇನೆಯ ಮುಖ್ಯಸ್ಥರಿಗೆ ಹವಾಮಾನ ವೈಪರೀತ್ಯ ನಮಗೆ ಲಾಭದಾಯಕವಾಗಿರಲಿದೆ. ಪಾಕಿಸ್ತಾನದ ರೆಡಾರ್ ನಮ್ಮ ವಿಮಾನಗಳನ್ನು ಟಾರ್ಗೆಟ್ ಮಾಡಲ್ಲ ಎಂದು ಹೇಳುತ್ತಾರೆ. ಕಳೆದ ಐದು ವರ್ಷಗಳಲ್ಲಿ ಏನು ಯುವಕರಿಗೆ ಉದ್ಯೋಗ ನೀಡಲು ಏನು ಮಾಡಿದ್ದೀರಿ ಎಂದು ಪ್ರಶ್ನಿಸಿದ್ದರು.

    ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರಿಯಾಂಕ ಗಾಂಧಿ, ಪ್ರಧಾನಿಗಳ ಹೇಳಿಕೆಯನ್ನು ಗೇಲಿ ಮಾಡಿದ್ದಾರೆ. ತಾನೇ ದೊಡ್ಡ ರಕ್ಷಣಾತಜ್ಞ ಎಂದು ಹೇಳುವ ವಿಶೇಷ ವ್ಯಕ್ತಿ ಯುದ್ಧ ವಿಮಾನ ತಯಾರಿಕೆಯನ್ನು ಯಾರಿಗೆ ನೀಡಬೇಕೆಂದು ನಿರ್ಧರಿಸುತ್ತಾರೆ. ಇದೂವರೆಗೂ ವಿಮಾನ ನಿರ್ಮಿಸದ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡು ಭೂಮಿ ನೀಡುತ್ತಾರೆ. ಕಳೆದ 50 ವರ್ಷಗಳಿಂದ ವಿಮಾನಗಳನ್ನ ತಯಾರಿಸಿಕೊಂಡಿರುವ ಹೆಚ್‍ಎಎಲ್ ಜೊತೆ ಒಪ್ಪಂದ ಮಾಡಿಕೊಳ್ಳಲ್ಲ ಎಂದು ರಫೇಲ್ ವಿಚಾರ ಪ್ರಸ್ತಾಸಿದರು.

    ಇಷ್ಟು ದೊಡ್ಡ ವಿಶೇಷ ರಕ್ಷಣಾತಜ್ಞ, ಮೋಡ ಮುಸುಕಿದ ವಾತಾವರಣವಿದೆ, ವಿಮಾನಗಳು ರೆಡಾರ್ ಸಂಪರ್ಕಕ್ಕೆ ಸಿಗಲ್ಲ ಎಂದು ಹೇಳುತ್ತಾರೆ. ಮಳೆಯ ವಾತಾವರಣವೇ ಇರಲಿ, ಬಿಸಿಲೇ ಇರಲಿ. ಎಲ್ಲರೂ ನಿಮ್ಮ ರಾಜನೀತಿಯ ಮರ್ಮವನ್ನು ಅರಿತುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಮೋದಿ ಹೇಳಿದ್ದೇನು?
    ದಾಳಿಯ ಮುನ್ನ ರಾತ್ರಿ 9 ಗಂಟೆಗೆ ರಿವ್ಯೂವ್ ಮಾಡಿದೆ. ಮತ್ತೊಮ್ಮೆ ರಾತ್ರಿ 12 ಗಂಟೆಗೆ ದಾಳಿಯ ಪ್ಲಾನ್ ನೋಡಿದೆ. ಅಂದು ರಾತ್ರಿ ಹೆಚ್ಚು ಮಳೆಯಾಗಿದ್ದರಿಂದ ನಮ್ಮ ರೆಡಾರ್ ಕೆಟ್ಟಿತ್ತು. ದಾಳಿಗೆ ವಾತಾವರಣ ಸಹಕರಿಸುತ್ತಿಲ್ಲ. ಹಾಗಾಗಿ ಸರ್ಜಿಕಲ್ ಸ್ಟ್ರೈಕ್ ದಾಳಿಯ ದಿನಾಂಕ ಬದಲಿಸೋಣ ಎಂಬ ಸಲಹೆಯನ್ನು ತಜ್ಞರು ನೀಡಿದರು. ದಾಳಿಯ ರಹಸ್ಯವನ್ನು ಎಲ್ಲಿಯೂ ಲೀಕ್ ಆಗಿರಲಿಲ್ಲ. ಒಂದು ವೇಳೆ ದಿನಾಂಕ ಮುಂದೂಡಿದ್ರೆ ದಾಳಿಯ ರಹಸ್ಯ ಲೀಕ್ ಆದ್ರೆ ಹೇಗೆ ಎಂಬ ಸಂಶಯ ಕಾಡಿತ್ತು. ಮೋಡಗಳಿಂದ ನಮ್ಮ ರೆಡಾರ್ ಕೆಲಸ ಮಾಡುತ್ತಿಲ್ಲ. ಹಾಗೆ ಶತ್ರುಗಳ ರೆಡಾರ್ ಸಹ ಕೆಲಸ ಮಾಡುತ್ತಿರಲ್ಲ. ಕೆಲವು ಸಾರಿ ಮೋಡಗಳು ಸಹಾಯ ಮಾಡುತ್ತವೆ. ನಾವು ರೆಡಾರ್ ನಿಂದ ಸಲೀಸಾಗಿ ತಪ್ಪಿಸಿಕೊಳ್ಳಬಹುದು. ಎಲ್ಲ ಅಧಿಕಾರಿಗಳು ಗೊಂದಲದಲ್ಲಿದ್ದಾಗ ಹೋಗಿ ದಾಳಿ ನಡೆಸಿ ಎಂದು ಅದೇಶಿಸಿದೆ ಎಂದು ಮೋದಿ ಸಂದರ್ಶನದಲ್ಲಿ ಹೇಳಿದ್ದರು.