Tag: ಲೋಕಸಭಾ ಚುನಾವಣೆ 2019

  • ವಿನಯ್ ಕುಲಕರ್ಣಿ ಸೋಲಿಗೆ ಗುಂಡೂರಾವ್, ದೇಶಪಾಂಡೆ ಕಾರಣ: ಬೆಂಬಲಿಗರ ಆರೋಪ

    ವಿನಯ್ ಕುಲಕರ್ಣಿ ಸೋಲಿಗೆ ಗುಂಡೂರಾವ್, ದೇಶಪಾಂಡೆ ಕಾರಣ: ಬೆಂಬಲಿಗರ ಆರೋಪ

    ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸೋಲಿಗೆ ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಕಾರಣ ಎಂದು ಮಾಜಿ ಸಚಿವರ ಬೆಂಬಲಿಗರು ಆರೋಪಿಸಿದ್ದಾರೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕುಲಕರ್ಣಿ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರ ವಿರುದ್ಧ 2,05,072 ಮತಗಳ ಅಂತರದಲ್ಲಿ ಸೋತಿದ್ದರು. ಈ ಸೋಲಿಗೆ ದಿನೇಶ್ ಗುಂಡೂರಾವ್, ಆರ್ ವಿ ದೇಶಪಾಂಡೆ ಕಾರಣ ಎಂದು ವಿನಯ್ ಕುಲಕರ್ಣಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಈ ವಿಚಾರವಾಗಿ ವಿನಯ್ ಕುಲಕರ್ಣಿ ಸಪೋರ್ಟರ್ಸ್ ಎಂಬ ಫೇಸ್‍ಬುಕ್ ಪೇಜ್‍ನಲ್ಲಿ, ವಿನಯ್ ಕುಲಕರ್ಣಿ ಸೋಲಿಗೆ ನೇರವಾಗಿ ದಿನೇಶ್ ಗುಂಡೂರಾವ್ ಹಾಗು ಆರ್ ವಿ ದೇಶಪಾಂಡೆ ಕಾರಣ ಏಕೆಂದರೆ ವಿನಯ್ ಕುಲಕರ್ಣಿಯವರ ಹೆಸರು ಬೇಗ ಹೈಕಮಾಂಡ್ ಕಳಿಸದೆ ತಮ್ಮ ಬ್ರಾಹ್ಮಣ ಜಾತಿಯ ವ್ಯಕ್ತಿ ಜೋಶಿ ಗೆಲ್ಲಿಸಲು ಸಹಾಯ ಮಾಡಿದ್ದಾರೆ. ಚುನಾವಣೆಯ ಕೊನೆಯ ಗಳಿಗೆಯಲ್ಲಿ ಟಿಕೆಟ್ ನೀಡಿದ್ದಲ್ಲದೆ ಮುಸ್ಲಿಂ ಧರ್ಮದವರ ಹೆಸರನ್ನು ಮಧ್ಯಕ್ಕೆ ತಂದು ಅವರ ಭಾವನೆಗಳಿಗೆ ದಕ್ಕೆ ತರುವಂತ ಕೆಲಸ ಮಾಡಿದರು. ಕಾಂಗ್ರೆಸ್ ನಾಯಕರು ಪ್ರಹ್ಲಾದ್ ಜೋಶಿ ಗೆಲುವುವಿಗಾಗಿ ಮಾಧ್ಯಮದವರ ಮುಂದೆ ಅವರನ್ನು ಹೊಗಳಿದ್ದರು ಎಂದು ಬರೆದುಕೊಂಡಿದ್ದಾರೆ.

    ಇಂತಹ ನಾಯಕರಿಂದ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವೇ? ಮೊದಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸಿ ಲಿಂಗಾಯತರಿಗೆ ಈ ಸ್ಥಾನವನ್ನು ನೀಡಿ ಪಕ್ಷವನ್ನು ಉಳಿಸಿ ಎಂದು ಫೇಸ್‍ಬುಕ್ ಪೇಜ್‍ನಲ್ಲಿ ಮನವಿ ಮಾಡಿದ್ದಾರೆ.

  • ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ- ಡಿಸಿಎಂಗೆ ತುಮಕೂರಲ್ಲಿ ಭಾರೀ ಮುಖಭಂಗ

    ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ- ಡಿಸಿಎಂಗೆ ತುಮಕೂರಲ್ಲಿ ಭಾರೀ ಮುಖಭಂಗ

    ತುಮಕೂರು: ತುಮಕೂರಿನಲ್ಲಿ ಮೈತ್ರಿ ಅಭ್ಯರ್ಥಿ ದೇವೇಗೌಡರು ಪರಾಭವಗೊಳ್ಳುತಿದ್ದಂತೆ ಚುನಾವಣೆಯ ಉಸ್ತುವಾರಿ ಹೊತ್ತ ಡಿಸಿಎಂ ಜಿ.ಪರಮೇಶ್ವರ್ ವಿರುದ್ಧದ ಕೂಗು ಕೇಳಿ ಬರುತ್ತಿದೆ. ಪರಮೇಶ್ವರ್ ಹಠಾವೋ ಕಾಂಗ್ರೆಸ್ ಬಚಾವೋ ಎಂಬ ಪೋಸ್ಟರ್ ಅಂಟಿಸುವ ಮೂಲಕ ಕೈ ಕಾರ್ಯಕರ್ತರು ಜಿ.ಪರಮೇಶ್ವರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ತುಮಕೂರಿನ ವಾಲ್ಮೀಕಿ ನಗರದ ಪ್ರವೇಶದ್ವಾರ ಬಳಿ ‘ಪರಮೇಶ್ವರ್ ಹಠಾವೋ ಎಂಬ ಕಾಂಗ್ರೆಸ್ ಬಚಾವೋ’ ಎಂಬ ಭಿತ್ತಿ ಪತ್ರ ಅಂಟಿಸಿ ಪರಮೇಶ್ವರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಸ್ಟರ್ ಕೆಳಗಡೆ ನೊಂದ ಕಾಂಗ್ರೆಸ್ ಕಾರ್ಯಕರ್ತರು ಎಂದು ಒಕ್ಕಣಿಕೆ ಬರೆಯಲಾಗಿದೆ.

    ಆಪ್ತ ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಿಸುವಲ್ಲಿ ಜಿ.ಪರಮೇಶ್ವರ್ ವಿಫಲವಾಗಿದ್ದರಿಂದ ಸಹಜವಾಗಿಯೇ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಇತ್ತು. ಮುದ್ದಹನುಮೇಗೌಡರು ಸ್ಪರ್ಧಿಸಿದರೆ ಚುನಾವಣೆಯಲ್ಲಿ ಗೆಲ್ಲುತ್ತಿದ್ದರು ಎಂಬ ನಂಬಿಕೆ ಕೈ ಕಾರ್ಯಕರ್ತರದ್ದಾಗಿತ್ತು. ಈಗ ಲೋಕಸಭಾ ಕ್ಷೇತ್ರ ಬಿಜೆಪಿ ಪಾಲಾಗಿದ್ದು ಕೈ ಕಾರ್ಯಕರ್ತರು ನೊಂದು ಡಿಸಿಎಂ ಜಿ.ಪರಮೇಶ್ವರ್ ವಿರುದ್ಧ ಪೋಸ್ಟರ್ ಹಾಕಿದ್ದಾರೆ ಎನ್ನಲಾಗಿದೆ.

    ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 5,96,231 ಮತಗಳನ್ನು ಪಡೆದಿದ್ದರೆ, ದೇವೇಗೌಡರು 5,83,344 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ಬಸವರಾಜು ಅವರು 12,887 ಬಹುಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.

  • ಕಡಿಮೆ ಅವಧಿಯಲ್ಲೇ ಪ್ರಜಾಕೀಯ ಗಮನ ಸೆಳೆದಿದೆ- ಉಪೇಂದ್ರ

    ಕಡಿಮೆ ಅವಧಿಯಲ್ಲೇ ಪ್ರಜಾಕೀಯ ಗಮನ ಸೆಳೆದಿದೆ- ಉಪೇಂದ್ರ

    ಬೆಂಗಳೂರು: ಕಡಿಮೆ ಅವಧಿಯಲ್ಲಿಯೇ ಪ್ರಜಾಕೀಯ ಪಕ್ಷ ಜನರ ಗಮನ ಸೆಳೆದಿದೆ. ಪಕ್ಷದ ಫಲಿತಾಂಶ ಖುಷಿ ತಂದಿದೆ ಎಂದು ನಟ ಉಪೇಂದ್ರ ಹೇಳಿದ್ದಾರೆ.

    ನಗರದಲ್ಲಿ ಇಂದು ಬುದ್ಧಿವಂತ – 2 ಸಿನಿಮಾದ ಮುಹೂರ್ತ ಸಮಾರಂಭದ ವೇಳೆ ಲೋಕಸಭಾ ಚುನಾವಣಾ ಫಲಿತಾಂಶದ ಕುರಿತು ಪ್ರತಿಕ್ರಿಯಿಸಿದ ಅವರು, ದೇಶದ ರಾಜಕಾರಣ ತೀವ್ರ ಕುತೂಹಲ ಕೆರಳಿಸಿತ್ತು. ನರೇಂದ್ರ ಮೋದಿ ಮತ್ತೆ ಗೆಲುವು ಸಾಧಿಸಿರೋದು ಖುಷಿ ತಂದಿದೆ. ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧನೆ ಮಾಡುತ್ತಾರೆ ಎಂದು ನಾನೂ ಕಾಯುತ್ತಿದ್ದೇನೆ ಅಂದರು.

    ಸ್ಮಾರ್ಟ್ ಸಿಟಿಯಂತಹ ಯೋಜನೆಗಳು ದೀರ್ಘ ಕಾಲದ್ದು, ಈ ಐದು ವರ್ಷದಲ್ಲಿ ಮೋದಿ ಮತ್ತಷ್ಟು ಸಾಧಿಸುತ್ತಾರೆ ಎಂಬ ಭರವಸೆಯಿದೆ. ಪ್ರಜಾಕೀಯದ ಫಲಿತಾಂಶವೂ ಖುಷಿ ತಂದಿದೆ. ಕಡಿಮೆ ಅವಧಿಯಲ್ಲೆ ನಮ್ಮ ಪಕ್ಷ ಜನರ ಗಮನ ಸೆಳೆದಿದೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಮುಂದುವರಿದು ಉತ್ತಮ ಕೆಲಸಗಳನ್ನು ಮಾಡಲಿ. ಸರ್ಕಾರ ಉರುಳುವುದು ಮತ್ತೆ ಎಲೆಕ್ಷನ್ ಆಗೋದು ಚೆನ್ನಾಗಿರೋದಿಲ್ಲ, ಜನ ಕೂಡ ಪ್ರಿಪೇರ್ ಆಗಿರುವುದಿಲ್ಲ ಎಂದು ತಿಳಿಸಿದರು.

    ಸುಮಲತಾಗೆ ಹಾರೈಕೆ:
    ಇದೇ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಗೆಲುವಿನ ಬಗ್ಗೆ ಮಾತನಾಡಿದ ಅವರು, ಸುಮಲತಾ ಅವರಿಗೆ ಧನ್ಯವಾದಗಳು. ಅವರು ಗೆದ್ದಿದ್ದೂ ಖುಷಿ ತಂದಿದೆ. ಅವರಲ್ಲಿ ಪ್ರಬುದ್ಧ ರಾಜಕಾರಣಿ ಆಗುವ ಎಲ್ಲಾ ಲಕ್ಷಣಗಳಿವೆ. ಅವರಿಗೆ ಮುಂದೆಯೂ ಒಳಿತಾಗಲಿ ಎಂದು ಉಪೇಂದ್ರ ಹಾರೈಸಿದರು.

  • ನೆಹರೂ, ಇಂದಿರಾ ನಂತ್ರ ಸ್ಪಷ್ಟ ಬಹುಮತ ಪಡೆದ ಮೊದಲ ಪ್ರಧಾನಿ ಮೋದಿ!

    ನೆಹರೂ, ಇಂದಿರಾ ನಂತ್ರ ಸ್ಪಷ್ಟ ಬಹುಮತ ಪಡೆದ ಮೊದಲ ಪ್ರಧಾನಿ ಮೋದಿ!

    -ದೇಶದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ

    ನವದೆಹಲಿ: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 302 ಸ್ಥಾನಗಳನ್ನು ಪಡೆದು ಸ್ಪಷ್ಟ ಬಹುಮತದೊಂದಿಗೆ ಮತ್ತೆ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮಾಜಿ ಪ್ರಧಾನಿಗಳಾದ ದಿವಂಗತ ಜವಹರ್ ಲಾಲ್ ನೆಹರೂ ಹಾಗೂ ಇಂದಿರಾ ಗಾಂಧಿ ಬಳಿಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಪಡೆಯುತ್ತಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ.

    ಹೌದು. 48 ವರ್ಷಗಳ ಬಳಿಕ ಸ್ಪಷ್ಟ ಬಹುಮತದ ಬಳಿಕ ಮೋದಿ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ದೇಶದೆಲ್ಲೆಡೆ ಎದ್ದಿದ್ದ ಮೋದಿ ಸುನಾಮಿಗೆ ಪ್ರತಿಪಕ್ಷಗಳು ಕೊಚ್ಚಿ ಹೋಗಿವೆ. ಭರ್ಜರಿ ಜಯದ ಮೂಲಕ ಈ ಹಿಂದೆ ಇಂದಿರಾಗಾಂಧಿ ಮತ್ತು ಜವಹಾರ್ ಲಾಲ್ ನೆಹರೂ ಅವರು ನಿರ್ಮಿಸಿದ್ದ ದಾಖಲೆಯನ್ನು ಮೋದಿ ಸರಿಗಟ್ಟಿದ್ದಾರೆ. ಅಲ್ಲದೆ ದೇಶಾದ್ಯಂತ ಮೋದಿ ಜಯದ ವಿಜಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

    ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಪಕ್ಷ ಅಭೂತಪೂರ್ವ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವು 2014ರ ಲೋಕಸಭಾ ಚುನಾವಣಾ ಜಯವನ್ನೂ ಮೀರಿಸಿದೆ. ಆ ಮೂಲಕ ಪ್ರಧಾನಿ ಮೋದಿ ದೇಶದ ರಾಜಕೀಯ ಇತಿಹಾಸದಲ್ಲೇ ಅಪೂರ್ವ ಸಾಧನೆ ಗೈದಿದ್ದು, ಸ್ವಂತ ಬಲದಿಂದಲೇ ಸತತ 2ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ದೇಶದ ಮೂರನೇ ಪ್ರಧಾನಿಯಾಗಿದ್ದಾರೆ.

    ಅಲ್ಲದೆ ಈ ಸಾಧನೆಗೈದ ದೇಶದ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಭಾಜನರಾಗಿದ್ದಾರೆ. 1971ರ ನಂತರ ಯಾವ ಪ್ರಧಾನಿ ಕೂಡ ಸತತ 2ನೇ ಬಾರಿಗೆ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರಲಿಲ್ಲ. ಆದರೆ ಮೋದಿ ಮೋಡಿಗೆ ಇಡೀ ದೇಶವೇ ಮನಸೋತಿದ್ದು, ಭರ್ಜರಿ ಬಹುಮತ ನೀಡಿ ಮತ್ತೆ ಮೋದಿ ಪ್ರಧಾನಿ ಸ್ಥಾನದಲ್ಲಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಲಾಗಿದೆ.

    1971ರಲ್ಲಿ ಇಂದಿರಾ ಗಾಂಧಿ ಅವರು ಸತತ ಎರಡನೇ ಬಾರಿ ಬಹುಮತದೊಂದಿಗೆ ಪ್ರಧಾನಿಯಾಗಿದ್ದರು. 1971ರ ನಂತರ ಕಾಂಗ್ರೆಸ್ ಪಕ್ಷ ಸತತವಾಗಿ ಅಧಿಕಾರಕ್ಕೆ ಬಂದಿತ್ತಾದರೂ ಪ್ರಧಾನಿಗಳು ಬದಲಾಗಿದ್ದರು. 2004 ರಿಂದ 2009 ಮತ್ತು 2009ರಿಂದ 2014ರವರೆಗೂ ಮನಮೋಹನ್ ಸಿಂಗ್ ಸತತ ಎರಡು ಬಾರಿ ಪ್ರಧಾನಿಯಾದರೂ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದಿದ್ದ ಕಾರಣಕ್ಕೆ ಮೈತ್ರಿಕೂಟದ ಸಹಾಯದಿಂದ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ ಇದೀಗ 48 ವರ್ಷಗಳ ನಂತರ ಮೊದಲ ಬಾರಿಗೆ ಬಿಜೆಪಿ ಹೊಸ ಇತಿಹಾಸ ಸೃಷ್ಟಿಸಿದ್ದು, ಈ ಹಿಂದೆ ಇಂದಿರಾಗಾಂಧಿ ಮತ್ತು ನೆಹರು ಮಾಡಿದ್ದ ಈ ಸಾಧನೆಯನ್ನು ಪ್ರಧಾನಿ ಮೋದಿ ಮಾಡಿ ತೋರಿಸಿದ್ದಾರೆ.

    ಲೋಕಸಭಾ ಫಲಿತಾಂಶ ನೋಡುವುದಾದರೆ ಎನ್‍ಡಿಎ 349 ಸ್ಥಾನ ಗಳಿಸಿದ್ದರೆ, ಯುಪಿಎ 82 ಹಾಗೂ ಇತರೇ 111 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ ಇದ್ದ 28 ಕ್ಷೇತ್ರದಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದರಲ್ಲಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಅಲ್ಲದೆ ಭಾರೀ ಕುತೂಹಲ ಸೃಷ್ಟಿಸಿದ್ದ ಮಂಡ್ಯ ಅಖಾಡದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಬರೋಬ್ಬರಿ 1,26,436 ಮತಗಳ ಭಾರೀ ಅಂತರದಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಮೊದಲ ಚುನಾವಣೆಯಲ್ಲಿಯೇ ವಿಜಯದ ಪತಾಕೆ ಹಾರಿಸಿದ್ದಾರೆ.

  • ಘಟಾನುಘಟಿ ನಾಯಕರನ್ನೇ ಸೋಲಿಸಿದ ಬಿಜೆಪಿ- ರಾಜ್ಯದಲ್ಲಿ ಕಮಲ ಅರಳಲು ಪ್ರಮುಖ ಕಾರಣಗಳೇನು?

    ಘಟಾನುಘಟಿ ನಾಯಕರನ್ನೇ ಸೋಲಿಸಿದ ಬಿಜೆಪಿ- ರಾಜ್ಯದಲ್ಲಿ ಕಮಲ ಅರಳಲು ಪ್ರಮುಖ ಕಾರಣಗಳೇನು?

    ಬೆಂಗಳೂರು: ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಕರ್ನಾಟಕದಲ್ಲಿಯೂ ಬಿಜೆಪಿ ಮೇಲುಗೈ ಸಾಧಿಸಿದೆ. ಹಿರಿಯ ಘಟಾನುಘಟಿ ಮುಖಂಡರುಗಳಾದ ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೆಎಚ್ ಮುನಿಯಪ್ಪ, ದಿಗ್ವಿಜಯ್ ಸಿಂಗ್  ಸೋಲಿನ ರುಚಿ ಕಂಡಿದ್ದಾರೆ.

    ಬಿಜೆಪಿಗೆ ಒಂದಂಕಿಯೇ ಗತಿ ಎಂದು ಗೇಲಿ ಮಾಡುತ್ತಿದ್ದ ಎರಡೂ ಪಕ್ಷಗಳ ನಾಯಕರಿಗೆ ಫಲಿತಾಂಶ ಶಾಕ್ ನೀಡಿದೆ. ನೋಡ್ತಾ ಇರಿ, 22 ಸೀಟ್ ಗೆದ್ದೇ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದ ಯಡಿಯೂರಪ್ಪ ಭವಿಷ್ಯವಾಣಿ ನಿಜವಾಗಿದೆ. ಬೀದರ್‍ನಿಂದ ಹಿಡಿದು ಚಾಮರಾಜನಗರದವರೆಗೆ, ಇತ್ತ ದಕ್ಷಿಣ ಕನ್ನಡದಿಂದ ತುಮಕೂರಿನ ಪಾವಗಡದವರೆಗೂ ಇಡೀ ಕರ್ನಾಟಕ ಕೇಸರಿ ಮಯವಾಗಿದೆ. ಕೇವಲ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್, ಹಾಸನದಲ್ಲಿ ಜೆಡಿಎಸ್ ಹಾಗೂ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಮಂದಹಾಸ ಬೀರಿದ್ದಾರೆ.

    28 ವರ್ಷಗಳ ಬಳಿಕ ಮೊದಲ ಬಾರಿಗೆ ಪಕ್ಷವೊಂದು ಸ್ವತಂತ್ರವಾಗಿ ಕರ್ನಾಟಕದಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆದ್ದುಕೊಂಡಿದೆ. 1989ರಲ್ಲಿ ಕಾಂಗ್ರೆಸ್ 27 ಸ್ಥಾನಗಳನ್ನು ಗೆದ್ದಿದ್ದರೆ ಜನತಾದಳ 1 ಸ್ಥಾನವನ್ನಷ್ಟೇ ಗೆದ್ದುಕೊಂಡಿದೆ. 1991ರಲ್ಲಿ ಕಾಂಗ್ರೆಸ್ 23, ಎಸ್‍ಪಿ 1, ಬಿಜೆಪಿ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು.

    ಪ್ರಚಂಡ ಗೆಲುವಿಗೆ ಕಾರಣಗಳೇನು..?
    * ಮೈತ್ರಿ ಸರ್ಕಾರ ರಚನೆಯಾದ ಕೂಡಲೇ ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು. ಶಾಸಕರಿಗೆ ವಿಶ್ವಾಸ ಇಲ್ಲ, ಮೈತ್ರಿ ಸರ್ಕಾರ ಅಸ್ಥಿರವಾಗಿದೆ ಎಂದು ಬಿಂಬಿಸಿದ್ದರು. ಬಿಜೆಪಿಯ ಆಪರೇಷನ್ ಪಾಲಿಟಿಕ್ಸ್ ನಿಂದ ಕಂಗೆಟ್ಟ ದೋಸ್ತಿ ಸರ್ಕಾರ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತಾಡಲಿಲ್ಲ. ಬದಲಾಗಿ ಆಪರೇಷನ್ ಕಲಮದ ಬಗ್ಗೆ ಮಾತನಾಡಿತು. ಅಲ್ಲದೆ ಬಿಜೆಪಿ ಡೆಡ್‍ಲೈನ್‍ಗಳಿಗೆ ತಿರುಗೇಟು ಕೊಡುವುದರಲ್ಲೇ ಮೈತ್ರಿ ಸರ್ಕಾರ ಮಗ್ನವಾಗಿತ್ತು. ಸಿದ್ದರಾಮಯ್ಯ ವರ್ಸಸ್ ಕುಮಾರಸ್ವಾಮಿ ನಡುವೆ ಕಾದಾಟ ಶುರುವಾಗಿತ್ತು. ಇತ್ತ ಇಬ್ಬರ ಆಪ್ತ ಸಚಿವರು, ಶಾಸಕರು ಬೀದಿಯಲ್ಲಿ ವಾಕ್ಸಮರ ಮಾಡಿದ್ದು ಕೂಡ ಬಿಜೆಪಿ ಜಯಗಳಿಸಲು ಸುಲಭ ದಾರಿಯಾಯಿತು.

    * ಮೈತ್ರಿ ಸರ್ಕಾರದ ನಾಯಕರು ಸುಮಲತಾ ಎಂಟ್ರಿಯನ್ನು ನಿರ್ಲಕ್ಷ್ಯಿಸಿತ್ತು. ಸುಮಲತಾ ಸ್ಪರ್ಧೆಯಿಂದಾಗುವ ನಷ್ಟವನ್ನ ಲೆಕ್ಕ ಹಾಕದೇ ಇದ್ದರು. ಅಲ್ಲದೆ ಸುಮಲತಾ ನಿಂದನೆ ಮಾಡಿ ಮೈತ್ರಿ ಪಡೆ ನಾಯಕರು ಕೆಟ್ಟಿದ್ದರು. ಮಾಯಾಂಗನೆ, ಗಂಡ ಸತ್ತವರು ಹೇಳಿಕೆಗಳಿಗೆ ಎಲ್ಲ ಕಡೆ ಆಕ್ರೋಶ ವ್ಯಕ್ತವಾಗಿತ್ತು. ಈ ಎಲ್ಲಾ ಕಾರಣಗಳು ಕಮಲದ ಜಯಕ್ಕೆ ದಾರಿ ಮಾಡಿಕೊಟ್ಟಿತ್ತು.

    * ಮಂಡ್ಯದ ಅಖಾಡ ಗಲಾಟೆ ಮೇಲೆ ಗಲಾಟೆ, ಮೈತ್ರಿಗೆ ಬಿಜೆಪಿ ನಿತ್ಯ ತರಾಟೆ ನಡೆಯುತ್ತಿತ್ತು. ಜಿಲ್ಲೆಯ ರಾಜಕಾರಣದ ಬಗ್ಗೆ ಮೈತ್ರಿ ನಾಯಕರು ಹೆಚ್ಚು ತಲೆಕೆಡಿಸಿಕೊಂಡಿದ್ದರು. ಮೈತ್ರಿ ಧರ್ಮ ಪಾಲನೆಯಾಗಿಲ್ಲ ಎಂಬ ಕೂಗು ಬೇರೆ ಕ್ಷೇತ್ರಗಳಿಗೆ ಹರಡಿದ್ದು ಕೂಡ ಕಾರಣವಾಗಿದೆ.

    * ಮಂಡ್ಯದಲ್ಲಿ ಸುಮಲತಾ ಟೀಕಿಸಲು ಹೋಗಿ ಮೂರು ತಿಂಗಳು ಮನರಂಜನೆ ನೀಡಿದ್ದರು. ಈ ಪುಕ್ಕಟ್ಟೆ ಮನರಂಜನೆಯಿಂದ ನಿಖಿಲ್‍ಗೆ, ಸರ್ಕಾರಕ್ಕೆ ಫುಲ್ ಡ್ಯಾಮೇಜ್ ಆಗಿದೆ. ಸರ್ಕಾರದ ಆಡಳಿತ ಯಂತ್ರ ಮೂರು ತಿಂಗಳು ಸಂಪೂರ್ಣ ನಿಂತಿತ್ತು. ಸೀಟು ಹಂಚಿಕೆಗಾಗಿ ಮೈತ್ರಿ ನಾಯಕರು ಮಾಡಿದ ಸರ್ಕಸ್ ಮಾಡುತ್ತಿದ್ದರು. `ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಎನ್ನುವಂತೆ ಕಡೆ ಗಳಿಗೆಯಲ್ಲಿ ಕ್ಷೇತ್ರ ಹಂಚಿಕೆ ಮಾಡಿದ್ದು ಬಿಜೆಪಿಗೆ ಪ್ಲಸ್ ಆಗಿದೆ.

    * ಮೈತ್ರಿ ಸೀಟು ಫೈನಲ್ ಆದರೂ ಕ್ಷೇತ್ರಗಳನ್ನ ಸಮರ್ಪಕವಾಗಿ ಹಂಚಿಕೊಳ್ಳಲಿಲ್ಲ. ಸೀಟು ಕೊಡಬೇಕು ಎಂಬ ಸೂತ್ರಕ್ಕೆ ಗಂಟುಬಿದ್ದು ಕ್ಷೇತ್ರ ಮಾರ್ಕ್ ಮಾಡಲು ಎಡವಿದ್ದರು. ಇದೇ ಕ್ಷೇತ್ರ ಬೇಕು ಎಂದು ಮೈತ್ರಿ ನಾಯಕರು ಹಠಕ್ಕೆ ಬಿದ್ದಿದ್ದರು. ಮೈಸೂರಿಗಾಗಿ ಸಿದ್ದರಾಮಯ್ಯ, ಚಿಕ್ಕಬಳ್ಳಾಪುರಕ್ಕಾಗಿ ಮೊಯ್ಲಿ ಹಟಕ್ಕೆ ಬಿದ್ದಿದ್ದು ಕೂಡ ರಾಜ್ಯದಲ್ಲಿ ಇಂದು ಕಮಲ ಅರಳಲು ಕಾರಣವಾಯಿತು.

    * ಮೈತ್ರಿ ನಾಯಕರು ಗೌಡರ ಕ್ಷೇತ್ರ ಆಯ್ಕೆಯಲ್ಲಿ ಸರ್ಕಸ್ ಮಾಡಿದ್ದರು. ಕೊನೆಯವರೆಗೂ ಪರದಾಡಿ ಕಡೆಗೆ ತುಮಕೂರಿಗೆ ಶಿಫ್ಟ್ ಆಗಿದ್ದರು. ಬೆಂಗಳೂರು ಉತ್ತರವನ್ನು ಕೊನೆ ಕ್ಷಣದಲ್ಲಿ ಕೈಗೆ ಬಿಟ್ಟುಕೊಟ್ಟಿದ್ದರು. ಹಾಲಿ ಸಂಸದರ ಕ್ಷೇತ್ರವನ್ನ ದೇವೇಗೌಡರಿಗೆ ಕಾಂಗ್ರೆಸ್ ಬಿಟ್ಟುಕೊಟ್ಟಿತ್ತು. ಗೌಡರ ಎದುರು ತೊಡೆತಟ್ಟಿ ಬಳಿಕ ಸುಮ್ಮನಾಗಿ ಒಳ ಏಟು ಕೊಟ್ಟಿತ್ತು.

    * ಪ್ರಧಾನಿ ನರೇಂದ್ರ ಮೋದಿಗೆ ಪದೇ ಪದೇ ಹಿಗ್ಗಾಮುಗ್ಗಾ ಬೈಯುತ್ತಿದ್ದರು. ಪ್ರಚಾರದ ಉದ್ದಕ್ಕೂ ಏಕವಚನ, ದುಬಾರಿ ಮಾತುಗಳನ್ನಾಡಿದ್ದರು. ಈ ಮಧ್ಯೆ ಕಾಂಗ್ರೆಸ್‍ನಲ್ಲೇ ನಾಯಕರುಗಳ ಒಳ ಜಗಳ ಸೃಷ್ಟಿಯಾಗಿತ್ತು. ಡಿಕೆಶಿ ಹಾಗೂ ಪರಂ ಬಣ, ಸಿದ್ದರಾಮಯ್ಯ ಹಾಗೂ ದಿನೇಶ್ ಬಣಗಳ ಒಳ ಜಗಳ ಆರಂಭವಾಗಿತ್ತು. ಆದರೆ ಮೈತ್ರಿ ನಾಯಕರು ದೊಡ್ಡದಾಗಿ ಒಂದಾಗಿ ಪೋಸ್ ಕೊಟ್ಟರು. ಇದು ತಳಮಟ್ಟದಲ್ಲಿ ಸಾಧ್ಯವಾಗಲೇ ಇಲ್ಲ. ಜೆಡಿಎಸ್, ಕಾಂಗ್ರೆಸ್ ಮೈತ್ರಿ ಕಾರ್ಯಕರ್ತರು ಒಂದಾಗದಿರುವುದು ಕೂಡ ಬಿಜೆಪಿ ಗೆಲುವಿಗೆ ರೀಸನ್ ಆಗಿದೆ.

    * ರೆಸಾರ್ಟ್ ಪಾಲಿಟಿಕ್ಸ್ ವೇಳೆ ಕಾಂಗ್ರೆಸ್ ಶಾಸಕರ ಕಚ್ಚಾಟ, ಬಳ್ಳಾರಿ ಸೇರಿ ಮೂರ್ನಾಲ್ಕು ಕ್ಷೇತ್ರಗಳ ಮೇಲೆ ಪರಿಣಾಮ ಬೀರಿತ್ತು. ಕಾಂಗ್ರೆಸ್‍ಗೆ ಹಲವು ಕ್ಷೇತ್ರಗಳಲ್ಲಿ ಅತೃಪ್ತ ಶಾಸಕರ ಕಾಟ ಹೆಚ್ಚಾಗಿತ್ತು. ಬೆಳಗಾವಿ, ಚಿಕ್ಕೋಡಿಯಲ್ಲಿ ರಮೇಶ್ ಜಾರಕಿಹೊಳಿ ಬಹಿರಂಗ ಸಮರ ಸಾರಿದ್ದರು. ಅಭ್ಯರ್ಥಿ ಆಯ್ಕೆಗಾಗಿ ಹೆಚ್ಚು ಗೊಂದಲ ಸೃಷ್ಟಿ ಮಾಡಿಕೊಳ್ಳದೇ ಇದ್ದಿದ್ದರು. ಬೆಂಗಳೂರು ದಕ್ಷಿಣ ಹೊರತುಪಡಿಸಿ ಉಳಿದ ಕಡೆ ಸುಲಭವಾಗಿ ಅಭ್ಯರ್ಥಿ ಆಯ್ಕೆಯಾಗಿದ್ದರು.

    * ಟಿಕೆಟ್ ತಪ್ಪಿದ ಆಕಾಂಕ್ಷಿಗಳನ್ನ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿಶ್ವಾಸಕ್ಕೆ ತೆಗೆದುಕೊಂಡಿದ್ದರು. ಉಮೇಶ್ ಕತ್ತಿ ವಿಚಾರದಲ್ಲಿ ಬಿಎಸ್‍ವೈ ಜಾಣ ಹೆಜ್ಜೆ ಇಟ್ಟಿದ್ದು ಕೂಡ ಇಲ್ಲಿ ಪ್ಲಸ್ ಆಗಿದೆ. ಮೋದಿ ಅಲೆ ಕಾರಣ ಹಾಲಿ ಸಂಸದರಿಗೆಲ್ಲಾ ಬಿಜೆಪಿ ಟಿಕೆಟ್ ಕೊಟ್ಟಿತ್ತು. ಚಾಮರಾಜನಗರ, ಚಿಕ್ಕೋಡಿ, ಬೆಂಗಳೂರು ದಕ್ಷಿಣದಲ್ಲಿ ಹೊಸ ಪ್ರಯೋಗ ಮಾಡಲಾಗಿತ್ತು. ಲೋಕ ಪ್ರಚಾರ ವೇಳೆ ಬಿಜೆಪಿ ವಿನೂತನ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ಒಂದು ವೋಟು ಎರಡು ಸರ್ಕಾರ ಎಂಬ ಕ್ಯಾಂಪೇನ್ ನಡೆಸಿದ್ದು ಬಿಜೆಪಿ ಗೆಲುವಿಗೆ ಕಾರಣ ಎನ್ನಬಹುದು.

    * ಮೋದಿ ಅಲೆಯನ್ನ ಹರಡಲು ಬಿಜೆಪಿ ಪ್ಲ್ಯಾನ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ, ಕೇಂದ್ರ ಭಾಗದಲ್ಲಿ ಸೇರಿ 7 ಜಾಥಾಗಳನ್ನ ನಡೆಸಿದ್ದರು. ಪ್ರಚಾರದ ವೇಳೆ ರಾಜ್ಯ ಮೈತ್ರಿ ಸರ್ಕಾರವನ್ನ ಮೋದಿ ಮಾತುಗಳಲ್ಲೇ ತಿವಿದಿದ್ದರು. ಕುಮಾರಸ್ವಾಮಿ, ದೇವೇಗೌಡರ ಕುಟುಂಬವನ್ನ ಪ್ರಧಾನಿ ಮೋದಿ ಟೀಕಿಸಿದ್ದರು.

    * ರಾಜ್ಯ ಬಿಜೆಪಿ ಬಿಎಸ್‍ವೈ ನೇತೃತ್ವದಲ್ಲಿ ಒಟ್ಟಾಗಿ ಪ್ರಚಾರ ಮಾಡಿದ್ದರು. ಮೋದಿ ಒಂದೆಡೆ, ಬಿಎಸ್‍ವೈ ಇನ್ನೊಂದೆಡೆ ಡಬಲ್ ಪ್ರಚಾರ ನಡೆಸಿದ್ದರು. ಅಲ್ಲದೆ ಪೇಜ್ ಪ್ರಮುಖ್ ಸಂಘಟನೆಯನ್ನ ಮುಂದುವರಿಸಿಕೊಂಡು ಬಂದಿದ್ದು, ವಿಧಾನಸಭೆ ಮಾದರಿಯಲ್ಲೇ ಲೋಕಸಭೆ ಚುನಾವಣೆ ಎದುರಿಸಿರುವುದು ಬಿಜೆಪಿ ಪಕ್ಷ ಇಂದು ರಾಜ್ಯದಲ್ಲಿ ಗೆಲ್ಲಲು ಪ್ರಮುಖ ಕಾರಣವಾಗಿದೆ.

  • ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ – ಮೋದಿ

    ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ – ಮೋದಿ

    – ದೇಶದ ಜನತೆ ಫಕೀರನ ಜೋಳಿಗೆ ತುಂಬಿದ್ರು
    – ಭಾರತವನ್ನು ಸಮೃದ್ಧ ರಾಷ್ಟ್ರವನ್ನಾಗಿ ನಿರ್ಮಿಸೋಣ

    ನವದೆಹಲಿ: ಮೊದಲ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡು ಕ್ಷೇತ್ರಗಳನ್ನು ಗೆದ್ದಿತ್ತು. ಇಂದು ಅದೇ ಬಿಜೆಪಿ ಎರಡನೇ ಬಾರಿ ಕೇಂದ್ರದಲ್ಲಿ ಅಧಿಕಾರ ಹಿಡಿಯುತ್ತಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತದಾನಗೈದ ಎಲ್ಲರಿಗೂ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

    ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದಿನ ಬಿಜೆಪಿ ಗೆಲುವು ಇತಿಹಾಸವನ್ನು ಬರೆದಿದೆ. ಸ್ವತಂತ್ರ ಭಾರತದ ಮೊದಲ ಬಾರಿಗೆ ರಣ ರಣ ಬಿಸಿಲನ್ನು ಲೆಕ್ಕಿಸದೇ ಮತದಾರರು ಬಂದು ಅತಿ ಹೆಚ್ಚು ಮತದಾನ ಮಾಡಿದ್ದಾರೆ. ಎಲ್ಲ ಅಡೆತಡೆಗಳನ್ನು ಮೀರಿ ಲೋಕತಂತ್ರದ ಹಬ್ಬದಲ್ಲಿ ಕೆಲಸ ಮಾಡಿದ ಚುನಾವಣಾ ಆಯೋಗ, ಭದ್ರತಾ ಸಿಬ್ಬಂದಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ಧನ್ಯವಾದ ಹೇಳಿದರು.

    ಮಹಾಭಾರತದ ಯುದ್ಧದ ಬಳಿಕ ಶ್ರೀಕೃಷ್ಣನನ್ನು ಕೆಲವರು ನೀವು ಯಾವ ಪಕ್ಷದಲ್ಲಿದ್ದೀರಿ ಎಂದು ಕೇಳಿದ್ದರು. ಇಂದು ಅದೇ ಉತ್ತರವನ್ನು ಭಾರತದ ಜನತೆಯ ಮೂಲಕ ನಾನು ಯಾರ ಪಕ್ಷದಲ್ಲಿಯೂ ಇರಲಿಲ್ಲ. ನಾವು ಹಸ್ತಿನಾಪುರಕ್ಕಾಗಿ ನಿಂತಿದ್ದೆ. ಇಂದು ಕೋಟಿ ಕೋಟಿ ಭಾರತೀಯರು ಶ್ರೀಕೃಷ್ಣನ ರೂಪದಲ್ಲಿ ಭಾರತದ ಅಭಿವೃದ್ಧಿ ಪರ ನಿಂತಿದ್ದರ ಪರಿಣಾಮ ನಾನು ನಿಮ್ಮ ಮುಂದಿದ್ದೇನೆ ಎಂದರು.

    ಚುನಾವಣೆಯಲ್ಲಿ ದೇಶದ ಪ್ರತಿಯೊಬ್ಬ ನಾಗರೀಕರನು ಸ್ಪರ್ಧೆ ಮಾಡಿದ್ದರು. ಹಾಗಾಗಿ ಇದು ಜನತೆಗೆ ಗೆಲುವು. ಬಿಜೆಪಿಯ ಈ ಗೆಲುವನ್ನು ದೇಶದ ಜನರಿಗೆ ಅರ್ಪಿಸಲು ನಾನು ಇಚ್ಛಿಸುತ್ತೇನೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎಲ್ಲ ಅಭ್ಯರ್ಥಿಗಳು ನಮ್ಮ ಕಡೆಯಿಂದ ಶುಭಾಶಯಗಳು. ಗೆದ್ದ ಅಭ್ಯರ್ಥಿಗಳು ಹೆಗಲಿಗೆ ಹೆಗಲು ನೀಡಿ ದೇಶದ ಅಭಿವೃದ್ಧಿಗಾಗಿ ಕೆಲಸ ಮಾಡೋಣ. ಪಕ್ಷ ಯಾವುದೇ ಇರಲಿ ದೇಶದ ಅಭಿವೃದ್ಧಿ ನಮ್ಮದಾಗಿರಲಿ ಎಂದು ಹೇಳಿದರು.

    ಕೇಂದ್ರ ಸರ್ಕಾರ ಅಭಿವೃದ್ಧಿಯನ್ನ ಮಂತ್ರವಾಗಿಸಿಕೊಂಡು ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುತ್ತೇವೆ ಎಂದು ನಮ್ಮನ್ನು ಗೆಲ್ಲಿಸಿದ ದೇಶದ ಜನತೆಗೆ ಎಲ್ಲರ ಪರವಾಗಿ ಭರವಸೆ ನೀಡುತ್ತೇನೆ. ದೇಶದ ಸಾಮಾನ್ಯ ನಾಗರೀಕನು ಲೋಕತಂತ್ರದ ಬಾವುಟವನ್ನು ಇಂದು ಎತ್ತಿ ಹಿಡಿದಿರುವುದು ನಮ್ಮ ಮುಂದಿದೆ. ಹಾಗಾಗಿ ಸಾಮಾನ್ಯ ನಾಗರೀಕರನ ಮೂಲಭೂತ ಅವಶ್ಯಕತೆಗಳನ್ನು ಪೂರ್ಣಗೊಳಿಸುವ ಕೆಲಸ ಮಾಡುತ್ತೇವೆ. 20ನೇ ಶತಮಾನದ ರಾಜಕೀಯ ನಾಯಕರು ತಮ್ಮ ತಂತ್ರಗಳನ್ನು ಬಿಡಬೇಕು. ನಾವೆಲ್ಲ 21ನೇ ಶತಮಾನದಲ್ಲಿ ಇದ್ದೇವೆ. ಜನರು ಮೋದಿ ಮೋದಿ ಎಂದು ಹೇಳುವ ಮೂಲಕ ಪ್ರಾಮಾಣಿಕತೆಯನ್ನು ಬಯಸುತ್ತಿದ್ದಾರೆ ಎಂಬುದನ್ನು ವಿಪಕ್ಷ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

    ದೇಶದ ರೈತ, ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ, ಕಾನೂನು ನಿಯಮಗಳನ್ನು ಪಾಲಿಸುವ ಸೇರಿದಂತೆ ಇದು ಎಲ್ಲರ ಜಯವಾಗಿದೆ. ಮಹಾಮೈತ್ರಿಕೂಟದ ನಾಯಕರು ಜಾತ್ಯಾತೀತ ಹೆಸರಿನ ಮುಖವಾಡ ಧರಿಸಿ ಒಂದಾಗಿದ್ದರು. ಆದ್ರೆ ಜಾತ್ಯಾತೀತ ಮುಖವಾಡ ಧರಿಸಿದ್ದ ಎಲ್ಲರಿಗೂ ದೇಶದ ಜನತೆ ಉತ್ತರ ನೀಡಿದ್ದು, ಇಂದು ಯಾರು ಮಾತನಾಡುತ್ತಿಲ್ಲ ಎಂದು ಟಾಂಗ್ ನೀಡಿದರು.

    ಈ ಚುನಾವಣೆ 21ನೇ ಶತಮಾನ ಸದೃಢ ಸರ್ಕಾರ ರಚಿಸಿ ದೇಶದ ಉಜ್ವಲ ಭವಿಷ್ಯದಲ್ಲಿ ಪಾತ್ರವಾಗಿದೆ. ಕೇಂದ್ರದಲ್ಲಿ ಸುಭದ್ರ ಸರ್ಕಾರ ರಚನೆಯಾಗಿದ್ದು, ಇಂದು ಕೇವಲ ಎರಡು ಜಾತಿಗಳು ಮಾತ್ರ ಉಳಿಯಲಿವೆ. ಒಂದು ಬಡತನ ಮತ್ತೊಂದು ಬಡತನ ನಿರ್ಮೂಲನೆ ಮಾಡಲು ಮುಕ್ತ ಮಾಡುವ ವರ್ಗ. ಹಾಗಾಗಿ ಎರಡೂ ವರ್ಗಗಳಲ್ಲಿ ಮುಂದಿನ ಸರ್ಕಾರ ಶಕ್ತಿ ತುಂಬಿಸಬೇಕಿದೆ. 2019-24ರ ಅವಧಿಯಲ್ಲಿ ವಿಶ್ವವೇ ಭಾರತದತ್ತ ಅಚ್ಚರಿಯಿಂದ ನೋಡುವಂತೆ ಮಾಡೋಣ ಎಂದು ಕೇಳಿಕೊಂಡರು.

    ಗಾಂಧಿ-150 ಜನ್ಮದಿನ ಮತ್ತು ಭಾರತದ 75ನೇ ಸ್ವತಂತ್ರ್ಯ ದಿನಾಚರಣೆಯ ಈ ಎರಡೂ ಹಬ್ಬಗಳು 2019-24ರ ಅವಧಿಯಲ್ಲಿ ಬರಲಿವೆ. ಮುಂದಿನ ಐದು ವರ್ಷಗಳಲ್ಲಿ ದೇಶವನ್ನು ಸಮೃದ್ಧ ರಾಷ್ಟ್ರವನ್ನಾಗಿ ಮಾಡೋಣ. ಸ್ವತಂತ್ರ ಭಾರತ ಸಮೃದ್ಧ ಭಾರತವನ್ನು ಮಾಡೋಣ ಎಂದು ಹೇಳಿದರು.

    ಚುನಾವಣೆಯಲ್ಲಿ ಯಾರು ಏನು ಹೇಳಿದರು ಎನ್ನುವುದು ನಮಗೆ ಬೇಡ. ಎಲ್ಲವೂ ಮುಗಿದು ಹೋಗಿದೆ. ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವುದು ನಮ್ಮ ಕರ್ತವ್ಯ. ದೇಶದ ಅಭಿವೃದ್ಧಿಗಾಗಿ ನಮ್ಮ ಜೊತೆ ಹೆಜ್ಜೆ ಹಾಕುವವರು ಪ್ರಾಮಾಣಿಕವಾಗಿರಬೇಕು. ದೇಶದ ಅಭಿವೃದ್ಧಿಗೆ ದೇಶದ ಜನತೆ ತಮ್ಮ ಮತಗಳ ಮೂಲಕ ಈ ಫಕೀರನ ಜೋಳಿಗೆ ತುಂಬಿಸಿದ್ದಾರೆ ಎಂದು ಮೋದಿ ಹೇಳಿದರು.

  • ಡಿಕೆ ಸುರೇಶ್ ಮತ್ತೊಮ್ಮೆ ಲೋಕಸಭೆಗೆ ಆಯ್ಕೆ

    ಡಿಕೆ ಸುರೇಶ್ ಮತ್ತೊಮ್ಮೆ ಲೋಕಸಭೆಗೆ ಆಯ್ಕೆ

    ಬೆಂಗಳೂರು: ಕಾಂಗ್ರೆಸ್ಸಿನ ಭದ್ರಕೋಟೆ ಬೆಂಗಳೂರು ಗ್ರಾಮಾಂತರದಲ್ಲಿ ಮೂರನೇ ಬಾರಿ ಡಿಕೆ ಸುರೇಶ್ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿಯ ಅಶ್ವಥ್‍ನಾರಾಯಣ ವಿರುದ್ಧ ವಿರುದ್ಧ 2,06,870 ಮತಗಳ ಅಂತರದಿಂದ ಗೆಲ್ಲುವ ಮೂಲಕ ಸಂಸತ್ ಪ್ರವೇಶಿಸಿದ್ದಾರೆ.

    ಡಿಕೆ ಸುರೇಶ್ ಅವರಿಗೆ 8,78,258 ಮತಗಳು ಬಿದ್ದರೆ, ಮುನಿರಾಜು ಅವರು 6,71,388 ಮತಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕ್ಷೇತ್ರದಲ್ಲಿ ಡಿಕೆ ಸುರೇಶ್ ಅವರ ಅಭಿವೃದ್ಧಿ ಕಾರ್ಯಗಳಿಂದಾಗಿ ಜನ ಅವರನ್ನು ಮತ್ತೊಮ್ಮೆ ಲೋಕಸಭೆಗೆ ಆಯ್ಕೆ ಮಾಡಿದ್ದಾರೆ.

     

  • ಉಗ್ರಪ್ಪಗೆ ಸೋಲು – ಬಳ್ಳಾರಿಯಲ್ಲಿ ಬಿಜೆಪಿಗೆ ಗೆಲುವು

    ಉಗ್ರಪ್ಪಗೆ ಸೋಲು – ಬಳ್ಳಾರಿಯಲ್ಲಿ ಬಿಜೆಪಿಗೆ ಗೆಲುವು

    ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಉಗ್ರಪ್ಪ ವಿರುದ್ಧ 54,304 ಮತಗಳ ಅಂತರದಲ್ಲಿ ಬಿಜೆಪಿಯ ದೇವೇಂದ್ರಪ್ಪ ಜಯಗಳಿಸುವ ಮೂಲಕ ಲೋಕಸಭೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಶಾಸಕರ ಕಚ್ಚಾಟವೇ ಉಗ್ರಪ್ಪ ಅವರಿಗೆ ಮುಳುವಾಗಿದೆ.

    ಫಲಿತಾಂಶದಲ್ಲಿ ದೇವೇಂದ್ರಪ್ಪ ಅವರು 6,14,214 ಮತಗಳನ್ನು ಪಡೆದರೆ, ಉಗ್ರಪ್ಪ ಅವರು 5,59,970 ಮತಗಳನ್ನು ಗಳಿಸಿದ್ದಾರೆ.

    ಯಾವ ಯಾವ ತಾಲೂಕಿನಲ್ಲಿ ಯಾರಿಗೆ ಎಷ್ಟು ಲೀಡ್?
    1) ಹೂವಿನಹಡಗಲಿ – ಶಾಸಕ, ಸಚಿವ ಪರಮೇಶ್ವರ ನಾಯ್ಕ್)
    ಬಿಜೆಪಿ- 71198
    ಕಾಂಗ್ರೆಸ್- 56853
    ಬಿಜೆಪಿ ಲೀಡ್ – 14345

    2) ಹಗರಿಬೊಮ್ಮನಹಳ್ಳಿ – ಕಾಂಗ್ರೆಸ್ ಶಾಸಕ, ಭೀಮಾನಾಯ್ಕ್
    ಬಿಜೆಪಿ- 90110
    ಕಾಂಗ್ರೆಸ್- 68523
    ಬಿಜೆಪಿ ಲೀಡ್ – 21587

    3) ಹೊಸಪೇಟೆ- ಕಾಂಗ್ರೆಸ್ ಶಾಸಕ, ಆನಂದಸಿಂಗ್
    ಬಿಜೆಪಿ- 87914
    ಕಾಂಗ್ರೆಸ್-69420
    ಬಿಜೆಪಿ ಲೀಡ್ – 18494

    4) ಕಂಪ್ಲಿ – ಕಾಂಗ್ರೆಸ್ ಶಾಸಕ, ಜೆ ಎನ್ ಗಣೇಶ
    ಬಿಜೆಪಿ- 71786
    ಕಾಂಗ್ರೆಸ್- 75217
    ಕಾಂಗ್ರೆಸ್ ಲೀಡ್ – 3431

    5) ಬಳ್ಳಾರಿ ಗ್ರಾಮೀಣ – ಕಾಂಗ್ರೆಸ್ ಶಾಸಕ, ನಾಗೇಂದ್ರ
    ಬಿಜೆಪಿ- 68734
    ಕಾಂಗ್ರೆಸ್- 82279
    ಕಾಂಗ್ರೆಸ್ ಲೀಡ್ – 13545

    6) ಬಳ್ಳಾರಿ ನಗರ – ಬಿಜೆಪಿ ಶಾಸಕ, ಸೋಮಶೇಖರರೆಡ್ಡಿ
    ಬಿಜೆಪಿ- 72238
    ಕಾಂಗ್ರೆಸ್- 76472
    ಕಾಂಗ್ರೆಸ್ ಲೀಡ್- 4234

    7) ಸಂಡೂರು – ಕಾಂಗ್ರೆಸ್ ಶಾಸಕ ಸಚಿವ, ಈ ತುಕಾರಾಂ
    ಬಿಜೆಪಿ – 74142
    ಕಾಂಗ್ರೆಸ್- 75479
    ಕಾಂಗ್ರೆಸ್ ಲೀಡ್ – 1353

    8) ಕೂಡ್ಲಿಗಿ – ಬಿಜೆಪಿ ಶಾಸಕ ಎನ್ ವೈ ಗೋಪಾಲಕೃಷ್ಣ
    ಬಿಜೆಪಿ – 77837
    ಕಾಂಗ್ರೆಸ್ – 55575
    ಬಿಜೆಪಿ ಲೀಡ್ – 22.262

    ಬಿಜೆಪಿಗೆ ಪ್ಲಸ್ ಆಗಿದ್ದೇನು?:
    ಮೋದಿ ಅಲೆಯಲ್ಲಿ ಚುನಾವಣೆ ಎದುರಿಸಿದ್ದು, ಶ್ರೀರಾಮುಲು ಕೂಡ ಬೆನ್ನಿಗೆ ನಿಂತಿದ್ದರು. ಮಾಜಿ ಡಿಸಿಎಂ ದಿವಂಗತ ಎಂ ಪಿ ಪ್ರಕಾಶ್ ಗರಡಿಯಲ್ಲಿ ಬೆಳೆದ ರಾಜಕಾರಣಿ ಅನ್ನೋ ಹೆಸರಿದೆ. ಜೊತೆಗೆ ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಅನುಭವ ಇರುವುದು ಜೊತೆಗೆ ಒಮ್ಮೆ ಜಿಪಂ ಉಪಾಧ್ಯಕ್ಷ ಆಗಿರುವ ರಾಜಕೀಯ ಅನುಭವ ಇರೋದು ದೇವೇಂದ್ರಪ್ಪ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗಿದೆ.

    ಬಿಜೆಪಿಗೆ ಜಿಲ್ಲೆಯಲ್ಲಿ ಸರಿ ಸುಮಾರು 4 ಲಕ್ಷ ಮತಗಳ ವೋಟ್ ಬ್ಯಾಂಕ್ ಇದೆ. ಈ ಬಾರಿ ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿ ರೆಡ್ಡಿ- ರಾಮುಲು ಟೀಂ, ಸಂಘ ಪರಿವಾರ, ಹಿಂದು ಸಂಘಟನೆಗಳು ದೇವೇಂದ್ರಪ್ಪ ಬೆನ್ನಿಗೆ ನಿಂತು ಚುನಾವಣೆಯಲ್ಲಿ ರಣತಂತ್ರ ರೂಪಿಸಿತ್ತು. ಅಲ್ಲದೇ ದೇವೇಂದ್ರಪ್ಪ ಅವರು ಸ್ಥಳೀಯ ಅಭ್ಯರ್ಥಿಯಾಗಿದ್ದು ಜೊತೆಗೆ ಜಾರಕಿಹೊಳಿ ಬೀಗರು ಅನ್ನೋದು ಬಹುದೊಡ್ಡ ಪ್ಲಸ್ ಪಾಯಿಂಟ್ ಆಗಿತ್ತು.

    ಕಾಂಗ್ರೆಸ್ ಸೋಲಿಗೆ ಕಾರಣವೇನು?:
    ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರಲ್ಲಿ ಒಮ್ಮತ ಮೂಡದೆ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನದಿಂದ ಈ ಬಾರಿ ಕಾಂಗ್ರೆಸ್ ಗೆ ಸೋಲುಂಟಾಗಿದೆ. ಉಗ್ರಪ್ಪ ಕೇವಲ ಎಸ್ ಟಿ ನಾಯಕರಾಗಿದ್ದು, ಜನಾಂಗಕ್ಕೆ ಅತೀ ಹೆಚ್ಚು ಆದ್ಯತೆ ನೀಡುತ್ತಾರೆ ಅನ್ನೋದು ಹಾಗೂ ಸಚಿವ ಡಿಕೆ ಶಿವಕುಮಾರ್ ಈ ಬಾರಿಯ ಚುನಾವಣೆಯನ್ನ ಗಂಭೀರವಾಗಿ ಪರಿಗಣಿಸದಿರುವುದು ಕೂಡ ಪಕ್ಷಕ್ಕೆ ಮೈನಸ್ ಆಗಿದೆ.

    ಉಗ್ರಪ್ಪ ಅಧಿಕಾರಕ್ಕೆ ಬಂದರೆ ಅಧಿಕಾರಿಗಳಿಗೆ ಬೈತಾರೆ ಅನ್ನೋ ಮಾತುಗಳು ಅಧಿಕಾರಿ ವಲಯದಲ್ಲಿ ಕೇಳಿಬಂದಿತ್ತು. ಉಪಚುನಾವಣೆಯಲ್ಲಿ ಗೆದ್ದ ನಂತರ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಅವರು ಸ್ಥಳೀಯರಾಗಿರಲಿಲ್ಲ. ಅಲ್ಲದೆ ಸ್ಥಳೀಯರೊಂದಿಗೆ ಜಾಸ್ತಿ ಬೆರೆಯದಿರುವುದು ಕೂಡ ಪಕ್ಷದ ಹಿನ್ನಡೆಗೆ ಕಾರಣವಾಗಿದೆ. ಇಷ್ಟೇ ಅಲ್ಲದೆ ಸಂಸದರಾದ ನಂತರ ಸ್ಥಳೀಯ ನಾಯಕರೊಂದಿಗೆ ಮುನಿಸು ಕಟ್ಟಿಕೊಂಡಿರುವುದು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ.

    ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ 17,51,297 ಒಟ್ಟು ಮತದಾರರಿದ್ದು, 12,18,767 ಮತಗಳು ಚಲಾವಣೆಯಾಗಿತ್ತು. ಕ್ಷೇತ್ರದಲ್ಲಿ 11 ಮಂದಿ ಅಭ್ಯರ್ಥಿಗಳಿದ್ದು, ಕಾಂಗ್ರೆಸ್ ನಿಂದ ಉಗ್ರಪ್ಪ ಹಾಗೂ ಬಿಜೆಪಿಯಿಂದ ವೈ ದೇವೇಂದ್ರಪ್ಪ ಸ್ಪರ್ಧಿಸಿದ್ದರು.

  • ಮನಮೋಹನ್ ಸಿಂಗ್ ಪ್ರಧಾನಿಯಾಗಲಿದ್ದಾರೆ- ಬಿಜೆಪಿ ಅಭ್ಯರ್ಥಿ ಎಡವಟ್ಟು

    ಮನಮೋಹನ್ ಸಿಂಗ್ ಪ್ರಧಾನಿಯಾಗಲಿದ್ದಾರೆ- ಬಿಜೆಪಿ ಅಭ್ಯರ್ಥಿ ಎಡವಟ್ಟು

    ತುಮಕೂರು: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಲಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ಎಡವಟ್ಟು ಮಾಡಿದ್ದಾರೆ.

    ಅಭ್ಯರ್ಥಿ ಗಳ ವಿಶ್ರಾಂತಿ ಕೊಠಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್ ನಲ್ಲಿ ಮನಮೋಹನ್ ಸಿಂಗ್ ಪರವಾಗಿ 303, 340, 370 ಹೇಳುತ್ತಾರೆ. ಒಟ್ಟಿನಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ. ಕೂಡಲೇ ತನ್ನ ತಪ್ಪಿನ ಅರಿವಾಗಿ ಕ್ಷಮಿಸಿ, ಮನಮೋಹನ್ ಸಿಂಗ್ ಅಲ್ಲ ಮೋದಿ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ.

    8 ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಹಾಗೆಯೇ ಸುಗಮವಾಗಿ ಚುನಾವಣೆ ನಡೆದಿದೆ. ಭಾರತೀಯ ಜನತಾ ಪಕ್ಷಕ್ಕೆ ಪೂರ್ಣ ಬೆಂಬಲ ಸಿಕ್ಕಿದೆ. ಎಲ್ಲರ ಅಭಿಪ್ರಾಯವನ್ನು ಇಂದು ಸಂಗ್ರಹಿಸಿದ್ದೇವೆ. ನನ್ನ ಮಟ್ಟಿಗೆ ಇಂದು ನಮ್ಮ ಪಕ್ಷ ಮುನ್ನಡೆ ಸಾಧಿಸುತ್ತದೆ ಎಂಬ ವಿಶ್ವಾಸವಿದೆ ಎಂದರು.

    ಸಮೀಕ್ಷೆಗಳು ಅವರವರ ಇಷ್ಟಕ್ಕೆ ಬಂದಂತೆ, ಗಿಣಿ ಶಾಸ್ತ್ರ ಹೇಳಿದಂತೆ ಎಂದು ಎಕ್ಸಿಟ್ ಪೋಲ್ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಗೆ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಹಾಲಿ ಸಂಸದ ಮುದ್ದಹನುಮೇಗೌಡ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಬಿಜೆಪಿಯ ಜಿ.ಎಸ್. ಬಸವರಾಜು ಸ್ಪರ್ಧಿಸಿದ್ದಾರೆ.

  • ಈ ಬಾರಿಯೂ ನಾನೇ ಗೆಲ್ಲುತ್ತೇನೆ- ವೀರಪ್ಪ ಮೊಯ್ಲಿ

    ಈ ಬಾರಿಯೂ ನಾನೇ ಗೆಲ್ಲುತ್ತೇನೆ- ವೀರಪ್ಪ ಮೊಯ್ಲಿ

    ಚಿಕ್ಕಬಳ್ಳಾಪುರ: ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ನಾನೇ ಗೆಲ್ಲುವುದು ಎಂದು ಮೈತ್ರಿ ಅಭ್ಯರ್ಥಿ ಡಾ.ಎಂ ವೀರಪ್ಪ ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜು ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿಯೂ ನಾನೇ ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ. ಎಕ್ಸಿಟ್ ಪೋಲ್ ಬಗ್ಗೆ ನನಗೆ ನಂಬಿಕೆಯಿಲ್ಲ. ಮಧ್ಯಾಹ್ನದ ಒಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದಿದ್ದಾರೆ.

    ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಗುರುವಾರ ಅಂತ್ಯವಾಗಲಿದೆ. ಸುಮಾರು ಎರಡು ತಿಂಗಳ ಮಹಾಭಾರತ ಕುರುಕ್ಷೇತ್ರದ ಫಲಿತಾಂಶ ಬೆಳಗ್ಗೆ 8 ಗಂಟೆಯಿಂದ ಶುರುವಾಗಲಿದೆ. ಚಿಕ್ಕಬಳ್ಳಾಪುರ ಹೊರವಲಯದ ನಾಗಾರ್ಜುನ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮೊಯ್ಲಿ ಆಗಮಿಸಿದ್ದಾರೆ.

    ಚಿಕ್ಕಬಳ್ಳಾಪುರದಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಯಾಗಿ ಕಾಂಗ್ರೆಸ್ ಹಾಲಿ ಸಂಸದ ಎಂ. ವೀರಪ್ಪ ಮೊಯ್ಲಿ ಹಾಗೂ ಕಳೆದ ಬಾರಿ ಸ್ಪರ್ಧೆ ಮಾಡಿ ಸೋಲುಂಡಿದ್ದ ಬಿಜೆಪಿಯ ಬಿ.ಎನ್ ಬಚ್ಚೇಗೌಡ ಹಾಗೂ ಬಿಎಸ್‍ಪಿ ಪಕ್ಷದಿಂದ ಡಾ. ಸಿಎಸ್ ದ್ವಾರಕನಾಥ್ ಸ್ಪರ್ಧೆ ಮಾಡಿದ್ದಾರೆ.