Tag: ಲೋಕಸಭಾ ಚುನಾವಣೆ 2019

  • ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    ನಮ್ಮಲ್ಲಿ ಭಯೋತ್ಪಾದಕರಿಲ್ಲ, ಭಯ ಪಡೋ ಅಗತ್ಯವಿಲ್ಲ- ಸುಮಲತಾಗೆ ಡಿಸಿ ತಮ್ಮಣ್ಣ ಟಾಂಗ್

    – ನಿಖಿಲ್ ಕಿವಿಗೆ ಗಾಯ

    ಮಂಡ್ಯ: ನಮ್ಮ ಪಕ್ಷದಲ್ಲಿ ಭಯೋತ್ಪಾದಕರಿಲ್ಲ. ಹೀಗಾಗಿ ಭಯ ಪಡುವ ಅಗತ್ಯವಿಲ್ಲ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಸಚಿವ ಡಿ.ಸಿ ತಮ್ಮಣ್ಣ ಟಾಂಗ್ ನೀಡಿದ್ರು.

    ಮದ್ದೂರಿನ ಬೋರಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಿಎಂ ಹೇಳಿಕೆಯಿಂದ ನನಗೆ ಭಯವಾಗುತ್ತಿದೆ ಎಂದಿದ್ದ ಸುಮಲತಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವೆಲ್ಲ ಸಭ್ಯರು. ನಮ್ಮ ನಡವಳಿಕೆ ನೋಡಿದ್ದೀರಲ್ಲ. ಅವರು ಸಂಬಂಧಿಕರೂ ಆಗಿದ್ದಾರೆ. ನಮ್ಮ ಪಕ್ಷದಲ್ಲಿ ಭಯೋತ್ಪಾದಕರು ಇಲ್ಲ. ಹಾಗಾಗಿ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ ಎಂದು ಹೇಳಿದ್ರು. ಇದನ್ನೂ ಓದಿ: ಸಿಎಂ ಹೇಳಿಕೆಯಿಂದ ನನಗೆ ಭಯವಾಗ್ತಿದೆ: ಸುಮಲತಾ

    ಯಾರಿಗೆ ಯಾವ ಸಂದರ್ಭದಲ್ಲಿ ಭಯ ಆಗುತ್ತದೆ ಅನ್ನೋದು ನಮಗೆ ಗೊತ್ತಿಲ್ಲ. ಆದ್ರೆ ನಮ್ಮನ್ನ ನೋಡಿ ಭಯ ಪಡುವ ಅಗತ್ಯ ಇಲ್ಲ. ಮಂಡ್ಯದಲ್ಲಿ ವಾತಾವರಣ ಚೆನ್ನಾಗಿದೆ. ಎಲ್ಲ ಕಡೆಯಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿಎಂ ಎಚ್ ಡಿ ಕುಮಾರಸ್ವಾಮಿಯವರು ಇಂದು ಮಾತ್ರ ಮಂಡ್ಯದಲ್ಲಿ ಪ್ರಚಾರ ಮಾಡುತ್ತಾರೆ. ಮತ್ತೆ ಅವರು ಮಂಡ್ಯದಲ್ಲಿ ಪ್ರಚಾರ ಮಾಡುವುದಿಲ್ಲ ಅಂದ್ರು.

    ನಿಖಿಲ್ ಕಿವಿಗೆ ಗಾಯವಾಗಿದ್ದರಿಂದ ಶುಕ್ರವಾರ ಪ್ರಚಾರಕ್ಕೆ ಹೋಗಿಲ್ಲ. ಇಂದಿನಿಂದ ನಿಖಿಲ್ ಅವರು ಸಹ ಪ್ರಚಾರದಲ್ಲಿ ಭಾಗಿಯಾಗುತ್ತಾರೆ. ಸುಮಲತಾ ಬಗ್ಗೆ ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಅವರ ವೈಯಕ್ತಿಕ ಹೇಳಿಕೆಯಾಗಿದೆ. ಆದ್ರೆ ಆ ರೀತಿ ಮಾತನಾಡಬಾರದು ಎಂದು ಪಕ್ಷ ಸೂಚನೆ ನೀಡಿದೆ. ಹೀಗಾಗಿ ಯಾರೂ ವೈಯಕ್ತಿಕವಾಗಿ ಟೀಕೆ ಮಾಡಬಾರದು ಎಂದು ಸಲಹೆಯಿತ್ತರು.  ಇದನ್ನೂ ಓದಿ: ಜಯಲಲಿತಾರನ್ನು ಮೀರಿಸುವ ಮಾಯಾಂಗನೆಯಂತೆ ಹೋರಾಟ: ಶಿವರಾಮೇಗೌಡ

  • ಮಂಡ್ಯದಲ್ಲಿ ದೇವೇಗೌಡರು ಕಣ್ಣೀರು!

    ಮಂಡ್ಯದಲ್ಲಿ ದೇವೇಗೌಡರು ಕಣ್ಣೀರು!

    ಮಂಡ್ಯ/ಮೈಸೂರು: ಮಂಡ್ಯದಲ್ಲಿ ಮಾತ್ರವಲ್ಲದೆ ಮೈಸೂರಲ್ಲೂ ಗುರು-ಶಿಷ್ಯರ ಮತಬೇಟೆ ಶುಕ್ರವಾರ ಜೋರಾಗಿತ್ತು. ಮಂಡ್ಯದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ರು. ಇತ್ತ ಮೈಸೂರು ಪ್ರಚಾರದಲ್ಲಿ ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ಕೇಂದ್ರ ಬಿಂದುವಾಗಿದ್ದರು.

    ರಾಜ್ಯ ರಾಜಕಾರಣದಲ್ಲಿ ಗುರು ಶಿಷ್ಯರದ್ದೇ ಸುದ್ದಿ. ಮಂಡ್ಯದಲ್ಲಿ ನಿಖಿಲ್ ಗೆಲುವಿಗಾಗಿ ಶತಾಯಗತಾಯ ಸರ್ಕಸ್ ನಡೆಸ್ತಿರೋ ದೋಸ್ತಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ನಿಖಿಲ್ ಪರವಾಗಿ ಮಂಡ್ಯದಲ್ಲಿ ಗುರು-ಶಿಷ್ಯರಾದ ದೇವೇಗೌಡ, ಸಿದ್ದರಾಮಯ್ಯ ಪ್ರಚಾರ ನಡೆಸಿ ಬಳಿಕ ಮೈಸೂರಿನಲ್ಲಿ ವಿಜಯ್ ಶಂಕರ್ ಪರವಾಗಿ ಮತಯಾಚಿಸಿದ್ರು.

    ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ-ಜಿಟಿಡಿ!
    ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮೈತ್ರಿ ಪಕ್ಷದ ಪ್ರಚಾರ ಸಭೆಯ ಮುಖ್ಯ ಕೇಂದ್ರ ಬಿಂದುಗಳಾಗಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಿ.ಟಿ. ದೇವೇಗೌಡ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಸಿದ್ದರಾಮಯ್ಯರನ್ನು ಜಿ.ಟಿ. ದೇವೇಗೌಡ ಸೋಲಿಸಿದ್ದರು. ಅಂದಿನಿಂದ ಇಬ್ಬರು ಪರಸ್ಪರ ಮುಖ ನೋಡೋದು ಬಿಡಿ ಒಂದೇ ವೇದಿಕೆಯಲ್ಲಿ ಕೂರುವುದು ಬಹುದೂರದ ಮಾತಾಗಿತ್ತು. ಅದಾದ ನಂತರ ಶುಕ್ರವಾರ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ನಾವು ಮುನಿಸು ಮರೆತು ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿದರು.


    ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಂಡ್ಯದಲ್ಲಿ ಸುಮಲತಾರಿಗೆ ಬಿಜೆಪಿ ಸಹಕಾರ ನೀಡಿದೆ. ಅಂದರೆ ಸುಮಲತಾ ಕೂಡ ಬಿಜೆಪಿ ಅಭ್ಯರ್ಥಿಯೇ ಆಗಿದ್ದಾರೆ. ಕೋಮುವಾದಿ ಪಕ್ಷವನ್ನು ನಾವು ಸೋಲಿಸಬೇಕಿದೆ ಎಂದು ಸುಮಲತಾರನ್ನ ಕೋಮುವಾದಿಗೆ ಹೋಲಿಸಿದ್ದಾರೆ. ಇದಕ್ಕೂ ಮೊದಲು ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ದೇವೇಗೌಡರು ಕಣ್ಣೀರು ಹಾಕಿದ್ರು.

    ಇನ್ನೊಂದೆಡೆ ಸಿದ್ದರಾಮಯ್ಯ ಮತ್ತು ಜಿಟಿಡಿ ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಂಟಿಯಾಗಿ ಪ್ರಚಾರ ಕೂಡ ನಡೆಸಲಿದ್ದಾರೆ. ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಗೆಲ್ಲಲು ದೋಸ್ತಿಗಳು ವೈರತ್ವವೆಲ್ಲಾ ಮರೆತು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಗುರು ಶಿಷ್ಯರ ಮೋಡಿ ಎಷ್ಟು ವರ್ಕೌಟ್ ಆಗತ್ತೆ ಎಂದು ರಿಸಲ್ಟ್ ವರೆಗೆ ಕಾಯಲೇಬೇಕು.

  • ಸುಳ್ಳು ಹೇಳುವ ಪಾಪಿಗಳಿಗೆ ಮತ ಹಾಕ್ಬೇಡಿ: ಎಸ್.ಆರ್ ಶ್ರೀನಿವಾಸ್

    ಸುಳ್ಳು ಹೇಳುವ ಪಾಪಿಗಳಿಗೆ ಮತ ಹಾಕ್ಬೇಡಿ: ಎಸ್.ಆರ್ ಶ್ರೀನಿವಾಸ್

    ತುಮಕೂರು: ಸುಳ್ಳು ಹೇಳುವ ಪಾಪಿಗಳಿಗೆ ಮತ ಹಾಕಬೇಡಿ ಎಂದು ಬಿಜೆಪಿ ಅಭ್ಯರ್ಥಿ ಬಸವರಾಜು ವಿರುದ್ಧ ಸಚಿವ ಎಸ್.ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರಿನ ತುರುವೆಕೆರೆಯಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಶ್ರೀನಿವಾಸ್, ಬಿಜೆಪಿ ಅಭ್ಯರ್ಥಿ ಬಸವರಾಜ್ ಸುಳ್ಳಿನ ಕ್ಲಾಸ್ ತೆಗೆದುಕೊಂಡಿರುವ ವಿದ್ಯಾರ್ಥಿಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರತಿ ಭಾಷಣದಲ್ಲಿಯೂ ನೀರು ಕೊಟ್ಟಿಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಈ ವರ್ಷ ನಮಗೆ 24 ಟಿಎಂಸಿ ನೀರು ಬಂದಿದೆ. ಇಂತಹ ಸುಳ್ಳು ಹೇಳುವ ಪಾಪಿಗಳಿಗೆ ಮತ ಹಾಕಬೇಡಿ. ಮಾಧ್ಯಮಗಳ ಮುಂದೆ ಹೋಗಿ ನೀರು ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ. ಈ ಹಿಂದೆ ಸಂಸದ ಆಗಿದ್ದವನು ಇದೇ ಕಳ್ಳ ಬಸವರಾಜು ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.

    ತನ್ನ ಅಧಿಕಾರವಧಿಯಲ್ಲಿ ಎಳನೀರು ಕಂಪನಿ ಆರಂಭಿಸಿ, ನಿಮ್ಮ ಮಕ್ಕಳಿಗೆ ಉದ್ಯೋಗ ನೀಡುತ್ತೇನೆ ಎಂದು ಹೇಳಿ 70ರಿಂದ 80 ಎಕರೆ ಜಮೀನು ತಮ್ಮದಾಗಿಸಿಕೊಂಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಗಂಭೀರವಾಗಿ ಆರೋಪಿಸಿದರು.

    ಕಂಪನಿಯ ಶೇರು ಖರೀದಿಸಿ ಸದಸ್ಯರಾಗಿ ಎಂದು ಹೇಳಿ ಎಲ್ಲರಿಗೂ ಮಕ್ಮಲ್ ಟೋಪಿ ಹಾಕಿದರು. ಒಂದು ಶೇರ್ 22 ಸಾವಿರ ರೂ. ಬೆಲೆ ಎಂದು ನಿಗದಿ ಮಾಡಿದ್ದರು. ಅಂದು ನಮ್ಮ ತಂದೆಯೂ ನಾಲ್ಕು ಶೇರ್ ಖರೀದಿಸಿ ಮೋಸಕ್ಕೆ ಒಳಗಾದರು. ಆ ಹಣವನ್ನು ಕಂಪನಿಗೆ ನೀಡದೆ ಎಂಜಿನಿಯರಿಂಗ್ ಕಾಲೇಜು ಕಟ್ಟಿಕೊಂಡು ಐಶಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

  • ರಾಜ್ಯದಲ್ಲಿಂದು ಮೋದಿ ವರ್ಸಸ್ ರಾಹುಲ್ ರ‍್ಯಾಲಿ

    ರಾಜ್ಯದಲ್ಲಿಂದು ಮೋದಿ ವರ್ಸಸ್ ರಾಹುಲ್ ರ‍್ಯಾಲಿ

    – ಮಂಗಳೂರು, ಬೆಂಗಳೂರಿನಲ್ಲಿ ನಮೋ ಕಹಳೆ
    – ಕೋಲಾರ, ಚಿತ್ರದುರ್ಗ, ಮಂಡ್ಯದಲ್ಲಿ ರಾಗಾ ಮತಬೇಟೆ

    ಬೆಂಗಳೂರು: ಇಂದು ರಾಜ್ಯದಲ್ಲಿ ಪ್ರಧಾನಿ ಮೋದಿ ವರ್ಸಸ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮರ. ರಾಹುಲ್ ಗಾಂಧಿ ಮತ್ತು ಮೋದಿ ಇಂದು ರಾಜ್ಯದಲ್ಲಿ ದಂಡಯಾತ್ರೆ ಹೊರಟಿದ್ದಾರೆ.

    ಶುಕ್ರವಾರ ಕೊಪ್ಪಳದಲ್ಲಿ ಗುಡುಗಿದ್ದ ಮೋದಿ ಇಂದು ಮಂಗಳೂರಿಗೆ ಆಗಮಿಸಲಿದ್ದಾರೆ. ಮಂಗಳೂರಿನ ನೆಹರು ಮೈದಾನದಲ್ಲಿ ನಡೆಯಲಿರುವ ಬೃಹತ್ ರ‍್ಯಾಲಿಗೆ ಭರ್ಜರಿ ಸಿದ್ಧತೆ ನಡೆದಿದೆ. ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಸಂಜೆ 4 ಗಂಟೆಗೆ ಮೈದಾನ ತಲುಪಲಿದ್ದಾರೆ. ಈ ಹಿನ್ನೆಲೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಂಗಳೂರು ರ‍್ಯಾಲಿ ಬಳಿಕ ಮೋದಿ ಬೆಂಗಳೂರು ಅರಮನೆ ಮೈದಾನದಲ್ಲಿ ಸಂಜೆ ನಡೆಯಲಿರುವ ಸಮಾವೇಶದಲ್ಲಿ ಮತಯಾಚಿಸಲಿದ್ದಾರೆ.

    ಇಂದು ಕೋಲಾರ ಜಿಲ್ಲೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಕಾಂಗ್ರೆಸ್ ಪರಿವರ್ತನಾ ಬಹಿರಂಗ ಸಭೆಯಲ್ಲಿ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಚಿತ್ರದುರ್ಗದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಂಡ್ಯಕ್ಕೆ ತೆರಳಿ ನಿಖಿಲ್ ಕುಮಾರಸ್ವಾಮಿ ಪರ ಕೆ.ಆರ್.ನಗರದಲ್ಲಿ ರಾಹುಲ್ ಮತಯಾಚಿಸಲಿದ್ದಾರೆ.

  • ನನಗೆ ವೋಟ್ ಹಾಕದಿದ್ದರೆ ಶಾಪ ಹಾಕುವೆ: ಮತದಾರರಿಗೆ ಸಾಕ್ಷಿ ಮಹಾರಾಜ್ ಎಚ್ಚರಿಕೆ

    ನನಗೆ ವೋಟ್ ಹಾಕದಿದ್ದರೆ ಶಾಪ ಹಾಕುವೆ: ಮತದಾರರಿಗೆ ಸಾಕ್ಷಿ ಮಹಾರಾಜ್ ಎಚ್ಚರಿಕೆ

    ನವದೆಹಲಿ: ಬಿಜೆಪಿ ಮುಖಂಡ ಸಾಕ್ಷಿ ಮಹಾರಾಜ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಒಂದು ವೇಳೆ ನೀವು ನನಗೆ ವೋಟ್ ಹಾಕದಿದ್ದರೆ ನಾನು ನಿಮಗೆ ಶಾಪ ಹಾಕುತ್ತೇನೆ ಎಂದು ಹೇಳುವ ಮೂಲಕ ಮತದಾರರಿಗೆ ಎಚ್ಚರಿಕೆ ನೀಡಿದ್ದಾರೆ.

    ನಾನು ಒಬ್ಬ ಸನ್ಯಾಸಿ. ನೀವು ನಾನು ಗೆಲ್ಲುವಂತೆ ಮಾಡಿದರೆ ನಾನು ಗೆಲ್ಲುತ್ತೇನೆ. ಇಲ್ಲದಿದ್ದರೆ ದೇವಸ್ಥಾನದಲ್ಲಿ ಭಜನೆ, ಕೀರ್ತನೆಯನ್ನು ನಾನು ಮಾಡಿಕೊಂಡಿರುತ್ತೇನೆ. ಇಂದು ನಾನು ನಿಮ್ಮ ಮತಗಳನ್ನು ಕೇಳಲು ಬಂದಿದ್ದು, ನನ್ನನ್ನು ಗೆಲ್ಲಿಸಿ ಎಂದು ಕೇಳಿಕೊಂಡಿರುವುದಾಗಿ ರಾಷ್ಟ್ರೀಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೀವು ನನ್ನನ್ನು ಗೆಲ್ಲಿಸಬೇಕು. ನಾನು ನಿಮ್ಮ ಮನೆ ಬಾಗಿಲಿಗೆ ಬೇಡಲು ಬಂದಿದ್ದೇನೆ. ನೀವು ಸನ್ಯಾಸಿಗೆ ಭಿಕ್ಷೆ ಕೊಡಲು ನಿರಾಕರಿಸಿದರೆ ನಿಮ್ಮ ಕುಟುಂಬದ ಸಂತೋಷವನ್ನು ಕಿತ್ತುಕೊಂಡು ಹೋಗುತ್ತೇನೆ. ಮತ್ತು ನಿಮಗೆ ಶಾಪ ಹಾಕುತ್ತೇನೆ ಎಂದು ಸಾಕ್ಷಿ ಮಹಾರಾಜ್ ಹೇಳಿದ್ದಾರೆ.

    ಸಾಕ್ಷಿ ಮಹಾರಾಜ್ ಹೇಳಿಕೆಗೆ ಪಕ್ಷ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಿನಲ್ಲಿ ಸಾಕ್ಷಿ ಮಹಾರಾಜ್ ತನ್ನ ವಿವಾದಾತ್ಮಕ ಹೇಳಿಕೆಗಳಿಂದಲೇ ಪ್ರಚಲಿತರಾಗಿದ್ದು, ಇದೀಗ ಬೆದರಿಕೆಯ ಮೂಲಕ ಮತ ಕೇಳಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

  • ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ತೊಂದರೆ ನೀಡಿ ಒತ್ತಡ ಹಾಕಿದ್ದರಿಂದ ನಿಷ್ಠಾವಂತ ಡಿಸಿ ವರ್ಗಾವಣೆ: ಸುಮಲತಾ ಅಂಬರೀಶ್

    ಮಂಡ್ಯ: ನಿಷ್ಠಾವಂತ ಡಿಸಿಯಾಗಿದ್ದ ಮಂಜುಶ್ರೀ ಅವರಿಗೆ ತೊಂದರೆ ಕೊಟ್ಟು, ಒತ್ತಡ ಹಾಕಿ ಕೆಲಸ ಮಾಡಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.

    ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಮೊದಲು ನಾನು ಹೇಳಿದ್ದನ್ನೆಲ್ಲಾ ಆರೋಪ ಎಂದು ಹೇಳುತ್ತಿದ್ದರು. ಇದೀಗ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ನನ್ನ ಮಾತಲ್ಲಿ ನಿಜ ಇದ್ದ ಕಾರಣ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿ ಅವರನ್ನು ವರ್ಗಾ ಮಾಡಿದ್ದಾರೆ. ನನಗೆ ಸಿಆರ್‍ಪಿಎಫ್ ಭದ್ರತೆ ಬೇಕು ಎಂದು ಕೇಳಿದ್ದೇನೆ ಅಂದ್ರು.

    ಇದೇ ವೇಳೆ ಅಂಗವಿಕಲ ಹೆಣ್ಣು ಮಗಳು ಕಷ್ಟಪಟ್ಟು ಐಎಎಸ್ ಮಾಡಿ ನಿಷ್ಠಾವಂತಳಾಗಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಒಬ್ಬಳು ಹೆಣ್ಣು ಮಗಳ ಕಷ್ಟವನ್ನು ಅರ್ಥ ಮಾಡಿಕೊಳ್ಳದೇ ಅವರನ್ನು ಇಲ್ಲಿಂದ ಓಡಿಸಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಈ ಮಾತಲ್ಲಿ ಅರ್ಥವೇ ಇಲ್ಲ. ಯಾಕಂದ್ರೆ ಅಂಥವರಿಗೆ ಮೊದಲು ತೊಂದರೆ ಕೊಟ್ಟು, ಒತ್ತಡ ಹೇರಿದ್ದಾರೆ. ಹೀಗಾಗಿ ಸರ್ಕಾರದ ವಿಷಯದಲ್ಲಿ ಆ ಮಾತುಗಳನ್ನು ಆಡಲೇ ಬಾರದು ಅಂದ್ರು.

    ಸಿದ್ದರಾಮಯ್ಯಗೆ ಟಾಂಗ್:
    ಪಕ್ಷೇತರ ಅಭ್ಯರ್ಥಿ ಸುಮಲತಾರನ್ನು ಸೋಲಿಸಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ಟಾಂಗ್ ಕೊಟ್ಟ ಸುಮಲತಾ, ಕಾವೇರಿ ನೀರಿಗಾಗಿ ದೇವೇಗೌಡರು ಮಾತ್ರ ಹೋರಾಟ ಮಾಡಿಲ್ಲ. ನನ್ನ ಗಂಡ ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಕಾವೇರಿ ನೀರಿಗಾಗಿ ರಾಜೀನಾಮೆ ಕೊಟ್ಟ ಏಕೈಕ ವ್ಯಕ್ತಿ ಅಂಬರೀಶ್ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

    ಮಾಯಾಂಗನೆ ಹೇಳಿಕೆಗೆ ಪ್ರತಿಕ್ರಿಯೆ:
    ಇದೇ ವೇಳೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜಯಲಲಿತಾ ಅವರನ್ನು ಮೀರಿಸುವ ಮಾಯಾಂಗನೆಯಾಗಿ ಹೋರಾಟ ಮಾಡುತ್ತಿದ್ದಾರೆ ಸಂಸದ ಶಿವರಾಮೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಸುಮಲತಾ, ಜೆಡಿಎಸ್ ನಲ್ಲಿ ಯಾರು ತಾನೆ ಒಳ್ಳೆಯ ಮಾತನ್ನಾಡುತ್ತಾರೆ. ಅವರ ಹೇಳಿಕೆಗೆ ನಾನು ಬೆಲೆ ಕೊಡಲ್ಲ. ಜನ ಕೂಡ ಅವರ ಮಾತಿಗೆ ಬೆಲೆ ಕೋಡೋದಿಕ್ಕೆ ಸಾಧ್ಯನೇ ಇಲ್ಲ. ಹೀಗಾಗಿ ಅವರ ಮಾತಿಗೆ ನಾನೇನು ತಲೆಕೆಡಿಸಿಕೋಳ್ಳೋದಕ್ಕೆ ಹೋಗಲ್ಲ ಎಂದರು.

  • ಬಿಜೆಪಿ ಪರ ದೀಪ್‍ವೀರ್ ಪ್ರಚಾರ – ವೈರಲ್ ಫೋಟೋ ರಹಸ್ಯ ರಿವೀಲ್

    ಬಿಜೆಪಿ ಪರ ದೀಪ್‍ವೀರ್ ಪ್ರಚಾರ – ವೈರಲ್ ಫೋಟೋ ರಹಸ್ಯ ರಿವೀಲ್

    ಮುಂಬೈ: ಲೋಕಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಗುರುವಾರ ಮುಗಿದಿದೆ. ದೇಶಾದ್ಯಂತ ರಾಜಕೀಯ ಮುಖಂಡರು ಅಬ್ಬರದ ಪ್ರಚಾರದ ಮೊರೆ ಹೋಗುತ್ತಿದ್ದಾರೆ. ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಸಿನಿಮಾ ಕಲಾವಿದರು ತಮ್ಮ ಪಕ್ಷದ ಪರವಾಗಿ ಸಿನಿ ಅಭಿಮಾನಿಗಳ ಜೊತೆ ಪ್ರಚಾರ ನಡೆಸುತ್ತಿದ್ದಾರೆ. ಕೆಲವು ಕಲಾವಿದರು ತಮ್ಮ ಆಪ್ತ ನಾಯಕರ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ. ಈ ಚುನಾವಣಾ ಸುದ್ದಿಗಳ ಜೊತೆಗೆ ಎರಡು ದಿನಗಳಿಂದ ಬಾಲಿವುಡ್ ಕ್ಯೂಟ್ ಜೋಡಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಬಿಜೆಪಿ ಶಾಲು ಹಾಕಿಕೊಂಡಿರುವ ಫೋಟೋ ವೈರಲ್ ಆಗಿದೆ.

    ಏಕ್ ಬಿಹಾರಿ ಸೌ ಪೆ ಬಿಹಾರಿ ಎಂಬ ಫೇಸ್‍ಬುಕ್ ಖಾತೆಯಲ್ಲಿ ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಶಾಲು ಹಾಕಿಕೊಂಡಿರುವ ಫೋಟೋ ಅಪ್ಲೋಡ್ ಮಾಡಲಾಗಿದೆ. ಶಾಲ್ ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂದು ಸಹ ಬರೆಯಲಾಗಿದೆ. ಫೋಟೋ ಕೆಳಗಡೆ ‘ಕಮಲದ ಬಟನ್ ಒತ್ತಿ, ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಿ’ ಎಂದು ದೊಡ್ಡ ಅಕ್ಷರದಲ್ಲಿ ಬರೆಯಲಾಗಿದೆ.

    ಎರಡು ದಿನಗಳ ಹಿಂದೆ ಈ ಫೋಟೋ ಅಪ್ಲೋಡ್ ಆಗಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ. ದೀಪ್‍ವೀರ್ ಮದುವೆ ಬಳಿಕ ಅಂದರೆ ನವೆಂಬರ್ 2018ರಲ್ಲಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಸರಿ ಶಾಲು ಹಾಕಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದರು. ಅಂದು ಕ್ಲಿಕ್ಕಿಸಿದ ಫೋಟೋದಲ್ಲಿ ಶಾಲು ಮೇಲೆ ಯಾವುದೇ ಅಕ್ಷರಗಳು ಇರಲಿಲ್ಲ. ಇದೀಗ ಅದೇ ಫೋಟೋದ ಶಾಲು ಮೇಲೆ ‘ವೋಟ್ ಫಾರ್ ಬಿಜೆಪಿ’ ಎಂಬ ಸಾಲು ಬರೆದು ಕೊಂಚ ಎಡಿಟ್ ಮಾಡಿ ಹರಿಬಿಡಲಾಗಿದೆ.

    ಕೆಲವು ದಿನಗಳ ಹಿಂದೆ ‘ಮಹಾರಾಷ್ಟ್ರೀಯನ್ ಪ್ರಶಸ್ತಿ’ ಸಮಾರಂಭದಲ್ಲಿ ಮಾತನಾಡಿದ್ದ ದೀಪಿಕಾ ಪಡುಕೋಣೆ, ನಾನು ರಾಜಕೀಯದಿಂದ ದೂರ ಇರಲು ಇಷ್ಟಪಡುತ್ತೇನೆ. ಒಂದು ವೇಳೆ ಮಂತ್ರಿಯಾದರೆ ಸ್ವಚ್ಛತೆಯ ಸಚಿವೆಯಾಗಿ ಕೆಲಸ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು.

  • ಯಾರೋ ಹುಟ್ಟಿಸಿದ ಮಗುವಿಗೆ ನಾ ತಂದೆ ಎನ್ನುವವರು ಬಿಜೆಪಿಯವರು: ಹೆಚ್.ಆಂಜನೇಯ

    ಯಾರೋ ಹುಟ್ಟಿಸಿದ ಮಗುವಿಗೆ ನಾ ತಂದೆ ಎನ್ನುವವರು ಬಿಜೆಪಿಯವರು: ಹೆಚ್.ಆಂಜನೇಯ

    ಚಿತ್ರದುರ್ಗ: ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಬಿಜೆಪಿ ನಾಯಕರಿಗೆ ಕಳಕಳಿ ಇಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ ವಾಗ್ದಾಳಿ ನಡೆಸಿದ್ರು.

    ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೋ ಹುಟ್ಟಿಸಿದ ಮಗುವಿಗೆ ನಾನು ತಂದೆ ಎಂದು ಹೇಳುವವರು ಬಿಜೆಪಿಯವರು. ಅಭಿವೃದ್ಧಿ ಬಗ್ಗೆ ಅವರಿಗೆ ಕಿಂಚಿತ್ತೂ ಕಳಕಳಿ ಇಲ್ಲ. ಭದ್ರಾ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಲು ಬಿಜೆಪಿ ಶ್ರಮ ವಹಿಸಿಲ್ಲ. ಮಹದಾಯಿ ಯೋಜನೆ ಜಾರಿಗೊಳಿಸಲು ಬಿಜೆಪಿಗೆ ಬದ್ಧತೆ ಇಲ್ಲ. ಗೋವಾ, ಮಹಾರಾಷ್ಟ್ರದೊಂದಿಗೆ ಮಾತನಾಡಿ ನೀರಿನ ಸಮಸ್ಯೆ ಪರಿಹರಿಸಬೇಕಿತ್ತು. ಭದ್ರಾ ಯೋಜನೆ ತಾಂತ್ರಿಕ ದೋಷದಿಂದ ತಡವಾಗಿದೆ. ಮಾಹಿತಿ ಕೊರತೆಯಿಂದ ಬಿಜೆಪಿ ಇಲ್ಲಸಲ್ಲದ ಆರೋಪ ಸರಿಯಲ್ಲ. ಯೋಜನೆಗೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಲ್ಲ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ರು.

    ಏಪ್ರಿಲ್ 13 ರಂದು ಶನಿವಾರ ಮಧ್ಯಾಹ್ನ 2 ಗಂಟೆಗೆ ಕೋಟೆನಾಡು ಚಿತ್ರದುರ್ಗಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುತ್ತಾರೆ. ಈ ವೇಳೆ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಪರ ಬೃಹತ್ ಸಮಾವೇಶದಲ್ಲಿ ಪ್ರಚಾರ ನಡೆಸಲಿದ್ದಾರೆ. ಸಮಾವೇಶದಲ್ಲಿ ಸಿಎಂ ಕುಮಾರಸ್ವಾಮಿ, ರಾಜ್ಯ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಪರಮೇಶ್ವರ್ ಸಚಿವರಾದ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.

    ಸಮಾವೇಶಕ್ಕಾಗಿ ವಿನೂತನ ಜರ್ಮನ್ ಟೆಂಟ್ ಹೌಸ್ ವೇದಿಕೆ ರೆಡಿ ಮಾಡಲಾಗುತ್ತಿದೆ. ವೇದಿಕೆ ಮುಂಭಾಗದಲ್ಲಿ 25000 ಆಸನಗಳ ವ್ಯವಸ್ಥೆ ಮಾಡಲಾಗುತ್ತದೆ. ರಾಹುಲ್ ಗಾಂಧಿಗೆ ಕೋಟೆ ನಾಡನ್ನಾಳಿದ ಪಾಳೆಗಾರ ವೀರ ಮದಕರಿನಾಯಕರ ಪ್ರತಿಮೆ ನೀಡಿ ಸನ್ಮಾನ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷ ಜನ ಸೇರುವ ನಿರೀಕ್ಷೆಯಿದೆ ಅಂದ್ರು.

    ಈ ವೇಳೆ ಮೈತ್ರಿ ಅಭ್ಯರ್ಥಿ ಚಂದ್ರಪ್ಪ, ಶಾಸಕ ರಘುಮೂರ್ತಿ, ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು.

  • ರಾಜ್ಯ ಸರ್ಕಾರ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ- ಬಿಎಸ್‍ವೈ

    ರಾಜ್ಯ ಸರ್ಕಾರ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ- ಬಿಎಸ್‍ವೈ

    ಹುಬ್ಬಳ್ಳಿ: ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು, ಕೋಮಾ ಸ್ಥಿತಿ ತಲುಪಿದೆ. ರಾಜ್ಯದಲ್ಲಿ 22 ಕ್ಕೂ ಹೆಚ್ಚು ಸೀಟು ಗೆಲ್ಲುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಸುಭದ್ರ ಸರ್ಕಾರ ಬೇಕೋ, ಭ್ರಷ್ಟಾಚಾರದ ಸರ್ಕಾರ ಬೇಕೋ ಜನರೇ ತೀರ್ಮಾನ ಮಾಡಲಿ. ಪುಲ್ವಾಮಾ ದಾಳಿ ಬಗ್ಗೆ ನನಗೆ ಮೊದಲೇ ಗೊತ್ತಿತ್ತು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಇದು ಕುಮಾರಸ್ವಾಮಿ ಅವರ ನೈತಿಕ ಅಧಃ ಪತನ. ಸರ್ಕಾರದ ಆಯಸ್ಸು ಮುಗಿಯುತ್ತಾ ಬಂದಿದೆ. ರಾಜ್ಯ ಸರ್ಕಾರ ಸದ್ಯ ಐಸಿಯುನಲ್ಲಿದ್ದು ಕೋಮಾ ಸ್ಥಿತಿಯನ್ನು ತಲುಪಿದೆ ಅಂದ್ರು.

    ಕುಟುಂಬ ರಾಜಕಾರಣ ಅಂದ್ರೆ ಕುಟುಂಬದಲ್ಲಿ ಒಬ್ಬರು ಇಬ್ಬರೂ ರಾಜಕೀಯ ಮಾಡುವುದಲ್ಲ. ಸಂಪೂರ್ಣ ಕುಟುಂಬವೇ ರಾಜಕಾರಣ ಮಾಡುವುದು. ಅದಕ್ಕೆ ಉತ್ತಮ ಉದಾಹರಣೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ. ನಾನು ನಿಂಬೆ ಹಣ್ಣು ಇಟ್ಟುಕೊಂಡು ಭವಿಷ್ಯ ಹೇಳುತ್ತಿಲ್ಲ. ಪಕ್ಷದ ಬಲ ನೋಡಿ 22 ಸೀಟು ಗೆಲ್ಲುವುದಾಗಿ ಹೇಳುವೆ ಎಂದು ತಿಳಿಸಿದ್ರು.

    ಪ್ರಧಾನಿ ನರೇಂದ್ರ ಮೋದಿ ದೇಶದ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದಾರೆ. ಮೋದಿ ಅವರ ಅನೇಕ ಜನಪರ ಯೋಜನೆಗಳನ್ನು ಕೊಟ್ಟಿದ್ದಾರೆ. ಸಿಎಂ ಕುಮಾರಸ್ವಾಮಿಗೆ ಮಂಡ್ಯ ಲೋಕಸಭೆಯ ಸೋಲಿನ ಭಯ ಕಾಡುತ್ತಿದೆ. ಕುಟುಂಬ ರಾಜಕಾರಣದಿಂದ ರಾಜ್ಯದ ಜನ ಬೇಸತ್ತಿದ್ದಾರೆ ಅಂದ್ರು.

    ಐಟಿ ದಾಳಿ ಕುರಿತು ಮಾತನಾಡಿದ ಅವರು, ದಾಖಲೆಗಳನ್ನ ಪರಿಶೀಲಿಸಿ ದಾಳಿ ನಡೆಯುತ್ತದೆ. ಬಿಜೆಪಿಯ ಅನೇಕ ನಾಯಕರ ಮನೆ ಮೇಲೂ ದಾಳಿ ಆಗಿದೆ. ಆಗ ನಾವು ಬೀದಿಗಿಳಿದು ಹೋರಾಟ ಮಾಡಿಲ್ಲ. ಮುಖ್ಯಮಂತ್ರಿ ಮಾತಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದ್ರು.

    ಕುಂದಗೋಳ ಬೈ ಎಲೆಕ್ಷನ್ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪಕ್ಷದ ನಾಯಕರೊಂದಿಗೆ ಈ ಬಗ್ಗೆ ಚರ್ಚೆ ಮಾಡುತ್ತೇವೆ. ಧರ್ಮ ಒಡೆದವರು ಸದ್ಯ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.

  • ಮೋದಿ ಸುನಾಮಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್!

    ಮೋದಿ ಸುನಾಮಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಪ್ಲಾನ್!

    ಬಾಗಲಕೋಟೆ/ಕೊಪ್ಪಳ: ಟಿಕೆಟ್ ಸಿಕ್ಕ ದಿನದಿಂದಲೇ ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಕೈ ಮುಖಂಡರು ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಕೈ ಅಭ್ಯರ್ಥಿ ಹಾಗೂ ಮುಖಂಡರಿಗೆ ಪ್ರಧಾನಿ ಮೋದಿ ಭಯ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಕೊಪ್ಪಳ ಕ್ಷೇತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋದರಿ ಪ್ರಿಯಾಂಕ ಗಾಂಧಿ ಕರೆತರುವ ಪ್ಲಾನ್ ಮಾಡಲಾಗಿದೆ.

    ದಿನದಿಂದ ದಿನಕ್ಕೆ ರಾಜ್ಯದಲ್ಲಿ ಲೋಕಸಭೆಯ ಕಾವು ಹೆಚ್ಚಾಗುತ್ತಿದೆ. ಕೊಪ್ಪಳ ಲೋಕಸಭಾ ಕ್ಷೇತ್ರ ಈ ಮುಂಚೆ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಕಳೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಈ ಚುನಾವಣೆಯಲ್ಲಿ ಹಾಲಿ ಸಂಸದ ಕರಡಿ ಸಂಗಣ್ಣ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಮತ್ತಷ್ಟು ಸರಳ ಮಾಡಲು ಇಂದು ಗಂಗಾವತಿ ನಗರಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ 3 ಲಕ್ಷಕ್ಕೂ ಅಧಿಕ ಜನ ಪಾಲ್ಗೊಳ್ಳುವ ನೀರಿಕ್ಷೆ ಇದ್ದು, ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಎಫೆಕ್ಟ್ ಆಗಲಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.

    ಇನ್ನು ಮೋದಿ ಕಾರ್ಯಕ್ರಮ ಗಂಗಾವತಿಯಲ್ಲಿ ನಡೆಯುವುದು ನಿರ್ಧಾರವಾಗುತ್ತಲೇ ಇತ್ತ ಕಾಂಗ್ರೆಸ್ ನಾಯಕರಿಗೆ ಟೆನ್ಶನ್ ಶುರುವಾಗಿದೆ. ಮೋದಿ ಕಾರ್ಯಕ್ರಮಕ್ಕೆ ಕೌಂಟರ್ ಆಗಿ ಕೊಪ್ಪಳ ಕ್ಷೇತ್ರಕ್ಕೆ ಪ್ರಿಯಾಂಕ ಗಾಂಧಿ ಅಥವಾ ರಾಹುಲ್ ಗಾಂಧಿ ಅವರನ್ನು ಕರೆಸುವ ಕಸರತ್ತು ನಡೆಸಿದ್ದಾರೆ. ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯರ ಮುಂದೆ ಈ ಬಗ್ಗೆ ಪ್ರಸ್ತಾಪಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

    ಇನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರ ಕೂಡ ಈ ಬಾರಿಯ ಪ್ರತಿಷ್ಠಿತ ಚುನಾವಣಾ ಅಖಾಡ. ಯಾಕೆಂದರೆ ಜಿಲ್ಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಶಾಸಕ. ಅಲ್ಲದೇ ಸಮನ್ವಯ ಸಮಿತಿ ಅಧ್ಯಕ್ಷ. ಆದ್ದರಿಂದ ಈ ಚುನಾವಣೆಯಲ್ಲಿ ಕೈ ಅಭ್ಯರ್ಥಿ ವೀಣಾ ಕಾಶಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ಸಿದ್ದರಾಮಯ್ಯನವರ ಹೆಗಲ ಮೇಲಿದೆ. ಇದಕ್ಕಾಗಿ ಬಾಗಲಕೋಟೆ ಹಾಗೂ ಬಾದಾಮಿಯಲ್ಲಿ ಸಿದ್ದರಾಮಯ್ಯ ಸಮಾವೇಶ ಮಾಡುವ ಮೂಲಕ ಮತಬೇಟೆ ಶುರು ಮಾಡಿದ್ದಾರೆ.

    ಇದೇ 18ಕ್ಕೆ ಪ್ರಧಾನಿ ಮೋದಿ ಆಗಮಿಸುವ ಸಾಧ್ಯತೆಯಿದ್ದು, ವೀಣಾ ಕಾಶಪ್ಪನವರ ಹಾಗೂ ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ಮೋದಿ ಭಯ ಶುರುವಾಗಿದೆ ಎನ್ನಲಾಗುತ್ತಿದೆ. ಮೋದಿ ಭಯ ನಮಗಿಲ್ಲ ಎಂದು ಮೇಲ್ಮಾತಿನಲ್ಲಿ ಹೇಳುತ್ತಿರುವ ವೀಣಾ ಕಾಶಪ್ಪನವರ ಹಾಗೂ ಮುಖಂಡರು, ಮೋದಿ ಪ್ರಚಾರಕ್ಕೆ ಠಕ್ಕರ್ ಕೊಡಲು ಪ್ರಿಯಾಂಕ ಗಾಂಧಿ ಇಲ್ಲವೇ ಇತರೆ ಮುಖಂಡರನ್ನು ಜಿಲ್ಲೆಗೆ ಕರೆತರಲು ಚಿಂತನೆ ನಡೆಸಿದ್ದಾರೆ.