ಮಂಡ್ಯ: ಹಣ ಇರುವ ಕಡೆ ಆದಾಯ ತೆರಿಗೆ ಇಲಾಖೆಯವರು ದಾಳಿ ಮಾಡುತ್ತಾರೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತು. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಎಂದು ಕೂಡ ಗೊತ್ತಿದೆ ಎಂದು ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದಲ್ಲಿ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಪಬ್ಲಿಕ್ ಟಿವಿ ಜೊತೆ ಐಟಿ ದಾಳಿ ಕುರಿತು ಪ್ರತಿಕ್ರಿಯಿಸಿ, ಐಟಿ ದಾಳಿಗೂ ನನಗೂ ಸಂಬಂಧವಿಲ್ಲ. ಹೀಗಾಗಿ ನಾನು ಅದರ ಬಗ್ಗೆ ಮಾತಾಡಲ್ಲ ಎಂದು ಹೇಳಿದರು.
ಇದೇ ವೇಳೆ ಕ್ಷೇತ್ರದಲ್ಲಿ ಹಣದ ಹೊಳೆ ಹರಿಯುತ್ತಿರುವ ವಿಚಾರದ ಕುರಿತು ಮಾತನಾಡಿದ ಅವರು, ಹಣ ಇರುವ ಕಡೆ ಐಟಿ ದಾಳಿ ಆಗುತ್ತದೆ. ಹಣ ಎಲ್ಲಿದೆ ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಯಾಕೆ ಐಟಿ ದಾಳಿ ಆಗುತ್ತಿದೆ ಅಂತಲೂ ಜನಕ್ಕೆ ಗೊತ್ತಿದೆ. ಈಗಾಗಲೇ ಅವರದ್ದೇ ಎರಡು ವಿಡಿಯೋ ಬಹಿರಂಗ ಆಗಿದೆ. ಜನರಿಗೆ ಇದರ ಬಗ್ಗೆ ಎಲ್ಲ ಗೊತ್ತಿದೆ ಎಂದು ತಿಳಿಸಿದ್ರು.
ಮಂಡ್ಯದ ವಕೀಲರ ಸಂಘದ ಕಚೇರಿಗೆ ಸುಮಲತಾ ಅಂಬರೀಷ್ ಭೇಟಿ ನೀಡಿ ಬೆಂಬಲ ಕೋರಿದ್ರು. ಈ ವೇಳೆ ಸುಮಲತಾಗೆ ಮೈಸೂರು ಪೇಟಾ ತೊಡಿಸಿ ವಕೀಲರು ಬೆಂಬಲ ಘೋಷಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇವತ್ತು ಸಮಾವೇಶ ಇಟ್ಟುಕೊಂಡಿದ್ದೇವೆ. ಕಳೆದ ನಾಲ್ಕು ವಾರಗಳ ಅನಿಸಿಕೆಯನ್ನು ಜನರ ಜೊತೆ ಹಂಚಿಕೊಳ್ಳುತ್ತೇವೆ. ಈ ಸಮಾವೇಶ ನಮ್ಮ ಶಕ್ತಿ ಪ್ರದರ್ಶನ ಅಲ್ಲ ಎಂದು ಸ್ಪಷ್ಟಪಡಿಸಿದ್ರು.
ಬಿಜೆಪಿ ನಾಯಕರ ಜೊತೆ ಸುಮಲತಾ ಭೇಟಿ ವೀಡಿಯೋ ಬಗ್ಗೆ ಸಿ.ಎಸ್ ಪುಟ್ಟರಾಜು ಹೇಳಿಕೆಗೆ ತಿರುಗೇಟು ನೀಡಿದ ಸುಮಲತಾ, ಅವರು ಏನ್ ಬೇಕಾದ್ರೂ ಹೇಳುತ್ತಾರೆ. ಏನು ಬೇಕಾದ್ರೂ ಸೃಷ್ಟಿಸುತ್ತಾರೆ. ಏನು ಬೇಕಾದ್ರೂ ಮಾಡಿದ್ರೂ ಚಿಂತೆ ಇಲ್ಲ. ಜನ ಮೋಸ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಸಚಿವ ಸ್ಥಾನ ಕೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಮಲತಾ, ಅವರು ಹೀನಾಯ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಜನರಿಗೆ ಗೊತ್ತಾಗಿದೆ ಎಂದರು.
ಸುಮಲತಾ ಪ್ರಚಾರದ ವಾಹನದ ಹತ್ತಿರ ನಾಗಾಸಾಧುಗಳು ಕೂಡ ಇಂದು ಕಾಣಿಸಿಕೊಂಡರು. ಉತ್ತರ ಪ್ರದೇಶದ ವಾಹನದಲ್ಲಿ ಮಂಡ್ಯದ ಕಾಳಿಕಾಂಬ ದೇವಸ್ಥಾನ ಅಂಗಳದಲ್ಲಿ ನಾಗಸಾಧುಗಳು ಬಂದಿಳಿದಿದ್ದಾರೆ. ಪ್ರಚಾರದ ವಾಹನದ ಬಳಿ ವಾಹನ ನಿಲ್ಲಿಸಿ ಸುಮಲತಾ ಬೆಂಬಲಿಗರನ್ನು ಮಾತನಾಡಿಸಿದ್ದಾರೆ.
ಮಂಡ್ಯ: ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದೆ. ಹೀಗಾಗಿ ಅಭ್ಯರ್ಥಿಗಳು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಹೀಗೆ ಪ್ರಚಾರ ನಡೆಸುತ್ತಿದ್ದ ವೇಳೆ ಸಚಿವ ಡಿಸಿ ತಮ್ಮಣ್ಣ ಅವರನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡ್ಯದ ಮದ್ದೂರಿನ ಬಿದರಹೊಸಹಳ್ಳಿ ಗ್ರಾಮದಲ್ಲಿ ಸೋಮವಾರ ಸಚಿವರು ಮೈತ್ರಿ ಅಭ್ಯರ್ಥಿ ನಿಖಿಲ್ ಪರ ಮತ ಕೇಳಲು ಗ್ರಾಮಕ್ಕೆ ಭೇಟಿ ಕೊಟ್ಟಿದ್ದರು. ಈ ವೇಳೆ ಗ್ರಾಮಸ್ಥರು ಗ್ರಾಮದ ಸಮಸ್ಯೆ, ಮೈಷುಗರ್‍ಗೆ ಕಬ್ಬು ಪೂರೈಕೆ ಮಾಡಲು ಹಣ ಸಂದಾಯದ ವಿಚಾರವಾಗಿ ಸಚಿವರನ್ನು ಪ್ರಶ್ನಿಸಿದ್ದಾರೆ.
ಕಬ್ಬಿನ ದುಡ್ಡು ಬಂದಿಲ್ಲ, ಊರು ಸಮಸ್ಯೆ ಬಗೆಹರಿದಿಲ್ಲ, ನಾವು ನಿಮ್ಮನ್ನ ಗೆಲ್ಲಿಸಿದ್ಯಾಕೆ? ಎಂದು ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಚಿವರು ಸಮಜಾಯಿಷಿ ನೀಡಲು ಮುಂದಾದ್ರು. ಆದ್ರೆ ಯುವಕನೊಬ್ಬ ಸಿಟ್ಟಿನಿಂದ ಆಕ್ರೋಶ ವ್ಯಕ್ತಪಡಿಸಿದ್ದಾನೆ. ಬಳಿಕ ಗ್ರಾಮಸ್ಥರು ಯುವಕನನ್ನು ಸಮಾಧಾನಪಡಿಸಿದ ಘಟನೆಯೂ ನಡೆದಿದೆ.
ಹಳೆಯ ಮೈಸೂರು ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿದ್ದರೂ ಸಹ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದಿಲ್ಲ. ಜನತಾದಳವೂ ಗೆದ್ದಿಲ್ಲ. ಒಟ್ಟು 16 ಚುನಾವಣೆಗಳು ನಡೆದಿದ್ದು, ಇಲ್ಲಿ ಕಾಂಗ್ರೆಸ್ 13 ಸಲ, ಬಿಜೆಪಿ 3 ಸಲ ಗೆದ್ದಿದೆ. ಗುರುಪಾದಸ್ವಾಮಿ, ಹೆಚ್.ಡಿ.ತುಳಸಿದಾಸಪ್ಪ, ಎಂ.ರಾಜಶೇಖರಮೂರ್ತಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಹೆಚ್.ವಿಶ್ವನಾಥ್ ಘಟಾನುಘಟಿ ನಾಯಕರು ಸಂಸದರಾಗಿದ್ದ ಕ್ಷೇತ್ರ ಇದು. ನಾಲ್ಕು ಬಾರಿ ಈ ಕೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಗೆದ್ದಿದ್ದಾರೆ. ದೇವರಾಜ ಅರಸು ಪುತ್ರಿ ಚಂದ್ರಪ್ರಭಾ ಅರಸ್ ಅವರು ಈ ಕ್ಷೇತ್ರದಿಂದ 1991ರಲ್ಲಿ ಗೆದ್ದಿದ್ರು.
ಈಗ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲೀಗ ಆಗ್ನಿ ಪರೀಕ್ಷೆ ಎದುರಾಗಿದ್ದು, ಕಾಳಗ ಜೋರಾಗಿಯೇ ಇದೆ. ಇಡೀ ಕ್ಷೇತ್ರದಲ್ಲಿ ಜಾತಿಯೇ ದೊಡ್ಡ ಟ್ರಂಪ್ ಕಾರ್ಡ್. ಅದರಲ್ಲೂ ಈ ಬಾರಿ ಒಕ್ಕಲಿಗ ಸಮುದಾಯದ ಮತಗಳ ಕ್ಷೇತ್ರದಲ್ಲಿ ನಿರ್ಣಾಯಕ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾದರೂ ಕೂಡ ಜೆಡಿಎಸ್ ನ ಸಂಪ್ರದಾಯಿಕ ಮತಗಳಾದ ಒಕ್ಕಲಿಗರ ಮತಗಳು ಮೈತ್ರಿ ಅಭ್ಯರ್ಥಿಗೆ ಬರುವುದು ಅಷ್ಟು ಸುಲಭವಿಲ್ಲ.
ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದ ವಿಜಯ್ ಶಂಕರ್‍ಗೆ ಕಳೆದ ಬಾರಿ ಮೈಸೂರಿನಿಂದ ಟಿಕೆಟ್ ಸಿಗದೇ ಹಾಸನದಲ್ಲಿ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಈಗ ಅದೇ ವಿಜಯಶಂಕರ್ ಸಿದ್ದರಾಮಯ್ಯ ಬಲದಿಂದ ಮೈಸೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದು, ಎದುರಾಳಿಯಾಗಿ ಬಿಜೆಪಿಯ ಪ್ರತಾಪ್ ಸಿಂಹ ಇದ್ದಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಗುದ್ದಾಟ ಈಗ ಮೈತ್ರಿ ಪಕ್ಷಗಳಿಗೆ ದೊಡ್ಡ ತಲೆನೋವಾಗಿದ್ದು, ಅಖಾಡ ಸಾಕಷ್ಟು ಕುತೂಹಲ ಮೂಡಿಸಿದ್ದು ಗೆಲುವಿನ ಮಾಲೆ ಯಾರಿಗೆ ಅನ್ನೋದನ್ನ ಮತದಾರ ಪ್ರಭು ನಿರ್ಧರಿಸಲಿದ್ದಾನೆ.
ಒಟ್ಟು ಮತದಾರರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 18,79,659 ಮತದಾರರಿದ್ದಾರೆ. ಇದರಲ್ಲಿ 9,40,687 ಮಹಿಳಾ ಮತದಾರರು ಮತ್ತು 9,38,826 ಪುರುಷ ಮತದಾರರಿದ್ದಾರೆ. ಜಾತಿವಾರು ನೋಡೋದಾದರೆ ಒಕ್ಕಲಿಗರು 4 ಲಕ್ಷ, ಮುಸ್ಲಿಮರು 2.10 ಲಕ್ಷ, ಲಿಂಗಾಯತರು 2 ಲಕ್ಷ, ಕುರುಬರು 1.80 ಲಕ್ಷ, ಎಸ್ಸಿ (ಬಲಗೈ) 1.75 ಲಕ್ಷ, ಎಸ್ಸಿ (ಎಡಗೈ) 1.25 ಲಕ್ಷ, ಎಸ್‍ಟಿ 1.25 ಲಕ್ಷ, ಕೊಡವರು 1 ಲಕ್ಷ, ಅರೆ ಭಾಷೆ ಒಕ್ಕಲಿಗರು 1 ಲಕ್ಷ, ಬ್ರಾಹ್ಮಣರು 1.10 ಲಕ್ಷ ಮತ್ತು ಇತರೆ/ಹಿಂದುಳಿದ ವರ್ಗ 2.30 ಲಕ್ಷ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.
2014ರ ಫಲಿತಾಂಶ:
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರತಾಪ್ ಸಿಂಹ 31,608 (2.72%) ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿಶ್ವನಾಥ್ ವಿರುದ್ಧ ಗೆಲುವು ಕಂಡಿದ್ದರು. ಪ್ರತಾಪ್‍ಸಿಂಹ (ಬಿಜೆಪಿ) 5,03,908 (43.45%), ಹೆಚ್.ವಿಶ್ವನಾಥ್ (ಕಾಂಗ್ರೆಸ್) 4,72,300 (40.73%), ಚಂದ್ರಶೇಖರಯ್ಯ(ಜೆಡಿಎಸ್) 1,38,587(11.95%) ಮತಗಳನ್ನು ಪಡೆದುಕೊಂಡಿದ್ದರು.
ವಿಧಾನಸಭಾ ಎಲೆಕ್ಷನ್ ಫಲಿತಾಂಶ: 2018ರ ವಿಧಾನಸಭಾ ಚುನಾವಣೆಯಲ್ಲಿ 8 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ, 3ರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಕಾಂಗ್ರೆಸ್ ಗೆಲುವಿನ ನಗೆ ಬೀರಿತ್ತು. ಮಡಿಕೇರಿ – ಅಪ್ಪಚ್ಚು ರಂಜನ್ (ಬಿಜೆಪಿ), ವಿರಾಜಪೇಟೆ – ಕೆ.ಜಿ.ಬೋಪಯ್ಯ (ಬಿಜೆಪಿ), ಕೃಷ್ಣರಾಜ – ಎಸ್.ಎ.ರಾಮದಾಸ್ (ಬಿಜೆಪಿ), ಚಾಮರಾಜ – ಎಲ್.ನಾಗೇಂದ್ರ (ಬಿಜೆಪಿ), ಚಾಮುಂಡೇಶ್ವರಿ – ಜಿ.ಟಿ.ದೇವೇಗೌಡ (ಜೆಡಿಎಸ್), ಹುಣಸೂರು – ಹೆಚ್.ವಿಶ್ವನಾಥ್ (ಜೆಡಿಎಸ್), ಪಿರಿಯಾಪಟ್ಟಣ – ಕೆ.ಮಹದೇವ್ (ಜೆಡಿಎಸ್) ಮತ್ತು ನರಸಿಂಹರಾಜ – ತನ್ವೀರ್ ಸೇಠ್ (ಕಾಂಗ್ರೆಸ್)
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು
ಪ್ರತಾಪ್ ಸಿಂಹ- ಬಿಜೆಪಿ
ವಿಜಯಶಂಕರ್ – ಕಾಂಗ್ರೆಸ್
ಡಾ.ಬಿ.ಚಂದ್ರ- ಬಿಎಸ್‍ಪಿ
ಪ್ರತಾಪ್ ಸಿಂಹ ಪ್ಲಸ್ ಪಾಯಿಂಟ್: ಮೈತ್ರಿ ಇದ್ದರೂ ಕಾಂಗ್ರೆಸ್-ಜೆಡಿಎಸ್ ಮಧ್ಯೆ ಒಳ ಜಗಳ ಲಾಭವಾಗಬಹುದು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಕುಮಾರಸ್ವಾಮಿ ವಿರುದ್ಧ ತುಟಿ ಬಿಚ್ಚದೆ ಒಕ್ಕಲಿಗರಿಗೆ ಹತ್ತಿರವಾಗುತ್ತಿರೋದು. ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರನ್ನು ಹೊಂದಿದ್ದು ಗೆಲುವಿನ ಸಮೀಪ ತಲುಪಿಸುವಲ್ಲಿ ಸಹಾಯ ಮಾಡಬಲ್ಲದು. ಸಂಸದರ ಅನುದಾನ ಬಳಕೆಯಲ್ಲಿ ಮೊದಲಿಗ ಅನ್ನೋದು ಮತ್ತೊಂದು ಪ್ಲಸ್ ಪಾಯಿಂಟ್. ಮೈಸೂರಿನಲ್ಲಿ ಸ್ವತಃ ಮೋದಿ ಪ್ರಚಾರ ಹೆಚ್ಚಿನ ಮತಗಳನ್ನು ಸೆಳೆಯುವ ಸಾಧ್ಯತೆಗಳಿವೆ.
ಮೈನಸ್ ಪಾಯಿಂಟ್: ಸಂಸದರು ಮತ್ತು ಕೆಲ ಸ್ಥಳೀಯ ಜನಪ್ರತಿನಿಧಿಗಳ ಸಂಬಂಧದಲ್ಲಿ ಬಿರುಕು ಹೊಡೆತ ನೀಡಬಹುದು. ಒಕ್ಕಲಿಗ ಸಮುದಾಯದ ಮತಗಳು ಈ ಬಾರಿ ಹಂಚಿ ಹೋಗಿದ್ದು, ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್, ಕಾಂಗ್ರೆಸ್ ಬಲಿಷ್ಠವಾಗಿರೋದು ಮತಗಳು ಮೈತ್ರಿ ಅಭ್ಯರ್ಥಿಯ ಪಾಲಾಗಬಹುದು. ಸಹಜವಾಗಿಯೇ ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಕಾಣಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ವಿಜಯಶಂಕರ್ ಪ್ಲಸ್ ಪಾಯಿಂಟ್: ಕೈ ಅಭ್ಯರ್ಥಿ ವಿಜಯಶಂಕರ್ ಬೆನ್ನಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಿಂತಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಬಲಿಷ್ಠವಾಗಿರೋದು ಮತಗಳ ಕ್ರೋಢಿಕರಣವಾಗುವ ಸಾಧ್ಯತೆಗಳಿವೆ. ಕಳೆದ ಎರಡು ಚುನಾವಣೆಗಳಲ್ಲಿ ಸೋತ ಅನುಕಂಪದ ಅಲೆ ವರ್ಕ್‍ಔಟ್ ಆಗಬಹುದು. ದೇವೇಗೌಡ, ಕುಮಾರಸ್ವಾಮಿ ಅವರು ಬೆಂಬಲ ಕೊಡಿ ಅಂತಾ ಸಭೆ ನಡೆಸಿರೋದು. ಕ್ಷೇತ್ರದ ಸೋಲು ಗೆಲುವಿನ ಜಾಡುಗಳು ಬಗ್ಗೆ ಸೂಕ್ಷ್ಮತೆ ಗೊತ್ತಿರುವುದು.
ಮೈನಸ್ ಪಾಯಿಂಟ್: ಚಾಮುಂಡೇಶ್ವರಿ ಸೋಲಿನ ಕಹಿಯ ಒಳ ಗುದ್ದಾಟ ನಿಲ್ಲದಿರುವುದು. ಸ್ವತಃ ಪ್ರಧಾನಿ ಮೋದಿಯೇ ಮೈಸೂರಿಗೆ ಪ್ರಚಾರಕ್ಕೆ ಬಂದು ಅಬ್ಬರಿಸಿರೋದು. ನಗರ ಪ್ರದೇಶ, ಕೊಡಗು ಭಾಗದಲ್ಲಿ ಬಿಜೆಪಿ ಬಲವಾಗಿರುವುದು. ಕಾಂಗ್ರೆಸ್, ಜೆಡಿಎಸ್ ನಲ್ಲಿ ಹೊಂದಾಣಿಕೆ ಕೊರತೆ ಹೆಚ್ಚಿರುವುದು.
ಹರದನಹಳ್ಳಿ ದೇವೇಗೌಡರ ಅಡ್ಡಾದಲ್ಲಿ ಈಗ ಕದನ ಕುತೂಹಲ. ದೇಶಕ್ಕೆ ಪ್ರಧಾನಿಮಂತ್ರಿಯನ್ನ ಕಾಣಿಕೆಯಾಗಿ ಕೊಟ್ಟ ಜಿಲ್ಲೆಯಲ್ಲೀಗ ರಾಜಕೀಯ ಕಾಳಗ ಪಲ್ಲಟವಾಗಿದೆ. ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಗಳನ್ನ ಹೊಂದಿರುವ ಹಾಸನದಲ್ಲಿ ಹೇಮಾವತಿ ಜೀವ ನದಿ. ಈ ಹೇಮಾವತಿಯ ಒಡಲಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಗೌಡರ ರಾಜಕೀಯ ಗಾಲಿಯೂ ಉರುಳಿ ಹೋಗಿದೆ.
5 ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಗೌಡರು 6ನೇ ಬಾರಿ ಹಾಸನದಿಂದ ಸ್ಪರ್ಧಿಸದೇ ತುಮಕೂರಿಗೆ ಹೋಗಿದ್ದಾರೆ. ಮೊಮ್ಮಗ ಪ್ರಜ್ವಲ್ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ರಾಜಕೀಯ ಭವಿಷ್ಯದ ಕಡೇ ಆಟವನ್ನೇ ಸವಾಲಿಗಿಟ್ಟಿದ್ದಾರೆ ದೊಡ್ಡ ಗೌಡರು. ಕಳೆದ ಬಾರಿ ದೇವೇಗೌಡರ ವಿರುದ್ಧವೇ ತೊಡೆತಟ್ಟಿದ್ದ ಎ.ಮಂಜು ಈ ಬಾರಿ ಮೊಮ್ಮಗನ ವಿರುದ್ಧವೂ ತೊಡೆ ತಟ್ಟಿದ್ದಾರೆ. ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಬಿಜೆಪಿಯಿಂದ ಅಖಾಡಕ್ಕಿಳಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದರೂ, ಎರಡು ಕಡೆ ಕಮಲ ಅರಳಿರುವುದರಿಂದ ಏನೂ ಬೇಕಾದರೂ ಆಗಬಹುದು. ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದ್ದರೂ, ಅಹಿಂದ ಮತಗಳನ್ನು ಪಡೆದರೂ ಸಾಕು ಅಭ್ಯರ್ಥಿ ಸುಲಭವಾಗಿ ಗೆದ್ದು ಬಿಡಬಹುದು.
ಹಾಸನ ಕ್ಷೇತ್ರದ ಮತದಾರರು: 16,29,587 ಒಟ್ಟು ಮತದಾರರನ್ನು ಹಾಸನ ಲೋಕ ಅಖಾಡ ಹೊಂದಿದೆ. ಇದರಲ್ಲಿ 8,07,188 ಮಹಿಳಾ ಮತದಾರರು ಮತ್ತು 8,22,399 ಪುರುಷ ಮತದಾರರಿದ್ದಾರೆ. ಒಕ್ಕಲಿಗ ಸಮುದಾಯ 5 ಲಕ್ಷ, ಎಸ್‍ಸಿ+ಎಸ್‍ಟಿ ಸಮುದಾಯ 3 ಲಕ್ಷ, ಲಿಂಗಾಯಿತ ಸಮುದಾಯ 2.50 ಲಕ್ಷ, ಮುಸ್ಲಿಂ ಸಮುದಾಯ 2 ಲಕ್ಷ, ಕುರುಬ ಸಮುದಾಯ 1.50 ಲಕ್ಷ ಮತ್ತು ಇತರೆ ಸಮುದಾಯ 2 ಲಕ್ಷ ಮಂದಿ ಇದ್ದಾರೆ.
2014ರ ಫಲಿತಾಂಶ: 2014ರ ಲೋಕ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ದೇವೇಗೌಡರು 1,00,462(8.76%) ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ವಿರುದ್ಧ ಗೆಲುವು ಕಂಡಿದ್ದರು. ದೇವೇಗೌಡರು 5,09,841 (44.47%), ಎ.ಮಂಜು 4,09,378 (35.67%) ಮತ್ತು ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 (14.44%) ಮತಗಳನ್ನು ಪಡೆದುಕೊಂಡಿದ್ದರು.
ಜೆಡಿಎಸ್ ಪ್ರಾಬಲ್ಯ: ಹಾಸನ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 6 ಕ್ಷೇತ್ರದಲ್ಲಿ ಜೆಡಿಎಸ್ ಮತ್ತು 2 ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಹಾಸನ-ಪ್ರೀತಂಗೌಡ(ಬಿಜೆಪಿ), ಬೇಲೂರು – ಲಿಂಗೇಶ್(ಜೆಡಿಎಸ್), ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ(ಜೆಡಿಎಸ್), ಅರಕಲಗೂಡು – ಎ.ಟಿ.ರಾಮಸ್ವಾಮಿ (ಜೆಡಿಎಸ್), ಹೊಳೇನರಸೀಪುರ – ಹೆಚ್.ಡಿ.ರೇವಣ್ಣ(ಜೆಡಿಎಸ್), ಶ್ರವಣಬೆಳಗೊಳ – ಸಿಎನ್ ಬಾಲಕೃಷ್ಣ (ಜೆಡಿಎಸ್), ಅರಸೀಕೆg- ಶಿವಲಿಂಗೇಗೌಡ (ಜೆಡಿಎಸ್) ಮತ್ತು ಕಡೂರು- ಬೆಳ್ಳಿ ಪ್ರಕಾಶ್ (ಬಿಜೆಪಿ) ಆಯ್ಕೆಯಾಗಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು ಪ್ರಜ್ವಲ್ ರೇವಣ್ಣ : ದೇವೇಗೌಡರು ಮೊಮ್ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟ ಪರಿಣಾಮ ಪ್ರಜ್ವಲ್ ಕಣದಲ್ಲಿ ನಿಂತಿದ್ದಾರೆ.
ಪ್ಲಸ್ ಪಾಯಿಂಟ್: ಹಾಸನ ಜಿಲ್ಲೆಯ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಪಾರುಪತ್ಯ, ಹಿಡಿತವನ್ನು ಹೊಂದಿದ್ದಾರೆ. ತಂದೆ ಹೆಚ್.ಡಿ.ರೇವಣ್ಣ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕೈಗೊಂಡಿರೋ ಅಭಿವೃದ್ಧಿ ಕಾರ್ಯಗಳು ಪ್ರಜ್ವಲ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿವೆ. 6 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಹೊಂದಿದ್ದು, ಹಾಸನದಲ್ಲಿ ಯುವ ಕಾರ್ಯಕರ್ತರ ಪಡೆಯನ್ನ ಕಟ್ಟಲಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಒಟ್ಟಾಗಿ ಕಣಕ್ಕಿಳಿದಿರೋದು ಮತಗಳ ಕ್ರೋಢಿಕರಣ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಚುನಾವಣೆಗೂ ಮುನ್ನವೇ ಕಾರ್ಯಕರ್ತರೊಂದಿಗಿನ ಒಡನಾಟ ಹೊಂದಿದ್ದು ಮತ್ತೊಂದು ಪ್ಲಸ್ ಪಾಯಿಂಟ್.
ಮೈನಸ್ ಪಾಯಿಂಟ್: ಕುಟುಂಬ ರಾಜಕಾರಣದ ಆರೋಪ ಹೊತ್ತಿರುವುದರ ಜೊತೆಗೆ ರಾಜಕೀಯ ಅನುಭವದ ಕೊರತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನ ಹೊಡೆತ ನೀಡಬಹುದು. ಎ.ಮಂಜು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಆಗಿರುವ ಕಾರಣ ನೇರ ಹಣಾಹಣಿ ನಡೆಯಲಿದೆ.
ಎ.ಮಂಜು: 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಎ.ಮಂಜು ಸೋತಿದ್ದರು. ಮೈತ್ರಿ ಧರ್ಮ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಂಡಾಯದ ಬಾವುಟ ಹಾರಿಸಿ ಎ. ಮಂಜು ಬಿಜೆಪಿ ಸೇರ್ಪಡೆಗೊಂಡು ಕಮಲ ಹಿಡಿದು ಸ್ಪರ್ಧೆ ಮಾಡಿದ್ದಾರೆ.
ಪ್ಲಸ್ ಪಾಯಿಂಟ್: 2014ರಲ್ಲಿ ದೇವೇಗೌಡರ ವಿರುದ್ಧ ಸೋತ ಅನುಕಂಪದ ಅಲೆ ಕೆಲಸ ಮಾಡಬಹುದು. ಮೈತ್ರಿಯ ಸ್ಥಳೀಯ ಕಚ್ಚಾಟದ ಲಾಭ ಪಡೆಯಲು ಎ.ಮಂಜು ಪ್ರಯತ್ನಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಕಡು ವಿರೋಧಿಗಳು ಒಂದಾಗುವ ಲಕ್ಷಣಗಳು ಕಾಣುತ್ತಿವೆ. ಈ ಬಾರಿ 2 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಹೊಂದಿದ್ದು, ಮಾಜಿ ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತಿರೋದು ಎ. ಮಂಜು ಅವರಿಗೆ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಮೈನಸ್ ಪಾಯಿಂಟ್: ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿರೋದು ಮೊದಲ ಹೊಡೆತ. ಮೈತ್ರಿಯಿಂದಾಗಿ ಅಹಿಂದ ಮತಗಳು ಒಟ್ಟಾಗುವ ಆತಂಕ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಜ್ವಲ್ ಪರ ಸಚಿವರುಗಳು, ಶಾಸಕರು ದಂಡು ಪ್ರಚಾರ ನಡೆಸುತ್ತಿರೋದು. ಕಾಂಗ್ರೆಸ್ ಬಿಟ್ಟು ಕಡೇ ಕ್ಷಣದಲ್ಲಿ ಬಿಜೆಪಿಗೆ ಜಿಗಿದು ಅಭ್ಯರ್ಥಿಯಾಗಿದ್ದು ಆಂತರಿಕ ಅಸಮಾಧಾನದ ಬಿಸಿ ತಾಗುವ ಸಾಧ್ಯತೆಗಳಿವೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕೊಡುಗೆ ಏನು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವರು, ಜಿಲ್ಲೆಯ ಜನರು ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಸಣ್ಣ ಯೋಜನೆಯನ್ನೂ ಜಿಲ್ಲೆಗೆ ತರಲು ನಳಿನ್ ಕುಮಾರ್ ಗೆ ಸಾಧ್ಯವಾಗಿಲ್ಲ. ಮೋದಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಹಿಂದೂ ಸಂಸ್ಕೃತಿ ಅರಿತುಕೊಂಡಿರುವ ಮಿಥುನ್ ರೈಗೆ ಈ ಬಾರಿ ಜಿಲ್ಲೆಯ ಜನ ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, ನಾವು ವ್ಯಕ್ತಿ ಪೂಜೆ ಮಾಡಲ್ಲ, ಪಕ್ಷ ಪೂಜೆ ಮಾಡುತ್ತೇವೆ ಎಂದು ಬಿಜೆಪಿಯವರ ಮೋದಿ ಘೋಷಣೆಗೆ ಟಾಂಗ್ ನೀಡಿದ್ರು.
ಮೈತ್ರಿ ಪಕ್ಷಗಳ ಜಂಟಿ ಸ್ಪರ್ಧೆಯಿಂದಾಗಿ ಲಾಭ ಜಾಸ್ತಿ. ಕಾರ್ಯಕರ್ತರ ಬಹುದೊಡ್ಡ ಲಾಭ ನಮಗಿದೆ ಎಂದು ಸಮರ್ಥಿಸಿಕೊಂಡರು. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ತನ್ನ ನಿಲುವಿಗೆ ಬದ್ಧನಿದ್ದು ರಾಜಕೀಯದಲ್ಲಿ ಧರ್ಮ ಇರಬಾರದು ಎಂದು ತಿಳಿಸಿದ್ರು.
ಮಂಡ್ಯ: ಕ್ಷೇತ್ರದಲ್ಲಿ ಇಷ್ಟು ದಿನ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಭರ್ಜರಿಯಿಂದ ಪ್ರಚಾರ ಮಾಡುತ್ತಿದ್ದರು. ನಾಳೆ (ಮಂಗಳವಾರ) ಚುನಾವಣೆಯ ಕೊನೆಯ ಬಹಿರಂಗ ಪ್ರಚಾರ ನಡೆಯಲಿದೆ. ಈ ಕ್ಲೈಮ್ಯಾಕ್ಸ್ ಪ್ರಚಾರಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಎಂಟ್ರಿ ಕೊಡುವ ಸಾಧ್ಯತೆಯಿದೆ.
ನಾಳೆ ಬಹಿರಂಗ ಪ್ರಚಾರಕ್ಕೆ ಕಡೆಯ ದಿನವಾಗಿದ್ದು, ಇಂದು ಮೈತ್ರಿ ನಿಖಿಲ್ ಕುಮಾರಸ್ವಾಮಿ ಪರ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ನಾಳೆ ರಜನಿಕಾಂತ್ ಕರೆಸಲೇಬೇಕು ಎಂದು ಸುಮಲತಾಗೆ ಅಭಿಮಾನಿಗಳು ಒತ್ತಡ ಹಾಕುತ್ತಿದ್ದಾರೆ.
ಸಿಲ್ವರ್ ಜ್ಯೂಬಿಲಿ ಪಾರ್ಕ್ ನಲ್ಲಿ ಸುಮಲತಾ ಅಂಬರೀಶ್ ಅವರು ಬೃಹತ್ ಸಮಾವೇಶವನ್ನು ಏರ್ಪಡಿಸಿದ್ದಾರೆ. ಈ ಸಮಾವೇಶಕ್ಕೆ ರಜಿನಿಕಾಂತ್ ಕರೆಸುವಂತೆ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ರಜನಿಕಾಂತ್ ಅವರು ಅಂಬರೀಶ್ ಅವರ ಆಪ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಚಾರಕ್ಕೆ ಬರುವಂತೆ ಸುಮಲತಾ ಅವರು ರಜನಿಕಾಂತ್‍ಗೆ ಕರೆ ಮಾಡಿದ್ದಾರೆ. ಒಂದು ವೇಳೆ ರಜನಿಕಾಂತ್ ಬರೋದು ಓಕೆ ಆದರೆ ನಾಳೆ ಸುಮಲತಾ ನೇತೃತ್ವದ ಸಮಾವೇಶಕ್ಕೆ ಮತ್ತಷ್ಟು ರಂಗು ಬರಲಿದೆ.
ಮಂಡ್ಯದಲ್ಲಿ ಸುಮಾರು 45 ಸಾವಿರಕ್ಕೂ ಹೆಚ್ಚು ತಮಿಳು ಭಾಷಿಕರ ಮತವಿದೆ. ಅಷ್ಟೇ ಅಲ್ಲದೆ ಮಂಡ್ಯದಲ್ಲೂ ರಜನಿಕಾಂತ್ ಅವರ ಅಭಿಮಾನಿಗಳು ತುಂಬಾ ಜನರಿದ್ದಾರೆ. ಹೀಗಾಗಿ ರಜನಿಕಾಂತ್ ಬಂದರೆ ಮಂಡ್ಯದಲ್ಲಿರುವ ತಮಿಳರ ವೋಟ್‍ಗಳು ಸುಮಲತಾಗೆ ಬರಲಿವೆ ಎಂಬ ಲೆಕ್ಕಾಚಾರದಲ್ಲಿ ರಜನಿಕಾಂತ್ ಕರೆಸಲು ಸುಮಲತಾ ನಿರ್ಧಾರ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಜನಿಕಾಂತ್ ಬಂದರೆ ಸುಮಲತಾ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ ಎನ್ನುವ ಲೆಕ್ಕಾಚಾರವನ್ನು ಹಾಕಲಾಗಿದೆ. ಆದರೆ ಕರ್ನಾಟಕದ ವಿರುದ್ಧ ಕಾವೇರಿ ಹೋರಾಟದಲ್ಲಿ ರಜನಿಕಾಂತ್ ಪಾಲ್ಗೊಂಡಿದ್ದರು. ಹೀಗಾಗಿ ರಜನಿಕಾಂತ್ ಬರುತ್ತಾರಾ ಇಲ್ಲವೋ ಎನ್ನುವುದು ಮಂಗಳವಾರ ಸ್ಟಷ್ಟವಾಗಲಿದೆ.
ಮೈಸೂರು: ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲಲ್ಲ. ಬೇರೆ ಕಡೆ ನಿಲ್ಲೋದನ್ನ ಆಮೇಲೆ ನೋಡೋಣ. ಇನ್ನೂ ಚುನಾವಣೆಗೆ ನಾಲ್ಕು ವರ್ಷ ಇದೆ ಎಂದು ಹೇಳುವ ಮೂಲಕ ಮತ್ತೆ ಚುನಾವಣೆಗೆ ನಿಲ್ಲುವ ಸುಳಿವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ಭಾನುವಾರ ಇಲವಾಲದ ಸಮಾವೇಶದಲ್ಲಿ ನಾನು ಇನ್ನೂ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಹೇಳಿಕೆಗೆ ಸ್ಪಷ್ಟಪಡಿಸಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಋಣವನ್ನು ಸಾಕಷ್ಟು ತೀರಿಸಿದ್ದೇನೆ. ಹೀಗಾಗಿ ನಾನು ಮತ್ತೆ ಚಾಮುಂಡೇಶ್ವರಿಯಲ್ಲಿ ನಿಲ್ಲಲ್ಲ ಎಂದು ಹೇಳಿದ್ದೆ ಅಂದ ಅವರು, ಮತ್ತೆ ಬೇರೆ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಸೂಚನೆಯನ್ನು ನೀಡಿದರು.
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸೋತ್ರೆ, ಸರ್ಕಾರ ಉಳಿಯುತ್ತಾ ಎನ್ನುವ ಹೇಳಿಕೆಗೆ ಪ್ರತಿಕ್ರಿಯಿಸಿ ಯೂಟರ್ನ್ ಹೊಡೆದ ಸಿದ್ದರಾಮಯ್ಯ, ಮೈತ್ರಿ ಪಕ್ಷ ಸೋತ್ರೆ ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಬಹುದು ಎಂದು ಹೇಳಿದ್ದೇನೆ. ಅದನ್ನು ನೀವು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಬಿಜೆಪಿ ಸದಾ ಮೈತ್ರಿ ಸರ್ಕಾರ ಅಸ್ಥಿರಗೊಳಿಸೋ ಪ್ರಯತ್ನ ಮಾಡುತ್ತಿದೆ. ಯಡಿಯೂರಪ್ಪ ಮೊದಲಿಂದಲೂ ಹೇಳಿಕೊಂಡು ಬರುತ್ತಿದ್ದಾನೆ. ಸರ್ಕಾರ ಬಿಳಿಸೋಕೆ ಆಗಿದ್ಯಾ ಎಂದು ಪ್ರಶ್ನಿಸಿದ್ರು. ಯಡಿಯೂರಪ್ಪ ಒಬ್ಬ ಲೀಡರೇನ್ರಿ. ಬಿಜೆಪಿ ಒಂದು ಪಾರ್ಟಿನಾ, ಒಂದು ತತ್ವ ಸಿದ್ಧಾಂತ ಇಲ್ಲ. ಅವ್ರಿಗೆ ನೈತಿಕತೆ ಇದ್ಯಾ ಎಂದು ಸಿದ್ದರಾಮಯ್ಯ ಕೆಂಡಾಮಂಡಲರಾದ್ರು. ಇದನ್ನೂ ಓದಿ: ಮೂಡ್ ಅಂದ್ರೆ ಬೇರೆ ಕಣಪ್ಪ – ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ: ಸಿದ್ದು ಹಾಸ್ಯದ ಹೇಳಿಕೆ
ನಾನು, ಜಿ.ಟಿ.ದೇವೇಗೌಡ ಕ್ಷೇತ್ರ ಪ್ರವಾಸ ಮಾಡಿದ ಮೇಲೆ ವಾತಾವರಣ ಬದಲಾಗಿದೆ. ಜನ ಮೈತ್ರಿ ಅಭ್ಯರ್ಥಿ ಕಡೆ ಒಲವು ತೋರುತಿದ್ದಾರೆ. ನಮ್ಮ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಅವರು, ದೇವೇಗೌಡರ ರಾಜಕೀಯ ಸನ್ಯಾಸತ್ವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ರು. ಮೋದಿ, ದೇವೇಗೌಡರ ಬಗ್ಗೆ ಹೇಳಿದ್ರೆ ನನ್ನನ್ನ ಯಾಕೆ ಕೇಳ್ತೀರಾ. ಹೋಗಿ ದೇವೇಗೌಡರನ್ನೇ ಕೇಳಿ ಎಂದು ಸಿಡಿಮಿಡಿಗೊಂಡರು.
ಇದೇ ವೇಳೆ ಪರ್ಸೆಂಟೇಜ್ ಸರ್ಕಾರ ಎಂಬ ಮೋದಿ ಹೇಳಿಕೆಗೆ ಗರಂ ಆದ ಮಾಜಿ ಸಿಎಂ, ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನ ಕೊಡಬಾರದು. ಇದೊಂದು ಬೇಸ್‍ಲೆಸ್ ಆರೋಪವಾಗಿದೆ. ಮೋದಿ ಸರ್ಕಾರ ಶೇ.100 ರಷ್ಟು ಭ್ರಷ್ಟ ಸರ್ಕಾರ ಎಂದು ಆರೋಪ ಮಾಡುತ್ತೇನೆ. ಅದನ್ನು ನೀವು ಹಾಕ್ತೀರಾ ಎಂದು ಪ್ರಶ್ನಿಸಿದ್ರು.
ಒಬ್ಬ ಪ್ರಧಾನಿ ಈ ಮಟ್ಟಕ್ಕೆ ಇಳಿದು ಮಾತನಾಡಬಾರು. ಅವರ ಬಳಿ ಇಂಟೆಲಿಜೆನ್ಸ್ ಸೇರಿದಂತೆ ಹಲವು ಇಲಾಖೆಗಳಿವೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡಬೇಕು. ಕಳೆದ ಐದು ವರ್ಷದಲ್ಲಿ ಎಮೋಷನಲ್ ವಿಚಾರ ಬಿಟ್ಟು ಬೇರೆ ಏನೂ ಮಾತಾಡಿಲ್ಲ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಯನಾಡ್ ನಲ್ಲಿ ನಿಲ್ಲೋದಕ್ಕೆ, ಅಲ್ಲಿ ಮೈನಾರಿಟಿ ಇರುವುದರಿಂದ ಅಲ್ಲಿ ನಿಲ್ಲುತ್ತಿದ್ದಾರೆ ಎಂದು ಕಮೆಂಟ್ ಮಾಡ್ತಾರೆ. ಇದು ಕಮ್ಯೂನಲ್ ವಯಲೆನ್ಸ್ ಆಗಲ್ವ ಎಂದು ಕಿಡಿಕಾರಿದ್ರು.
ಐಟಿ ಕಚೇರಿ ಮುಂದೆ ಪ್ರತಿಭಟನೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನನಗೂ ಐಟಿಯಿಂದ ನೋಟಿಸ್ ಬಂದಿದೆ. ಈಗಾಗಲೇ ಉತ್ತರ ಕೊಟ್ಟಿದ್ದೇನೆ. ನಾನು ಚುನಾವಣೆಯಲ್ಲಿ ಬ್ಯುಸಿ ಇದ್ದೇನೆ. ನಾನು ಉತ್ತರ ಕೊಡಲು 15 ದಿನ ಬೇಕು ಎಂದು ಪ್ರತಿಕ್ರಿಯಿಸಿದ್ದೇನೆ ಎಂದರು.
ತುಮಕೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಶಾಸಕ ಮಾಧುಸ್ವಾಮಿ ಗಂಭೀರ ಆರೋಪ ಮಾಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರನ್ನು ಕುಮಾರಸ್ವಾಮಿ ಮನೆಯಿಂದ ಹೊರಹಾಕಿದ್ದರು. ಬೆಂಗಳೂರಿನ ವಿದ್ಯಾರ್ಥಿ ಭವನದ ಬಳಿ ಪ್ರಚಾರ ಮಾಡುತ್ತಿದ್ದಾಗ ಕಲ್ಲಿನಿಂದ ಹೊಡೆಸಿದ್ದರು ಎಂದು ಮಾಧುಸ್ವಾಮಿ ಆರೋಪಿಸಿದ್ದಾರೆ.
ವಿಡಿಯೋದಲ್ಲೇನಿದೆ?
ದೇವೇಗೌಡರು ಹಳೇ ವಿದ್ಯಾರ್ಥಿ ಭವನದ ಸ್ಟೇಷನ್ ಎದುರು ಭಾಷಣ ಮಾಡುವಾಗ ಕುಮಾರಸ್ವಾಮಿ ಕಲ್ಲಿನಲ್ಲಿ ಹೊಡೆಸಿದ್ದರು. ನಾನು ಎದೆಕೊಟ್ಟೆ. ತಬ್ಬಿಕೊಂಡು ದೇವೇಗೌಡರು ಅತ್ತಿದ್ದರು. ನನ್ನ ಮಕ್ಕಳಾದ್ರೂ ಬಂದು ಕಲ್ಲೇಟು ತಿನ್ನುತ್ತಿರಲಿಲ್ಲ. ನೀನು ತಿಂದೆ ಅಂದಿದ್ದರು. ದೇವೇಗೌಡರನ್ನು ಒದ್ದು ಆಚೆಗೆ ಹಾಕಿದ್ದರು. ಉಗ್ರಪ್ಪ, ದೇವೇಗೌಡರ ಬೆನ್ನುಜ್ಜುತ್ತಿದ್ದರು. ಕುಮಾರಸ್ವಾಮಿಯವರು ದೇವೇಗೌಡರನ್ನು ಮನೆಯಿಂದ ಹೊರಗೆ ಅಟ್ಟಿದ್ದರು ಎಂದು ಶಾಸಕರು ವಿಡಿಯೋದಲ್ಲಿ ಹೇಳಿದ್ದಾರೆ.
ಬೆಂಗಳೂರಿನ ಕುಮಾರಪಾರ್ಕಿನ ಸಣ್ಣ ಕ್ವಾಟರ್ಸ್ ನಲ್ಲಿ ವಾಸ ಮಾಡುತ್ತಿದ್ದರು. ದೇವೇಗೌಡರನ್ನು ಮನೆಯಲ್ಲಿ ಇಟ್ಟುಕೊಂಡಿರಲಿಲ್ಲ. ಈಗ ಬರಲಿ ಕುಮಾರಸ್ವಾಮಿ ನನ್ನ ಬಳಿ ಯಾಕಪ್ಪ ಅವತ್ತು ನಿಮ್ಮ ಅಪ್ಪನನ್ನು ಹೊರಗೆ ಹಾಕಿದ್ದೆ ಎಂದು ಕೇಳ್ತೀನಿ. ಟಿಫನ್ ಕ್ಯಾರಿಯರ್ ನಲ್ಲಿ ಊಟ ತೆಗೆದುಕೊಂಡು ಹೋಗಿ ಕೊಡುತ್ತಿದ್ದವರು ನಾವೇ ಹೊರತು ಅವರ ಮಕ್ಕಳಲ್ಲ. ಬೆನ್ನು ತಿಕ್ಕಿದ್ದ ಉಗ್ರಪ್ಪ, ಮಾನಸಪುತ್ರ ಬಿ.ಎಲ್ ಶಂಕರ್ ಯಾಕೆ ಆಚೆ ಹೋದರು. ವೈ.ಕೆ ರಾಮಯ್ಯ ಯಾಕೆ ಕಾಂಗ್ರೆಸ್‍ಗೆ ಹೋದರು ಎಂದು ಚಿಕ್ಕನಾಯಕನಹಳ್ಳಿ ಶಾಸಕ ಮಾಧುಸ್ವಾಮಿ ಪ್ರಶ್ನಿಸಿ ಟಾಂಗ್ ನೀಡಿದ್ದಾರೆ.
ಬಿಜೆಪಿ ಪ್ರಚಾರದ ವೇಳೆ ಮಾತನಾಡಿದ ಮಾಧುಸ್ವಾಮಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಂಡ್ಯ: ಮಂಡ್ಯದಲ್ಲಿ ಪ್ರಚಾರಕ್ಕೆ ಹೊರಗಿನಿಂದ ಜನ ಕರೆಸುತ್ತಿದ್ದಾರಾ ಎಂಬ ಅನುಮಾನವೊಂದು ಕ್ಷೇತ್ರದ ಮತದಾರರನ್ನು ಕಾಡುತ್ತಿದೆ. ಯಾಕಂದ್ರೆ ಸಂಸದ ಶಿವರಾಮೇಗೌಡರು, ಜೆಡಿಎಸ್ ಕಾರ್ಯಕರ್ತನ ಜೊತೆ ಮಾತನಾಡಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು. ಪ್ರಚಾರಕ್ಕೆ ಬಂದ್ರೆ ತಲಾ 500 ರೂ. ಕೊಡುತ್ತೇನೆ ಎಂದು ಶಿವರಾಮೇಗೌಡರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಚೀಣ್ಯ ಗ್ರಾಮದ ರಮೇಶ್ ಜೊತೆ ಮಾತನಾಡಿದ್ದಾರೆ. ಈ 43 ಸೆಕೆಂಡುಗಳ ಆಡಿಯೋ ವೈರಲ್ ಆಗುತ್ತಿದ್ದು, ಇದೀಗ ತೀವ್ರ ಅನುಮಾನಕ್ಕೆ ಕಾರಣವಾಗಿದೆ.
ಆಡಿಯೋದಲ್ಲೇನಿದೆ?: ಶಿವರಾಮೇಗೌಡ: ಹೇಳಿ ರಮೇಶಣ್ಣ.. ರಮೇಶ್: ಅಣ್ಣಾ ನಾವು ಯಾವಾಗ್ಲಿಂದ ಬರಬೇಕು ಅಣ್ಣಾ ಕ್ಯಾನ್ ವಾಸ್‍ಗೆ ಶಿವರಾಮೇಗೌಡ: ಯಾರು ಮಾತಾಡ್ತಿರೋದು ರಮೇಶ್: ಅಣ್ಣಾ ನಾನು ರಮೇಶ್ ಶಿವರಾಮೇಗೌಡ: ನಮ್ ಡಾನು.. ರಮೇಶ್: ಹೂಂ ಅಣ್ಣಾ.. ಶಿವರಾಮೇಗೌಡ: ನಾಳೆಯಿಂದಲೇ..
ರಮೇಶ್: ಅಣ್ಣಾ ಬೆಂಗಳೂರಿನಿಂದ ಎಲ್ಲರನ್ನೂ ಕರೆದುಕೊಂಡು ಬರಬೇಕಲ್ಲಾ ಹೆಂಗ್ ಮಾಡೋದು ವ್ಯವಸ್ಥೆ..? ಶಿವರಾಮೇಗೌಡ: ಎಲ್ಲರಿಗೂ 500 ರೂಪಾಯಿ ಕೊಡ್ತೇವೆ.. ತಲೆಗೆ 500 ರೂ. ಕೊಡ್ತೀನಿ ಕರೆದುಕೊಂಡು ಬಾ.. ರಮೇಶ್: ಎಲ್ಲರನ್ನೂ ಕರೆದುಕೊಂಡು ಬರ್ಲಾ..? ಶಿವರಾಮೇಗೌಡ: ಹೂಂ.. ಎಲ್ಲಾ ಬರಬೇಕು.. ರಮೇಶ್: ಅಣ್ಣಾ ಬರ್ತಾರಣ್ಣ.. ಗಂಗನಹಳ್ಳಿ, ಕೆಂಕನಹಳ್ಳಿಯಿಂದ ಸುಮಾರು ಜನ ಇದ್ದಾರೆ, ಎಲ್ಲರೂ ಬರ್ತಾರಣ್ಣ.. ರಮೇಶ್: ಬಸ್ ವ್ಯವಸ್ಥೆ ನಾವೇ ಮಾಡ್ಕೋಬೇಕಣ್ಣಾ..?
ಶಿವರಾಮೇಗೌಡ: ನೀವೇ ಮಾಡಿಕೊಂಡು ಬನ್ನಿ..ದುಡ್ಡು ಕೊಡ್ತೀನಿ.. ರಮೇಶ್: ಸರಿ ಅಣ್ಣಾ.. ಬೆಳಗ್ಗೆ.. ಶಿವರಾಮೇಗೌಡ: ಒಂದು ತಲೆಗೆ 500ರೂಪಾಯಿ, ಎಲ್ಲನೂ ಅಪ್ಪಾಜಿಗೌಡ್ರಿಗೆ ಜವಾಬ್ದಾರಿ ಕೊಟ್ಟಿದ್ದೀನಿ.. ರಮೇಶ್: ಅಪ್ಪಾಜಿ ಗೌಡ್ರಿಗಾ ಅಣ್ಣಾ.. ಆಯ್ತಣ್ಣ.. ಸರಿ ಅಣ್ಣ..
ಬೆಂಗಳೂರು: ಚುನಾವಣಾ ಪ್ರಚಾರದಲ್ಲಿ ಭಾಗಿಯಾದ್ರೆ ಒಂದಿಷ್ಟು ದುಡ್ಡು ಸಿಗುತ್ತದೆ ಎಂದು ಬಡ ಜನರು ಹೋಗ್ತಾರೆ. ಆದ್ರೆ ಬೆಂಗೂರು ಕೇಂದ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹಣ ಕೊಡುತ್ತೇನೆ ಎಂದು ಚುನಾವಣಾ ಪ್ರಚಾರಕ್ಕೆ ಮಹಿಳೆಯರನ್ನ ಕರೆದೊಯ್ದು ಹಣ ಕೊಡದೇ ವಂಚನೆ ಮಾಡಿದ ಆರೋಪವೊಂದು ಕೇಳಿಬಂದಿದೆ.
ಹೌದು. ಲೋಕಸಭಾ ಚುನಾವಣೆಗೆ ಉಳಿದಿರುವುದು ಇನ್ನೂ ಕೇವಲ ನಾಲ್ಕು ದಿನ ಮಾತ್ರ. ಹೀಗಾಗಿ ಪ್ರಚಾರದ ಭರಾಟೆ ಎಲ್ಲೆಡೆ ಜೋರಾಗಿದೆ. ಜನ ಇಲ್ಲದಿದ್ದರೂ ಹಣ ಕೊಟ್ಟು ಜನರನ್ನು ಸೇರಿಸಿ ಪ್ರಚಾರ ಮಾಡುತ್ತಿದ್ದಾರೆ. ಅದರಂತೆ ಬೆಂಗಳೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಕೂಡ ಹಣ ಕೊಡುತ್ತೇನೆ ಎಂದು ಮಹಿಳೆಯರನ್ನ ಪ್ರಚಾರಕ್ಕೆ ಕರೆದೊಯ್ದು ವಂಚನೆ ಮಾಡಿದ್ದಾರೆ ಎಂಬ ಆರೋಪಿಸಲಾಗುತ್ತಿದೆ.
ಕಳೆದ ಐದು ದಿನಗಳ ಹಿಂದೆ ಬೆಂಗಳೂರಿನ ಗೌರಿಪಾಳ್ಯದ ಮೂವತ್ತು ಜನ ಮಹಿಳೆಯರನ್ನ ಪ್ರಚಾರಕ್ಕೆ ಕರೆದುಕೊಂಡು ಹೋಗಿದ್ದ ಪ್ರಕಾಶ್ ರೈ, ಪ್ರಚಾರದ ಬಳಿಕ ದುಡ್ಡು ಕೇಳಿದ್ರೆ ಇವತ್ತು ಕೊಡುತ್ತೇನೆ, ನಾಳೆ ಕೊಡುತ್ತೇನೆ ಎಂದು ಹೇಳಿ ಯಾಮಾರಿಸ್ತಿದ್ದಾರೆ ಅಂತ ಪ್ರಚಾರಕ್ಕೆ ಹೋಗಿದ್ದ ಮಹಿಳೆಯೊಬ್ಬರು ಆರೋಪ ಮಾಡುತ್ತಿದ್ದಾರೆ.
ಪ್ರಕಾಶ್ ರೈ ಕಚೇರಿಗೆ ಹೋಗಿ ವಿಚಾರಿಸಿದ್ರೆ ಅವರು ಕೂಡ ನಾಳೆ ಬನ್ನಿ, ನಾಡಿದ್ದು ಬನ್ನಿ. ನಿಮ್ಮ ಕರೆದುಕೊಂಡು ಬಂದಿದವರಿಗೆ ದುಡ್ಡು ಕೊಟ್ಟಿದ್ದೇನೆ ಎಂದು ಒಂದೊಂದು ರೀತಿಯಲ್ಲಿ ಮಾತಾಡುತ್ತಾರೆ ಎಂದು ಪ್ರಚಾರಕ್ಕೆ ಹೋಗದಿದ್ದ ಅರುಣ್ ಕುಮಾರ್ ಕಿಡಿಕಾರಿದ್ದಾರೆ.