ಶಿವಮೊಗ್ಗ: ಮಾಜಿ ಮುಖ್ಯಮಂತ್ರಿಯವರಿಗೆ ಹೃದಯದಲ್ಲಿ ಭಾವುಕತೆಯಿದ್ದರೆ ಕಣ್ಣೀರಿನ ಅರ್ಥ ಗೊತ್ತಾಗುತಿತ್ತು ಎಂದು ಬಿಎಸ್ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರತಿದಿನ ಕಣ್ಣೀರು ಹಾಕುತ್ತೇನೆ. ನಾನು ಭಾವುಕ ಜೀವಿ. ಕಣ್ಣಲ್ಲಿ ನೀರು ಸುಮ್ ಸುಮ್ಮನೆ ಬರುವುದಿಲ್ಲ. ಜನರ ಕಷ್ಟ ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ. ಮಾಜಿ ಮುಖ್ಯಮಂತ್ರಿಯವರ ಹೃದಯದಲ್ಲಿ ಭಾವುಕತೆ ಎಂಬುದು ಇದ್ದರೆ ಅವರಿಗೆ ಕಣ್ಣೀರಿನ ಅರ್ಥ ಗೊತ್ತಾಗುತಿತ್ತು ಎಂದು ಕಿಡಿಕಾರಿದ್ರು.
ನನಗೆ ಮಂಡ್ಯ ಕ್ಷೇತ್ರ ಮಾತ್ರ ಮುಖ್ಯವಲ್ಲ. ಮೊದಲ ಹಂತದ 14 ಕ್ಷೇತ್ರಗಳಲ್ಲಿ 12 ಕ್ಷೇತ್ರಗಳಲ್ಲಿ ಗೆಲ್ಲುವ ನಿಟ್ಟಿನಲ್ಲಿ ಕೆಲಸ ಮಾಡಿದ್ದೇನೆ. ಮಂಡ್ಯ ಜಿಲ್ಲೆಯ ಜನ ನನ್ನನ್ನು ಸೊರಗಲು ಬಿಡುವುದಿಲ್ಲ. ಮಂಡ್ಯದ ರೈತರು ಇನ್ನೂ ಸತ್ತಿಲ್ಲ. ಅಲ್ಲಿನ ರೈತರು ನಮ್ಮ ಕೈಬಿಡಲ್ಲ. ರೈತರು ನಿಮ್ಮ ಆರೋಗ್ಯ ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಮಂಡ್ಯದ ಸ್ವಾಭಿಮಾನ ಏನು ಎಂದು ಸುಮಲತಾಗೆ ಗೊತ್ತೆ ಎಂದು ಪ್ರಶ್ನಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಮೋದಿ ಪೊಳ್ಳು ಭಾಷಣ ಮಾಡುತ್ತಿದ್ದಾರೆ. ಅವರ ಭಾಷಣಕ್ಕೆ ಜನ ಮರುಳಾಗುವುದಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಅವರ ಮಗ ಅಭಿಷೇಕ್ ಇಬ್ಬರೂ ಅಂಬರೀಶ್ ಪಾರ್ಥಿವ ಶರೀರ ಮಂಡ್ಯಕ್ಕೆ ತರುವುದು ಬೇಡ ಎಂದುಕೊಂಡಿದ್ದರು. ಆಗಿರುವ ಘಟನೆಯ ಬಗ್ಗೆ ಮತ್ತೆ ನೆನಪಿಸಿಕೊಳ್ಳುವುದು ಬೇಡ. ಬಿಜೆಪಿಯ ಯಾವುದೇ ಆಟಗಳು ಶಿವಮೊಗ್ಗ ಕ್ಷೇತ್ರದಲ್ಲಿ ನಡೆಯುವುದಿಲ್ಲ. ಮಂಡ್ಯಕ್ಕೆ ನರೇಂದ್ರ ಮೋದಿಗಿಂತ ಹೆಚ್ಚಿನ ಪ್ರಚಾರ ಸಿಕ್ಕಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ರಾಷ್ಟ್ರ ಮಟ್ಟದ ನಾಯಕನನ್ನಾಗಿ ಮಾಡಿದ ಮಾಧ್ಯಮಗಳಿಗೆ ಧನ್ಯವಾದ ತಿಳಿಸಿದ್ರು.
ಸಚಿವ ಡಿ.ಕೆ ಶಿವಕುಮಾರ್‍ಗೆ ಇಂದು ಕನಕಪುರದಲ್ಲಿ ಪ್ರಚಾರ ಮಾಡುವಂತೆ ಹೇಳಿದ್ದೇನೆ. ಹಾಗಾಗಿ ಇಂದು ಅವರು ಶಿವಮೊಗ್ಗಕ್ಕೆ ಬಂದಿಲ್ಲ. ನಾಡಿದ್ದಿನಿಂದ ಮೂರು ದಿನ ಡಿ.ಕೆ.ಶಿವಕುಮಾರ್ ಶಿವಮೊಗ್ಗದಲ್ಲಿ ಪ್ರಚಾರ ಮಾಡಲಿದ್ದಾರೆ. 23ರಿಂದ 25 ಸ್ಥಾನಗಳನ್ನು ಮೈತ್ರಿಕೂಟ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ರು.
ನವದೆಹಲಿ: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅರೋಪಿಸಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಭಾರತದಲ್ಲಿ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯದ್ರೆ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ಪಾಕ್ ಪ್ರಧಾನಿ ಹೇಳುತ್ತಾರೆ. 2019ರ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್ ಪಾಕಿಸ್ತಾನದ ಸಹಾಯವನ್ನು ಪಡೆಯುತ್ತಿದೆ. ಹೀಗಾಗಿ ಇಮ್ರಾನ್ ಖಾನ್ ಅವರಿಂದ ಈ ರೀತಿಯ ಹೇಳಿಕೆ ಹೇಳಿಸುತ್ತಿದೆ ಎಂದರು.
ಪಾಕ್ ವಿದೇಶ ಮಂತ್ರಿ ಮಹಮೂದ್ ಖುರೇಶಿ, ಏಪ್ರಿಲ್ 16ರಿಂದ 20ರೊಳಗೆ ಭಾರತ ದಾಳಿ ನಡೆಸುತ್ತೆ ಎಂಬ ಹೇಳಿಕೆಯನ್ನು ನೀಡುತ್ತಾರೆ. ಖುರೇಶಿ ಅವರಿಗೆ ಈ ದಿನಾಂಕವನ್ನು ಯಾರು ನೀಡಿದರೂ ಎಂಬುವುದು ನನಗೆ ಗೊತ್ತಿಲ್ಲ. ಚುನಾವಣೆ ವೇಳೆಯಲ್ಲಿ ಈ ರೀತಿಯ ಕಾಲ್ಪನಿಕ ಹೇಳಿಕೆಗಳು ಬರುತ್ತಿರುತ್ತಿವೆ ಎಂದು ವ್ಯಂಗ್ಯ ಮಾಡಿದರು.
ಮಹಿಳಾ ಅಭ್ಯರ್ಥಿಗಳ ವಿರುದ್ಧ ರಾಜಕೀಯ ನಾಯಕರು ನೀಡುತ್ತಿರುವ ಕೀಳುಮಟ್ಟದ ಮಾತುಗಳಿಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯಗಳ ಕುರಿತಾಗಿ ಚರ್ಚಿಸಬೇಕು. ಅಭ್ಯರ್ಥಿಯ ಖಾಸಗಿ ವಿಚಾರಗಳನ್ನು ಪ್ರಸ್ತಾಪಿಸಬಾರದು. ರಾಜಕೀಯಕ್ಕೆ ವಿಚಾರಗಳಲ್ಲಿ ಆರೋಪಗಳನ್ನು ಮಾಡುವ ವೇಳೆ ಮತ್ತೊಬ್ಬರ ವ್ಯಕ್ತಿತ್ವಕ್ಕೆ ಧಕ್ಕೆಯಾಗದಂತೆ ಮಾತನಾಡಬೇಕು. ಪ್ರತಿ ಮಾತುಗಳನ್ನು ಯೋಚಿಸಿ ಮಾತನಾಡಬೇಕಾಗುತ್ತದೆ. ಮುಂದಿನ ಪೀಳಿಗೆಗೆ ಈ ರೀತಿಯ ಹೇಳಿಕೆಗಳನ್ನು ಕೊಡುಗೆ ನೀಡಿದಂತೆ ಆಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಮ್ರಾನ್ ಖಾನ್ ಹೇಳಿದ್ದೇನು?
ಲೋಕಸಭಾ ಚುನಾವಣೆ ಬಳಿಕ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಪಾಕಿಸ್ತಾನದ ಜೊತೆಗಿರುವ ಕಾಶ್ಮೀರದ ಸಮಸ್ಯೆ ಬಗೆಹರಿಸಲು ಸ್ವಲ್ಪ ಭಯಪಡುವ ಸಾಧ್ಯತೆಯಿದೆ. ಒಂದು ವೇಳೆ ಬಲಪಂಥೀಯ ಪಕ್ಷವಾದ ಬಿಜೆಪಿಯು ಅಧಿಕಾರಕ್ಕೆ ಬಂದರೆ ಸಮಸ್ಯೆಗೆ ಕೆಲವು ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಇಮ್ರಾನ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ನೆಮ್ನಾರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಿಮ್ಮಿಗೆ, ಗೂಳಿಮಕ್ಕಿ ಹಾಗೂ ಅಬ್ಬಿವರೆ ಗ್ರಾಮದ ಜನರು ಮತದಾನಕ್ಕೆ ಬಹಿಷ್ಕಾರ ಹಾಕಿದ್ದಾರೆ.
ಗ್ರಾಮದ ಸೇತುವೆಯನ್ನು ನಕ್ಸಲ್ ಪ್ಯಾಕೇಜಿನಲ್ಲಿ ಸರ್ಕಾರ ಮಾಡುತಿತ್ತು. ಆದ್ರೆ ಕಾಮಗಾರಿ ನಡೆಯುತ್ತಿರುವಾಗ ಅರಣ್ಯ ಇಲಾಖೆಯವರು ಬಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಇದರಿಂದ ಗ್ರಾಮದ ಮಕ್ಕಳು ಶಾಲೆಗೆ ತೆರಳಲು ಮಳೆಗಾಲದಲ್ಲಿ ಪರದಾಡುವ ಸ್ಥಿತಿ ಎದುರಾಗಲಿದೆ.
ಈ ಹಿನ್ನೆಲೆಯಲ್ಲಿ 3 ಗ್ರಾಮದ ಜನ ಈ ಬಾರಿಯ ಚುನಾವಣೆಗೆ ಬಹಿಷ್ಕಾರ ಹಾಕಿದ್ದಾರೆ. ನಮಗೆ ಸೇತುವೆ ನಿರ್ಮಾಣವಾಗುವವರೆಗೂ ಯಾವುದೇ ಕಾರಣಕ್ಕೂ ಮತಾದಾನ ಮಾಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ನಾವು ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿದ್ದೇವೆ. ಹೀಗಾಗಿ ಯಾಕೆ ಮತದಾನ ಮಾಡಬೇಕು ಎಂದು ಗ್ರಾಮಸ್ಥರಾದ ವಿಜೇಂದ್ರ ಹಿಮ್ನಿಗೆ ಹಾಗೂ ಶಂಕ್ರಪ್ಪ ಗೌಡ ಹಿಮ್ನಿಗೆ ಆಕ್ರೋಶ ಹೊರಹಾಕಿದ್ದಾರೆ.
ಕೊಪ್ಪಳ: ಬಿಜೆಪಿ ಇವತ್ತು ಮುಳುಗುವ ಹಡಗು ಆಗುತ್ತಿದೆ. ಮೋದಿ ಸಾಧನೆ ಎಂದು ಹೇಳುವ ಕಳ್ಳರನ್ನು ನಂಬಲು ನೀವು ಹೋಗಬೇಡಿ. ಯಾರು ಯಾರು ನಿಮ್ಮ ಓಣಿಯಲ್ಲಿ ಬಂದು ಮೋದಿ ಸಾಧನೆ ಎಂದು ಹೇಳುತ್ತಾರೋ ಅವರಿಗೆ ಇಲ್ಲಿಂದ ಹೋಗುತ್ತೀಯಾ ಅಥವಾ ನಮ್ಮ ಸಾಧನೆ ತೋರಿಸ್ಲಾ ಎಂದು ಹೇಳಿಬಿಡಿ. ಈ ಮೂಲಕ ನಿಮ್ಮ ಗಲ್ಲಿಯ ಸಾಧನೆ ತೋರಿಸಿ ಓಡಿಸಿ ಎಂದು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಕಿವಿ ಮಾತು ಹೇಳಿದ್ರು.
ಮಂಗಳವಾರ ರಾತ್ರಿ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿಯ ಕೆಲವು ಬಿಜೆಪಿ ಭಕ್ತರು, ಮೋದಿ ಭಕ್ತರು ಅವರಿಗೆ ಏನೂ ಕಾಣುವುದಿಲ್ಲ. ಅವರಿಗೆ ಕಾಮಾಲೆ ಬಂದಿದೆ. ಎಲ್ಲಿ ಬೇಕು ಅಲ್ಲಿ ಸುಮ್ನೆ ಮೋದಿ, ಮೋದಿ ಎಂದು ಕೂಗುತ್ತಾರೆ. ಮೋದಿ ಏನು ಮಾಡಿದ್ದಾರೆ. ಮೋದಿ ಸಾಧನೆ ನೋಡಿ ಎಂದು ಹೇಳುತ್ತಾರೆ. ಏನಿದು ಎಂದು ಅವರು ಸ್ವಲ್ಪ ಪಟ್ಟಿ ಮಾಡಿ ತೋರಿಸಲಿ ಎಂದು ಸವಾಲೆಸೆದ್ರು.
ನಿಮ್ಮ ಹಾಗೂ ಊರಿನ ಅಭಿವೃದ್ಧಿ ಕುಂಠಿತವಾಗುತ್ತಿದೆ. ಜಾತಿ ಬೀಜ ಜಾಸ್ತಿ ಬೆಳೆಸುತ್ತಿದ್ದಾರೆ. ಇಂದು ಬಿಜೆಪಿ ಹಾಗೂ ಮೋದಿಯವರು ನಮ್ಮ ದೇಶದಲ್ಲಿ ಚುನಾವಣೆ ಬಂತು ಅಂದ್ರೆ ದೇಶದ ಜನರಿಗೆ ಪಾಕಿಸ್ತಾನ ನೋಡಿ ಎಂದು ಹೇಳುತ್ತಾರೆ. ನಾವು ಯಾಕೆ ಪಾಕಿಸ್ತಾನವನ್ನು ನೋಡಬೇಕು. ನಮಗೇನು ಗ್ರಹಚಾರ ಕಾದಿದ್ಯಾ ಎಂದು ಪ್ರಶ್ನಿಸಿದ್ರು.
ನಮ್ಮ ದೇಶ ನೋಡೋ ಬದಲು ನಾವು ಪಾಕಿಸ್ತಾನವನ್ನು ನೋಡುವ ಅಗತ್ಯವಿಲ್ಲ. ಮಹಾತ್ಮಗಾಂಧಿ ಅಲ್ಲಿ ನಿಂತರೆ ಅವರನ್ನು ನಾವು ನೋಡುತ್ತೇವೆ. ನಾಥೂರಾಮ್ ಗೋಡ್ಸೆಯನ್ನು ನಾವು ನೋಡಲ್ಲ. ಒಟ್ಟಿನಲ್ಲಿ ಚುನಾವಣೆ ಬಂದ್ರೆ ಬಿಜೆಪಿಯವರು ಪಾಕಿಸ್ತಾನ ನೋಡಿ ಅನ್ನೋದು ಯಾಕೆ ಗೊತ್ತಾ, ನಮ್ಮ ದೇಶದಲ್ಲಿ ಹಿಂದೂ-ಮುಸ್ಲಿಮರು ಹೊಡೆದಾಡಿಕೊಳ್ಳಬೇಕು, ರಕ್ತಪಾತವಾಗಬೇಕು. ಆಗಿ ಬಿಜೆಪಿಗೆ ಮತ ಕೊಡಬೇಕು. ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದು ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಕಲಬುರಗಿ: ತೀವ್ರ ಕುತೂಹಲ ಕೆರಳಿಸಿರುವ ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಇದೀಗ ಮತಗಳಿಸಲು ಪ್ಲಾನ್ ಮೇಲೆ ಪ್ಲಾನ್ ನಡೆಯುತ್ತಿದೆ. ಮೊನ್ನೆಯಷ್ಟೇ ವೀರಶೈವ ಲಿಂಗಾಯತ ಸಮಾವೇಶ ನಡೆಸಿದ ಕೈ ಪಡೆಗೆ ಶಾಕ್ ಎನ್ನುವಂತೆ ಬಿಜೆಪಿ ಮಂಗಳವಾರ ವೀರಶೈವ ಲಿಂಗಾಯತರ ಬೃಹತ್ ಸಮಾವೇಶ ನಡೆಸಿತು.
ನಗರದ ಎನ್‍ವಿ ಕಾಲೇಜು ಆವರಣದಲ್ಲಿ ನಡೆದ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಇವತ್ತೇ ನಾನು ನನ್ನ ರಕ್ತದಲ್ಲಿ ಬರೆದು ಕೊಡುತ್ತೇನೆ ಉಮೇಶ್ ಜಾಧವ್ ಸೇರಿ 300 ಜನರು ಗೆದ್ದು ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿ ಮಾಡುತ್ತೇವೆ ಎಂದರು.
ಸಮಾವೇಶ ವೀರಶೈವ ಲಿಂಗಾಯತ ಮುಖಂಡರಾಗಿದ್ದರೂ ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಕೇಂದ್ರ ಬಿಂದುವಾಗಿದ್ದರು. ಶಾಸಕ ಸ್ಥಾನಕ್ಕೆ ರಿಸೈನ್ ಮಾಡಿ ರಿಸ್ಕ್ ತಗೊಂಡಿದ್ದೇನೆ. ಕಾಂಗ್ರೆಸ್ ನಾಯಕರ ವರ್ತನೆಗೆ ನೊಂದು ಹೊರಬಂದಿದ್ದೇನೆ. ನೀವು ನನಗೆ ಆಶೀರ್ವಾದ ಮಾಡಿ ಎಂದು ಬೇಡಿಕೊಂಡ್ರು. ನಂತರ ಇಡೀ ಜನಸ್ತೋಮದ ಮುಂದೆ ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಹಾಕಿದ್ರು. ಒಟ್ಟಾರೆ ಇಡೀ ಸಮಾವೇಶ ಖರ್ಗೆಗೆ ಟಾರ್ಗೆಟ್ ಮಾಡಿದ್ರೆ ಮತ್ತೊಂದೆಡೆ ಲಿಂಗಾಯತರ ಮತ ಸೆಳೆಯಲು ಸಹಾಯ ಮಾಡಿದಂತಿತ್ತು.
ಬೆಂಗಳೂರು: ರಾಜ್ಯದ ಮೊದಲ ಮತ್ತು ದೇಶದ ಎರಡನೇ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ. ಏಪ್ರಿಲ್ 18ರಂದು ರಾಜ್ಯದ 14 ಕ್ಷೇತ್ರಗಳನ್ನು ಒಳಗೊಂಡಂತೆ ಒಟ್ಟು 97 ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.
ರಾಜ್ಯದಲ್ಲಿ ಹೇಗಿತ್ತು ಪ್ರಚಾರ?
ರಾಜ್ಯದಲ್ಲಿ ಮೊದಲ ಹಂತದ ಲೋಕ ಸಮರದ ಮತದಾನಕ್ಕೆ ಇನ್ನು 45 ಗಂಟೆ ಮಾತ್ರ ಬಾಕಿ ಇದೆ. ತಿಂಗಳಿಂದ ಅಧಿಕೃತವಾಗಿ ನಡೆದಿದ್ದ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಾಗಿದೆ. ಎಲ್ಲರ ಆರೋಪ, ಆಕ್ಷೇಪದಂತೆ 14 ಕ್ಷೇತ್ರಗಳ ಪೈಕಿ ಕಂಪ್ಲೀಟ್ ಹೈಜಾಕ್ ಮಾಡಿದ್ದು, ಅದೇ ಮಂಡ್ಯ ರಾಜಕೀಯ. ಮಂಡ್ಯದಲ್ಲಿ ಪಕ್ಷೇತರ ಆಭ್ಯರ್ಥಿ ಸುಮಲತಾ ಅಂಬರೀಶ್ ಸ್ವಾಭಿಮಾನ ಹೆಸರಿನಲ್ಲಿ ದೊಡ್ಡ ಸಮಾವೇಶ ನಡೆಸಿದ ಮತ ಯಾಚನೆ ಮಾಡಿದರು. ಇತ್ತ ಸಿಎಂ ಕುಮಾರಸ್ವಾಮಿ ಸಹ ಪುತ್ರನ ಪರವಾಗಿ ಪ್ರಚಾರ ನಡೆಸಿದರು.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊನೆ ಕ್ಷಣದವರೆಗೂ ಮತದಾರರ ಓಲೈಕೆಗೆ ಅಭ್ಯರ್ಥಿ ಹಾಗೂ ಕಾರ್ಯಕರ್ತರು ಇನ್ನಿಲ್ಲದ ಕಸರತ್ತು ನಡೆಸಿದರು. ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮೂಡಿಗೆರೆಯಲ್ಲಿ ರೋಡ್ ಶೋ ಹಾಗೂ ಬಹಿರಂಗ ಸಭೆಯ ಮೂಲಕ ಮತಯಾಚನೆ ಮಾಡಿದರು. ಚಿಕ್ಕಬಳ್ಳಾಪುರ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ದೇವನಹಳ್ಳಿಯಲ್ಲಿ ಪ್ರಚಾರ ಮಾಡಿದರು. ಮಂಗಳೂರಿನಲ್ಲಿ ನಳೀನ್ ಕುಮಾರ್ ಕಟೀಲ್ ರೋಡ್ ಶೋ ನಡೆಸಿದರು ಮತ ನೀಡುವಂತೆ ಮನವಿ ಮಾಡಿಕೊಂಡರು.
ತಮಿಳುನಾಡಿನ 39, ಕರ್ನಾಟಕ 14, ಮಹಾರಾಷ್ಟ್ರ 10, ಉತ್ತರ ಪ್ರದೇಶ 8, ಅಸ್ಸಾಂ, ಬಿಹಾರ, ಓರಿಸ್ಸಾಗಳಲ್ಲಿ 5, ಛತ್ತೀಸಘಡ ಮತ್ತು ಪಶ್ಚಿಮ ಬಂಗಾಲದಲ್ಲಿ ತಲಾ 3, ಜಮ್ಮು ಮತ್ತು ಕಾಶ್ಮೀರ 2, ಮಣಿಪುರ, ತ್ರಿಪುರ ಹಾಗೂ ಪುದುಚೇರಿಯ ತಲಾ ಒಂದು ಕ್ಷೇತ್ರಗಳಲ್ಲಿ ಏಪ್ರಿಲ್ 18ರಂದು ಚುನಾವಣೆ ನಡೆಯಲಿದೆ.
ಕಣದಲ್ಲಿರುವ ಪ್ರಮುಖರು:
ನೆರೆಯ ತಮಿಳುನಾಡಿನ 39 ಲೋಕಸಭಾ ಕ್ಷೇತ್ರಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದೆ. ತಮಿಳುನಾಡಿನ ಮಹಾ ಚೇತನ ಎಂದು ಕರೆಸಿಕೊಂಡ ಮಾಜಿ ಸಿಎಂ ಜಯಲಲಿತಾ ಮತ್ತು ಕರುಣಾನಿಧಿ ಅಗಲಿದ ಬಳಿಕ ನಡೆಯುತ್ತಿರುವ ಮೊದಲ ಲೋಕಸಭಾ ಚುನಾವಣೆ ಇದಾಗಿದೆ. ತಮಿಳುನಾಡಿ ಬಿಜೆಪಿ ರಾಜ್ಯಾಧ್ಯಕ್ಷ ತಮಿಲಿಸಾಯಿ ಸುಂದರರಾಜನ್ ತೂತುಕುಡಿ ಲೋಕ ಅಖಾಡದಲ್ಲಿ ಡಿಎಂಕೆಯ ಕರುಣಾನಿಧಿ ಪುತ್ರಿ ಕನ್ನಿಮೋಳಿಯನ್ನು ಎದುರಿಸುತ್ತಿದ್ದಾರೆ.
ಉತ್ತರ ಪ್ರದೇಶದ 8 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಮಥುರಾದಿಂದ ಬಿಜೆಪಿಯಿಂದ ನಟಿ ಹೇಮಾ ಮಾಲಿನಿ ಸ್ಪರ್ಧೆ ಮಾಡಿದ್ದಾರೆ. ಗೋಧಿ ಕಟಾವು, ರೈತ ಮಹಿಳೆ ಫೋಟೋ ಮತ್ತು ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಪ್ರಚಾರ ಕೈಗೊಂಡಿದ್ದರು.
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಇನ್ನೂ ಸಕ್ರಿಯ ರಾಜಕಾರಣದಲ್ಲಿರುತ್ತಾರೆ. ಯಡಿಯೂರಪ್ಪ ರಾಜಕೀಯ ನಿವೃತ್ತಿಯ ಮಾತೇ ಇಲ್ಲ ಎಂದು ಬಿಜೆಪಿ ನಾಯಕ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್‍ವೈ ಅವರು ಸುಮಾರು 30-35 ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ಬಡವರು-ದಲಿತರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ರಾಜ್ಯಾದ್ಯಂತ ಸಂಚರಿಸಿ ಪಕ್ಷ ಬೆಳೆಸಿದ್ದಾರೆ. ಹೀಗಾಗಿ ಅವರು ಇನ್ನೂ ಹತ್ತು- ಹದಿನೈದು ವರ್ಷ ಸಕ್ರಿಯ ರಾಜಕಾರಣದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.
ಇನ್ನು ಮುಂದೆ ಸಾರ್ವಜನಿಕವಾಗಿ ಕಣ್ಣೀರು ಹಾಕೊಲ್ಲ ಎಂದಿದ್ದ ಸಿಎಂ ಕುಮಾರಸ್ವಾಮಿ ಸೋಮವಾರ ಸಾರ್ವಜನಿಕ ಸಭೆಯಲ್ಲಿ ಮತ್ತೆ ಕಣ್ಣೀರು ಹಾಕಿದ್ದಾರೆ. ಮಂಡ್ಯದಲ್ಲಿ ಎಷ್ಟು ಕೋಟಿ ಖರ್ಚು ಮಾಡಿದರೂ ಕುಮಾರಸ್ವಾಮಿ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಅವರ ಜಾಗದಲ್ಲಿ ಯಾರೇ ಇದ್ರೆ ಕಣ್ಣೀರು ಹಾಕುವ ಪರಿಸ್ಥಿತಿ ಇದೆ. ಬಹುಶಃ ಕುಮಾರಸ್ವಾಮಿ ಅವರು ಪರ್ಮನೆಂಟಾಗಿ ಕಣ್ಣೀರು ಹಾಕೊಂಡು ಇರಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದ್ರು.
ಅಣ್ಣನ ನೋಟು- ಅಕ್ಕನಿಗೆ ವೋಟು ಎಂಬ ಸ್ಲೋಗನ್ ಈಗ ಮಂಡ್ಯದಲ್ಲಿ ವ್ಯಾಪಕವಾಗಿದೆ. ಬಿಜೆಪಿ ಅಧಿಕೃತವಾಗಿ ಬೆಂಬಲ ಸೂಚಿಸಿದೆ. ಆದರೆ, ಜೆಡಿಎಸ್- ಕಾಂಗ್ರೆಸ್ ನಾಯಕರು ಅನಧಿಕೃತವಾಗಿ ಬೆಂಬಲ ನೀಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಕುಮಾರಸ್ವಾಮಿ, ರೇವಣ್ಣ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಜಾತಿ, ಪಕ್ಷ, ಧರ್ಮ ಆಧಾರದಲ್ಲಿ ಐಟಿ ದಾಳಿ ಆಗಲ್ಲ. ಹಾಸನ, ಮಂಡ್ಯದಲ್ಲಿ ರೈಡ್ ಆದಾಗ ಆಡಳಿತ ಪಕ್ಷ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಖಚಿತವಾಗಿದೆ. ಆಗದ ಕೆಲಸಗಳಿಗೆ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿದ್ದಾರೆ. ಗುತ್ತಿಗೆದಾರರು, ಉದ್ಯಮಿಗಳು ಅವರ ಸಂಬಂಧಿಗಳಾಗಿದ್ರೆ ಅದು ಕಾಕತಾಳಿಯ ಅಷ್ಟೇ ಅಂದ್ರು.
ಬೆಂಗಳೂರು ಮಹಾನಗರವನ್ನು ದಕ್ಷಿಣ, ಉತ್ತರ ಮತ್ತು ಕೇಂದ್ರ ಎಂದು ಮೂರು ಲೋಕಸಭಾ ಕ್ಷೇತ್ರಗಳನ್ನು ವಿಭಾಗಿಸಲಾಗಿದೆ. ಈ ಮೂರು ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳೆಂದು ಬಿಂಬಿತವಾಗಿದ್ದು, ಅನಂತ್‍ಕುಮಾರ್ ನಿಧನದ ಬಳಿಕ ಬೆಂಗಳೂರು ದಕ್ಷಿಣದಿಂದ ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣಕ್ಕಿಳಿದಿದ್ದಾರೆ. ಇತ್ತ ಉತ್ತರದಲ್ಲಿ ಡಿ.ವಿ.ಸದಾನಂದ ಗೌಡ ಎರಡನೇ ಬಾರಿಗೆ ಸ್ಪರ್ಧಿಸಿದ್ದಾರೆ. ಕೇಂದ್ರದಿಂದ ಪಿ.ಸಿ.ಮೋಹನ್ ಕಣದಲ್ಲಿದ್ದಾರೆ.
ಇತ್ತ ಕಾಂಗ್ರೆಸ್‍ನಿಂದ ಬೆಂಗಳೂರು ಕೇಂದ್ರ ರಿಜ್ವಾನ್ ಅರ್ಷದ್, ಉತ್ತರದಲ್ಲಿ ಕೃಷ್ಣ ಬೈರೇಗೌಡ ಮತ್ತು ದಕ್ಷಿಣದಲ್ಲಿ ಬಿ.ಕೆ.ಹರಿಪ್ರಸಾದ್ ಕಣದಲ್ಲಿದ್ದಾರೆ. ಮೊದಲ ಬಾರಿಗೆ ನಟ ಪ್ರಕಾಶ್ ರೈ ಬೆಂಗಳೂರು ಕೇಂದ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ.
1. ಬೆಂಗಳೂರು ಉತ್ತರ ಕದನ:
ಕಾಂಗ್ರೆಸ್‍ನ ಭದ್ರಕೋಟೆಯನ್ನು ಛಿದ್ರ ಮಾಡಿದ್ದು ಬಿಜೆಪಿ. 2004ರಿಂದಲೇ ಬೆಂಗಳೂರು ಉತ್ತರ ಕ್ಷೇತ್ರವನ್ನು ಕೈ ತೆಕ್ಕೆಯಿಂದ ಬಿಜೆಪಿ ಕಿತ್ತುಕೊಂಡಿತ್ತು. 2004ರಲ್ಲಿ ಸಾಂಗ್ಲಿಯಾನ ಬಿಜೆಪಿಯಿಂದ ಗೆಲ್ಲುವ ಮೂಲಕ 2009ರಕಲ್ಲಿ ಡಿ.ಬಿ.ಚಂದ್ರೇಗೌಡ, 2014ರಲ್ಲಿ ಡಿ.ವಿ.ಸದಾನಂದಗೌಡ ಬಿಜೆಪಿಯಿಂದ ಗೆದ್ದಿದ್ರು. ಬೆಂಗಳೂರು ಉತ್ತರದಿಂದ 7 ಬಾರಿ ಗೆದ್ದಿದ್ದ ಕಾಂಗ್ರೆಸ್‍ನ ನಾಯಕ ದಿವಂಗತ ಜಾಫರ್ ಷರೀಫ್ ಅವರು ಸಾಂಗ್ಲಿಯಾನ, ಚಂದ್ರೇಗೌಡ ಅವರ ಎದುರು ಸೋತಿದ್ದರು.
ಅಂದಿನಿಂದ ಬೆಂಗಳೂರು ಉತ್ತರ ಬಿಜೆಪಿ ಭದ್ರಕೋಟೆಯಾಗಿ ಬದಲಾಯ್ತು. ಮಿನಿ ಭಾರತದಂತಿರುವ ಈ ಕ್ಷೇತ್ರದಲ್ಲಿ ಎಲ್ಲ ಧರ್ಮ, ಜಾತಿ, ಒಳಗಿನವರು, ಹೊರಗಿನವರು ಎಲ್ಲರನ್ನೂ ಒಳಗೊಂಡಿರುವ ಕ್ಷೇತ್ರ. ಈಗ ಇದೇ ಕ್ಷೇತ್ರದಲ್ಲಿ ಒಂದೇ ಸಮುದಾಯದ ಇಬ್ಬರು ಅಖಾಡದಲ್ಲಿ ಇದ್ದಾರೆ. ಕೇಂದ್ರ ಸಚಿವ, ಹಾಲಿ ಸಂಸದ ಡಿ.ವಿ.ಸದಾನಂದಗೌಡ, ಸಚಿವ ಕೃಷ್ಣಬೈರೇಗೌಡ ಕಣದಲ್ಲಿದ್ದು, ಕದನ ಕಣ ರಂಗೇರಿದೆ.
ಒಟ್ಟು ಮತದಾರರು: ಬೆಂಗಳೂರು ಉತ್ತರ ಕ್ಷೇತ್ರ 28,48,705 ಮತದಾರರನ್ನು ಒಳಗೊಂಡಿದೆ. 14,81,456 ಪುರುಷ ಮತದಾರರು ಮತ್ತು 13,66,753 ಮಹಿಳಾ ಮತದಾರರನ್ನು ಹೊಂದಿದೆ. ಒಕ್ಕಲಿಗ 8 ಲಕ್ಷ, ಎಸ್‍ಸಿ-ಎಸ್‍ಟಿ 5 ಲಕ್ಷ, ಮುಸ್ಲಿಂ 3 ಲಕ್ಷ, ಕುರುಬ 3 ಲಕ್ಷ, ಲಿಂಗಾಯತರು 2 ಲಕ್ಷ, ಇತರೆ ಹಿಂದುಳಿದ ವರ್ಗ 3 ಲಕ್ಷ ಮತದಾರರಿದ್ದಾರೆ. ಒಕ್ಕಲಿಗರ ಮತಗಳ ನಿರ್ಣಾಯಕ ಸ್ಥಾನದಲ್ಲಿವೆ.
2014ರ ಫಲಿತಾಂಶ: 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಡಿ.ವಿ.ಸದಾನಂದಗೌಡರು 2,29,764 (16.91%) ಮತಗಳ ಅಂತರದಿಂದ ಕಾಂಗ್ರೆಸ್‍ನ ಸಿ.ನಾರಾಯಣಸ್ವಾಮಿ ವಿರುದ್ಧ ಗೆಲುವು ಸಾಧಿಸಿದ್ದರು. ಡಿ.ವಿ.ಸದಾನಂದಗೌಡ (ಬಿಜೆಪಿ) 7,18,326 (52.91%), ಸಿ.ನಾರಾಯಣಸ್ವಾಮಿ(ಕಾಂಗ್ರೆಸ್) 4,88,562 (35.99%) ಅಬ್ದುಲ್ ಅಜೀಂ (ಜೆಡಿಎಸ್)-92,681 (6.83%) ಮತಗಳನ್ನು ಪಡೆದಿದ್ದರು.
ವಿಧಾನಸಭಾ ಚುನಾವಣೆಯ ಫಲಿತಾಂಶ: ಬೆಂಗಳೂರು ಉತ್ತರ ಲೋಕ ಅಖಾಡ 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 5, ಜೆಡಿಎಸ್ 2, ಬಿಜೆಪಿ 1 ಸ್ಥಾನದಲ್ಲಿ ಗೆಲುವು ಕಂಡಿವೆ. ಬ್ಯಾಟರಾಯನಪುರ – ಕೃಷ್ಣ ಭೈರೇಗೌಡ(ಕಾಂಗ್ರೆಸ್), ಯಶವಂತಪುರ – ಎಸ್.ಟಿ.ಸೋಮಶೇಖರ್(ಕಾಂಗ್ರೆಸ್), ಹೆಬ್ಬಾಳ – ಭೈರತಿ ಸುರೇಶ್ (ಕಾಂಗ್ರೆಸ್), ಕೆ.ಆರ್.ಪುರಂ- ಭೈರತಿ ಬಸವರಾಜು (ಕಾಂಗ್ರೆಸ್), ಪುಲಿಕೇಶಿನನಗರ – ಅಖಂಡ ಶ್ರೀನಿವಾಸಮೂರ್ತಿ (ಕಾಂಗ್ರೆಸ್), ಮಹಾಲಕ್ಷ್ಮೀ ಲೇಔಟ್- ಗೋಪಾಲಯ್ಯ (ಜೆಡಿಎಸ್), ದಾಸರಹಳ್ಳಿ – ಮಂಜುನಾಥ್ (ಜೆಡಿಎಸ್) ಮತ್ತು ಮಲ್ಲೇಶ್ವರಂ- ಅಶ್ವಥ್‍ನಾರಾಯಣ್ (ಬಿಜೆಪಿ) ಶಾಸಕರಾಗಿದ್ದಾರೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು 1. ಡಿ.ವಿ.ಸದಾನಂದಗೌಡ- ಬಿಜೆಪಿ 2. ಕೃಷ್ಣಬೈರೇಗೌಡ- ಕಾಂಗ್ರೆಸ್
2. ಬೆಂಗಳೂರು ದಕ್ಷಿಣ
ಬೆಂಗಳೂರು ದಕ್ಷಿಣ ಬಿಜೆಪಿಯ ಭದ್ರಕೋಟೆ. ದಿವಂಗತ ಕೇಂದ್ರ ಸಚಿವ ಅನಂತಕುಮಾರ್ ಅವರ ಭದ್ರಕೋಟೆಯಾಗಿತ್ತು. ಜನತಾ ಪಾರ್ಟಿಯ ಭದ್ರಕೋಟೆಯಾಗಿದ್ದ ಬೆಂಗಳೂರು ದಕ್ಷಿಣವನ್ನು ಛಿದ್ರ ಮಾಡಿದ್ದು ದಿವಂಗತ ಮಾಜಿ ಸಿಎಂ ಆರ್.ಗುಂಡೂರಾವ್. 1989ರಲ್ಲಿ ಜನತಾ ಪಾರ್ಟಿಯ ಛಿದ್ರಗೊಳಿಸಿದ ನಂತರ ಬಿಜೆಪಿಗೆ ವರವಾಯ್ತು. 1991ರಲ್ಲಿ ಕೆ.ವಿ.ಗೌಡ ಬಿಜೆಪಿಯಿಂದ ಗೆದ್ದರೆ ಆ ನಂತರ ಸತತ 6 ಬಾರಿ ಅನಂತಕುಮಾರ್ ಈ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಒಕ್ಕಲಿಗ, ಬ್ರಾಹ್ಮಣ, ಮುಸ್ಲಿಂ ಸಮುದಾಯ ಪ್ರಾಬಲ್ಯ ಇರುವ ಈ ಕ್ಷೇತ್ರದಲ್ಲಿ ಉತ್ತರ ಭಾರತೀಯರು ನಿರ್ಣಾಯಕರಾಗಿದ್ದಾರೆ. ತೇಜಸ್ವಿನಿ ಅನಂತಕುಮಾರ್ ಅವರನ್ನು ರಾಜ್ಯ ಬಿಜೆಪಿ ಅಭ್ಯರ್ಥಿಯನ್ನಾಗಿ ಬಿಂಬಿಸಿ ಕೊನೆಗೆ ಹೈಕಮಾಂಡ್ ಯೂತ್ ಫೇಸ್ ನೆಪದಲ್ಲಿ ಬಿಜೆಪಿಯಿಂದ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಕೊಟ್ಟಿದ್ದು, ಕಾಂಗ್ರೆಸ್‍ನಿಂದ ದೆಹಲಿ ಮಟ್ಟದ ಪ್ರಭಾವಿ ನಾಯಕ ಬಿ.ಕೆ.ಹರಿಪ್ರಸಾದ್ ಸ್ಪರ್ಧೆಗಿಳಿದಿದ್ದು, ಕದನ ಕಣ ರೋಚಕವಾಗಿದೆ.
ಒಟ್ಟು ಮತದಾರರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ 22,15,758 ಮತದಾರನ್ನು ಒಳಗೊಂಡಿದೆ. 11,53,622 ಪುರುಷ ಮತದಾರರು ಮತ್ತು 10,61,796 ಮಹಿಳಾ ಮತದಾರರನ್ನು ಹೊಂದಿದೆ. ಜಾತಿವಾರು ಪ್ರಾಬಲ್ಯ ನೋಡೋದಾದ್ರೆ ಒಕ್ಕಲಿಗ ಸಮುದಾಯ 5 ಲಕ್ಷ, ಮುಸ್ಲಿಂ ಸಮುದಾಯ 4 ಲಕ್ಷ, ಬ್ರಾಹ್ಮಣ ಸಮುದಾಯ 4 ಲಕ್ಷ, ಉತ್ತರ ಭಾರತೀಯರು 2 ಲಕ್ಷ, ಕುರುಬ ಸಮುದಾಯ 2 ಲಕ್ಷ, ಎಸ್‍ಸಿ ಸಮುದಾಯ 2 ಲಕ್ಷ ಮತ್ತು ಲಿಂಗಾಯತ ಸಮುದಾಯ 1.80 ಲಕ್ಷ ಮತದಾರರು ಕ್ಷೇತ್ರದಲ್ಲಿದ್ದಾರೆ.
2014ರ ಫಲಿತಾಂಶ: 2014ರ ಲೋಕಸಭಾ ಚುನಾವಣೆಯಲ್ಲಿ ಅನಂತಕುಮಾರ್ ಅವರು 2,28,575 (19.51) ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಗೆದ್ದಿದ್ದರು. ಅನಂತಕುಮಾರ್ (ಬಿಜೆಪಿ) 6,33,816 (56.88%), ನಂದನ್ ನಿಲೇಕಣಿ (ಕಾಂಗ್ರೆಸ್)- 4,05,241 (36.37%), ರುತ್ ಮನೋರಮಾ (ಜೆಡಿಎಸ್) 25,677 (2.30%) ಮತಗಳನ್ನು ಪಡೆದಿದ್ದರು.
ವಿಧಾನಸಭಾ ಫಲಿತಾಂಶ: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಹ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ 5, ಕಾಂಗ್ರೆಸ್ 3 ಶಾಸಕರಿದ್ದಾರೆ. ಬಸವನಗುಡಿ – ರವಿ ಸುಬ್ರಮಣ್ಯ (ಬಿಜೆಪಿ), ಪದ್ಮನಾಭನಗರ – ಆರ್.ಅಶೋಕ್(ಬಿಜೆಪಿ), ಬೊಮ್ಮನಹಳ್ಳಿ ಸತೀಶ್ ರೆಡ್ಡಿ (ಬಿಜೆಪಿ), ಚಿಕ್ಕಪೇಟೆ – ಉದಯ್ ಗರುಡಾಚಾರ್(ಬಿಜೆಪಿ), ಗೋವಿಂದರಾಜನಗರ – ವಿ.ಸೋಮಣ್ಣ(ಬಿಜೆಪಿ), ವಿಜಯನಗರ – ಕೃಷ್ಣಪ್ಪ (ಕಾಂಗ್ರೆಸ್), ಜಯನಗರ – ಸೌಮ್ಯರೆಡ್ಡಿ (ಕಾಂಗ್ರೆಸ್) ಮತ್ತು ಬಿಟಿಎಂ ಲೇಔಟ್ – ರಾಮಲಿಂಗಾರೆಡ್ಡಿ (ಕಾಂಗ್ರೆಸ್) ಶಾಸಕರಿದ್ದಾರೆ.
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು 1. ತೇಜಸ್ವಿಸೂರ್ಯ – ಬಿಜೆಪಿ 2. ಬಿ.ಕೆ.ಹರಿಪ್ರಸಾದ್ – ಕಾಂಗ್ರೆಸ್
3. ಬೆಂಗಳೂರು ಸೆಂಟ್ರಲ್
ಕಾಂಗ್ರೆಸ್ ಭದ್ರಕೋಟೆ ಬೆಂಗಳೂರು ಸೆಂಟ್ರಲ್‍ನಲ್ಲಿ ಸತತ ಮೂರನೇ ಬಾರಿಗೆ ಬಿಜೆಪಿಯ ಪಿ.ಸಿ. ಮೋಹನ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್ಸಿನ ಐವರು ಶಾಸಕರಿದ್ದರೂ, ಈ ಲೋಕಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆಯೇ ಆಗಿದೆ. ಕಳೆದ ಬಾರಿ ಕೇವಲ 1.30 ಲಕ್ಷ ಮತಗಳ ಅಂತರದಿಂದ ಸೋತಿದ್ದ ರಿಜ್ವನ್ ಅರ್ಷದ್ ಈ ಬಾರಿಯೂ ಕಾಂಗ್ರೆಸ್ಸಿನ ಅಭ್ಯರ್ಥಿಯಾಗಿದ್ದಾರೆ. ಉತ್ತರ ಭಾರತೀಯರು, ಮುಸ್ಲಿಮರು, ಕ್ರೈಸ್ತರು ಹಾಗೂ ತಮಿಳು ಮತದಾರರೇ ನಿರ್ಣಾಯಕವಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಚಿತ್ರನಟ ಪ್ರಕಾಶ್ ರೈ ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ಮೋದಿ ವಿರೋಧಿಸುತ್ತಲೇ ರಾಜಕೀಯ ಭವಿಷ್ಯಕ್ಕಾಗಿ ಚುನಾವಣೆ ಅಖಾಡಕ್ಕೆ ಧುಮುಕಿದ್ದಾರೆ.
ಒಟ್ಟು ಮತದಾರರು: ಬೆಂಗಳೂರು ಸೆಂಟ್ರಲ್ ಒಟ್ಟು 22,04,740 ಮತದಾರರನ್ನು ಹೊಂದಿದೆ. 11,45,974 ಪುರುಷ ಮತದಾರರು ಮತ್ತು 10,58,369 ಮಹಿಳಾ ಮತದಾರರಿದ್ದಾರೆ. ಜಾತಿವಾರು ನೋಡೋದಾದ್ರೆ, ತಮಿಳರು 5 ಲಕ್ಷ, ಮುಸ್ಲಿಂ 3 ಲಕ್ಷ, ಉತ್ತರ ಭಾರತೀಯರು 2.5ಲಕ್ಷ, ಕ್ರಿಶ್ಚಿಯನ್ 2 ಲಕ್ಷ, ಮೇವಾರ 1.50 ಲಕ್ಷ, ಎಸ್‍ಸಿ 3 ಲಕ್ಷ, ಲಿಂಗಾಯತ 1 ಲಕ್ಷ, ಒಕ್ಕಲಿಗ 1.5 ಲಕ್ಷ ಮತ್ತು ಇತರೆ 3 ಲಕ್ಷ ಮತದಾರರಿದ್ದಾರೆ.
2014ರ ಫಲಿತಾಂಶ: 2014ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಪಿ.ಸಿ.ಮೋಹನ್ 1,37,500 ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ ಜಯಮಾಲೆಯನ್ನು ತಮ್ಮದಾಗಿಸಿಕೊಂಡಿದ್ದರು. ಪಿ.ಸಿ.ಮೋಹನ್ (ಬಿಜೆಪಿ) 5,57,130 (51.85%), ರಿಜ್ವಾನ್ ಅರ್ಷದ್ (ಕಾಂಗ್ರೆಸ್) 4,19,630 (39.05%) ಮತ್ತು ನಂದಿನಿ ಆಳಾ ್ವ(ಜೆಡಿಎಸ್) 20,387 (1.90%) ಮತಗಳನ್ನು ಪಡೆದುಕೊಂಡಿದ್ದರು.
ವಿಧಾನಸಭಾ ಫಲಿತಾಂಶ: ಬೆಂಗಳೂರು ಸೆಂಟ್ರಲ್ ಕ್ಷೇತ್ರ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಕಾಂಗ್ರೆಸ್ 5, ಬಿಜೆಪಿ 3 ಶಾಸಕರನ್ನು ಹೊಂದಿದೆ. ಶಿವಾಜಿನಗರ- ರೋಷನ್‍ಬೇಗ್ (ಕಾಂಗ್ರೆಸ್), ಗಾಂಧಿನಗರ – ದಿನೇಶ್ ಗುಂಡೂರಾವ್ (ಕಾಂಗ್ರೆಸ್), ಶಾಂತಿನಗರ- ಹ್ಯಾರಿಸ್ (ಕಾಂಗ್ರೆಸ್), ಚಾಮರಾಜಪೇಟೆ – ಜಮೀರ್ ಅಹಮದ್ (ಕಾಂಗ್ರೆಸ್), ಸರ್ವಜ್ಞ ನಗರ – ಕೆ.ಜೆ.ಜಾರ್ಜ್ (ಕಾಂಗ್ರೆಸ್), ರಾಜಾಜಿನಗರ- ಸುರೇಶ್‍ಕುಮಾರ್ (ಬಿಜೆಪಿ), ಮಹದೇವಪುರ – ಅರವಿಂದ ಲಿಂಬಾವಳಿ (ಬಿಜೆಪಿ) ಮತ್ತು ಸಿ.ವಿ.ರಾಮನ್‍ನಗರ- ರಘು (ಬಿಜೆಪಿ)
ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು 1. ಪಿ.ಸಿ.ಮೋಹನ್ – ಬಿಜೆಪಿ 2. ರಿಜ್ವಾನ್ ಅರ್ಷದ್ – ಕಾಂಗ್ರೆಸ್ 3. ಪ್ರಕಾಶ್ ರೈ – ಪಕ್ಷೇತರ
ಬೆಂಗಳೂರು: ಕಣ್ಣೀರು ಹಾಕಲು ನಾನು ಪ್ರಯತ್ನ ಪಡುತ್ತಿದ್ದೇನೆ. ಆದ್ರೆ ನನಗೆ ಕಣ್ಣೀರು ಬರುತ್ತಾನೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರು ವ್ಯಂಗ್ಯವಾಡಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನೂ ಕೂಡ ಕಣ್ಣೀರು ಹಾಕಬೇಕು ಅಂದರೂ ಕಣ್ಣೀರು ಬರುವುದೇ ಇಲ್ಲ. ಆದರೆ ಕೆಲವರಿಗೆ ಸಲೀಸಾಗಿ ಕಣ್ಣೀರು ಬರುತ್ತದೆ. ಹಾಗಾಗಿ ಅವರು ಸಿಕ್ಕಾಗ ಒಮ್ಮೆ ಅವರನ್ನೇ ಕೇಳಿ ಕಣ್ಣೀರಿನ ರಹಸ್ಯ ಏನು ಎಂದು ತಿಳಿದುಕೊಳ್ಳಬೇಕು ಎಂದುಕೊಂಡಿದ್ದೇನೆ ಎಂದು ನಕ್ಕರು.
ಪಾಪ ಅವರ ಹೃದಯ ಮಿಡಿಯುತ್ತಿದೆ. ಹಾಗಾಗಿ ಒಬ್ಬ ತಂದೆಗೆ ಮಾತ್ರ ತಂದೆಯ ತವಕ ಗೊತ್ತಾಗುತ್ತದೆ ಬಿಡಿ ಎಂದು ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ರು.
ಮಂಡ್ಯದಲ್ಲಿ ಸುಮಲತಾ, ಹಾಸನದಲ್ಲಿ ಮಂಜುಗೆ ರಕ್ಷಣೆ ಕೊಡಬೇಕು. ಎಚ್‍ಡಿಕೆಯವರದ್ದು ಹತಾಶೆಯ ಮನೋಭಾವನೆಯಾಗಿದೆ. ಕುಮಾರಸ್ವಾಮಿ ದೃಷ್ಟಿಯಲ್ಲಿ ಅವರಿಗೆ ಮೂರು ಚುನಾವಣೆಗಳು ಬಹಳ ಪ್ರಮುಖವಾಗಿದೆ. ಈ ಕಾರಣದಿಂದಲೇ ಅವರ ಸಂಸಾರವೇ ಚುನಾವಣೆಗೆ ನಿಂತಿದೆ. ಹಾಗಾಗಿ ಸಾಕಷ್ಟು ಹೇಳಿಕೆಯನ್ನು ಕೊಡುತ್ತಿರೋದು ಹತಾಶೆಯ ದ್ಯೋತಕ. ದೇವೇಗೌಡರು ನರೇಂದ್ರ ಮೋದಿಯವರನ್ನು ಪ್ರಧಾನಿ ಆಗೋದಕ್ಕೆ ಬಿಡಲ್ಲ ಅನ್ನೋದು ಹುಡುಗಾಟಿಕೆ ಮಾತಾಗಿದೆ. ಅವರು ಅಡ್ಡ ನಿಲ್ತಾರೆ ಬಿಡಿ ಎಂದು ವ್ಯಂಗ್ಯವಾಡಿದ ಅವರು, ಇಂದೇ ಭವಿಷ್ಯ ನುಡಿಯುತ್ತಿದ್ದೇನೆ. ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ನಿಶ್ಚಿತವಾಗಿದೆ. ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ರು.
ಇದೇ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಐಟಿ-ಇಡಿ ಸುಖಾಸುಮ್ಮನೆ ದಾಳಿ ನಡೆಸುವುದಿಲ್ಲ. ಅವರೂ ಸಹ ಸಾಕಷ್ಟು ಮಾಹಿತಿ ಸಂಗ್ರಹಿಸಿಯೇ ದಾಳಿ ನಡೆಸುತ್ತಿದ್ದಾರೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ಸಿಗುತ್ತಿಲ್ವಾ ಎಂದು ಪ್ರಶ್ನಿಸಿದ ಎಸ್‍ಎಂಕೆ, ಇಡಿ ಐಟಿಗೆ ಅವರ ಕೆಲಸ ಮಾಡಲು ಬಿಡಿ ಎಂದರು.
ಬೆಂಗಳೂರು: ಲೋಕಸಭಾ ಚುನಾವಣಾ ದಿನದ ಆಸುಪಾಸಿನಲ್ಲಿ ಸಾಲು ಸಾಲು ರಜೆಗಳಿದ್ದು, ಪ್ರವಾಸಕ್ಕೆ ಹೋಗಲು ಪ್ಲಾನ್ ಮಾಡಿರುವ ಮತದಾರರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಮನವಿ ಮಾಡಿದ್ದಾರೆ.
ನಗರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತದಾನ ಮಾಡುವುದು ನಮ್ಮೆಲ್ಲರ ಪ್ರಮುಖ ಹಕ್ಕು. ಹಾಗಾಗಿ ನಗರ ಪ್ರದೇಶಗಳ ಜನ ಮತಗಟ್ಟೆಗೆ ತೆರಳಿ ಮತ ಹಾಕಿ ಎಂದು ನಾನು ಮನವಿ ಮಾಡಿಕೊಂಡರು.
ನರೇಂದ್ರ ಮೋದಿಯವರು ಸ್ಥಿರವಾದ ಸರ್ಕಾರ ಕೊಟ್ಟಿದ್ದಾರೆ. ಹೀಗಾಗಿ ನಿಮ್ಮ ಮತಗಳನ್ನು ನರೇಂದ್ರ ಮೋದಿಗೆ ಹಾಕಿ. ಈ ಹಿಂದಿನ ಸರ್ಕಾರಗಳಲ್ಲಿ ಸ್ಥಿರತೆ ಇದ್ದರೂ ರಿಮೋಟ್ ಕಂಟ್ರೋಲ್ ಇರುತಿತ್ತು. ಆದ್ರೆ ಮೋದಿ ಸರ್ಕಾರದಲ್ಲಿ ರಿಮೋಟ್ ಕಂಟ್ರೋಲ್ ಇರಲಿಲ್ಲ. ಈ ಚುನಾವಣೆ ದೇಶದ ದೃಷ್ಟಿಯಿಂದಷ್ಟೇ ಅಲ್ಲ. ವಿಶ್ವದ ಗಮನ ಸೆಳೆದಿರುವ ಚುನಾವಣೆಯಾಗಿದೆ. ಜನಭರಿತ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು ಎಂದು ಹೇಳಿದರು.
ರಫೆಲ್ ವಿಚಾರದಲ್ಲಿ ಏನ್ ಆಯ್ತು? ಕಾಂಗ್ರೆಸ್ ಅಧ್ಯಕ್ಷರ ಅಪ್ರಬುದ್ಧ ನಡವಳಿಕೆಯಿಂದ ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 145 ವರ್ಷಗಳ ಇತಿಹಾಸ ಇರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಆಲೋಚನೆ ಮಾಡಿ ಪ್ರತಿಕ್ರಿಯೆ ಕೊಡಬೇಕು. ಆದ್ರೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರದ್ದು ಅಪ್ರಬುದ್ಧತೆ, ಅನ್ ಲಿಮಿಟೆಡ್ ಆಗಿದೆ. ಸುಪ್ರೀಂಕೋರ್ಟ್ ನಲ್ಲಿ ಏನ್ ಹೇಳ್ತಾರೆ ನೋಡೋಣ ಎಂದು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.
ಹವ್ಯಾಸಿ ಪ್ರಿಯ ಪ್ರಧಾನ ಮಂತ್ರಿಗಳು ಇರುತ್ತಾರೆ. ನರೇಂದ್ರ ಮೋದಿಗೆ ಹವ್ಯಾಸಗಳು ಇಲ್ಲ. ಅಲ್ಲದೇ ಅವರಿಗೆ ಮಕ್ಕಳು, ಮೊಮ್ಮಕ್ಕಳ ಬಗ್ಗೆ ಚಿಂತೆ ಇಲ್ಲ. ಅವರಿಗೆ ಸಹೋದರ ಇದ್ದರೂ ನಗಣ್ಯ. ಶಾಸ್ತ್ರಿಗಳ ನಂತರ ನಾನು ಹಲವಾರು ಪ್ರಧಾನಿಗಳನ್ನ ನೋಡಿದ್ದೇನೆ. 18 ಗಂಟೆಗಳ ಕಾಲ ಕೆಲಸ ಮಾಡುವ ಮೋಸ್ಟ್ ಹಾರ್ಡ್ ವರ್ಕಿಂಗ್ ಪಿಎಂ ನರೇಂದ್ರ ಮೋದಿ ಎಂದು ಕೊಂಡಾಡಿದರು.