Tag: ಲೋಕಸಭಾ ಚುನಾವಣೆ 2019

  • ದೇಶದ್ರೋಹಿಗಳ ಪರ ಕಾಂಗ್ರೆಸ್ ನಿಂತಿದೆ: ಮೋದಿ

    ದೇಶದ್ರೋಹಿಗಳ ಪರ ಕಾಂಗ್ರೆಸ್ ನಿಂತಿದೆ: ಮೋದಿ

    ಚಿಕ್ಕೋಡಿ/ಬೆಳಗಾವಿ: ಮೋದಿ ಅಲೆ ಹೇಗಿರುತ್ತೆ ಎಂಬುದನ್ನು ಚಿಕ್ಕೋಡಿಯಲ್ಲಿ ಬಂದು ನೋಡಬೇಕು. ದೆಹಲಿಯ ಎಸಿ ಕೊಠಡಿಯಲ್ಲಿ ಕುಳಿತು ಸೋಲಿಸಲು ಪ್ರಯತ್ನಿಸುತ್ತಿರುವ ನಾಯಕರೇ ಹೊರಗೆ ಬಂದು ನೋಡಿ. ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿಯ ನಾಯಕರ ಬಗ್ಗೆ ಮತ ಕೇಳಲು ಬಂದಿದ್ದೆ. ಇಂದು ನನಗಾಗಿ ಮತ ಕೇಳಲು ದೇಶಾದ್ಯಂತ ಸಂಚರಿಸುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

    ಚಿಕ್ಕೋಡಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ನಮ್ಮ ಅಭಿವೃದ್ಧಿಯ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಜೋಡಿಗೆ ಕೇವಲ ಮತಗಳು ಮಾತ್ರ ಕಾಣುತ್ತವೆ. ಒಬ್ಬೊಬ್ಬರ ನಡುವೆ ಹೊಂದಾಣಿಕೆ ಇಲ್ಲ. ಮೋದಿಗೆ ಬೈಯೋದು, ಕುಟುಂಬ ರಾಜಕಾರಣ, ಉಗ್ರವಾದ ಮತ್ತು ಭ್ರಷ್ಟಾಚಾರ ಮಾಡುವುದು ಎರಡು ಪಕ್ಷಗಳ ಕೆಲಸವಾಗಿದೆ. ಕರ್ನಾಟಕದ ಮುಖ್ಯಮಂತ್ರಿ ಸೈನಿಕರ ಬಗ್ಗೆ ಅವಮಾನಿಸುವಂತಹ ಹೇಳಿಕೆಯನ್ನು ನೀಡುತ್ತಾರೆ. ಇವರಿಗೆ ಎಂದೂ ದೇಶದ ಅಭಿವೃದ್ಧಿ ಮುಖ್ಯವಲ್ಲ ಎಂದು ವಾಗ್ದಾಳಿ ನಡೆಸಿದ್ರು.

    ಅಧಿಕಾರಕ್ಕೆ ಬಂದರೆ ಸೈನಿಕರ ಹಕ್ಕುಗಳನ್ನು ಹಿಂಪಡೆಯುತ್ತವೆ ಎಂದು ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದೆ. ದೇಶದ್ರೋಹದ ಪರವಾಗಿ ಕೆಲಸ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕಿದೆ. ಪಿಎಂ ಕಿಸಾನ್ ಯೋಜನೆ ಲಾಭವನ್ನು ಕರ್ನಾಟಕ ಸರ್ಕಾರ, ಹೆಚ್ಚು ರೈತರ ಹೆಸರನ್ನು ನೀಡಿಲ್ಲ ಎಂದು ಆರೋಪಿಸಿತ್ತು. ಮೇ 23ರ ಬಳಿಕ ಮತ್ತೊಮ್ಮೆ ಮೋದಿ ಸರ್ಕಾರ ರಚನೆಯ ಬಳಿಕ ಎಲ್ಲ ರೈತರ ಖಾತೆಗೆ ಹಣ ಹಾಕಲಾಗುವುದು. ಈ ಯೋಜನೆಯ ಲಾಭ ಮುಂದಿನ ದಿನಗಳಲ್ಲಿ ಎಲ್ಲ ರೈತರಿಗೆ ಸಿಗಲಿದೆ. ಸರ್ಕಾರ ಸುಭದ್ರವಾಗಿದ್ದರೆ, ದೇಶ ಭದ್ರವಾಗಿರುತ್ತದೆ. ಸರ್ಕಾರ ಸುಭದ್ರವಾಗಿಸಲು ಚೌಕಿದಾರ ಬೇಕು. ನನ್ನಂತೆ ದೇಶದ ಎಲ್ಲರೂ ಚೌಕಿದಾರ ಎಂದರು.

    ಕಾಂಗ್ರೆಸ್ ಬಂದ್ರೆ ಮತ್ತೆ ಬೆಲೆ ಹೆಚ್ಚಳ ಮಾಡುತ್ತದೆ. ಒಂದು ವೇಳೆ ಇವರು ಅಧಿಕಾರಕ್ಕೆ ಬಂದರೆ ಬೆಲೆ ಹೆಚ್ಚಳ, ವಂಶವಾದ, ದಲ್ಲಾಳಿಗಳ ಅಭಿವೃದ್ಧಿ ಮಾತ್ರ ಆಗುತ್ತದೆ. ಹಾಗಾಗಿ ಪ್ರತಿಯೊಬ್ಬರು ಕಮಲದ ಗುರುತಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

    ಎಂದಿನಂತೆ ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ಮೋದಿ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ನಮಿಸಿದರು. ಚಿಕ್ಕೋಡಿಯಲ್ಲಿ ಅಣ್ಣಾ ಸಾಹೇಬ್ ಜೊಲ್ಲೆ ಮತ್ತು ಬೆಳಗಾವಿಯಲ್ಲಿ ಸುರೇಶ್ ಅಂಗಡಿ ಪರ ಪ್ರಧಾನಿ ಮೋದಿಯವರು ಮತಯಾಚಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಟಿ ತಾರಾ ಅನುರಾಧ ಪ್ರಧಾನಿಗಳಿಗೆ ಕೊಡುಗೆಯನ್ನು ನೀಡಿ ಕಾಲಿಗೆ ನಮಸ್ಕರಿಸಿದರು.

    ಬಾಗಲಕೋಟೆಯಲ್ಲಿ ಮಾತನಾಡಿದ್ದ ಮೋದಿ, ರಾಜ್ಯ ಸರ್ಕಾರವನ್ನು ದುರ್ಬಲ ಮತ್ತು ಸಿಎಂ ಕಣ್ಣೀರು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು. ಅಂತೆಯೇ ಲಿಂಗಾಯತ ಧರ್ಮ ವಿಚಾರವನ್ನು ಪ್ರಸ್ತಾಪಿಸಿ, ಸಚಿವರ ಹೆಸರು ಹೇಳದೇ ಡಿ.ಕೆ.ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಕಾಲೆಳೆದಿದ್ದರು.

  • ಬೆರಳಿನಲ್ಲಿರುವ ಶಾಯಿ ತೋರಿಸಿದ್ರೆ ದಂತ ಚಿಕಿತ್ಸೆ ಉಚಿತ!

    ಬೆರಳಿನಲ್ಲಿರುವ ಶಾಯಿ ತೋರಿಸಿದ್ರೆ ದಂತ ಚಿಕಿತ್ಸೆ ಉಚಿತ!

    ಮೈಸೂರು: ಪ್ರತಿಯೊಬ್ಬ ನಾಗರಿಕನೂ ತಮ್ಮ ಹಕ್ಕನ್ನು ಚಲಾಯಿಸಬೇಕು ಎಂಬ ಮತದಾನ ಜಾಗೃತಿಗಳು ಮೂಡಿ ಬಂದಿದೆ. ಆದ್ರೆ ಮೈಸೂರಿನಲ್ಲಿ ಮತದಾನ ಮಾಡಿದವರಿಗೆ ಉಚಿತವಾಗಿ ದಂತ ಚಿಕಿತ್ಸೆ ನೀಡಲಾಗುತ್ತಿದೆ.

    ಹೌದು. ಮೈಸೂರಿನ ಹೆಬ್ಬಾಳದ ಸಂಕ್ರಾಂತಿ ವೃತ್ತದಲ್ಲಿರುವ ಸ್ಮೈಲ್ ಆರ್ಕಿಟೆಕ್ ಡೆಂಟಲ್ ಕ್ಲಿನಿಕ್ ನಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.


    ಮೈಸೂರಿನ ಅನಿಫೌಂಡೇಶನ್ ವತಿಯಿಂದ ಈ ವಿಶಿಷ್ಟ ಅಭಿಯಾನ ನಡೆದಿದೆ. ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಮತದಾನ ಮಾಡಿ ಬಂದು ಬೆರಳಿನಲ್ಲಿರುವ ಶಾಯಿ ತೋರಿಸಿದರೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ.

    ಬೆರಳಿನಲ್ಲಿ ಶಾಯಿ ಎಷ್ಟು ದಿನ ಇರುತ್ತದೆ ಅಲ್ಲಿವರೆಗೂ ಉಚಿತ ಚಿಕಿತ್ಸೆ ಸೌಲಭ್ಯ ಪಡೆಯಬಹುದು ಎಂಬುದಾಗಿ ತಿಳಿದುಬಂದಿದೆ.

  • ಕರ್ನಾಟಕದಲ್ಲಿರುವುದು ನಾಟಕ ಸರ್ಕಾರ, ಸುದ್ದಿಗೋಷ್ಠಿ ಸಮಾವೇಶದಲ್ಲೂ ಕಣ್ಣೀರು – ಮೋದಿ

    ಕರ್ನಾಟಕದಲ್ಲಿರುವುದು ನಾಟಕ ಸರ್ಕಾರ, ಸುದ್ದಿಗೋಷ್ಠಿ ಸಮಾವೇಶದಲ್ಲೂ ಕಣ್ಣೀರು – ಮೋದಿ

    – ದುರ್ಬಲ ಸಿಎಂ ಕಣ್ಣೀರು ಹಾಕ್ತಾರೆ
    – ಬಲಿಷ್ಠ ಸರ್ಕಾರ ನೋಡಲು ದೆಹಲಿಗೆ ಬನ್ನಿ
    – ಕಾಂಗ್ರೆಸ್‍ಗೆ ಅಭದ್ರ ಸರ್ಕಾರ, ದುರ್ಬಲ ಸಿಎಂ ಬೇಕು

    ಬಾಗಲಕೋಟೆ: ಕಳೆದ ಐದು ವರ್ಷಗಳಲ್ಲಿ ಬಲಿಷ್ಠ ಸರ್ಕಾರವನ್ನು ನೀವೆಲ್ಲರೂ ನೋಡಿದ್ದೀರಿ. ಸುಭದ್ರ ಸರ್ಕಾರ ನೋಡಲು ದೆಹಲಿ ನೋಡಿ, ಅಭದ್ರ ಸರ್ಕಾರ ನೋಡಲು ಬೆಂಗಳೂರು ನೋಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಾಗಲಕೋಟೆಯಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಸರ್ಕಾರ ಪ್ರತಿ ಸುದ್ದಿಗೋಷ್ಠಿ, ಸಮಾವೇಶದಲ್ಲಿ ಕಣ್ಣೀರು ಹರಿಸುತ್ತಿದೆ. ಕರ್ನಾಟಕದ ನಾಟಕದಲ್ಲಿ ಎಮೋಷನ್, ಒಳಗೊಳಗೆ ಒಬ್ಬರ ಮೇಲೋಬ್ಬರು ದ್ವೇಷ ಕಾರುತ್ತಿದ್ದಾರೆ. ಕಾಂಗ್ರೆಸ್‍ಗೆ ಇಂತಹ ಅಭದ್ರ ಸರ್ಕಾರ, ದುರ್ಬಲ ಮುಖ್ಯಮಂತ್ರಿ ಬೇಕಾಗಿದ್ದಾರೆ. ಕರ್ನಾಟಕದ ದುರ್ಬಲ ಮುಖ್ಯಮಂತ್ರಿ ಕಣ್ಣೀರು ಹಾಕೋದನ್ನು ನಿಲ್ಲಿಸುತ್ತಿಲ್ಲ ಎಂದು ಕಿಡಿಕಾರಿದರು.

    ಮೈತ್ರಿ ಸರ್ಕಾರ ಬಹುದಿನಗಳ ಕಾಲ ಉಳಿಯಲ್ಲ ಎಂಬುವುದು ಬಹುತೇಕ ನಾಯಕರಿಗೆ ಗೊತ್ತಾಗಿದೆ. ಹಾಗಾಗಿ ಐದು ವರ್ಷದಲ್ಲಿ ಬಾಚಿಕೊಳ್ಳಲು ಪ್ಲಾನ್ ಮಾಡಿದ್ದ ಹಣವನ್ನು ಈಗಲೇ ದೋಚಿಕೊಳ್ಳುತ್ತಿದ್ದಾರೆ. ಇಂತಹುದೇ ದುರ್ಬಲ, ಅಭದ್ರತೆಯ ಸರ್ಕಾರ ಕೇಂದ್ರದಲ್ಲಿತ್ತು. 5 ವರ್ಷದ ಹಿಂದೆ ದೆಹಲಿಯಲ್ಲಿ ರಿಮೋಟ್ ಕಂಟ್ರೋಲ್ ಪ್ರಧಾನಿಯಾಗಿದ್ದರು. ಆ ಸರ್ಕಾರ ಕೇವಲ ಹಗರಣದಿಂದ ಕೂಡಿತ್ತು. ಇದರಿಂದ ಬೇಸತ್ತ ದೇಶದ ಜನತೆ 2014ರಲ್ಲಿ ದೆಹಲಿಯಲ್ಲಿ ಚೌಕಿದಾರನ ಭದ್ರ ಸರ್ಕಾರವನ್ನು ನೇಮಕ ಮಾಡಿದರು ಎಂದರು.

    2009ರಲ್ಲಿ ಮುಂಬೈ ಉಗ್ರರ ದಾಳಿ ಬಳಿಕ ಚುನಾವಣೆ ನಡೆದಿತ್ತು. ಅಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್, ದಾಳಿಯಲ್ಲಿ ಪಾಕಿಸ್ತಾನದ ಭಾಗಿಯಾಗಿದ್ದಾರೆ ಎಂದು ಪಾಕ್ ಒಪ್ಪುವಂತೆ ಮಾಡಿದ್ದೇವೆ ಎಂದು ಪ್ರಣಾಳಿಕೆಯಲ್ಲಿ ಬರೆದುಕೊಂಡಿತ್ತು. ಇದನ್ನು ದೊಡ್ಡ ಸಾಧನೆ ಎಂಬಂತೆ ಕಾಂಗ್ರೆಸ್ ಹೇಳಿಕೊಂಡಿತ್ತು. ಇಂದು ನಮ್ಮ ಸರ್ಕಾರ ಅವರ ಮನೆಯೊಳಗೆ ನುಗ್ಗಿ ಶತ್ರುಗಳನ್ನು ಹೊಡೆದುರುಳಿಸಿ ಬಂದಿದೆ. ಇದರ ಪರಿಣಾಮ ಪಾಕಿಸ್ತಾನ ವಿಶ್ವದಲ್ಲಿಯೇ ಕಣ್ಣೀರು ಹಾಕುತ್ತಿದೆ. ಹೋದ ಕಡೆಯಲ್ಲ ಮೋದಿ ನಮ್ಮ ಮೇಲೆ ದಾಳಿ ಮಾಡುತ್ತಾನೆ, ನಮ್ಮನ್ನ ರಕ್ಷಿಸಿ ಎಂದು ಸಹಾಯ ಕೇಳುತ್ತಿದ್ದಾರೆ. ಸರ್ಜಿಕಲ್ ಸ್ಟ್ರೈಕ್ ಮತ್ತು ಏರ್ ಸ್ಟ್ರೈಕ್ ನಮ್ಮ ಸಾಧನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೇಳಿದರು.

    https://twitter.com/BJP4Karnataka/status/1118818594643693568

    ಪಾಕಿಸ್ತಾನ ವೈರಿಗಳ ಸತ್ತರೆ, ನಮ್ಮವರು ಅಳಲು ಆರಂಭಿಸಿದರು. ಗೂಗಲ್ ಮುಂದೆ ಕುಳಿತು ಬಾಲಕೋಟ್ ಭಾರತದಲ್ಲಿದೆ ಎಂದು ಹೇಳಿದರು. ಅವರಿಗೆ ಬಾಲಕೋಟ್ ಮತ್ತು ಬಾಗಲಕೋಟೆಯ ವ್ಯತ್ಯಾಸವು ಗೊತ್ತಾಗಲಿಲ್ಲ. ಇಂದಿಗೂ ಕಾಂಗ್ರೆಸ್ ಹಾಗೂ ಘಟಬಂಧನ್ ಪಕ್ಷಗಳು ಸರ್ಜಿಕಲ್ ಮತ್ತು ವೈಮಾನಿಕ ದಾಳಿಯನ್ನು ಒಪ್ಪಿಕೊಂಡಿಲ್ಲ. ಒಡೆದು ಆಳುವ ನೀತಿಯನ್ನ ಕಾಂಗ್ರೆಸ್ ಅನುಸರಿಸುತ್ತದೆ. ವಿಧಾನಸಭಾ ಚುನಾವಣೆ ಸಮಯದಲ್ಲಿ ಮತಗಳಿಗಾಗಿ ಒಂದೇ ತಾಯಿಯ ಮಕ್ಕಳನ್ನು ಬೇರ್ಪಡಿಸಲು ಪ್ರಯತ್ನಿಸಿದರು. ಲಿಂಗಾಯತ ಧರ್ಮವನ್ನು ಪ್ರತ್ಯೇಕಿಸಲು ಕಾಂಗ್ರೆಸ್ ಮುಂದಾಗಿತ್ತು. ಇಂದು ಲಿಂಗಾಯತ ವಿಚಾರದಲ್ಲಿ ಕಾಂಗ್ರೆಸ್ ಸಚಿವರೇ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

    ಬಸವಣ್ಣನನ್ನು ನೀಡಿದ ಜನ್ಮಭೂಮಿಯಲ್ಲಿದ್ದೇನೆ. ಬಸವಣ್ಣ ತಿಳಿಸಿದ ಮಾರ್ಗದಲ್ಲಿ ನಿಮ್ಮ ಸೇವಕ ಕೆಲಸ ಮಾಡುತ್ತಿದ್ದಾನೆ. ದೇಶ ಇಂದು ಏನೇ ಆಭಿವೃದ್ಧಿ ಕಂಡಿದ್ದರೂ ಎಲ್ಲದರ ಹಿಂದೆ ಜನತೆಯ ಆಶೀರ್ವಾದವಿದೆ. ಜಗತ್ತಿನ ಅತಿ ದೊಡ್ಡ ಆರೋಗ್ಯ ಯೋಜನೆ ನಮ್ಮ ದೇಶದಲ್ಲಿದೆ. ಆಯುಷ್ಮಾನ್ ಭಾರತ್ ಯೋಜನೆಯ ಮೂಲಕ ಬಡ ಮತ್ತು ಸಾಮಾನ್ಯ ವರ್ಗದಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ಸಿಗುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಗಡಿ ದಾಟಿ ಶತ್ರುಗಳನ್ನು ನಾಶ ಮಾಡಿದೆ. ಈ ಎಲ್ಲ ಕೆಲಸಗಳು ನಡೆಯಲು ಕೇವಲ ಸ್ಪಷ್ಟ ಪ್ರಾಮಾಣಿಕತೆಯಿಂದ ಸಾಧ್ಯವಾಗಿದೆ ಎಂದರು.

    ಬಾಗಲಕೋಟೆ ಇಳಕಲ್ ಸೀರೆಯ ನೇಕಾರರಿಗೆ ಪಿಂಚಣಿ ಸಿಗುವಂತೆ ಯೋಜನೆಗಳನ್ನು ರೂಪಿಸಲಾಗುವುದು. ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸೂಕ್ತ ಬೆಲೆ ಸಿಗಲಿದೆ. ಆಲಮಟ್ಟಿ ಡ್ಯಾಂ ಹೂಳು ತೆಗೆಯಲು ಅನುದಾನ ಮತ್ತು ಎತ್ತರವನ್ನು ಹೆಚ್ಚಿಸಲಾಗುವುದು ಎಂದು ಈ ವೇಳೆ ಮೋದಿ ಭರವಸೆ ನೀಡಿದರು.

  • ಮತಗಟ್ಟೆಯಲ್ಲಿ ಇಬ್ಬರು ಸಾವು

    ಮತಗಟ್ಟೆಯಲ್ಲಿ ಇಬ್ಬರು ಸಾವು

    ಚೆನ್ನೈ: ಮತ ಚಲಾವಣೆಗೆ ಆಗಮಿಸಿದ್ದ ಇಬ್ಬರು ಮತದಾರರು ಮತಗಟ್ಟೆಯಲ್ಲಿ ಸಾವನ್ನಪ್ಪಿದ್ದಾರೆ. ಈರೋಡ್ ಮತ್ತು ಸೇಲಂ ಲೋಕಸಭಾ ಕ್ಷೇತ್ರಗಳಲ್ಲಿ ಈ ಘಟನೆ ನಡೆದಿದೆ.

    ಮೃತರನ್ನು ಮುರುಗೇಸನ್ (60) ಮತ್ತು ಕೃಷ್ಣನ್ (75) ಎಂದು ಗುರುತಿಸಲಾಗಿದೆ. ಈರೋಡ್ ಲೋಕಸಭಾ ಕ್ಷೇತ್ರದ ಶಿವಗಿರಿ ಮತಗಟ್ಟೆಯಲ್ಲಿ ಮುರುಗೇಸನ್, ಸೇಲಂ ಲೋಕಸಭಾ ಕ್ಷೇತ್ರದ ಒಮಲೂರು ಮತಗಟ್ಟೆಯಲ್ಲಿ ಕೃಷ್ಣನ್ ಮೃತಪಟ್ಟಿದ್ದಾರೆ.

    ಶಿವಗಿರಿಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ನೂರಕ್ಕೂ ಅಧಿಕ ಜನರು ಸರತಿ ಸಾಲಿನಲ್ಲಿ ನಿಂತಿದ್ದರು. ವಯೋಸಹಜವಾಗಿ ಬಿಸಿಲಿನಲ್ಲಿ ನಿಂತಿದ್ದ ಮುರುಗೇಸನ್ ಸುಸ್ತಾದಂತೆ ಕಂಡು ಬಂದಿದ್ದಾರೆ. ಸ್ಥಳದಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ, ಕೂಡಲೇ ಇರೋಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮುರುಗೇಸನ್ ಅವರನ್ನು ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆಂದು ಖಚಿತ ಪಡಿಸಿದ್ದಾರೆ.

    ಈ ಸಂಬಂಧ ಶಿವಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ. ಮತ ಚಲಾಯಿಸಿ ಹೊರ ಬಂದ ಕೃಷ್ಣನ್ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ.

  • ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸುತ್ತೆ – ತೇಜಸ್ವಿನಿ ಅನಂತ್‍ಕುಮಾರ್

    ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು ಬದಲಾಯಿಸುತ್ತೆ – ತೇಜಸ್ವಿನಿ ಅನಂತ್‍ಕುಮಾರ್

    ಬೆಂಗಳೂರು: ನಿಮ್ಮ ಒಂದು ಮತ ದೇಶದ ಭವಿಷ್ಯವನ್ನೇ ಬದಲಾವಣೆ ಮಾಡುತ್ತಿದೆ. ಹೀಗಾಗಿ ತಪ್ಪದೇ ಎಲ್ಲರೂ ಮತದಾನ ಮಾಡಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್ ಕುಮಾರ್ ಹೇಳಿದ್ದಾರೆ.

    ನಗರದ ಬಸವನಗುಡಿಯಲ್ಲಿರುವ ವಾಸವಿ ವಿದ್ಯಾನಿಕೇತನಕ್ಕೆ ಆಗಮಿಸಿ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ತಾನು ಹಾಗೂ ಕುಟುಂಬದ ಸದಸ್ಯರೆಲ್ಲರೂ ಅನಂತ್ ಕುಮಾರ್ ಜೊತೆಯೇ ಬಂದು ಮತದಾನ ಮಾಡುತ್ತಿದ್ದೆವು. ಆ ಒಂದು ಸಂದರ್ಭ ಇದೀಗ ನನಗೆ ನೆನಪಾಗುತ್ತಿದೆ ಎಂದು ತನ್ನ ಹಳೆಯ ನೆನಪನ್ನು ಮೆಲುಕು ಹಾಕಿಕೊಂಡರು.

    ದೇಶದ ಸುಭದ್ರತೆ ಹಾಗೂ ಅಭಿವೃದ್ಧಿಗೆ ಇಂದು ನಾವು ಮತ ಹಾಕಲೇ ಬೇಕು. ದೇಶಕ್ಕಾಗಿ ಕೆಲಸ ಮಾಡಿರುವಂತಹ ಹಿರಿಯರ ಕುಟುಂಬದ ಸದಸ್ಯರಾಗಿ ದೇಶದ ಹಿತಕ್ಕಾಗಿಯೇ ಇಂದು ನಾವು ಮತ ನೀಡಿದ್ದೇವೆ ಎಂದರು.

    ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ವಿಶೇಷವಾಗಿ ಯುವಕ, ಯುವತಿ ಹಾಗೂ ಹಿರಿಯರ ಜವಾಬ್ದಾರಿಯಾಗಿದೆ. ನಮಗೆ ಇದು 5 ವರ್ಷಕ್ಕೊಮ್ಮೆ ಸಿಗುವ ಅವಕಾಶವಾಗಿದೆ. ನಮ್ಮ ಒಂದು ಮತಕ್ಕೆ ದೇಶದ ಭವಿಷ್ಯವನ್ನೇ ಬದಲಾವಣೆ ಮಾಡುವ ಶಕ್ತಿಯಿದೆ. ಆ ದೃಷ್ಟಿಯಿಂದ ಮತದಾನ ಮಾಡೋದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಇದನ್ನು ಸರಿಯಾದ ರೀತಿಯಲ್ಲಿ ಎಲ್ಲರೂ ಬಳಸಿಕೊಳ್ಳಬೇಕು ಎಂದು ತಿಳಿಸಿದ್ರು.

  • ನನ್ನ ಹಕ್ಕು ಚಲಾಯಿಸಿದ್ದೇನೆ, ನೀವೂ ಮತದಾನ ಮಾಡಿ- ಗಣೇಶ್

    ನನ್ನ ಹಕ್ಕು ಚಲಾಯಿಸಿದ್ದೇನೆ, ನೀವೂ ಮತದಾನ ಮಾಡಿ- ಗಣೇಶ್

    ಬೆಂಗಳೂರು: ನನ್ನ ಹಕ್ಕನ್ನು ನಾನು ಚಲಾಯಿಸಿದ್ದೇನೆ. ದಯವಿಟ್ಟು ನೀವೂ ಕೂಡ ನಿಮ್ಮ ಹಕ್ಕು ಚಲಾಯಿಸಿ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಮನವಿ ಮಾಡಿಕೊಂಡಿದ್ದಾರೆ.

    ರಾಜರಾಜೇಶ್ವರಿ ನಗರದ ಮೌಂಟ್ ಕಾರ್ಮೆಲ್ ಶಾಲೆಯ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟು ಮಾಡೋದು ನಿಮ್ಮ ಹಕ್ಕಾಗಿದೆ. ಹೀಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕಾಗಿ ಕೇಳಿಕೊಂಡರು.

    ನೀವೆಲ್ಲರೂ ನಿಮ್ಮ ಹಕ್ಕನ್ನು ಚಲಾಯಿಸಿ. ಯಾಕೆಂದರೆ ವೋಟ್ ಮಾಡದೇ ಇದ್ದರೆ ಮುಂದೆ ಸೌಲಭ್ಯ ಕೇಳೋದಕ್ಕೆ ನಿಮಗೆ ಅಧಿಕಾರ ಇರುವುದಿಲ್ಲ. ಮೋಟ್ ಮಾಡಿದ್ರೆ ಸರ್ಕಾರದಿಂದ ಏನು ಸೌಲಭ್ಯ ಸಿಗುತ್ತದೋ ಅದನ್ನ ನಾವು ಕೇಳಿ ಪಡೆದುಕೊಳ್ಳುವ ಸ್ವಾತಂತ್ರ್ಯ ನಿಮ್ಮದಾಗುತ್ತದೆ ಎಂದು ಸಲಹೆ ನೀಡಿದರು.

    ಈ ಬಾರಿ ಮತಗಟ್ಟೆಯಲ್ಲಿ ನೆರೆದ ಜನಸಂಖ್ಯೆ ನೋಡಿ ನಿಜಕ್ಕೂ ತುಂಬಾ ಖುಷಿಯಾಯ್ತು. ಜನ ತಮ್ಮ ಮತ ಹಾಕಲು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಯಾರೂ ತಮ್ಮ ಹಕ್ಕನ್ನು ಮಿಸ್ ಮಾಡಿಕೊಳ್ಳಬೇಡಿ. ಪ್ರತಿಯೊಬ್ಬರೂ ವೋಟ್ ಮಾಡಿ ಎಂದು ಮನವಿ ಮಾಡಿಕೊಂಡರು.

  • ಮತದಾನ ಮಾಡದೇ ಹೋದರೆ ಕರ್ತವ್ಯ ಭ್ರಷ್ಟರಾಗುತ್ತೇವೆ- ಪೇಜಾವರ ಶ್ರೀ

    ಮತದಾನ ಮಾಡದೇ ಹೋದರೆ ಕರ್ತವ್ಯ ಭ್ರಷ್ಟರಾಗುತ್ತೇವೆ- ಪೇಜಾವರ ಶ್ರೀ

    ಉಡುಪಿ: ಈಗಾಗಲೇ ಎಲ್ಲರೂ ಮತದಾನ ಮಾಡುವಂತೆ ಕರೆ ಕೊಟ್ಟಿದ್ದೇನೆ. ಮತದಾನ ಮಾಡದೇ ಹೋದರೆ ನಾವು ಕರ್ತವ್ಯ ಭ್ರಷ್ಟರು ಆಗುತ್ತೇವೆ. ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಟೀಕಿಸುವ ಹಕ್ಕು ಕಳೆದುಕೊಳ್ಳುತ್ತೇವೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

    ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಸರ್ಕಾರದ ಬಗ್ಗೆಯೂ ಹೊಗಳಿಕೆ ತೆಗಳುವಿಕೆ ಮಾಡುವುದಿಲ್ಲ. ಎಲ್ಲರೂ ವಿಚಾರ ಮಾಡಿ ಮತದಾನ ಮಾಡಬೇಕು ಎಂದು ಹೇಳಿದರು.

    ಭಾರತ ರಾಷ್ಟ್ರದ ಪ್ರಜೆ ನಾನು. ಹೆಮ್ಮೆಯಿಂದ ಮತ ಚಲಾಯಿಸಿದ್ದೇನೆ. ದೇಶದಲ್ಲಿ ಉತ್ತಮ ಸರ್ಕಾರ ಬರಬೇಕು. ಪ್ರತಿಯೊಬ್ಬರು ಮತದಾನ ಮಾಡಬೇಕು. ಚುನಾವಣೆ ಸಂದರ್ಭ ವೈಯಕ್ತಿಕ ನಿಂದನೆ ಬೇಡ. ಇನ್ನಾದರೂ ವೈಯಕ್ತಿಕ ನಿಂದನೆ ಮಾಡುವುದು ಬಿಡಿ. ವೈಯಕ್ತಿಕ ನಿಂದನೆಯೆಲ್ಲ ನಿಷ್ಪ್ರಯೋಜಕ ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ಪ್ರತಿಯೊಬ್ಬರೂ ಆತ್ಮಸಾಕ್ಷಿಯಾಗಿ ಮತದಾನ ಮಾಡಿ – ಸಿದ್ದಗಂಗಾ ಶ್ರೀ

    ಚುನಾವಣಾ ಪ್ರಚಾರ ಅತ್ಯಂತ ಕೆಳಮಟ್ಟಕ್ಕೆ ಬಂದಿದೆ. ವೈಯಕ್ತಿಕ ನಿಂದನೆ ಮಾಡಿದರೆ ಎದುರಾಳಿಗೆ ಸಿಂಪತಿ ಸಿಗುತ್ತದೆ. ದೇಶದಲ್ಲಿ ಸಭ್ಯತೆಯಿಂದ ಚುನಾವಣೆ ನಡೆಯಬೇಕು. ಬಲಿಷ್ಠವಾದ, ಅಭಿವೃದ್ಧಿ ಶೀಲ ಭಾರತ ಆಗಬೇಕು. ಕೃಷಿ, ಉದ್ಯಮ, ನಿರುದ್ಯೋಗ ಸಮಸ್ಯೆ ಪರಿಹಾರ ಆಗಬೇಕು. ಅದಕ್ಕಾಗಿ ನೀವು ತಪ್ಪದೇ ನಿಮ್ಮ ಹಕ್ಕನ್ನು ಚಲಾಯಿಸಿ ಎಂದು ತಿಳಿಸಿದ್ದಾರೆ.

  • ಮತ ಚಲಾಯಿಸಿ ಬರುವಾಗ ಮೋರಿಗೆ ಬಿದ್ದ ಮಹಿಳೆ!

    ಮತ ಚಲಾಯಿಸಿ ಬರುವಾಗ ಮೋರಿಗೆ ಬಿದ್ದ ಮಹಿಳೆ!

    ಬೆಂಗಳೂರು: ಇಂದು ರಾಜ್ಯಾದ್ಯಂತ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಹೀಗೆ ಮತದಾನ ಮಾಡು ಹಿಂದಿರುಗುತ್ತಿದ್ದಾಗ ಮಹಿಳೆಯೊಬ್ಬರು ಮೋರಿಗೆ ಬಿದ್ದು ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.

    ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಚಂದ್ರಾಲೇಔಟ್ ಸೆಂಟ್ ಫ್ಲವರ್ ಇಂಗ್ಲೀಷ್ ಸ್ಕೂಲ್ ನಲ್ಲಿ ಈ ಅವಘಡ ನಡೆದಿದೆ. ಮಹಿಳೆ ತಮ್ಮ ಹಕ್ಕು ಚಲಾಯಿಸಿ ಮತಗಟ್ಟೆ ಬಳಿ ಇರುವ ಮೋರಿ ಸಿಮೆಂಟ್ ಚಪ್ಪಡಿ ಮೇಲೆ ನಿಂತಿದ್ದರು. ಈ ವೇಳೆ ಚರಂಡಿ ಮೇಲಿನ ಹೊದಿಕೆ ಏಕಾಏಕಿ ಕುಸಿದಿದೆ. ಪರಿಣಾಮ ನಿಂತಿದ್ದ ಮಹಿಳೆ ಮೋರಿಗೆ ಬಿದ್ದಿದ್ದಾರೆ.

    ಮಹಿಳೆಯನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ಮೋರಿಯಿಂದ ಮೇಲೆತ್ತಿ ಹತ್ತಿರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

  • ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    ಸದೃಢ ಭಾರತಕ್ಕಾಗಿ ಸರತಿಸಾಲಿನಲ್ಲಿ ನಿಂತು ನವವಧುಗಳಿಂದ ಮತದಾನ

    – ವಾಮಂಜೂರಿನಲ್ಲಿ ಕೆಲಕಾಲ ಕೈ ಕೊಟ್ಟ ಇವಿಎಂ
    – ವೃದ್ಧನಿಗೆ ಕಾಂಗ್ರೆಸ್ ಅಭ್ಯರ್ಥಿ ಸಹಾಯ

    ಮಂಗಳೂರು: ಸದೃಢ ಭಾರತಕ್ಕಾಗಿ ನವವಧುಗಳು ಸರತಿ ಸಾಲಿನಲ್ಲಿಯೇ ನಿಂತು ತನ್ನ ಹಕ್ಕು ಚಲಾಯಿಸಿರುವ ಘಟನೆ ದಕ್ಷಿಣ ಕ್ನನಡ ಜಿಲ್ಲೆಯಲ್ಲಿ ನಡೆದಿದೆ.

    ಹೌದು, ಬಂಟ್ವಾಳ ವಿಧಾನಸಭಾ ಕ್ಷೇತ್ರ ವಿಟ್ಲದ ಕುಡ್ಪಲ್ತಡ್ಕದಲ್ಲಿ ವಧು ತನ್ನ ಮದುವೆಗೂ ಮುಂಚೆಯೇ ಮತದಾನ ಮಾಡಿದ್ದಾರೆ. ಆನೆಯಾಲಗುತ್ತು ಶ್ರುತಿ ಶೆಟ್ಟಿ ಎಂಬವರೇ ಈ ರೀತಿ ಮತದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

    ಇತ್ತ ಬೆಳ್ತಂಗಡಿಯಲ್ಲೂ ಮೂವರು ವಧುಗಳು ಒಂದೇ ಮತಗಟ್ಟೆಯಲ್ಲಿ ತಮ್ಮ ಮತವನ್ನು ಚಲಾಯಿಸಿದ್ದಾರೆ. ತಾಲೂಕಿನ ತಣ್ಣೀರುಪಂಥ ಬೂತ್ ನಲ್ಲಿ ಮದುವೆ ಶೃಂಗಾರದಲ್ಲೇ ಬಂದ ಅಕ್ಷತಾ, ಅಶ್ವಿನಿ ಹಾಗೂ ಹೇಮಲತಾ ಮದುವೆ ಮಂಟಪಕ್ಕೆ ತೆರಳುವ ಮುನ್ನವೇ ತಮ್ಮ ಅಮೂಲ್ಯ ಮತವನ್ನು ಹಾಕಿದ್ದಾರೆ.

    ಕೈಕೊಟ್ಟ ಇವಿಎಂ:
    ಮಂಗಳೂರಿನಲ್ಲಿ ಇವಿಎಂ ಮೆಷಿನ್ ಕೆಲಕಾಲ ಕೈಕೊಟ್ಟಿತ್ತು. ವಾಮಂಜೂರು ತಿರುವೈಲ್ ವಾರ್ಡ್‍ನ ಮತಗಟ್ಟೆ 150ರಲ್ಲಿ ಈ ಘಟನೆ ನಡೆದಿದೆ. ಕೈಕೊಟ್ಟ ಇವಿಎಂನಿಂದಾಗಿ ಮತದಾರರು ಅಸಮಾಧಾನಗೊಂಡು ವಾಪಾಸ್ ಆಗಿದ್ದರು. ಹೀಗಾಗಿ ಒಂದು ಗಂಟೆ ತಡವಾಗಿ ಮತದಾನ ಆರಂಭಗೊಂಡಿದ್ದು, ವಾಪಸ್ಸಾದವರು ಸೇರಿದಂತೆ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

    ವೃದ್ಧನಿಗೆ ಮಿಥುನ್ ರೈ ಸಹಾಯ:
    ಮಂಗಳೂರು ಬಲ್ಮಠ ಸರ್ಕಾರಿ ಪ್ರೌಢ ಶಾಲೆ ಮತಗಟ್ಟೆಯಲ್ಲಿ ಅಶಕ್ತರಾಗಿದ್ದ 83 ವರ್ಷದ ರಮೇಶ್ ರಾವ್‍ಗೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಅವರು ಸಹಾಯ ಮಾಡಿದ್ದಾರೆ. ಕಾರಿನಿಂದ ಎತ್ತಿ ಇಳಿಸಿ ನಂತರವ್ಹೀಲ್ ಚೇರ್ ನಲ್ಲಿ ರೈ ಕೂರಿಸಿದ್ದಾರೆ. ಮಿಥುನ್ ರೈ ನಂತರ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಈ ವೇಳೆ ಮಿಥುನ್, ಹೆಗಲಿಗೆ ಕೇಸರಿ ಮತ್ತು ಹಳದಿ ಶಾಲು ಹಾಕ್ಕೊಂಡು ಬಂದಿದ್ದರು.

    ಹಿರಿಯ ಕಾಂಗ್ರೆಸ್ಸಿಗ ಜನಾರ್ದನ ಪೂಜಾರಿ ಕೂಡ ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮತದಾನ ಮಾಡಿದ್ರು. ಬಂಟ್ವಾಳ ತಾಲೂಕಿನ ಭಂಡಾರಿಬೆಟ್ಟು ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದ ಇವರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು.

  • ಪ್ರತಿಯೊಬ್ಬರೂ ಆತ್ಮಸಾಕ್ಷಿಯಾಗಿ ಮತದಾನ ಮಾಡಿ – ಸಿದ್ದಗಂಗಾ ಶ್ರೀ

    ಪ್ರತಿಯೊಬ್ಬರೂ ಆತ್ಮಸಾಕ್ಷಿಯಾಗಿ ಮತದಾನ ಮಾಡಿ – ಸಿದ್ದಗಂಗಾ ಶ್ರೀ

    ತುಮಕೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರು ಆತ್ಮಸಾಕ್ಷಿಯಾಗಿ ಮತದಾನ ಮಾಡಿ ಎಂದು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿಯವರು ಕರೆ ಕೊಟ್ಟಿದ್ದಾರೆ.

    ತುಮಕೂರಿನ ಸಿದ್ದಗಂಗಾ ಮಠದ 116 ನೇ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಸಿದ್ದಲಿಂಗ ಮಹಾಸ್ವಾಮಿಗಳು ಮತಗಟ್ಟೆಗೆ ಬಂದು ಮತದಾನ ಚಲಾವಣೆ ಮಾಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರು ತಮ್ಮ ಆತ್ಮಸಾಕ್ಷಿಯಾಗಿ ಮತದಾನ ಮಾಡಿ ಎಂದರು.

    ರಾಜ್ಯದ 14 ಕ್ಷೇತ್ರಗಳಲ್ಲಿ ಇಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳಿಗೆ ಮತಹಾಕುವ ಅಧಿಕಾರ ಇದೆ. ನಮ್ಮ ದೇಶದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಎಲ್ಲಾ ದೇಶಗಳು ಕೂಡ ಈ ಪ್ರಜಾಪ್ರಭುತ್ವವನ್ನು ಅನುಸರಿಸುವ ರೀತಿಯಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂದು ಹೇಳಿದ್ರು.

    ಇಲ್ಲಿ ಪ್ರತಿಯೊಬ್ಬರಿಗೂ ಕೂಡ ನಮ್ಮ ಸಂವಿಧಾನ ಹಕ್ಕು ಮತ್ತು ಕರ್ತವ್ಯಗಳನ್ನು ಕೊಟ್ಟಿದೆ. ನಾವೆಲ್ಲರೂ ಮೊದಲು ಪ್ರಜೆಗಳಾಗಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು. ಈ ಮತದಾನ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಆತ್ಮಸಾಕ್ಷಿಯಾಗಿ, ಯಾರೇ ಇಚ್ಛೆ ಇರಲಿ, ಯಾವುದೇ ಪಕ್ಷ ಇರಲಿ ಅವರಿಗೆ ಮತ ಹಾಕಬೇಕಾಗಿರುವುದು ಪ್ರತಿಯೊಬ್ಬ ವ್ಯಕ್ತಿಯ ಆದ್ಯ ಕರ್ತವ್ಯವಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕಾಗಿದೆ. ಅಲ್ಲದೆ ಈ ವ್ಯವಸ್ಥೆಯಲ್ಲಿ ನಾವು ಪಾಲ್ಗೊಳ್ಳಬೇಕಾಗಿದೆ ಎಂದು ಮನವಿ ಮಾಡಿದರು.

    ಪ್ರತಿಯೊಬ್ಬರೂ ಕೂಡ ಮತದಾನ ಮಾಡುವ ಮೂಲಕ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರಜೆಗಳಾಗಿ ನಮ್ಮ ಕರ್ತವ್ಯವನ್ನು ಚೆನ್ನಾಗಿ ನಿರ್ವಹಿಸಬೇಕು ಎಂಬುದಾಗಿ ಇದೇ ವೇಳೆ ಮತದಾರರಲ್ಲಿ ಮನವಿ ಮಾಡಿಕೊಂಡ ಅವರು, ನಾನು ಕೂಡ ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ ಎಂದು ತಿಳಿಸಿದರು.

    ನಮ್ಮ ದೇಶದಲ್ಲಿ ನೂರಕ್ಕೆ ನೂರು ಮತದಾನ ಆಗದೇ ಇರುವುದು ನಮ್ಮ ದೌರ್ಭಾಗ್ಯ. ಯಾಕಂದ್ರೆ ನಮ್ಮ ದೇಶದಲ್ಲಿ ಮತದಾನ ಕಡ್ಡಾಯ ಮಾಡದೇ ಇರುವುದೇ ಇದಕ್ಕೆ ಕಾರಣವಾಗಿದೆ. ಆದರೂ ಕೂಡ ಜನತೆ ಇದನ್ನು ಅರ್ಥ ಮಾಡಿಕೊಂಡು ತಮ್ಮ ಜವಾಬ್ದಾರಿ ಎಂದು ತಿಳಿದು ಮತ ಚಲಾಯಿಸಲೇ ಬೇಕು. ಈ ಮೂಲಕ ನಮ್ಮದೇ ಆದ ಭದ್ರ ಸರ್ಕಾರವನ್ನು ರಚನೆ ಮಾಡಲು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಇದೊಂದು ಅವಕಾಶ. ಹೀಗಾಗಿ ಪ್ರಜೆಗಳು ತಮಗೆ ಒಪ್ಪಿಗೆ ಆಗುವಂತಹ ಓರ್ವ ಪ್ರತಿನಿಧಿಯನ್ನು ಆರಿಸಿ ಎಂದರು.