Tag: ಲೋಕಸಭಾ ಚುನಾವಣೆ 2014

  • ಸ್ವತಂತ್ರ ಭಾರತದ 2ನೇ ಲೋಕಸಭಾ ಚುನಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

    ಸ್ವತಂತ್ರ ಭಾರತದ 2ನೇ ಲೋಕಸಭಾ ಚುನಾವಣೆ ಬಗ್ಗೆ ನಿಮಗೆಷ್ಟು ಗೊತ್ತು?

    – ದೇಶದ ಗಮನ ಸೆಳೆದಿದ್ದ ಕರ್ನಾಟಕದ ಪಕ್ಷೇತರ ಅಭ್ಯರ್ಥಿ
    – ಸ್ವತಂತ್ರ ಅಭ್ಯರ್ಥಿಗೆ ಬಿದ್ದಿರಲಿಲ್ಲ ಒಂದೇ ಒಂದು ವೋಟ್‌!

    – ಪಬ್ಲಿಕ್‌ ಟಿವಿ ವಿಶೇಷ

    ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರದ ಆರಂಭಿಕ ವರ್ಷಗಳಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪ್ರಬಲವಾಗಿತ್ತು. ಆಗ ಚುನಾವಣೆಗಳಲ್ಲೂ ದೇಶದೆಲ್ಲೆಡೆ ಕಾಂಗ್ರೆಸ್‌ನದ್ದೇ ಪಾರುಪತ್ಯ. ಹಲವು ದಶಕಗಳ ಕಾಲ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿತು. ಲೋಕಸಭಾ ಚುನಾವಣೆಯ ಇತಿಹಾಸ ಗಮನಿಸಿದರೆ ಕಾಂಗ್ರೆಸ್‌ನ ಪ್ರಾಬಲ್ಯ ಎಷ್ಟರ ಮಟ್ಟಿಗೆ ಇತ್ತು ಎಂಬುದು ತಿಳಿಯುತ್ತದೆ.

    ಸ್ವಾತಂತ್ರ್ಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಬಗ್ಗೆ ನೀವು ಈಗಾಗಲೇ ಓದಿದ್ದೀರಿ. ನಂತರ 1957 ರಲ್ಲಿ ಎರಡನೇ ಸಾರ್ವತ್ರಿಕ ಚುನಾವಣೆ (1957 Lok Sabha Election) ನಡೆಯಿತು. ಆ ಚುನಾವಣೆಯಲ್ಲಾದ ರಾಜಕೀಯ ಬೆಳವಣಿಗೆ ಏನು? ಫಲಿತಾಂಶ ಏನಾಗಿತ್ತು ಎಂಬುದನ್ನು ‘ಪಬ್ಲಿಕ್‌ ಟಿವಿ’ ನಿಮಗೆ ತಿಳಿಸಿಕೊಡುತ್ತದೆ. ಇದನ್ನೂ ಓದಿ: ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?

    15 ಪಕ್ಷಗಳು ಸ್ಪರ್ಧೆ
    ದೇಶದ ಎರಡನೇ ಲೋಕಸಭಾ ಚುನಾವಣೆಯು 1957 ರ ಫೆ.24 ರಿಂದ ಮಾ.14 ರ ವರೆಗೆ ನಡೆದಿತ್ತು. ಸುಮಾರು 15 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 494 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬಹುಮತಕ್ಕೆ 248 ಸೀಟ್‌ಗಳು ಬೇಕಾಗಿದ್ದವು. ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್‌ ಸೇನ್‌ ಅವರು ಚುನಾವಣೆ ಮೇಲ್ವಿಚಾರಣೆ ಮಾಡಿದರು.

     

    ಹಕ್ಕು ಚಲಾಯಿಸಿದವರೆಷ್ಟು?
    1957 ರ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ 26,52,41,358 ಮಂದಿ ಅರ್ಹತೆ ಪಡೆದಿದ್ದರು. 18,20,75,041 ಜನರು ಮತದಾನ ಮಾಡಿದರು. ಆ ಸಂದರ್ಭದಲ್ಲಿ 68.6% ಮತ ಚಲಾವಣೆಯಾಗಿತ್ತು.

    371 ಸ್ಥಾನ ಗೆದ್ದ ಕಾಂಗ್ರೆಸ್
    1957 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಅಂತರದಿಂದ ಗೆದ್ದಿತ್ತು. 371 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಿತ್ತು. ಉಳಿದಂತೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 19, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 27, ಭಾರತೀಯ ಜನ ಸಂಘ 4, ಪರಿಶಿಷ್ಟ ಜಾತಿ ಫೆಡರಲ್ 6, ಆಲ್ ಇಂಡಿಯಾ ಜನತಂತ್ರ ಪರಿಷದ್ 7, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ 2, ಹಿಂದೂ ಮಹಾಸಭಾ 1, ಪಿಡಬ್ಲ್ಯೂಪಿಐ 4, ಜಾರ್ಖಂಡ್ ಪಾರ್ಟಿ 6, ಫಾರ್ವರ್ಡ್ ಬ್ಲಾಕ್ (ಮಾರ್ಕ್ಸಿಸ್ಟ್) 2, ಸಿಎನ್‌ಎಸ್‌ಪಿಜೆಪಿ 3 ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸ್ಥಾನಗಳನ್ನು ಗೆದ್ದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ

    ಈ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸಲ ಭಾರಿ ಅಂತರದಿಂದ ಜಯ ಸಾಧಿಸಿತ್ತು. ಸಮಾಜವಾದಿ ಪಕ್ಷ ಮತ್ತು ಕೆಎಂಪಿಪಿಯೊಂದಿಗೆ ವಿಲೀನಗೊಂಡ ನಂತರ ಹೊಸದಾಗಿ ರೂಪುಗೊಂಡ ಪ್ರಜಾ ಸೋಷಿಯಲಿಸ್ಟ್ ಪಕ್ಷವು (ಪಿಎಸ್‌ಪಿ) 19 ಸ್ಥಾನಗಳನ್ನು ಪಡೆಯಿತು. ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾವು (ಸಿಪಿಐ) 27 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು. ಜನಸಂಘ ಮತದಾನ ಪ್ರಮಾಣವನ್ನು ದ್ವಿಗುಣಗೊಳಿಸಿಕೊಂಡರೂ, ಪಕ್ಷವು ಹೆಚ್ಚು ಸ್ಥಾನಗಳನ್ನು ಗಳಿಸಲಿಲ್ಲ. ಅಂಬೇಡ್ಕರ್ ಅವರ ಅಖಿಲ ಭಾರತದ ಪರಿಶಿಷ್ಟ ಜಾತಿ ಒಕ್ಕೂಟ (ಎಸ್‌ಸಿಎಫ್) ಆರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು.

    ಮತದಾನದ ಪ್ರಮಾಣ ಎಷ್ಟಿತ್ತು?
    ಕಾಂಗ್ರೆಸ್ ಮತದಾನದ ಪ್ರಮಾಣ 47.8% ಇತ್ತು. ಉಳಿದಂತೆ ಇತರೆ 25.2%, ಪಿಎಸ್‌ಪಿ 10.4%, ಸಿಪಿಐ 8.9%, ಬಿಜೆಎಸ್ 6%, ಎಸ್‌ಸಿಎಫ್ 1.7% ಮತವನ್ನು ಪಡೆದುಕೊಂಡಿದ್ದವು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್- ಕಾಂಗ್ರೆಸ್‌ನಿಂದ ಮಿಡ್‍ನೈಟ್ ಆಪರೇಷನ್

    ನೆಹರೂ ನೇತೃತ್ವದಲ್ಲಿ ‘ಕೈ’ಗೆ ಮತ್ತೊಂದು ಗೆಲುವು
    ಜವಾಹರಲಾಲ್ ನೆಹರೂ ಅವರ ನಾಯಕತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 494 ಸ್ಥಾನಗಳಲ್ಲಿ 371 ಸ್ಥಾನಗಳನ್ನು ಪಡೆದು ಎರಡನೇ ಅವಧಿಗೆ ಅಧಿಕಾರ ಏರಿತು. ಮೊದಲ ಚುನಾವಣೆಗಿಂತ ಏಳು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದಿತ್ತು. ಮತ ಪ್ರಮಾಣ 45% ರಿಂದ 48% ಕ್ಕೆ ಏರಿತು. ಆ ಸಂದರ್ಭದಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದ್ದು ಕಮ್ಯುನಿಸ್ಟ್ ಪಕ್ಷ. ಈ ಪಕ್ಷ ಗೆದ್ದಿದ್ದು 27 ಸ್ಥಾನಗಳನ್ನು.

    ಪಕ್ಷೇತರ ಅಭ್ಯರ್ಥಿಗಳ ದಾಖಲೆ
    ಪಕ್ಷೇತರರಾಗಿ ಸ್ಪರ್ಧಿಸಿದ್ದವರ ಪೈಕಿ 42 ಅಭ್ಯರ್ಥಿಗಳು ಗೆದ್ದು ಪಾರ್ಲಿಮೆಂಟ್‌ ಪ್ರವೇಶಿಸಿದರು. 19% ವೋಟ್‌ ಶೇರ್‌ ಪಕ್ಷೇತರ ಅಭ್ಯರ್ಥಿಗಳ ಪಾಲಾಗಿತ್ತು. ಇದು ಭಾರತೀಯ ಸಾರ್ವತ್ರಿಕ ಚುನಾವಣೆಗಳಲ್ಲೇ ಅತ್ಯಧಿಕ ಎಂಬ ದಾಖಲೆ ಕೂಡ ಬರೆದಿದೆ. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 36 ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಅದು ಬಿಟ್ಟರೆ 1991 ರಲ್ಲಿ ಅತೀ ಕಡಿಮೆ ಅಂದರೆ ಒಬ್ಬರು ಸ್ವತಂತ್ರ ಅಭ್ಯರ್ಥಿ ಮಾತ್ರ ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದರು. ಇನ್ನು 2019 ರ ಚುನಾವಣೆಯಲ್ಲಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು.

    ಮೈನ್‌ಪುರಿ ಅಭ್ಯರ್ಥಿಗೆ ಸೊನ್ನೆ (0) ವೋಟ್‌?
    ದೇಶದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದವು. ಮೈನ್‌ಪುರಿ ಕ್ಷೇತ್ರದ ಅಭ್ಯರ್ಥಿಯೊಬ್ಬರಿಗೆ ಆಗ ಒಬ್ಬರೇ ಒಬ್ಬ ಮತದಾರ ಕೂಡ ವೋಟು ಹಾಕಿರಲಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಂಕರ್‌ ಲಾಲ್‌ ಎಂಬವರಿಗೆ ಶೂನ್ಯ ವೋಟಿನ ಹೊಡೆತ ಬಿದ್ದಿತ್ತು. ತಮ್ಮ ಪರವಾಗಿ ತಾವೇ ಚಲಾಯಿಸಿಕೊಂಡಿದ್ದ ಒಂದೇ ಒಂದು ವೋಟ್‌ ಕೂಡ ಅಮಾನ್ಯವಾಗಿತ್ತು. ಹೀಗಾಗಿ ಸೊನ್ನೆ ವೋಟ್‌ ಪಡೆದ ಕೆಟ್ಟ ದಾಖಲೆ ಬರೆದರು. ಇದನ್ನೂ ಓದಿ: ಬಾಲಕಿಯಿಂದ ವಿನೂತನವಾಗಿ ಮತದಾನ ಜಾಗೃತಿ- ಚುನಾವಣಾ ಆಯೋಗ ಪ್ರಶಂಸೆ

    ಮೈಸೂರು ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟ್?
    ಕರ್ನಾಟಕ ಏಕೀಕರಣವಾಗಿದ್ದು 1956 ರಲ್ಲಿ. ಆದರೆ ಕರ್ನಾಟಕ ಎಂದು ನಾಮಕರಣವಾಗಿದ್ದು 1974 ರಲ್ಲಿ. ಈ ಹಿನ್ನೆಲೆಯಲ್ಲಿ 1957 ರ ಸಾರ್ವತ್ರಿಕ ಚುನಾವಣೆಯಲ್ಲೂ ಮೈಸೂರು ರಾಜ್ಯ ಎಂದೇ ಪರಿಗಣಿಸಲಾಗಿತ್ತು. ಮೈಸೂರು ರಾಜ್ಯದಲ್ಲಿ ಒಟ್ಟು 26 ಸ್ಥಾನಗಳ ಪೈಕಿ 23 ರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಉಳಿದಂತೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 1, ಪರಿಶಿಷ್ಟ ಜಾತಿ ಫೆಡರಲ್ 1 ಹಾಗೂ ಪಕ್ಷೇತರ 1 ಸ್ಥಾನ ಬಂದಿತ್ತು.

    ದೇಶದ ಗಮನ ಸೆಳೆದಿದ್ದ ಕರ್ನಾಟಕದ ಪಕ್ಷೇತರ ಅಭ್ಯರ್ಥಿ
    1957 ರಲ್ಲಿ ಅಂದಿನ ಮೈಸೂರು-ಕರ್ನಾಟಕದ ಬಿಜಾಪುರ ಉತ್ತರ ಲೋಕಸಭಾ ಕ್ಷೇತ್ರದಿಂದ (ಈಗಿನ ವಿಜಯಪುರ) ಮರಿಗಪ್ಪ ಸಿದ್ದಪ್ಪ ಸುಗಂಧಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿ ದಾಖಲೆ ಮಾಡಿದ್ದರು.

    ಪಕ್ಷೇತರ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಪರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನ ಸೆಳೆದಿತ್ತು. ಪಕ್ಷೇತರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಫರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನಸೆಳೆದಿತ್ತು. ಒಟ್ಟು 3,53,151 ಮತಗಳ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮುರಿಯಪ್ಪ ಸಿದ್ದಪ್ಪ ಸುಗಂಧಿ 88,209 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಜಾರಾಮ ಗಿರಿಧರಲಾಲ ದುಬೆ 77,223 ಮತಗಳನ್ನು ಪಡೆದಿದ್ದರು. ಅಂತಿಮವಾಗಿ ಪಕ್ಷೇತರ ಅಭ್ಯರ್ಥಿಯಾದ ಸುಗಂಧಿಯವರು 10,936 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ

    ಮುರಿಯಪ್ಪ ಸಿದ್ದಪ್ಪ ಸುಗಂಧಿ, ದಿನಕರ ದತ್ತಾತ್ರೇಯ ದೇಸಾಯಿ ಹಾಗೂ ಸುಮಲತಾ ಅಂಬರೀಶ್ ಅವರು ಕರ್ನಾಟಕ ರಾಜ್ಯದ ಲೋಕಸಭಾ ಚುನಾವಣಾ ಇತಿಹಾಸದಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸಂಸದರಾದ ದಾಖಲೆ ಬರೆದಿದ್ದಾರೆ.

  • 2014ರ ಲೋಕ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಕರ್ನಾಟಕದ ಅಭ್ಯರ್ಥಿಗಳು

    2014ರ ಲೋಕ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದ ಕರ್ನಾಟಕದ ಅಭ್ಯರ್ಥಿಗಳು

    2019ರ ಲೋಕಸಭಾ ಚುನಾವಣೆಗೆ ಕರ್ನಾಟಕದಲ್ಲಿ ಇದೇ ತಿಂಗಳ 18 ಮತ್ತು 23ರಂದು ಚುನಾವಣೆ ನಡೆಯಲಿದೆ. 2014ರಲ್ಲಿ ಕರ್ನಾಟಕದ ಲೋಕ ಅಖಾಡದಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ ಹತ್ತು ಅಭ್ಯರ್ಥಿಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    1. ಬಿ.ಎಸ್.ಯಡಿಯೂರಪ್ಪ: 2014 ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಬರೋಬ್ಬರಿ 6,06,216 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದರು. ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ್ ಭಂಡಾರಿ 2,42,911 ಮತ ಪಡೆದಿದ್ದರು. ಈ ಮೂಲಕ 3,63,305(ಶೇ.32.38) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    2. ಅನಂತ್ ಕುಮಾರ್: ಬೆಂಗಳೂರು ದಕ್ಷಿಣ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರು 6,33,816 ಮತಗಳನ್ನು ಪಡೆದಿದ್ದರು. ಇವರ ಎದುರಾಳಿ ಕಾಂಗ್ರೆಸ್ ಪಕ್ಷದ ನಂದನ್ ನಿಲೇಕಣಿ 4,05,241 ಮತ ಪಡೆದಿದ್ದರು. ಅನಂತ್ ಕುಮಾರ್ 2,28,515(ಶೇ.20.66) ಮತಗಳ ಅಂತರದಿಂದ ಅಭೂತಪೂರ್ವ ಗೆಲುವು ಪಡೆದಿದ್ದರು.

    3. ಡಿ.ವಿ.ಸದಾನಂದ ಗೌಡ:ಬೆಂಗಳೂರು ಉತ್ತರ ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಡಿ.ವಿ.ಸದಾನಂದ ಗೌಡ ಅವರು 7,18,326 ಮತಗಳನ್ನು ಪಡೆದು ಜಯ ಪಡೆದರೆ, ಕಾಂಗ್ರೆಸ್ ಪಕ್ಷದ ಸಿ.ನಾರಾಯಣಸ್ವಾಮಿ 4,88,562 ಮತ ಪಡೆದು 2,29,764 (16.9%) ಮತಗಳ ಅಂತರದಿಂದ ಸೋಲುಂಡಿದ್ದರು.

    4. ಶೋಭಾ ಕರಂದ್ಲಾಜೆ:ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಶೋಭಾ ಕರಂದ್ಲಾಜೆ 5,81,168 ಪಡೆದು ಗೆಲುವು ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಎದುರಾಳಿ ಜಯಪ್ರಕಾಶ್ ಹೆಗ್ಡೆ 3,99,525 ಮತ ಬಿದ್ದಿತ್ತು. ಈ ಮೂಲಕ ಕರಂದ್ಲಾಜೆ ಅವರು 1,81,643(ಶೇ.17.70) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    5. ಅನಂತಕುಮಾರ್ ಹೆಗ್ಡೆ: ಉತ್ತರ ಕನ್ನಡ-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿಯ ಅನಂತಕುಮಾರ್ ಹೆಗ್ಡೆ 5,46,939 ಮತ ಪಡೆದು ಗೆಲುವು ಪಡೆದಿದ್ದರು. ಕಾಂಗ್ರೆಸ್ ಪಕ್ಷದ ಪ್ರಶಾಂತ್ ಆರ್. ದೇಶಪಾಂಡೆ 4,06,239 ಮತ ಗಳಿಸಿ 1,40,700(ಶೇ.14.29) ಮತಗಳ ಅಂತರದಲ್ಲಿ ಸೋತಿದ್ದರು.

    6. ಪಿ.ಸಿ.ಮೋಹನ್: ಬೆಂಗಳೂರು ಸೆಂಟ್ರಲ್-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಪಿಸಿ ಮೋಹನ್ 5,57,130 ಮತ ಪಡೆದು ಕಾಂಗ್ರೆಸ್ ಪಕ್ಷದ ರಿಜ್ವಾನ್ ಅರ್ಷದ್ ವಿರುದ್ಧ ಗೆಲುವು ಪಡೆದಿದ್ದರು. ಪರಿಣಾಮ 4,19,630 ಮತ ಪಡೆದಿದ್ದ ರಿಜ್ವಾನ್ 1,37,500(ಶೇ.12.90) ಮತಗಳ ಅಂತರದಿಂದ ಸೋಲುಂಡಿದ್ದಾರೆ.

    7. ಧ್ರುವ ನಾರಾಯಣ್: ಚಾಮರಾಜನಗರ ಎಸ್‍ಸಿ ಮೀಸಲು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಧ್ರುವನಾರಾಯಣ್ 5,67,782 ಮತ ಪಡೆದಿದ್ದು, ಬಿಜೆಪಿ ಎ.ಆರ್.ಕೃಷ್ಣಮೂರ್ತಿ ಅವರ ವಿರುದ್ಧ 1,41,182 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಬಿಜೆಪಿಯ ಅಭ್ಯರ್ಥಿ 4,26,600(ಶೇ.12.60) ಮತಗಳಿಂದ ಸೋತಿದ್ದರು.

    8. ನಳಿನ್ ಕುಮಾರ್ ಕಟೀಲ್: ದಕ್ಷಿಣ ಕನ್ನಡ (ಮಂಗಳೂರು) ಸಾಮಾನ್ಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 6,42,739 ಮತ ಪಡೆದು ಜಯ ಪಡೆದರೆ, ಕಾಂಗ್ರೆಸ್‍ನ ಜನಾರ್ದನ ಪೂಜಾರಿ 4,99,030 ಮತ ಪಡೆದು ಸೋಲುಂಡಿದ್ದರು. ಕಟೀಲ್ ಅವರಿಗೆ 1,43,709(ಶೇ.11.97) ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

    9. ಪ್ರಹ್ಲಾದ್ ಜೋಶಿ: ಧಾರವಾಡ-ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಬಿಜೆಪಿ ಪಕ್ಷದ ಪ್ರಹ್ಲಾದ್ ಜೋಶಿ 5,45,395 ಮತ ಪಡೆದು ಜಯಗಳಿಸಿದ್ದರು. ಇವರ ಎದುರಾಳಿ ವಿನಯ್ ಕುಲಕರ್ಣಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ 4,31,738 ಮತ ಪಡೆದಿದ್ದರು. ಪರಿಣಾಮ 1,13,657(ಶೇ.11.05) ಮತಗಳ ಅಂತರದ ಜಯ ಜೋಶಿ ಅವರಿಗೆ ಲಭಿಸಿತ್ತು.

    10. ಪಿ.ಸಿ.ಗದ್ದಿಗೌಡರ್: ಬಾಗಲಕೋಟ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ್ 5,71,548 ಮತ ಪಡೆದು ಕಾಂಗ್ರೆಸ್ ನ ಅಜಯ್ ಕುಮಾರ್ ಸರ್ ನಾಯ್ಕ್ ಅವರನ್ನು ಸೋಲಿಸಿದ್ದರು. ಅಜಯ್ ಕುಮಾರ್ ಸರ್ ನಾಯ್ಕ್ 4,54,988 ಮತಗಳನ್ನು ಪಡೆದಿದ್ದರು. ಗದ್ದಿಗೌಡರು 1,16,560(ಶೇ.10.91) ಮತಗಳ ಅಂತರದಿಂದ ಜಯಿಸುವ ಮೂಲಕ ಗೆಲುವನ್ನು ತಮ್ಮದಾಗಿಸಿಕೊಂಡಿದ್ದರು.

  • 2014ರ ಲೋ.ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದ ಮಹಿಳಾ ಅಭ್ಯರ್ಥಿಗಳು

    2014ರ ಲೋ.ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧೆ ಮಾಡಿದ್ದ ಮಹಿಳಾ ಅಭ್ಯರ್ಥಿಗಳು

    – 20 ಮಹಿಳೆಯರಿಂದ ಸ್ಪರ್ಧೆ, ಜಯಮಾಲೆ ಮಾತ್ರ ಒಬ್ಬರಿಗೆ

    2019ರ ಲೋಕಸಭಾ ಚುನಾವಣೆ ತಯಾರಿ ಎಲ್ಲಡೆ ಭರದಿಂದ ಸಾಗುತ್ತಿದೆ. ಈ ಹಿಂದೆ ಅಂದರೆ 2014ರ ಲೋಕಸಭಾ ಚುನಾವಣೆ ನಡೆದಾಗ ಕರ್ನಾಟಕದಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. ಒಟ್ಟು 20 ಮಹಿಳಾ ಅಭ್ಯರ್ಥಿಗಳು ಕರ್ನಾಟಕದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಬೆಂಗಳೂರು ದಕ್ಷಿಣ, ಬೆಳಗಾವಿ, ಬೀದರ್, ದಾವಣಗೆರೆ, ಕಲಬುರಗಿ, ಚಾಮರಾಜನಗರ ಸೇರಿದಂತೆ ಇನ್ನೂ ಅನೇಕ ಕ್ಷೇತ್ರಗಳಿಂದ ಮಹಿಳಾ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ ಕರ್ನಾಟಕದಿಂದ ಸಂಸದೆ ಶೋಭಾಕರಂದ್ಲಾಜೆ ಬಿಟ್ಟು ಉಳಿದ ಯಾರು ಕೂಡ ಆಯ್ಕೆಯಾಗಿಲ್ಲ. ಅವರ ಸಂಪೂರ್ಣ ಮಾಹಿತಿ ಇಲ್ಲಿದೆ.

    ಬೆಂಗಳೂರು ಸೆಂಟ್ರಲ್:
    ಬೆಂಗಳೂರು ಕೇಂದ್ರದಿಂದ ಜೆಡಿಎಸ್‍ನಿಂದ ನಂದಿನಿ ಆಳ್ವಾ, ಸ್ವತಂತ್ರ ಅಭ್ಯರ್ಥಿಯಾಗಿ ಇ. ಸೀತಾ ರಾಮನ್, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದಿಂದ ಜಾಹೀದಾ ಶೆರೀನ್ ಹಾಗೂ ಸ್ವತಂತ್ರವಾಗಿ ಸುರಯ್ಯ ಜೈಥೂನ್ ಸ್ಪರ್ಧೆ ಮಾಡಿದ್ದರು. ಚುನಾವಣೆಯ ಫಲಿತಾಂಶದಲ್ಲಿ ನಂದಿನಿ ಆಳ್ವಾ ಅವರು 20,387 (1.9%) ಮತಗಳನ್ನು ಪಡೆದುಕೊಂಡಿದ್ದು, ಇ. ಸೀತಾ ರಾಮನ್ 2,543 (0.2%) ಮತ ಗಳಿಸಿದ್ದರು. ಇನ್ನೂ ಜಾಹೀದಾ ಶೆರೀನ್ 1,198 (0.1%) ಮತ್ತು ಸುರಯ್ಯ ಜೈಥೂನ್ 519 (00%) ಮತ ಪಡೆದುಕೊಂಡಿದ್ದರು.

    ಬೆಂಗಳೂರು ಸೆಂಟ್ರಲ್‍ನಿಂದ 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ವಿರುದ್ಧ ಬಿಜೆಪಿಯ ಪಿ.ಸಿ.ಮೋಹನ್ ಗೆಲವು ಸಾಧಿಸಿದ್ದರು. ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಪಿ.ಸಿ.ಮೋಹನ್ ಮತ್ತು ಕಾಂಗ್ರೆಸ್ಸಿನಿಂದ ರಿಜ್ವಾನ್ ಅರ್ಷದ್ ಸ್ಪರ್ಧಿಸಿದ್ದಾರೆ.

    ಬೆಂಗಳೂರು ದಕ್ಷಿಣ:
    ಬೆಂಗಳೂರು ದಕ್ಷಿಣದಲ್ಲಿ 2014ರಲ್ಲಿ ಜೆಡಿಎಸ್‍ನಿಂದ ರುಥ್ ಮನೋರಮಾ, ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾದಿಂದ ಎಂ ಉಮಾದೇವಿ ಹಾಗೂ ಪಿರಾಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಗಾಯಿತ್ರಿ ಸ್ಪರ್ಧಿಸಿದ್ದರು. ಆಗ ರುಥ್ ಮನೋರಮಾ 25,677 (2.3%), ಎಂ ಉಮಾದೇವಿ 918 (0.1%) ಮತ್ತು ಗಾಯಿತ್ರಿ 484 (00%) ಮತ ಗಳಿಸಿದ್ದರು. 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ವಿರುದ್ಧ ಬಿಜೆಪಿ ಅಭ್ಯರ್ಥಿ ಅನಂತ್‍ಕುಮಾರ್ ಗೆಲವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ ಬಿ.ಕೆ. ಹರಿಪ್ರಸಾದ್, ಬಿಜೆಪಿಯಿಂದ ತೇಜಸ್ವಿ ಸೂರ್ಯ ಕಣದಲ್ಲಿದ್ದಾರೆ.

    ಬೆಳಗಾವಿ:
    ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪರ್ಧೆ ಮಾಡಿ, 4,78,557 (44.4%) ಮತಗಳನ್ನು ಪಡೆದುಕೊಂಡಿದ್ದರು. 2014ರ ಫಲಿತಾಂಶದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರು ಗೆಲವು ಪಡೆದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಬಿಜೆಪಿಯಿಂದ ಸುರೇಶ್ ಅಂಗಡಿ ಅವರು ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್ಸಿನಿಂದ ವಿ.ಎಸ್ ಸಾಧುವವರ್ ಸ್ಪರ್ಧೆ ಮಾಡಿದ್ದಾರೆ.

    ಬೀದರ್:
    2014ರ ಲೋಕಸಭಾ ಚುನಾವಣೆಯಲ್ಲಿ ಶ್ಯಾಮಲಾ ಉದನೂರ ಅವರು ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದು, 1,259 (0.1%) ಮತಗಳನ್ನು ಪಡೆದುಕೊಂಡಿದ್ದರು. ಈ ವೇಳೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಾಂಗ್ರೆಸ್ಸಿನ ಧರಂಸಿಂಗ್ ವಿರುದ್ಧ 92,222 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ಈಶ್ವರ ಖಂಡ್ರೆ ಕಾಂಗ್ರೆಸ್ ಅಭ್ಯರ್ಥಿಯಾಗಿ, ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಕಣಕ್ಕಿಳಿದಿದ್ದಾರೆ.

    ಚಾಮರಾಜನಗರ:
    ನಿರ್ಮಲಾ ಕುಮಾರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, 6,604 (0.6%) ಮತಗಳನ್ನು ಪಡೆದುಕೊಂಡಿದ್ದರು. ಆಗ ಎ.ಆರ್.ಕೃಷ್ಣಮೂರ್ತಿ ವಿರುದ್ಧ ಕಾಂಗ್ರೆಸ್ಸಿನ ಧ್ರುವನಾರಾಯಣ್ 1,41,182 ಮತಗಳ ಅಂತರದಲ್ಲಿ ಕೆಲವು ಪಡೆದುಕೊಂಡಿದ್ದರು. ಈ ಬಾರಿಯೂ ಕಾಂಗ್ರೆಸ್ಸಿನಿಂದ ಧ್ರುವನಾರಾಯಣ್ ಸ್ಪರ್ಧೆ ಮಾಡಿದ್ದು, ಬಿಜೆಪಿಯಿಂದ ಶ್ರೀನಿವಾಸ್ ಪ್ರಸಾದ್ ಸ್ಪರ್ಧೆ ಮಾಡಿದ್ದಾರೆ.

    ಚಿಕ್ಕಬಳ್ಳಾಪುರ:
    2014ರ ಲೋಕಸಭಾ ಚುನಾವಣೆಯಲ್ಲಿ ಚಿತ್ರ ಪ್ರಸಾದ್ ಬಿಎಸ್ ಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ 6,279 (0.5%) ರಷ್ಟು ಮತಗಳನ್ನು ಪಡೆದುಕೊಂಡಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶದಲ್ಲಿ ಕಾಂಗ್ರೆಸ್ ಆಭ್ಯರ್ಥಿ ವೀರಪ್ಪ ಮೊಯ್ಲಿ 4,24,800 ಮತಗಳನ್ನು ಪಡೆಯುವ ಮೂಲಕ ಬಿಜೆಪಿ ಅಭ್ಯರ್ಥಿ ಬಿ.ಎನ್.ಬಚ್ಚೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್‍ನಿಂದ ವೀರಪ್ಪ ಮೊಯ್ಲಿ ಮತ್ತು ಬಿಜೆಪಿಯಿಂದ ಬಿ.ಎನ್.ಬಚ್ಚೇಗೌಡ ಚಿಕ್ಕಬಳ್ಳಾಪುರ ಕಣದಲ್ಲಿದ್ದಾರೆ.

    ಚಿತ್ರದುರ್ಗ:
    ಚಿತ್ರದುರ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಟಿ. ಭಾವನಾ ಅವರು ಸ್ಪರ್ಧೆ ಮಾಡಿ 3,601 (0.3%) ಮತಗಳನ್ನು ಪಡೆದುಕೊಂಡಿದ್ದರು. ಆಗ ಅಂದರೆ 2014ರ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜನಾರ್ದನ ಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 1,01,291 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎಸ್. ಚಂದ್ರಪ್ಪ ಅವರು ಸ್ಪರ್ಧೆ ಮಾಡಿದ್ದರೆ, ಬಿಜೆಪಿಯಿಂದ ಎ.ನಾರಾಯಣಸ್ವಾಮಿ ಸ್ಪರ್ಧಿಸಿದ್ದಾರೆ.

    ದಾವಣಗೆರೆ:
    2014ರ ಲೋಕಸಭಾ ಚುನಾವಣೆಯಲ್ಲಿ ಮಹಿಮಾ ಜೆ ಪಟೇಲ್ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, 46911 (4.2%) ಮತಗಳನ್ನು ಗಳಿಸಿದ್ದರು. ಆಗ ಕಾಂಗ್ರೆಸ್ ಆಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ವಿರುದ್ಧ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಗೆಲುವು ಸಾಧಿಸಿದ್ದರು. ಈ ಬಾರಿಯೂ ಮತ್ತೊಮ್ಮೆ ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಜಿ.ಎಂ.ಸಿದ್ದೇಶ್ವರ್ ಮುಖಾಮುಖಿಯಾಗಲಿದ್ದಾರೆ.

    ಕಲಬುರಗಿ:
    ಕಲಬುರಗಿ ಆಪ್ ಅಭ್ಯರ್ಥಿಯಾಗಿ ಬಿ.ಟಿ.ಲಲಿತಾ ನಾಯ್ಕ್ ಅವರು ಸ್ಪರ್ಧೆ ಮಾಡಿದ್ದು, 9,074 (0.9%) ಮತಗಳನ್ನು ಗಳಿಸಿದ್ದರು. ಆಗ 2014ರ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ರೇವುನಾಯಕ ಬೆಳಮಗಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಗೆಲವು ಸಾಧಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಮಾಡಿದ್ರೆ, ಬಿಜೆಪಿಯಿಂದ ಉಮೇಶ್ ಜಾಧವ್ ಕಣದಲ್ಲಿದ್ದಾರೆ.

    ಮಂಡ್ಯ:
    ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಮ್ಯಾ ಸ್ಪರ್ಧೆ ಮಾಡಿ 5,18,852 (43.5%) ಮತಗಳನ್ನು ಗಳಿಸಿದ್ದರು. 2014ರ ಫಲಿತಾಂಶದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ವಿರುದ್ಧ ಗೆಲುವು ಸಾಧಿಸಿದ್ದರು. ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರಿಶ್ ಸ್ಪರ್ಧೆ ಮಾಡಿದ್ದಾರೆ.

    ಮೈಸೂರು-ಕೊಡಗು:
    ಮೈಸೂರಿನಿಂದ ಪದ್ಮಮ್ಮ ಎಂ.ವಿ ಅವರು ಆಪ್ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ 5,650 (0.5%) ಮತಗಳನ್ನು ಪಡೆದುಕೊಂಡಿದ್ದರು. ಇನ್ನು ಕೊಡಗಿನಿಂದ ಕರುನಾಡು ಪಾರ್ಟಿ ಅಭ್ಯರ್ಥಿಯಾಗಿ ರತಿ ಪೂವಯ್ಯ ಸ್ಪರ್ಧೆ ಮಾಡಿ 3,726 (0.3%) ಮತಗಳಿಸಿದ್ದರು. 2014ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಎಚ್.ವಿಶ್ವನಾಥ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ 31,608 ಅಂತರದಲ್ಲಿ ಗೆಲವು ಪಡೆದುಕೊಂಡಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ ವಿಜಯ್ ಶಂಕರ್ ಸ್ಪರ್ಧೆ ಮಾಡಿದ್ದಾರೆ.

    ಶಿವಮೊಗ್ಗ:
    2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಗೀತಾ ಶಿವರಾಜ್‍ಕುಮಾರ್ ಹಾಗೂ ಸ್ವತಂತ್ರ ಅಭ್ಯರ್ಥಿಯಾಗಿ ಶ್ರೀಲತಾ ಶೆಟ್ಟಿ ಸ್ಪರ್ಧೆ ಮಾಡಿದ್ದರು. ಅಂದಿನ ಫಲಿತಾಂಶದಲ್ಲಿ ಗೀತಾ ಶಿವರಾಜ್‍ಕುಮಾರ್ 2,40,636 (21.3%) ಮತ್ತು ಶ್ರೀಲತಾ ಶೆಟ್ಟಿ 2,073 ( 0.2%) ಮತಗಳನ್ನು ಗಳಿಸಿದ್ದರು. ಆಗ ಕಾಂಗ್ರೆಸ್ ಆಭ್ಯರ್ಥಿ ಮಂಜುನಾಥ್ ಭಂಡಾರಿ ವಿರುದ್ಧ ಬಿಜೆಪಿ ಅಭ್ಯರ್ಥಿ ಬಿ.ಎಸ್.ಯಡಿಯೂರಪ್ಪ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿಯಿಂದ ರಾಘವೇಂದ್ರ ಯಡಿಯೂರಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಕಣದಲ್ಲಿದ್ದಾರೆ.

    ಉಡುಪಿ-ಚಿಕ್ಕಮಗಳೂರು:
    ಉಡುಪಿ-ಚಿಕ್ಕಮಗಳೂರಿನಿಂದ ಶೋಭಾ ಕರಂದ್ಲಾಜೆ ಅವರು ಬಿಜೆಪಿ ಅಭ್ಯರ್ಥಿಯಾಗಿ 2014ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದು, 5,81,168(56.2%) ಮತಗಳನ್ನು ಪಡೆದುಕೊಂಡಿದ್ದರು. ಅಂದಿನ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ 1,81,643 ಅಂತರದಲ್ಲಿ ಗೆಲವು ಸಾಧಿಸಿದ್ದರು. ಈ ಬಾರಿಯೂ ಬಿಜೆಪಿ ಅಭ್ಯರ್ಥಿಯಾಗಿ ಶೋಭಾ ಕರಂದ್ಲಾಜೆ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಸ್ಪರ್ಧೆ ಮಾಡಿದ್ದಾರೆ.

  • 2014ರ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಿರುವ ಕ್ಷೇತ್ರಗಳ ವಿವರ ಇಲ್ಲಿದೆ

    2014ರ ಚುನಾವಣೆಯಲ್ಲಿ ಅತೀ ಹೆಚ್ಚು ಮತದಾನವಾಗಿರುವ ಕ್ಷೇತ್ರಗಳ ವಿವರ ಇಲ್ಲಿದೆ

    ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಈ ಹಿಂದೆ ಅಂದರೆ 2014ರ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮತದಾನವಾದ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿರುವ ಮಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಉಡುಪಿ-ಚಿಕ್ಕಮಗಳೂರು ಹಾಗೂ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾನವಾಗಿತ್ತು.

    ಮಂಗಳೂರು:
    ರಾಜ್ಯದಲ್ಲೇ ಅತೀ ಹೆಚ್ಚು ಮತದಾನವಾಗಿದ್ದು ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ. ಇಲ್ಲಿನ 8 ವಿಧಾನಸಭಾ ಕ್ಷೇತ್ರದಲ್ಲಿ 1,766 ಮತದಾನದ ಕೇಂದ್ರಗಳಿತ್ತು. 15,65,219 ಮತದಾರರಿದ್ದರು. ಇದರಲ್ಲಿ 12,07,583 ಮತದಾನ ಮಾಡಿದ್ದರು. ಈ ವಿಧಾನಸಭಾ ಕ್ಷೇತ್ರಗಳಲ್ಲಿ 17 ನಾಮಪತ್ರ ಸಲ್ಲಿಕೆಯಾಗಿತ್ತು. ಅಲ್ಲದೆ 14 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 12 ಮಂದಿ ಠೇವಣಿ ಕಳೆದುಕೊಂಡಿದ್ದರು. ಒಟ್ಟಾರೆ ಕ್ಷೇತ್ರಗಳಲ್ಲಿ ಶೇ.77.15 ರಷ್ಟು ಮತದಾನವಾಗಿತ್ತು.


    ಚಿಕ್ಕಬಳ್ಳಾಪುರ:
    ಎರಡನೇಯ ಸ್ಥಾನ ಪಡೆದ ಚಿಕ್ಕಬಳ್ಳಾಪುರದ 8 ವಿಧಾನಸಭಾ ಕ್ಷೇತ್ರದಲ್ಲಿ 2,119 ಮತದಾನದ ಕೇಂದ್ರಗಳಿತ್ತು. ಈ ಕ್ಷೇತ್ರಗಳಲ್ಲಿ 16,58,410 ಮತದಾರರಿದ್ದರು. ಇದರಲ್ಲಿ 12,63,911 ಮಂದಿ ಮತದಾನ ಮಾಡಿದ್ದರು. ಈ ಕ್ಷೇತ್ರಗಳಲ್ಲಿ 23 ಮಂದಿ ನಾಮಪತ್ರ ಸಲ್ಲಿಸಿದ್ದು, 19 ಮಂದಿ ಸ್ಪರ್ಧಿಸಿದ್ದರು. ಹಾಗೆಯೇ 16 ಮಂದಿ ತಮ್ಮ ಠೇವಣಿಯನ್ನು ಕಳೆದುಕೊಂಡಿದ್ದರು. ಒಟ್ಟಾರೆ ಕ್ಷೇತ್ರಗಳಲ್ಲಿ ಶೇ.76.21ರಷ್ಟು ಮತದಾನವಾಗಿತ್ತು.

    ಕೋಲಾರ:
    ಮೂರನೇ ಸ್ಥಾನ ಕೋಲಾರ ಪಡೆದುಕೊಂಡಿದ್ದು, ಈ ಕ್ಷೇತ್ರದಲ್ಲಿ 2,041 ಮತದಾನದ ಕೇಂದ್ರಗಳಿತ್ತು. ಇಲ್ಲಿ 14,92,977 ಮತದಾರರಿದ್ದರು. ಈ ಕ್ಷೇತ್ರಗಳಲ್ಲಿ 33 ಮಂದಿ ನಾಮಪತ್ರ ಸಲ್ಲಿಸಿದ್ದು, 22 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 19 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. 2014ರ ಚುನಾವಣೆಯಲ್ಲಿ 11,27,340 ಮಂದಿ ಮತದಾನ ಮಾಡಿದ್ದು, ಶೇ. 75.51ರಷ್ಟು ಮತದಾನವಾಗಿತ್ತು.


    ಉಡುಪಿ- ಚಿಕ್ಕಮಗಳೂರು:
    ಮತದಾನ ಮಾಡಿರುವುದರಲ್ಲಿ ನಾಲ್ಕನೇ ಸ್ಥಾನ ಉಡುಪಿ ಹಾಗೂ ಚಿಕ್ಕಮಗಳೂರಿಗೆ ಸಿಕ್ಕಿದೆ. ಈ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1,751 ಮತದಾನ ಕೇಂದ್ರಗಳಿದ್ದವು. ಅದರಲ್ಲಿ ಒಟ್ಟು 13,87,294 ಮತದಾರರಿದ್ದರು. ಈ ಕ್ಷೇತ್ರಗಳಲ್ಲಿ 14 ಮಂದಿ ನಾಮಪತ್ರ ಸಲ್ಲಿಸಿ 11 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 9 ಮಂದಿ ಠೇವಣಿ ಕಳೆದುಕೊಂಡಿದ್ದರು. ಈ ಕ್ಷೇತ್ರಗಳಲ್ಲಿ 10,34,334 ಮಂದಿ ಮತದಾನಗೈದಿದ್ದು, ಶೇ. 74.56ರಷ್ಟು ಮತದಾನವಾಗಿತ್ತು.

    ಚಿಕ್ಕೋಡಿ:
    ಐದನೇ ಸ್ಥಾನದಲ್ಲಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1,728 ಮತದಾನ ಕೇಂದ್ರಗಳಿದ್ದವು. ಚುನಾವಣೆಯ ಸಂದರ್ಭದಲ್ಲಿ ಈ ಕ್ಷೇತ್ರಗಳಲ್ಲಿ 14,42,206 ಮತದಾರರಿದ್ದರು. ಇಲ್ಲಿ 15 ಮಂದಿ ನಾಮ ಪತ್ರ ಸಲ್ಲಿಸಿದ್ದರು. ಹಾಗೆಯೇ 12 ಮಂದಿ ಸ್ಪರ್ಧಿಸಿದ್ದರು. ಇದರಲ್ಲಿ 10 ಮಂದಿ ತಮ್ಮ ಠೇವಣಿ ಕಳೆದುಕೊಂಡಿದ್ದರು. 10,71,495 ಮಂದಿ ಮತದಾನ ಮಾಡಿದ್ದು, ಶೇ.74.30 ರಷ್ಟು ಮತದಾನವಾಗಿತ್ತು.