Tag: ಲೋಕಸಭಾ ಚುನಾವಣಾ ಫಲಿತಾಂಶ

  • ಧಾರವಾಡದಲ್ಲಿ ಮತ್ತೆ ಕಮಲ ಕಿಲಕಿಲ – ಜೋಶಿಗೆ ʻಪಂಚʼ ಜಯ!

    ಧಾರವಾಡದಲ್ಲಿ ಮತ್ತೆ ಕಮಲ ಕಿಲಕಿಲ – ಜೋಶಿಗೆ ʻಪಂಚʼ ಜಯ!

    ಧಾರವಾಡ: ಪ್ರಸ್ತುತ ಲೋಕಸಭಾ ಕ್ಷೇತ್ರದಲ್ಲಿ ಸತತ 5 ಬಾರಿ ಗೆಲುವು ಸಾಧಿಸುವ ಮೂಲಕ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ (Pralhad Joshi) ಹೊಸ ಇತಿಹಾಸ ನಿರ್ಮಿಸಿದ್ದಾರೆ.

    2004, 2009, 2014, 2019ರಲ್ಲಿ ಗೆಲುವು ಸಾಧಿಸಿದ್ದ ಜೋಶಿ 2024ರಲ್ಲಿ ಸತತ 5ನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಇದೇ ಧಾರವಾಡ ಕ್ಷೇತ್ರದಿಂದ (Dharwad Constituency) ಈ ಹಿಂದೆ ಸರೋಜಿನಿ ಮಹಿಶಿ ಹಾಗೂ ಡಿ.ಕೆ ನಾಯ್ಕರ್‌ ಕಾಂಗ್ರೆಸ್‌ನಿಂದ ನಾಲ್ಕು ಬಾರಿ ಗೆದ್ದಿದ್ದರು. ಡಿ.ಪಿ ಕರ್ಮಾಕರ್ ಒಮ್ಮೆ ಹಾಗೂ ವಿಜಯ ಸಂಕೇಶ್ವರ್‌ ಮೂರು ಬಾರು ಗೆದ್ದಿದ್ದರು. ಆದ್ರೆ ಪ್ರಹ್ಲಾದ್‌ ಜೋಶಿ 5ನೇ ಬಾರಿಗೆ ಗೆಲುವು ಸಾಧಿಸಿದ ವಿಶೇಷ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಡಿಕೆ ಬ್ರದರ್ಸ್‌ಗೆ ಠಕ್ಕರ್‌; ಜನರ ಹೃದಯ ಗೆದ್ದ ಡಾಕ್ಟರ್‌ – ಮಂಜುನಾಥ್‌ಗೆ ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್‌?

    2009ರಲ್ಲಿ 4,46,786 ಮತಗಳು, 2014ರಲ್ಲಿ 5,45,395 ಮತಗಳು ಹಾಗೂ 2019ರಲ್ಲಿ 6,84,837 ಮತಗಳನ್ನು ಪಡೆದಿದ್ದ ಜೋಶಿ 2024ರಲ್ಲಿ 7,16,231 ಮತಗಳನ್ನು ಪಡೆಯುವ ಮೂಲಕ 97,324 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನೋದ್ ಅಸೂತಿ 6,18,907 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ.

    ಬಿಜೆಪಿ ಕಾರ್ಯಕರ್ತರಲ್ಲಿ ಸಂಭ್ರಮ:
    ಸದ್ಯ ಧಾರವಾಡದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದೆ. ಪ್ರಹ್ಲಾದ್‌ ಜೋಶಿ ಗೆಲುವಿನ ಫಲಿತಾಂಶ ಹೊರಬೀಳುತ್ತಿದ್ದಂತೆ ನಗರದ ಕೃಷಿ ವಿವಿ ಮುಖ್ಯ ದ್ವಾರದ ಎದುರು ಪಟಾಕಿ ಸಿಡಿಸಿದ್ದಾರೆ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಕೋಟೆನಾಡಿನಲ್ಲಿ ಗೋವಿಂದ ಕಾರಜೋಳಗೆ ಜೈಕಾರ ಹಾಕಿದ ಮತದಾರ

  • ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ ಪಾಟೀಲ್  ರಾಜೀನಾಮೆ

    ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಹೆಚ್.ಕೆ ಪಾಟೀಲ್ ರಾಜೀನಾಮೆ

    ಹುಬ್ಬಳ್ಳಿ: ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಮೈತ್ರಿ ಪಾಳಯದಲ್ಲಿ ರಾಜೀನಾಮೆ ಕೂಗೂ ಹೆಚ್ಚಾಗುತ್ತಿದೆ. ಈ ನಡುವೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಹೆಚ್.ಕೆ ಪಾಟೀಲ್ ಅವರು ರಾಜೀನಾಮೆ ನೀಡಿದ್ದಾರೆ.

    ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದ ಹೆಚ್.ಕೆ ಪಾಟೀಲ್ ಎಐಸಿಸಿ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಹುಬ್ಬಳ್ಳಿಯ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಮತದಾನ ಮಾಡಿದ ಮತದಾರರಿಗೆ ಧನ್ಯವಾದಗಳು. ಜನ ಏನು ತೀರ್ಪು ಕೊಟ್ಟಿದ್ದಾರೆ ಅದಕ್ಕೆ ನಾವು ತಲೆಬಾಗುತ್ತೇವೆ. ಈ ಫಲಿತಾಂಶದಿಂದ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಪಕ್ಷವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.

    ಈ ರೀತಿಯಲ್ಲಿ ಸೋಲಿಗೆ ಮೈತ್ರಿ ಮಾಡಿಕೊಂಡದ್ದು ಒಂದು ಕಾರಣ ಇರಬಹುದು. ಆದರೆ ಅದೇ ಮುಖ್ಯ ಕಾರಣ ಅಲ್ಲ. ಈ ಸೋಲು ರಾಜ್ಯ ಸರ್ಕಾರದ ಮೇಲೆ ಪ್ರಭಾವ ಬೀರುತ್ತದೆ. ಅದನ್ನು ನಮ್ಮ ಹಿರಿಯ ನಾಯಕರು ಸಮರ್ಥವಾಗಿ ನಿಭಾಯಿಸಬೇಕು ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ 352 ಸ್ಥಾನ ಗಳಿಸಿದ್ದರೆ, ಯುಪಿಎ 87 ಹಾಗೂ ಇತರೇ 103 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ ಇದ್ದ 28 ಕ್ಷೇತ್ರದಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ.

  • ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ- ಆರ್‌ಎಸ್‌ಎಸ್

    ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ- ಆರ್‌ಎಸ್‌ಎಸ್

    ನವದೆಹಲಿ: ಲೋಕಸಮರದಲ್ಲಿ ಸ್ಪಷ್ಟ ಬಹುಮತ ಪಡೆದು ಭರ್ಜರಿ ಗೆಲುವನ್ನು ಬಿಜೆಪಿ ಸಾಧಿಸಿರುವ ಮೂಲಕ ದೇಶದಲ್ಲಿ ಮತ್ತೊಮ್ಮೆ ಸುಭದ್ರ ಸರ್ಕಾರ ಬಂದಿದೆ. ಬಿಜೆಪಿ ಗೆಲುವು ರಾಷ್ಟ್ರ ರಕ್ಷಣಾ ಪಡೆಯ ವಿಜಯ ಎಂದು ಆರ್‌ಎಸ್‌ಎಸ್ ವಿಭಿನ್ನವಾಗಿ ಬಣ್ಣಿಸಿದೆ.

    ಕಮಲದ ಈ ಭರ್ಜರಿ ಗೆಲುವಿಗೆ ಕಾರಣರಾದ ಪ್ರತಿಯೊಬ್ಬರಿಗೂ ಆರ್‌ಎಸ್‌ಎಸ್ ಶುಭಾಶಯ ತಿಳಿಸಿದೆ. ಈ ಫಲಿತಾಂಶ ಪ್ರಜಾಪ್ರಭುತ್ವದ ಆತ್ಮ ಮತ್ತು ಅದರ ತತ್ವಗಳನ್ನು ಜಗತ್ತಿಗೆ ತೋರಿಸಿದೆ. ಈ ಮೂಲಕ ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ. ಇದು ದೇಶ ರಕ್ಷಣೆ ಮಾಡುವ ಶಕ್ತಿಗಳ ಗೆಲುವು ಎಂದು ಆರ್‌ಎಸ್‌ಎಸ್ ಸಹಕಾರ್ಯವಾಹಕ ಭಯ್ಯಾಜಿ ಜೋಷಿ ಬಣ್ಣಿಸಿ ಬಿಜೆಪಿ ಗೆಲುವಿನ ಖುಷಿಯನ್ನು ಹಂಚಿಕೊಂಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಸಾಮಾನ್ಯ ಜನರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು. ಮಾನವೀಯತೆಯ ಗೆಲುವನ್ನು ಇಲ್ಲಿ ಕಾಣಬಹುದಾಗಿದೆ. ಬಿಜೆಪಿ ಈ ಗೆಲುವಿನಿಂದ ಮತ್ತೊಮ್ಮೆ ಮೋದಿ ಸರ್ಕಾರ ಆಡಳಿತಕ್ಕೆ ಬರುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಲೋಕಸಭಾ ಫಲಿತಾಂಶ ನೋಡುವುದಾದರೆ ಎನ್‍ಡಿಎ 349 ಸ್ಥಾನ ಗಳಿಸಿದ್ದರೆ, ಯುಪಿಎ 82 ಹಾಗೂ ಇತರೇ 111 ಸ್ಥಾನವನ್ನು ಗೆದ್ದಿದೆ. ಹಾಗೆಯೇ ಕರ್ನಾಟಕದಲ್ಲಿ ಇದ್ದ 28 ಕ್ಷೇತ್ರದಲ್ಲಿ ಬಿಜೆಪಿ 25 ಕ್ಷೇತ್ರದಲ್ಲಿ ಭರ್ಜರಿ ಜಯ ಗಳಿಸಿದೆ. ಸದ್ಯ ರಾಜ್ಯದಲ್ಲಿ ಆಡಳಿತದಲ್ಲಿರುವ ಮೈತ್ರಿ ಸರ್ಕಾರದ ಅಭ್ಯರ್ಥಿಗಳು 2 ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಅದರಲ್ಲಿ ಕಾಂಗ್ರೆಸ್ 1 ಹಾಗೂ ಜೆಡಿಎಸ್ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

  • ಮೋದಿ ಅಲೆಗೆ ಸತತ 7 ಬಾರಿ ಗೆದ್ದಿದ್ದ ಮುನಿಯಪ್ಪಗೆ ಸೋಲು

    ಮೋದಿ ಅಲೆಗೆ ಸತತ 7 ಬಾರಿ ಗೆದ್ದಿದ್ದ ಮುನಿಯಪ್ಪಗೆ ಸೋಲು

    ಕೋಲಾರ: ಸತತ 7 ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮೈತ್ರಿ ಅಭ್ಯರ್ಥಿ ಕೆ.ಎಚ್ ಮುನಿಯಪ್ಪ ಮೋದಿ ಅಲೆಯಿಂದಾಗಿ ಸೋತಿದ್ದಾರೆ. ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್. ಮುನಿಸ್ವಾಮಿ ಭರ್ಜರಿ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಕಳೆದ 7 ಬಾರಿ ಗೆಲುವನ್ನು ಸಾಧಿಸಿದಂತೆ ಈ ಬಾರಿ ಕೂಡ ಜಯವನ್ನು ಸಲೀಸಾಗಿ ಪಡೆಯಬಹುದು ಎಂದುಕೊಂಡಿದ್ದ ಮುನಿಯಪ್ಪ ಅವರಿಗೆ ಭಾರೀ ಮುಖಭಂಗವಾಗಿದೆ. ಮುನಿಯಪ್ಪ ಅವರ ವಿರೋಧಿ ಅಲೆ ಹಾಗೂ ಮೋದಿ ಅಲೆಯಿಂದ ಎಸ್. ಮುನಿಸ್ವಾಮಿ 2,09,704 ಮತಗಳ ಅಂತರದಿಂದ ಜಯಗಳಿಸಿ ಸಂಸತ್ ಪ್ರವೇಶಿಸಿದ್ದಾರೆ. ಮುನಿಸ್ವಾಮಿ ಅವರು 7,07,863 ಮತಗಳನ್ನು ಗಳಿಸಿದ್ದರೆ, ಮುನಿಯಪ್ಪ ಅವರು 4,98,159 ಮತಗಳನ್ನು ಪಡೆದು ಸೋಲನ್ನು ಕಂಡಿದ್ದಾರೆ.

    ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಹಾಗೂ ಬೆಂಬಲಿಗರ ಲೆಕ್ಕಾಚಾರದ ಪ್ರಕಾರ ಎಂದಿನಂತೆ 20 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ಹೊಂದಿದ್ದರು. ಪ್ರತಿ ಬಾರಿ ಇದೆ ರೀತಿಯ ಪೈಪೋಟಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನಡೆಯುತ್ತಿತ್ತು. ಮೈತ್ರಿ ನಾಯಕರ ಪ್ರಕಾರ ಕೆ.ಎಚ್. ಮುನಿಯಪ್ಪ ಗೆಲುವು ನಿಶ್ಚಯವಾಗಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ 1 ಲಕ್ಷದವರೆಗೂ ಲೀಡ್ ಬರುವ ಅತಿಯಾದ ಆತ್ಮ ವಿಶ್ವಾಸದಲ್ಲಿದ್ದರು.

    ಮುನಿಯಪ್ಪ ಸೋಲು ಕಂಡಿದ್ದು ಯಾಕೆ?
    ಕೆಜೆಎಫ್ ಬಿಜಿಎಂಎಲ್ ಸಮಸ್ಯೆಯನ್ನು 18 ವರ್ಷಗಳಿಂದ ಜೀವಂತವಾಗಿಟ್ಟಿರುವುದು, ಶ್ರೀನಿವಾಸಪುರದಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ ಶುಂಕುಸ್ಥಾಪನೆ ಬಿಟ್ಟರೆ ಉಳಿದಂತೆ ಯಾವುದೇ ಕಾಮಗಾರಿ ನಡೆಯದೆ ಇರುವುದು ಮುನಿಯಪ್ಪ ಸೋಲಿಗೆ ಮುಖ್ಯ ಕಾರಣವಾಗಿದೆ. ಅಲ್ಲದೆ ನೀರಾವರಿ ಯೋಜನೆಗೆ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡದೇ ಇರುವುದು, ಕ್ಷೇತ್ರದಲ್ಲಿ ಈ ಬಾರಿ ದಲಿತ ಮುಖಂಡರ ಮತ್ತು ಜನಪ್ರತಿನಿಧಿಗಳ ವಿರೋಧವಾಗಿರುವುದರಿಂದ ಈ ಬಾರಿ ಸೋಲನ್ನು ಅನುಭವಿಸುವಂತಾಗಿದೆ.

    ಮುನಿಯಪ್ಪ ಅವರ ಇದೇ ಮೈನಸ್ ಪಾಯಿಂಟ್ ಬಿಜೆಪಿ ಅಭ್ಯರ್ಥಿಗೆ ಗೆಲುವಿನತ್ತ ಸಾಗಲು ದಾರಿ ಮಾಡಿಕೊಟ್ಟಿದೆ. ಅಲ್ಲದೆ ಕ್ಷೇತ್ರದಲ್ಲಿ ಬಂಡಾಯ ಕಾಂಗ್ರೆಸ್ ನಾಯಕರು ಮುನಿಯಪ್ಪ ವಿರುದ್ಧ ತಿರುಗಿಬಿದ್ದಿದ್ದು ಹಾಗೂ 7 ಬಾರಿ ಗೆದ್ದವನಿಗೆ 8ನೇ ಗೆಲ್ಲುವುದು ಕಷ್ಟವೇನಲ್ಲ ಎಂಬ ಅತೀಯಾದ ವಿಶ್ವಾಸವೇ ಬಿಜೆಪಿಗೆ ಜಯ ತಂದುಕೊಟ್ಟಿದೆ.