Tag: ಲೋಕಪಾಲ್

  • ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್ ಚಿಟ್

    ನವದೆಹಲಿ: ಷೇರು ಮಾರುಕಟ್ಟೆ ವಂಚನೆ ಪ್ರಕರಣದಲ್ಲಿ ಸೆಬಿ ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್‌ ಕ್ಲೀನ್ ಚಿಟ್ ನೀಡಿದೆ.

    ಮಾಧವಿ ಪುರಿ ಬುಚ್ ಅವರ ವಿರುದ್ಧ ಹಿಂಡೆನ್‌ಬರ್ಗ್-ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರುಗಳನ್ನು ಭಾರತೀಯ ಲೋಕಪಾಲ್ ವಜಾಗೊಳಿಸಿದೆ. ಭ್ರಷ್ಟಾಚಾರ ವಿರೋಧಿ ಒಂಬುಡ್ಸ್‌ಮನ್ ಆರೋಪಗಳಲ್ಲಿ ಯಾವುದೇ ಅರ್ಹತೆ ಇಲ್ಲ. ಊಹೆಯಿಂದ ಕೂಡಿದಂತಿದೆ. ಯಾವುದೇ ಪರಿಶೀಲಿಸಬಹುದಾದ ಪುರಾವೆಗಳ ಕೊರತೆಯಿದೆ ಎಂದು ಲೋಕಪಾಲ್‌ ಹೇಳಿದೆ.

    ಬುಧವಾರ ಹೊರಡಿಸಿದ ಆದೇಶದಲ್ಲಿ, ದೂರುಗಳು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ತನಿಖೆಗೆ ಅಗತ್ಯವಾದ ಕಾನೂನು ಅವಶ್ಯಕತೆಗಳನ್ನು ಪೂರೈಸಿಲ್ಲ ಎಂದು ಹೇಳಲಾಗಿದೆ. ಆರೋಪಗಳು ಹೆಚ್ಚಾಗಿ ಊಹೆಗಳಿಂದ ಕೂಡಿವೆ. ಹೀಗಾಗಿ, ದೂರುಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ಲೋಕಪಾಲ್‌ ತಿಳಿಸಿದೆ.

    ಹಿಂಡೆನ್‌ಬರ್ಗ್‌ ವರದಿ ಆಧರಿಸಿ ಮಾಧವಿ ವಿರುದ್ಧ ಪ್ರತ್ಯೇಕವಾಗಿ ಎರಡು ದೂರುಗಳು ದಾಖಲಾಗಿದ್ದವು. ಅದಾನಿ ಸಮೂಹದ ಸಾಗರೋತ್ತರ ಹೂಡಿಕೆಯಲ್ಲಿ ಮಾಧವಿ ಮತ್ತು ಅವರ ಪತಿ ಪಾಲುದಾರಿಕೆ ಹೊಂದಿದ್ದಾರೆಂದು ಹಂಡೆನ್‌ಬರ್ಗ್‌ ರಿಸರ್ಚ್‌ ಆರೋಪಿಸಿತ್ತು. ಇದನ್ನು ಮಾಧವಿ ಅವರು ಅಲ್ಲಗಳೆದಿದ್ದರು.

  • ನಿವೃತ್ತ ನ್ಯಾ.ಪಿ.ಸಿ.ಘೋಷ್ ದೇಶದ ಮೊದಲ ಲೋಕಪಾಲ್

    ನಿವೃತ್ತ ನ್ಯಾ.ಪಿ.ಸಿ.ಘೋಷ್ ದೇಶದ ಮೊದಲ ಲೋಕಪಾಲ್

    ನವದೆಹಲಿ: ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಪಿನಾಕಿ ಚಂದ್ರ ಘೋಷ್ ದೇಶದ ಮೊದಲ ಲೋಕಪಾಲ್ ಆಗಿ ನೇಮಕಗೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇಮಕಕ್ಕೆ ಅಂಕಿತ ಹಾಕಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಹಿರಿಯ ವಕೀಲ ಮುಕುಲ್ ರೋಹತ್ಗಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ನಿವೃತ್ತ ನ್ಯಾ.ಪಿ.ಸಿ.ಘೋಷ್ ಅವರ ಹೆಸರನ್ನು ಅಂತಿಮಗೊಳಿಸಿತ್ತು. ಆಯ್ಕೆ ಸಮಿತಿಯ ಮುಂದೆ ಪಿ.ಸಿ.ಘೋಷ್ ಅವರ ಹೆಸರು ಮುಂಚೂಣಿಯಲ್ಲಿತ್ತು. ಹೀಗಾಗಿ ನೇಮಕ ಮಂಡಳಿ ಅವರನ್ನೇ ಅಂತಿಮಗೊಳಿಸಿ ನೇಮಕ ಮಾಡಿದೆ. ಇದನ್ನು ಓದಿ:  ಲೋಕಪಾಲ್ ಆಯ್ಕೆ ಸಮಿತಿ ಸಭೆಯ ವಿಶೇಷ ಆಹ್ವಾನವನ್ನು ತಿರಸ್ಕರಿಸಿದ ಖರ್ಗೆ

    ಪಿ.ಸಿ.ಘೋಷ್ ಅವರ ನೇಮಕಾತಿ ಬೆನ್ನಲ್ಲೇ ಲೋಕಪಾಲ್‍ನ 8 ಜನ ಸದಸ್ಯರ ಆಯ್ಕೆಯು ಕೆಲವೇ ದಿನಗಳ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ. ಟೀಮ್‍ನಲ್ಲಿ ಲೋಕಪಾಲ ಅವರಲ್ಲದೆ, ನಾಲ್ವರು ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿಗಳು(ಇವರಲ್ಲಿ ಒಬ್ಬರು ಮಹಿಳೆ), ನಾಲ್ವರು ಮಾಜಿ ನಾಗರಿಕ ಸೇವಾ ಅಧಿಕಾರಿಗಳು ಇರುತ್ತಾರೆ.

    ನ್ಯಾ.ಪಿ.ಸಿ.ಘೋಷ್ ಅವರು ನಾಲ್ಕು ವರ್ಷಗಳ ಕಾಲ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಧೀಶರಾಗಿ ಸೇವೆ ಸಲ್ಲಿಸಿ ಮೇ 2017ರಂದು ನಿವೃತ್ತರಾದರು. ಸದ್ಯ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎಂಎಚ್‌ಆರ್‌ಡಿ) ಸದಸ್ಯರಾಗಿದ್ದಾರೆ.

    ಲೋಕಪಾಲ ಕಾರ್ಯವ್ಯಾಪ್ತಿ ಏನು?:
    ಲೋಕಪಾಲರು ಹಾಲಿ ಮತ್ತು ಮಾಜಿ ಪ್ರಧಾನಿಗಳು, ಸಂಸದರು, ಕೇಂದ್ರ ಮಂತ್ರಿಗಳು, ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಸಿಬ್ಬಂದಿ ಹಾಗೂ 10 ಲಕ್ಷ ರೂ.ಗಿಂತ ಹೆಚ್ಚಿನ ವಿದೇಶಿ ದೇಣಿಗೆ ಸ್ವೀಕರಿಸುವ ಸರ್ಕಾರೇತರ ಸಂಸ್ಥೆಗಳ(ಎನ್‍ಜಿಒ) ಮೇಲೆ ಕೇಳಿಬರುವ ದೂರುಗಳ ತನಿಖೆಯನ್ನು ನಡೆಸುವ ಅಧಿಕಾರವನ್ನು ಹೊಂದಿದ್ದಾರೆ.

  • ಲೋಕಾಯುಕ್ತ ಮುಗಿಸಿದಂತೆ ಲೋಕಪಾಲ್ ಮುಗಿಸ್ತೀರಾ: ಖರ್ಗೆಗೆ ಶ್ರೀನಿವಾಸ ಪೂಜಾರಿ ಪ್ರಶ್ನೆ

    ಲೋಕಾಯುಕ್ತ ಮುಗಿಸಿದಂತೆ ಲೋಕಪಾಲ್ ಮುಗಿಸ್ತೀರಾ: ಖರ್ಗೆಗೆ ಶ್ರೀನಿವಾಸ ಪೂಜಾರಿ ಪ್ರಶ್ನೆ

    ಉಡುಪಿ: ಕರ್ನಾಟಕದಲ್ಲಿ ಲೋಕಾಯುಕ್ತ ಮುಗಿಸಿದಂತೆ ದೇಶದಲ್ಲಿ ಕಾಂಗ್ರೆಸ್ ಲೋಕಪಾಲನ್ನು ಮುಗಿಸ್ತೀರಾ ಅಂತ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ. ಲೋಕಪಾಲ್ ಆಯ್ಕೆ ಸಂಬಂಧ ಐದು ವರ್ಷದಲ್ಲಿ ಒಂದೇ ಒಂದು ಸಭೆಯಲ್ಲಿ ಪಾಲ್ಗೊಳ್ಳದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕೋಟ ಗರಂ ಆಗಿದ್ದಾರೆ.

    ಉಡುಪಿಯಲ್ಲಿ ಮಾತಮಾಡಿದ ಕೋಟ, ಲೋಕಪಾಲ್ ಬಗ್ಗೆ ಅಣ್ಣಾ ಹಜಾರೆ ಧರಣಿ ಕುಳಿತು ದೊಡ್ಡ ಹೋರಾಟ ಕೊಟ್ಟಿದ್ದರು. ದೇಶದ ಜನರ ಕನಸು ಈಗ ನೆರವೇರಿದೆ. ಆದ್ರೆ ಲೋಕಪಾಲ್ ಬಿಲ್ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು ಎನ್ನುವುದನ್ನು ಸ್ಪಷ್ಟಪಡಿಸಬೇಕು ಅಂತ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ. ಮಸೂದೆ ಅನುಷ್ಠಾನ ಕುರಿತು 5 ವರ್ಷದಲ್ಲಿ 7 ಮೀಟಿಂಗ್ ಆಗಿದೆ. ಮಲ್ಲಿಕಾರ್ಜುನ ಖರ್ಗೆ ವಿಪಕ್ಷ ನಾಯಕ ಅಲ್ಲದಿದ್ದರೂ ಅವರನ್ನು ಸಭೆಗೆ ಆಹ್ವಾನಿಸಲಾಗಿತ್ತು. ಕಾಂಗ್ರೆಸ್ ಸಂಸದೀಯ ನಾಯಕನ ನೆಲೆಯಲ್ಲಿ ಖರ್ಗೆಗೆ ಮೋದಿ ಆಹ್ವಾನ ನೀಡಿದ್ದರು. ಆದರೆ ಒಂದು ಸಭೆಗೆ ಖರ್ಗೆ ಹಾಜರಾಗಲಿಲ್ಲ ಎಂದು ಕಿಡಿಕಾರಿದರು.

    ಕಾಂಗ್ರೆಸ್ ಲೋಕಪಾಲ್ ಬಿಲ್ ಪರವೋ ವಿರುದ್ಧವೋ? ಗೊತ್ತಾಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಇದನ್ನು ಕೂಡಲೇ ಸ್ಪಷ್ಟಪಡಿಸಬೇಕು. ಅವರು ಏಳು ಬಾರಿಯೂ ಸಭೆಯನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಈಗ ಅವರು ಉತ್ತರಿಸಬೇಕು. ಲೋಕಪಾಲ್ ಮಸೂದೆಯನ್ನು ನಿರ್ಲಕ್ಷ್ಯ ಮಾಡುತ್ತೀರಾ ಎಂದು ಕೋಟ ಪ್ರಶ್ನೆ ಹಾಕಿದ್ದಾರೆ. ಕರ್ನಾಟಕದಲ್ಲಿ ಲೋಕಾಯುಕ್ತವನ್ನು ಮುಗಿಸಿದ್ದೀರಿ. ದೇಶದಲ್ಲಿ ಲೋಕಪಾಲ್ ಮುಗಿಸುವ ಆಲೋಚನೆಯಲ್ಲಿದ್ದೀರಾ ಅಂತ ಖರ್ಗೆ ಮತ್ತು ಕಾಂಗ್ರೆಸ್ ವಿರುದ್ಧ ಕೋಟ ಕುಟುಕಿದ್ದಾರೆ.

    ಖರ್ಗೆ ಗೈರಾಗಿದ್ದು ಯಾಕೆ?
    ಲೋಕಪಾಲರ ನೇಮಕ ಸಂಬಂಧ ಇರುವ ಸಮಿತಿಯಲ್ಲಿ ವಿರೋಧ ಪಕ್ಷ ನಾಯಕರು ಸದಸ್ಯರಾಗಿರುತ್ತಾರೆ. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ವಿರೋಧ ಪಕ್ಷಕ್ಕೆ ಬೇಕಾಗುವಷ್ಟು ಸ್ಥಾನಗಳನ್ನು ಯಾರು ಪಡೆಯದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಪಕ್ಷ ನಾಯಕನ ಸ್ಥಾನವನ್ನು ನೀಡಿರಲಿಲ್ಲ. ಖರ್ಗೆ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. ಲೋಕಪಾಲ್ ನೇಮಕ ಸಂಬಂಧ ಖರ್ಗೆ ಅವರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲಾಗಿತ್ತು. ವಿಶೇಷ ಆಹ್ವಾನಿತರಾಗಿ ನಾನು ತೆರಳುವುದಿಲ್ಲ ಎಂದು ಹೇಳಿ ಖರ್ಗೆ ಲೋಕಪಾಲ್ ಆಯ್ಕೆ ಸಂಬಂಧ ಕರೆದಿದ್ದ ಸಭೆಗೆ ಗೈರು ಹಾಜರಿ ಹಾಕಿದ್ದರು.

  • ನಿವೃತ್ತ ನ್ಯಾ.ಪಿ.ಸಿ.ಘೋಷ್ ದೇಶದ ಮೊದಲ ಲೋಕಪಾಲ್ – ಘೋಷಣೆ ಮಾತ್ರ ಬಾಕಿ

    ನಿವೃತ್ತ ನ್ಯಾ.ಪಿ.ಸಿ.ಘೋಷ್ ದೇಶದ ಮೊದಲ ಲೋಕಪಾಲ್ – ಘೋಷಣೆ ಮಾತ್ರ ಬಾಕಿ

    ನವದೆಹಲಿ: ಸುಪ್ರೀಂ ಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ಪಿನಾಕಿ ಚಂದ್ರ ಘೋಷ್ ದೇಶದ ಮೊದಲ ಲೋಕಪಾಲ್ ಆಗಿ ನೇಮಕವಾಗಲಿದ್ದಾರೆ. ಮುಂದಿನ ವಾರ ಅಧಿಕೃತವಾಗಿ ಆದೇಶ ಪ್ರಕಟವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

    ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಹಿರಿಯ ವಕೀಲ ಮುಕುಲ್ ರೋಹತ್ಗಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ನಿವೃತ್ತ ನ್ಯಾ.ಪಿ.ಸಿ.ಘೋಷ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಆಯ್ಕೆ ಸಮಿತಿಯ ಮುಂದೆ ಪಿ.ಸಿ.ಘೋಷ್ ಅವರ ಹೆಸರು ಮುಂಚೂಣಿಯಲ್ಲಿತ್ತು ಎನ್ನಲಾಗಿದೆ. ಇದನ್ನು ಓದಿ:  ಲೋಕಪಾಲ್ ಆಯ್ಕೆ ಸಮಿತಿ ಸಭೆಯ ವಿಶೇಷ ಆಹ್ವಾನವನ್ನು ತಿರಸ್ಕರಿಸಿದ ಖರ್ಗೆ

    ಈ ನಿಟ್ಟಿನಲ್ಲಿ ಘೋಷ್ ಅವರ ನೇಮಕಾತಿ ಸ್ಪಷ್ಟನೆ ಹಾಗೂ ಲೋಕಪಾಲ್‍ನ 8 ಜನ ಸದಸ್ಯರ ಆಯ್ಕೆಯ ಕುರಿತು ಮುಂದಿನ ವಾರ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

    ನ್ಯಾ.ಪಿ.ಸಿ.ಘೋಷ್ ಅವರು ನಾಲ್ಕು ವರ್ಷಗಳ ಕಾಲ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಧೀಶರಾಗಿ ಸೇವೆ ಸಲ್ಲಿಸಿ ಮೇ 2017ರಂದು ನಿವೃತ್ತರಾದರು. ಸದ್ಯ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎಂಎಚ್‌ಆರ್‌ಡಿ) ಸದಸ್ಯರಾಗಿದ್ದಾರೆ.

  • ನನ್ನ ಜೀವಕ್ಕೆ ಏನಾದ್ರು ಆದ್ರೆ ಮೋದಿ ಹೊಣೆ: ಅಣ್ಣಾ ಹಜಾರೆ

    ನನ್ನ ಜೀವಕ್ಕೆ ಏನಾದ್ರು ಆದ್ರೆ ಮೋದಿ ಹೊಣೆ: ಅಣ್ಣಾ ಹಜಾರೆ

    ಮುಂಬೈ: ಕಳೆದ 4 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು, ತನ್ನ ಜೀವಕ್ಕೆ ಎನಾದರೂ ಹೆಚ್ಚು ಕಡಿಮೆಯಾದರೇ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.

    ಅಣ್ಣಾ ಹಜಾರೆ ಅವರು “ಲೋಕಪಾಲ” ವನ್ನು ಕೇಂದ್ರದಲ್ಲಿ ಹಾಗೂ “ಲೋಕಾಯುಕ್ತ” ವನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಜನವರಿ 30ರಿಂದ `ಜನ್ ಆಂದೋಲನ್ ಸತ್ಯಾಗ್ರಹ’ ವನ್ನು ಮಹಾರಾಷ್ಟ್ರದ ರಾಲೇಗನ್ ಸಿದ್ಧಿ ಗ್ರಾಮದಲ್ಲಿ ನಡೆಸುತ್ತಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಭ್ರಷ್ಟಾಚಾರ ವಿರೋಧಿ ಇಲಾಖೆಯನ್ನು ಕಾರ್ಯರೋಪಕ್ಕೆ ತರುವಲ್ಲಿ ವಿಫಲವಾಗಿದೆ ಎಂದರು.

    ಲೋಕಾಪಾಲ್ ಹಾಗೂ ಲೋಕಾಯುಕ್ತ ಕಾರ್ಯರೂಪಕ್ಕೆ ಬಂದರೆ ಮಂತ್ರಿಗಳು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದ್ದರಿಂದ ಲೋಕಾಪಾಲ್ ಹಾಗೂ ಲೋಕಾಯುಕ್ತವನ್ನು ಜಾರಿಗೆ ತರುತ್ತಿಲ್ಲ. ಇದರಲ್ಲಿ ಒಂದು ವೇಳೆ ಪ್ರಧಾನಿ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದರೇ ಅವರ ವಿರುದ್ಧವು ಸಾರ್ವಜನಿಕರು ಸಾಕ್ಷಿ ನೀಡಬಹುದು. ಆದರಿಂದ ಯಾವ ಪಕ್ಷವು ಈ ಮಸೂದೆಯನ್ನು ಕಾರ್ಯರೂಪಕ್ಕೆ ತರುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.

    ದೇಶದಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಲೋಕಪಾಲ ಜಾರಿಗೆ ಬರುವುದು ಇಷ್ಟವಿಲ್ಲ. 2013ರಲ್ಲೇ ಲೋಕಪಾಲ್ ಮಸೂದೆಯನ್ನು ಅಂಗೀಕರಿಸಲಾಗಿದೆ. ಆದ್ರೆ ಎನ್‍ಡಿಎ ಸರ್ಕಾರ ಮಾತ್ರ ಅದನ್ನ ಜಾರಿಗೆ ತರುತ್ತಿಲ್ಲ, ಭ್ರಷ್ಟಾಚಾರ ಮುಕ್ತ ದೇಶವನ್ನು ಕಟ್ಟಲು ಮುಂದಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಅಣ್ಣಾ ಹಜಾರೆ

    ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ ಅಣ್ಣಾ ಹಜಾರೆ

    – ಲೋಕಪಾಲ್ ಜಾರಿಗೆ ಒತ್ತಾಯಿಸಿ ಮತ್ತೆ ಹೋರಾಟ ಆರಂಭ

    ಮುಂಬೈ: ಲೋಕಪಾಲ್ ಜಾರಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರು ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಲೋಕಸಭೆ ಚುನಾವಣೆ ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

    ಮಹಾತ್ಮಗಾಂಧಿ ಹುತ್ಮಾತಗೊಂಡ ದಿನವಾದ ಇಂದು ಅಣ್ಣಾ ಹಜಾರೆ ಅವರು, ಸ್ವಗ್ರಾಮ ಮಹಾರಾಷ್ಟ್ರದ ರಾಲೆಗನ್ ಸಿದ್ಧಿಯಲ್ಲಿ ಹೋರಾಟ ಆರಂಭಿಸಿದ್ದಾರೆ. ಕೇಂದ್ರದಲ್ಲಿ ಲೋಕಪಾಲ್ ಮತ್ತು ರಾಜ್ಯದಲ್ಲಿ ಲೋಕಾಯುಕ್ತ ಜಾರಿಗೆ ತರಬೇಕು ಎಂದು ಅಣ್ಣಾ ಹಜಾರೆ ಒತ್ತಾಯಿಸಿದ್ದಾರೆ.

    ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಭರವಸೆ ಮೇಲೆ ಡಿಸೆಂಬರ್ 2018ರಲ್ಲಿ ಕೈಗೊಂಡಿದ್ದ ಉಪವಾಸ ಸತ್ಯಾಗ್ರವನ್ನು ಹಿಂಪಡೆದಿದ್ದೆ. ಆದರೆ ಇಲ್ಲಿಯವರೆಗೂ ಲೋಕಪಾಲ್ ಜಾರಿಗೆ ಬಂದಿಲ್ಲ. ಹೀಗಾಗಿ ಜನವರಿ 28ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಲೋಕಪಾಲ್ ಜಾರಿಗೆ ಒತ್ತಾಯಿಸಿ 9 ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಸ್ವಗ್ರಾಮ ರಾಲೆಗನ್ ಸಿದ್ಧಿಯಲ್ಲಿ ಹೋರಾಟಕ್ಕೆ ಮುಂದಾಗಿರುವೆ ಅಂತ ತಿಳಿಸಿರುವೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

    ನಮ್ಮ ಹೋರಾಟ ಆರಂಭವಾಗಿ 5 ವರ್ಷ ಕಳೆದರೂ ಕೇಂದ್ರದಲ್ಲಿ ಲೋಕಪಾಲ್ ಜಾರಿಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಲೋಕಪಾಲರನ್ನು ನೇಮಕ ಮಾಡಿಲ್ಲ. ಅಷ್ಟೇ ಅಲ್ಲದೆ ಮಹಾರಾಷ್ಟ್ರದಲ್ಲಿ ಲೋಕಾಯುಕ್ತ ಕಾಯ್ದೆ ಜಾರಿಯಾಗಿಲ್ಲ ಎಂದು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv