Tag: ಲೋಕಪಾಲ

  • ಭಾರತದ ಮೊದಲ ಲೋಕಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿ.ಸಿ.ಘೋಷ್

    ಭಾರತದ ಮೊದಲ ಲೋಕಪಾಲರಾಗಿ ಪ್ರಮಾಣ ವಚನ ಸ್ವೀಕರಿಸಿದ ಪಿ.ಸಿ.ಘೋಷ್

    ನವದೆಹಲಿ: ಭಾರತ ಮೊದಲ ಲೋಕಪಾಲರಾಗಿ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶ ಪಿಣಕಿ ಚಂದ್ರ ಘೋಷ್ ಅವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.

    ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪಿ.ಸಿ.ಘೋಷ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಪ್ರಮಾಣ ವಚನ ಕಾರ್ಯಕ್ರಮವು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಸಮ್ಮುಖದಲ್ಲಿ ನಡೆಯಿತು.

    ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್ ಹಾಗೂ ಹಿರಿಯ ವಕೀಲ ಮುಕುಲ್ ರೋಹ್ಟಗಿ ಅವರನ್ನು ಒಳಗೊಂಡ ಆಯ್ಕೆ ಸಮಿತಿಯು ಮಾರ್ಚ್ 19ರಂದು ಪಿ.ಸಿ.ಘೋಷ್ ಅವರನ್ನು ಲೋಕಪಾಲರಾಗಿ ಆಯ್ಕೆ ಮಾಡಿ ಘೋಷನೆ ಮಾಡಿದ್ದರು.

    ನ್ಯಾ.ಪಿ.ಸಿ.ಘೋಷ್ ಅವರು ನಾಲ್ಕು ವರ್ಷಗಳ ಕಾಲ ಸುಪ್ರೀಂಕೋರ್ಟ್ ನ್ಯಾಯಧೀಶರಾಗಿ ಸೇವೆ ಸಲ್ಲಿಸಿ ಮೇ 2017ರಂದು ನಿವೃತ್ತರಾಗಿದ್ದರು. ಲೋಕಪಾಲರಾಗಿ ಆಯ್ಕೆಯಾಗುವುದಕ್ಕೂ ಮುನ್ನ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎಂಎಚ್‍ಆರ್‍ಡಿ) ಸದಸ್ಯರಾಗಿದ್ದರು.

    ಲೋಕಪಾಲ ಕಾರ್ಯವ್ಯಾಪ್ತಿ ಏನು?:
    ಲೋಕಪಾಲರು ಹಾಲಿ ಮತ್ತು ಮಾಜಿ ಪ್ರಧಾನಿಗಳು, ಸಂಸದರು, ಕೇಂದ್ರ ಮಂತ್ರಿಗಳು, ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ ಸಿಬ್ಬಂದಿ ಹಾಗೂ 10 ಲಕ್ಷ ರೂ.ಗಿಂತ ಹೆಚ್ಚಿನ ವಿದೇಶಿ ದೇಣಿಗೆ ಸ್ವೀಕರಿಸುವ ಸರ್ಕಾರೇತರ ಸಂಸ್ಥೆಗಳ(ಎನ್‍ಜಿಒ) ಮೇಲೆ ಕೇಳಿಬರುವ ದೂರುಗಳ ತನಿಖೆಯನ್ನು ನಡೆಸುವ ಅಧಿಕಾರವನ್ನು ಹೊಂದಿದ್ದಾರೆ.

  • ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

    ಜ.30 ರಿಂದ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ

    ನವದೆಹಲಿ: ಲೋಕಪಾಲ ನೇಮಕ ಮಾಡುವಂತೆ ಒತ್ತಾಯಿಸಿ 81 ವರ್ಷದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಜನವರಿ 30 ರಿಂದ ಉಪವಾಸ ಸತ್ಯಾಗ್ರಹ ಆರಂಭ ಮಾಡುವುದಾಗಿ ಹೇಳಿದ್ದಾರೆ.

    ಭ್ರಷ್ಟಚಾರ ವಿರುದ್ಧ ಹೋರಾಟ ಮಾಡಲು ಲೋಕಪಾಲ ಸಂಸ್ಥೆ ಅನಿವಾರ್ಯವಾಗಿದ್ದು, ಕೂಡಲೇ ಸಂಸ್ಥೆಗೆ ಮುಖ್ಯಸ್ಥರನ್ನು ನೇಮಕ ಮಾಡಬೇಕು. 2013ರಲ್ಲಿ ಲೋಕಪಾಲ ಮಸೂದೆ ರಚನೆ ಆಗಿದ್ದು, 2014ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಆಡಳಿತವಹಿಸಿಕೊಂಡಿತ್ತು. ಆಗ ಉತ್ತಮ ಆಡಳಿತ ನಿರೀಕ್ಷೆಯಲ್ಲಿದ್ದೇವೂ. ಆದರೆ ಕಳೆದ 5 ವರ್ಷಗಳಲ್ಲಿ ಅವರು ಏನು ಮಾಡಲಿಲ್ಲ. ಆದ್ದರಿಂದ ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದೇನೆ. ಮಹಾರಾಷ್ಟ್ರದ ರಾಲೇಗಾವ್ ಸಿದ್ದಿಯಲ್ಲಿ ಸತ್ಯಾಗ್ರಹ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

    ಲೋಕಪಾಲ ನೇಮಕ ಮಾಡುವಂತೆ ಈ ಹಿಂದೆ ಅಣ್ಣಾ ಹಜಾರೆ ಪ್ರಧಾನಿ ಅವರಿಗೆ ಪತ್ರವನ್ನು ಬರೆದಿದ್ದರು. ಅಲ್ಲದೇ ಈ ಹಿಂದೆಯೇ ಉಪವಾಸ ಸತ್ಯಾಗ್ರಹ ಮಾಡಲು ತೀರ್ಮಾನಿಸಿದ್ದ ಹಜಾರೆ ಅವರು ಕೇಂದ್ರ ಸರ್ಕಾರ ಭರವಸೆಯ ಮೇರೆಗೆ ಹಿಂದೆ ಸರಿದ್ದರು. ಆದರೆ ಇನ್ನು ಅವರ ಸುಳ್ಳು ಆಶ್ವಾಸನೆಗಳನ್ನು ನಂಬಲು ಆಗಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಮ್ಮೆ ಮೋದಿ ವಿಶೇಷ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜನ ಖರ್ಗೆ

    ಮತ್ತೊಮ್ಮೆ ಮೋದಿ ವಿಶೇಷ ಆಹ್ವಾನ ತಿರಸ್ಕರಿಸಿದ ಮಲ್ಲಿಕಾರ್ಜನ ಖರ್ಗೆ

    ನವದೆಹಲಿ: ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಪಾಲ ರಚನೆಯ ಚರ್ಚೆ ಕುರಿತ ಸಭೆಗೆ ಪ್ರಧಾನಿ ಮೋದಿ ಆಹ್ವಾನವನ್ನು ತಿರಸ್ಕರಿಸಿದ್ದು, ಸಭೆಗೆ ಗೈರು ಹಾಜರಾಗುವ ಕುರಿತು ಪತ್ರ ಬರೆದಿದ್ದಾರೆ.

    ತಮ್ಮ ಗೈರು ಹಾಜರಿಗೆ ಕಾರಣವನ್ನು ತಿಳಿಸಿರುವ ಖರ್ಗೆ ಪೂರ್ಣ ಪ್ರಮಾಣದಲ್ಲಿ ಲೋಕಪಾಲ ಆಯ್ಕೆ ಸಮಿತಿ ನೇಮಕವಾಗುವರೆಗೂ, ಕಾಂಗ್ರೆಸ್ ವಿರೋಧಿ ಪಕ್ಷವಾಗಿ ಯಾವುದೇ ಚರ್ಚೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

    ತಮಗೆ ನೀಡಿದ ವಿಶೇಷ ಆಹ್ವಾನದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಅವರು, ತಮಗೆ ವಿಶೇಷ ಆಹ್ವಾನಿತ ಎಂಬ ಮನ್ನಣೆ ಬೇಡ, ಅತಿ ದೊಡ್ಡ ವಿರೋಧಿ ಪಕ್ಷದ ನಾಯಕನಿಗೆ ಸಮಿತಿಯಲ್ಲಿ ಸ್ಥಾನ ನೀಡಬೇಕು. ವಿಶೇಷ ಆಹ್ವಾನದ ಮೇರೆಗೆ ಯಾವುದೇ ಅಧಿಕಾರವಿರುವುದಿಲ್ಲ. 2013 ರ ಲೋಕಪಾಲ ಕಾಯ್ದೆಯ ಸಮಿತಿ ರಚನೆಯಾಗಬೇಕು ಎಂದು ತಿಳಿಸಿದ್ದಾರೆ.

    ಒಂದೊಮ್ಮೆ ಸರ್ಕಾರಕ್ಕೆ ಲೋಕಪಾಲ ರಚನೆ ಕುರಿತು ನಿಜವಾದ ಇಚ್ಛಾಶಕ್ತಿ ಹೊಂದಿದ್ದರೆ, ವಿರೋಧ ಪಕ್ಷದ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಅಧಿಕಾರಿದಲ್ಲಿದ್ದು, ಲೋಕಪಾಲ ರಚನೆ ಮಾಡುವ ಯಾವುದೇ ಆಸಕ್ತಿಯನ್ನು ಬಿಜೆಪಿ ಹೊಂದಿಲ್ಲ ಎಂದು ಆರೋಪಿಸಿದರು.

    ಪ್ರಧಾನಿ ಮೋದಿ ನೇತೃತ್ವದ ಸಭೆ ಗುರುವಾರ ನಿಗದಿಯಾಗಿತ್ತು. ಈ ಹಿಂದೆಯೂ ಇದೇ ಕಾರಣ ನೀಡಿ ಮಾರ್ಚ್ 1 ಹಾಗೂ ಏಪ್ರಿಲ್ 10 ರಂದು ನಿಗದಿಯಾಗಿದ್ದ ಸಭೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದರು.

  • ಮಹಾ ಸಿಎಂ ಭೇಟಿ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಅಣ್ಣಾ ಹಜಾರೆ

    ಮಹಾ ಸಿಎಂ ಭೇಟಿ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಅಣ್ಣಾ ಹಜಾರೆ

    ನವದೆಹಲಿ: ಲೋಕಪಾಲ ರಚನೆ, ಎಲ್ಲಾ ರಾಜ್ಯಗಳಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ನೇಮಕ ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಸತ್ಯಾಗ್ರಹ ಆರಂಭಿಸಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ.

    ಇಂದು ದೆಹಲಿಯ ರಾಮಲೀಲಾ ಮೈದಾನಕ್ಕೆ ಭೇಟಿ ನೀಡಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಜೊತೆ ಚರ್ಚೆ ನಡೆಸಿದ ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದರು.

    ಈ ವೇಳೆ ಮಾತನಾಡಿದ ಅಣ್ಣಾ ಹಜಾರೆ ಅವರು, ಲೋಕಪಾಲ ರಚನೆ ವಿವಾದ ಇನ್ನೂ ಬಾಕಿ ಉಳಿದಿದೆ. ಸಿಎಂ ಫಡ್ನವೀಸ್ ಅವರು ವಿವಾದವನ್ನು ಇನ್ನೂ 6 ತಿಂಗಳಲ್ಲಿ ಪರಿಹಾರ ನೀಡುವುದಾಗಿ ಆಶ್ವಾಸನೆ ನೀಡಿದ್ದಾರೆ. ಸರ್ಕಾರದ ಮತ್ತು ಪ್ರಜೆಗಳು ಬೇರೆ ಅಲ್ಲ. ಜನರಿಗೆ ಒಳ್ಳೆಯದು ಮಾಡುವುದು ಸರ್ಕಾರ ಕರ್ತವ್ಯ ಎಂದು ಹೇಳಿದರು.

    ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವ ಗಜೇಂದ್ರ ಸಿಂಗ್ ಶೆಖಾವಾತ್ ಅವರು ಸಾಥ್ ನೀಡಿದ್ದರು.

  • ಲೋಕಪಾಲ್ ಆಯ್ಕೆ ಸಮಿತಿ ಸಭೆಯ ವಿಶೇಷ ಆಹ್ವಾನವನ್ನು ತಿರಸ್ಕರಿಸಿದ ಖರ್ಗೆ

    ಲೋಕಪಾಲ್ ಆಯ್ಕೆ ಸಮಿತಿ ಸಭೆಯ ವಿಶೇಷ ಆಹ್ವಾನವನ್ನು ತಿರಸ್ಕರಿಸಿದ ಖರ್ಗೆ

    ನವದೆಹಲಿ: ಲೋಕಾಪಾಲ್ ಆಯ್ಕೆ ಸಮಿತಿಗೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಬರೆದ ಪತ್ರದ ಆಹ್ವಾನವನ್ನ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ತಿರಸ್ಕರಿಸಿದ್ದಾರೆ.

    ಈ ಕುರಿತು ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಅವರು ಆಹ್ವಾನ ನೀಡಿದ್ದಾರೆ. ಆದರೆ ಈ ಆಹ್ವಾನದಲ್ಲಿ ನಮ್ಮನ್ನು ವಿಶೇಷ ಆಹ್ವಾನಿತರಾಗಿ ಪರಿಗಣಿಸಿದ್ದಾರೆ. ಒಂದು ವೇಳೆ ಈ ಸಭೆಯಲ್ಲಿ ನಾವು ಭಾಗವಹಿಸಿ ಲೋಕಾಪಾಲ್ ಸ್ಥಾನಕ್ಕೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡದೆ ಇದ್ದರೆ, ವಿಶೇಷ ಆಹ್ವಾನಿತರಾಗಿರುವ ನಮಗೇ ಆದನ್ನು ವಿರೋಧಿಸುವ ಅಧಿಕಾರ ಇರುವುದಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

    ವಿಶೇಷ ಆಹ್ವಾನಿತರಿತರಿಗೆ ಲೋಕಪಾಲ್ ನೇಮಕದಲ್ಲಿ ಮಹತ್ವವಿಲ್ಲ. ವಿಶೇಷ ಆಹ್ವಾನಿತರ ಮಾತಿಗೂ ಸಭೆಯಲ್ಲಿ ಬೆಲೆ ಇಲ್ಲ. ಲೋಕಪಾಲ್ ಕಾಯ್ದೆಯಾಗಿ ನಾಲ್ಕು ವರ್ಷವಾಗಿದೆ. ಅಲ್ಲದೇ ಕಾಯ್ದೆಗೆ ತಿದ್ದುಪಡಿಯನ್ನು ತರಲಾಗಿದೆ. ನಂತರ ಮಸೂದೆಯನ್ನು ಸ್ಟ್ಯಾಂಡಿಂಗ್ ಕಮಿಟಿ ಮುಂದೆ ಕಳುಹಿಸಲಾಯಿತು. ಕಳೆದ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಬಹುದಿತ್ತು. ಆದರೆ ಇಂತಹ ಯಾವುದೇ ಕಾರ್ಯವನ್ನು ಮಾಡಲಿಲ್ಲ ಎಂದು ದೂಷಿಸಿದರು.

    ಲೋಕಪಾಲರ ನೇಮಕಕ್ಕೆ ಈಗಾಗಲೇ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಆದರೆ ಕೇಂದ್ರ ಸರ್ಕಾರ ತರಾತುರಿಯಲ್ಲಿ ಲೋಕಪಾಲ್ ನೇಮಕಕ್ಕೆ ಮುಂದಾಗಿದ್ದಾರೆ. ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳಿಗೂ ಅವಕಾಶ ನೀಡಬೇಕು. ಲೋಕಪಾಲ್ ತಿದ್ದುಪಡಿ ಮಸೂದೆಯನ್ನು ಅನುಷ್ಠಾನ ಗೊಳಿಸಬೇಕಿತ್ತು. ಲೋಕಪಾಲರ ನೇಮಕದಲ್ಲಿ ವಿಶೇಷ ಆಹ್ವಾನಿತರ ಪಾತ್ರ ಏನೂ ಇಲ್ಲ. ಸಭೆಗೆ ಹೋಗಿ ಮೂಲೆಯಲ್ಲಿ ಕೂತು ಬರಲು ಹೋಗಲ್ಲ. ಪ್ರಧಾನಿ ಮೋದಿಯವರಿಗೆ ಲೋಕಪಾಲರೆಂದರೆ ಅಲರ್ಜಿ. ಗುಜರಾತ್ ನಲ್ಲಿ 13 ವರ್ಷ ಆಡಳಿತ ನಡೆಸಿದರೂ ಲೋಕಾಯುಕ್ತರನ್ನೇ ನೇಮಕ ಮಾಡಲಿಲ್ಲ ಎಂದು ಆರೋಪಿಸಿದರು.

    ದೇಶದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಪಾಲ ನೇಮಕ ಆಯ್ಕೆ ನಿರ್ಣಾಯಕವಾಗಿದ್ದು, ಇಂತಹ ಮಹತ್ವದ ಹುದ್ದೆಗೆ ಅರ್ಹರನ್ನು ನೇಮಕ ಮಾಡುವಾಗ ಪ್ರತಿಪಕ್ಷಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಅನಿವಾರ್ಯ. ಆದರೆ ಮೋದಿ ಸರ್ಕಾರ ನಾಮಕಾವಸ್ತೆ ಎಂಬಂತೆ ವಿಶೇಷ ಆಹ್ವಾನಿತರಾಗಿ ಆಹ್ವಾನಿಸಿದೆ. ಆ ಮೂಲಕ ಪ್ರತಿಪಕ್ಷಗಳಿಲ್ಲದೇ ಲೋಕಪಾಲ ಆಯ್ಕೆ ಮಾಡುವುದು ಕೇಂದ್ರ ಸರ್ಕಾರದ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

    ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆ ಪ್ರಕಾರ, ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯಲ್ಲಿ ಲೋಕಸಭಾ ಸ್ಪೀಕರ್, ಲೋಕಸಭೆಯ ವಿರೋಧ ಪಕ್ಷ ನಾಯಕ, ಸುಪ್ರೀಂ ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನೇಮಕ ಮಾಡುವ ಸುಪ್ರೀಂ ಕೋರ್ಟ್‍ನ ಒಬ್ಬರು ನ್ಯಾಯಮೂರ್ತಿ ಮತ್ತು ರಾಷ್ಟ್ರಪತಿ ನೇಮಕ ಮಾಡುವ ಒಬ್ಬ ಕಾನೂನು ತಜ್ಞರು ಸದಸ್ಯರಾಗಿರುತ್ತಾರೆ.

    ಲೋಕಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯಬೇಕಾದರೆ ಒಟ್ಟು ಸದಸ್ಯರ 10ನೇ ಒಂದು ಭಾಗದ ಸದಸ್ಯರು ಆಯ್ಕೆಯಾಗಬೇಕಾಗುತ್ತದೆ. 16ನೇ ಲೋಕಸಭೆಯಲ್ಲಿ ಯಾವೊಂದು ವಿರೋಧ ಪಕ್ಷವು 55 ಸ್ಥಾನಗಳನ್ನು ಗೆದ್ದುಕೊಂಡಿಲ್ಲ. ಕಾಂಗ್ರೆಸ್ 44 ಸ್ಥಾನ ಗೆದ್ದಿದ್ದರೂ ವಿರೋಧ ಪಕ್ಷಕ್ಕೆ ಬೇಕಾಗಿದ್ದ ಸಂಖ್ಯೆಯನ್ನು ತಲುಪದ ಕಾರಣ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನಮಾನ ಸಿಗದೇ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನಮಾನ ಸಿಕ್ಕಿತ್ತು.