Tag: ಲೊಕಸಭಾ ಚುನಾವಣೆ

  • ನಿಖಿಲ್ ಸೋಲಿಸಿ, ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ: ಸಿಎಂ

    ನಿಖಿಲ್ ಸೋಲಿಸಿ, ನನ್ನನ್ನು ಮುಗಿಸಲು ಎಲ್ಲಾ ಪ್ರಯತ್ನ ನಡೆದಿದೆ: ಸಿಎಂ

    ಉಡುಪಿ: ಮಂಡ್ಯ ಲೋಕಸಭಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಈ ನಡುವೆ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಸೋಲಿಸಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ. ನಾನು ಮಂಡ್ಯಕ್ಕೆ ಹೋಗಿ 6 ದಿನ ಆಯ್ತು ಅಷ್ಟೇ. ಅಲ್ಲಿ ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ. ಕುತಂತ್ರ ಮಾಡುತ್ತಿರುವವರು ನಮ್ಮ ವಿರೋಧಿಗಳು. ಮಂಡ್ಯದಲ್ಲಿ ಸ್ಟ್ರಾಟಜಿ ಮಾಡಿ ಚುನಾವಣೆ ಮಾಡುವ ಅಗತ್ಯ ಇಲ್ಲ. ಮಂಡ್ಯ ಜಿಲ್ಲೆ ನಮ್ಮ ಹೃದಯ ಇದ್ದಂತೆ. ಅಲ್ಲಿನ ನಾಡಿಮಿಡಿತ ನಮಗೆ ಗೊತ್ತಿದೆ. ಯಾರ ಡ್ರಾಮಾನೂ ಮಂಡ್ಯದಲ್ಲಿ ನಡೆಯುವುದಿಲ್ಲ. ರೈತರು ಸತ್ತಾಗ ಯಾರೂ ಬಂದಿಲ್ಲ. ಕಂಪೌಂಡ್ ಕಟ್ಟಿಸಿದ ಮಾತ್ರಕ್ಕೆ ಅದು ಅಭಿವೃದ್ಧಿ ಆಗಲ್ಲ ಎಂದು ಸುಮಲತಾ ಅಂಬರೀಶ್‍ಗೆ ಸಿಎಂ ಟಾಂಗ್ ನೀಡಿದ್ದಾರೆ.

    ಬಳಿಕ ಮಂಡ್ಯದಲ್ಲಿ ನಾನು ನಮ್ಮ ಜೆಡಿಎಸ್ ಕಾರ್ಯಕರ್ತರ ಮೇಲೆ ಡಿಪೆಂಡ್ ಆಗಿದ್ದೇನೆ. ಯಾರ್ ಯಾರು ಏನೇನ್ ಮಾಡ್ತಾರೆ ಗೊತ್ತಿದೆ. ಮೂರು ತಿಂಗಳ ಹಿಂದೆಯಿಂದ ಎಲ್ಲವೂ ನಡೆಯುತ್ತಿದೆ. ಅಂಬರೀಶ್ ದೇಹಕ್ಕೆ ಅಗ್ನಿ ಸ್ಪರ್ಶ ಆದಕೂಡಲೇ ರಾಜಕೀಯ ಆರಂಭವಾಗಿದೆ. ಮಂಡ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಎಲ್ಲರೂ ಹೊರಟಿದ್ದಾರೆ. ನಾನು ಚೆಲುವರಾಯ ಸ್ವಾಮಿ ಬಗ್ಗೆ ಮಾತೇ ಆಡಿಲ್ಲ. ಬೆನ್ನಿಗೆ ಚೂರಿ ಹಾಕುವವರ ಬಗ್ಗೆ ಮಾತನಾಡಿದ್ದೆ. ನಾನು ಚೆಲುವರಾಯಸ್ವಾಮಿ ಬೆನ್ನಿಗೆ ಚೂರಿ ಹಾಕುತ್ತಾರೆ ಅಂದಿಲ್ಲ ಎಂದು ಸಿಎಂ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

  • ಕಾಂಗ್ರೆಸ್ ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಲಿಲ್ಲ, ಇದು ನಮ್ಮ ಪುಣ್ಯ: ಸುರೇಶ್ ಕುಮಾರ್

    ಕಾಂಗ್ರೆಸ್ ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಸಾಕ್ಷಿ ಕೇಳಲಿಲ್ಲ, ಇದು ನಮ್ಮ ಪುಣ್ಯ: ಸುರೇಶ್ ಕುಮಾರ್

    – ಬಿಜೆಪಿ ಯೋಗ್ಯರಿಗೆ ಟಿಕೆಟ್ ಕೊಟ್ಟಿದೆ, ಅಯೋಗ್ಯರಿಗಲ್ಲ: ಯತ್ನಾಳ್‍ಗೆ ತಿರುಗೇಟು
    – ಸಮ್ಮಿಶ್ರ ಸರ್ಕಾರದಲ್ಲಿ ದುಷ್ಟ ಜೋಡೆತ್ತುಗಳಿವೆ: ತೇಜಸ್ವಿನಿ ಗೌಡ

    ಬೆಂಗಳೂರು: ಕಾಂಗ್ರೆಸ್‍ನವರು ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿಲ್ಲ. ಇದು ನಮ್ಮ ಪುಣ್ಯ. ಕಾಂಗ್ರೆಸ್ ನಾಯಕರಿಗೆ ಪ್ರಬುದ್ಧತೆ ಬಂದಿರುವುದು ಸಂತೋಷ ತಂದಿದೆ ಎಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಲೇವಡಿ ಮಾಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕರು, ಸ್ಪೇಸ್ ಸರ್ಜಿಕಲ್ ಸ್ಟ್ರೈಕ್‍ನಿಂದ ಬಿಜೆಪಿಗೆ ಲಾಭ ವಿಚಾರ ಎನ್ನುವ ಕಾಂಗ್ರೆಸ್ ನಾಯಕರ ಟೀಕೆಗೆ ತಿರುಗೇಟು ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಭಾಷಣವನ್ನು ಕಾಂಗ್ರೆಸ್‍ನವರು ಪೂರ್ಣ ಕೇಳಲಿ. ಬಳಿಕ ಪ್ರತಿಕ್ರಿಯೆ ನೀಡಲಿ. ಸ್ಪೇಸ್ ಸರ್ಜಿಕಲ್ ಸ್ಟ್ರೈಕ್ ಶ್ರೇಯಸ್ಸು ಡಿಆರ್ ಡಿಒ ವಿಜ್ಞಾನಿಗಳಿಗೆ ಸಲ್ಲುತ್ತದೆ ಎಂದು ಪ್ರಧಾನಿ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ. ನಮ್ಮ ವಿಜ್ಞಾನಿಗಳ ಸಾಧನೆಯನ್ನು ದೇಶಕ್ಕೆ ತಿಳಿಯಲಿ ಎನ್ನುವ ಕಾರಣಕ್ಕೆ ಸುದ್ದಿಗೋಷ್ಠಿ ಮಾಡಿದರು ಎಂದು ತಿಳಿಸಿದರು.

    ಸಮ್ಮಿಶ್ರ ಸರ್ಕಾರದ ಅವಸ್ಥೆ ಹರಿದ ಬಟ್ಟೆಯಂತಾಗಿದೆ. ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‍ಗೆ ಅಭ್ಯರ್ಥಿ ಸಿಕ್ಕಿಲ್ಲ. ಹೊಸ ರೀತಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಚುನಾವಣೆ ಹಾಸ್ಯಾಸ್ಪದವಾಗಿ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು.

    ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಿದರೆ ಅಂಬರೀಶ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದು ಮತದಾರರನ್ನು ಬ್ಲಾಕ್ ಮೇಲ್ ಮಾಡುವ ಹೇಳಿಕೆ. ಮಂಡ್ಯದಲ್ಲಿ ಮುಕ್ತ, ಶಾಂತಿಯುತ ಮತದಾನ ನಡೆಯಬೇಕು. ಈ ನಿಟ್ಟಿನಲ್ಲಿ ಮಂಡ್ಯವನ್ನು ಅತಿ ಸೂಕ್ಷ್ಮ ಕ್ಷೇತ್ರವೆಂದು ಚುನಾವಣಾ ಆಯೋಗ ಘೋಷಿಸಬೇಕು ಎಂದು ಆಗ್ರಹಿಸಿದರು.

    ತೇಜಸ್ವಿನಿ ಅನಂತ್‍ಕುಮಾರ್ ಅವರಿಗೆ ಟಿಕೆಟ್ ತಪ್ಪಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಶಾಸಕರು, ತೇಜಸ್ವಿನಿ ಅವರ ಹೆಸರನ್ನು ರಾಜ್ಯ ಕೋರ್ ಕಮಿಟಿ ಕಳಿಸಿತ್ತು ಹಾಗೂ ಟಿಕೆಟ್ ಸಿಗುವ ನಿರೀಕ್ಷೆ ಹೊಂದಿದ್ದೆವು. ಆದರೆ ಪಕ್ಷದ ತೀರ್ಮಾನದಂತೆ ಟಿಕೆಟ್ ಸಿಗಲಿಲ್ಲ. ಇದೇ ಕಾರಣಕ್ಕೆ ತೇಜಸ್ವಿನಿ ಅವರಿಗೆ ಟಿಕೆಟ್ ಕೈತಪ್ಪಿದೆ ಎಂದು ಹೇಳಲು ಸಾಧ್ಯವಿಲ್ಲ. ತುಮಕೂರು ಸಂಸದ ಮುದ್ದಹನುಮೇಗೌಡ ಅವರಂತೆ ತೇಜಸ್ವಿನಿ ಅನಂತ್‍ಕುಮಾರ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿಲ್ಲ. ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸಿ, ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್‍ಗೆ ಟಾಂಗ್ ಕೊಟ್ಟರು.

    ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸುರೇಶ್ ಕುಮಾರ್ ಅವರು, ಬಿಜೆಪಿ ಹೈಕಮಾಂಡ್ ಯೋಗ್ಯರಿಗೆ ಟಿಕೆಟ್ ಕೊಟ್ಟಿದೆ. ಯಾವುದೇ ಅಯೋಗ್ಯರಿಗೆ ಟಿಕೆಟ್ ಕೊಟ್ಟಿಲ್ಲ. ಚುನಾವಣಾ ಕಣದಲ್ಲಿರುವ ಎಲ್ಲರೂ ಯೋಗ್ಯರೇ. ಎಲ್ಲರೂ ಗೆದ್ದು ಬರುತ್ತಾರೆ ಎಂದು ತಿರುಗೇಟು ಕೊಟ್ಟರು.

    ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ ಮಾತನಾಡಿ, ಸಮ್ಮಿಶ್ರ ಸರ್ಕಾರದಲ್ಲಿ ದುಷ್ಟ ಜೋಡೆತ್ತುಗಳಿವೆ. ಅವುಗಳು ಚುನಾವಣಾ ಸಂಸ್ಕೃತಿಯನ್ನು ಹಾಳು ಮಾಡುತ್ತಿವೆ ಎಂದು ಸಿಎಂ ಕುಮಾರಸ್ವಾಮಿ ಹಾಗೂ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.

    ಮಂಡ್ಯದಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಸಿಎಂ ತಮ್ಮ ಮಗ ನಿಖಿಲ್ ನಾಮಪತ್ರ ಸಲ್ಲಿಸುವ ದಿನದಂದು 3 ಗಂಟೆಗೂ ಹೆಚ್ಚು ಕಾಲ ಮೈಸೂರು-ಬೆಂಗಳೂರು ರಸ್ತೆ ಬಂದ್ ಮಾಡಿಸಿದ್ದರು. ನಟರಾದ ಯಶ್, ಹಾಗೂ ದರ್ಶನ್ ವಿರುದ್ಧ ಜೆಡಿಎಸ್ ನಾಯಕರು ಅವಮಾನಕರ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

    ಪತಿ ನಿಧನರಾದ ಬಳಿಕ ಮಹಿಳೆಯರು ರಾಜಕೀಯಕ್ಕೆ ಬರಲೇಬಾರದೆಂಬ ಧೋರಣೆಯನ್ನು ಜೆಡಿಎಸ್‍ನವರು ತೋರುತ್ತಿದ್ದಾರೆ. ಮಂಡ್ಯ ರಾಜಕಾರಣದಲ್ಲಿ ಸುಮಲತಾ ಪರ ಅಲೆ ಇದೆ. ಅಷ್ಟೇ ಅಲ್ಲದೆ ಸುಮಲತಾರಿಗೆ ಬಿಜೆಪಿ ಹಾಗೂ ರೈತಸಂಘದ ಬೆಂಬಲವಿದೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಹೆದರಿದ್ದು, ಅವರ ಮನಸಲ್ಲಿರುವ ಭಯ ನಮಗೆ ಅರ್ಥವಾಗುತ್ತಿದೆ ಎಂದರು.