Tag: ಲೇಡೀಸ್ ಹೆಲ್ಪ್ ಕಂಟ್ರೋಲ್ ರೂಮ್

  • ಕ್ರೈಂ ತಡೆಯಲು ಗದಗನಲ್ಲಿ ಲೇಡೀಸ್ ಹೆಲ್ಪ್ ಕಂಟ್ರೋಲ್ ರೂಮ್ ಓಪನ್

    ಕ್ರೈಂ ತಡೆಯಲು ಗದಗನಲ್ಲಿ ಲೇಡೀಸ್ ಹೆಲ್ಪ್ ಕಂಟ್ರೋಲ್ ರೂಮ್ ಓಪನ್

    ಗದಗ: ಮಹಿಳೆಯ ಮೇಲಿನ ಅತ್ಯಾಚಾರ, ಮೋಸ ವಂಚನೆ ಹಾಗೂ ದೌರ್ಜನ್ಯ ಪ್ರಕರಣಗಳು ಇತ್ತೀಚಿಗೆ ಹೆಚ್ಚಾಗುತ್ತಿವೆ. ಕಾಮುಕರ ಹಾಗೂ ಕಳ್ಳಕಾಕರ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಮೊಟ್ಟಮೊದಲ ಬಾರಿಗೆ ಗದಗ ಜಿಲ್ಲಾ ಪೊಲೀಸರು ಮಹಿಳೆಯರಿಗಾಗಿ ಹೆಲ್ಪ್ ಲೈನ್ ಓಪನ್ ಮಾಡುವ ಮೂಲಕ ವಿನೂತನವಾಗಿ ಕ್ರೈಂ ತಡೆಯಲು ಮುಂದಾಗಿದ್ದಾರೆ.

    ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಕಡೆಗೆ ಮತ್ತೊಂದು ವಿನೂತನ ಹೆಜ್ಜೆ ಇಟ್ಟಿರುವ ಗದಗ ಜಿಲ್ಲಾ ಪೊಲೀಸರು ರಾತ್ರಿ ವೇಳೆ ಅಸುರಕ್ಷಿತ ಭಾವನೆ ಮೂಡಿದ್ದಲ್ಲಿ ತಕ್ಷಣ ಪೊಲೀಸರ ಸಹಾಯ ಪಡೆಯುವ ಅವಕಾಶ ನೀಡಿದೆ. ಜಿಲ್ಲೆಯಲ್ಲಿ ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆವರೆಗೆ ಮಹಿಳೆಯರಿಗೆ ಅಸುರಕ್ಷಿತ ಎನಿಸುವ ಸಂದರ್ಭ ಎದುರಾದರೆ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಲ್ಲಿ, ಪೊಲೀಸರು ತಕ್ಷಣ ಧಾವಿಸಿ ಅಗತ್ಯ ನೆರವು ನೀಡಲಿದ್ದಾರೆ. ಇದಕ್ಕಾಗಿ ಗದಗ-ಬೆಟಗೇರಿ ಅವಳಿ ನಗರದಲ್ಲಿ 2 ವಾಹನಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

    ಹೇಗೆ ಕಾರ್ಯ ನಿರ್ವಹಣೆ?
    ನಗರದಲ್ಲಿ 2 ವಾಹನಗಳನ್ನು ಇದಕ್ಕಾಗಿ ನಿಯೋಜಿಸಲಾಗುತ್ತದೆ. ರಾತ್ರಿ 10ರಿಂದ ಬೆಳಗ್ಗಿನ ಜಾವ 6 ಗಂಟೆವರೆಗೆ ಮೊಬೈಲ್ ನಂ. 94808 -04400, ಪೊಲೀಸ್ ಕಂಟ್ರೋಲ್ ರೂಮ್ 100 ಅಥವಾ 112 ಸಂಖ್ಯೆಗೆ ಕರೆ ಮಾಡಿ ಸಹಾಯ ಕೇಳಬಹುದು. ಕರೆ ಬಂದ ತಕ್ಷಣ ಕರ್ತವ್ಯದಲ್ಲಿರುವ ಸಿಬ್ಬಂದಿ ಕರೆ ಮಾಡಿದವರು ಮಹಿಳೆ ಇರುವ ಸ್ಥಳಕ್ಕೆ ತೆರಳಿ ನೆರವು ನೀಡಲಿದ್ದಾರೆ. ಸಮೀಪದ ಹಳ್ಳಿ ಅಥವಾ ಬಡಾವಣೆಗೆ ತೆರಳುವವರಿದ್ದರೆ ಆಟೋ ಅಥವಾ ಬೇರೆ ವಾಹನ ವ್ಯವಸ್ಥೆ ಮಾಡಿ ಸುರಕ್ಷತೆಯ ಖಾತ್ರಿ ಮಾಡಿಕೊಂಡು ಕಳುಹಿಸಿಕೊಡಲಾಗುತ್ತದೆ. ತೀರಾ ಅನಿವಾರ್ಯ ಸಂದರ್ಭ ಎದುರಾದರೆ ಪೊಲೀಸ್ ವಾಹನದ ನೆರವು ನೀಡಲಾಗುತ್ತದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ ಮಾಹಿತಿ ನೀಡಿದ್ದಾರೆ.

    ಸದ್ಯ ಗದಗ ಬೆಟಗೇರಿ ಅವಳಿ ನಗರದಲ್ಲಿ ಇಂಥದ್ದೊಂದು ವಿನೂತನ ಪ್ರಯತ್ನ ಮಾಡಲಾಗುತ್ತಿದೆ. ಅಲ್ಲದೇ ತಾಲೂಕು ಕೇಂದ್ರಗಳಲ್ಲಿ ರಾತ್ರಿ ವೇಳೆ ಪೊಲೀಸರು ಗಸ್ತು ತಿರುಗುತ್ತಾರೆ. ಅಂಥವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ತಾಲೂಕು ಕೇಂದ್ರದಲ್ಲೂ ಸಹಾಯ ಬಯಸುವ ಮಹಿಳೆ ಮತ್ತು ಮಕ್ಕಳಿಗೆ ಪೊಲೀಸರು ನೆರವಾಗಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ರಾಣಿಚೆನ್ನಮ್ಮ ಪಡೆ ಎಂಬ 45 ಜನ ಮಹಿಳಾ ಸಿಬ್ಬಂದಿ ತಂಡ ಸಹ ರಚಿಸಲಾಗಿದೆ. ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ಎಸ್‍ಪಿ ಶ್ರೀನಾಥ ಜೋಶಿ ಅವರ ಆಸಕ್ತಿಯಿಂದ ಜಿಲ್ಲೆಯಲ್ಲಿ ಚನ್ನಮ್ಮ ಪೊಲೀಸ್ ಪಡೆ ಕಾರ್ಯ ನಿರ್ವಹಿಸುತ್ತಿದೆ. ಈ ಪಡೆ ಮಹಿಳೆ ಮತ್ತು ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆ ಜೊತೆಗೆ ಕಾನೂನು ತಿಳುವಳಿಕೆ ನೀಡುವ ಕೆಲಸ ಮಾಡುತ್ತಿದೆ.

    ರಾಣಿ ಚೆನ್ನಮ್ಮ ಪೊಲೀಸ್ ಪಡೆ ಉದ್ದೇಶ:
    * ಮಹಿಳೆಯರಿಗೆ ಅನ್ಯಾಯ ಕಂಡು ಬಂದಲ್ಲಿ ರಕ್ಷಣೆಗೆ ನಿಂತುಕೊಳ್ಳುವುದು.
    * ಅನ್ಯಾಯಕ್ಕೊಳಗಾದ ಸಂತ್ರಸ್ತರಿಗೆ ತಿಳುವಳಿಕೆ ಹೇಳುವುದು.
    * ಅನೇಕ ಕಡೆಗಳಲ್ಲಿ ಗಸ್ತು ತಿರುಗುವುದು.
    * ಅನುಮಾನಾಸ್ಪದ ವ್ಯಕ್ತಿಗಳನ್ನ ಕರೆತಂದು ವಿಚಾರಣೆ ನಡೆಸಿ ನಂತರ ಕ್ರಮಕೈಗೊಳ್ಳುವುದು.

    ಒಟ್ಟಿಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ಅತ್ಯಾಚಾರ, ಕಳ್ಳತನ, ಮೋಸ, ಸುಲಿಗೆ ತಡೆಯಲು ಗದಗ ಜಿಲ್ಲಾ ಪೊಲೀಸ್ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ದುಷ್ಟ ಕಾಮುಕರ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಮುಂದಾಗಿರುವುದು ಹೆಮ್ಮೆಯ ವಿಷಯವಾಗಿದೆ.

    ಅಸುರಕ್ಷತೆ ಕಂಡುಬಂದ್ರೆ ಸಹಾಯವಾಣಿ
    ಮೊ. 9480804400
    ಪೊಲೀಸ್ ಕಂಟ್ರೋಲ್ ರೂಂ -100
    ಸಹಾಯವಾಣಿ- 112