Tag: ಲೆಫ್ಟಿನೆಂಟ್ ಕರ್ನಲ್

  • ಸಿಕ್ಕಿಂನಲ್ಲಿ ಹಿಮಪಾತ-  ಇಬ್ಬರು ಯೋಧರು ಹುತಾತ್ಮ

    ಸಿಕ್ಕಿಂನಲ್ಲಿ ಹಿಮಪಾತ- ಇಬ್ಬರು ಯೋಧರು ಹುತಾತ್ಮ

    ನವದೆಹಲಿ: ಸಿಕ್ಕಿಂನಲ್ಲಿ ಹಿಮಪಾತ ಸಂಭವಿಸಿದ್ದು, ಕರ್ನಲ್ ಮತ್ತು ಭಾರತೀಯ ಸೈನಿಕ ಹುತಾತ್ಮರಾಗಿದ್ದಾರೆ.

    ಹಿಮಪಾತದಲ್ಲಿ ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಮತ್ತು ಸೈನಿಕ ಸಪಾಲ ಸನ್ಮಮುಖ ರಾವ್ ಅವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಉತ್ತರ ಸಿಕ್ಕಿಂನ ಲುಗ್ನಾಕ್ ಪ್ರದೇಶದಲ್ಲಿ ಇರುವ ಪರ್ವತದಲ್ಲಿ ಈ ಹಿಮಪಾತ ನಡೆದಿದೆ. 16 ಮಂದಿ ಸೈನಿಕರನ್ನು ರಕ್ಷಣೆ ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು, ಲುಗ್ನಾಕ್ ಪ್ರದೇಶದಲ್ಲಿ ಒಬ್ಬರು ಕರ್ನಲ್ ಒಳಗೊಂಡಂತೆ 18 ಜನ ಭಾರತೀಯ ಸೈನಿಕರ ತಂಡ ಕಾರ್ಯನಿರ್ವಹಿಸುತ್ತಿತ್ತು. ಈ ವೇಳೆ ಹಿಮಪಾತ ಸಂಭವಿಸಿದೆ. ಆಗ ತಕ್ಷಣ ಸ್ಥಳಕ್ಕೆ ಹೋದ ನಮ್ಮ ರಕ್ಷಣಾ ತಂಡ ಹಿಮಪಾತದಲ್ಲಿ ಸಿಲುಕಿದ್ದ 18 ಜನರ ಪೈಕಿ 16 ಜನರನ್ನು ಕಾಪಾಡಿದ್ದಾರೆ. ಆದರೆ ಕರ್ನಲ್ ಮತ್ತು ಓರ್ವ ಯೋಧ ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    2019ರಲ್ಲಿ ವಿಶ್ವದ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್ ಉತ್ತರ ಭಾಗದಲ್ಲಿ ಸಂಭವಿಸಿದ ಹಿಮಪಾತಕ್ಕೆ ನಾಲ್ವರು ಯೋಧರು ಹಾಗೂ ಇಬ್ಬರು ನಾಗರಿಕರು ಬಲಿಯಾಗಿದ್ದರು. ಯೋಧರು ಎಂದಿನಂತೆ ಗಸ್ತಿನಲ್ಲಿದ್ದಾಗ ಈ ಅವಘಡ ಸಂಭವಿಸಿತ್ತು. ತಕ್ಷಣ ಸೈನಿಕರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಹಿಮದಡಿ ಸಿಲುಕಿದ ದುರ್ಗ ರೆಜಿಮೆಂಟ್‍ನ 6 ಯೋಧರು ಮತ್ತು ಇಬ್ಬರು ನಾಗರಿಕರನ್ನು ಹೊರ ತೆಗೆದು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಅದರಲ್ಲಿ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದ ಕಾರಣ ಮೃತಪಟ್ಟಿದ್ದರು.

    2016ರಲ್ಲೂ ಹೀಗೆಯೇ ಆಗಿತ್ತು: 2016ರಲ್ಲಿ ಸಿಯಾಚಿನ್‍ನಲ್ಲಿ ಸಂಭವಿಸಿದ್ದ ಭಾರೀ ಹಿಮಪಾತದಲ್ಲಿ ಸಿಲುಕಿ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ 6 ದಿನಗಳ ಬಳಿಕ ಪತ್ತೆಯಾಗಿದ್ದರು. ಅವರನ್ನು ಜೀವಂತವಾಗಿ ಪತ್ತೆ ಮಾಡಿದ್ದರೂ ಬಹು ಅಂಗಾಂಗ ವೈಫಲ್ಯದಿಂದ ಅವರು ವೀರ ಮರಣ ಹೊಂದಿದ್ದರು. ಸಾವಿಗೆ ಸವಾಲೊಡ್ಡಿ ಮಂಜುಗಡ್ಡೆಗಳ ಮಧ್ಯೆ ಜೀವನ್ಮರಣ ಹೋರಾಟ ನಡೆಸಿದ್ದ ವೀರಯೋಧ ಹನುಮಂತಪ್ಪ ಅವರಿಗೆ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

    1984 ರಲ್ಲೂ ಇದೇ ರೀತಿ ಹಿಮಪಾತವಾಗಿ ಭಾರತ ಸೇನೆಯ ಸಾವಿರಕ್ಕೂ ಹೆಚ್ಚಿನ ಯೋಧರು ಹುತಾತ್ಮರಾಗಿದ್ದರು. ಇದರಲ್ಲಿ 35 ಜನ ಮಿಲಿಟರಿ ಆಫೀಸರ್ ಗಳು ಇದ್ದರು.

  • ನಿವೃತ್ತ ಲೆಫ್ಟಿನೆಂಟ್ ಕರ್ನಲ್‍ನಿಂದ ಬಾಲಕಿ ಮೇಲೆ ಲೈಂಗಿಕ ಕಿರುಕುಳ

    ನಿವೃತ್ತ ಲೆಫ್ಟಿನೆಂಟ್ ಕರ್ನಲ್‍ನಿಂದ ಬಾಲಕಿ ಮೇಲೆ ಲೈಂಗಿಕ ಕಿರುಕುಳ

    ನವದೆಹಲಿ: ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪವೊಂದು ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮೇಲೆ ಕೇಳಿ ಬಂದಿದೆ.

    70 ವರ್ಷದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ದೆಹಲಿ ದ್ವಾರಕಾ ನಗರದ ಅಪಾರ್ಟ್‍ಮೆಂಟ್ ನಿವಾಸಿಯಾಗಿದ್ದಾನೆ. ಕಳೆದ ಜೂನ್ 11ರ ಸಂಜೆ ತನ್ನದೇ ಅಪಾರ್ಟ್‍ಮೆಂಟ್‍ನ ಲಿಫ್ಟ್‍ನಲ್ಲಿ 8 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ. ಈ ಹಿನ್ನೆಲೆಯಲ್ಲಿ ಬುಧವಾರ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಘಟನೆ ನಡೆದ ನಂತರ ಬಾಲಕಿ ತನ್ನ ಮೇಲಾದ ದೌರ್ಜನ್ಯವನ್ನು ಪೋಷಕರ ಬಳಿ ಹೇಳಿಕೊಂಡಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಪೋಷಕರು ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ.

    ತನಿಖೆ ವೇಳೆ ಆರೋಪಿಯು ಈ ಹಿಂದೆಯೂ ಕೂಡ ಇಂತಹುದೇ ಕೃತ್ಯ ಎಸಗಿದ್ದು, ಈ ಕುರಿತು ಅಪಾರ್ಟ್‍ಮೆಂಟ್‍ನ ನಿವಾಸಿಗಳು ದೂರು ನೀಡಿದ್ದಾರೆ. ಆದರೆ ಆರೋಪಿಯು ಸೇನೆಯ ಉನ್ನತ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆದ್ದರಿಂದ ಸ್ಥಳೀಯ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಆರೋಪಿ ಕಳೆದ ಹಲವು ದಿನಗಳಿಂದ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದು, ಆತನ ಕುಟುಂಬವು ವಿದೇಶದಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿಕೆ ನೀಡಿದ್ದಾರೆ.