Tag: ಲುಲು ಗ್ರೂಪ್

  • ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

    ಲುಲು ಗ್ರೂಪ್‍ನೊಂದಿಗೆ 2,000 ಕೋಟಿ ರೂ. ಹೂಡಿಕೆ ಒಪ್ಪಂದ – ಪ್ರತಿಷ್ಠಿತ ಕಂಪನಿಗಳೊಂದಿಗೆ ಬೊಮ್ಮಾಯಿ ಚರ್ಚೆ

    ಬರ್ನ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿ ಇಂದು ಸ್ವಿಟ್ಜರ್ಲೆಂಡಿನ ದಾವೋಸ್‍ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಲುಲು ಗ್ರೂಪ್ ಇಂಟರ್ ನ್ಯಾಷನಲ್‍ನ ನಿರ್ದೇಶಕ ಎ.ವಿ.ಅನಂತ ರಾಮನ್ ಅವರೊಂದಿಗೆ ಕರ್ನಾಟಕದಲ್ಲಿ 2000 ಕೋಟಿ ರೂ. ಹೂಡಿಕೆ ಮಾಡುವ ಕುರಿತು ಒಪ್ಪಂದಕ್ಕೆ ಸಹಿ ಮಾಡಲಾಯಿತು.

    ಲುಲು ಗ್ರೂಪ್ ರಾಜ್ಯದಲ್ಲಿ ಸುಮಾರು ಎರಡು ಸಾವಿರ ಕೋಟಿ ರೂ. ಹೂಡಿಕೆ ಮಾಡಲು ಮುಂದಾಗಿದ್ದು, 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ. ಇದನ್ನೂ ಓದಿ: ಲೋಕ ಕಲ್ಯಾಣ, ವಿಶ್ವಶಾಂತಿಗಾಗಿ ಅಹಿಂಸಾ ಮಾರ್ಗ ಅನುಸರಿಸಿ: ಗೆಹ್ಲೋಟ್

    ವಿಶ್ವದ ಪ್ರಮುಖ ಸಂಸ್ಥೆಗಳೊಂದಿಗೆ ಸಿಎಂ ಚರ್ಚೆ
    ಬಸವರಾಜ ಬೊಮ್ಮಾಯಿ ಅವರು ಇಂದು ದಾವೋಸ್‍ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಜ್ಯೂಬಿಲಿಯಂಟ್ ಗ್ರೂಪ್, ಹಿಟಾಚಿ, ದಸ್ಸಾಲ್ಸ್ ಸಿಸ್ಟಮ್ಸ್, ನೆಸ್ಟ್ಲೆ ಹಾಗೂ ಸೀಮನ್ಸ್ ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿದರು.

    ಜ್ಯೂಬಿಲಿಯಂಟ್ ಗ್ರೂಪ್
    ಕರ್ನಾಟಕದಲ್ಲಿ ಫಾರ್ಮಾ ಮತ್ತು ಎಫ್‍ಎಂಸಿಜಿ ವಲಯದಲ್ಲಿ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸುವಂತೆ ತಿಳಿಸಿದ ಮುಖ್ಯ ಮಂತ್ರಿಗಳು, ಧಾರವಾಡದಲ್ಲಿ ಎಫ್‍ಎಂಸಿಜಿ ವಲಯದಲ್ಲಿ ಹೂಡಿಕೆಗೆ ವಿಶೇಷ ಪ್ರೋತ್ಸಾಹಕ ಪ್ಯಾಕೇಜ್‍ನ್ನು ಸಹ ಪರಿಗಣಿಸಬಹುದಾಗಿದೆ ಎಂದರು. ಇದನ್ನೂ ಓದಿ: ಭಾರತದ ಸ್ಮಾರ್ಟ್ ಸಿಟಿ, 5ಜಿ ಯೋಜನೆಗೆ ಕೊಡುಗೆ ನೀಡಲು ಮುಂದಾದ ಜಪಾನ್

    ಜ್ಯೂಬಿಲಿಯಂಟ್ ಫುಡ್ ವಕ್ರ್ಸ್ ನೂತನ ಕೇಂದ್ರೀಕೃತ ಪಾಕಶಾಲೆ ಪ್ರಾರಂಭಿಸಲು ಹಾಗೂ ಜ್ಯೂಬಿಲಿಯಂಟ್ ಬಯೋಸಿಸ್ ರಾಜ್ಯ ದೇವನಹಳ್ಳಿಯಲ್ಲಿ 10 ಎಕರೆ ಪ್ರದೇಶದಲ್ಲಿ ನೂತನವಾಗಿ ಆರ್ ಅಂಡ್ ಡಿ ಸೆಂಟರ್ ಸ್ಥಾಪಿಸಲು ತೀರ್ಮಾನಿಸಿದೆ. ಪ್ರಸ್ತುತ ರಾಜ್ಯದಲ್ಲಿ 9,000 ಜನರು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಹಿಟಾಚಿ ಎನರ್ಜಿ:
    ಹಿಟಾಚಿ ಎನರ್ಜಿ ಸಂಸ್ಥೆಯ ಮುಖ್ಯಸ್ಥರೊಂದಿಗೆ ನಡೆದ ಮಾತುಕತೆಯ ಸಂದರ್ಭದಲ್ಲಿ ಇವಿ ಚಾರ್ಜಿಂಗ್‍ಗಾಗಿ ಮೂಲಸೌಕರ್ಯ ಘಟಕ ಸ್ಥಾಪನೆಗೆ ಯೋಜಿಸುತ್ತಿರುವುದಾಗಿ ತಿಳಿಸಿದೆ. ಬೆಂಗಳೂರಿನಲ್ಲಿ ಪ್ರತಿಭೆಯ ಲಭ್ಯತೆ ಇರುವುದರಿಂದ ನವೀಕರಿಸಬಹುದಾದ ಇಂಧನ ಮತ್ತು ಡಿಜಿಟಲೀಕರಣದ ಅವಕಾಶಗಳ ಬಗ್ಗೆ ಆಸಕ್ತಿ ತೋರಿದೆ. ದೊಡ್ಡಬಳ್ಳಾಪುರದಲ್ಲಿ ಇಂಧನ ಗುಣಮಟ್ಟ ಉಪಕರಣ ಘಟಕವನ್ನು ಉದ್ಘಾಟಿಸುತ್ತಿದ್ದಾರೆ. ಸಾವಿರ ಇಂಜಿನಿಯರ್‌ಗಳನ್ನು ಹೊಂದಿರುವ ಎಂಜಿನಿಯರಿಂಗ್ ಕೇಂದ್ರವನ್ನು ನಿರ್ಮಿಸುತ್ತಿದ್ದಾರೆ. ಹಿಟಾಚಿ ಸಂಸ್ಥೆಯ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿದೆ.

    ಸೀಮೆನ್ಸ್:
    ಬೆಂಗಳೂರಿನಲ್ಲಿ 2 ಯೋಜನೆಗಳನ್ನು ಸೀಮೆನ್ಸ್ ಸಂಸ್ಥೆ ಕೈಗೆತ್ತಿಕೊಳ್ಳಲಿದೆ. ಮ್ಯಾಗ್ನೆಟಿಕ್ ಇಮೇಜಿಂಗ್ ಮತ್ತು ಡಯಾಗ್ನಾಸ್ಟಿಕ್ಸ್ ಮೇಲೆ ಕೇಂದ್ರೀಕೃತವಾದ ಆರ್ ಅಂಡ್ ಡಿ ಆರೋಗ್ಯ ಯೋಜನೆ. ಸ್ಥಳೀಯ ಮಾರುಕಟ್ಟೆಗಳಿಗೆ ಮಾರಾಟ ಮಾಡಲು ವೈದ್ಯಕೀಯ ಸಲಕರಣೆಗಳನ್ನು ಉತ್ಪಾದಿಸುವ ಘಟಕವನ್ನು ಬೊಮ್ಮಸಂದ್ರದಲ್ಲಿ ಸ್ಥಾಪಿಸಲು ಸೆಪ್ಟೆಂಬರ್ 2022ರಲ್ಲಿ ಶಂಕುಸ್ಥಾಪನೆಗೆ ಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯ ಮಂತ್ರಿಗಳನ್ನು ಸಂಸ್ಥೆ ಆಹ್ವಾನಿಸಿದೆ. ಬೆಂಗಳೂರಿನಲ್ಲಿ ಸೀಮನ್ಸ್ ಸಂಸ್ಥೆ 2,500 ಎಂಜಿನಿಯರ್‌ಗಳನ್ನು ಹೊಂದಿದೆ. ಇದನ್ನೂ ಓದಿ: ಸದ್ಗುರು ಜೊತೆ ಮಂಡಿ ನೋವಿನ ಬಗ್ಗೆ ಹೇಳಿಕೊಂಡ ಸಿಎಂ

    ಆಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಗೆ ಸಂಬಂಧಿಸಿದಂತೆ ವಿಶೇಷ ಪ್ರೋತ್ಸಾಹಕಕಗಳನ್ನು ಕರ್ನಾಟಕ ಸರ್ಕಾರ ಒದಗಿಸುವ ಭರವಸೆ ನೀಡಿದೆ. ಬಿಯಾಂಡ್ ಬೆಂಗಳೂರು ಯೋಜನೆಯಡಿ ತುಮಕೂರು, ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ನಗರಗಳಲ್ಲಿಯೂ ಹೂಡಿಕೆ ಮಾಡುವ ಕುರಿತು ರಾಜ್ಯ ಸರ್ಕಾರ ಮತ್ತು ಸೀಮನ್ಸ್ ಸಂಸ್ಥೆ ಮಾತುಕತೆ ನಡೆಸಿತು.

    ದಸ್ಸಾಲ್ಸ್ ಸಿಸ್ಟಮ್ಸ್:
    ರಾಜ್ಯದಲ್ಲಿ ವಿದ್ಯುತ್ ವಾಹನಗಳು ಮತ್ತು ಕೇಂದ್ರ ಉತ್ಪಾದನಾ ತಾಂತ್ರಿಕ ಸಂಸ್ಥೆಯ ಸಹಯೋಗದಲ್ಲಿ ಆಧುನಿಕ ಉತ್ಪಾದನೆ ಕ್ಷೇತ್ರ, ವಿದ್ಯಾರ್ಥಿಗಳಿಗೆ ಕೈಗಾರಿಕೆ 4.0, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ತರಬೇತಿ, ರಾಜ್ಯದ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ದಸ್ಸಾಲ್ಸ್ ಸಿಸ್ಟಮ್ಸ್ ಉತ್ಸುಕತೆ ತೋರಿದರು.

    ನೆಸ್ಟ್ಲೆ ಸಂಸ್ಥೆ:
    ನಂಜನಗೂಡಿನಲ್ಲಿ ನೆಸ್ಟ್ಲೆ ಇನ್ಸೆಂಟ್ ಕಾಫಿ ಕಾರ್ಖಾನೆಯನ್ನು ನವೀಕರಣ ಹಾಗೂ ವಿಸ್ತರಣಾ ಕಾರ್ಯಕ್ಕೆ ನೆಸ್ಟ್ಲೆ ಸಂಸ್ಥೆ ಮುಂದಾಗಿದೆ.

    ಈ ಸಂದರ್ಭದಲ್ಲಿ ರಾಜ್ಯದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಕೈಗಾರಿಕಾ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.