Tag: ಲೀಸ್

  • ಬೆಂಗಳೂರಿನಲ್ಲಿ ಬಾಡಿಗೆ, ಲೀಸ್‌ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ

    ಬೆಂಗಳೂರಿನಲ್ಲಿ ಬಾಡಿಗೆ, ಲೀಸ್‌ ಪಡೆಯುವ ಮುನ್ನ ಎಚ್ಚರವಾಗಿರಿ – 50ಕ್ಕೂ ಹೆಚ್ಚು ಮಂದಿಗೆ ಕೋಟ್ಯಂತರ ರೂ. ವಂಚನೆ

    – ಬಾಡಿಗೆದಾರರ ಬಳಿಯೇ ಹಣ ಪಡೆದು ನಾಪತ್ತೆ
    – ಸಿಸಿಬಿಯಿಂದ ಓರ್ವ ಅರೆಸ್ಟ್‌, ಓರ್ವ ಪರಾರಿ

    ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ (Bengaluru) ಮನೆ ಬಾಡಿಗೆ ಮತ್ತು ಲೀಸ್ ಪಡೆಯಲು ಹುಡುಕಾಡುತ್ತಿದ್ದೀರಾ? ಹಾಗಾದರೆ ಬಹಳಷ್ಟು ಎಚ್ಚರವಾಗಿರಿ. ಮನೆ ಮಾಲೀಕನ ಬಳಿ ಬಾಡಿಗೆ ಎಂದು ಹೇಳಿ ಬಾಡಿಗೆದಾರರ ಬಳಿ ಲೀಸ್‌ಗೆ ಹಣ ಪಡೆದು ವಂಚನೆ ಎಸಗಿದ ಪ್ರಕರಣಗಳು ಈಗ ಬೆಳಕಿಗೆ ಬಂದಿದೆ.

    ಕೋಟ್ಯಂತರ ರೂ. ವಂಚನೆ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿಯಲ್ಲಿ (CCB) ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಒಬ್ಬನನ್ನು ಬಂಧಿಸಿದ್ದು ಮತ್ತೊಬ್ಬ ಪರಾರಿಯಾಗಿದ್ದಾನೆ.

    ಆರೋಪಿಯಾದ ಖಲೀಲ್ ಷರೀಫ್ ಬಂಧನವಾಗಿದ್ದರೆ ಸೈಯದ್ ಅಹಮದ್ ಪರಾರಿಯಾಗಿದ್ದಾನೆ. ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾದ ಬೆನ್ನಲ್ಲೇ ಸುಮಾರು 50ಕ್ಕೂ ಹೆಚ್ಚು ಮಂದಿ ಈಗ ಸಿಸಿಬಿ ಆಗಮಿಸಿ ತಮಗೂ ವಂಚನೆಯಾಗಿದೆ ಎಂದು ದೂರು ನೀಡುತ್ತಿದ್ದಾರೆ. ಇದನ್ನೂ ಓದಿ: ಮುರಿದ ಸೀಟ್‌ ನೀಡಿ ಮೋಸ ಮಾಡಿದ್ದೀರಿ: ಏರ್‌ ಇಂಡಿಯಾ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ಕೆಂಡಾಮಂಡಲ

    ವಂಚನೆ ಹೇಗೆ?
    ಬೆಂಗಳೂರಿಗೆ ಬೇರೆ ಬೇರೆ ಕಡೆಯಿಂದ ಬರುವವರು ಸೇರಿದಂತೆ ಜನ ಮನೆ ಬಾಡಿಗೆ ಮತ್ತು ಲೀಸ್‌ಗೆ ಮನೆ ಬೇಕಾಗಿದೆ ಎಂದು ಒಎಲ್‌ಎಕ್ಸ್ , ನೋ ಬ್ರೋಕರ್ ಸೇರಿದಂತೆ ಹಲವು ಆಪ್‌ಗಳಲ್ಲಿ ಹುಡುಕಾಟ ನಡೆಸುವುದು ಸಾಮಾನ್ಯ.

    ಈ ರೀತಿ ಹುಡುಕಾಟ ನಡೆಸುವವರನ್ನೇ ಖಲೀಲ್ ಷರೀಫ್ ಮತ್ತು ಸೈಯದ್ ಅಹಮದ್ ಸಂಪರ್ಕಿಸುತ್ತಿದ್ದರು. ತಮ್ಮ ಅಕ್ರಮ ವ್ಯವಹಾರಕ್ಕೆ ಟ್ಯಾಂಜನೈಟ್ ರಿಯಾಲಿಟಿ ಇಂಡಿಯ ಪ್ರೈವೇಟ್‌ ಲಿಮಿಟೆಡ್ ಕಂಪನಿಯನ್ನು ಸಹ ಸ್ಥಾಪಿಸಿದ್ದರು. ಜನರನ್ನು ಸಂರ್ಪಕಿಸುತ್ತಿದ್ದ ಇವರು ಮನೆ ಬಾಡಿಗೆ ಬೇಕಾ? ಲೀಸ್‌ಗೆ ಬೇಕಾ? ನೀವು ಕೇಳಿದ ಜಾಗದಲ್ಲೇ ಕಡಿಮೆ ಬೆಲೆಗೆ ಮನೆ ಕೊಡಿಸುತ್ತೇವೆ ಎಂದು ಹೇಳಿ ನಂಬಿಸುತ್ತಿದ್ದರು.

    ಮನೆಯನ್ನು ತೋರಿಸುತ್ತಿದ್ದ ಈ ವಂಚಕರು ಮೂಲ ಮನೆ ಮಾಲೀಕರ ಬಳಿ ಬಾಡಿಗೆಗೆ ಎಂದು ಮಾತಾಡುತ್ತಿದ್ದರು. ಆದರೆ ಬಾಡಿಗೆದಾರರ ಬಳಿ, ಈ ಮನೆ ನಮ್ಮದು ನಾವು ಲೀಸ್‌ಗೆ ಬಿಡುತ್ತಿದ್ದೇವೆ ಎಂದು ಹೇಳಿ 5 ಲಕ್ಷದಿಂದ 30 ಲಕ್ಷ ರೂ.ವರೆಗೆ ಹಣ ಪಡೆದು ನಕಲಿ ದಾಖಲೆ ನೀಡುತ್ತಿದ್ದರು. ಇದನ್ನೂ ಓದಿ: ಎಫ್‌ಬಿಐ ನಿರ್ದೇಶಕನಾದ ಭಾರತೀಯ – ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ಸ್ವೀಕರಿಸಿದ ಕಾಶ್ ಪಟೇಲ್

    ಒಂದು ತಿಂಗಳು, ಎರಡು ತಿಂಗಳು ಬಾಡಿಗೆ ಹಣ ಬಾರದೇ ಇದ್ದಾಗ ಮೂಲ ಮಾಲೀಕ ಬಾಡಿಗೆ ಹಣಕ್ಕಾಗಿ ಮನೆ ಹತ್ತಿರ ಬರುತ್ತಿದ್ದ. ಮಾಲೀಕ ಮನೆ ಹತ್ತಿರ ಬಂದಾಗಲೇ ಬಾಡಿಗೆಯಲ್ಲಿದ್ದ ಕುಟುಂಬಕ್ಕೆ ನಾವು ಮೋಸ ಹೋಗಿರುವ ವಿಚಾರ ಗೊತ್ತಾಗುತ್ತದೆ.

    ಈ ವೇಳೆ ಮಧ್ಯವರ್ತಿಗಳಾದ ಖಲೀಲ್ ಷರೀಫ್ ಮತ್ತು ಸೈಯದ್ ಅಹಮದ್ ಅವರನ್ನು ಸಂಪರ್ಕಿಸಿದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಇವರಿಬ್ಬರೂ ರಾಮಮೂರ್ತಿ ನಗರ, ರಾಜಾನುಗುಂಟೆ, ದೇವನಹಳ್ಳಿ, ಕೊತ್ತನೂರು, ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐವತ್ತಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂ. ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹಲವು ಕಡೆ ಪ್ರಕರಣ ದಾಖಲಾಗುತ್ತಿದ್ದಂತೆ ಈಗ ಈ ಎಲ್ಲಾ ದೂರುಗಳು ಸಿಸಿಬಿಗೆ ವರ್ಗಾವಣೆಯಾಗಿದೆ.

  • BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ

    BIG EXCLUSIVE: ಕೋಟಿ ಕೋಟಿ ಬೆಲೆ ಬಾಳೋ ಸರ್ಕಾರಿ ಜಾಗ ಜುಜುಬಿ ಕಾಸಿಗೆ ಬಿಕರಿ – ಸಚಿವ ಕೆಜೆ ಜಾರ್ಜ್ ಬಂಟರ ಗುಂಡಾಗಿರಿ

    – ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ಹಲ್ಲೆ
    – ಲೀಸ್ ಒಪ್ಪಂದಕ್ಕೆ ಶುಕ್ರವಾರ ಬೀಳುತ್ತೆ ಸಹಿ
    – ತೈಲ ಬೆಲೆ ಏರಿಸಲು ಸರ್ಕಾರಕ್ಕೆ ಆತುರ
    – ನ್ಯಾಯವಾಗಿ ಸಿಗೋ ಸಂಪನ್ಮೂಲ ಕ್ರೋಢಿಕರಿಸಲು ವಿಫಲ

    ಬೆಂಗಳೂರು: ನಗರದ ಪ್ರಮುಖ ಸ್ಥಳವಾಗಿರುವ ಹೆಚ್‍ಎಎಲ್‍ನ ಎಂಎಸ್‍ಐಎಲ್ ಏರ್ ಕಾರ್ಗೋ ಪ್ರದೇಶವನ್ನು ಜುಜುಬಿ ಕಾಸಿಗೆ ಬಿಕರಿಗಿಟ್ಟು ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, ಕೋಟಿ ಕೋಟಿ ಬೆಲೆವುಳ್ಳ ಪ್ರದೇಶವನ್ನು ಪುಡಿಗಾಸಿಗೆ ಲೀಸ್ ನೀಡಲು ಸರ್ಕಾರ ಮುಂದಾಗಿದೆ. 

    ಲೀಸ್ ನೀಡಲು ಸಚಿವ ಕೆಜೆ ಜಾರ್ಜ್ ಕೃಪಾಕಟಾಕ್ಷ ಇದೆ ಎನ್ನಲಾಗಿದ್ದು, ಈ ಕುರಿತು ವರದಿ ಮಾಡಲು ತೆರಳಿದ ಪಬ್ಲಿಕ್ ಟಿವಿ ವರದಿಗಾರ್ತಿ ಹಾಗೂ ಸಿಬ್ಬಂದಿ ಮೇಲೆ ಜಾರ್ಜ್ ಬಂಟರು ಹಲ್ಲೆ ನಡೆಸಲು ಯತ್ನಿಸಿದ್ದಾರೆ.

    ಹೆಚ್‍ಎಎಲ್‍ನಲ್ಲಿರುವ ಸುಮಾರು ಮೂರು ಎಕರೆ ಹೊಂದಿರುವ ಎಂಎಸ್‍ಐಎಲ್ ಏರ್ ಕಾರ್ಗೋ ಪ್ರದೇಶವನ್ನು ಸದ್ಯ ಲೀಸ್ ನೀಡಲು ಸರ್ಕಾರ ಮುಂದಾಗಿದೆ. ಆದರೆ ಈ ಪ್ರದೇಶ ನಗರ ಪ್ರಮುಖ ರಸ್ತೆಯಲ್ಲಿ ಇದ್ದು, ಬಾಡಿಗೆ ಕೊಟ್ಟರೆ ಕೋಟಿ ಕೋಟಿ ದುಡಿಯುವ ಸಾಮಥ್ರ್ಯ ಹೊಂದಿದೆ. ಈ ಸಂಗತಿಯನ್ನು ಮರೆ ಮಾಚಿ ಲೀಸ್ ನೀಡಲು ಸರ್ಕಾರ ಮುಂದಾಗಿದ್ದು, ಈಗಾಗಲೇ ಲೀಸ್ ಒಪ್ಪಂದಕ್ಕೆ ಸಹಿ ಮಾಡಲು ಬೋರ್ಡ್ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭಿಸಿದೆ.

    ಶುಕ್ರವಾರ ಬೋರ್ಡ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಲೀಸ್ ಪತ್ರಕ್ಕೆ ಅಂಕಿತ ಬೀಳಲಿದೆ ಎನ್ನುವ ಖಚಿತ ಮಾಹಿತಿ ಪಡೆದ ಪಬ್ಲಿಕ್ ಟಿವಿ ಈ ಒಪ್ಪಂದದಿಂದ ಸರ್ಕಾರಕ್ಕೆ ಉಂಟಾಗುತ್ತಿರುವ ನಷ್ಟವನ್ನ ವರದಿ ಮಾಡಲು ಸ್ಥಳಕ್ಕೆ ತೆರಳಿತ್ತು.

    ವರದಿ ಮಾಡಲು ಸ್ಥಳಕ್ಕೆ ತೆರಳಿದ ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಲ್ಲಿನ ಗೂಂಡಾಗಳಾದ ಪರ್ಲ್ ಗ್ಲೋಬಲ್ ಹಬ್ ಮ್ಯಾನೇಜರ್ ಹಾಗೂ ಸಿಬ್ಬಂದಿ ಏಕಾಏಕಿ ಕ್ಯಾಮೆರಾ ಕಸಿದುಕೊಳ್ಳಲು ಯತ್ನಿಸಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಈ ಸ್ಥಳ ನಮಗೆ ಸೇರಿದ್ದು, ಯಾವುದೇ ಕಾರಣಕ್ಕೂ ನಮ್ಮ ಅನುಮತಿ ಇಲ್ಲದೇ ಪ್ರವೇಶ ಮಾಡಬಾರದು ಎಂದು ಹೇಳಿ ಗೂಂಡಾಗಿರಿ ನಡೆಸಿದ್ದಾರೆ.

    ಅಂದಹಾಗೇ ಮೂರು ಎಕರೆ ಪ್ರದೇಶವಿರುವ ಈ ಸ್ಥಳಕ್ಕೆ ಸದ್ಯ 100 ರಿಂದ 200 ಕೋಟಿ ರೂ. ಬೆಲೆಯನ್ನ ಹೊಂದಿದೆ. ಆದರೆ ಇಂತಹ ಜಾಗವನ್ನು ವರ್ಷಕ್ಕೆ ಕೇವಲ 30 ಲಕ್ಷ ರೂ.ಗೆ ಗ್ಲೋಬಲ್ ಪರ್ಲ್ ಎಂಬ ಸಂಸ್ಥೆಗೆ ಬರೋಬ್ಬರಿ 85 ವರ್ಷ ಲೀಸ್ ನೀಡಲು ಸಚಿವರು ಮುಂದಾಗಿದ್ದಾರೆ. ಸಚಿವ ಜೆಕೆ ಜಾರ್ಜ್ ಒಡೆತನದ ಎಂಬೆಸಿ ಗ್ರೂಪ್ ಜಾಗವನ್ನು ಕೋಟಿ ಕೋಟಿಗೆ ರೂ.ಗೆ ನೀಡುವ ಅವರು ಸರ್ಕಾರಿ ಜಾಗವನ್ನು ಮಾತ್ರ ಬೇಕಾಬಿಟ್ಟಿ ಲೀಸ್ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ಈ ಒಪ್ಪಂದದ ಬಗ್ಗೆಯೇ ಸಾಕಷ್ಟು ಅನುಮಾನ ಎದ್ದಿದೆ.

    ರೈತರ ಸಾಲಮನ್ನಾ ಮಾಡಲು ಹಾಗೂ ಸಂಪನ್ಮೂಲ ಕ್ರೋಢಿಕರಣದ ಹೆಸರು ಹೇಳಿ ತೈಲದ ಮೇಲೆ ಹೆಚ್ಚುವರಿ ತೆರಿಗೆ ವಿಧಿಸಿದೆ. ಆದರೆ ಸರ್ಕಾರ ತನ್ನ ಜಾಗದಿಂದ ನ್ಯಾಯವಾಗಿ ಬರಬೇಕಿದ್ದ ಸಂಪನ್ಮೂಲಗಳನ್ನು ಮಾತ್ರ ಕ್ರೋಢಿಕರಿಸಲು ವಿಫಲವಾಗುತ್ತದೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಯಾವುದೇ ಆಲೋಚನೆ ಇಲ್ಲದೇ ಬರೋಬ್ಬರಿ 85 ವರ್ಷಕ್ಕೆ ಸರ್ಕಾರಿ ಜಾಗವನ್ನು ಲೀಸ್ ನೀಡಲು ಮುಂದಾಗಿರುವುದು ಎಷ್ಟು ಸರಿ? ಸರ್ಕಾರದ ಒಳಗಡೆ ಈ ನಿರ್ಧಾರವನ್ನು ಯಾರು ಪ್ರಶ್ನೆ ಮಾಡುವುದಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 9 ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿ ಹೊರ ಹಾಕಿದ ಮನೆ ಮಾಲೀಕನ ಮಗ!

    9 ತಿಂಗಳ ಗರ್ಭಿಣಿಯ ಮೇಲೆ ಹಲ್ಲೆ ಮಾಡಿ ಹೊರ ಹಾಕಿದ ಮನೆ ಮಾಲೀಕನ ಮಗ!

    ಬೆಂಗಳೂರು: ಲೀಸ್ ಗಿದ್ದವರ ಮನೆಗೆ ನುಗ್ಗಿ ಮನೆ ಮಾಲೀಕನ ಮಗ ಗರ್ಭಿಣಿ ಮೇಲೆ ಹಲ್ಲೆ ಮಾಡಿ ನಂತ್ರ ಮನೆ ಸಾಮಾನುಗಳನ್ನು ಹೊರಹಾಕಿದ ಘಟನೆಯೊಂದು ನಗರದಲ್ಲಿ ನಡೆದಿದೆ.

    ಈ ಘಟನೆ ಹೊಸಕೆರೆಹಳ್ಳಿಯ ಬಿಡಿಎ ಲೇಔಟ್ ನಲ್ಲಿ ಭಾನುವಾರ ನಡೆದಿದೆ. ಘಟನೆ ಸಂಬಂಧ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ, ಕೆಂಚಯ್ಯ, ಭವಾನಿ, ಚಲುವಯ್ಯ ಹಾಗೂ ಅನ್ನ ಪೂರ್ಣ ಇವರುಗಳನ್ನು ಬಂಧಿಸಿದ್ದಾರೆ.

    ಏನಿದು ಘಟನೆ?: ರವೀಶ್ ತನ್ನ ಪತ್ನಿ ಹಾಗೂ ಅಜ್ಜಿಯೊಂದಿಗೆ ಬಿಡಿಎ ಲೇ ಔಟ್ ನಲ್ಲಿ 10 ಲಕ್ಷ ರೂ. ಲೀಸ್ ಗೆ ಮನೆ ಪಡೆದಿದ್ದರು. ನಿನ್ನೆ 9 ತಿಂಗಳ ಗರ್ಭಿಣಿ ಲಕ್ಷ್ಮೀ ಹಾಗೂ ಆಕೆಯ ಅಜ್ಜಿ ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆ ಮಾಲೀಕ ಬಸವೇ ಗೌಡ ಪುತ್ರ ಮಹೇಶ್ ತನ್ನ ಗ್ಯಾಂಗ್ ನೊಂದಿಗೆ ಮನೆಗೆ ನುಗ್ಗಿ ಲಕ್ಷ್ಮೀ ಮೇಲೆ ಹಲ್ಲೆ ಮಾಡಿದ್ದಾನೆ. ಅಲ್ಲದೇ ಮನೆಯ ಸಾಮಾನುಗಳನ್ನೆಲ್ಲಾ ಹೊರ ಹಾಕುವ ಮೂಲಕ ಗೂಂಡಾಗಿರಿ ಮೆರೆದಿದ್ದಾನೆ.

    ಹಲ್ಲೆಯಿಂದಾಗಿ ಲಕ್ಷ್ಮೀ ಮಾನಸಿಕವಾಗಿ ಕುಗ್ಗಿದ್ದು, ಗರ್ಭದಲ್ಲಿರೋ ಮಗುವಿನ ಹಾರ್ಟ್ ಬೀಟ್ ಕಡಿಮೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ಯಾನಿಂಗ್ ಮಾಡೋ ತನಕ ಏನನ್ನೂ ಹೇಳೋಕೆ ಆಗಲ್ಲ ಅಂತ ವೈದ್ಯರು ತಿಳಿಸಿದ್ದಾರೆ.

    ಘಟನೆ ಸಂಬಂಧ ರವೀಶ್ ಹಾಗೂ ಅವರ ಪತ್ನಿ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸದ್ಯ ಐವರನ್ನು ಬಂಧಿಸಿರುವ ಪೊಲೀಸರು, ತಲೆಮರೆಸಿಕೊಂಡಿರೋ ಮನೆ ಮಾಲೀಕ ಬಸವೇಗೌಡನ ಪತ್ತೆಗೆ ಬಲೆ ಬೀಸಿದ್ದಾರೆ.

     

  • ಖಾಸಗಿ ಸಿಮೆಂಟ್ ಕಂಪೆನಿಗೆ ಸಾವಿರ ಎಕರೆ ಭೂಮಿ- ನೂರಾರು ಕೋಟಿ ಡೀಲ್‍ಗೆ ಇಳಿಯಿತಾ ಸರ್ಕಾರ?

    ಖಾಸಗಿ ಸಿಮೆಂಟ್ ಕಂಪೆನಿಗೆ ಸಾವಿರ ಎಕರೆ ಭೂಮಿ- ನೂರಾರು ಕೋಟಿ ಡೀಲ್‍ಗೆ ಇಳಿಯಿತಾ ಸರ್ಕಾರ?

    ಕಲಬುರಗಿ: 100 ಕೋಟಿಗೂ ಅಧಿಕ ಬೆಲೆ ಬಾಳುವ ಸರ್ಕಾರಿ ಜಮೀನನ್ನು ಖಾಸಗಿ ಸಿಮೆಂಟ್ ಕಾರ್ಖಾನೆಗೆ ಲೀಸ್‍ಗೆ ಕೊಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ.

    ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಬೆನಕನಳ್ಳಿ ಮತ್ತು ಕೊಡ್ಲಾ ಗ್ರಾಮಗಳ 1,104 ಎಕರೆ ಸರ್ಕಾರಿ ಜಮೀನನ್ನು 30 ವರ್ಷಗಳ ಕಾಲ ಶ್ರೀ ಸಿಮೆಂಟ್ ಕಂಪನಿಯವರಿಗೆ ಲೀಸ್‍ಗೆ ನೀಡಲು ಸರ್ಕಾರ ಮುಂದಾಗಿದೆ. ನಿಯಮಗಳ ಪ್ರಕಾರ ಯಾವುದೇ ಕಾರಣಕ್ಕೂ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ನೀಡಲು ಬರುವುದಿಲ್ಲ. ಈ ಕುರಿತು ಕಲಬುರಗಿ ಜಿಲ್ಲಾಧಿಕಾರಿ ಉಜ್ವಲ್ ಕುಮಾರ್ ಘೋಷ್ ಸರ್ಕಾರಕ್ಕೆ ಪತ್ರ ಬರೆದರೂ ಕೂಡ ಸಿದ್ದು ಸರ್ಕಾರ ಸುಮ್ಮನಿಲ್ಲ. ಸಾಕಷ್ಟು ಟ್ಯಾಕ್ಸ್ ಬರುತ್ತದೆ ಎಂಬ ಕಾರಣಕ್ಕೆ ಜಮೀನನ್ನು ಸಿಮೆಂಟ್ ಕಂಪೆನಿಗೆ ‘ಎನ್‍ಎ’ ಮಾಡಿಕೊಡಿ ಅಂತಾ ಕಂದಾಯ ಇಲಾಖೆಯ ಅಧಿಕಾರಿಗಳು ಡಿಸಿಗೆ ಪತ್ರ ಬರೆದಿದ್ದಾರೆ.

    ದುರಂತ ಅಂದ್ರೆ ಈ ಹಿಂದೆ 2010ರಲ್ಲಿ ಇದೇ ಜಮೀನು ವಿವಾದ ಸಂಬಂಧ ಅಂದಿನ ಸಹಾಯಕ ಆಯುಕ್ತರಾಗಿದ್ದ ಡಿಕೆ ರವಿ ಅವರು ಶ್ರೀ ಸಿಮೆಂಟ್ ಕಂಪನಿಯ ಜೊತೆ ಕಾನೂನು ಹೋರಾಟ ನಡೆಸಿ ಜಮೀನನ್ನು ಮುಟ್ಟುಗೋಲು ಹಾಕಿಕೊಂಡಿದ್ರು. ಆದರೆ ಈಗ ಸರ್ಕಾರವೇ ಹಣದಾಸೆಗೆ ನೂರಾರು ಕೋಟಿ ಬೆಲೆ ಬಾಳುವ ಜಮೀನನ್ನು ಖಾಸಗಿ ಸಿಮೆಂಟ್ ಕಾರ್ಖಾನೆಗೆ ನೀಡಲು ಮುಂದಾಗಿದೆ. ಸದ್ಯ ಈ ಪ್ರಕರಣದಿಂದ ಕಲಬುರಗಿ ಜಿಲ್ಲಾಧಿಕಾರಿ ಮತ್ತು ಸರ್ಕಾರದ ನಡುವೆ ಬಿಕಟ್ಟು ಎದುರಾಗಿದೆ.