Tag: ಲಿವರ್

  • ಲಿವರ್ ದಾನ ಮಾಡಿ ಅಪ್ಪನ ಜೀವ ಉಳಿಸಿದ ಮಗಳು

    ಲಿವರ್ ದಾನ ಮಾಡಿ ಅಪ್ಪನ ಜೀವ ಉಳಿಸಿದ ಮಗಳು

    – ಮಗಳ ಕಾರ್ಯಕ್ಕೆ ಶಾಲೆಯ ವತಿಯಿಂದ ಸನ್ಮಾನ
    – ಲಿವರ್ ಟ್ಯೂಮರ್‍ನಿಂದ ಬಳಲುತ್ತಿದ್ದ ತಂದೆ

    ಚಂಢೀಗಡ್: ಹರಿಯಾಣದ ಸಿರಸಾ ಜಿಲ್ಲೆಯಲ್ಲಿ ಮಗಳೊಬ್ಬಳು ಲಿವರ್(ಯಕೃತ್ತು) ದಾನ ಮಾಡುವ ಮೂಲಕ ತನ್ನ ತಂದೆಗೆ ಹೊಸ ಜೀವನ ನೀಡಿದ್ದಾಳೆ.

    ನೇಹಾ ರಾಣಿ ದೆಹಲಿಯ ಗ್ರೇಟರ್ ಕೈಲಾಶ್ ನಿವಾಸಿಯಾಗಿದ್ದು, ಸಿರಸಾದಲ್ಲಿ ಶಾ ಸತ್ನಾಮ್ ಗರ್ಲ್ಸ್ ಸ್ಕೂಲಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ನೇಹಾ ತನ್ನ ಲಿವರ್ ದಾನ ಮಾಡಿ ತನ್ನ ತಂದೆಯ ಜೀವ ಉಳಿಸಿದ್ದಕ್ಕೆ ಹೆಮ್ಮೆ ಪಡುತ್ತಿದ್ದಾಳೆ. ನೇಹಾಳ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ ಆಕೆಗೆ ಸನ್ಮಾನ ಮಾಡಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿದ ನೇಹಾ, “ನನ್ನ ತಂದೆ ಲಿವರ್ ಟ್ಯೂಮರ್ ನಿಂದ ಬಳಲುತ್ತಿದ್ದರು. ಅಲ್ಲದೆ ವೈದ್ಯರು ಶೀಘ್ರದಲ್ಲೇ ಲಿವರ್ ಬದಲಾಯಿಸಬೇಕು ಎಂದು ಹೇಳಿದ್ದರು. ನಮ್ಮ ಮನೆಯಲ್ಲಿ ಅಮ್ಮ, ಅಣ್ಣ ಹಾಗೂ ಅತ್ತಿಗೆ ಇದ್ದಾರೆ. ಎಲ್ಲರ ಮೊದಲು ನಾನು ನನ್ನ ಲಿವರ್ ದಾನ ಮಾಡುತ್ತೇನೆ ಎಂದು ಹೇಳಿದ್ದೆ. ವೈದ್ಯರು ಪರಿಶೀಲನೆ ನಡೆಸಿದ ನಂತರ ನಾನು ನನ್ನ ಲಿವರ್ ದಾನ ಮಾಡಿದೆ” ಎಂದು ಹೇಳಿದ್ದಾಳೆ.

    ಮಕ್ಕಳಿಗಾಗಿ ತಂದೆ-ತಾಯಿ ತಮ್ಮ ಜೀವನವನ್ನು ತ್ಯಾಗ ಮಾಡುತ್ತಾರೆ. ಹಾಗೆಯೇ ಮಕ್ಕಳು ಕೂಡ ತಂದೆ-ತಾಯಿಯ ಸೇವೆಯಲ್ಲಿ ತಮ್ಮ ಜೀವನವನ್ನು ತ್ಯಾಗ ಮಾಡಬೇಕು. ನನ್ನ ಈ ಕಾರ್ಯಕ್ಕೆ ಶಾಲೆಯ ಪ್ರಿನ್ಸಿಪಲ್ ಡಾ. ಶೀಲಾ ಪುಣಿಯಾ ಅವರು ಪ್ರಶಂಸೆ ನೀಡಿದರು. ಅಲ್ಲದೆ ನನಗೆ ಸನ್ಮಾನ ಕೂಡ ಮಾಡಿದರು. ನನ್ನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಕಲಿಸುವುದರ ಜೊತೆಗೆ ಮಾನವೀಯತೆಯ ಪಾಠ ಕೂಡ ಹೇಳಿ ಕೊಡುತ್ತಾರೆ ಎಂದು ನೇಹಾ ತಿಳಿಸಿದ್ದಾಳೆ.

  • ಸಾವು ಬದುಕಿನ ಮಧ್ಯೆ ಹೋರಾಟ – ತಂದೆಗೆ ಲಿವರ್ ನೀಡಿ ಮರುಜನ್ಮ ನೀಡಿದ ಮಗಳು

    ಸಾವು ಬದುಕಿನ ಮಧ್ಯೆ ಹೋರಾಟ – ತಂದೆಗೆ ಲಿವರ್ ನೀಡಿ ಮರುಜನ್ಮ ನೀಡಿದ ಮಗಳು

    ಚೆನ್ನೈ: ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ತಂದೆಗೆ ಲಿವರ್ ಸಿಗುತ್ತಾ ಅಂತ ಮಗಳು ಚಾತಕ ಪಕ್ಷಿಯಂತೆ ಕಾಯುತ್ತಿದ್ದಳು. ಆದರೆ ಕಾದಿದ್ದೆ ಬಂತು. ಲಿವರ್ ಮಾತ್ರ ಸಿಗಲೇ ಇಲ್ಲ. ಲಿವರ್ ಸಿಗದೇ ಇದ್ದರೆ ತಂದೆ ಮೃತ್ಯು ಕಟ್ಟಿಟ್ಟ ಬುತ್ತಿ ಎಂದು ತಿಳಿದ ಮಗಳು ಈಗ ಕೊನೆಗೆ ತನ್ನ ಪಿತ್ತಜನಕಾಂಗವನ್ನೇ ನೀಡುವ ಮೂಲಕ ಜನ್ಮ ನೀಡಿದ ತಂದೆಗೆ ಮರುಜನ್ಮ ನೀಡಿದ್ದಾಳೆ.

    ಹೌದು. ಐಸಿಯುನಲ್ಲಿ ಹೋರಾಡುತ್ತಿದ್ದ ತನ್ನ ತಂದೆಗಾಗಿ ಮಗಳೊಬ್ಬಳು ಲಿವರ್ ನ ಒಂದು ಭಾಗವನ್ನು ದಾನ ಮಾಡಿರುವ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಲಿವರ್ ಡ್ಯಾಮೇಜ್ ಆಗಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ತಂದೆಗೆ ಮಗಳ ಲಿವರ್ ನ ಒಂದು ಭಾಗವನ್ನು ಕಸಿ ಮಾಡುವಲ್ಲಿ ಚೆನ್ನೈನ ಜಿಇಎಂ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಕೇವಲ ಪಿತ್ತಜನಕಾಂಗದ ಒಂದು ಭಾಗವನ್ನು ಮಾತ್ರ ಕಸಿ ಮಾಡಲಾಗಿದೆ.

    ಈ ವಿಚಾರದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಇಎಂ ಆಸ್ಪತ್ರೆಯ ವೈದ್ಯರು, ರೋಗಿಗೆ ಲಿವರ್ ನ ಒಂದು ಭಾಗ ಮಾತ್ರ ಡ್ಯಾಮೇಜ್ ಆಗಿ ಕೊನೆಯ ಹಂತ ತಲುಪಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಲಿವರ್ ಸಿಗುತ್ತಾ ಅಂತ ದಾನಿಗಳಿಗೆ ಕಾಯುತ್ತಿದ್ದೆವು. ಆದರೆ ದಾನಿಗಳು ಸಿಗದ ಕಾರಣ ಮಗಳು ಹತಾಶೆಗೊಂಡು ತಂದೆಯ ಸ್ಥಿತಿಯನ್ನು ನೋಡಿ ನಾನೇ ನನ್ನ ಅಂಗವನ್ನು ದಾನ ಮಾಡುತ್ತೇನೆ ಎಂದು ಮಗಳು ಮುಂದೆ ಬಂದಳು ಎಂದು ಹೇಳಿದ್ದಾರೆ.

    ಮಗಳು ಈ ನಿರ್ಧಾರಕ್ಕೆ ಕುಟುಂಬದ ಸದಸ್ಯರು ಒಪ್ಪಲಿಲ್ಲ. ಆಕೆ ಇನ್ನೂ ಮದುವೆಯಾಗಿಲ್ಲ. ಶಸ್ತ್ರಚಿಕಿತ್ಸೆ ಮಾಡಿದರೆ ಹೊಟ್ಟೆ ಭಾಗದಲ್ಲಿ ಮಾರ್ಕ್ ಆಗುತ್ತದೆ. ಈ ರೀತಿ ಆದರೆ ಮುಂದೆ ಈಕೆಯನ್ನು ಯಾರು ವಿವಾಹ ಆಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು. ಆದರೆ ನಾವು ಆಕೆ ಕುಟುಂಬದವರಿಗೆ ಶಸ್ತ್ರಚಿಕಿತ್ಸೆಯ ವಿಧಾನವನ್ನು ವಿವರಿಸಿದ್ದೇವೆ. ಮತ್ತು ಆದರ ಕಾರ್ಯ ವಿಧಾನದ ಬಗ್ಗೆಯೂ ಅರ್ಥವಾಗುವಂತೆ ವಿವರಿಸಿ ಹೇಳಿದಾಗ ಅವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದರು ಎಂದು ವೈದ್ಯರು ಹೇಳಿದ್ದಾರೆ.

    ಇದೇ ಮೊದಲ ಬಾರಿಗೆ ಭಾರತದಲ್ಲಿ ಡಾ. ಸಿ ಪಳನಿವೆಲು ಮತ್ತು ಅವರ ತಂಡವು ಲ್ಯಾಪರೊಸ್ಕೋಪಿಕ್ ಪಿತ್ತಜನಕಾಂಗದ ಕಸಿ ಮಾಡಿದೆ. ಲಿವರಿನ ಬಲ ಅರ್ಧವನ್ನು ಮೂರೂವರೆ ಗಂಟೆಗಳಲ್ಲಿ ಯಶಸ್ವಿಯಾಗಿ ಬೇರ್ಪಡಿಸಿ ನಂತರ ತಂದೆಗೆ ಮಗಳ ಪಿತ್ತಜನಕಾಂಗದ ಅರ್ಧ ಭಾಗವನ್ನು ಜೋಡಣೆ ಮಾಡಲಾಗಿದೆ ಎಂದು ವೈದ್ಯರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

    ವೈದ್ಯರ ತಮಿಳುನಾಡಿನ ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರನ್ನು ಭೇಟಿಯಾಗಿ ಈ ಕೆಲಸದ ಬಗ್ಗೆ ವಿವರಿಸಿದ್ದಾರೆ. ವೈದ್ಯರ ಈ ಸಾಧನೆಯನ್ನು ಮೆಚ್ಚಿರುವ ಪಳನಿಸ್ವಾಮಿ ಅವರು ವೈದ್ಯರ ಜೊತೆ ತಂದೆಗೆ ಅಂಗವನ್ನು ದಾನ ಮಾಡಿ ಪಿತೃಪ್ರೇಮ ಮೆರೆದ ಯುವತಿಯನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

  • ತನ್ನ ತಂದೆಯ ಜೀವ ಉಳಿಸಲು ಮಗನಿಂದ ಸೈಕಲ್ ಸವಾರಿ!

    ತನ್ನ ತಂದೆಯ ಜೀವ ಉಳಿಸಲು ಮಗನಿಂದ ಸೈಕಲ್ ಸವಾರಿ!

    ಮೈಸೂರು: ಇತ್ತೀಚಿನ ದಿನಗಳಲ್ಲಿ ಸಂಬಂಧಗಳಿಗೆ ಬೆಲೆಯೆ ಇಲ್ಲದಂತಾಗಿದೆ. ಆದರೆ ಇಲ್ಲೊಬ್ಬ ಯುವಕ ತನ್ನ ತಂದೆಗಾಗಿ ಲಿವರ್ ದಾನ ಮಾಡುತ್ತಿದ್ದು, ಆದರ್ಶ ಮಗನಾಗಿದ್ದಾರೆ.

    ಮೈಸೂರಿನ ವೀರನಗರ ನಿವಾಸಿಯಾಗಿರುವ ಪ್ರೀತೇಶ್ ಜೈನ್ ತನ್ನ ಅಪ್ಪನಿಗೆ ಲಿವರ್ ದಾನ ಮಾಡಲು ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಲಿವರ್ ದಾನಕ್ಕೆ ತನ್ನ ದೇಹದ ತೂಕ ಅಡ್ಡಿ ಆಗಿತ್ತು. ಹೀಗಾಗಿ ಸದ್ಯ ದೇಹದ ತೂಕ ಇಳಿಸುತ್ತಿದ್ದಾರೆ. ಪ್ರೀತೇಶ್ ಚಿನ್ನ ಮತ್ತು ಬೆಳ್ಳಿ ವ್ಯಾಪಾರಿಯಾಗಿದ್ದು, ತಂದೆ ಅಶೋಕ್ ಜೈನ್ ಅವರು ಕಳೆದ ಎಂಟು ವರ್ಷಗಳಿಂದ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದಾರೆ. ಇದಕ್ಕಾಗಿ ಅವರಿಗೆ ಎಷ್ಟೆ ಚಿಕಿತ್ಸೆ ಪಡೆದರು ಗುಣಮುಖವಾಗಲಿಲ್ಲ.

    ಕೊನೆಗೆ ವೈದ್ಯರು ತಂದೆ ಅಶೋಕ್ ಜೈನ್ ಅವರ ಯಕೃತ್ ಅನ್ನು ಸಂಪೂರ್ಣವಾಗಿ ತೆಗೆದು ಹೊಸ ಲಿವರ್ ಜೋಡಣೆ ಮಾಡಬೇಕು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಹೊಸ ಲಿವರ್ ನೀಡುವ ದಾನಿಗಳು ರಕ್ತ ಸಂಬಂಧಿಗಳು ಆದರೆ ಉತ್ತಮ ಎಂಬ ಸಲಹೆಯನ್ನು ನೀಡಿದ್ದಾರೆ. ಈ ಕಾರಣಕ್ಕೆ ಮಗ ಪ್ರೀತೇಶ್ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ತಮ್ಮ ಲಿವರ್ ದಾನ ಮಾಡಲು ಮುಂದಾಗಿದ್ದಾರೆ.

    ವೈದ್ಯರ ಸಲಹೆ ಮೇರೆಗೆ ಲಿವರ್ ದಾನ ಮಾಡಲು ಮುಂದಾದ ನನಗೆ ದೇಹದ ತೂಕ ಅಡ್ಡಿಯಾಗಿದೆ. ತಾವು 90 ಕೆ.ಜಿ. ತೂಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ದೇಹದ ತೂಕವನ್ನ 70 ರಿಂದ 75 ಕೆ.ಜಿ.ತೂಕಕ್ಕೆ ಇಳಿಸಿಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. ಇದರಿಂದ ಈಗ ನಾನು ಪ್ರತಿದಿನ ದೇಹ ದಂಡಿಸುತ್ತಿದ್ದು, ದಿನದ ವ್ಯಾಯಾಮದ ಜೊತೆ ಪ್ರತಿದಿನ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸೈಕಲ್ ತುಳಿಯುತ್ತಿದ್ದೇನೆ. ಈಗಾಗಲೇ ಕಳೆದ 27 ದಿನಗಳಿಂದ ದೇಹ ದಂಡಿಸುತ್ತಿದ್ದು, 7 ಕೆ.ಜಿ.ತೂಕ ಕಡಿಮೆ ಮಾಡಿಕೊಂಡಿದ್ದೇನೆ ಎಂದು ಪ್ರೀತೇಶ್ ಹೇಳಿದ್ದಾರೆ.

    ತನ್ನ ತಂದೆಯ ಜೀವ ಉಳಿಸಿಕೊಳ್ಳಲು ಮಗನು ಮಾಡುತ್ತಿರುವ ಕಸರತ್ತು ನಿಜಕ್ಕು ಎಲ್ಲರು ಮೆಚ್ಚುವಂತಹದ್ದಾಗಿದೆ. ಒಂದು ತಿಂಗಳ ಅವದಿಯಲ್ಲಿ 10 ಕೆ.ಜಿ. ತೂಕ ಇಳಿಸಲು ತಮ್ಮ ದೇಹವನ್ನು ದಂಡಿಸುತ್ತಿದ್ದಾರೆ.