Tag: ಲಿರಿಕಲ್ ಸಾಂಗ್

  • ಮೇ 1ಕ್ಕೆ ‘ಪುಷ್ಪ 2’ ಲಿರಿಕಲ್ ವಿಡಿಯೋ ರಿಲೀಸ್

    ಮೇ 1ಕ್ಕೆ ‘ಪುಷ್ಪ 2’ ಲಿರಿಕಲ್ ವಿಡಿಯೋ ರಿಲೀಸ್

    ಪುಷ್ಪ 2 ಸಿನಿಮಾ ಬಿಡುಗಡೆಯ ದಿನಾಂಕ ಸಮೀಪಕ್ಕೆ ಬರುತ್ತಿದ್ದಂತೆಯೇ ಸಿನಿಮಾ ತಲುಪಿಸಲು ನಾನಾ ರೀತಿಯ ಸಿದ್ದತೆಗಳನ್ನು ಮಾಡುತ್ತಿದೆ ಚಿತ್ರತಂಡ. ಈಗಾಗಲೇ ಫಸ್ಟ್  ಲುಕ್, ಟೀಸರ್ ರಿಲೀಸ್ ಮಾಡಿರುವ ನಿರ್ದೇಶಕರು, ಈಗ ಮೇ 1 ರಂದು ಚಿತ್ರದ ಮೊದಲ ಲಿರಿಕಲ್ ಸಾಂಗ್ (Lyrical Song) ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.

    ಭಾರತೀಯ ಸಿನಿಮಾ ರಂಗದಲ್ಲಿ ಪುಷ್ಪ 2 ದಾಖಲೆಗೆ ಕಾರಣವಾಗುತ್ತಿದೆ. ಈ ಸಿನಿಮಾದ ಡಿಜಿಟೆಲ್ ರೈಟ್ಸ್ (Digital Rights) ಬರೋಬ್ಬರಿ 275 ಕೋಟಿ ರೂಪಾಯಿ ಸೇಲ್ ಆಗಿದೆ ಎನ್ನುವ ಮಾಹಿತಿ ಸಿಗುತ್ತಿದೆ. ಈ ಹಣ ಸಿನಿಮಾ ರಿಲೀಸ್ ಆದ ನಂತರ ಮತ್ತಷ್ಟು ಏರಿಕೆಯೂ ಆಗಲಿದೆಯಂತೆ. ಇಷ್ಟೊಂದು ಮೊತ್ತದ ಹಣವನ್ನು ಕೊಟ್ಟು ಇದೇ ಮೊದಲ ಬಾರಿಗೆ ಡಿಜಿಟೆಲ್ ಹಕ್ಕುಗಳನ್ನು ಖರೀದಿಸಲಾಗಿದೆಯಂತೆ.

    ಅಲ್ಲು ಅರ್ಜುನ್ (Allu Arjun) ನಟನೆಯ ಪುಷ್ಪ 2 (Pushpa 2) ಸಿನಿಮಾ ಇದೇ ಆಗಸ್ಟ್ 15ರಂದು ಬಿಡುಗಡೆ ಮಾಡುವುದಾಗಿ ಈಗಾಗಲೇ ಚಿತ್ರತಂಡ ಘೋಷಣೆ ಮಾಡಿದೆ. ಅದೇ ರೀತಿಯ ಬಾಲಿವುಡ್ ನ ಹೆಸರಾಂತ ನಟ ಅಜಯ್ ದೇವಗನ್ (Ajay Devgan) ನಟನೆಯ ಸಿಂಗಂ ಅಗೇನ್ ಚಿತ್ರ ಕೂಡ ಅದೇ ದಿನಾಂಕದಂದು ರಿಲೀಸ್ ಆಗಬೇಕಿತ್ತು. ಆದರೆ, ಸಿಂಗಂ (Singam Again) ಸೈಡ್ ಗೆ ಹೋಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.

     

    ಪುಷ್ಪ 2 ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ. ಸಿನಿ ಪಂಡಿತರ ಲೆಕ್ಕಾಚಾರದಂತೆ ಸಾವಿರಾರು ಕೋಟಿ ರೂಪಾಯಿ ವ್ಯಾಪಾರ ಮಾಡುವ ಶಕ್ತಿ ಈ ಚಿತ್ರಕ್ಕಿದೆಯಂತೆ. ಅಲ್ಲದೇ, ದೊಡ್ಡ ಮಟ್ಟದಲ್ಲಿ ಮತ್ತು ಹಲವು ಭಾಷೆಗಳಲ್ಲಿ ಈ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಸಿಂಗಂ ಅಗೇನ್ ಚಿತ್ರದ ರಿಲೀಸ್ ಅನ್ನು ಮುಂದೂಡಿಕೆ ಮಾಡುವ ಯೋಚನೆ ಮಾಡಲಾಗಿದೆಯಂತೆ.

  • ‘ಅಡವಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡಿದ ಪಾ.ರಂಜಿತ್

    ‘ಅಡವಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡಿದ ಪಾ.ರಂಜಿತ್

    ಸಂವಿಧಾನ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ, ಕಾಡಿನ ಸಂರಕ್ಷಣೆ,ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ತೆರೆದಿಡುವ ಚಿತ್ರ ಅಡವಿ (Adavi). ಈ ‌ಚಿತ್ರದ ಸಿಂಗಾರ ಸಿಂಗಾರ ತ್ವಾಟ ಹಾಡಿನ ಲಿರಿಕಲ್ ವೀಡಿಯೋವನ್ನು  ಕೆಜಿಎಫ್ ಮುನಿಸಿಪಲ್ ಗ್ರೌಂಡ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲ, ಕಬಾಲಿ, ತಂಗಲಾನ್ ಚಿತ್ರಗಳ ನಿರ್ದೇಶಕ ಪ.ರಂಜಿತ್ (Pa. Ranjith) ಅವರು ಬಿಡುಗಡೆ ಮಾಡಿದರು. ಹಿರಿಯ ಸಂಗೀತ ನಿರ್ದೇಶಕ  ವಿ.ಮನೋಹರ್ ಅವರ ಸಾಹಿತ್ಯದ 2500ನೇ ಗೀತೆ ಇದಾಗಿದ್ದು, ನವೀನ್ ಸಜ್ಜು ಈ ಹಾಡಿಗೆ ದನಿಯಾಗಿದ್ದಾರೆ. ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಟೈಗರ್ ನಾಗ್ ಅವರು ಚಿತ್ರಕಥೆ ಬರೆದ ನಿರ್ಮಿಸಿ, ನಿರ್ದೇಶಿಸಿರುವ  ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

    ವೇದಿಕೆಯಲ್ಲಿ  ಪಾ.ರಂಜೀತ್ ಮಾತನಾಡಿ  ಅಡವಿ ಚಿತ್ರದಲ್ಲಿ ನೆಲದ ಮಣ್ಣಿನ ಮಕ್ಕಳ ಕಥೆಯೊಂದಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಬಹಳ‌ ಚೆನ್ನಾಗಿ ತಂದಿದ್ದಾರೆ.‌  ನಿರ್ದೇಶಕ ಟೈಗರ್ ನಾಗ್ ಅವರು ಚಿತ್ರದ ಟೈಟಲ್ ಮತ್ತು ಹಾಡಿನಲ್ಲಿ ಕುತೂಹಲ ಮೂಡಿಸಿದ್ದಾರೆ, ಚಿತ್ರತಂಡಕ್ಕೆ ಯಶ ಸಿಗಲಿ ಎಂದು  ಹಾರೈಸಿದರು. ಈ ಸಂದರ್ಭದಲ್ಲಿ  ಪ್ರಗತಿಪರ ಚಿಂತಕ ಸಂಪತ್ ಸುಬ್ಬಯ್ಯ, ಬೌದ್ಧ ಮಹಾಸಭಾದ ರಾಜ್ಯಾದ್ಯಕ್ಷ ಹ.ರ.ಮಹೇಶ್ ಬೌದ್ಧ, ಜೀವಾ ನವೀನ್, ಮೋಹನ್ ಮೌರ್ಯ, ಮಾಸ್ಟರ್ ಚಿರುಶ್ರೀನಾಗ್, ಶಿಲ್ಪ, ಆರುಂಧತಿ ಲಾಲ್, ಅರ್ಜುನ್ ಪಾಳ್ಳೇಗಾರ್, ಸಹನಿರ್ದೇಶಕ ಕೆ. ಮಂಜು ಕೋಟೆಕೆರೆ ಹಾಜರಿದ್ದರು.

    ಚಿತ್ರರಂಗದಲ್ಲಿ  ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಅಡವಿ ಚಿತ್ರದ ನಿರ್ಮಾಪಕ ಟೈಗರ್ ನಾಗ್ ಅವರು ಸೆನ್ಸಾರ್ ಮಂಡಳಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಸಿಬಿಐಗೆ ದೂರು ನೀಡಿದ್ದರು. ಬಳಿಕ ಸಿಬಿಐ ಬಲೆಗೆ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅರಣ್ಯವೇ ಸರ್ವಸ್ವ ಎಂದು ನಂಬಿರುವ ಕಾಡಿನ ಮೂಲ ನಿವಾಸಿಗಳ ಜೀವನ, ತಮ್ಮ ಸ್ವಚ್ಛಂದ ಬದುಕಿಗಾಗಿ ಅವರು ನಡೆಸುವ ಹೋರಾಟ,  ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆಯುವ ಪ್ರಯತ್ನ ಕಥೆಯಲ್ಲಿದೆ. ಈಗಾಗಲೇ ಅಡವಿ ಚಿತ್ರದ ಚಿತ್ರೀಕರಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಚಿತ್ರತಂಡವೀಗ ಬಿಡುಗಡೆಯ ಸಿದ್ಧತೆ ನಡೆಸಿದೆ. ಅಡವಿ ಚಿತ್ರವನ್ನು ಐತಿಹಾಸಿಕ ಸಿದ್ದರಬೆಟ್ಟ,  ಸಂಜೀವಿನಿ ಕ್ಷೇತ್ರ, ಸೂರ್ಯ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆ ಅಲ್ಲದೆ  ಆದಿವಾಸಿಗಳು ವಾಸಿಸುವ ಗುಡಿಸಲುಗಳಲ್ಲಿ ಚಿತ್ರೀಕರಿಸಲಾಗಿದೆ.

     

    ಅಡವಿ ಚಿತ್ರಕ್ಕೆ ಮಂಜು ಮಹಾದೇವ್ ಅವರ ಸಂಗೀತ ಸಂಯೋಜನೆ, ವಿಪಿನ್ ವಿ ರಾಜ್ ಅವರ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಕೆ ಮಂಜು ಕೋಟೆಕೆರೆ ಟೈಗರ್ ನಾಗ್ ಸಂಭಾಷಣೆ, ಕೆ.ಮಂಜು ಕೋಟೆಕೆರೆ, ನಿರ್ಮಾಣ ನಿರ್ವಹಣೆ ವಿಜಯಕುಮಾರ್ ಎವಿ, ಸಹ ನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನವಿದೆ. ರಾಮಾನಾಯಕ್, ಉಗ್ರಂ ದೇವು, ರವಿಕುಮಾರ್ ಸನ, ಅನಂತರಾಜು, ವಕೀಲ ಜಗದೀಶ್ ಮಹಾದೇವ್, ಹ.ರ.ಮಹೇಶ್, ವಾಲೆ ಚಂದ್ರಣ್ಣ, ಮಂಜೀವ, ವೃಶ್ಚಿಕ ಶಿಲ್ಪಾ, ಟೈಗರ್ ನಾಗ್, ಆನಂದ್, ಶಿವಾನಂದ್ , ನವೀನ್, ಅರುಣ್, ಸಿದ್ದರಾಜು, ಕೆ.ಆರ್. ಓಬಳರಾಜು, ಕುಣಿಗಲ್ ರಮೇಶ್, ಮಂಜುಳಾ ರಾಜಕುಮಾರ್, ನಾಗಮಣಿ, ಬೇಬಿ ಸಿಂಚನಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

  • ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಕ್ಯಾರಾವ್ಯಾನ್ ಡ್ರೈವರ್ ಇದೀಗ ಹೀರೋ : ‘ಲಕ್’ ಮೇಲೆ ಲಕ್

    ಜೀವನದಲ್ಲಿ ಯಾರಿಗೆ ಯಾವಾಗ ‘ಲಕ್’ (Luck)  ಬರತ್ತೆ ಹೇಳಲಿಕ್ಕೆ ಆಗಲ್ಲ. ಕಳೆದ ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು (Smile Manju) ‘ಲಕ್’ ಚಿತ್ರದ ನಾಯಕನಾಗಿ ಅಭಿನಯಿಸಿದ್ದಾರೆ ಜೊತೆಗೆ ನಿರ್ಮಾಣವನ್ನು ಮಾಡಿದ್ದಾರೆ. ಇತ್ತೀಚೆಗೆ ಈ ಚಿತ್ರದ ‘90 ಕುಡಿ ಮಗ ಪಲ್ಟಿ ಹೊಡಿ’ ಎಂಬ ಹಾಡಿನ ಲಿರಿಕಲ್ ವಿಡಿಯೋ (Lyrical Song) ಬಿಡುಗಡೆಯಾಯಿತು. ಅಪ್ಪಿ ಹಾಗೂ ಹರೀಶ್ ಬರೆದಿರುವ ಈ ಹಾಡನ್ನು ನವೀನ್ ಸಜ್ಜು ಹಾಡಿದ್ದಾರೆ. ವಿಜಯ್ ಹರಿತ್ಸ (Vijay Haritsa) ಸಂಗೀತ ನೀಡಿದ್ದಾರೆ. ಈ ಚಿತ್ರದ ಕುರಿತಾದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

    ಚಿತ್ರಕ್ಕೆ ಮೊದಲೊಬ್ಬ ನಿರ್ದೇಶಕರಿದ್ದರು. ಹಾಗೆ ನಾಯಕರೂ ಬೇರೆಯೇ ಇದ್ದರು. ಅನಿವಾರ್ಯ ಕಾರಣದಿಂದ ಅವರು ಚಿತ್ರದಿಂದ ದೂರವಾದಾಗ ಈ ಚಿತ್ರಕ್ಕೆ ನಾನು ನಿರ್ದೇಶಕನಾದೆ. ಮಂಜು ನಾಯಕನಾದರು. ನನ್ನ ಜೀವದಲ್ಲೇ ನಡೆದಿರುವ  ಘಟನೆಯನ್ನು ಸಿನಿಮಾ ರೂಪದಲ್ಲಿ ಆಚೆ ತರುತ್ತಿದ್ದೇನೆ‌. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಡಾಲಿ ಧನಂಜಯ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆ ಭಾಗದ ಚಿತ್ರೀಕರಣ ಮಾತ್ರ ಬಾಕಿಯಿದೆ. ಇದು ಒಂದು ದಿನ, ಅದರಲ್ಲೂ ಕೆಲವೇ ಗಂಟೆಗಳಲ್ಲಿ ನಡೆಯುವ ಕಥೆಯಾಗಿದೆ. ಪದ್ಮಜಾರಾವ್, ಕಡ್ಡಿಪುಡಿ ಚಂದ್ರು ಮುಂತಾದವರು ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ಛತ್ರಪತಿ ಶಿವಾಜಿಯ ಸೊಸೆ ಪಾತ್ರಕ್ಕೆ ರಶ್ಮಿಕಾ ಮಂದಣ್ಣ ಫೈನಲ್?‌

    ನಾನು ಒಂಭತ್ತು ವರ್ಷಗಳಿಂದ ಕ್ಯಾರಾವ್ಯಾನ್ ಓಡಿಸುತ್ತಿದ್ದೇನೆ. ಗೋಲ್ಡನ್ ಸ್ಟಾರ್ ಗಣೇಶ್, ಡಾಲಿ ಅವರ ಕ್ಯಾರಾವ್ಯಾನ್ ಗೆ ನಾನೇ ಚಾಲಕ. ಸಿನಿಮಾ ಮಾಡುವ ಆಸೆಯಿತ್ತು. ದುಡಿದ ಹಣ ಹಾಗೂ ಜಮೀನು ಮಾರಿದ ಹಣ ಎರಡೂ ಸೇರಿಸಿ ಈ ಚಿತ್ರ ನಿರ್ಮಾಣ ಮಾಡಿದ್ದೇನೆ ಜೊತೆಗೆ ನಾಯಕನಾಗೂ ಅಭಿನಯಿಸಿದ್ದೇನೆ. ನನ್ನ ಮೇಲೆ ಪ್ರೀತಿಯಿಟ್ಟು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರು ಸೇರಿದಂತೆ ಚಿತ್ರರಂಗದ ಅನೇಕ ನಾಯಕರು ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ‌. ಚಿತ್ರತಂಡದ ಸಹಕಾರಕ್ಕೆ ಧನ್ಯವಾದ ಎಂದರು ನಾಯಕ ಹಾಗೂ ನಿರ್ಮಾಪಕ ಕ್ಯಾರಾವ್ಯಾನ್ ಸ್ಟಾರ್ ಸ್ಮೈಲ್ ಮಂಜು.

    ಚಿತ್ರದ ಪ್ರಮುಖಪಾತ್ರದಲ್ಲಿ ನಟಿಸಿರುವ ರೇಣು ಹಾಡು ಬರೆದಿರುವ ಅಪ್ಪಿ ಹಾಗೂ ಸಂಗೀತ ನಿರ್ದೇಶಕ ವಿಜಯ್ ಹರಿತ್ಸ ಚಿತ್ರದ ಕುರಿತು ಮಾತನಾಡಿದರು.

  • ವಿಂಡೋಸೀಟ್ ಚಿತ್ರದ `ಖಾಲಿ ಆಕಾಶ’ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್..!!

    ವಿಂಡೋಸೀಟ್ ಚಿತ್ರದ `ಖಾಲಿ ಆಕಾಶ’ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್..!!

    ಬೆಂಗಳೂರು: ರೋಮ್ಯಾಂಟಿಕ್ ಥ್ರಿಲ್ಲರ್ ಕಥಾ ಹಂದರ ಒಳಗೊಂಡಿರುವ `ವಿಂಡೋಸೀಟ್’ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಸಾಂಗ್ ಬಿಡುಗೆಯಾಗಿದೆ. ಅತಿ ಚೆಂದದ ಹೂ ಗೊಂಚಲು ಹಾಡಿನ ಸೂಪರ್ ಸಕ್ಸಸ್ ನಂತರ `ಖಾಲಿ ಆಕಾಶ ನನ್ನೇ ನೋಡಿದೆ’ ಹಾಡಿನ ಲಿರಿಕಲ್ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

    ಕವಿರಾಜ್ ಸಾಹಿತ್ಯ ಕೃಷಿಯಲ್ಲಿ ಅರಳಿದ ಪ್ಯಾಥೋ ಸಾಂಗ್‍ಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ, ಸ್ವರ ಮಾಂತ್ರಿಕ ವಿಜಯ್ ಪ್ರಕಾಶ್ ದನಿ ಹೊಸದೊಂದು ಸ್ಪರ್ಶ ನೀಡಿದೆ. ಹೊಸತನದಿಂದ ಕೂಡಿದ ಈ ಹಾಡಿಗೆ ಗಾನಪ್ರಿಯರು ತಲೆದೂಗಿದ್ದಾರೆ.

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕ ವಿಜಯ್ ಪ್ರಕಾಶ್ ಇಬ್ಬರ ತಲ್ಲೀನತೆ ಲಿರಿಕಲ್ ವಿಡಿಯೋದಲ್ಲಿ ನೋಡುಗರನ್ನು ಸೆಳೆಯದೇ ಇರದು. ವಿಶೇಷ ಅಂದ್ರೆ `ಖಾಲಿ ಆಕಾಶ’ `ವಿಂಡೋಸೀಟ್’ ಚಿತ್ರ ತಂಡಕ್ಕೂ ಬಲು ಅಚ್ಚುಮೆಚ್ಚಿನ ಸಾಂಗ್ ಆಗಿದೆ. ಈ ಬಗ್ಗೆ ಸ್ವತಃ ಚಿತ್ರದ ನಿರ್ದೇಶಕಿ ಶೀತಲ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

    ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಟನೆಯ ಬಹುನಿರೀಕ್ಷಿತ ಚಿತ್ರಕ್ಕೆ ಶೀತಲ್ ಶೆಟ್ಟಿ ಮೊದಲ ಬಾರಿ ಆ್ಯಕ್ಷನ್ ಕಟ್ ಹೇಳಿದ್ದು, ನಿರೂಪ್ ಭಂಡಾರಿಗೆ ಜೋಡಿಯಾಗಿ ಸಂಜನಾ ಆನಂದ್, ಅಮೃತ ಐಯ್ಯಂಗಾರ್ ನಾಯಕ ನಟಿಯರಾಗಿ ತೆರೆಹಂಚಿಕೊಂಡಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹಾಕಿದ್ದು, ವಿಘ್ನೇಶ್ ರಾಜ್ ಕ್ಯಾಮೆರಾ ಕಣ್ಣಲ್ಲಿ ವಿಂಡೋಸೀಟ್ ಸಿನಿಮಾ ಸೆರೆಯಾಗಿದೆ. ಲೇಖಾ ನಾಯ್ಡು, ಮಧುಸೂದನ್ ರಾವ್, ರವಿಶಂಕರ್, ಸೂರಜ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಬಣ್ಣಹಚ್ಚಿದ್ದಾರೆ.