Tag: ಲಿರಿಕಲ್ ವಿಡಿಯೋ

  • ದಾರಿಯಲ್ಲಿ ಧೂಳು: ‘ಕೆಂಡ’ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್

    ದಾರಿಯಲ್ಲಿ ಧೂಳು: ‘ಕೆಂಡ’ ಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್

    ರೂಪಾ ರಾವ್ (Roopa Rao) ನಿರ್ಮಾಣ ಮತ್ತು ಸಹದೇವ್ ಕೆಲವಡಿ (Sahdev Kelavadi) ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ `ಕೆಂಡ’. ಆರಂಭದಿಂದ ಇಲ್ಲಿಯವರೆಗೂ  ಒಂದಷ್ಟು ಕುತೂಹಲಕರ ವಿಚಾರಗಳೊಂದಿಗೇ ಈ ಸಿನಿಮಾ ಪ್ರೇಕ್ಷಕರನ್ನು ತಲುಪುತ್ತಾ ಬಂದಿದೆ. ಇದೀಗ ಸಂಪೂರ್ಣವಾಗಿ ಚಿತರ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ಸಜ್ಜುಗೊಂಡಿರುವ `ಕೆಂಡ’ದ (Kenda) ಕಡೆಯಿಂದೀಗ ಸಮ್ಮೋಹಕ ಹಾಡುಗಳ ಹಂಗಾಮಾ ಶುರುವಾಗಿದೆ. ಈಚೆಗಷ್ಟೇ ಚೆಂದದ್ದೊಂದು ಹಾಡು ಬಿಡುಗಡೆಗೊಂಡಿತ್ತು. ಇದೀಗ ಮತ್ತೊಂದು ಲಿರಿಕಲ್ ವಿಡಿಯೋ (Lyrical Video) ಸಾಂಗ್ ಅನಾವರಣಗೊಂಡಿದೆ.

    ದಾರಿಯಲ್ಲಿ ಧೂಳು… ದೂರ ಎಲ್ಲೋ ಊರು… ಅಂತ ತೆರೆದುಕೊಳ್ಳೋ ಈ ಹಾಡು ನವಿರು ಸಾಹಿತ್ಯ, ಅದಕ್ಕೊಪ್ಪುವ ಸಂಗೀತ ಹಾಗೂ ಧ್ವನಿಯೊಂದಿಗೆ ಮೆಲ್ಲಗೆ ಮನಸಿಗಿಳಿಯುವಂತಿದೆ. ವಿಶೇಷವೆಂದರೆ, ರಿತ್ವಿಕಕ್ ಕಾಯ್ಕಿಣಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡನ್ನು, ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿದ್ದಾರೆ. ಪ್ರತಿಯೊಂದರಲ್ಲಿಯೂ ಹೊಸತನ, ಪ್ರಯೋಗಾತ್ಮಕ ಗುಣಗಳೊಂದಿಗೆ ಮುಂದುವರೆಯುತ್ತಿರುವ ಚಿತ್ರತಂಡ, ಈ ವಿಚಾರದಲ್ಲಿಯೂ ಗಮನ ಸೆಳೆದಿದೆ.

    ಜಯಂತ್ ಕಾಯ್ಕಿಣಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಅದಕ್ಕೆ ಅವರ ಪುತ್ರ ರಿತ್ವಿಕ್ ಮೆಲುವಾದ ಸಂಗೀತ ಸ್ಪರ್ಶ ನೀಡಿದ್ದಾರೆ. ಮೊದಲ ಹಾಡಿನ ಮೂಲಕ ಗಮನ ಸೆಳೆದಿದ್ದ ರಿತ್ವಿಕ್ ಕಾಯ್ಕಿಣಿ, ಎರಡನೇ ಈ ಹಾಡಿನ ಮೂಲಕ ಮತ್ತಷ್ಟು ಭರವಸೆ ಮೂಡಿಸಿರೋದು ಸತ್ಯ. ಮತ್ತೆ ಮತ್ತೆ ಕೇಳಿಸಿಕೊಂಡು, ವಿವರಿಸಲಾಗದಂಥಾ ಧ್ಯಾನಕ್ಕೆ ದೂಡುವ ಗುಣದ ಈ ಹಾಡು ಕೇಳುಗರನ್ನೆಲ್ಲ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಹೀಗೆ ಹಾಡುಗಳ ಮೂಲಕ ಸಂಚಲನ ಸೃಷ್ಟಿಸುತ್ತಿರುವ ಕೆಂಡ ಇದೇ ಜೂನ್ ತಿಂಗಳಿನಲ್ಲಿ ಬಿಡುಗಡೆಗೊಳ್ಳಲಿದೆ.

     

    ಈಗಾಗಲೇ ಗಂಟುಮೂಟೆ ಚಿತ್ರದ ಮೂಲಕ ನಿರ್ದೇಶಕಿಯಾಗಿ ನೆಲೆ ಕಂಡುಕೊಂಡಿರುವವರು ರೂಪಾ ರಾವ್. ಅವರು ಕೆಂಡದ ಮೂಲಕ ನಿರ್ಮಾಪಕಿಯಾಗಿ ರೂಪಾಂತರಗೊಂಡಿದ್ದಾರೆ. ಗಂಟುಮೂಟೆಯ ಭಾಗವಾಗಿದ್ದ ಸಹದೇವ್ ಕೆಲವಡಿ ಕೆಂಡದೊಂದಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಈಗಾಗಲೇ ಸಹದೇವ್ ಒಂದೊಳ್ಳೆ ಕಥೆಗೆ ಪರಿಣಾಮಕಾರಿಯಾಗಿ ದೃಷ್ಯರೂಪ ನೀಡಿರುವ ಸ್ಪಷ್ಟ ಲಕ್ಷಣಗಳು ಗೋಚರಿಸಿವೆ. ಇದೀಗ ಕೆಂಡದ ಎರಡನೇ ಹಾಡು ಬಿಡುಗಡೆಗೊಂಡಿದೆ. ಅದರ ಬೆನ್ನಲ್ಲಿಯೇ ಮತ್ತೊಂದಷ್ಟು ವಿಚಾರಗಳೊಂದಿಗೆ ಕೆಂಡದ ನಿಖರವಾದ ಬಿಡುಗಡೆ ದಿನಾಂಕ ಜನಾಹೀರಾಗುವ ಸಾಧ್ಯತೆಗಳಿದ್ದಾವೆ.

  • ‘ಕೆಂಡ’ದಿಂದ ಹೊರಬಂತು ತಾಜಾ ಸುದ್ದಿಯ ಲಿರಿಕಲ್ ವೀಡಿಯೋ

    ‘ಕೆಂಡ’ದಿಂದ ಹೊರಬಂತು ತಾಜಾ ಸುದ್ದಿಯ ಲಿರಿಕಲ್ ವೀಡಿಯೋ

    `ಗಂಟುಮೂಟೆ’ ಚಿತ್ರತಂಡದ ಕಡೆಯಿಂದ ರೂಪುಗೊಂಡಿರುವ `ಕೆಂಡ’ (Kenda) ಚಿತ್ರ ಹಂತ ಹಂತವಾಗಿ ಕುತೂಹಲದ ಕಾವೇರಿಸಿಕೊಂಡು ಸಾಗಿ ಬಂದಿತ್ತು. ಇದೀಗ ಕೆಂಡ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಹೊತ್ತಿನಲ್ಲಿ ಜಯಂತ್‍ಕಾಯ್ಕಣಿ ರಚಿಸಿದ `ತಾಜಾ ತಾಜಾ ಸುದ್ದಿ’ ಗೀತೆಗೆ ಪುತ್ರ ರಿತ್ವಿಕ್‍ಕಾಯ್ಕಣಿ ಪ್ರಥಮ ಬಾರಿ ಸಂಗೀತ ಸಂಯೋಜಿಸಿರುವ ಲಿರಿಕಲ್ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಎಸ್‍ಆರ್‍ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ತಂಡಕ್ಕೆ ಶುಭಹಾರೈಸಲು ಯೋಗರಾಜಭಟ್, ಸಂಗೀತ ಸಂಯೋಜಕ ವಿ.ಹರಿಕೃಷ್ಣ, ಡಿ.ಬೀಟ್ಸ್‍ನ ಶೈಲಜಾನಾಗ್ ಮತ್ತು ಜಯಂತ್‍ಕಾಯ್ಕಣಿ ಆಗಮಿಸಿದ್ದರು. ರೂಪಾ ರಾವ್ ಕೆಂಡ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಸಹದೇವ ಕೆಲವಡಿ ಛಾಯಾಗ್ರಹಣ, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರೆ.

    ವಿಕಟ ಕವಿ ಯೋಗರಾಜಭಟ್ ಮಾತನಾಡಿ, ಎರಡನೇ ಲಾಕ್‍ಡೌನ್ ಸಂದರ್ಭದಲ್ಲಿ ರಿತ್ವಿಕ್‍ಕಾಯ್ಕಣಿ ಜೊತೆ ದೋಸ್ತಿ ಶುರುವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಹಾಡು ಇಲ್ಲದೆ ಸಿನಿಮಾ ಬಿಡುಗಡೆ ಅಂತ ಬಂದಾಗ ಎರಡು ತರದ ಅಪಾಯದಲ್ಲಿ ತಗಲಾಕೊಳ್ತಾರೆ. ಬೆಳಿಗ್ಗೆ ಸ್ನಾನದ ಮನೆಯಲ್ಲಿ ಇರುವಾಗ ನನ್ನ ಹಾಡು ಇಡೀ ಪ್ರಪಂಚ ತಿರುಗಿ ನೋಡುತ್ತೆ ಎನ್ನುವ ಕನಸು. ಹೊರಗೆ ಬಂದಾಗ ಯಾರಿಗೂ ಗೊತ್ತಿಲ್ಲವೆಂಬ ದುಗುಡ. ಒಂದು ವರ್ಷ ಕಷ್ಟಪಟ್ಟು ಚಿತ್ರ ಬಿಡುಗಡೆ ಮಾಡಿದ ನಂತರ, ಚಿತ್ರಮಂದಿರದಿಂದ ಆಚೆ ಬರುವ ಪ್ರೇಕ್ಷಕ ಮುಂದೆ ಯಾವುದು ಅಂತ ಕೇಳುತ್ತಾನೆ. ಆಗ ಅದಕ್ಕಿಂತಲೂ ಉತ್ತಮವಾದುದನ್ನು ಕೊಡಬೇಕು ಎನ್ನುವ ಛಲ ಹುಟ್ಟಿಕೊಳ್ಳುವುದು ಒಂಥರ ಡೇಂಜರ್. ನಾನು ಅಂದುಕೊಂಡಿದ್ದು ಏನು ಇಲ್ಲ. ಹಾಗೆ ನಾಲ್ಕು ಮಂದಿ ತಿರುಗಿ ನೋಡುವಂತೆ ಮಾಡೋದು ತುಂಬ ಕಷ್ಟದ ಕೆಲಸ. ಅಲ್ಲಿ ಸಕ್ಸಸ್ ಕಂಡರೆ, ಇಲ್ಲಿ ವಿರುದ್ಧವಾಗಿರುತ್ತದೆ. ಪ್ರತಿ ಸಿನಿಮಾವು ಇವರೆಡು ಡೇಂಜರ್‍ಗೆ ಬದುಕಬೇಕು. ಇವರೆಡು ಡೇಂಜರ್‍ಗಳ ಮಧ್ಯೆ ಇರೋದು ಸೃಜನಾತ್ಮಕ ಕ್ರಿಯೆ. ಇವೆಲ್ಲವು ನಿಮ್ಮೋಂದಿಗೆ ಸದಾ ಕಾಲ ಕಾಡಲಿ ಎಂದು ಮಾತಿಗೆ ವಿರಾಮ ಹಾಕಿದರು.

    ಹಾಡು ಅನ್ನೋದು ಮಾರ್ಕೆಟ್‍ದಲ್ಲಿ ಎಷ್ಟು ಇದೆ ಅಂದರೆ, ನೂರಾರು ಹಾಡುಗಳ ಮಧ್ಯೆ ನಮ್ಮ ಗೀತೆಯನ್ನು ಹುಡುಕುವುದು ಸವಾಲಿನ ಕೆಲಸ ಆಗಿರುತ್ತದೆ. ಅವುಗಳ ಮಧ್ಯೆ ನಮ್ಮ ಸಾಂಗ್ ಗುರುತಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಸಂಗೀತ ನಿರ್ದೇಶಕನ ಆಸೆಯಾಗಿರುತ್ತದೆ. ಬರಹಗಾರನ ಶ್ರಮ ಗೆದ್ದಾಗ ಖುಷಿ ಕೊಡುತ್ತೆ. ಸೋತಾಗ ಜವಬ್ದಾರಿ ಹೆಚ್ದಾಗುತ್ತದೆ. ಇದರಲ್ಲಿರುವ ಮೂರು ಗೀತೆಗಳು ಯಾವುದೇ ಸಂಗೀತದ ಛಾಯೆ ಕಾಣಿಸುವುದಿಲ್ಲ. ಅದೇ ತಂಡದ ಮೊದಲ ಗೆಲುವು ಎನ್ನಬಹದು. ಅದನ್ನು ಆಲಿಸಿದಾಗ ಹೊಸತನ ಕಂಡುಬರುತ್ತದೆ. ಹೀಗೆ ನಿಮ್ಮಗಳ ವಿನೂತನ ಪ್ರಯತ್ನ ಯಶಸ್ವಿಯಾಗಲಿ ಅಂತಾರೆ ವಿ.ಹರಿಕೃಷ್ಣ. ಶೈಲಜಾನಾಗ್ ಹೇಳುವಂತೆ ಪ್ರತಿಯೊಂದು ಸಿನಿಮಾದ ಹಿಂದೆ ಶ್ರಮ ಇದ್ದೇ ಇರುತ್ತದೆ. ಯಾವುದೇ ನಿರ್ಮಾಪಕ ಹಣ ವಾಪಸ್ಸು ಬರಲೆಂದೇ ಬಂಡವಾಳ ಹೂಡುತ್ತಾನೆ. ಸುಮ್ಮನೆ ತಮಾಷೆಗೆ ಮಾಡುವುದಿಲ್ಲ. ಇದು ಕೂಡ ವ್ಯಾಪಾರ. ಬೇರೆ ಭಾಷೆಗಳ ನಡುವೆ ನಮ್ಮ ಚಿತ್ರ ಗುರುತಿಸಿಕೊಳ್ಳುವಂತೆ ಮಾಡಬೇಕಾಗಿದೆ. ಆಗ ಮಾತ್ರ ಎಲ್ಲಾ ಕಡೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

    ಕೆಲವು ಸಲ ಹಾಡು ಬರೆಯುವಾಗ, ಈ ಸಾಲು ಎಲ್ಲೋ ಬಂದಿದೆಯೆಲ್ಲಾ ಅಂತ ಪಕ್ಕಕ್ಕೆ ಇಟ್ಟಿದ್ದುಂಟು. ಆಮೇಲೆ ನಾನೇ ಬರೆದುದಲ್ವ ಅಂತ ಗೊತ್ತಾಗುತ್ತದೆ. ತಂತ್ರಜ್ಞಾನ ಬದಲಾದಂತೆ ಮೂಲ ಹಾಡನ್ನು ಯಾರು ಕೇಳುವುದಿಲ್ಲ. ಕೇವಲ ನಾಲ್ಕು ಸಾಲುಗಳನ್ನು ಆಲಿಸುತ್ತಾರೆ. ಇದರಿಂದ ಕಲೆಯ ಮೇಲೆ ಜವಬ್ದಾರಿ ಮತ್ತು ಚ್ಯಾಲೆಂಜ್ ಬಹಳ ಜಾಸ್ತಿ ಇರುತ್ತದೆ. ಇದಕ್ಕಾಗಿ ತಂಡಕ್ಕೆ ಅಭಿನಂದನೆಗಳನ್ನು ಹೇಳ್ತನೆ. ಮಗ ತನಗೆ ಇಷ್ಟವಾದುದನ್ನು ಮಾಡಿದ್ದರಿಂದ ಖುಷಿಯಾಗಿದೆ. ನಿರ್ದೇಶಕರು ಹಾಡು ಬರೆದುಕೊಡಿ ಎಂದು ಕೇಳಿಕೊಂಡು ಬಂದಾಗ, ನನ್ನ ಹಾಡು ಹಿಟ್ ಆಗಲೆಂದು ಬರೆಯುತ್ತೇನೆ. ಅದರಿಂದ ನಿಮ್ಮ ಚಿತ್ರಕ್ಕೆ ಸಹಾಯವಾಗಲಿ. ಹಾಡು ಚಿತ್ರದ ನಿರೂಪಣೆಯ ಭಾಗವಾಗಿರುತ್ತದೆ. ಇಂತಹ ಹೊಸ ತಲೆಮಾರಿನ ಚಿತ್ರಗಳು ಜನರಿಗೆ ತಲುಪಲಿ ಎಂದು ಜಯಂತ್ ಕಾಯ್ಕಿಣಿ ಹೇಳಿದರು.

    ಬೆಂಗಳೂರಿನಂಥ ಮಹಾನಗರಿಯಲ್ಲಿ ನಿರಾಸೆಗೊಳಗಾದ ಯುವ ಸಮೂಹ. ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳು ಚಿತ್ರದಲ್ಲಿದೆ.   ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಥಾನಾಯಕ ಹೇಗೆ ಈ ವ್ಯವಸ್ಥೆಯ ಚಕ್ರವ್ಯೂಹಕ್ಕೆ ಸಿಲುಕುತ್ತಾನೆ. ಆತನನ್ನು ಪಟ್ಟಭದ್ರರು ಹೇಗೆಲ್ಲಾ ಬಳಸಿಕೊಳ್ಳುತ್ತಾರೆ. ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತೆ ಎಂಬಂತಹ ಸನ್ನಿವೇಶಗಳನ್ನು ತೋರಿಸಲಾಗುತ್ತಿದೆ. ಒಟ್ಟಾರೆಯಾಗಿ ಈ ದಿನಮಾನದ ಮಟ್ಟಿಗೆ ವಿಭಿನ್ನ ಚಿತ್ರವಾಗಲಿದೆಯಂತೆ. ನಾಯಕನಾಗಿ ಬಿ.ವಿ.ಭರತ್, ಪ್ರಣವ್‍ಶ್ರೀಧರ್, ವಿನೋದ್‍ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಉಳಿದಂತೆ ಬಹುತೇಕ ರಂಗಭೂಮಿ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡಲಾಗಿದೆ.  ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಶಬ್ಧ ಸಂಯೋಜನೆ ಮಾಡಿದ್ದಾರೆ. ಬೆಂಗಳೂರು ಸುತ್ತಮುತ್ತ, ಕೋಲಾರದಲ್ಲಿ ಚಿತ್ರೀಕರಣ ನಡೆಸಲಾಗಿದೆ.

  • ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಸಲಾಮ್ ರಾಕಿ ಭಾಯ್-ಕೆಜಿಎಫ್ ಲಿರಿಕಲ್ ವಿಡಿಯೋ ರಿಲೀಸ್

    ಬೆಂಗಳೂರು: ದೇಶದ ಬಹುನಿರೀಕ್ಷಿತ ಯಶ್ ಅಭಿನಯದ ಸಿನಿಮಾ ಕೆಜಿಎಫ್ ಇದೇ ತಿಂಗಳು 21ರಂದು ಬಿಡುಗಡೆ ಆಗಲಿದೆ. ಇಂದು ಚಿತ್ರದ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡುವಂತೆ ಮಾಡಿದೆ.

    ಕೋಲಾರದ ಕೆಜಿಎಫ್‍ನ ಓರ್ವ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿ ಆದಾಗ ಚಿತ್ರದಲ್ಲಿ ಈ ಹಾಡು ಬರುತ್ತೆ ಎಂದು ಹೇಳಲಾಗುತ್ತಿದೆ. ಹಾಡಿನ ಪ್ರತಿಯೊಂದು ಸಾಲುಗಳು ಭೂಗತ ಲೋಕದ ಅಧಿಪತಿಯಾದ ರಾಕಿಯನ್ನು ವರ್ಣನೆ ಮಾಡುತ್ತಿವೆ. ಹಾಡಿನ ಚಿತ್ರೀಕರಣ ಸಂಪೂರ್ಣ 70ರ ದಶಕದ ಮಾದರಿಯಲ್ಲಿ ಮೂಡಿ ಬಂದಿದೆ. ಚಿತ್ರದ ಟ್ರೇಲರ್ ಈಗಾಗಲೇ 1 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.

    ಚಿತ್ರದ ಟೀಸರ್ ಮತ್ತು ಟ್ರೇಲರ್ ಎರಡು ಕೆಜಿಎಫ್ ಇದೊಂದು ಭಿನ್ನ ಸಿನಿಮಾ ಅಂತಾ ಎಂಬುದನ್ನು ಸಾಬೀತು ಮಾಡಿದ್ದವು. ಖಡಕ್ ಹಿನ್ನೆಲೆ ಧ್ವನಿಯಿಂದ ಆರಂಭವಾಗಿದ್ದ ಟೀಸರ್ ಮತ್ತು ಟ್ರೇಲರ್ ಇದೊಂದು ಪಕ್ಕಾ ಮಾಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಕಥೆ ಒಳಗೊಂಡಿದೆ ಎಂಬುದನ್ನು ಸಾರಿ ಹೇಳಿದ್ದವು. ಭೂಗತ ಲೋಕದ ಅಧಿಪತಿಯಾಗುವ ರಾಕಿ ಸಹ ಓರ್ವ ಮಗ. ತಾಯಿ ಮತ್ತು ಮಗನ ಪ್ರೀತಿಯನ್ನು ಚಿತ್ರದಲ್ಲಿ ಕಾಣಬಹುದು ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.

    ಸದ್ಯ ಹಾಡನ್ನು ಲಹರಿ ಮ್ಯೂಸಿಕ್ ಯುಟ್ಯೂಬ್ ಅಕೌಂಟ್ ನಲ್ಲಿ ನೋಡಬಹುದಾಗಿದೆ. ಲಹರಿ ಮ್ಯೂಸಿಕ್ ಸಂಸ್ಥೆ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿ ಖರ್ಚಿನಲ್ಲಿ ಆಡಿಯೋದ ಹಕ್ಕನ್ನು ಖರೀದಿಸಿದ್ದು ವಿಶೇಷವಾಗಿದೆ. ಇದು `ಕೆಜಿಎಫ್’ನ ಮೊದಲ ಹಾಡಾಗಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ. ಕ್ರಮೇಣವಾಗಿ ಒಂದೊಂದೇ ಹಾಡುಗಳು ರಿಲೀಸ್ ಆಗಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv