Tag: ಲಿಂಗ ಪರಿವರ್ತನೆ

  • ಮಹಿಳೆಯಿಂದ ಪುರುಷನಾದ ಐಆರ್‌ಎಸ್‌ ಅಧಿಕಾರಿ – ಲಿಂಗ, ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ

    ಮಹಿಳೆಯಿಂದ ಪುರುಷನಾದ ಐಆರ್‌ಎಸ್‌ ಅಧಿಕಾರಿ – ಲಿಂಗ, ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿಗೆ

    ನವದೆಹಲಿ: ಹೈದರಾಬಾದ್ ಮೂಲದ ಭಾರತೀಯ ಕಂದಾಯ ಸೇವೆ (IRS) ಹಿರಿಯ ಅಧಿಕಾರಿಯೊಬ್ಬರು ತಮ್ಮ ಹೆಸರು ಮತ್ತು ಲಿಂಗವನ್ನು ಬದಲಾಯಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಹಣಕಾಸು ಸಚಿವಾಲಯ ಅನುಮೋದಿಸಿದೆ. ಭಾರತೀಯ ನಾಗರಿಕ ಸೇವೆಯ ಇತಿಹಾಸದಲ್ಲಿ ಇಂತಹ ಬದಲಾವಣೆಯಾಗಿರುವುದು ಇದೇ ಮೊದಲು.

    ಹೈದರಾಬಾದ್‌ನಲ್ಲಿರುವ ಕಸ್ಟಮ್ಸ್ ಅಬಕಾರಿ ಮತ್ತು ಸೇವಾ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣದ ಮುಖ್ಯ ಆಯುಕ್ತರ ಕಚೇರಿಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡಿರುವ ಎಂ.ಅನುಸೂಯಾ ಅವರು ತಮ್ಮ ಹೆಸರನ್ನು ಎಂ.ಅನುಕತಿರ್ ಸೂರ್ಯ ಎಂದು ಮತ್ತು ಲಿಂಗವನ್ನು ಹೆಣ್ಣಿನಿಂದ ಪುರುಷ ಎಂದು ಬದಲಾಯಿಸಲು ವಿನಂತಿಸಿದ್ದರು. ಇದನ್ನೂ ಓದಿ: ಮಹಿಳೆ ಕಿಡ್ನ್ಯಾಪ್‌ ಕೇಸ್‌ – ಭವಾನಿ ರೇವಣ್ಣಗೆ ಸುಪ್ರೀಂ ಕೋರ್ಟ್‌ ನೋಟಿಸ್‌

    ಅಧಿಕಾರಿಯ ಮನವಿಯನ್ನು ಪರಿಗಣಿಸಿ ಅನುಮೋದನೆ ನೀಡಲಾಗಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಎಂ.ಅನುಸೂಯಾ ಅವರ ಮನವಿಯನ್ನು ಪರಿಗಣಿಸಲಾಗಿದೆ. ಇನ್ಮುಂದೆ ಅಧಿಕಾರಿಯನ್ನು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ‘ಎಂ.ಅನುಕತಿರ್ ಸೂರ್ಯ’ ಎಂದು ಪರಿಗಣಿಸಲಾಗುತ್ತದೆ ಎಂದು ಕಂದಾಯ ಇಲಾಖೆಯ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ ಆದೇಶದಲ್ಲಿ ತಿಳಿಸಿದೆ.

    ಪ್ರಸ್ತುತ IRS ಅಧಿಕಾರಿಯಾಗಿರುವ ಸೂರ್ಯ, 2013 ರಲ್ಲಿ ಚೆನ್ನೈನಲ್ಲಿ ಸಹಾಯಕ ಆಯುಕ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 2018 ರಲ್ಲಿ ಡೆಪ್ಯೂಟಿ ಕಮಿಷನರ್ ಶ್ರೇಣಿಗೆ ಬಡ್ತಿ ಪಡೆದರು. ಇದನ್ನೂ ಓದಿ: ವಿಚ್ಛೇದಿತ ಮುಸ್ಲಿಂ ಮಹಿಳೆಯರು ಜೀವನಾಂಶ ಪಡೆಯಲು ಅರ್ಹರು: ಸುಪ್ರೀಂ ಮಹತ್ವದ ತೀರ್ಪು

    ಸೂರ್ಯ ಚೆನ್ನೈನ ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನಲ್ಲಿ ಬ್ಯಾಚುಲರ್ ಪದವಿ ಪಡೆದರು. ನಂತರ ಅವರು ನ್ಯಾಷನಲ್ ಲಾ ಇನ್‌ಸ್ಟಿಟ್ಯೂಟ್ ವಿಶ್ವವಿದ್ಯಾಲಯದಿಂದ ಸೈಬರ್ ಕಾನೂನು ಮತ್ತು ಸೈಬರ್ ಫೋರೆನ್ಸಿಕ್ಸ್‌ನಲ್ಲಿ ಪಿಜಿ ಡಿಪ್ಲೊಮಾ ಶಿಕ್ಷಣ ಪೂರೈಸಿದರು.

  • ನಾನೊಬ್ಬ ಟ್ರಾನ್ಸ್ ಮ್ಯಾನ್ – ಲಿಂಗ ಪರಿವರ್ತನೆಗೆ ಒಳಗಾಗ್ತಿದ್ದಾರೆ ಪಶ್ಚಿಮ ಬಂಗಾಳದ ಮಾಜಿ ಸಿಎಂ ಪುತ್ರಿ!

    ನಾನೊಬ್ಬ ಟ್ರಾನ್ಸ್ ಮ್ಯಾನ್ – ಲಿಂಗ ಪರಿವರ್ತನೆಗೆ ಒಳಗಾಗ್ತಿದ್ದಾರೆ ಪಶ್ಚಿಮ ಬಂಗಾಳದ ಮಾಜಿ ಸಿಎಂ ಪುತ್ರಿ!

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್‌ ಭಟ್ಟಾಚಾರ್ಯ (Buddhadeb Bhattacharya) ಅವರ ಪುತ್ರಿ ಸುಚೇತನಾ ಭಟ್ಟಾಚಾರ್ಯ (Suchetana Bhattacharya) ಪುರುಷನಾಗಿ ರೂಪಾಂತರಗೊಳ್ಳಲು ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಉದ್ದೇಶಿಸಿದ್ದಾರೆ. ಅಲ್ಲದೇ ತಮ್ಮ ಹೆಸರನ್ನ ʻಸುಚೇತನ್‌ʼ ಎಂದೂ ಬಸಲಿಸಿಕೊಳ್ಳಲು ನಿರ್ಧರಿಸಿದ್ದಾರೆ.

    ಲಿಂಗಪರಿವರ್ತನೆಗೆ ಒಳಗಾಗಲು ಸಕಲ ಸಿದ್ಧತೆ ನಡೆಸಿದ್ದು, ಅಗತ್ಯ ಪ್ರಮಾಣ ಪತ್ರಗಳನ್ನ ಪಡೆದುಕೊಳ್ಳಲು ಮನೋವೈದ್ಯರನ್ನ (Psychiatrists) ಸಂಪರ್ಕಿಸುತ್ತಿದ್ದಾರೆ. ಜೊತೆಗೆ ಪರಿಣಿತರಿಂದ ಸೂಕ್ತ ಸಲಹೆಗಳನ್ನೂ ಅವರು ಪಡೆಯುತ್ತಿದ್ದಾರೆ. ಇತ್ತೀಚೆಗೆ ನಡೆದ ಎಲ್‌ಜಿಬಿಟಿಕ್ಯೂ ಕಾರ್ಯಾಗಾರದಲ್ಲಿ ಸುಚೇತನಾ ತಮ್ಮನ್ನ ಒಬ್ಬ ಪುರುಷ ಎಂದು ಗುರುತಿಸಿಕೊಂಡಿದ್ದರು. ದೈಹಿಕವಾಗಿಯೂ ಪುರುಷನ ಹಾಗೆ ಕಾಣಿಸಿಕೊಳ್ಳಲು ಬಯಸಿರುವುದಾಗಿ ಹೇಳಿಕೊಂಡಿದ್ದರು. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಪ್ರಧಾನಿ ಮೋದಿ ಕೊಲ್ಲುತ್ತೇನೆ ಎಂದು ಕರೆ ಮಾಡಿದ್ದ ವ್ಯಕ್ತಿ ಬಂಧನ

    ಈ ಕುರಿತು ಖಾಸಗಿ ವಾಹಿನಿಯೊಂದಿಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ನನ್ನ ಎಲ್‌ಜಿಬಿಟಿಕ್ಯೂ (LGBTQ) ಚಳವಳಿಯ ಭಾಗವಾಗಿ ಇದನ್ನು ಮಾಡ್ತಿದ್ದೇನೆ. ನನ್ನ ಪೋಷಕರು ಗುರುತಾಗಲಿ, ಕುಟುಂಬದ ಐಡೆಂಟಿಟಿಯಾಗಲಿ ಇಲ್ಲಿ ದೊಡ್ಡ ವಿಷಯವಲ್ಲ. ಲಿಂಗ ಪರಿವರ್ತನೆ ಆಗುವ ಮೂಲಕ ಪ್ರತಿದಿನ ಎದುರಿಸುವ ಸಾಮಾಜಿಕ ಕಿರುಕುಳ ತಡೆಯಲು ನಾನು ಬಯಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಕ್ಕಿ ವಿಚಾರದಲ್ಲಿ ದ್ವೇಷದ ರಾಜಕೀಯ ಮಾಡೋದು ಬೇಡ – ಅಮಿತ್ ಶಾಗೆ ಸಿದ್ದರಾಮಯ್ಯ ಮನವಿ

    ನನ್ನ ನಿರ್ಧಾರ ನಾನೇ ತೆಗೆದುಕೊಳ್ಳಬಹುದು:
    ಅಲ್ಲದೇ ನಾನೀಗ ವಯಸ್ಕಳಾಗಿದ್ದೇನೆ, ನನಗೆ ಈಗ 41 ವರ್ಷ ವಯಸ್ಸು. ಹೀಗಾಗಿ ನನ್ನ ಜೀವನಕ್ಕೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನೂ ನಾನೇ ತೆಗೆದುಕೊಳ್ಳಬಹುದು, ಅದೇ ರೀತಿಯಲ್ಲಿ ಈ ನಿರ್ಧಾರ ಕೂಡ ನಾನು ತೆಗೆದುಕೊಳ್ಳುತ್ತಿದ್ದೇನೆ. ಈ ವಿಚಾರಕ್ಕೆ ದಯವಿಟ್ಟು ನನ್ನ ಪೋಷಕರನ್ನು ಎಳೆದು ತರಬೇಡಿ. ಯಾರು ತಮ್ಮನ್ನು ಮಾನಸಿಕವಾಗಿ ಪುರುಷ ಎಂದು ಪರಿಗಣಿಸುತ್ತಾರೋ, ಅವರು ವಾಸ್ತವವಾಗಿಯೂ ಪುರುಷರೇ ಆಗಿರುತ್ತಾರೆ. ನನ್ನನ್ನು ನಾನು ಮಾನಸಿಕವಾಗಿ ಪುರುಷ ಎಂದೇ ಪರಿಗಣಿಸಿದ್ದೇನೆ. ಅದನ್ನು ದೈಹಿಕವಾಗಿ ಕೂಡ ಸಾಧ್ಯವಾಗಿಸಲು ಬಯಸಿದ್ದೇನೆ. ನನ್ನ ತಂದೆ ಬಾಲ್ಯದಿಂದಲೂ ನನ್ನ ನಿರ್ಧಾರಗಳಿಗೆ ಸಹಕರಿಸುತ್ತಲೇ ಬಂದಿದ್ದಾರೆ. ಈಗಲೂ ಅವರು ನನ್ನ ನಿರ್ಧಾರವನ್ನು ಒಪ್ಪುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಏಕಾಂಗಿಯಾಗಿ ಹೋರಾಟ ಮಾಡ್ತೀನಿ:
    ಯಾರೂ ಏನಾದರೂ ಹೇಳಿಕೊಳ್ಳಲಿ, ನಾನಂತೂ ನಿರ್ಧಾರ ತೆಗೆದುಕೊಂಡಿದ್ದೇನೆ. ಅದಕ್ಕಾಗಿ ಹೋರಾಟ ನಡೆಸುವ ಧೈರ್ಯವೂ ನನಗಿದೆ. ಪ್ರತಿಯೊಬ್ಬರ ಪ್ರಶ್ನೆಗೆ ಉತ್ತರ ಕೊಡೋದಕ್ಕೂ ನಾನೂ ಸಿದ್ಧವಾಗಿದ್ದೇನೆ. ಇದು ನನ್ನ ಸ್ವಂತ ನಿರ್ಧಾರ, ಏಕಾಂಗಿಯಾಗಿ ಹೋರಾಡಲು ಇಚ್ಛಿಸುತ್ತೇನೆ. ನನಗೆ ಬಾಲ್ಯದಿಂದಲೂ ಈ ದೃಷ್ಟಿಕೋನವಿತ್ತು. ಅನೇಕ ಜನರು ಇದನ್ನು ಬೆಂಬಲಿಸಿದ್ದಾರೆ, ಮತ್ತೂ ಕೆಲವರು ಲೇವಡಿ ಮಾಡಿದ್ದಾರೆ. ನಾನು ಒಬ್ಬ ಟ್ರಾನ್ಸ್ ಮ್ಯಾನ್. ದೈಹಿಕವಾಗಿಯೂ ನಾನು ಹಾಗೇ ಆಗಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.

  • ನನ್ನೊಳಗೊಬ್ಬ ಹುಡುಗನಿದ್ದ- ಲಿಂಗ ಪರಿವರ್ತನೆಗೊಳಗಾದ ಗಾಯಕಿ

    ನನ್ನೊಳಗೊಬ್ಬ ಹುಡುಗನಿದ್ದ- ಲಿಂಗ ಪರಿವರ್ತನೆಗೊಳಗಾದ ಗಾಯಕಿ

    – ಅವಳು, ಅವನಾಗಿ ಬದಲಾದ ಕಥೆ ಹೇಳಿದ ಸಿಂಗರ್

    ಅಹಮಾದಾಬಾದ್: ಗುಜರಾತಿನ ಗಾಯಕಿ ಲಿಂಗ ಪರಿವರ್ತನೆಗೊಳಗಾಗಿದ್ದು, ಅವಳು ಅವನಾಗಿ ಬದಲಾದ ಕಥೆಯನ್ನ ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಭಜನೆ ಗಾಯಕಿ ಅಮಿತಾ ಇದೀಗ ಆದಿತ್ಯನಾಗಿ ಬದಲಾಗಿದ್ದಾರೆ.

    ಹೆಣ್ಣು ಮಗುವಾಗಿ ಹುಟ್ಟಿದ್ದ ಅಮಿತಾ ಕಾಲೇಜಿನ ದಿನಗಳ ವರೆಗೂ ಎಲ್ಲ ಹುಡುಗಿಯರಂತೆ ಇದ್ದರು. ಹಾವ-ಭಾವ, ಬಟ್ಟೆ ಧರಿಸುವಿಕೆ, ನಡವಳಿಕೆ ಹುಡುಗಿಯರಂತಿದ್ದರು. ಗುಜರಾತಿನ ಅಮರೇಲಿ ಜಿಲ್ಲೆಯ ಮೋಟಾ ಮುಂಜಿಯಾಸಾರ್ ಗ್ರಾಮದ ನಿವಾಸಿಯಾಗಿದ್ದು, ತಮ್ಮ ಭಜನೆ ಹಾಡುಗಳಿಂದ ಸ್ಥಳೀಯ ಮಟ್ಟದಲ್ಲಿ ಅಮಿತಾ ಗುರುತಿಸಿಕೊಂಡಿದ್ದರು. ಕಾಲೇಜಿನ ದಿನಗಳಲ್ಲಿ ತಮ್ಮಲ್ಲಾದ ಕೆಲ ಬದಲಾವಣೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾರೆ.

    1994 ಜನವರಿ 31 ರಂದು ಜನಿಸಿದ ಅಮಿತಾ ಬಗಸಾರ್ ವ್ಯಾಪ್ತಿಯ ಪುಟ್ಟ ಗ್ರಾಮದಲ್ಲಿ ಜನಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಡುಗಿಯಾಗಿಯೇ ಪೂರ್ಣಗೊಳಿಸಿದ ಅಮಿತಾ ತಮ್ಮ ಹಾಡುಗಳಿಂದ ಸ್ಥಳೀಯವಾಗಿ ಗುರುತಿಸಿಕೊಂಡಿದ್ದರು. ಕಾಲೇಜು ದಿನಗಳಲ್ಲಿ ನಾನು ಹುಟ್ಟಿನಿಂದ ಹುಡುಗಿ ಆಗಿರಬಹುದು. ಆದರೆ ನನ್ನೊಳಗೊಬ್ಬ ಹುಡುಗ ಇರೋದು ನನ್ನ ಅರಿವಿಗೆ ಬಂತು ಎಂದು ಆದಿತ್ಯನಾಗಿ ಬದಲಾದ ಅಮಿತಾ ಹೇಳುತ್ತಾರೆ.

    ಪೋಷಕರ ಬೆಂಬಲ: ಲಿಂಗ ಪರಿವರ್ತನೆಗೆ ಮುಂದಾದ ಅಮಿತಾಳ ನಿರ್ಧಾರಕ್ಕೆ ಪೋಷಕರು ಬೆಂಬಲ ನೀಡಿದ್ದಾರೆ. ಪೋಷಕರ ಅನುಮತಿ ಮೇರೆಗೆ ಅಮಿತಾ ದೆಹಲಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಯ ಒಂದು ವರ್ಷದ ಬಳಿಕ ಅಮಿತಾ ಸಂಪೂರ್ಣವಾಗಿ ತಮ್ಮನ್ನ ಆದಿತ್ಯ ಪಟೇಲ್ ಆಗಿ ಬದಲಿಸಿಕೊಂಡು ಎಲ್ಲರಂತೆ ಜೀವನ ನಡೆಸುತ್ತಿದ್ದಾರೆ.

    ಸಮಾಜದಲ್ಲಿ ಕೆಲವು ಟೀಕೆಗಳನ್ನು ಎದುರಿಸಬೇಕು ಎಂಬುವುದು ನನಗೆ ಗೊತ್ತು. ಸಮಾಜ ಸಹ ನಮ್ಮಂತಹವರನ್ನ ತಾರತಮ್ಯದಿಂದ ನೋಡುವುದನ್ನ ಬಿಡಬೇಕು. ನಮ್ಮನ್ನ ಎಲ್ಲರಂತೆ ಕಾಣಬೇಕಿದೆ. ಲಿಂಗ ಬದಲಾವಣೆಗೆ ಒಳಗಾಗುವರಿಗೆ ಪೋಷಕರು ಬೆಂಬಲ ಬೇಕು ಎಂದು ಆದಿತ್ಯಾ ಹೇಳುತ್ತಾರೆ.

  • ನಾನು ಅವನಲ್ಲ, ಅವಳು – ರೈಲ್ವೇ ಅಧಿಕಾರಿಗಳಲ್ಲಿ ಭಿನ್ನ ಮನವಿ

    ನಾನು ಅವನಲ್ಲ, ಅವಳು – ರೈಲ್ವೇ ಅಧಿಕಾರಿಗಳಲ್ಲಿ ಭಿನ್ನ ಮನವಿ

    ಲಕ್ನೋ: ತನ್ನ ದಾಖಲೆಗಳಲ್ಲಿ ಲಿಂಗ ಬದಲಾವಣೆ ಮಾಡುವಂತೆ ರೈಲ್ವೇ ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುವ ಪ್ರಸಂಗವೊಂದು ಉತ್ತರ ಪ್ರದೇಶದಲ್ಲಿ ನಡೆದಿದೆ.

    35 ವರ್ಷದ ರಾಜೇಶ್ ಪಾಂಡೆ ಎಂಬಾತ ಈ ಮನವಿ ಸಲ್ಲಿಸಿದ್ದಾರೆ. ರೈಲ್ವೇ ಉದ್ಯೋಗಿಯಾಗಿದ್ದ ರಾಜೇಶ್ ತಂದೆ 2003ರಲ್ಲಿ ಸಾವನ್ನಪ್ಪಿದ ಪರಿಣಾಮ ಅನುಕಂಪ ಆಧಾರದಲ್ಲಿ ಈತನಿಗೆ ರೈಲ್ವೇ ಉದ್ಯೋಗ ನೀಡಲಾಗಿತ್ತು.

    ರಾಜೇಶ್ ಪಾಂಡೆಗೆ ನಾಲ್ವರು ಸಹೋದರಿಯರು ಇದ್ದು ಇಡೀ ಕುಟುಂಬಕ್ಕೆ ರಾಜೇಶ್ ಒಬ್ಬರೇ ಗಂಡು ಮಗನಾಗಿದ್ದರು. ಆದರೆ ಚಿಕ್ಕದಿನಿಂದಲೂ ಹೆಣ್ಣಿನಂತೆ ಇರಲು ಬಯಸಿದ್ದ ರಾಜೇಶ್, 2017 ರಲ್ಲಿ ಲಿಂಗ ಪರಿವರ್ತನೆಗೆ ಒಳಗಾಗಿ ಸಾನಿಯಾ ಪಾಂಡೆ ಎಂದು ಹೆಸರು ಬದಲಿಸಿಕೊಂಡಿದ್ದರು. ಆದರೆ ರೈಲ್ವೇ ದಾಖಲೆಗಳಲ್ಲಿ ಮಾತ್ರ ಪುರುಷನಾಗಿಯೇ ಇತ್ತು. ಸದ್ಯ ಈಶಾನ್ಯ ರೈಲ್ವೇ ಅಧಿಕಾರಿಗಳಿಗೆ ತನ್ನ ದಾಖಲೆಗಳಲ್ಲಿ ತನ್ನ ಲಿಂಗ ಬದಲಾವಣೆ ಮಾಡುವಂತೆ ರಾಜೇಶ್ ಅಲಿಯಾಸ್ ಸಾನಿಯಾ ಪಾಂಡೆ ಮನವಿ ಮಾಡಿದ್ದಾರೆ.

    ಇತ್ತ ರಾಜೇಶ್ ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮುನ್ನವೇ ಮದುವೆ ಕೂಡ ಆಗಿದ್ದು, ವಿಷಯ ತಿಳಿದ ಪತ್ನಿ ವಿಚ್ಛೇದನವನ್ನು ನೀಡಿದ್ದಾರೆ. ಇತ್ತ ಲಿಂಗ ಪರಿರ್ತನೆ ಆದ ಬಳಿಕ ತಾನು ಮಹಿಳೆಯಾಗಿ ಸಂತೋಷದಿಂದಲೇ ಜೀವನ ನಡೆಸುತ್ತಿದ್ದಾಗಿ ರಾಜೇಶ್ ಅಭಿಪ್ರಾಯ ಪಟ್ಟಿದ್ದಾರೆ.

  • ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಹಿಳೆಯಾದ ನಾವಿಕ ನೌಕಾಸೇನೆಯಿಂದ ವಜಾ

    ಲಿಂಗ ಪರಿವರ್ತನೆ ಮಾಡಿಸಿಕೊಂಡು ಮಹಿಳೆಯಾದ ನಾವಿಕ ನೌಕಾಸೇನೆಯಿಂದ ವಜಾ

    ನವದೆಹಲಿ: ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮಹಿಳೆಯಾಗಿ ಪರಿವರ್ತನೆಯಾದ ನಾವಿಕ ಎಮ್‍ಕೆ ಗಿರಿ ಎಂಬವರನ್ನ ಭಾರತೀಯ ನೌಕಾ ಪಡೆ ಕೆಲಸದಿಂದ ವಜಾ ಮಾಡಿದೆ.

    ನಾವಿಕ ಮನೀಷ್ ಗಿರಿ ಅವರನ್ನ ವಿಶಾಖಪಟ್ಟಣಂನಲ್ಲಿ ನೌಕಾ ಸೇವೆಗೆ ನಿಯೋಜಿಸಲಾಗಿತ್ತು. ಆಗಸ್ಟ್‍ನಲ್ಲಿ ರಜೆಯಲ್ಲಿದ್ದಾಗ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದ್ರೆ ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಹಾಗೂ ಲಿಂಗ ಬದಲಾವಣೆಗಾಗಿ ಯಾವುದೇ ಅನುಮತಿ ಪಡೆದಿರಲಿಲ್ಲ.

    ಇದೀಗ ಭಾರತೀಯ ನೌಕಾ ಪಡೆ ನೌಕಾ ನಿಯಮಗಳ ಅಡಿಯಲ್ಲಿ ಇನ್ನು ನಿಮ್ಮ ಸೇವೆಯ ಅಗತ್ಯವಿಲ್ಲ ಎಂಬ ಹೇಳಿಕೆಯೊಂದಿಗೆ ಮನೀಷ್ ಗಿರಿ ಅವರನ್ನ ಕೆಲಸದಿಂದ ತೆಗೆದುಹಾಕಿದೆ. ಈ ವ್ಯಕ್ತಿಯು ರಜೆಯಲ್ಲಿದ್ದಾಗ ತನ್ನ ಸ್ವಂತ ಇಚ್ಛೆಯಂತೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಮೂಲಕ ಅವರನ್ನು ಕೆಲಸಕ್ಕೆ ತೆಗೆದುಕೊಂಡಾಗ ಪರಿಗಣಿಸಲಾಗಿದ್ದ ಲಿಂಗ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಮಾರ್ಪಾಡು ಮಾಡಿದ್ದಾರೆ ಎಂದು ಹೇಳಿದೆ.

     

    ಅವರು ಭಾರತೀಯ ನೌಕೆಯಲ್ಲಿ ನಾವಿಕನಾಗಿ ಕೆಲಸಕ್ಕೆ ಸೇರುವಾಗ ಇದ್ದ ನೇಮಕಾತಿ ನಿಯಮ ಹಾಗೂ ಅರ್ಹತಾ ಮಾನದಂಡಗಳನ್ನು ಉಲ್ಲಂಘಿಸಿದ್ದಾರೆ ಎಂದು ನೌಕಾಪಡೆ ಹೇಳಿದೆ.

    ಪ್ರಸ್ತುತ ಇರುವ ಸೇವಾ ನಿಯಮ ಮತ್ತು ನಿಬಂಧನೆಗಳ ಪ್ರಕಾರ ಲಿಂಗ ಸ್ಥಿತಿಯಲ್ಲಿ ಮಾರ್ಪಾಡು ಹಾಗೂ ವೈದ್ಯಕೀಯ ಸ್ಥಿತಿಯ ಹಿನ್ನೆಲೆಯಲ್ಲಿ ಅವರಿಗೆ ನಾವಿಕನಾಗಿ ಕೆಲಸದಲ್ಲಿ ಮುಂದುವರೆಯುವ ಅವಕಾಶವಿಲ್ಲ ಎಂದಿದೆ.

    ಇದೀಗ ಸಬಿ ಆಗಿ ಬದಲಾಗಿರುವ ಗಿರಿ, ತೃತೀಯಲಿಂಗಿಗಳಿಗೆ ಮಾಡಲಾಗುತ್ತಿರುವ ತಾರತಮ್ಯವನ್ನ ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದಾಗಿ ಹೇಳಿದ್ದಾರೆ.

  • ಅವಳಾಗಿ ಬದಲಾದ ಅವನು, ಅವನಾಗಿ ಬದಲಾದ ಅವಳು- ಈಗ ಅವನಿಗೂ ಅವಳಿಗೂ ಮದ್ವೆ

    ಅವಳಾಗಿ ಬದಲಾದ ಅವನು, ಅವನಾಗಿ ಬದಲಾದ ಅವಳು- ಈಗ ಅವನಿಗೂ ಅವಳಿಗೂ ಮದ್ವೆ

    ಮುಂಬೈ: ಆಕೆ ಪುರುಷನ ದೇಹದಲ್ಲಿದ್ದ ಮಹಿಳೆ, ಆತ ಮಹಿಳೆಯ ದೇಹದಲ್ಲಿದ್ದ ಪುರುಷ. ಮೂರು ವರ್ಷಗಳ ಹಿಂದೆ ಲಿಂಗ ಪರಿವರ್ತನೆಗೆಂದು ಮುಂಬೈಗೆ ಬಂದಾಗ ಇಬ್ಬರಿಗೂ ಪರಿಚಯವಾಗಿತ್ತು. ಇಬ್ಬರ ಪರಿಚಯ ಕೊನೆಗೆ ಪ್ರೇಮವಾಗಿ ತಿರುಗಿತ್ತು. ಅವನಾದ ಅವಳು ಹಾಗೂ ಅವಳಾದ ಅವನು ಮುಂದಿನ ತಿಂಗಳು ಮದುವೆಯಾಗ್ತಿದ್ದಾರೆ.

    ಚಿಕ್ಕಂದಿನಲ್ಲಿ ಬಿಂದು ಆಗಿದ್ದ 46 ವರ್ಷದ ಆರವ್ ಅಪ್ಪುಕುಟ್ಟನ್ ಮುಂಬೈನಲ್ಲಿ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆಗೆ ಹೋದಾಗ ತನ್ನ ಬಾಳ ಸಂಗಾತಿಯನ್ನ ಭೇಟಿಯಾದ್ರು. ಇನ್ನು ಚಂದು ಆಗಿದ್ದ 22 ವರ್ಷದ ಸುಕನ್ಯಾ ಕೃಷ್ಣನ್ ಮೊದಲನೇ ಅಪಾಯಿಂಟ್‍ಮೆಂಟ್‍ಗಾಗಿ ಆಸ್ಪತ್ರೆಗೆ ಬಂದಿದ್ರು.

    ಸಂಬಂಧಿಯೊಬ್ಬರಿಂದ ನನಗೆ ಕರೆ ಬಂದಿತ್ತು. ನನ್ನ ಶಸ್ತ್ರಚಿಕಿತ್ಸೆ ಹಾಗೂ ಆರೋಗ್ಯದ ಬಗ್ಗೆ ಅವರೊಂದಿಗೆ ಮಲೆಯಾಳಂನಲ್ಲಿ ಮಾತನಾಡ್ತಿದ್ದೆ. ಅವರೂ ಕೂಡ ಫೋನ್‍ನಲ್ಲಿ ಮತ್ತೊಬ್ಬರೊಂದಿಗೆ ಮಲಯಾಳಂನಲ್ಲೇ ಮಾತನಾಡ್ತಿದ್ರು. ಕಾಲ್ ಕಟ್ ಮಾಡಿದ ನಂತರ ಆರವ್ ನನ್ನ ಬಳಿ ಬಂದು ನಾನು ಕೇರಳದವಳಾ ಎಂದು ಕೇಳಿದ್ರು. ಅನಂತರ ನಮ್ಮ ಮಾತು ಮುಂದುವರೆಯಿತು ಅಂತ ಸುಕನ್ಯಾ ನೆನಪಿಸಿಕೊಳ್ತಾರೆ.

    ಆರವ್ ಹಾಗೂ ಸುಕನ್ಯಾ ವೈದ್ಯರಿಗಾಗಿ 3 ಗಂಟೆಗಳ ಕಾಲ ಕಾಯುತ್ತಿದ್ದ ವೇಳೆ ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಮಯ ಸಿಕ್ಕಿತ್ತು. ಕೊನೆಗೆ ಇಬ್ಬರೂ ಫೋನ್ ನಂಬರ್ ವಿನಿಮಯ ಮಾಡಿಕೊಂಡು ಊರಿಗೆ ಹೋದ ನಂತರವೂ ಮೆಸೇಜ್ ಮಾಡುತ್ತಿದ್ರು.

    ಅವರು ಕೇರಳಗೆ ಹೋದ್ರು. ನಾನು ಬೆಂಗಳೂರಿಗೆ ಬಂದೆ. ಉದ್ಯೋಗಕ್ಕಾಗಿ ನಾನು ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದೆ. ಬಳಿಕ ಆರವ್ ನನಗೆ ಕರೆ ಮಾಡಿದ್ರು. ನಮ್ಮ ಚಿಕಿತ್ಸೆ ಹಾಗೂ ಸರ್ಜರಿ ಬಗ್ಗೆ ಚರ್ಚಿಸಿದೆವು. ಮೊದಲಿಗೆ ವಾರಕ್ಕೆ ಒಂದು ಬಾರಿ ಮಾತನಾಡುತ್ತಿದ್ದೆವು. ಅನಂತರ ವಾರಕ್ಕೆ ಎರಡು ಬಾರಿ, ಆಮೇಲೆ ಪ್ರತಿದಿನ ಫೋನ್‍ನಲ್ಲಿ ಮಾತನಾಡತೊಡಗಿದೆವು ಎಂದು ಸುಕನ್ಯಾ ಹೇಳಿದ್ದಾರೆ.

    ಒಂದೇ ರಾಜ್ಯದವರು ಹಾಗೂ ಇಬ್ಬರಿಗೂ ಒಂದೇ ರೀತಿಯ ವೈದ್ಯಕೀಯ ಸಮಸ್ಯೆ ಇದೆ ಎಂಬ ಕಾರಣಕ್ಕೆ ಇಬ್ಬರ ನಡುವೆ ಬಾಂಧವ್ಯ ಮೂಡಿತ್ತು. ಆದರೂ ಇವರನ್ನ ಹತ್ತಿರವಾಗಿಸಿದ್ದೆಂದರೆ ಇಬ್ಬರಿಗೂ ತಮ್ಮಂತೆಯೇ ಇರುವವರಿಗೆ ಸಹಾಯ ಮಾಡಬೇಕೆಂಬ ಇಚ್ಛೆ ಇತ್ತು. ಆರವ್ ಸುಕನ್ಯಾ ಇಬ್ಬರೂ ತೃತೀಯ ಲಿಂಗಿ ಮಕ್ಕಳ ಪೋಷಕರಿಗೆ ಕೌನ್ಸೆಲಿಂಗ್ ಮಾಡುತ್ತಿದ್ರು. ಕೆಲವು ತಿಂಗಳ ಬಳಿಕ ಇಬ್ಬರೂ ಮತ್ತೊಮ್ಮೆ ಭೇಟಿಯಾಗಲು ನಿರ್ಧರಿಸಿ ಒಂದೇ ದಿನ ಮುಂಬೈ ಆಸ್ಪತ್ರೆಯಲ್ಲಿ ಅಪಾಯಿಂಟ್‍ಮೆಂಟ್ ಪಡೆದಿದ್ರು.

    ನಮ್ಮಿಬ್ಬರಿಗೂ ಯಾವಾಗ ಪ್ರೇಮವಾಯ್ತು ಎಂದು ಗೊತ್ತಿಲ್ಲ. ಒಂದು ಸಲ ನಾವಿಬ್ಬರೂ ಕೈ ಹಿಡಿದುಕೊಂಡೆವು. ಅಲ್ಲಿಂದಲೇ ಆರಂಭವಾಯ್ತು. ಈಗ ನಾವು ಸಂಪ್ರದಾಯದಂತೆ ದೇವಸ್ಥಾನದಲ್ಲಿ ಮದುವೆಯಾಗಲು ನಿರ್ಧರಿಸಿದ್ದೇವೆ. ನಮ್ಮಿಬ್ಬರ ಕುಟುಂಬಸ್ಥರೂ ಕೂಡ ಖುಷಿಯಾಗಿದ್ದಾರೆ. ನಾವು ಮಗುವೊಂದನ್ನ ದತ್ತು ಪಡೆಯಲು ನಿರ್ಧರಿಸಿದ್ದೇವೆ. ಯಾಕಂದ್ರೆ ಸರ್ಜರಿ ಬಳಿಕ ನಮಗೆ ಮಕ್ಕಳಾಗಲ್ಲ ಎಂಬುದು ಗೊತ್ತು ಅಂತ ಆರವ್ ಹೇಳಿದ್ದಾರೆ.