Tag: ಲಿಂಗಾಯತ ವೀರಶೈವ

  • ಕೈ ಶಾಸಕಾಂಗ ಸಭೆಯಲ್ಲಿ ಲಿಂಗಾಯತ ಶಾಸಕರ ಅಸಮಾಧಾನ ಸ್ಫೋಟ!

    ಕೈ ಶಾಸಕಾಂಗ ಸಭೆಯಲ್ಲಿ ಲಿಂಗಾಯತ ಶಾಸಕರ ಅಸಮಾಧಾನ ಸ್ಫೋಟ!

    ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಮಂತ್ರಿ ಸ್ಥಾನಕ್ಕಾಗಿ ನಾಯಕರ ನಡುವೆ ಜಟಾಪಟಿ ಆರಂಭವಾಗಿದೆ.

    ನೂತನ ಸರ್ಕಾರ ರಚನೆ ಸಂಬಂಧ ಇಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ಎಂ.ಬಿ.ಪಾಟೀಲ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಸಚಿವ ಸ್ಥಾನ ನೀಡುವ ಕುರಿತು ಜಟಾಪಟಿ ನಡೆದಿದೆ ಎಂದು ಕಾಂಗ್ರೆಸ್ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

    ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಲಭಿಸಿರುವುದರಿಂದ ಎಂಬಿ ಪಾಟೀಲ್ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಅಭಿಪ್ರಾಯ ವ್ಯಕ್ತವಾಗಿತ್ತು. ಆದರೆ ಈ ಸಲಹೆಗೆ ವಿಜಯಪುರದ ಇಬ್ಬರು ಲಿಂಗಾಯತ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತಮ್ಮ ಮಾತಿಗೆ ಪಕ್ಷದ ನಾಯಕರು ಬೆಲೆ ನೀಡದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸಭೆಯಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

    ಪ್ರಮುಖವಾಗಿ ಇಂಡಿ ಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ರಾಜೀನಾಮೆಗೆ ಮುಂದಾಗಿದ್ದು, ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಲ್ಲಿ ಸಮುದಾಯವನ್ನು ಒಡೆದವರು ಎಂ.ಬಿ.ಪಾಟೀಲ್ ಎಂದು ಆರೋಪಿಸಿದ್ದಾರೆ. ಅಲ್ಲದೇ ಚುನಾವಣೆಯ ವೇಳೆ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡದ ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ಸ್ಪರ್ಧೆ ಮಾಡಿದ್ದ ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಎಂಬಿ ಪಾಟೀಲ್ ಹಣ ಸಹಾಯ ಮಾಡಿ ಸೋಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಸಭೆಯಲ್ಲಿ ಲಿಂಗಾಯತ ಶಾಸಕರ ಆರೋಪ ಮಾಡಿದ್ದಾರೆ ಎನ್ನಲಾಗಿದೆ.

    ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಿತಿ ಬರಲು ಕಾರಣ ಎಂಬಿ ಪಾಟೀಲ್ ಕಾರಣ ಎಂದು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿರುವ ಶಾಸಕರು ಒಟ್ಟು 17 ಜನ ಲಿಂಗಾಯತ ಶಾಸಕರು ಚುನಾವಣೆಯಲ್ಲಿ ಗೆದ್ದಿದ್ದಾರೆ. ಅವರಲ್ಲಿ ಶಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದೆ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಸದ್ಯ ಅವರವನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಎಂಬಿ ಪಾಟೀಲ್ ಅವರಿಗೆ ಯಾವುದೇ ಸ್ಥಾನಮಾನ ಕೊಡಬಾರದು. ಉಳಿದ 15 ಲಿಂಗಾಯತ ಶಾಸಕರಲ್ಲಿ ಯಾರಿಗಾದರೂ ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಂದು ಪಟ್ಟು ಹಿಡಿದಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

    ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನ ಅಲಿಸಿರುವ ಕಾಂಗ್ರೆಸ್ ಮುಖಂಡರು ಈ ಕುರಿತು ಕೇಂದ್ರ ಹೈಕಮಾಂಡ್ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

    ವೀರಶೈವ ಲಿಂಗಾಯತರಿಂದ ಬೇಡಿಕೆ: ಲಿಂಗಾಯತರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಬೇಕು ಎನ್ನುವ ಕೂಗು ಸದ್ಯ ಜೋರಾಗಿದ್ದು, ಈ ಕುರಿತು ಲಾಬಿ ನಡೆಸಲು ಲಿಂಗಾಯತ ಸಮಾಜದ ಪ್ರಮುಖದ ಸ್ವಾಮೀಜಿಗಳೇ ಈಗ ಅಖಾಡಕ್ಕೆ ಇಳಿದಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಈಗಾಗಲೇ ನಮಗೆ ಸೋಲಾಗಿದ್ದು, ಸಚಿವರು ಸೋತಿದ್ದಾರೆ. ಈಗ ಆಗಿರುವ ನಷ್ಟವನ್ನು ಸರಿಪಡಿಸಲು ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ.

    ಒಂದು ವೇಳೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡದೇ ಇದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಏಟು ಬೀಳುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಹೀಗಾಗಿ ಮುಂದೆ ಈ ಸಮಸ್ಯೆ ಆಗದೇ ಇರಲು ಉಪಮುಖ್ಯಮಂತ್ರಿ ಪಟ್ಟವನ್ನು ನೀಡುವಂತೆ ಲಿಂಗಾಯತರು ಬೇಡಿಕೆ ಇಟ್ಟಿದ್ದಾರೆ.

  • ಶಾಮನೂರಿಗೆ ಡಿಸಿಎಂ, 5 ಶಾಸಕರಿಗೆ ಮಂತ್ರಿ ಸ್ಥಾನ ನೀಡಿ- ವೀರಶೈವ ಲಿಂಗಾಯತರಿಂದ ಬೇಡಿಕೆ

    ಶಾಮನೂರಿಗೆ ಡಿಸಿಎಂ, 5 ಶಾಸಕರಿಗೆ ಮಂತ್ರಿ ಸ್ಥಾನ ನೀಡಿ- ವೀರಶೈವ ಲಿಂಗಾಯತರಿಂದ ಬೇಡಿಕೆ

    ಬೆಂಗಳೂರು: ಲಿಂಗಾಯತರಿಗೆ ಉಪಮುಖ್ಯಮಂತ್ರಿ ಪಟ್ಟ ನೀಡಬೇಕು ಎನ್ನುವ ಕೂಗು  ಜೋರಾಗಿದ್ದು, ಲಿಂಗಾಯತ ಸಮಾಜದ ಪ್ರಮುಖದ ಸ್ವಾಮೀಜಿಗಳೇ ಈಗ ಅಖಾಡಕ್ಕೆ ಇಳಿದಿದ್ದಾರೆ.

    ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಉಪಮುಖ್ಯಮಂತ್ರಿ ಮಾಡಬೇಕೆಂದು ಇಂದು ರಾಹುಲ್ ಮತ್ತು ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ಲಿಂಗಾಯತ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ಈಗಾಗಲೇ ನಮಗೆ ಸೋಲಾಗಿದ್ದು, ಸಚಿವರು ಸೋತಿದ್ದಾರೆ. ಈಗ ಆಗಿರುವ ನಷ್ಟವನ್ನು ಸರಿಪಡಿಸಲು ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕೆಂಬ ಆಗ್ರಹವನ್ನು ಮುಂದಿಟ್ಟಿದ್ದಾರೆ.

    ಒಂದು ವೇಳೆ ಉಪಮುಖ್ಯಮಂತ್ರಿ ಪಟ್ಟವನ್ನು ನೀಡದೇ ಇದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ಏಟು ಬೀಳುವ ಸಾಧ್ಯತೆಯಿದೆ. ಹೀಗಾಗಿ ಮುಂದೆ ಈ ಸಮಸ್ಯೆ ಆಗದೇ ಇರಲು ಉಪಮುಖ್ಯಮಂತ್ರಿ ಪಟ್ಟವನ್ನು ನೀಡುವಂತೆ ಲಿಂಗಾಯತರು ಬೇಡಿಕೆ ಇಟ್ಟಿದ್ದಾರೆ.

    ಲಿಂಗಾಯತ ಧರ್ಮ ವಿಚಾರದಲ್ಲಿ ಮುಂಚೂಣಿಯಲ್ಲಿದ್ದ ಮಾಜಿ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರಿಗೆ ಯಾವುದೇ ಮಂತ್ರಿ ಸ್ಥಾನವನ್ನು ನೀಡಬಾರದು ಎಂದು ಕೆಲ ಮುಖಂಡರು ಹೇಳಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

    ಈ ನಡುವೆ ಎಚ್‍ಡಿ ಕುಮಾರಸ್ವಾಮಿಯವರಿಗೆ ಅಖಿಲ ಭಾರತ ವೀರ ಶೈವ ಮಹಾಸಭಾ ಪತ್ರ ಬರೆದಿದ್ದು ಶಾಮನೂರು ಶಿವಶಂಕರಪ್ಪನವರಿಗೆ ಉಪಮುಖ್ಯಮಂತ್ರಿ ಸ್ಥಾನ ಮತ್ತು 5 ಶಾಸಕರಿಗೆ ಸಚಿವ ಸ್ಥಾನವನ್ನು ನೀಡುವಂತೆ ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ 16 ಮಂದಿ ಕಾಂಗ್ರೆಸ್, 4 ಮಂದಿ ಜೆಡಿಎಸ್ ನಿಂದ ವೀರಶೈವ ಲಿಂಗಾಯಿತ ಶಾಸಕರು ಆಯ್ಕೆ ಆಗಿದ್ದಾರೆ. ವಿವಿಧ ಸಮುದಾಯದಿಂದ ಆಯ್ಕೆಯಾದವರ ಸಂಖ್ಯೆಯನ್ನು ಗಮನಿಸಿದರೆ ವೀರಶೈವ ಲಿಂಗಾಯತ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದಾರೆ. ಹೀಗಾಗಿ ಮುಂದೆಯೂ ಸಮಾಜದ ಬೆಂಬಲ ಸಿಗಲು ನಮ್ಮ ಸಮಾಜದ ಶಾಸಕರಿಗೆ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಬೇಕೆಂದು ಪತ್ರದ ಮೂಲಕ ಬೇಡಿಕೆಯನ್ನಿಟ್ಟಿದ್ದಾರೆ.