Tag: ಲಾಕ್

  • ಸಿಬ್ಬಂದಿ ನಿರ್ಲಕ್ಷ್ಯ – 18 ಗಂಟೆಗಳ ಕಾಲ 7 ವರ್ಷದ ಬಾಲಕಿ ಕ್ಲಾಸ್‍ರೂಂನಲ್ಲೇ ಲಾಕ್

    ಸಿಬ್ಬಂದಿ ನಿರ್ಲಕ್ಷ್ಯ – 18 ಗಂಟೆಗಳ ಕಾಲ 7 ವರ್ಷದ ಬಾಲಕಿ ಕ್ಲಾಸ್‍ರೂಂನಲ್ಲೇ ಲಾಕ್

    ಲಕ್ನೋ: ಯಾವುದಾದರೂ ಮಕ್ಕಳನ್ನು ಬಿಟ್ಟು ಹೋಗಿದ್ದೇನೆಯೇ ಎಂದು ಪರಿಶೀಲನೆ ನಡೆಸದೇ 1ನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಯ ತರಗತಿಯೊಳಗೆ 18 ಗಂಟೆಗಳ ಕಾಲ ಸಿಬ್ಬಂದಿ ಲಾಕ್ ಮಾಡಿ ಮನೆಗೆ ಹೋಗಿರುವ ಘಟನೆ ಉತ್ತರಪ್ರದೇಶದ (UttarPradesh) ಸಂಭಾಲ್‍ನಲ್ಲಿ (Sambhal) ನಡೆದಿದೆ.

    ಬುಧವಾರ ಬೆಳಗ್ಗೆ ಶಾಲೆ ತೆರೆದಾಗ ಘಟನೆ ಬೆಳಕಿಗೆ ಬಂದಿದ್ದು, ಗುನ್ನೌರ್ ತಾಹಸಿಲ್‍ (Gunnaur tehsil) ಪ್ರಾಥಮಿಕ ಶಾಲೆಯ 1 ನೇ ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕಿ ಶಾಲಾ ಅವಧಿ ಮುಗಿದ ಬಳಿಕ ತರಗತಿಯ ಒಳಗೆಯೇ ಇದ್ದಳು. ಆದರೆ ಇಂದು ಬೆಳಗ್ಗೆ ಶಾಲೆ ತೆರೆದಾಗ ಆಕೆ ತರಗತಿಯಲ್ಲಿ ಪತ್ತೆಯಾಗಿದ್ದಾಳೆ ಮತ್ತು ಆರೋಗ್ಯವಾಗಿದ್ದಾಳೆ ಎಂದು ಶಿಕ್ಷಣಾಧಿಕಾರಿ ಪೋಪ್ ಸಿಂಗ್ (Block Education Officer Pope Singh) ತಿಳಿಸಿದ್ದಾರೆ. ಇದನ್ನೂ ಓದಿ: SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ ಎನ್‍ಐಎ ಅಧಿಕಾರಿಗಳು

    ಮಂಗಳವಾರ ಶಾಲೆ ಮುಗಿದ ಬಳಿಕ ಮನೆಗೆ ಬಾಲಕಿ ಹಿಂತಿರುಗದೇ ಇದ್ದಾಗ, ಆಕೆಯ ಅಜ್ಜಿ ಶಾಲೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿ ಯಾವುದೇ ಮಕ್ಕಳಿಲ್ಲ ಎಂದು ಸಿಬ್ಬಂದಿ ಹೇಳಿದಾ ಆಕೆಯ ಚಿಕ್ಕಪ್ಪನಿಗೆ ವಿಷಯ ಮುಟ್ಟಿಸಿದ್ದಾರೆ. ನಂತರ ಮನೆಯವರೆಲ್ಲರೂ ಅರಣ್ಯ ಪ್ರದೇಶದಲ್ಲೆಡೆ ಹುಡುಕಾಟ ನಡೆಸಿದರೂ ಎಲ್ಲಿಯೂ ಬಾಲಕಿ ಪತ್ತೆಯಾಗಲಿಲ್ಲ. ಆದರೆ ಬುಧವಾರ ಬೆಳಗ್ಗೆ 8 ಗಂಟೆಗೆ ಶಾಲೆ ತೆರೆದಾಗ ಬಾಲಕಿ ರಾತ್ರಿಯಿಡೀ ಶಾಲಾ ಕೊಠಡಿಯಲ್ಲಿ ಬೀಗ ಹಾಕಿದ್ದರಿಂದ ತರಗತಿಯಲ್ಲಿಯೇ ಇದ್ದ ವಿಚಾರ ಬೆಳಕಿಗೆ ಬಂದಿದೆ.

    ಶಾಲಾ ಅವಧಿ ಮುಗಿದರೂ ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕೊಠಡಿಗಳನ್ನು ಪರಿಶೀಲಿಸಿಲ್ಲ ಎಂದು ಬ್ಲಾಕ್ ಶಿಕ್ಷಣಾಧಿಕಾರಿ ಸಿಂಗ್ ತಿಳಿಸಿದ್ದಾರೆ. ಇದು ನಿರ್ಲಕ್ಷ್ಯದ ಪ್ರಕರಣವಾಗಿದ್ದು, ಎಲ್ಲಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಶ್ರೀ ಮಲೆಮಹದೇಶ್ವರ ಸ್ವಾಮಿ ಹೆಸರಿನ ಫೇಸ್‍ಬುಕ್ ಪೇಜ್ ಹ್ಯಾಕ್ – ಅಶ್ಲೀಲ ವೀಡಿಯೋ ಅಪ್ಲೋಡ್

    Live Tv
    [brid partner=56869869 player=32851 video=960834 autoplay=true]

  • ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಹೆಣ್ಣು ಮಗುವಿನೊಂದಿಗೆ ಕಟ್ಟಡದಿಂದ ಜಿಗಿದ್ಳು!

    ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಹೆಣ್ಣು ಮಗುವಿನೊಂದಿಗೆ ಕಟ್ಟಡದಿಂದ ಜಿಗಿದ್ಳು!

    ಹೈದರಾಬಾದ್: ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ತನ್ನ 8 ತಿಂಗಳ ಹೆಣ್ಣು ಮಗುವಿನೊಂದಿಗೆ ಮಹಿಳೆಯೊಬ್ಬರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

    ಮಹಿಳೆಯನ್ನು ಅನಿತಾ(24) ಎಂದು ಗುರುತಿಸಲಾಗಿದೆ. ಬಿಹಾರ ಮೂಲದವರಾಗಿರುವ ಅನಿತಾ, ಬಿಸ್ಮಲ್ ಸಿಂಗ್ ಎಂಬವರನ್ನು ವರಿಸಿದ್ದು, ಈ ದಂಪತಿಗೆ 8 ತಿಂಗಳ ಹೆಣ್ಣು ಮಗುವೊಂದಿದೆ. ಈ ಕುಟುಂಬ ಹೈದರಾಬಾದ್ ನ ಬಂಜಾರಾ ಹಿಲ್ಸ್ ಶ್ರೀರಾಮ್ ನಗರ ಕಾಲೋನಿಯಲ್ಲಿ ಕಳೆದ ಮೂರು ತಿಂಗಳಿನಿಂದ ವಾಸವಾಗಿದೆ.

    ಕುಟುಂಬದಲ್ಲಾಗುತ್ತಿರುವ ಪ್ರತಿನಿತ್ಯದ ಸಮಸ್ಯೆಗಳಿಂದ ಬೇಸತ್ತು ಮಹಿಳೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಂಪತಿ ದಿನನಿತ್ಯ ಜಗಳವಾಡುತ್ತಿದ್ದರು. ಈ ಮಧ್ಯೆ ಸಂಬಂಧಿಕರು ಇಬ್ಬರಲ್ಲಿರುವ ವೈಮನಸ್ಸನ್ನು ಸರಿದೂಗಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ.

    ಅಂತೆಯೇ ಸೋಮವಾರ ಪತಿ ಹಾಗೂ ಪತ್ನಿಯ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿದ್ದು, ಅನಿತಾ ತನ್ನ ಪತಿಯನ್ನು ಮನೆಯೊಳಗಡೆ ಲಾಕ್ ಮಾಡಿ ಮಗುವಿನೊಂದಿಗೆ ಕಟ್ಟಡದ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಪರಿಣಾಮ ಅನಿತಾ ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಪುಟ್ಟ ಕಂದಮ್ಮನ ಸ್ಥಿತಿ ಗಂಭೀರವಾಗಿದೆ.

    ಅನಿತಾ ಹಾರಿದ್ದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ದೌಡಾಯಿಸಿ, ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅನಿತಾ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆದರೆ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಂಜಾರಾ ಹಿಲ್ಸ್ ಸಬ್-ಇನ್ಸ್ ಪೆಕ್ಟರ್ ಕೆ. ಉದಯ್ ಹೇಳಿದ್ದಾರೆ.

  • ಸಿಡಿದೆದ್ದ ರೈತರಿಂದ ನಾಳೆ ರಾಜ್ಯದಲ್ಲಿ ಹೆದ್ದಾರಿ ಬಂದ್ – ಬೆಂಗಳೂರಲ್ಲಿ ಅಘೋಷಿತ ಬಂದ್ ಸಾಧ್ಯತೆ

    ಸಿಡಿದೆದ್ದ ರೈತರಿಂದ ನಾಳೆ ರಾಜ್ಯದಲ್ಲಿ ಹೆದ್ದಾರಿ ಬಂದ್ – ಬೆಂಗಳೂರಲ್ಲಿ ಅಘೋಷಿತ ಬಂದ್ ಸಾಧ್ಯತೆ

    – ಜನರೇ ನೀವು ಹೊರಗೆ ಹೋಗುವ ಮುನ್ನ ಎಚ್ಚರ
    – ಬೆಂಗಳೂರಿನ ಯಾವ ರಸ್ತೆ ಲಾಕ್ ಆಗುತ್ತೆ?

    ಬೆಂಗಳೂರು: ಕೊರೊನಾ ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಶುಕ್ರವಾರ ಲಾಕ್ ಆಗುತ್ತಿದೆ. ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಬೀದಿಗೆ ಇಳಿಯಲಿದ್ದು, ಬೆಂಗಳೂರು ಸೇರಿ ಇಡೀ ರಾಜ್ಯಾದ್ಯಂತ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ. ಇದರಿಂದ ರಾಜ್ಯದಲ್ಲಿ ಜನಜೀವನ ಸ್ತಬ್ಧವಾಗುವ ಎಲ್ಲಾ ಸಾಧ್ಯತೆಗಳು ಇವೆ.

    ಬೆಂಗಳೂರಿನ ದಶ ದಿಕ್ಕುಗಳಲ್ಲೂ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದು, ಪ್ರಮುಖ ಜಂಕ್ಷನ್‍ಗಳು ಲಾಕ್ ಆಗಲಿವೆ. ವ್ಯಾಪಾರ ವಹಿವಾಟಿನ ಮೇಲೆಯೂ ಪರಿಣಾಮ ಬೀರಲಿದೆ. ಹೆದ್ದಾರಿ ತಡೆ ಕಾರಣ ನಾಳೆ ಬೆಂಗಳೂರಿಗೆ ಎಂಟ್ರಿ ಮತ್ತು ಎಕ್ಸಿಟ್ ಎರಡೂ ಇರಲ್ಲ. ಜೊತೆಗೆ ನಾಳೆಯಿಂದ ನಾಲ್ಕು ದಿನ ಸಾಲು ಸಾಲು ರಜೆಗಳು ಇವೆ. ನಾಳೆ ಅಧಿಕೃತವಾಗಿ ರಜೆ ಘೋಷಣೆ ಮಾಡಿಲ್ಲ. ಆದ್ರೆ ‘ಅಘೋಷಿತ’ ಬಂದ್ ಇರಲಿದೆ. ನಾಡಿದ್ದು 4ನೇ ಶನಿವಾರದ ರಜೆ ಇದೆ. ಭಾನುವಾರ ಮಾಮೂಲಿ ರಜೆ ಇರಲಿದೆ. ಸೋಮವಾರ ಕರ್ನಾಟಕ ಬಂದ್ ಇದೆ.

    ಸಾಲು ಸಾಲು ರಜೆ ಇದೆ ಎಂದು ಪ್ರವಾಸ ಹೊರಟಿದ್ರೆ, ನಿಮ್ಮ ಪ್ರಯಾಣ ರದ್ದು ಮಾಡುವುದೋ ಅಥ್ವಾ ಮುಂದಕ್ಕೆ ಹಾಕುವುದು ಒಳ್ಳೆಯದು. ಇಲ್ಲವಾದ್ರೆ ಮಾರ್ಗ ಮಧ್ಯೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು.

    ಬೆಂಗಳೂರಿನ ಯಾವ ರಸ್ತೆಗಳು ಲಾಕ್: ಮೈಸೂರು ಬ್ಯಾಂಕ್ ಸರ್ಕಲ್, ಏರ್‍ಪೋರ್ಟ್ ರಸ್ತೆ, ಗೊರಗುಂಟೆ ಪಾಳ್ಯ, ನೆಲಮಂಗಲ ಟೋಲ್, ಅತ್ತಿಬೆಲೆ ಟೋಲ್, ದೇವನಹಳ್ಳಿ ರಸ್ತೆ, ಮಲ್ಲೇಶ್ವರಂ- ಯಶವಂತಪುರ ರಸ್ತೆ, ಮಾರತ್‍ಹಳ್ಳಿ-ಎಂಜಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಟೋಲ್, ವಿಧಾನಸೌಧ ಅಸುಪಾಸು, ಚಿಕ್ಕಪೇಟೆ-ಕೆ.ಆರ್.ಮಾರ್ಕೆಟ್

    ಹೆದ್ದಾರಿ ಲಾಕ್: ಬೆಂಗಳೂರು- ಮೈಸೂರು ಹೆದ್ದಾರಿ, ಬೆಂಗಳೂರು- ತುಮಕೂರು ಹೆದ್ದಾರಿ, ಬೆಂಗಳೂರು- ಹೊಸೂರು ಹೆದ್ದಾರಿ, ಬೆಂಗಳೂರು- ಹಾಸನ ಹೆದ್ದಾರಿ, ಓಲ್ಡ್ ಮದ್ರಾಸ್ ರೋಡ್, ಬೆಂಗಳೂರು-ಹೊಸಕೋಟೆ, ಬೆಂಗಳೂರು-ದೇವನಹಳ್ಳಿ ರೋಡ್, ಬೆಂಗಳೂರು- ಹೊಸೂರು ಹೈವೇ

    ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ತರಲು ಉದ್ದೇಶಿಸಿರುವ ಕೃಷಿ ಮಸೂದೆ ವಿರೋಧಿಸಿ 2000ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶದ್ಯಾಂತ ನಾಳೆ ಹಾಗೂ ಸೆಪ್ಟೆಂಬರ್ 28ರಂದು ಪ್ರತಿರೋಧ್ ದಿವಸ್ ಹಮ್ಮಿಕೊಂಡಿದ್ದು, ರಾಜ್ಯದಲ್ಲಿಯೂ ಇದರ ಪರಿಣಾಮ ಇರಲಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ನಾಳೆ ರಸ್ತೆ ರೋಕೋ ಮತ್ತು ಸೋಮವಾರ ಕರ್ನಾಟಕ ಬಂದ್ ನಡೆಸೋದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಜೊತೆಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

    ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಾಪುರ ನಾಗೇಂದ್ರ ಮಾತನಾಡಿ, ದುಡಿಯುವ ವರ್ಗವನ್ನ ತುಳಿದು ಬದುಕುವ ಕೆಲಸ ನಡೆದಿದೆ ಎಂದು ಆಕ್ರೋಶ ಹೊರಹಾಕಿದರು. ಕೋಡಿಹಳ್ಳಿ ಚಂದ್ರಶೇಖರ್, ರೈತರ ಹೋರಾಟ ಪ್ರಶ್ನಿಸುತ್ತಿರುವ ಸಚಿವ ಬಿಸಿ ಪಾಟೀಲ್, ಸಿಟಿ ರವಿ ಹಾಗೂ ಸೋಮಶೇಖರ್ ಮೇಲೆ ಫುಲ್ ಗರಂ ಆದ್ರು. ನಿಮ್ಮ ಪ್ರಧಾನಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಿ. ಆದರೆ ರೈತರಿಗೆ ಅನುಕೂಲ ಅಂತ ಹೇಳಬೇಡಿ. ಸಿಟಿ ರವಿ ಅವ್ರೇ ಪ್ರೊಫೆಸರ್ ನಂಜುಂಡ ಸ್ವಾಮಿ ಹೇಳಿದ್ದೇನು ಎಂಬುದೇ ನಿಮಗೆ ಅರ್ಥ ಆಗಿಲ್ಲ. ಎಲ್ಲರೂ ಸೇರಿಕೊಂಡು ರೈತರ ಕಥೆ ಮುಗಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ರು. ಆದರೆ ರಸ್ತೆ ತಡೆ ನಡೆಸೋದಕ್ಕೆ ತಮ್ಮ ಬೆಂಬಲ ಇಲ್ಲ. ಸೋಮವಾರ ಬಂದ್‍ಗೆ ನಮ್ಮ ಬೆಂಬಲ ಅಂತಾ ಹೇಳಿದರು.

    ಈ ಮಧ್ಯೆ ಬಿಜೆಪಿಯವರು ರೈತರನ್ನ ಮಾರಾಟ ಮಾಡ್ತಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಲಾಗ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದರು. ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ಎಪಿಎಂಸಿ ಕಾಯಿದೆಯಿಂದ ಯಾವ ರೈತರಿಗೂ ನಷ್ಟ ಇಲ್ಲ ಅಂತಾ ಪುನರುಚ್ಛಿರಿಸಿದ್ರು. ರೈತರಿಗೆ ಅನ್ಯಾಯ ಆಗ್ತಿದೆ ಅಂದ್ರೆ ಅದು ಯಾವ ರೀತಿ ಅಂತಾ ಕಾಂಗ್ರೆಸ್‍ನವರು ಹೇಳಲಿ. ಕಾಂಗ್ರೆಸ್‍ಗೆ ಹೆದರಿಕೊಂಡು ಕೂರೋಕೆ ಆಗುತ್ತಾ? ಅವ್ರು ಹೇಳಿದಂತೆ ಕೇಳಿಕೊಂಡು ಸರ್ಕಾರ ನಡೆಸೋಕೆ ಆಗಲ್ಲ ಅಂತಾ ಗರಂ ಆದರು.

  • ಲಾಕ್‍ಡೌನ್ ಸಮಯದಲ್ಲಿ ಲೀಲಾವತಿ ಆಸ್ಪತ್ರೆಗೆ ಬೀಗ – ಬಡ ಜನರಿಗೆ ಆತಂಕ

    ಲಾಕ್‍ಡೌನ್ ಸಮಯದಲ್ಲಿ ಲೀಲಾವತಿ ಆಸ್ಪತ್ರೆಗೆ ಬೀಗ – ಬಡ ಜನರಿಗೆ ಆತಂಕ

    ನೆಲಮಂಗಲ: ಕೊರೊನಾ ವೈರಸ್ ಲಾಕ್‍ಡೌನ್ ಸಮಯದ ತುರ್ತು ಪರಿಸ್ಥಿತಿಯಲ್ಲಿ ಡಾ.ಎಂ.ಲೀಲಾವತಿ ಆಸ್ಪತ್ರೆಗೆ ಬೀಗ ಹಾಕಲಾಗಿದೆ. ಬಡವರಿಗಾಗಿ ಇದ್ದ ಆಸ್ಪತ್ರೆಗೆ ವೈದ್ಯರು ಇಲ್ಲದೆ ಬೀಗ ಹಾಕಿದ್ದು ಜನರು ಆತಂಕದಲ್ಲಿದ್ದಾರೆ.

    ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಕಳೆದ 10 ವರ್ಷದ ಹಿಂದೆ ಸ್ವತಃ ಹಿರಿಯ ನಟಿ ಡಾ.ಲೀಲಾವತಿಯವರು ಆಸ್ಪತ್ರೆ ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಈ ಆಸ್ಪತ್ರೆಯಲ್ಲಿ ಪ್ರತಿನಿತ್ಯ ಹಳ್ಳಿಗಾಡಿನ ನೂರಾರು ಜನರು ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಎರಡು ತಿಂಗಳಿನಿಂದ ವೈದ್ಯರು ಬರದೆ ಆಸ್ಪತ್ರೆಗೆ ಬೀಗ ಹಾಕಲಾಗಿದೆ ಎನ್ನಲಾಗಿದ್ದು, ನೆಲಮಂಗಲ ತಾಲೂಕು ವೈದ್ಯಾಧಿಕಾರಿ ಡಾ.ಹರೀಶ್ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದೆ.

    ಇತ್ತ ಕೊರೊನಾ ವೈರಸ್ ಲಾಕ್‍ಡೌನ್ ವೇಳೆ ನಗರ ಹಾಗೂ ಪಟ್ಟಣದ ಆಸ್ಪತ್ರೆಗೆ ಬರದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ಇಂದು ಈ ಆಸ್ಪತ್ರೆಯ ಮುಂದೆ ಜಮಾಯಿಸಿದ ನೂರಾರು ವೃದ್ಧರು ಅಧಿಕಾರಿಗಳ ನಡೆಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.

    ಆಸ್ಪತ್ರೆಗೆ ಬೀಗ ನೋಡಿ ಆಘಾತಕ್ಕೆ ಒಳಗಾದ ಲೀಲಾವತಿ ಹಾಗೂ ವಿನೋದ್ ರಾಜ್, ಯಾಕೆ ನಮ್ಮ ಹಾಗೂ ನಮ್ಮ ಹಳ್ಳಿ ಜನರ ಮೇಲೆ ಈ ರೀತಿಯ ದ್ವೇಷ. ನಾಲ್ಕು ವರ್ಷದ ಹಿಂದೆ ಇದೇ ಸಮಸ್ಯೆಯಾಗಿತ್ತು, ಆಗ ನಿಮ್ಮ ಪಬ್ಲಿಕ್ ಟಿವಿಯ ವರದಿ ಬಳಿಕ ಆಗಿನ ಆರೋಗ್ಯ ಸಚಿವ ಯು.ಟಿ ಖಾದರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ್ದರು. ಆದರೆ ಈಗ ಇದೆ ಸಮಸ್ಯೆ ಮತ್ತೆ ಮತ್ತೆ ಮರುಕಳಿಸಿರುವುದು ವಿಪರ್ಯಾಸವೇ ಸರಿ ಎಂದು ಹಿರಿಯ ನಟಿ ಲೀಲಾವತಿಯವರು ಕಳವಳ ವ್ಯಕ್ತಪಡಿಸಿದ್ದಾರೆ.

  • ಸರ್ಕಾರಿ ವೈದ್ಯೆಗೆ ಕೊರೊನಾ ಸೋಂಕು – ದೆಹಲಿ ಆಸ್ಪತ್ರೆ ಲಾಕ್

    ಸರ್ಕಾರಿ ವೈದ್ಯೆಗೆ ಕೊರೊನಾ ಸೋಂಕು – ದೆಹಲಿ ಆಸ್ಪತ್ರೆ ಲಾಕ್

    ನವದೆಹಲಿ: ಸರ್ಕಾರಿ ವೈದ್ಯೆಗೆ ಕೊರೊನಾ ವೈರಸ್ ಪಾಸಿಟಿವ್ ಬಂದ ಕಾರಣ ದೆಹಲಿ ಸರ್ಕಾರ ಸರ್ಕಾರಿ ಆಸ್ಪತ್ರೆಯೊಂದನ್ನು ಸಂಪೂರ್ಣವಾಗಿ ಲಾಕ್ ಮಾಡಿದೆ.

    ಕೊರೊನಾ ಸೋಂಕು ತಗುಲಿರುವ ವೈದ್ಯೆ ದೆಹಲಿ ರಾಜ್ಯ ಕ್ಯಾನ್ಸರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಹಾಗಾಗಿ ಆಸ್ಪತ್ರೆಯ ಕಟ್ಟಡದ ಒಪಿಡಿ, ಕಚೇರಿಗಳು ಮತ್ತು ಪ್ರಯೋಗಾಲಯಗಳನ್ನು ಮುಚ್ಚಲಾಗಿದ್ದು, ರಾಸಾಯನಿಕ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ವೈದ್ಯರೊಂದಿಗೆ ಸಂಪರ್ಕದಲ್ಲಿ ಇದ್ದರವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್, ಇತ್ತೀಚೆಗಷ್ಟೇ ಯುಕೆಯಿಂದ ವಾಪಸ್ ಆಗಿದ್ದ ವೈದ್ಯರ ಸಹೋದರ ಮತ್ತು ಅತ್ತಿಗೆಯಿಂದ ಅವರಿಗೆ ಸೋಂಕು ತಗುಲಿದೆ ಎಂದು ಶಂಕಿಸಲಾಗಿದೆ. ಅಲ್ಲದೇ ವೈದ್ಯೆ ಅಣ್ಣ ಅತ್ತಿಗೆ ಯುಕೆಯಿಂದ ವಾಪಸ್ ಬಂದ ನಂತರ ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿದ್ದರು ಎಂದು ತಿಳಿದು ಬಂದಿದೆ. ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲರನ್ನೂ ಪರೀಕ್ಷೆ ಮಾಡುವ ಕೆಲಸ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಕೂಡ ದೆಹಲಿ ಸರ್ಕಾರದ ಮೊಹಲ್ಲಾ ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ದಂಪತಿಗೆ ಕೊರೊನಾ ವೈರಸ್‍ಗೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಸೌದಿ ಅರೇಬಿಯಾದಿಂದ ವಾಪಸ್ ಆಗಿದ್ದ ರೋಗಿಯನ್ನು ಚಿಕಿತ್ಸೆ ಮಾಡಿದ್ದರಿಂದ ಅವರು ಸೋಂಕಿಗೆ ಒಳಗಾಗಿದ್ದಾರೆಂದು ಶಂಕಿಸಲಾಗಿತ್ತು. ಇದಾದ ನಂತರ ಮತ್ತೆ ದೆಹಲಿಯಲ್ಲಿ ಸರ್ಕಾರಿ ವೈದ್ಯರಿಗೆ ಕೊರೊನಾ ಪಾಸಿಟಿವ್ ಬಂದಿದೆ.

    ಕೊರೊನಾ ವೈರಸ್ ಮಹಾಮಾರಿ ದೇಶದಲ್ಲಿ ದಿನೇ ದಿನೇ ಜಾಸ್ತಿಯಾಗುತ್ತಿದೆ. ಇಲ್ಲಿವರೆಗೆ ದೆಹಲಿಯಲ್ಲಿ 121 ಕೊರೊನಾ ವೈರಸ್ ಪ್ರಕರಣಗಳು ಕಂಡು ಬಂದಿವೆ. ಕೊರೊನಾ ವೈರಸ್ ನಿಂದ ಎರಡು ಜನ ಸಾವನ್ನಪ್ಪಿದ್ದಾರೆ. ದೆಹಲಿ ಸೋಂಕಿತರಲ್ಲಿ 24 ಜನರು ಮಾರ್ಚ್ 1ರಿಂದ 15ರವರೆಗೆ ನಡೆದಿದ್ದ ತಬ್ಲಿಘಿ ಜಮಾತ್‍ನಲ್ಲಿ ಸಭೆಯಲ್ಲಿ ಭಾಗವಹಿಸಿದ್ದವರು ಆಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 146 ಹೊಸ ಪ್ರಕರಣಗಳು ವರದಿಯಾದ ನಂತರ ಭಾರತದಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆ 1,719ಕ್ಕೆ ಏರಿದೆ.

  • ಕೊರೊನಾ ಎಫೆಕ್ಟ್- ಪತ್ನಿಯನ್ನ ಬಾತ್‍ರೂಮಿನಲ್ಲಿ ಲಾಕ್ ಮಾಡಿದ ಪತಿ

    ಕೊರೊನಾ ಎಫೆಕ್ಟ್- ಪತ್ನಿಯನ್ನ ಬಾತ್‍ರೂಮಿನಲ್ಲಿ ಲಾಕ್ ಮಾಡಿದ ಪತಿ

    – ಪೊಲೀಸರಿಗೆ ಫೋನ್ ಮಾಡಿದ ಹೆಂಡ್ತಿ

    ವಿಲ್ನಿಯಸ್: ದೇಶಾದ್ಯಂತ ಕೊರೊನಾ ವೈರಸ್ ಭೀತಿ ಶುರುವಾಗಿದ್ದು, ಇದೇ ಭಯದಿಂದ ಪತಿಯೊಬ್ಬ ತನ್ನ ಪತ್ನಿಗೆ ಕೊರೊನಾ ವೈರಸ್ ಬಂದಿರಬಹುದು ಎಂಬ ಅನುಮಾನದಿಂದ ಬಾತ್‍ರೂಮಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದ ಘಟನೆ ಯೂರೋಪ್‍ನ ಲಿಥುವೇನಿಯದಲ್ಲಿ ನಡೆದಿದೆ.

    ಪತ್ನಿ ಚೀನಾದ ಮಹಿಳೆಯೊಬ್ಬರನ್ನು ಭೇಟಿಯಾಗಿ ಇಟಲಿಯಿಂದ ಆಗಮಿಸಿದ್ದಳು. ಹೀಗಾಗಿ ಪತ್ನಿಗೆ ಕೊರೊನಾ ವೈರಸ್ ಬಂದಿರಬಹುದು ಎಂದು ಆಕೆಯನ್ನು ಬಾತ್‍ರೂಮಿನಲ್ಲಿ ಕೂಡಿ ಹಾಕಿದ್ದನು. ಇತ್ತ ಪತ್ನಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾಳೆ. ಮಾಹಿತಿ ತಿಳಿದು ಪೊಲೀಸರು ಅವರಿದ್ದ ಅಪಾರ್ಟ್ ಮೆಂಟ್‍ಗೆ ಬಂದು ಮಹಿಳೆಯನ್ನು ರಕ್ಷಿಸಿದ್ದಾರೆ.

    ಕೊರೊನಾ ವೈರಸ್ ಸೋಂಕನ್ನು ಹೇಗೆ ತಪ್ಪಿಸಬೇಕು ಎಂಬ ಬಗ್ಗೆ ವೈದ್ಯರೊಂದಿಗೆ ಫೋನ್‍ನಲ್ಲಿ ಮಾತನಾಡಿದ ನಂತರ ಪತ್ನಿಯನ್ನು ಬಾತ್‍ರೂಮಿನಲ್ಲಿ ಕೂಡಿಹಾಕಿದ್ದಾನೆ. ಬಾತ್‍ರೂಮಿನಲ್ಲಿ ಕೂಡಿ ಹಾಕಿದ್ದರೂ ಪತ್ನಿ ದೂರು ನೀಡಲಿಲ್ಲ. ಹೀಗಾಗಿ ಆತನನ್ನು ಬಂಧಿಸಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

    ಮಹಿಳೆಯನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಯಲ್ಲಿ ಕೊರೊನಾ ವೈರಸ್ ಇಲ್ಲ ಎಂಬುದು ತಿಳಿದುಬಂದಿದೆ. ಚೀನಾದ ನಗರವಾದ ವುಹಾನ್‍ನಲ್ಲಿ ಜನವರಿಯಲ್ಲಿ ಈ ವೈರಸ್ ಪತ್ತೆಯಾಗಿತ್ತು. ಇದರಿಂದ ಚೀನಾದಲ್ಲಿ ಸಾವಿರಾರು ಬಂದಿ ಮೃತಪಟ್ಟಿದ್ದಾರೆ. ನಂತರ ಚೀನಾದಿಂದ ಬೇರೆ ಬೇರೆ ದೇಶಗಳಿಗೂ ಕೊರೊನಾ ವೈರಸ್ ಹಬ್ಬಿದೆ. ಈ ಭಯಂಕರ ವೈರಸ್ ನಿಂದ ದೇಶಾದ್ಯಂತ ಜನರು ಭಯಭೀತರಾಗಿದ್ದಾರೆ.

  • ಒಳಗಿನಿಂದ ಲಾಕಾಗಿದ್ದ ಕಾರಿನಲ್ಲಿ ಮಕ್ಕಳಿಬ್ಬರ ಶವ ಪತ್ತೆ

    ಒಳಗಿನಿಂದ ಲಾಕಾಗಿದ್ದ ಕಾರಿನಲ್ಲಿ ಮಕ್ಕಳಿಬ್ಬರ ಶವ ಪತ್ತೆ

    ಹೈದರಾಬಾದ್: ನಾಪತ್ತೆಯಾಗಿದ್ದ ಇಬ್ಬರು ಮಕ್ಕಳ ಮೃತದೇಹ ಪಾರ್ಕ್ ಮಾಡಿದ್ದ ಕಾರಿನಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ನಿಜಾಮಾಬಾದ್‍ದಲ್ಲಿ ನಡೆದಿದೆ.

    ಮುಜಾಹಿದ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೊಹಮ್ಮದುದ್ದೀನ್ (5) ಮತ್ತು ಮೊಹಮ್ಮದ್ ರಿಯಾಜ್ (10) ಮೃತ ಮಕ್ಕಳು. ಇವರಿಬ್ಬರು ಮಂಗಳವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಮಕ್ಕಳ ಪೋಷಕರು ಎಲ್ಲ ಕಡೆ ಹುಡುಕಾಡಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದರು.

    ನಂತರ ಮನೆಯ ಸುತ್ತಮುತ್ತಲು ಪೋಷಕರು ಹುಡುಕಲು ಶುರು ಮಾಡಿದ್ದರು. ಅವರ ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ನಿಲ್ಲಿಸಿದ್ದ ಹ್ಯುಂಡೈ ವರ್ನಾ ಕಾರಿನಲ್ಲಿ ಮಕ್ಕಳ ಶವಗಳನ್ನು ಪತ್ತೆಯಾಗಿವೆ. ಕಾರಿನ ಮಾಲೀಕ ಡೋರ್ ಓಪನ್ ಮಾಡಿ ನೋಡಿದಾಗ ಮಕ್ಕಳು ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ತಕ್ಷಣ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.

    ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಮಕ್ಕಳು ಸ್ವಂತ ಅಕ್ಕ-ತಂಗಿಯ ಮಕ್ಕಳಾಗಿದ್ದು, ಮಕ್ಕಳನ್ನು ಕಳೆದುಕೊಂಡ ತಾಯಿಯಂದಿರ ಆಕ್ರಂದನ ಮುಗಿಲು ಮುಟ್ಟಿತ್ತು. ಕಾರನ್ನು ಒಳಗಿನಿಂದ ಲಾಕ್ ಮಾಡಲಾಗಿತ್ತು. ಹೀಗಾಗಿ ಪೋಷಕರು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ ಎಂದು ಎಸಿಪಿ ಶ್ರೀನಿವಾಸ್ ಕುಮಾರ್ ತಿಳಿಸಿದ್ದಾರೆ.

    ಕಾರಿನ ಮಾಲೀಕರು ಕಾರನ್ನು ಲಾಕ್ ಮಾಡದೇ ನಿಲ್ಲಿಸಿದ್ದಾರೆ. ಈ ವೇಳೆ ಮಕ್ಕಳು ಆಟವಾಡಲು ಕಾರಿನೊಳಗೆ ಹೋಗಿದ್ದಾರೆ. ಆಗ ಆಕಸ್ಮಿಕವಾಗಿ ಕಾರಿನ ಬಾಗಿಲು ಲಾಕ್ ಆಗಿದೆ. ಈ ವೇಳೆ ಮಕ್ಕಳಿಗೆ ಹೊರಗೆ ಬರಲು ಸಾಧ್ಯವಾಗದೇ ಕಾರಿನೊಳಗೆ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

    ಸದ್ಯಕ್ಕೆ ಪೊಲೀಸರು ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

  • 4 ಗಂಟೆಗೂ ಅಧಿಕ ಕಾರೊಳಗೆ ಬಾಲಕ- ಶಾಲಾಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಕಂದಮ್ಮ ಬಲಿ

    4 ಗಂಟೆಗೂ ಅಧಿಕ ಕಾರೊಳಗೆ ಬಾಲಕ- ಶಾಲಾಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಕಂದಮ್ಮ ಬಲಿ

    ಭೋಪಾಲ್: ಶಾಲಾ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 6 ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಇಲ್ಲಿನ ಹೋಶಂಗಾಬಾದ್ ಜಿಲ್ಲೆಯಲ್ಲಿ ನಡೆದಿದೆ.

    ಮೃತ ದುರ್ದೈವಿ ಬಾಲಕನನ್ನು ನೈತಿಕ್ ಗೌರ್ ಎಂದು ಗುರುತಿಸಲಾಗಿದೆ. ಈತ ಹೋಶಂಗಾಬಾದ್ ನಲ್ಲಿರೋ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದನು. ಈ ಘಟನೆ ಮಾರ್ಚ್ 19ರಂದು ನಡೆದಿದ್ದು, ಬಾಲಕ ಭಾನುವಾರ ಮೃತಪಟ್ಟಿದ್ದಾನೆ.

    ಏನಿದು ಘಟನೆ?: ಶಾಲೆಯ ಅಧಿಕಾರಿಗಳು ಬಾಲಕನನ್ನು ಕಾರೊಳಗೆ ಲಾಕ್ ಮಾಡಿ ಹೋಗಿದ್ದಾರೆ. ಹೀಗಾಗಿ ಬರೋಬ್ಬರಿ 4 ಗಂಟೆಗೂ ಅಧಿಕ ಕಾಲ ಕಾರೊಳಗಿದ್ದರಿಂದ ಬಾಲಕನಿಗೆ ಉಸಿರಾಡಲು ಸಾಧ್ಯವಾಗಲಿಲ್ಲ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಯಿಸಿತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಮೃತಪಟ್ಟಿದ್ದಾನೆ.

    ಶಾಲೆಯ ಅಧಿಕಾರಿಗಳು ನೈತಿಕ್ ನನ್ನು 4 ಗಂಟೆಗೂ ಅಧಿಕ ಕಾರೊಳಗೆ ಕೂಡಿ ಹಾಕಿದ್ದರಿಂದ ಆತ ಉಸಿರಾಟದ ತೊಂದರೆ ಅನುಭವಿಸಿದ್ದಾನೆ. ಅಲ್ಲದೇ ಘಟನೆಯಿಂದ ಆತ ಶಾಕ್ ಗೊಳಗಾಗಿದ್ದಾನೆ ಅಂತ ವೈದ್ಯರು ತಿಳಿಸಿದ್ದರು. ಶಾಲೆಯ ಅಧಿಕಾರಿಗಳು ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಅಂತ ನೈತಿಕ್ ಪೋಷಕರು ಆರೋಪಿಸಿದ್ದಾರೆ. ಸದ್ಯ ಪ್ರಕರಣವನ್ನು ಸಿಬಿಐ ತನಿಖೆ ಮಾಡುವಂತೆ ಬಾಲಕನ ಪೋಷಕರು ಒತ್ತಾಯಿಸಿದ್ದಾರೆ.

    ಕಾರಿನಿಂದಿಳಿಯಲು ನಿರಾಕರಣೆ: ಶಾಲೆಯ ನಿರ್ದೇಶಕ ಹಾಗೂ ಕೆಲ ಶಿಕ್ಷಕರ ಜೊತೆ ನೈತಿಕ್ ನನ್ನು ಕಾರಿನಲ್ಲಿ ಶಾಲೆಗೆ ಕಳುಹಿಸಿಕೊಡಲಾಗಿತ್ತು. ಶಾಲೆಗೆ ತಲುಪಿದ ಬಳಿಕ ನೈತಿಕ್ ಕಾರಿನಿಂದ ಇಳಿಯಲು ನಿರಾಕರಿಸಿದ್ದಾನೆ. ಹೀಗಾಗಿ ಶಾಲಾ ನಿರ್ದೇಶಕರು ಆತನನ್ನು ಕಾರಿನಲ್ಲೇ ಬಿಟ್ಟು ಲಾಕ್ ಮಾಡಿ ಹೋಗಿದ್ದಾರೆ. ನಂತರ ಶಿಕ್ಷಕಿಯೊಬ್ಬರಲ್ಲಿ ಬಾಲಕನನ್ನು ಕಾರಿನಿಂದಿಳಿಸಿ ಕರೆತರುವಂತೆ ಹೇಳಿದ್ದಾರೆ. ಆದ್ರೆ ಶಿಕ್ಷಕಿ ಇದನ್ನು ಮರೆತಿದ್ದು, ಹೀಗಾಗಿ ಬಾಲಕ ಬರೋಬ್ಬರಿ 4 ಗಂಟೆಗೂ ಅಧಿಕ ಕಾರಿನೊಳಗಡೆಯೇ ಇದ್ದನು. ಪರಿಣಾಮ ಆತನಿಗೆ ಉಸಿರಾಡಲು ಸಾಧ್ಯವಾಗದೇ ತೊಂದರೆ ಅನುಭವಿಸಿದ್ದ ಎಂದು ಅಂತ ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಘಟನೆ ಸಂಬಂಧ ಹೋಶಂಗಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.