ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಥಿಯೇಟರ್ ನಲ್ಲಿ ನೆಚ್ಚಿನ ನಟನನ್ನು ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ಇತ್ತ ಚಿಕ್ಕ ಮಗಳೂರಿನಲ್ಲಿ ಅಹಿತಕರ ಘಟನೆ ನಡೆದಿದೆ. ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನದ ವೇಳೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ.

ಚಿಕ್ಕಮಗಳೂರಿನ ಮಿಲನ ಥಿಯೇಟರ್ ನಲ್ಲಿ ವಿಕ್ರಾಂತ್ ರೋಣ ಸಿನಿಮಾ ಪ್ರದರ್ಶನವಾಗುತ್ತಿತ್ತು. ಈ ಸಮಯದಲ್ಲಿ ಹುಡುಗರ ಗುಂಪೊಂದು ಚಿತ್ರಮಂದಿರದ ಹೊರಗೆ ಲಾಂಗ್ ನೊಂದಿಗೆ ಕಾಣಿಸಿಕೊಂಡಿದೆ. ಸಿನಿಮಾ ನೋಡುವುದಕ್ಕಾಗಿ ಬಂದಿದ್ದ ಭರತ್ ಎನ್ನುವವನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಲಾಗಿದೆ. ಥಿಯೇಟರ್ ಹೊರಾಂಗಣದಲ್ಲಿ ಈ ಮಾರಾಮಾರಿ ನಡೆದಿದ್ದು ಹಲ್ಲೆಗೊಳಗಾದ ಭರತ್ ನೆಲಕ್ಕೆ ಬಿದ್ದರೂ, ಬಿಡದ ಗುಂಪು ಮಾರಣಾಂತಿಕ ಹಲ್ಲೆ ಮಾಡಿದೆ. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

ನೋಡು ನೋಡುತ್ತಿದ್ದಂತೆಯೇ ಥಿಯೇಟರ್ ಹೊರಾಂಗಣ ರಣರಂಗವಾಗಿ ಮಾರ್ಪಟ್ಟಿದ್ದು, ಥಿಯೇಟರ್ ನಲ್ಲಿ ನೆರದಿದ್ದವರು ಅವರನ್ನು ಬಿಡಿಸುವಂತಹ ಪ್ರಯತ್ನ ಕೂಡ ಮಾಡಿದ್ದಾರೆ. ಹಲ್ಲೆಯ ನಂತರ ತೀವ್ರ ಗಾಯಗೊಂಡಿದ್ದ ಭರತ್ ನನ್ನು ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ್ ಗೆ ರವಾನೆ ಮಾಡಲಾಗಿದೆ. ಹಾಸನದ ಆಸ್ಪತ್ರೆಯಲ್ಲಿ ಭರತ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.
























