ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಐ ಲವ್ ಯೂ ಚಿತ್ರದ ಹಾಡುಗಳ ಭರಾಟೆ ಅಡೆತಡೆಯಿಲ್ಲದೆ ಮುಂದುವೆರೆಯುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಹಾಡುಗಳು ಜನಮನ ಗೆಲ್ಲುತ್ತಿದ್ದಂತೆಯೇ ಚಂದ್ರು ಚೆಂದದ ಹಾಡುಗಳ ಲಿರಿಕಲ್ ವೀಡಿಯೋಗಳನ್ನು ಲಾಂಚ್ ಮಾಡುತ್ತಾ ಸಾಗುತ್ತಿದ್ದಾರೆ. ಇದೀಗ ಐ ಲವ್ ಯೂ ಚಿತ್ರದ ಮತ್ತೊಂದು ಮನಮೋಹಕ ಡ್ಯುಯೆಟ್ ಸಾಂಗ್ ಬಿಡುಗಡೆಯಾಗಿದೆ.
ಒಂದಾನೊಂದು ಕಾಲದಿಂದ ಹಿಂದೆ ಬಂದೆ ಅಂದಿನಿಂದ… ಎಂಬ ಈ ರೊಮ್ಯಾಂಟಿಕ್ ಸಾಂಗ್ ಲಹರಿ ಆಡಿಯೋ ಸಂಸ್ಥೆಯ ಯೂಟ್ಯೂಬ್ ಚಾನೆಲ್ ಮೂಲಕ ಬಿಡುಗಡೆಯಾಗಿದೆ. ಆರ್ಯ ದಕ್ಷಿಣ್ ಸಂಗೀತ ಸಂಯೋಜನೆ ಮಾಡಿರೋ ಈ ಹಾಡನ್ನು ಸುಚಿತ್ ಸುರೇಶ್ ಹಾಡಿದ್ದಾರೆ. ಇದಕ್ಕೆ ಧನಂಜಯ್ ಸಾಹಿತ್ಯ ನೀಡಿದ್ದಾರೆ. ಯುವ ಸಮೂಹಕ್ಕೆ ಒಂದೇ ಸಲಕ್ಕೆ ಹಿಡಿಸುವಂತಿರೋ ಈ ಹಾಡೂ ಕೂಡಾ ಹಿಟ್ ಆಗೋ ಸೂಚನೆ ಬಿಡುಗಡೆಯಾಗಿ ಕ್ಷಣದೊಪ್ಪತ್ತಿನಲ್ಲಿಯೇ ಸಿಕ್ಕಿದೆ. ಯಾಕೆಂದರೆ, ಈ ಹಾಡೀಗ ಲಕ್ಷ ವೀಕ್ಷಣೆಯತ್ತ ದಾಪುಗಾಲಿಡುತ್ತಿದೆ.
ಟ್ರೈಲರ್ ಮೂಲಕ ರಚಿತಾ ರಾಮ್ ಮತ್ತು ಉಪೇಂದ್ರ ಅವರ ಒಂದು ಮಜಲಿನ ಕೆಮಿಸ್ಟ್ರಿ ಅನಾವರಣಗೊಂಡಿತ್ತು. ಇದೀಗ ಈ ಡ್ಯುಯೆಟ್ ಸಾಂಗಿನ ಮೂಲಕ ಅದರ ಮತ್ತೊಂದು ರೊಮ್ಯಾಂಟಿಕ್ ಆಯಾಮವೂ ಜಾಹೀರಾಗಿದೆ. ಈ ಹಾಡಿನಲ್ಲಿ ಮುದ್ದಾಗಿ ನಟಿಸಿರೋ ರಚಿತಾ ರಾಮ್ ಮತ್ತು ಉಪೇಂದ್ರರನ್ನು ಕಂಡು ಅಭಿಮಾನಿಗಳೆಲ್ಲ ಹುಚ್ಚೆದ್ದಿದ್ದಾರೆ.
ಆರ್ ಚಂದ್ರು ಈ ಹಿಂದಿನ ಚಿತ್ರಗಳಲ್ಲಿಯೂ ಹಾಡುಗಳಿಗೆ ಪ್ರಾಶಸ್ತ್ಯ ಕೊಟ್ಟಿದ್ದರು. ಆದ್ದರಿಂದಲೇ ಅವರು ನಿರ್ದೇಶನ ಮಾಡಿದ ಅಷ್ಟೂ ಚಿತ್ರದ ಹಾಡುಗಳೂ ಎವರ್ ಗ್ರೀನ್ ಅನ್ನಿಸಿಕೊಂಡಿದ್ದವು. ಇದೀಗ ಬಿಡುಗಡೆಯ ಹೊಸ್ತಿಲಲ್ಲಿರುವ ಐ ಲವ್ ಯೂ ಚಿತ್ರವೂ ಕೂಡಾ ಆ ಸಾಲಿಗೆ ಸೇರ್ಪಡೆಗೊಂಡಿದೆ.
ಬೆಂಗಳೂರು: ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಅವರು ಲಹರಿ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು ಯಾರೂ ಊಹಿಸಲಾಗದಷ್ಟು ಸಂಭಾವನೆ ಪಡೆದಿದ್ದಾರೆ.
ಚಂದನ್ ಶೆಟ್ಟಿ ಅವರಿಗೆ ಒಳ್ಳೆಯ ಪ್ರಾಜೆಕ್ಟ್ ಸಿಕ್ಕಿದೆ. ಚಂದನ್ ಅವರು ಲಹರಿ ಮ್ಯೂಸಿಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಅವರಿಗಾಗಿ 5 ಹಾಡನ್ನು ಹಾಡಲಿದ್ದಾರೆ.
ಸದ್ಯ ಚಂದನ್ 5 ವಿಭಿನ್ನ ಹಾಡುಗಳನ್ನು ಮಾಡುವ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಸುಮಾರು 6 ತಿಂಗಳಲ್ಲಿ ಈ ಕೆಲಸ ಮುಗಿಸಿ ಪ್ರೇಕ್ಷಕರ ಮುಂದೆ ಹಾಡುಗಳನ್ನು ತರುವುದಕ್ಕೆ ಅವರು ಪ್ಲಾನ್ ಮಾಡಿದ್ದಾರೆ. ಒಂದು ಆಲ್ಬಂ ಹಾಡಿಗೆ ಅತಿ ದೊಡ್ಡ ಸಂಭಾವನೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮದುವೆ ಇಂಗಿತ ಬಿಚ್ಚಿಟ್ಟ ಕನ್ನಡ ರ‍್ಯಾಪರ್ ಚಂದನ್ ಶೆಟ್ಟಿ
ಈ ಬಗ್ಗೆ ಚಂದನ್ ಶೆಟ್ಟಿ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ನೂರು ರೂ. ಸಿಕ್ಕರೆ ಸಾಕು ಒಂದು ದಿನ ಹೊಟ್ಟೆ ತುಂಬಿ ಹೋಗುತ್ತೆ ಎಂಬ ದಿನ ಇತ್ತು. ಆದರೆ ಈಗ ಅದೇ ಮನುಷ್ಯನಿಗೆ 1 ಕೋಟಿ ರೂ. ಸಿಕ್ಕಿದೆ ಎಂದರೆ ಅದರ ಆನಂದವೇ ಬೇರೆ. ಅದು ಹೇಳಿಕೊಳ್ಳೋಕೆ ಸಾಧ್ಯವಿಲ್ಲ. ಜೀವನದಲ್ಲಿ ಏನೋ ಒಂದು ಸಾರ್ಥಕತೆ ಸಿಕ್ಕಿದ ರೀತಿ ಅನಿಸುತ್ತಿದೆ. ನನ್ನ ಮಗ ಏನೋ ಸಾಧಿಸುತ್ತಾನೆ ಎಂದು ನನ್ನ ತಂದೆ-ತಾಯಿ ನಂಬಿದ್ದರು. ಇದೀಗ ತಮ್ಮ ಮಗ ಈ ಮಟ್ಟಕ್ಕೆ ಸಾಧನೆ ಮಾಡಿದ್ದಾನೆಂದು ನನ್ನ ತಂದೆ-ತಾಯಿಗೆ ಖುಷಿ ಇದೆ” ಎಂದರು.
ಕೇವಲ ಹಾಡು ಮಾಡಿಕೊಂಡು ಜೀವನ ಮಾಡಬಹುದಾ ಎಂಬ ಪ್ರಶ್ನೆ ಇತ್ತು. ಈಗ ಜೀವನ ಅಲ್ಲ ರಾಯಲ್ ಜೀವನ ಮಾಡಬಹುದು ಎಂಬುದು ಪ್ರೂವ್ ಆಗುತ್ತಿದೆ. ಅವಕಾಶ ನೀಡಿದ ಲಹರಿ ಕಂಪನಿಗೆ ಧನ್ಯವಾದ ಹೇಳಿದರು.
ಬೆಂಗಳೂರು: ಇಡೀ ಭಾರತೀಯ ಚಿತ್ರರಂಗವನ್ನೇ ಚಂದನವನದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾ 200 ಕೋಟಿ ಕ್ಲಬ್ ಸೇರಿಕೊಂಡಿದೆ. ಕೆಜಿಎಫ್ ಚಿತ್ರ ನೋಡಿ ಬಂದವರು ‘ಸಲಾಂ ರಾಕಿ ಬಾಯ್’ ಎಂದು ಒಂದು ಸಾಲಿನಲ್ಲಿಯೇ ಚಿತ್ರದ ಹೇಗಿದೆ ಎಂಬ ಪ್ರಶ್ನೆಗೆ ಉತ್ತರ ಕೊಡುತ್ತಾರೆ. ಇದೀಗ ಅದೇ ‘ಸಲಾಂ ರಾಕಿ ಬಾಯ್’ ಹಾಡು ಮತ್ತೊಮ್ಮೆ ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.
ಸಿನಿಮಾ ಬಿಡುಗಡೆಗೂ ಮುನ್ನ ಕೇವಲ ಲಿರಿಕ್ಸ್ ವಿಡಿಯೋವನ್ನು ಮಾತ್ರ ಚಿತ್ರತಂಡ ಬಿಡುಗಡೆ ಮಾಡಿತ್ತು. ಮಂಗಳವಾರ ಸಂಜೆ ಸಲಾಂ ರಾಕಿ ಭಾಯ್ ಹಾಡಿನ ವಿಡಿಯೋವನ್ನು ಲಹರಿ ಮ್ಯೂಸಿಕ್ ಸಂಸ್ಥೆ ತನ್ನ ಯುಟ್ಯೂಬ್ ಖಾತೆಯಲ್ಲಿ ಬಿಡುಗಡೆ ಮಾಡಿದೆ. ವಿಡಿಯೋ ಬಿಡುಗಡೆಯಾದ 19 ಗಂಟೆಗಳಲ್ಲಿ 6 ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಳ್ಳುವ ಮೂಲಕ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ.
ಸೋಮವಾರ ಬಿಡುಗಡೆಯಾಗಿದ್ದ, ನಟ ವೆಂಕಟೇಶ್, ವರುಣ್ ತೇಜ್ ಮತ್ತು ತಮನ್ನಾ ಭಾಟಿಯಾ ಅಭಿನಯದ ‘F2’ ಟ್ರೇಲರ್ ಮೊದಲ ಸ್ಥಾನದಲ್ಲಿತ್ತು. ಸಲಾಂ ರಾಕಿ ಬಾಯ್ ಕೇವಲ 19 ಗಂಟೆಯಲ್ಲಿಯೇ ‘F2’ ಟ್ರೇಲರ್ ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.
ಸಲಾಂ ರಾಕಿ ಭಾಯ್ ಹಾಡನ್ನು ನೀವು ಚಿತ್ರದ ಆರಂಭದಲ್ಲಿಯೇ ನೋಡಬಹುದು. ತನ್ನ ವೈರಿಗಳನ್ನೆಲ್ಲಾ ನಾಶ ಮಾಡಿ ಮುನ್ನುಗ್ಗುತ್ತಿರುವಾಗ ರಾಕಿಯ ಸಹಚರರು ಹಾಡಿನ ಮೂಲಕ ಸಲಾಂ ತಿಳಿಸುತ್ತಾರೆ. ಮುಂಬೈನಲ್ಲಿ ಅಧಿಪತ್ಯ ಸಾಧಿಸಿ ಪವರ್ ಫುಲ್ ವ್ಯಕ್ತಿಯಾಗಬೇಕೆಂದ ಆಸೆ ಹೊತ್ತ ರಾಕಿಯನ್ನು ವಿಧಿ ಕೆಜಿಎಫ್ ನತ್ತ ಕರೆತರುತ್ತೆ. ಕೆಜಿಎಫ್ ಧೂಳಿನ ಕಣಗಳ ನಡುವಿನ ನರಕಕ್ಕೆ ಎಂಟ್ರಿ ನೀಡುವ ರಾಕಿ ಜೀವನ ಹೇಗೆ ಬದಲಾಗುತ್ತೆ ಎಂಬುದನ್ನು ತಿಳಿಯಲು ಚಾಪ್ಟರ್-2 ನೀವು ನೋಡಲೇಬೇಕು.
ನಿನ್ನ ಹಿಂದೆ ಸಾವಿರ ಜನ ನಿಂತಿದ್ದಾರೆ ಧೈರ್ಯ ನಿನಗಿದ್ದರೆ ಒಂದು ಯುದ್ಧ ಗೆಲ್ಲಬಹುದು. ಆದ್ರೆ ಅದೇ ಸಾವಿರ ಜನಕ್ಕೆ ನೀನು ಮುಂದೆ ನಿಂತಿದ್ದೀಯಾ ಅಂತಾ ಧೈರ್ಯ ಬಂದ್ರೆ ಪ್ರಪಂಚನೇ ಗೆಲ್ಲಬಹುದು ಎಂಬ ಡೈಲಾಗ್ ಸಿನಿಮಾದ ಕೊನೆಗೆ ಬರುತ್ತದೆ. ಅದೇ ರೀತಿ ಸಾವಿರ ಜನರ ಧೈರ್ಯವಾಗಿ ನಿಲ್ಲುವ ರಾಕಿಯ ಮುಂದಿನ ಜೀವನವನ್ನು ಪ್ರಶಾಂತ್ ನೀಲ್ ಎರಡನೇ ಭಾಗದಲ್ಲಿ ಹೇಳಲಿದ್ದಾರೆ.
ಬೆಂಗಳೂರು: ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಆರು ದಿನ ಕಳೆದ್ರೂ ಚಿತ್ರದ ಜ್ವರ ಮಾತ್ರ ಕಡಿಮೆಯಾಗಿಲ್ಲ. ಸಾಮಾನ್ಯವಾಗಿ ವೀಕೆಂಡ್ ದಿನಗಳಲ್ಲಿ ಮಾತ್ರ ಚಿತ್ರಮಂದಿರ ತುಂಬಿರುತ್ತದೆ ಎಂಬ ಮಾತಿದೆ. ಈ ಮಾತನ್ನು ಕೆಜಿಎಫ್ ಸುಳ್ಳಾಗಿಸಿದ್ದು, ಇಂದಿಗೂ ಥಿಯೇಟರ್ ನತ್ತ ಜನರು ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ. ಹಲವು ವಿಶೇಷತೆಗಳನ್ನು ಈ ಸಿನಿಮಾ ಒಳಗೊಂಡಿದ್ದು, ಎಲ್ಲರೂ ಸಲಾಂ ರಾಕಿ ಭಾಯ್ ಎಂದು ಹೇಳುತ್ತಿದ್ದಾರೆ.
ಕೆಜಿಎಫ್ ನಲ್ಲಿ ಹುಟ್ಟಿದ್ದ ಹುಡುಗ ಮುಂದೊಂದು ದಿನ ಬಾಂಬೆ ಲೋಕದ ಅಧಿಪತಿಯಾಗ್ತಾನೆ. ಅಧಿಪತಿಯಾದ ರಾಕಿ ಆಕಸ್ಮಿಕವಾಗಿ ಕೆಜಿಎಫ್ ಎಂಬ ಅಮಾನುಷ ಲೋಕಕ್ಕೆ ಹಿಂದಿರುಗುತ್ತಾನೆ. ಗುರಿ ಇಟ್ಟುಕೊಂಡು ಕೆಜಿಎಫ್ ಸೇರುವ ರಾಕಿ ತನ್ನ ಸಾಧನೆಗಾಗಿ ಕಾಯುತ್ತಿರುತ್ತಾನೆ. ಅಲ್ಲಿ ನಡೆಯುವ ಅಮಾನುಷ ಕೃತ್ಯಗಳನ್ನು ಕಂಡರೂ ಎದೆಯ ಮೇಲೊಂದು ಕಲ್ಲು ಇಟ್ಟುಕೊಂಡು ಸುಮ್ಮನಿರುತ್ತಾನೆ. ಆದ್ರೆ ಒಂದು ಚೆಂಡು ರಾಕಿಯ ಜೀವನವನ್ನೇ ಬದಲಾವಣೆ ಮಾಡುತ್ತದೆ. ಆ ಒಂದು ಘಟನೆಯಿಂದಾಗಿ ರಾಕಿ ಅಲ್ಲಿಯ ಜನರೊಂದಿಗೆ ಬೆರೆತುಕೊಳ್ಳುತ್ತಾನೆ. ಹಾಗಾದ್ರೆ ಆ ಘಟನೆ ಏನು ಅಂತೀರಾ, ಅದನ್ನು ನೀವು ಬಿಗ್ ಸ್ಕ್ರೀನ್ ಮೇಲೆ ನೋಡಿದರೆ ಚೆಂದ. ಹಾಗಾಗಿ ರಾಕಿಯನ್ನು ಬದಲಾಯಿಸಿದ ಆ ಚೆಂಡಿನ ಕಥೆಯನ್ನು ನೀವು ಸಿನಿಮಾದಲ್ಲೇ ನೋಡಿ.
ಸಿನಿಮಾದಲ್ಲಿ ಲಾಜಿಕ್ ಹುಡುಕದೇ ಮ್ಯಾಜಿಕ್ ನೋಡಿ. ಪ್ರತಿಯೊಂದು ಸನ್ನಿವೇಶಗಳ ಪಾತ್ರಗಳಲ್ಲಿ ನೀವು ಕಾಣಿಸಿಕೊಳ್ಳುತ್ತೀರಿ. ಪ್ರಶಾಂತ್ ನೀಲ್ ಕಥೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ಮುಂದಿನ ಭಾಗ ಹೇಗಿರುತ್ತೆ? ಅಲ್ಲಿ ನಡೆಯುವುದಾದ್ರೂ ಏನು? ಕೆಜಿಎಫ್ ಘಟನೆಗಳು ರಾಕಿಯ ಮೇಲೆ ಯಾವ ಪರಿಣಾಮ ಬೀರುತ್ತಾ? ತಾಯಿಗೆ ಕೊಟ್ಟ ಮಾತಿನಂತೆ ಪವರ್ ಹುಡುಕಿ ಹೊರಟವನ ಜೀವನದಲ್ಲಿ ಹೊರಟ ಮಗನ ಜೀವನ ಮುಂದೇನು ಎಂಬಿತ್ಯಾದಿ ಪ್ರಶ್ನೆಗಳು ಸಿನಿಮಾ ನೋಡಿ ಹೊರ ಬರುವವರಲ್ಲಿ ಹುಟ್ಟಿಕೊಳ್ಳುವುದು ಸತ್ಯ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಾದ್ರೆ ಚಾಪ್ಟರ್-2 ಗಾಗಿ ಕಾಯಲೇಬೇಕು.
ಸಿನಿಮಾದುದ್ದಕ್ಕೂ ಅನಂತ್ ನಾಗ್ ಅವರ ಧ್ವನಿ ನಿಮ್ಮನ್ನು ಮೋಡಿ ಮಾಡುತ್ತೆ. ಸಿನಿಮಾದ ಹಿನ್ನೆಲೆ ಸಂಗೀತ ಚಿತ್ರದ ಪ್ರತಿಯೊಂದು ಸನ್ನಿವೇಶಗಳನ್ನು ರಗಢ್ ಲುಕ್ ನಲ್ಲಿ ತೋರಿಸಲು ಯಶಸ್ವಿಯಾಗಿದೆ. ಕೆಲ ನಿಮಿಷ ಬಂದು ಹೋಗುವ ತಮನ್ನಾ ಭಾಟಿಯಾ ಅಭಿಮಾನಿಗಳನ್ನು ರಂಜಿಸುವಲ್ಲಿ ನಾನೇನು ಕಡಿಮೆ ಇಲ್ಲ ಎಂಬುದನ್ನು ತೋರಿಸಿದ್ದಾರೆ. ಚಿತ್ರದ ಬಹುಪಾಲು ಕಲಾವಿದರ ಧ್ವನಿಯೇ ಕೆಜಿಎಫ್ ಸಿನಿಮಾದ ಪ್ಲಸ್ ಪಾಯಿಂಟ್ ಆಗಿದೆ. ಕನ್ನಡದ ಕಿರೀಟ ಅಂತಾ ಕೆಜಿಎಫ್ ಕರೆಸಿಕೊಳ್ಳುತ್ತಿದ್ದು, 100 ಕೋಟಿಯ ಕ್ಲಬ್ ಸೇರಿದ ಮೊದಲ ಚಂದನವನದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇನ್ನು ನೀವು ಸಿನಿಮಾ ನೋಡಿಲ್ವಾ? ಹಾಗಾದ್ರೆ ನೋಡಿ. ನಿಮಗೆ ಸಿನಿಮಾದ ಯಾವ ಭಾಗ, ದೃಶ್ಯ, ಕಲಾವಿದ ಇಷ್ಟ ಆದ್ರು? ಸಿನಿಮಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ಹಂಚಿಕೊಳ್ಳಿ.
ಬೆಂಗಳೂರು: ದೇಶದ ಬಹುನಿರೀಕ್ಷಿತ ಸಿನಿಮಾ ಕೆಜಿಎಫ್ ಬಿಡುಗಡೆಯಾಗಿದ್ದು, ಅಭಿಮಾನಿಗಳು ಉಘೇ, ಉಘೇ ಎಂದು ಹರ್ಷೊದ್ಘಾರ ಹೊರ ಹಾಕುತ್ತಿದ್ದಾರೆ. ಮೊದಲ ದಿನವೇ 2 ಸಾವಿರ ತೆರೆಗಳಲ್ಲಿ ಮಿಂಚಿದ ರಾಕಿ ಗಲ್ಲಾ ಪೆಟ್ಟಿಗೆಯಲ್ಲೂ ಸದ್ದು ಮಾಡಿದ್ದಾನೆ. ಎಲ್ಲ ಚಿತ್ರಮಂದಿರಗಳಲ್ಲಿಯೂ ಸಿನಿಮಾ ಬಿಡುಗಡೆಗೂ ಮುನ್ನವೇ ಅಭಿಮಾನಿಗಳು ಸಿನಿಮಾ ಟಿಕೆಟ್ ಕಾಯ್ದಿರಿಸಿದ್ದರು.
ಬಿಡುಗಡೆಯಾದ ಮೊದಲ ದಿನವೇ ಅಂದಾಜು 30 ಕೋಟಿ ಬಾಚಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ 80ರಿಂದ 90 ಕೋಟಿ ಬೊಕ್ಕಸ ಸೇರುವ ಸಾಧ್ಯತೆ ಇದೆ. ಕೆನಾಡದಲ್ಲೂ ಕೆಜಿಎಫ್ ಫಿವರ್ ಜೋರಾಗಿದೆ. ಅಭಿಮಾನಿಗಳು ಯಶ್ ಟಿ ಷರ್ಟ್ ಹಾಕ್ಕೊಂಡು ಕೆಜಿಎಫ್‍ಗೆ ಸ್ವಾಗತಿಸಿರೋ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡಿದ್ದಾರೆ.
ಎರಡನೇ ದಿನವೂ ಕರುನಾಡಿನ ಎಲ್ಲ ಚಿತ್ರಮಂದಿರಗಳ ಮುಂದೆ ಹೌಸ್‍ಫುಲ್ ಎಂಬ ಬೋರ್ಡ್ ಕಾಣುತ್ತಿದೆ. ಹಿಂದಿ ಡಬ್ ಸಿನಿಮಾ 1,500 ತೆರೆಗಳಲ್ಲಿ ತೆರೆಕಂಡಿದ್ದು, ಮೊದಲ ದಿನವೇ 2.10 ಕೋಟಿ ರೂ. ಗಳಿಸಿದೆ ಎಂದು ಬಾಲಿವುಡ್ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದಾರೆ. ಮುಂದಿನ ಎರಡು ದಿನಗಳಲ್ಲಿ ಹಿಂದಿ ಕೆಜಿಎಫ್ ಇದೇ ರೀತಿ ಯಶಸ್ವಿ ಪ್ರದರ್ಶನ ಕಾಣಲಿದೆ ಅಂತಾನೂ ತಿಳಿಸಿದ್ದಾರೆ.
ಶಾರೂಖ್ ಖಾನ್ ಅಭಿನಯದ ಝೀರೋ ಒಟ್ಟು 4380 ಸ್ಕ್ರೀನ್ ಗಳಲ್ಲಿ ತೆರೆಕಂಡಿದ್ದು, ಮೊದಲ ದಿನ 20.14 ಕೋಟಿ ಹಣವನ್ನು ಗಲ್ಲಾ ಪೆಟ್ಟಿಗೆಯಲ್ಲಿ ಭರ್ತಿ ಮಾಡಿಕೊಂಡಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಜನ ಟಿಕೆಟ್ ಕಾಯ್ದಿರಿಸಿದ್ದರಿಂದ ಶನಿವಾರ ಮತ್ತು ಭಾನುವಾರ ಚಿತ್ರಮಂದಿರಗಳು ಭರ್ತಿಯಾಗಲಿದೆ. ತರಣ್ ಆದರ್ಶ್ ಅವರು ಝೀರೋ ಸಿನಿಮಾಗೆ ಅರ್ಧ ಪಾಯಿಂಟ್ ನೀಡಿ ಚಿತ್ರ ನಿಷ್ಪ್ರಯೋಜಕ ಎಂದು ಹೇಳುವ ಮೂಲಕ ಚಿತ್ರದ ವಿಮರ್ಶೆ ಮಾಡಿದ್ದರು.
ಕೆಜಿಎಫ್ ಒಟ್ಟು 2460 ಥಿಯೇಟರ್ ಗಳಲ್ಲಿ ತೆರೆಕಂಡಿದೆ. ಹಿಂದಿ 1500, ಕನ್ನಡ 400, ತೆಲುಗು 400, ತಮಿಳ 100, ಮಲಯಾಳಂ 60 ತೆರೆಗಳಲ್ಲಿ ಬಿಡುಗಡೆಯಾಗಿದೆ.
#KGF Fri ₹ 2.10 cr [1500 screens]. India biz. Note: HINDI version… Performed best in Mumbai… Biz on Day 2 and Day 3 is pivotal.
– ಮಹೇಶ್ ದೇವಶೆಟ್ಟಿ ಕೊನೆಗೂ ಕನ್ನಡಿಗರು ಸಮಾಧಾನದ ಉಸಿರು ಬಿಟ್ಟಿದ್ದಾರೆ. ಕಳೆದ ಎರಡು ವರ್ಷದಿಂದ ಕಾಯುತ್ತಿದ್ದ ಅಮೃತ ಘಳಿಗೆಗೆ ಕೇಕೆ ಹೊಡೆದಿದ್ದಾರೆ. ಕೆಜಿಎಫ್ ಎನ್ನುವ ಸಿನಿಮಾ ದೇಶ ವಿದೇಶದಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಎಲ್ಲರ ಬಾಯಲ್ಲಿ ಒಂದೇ ಮಾತು, ಸಲಾಂ ರಾಕಿ ಭಾಯ್. ಅದು ಜನರ ಒನ್ ಲೈನ್ ವಿಮರ್ಶೆ. ಆದರೆ ಅದನ್ನು ಮೀರಿದ, ಕನ್ನಡ ಚಿತ್ರರಂಗ ಹಿಂದೆಂದೂ ಕಾಣದ, ಭಾರತೀಯ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದ ಅನೇಕ ಕಾಣಿಕೆಯನ್ನು ಕೆಜಿಎಫ್ ಕೊಟ್ಟಿದೆ. ಒಂದರ್ಥದಲ್ಲಿ ಕೆಜಿಎಫ್ ಕನ್ನಡ ಚಿತ್ರರಂಗಕ್ಕೆ ಮಹಾ ಕಿರೀಟ. ಹೇಗಿದೆ ರಾಕಿಂಗ್ ಸ್ಟಾರ್ ಅಬ್ಬರ? ಏನಿದರ ಕತೆ? ಯಾರ್ಯಾರು ಏನೇನು ಕಮಾಲ್ ಮಾಡಿದ್ದಾರೆ? ಅದರ ಇಂಚಿಂಚು ಮಾಹಿತಿಯೂ ಈ ಕೆಜಿಎಫ್ ಖಡಕ್ ರಿಪೋರ್ಟ್ ನಲ್ಲಿದೆ.
ಕನ್ನಡ ಚಿತ್ರರಂಗದ ಅಬ್ಬರಕ್ಕೆ ಬೆಚ್ಚಿಬಿದ್ದಿದ್ಯಾರು? ಕೆಜಿಎಫ್ ಅಶ್ವಮೇಧ ಕುದುರೆ ಕಟ್ಟುವವರ್ಯಾರು?
ಬರೋಬ್ಬರಿ ಒಂದು ತಿಂಗಳಿಂದ ಎಲ್ಲಿ ನೋಡಿದರಲ್ಲಿ ಕೆಜಿಎಫ್ ಜಾತ್ರೆ. ಟ್ರೈಲರು, ಹಾಡು… ಒಂದೊಂದೇ ಜನರ ಕಣ್ಣ ಮುಂದೆ ಹೊಳೆಯುತ್ತಿದ್ದಂತೆಯೇ ಕೆಜಿಎಫ್ ಜ್ವರ ಜನರ ನೆತ್ತಿಗೇರಿತು. ದೇವ ದೇವಾ…ಕಾಲ್‍ಸೂಪೇ ಇಷ್ಟೊಂದು ಖಡಕ್ ಆಗಿರುವಾಗ ಇನ್ನು ಬಾಡೂಟದ ಪಾಡೇನು ಎಂದಿದ್ದರು. ನೀವು ಊಟ ಮಾಡುವುದು ಹೆಚ್ಚಾ, ನಾವು ಅಡುಗೆ ಮಾಡಿ ತಿನ್ನಿಸುವುದು ಹೆಚ್ಚಾ? ಎಂದು ಇಡೀ ಚಿತ್ರತಂಡ ಒಂದೇ ಸಲ ಎದ್ದು ನಿಂತಿದೆ. ಅದರ ಫಲಿತಾಂಶ ಸ್ಪಷ್ಟ: ಕನ್ನಡ ಚಿತ್ರರಂಗದ ಕಿರೀಟಕ್ಕೆ ಕೆಜಿಎಫ್ ವಜ್ರದ ಹರಳನ್ನು ಪೋಣಿಸಿ ನಗುತ್ತಿದೆ.
ಕೆಜಿಎಫ್ ಕನ್ನಡ ಚಿತ್ರರಂಗವನ್ನು ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರ ಜಗತ್ತನ್ನು ಬೆಚ್ಚಿಬೀಳಿಸಿದೆ. ಕನ್ನಡದ ಚಿತ್ರವೊಂದು ಹಾಲಿವುಡ್ ಮಟ್ಟದ ತೂಕವನ್ನು ಉಳಿಸಿಕೊಂಡು ನಿರ್ಮಾಣವಾಗಿದೆಯಲ್ಲ ಎಂದು ಅಚ್ಚರಿ ಮೂಡಿಸುತ್ತಿದೆ. ಅಕ್ಷರಶಃ ಸ್ಯಾಂಡಲ್‍ವುಡ್ ಎದೆ ಉಬ್ಬಿಸಿ ಬೀಗುವಂತೆ ಮಾಡಿದೆ. ಅದಕ್ಕೆ ಮೊಟ್ಟ ಮೊದಲು ಕಾರಣವಾಗಿದ್ದು ನಿರ್ದೇಶಕ ಪ್ರಶಾಂತ್ ನೀಲ್. ಉಗ್ರಂ ನಂತರ ಇವರು ಮಾಡಿದ ಸಿನಿಮಾ ಕೆಜಿಎಫ್. ಉಗ್ರಂನಲ್ಲೇ ಪ್ರಶಾಂತ್ ತಾವೆಂಥ ತಂತ್ರಜ್ಞ ಎಂದು ಸಾಬೀತು ಪಡಿಸಿದ್ದರು. ಅದರ ಮುಂದುವರೆದ ಭಾಗವೇ ಕೆಜಿಎಫ್. ಪ್ರತಿ ಫ್ರೇಮ್, ಪ್ರತಿ ದೃಶ್ಯದಲ್ಲಿ ಪ್ರಶಾಂತ್ ಟಚ್ ಕಾಣುತ್ತದೆ. ಆ ವ್ಯಕ್ತಿಯ ಸಿನಿಮಾ ನಿಯತ್ತು, ಭಕ್ತಿ ಮತ್ತು ಪ್ರೀತಿಗೆ ಸಾಕ್ಷಿ ನೀಡುತ್ತದೆ.
ಕೆಜಿಎಫ್ ಹೆಸರು ಕೇಳಿದಾಕ್ಷಣ ಎಲ್ಲರ ತಲೆಯಲ್ಲಿ ಮೊದಲು ಏಳುವ ಪ್ರಶ್ನೆಯೇ ಏನಿದರ ಕತೆ? ಅಂಥ ಹೊಸದೇನಿದೆ? ಯಾಕೆ ಇಷ್ಟೊಂದು ಮೆಚ್ಚುಗೆಗೆ ಪಾತ್ರವಾಗಿದೆ? ಇದಕ್ಕೆಲ್ಲ ಒಂದೇ ಸಾಲಿನಲ್ಲಿ ಒಂದೇ ಗುಕ್ಕಿನಲ್ಲಿ ಉತ್ತರ ಹೇಳುವುದು ಇಂಪಾಸಿಬಲ್. ಯಾಕೆಂದರೆ ಇದು ಅದನ್ನೆಲ್ಲಾ ಮೀರಿ ನಿಂತ ಸಿನಿಮಾ, ಕನ್ನಡಕ್ಕೆ ಹೊಸತನವನ್ನು ಕೊಟ್ಟ ಸಿನಿಮಾ, ಹೀಗೂ ಮೇಕಿಂಗ್ ಮಾಡಬಹುದು ಎಂದು ತೋರಿಸಿದ ಸಿನಿಮಾ, ಲಾಸ್ಟ್ ಬಟ್ ನಾಟ್ ಲೀಸ್ಟ್. ಇಂಡಿಯನ್ ಫಿಲ್ಮ್ ಇಂಡಸ್ಟ್ರಿಗೆ `ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲೂ ತಾಕತ್ತಿದೆ ಕಣ್ರೋ…’ ಎಂದು ತೊಡೆ ತಟ್ಟುವಂತೆ ಮಾಡಿದ ಸಿನಿಮಾ…
ನಿರ್ದೇಶಕನ ಸಿನಿಮಾ ಭಕ್ತಿಗೆ ಉಘೇ ಉಘೇ! – ಶರಣೆನ್ನುತ್ತೀರಿ ಪ್ರಶಾಂತ್ ನೀಲ್ ದಿಕ್ಕೆಡಿಸುವ ತಾಕತ್ತಿಗೆ!: ನಿಮಗೆ ಹೆಚ್ಚು ಕಾಯಿಸುವುದಿಲ್ಲ. ಕತೆಯನ್ನು ಖುಲ್ಲಂಖುಲ್ಲ ಬಿಚ್ಚಿಡುತ್ತೇವೆ. ಆದರೆ ಎಲ್ಲವನ್ನೂ ಇಲ್ಲೇ ಹೇಳಿಬಿಟ್ಟರೆ ಥೇಟರ್ ಗೆ ಹೋಗಿ ಪಾಪ್ ಕಾರ್ನ್ ತಿಂತಾ ಕೂಡ್ಬೇಕಾಗುತ್ತದೆ. ಸೋ…ಮುತ್ತು ಕೊಟ್ಟ ಹಾಗೆ ಇರಬೇಕು, ಆದರೆ ಕೊಡಲೂ ಬಾರದು. ಅಷ್ಟು ಮತ್ತು ಅಷ್ಟನ್ನೇ ಇಲ್ಲಿ ಹರವಿಡುತ್ತೇವೆ. ಮುಂಬೈನ ಡಾನ್ ಕೋಲಾರದ ಗಣಿಗೆ ಎಂಟ್ರಿ ಕೊಡುತ್ತಾನೆ, ಆತನ ಉದ್ದೇಶ ಬೇರೇನೋ ಆಗಿರುತ್ತದೆ. ಆದರೆ ಆ ಚಿನ್ನದ ಗಣಿಯಲ್ಲಿ ನಡೆಯುತ್ತಿರುವ ಅಮಾನುಷ ಕೃತ್ಯಗಳನ್ನು ನೋಡಿ ಹೈರಾಣಾಗುತ್ತಾನೆ. ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ನರಕ ಅನುಭವಿಸುತ್ತಿರುವುದಕ್ಕೆ ಕಣ್ಣೀರಾಗುತ್ತಾನೆ. ಮುಂದೇನಾಗುತ್ತದೆ ಅನ್ನೋದನ್ನ ಬಡಾ ಪರದೆ ಮೇಲೆ ವಾಚ್ ಇಟ್., ಬಾಯಿಗೆ ಮಾತ್ರ ಅಲ್ಲ, ಕಣ್ಣು ಮತ್ತು ಮನಸಿಗೂ ಒಬ್ಬಟ್ಟು.
ಅಪರೂಪದಲ್ಲೊಂದು ಅಪರೂಪಕ್ಕೆ ಇಂಥ ಸಿನಿಮಾ ಬರುತ್ತದೆ. ಎಲ್ಲರೂ ಹೀರೋ, ಹೀರೋಯಿಸಂಗೆ ಹೆಚ್ಚು ಸ್ಕೋಪ್ ಕೊಡುತ್ತಿರುವಾಗ, ನಡುವೆ ಸದ್ದಿಲ್ಲದೆ ಎದ್ದು ನಿಲ್ಲುತ್ತಾನೆ ನಿರ್ದೇಶಕ. ಪುಟ್ಟಣ್ಣ ಕಣಗಾಲ್ ಅಂಥ ಮಾದರಿ ಸಿನಿಮಾ ಮಾಡುತ್ತಿದ್ದರು. ಹಿಂದಿಯಲ್ಲಿ ಅಮೀರ್ ಖಾನ್ ಅಭಿನಯದ ಲಗಾನ್ ಬಂದಾಗಲೂ ಇದೇ ಮಾತು ಹೆಚ್ಚು ಸೌಂಡ್ ಮಾಡಿತ್ತು. ಅದರ ನಿರ್ದೇಶಕ ಅಶುತೋಷ್ ಗೌರೀಕರ್ ಸಡನ್ಲಿ ಸ್ಟಾರ್ ಆಗಿದ್ದರು. ಒನ್ಸ್ ಅಗೇನ್ ಆಂಡ್ ಆಫ್ಟರ್ ಲಾಂಗ್ ಈಯರ್ಸ್ ಕನ್ನಡದಲ್ಲಿ ನಿರ್ದೇಶಕನ ಸಿನಿಮಾವೊಂದು ಧಗಧಗಿಸುತ್ತಿದೆ. ಡೈರೆಕ್ಟರ್ ಅನ್ನೋದು ಕೇವಲ ನಾಲ್ಕು ಅಕ್ಷರದ ಪದವಲ್ಲ ಎಂದು ತೋರಿಸಿದೆ. ಒಬ್ಬ ನಿರ್ದೇಶಕ ಸರಿಯಾಗಿ ನಿಂತರೆ, ಅದೆಂಥಾ ಹುಚ್ಚೆದ್ದು ಕುಣಿಸುವ ದೃಶ್ಯ ಕಾವ್ಯ ಅರಳಿಸುತ್ತಾನೆ ಅನ್ನೋದಕ್ಕೆ ಇದು ಸ್ಯಾಂಪಲ್. ಹೀಗೊಂದು ಗರ್ವಕ್ಕೆ, ಹೆಮ್ಮೆಗೆ ಮತ್ತು ಅಗತ್ಯಕ್ಕಿಂತ ಹೆಚ್ಚಲ್ಲದ ಅಹಂಕಾರಕ್ಕೆ ಸಾಕ್ಷಿಯಾಗಿದ್ದಾರೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್.
ಏನಿದು ಮೂವತ್ತರ ಆಸುಪಾಸಿನ ಈ ಹುಡುಗನ ತಾಕತ್ತು? ಅದೆಲ್ಲಿ ಇಷ್ಟು ದಿನ ಹೂತಿಟ್ಟಿದ್ದರು? ಎಲ್ಲರೂ ಒಂದೊಂದೇ ಅಸ್ತ್ರವನ್ನು ಬಳಸುತ್ತಿರುವಾಗ ಈ ವ್ಯಕ್ತಿ ಒಂದೇ ಹೊಡೆತಕ್ಕೆ ಹೇಗೆ ಪಾಶು ಪತಾಸ್ತ್ರವನ್ನೇ ಹೆಗಲೇರಿಸಿಕೊಂಡರು? ಎಲ್ಲಿಂದ ಮೊಗೆಮೊಗೆದು ತಂದರು ಚಿನ್ನದ ಗಣಿಯ ಲೋಕವನ್ನು? ಅದೆಷ್ಟು ನಡುರಾತ್ರಿ ನಿದ್ದೆ ಇಲ್ಲದೆ ಸಿನಿಮಾಕ್ಕಾಗಿ ಒದ್ದಾಡಿದರು? ಸಾವಿರಾರು ಜನರನ್ನು ಒಗ್ಗೂಡಿಸಿ ಕೇಕೆ ಹಾಕಿದರು? ಎಲ್ಲವೂ ಪ್ರಶ್ನೆಗಳೇ ಮತ್ತು ಆ ಪ್ರಶ್ನೆಯಲ್ಲೇ ಉತ್ತರವೂ ಇದೆ. ಇದೆಲ್ಲವನ್ನೂ ನಿಭಾಯಿಸುವ, ನಿರ್ವಹಿಸುವ ಮೆದುಳನ್ನು ಆ ದೇವರು ಪ್ರಶಾಂತ್ ತಲೆಯಲ್ಲಿ ತುಂಬಿ ಕಳಿಸಿದ್ದಾನೆ. ಅಫ್‍ಕೋರ್ಸ್ ಕನ್ನಡ ಚಿತ್ರರಂಗಕ್ಕೆ ಧಾರೆ ಎರೆದಿದ್ದಾನೆ.
ಭಾರತೀಯ ಚಿತ್ರರಂಗದಲ್ಲಿ ಕೆಜಿಎಫ್ ಅಮರ – ಯಾರೂ ಅಳಿಸಲು ಸಾಧ್ಯವಿಲ್ಲ ಡೈರೆಕ್ಟರ್ ಹೆಸರ!: ಪ್ರಶಾಂತ್ ನೀಲ್… ಇದೊಂದು ಹೆಸರು ಇನ್ನು ಮುಂದೆ ಭಾರತೀಯ ಚಿತ್ರರಂಗದ ಇತಿಹಾಸಕ್ಕೆ ಹೊಸ ಭಾಷ್ಯ ಬರೆದಿದೆ. ಸಂಜಯ್ ಲೀಲಾ ಬನ್ಸಾಲಿ, ರಾಮ್ ಗೋಪಾಲ್ ವರ್ಮಾ, ರಾಜ್ ಕುಮಾರ್ ಹಿರಾನಿ, ಪುಟ್ಟಣ್ಣ ಕಣಗಾಲ್, ಅಶುತೋಷ್ ಗೌರೀಕರ್, ತಮಿಳಿನ ಬಾಲಾ ಇಂಥ ದಿ ಗ್ರೇಟ್ ಡೈರೆಕ್ಟರ್ ಪಟ್ಟಿಯಲ್ಲಿ ಮೆರೆಯುತ್ತಿದೆ. ಅದಕ್ಕೆ ಸಿಂಗಲ್ ಅಂಡ್ ಸಿನಿಮ್ಯಾಟಿಕ್ ಕಾರಣ ‘ಕೆಜಿಎಫ್’.
ಕತೆ, ಚಿತ್ರಕತೆ, ಸಂಭಾಷಣೆ, ಹಾಡು, ಕ್ಯಾಮೆರಾ, ಸಂಗೀತ, ಕಲಾ ನಿರ್ದೇಶನ, ಸಾಹಸ, ಅಭಿನಯ, ಪಾತ್ರವರ್ಗ, ಕಾಸ್ಟ್ಯೂಮ್…ಒಂದೊಂದು ವಿಭಾಗ ಒಂದೊಂದು ರಣರಂಗ. ಇದರಲ್ಲಿ ಒಂದೇ ಒಂದು ಎಡವಟ್ಟಾದರೂ ಹೂರಣ ಹದಗೆಡುತ್ತದೆ, ಒಗ್ಗರಣೆ ಸಪ್ಪೆಯಾಗುತ್ತದೆ, ಊಟ ರುಚಿಗೆಡುತ್ತದೆ. ಹಾಗಾಗದಂತೆ ಮೈ ತುಂಬಾ ಕಣ್ಣಾಗಿ ಕೆಲಸ ಮಾಡಿದ್ದಾರೆ ಪ್ರಶಾಂತ್. ಒಂದಗುಳು ಹೆಚ್ಚಿಲ್ಲ ಒಂದಗುಳೂ ಕಮ್ಮಿ ಇಲ್ಲ. ಎಲ್ಲವೂ ಆಗ ತಾನೇ ಸ್ನಾನ ಮಾಡಿಬಂದ ಹುಡುಗಿಯ ಹೊಕ್ಕಳಿಂದ ಜಾರುವ ಬಿಸಿ ನೀರು.. ನಿದ್ದೆಯಿಂದ ಎದ್ದು ಆಕಳಿಸುವ ಮಗುವಿನ ಅಬೋಧ ನಗು… ಅಂಥದ್ದೊಂದು ನಿಯತ್ತು ಇದ್ದಿದ್ದಕ್ಕೆ ಇಂದು ಕೆಜಿಎಫ್ ಜನರಿಂದ ಶಿಳ್ಳೆ ಚಪ್ಪಾಳೆ ಹೊಡೆಸಿಕೊಳ್ಳುತ್ತಿದೆ. ಕನ್ನಡದ ಮಣ್ಣಿನ ಘಮಲನ್ನು ದೇಶದ ತುಂಬಾ ಚೆಲ್ಲುತ್ತಿದೆ.
ಪ್ರಶಾಂತ್ ಪ್ರತಿಭೆಗೆ ಚಿನ್ನದ ಗಣಿ ಲೋಕವೊಂದೇ ಸಾಕು. ವಿರಾಮದ ನಂತರ ಬಿಚ್ಚಿಕೊಳ್ಳುವ ಕರಾಳ ಜಗತ್ತನ್ನು ಅವರು ಕ್ಯಾಮೆರಾದ ಮೂಲಕವೇ ಕವಿತೆಯಂತೆ ಕೆತ್ತಿದ್ದಾರೆ. ಒಂದೊಂದು ಫ್ರೇಮಿಗೂ ಉಸಿರು ಇಟ್ಟಿದ್ದಾರೆ. ಕಪ್ಪು ಕಪ್ಪು ಮಣ್ಣು, ನಿತ್ರಾಣದ ದೇಹಗಳ ಆಕ್ರಂದನ, ಕ್ರೂರಿಗಳ ಅಟ್ಟಹಾಸ, ಎಂಬತ್ತರ ದಶಕದ ವಾಸನೆ. ಎಲ್ಲ ಅಂದರೆ ಎಲ್ಲವೂ ನಿಮ್ಮನ್ನು ಹಿಡಿದು ಹೆಡಮುರಿಗಿ ಕಟ್ಟುತ್ತದೆ. ನಾವೇ ನಿಜಕ್ಕೂ ಆ ಭಯಾನಕ ಪ್ರಪಂಚದಲ್ಲಿ ವಾಸಿಸುತ್ತಿದ್ದೇವೆ ಎನ್ನುವ ಭ್ರಮೆ ಮೂಡಿಸುತ್ತದೆ.
ಬಾಲಿವುಡ್ ಗೆ ಬಾಲಿವುಡ್ಡೇ ಧಡಬಡಿಸಿ ಎದ್ದು ನಿಂತಿದೆ. ಎಲ್ಲಿದ್ದ ಈ ಕೆಂಡ ಉಗುಳುವ ಕಣ್ಣಿನ ಹುಡುಗ ಎನ್ನುತ್ತಾ ಮುಖ ಅರಳಿಸಿದೆ. ಹೀಗೊಂದು ಅದ್ಭುತಕ್ಕೆ ಕಾರಣವಾಗಿದ್ದು ರಾಕಿಂಗ್‍ಸ್ಟಾರ್ ಯಶ್. ಎರಡೂವರೆ ವರ್ಷದಿಂದ ಈ ಹುಡುಗ ಸುರಿಸಿದ ಬೆವರಿನಲ್ಲಿ ಎಷ್ಟೆಷ್ಟು ನೋವು, ಖುಷಿ, ಕಷ್ಟ, ಶ್ರದ್ಧೆ ಇದೆ ಎನ್ನುವುದನ್ನು ಇದೊಂದು ಸಿನಿಮಾ ತೋರಿಸಿದೆ.
ಬೆಚ್ಚಿಬೀಳಿಸುತ್ತದೆ ರಾಕಿಂಗ್ ಸ್ಟಾರ್ ರೋರಿಂಗ್ ಅಭಿನಯ! – ಯಶ್ ಅಬ್ಬರಕ್ಕೆ ಆಣೆಕಟ್ಟು ಕಟ್ಟಲು ಆಗದಯ್ಯ!: `ಇಡೀ ಇಂಡಿಯಾನೇ ನಮ್ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡ್ಬೇಕು…ಅದು ನನ್ನ ದೊಡ್ಡ ಆಸೆ…’ ಅದ್ಯಾವ ದಿವ್ಯ ಗಳಿಗೆಯಲ್ಲಿ ಯಶ್ ಈ ಮಾತನ್ನು ಹೇಳಿದರೋ ಏನೋ, ದೇವರು ದೂಸರಾ ಕೆಮ್ಮದೇ ಅದಕ್ಕೆ ತಥಾಸ್ತು ಎಂದಿದ್ದಾನೆ. ಅದರ ಪರಿಣಾಮ ಕೆಜಿಎಫ್ ಅಖಾಡದಲ್ಲಿ ಯಶ್ ಧಗಧಗಿಸುತ್ತಿದ್ದಾರೆ. ಒಬ್ಬ ನಟನಿಗೆ ಎಲ್ಲಾ ಸಮಯದಲ್ಲೂ ಇಂಥ ಅವಕಾಶ ಸಿಗುವುದಿಲ್ಲ. ಸಿಕ್ಕರೂ ಕೆಲವರು ಅದನ್ನು ಬಳಸಿಕೊಳ್ಳಲ್ಲ. ಆದರೆ ಪಡುವಾರಹಳ್ಳಿಯ ಈ ಹೈದ ಕೈಗೆ ಬಂದ ತುತ್ತಿನ ಹಣೆಗೆ ಮುತ್ತಿಟ್ಟು ನಾಲಿಗೆ ಮೇಲೆ ಇಟ್ಟುಕೊಂಡಿದ್ದಾರೆ. ಆ ತುತ್ತಿನ ಪ್ರತಿ ಅಗುಳನ್ನು ಅಗೆದು ಜಗಿದಾಗಲೆಲ್ಲಾ ಹೊಸ ಹೊಸ ಯಶ್ ಜನ್ಮ ತಾಳುತ್ತಾರೆ. ಅದು ಅಸಲಿ ಕಲಾವಿದನ ಲಕ್ಷಣ.
ಕಣ್ಣು, ಕೈ, ಕಾಲು, ಬಾಯಿ, ದೇಹ, ಮಾತು. ಎಲ್ಲಾ ನಟರಿಗೂ ಇರುತ್ತವೆ. ಅಫ್‍ಕೋರ್ಸ್ ಸಾಮಾನ್ಯ ಮನುಷ್ಯರಿಗೂ. ಆದರೆ ಅದನ್ನು ಒಬ್ಬ ಕಲಾವಿದ ಯಾವ ರೀತಿ ತಿದ್ದಿ ತೀಡುತ್ತಾನೆ, ದೇಹವನ್ನೇ ಆಯುಧ ಮಾಡಿಕೊಳ್ಳುತ್ತಾನೆ, ಅದರಿಂದಲೇ ಹೇಗೆ ಜನರನ್ನು ಆವರಿಸಿಕೊಳ್ಳುತ್ತಾನೆ, ಯಾವ ರೀತಿ ತನ್ನನ್ನು ತಾನು ಬಿಚ್ಚಿಡುತ್ತಾನೆ, ಬೆರಗುಗೊಳಿಸುತ್ತಾನೆ. ಫೈನಲೀ ಬೆಚ್ಚಿಬೀಳಿಸುತ್ತಾನೆ? ಆ ನಿಗರ್ವ ಕಾಯಕವನ್ನು ಯಶ್ ಈ ಸಿನಿಮಾದಲ್ಲಿ ಮಾಡಿ ನಕ್ಕಿದ್ದಾರೆ. ನಿಮಗೊಂದು ಮಾತು ನೆನಪಿರಲಿ, ಒಬ್ಬ ಅಪ್ಪಟ ಕಲಾವಿದ ಬೇರೇನೂ ಮಾಡದಿದ್ದರೂ ನಡೆಯುತ್ತದೆ. ಆದರೆ ಬೆಚ್ಚಿ ಬೀಳಿಸಿದಾಗ ಮಾತ್ರ ಇಡೀ ಲೋಕ ಧಡಕ್ಕನೇ ತಿರುಗಿ ನೋಡುತ್ತದೆ. ಯಶ್ ಆ ಹಾದಿಯಲ್ಲಿದ್ದಾರೆ.
ಭೂಗತ ಲೋಕದ ದೊರೆಯಾಗಿ ರಾಕಿಂಗ್ ಸ್ಟಾರ್ ಮೆರವಣಿಗೆ ಹೊರಟಿದ್ದಾರೆ. ಒರಟು ಒರಟು, ಹಸಿ ಹಸಿ, ಡೋಂಟ್ ಕೇರ್ ನೇಚರ್, ಐ ಆಮ್ ರಾಕಿ ಭಾಯ್ ಆಟಿಟ್ಯೂಡ್. ಇದರ ನಡುವೆ ಲೈಟಾದ ರೊಮ್ಯಾಂಟಿಕ್ ಎಳೆಯ ಚುಮುಚುಮು. ಆರಂಭದಿಂದ ಹಿಡಿದು ಕೊನೇ ದೃಶ್ಯದವರೆಗೆ ಯಶ್ ಎಲ್ಲೂ ಕಣ್ಣನ್ನು ಆಚೀಚೆ ಮಾಡದಂತೆ ಕುರ್ಚಿ ತುದಿಗೆ ಕೂಡಿಸುತ್ತಾರೆ. ಬಾಡಿ ಲ್ಯಾಂಗ್ವೇಜ್ ಅನ್ನೋದನ್ನು ಹೀಗೇ ಯೂಸ್ ಮಾಡಿಕೊಳ್ಳಬೇಕೆಂದು ಪಾಠ ಮಾಡಿದ್ದಾರೆ. ಒಂದಳತಿ ರಾಕಿ ಭಾಯ್ ಪಾತ್ರವನ್ನು ಇಂಚಿಂಚು ಬದುಕಿದ್ದಾರೆ. ಅದೇ ಕಾರಣಕ್ಕೆ ನಿಮಗೆ ಹೊಸ ಲೋಕವನ್ನು ತೋರಿಸಿದ್ದಾರೆ.
ಕೇವಲ ತಮ್ಮ ಅಭಿಮಾನಿಗಳಿಗೆ ಮಾತ್ರ ಯಶ್ ಖುಷಿ ಕೊಡುವುದಿಲ್ಲ. ಎಲ್ಲ ವರ್ಗದ ಮನಸುಗಳನ್ನು ಕದ್ದು ಎದ್ದು ಹೋಗುತ್ತಾರೆ. ಅದರಲ್ಲೂ ಕ್ಲ್ಯೆಮ್ಯಾಕ್ಸ್‍ನಲ್ಲಿ ಕೆಂಡ ಕೆಂಡ ಉಗುಳುವ ಕಣ್ಣು, ಮುಖ ಮುಚ್ಚುವ ಜೊಂಪೆ ಜೊಂಪೆ ಬೆವರಿನ ಕೂದಲು, ಎದುರಿದ್ದವರನ್ನು ನುಂಗಿ ಹಾಕುವಂಥ ಲುಕ್ಕು. ಒಂದೊಂದು ಮುಖಭಾವದಲ್ಲಿ ಒಂದೊಂದು ಕಿಕ್ ಕೊಡುತ್ತಾ, ಇನ್ನೆಷ್ಟು ಬೇಕು ಎನ್ನುತ್ತಾ, ಸೋಲುತ್ತಾ, ದಣಿಯುತ್ತಾ ಗೆದ್ದು ಮೀಸೆ ತಿರುವುತ್ತಾರೆ. ಅಲ್ಲಿಗೆ ಒಂಬತ್ತು ತಿಂಗಳು ಹೊಟ್ಟೆಯಲ್ಲಿ ಇಟ್ಟುಕೊಂಡಿದ್ದ ದಿಗ್ಭ್ರಮೆ ಹುಟ್ಟಿಸುವ ಕಲೆಯ ಹೊಕ್ಕಳ ಹುರಿಯನ್ನು ಕತ್ತರಿಸಿದ್ದಾರೆ. ಆ ಮಗು ಎಂಬ ಯಶ್ ನಿಮ್ಮ ಮಡಿಲಲ್ಲಿ ಕೇಕೆ ಹಾಕುತ್ತಿದೆ.
ಇನ್ನು ನಾಯಕಿ ಶ್ರೀನಿಧಿ ಮೊದಲ ಚಿತ್ರದಲ್ಲೇ `ನಾನು ಹೀಗೆ ಬಂದು ಹಾಗೆ ಹೋಗುವ ಹುಡುಗಿಯಲ್ಲ’ ಎಂದು ಪ್ರೂವ್ ಮಾಡಿದ್ದಾರೆ. ಉಳಿದಂತೆ ಶ್ರೀನಿವಾಸಮೂರ್ತಿ, ನೀನಾಸಂ ಅಶ್ವತ್ಥ, ವಸಿಷ್ಟ, ಅಚ್ಯುತ್ ಕುಮಾರ್, ಹೊಸ ಪ್ರತಿಭೆ ರಾಮ್, ಜಗದೀಶ್ ಮಂಗಳೂರ್ ಸೇರಿದಂತೆ ಎಲ್ಲರೂ ನಾನಾ ನೀನಾ ಎನ್ನುವಂತೆ ಅಭಿನಯಿಸಿದ್ದಾರೆ. ಬಾಲಕ ಯಶ್ ಪಾತ್ರದಲ್ಲಿ ಅನ್ಮೋಲ್ ಗೆದ್ದು ಬೀಗುತ್ತಾನೆ. ಅಮ್ಮನಾಗಿ ಅರ್ಚನಾ ಜೋಯಿಸ್ ಕಣ್ಣೀರು ಹಾಕಿಸುತ್ತಾರೆ. ಅಂದ ಹಾಗೆ ಇದರಲ್ಲಿ ಬಹುತೇಕ ಹೊಸಬರೇ ಹಬ್ಬ ಮಾಡಿದ್ದಾರೆ. ಅದರೆ ಯಾರೂ ಹೊಸಬರೆನಿಸಲ್ಲ. ಅದಕ್ಕೆ ನಿರ್ದೇಶಕರು ಇವರಿಂದ ತೆಗೆಸಿರುವ ಕೆಲಸ ಸಾಕ್ಷಿ. ಕೆಜಿಎಫ್ ತಾರಾಗಣದ ವೈಭವ ಹೀಗಿದೆ ನೋಡಿ.
ಒಂದು ಸಿನಿಮಾಕ್ಕೆ ತಂತ್ರಜ್ಞರು ಎಷ್ಟು ಮುಖ್ಯ ಅನ್ನೋದು ತುಂಬಾ ಜನಕ್ಕೆ ಗೊತ್ತಿಲ್ಲ. ಅಸಲಿಗೆ ಇವರನ್ನು ಉದ್ಯಮ ಕೂಡ ಅಷ್ಟೊಂದು ಗಂಭೀರವಾಗಿ ಪರಿಗಣಿಸಲ್ಲ. ಇದರಲ್ಲಿ ಕೆಲವರು ಅಪವಾದ ಇರಬಹುದು. ಬಹುತೇಕ ನಿರ್ಲಕ್ಷ್ಯಕ್ಕೇ ಇವರು ಗುರಿಯಾಗುತ್ತಾರೆ. ಆದರೆ ಕೆಜಿಎಫ್ ರಣರಂಗದಲ್ಲಿ ಯುದ್ಧವನ್ನು ಮಾಡಿ ಗೆದ್ದವರು ಇದೇ ತಂತ್ರಜ್ಞರು. ಪ್ರತಿಯೊಂದು ವಿಭಾಗದಲ್ಲಿ ಇವರು ಮಿಂಚಿದ್ದಾರೆ. ಅಷ್ಟೇ ಅಲ್ಲ, ಒಂದು ಚಿತ್ರಕ್ಕೆ ಇವರು ಹೇಗೆ ಎದೆ ಕೊಟ್ಟು ನಿಲ್ಲಬಲ್ಲರು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಸಂಗೀತ-ಸಂಭಾಷಣೆ-ಛಾಯಾಗ್ರಹಣ ಹಬ್ಬವೋ ಹಬ್ಬ! – ತಂತ್ರಜ್ಞರ ಅಮೋಘ ಕಾಯಕಕ್ಕೆ ಕನ್ನಡಿಗರು ಅಬ್ಬಬ್ಬಾ!: ಛಾಯಾಗ್ರಾಹಕ ಇಡೀ ಚಿತ್ರಕ್ಕೆ ದೊಡ್ಡ ಕಣ್ಣು. ನಟ ನಟಿಯರು ಯಾರನ್ನಾದರೂ ಎದುರು ಹಾಕಿಕೊಂಡಾರು. ಆದರೆ ಕ್ಯಾಮೆರಾಮೆನ್‍ಗಳನ್ನು ಮಾತ್ರ ಮುದ್ದುಮುದ್ದು ಮಾಡುತ್ತಿರುತ್ತಾರೆ. ಯಾಕೆಂದರೆ ಆತ ಯಾವಾಗ ಹೇಗೆ ಬೇಕಾದರೂ ಇವರನ್ನು ತೆರೆ ಮೇಲೆ ತೋರಿಸಬಲ್ಲ. ಅದರರ್ಥ ಇದೇ ಕ್ಯಾಮೆರಾಮೆನ್ ಕೆಲಸ ಎಂದು ತಿಳಿಯಬೇಡಿ. ಅದನ್ನೆಲ್ಲ ಮೀರಿದ ಭುವನ್ ಗೌಡರಂಥ ಸಿನಿಮಾ ಪ್ರೀತಿಯ ಛಾಯಾಗ್ರಾಹಕರೂ ಇರುತ್ತಾರೆ. ಅದು ಏನು ಅನ್ನೋದನ್ನು ಭುವನ್ ಇದೊಂದು ಚಿತ್ರದಲ್ಲಿ ಕೆತ್ತಿ ಕೆತ್ತಿ ತೋರಿಸಿದ್ದಾರೆ.
ಇಡೀ ಸಿನಿಮಾದಲ್ಲಿ ನಿಮಗೆ ಎಲ್ಲೂ ಲೈಟಿಂಗ್ ಕಾಣಿಸುವುದಿಲ್ಲ. ಎಲ್ಲವೂ ನ್ಯಾಚುರಲ್ ಅಥವಾ ಸಹಜ ಬೆಳಕಿನಲ್ಲಿ ಚಿತ್ರಿಸಿದ್ದಾರೆ. ಅದು ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಮಸುಕು ಮಸುಕು ನೀಲಿ, ಮಬ್ಬು ಮಬ್ಬು ಕತ್ತಲು, ಹಳದಿ ಹಳದಿ ಬೆಂಕಿ, ಕಪ್ಪು ಕಪ್ಪು ರಾತ್ರಿ… ಯಾವುದನ್ನು ಹೇಳುವುದು ಯಾವುದನ್ನು ಬಿಡುವುದು. ಪ್ರತಿಯೊಂದು ಫ್ರೇಮ್‍ನಲ್ಲಿ ಗೌಡರ ಒಳಗಣ್ಣು ಎಚ್ಚರವಾಗಿದೆ. ನಿಚ್ಚಳವಾಗಿದೆ. ನೋಡುಗರನ್ನು ಅಚ್ಚರಿ ಮೇಲೆ ಅಚ್ಚರಿ ಹುಟ್ಟಿಸುತ್ತದೆ. ಕೆಲವೊಮ್ಮೆ ಹಿಂದೆಂದೂ ತೇಲದ ಲೋಕದಲ್ಲಿ ಮನೆ ಮಾಡಿಸುತ್ತದೆ. ಅದು ಭುವನ್ ಗೌಡರ ಅಸಲಿ ಹಕೀಕತ್ತು. ಉಳಿದಿದ್ದು ಅವರ ಸಿನಿಮಾ ನಿಗಿ ನಿಗಿ ನಿಯತ್ತು.
ಚಿನ್ನದ ಗಣಿ… ಇಂದಿನ ಜನಾಂಗಕ್ಕೆ ಅಂಥದ್ದೊಂದು ಜಗತ್ತು ಹೇಗಿದೆ ಎಂದೇ ಗೊತ್ತಿಲ್ಲ. ಗಣಿ ಜೀವಂತ ಇದ್ದಾಗಲೂ ಅದನ್ನು ಬಹುತೇಕರು ಇಷ್ಟೊಂದು ಹತ್ತಿರದಿಂದ ನೋಡಿರಲಿಕ್ಕಿಲ್ಲ. ಸೈನೈಡ್ ಬೆಟ್ಟ, ಕಡುಗಪ್ಪು ಗುಡ್ಡ, ಅದರ ಮೇಲೆ ಜೋಪಡಿಗಳು, ಗಣಿಗಾರಿಕೆಯ ಗುಂಗು ಹಿಡಿಸುವ ಧೂಳು, ವಾಟರ್ ಟ್ಯಾಂಕು, ಅದಿರನ್ನು ಸಾಗಿಸುವ ಆ ಕಾಲದ ವಾಹನಗಳು, ಆಗ ಬಳಸುತ್ತಿದ್ದ ಬೃಹತ್ ಸುತ್ತಿಗೆ, ಸಲಾಕೆ, ಹಾರೆ, ಕಬ್ಬಿಣದ ಬುಟ್ಟಿ, ಗುದ್ದಲಿ, ತಗಡಿನ ಶೀಟು… ಪ್ರತಿಯೊಂದನ್ನು ಎಲ್ಲೆಲ್ಲಿಂದಲೋ ತಂದು ನಿಮ್ಮ ಅಂಗೈಯಲ್ಲಿ ನಯಾ ದುನಿಯಾ ತೋರಿಸುತ್ತಾರೆ. ಆ ದಿಕ್ಕೆಡಿಸುವ ಲೋಕವನ್ನು ಜತನದಿಂದ ಕಟ್ಟಿದ್ದು ಕಲಾ ನಿರ್ದೇಶಕ ಶಿವು.
ಸತತ 9 ತಿಂಗಳು ನಿತ್ಯ ಎರಡು ನೂರಕ್ಕೂ ಹೆಚ್ಚು ಜನರು ಕೆಜಿಎಫ್ ಸೆಟ್ ನಿರ್ಮಿಸಲು ಬೆವರು ಸುರಿಸಿದ್ದಾರೆ. ಮಳೆ, ಗಾಳಿಗೆ ಅದು ಮಗುಚಿ ಬಿದ್ದಾಗಲೆಲ್ಲಾ ಮತ್ತೆ ಮತ್ತೆ ಅಷ್ಟೇ ಭಕ್ತಿಯಿಂದ ನಿರ್ಮಿಸಿದ್ದಾರೆ. ಕಲಾ ನಿರ್ದೇಶಕ ಜನ ಸಾಮಾನ್ಯರ ಕಣ್ಣಲ್ಲಿ ನಾಯಕನಂತೆ ಮೆರೆಯುವುದು ಹೀಗೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಆರ್ಟ್ ಡೈರೆಕ್ಷನ್ ವಿಭಾಗಕ್ಕೆ ಶಿವು ಅಂಡ್ ಟೀಮ್ ಹೊಸ ಭರವಸೆ ಕೊಟ್ಟಿದೆ. ಅದೇ ರೀತಿ ಎಪ್ಪತ್ತು, ಎಂಬತ್ತರ ದಶಕದ ಕಾಸ್ಟ್ಯೂಮ್ ಗಳಿಗೆ ಜೀವ ತುಂಬಿದ್ದು ಡಿಸೈನರ್ ಯೋಗಿ. ನಾಯಕ ನಾಯಕಿಯಿಂದ ಹಿಡಿದು ವಿಲನ್, ಸಹ ಕಲಾವಿದರೆಲ್ಲರಿಗೂ ಅಂದಿನ ಕಾಲದ ಉಡುಪನ್ನು ಜೋಡಿಸಿದ್ದಾರೆ. ಅದಕ್ಕೆ ಅಧಿಕೃತತೆ ನೀಡಿದ್ದಾರೆ.
ಸಂಗೀತ ನಿರ್ದೇಶಕ ರವಿ ಬಸ್ರೂರ್ ನಿಮ್ಮನ್ನು ಥೇಟರ್ ನಿಂದ ಹೊರಗೆ ಬಂದ ಮೇಲೂ ಬೆನ್ನು ಹತ್ತುತ್ತಾರೆ. ಅದೆಲ್ಲಿಂದ ಹುಡುಕಾಡಿ ತಂದರು? ಅದ್ಯಾವ ಗಂಧರ್ವ ಲೋಕದಿಂದ ಎತ್ತಿಕೊಂಡು ಬಂದರು? ಒಂದೊಂದು ಮಾತಿಗೂ, ಒಂದೊಂದು ದೃಶ್ಯಕ್ಕೂ, ಒಂದೊಂದು ಮಜಲಿಗೂ, ಒಬ್ಬೊಬ್ಬ ಕಲಾವಿದನಿಗೂ ಅದು ಹೇಗೆ ಅಷ್ಟೊಂದು ಭಿನ್ನ ವಿಭಿನ್ನ ರಾಗಕ್ಕೆ ಕೈಯಾದರು? ಈ ಎಲ್ಲ ಅನುಮಾನಕ್ಕೆ ಸನ್ಮಾನದ ಮೂಲಕ ಎದುರು ನಿಲ್ಲುತ್ತಾರೆ ರವಿ ಬಸ್ರೂರ್. ಹಾಡಿಗಿಂತ ಹಿನ್ನೆಲೆ ಸಂಗೀತದಲ್ಲಿ ಈ ದೈತ್ಯ ಕೊಟ್ಟ ನಾದ ಇದೆಯಲ್ಲ, ಅದು ಅಜರಾಮರ.
`ಕೆಜಿಎಫ್’ಗೆ ಚಿನ್ನದ ಚೌಕಟ್ಟು ಹಾಕಿದ್ಯಾರು! – ಅವರ ಹೆಸರೇ ವಿಜಯ್ ಕಿರಗಂದೂರು!: ಕೆಜಿಎಫ್ ನ ಮಹಾ ಪ್ರಾಣ ಇನ್ನೊಂದಿದೆ. ಅದೇ ಸಂಭಾಷಣೆ. ಕೆಲವು ಮಾತುಗಳನ್ನು ಯಶ್ ಬಾಯಿಂದ ಕೇಳಿದಾಗಲೇ ತೂಕ ಹೆಚ್ಚಾಗುತ್ತದೆ. ಬಿಲ್ಡಪ್ ಅಂಡ್ ಸೆಂಟಿಮೆಂಟ್ ಡೈಲಾಗ್ ಗಳು ಪ್ರೇಕ್ಷಕರಲ್ಲಿ ಕಿಚ್ಚು ಹೊತ್ತಿಸುತ್ತವೆ. ಅದರ ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.
1. ಗಾಯಗೊಂಡ ಸಿಂಹದ ಘರ್ಜನೆಗಿಂತ ಅದರ ಉಸಿರೇ ಭಯಾನಕ.!! 2. ಯಾರು ಮೊದಲು ಹೊಡೆದರು ಅನ್ನೋದು ಮುಖ್ಯ ಆಗಲ್ಲ, ಯಾರು ಮೊದಲು ಕೆಳಗೆ ಬಿದ್ರು ಅನ್ನೋದೇ ಮುಖ್ಯ 3. ಮುಂಬೈ ನಿಮ್ಮಪ್ಪಂದೆ ಕಣೋ… ಆದ್ರೆ ನಿಮ್ಮಪ್ಪ ನಾನು… 4. ಎದೆಯಲ್ಲಿ ಕಲ್ ಇಟ್ಕೊಂಡೋರ್ಗೇ ಯಾವ್ ರಕ್ತಾನೂ ಅಂಟೋದಿಲ್ಲ… 5. ಕ್ಯಾ ಚಾಹಿಯೆರೇ ತೇರೇಕೋ… ದುನಿಯಾ.!! 6. ಇವನು ಹೀರೋ ಅಲ್ಲಾ.. ವಿಲನ್..!!
ಕೆಜಿಎಫ್ ನ ಇನ್ನೊಂದು ಜೀವಾಳ ಸ್ಟಂಟ್ಸ್. ಯಶ್ ಅದಕ್ಕೆ ಇಡಿ ಇಡಿಯಾಗಿ ಜೀವ ತುಂಬಿದ್ದಾರೆ. ಸಿನಿಮಾದ ಉದ್ದಕ್ಕೂ ವೆರೈಟಿ ವೆರೈಟಿ ಫೈಟಿಂಗ್ ದೃಶ್ಯಗಳು ಜೋಶ್ ತುಂಬುತ್ತವೆ. ಹೀಗೆ ಪ್ರಶಾಂತ್ ನೀಲ್ ಪ್ರತಿಯೊಂದು ವಿಭಾಗದಿಂದಲೂ ಕೆಲಸ ತೆಗೆದಿದ್ದಾರೆ. ಕೆಜಿಎಫ್ ದೇಶ ವಿದೇಶದಲ್ಲಿ ಮೆರೆಯುವಂತೆ ಮಾಡಿದ್ದಾರೆ. ಆದರೆ ಇದಕ್ಕೆಲ್ಲ ಒಂದು ಚಿನ್ನದ ಚೌಕಟ್ಟನ್ನು ಹಾಕಿದ ಏಕೈಕ ವ್ಯಕ್ತಿ ಅಂದರೆ ಅದು ನಿರ್ಮಾಪಕ ವಿಜಯ್ ಕಿರಗಂದೂರ್. ಒಂದೊಂದು ಫ್ರೇಮು, ಒಂದೊಂದು ಶಾಟ್, ಒಂದೊಂದು ಸೆಟ್ಟಿಗೆ ಅದೆಷ್ಟು ಲಕ್ಷ ಲಕ್ಷ, ಕೋಟಿ ಕೋಟಿಗಳನ್ನು ಸುರಿದಿದ್ದಾರೋ ಆ ದೇವರಿಗೇ ಗೊತ್ತು. ಬಹುಶಃ ಆ ದೇವರಿಗೆ ಮಾತ್ರ ಸತ್ಯ ಗೊತ್ತಿದ್ದಿದ್ದಕ್ಕೇ ಇಂದು ಕೆಜಿಎಫ್ ಚಿತ್ರವನ್ನು ಜಗತ್ತಿನಾದ್ಯಂತ ಜಾತ್ರೆ ಮಾಡಿಸುತ್ತಿದ್ದಾನೆ ಆ ದೇವ. ಕನ್ನಡ ಚಿತ್ರರಂಗಕ್ಕೆ ಒಬ್ಬ ವಿಜಯ್ ಕಿರಗಂದೂರ್ ಇದ್ದರೆ, ನೂರು ಮುತ್ತಿನಂಥ ಚಿತ್ರಗಳು ತೇರನ್ನೇರಿ ಹೊರಡುತ್ತವೆ. ಹ್ಯಾಟ್ಸಾಫ್ ಟು ಯು ಪೀಪಲ್… ಚಿಯರ್ಸ್…!
ಕೆಜಿಎಫ್ ಚಿತ್ರದ ಬಗ್ಗೆ ನಿಮ್ಮ ಅಭಿಪ್ರಾಯವನ್ನೂ ಕಮೆಂಟ್ ಮಾಡಿ.
ಬೆಂಗಳೂರು: ಒಂದು ಸಿನಿಮಾ ಹಿಟ್ ಆಗಬೇಕೆಂದ್ರೆ ಅದಕ್ಕೆ ತೆರೆಯ ಮೇಲೆ ಮತ್ತು ಹಿಂದಿನ ಕೈಗಳ ಪರಿಶ್ರಮ ಇರುತ್ತದೆ. ಅಂತೆಯೇ ಒಂದು ಸಿನಿಮಾ ಜನಮನದಲ್ಲಿ ಅಚ್ಚಳಿಯದಂತೆ ನೆನಪಿನಲ್ಲಿರಲು ಅದು ತನ್ನದೇ ಆದ ವಿಭಿನ್ನತೆಯನ್ನು ಹೊಂದಿರುತ್ತೆ. ಕನ್ನಡದ ಎವರ್ ಗ್ರೀನ್ ಸಿನಿಮಾಗಳಾದ ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳನ್ನು ಜನ ಇಂದಿಗೂ ನೋಡುತ್ತ ಕುಳಿತವರು ಅತ್ತಿತ್ತ ಕದಡಲ್ಲ. ಕಾರಣ ಕಥೆಯ ಹಿಡಿತ, ಕಲಾವಿದರ ನಟನೆ, ಸಂಗೀತ, ಛಾಯಾಗ್ರಹಣ ಸೇರಿದಂತೆ ಎಲ್ಲ ಅಂಶಗಳು ಅಲ್ಲಿ ಮುಖ್ಯವಾಗಿರುತ್ತವೆ.
ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಎವರ್ ಗ್ರೀನ್ ಸಿನಿಮಾಗಳ ಪಟ್ಟಿಗೆ ಸೇರ್ಪಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರ ಬಿಡುಗಡೆ ಮುನ್ನವೇ ಕೆಜಿಎಫ್ ಎಂಬ ಮಿಂಚಿನ ಬೆಳಕು ಕನ್ನಡದ ಗಡಿದಾಟಿ ಎಲ್ಲಡೆ ಪಸರಿಸುತ್ತಿದೆ. ಕೋಲಾರದ ಚಿನ್ನದ ಗಣಿಯಲ್ಲಿ ಆರಂಭವಾಗುವ ಕಥೆ ಅಲ್ಲಿಯೇ ಅಂತ್ಯವಾಗಲಿದೆ. ಈ ಆದಿ ಮತ್ತು ಅಂತ್ಯಗಳ ನಡುವಿನ ಕಥೆಯೇ ಕೆಜಿಎಫ್. ಕೆಜಿಎಫ್ ಸಿನಿಮಾ ಸೆಟ್ಟೇರಿದಾಗ ಯಶ್ ನಟನೆ ಉಳಿದ ಚಿತ್ರಗಳಂತೆ ಇದು ಇರಬಹುದು ಎಂದು ಹಲವರು ಲೆಕ್ಕಾಚಾರ ಹಾಕಿದ್ದುಂಟು. ಈ ಹಿಂದೆ ಯಶ್ ಹೆಚ್ಚಾಗಿ ಲವರ್ ಬಾಯ್ ಪಾತ್ರ ಮತ್ತು ಮಂಡ್ಯದ ಪಡ್ಡೆ ಹುಡುಗನ ಗೆಟಪ್ ನಲ್ಲಿ ಅಭಿಮಾನಿಗಳನ್ನು ಅಕರ್ಷಿಸಿದ್ದುಂಟು. ಮೊಗ್ಗಿನ ಮನಸ್ಸಿನಿಂದ ಅರಂಭವಾದ ಯಶ್ ಪಯಣ ಕೆಜಿಎಫ್ ನಿಲ್ದಾಣದಲ್ಲಿದೆ.
ಮೊಗ್ಗಿನ ಮನಸ್ಸಿನ ಚೆಲುವನಾಗಿ ಸಿನಿ ಅಂಗಳಕ್ಕೆ ಪಾದಾರ್ಪಣೆ ಮಾಡಿದ ಯಶ್, ಇಂದು ರಣ ರಣ ಲುಕ್ ನಲ್ಲಿ ಜನರ ಮುಂದಿದ್ದಾರೆ. ಅಂದಿಗೂ-ಇಂದಿಗೂ ಹಲವು ಏಳು ಬೀಳುಗಳನ್ನು ಕಂಡಿರುವ ಯಶ್ ಹೊಸ ದಾಖಲೆಯ ಬರೆಯುವ ಹುಮ್ಮಸ್ಸಿನಲ್ಲಿರೋದಂತು ಸತ್ಯ. ಚಿತ್ರತಂಡ ಆರಂಭದಿಂದಲೂ ಇದೊಂದು ಭಿನ್ನ ಸಿನಿಮಾ ಅಂತಾನೇ ಹೇಳುತ್ತಾ ಬರುತ್ತಿತ್ತು. ಅಂದು ಚಿತ್ರತಂಡ ಹೇಳಿದ ಮಾತು ಸತ್ಯ ಎಂಬುವುದು ಹಲವರಿಗೆ ಇಂದು ಮನವರಿಕೆ ಆಗಿದ್ದಂತು ನಿಜ. ಈ ಹಿಂದೆ ಬೇರೆ ಭಾಷೆಯ ಸಿನಿಮಾಗಳು ಟ್ರೇಲರ್ ರಿಲೀಸ್ ಮಾಡುವಾಗ ಕನ್ನಡದ ಪತ್ರಕರ್ತರು ಆಯಾ ಸ್ಥಳಕ್ಕೆ ಅಂದ್ರೆ ಚೆನ್ನೈ, ಹೈದರಾಬಾದ್, ಮುಂಬೈ ಹೋಗುತ್ತಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಬೇರೆ ಭಾಷೆಯ ಪತ್ರಕರ್ತರು ಬಂದಿರೋದು ಈ ಚಿತ್ರದ ಮತ್ತೊಂದು ವಿಶೇಷ.
ಮೊದಲ ಗೆಲುವು:
ರಾಕಿಂಗ್ ಸ್ಟಾರ್ ಹುಟ್ಟುಹಬ್ಬದ ದಿನ ಮೊದಲ ಟೀಸರ್ ಬಿಡುಗಡೆ ಆಗಿತ್ತು. ಒಂದೇ ದಿನ ಅಭಿಮಾನಿಗಳ ಹರ್ಷ ಇಮ್ಮಡಿಗೊಂಡ ದಿನ. ಒಂದು ವರ್ಷದಿಂದ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಯಶ್ ಕೆಜಿಎಫ್ ಫಸ್ಟ್ ಲುಕ್ ಬಿಡುಗಡೆ ಆಗಿತ್ತೆ ಹೊರತು ಒಂದೇ ಒಂದು ವಿಡಿಯೋ ಹೊರ ಬಂದಿರಲಿಲ್ಲ. 2018 ಜನವರಿ 8ರಂದು ಯಶ್ ಅವರಿಗೆ ಬರ್ತ್ ಡೇ ಗಿಫ್ಟ್ ರೂಪದಲ್ಲಿ ಕೆಜಿಎಫ್ ಟೀಸರ್ ಬಿಡುಗಡೆ ಆಗಿತ್ತು. ಈ ಟೀಸರ್ ನಲ್ಲಿಯೂ ಚಿತ್ರತಂಡ ತನ್ನ ವಿಶೇಷತೆಯನ್ನು ತೋರಿಸಿತ್ತು. ಸಿನಿಮಾದ ದೃಶ್ಯಗಳ ಜೊತೆಗೆ ಮೇಕಿಂಗ್ ನ ಕೆಲ ತುಣುಕುಗಳನ್ನು ಸೇರಿಸಿ ಟೀಸರ್ ರೂಪದಲ್ಲಿ ಹೊರತರಲಾಗಿತ್ತು. “17 ಸಾವಿರ ವರ್ಷಗಳ ಯುದ್ಧದ ಇತಿಹಾಸ, ಅದರಲ್ಲಿ ಕದನಗಳು ಎಷ್ಟೋ ನಡೆದಿವೆ. ಎಷ್ಟೋ ನೆತ್ತರು ಹರಿದಿದೆ. ಆದ್ರೆ ನಮ್ಮ ನೆನಪಲ್ಲಿ ಉಳಿಯೋದು.. ಇಬ್ಬರೇ. ಭಯ ಹುಟ್ಟಿಸಿದವನು, ಭಯ ಸಾಯಿಸಿದವನು. ಇವನು ಅವೆರಡನ್ನು ಮಾಡಿದ್ದ” ಎಂಬ ಹಿನ್ನೆಲೆ ಧ್ವನಿಯಲ್ಲಿ ಟೀಸರ್ ಮೂಡಿ ಬಂದಿತ್ತು.
ಕನ್ನಡದ ನಟನ ಸಿನಿಮಾದ ಟೀಸರ್ ಬಿಡುಗಡೆಯಾದಾಗ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯವಾಗುತ್ತದೆ. ಕೆಜಿಎಫ್ ಟೀಸರ್ ಬಿಡುಗಡೆಯಾದಾಗ ತಮಿಳುನಾಡಿನಲ್ಲಿ ತನ್ನ ಮೊದಲ ಹೆಜ್ಜೆಯ ಗುರುತು ಮೂಡಿಸಿತ್ತು. ಆ ಟೀಸರ್ ಕಾಲಿವುಡ್ ಅಣ್ತಾಮ್ಮದಿಂರನ್ನು ಆಕರ್ಷಿಸಿತ್ತು. ತಮಿಳುನಾಡಿನ ಅಭಿಮಾನಿಗಳು ಯಶ್ ಕಟೌಟ್ ಹಾಕಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಅದುವೇ ಕೆಜಿಎಫ್ ಚಿತ್ರದ ಮೊದಲ ಗೆಲುವು.
ಟೀಸರ್ ಬಿಡುಗಡೆ ಬಳಿಕ ಸುಮಾರು 6ರಿಂದ 7 ತಿಂಗಳು ಕೆಜಿಎಫ್ ಸದ್ದಿಲ್ಲದೇ ಯಶಸ್ಸಿನ ಸಿದ್ಧತೆಯಲ್ಲಿ ತೊಡಗಿಕೊಂಡಿತ್ತು. ಈ ಮಧ್ಯೆ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ ಎಂಬ ವಿಷಯ ಹೊರ ಬಂತು. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಯೊಬ್ಬರ ಪ್ರಶ್ನೆಗೆ ಉತ್ತರಿಸುವಾಗ ಚಿತ್ರ ನವೆಂಬರ್ ತಿಂಗಳಲ್ಲಿ ಹೊರ ತರಲು ಸಿದ್ಧತೆ ನಡೆಸಲಾಗುತ್ತಿದೆ ಅಂತಾ ಹೇಳುವ ಮೂಲಕ ರಾಕಿಂಗ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದರು. ಅದ್ರೆ ಪೋಸ್ಟ್ ಪ್ರೊಡೆಕ್ಷನ್ ಕೆಲಸ ತಡವಾದ್ದರಿಂದ ಚಿತ್ರತಂಡ ಅಧಿಕೃತವಾಗಿ ಡಿಸೆಂಬರ್ 21ರಂದು ರಿಲೀಸ್ ಆಗುತ್ತಿದೆ ಎಂದು ಪ್ರಕಟಿಸಿತು.
ರಾಕಿಂಗ್ ಸಾಥ್:
ಪಂಚ ಭಾಷೆಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದಾಗ ಕೆಜಿಎಫ್ ಗೆ ಸಾಥ್ ನೀಡಿದ್ದು, ತಮಿಳು ನಟ ವಿಶಾಲ್, ಬಾಲಿವುಡ್ ನಟ ಫರ್ಹಾನ್ ಅಖ್ತರ್, ಹೊಂಬಾಳೆ ಫಿಲ್ಮ್ಸ್, ಲಹರಿ ಮ್ಯೂಸಿಕ್ ಸಂಸ್ಥೆ ಮತ್ತು ಎಕ್ಸೆಲ್ ಮೂವೀಸ್ ಸೇರಿದಂತೆ ಎಲ್ಲ ಭಾಷೆಯ ನಿರ್ಮಾಪಕರು ಕೆಜಿಎಫ್ ಖರೀದಿಗೆ ಮುಂದಾದರು. ಹೀಗೆ ಎಲ್ಲ ಭಾಷೆಯಲ್ಲಿ ಬಲಾಡ್ಯ ಸಂಸ್ಥೆಗಳೇ ಕೆಜಿಎಫ್ ಬೆನ್ನಿಗೆ ನಿಂತಿವೆ.
ನವೆಂಬರ್ 11ರಂದು ಬಿಡುಗಡೆಯಾದ ಟ್ರೇಲರ್ ಭೂಗತ ಲೋಕದ ಕರಾಳ ಸತ್ಯವನ್ನು ಕೆಜಿಎಫ್ ತೋರಿಸಲಿದೆ ಎಂಬುವುದನ್ನು ಸಾರಿ ಹೇಳಿತ್ತು. ಓರ್ವ ಕಥಾನಾಯಕನ ಜೀವನದ ಏರುಪೇರುಗಳನ್ನು ತುಂಬಾ ಸ್ಪಷ್ಟವಾಗಿ ಪ್ರಶಾಂತ್ ನೀಲ್ ತೋರಿಸುವ ಪ್ರಯತ್ನ ಟ್ರೇಲರ್ ನಲ್ಲಿ ಕಂಡಿತ್ತು. ಇನ್ನು ಟ್ರೇಲರ್ ಆರಂಭದಲ್ಲಿ ಕೇಳಿಬರುವ ಹಿನ್ನೆಲೆ ಧ್ವನಿ ನೋಡುಗರಲ್ಲಿ ರೋಮ ರೋಮಗಳಲ್ಲಿ ರೋಮಾಂಚನ ಮಾಡುವಲ್ಲಿ ಯಶ್ವಸಿಯಾಗಿತ್ತು.
1951ರಂದು ಕೋಲಾರದಲ್ಲಿ ಆರಂಭವಾಗುವ ಚಿತ್ರಕಥೆ, ಮುಂಬೈನತ್ತ ಸಾಗಿ ಬರುತ್ತದೆ. ಮುಂಬೈ ಭೂಗತ ಲೋಕದ ಬಾದ್ ಶಾ ಆಗುವ ರಾಕಿ ಕೆಜಿಎಫ್‍ಗೆ ಹೇಗೆ ಬರುತ್ತಾನೆ. ಮುಂಬೈನಲ್ಲಿ ಡಾನ್ ನಾಗಿ ಬೆಳೆಯುವ ರಾಕಿ ಕೋಲಾರದ ಕೆಜಿಎಫ್ ಗೆ ಹೇಗೆ ಬರುತ್ತಾನೆ. ಆತನ ಮೂಲ ಕಥೆ ಏನೆಂಬುದನ್ನು ನೀವು ಸಿನಿಮಾದಲ್ಲಿ ಕಾಣಬಹುದು. ಆದ್ರೆ ಟ್ರೇಲರ್ ನಲ್ಲಿ ಎಲ್ಲವನ್ನು ತಿಳಿಸಿರುವ ನಿರ್ದೇಶಕ ಕಥೆಯ ಮೂಲವನ್ನು ಎಲ್ಲಿಯೂ ಬಿಟ್ಟುಕೊಟ್ಟಿರಲಿಲ್ಲ.
ಪಂಚ ಭಾಷೆಗಳಲ್ಲಿ ತಯಾರಾಗಿರುವ ಕೆಜಿಎಫ್ ಚಿತ್ರದ ಶೂಟಿಂಗ್ ಮೈಸೂರು, ಕೋಲಾರ, ಮುಂಬೈ, ಚೆನ್ನೈ, ಉತ್ತರ ಕರ್ನಾಟಕ ಸೇರಿದಂತೆ ಹಲವು ಭಾಗಗಳಲ್ಲಿ ನಡೆಸಲಾಗಿದೆ. ಈ ಚಿತ್ರದ ವಿತರಣಾ ಹಕ್ಕನ್ನು ಅನಿಲ್ ತಡಾನಿ, ರಿತೇಶ್ ಸಿದ್ವಾನಿ, ಫರ್ಹಾನ್ ಅಕ್ತರ್ ತೆಗೆದುಕೊಂಡಿದ್ದು ದೇಶಾದ್ಯಂತ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಬಾಹುಬಲಿ ಎಂಬ ಕಾನ್ಸೆಪ್ಟ್ ಮಾಡಿ, ಎಲ್ಲಾ ಭಾಷೆಗೂ ಇದು ಅನ್ವಯವಾಗುತ್ತೆ ಅಂತ ಹೇಳಿಕೊಟ್ಟ ರಾಜಮೌಳಿ ಅವರ ಹಾದಿಯನ್ನ ನಾವು ಅನುಕರಿಸುತ್ತಿದ್ದೇವೆ. ಕೆಜಿಎಫ್ ಸಿನಿಮಾ ಕೂಡ ಯೂನಿವರ್ಸಲ್ ಕಾನ್ಸೆಪ್ಟ್. ಆದ್ದರಿಂದ ಎಲ್ಲಾ ಭಾಷೆಯಲ್ಲಿ ಬಿಡುಗಡೆ ಮಾಡೋದಕ್ಕೆ ಜಗತ್ತಿನಾದ್ಯಂತ ತೆರೆಗೆ ತರೋದಕ್ಕೆ ಪ್ಲ್ಯಾನ್ ಮಾಡಿದ್ದೇವೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.
ನಿರ್ದೇಶಕ ಪ್ರಶಾಂತ್ ನೀಲ್ ಮನದಾಳದ ಮಾತು:
ತಾಯಿ ಮತ್ತು ಒಂದು ಮಗುವಿನ ಬಾಂಧವ್ಯವನ್ನ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇನೆ. ಟ್ರೇಲರ್ ಮತ್ತು ಟೀಸರ್ ನೋಡಿದವರು 70ರ ದಶಕದ ಅಂತಾನೇ ತಿಳಿದಿರ್ತಾರೆ. ಆದ್ರೆ ತಾಯಿ ಮತ್ತು ಮಗನ ಸೆಂಟೆಮೆಂಟ್ ನಮ್ಮ ಚಿತ್ರದ ಮೂಲ ಕಥೆ. 1970ರ ದಶಕವನ್ನ ಚಿತ್ರಕ್ಕಾಗಿ ಪುನರ್ ನಿರ್ಮಾಣ ಮಾಡಬೇಕಿತ್ತು. ಹಾಗಾಗಿ ಅಂದಿನ ಉಡುಪು, ಮಾತಿನ ಶೈಲಿ, ಜೀವನ ಕ್ರಮ, ಸ್ಥಳ ಆಯ್ಕೆಯ ಬಗ್ಗೆ ರಿಸರ್ಚ್ ಮಾಡಲು ನಮ್ಮ ತಂಡ ಎರಡು ವರ್ಷ ಕೆಲಸ ಮಾಡಿದೆ. ಚಿತ್ರದ ಪ್ರತಿಯೊಂದು ಅಂಶವನ್ನು ಪ್ರಾಯೋಗಿಕವಾಗಿ ಪ್ರಯತ್ನಿಸಲಾಯಿತು. ಫೋಟೋ ಶೂಟ್, ಸ್ಕೆಚ್ ಮಾಡಿ ಎಲ್ಲವನ್ನು 1970ರ ಕಾಲದಂತೆ ನಿರ್ಮಿಸಿಲು ಮಾಡಲು ಚಿತ್ರತಂಡ ಸಾಕಷ್ಟು ಪ್ರಯತ್ನ ಮಾಡಿದೆ ಎಂದು ಚಿತ್ರದ ಅನುಭವವನ್ನು ಪ್ರಶಾಂತ್ ನೀಲ್ ಪಬ್ಲಿಕ್ ಟಿವಿ ಜೊತೆ ಹಂಚಿಕೊಂಡಿದ್ದರು.
ಟ್ರೇಲರ್ ಸಾಕಷ್ಟು ಸದ್ದು ಮಾಡುತ್ತಿರುವಾಗಲೇ ಚಿತ್ರತಂಡ ಐದು ಭಾಷೆಗಳಲ್ಲಿಯೂ ‘ಸಲಾಂ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಿತು. ಒಬ್ಬ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿಯಾದ ಕಥೆಯನ್ನು ಹೇಳಿತ್ತು. 70ರ ದಶಕದಲ್ಲಿ ಮುಂಬೈ ಅಧಿಪತಿಯಾಗುವ ರಾಕಿಯ ತಾಕತ್ತನ್ನು ಸಲಾಮ್ ರಾಕಿ ಭಾಯ್ ಹಾಡಿನ ಪದಗಳು ವರ್ಣನೆ ಮಾಡಿದ್ದವು. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆದ ಮರುದಿನವೇ ಸಿನಿಮಾದ ಎರಡನೇ ಟ್ರೇಲರ್ ಬಿಡುಗಡೆ ಆಯ್ತು. ಮತ್ತೊಂದು ಟ್ರೇಲರ್ ರಿವೀಲ್ ಬಿಡುಗಡೆಯಾದ ಕಥೆಯ ಮತ್ತೊಂದು ಶೇಡ್ ಇದರಲ್ಲಿ ತೋರಿಸಲಾಗಿದೆ.
ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಸಾಮಥ್ರ್ಯವುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿತ್ತು.
ಹೀಗೆ ಚಿತ್ರ ದಿನದಿಂದ ದಿನಕ್ಕೆ ಹೊಸ ಹೊಸ ಕುತೂಹಲವನ್ನು ಅಭಿಮಾನಿಗಳಲ್ಲಿ ಹುಟ್ಟಿಸುತ್ತಿದ್ದು, ಭಾನುವಾರ ಸೆಂಟಿಮೆಂಟ್ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಲಿದೆ. ಯಶ್ ‘ರಾಕಿ’ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀನಿಧಿ ರಾಕಿಂಗ್ ಸ್ಟಾರ್ ಗೆ ಜೊತೆಯಾಗಿದ್ದಾರೆ. ರವಿಶಂಕರ್ ಸೋದರ ಅಯ್ಯಪ್ಪ ಖಳನಾಯಕನಾಗಿ ನಟಿಸಿದ್ದಾರೆ. ಉಳಿದಂತೆ ಅನಂತ್ ನಾಗ್ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ. ವಿಶೇಷ ಪಾತ್ರದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ಬಾಲಿವುಡ್ ಗೋಲ್ಡ್ ಚೆಲುವೆ ಮೌನಿ ರಾಯ್ ನಟಿಸಿದ್ದಾರೆ.
ಬೆಂಗಳೂರು: ಕನ್ನಡದ ಕೆಜಿಎಫ್ ಕರುನಾಡ ಗಡಿ ದಾಟಿದ್ದು, ಎಲ್ಲಡೆ ರಾಕಿಯ ಗುಂಗು ಕಾಣುತ್ತಿದೆ. ಕೆಜಿಎಫ್ ಚಿತ್ರದ ವಿಶೇಷ ಕಾರ್ಯಕ್ರಮವೊಂದನ್ನು ಡಿಸೆಂಬರ್ 9ರಂದು ಹೈದರಾಬಾದ್ ನಲ್ಲಿ ನಡೆಯಲಿದೆ. ಈ ಸಂಬಂಧ ಯಶ್ ತಮ್ಮ ಫೇಸ್ ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದಾರೆ.
ಸಿನಿಮಾ ರಿಲೀಸ್ ಮುನ್ನ ಟಾಲಿವುಡ್ ಮತ್ತು ಬಾಲಿವುಡ್ ಅಂಗಳದಲ್ಲಿ ದೊಡ್ಡ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ. ಅದರಂತೆ ಕೆಜಿಎಫ್ ಚಿತ್ರತಂಡ ಹೈದರಾಬಾದ್ ನಲ್ಲಿ ಸಿನಿಮಾದ ಇವೆಂಟ್ ಏರ್ಪಡಿಸಿದೆ. ಹೈದರಾಬಾದ್ ನಗರದ ಜ್ಯೂಬ್ಲಿ ಹಿಲ್ಸ್, ಜೆಆರ್‍ಸಿ ಕನ್ವೆಂನಷನ್ ನಲ್ಲಿ ಸಂಜೆ 6.30ಕ್ಕೆ ಬಾಹುಬಲಿ ನಿರ್ದೇಶಕ ರಾಜಮೌಳಿ ಅವರ ಜೊತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
ಮಂಗಳವಾರ ಸಂಜೆ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋವನ್ನು 5 ಭಾಷೆಗಳಲ್ಲಿಯೂ ರಿಲೀಸ್ ಆಗಿತ್ತು. ಬುಧವಾರ ಚಿತ್ರದ ಎರಡನೇ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಭರವಸೆಯನ್ನು ಹೆಚ್ಚಿಸಿದೆ.
ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ. ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.
ಬೆಂಗಳೂರು: ದೇಶದ ಬಹುನಿರೀಕ್ಷಿತ ಯಶ್ ಅಭಿನಯದ ಸಿನಿಮಾ ಕೆಜಿಎಫ್ ಇದೇ ತಿಂಗಳು 21ರಂದು ಬಿಡುಗಡೆ ಆಗಲಿದೆ. ಇಂದು ಚಿತ್ರದ ‘ಸಲಾಮ್ ರಾಕಿ ಭಾಯ್’ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚು ಮಾಡುವಂತೆ ಮಾಡಿದೆ.
ಕೋಲಾರದ ಕೆಜಿಎಫ್‍ನ ಓರ್ವ ಸಾಮಾನ್ಯ ಹುಡುಗ ಮುಂಬೈ ಭೂಗತ ಲೋಕದ ಅಧಿಪತಿ ಆದಾಗ ಚಿತ್ರದಲ್ಲಿ ಈ ಹಾಡು ಬರುತ್ತೆ ಎಂದು ಹೇಳಲಾಗುತ್ತಿದೆ. ಹಾಡಿನ ಪ್ರತಿಯೊಂದು ಸಾಲುಗಳು ಭೂಗತ ಲೋಕದ ಅಧಿಪತಿಯಾದ ರಾಕಿಯನ್ನು ವರ್ಣನೆ ಮಾಡುತ್ತಿವೆ. ಹಾಡಿನ ಚಿತ್ರೀಕರಣ ಸಂಪೂರ್ಣ 70ರ ದಶಕದ ಮಾದರಿಯಲ್ಲಿ ಮೂಡಿ ಬಂದಿದೆ. ಚಿತ್ರದ ಟ್ರೇಲರ್ ಈಗಾಗಲೇ 1 ಕೋಟಿಗೂ ಅಧಿಕ ವ್ಯೂವ್ ಪಡೆದುಕೊಂಡಿದೆ.
ಚಿತ್ರದ ಟೀಸರ್ ಮತ್ತು ಟ್ರೇಲರ್ ಎರಡು ಕೆಜಿಎಫ್ ಇದೊಂದು ಭಿನ್ನ ಸಿನಿಮಾ ಅಂತಾ ಎಂಬುದನ್ನು ಸಾಬೀತು ಮಾಡಿದ್ದವು. ಖಡಕ್ ಹಿನ್ನೆಲೆ ಧ್ವನಿಯಿಂದ ಆರಂಭವಾಗಿದ್ದ ಟೀಸರ್ ಮತ್ತು ಟ್ರೇಲರ್ ಇದೊಂದು ಪಕ್ಕಾ ಮಾಸ್ ಆ್ಯಂಡ್ ಎಂಟರ್ ಟೈನ್ ಮೆಂಟ್ ಕಥೆ ಒಳಗೊಂಡಿದೆ ಎಂಬುದನ್ನು ಸಾರಿ ಹೇಳಿದ್ದವು. ಭೂಗತ ಲೋಕದ ಅಧಿಪತಿಯಾಗುವ ರಾಕಿ ಸಹ ಓರ್ವ ಮಗ. ತಾಯಿ ಮತ್ತು ಮಗನ ಪ್ರೀತಿಯನ್ನು ಚಿತ್ರದಲ್ಲಿ ಕಾಣಬಹುದು ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಈ ಹಿಂದೆ ಹೇಳಿದ್ದರು.
ಸದ್ಯ ಹಾಡನ್ನು ಲಹರಿ ಮ್ಯೂಸಿಕ್ ಯುಟ್ಯೂಬ್ ಅಕೌಂಟ್ ನಲ್ಲಿ ನೋಡಬಹುದಾಗಿದೆ. ಲಹರಿ ಮ್ಯೂಸಿಕ್ ಸಂಸ್ಥೆ ಬರೋಬ್ಬರಿ 3 ಕೋಟಿ 60 ಲಕ್ಷ ರೂಪಾಯಿ ಖರ್ಚಿನಲ್ಲಿ ಆಡಿಯೋದ ಹಕ್ಕನ್ನು ಖರೀದಿಸಿದ್ದು ವಿಶೇಷವಾಗಿದೆ. ಇದು `ಕೆಜಿಎಫ್’ನ ಮೊದಲ ಹಾಡಾಗಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ. ಕ್ರಮೇಣವಾಗಿ ಒಂದೊಂದೇ ಹಾಡುಗಳು ರಿಲೀಸ್ ಆಗಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ತಾರಕ್’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ತಾರಕ್ ಚಿತ್ರತಂಡ ದರ್ಶನ್ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ.
ಟ್ರೇಲರ್ ನಲ್ಲಿ ದರ್ಶನ್ ಕ್ಲಾಸಿಕ್, ಸ್ಟೈಲಿಶ್ ಲುಕ್ ಮತ್ತು ಆಕ್ಷನ್ ಮೂಲಕ ಗಮನ ಸೆಳೆದಿದ್ದಾರೆ. `ತಾರಕ್’ ದರ್ಶನ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದು, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ದರ್ಶನ ರಗ್ಬಿ ಪ್ಲೇಯರ್ ಪಾತ್ರದಲ್ಲಿ ಮಿಂಚಿದ್ದಾರೆ. ತಾರಕ್ ಸಿನಿಮಾವನ್ನು ಮಿಲನ ಪ್ರಕಾಶ್ ನಿರ್ದೇಶಿಸಿದ್ದು, ವಿಶೇಷ ಪಾತ್ರದಲ್ಲಿ ನಟ ದೇವರಾಜ್ ನಟಿಸಿದ್ದಾರೆ. ಶೃತಿ ಹರಿಹರನ್ ಹಾಗೂ ಶಾನ್ವಿ ಶ್ರೀವಾತ್ಸವ್ ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದಲ್ಲಿ ಒಟ್ಟಾರೆ 6 ಹಾಡುಗಳಿವೆ. ಬಾಲಿವುಡ್ ಸಿಂಗರ್ ಅರ್ಮಾನ್ ಮಲ್ಲಿಕ್ ಎರಡು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಗಾಯಕ ವ್ಯಾಸ್, ವಿಜಯ್ ಪ್ರಕಾಶ್ ಮತ್ತು ಗಾಯಕಿಯರಾದ ಶ್ರೇಯಾ ಘೋಷಾಲ್, ಇಂದು ನಾಗರಾಜ್, ನೀತಿ ಮೋಹನ್ ಕಂಠಸಿರಿಯಲ್ಲಿ ಹಾಡುಗಳು ಮೂಡಿಬಂದಿವೆ.
ಕೇವಲ ಟೀಸರ್ ನಿಂದಾಗಿಯೇ ತಾರಕ್ ಚಿತ್ರ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಅದಕ್ಕೆ ಜೊತೆಯಾಗಿ ಇಂದು ಟ್ರೇಲರ್ ಬಿಡುಗಡೆಯಾಗಿದೆ. ಈಗಾಗಲೇ ಸಿನಿಮಾದ ಟೀಸರ್ 10 ಲಕ್ಷಕ್ಕೂ ಅಧಿಕ ವ್ಯೂವ್‍ಗಳನ್ನು ಪಡೆದುಕೊಂಡಿದೆ.
ಟ್ರೇಲರ್ ನೋಡಿದ ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಗುಣಗಾನ ಮಾಡುತ್ತಿದ್ದಾರೆ. ಇದೇ ತಿಂಗಳು 29ರಂದು ತಾರಕ್ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಲಹರಿ ಮ್ಯೂಸಿಕ್ ಯೂಟ್ಯೂಬ್ ಖಾತೆಯಲ್ಲಿ ಚಿತ್ರದ ಟ್ರೇಲರ್ ನೀವೂ ನೋಡಬಹುದು.