Tag: ಲಷ್ಕರ್-ಎ-ತೈಬಾ

  • ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ – ನೆನೆಪಿದೆಯಾ ಆ ಕರಾಳ ದಿನಗಳು..?

    ಮುಂಬೈ ಭಯೋತ್ಪಾದಕ ದಾಳಿಗೆ 15 ವರ್ಷ – ನೆನೆಪಿದೆಯಾ ಆ ಕರಾಳ ದಿನಗಳು..?

    ಮುಂಬೈ: ಹದಿನೈದು ವರ್ಷಗಳ ಹಿಂದೆ ಈ ದಿನ (26/11/2008) ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ (Mumbai Terror Attacks) 166 ಜನ ಬಲಿಯಾಗಿದ್ದರು. 10 ಭಯೋತ್ಪಾದಕರ ಗುಂಪಿನ ಈ ಸಂಘಟಿತ ದಾಳಿ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಭಾರೀ ಸಂಚಲನ ಮೂಡಿಸಿತ್ತು. ಈ ಭೀಕರ ದಾಳಿ ನಡೆದು ಅದರ ತೀವ್ರತೆ ಇಂದಿಗೂ ಕಡಿಮೆಯಾಗಿಲ್ಲ. ಕುಟುಂಬಗಳ ರೋಧನೆ, ದಾಳಿಯಿಂದ ಕಲಿತ ಪಾಠಗಳೂ ಇಂದಿಗೂ ಮರೆತಿಲ್ಲ. ಮುಂಬೈ ದಾಳಿಯ ನಂತರ ಪಾಕಿಸ್ತಾನವು ಭಾರತದ (India vs Pakistan) ಪಾಲಿಗೆ ಶತ್ರು ರಾಷ್ಟ್ರವಾಗಿಯೇ ಉಳಿದುಬಿಟ್ಟಿದೆ. ಪ್ರತಿ ವರ್ಷವೂ ನವೆಂಬರ್‌ 26ನೇ ತಾರೀಖು ಬಂದಾಗೆಲ್ಲಾ ಇಡೀ ದೇಶದ ಜನ ಈ ದಾಳಿಯನ್ನ ನೆನೆದು ಶತ್ರು ರಾಷ್ಟ್ರಗಳ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.

    2008ರ ನವೆಂಬರ್ 26 ರಂದು ಪಾಕಿಸ್ತಾನದಿಂದ ಸಮುದ್ರ ಮಾರ್ಗದ ಮೂಲಕ ಭಾರತದ ಆರ್ಥಿಕ ರಾಜಧಾನಿ ಮುಂಬೈಗೆ 10 ಲಷ್ಕರ್-ಎ-ತೈಬಾ (Lashkar-e-Taiba) ಭಯೋತ್ಪಾದಕರು ಪ್ರವೇಶಿಸಿದ್ದರು. 60 ಗಂಟೆಗಳಿಗೂ ಹೆಚ್ಚು ಕಾಲ ಮುತ್ತಿಗೆ ಹಾಕಿ, ಭಯೋತ್ಪಾದಕರು ಸರಣಿ ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟ ನಡೆಸಿ 166 ಜನರನ್ನು ಹತ್ಯೆಗೈದಿದ್ದರು. 300ಕ್ಕೂ ಹೆಚ್ಚು ಜನರನ್ನ ಗಾಯಗೊಳಿಸಿದ್ದರು. ಇದನ್ನೂ ಓದಿ: World Cup 2023: ಇಂಡೋ-ಪಾಕ್‌ ಕದನ ಯಾವಾಗಲೂ ರಣಕಣ ಏಕೆ? – ನೆನಪಿದೆಯಾ ಆ ಕರಾಳ ದಿನಗಳು?

    ಛತ್ರಪತಿ ಶಿವಾಜಿ ಟರ್ಮಿನಲ್‌ ರೈಲು ನಿಲ್ದಾಣ, ಕಾಮಾ ಆಸ್ಪತ್ರೆ, ನಾರಿಮನ್ ಹೌಸ್ ವ್ಯಾಪಾರ ಮತ್ತು ವಸತಿ ಸಂಕೀರ್ಣ, ಲಿಯೋಪೋಲ್ಡ್ ಕೆಫೆ, ತಾಜ್ ಹೋಟೆಲ್ ಮತ್ತು ಒಬೆರಾಯ್ ಟ್ರೈಡೆಂಟ್ ಹೋಟೆಲ್‌ಗಳಲ್ಲಿ ದಾಳಿ ನಡೆಸಲಾಗಿತ್ತು. ಈ ಸ್ಥಳಗಳಿಗೆ ಯುರೋಪಿಯನ್ನರು, ಭಾರತೀಯರು ಮತ್ತು ಯಹೂದಿಗಳು ಆಗಾಗ್ಗೆ ಭೇಟಿ ನೀಡುವುದರಿಂದ ಗರಿಷ್ಠ ಪ್ರಮಾಣದಲ್ಲಿ ಜನಸಂದಣಿ ಸೇರುತ್ತಿದ್ದರು. ಇದರ ಬಗ್ಗೆ ಸಮೀಕ್ಷೆ ನಡೆಸಿದ ನಂತರ ಪೂರ್ವನಿಯೋಜಿತ ದಾಳಿ ನಡೆಸಲಾಗಿತ್ತು. ಅಂದು ನಡೆದ ದಾಳಿಗೆ ನೂರಾರು ಆಮಾಯಕ ಜೀವಗಳು ಪ್ರಾಣತೆತ್ತವು.

    ಮುಂಬೈ ದಾಳಿಯಲ್ಲಿ ಭಾಗಿಯಾಗಿದ್ದ 10 ಭಯೋತ್ಪಾದಕರ ಪೈಕಿ 9 ಮಂದಿ ಛತ್ರಪತಿ ಶಿವಾಜಿ ಟರ್ಮಿನಲ್ ರೈಲ್ವೇ ನಿಲ್ದಾಣದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿದ್ದರು. ಬದುಕುಳಿದಿದ್ದ ಒಬ್ಬ ಪಾಕಿಸ್ತಾನಿ ಭಯೋತ್ಪಾದಕ ‘ಮೊಹಮ್ಮದ್ ಅಜ್ವಲ್ ಅಮೀರ್ ಕಸಬ್’ಗೆ 2010ರಲ್ಲಿ ಮರಣದಂಡನೆ ವಿಧಿಸಿ. 2012ರಲ್ಲಿ ಪುಣೆಯಲ್ಲಿ ಗಲ್ಲಿಗೇರಿಸಲಾಯಿತು. ಇದನ್ನೂ ಓದಿ: ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಅನುಮತಿ

    2008ರ ಈ ದುರಂತಕ್ಕೆ 15 ವರ್ಷಗಳು ಕಳೆದರೂ ಘಟನೆಯ ಭೀಕರತೆ, ಮೃತಪಟ್ಟವರ ನೆನಪು, ಕುಟುಂಬಗಳ ರೋಧನೆ ಇನ್ನೂ ಜೀವಂತ, ಕಲಿತ ಪಾಠಗಳು ಜಾಗತಿಕ ಭದ್ರತೆಗೆ ನಿರ್ಣಾಯಕವಾಗಿವೆ. ಈ ವರ್ಷ ದುರಂತ ಭಯೋತ್ಪಾದನಾ ದಾಳಿಯ 15ನೇ ವಾರ್ಷಿಕೋತ್ಸವ ಗುರುತಿಸುವ ಮೂಲಕ, ಇಸ್ರೇಲ್ ಅಧಿಕೃತವಾಗಿ ಲಷ್ಕರ್-ಎ-ತೊಯ್ಯಾ(ಎಲ್‌ಇಟಿ) ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಭಾರತ ಸರ್ಕಾರದ ಯಾವುದೇ ಮನವಿ ಇಲ್ಲದೇ ಈ ಕ್ರಮ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?

    ಕ್ರೀಡೆಯ ಮೇಲೂ ದಾಳಿಯ ಕರಾಳತೆ:
    ಸದ್ಯ ಭಾರತ ಮತ್ತು ಪಾಕಿಸ್ತಾನದ ನಡುವೆ ರಾಜತಾಂತ್ರಿಕ ಸಂಬಂಧಗಳು ನಡೆಯದಿದ್ದರೂ ಐಸಿಸಿ ಆಯೋಜನೆಗೊಳಿಸುವ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಆದ್ರೆ ಭಾರತ-ಪಾಕ್‌ ತಂಡಗಳು ಮುಖಾಮುಖಿಯಾದಾಗಲೆಲ್ಲ ಈ ದಾಳಿಯನ್ನ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಮಾತ್ರವಲ್ಲ ಅದು ಕ್ರೀಡೆಯಲ್ಲ ಯುದ್ಧ ಎಂದು ಜಯಘೋಷ ಹಾಕುತ್ತಾ, ಭಾರತ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್‌ ಟೂರ್ನಿಯಲ್ಲೂ ಪಾಕಿಸ್ತಾನ ತಂಡ ಭಾರತದ ಎದುರು ಹೀನಾಯ ಸೋಲನುಭವಿಸಿದ್ದು ಕಣ್ಣ ಮುಂದಿದೆ.

  • ಬಾರಾಮುಲ್ಲಾದಲ್ಲಿ ಎನ್‌ಕೌಂಟರ್ – ಟಾಪ್ ಲಷ್ಕರ್ ಕಮಾಂಡರ್ ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಗುರುವಾರ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿದ್ದು, ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾ(ಎಲ್‌ಇಟಿ)ದ ಕಮಾಂಡರ್ ಹತ್ಯೆಯಾಗಿದ್ದಾನೆ.

    ಬಾರಾಮುಲ್ಲಾದಲ್ಲಿ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿ, ಎಲ್‌ಇಟಿ ಭಯೋತ್ಪಾದಕ ಕಮಾಂಡರ್ ಯೂಸುಫ್ ಕಾಂಟ್ರೋನನ್ನು ಹತ್ಯೆ ಮಾಡಿದ ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ(ಐಜಿಪಿ) ವಿಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಕಿಡಿಗೇಡಿಗಳು

    ಇತ್ತೀಚೆಗೆ ಭಯೋತ್ಪಾದಕ ಯೂಸುಫ್ ಬಗ್ದಾಮ್ ಜಿಲ್ಲೆಯಲ್ಲಿ ಎಸ್‌ಪಿಒ ಹಾಗೂ ಅವರ ಸಹೋದರ ಸೇರಿದಂತೆ, ನಾಗರಿಕರು ಹಾಗೂ ಭದ್ರತಾ ಪಡೆಗಳ ಹಲವಾರು ಹತ್ಯೆಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿಸಿದ್ದಾರೆ. ಎನ್‌ಕೌಂಟರ್ ಬಳಿಕ ಭಯೋತ್ಪಾದಕರ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ವಸ್ತುಗಳನ್ನು ವಶಪಡಿಸಿಕೊಳ್ಳಾಗಿದೆ ಎಂದು ವಿಜಯ್ ಕುಮಾರ್ ತಿಳಿಸಿದರು. ಇದನ್ನೂ ಓದಿ: ದೆಹಲಿ ಕಾರ್ಯಾಚರಣೆ ಅಪರಾಧ ಕೃತ್ಯ: ಶಶಿ ತರೂರ್‌

    ಭದ್ರತಾ ಪಡೆಗಳು ಭಯೋತ್ಪಾದಕರನ್ನು ಪತ್ತೆ ಹಚ್ಚಲು ಮೌಲ್ವಾ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಭಯೋತ್ಪಾದಕರನ್ನು ಶರಣಾಗುವಂತೆ ಕೇಳಿದ ಭದ್ರತಾ ಪಡೆಗಳ ಮೇಲೆ ಭಯೋತ್ಪಾದಕರು ಗುಂಡು ಹಾರಿಸಲು ಯತ್ನಿಸಿದ್ದಾರೆ. ಎನ್‌ಕೌಂಟರ್ ವೇಳೆ ಮೂವರು ಸೈನಿಕರು ಹಾಗೂ ಒಬ್ಬ ನಾಗರಿಕನಿಗೆ ಗಾಯಗಳಾಗಿವೆ ಎಂದು ವರದಿಗಳು ತಿಳಿಸಿವೆ.

  • ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪುತ್ರ ಭಯೋತ್ಪಾದಕ – ಸರ್ಕಾರ ಘೋಷಣೆ

    ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಪುತ್ರ ಭಯೋತ್ಪಾದಕ – ಸರ್ಕಾರ ಘೋಷಣೆ

    ನವದೆಹಲಿ: 2008ರಲ್ಲಿ ನಡೆದ ಮುಂಬೈ ಭಯೋತ್ಪಾಧಕರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಲಷ್ಕರ್-ಎ-ತೈಬಾ(ಎಲ್‌ಇಟಿ) ಸಂಸ್ಥಾಪಕ ಹಫೀಜ್ ಸಯೀದ್ ಪುತ್ರ ಹಫೀಜ್ ತಲ್ಹಾ ಸಯೀದ್‌ನನ್ನು ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ.

    ಹಫೀಸ್ ತಲ್ಹಾ ಸಯೀದ್ ಭಾರತದಲ್ಲಿ ಲಷ್ಕರ್-ಎ-ತೈಬಾ ಹಾಗೂ ಭಯೋತ್ಪಾದನೆಗೆ ನೇಮಕಾತಿ, ನಿಧಿ ಸಂಗ್ರಹ ಹಾಗೂ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಎಂದು ಕೇಂದ್ರ ಗೃಹಸಚಿವಾಲಯ ತಿಳಿಸಿದೆ.

    ತಲ್ಹಾ ಸಯೀದ್ ಪಾಕಿಸ್ತಾನದಾದ್ಯಂತ ವಿವಿಧ ಎಲ್‌ಇಟಿ ಕೇಂದ್ರಗಳಿಗೆ ಆಗಾಗ ಭೇಟಿ ನೀಡುತ್ತಿದ್ದು, ಭಾರತ, ಇಸ್ರೇಲ್, ಅಮೇರಿಕಾ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಹಿತಾಸಕ್ತಿಗಳ ವಿರುದ್ಧ ಜಿಹಾದ್ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಎಂದು ಹೇಳಿದೆ. ಇದನ್ನೂ ಓದಿ: ಪ್ರಧಾನಿ ಮೋದಿ ತವರಿಗೇ ಲಗ್ಗೆಯಿಟ್ಟ XE ಕೊರೊನಾ ರೂಪಾಂತರಿ

    ಹಫೀಜ್ ಸಯೀದ್ ನೇತೃತ್ವದಲ್ಲಿ 2008ರ ನವೆಂಬರ್ 26 ರಂದು ನಡೆದ ಮುಂಬೈನ ಭೀಕರ ಭಯೋತ್ಪಾದನಾ ದಾಳಿಯಲ್ಲಿ 166 ಜನರು ಸಾವನ್ನಪ್ಪಿದ್ದರು. ಕೆಲವು ವರ್ಷಗಳ ಹಿಂದೆಯೇ ಆತನನ್ನು ಭಯೋತ್ಪಾದಕ ಎಂದು ಸರ್ಕಾರ ಘೋಷಿಸಿದ್ದು, ಈ ಆರೋಪದ ಮೇಲೆ ಆತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇದನ್ನೂ ಓದಿ: ಭಾರತವನ್ನು ಹೊಗಳಿದ ಇಮ್ರಾನ್ ಖಾನ್‍ಗೆ ಪಾಕ್ ಬಿಟ್ಟು ತೊರೆಯಿರಿ ಎಂದ ಷರೀಫ್ ಪುತ್ರಿ

    ಭಾರತ ಸತತವಾಗಿ ಹಫೀಜ್ ಸಯೀದ್‌ನನ್ನು ಕಸ್ಟಡಿಗೆ ಕೋರುತ್ತಿದೆ. ಆದರೆ ಪಾಕಿಸ್ತಾನ ಅದನ್ನು ನಿರಾಕರಿಸಿದೆ.

  • ಹೊಸದಾಗಿ ಉಗ್ರ ಸಂಘಟನೆ ಸೇರಿದ್ದ ಮೂವರು ಭಯೋತ್ಪಾದಕರು ಅರೆಸ್ಟ್

    ಹೊಸದಾಗಿ ಉಗ್ರ ಸಂಘಟನೆ ಸೇರಿದ್ದ ಮೂವರು ಭಯೋತ್ಪಾದಕರು ಅರೆಸ್ಟ್

    ಶ್ರೀನಗರ: ಹೊಸದಾಗಿ ಉಗ್ರ ಸಂಘಟನೆಗೆ ಸೇರಿದ್ದ ಮೂವರು ಉಗ್ರರನ್ನು ಭಾರತೀಯ ಸೇನೆ ಬಂಧಿಸಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸರು ಮಾಹಿತಿ ನೀಡಿದ್ದಾರೆ.

    ಬಂಧಿತ ಮೂವರಲ್ಲಿ ಇಬ್ಬರನ್ನು ಝಾಕಿರ್ ಅಹ್ಮದ್ ಭಟ್ ಮತ್ತು ಅಬಿದ್ ಹುಸೇನ್ ವಾನಿ ಎಂದು ಗುರುತಿಸಲಾಗಿದೆ. ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಕಾಶ್ಮೀರಾದ ಪೊಲೀಸರು ಮತ್ತು ಭಾರತೀಯ ಸೇನೆ ಜಂಟಿಯಾಗಿ ಈ ಕಾರ್ಯಾಚರಣೆ ಮಾಡಿದೆ. ಈ ಮೂವರು ಭಯೋತ್ಪಾದಕರು ಇತ್ತೀಚೆಗೆ ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಭಯೋತ್ಪಾದಕ ಗುಂಪಿಗೆ ಸೇರಿದ್ದರು ಎಂಬ ಮಾಹಿತಿ ಲಭಿಸಿದೆ.

    ಪುಲ್ವಾಮ ಜಿಲ್ಲೆಯಲ್ಲಿ ಜಮ್ಮ ಕಾಶ್ಮೀರ ಪೊಲೀಸರು ಲಷ್ಕರ್-ಎ-ತೈಬಾ ಉಗ್ರ ಸಂಘಟನೆಗೆ ಸೇರಿದ್ದ ಉಗ್ರ ಘಟಕವೊಂದನ್ನು ನಾಶ ಮಾಡಿದ್ದರು. ಜಮ್ಮು ಕಾಶ್ಮೀರಾದ ಅವಂತಿಪೋರಾ ವಿಭಾಗದ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆ ಮಾಡಲಾಗಿತ್ತು. ಇದಾದ ನಂತರ ಈ ಮೂವರು ಉಗ್ರರನ್ನು ಸೆರೆಹಿಡಿಯಲಾಗಿದೆ. ಈ ಮೂವರು ಉಗ್ರರು ಪಾಕಿಸ್ತಾನಕ್ಕೆ ಸೇರಿದ್ದವರಾಗಿದ್ದು, ಉನ್ನತ ಮಟ್ಟದ ಟ್ರೈನಿಂಗ್ ಪಡೆಯಲು ಉಗ್ರ ಸಂಘಟನೆ ಸೇರಿದ್ದರು ಎನ್ನಲಾಗಿದೆ.

    ಜಮ್ಮು ಕಾಶ್ಮೀರಾದ ಬಾಥೆನ್ ಪ್ರದೇಶದಲ್ಲಿ ನಾವು ಮತ್ತು ಭಾರತೀಯ ಸೇನೆ ದಾಳಿ ಮಾಡಿ ಸ್ಫೋಟಕ ಮತ್ತು ಮದ್ದುಗುಂಡುಗಳನ್ನು ಒಳಗೊಂಡಂತೆ ಕೃತ್ಯಕ್ಕೆ ಬಳಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದೇವೆ. ಬಂಧಿತ ಮೂವರು ಉಗ್ರರ ವಿರುದ್ಧ ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಮ್ಮು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

    ಕಳೆದ ಮಂಗಳವಾರ ಶ್ರೀನಗರದ ಪಾಂಡಚ್ ಪ್ರದೇಶದಲ್ಲಿ ಬಿಎಸ್‍ಎಫ್ ಯೋಧರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದರು. ಈ ದಾಳಿಯಲ್ಲಿ ಇಬ್ಬರು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿ ಹುತಾತ್ಮರಾಗಿದ್ದರು. ಈ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ಸೈನಿಕರು ತೀವ್ರವಾಗಿ ಗಾಯಗೊಂಡಿದ್ದರು. ನಂತರ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಭಾರತೀಯ ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.