ಇಂದು ಪ್ರೇಮಿಗಳ ದಿನಾಚರಣೆ. ಈ ದಿನಾಚರಣೆಯಂದು (Valentine’s Day) ಹಲವರು ಪ್ರೇಮ ಕಥೆಗಳನ್ನು ನೀವು ಓದಿರಬಹುದು. ಈ ಪಟ್ಟಿಗೆ ನೀವು ಓದಲೇಬೇಕಾದ ಮತ್ತು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕಾದ ಪ್ರೇಮ ಕಥೆ ಯಾವುದು ಎಂದರೆ ವಿರಾಟ್ ಕೊಹ್ಲಿ (Virat kohli) ಮತ್ತು ಅನುಷ್ಕಾ (Anushka Sharma) ಲವ್ ಸ್ಟೋರಿ. ಸೆಲೆಬ್ರಿಟಿಗಳು ಲವ್ (Love) ಮಾಡಿ ನಂತರ ಬ್ರೇಕಪ್ ಆಗುವುದು ಇಂದು ಹೊಸದೆನಲ್ಲ. ಆದರೆ ವಿರಷ್ಕಾ ಜೋಡಿ ಪ್ರೀತಿ ಮಾಡಿ ಮದುವೆಯಾಗುವುದರ ಜೊತೆ ಈಗಲೂ ಅನ್ಯೋನ್ಯವಾಗಿದ್ದಾರೆ. ಈ ಮೂಲಕ ನಿಜವಾದ ಪ್ರೇಮಿಗಳಿಗೆ ಆದರ್ಶವಾಗಿದ್ದಾರೆ.
ವಿರಾಟ್‌ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಇಬ್ಬರು ಸೆಲೆಬ್ರಿಟಿಗಳು. ಈ ಇಬ್ಬರು ಸ್ಟಾರ್‌ಗಳು ಮೊದಲು ಭೇಟಿಯಾಗಿದ್ದು ಡ್ಯಾಂಡ್ರಫ್ ಜಾಹೀರಾತಿನಲ್ಲಿ. 2013ರಲ್ಲಿ ಟಿವಿ ಜಾಹೀರಾತಿನಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಆರ್‌ಸಿಬಿ ತಂಡದ ನಾಯಕನಾಗಿದ್ದರೆ ಅನುಷ್ಕಾ ಬಾಲಿವುಡ್ ಬೇಡಿಕೆಯ ನಟಿಯಾಗಿದ್ದರು.

ಜಾಹೀರಾತಿನಲ್ಲಿ ಇಬ್ಬರ ನಟನೆಯ ಕೆಮಿಸ್ಟ್ರಿ ವರ್ಕ್ ಆಯಿತು. ಪರಸ್ಪರ ಫೋನ್ ನಂಬರ್ ಬದಲಾವಣೆ ಆಯಿತು. ಆರಂಭದಲ್ಲಿ ಇಬ್ಬರು ಕದ್ದು ಮುಚ್ಚಿ ಡೇಟ್ ಮಾಡಲು ಆರಂಭಿಸಿದರು. ಈ ವೇಳೆ ವಿರಾಟ್ ಕೊಹ್ಲಿ ಟೀಂ ಇಂಡಿಯಾದ (Team India) ಸ್ಟಾರ್ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದ್ದರು. ಪರಿಣಾಮ ಕದ್ದು ಮುಚ್ಚಿ ಸಾರ್ವಜನಿಕ ಸ್ಥಳಗಳಲ್ಲಿ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಹೋದರೂ ಜನರು ಗುರುತು ಹಿಡಿಯುತ್ತಿದ್ದರು ಜೊತೆಗೆ ಮಾಧ್ಯಮಗಳ ಕ್ಯಾಮೆರಾದ ಕಣ್ಣು ಇವರನ್ನು ಸೆರೆ ಹಿಡಿಯುತ್ತಿದ್ದವು. ಇಬ್ಬರ ಬಗ್ಗೆ ಅಂತೆ ಕಂತೆ ಸುದ್ದಿಗಳು ಪ್ರಕಟವಾಗುತ್ತಿದ್ದಂತೆ ಕೊಹ್ಲಿ ಮತ್ತು ಅನುಷ್ಕಾ ಸಾರ್ವಜನಿಕವಾಗಿಯೇ ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ಇದನ್ನೂ ಓದಿ: ಕಣ್ಣೀರಿಟ್ಟ ಕಿಂಗ್ ಕೊಹ್ಲಿ – ಪ್ರೀತಿಯ ಅಪ್ಪುಗೆ ನೀಡಿ ಸಾಂತ್ವನ ಹೇಳಿದ ಅನುಷ್ಕಾ

2014ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಮುಂಬೈಗೆ ಲ್ಯಾಂಡ್ ಆದ ಕೊಹ್ಲಿ ತಮ್ಮ ನಿವಾಸಕ್ಕೆ ಹೋಗಿರಲಿಲ್ಲ. ಮೊದಲು ಹೋಗಿದ್ದು ಪ್ರಿಯತಮೆ ಅನುಷ್ಕಾ ಮನೆಗೆ. ಆ ವರ್ಷವೇ ನ್ಯೂಜಿಲೆಂಡ್ ಪ್ರವಾಸದ ಬಳಿಕ ವಿರಾಟ್ ಮನೆಗೂ ಅನುಷ್ಕಾ ಭೇಟಿ ನೀಡಿ ಸರ್‌ಪ್ರೈಸ್ ನೀಡಿದ್ದರು. ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರೂ ಹೆಚ್ಚು ಸುದ್ದಿಯಾಗಿದ್ದು 2014-15 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ. ಧೋನಿ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ನಿರ್ಧಾರ ತೆಗೆದುಕೊಂಡಾಗ ಕೊಹ್ಲಿಗೆ ನಾಯಕತ್ವ ಪಟ್ಟ ಸಿಕ್ಕಿತು. ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಅನುಷ್ಕಾ ಶರ್ಮಾ ಗ್ಯಾಲರಿಯಲ್ಲಿ ಕುಳಿತು ವಿರಾಟ್ ಹುರಿದುಂಬಿಸುತ್ತಿದ್ದರು. ಮೆಲ್ಬರ್ನ್ ಕ್ರೀಡಾಂಗಣದಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಶತಕ ಬಾರಿಸಿದ ಬಳಿಕ ವಿರಾಟ್ ಬ್ಯಾಟ್ ಮೂಲಕ ಅನುಷ್ಕಾಗೆ ಫ್ಲೈಯಿಂಗ್ ಕಿಸ್ ಸಹ ನೀಡಿದ್ದರು. ಇದನ್ನೂ ಓದಿ: Valentines Day; ಮೊದಲ ಪ್ರೇಮ ಪತ್ರ ಬರೆದವರು ಯಾರು ಗೊತ್ತಾ?

ಇಬ್ಬರು ಪ್ರೇಮಿಗಳ ಬಗ್ಗೆ ಅಂದಿನ ಟೀಂ ಇಂಡಿಯಾದ ಕೋಚ್ ಆಗಿದ್ದ ರವಿಶಾಸ್ತ್ರಿ ಮಾಧ್ಯಮದ ಬಳಿಯೂ ಹಂಚಿಕೊಂಡಿದ್ದರು. ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿ ನಾಯಕರಾಗಿದ್ದರು. ಈ ವೇಳೆ ಅವರು ನನ್ನ ಬಳಿ ಬಂದು ಪ್ರವಾಸದ ಸಂದರ್ಭದಲ್ಲಿ ಪತ್ನಿಯರನ್ನು ಮಾತ್ರ ಕರೆದುಕೊಂಡು ಬರಲು ಬಿಸಿಸಿಐ ನುಮತಿ ನೀಡುತ್ತದೆ. ಆದರೆ ನಾನು ನನ್ನ ಗೆಳತಿಯನ್ನು ಕರೆದುಕೊಂಡು ಬರಬಹುದೇ ಎಂದು ಕೇಳಿದ್ದರು. ಕೊಹ್ಲಿಯಿಂದ ಈ ಪ್ರಸ್ತಾಪ ಬರುತ್ತಿದ್ದಂತೆ ನಾನು ಬಿಸಿಸಿಐ ಜೊತೆ ಕರೆ ಮಾಡಿ ಅನುಷ್ಕಾಗೆ ಬರಲು ಅನುಮತಿ ನೀಡಿದ್ದೆ ಎಂದು ತಿಳಿಸಿದ್ದರು.

ಇದಾದ ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಇಂಡಿಯನ್ ಹೈ ಕಮಿಷನ್‌ಗೆ ಭೇಟಿ ನೀಡಿದಾಗಲೂ ಇಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದರು. ನಂತರ ಶ್ರೀಲಂಕಾ ವಿರುದ್ಧ ನಡೆದ ಸರಣಿಯಲ್ಲೂ ಫ್ಲೈಯಿಂಗ್ ಕಿಸ್ ನೀಡಿ ಅನುಷ್ಕಾಗೆ ಸರ್‌ಪ್ರೈಸ್ ನೀಡಿದ್ದರು. ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಎಫ್‌ಸಿ ಗೋವಾ ತಂಡದ ಮಾಲೀಕರಾಗಿದ್ದ ಕೊಹ್ಲಿ ಅವರು ಅನುಷ್ಕಾ ಜೊತೆಗೂಡಿ ತಂಡವನ್ನು ಹುರಿದುಂಬಿಸುತ್ತಿದ್ದರು. ಆರ್‌ಸಿಬಿ ಪಂದ್ಯಗಳಲ್ಲಿ ಭಾಗವಹಿಸಿ ಕೊಹ್ಲಿಗೆ ಅನುಷ್ಕಾ ಚಿಯರ್ ಮಾಡುತ್ತಿದ್ದರು. ಆದರಲ್ಲೂ ಕೊಹ್ಲಿ ಬೇಗನೇ ಔಟಾದರೆ ಅನುಷ್ಕಾ ಬಹಳ ಬೇಜಾರ್ ಆಗುತ್ತಿದ್ದರು ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೇ ಕ್ಷಣಗಳಲ್ಲಿ ವೈರಲ್ ಆಗುತ್ತಿತ್ತು.

ಯುವರಾಜ್ ಸಿಂಗ್ ಹಾಗೂ ಮಾಜಿ ವೇಗಿ ಜಹೀರ್ ಖಾನ್ ವಿವಾಹ ಸಮಾರಂಭದಲ್ಲೂ ಇಬ್ಬರು ಜೊತೆಯಾಗಿ ಡ್ಯಾನ್ಸ್ ಮಾಡಿ ರಂಜಿಸಿದ್ದರು. 2015 ಮತ್ತು 2016 ರಲ್ಲಿ ಕೊಹ್ಲಿ ಆಟ ಮಂಕಾಗಿತ್ತು. ಕೊಹ್ಲಿ ಕಳಪೆ ಆಟಕ್ಕೆ ಅನುಷ್ಕಾನೇ ಕಾರಣ ಎಂದು ಕ್ರಿಕೆಟ್ ಅಭಿಮಾನಿಗಳು ಟೀಕಿಸಲು ಆರಂಭಿಸಿದ್ದರು. ಪದೇ ಗ್ಯಾಲರಿಯಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿರುವುದರಿಂದ ವಿರಾಟ್ ಕೆಟ್ಟ ಪ್ರದರ್ಶನ ನೀಡುತ್ತಿದ್ದಾರೆ ಎಂಬ ಮಾತುಗಳು ಬರತೊಡಗಿತು. ಜೊತೆ ಅನುಷ್ಕಾ ಶರ್ಮಾ ಅವರ ಪೇಜ್‌ನಲ್ಲೂ ಕೆಟ್ಟ ಕೆಟ್ಟ ಕಮೆಂಟ್‌ಗಳು ಬರತೊಡಗಿತು. ಸಾಮಾಜಿಕ ಜಾಲತಾಣದಲ್ಲಿ ಅನುಷ್ಕಾ ವಿರುದ್ಧ ಟ್ರೋಲ್‌ಗಳು ಹೆಚ್ಚಾಯಿತು.
ಟೀಕೆಗಳು ಜಾಸ್ತಿ ಆಗುತ್ತಿದ್ದಂತೆ ಅನುಷ್ಕಾ ಪರ ಮಾತನಾಡಿದ ಕೊಹ್ಲಿ, ಟ್ರೋಲ್ ಮಾಡುವ ಜನರಿಗೆ ನಾಚಿಕೆಯಾಗಬೇಕು. ಆಕೆ ಯಾವತ್ತೂ ತನಗೆ ಧನಾತ್ಮಕ ಚಿಂತನೆಯನ್ನು ನೀಡಿದ್ದಾಳೆ ಎಂದು ಬರೆದು ‘SHAME’ ಎಂದು ಬರೆದಿರುವ ಪೋಸ್ಟರ್ ಅನ್ನು ಪೋಸ್ಟ್ ಮಾಡಿ ಟ್ರೋಲಿಗರಿಗೆ ತಿರುಗೇಟು ನೀಡಿದ್ದರು. 2016 ರಲ್ಲಿ ಮಾಡಿದ ಈ ಟ್ವೀಟ್ ಅನ್ನು 98 ಸಾವಿರ ಮಂದಿ ಲೈಕ್ ಮಾಡಿದ್ದರೆ 35 ಸಾವಿರ ಜನ ರಿಟ್ವೀಟ್ ಮಾಡಿ ಕೊಹ್ಲಿಗೆ ಬೆಂಬಲ ನೀಡಿದ್ದರು.

ಲವ್ ಸ್ಟೋರಿ ಚರ್ಚೆಯಾಗುತ್ತಿದ್ದಂತೆ ಇಬ್ಬರು ಪರಸ್ಪರ ಇನ್‌ಸ್ಟಾದಿಂದ ಅನ್‌ಫಾಲೋ ಮಾಡಿದ್ದರು. ಅಷ್ಟೇ ಅಲ್ಲದೇ ಇಬ್ಬರೂ ಸಾರ್ವಜನಿಕವಾಗಿ ಕಾಣಿಸುವುದನ್ನು ನಿಲ್ಲಿಸಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆ ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎಂಬ ವದಂತಿಯೂ ಬರತೊಡಗಿತು. ಮತ್ತೆ ನಮ್ಮ ವಿರುದ್ಧ ನೆಗೆಟಿವ್ ಅಭಿಪ್ರಾಯ ಬರಬಾರದು ಎಂದು ಇವರಿಬ್ಬರೂ ಉದ್ದೇಶಪೂರ್ವಕವಾಗಿ ಈ ನಿರ್ಧಾರ ಕೈಗೊಂಡಿದ್ದರು ಎಂಬ ಮಾತು ನಂತರ ಬಂದಿತ್ತು. ಕೆಲ ದಿನಗಳಲ್ಲಿ ಇಬ್ಬರು ಪರಸ್ಪರ ಫಾಲೋ ಮಾಡಿಕೊಂಡರು ಮತ್ತು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಬ್ರೇಕಪ್ ವದಂತಿಗೆ ಬ್ರೇಕ್ ಹಾಕಿದರು.

ಅಂತಿಮವಾಗಿ ಡಿಸೆಂಬರ್ 2017 ರಲ್ಲಿ ವಿರುಷ್ಕಾ (ವಿರಾಟ್+ ಅನುಷ್ಕಾ) ಜೋಡಿ ಇಟಲಿಯ ಟಸ್ಕನಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತು. ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಮಾತ್ರ ಈ ಮದುವೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಜನವರಿ 2021 ರಲ್ಲಿ ಮಗಳು ವಾಮಿಕಾ ಜನಿಸಿದರೆ, ಫೆಬ್ರವರಿ 2024 ರಲ್ಲಿ ಅಕಾಯ್ ಜನಿಸಿದ್ದ.
ಹಲವು ಸಂದರ್ಶನಗಳಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಅನುಷ್ಕಾ ಬಂದಾಗಿನಿಂದ ನನ್ನಲ್ಲಿರುವ ಸಾಕಷ್ಟು ನೆಗೆಟಿವ್ ಯೋಚನೆಗಳು ದೂರ ಆಗಿದೆ. ನನಗೆ ಅನುಷ್ಕಾ ತುಂಬಾ ಕಫರ್ಟ್ ಜೋನ್ ಆಗಿದ್ದಾಳೆ ಎಂದು ಪತ್ನಿಯ ಮೇಲಿನ ಪ್ರೀತಿಯನ್ನು ವಿರಾಟ್ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.