Tag: ಲಖೀಂಪುರ ಖೇರಿ

  • ಲಖೀಂಪುರ ಖೇರಿ ಪ್ರಕರಣ – ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಜಾ

    ಲಖೀಂಪುರ ಖೇರಿ ಪ್ರಕರಣ – ಆಶಿಶ್ ಮಿಶ್ರಾ ಜಾಮೀನು ಅರ್ಜಿ ವಜಾ

    ಲಕ್ನೋ: ಲಖೀಂಪುರ ಖೇರಿ ಪ್ರಕರಣಕ್ಕೆ ಸಂಬಂಧ ಕೇಂದ್ರ ಗೃಹ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು ಪುತ್ರ ಆಶಿಶ್ ಮಿಶ್ರಾಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುಖೇಶ್ ಮಿಶ್ರಾ ಅವರು ಈ ಅದೇಶ ಹೊರಡಿಸಿದ್ದಾರೆ.

    ಪ್ರಕರಣ ತೀವ್ರ ಸ್ವರೂಪದಾಗಿದ್ದು, ಗಂಭೀರವಾಗಿದೆ. ಅಲ್ಲದೇ ತನಿಖೆ ಇನ್ನೂ ಚಾಲ್ತಿಯಲ್ಲಿದ್ದು ಈ ಹಂತದಲ್ಲಿ ಜಾಮೀನು ನೀಡದಂತೆ ಸರ್ಕಾರದ ಪರ ವಕೀಲ ಅರವಿಂದ್ ತ್ರಿಪಾಠಿ ವಾದ ಮಂಡಿಸಿದ್ದರು. ಕಳೆದ ತಿಂಗಳು ಮಿಶ್ರಾ ಅವರ ಜಾಮೀನು ಅರ್ಜಿಯನ್ನು ಲಖೀಂಪುರ ಖೇರಿಯಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟ್ ತಿರಸ್ಕರಿಸಿತ್ತು. ಪ್ರಕರಣ ತೀವ್ರತೆ ಅರಿತ ಕೋರ್ಟ್ ಆಶಿಶ್ ಮಿಶ್ರಾ ಸೇರಿ ಇತರೆ ಇಬ್ಬರು ಆರೋಪಿಗಳ ಜಾಮೀನು ಅರ್ಜಿ ತಿರಸ್ಕರಿಸಿದೆ.

    ಕೇಂದ್ರ ಸರ್ಕಾರ ಜಾರಿ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಆಶಿಶ್ ಮಿಶ್ರಾಗೆ ಸಂಬಂಧಿಸಿದ ಕಾರನ್ನು ರೈತರು ಮೇಲೆ ಹರಿಸಲಾಗಿತ್ತು. ಪರಿಣಾಮ ಸ್ಥಳದಲ್ಲಿ 8 ಮಂದಿ ರೈತರು ಸಾವನ್ನಪ್ಪಿದ್ದರು. ಇದನ್ನೂ ಓದಿ: ನಾಥೂರಾಮ್ ಗೋಡ್ಸೆ ಪ್ರತಿಮೆ ಧ್ವಂಸಗೊಳಿಸಿದ ಕಾಂಗ್ರೆಸ್ಸಿಗರು!

    12 ಗಂಟೆಗಳ ವಿಚಾರಣೆಯ ಬಳಿಕ ವಿಶೇಷ ತನಿಖಾ ತಂಡ (ಎಸ್‍ಐಟಿ) ಅಕ್ಟೋಬರ್ 9 ರಂದು ಆಶಿಶ್ ಮಿಶ್ರಾರನ್ನ ಬಂಧಿಸಿತು ಮತ್ತು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಯಿತು. ನವೆಂಬರ್ 15 ರಂದು ಸುಪ್ರೀಂಕೋರ್ಟ್ ಎಸ್‍ಐಟಿ ತನಿಖೆಯನ್ನು ಬೇರೆ ರಾಜ್ಯದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರಿಂದ ಮೇಲ್ವಿಚಾರಣೆ ಮಾಡಬೇಕೆಂದು ಹೇಳಿತ್ತು. ಪ್ರಕರಣ ಸಂಬಂಧ ಈವರೆಗೂ ಮಿಶ್ರಾ ಸೇರಿದಂತೆ ಇದುವರೆಗೆ 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

  • ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ – ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ – ಯುಪಿ ಸರ್ಕಾರಕ್ಕೆ ಸುಪ್ರೀಂ ತರಾಟೆ

    ನವದೆಹಲಿ: ಎಂಟು ಜನರು ಸಾವನ್ನಪ್ಪಿದ ಲಖಿಂಪುರ್ ಖೇರಿ ಘಟನೆಯ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಇಂದು ಮತ್ತೊಮ್ಮೆ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇಂದು ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ ನೇತೃತ್ವದ ತ್ರಿ ಸದಸ್ಯ ಪೀಠ “ನಿಮ್ಮ ಕಾಲುಗಳನ್ನು ನೀವೇ ಎಳೆದುಕೊಳ್ಳುತ್ತಿದ್ದೀರಿ” ಎಂದು ಸರ್ಕಾರವನ್ನು ಟೀಕಿಸಿದೆ.

    ಇಂದು ವಿಚಾರಣೆ ವೇಳೆ ಉತ್ತರ ಪ್ರದೇಶ ಸರ್ಕಾರ ಪರವಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ, ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು. ಹರೀಶ್ ಸಾಳ್ವೆ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮು.ನ್ಯಾ ಎನ್‍ವಿ ರಮಣ ನೀವೂ ಈಗ ವರದಿ ಸಲ್ಲಿಸುವ ಅವಶ್ಯಕತೆ ಇಲ್ಲ, ನಾವು ಈ ವರದಿಗಾಗಿ ನಿನ್ನೆ ರಾತ್ರಿ ಒಂದು ಗಂಟೆವರೆಗೂ ಕಾದೆವು. ಆದರೆ ವರದಿ ಸಲ್ಲಿಕೆಯಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಬಳಿಕ ಹರೀಶ್ ಸಾಳ್ವೆ ಬಂಧಿತ ಆರೋಪಿಯ ಮಾಹಿತಿಯನ್ನು ಕೋರ್ಟಿಗೆ ನೀಡಿದರು. ಈ ವೇಳೆ ಪ್ರತಿಕ್ರಿಯಿಸಿದ ಪೀಠ, ಯುಪಿ ಸರ್ಕಾರ ಆರೋಪಿಗಳ ವಿರುದ್ಧ ಮೃದುವಾಗಿ ವರ್ತಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು. ಇದಕ್ಕೆ ಉತ್ತರ ನೀಡಿದ ಸಾಳ್ವೆ, ಈವರೆಗೂ ಎರಡು ಪ್ರಕರಣ ಸಂಬಂಧ 10 ಮಂದಿಯನ್ನು ಬಂಧಿಸಲಾಗಿದೆ. ಒಂದು ರೈತರ ಮೇಲೆ ವಾಹನ ಚಲಾಯಿಸಿದ್ದು, ಮತ್ತೊಂದು ಹತ್ಯೆಗೆ ಸಂಬಂಧಿಸಿದ್ದು ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮೃತ ರೈತರಿಗೆ ಗೌರವ ಸಲ್ಲಿಸಿದ ಪ್ರಿಯಾಂಕಾ ಗಾಂಧಿ – ಲಖೀಂಪುರ್ ಖೇರಿಯಲ್ಲಿ ಭಾರಿ ಭದ್ರತೆ

    ಮುಂದುವರಿದು ಹತ್ತು ಆರೋಪಿಗಳ ಪೈಕಿ ನಾಲ್ಕು ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ, ಆರು ಮಂದಿ ನ್ಯಾಯಂಗ ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಇದಕ್ಕೆ ಮರು ಪ್ರಶ್ನೆ ಮಾಡಿದ ಪೀಠ ಬಾಕಿ ಆರು ಮಂದಿಯನ್ನು ಕಸ್ಟಡಿಗೆ ಯಾಕೆ ಪಡೆಯಲಿಲ್ಲ ಎಂದು ಕೇಳಿತು. ಅಲ್ಲದೇ 44 ಮಂದಿ ಸಾಕ್ಷಿಗಳ ಪೈಕಿ ಕೇವಲ 4 ಮಂದಿಯನ್ನು ವಿಚಾರಣೆ ನಡೆಸಿರುವ ಬಗ್ಗೆ ಪೀಠ ಪ್ರಶ್ನೆ ಮಾಡಿತು.

    ಇದಕ್ಕೆ ಉತ್ತರಿಸಿದ ಹರೀಶ್ ಸಾಳ್ವೆ, ಬಾಕಿ ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಅದಕ್ಕೆ ಮತ್ತಷ್ಟು ಕಾಲಾವಕಾಶ ಬೇಕು ಎಂದು ಕೋರಿದರು. ಇದಕ್ಕೆ ಅವಕಾಶ ನೀಡಿದ ಕೋರ್ಟ್ ಅಕ್ಟೋಬರ್26 ಕ್ಕೆ ವಿಚಾರಣೆ ಮುಂದೂಡಿತು. ಇದನ್ನೂ ಓದಿ: ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾಗೆ 14 ದಿನ ನ್ಯಾಯಾಂಗ ಬಂಧನ

  • ರೈತರ ಮೇಲೆ ಜೀಪ್ ಹತ್ತಿಸಿದ ಮತ್ತೊಂದು ವೀಡಿಯೋ ಲಭ್ಯ – ಇಂದು ಸುಪ್ರೀಂನಲ್ಲಿ ವಿಚಾರಣೆ

    ರೈತರ ಮೇಲೆ ಜೀಪ್ ಹತ್ತಿಸಿದ ಮತ್ತೊಂದು ವೀಡಿಯೋ ಲಭ್ಯ – ಇಂದು ಸುಪ್ರೀಂನಲ್ಲಿ ವಿಚಾರಣೆ

    ಲಕ್ನೋ: ಉತ್ತರಪ್ರದೇಶದ ಲಖೀಂಪುರ್ ಖೇರಿಯಲ್ಲಿ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾನ ಮಗ ಮಹೀಂದ್ರ ಜೀಪ್ ಹತ್ತಿಸಿದ್ದ ಹೊಸ ವೀಡಿಯೋ ಲಭ್ಯವಾಗಿದೆ.

    ಅತೀ ವೇಗದಲ್ಲಿದ್ದ ಮಹೀಂದ್ರ ಜೀಪ್‍ನ್ನು ಕಪ್ಪು ಬಾವುಟ ಹಿಡಿದು ನಡೆದುಹೋಗ್ತಿದ್ದ ರೈತರ ಮೇಲೆ ಹತ್ತಿಸಲಾಗಿದೆ. ಆ ಜೀಪ್ ಹಿಂದೆ ಇನ್ನೊಂದು ಕಾರು ಕೂಡಾ ಅತೀ ವೇಗದಲ್ಲಿ ನುಗ್ಗಿದೆ. ಜೀಪ್ ಹತ್ತಿಸಿದ ಪರಿಣಾಮ ನಾಲ್ವರು ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಆ ಜೀಪ್‍ನಿಂದ ಇಳಿದು ಓಡಿಹೋಗ್ತಿರುವ ದೃಶ್ಯವೂ ಲಭ್ಯ ಆಗಿದೆ. ಇದನ್ನೂ ಓದಿ: ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

    ಜೀಪ್ ಹತ್ತಿಸಿದ್ದರಿಂದ ಆಕ್ರೋಶಗೊಂಡ ರೈತರ ಗುಂಪು ಬಿಜೆಪಿ ಕಾರ್ಯಕರ್ತರಿದ್ದ ಜೀಪಿನ ಮೇಲೆ ಪ್ರತಿದಾಳಿ ನಡೆಸಿದೆ. ಲಖೀಂಪುರ್ ಖೇರಿ ಹಿಂಸಾಚಾರದ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ತ್ರಿಸದಸ್ಯ ಪೀಠ ಇಂದು ವಿಚಾರಣೆ ನಡೆಸಲಿದೆ. ಇದನ್ನೂ ಓದಿ: ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಲಖೀಂಪುರ್‍ಖೇರಿಯಲ್ಲಿ ಮೃತರ ರೈತರ ಕುಟುಂಬವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ನಾಯಕಿ ಪ್ರಿಯಾಂಕ ಗಾಂಧಿ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್‍ಮಿಶ್ರಾ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡ್ಬೇಕು ಎಂದಿರುವ ಪ್ರಿಯಾಂಕ, ‘ಎಫ್‍ಐಆರ್ ಇಲ್ಲದೆಯೇ ನಮ್ಮನ್ನು ಅರೆಸ್ಟ್ ಮಾಡುವುದಾದ್ರೆ ಮಂತ್ರಿ ಮಗ ಆಶಿಶ್ ಮಿಶ್ರಾನನ್ನು ಯಾಕೆ ಬಂಧಿಸ್ತಿಲ್ಲ’ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

  • ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

    ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿ ಕಾರು ರೈತರ ಮೇಲೆ ಹರಿದಿದೆ: ಮಿಶ್ರಾ

    – ಮಗನ ಪರ ಮತ್ತೆ ತಂದೆ ಬ್ಯಾಟಿಂಗ್

    ನವದೆಹಲಿ: ಚಾಲಕನ ಮೇಲೆ ದಾಳಿಯಾದಾಗ ನಿಯಂತ್ರಣ ತಪ್ಪಿದ ಕಾರು ಸ್ಥಳದಲ್ಲಿದ್ದ ರೈತರ ಮೇಲೆ ಹರಿದಿದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಸಮರ್ಥನೆ ಮಾಡಿಕೊಂಡಿದ್ದಾರೆ.

    ಲಖೀಂಪುರ ಖೇರಿ ಪ್ರಕರಣ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಅವರು, ಮಗ ಆಶಿಶ್ ಮಿಶ್ರಾ ಪರ ಮತ್ತೆ ಹೇಳಿಕೆಯನ್ನು ನೀಡಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ನನ್ನ ಮಗ ಅಲ್ಲಿ ಇರಲಿಲ್ಲ ಎಂದು ಮತ್ತೆ ಪುನರುಚ್ಛರಿಸಿರುವ ಅಜಯ್ ಮಿಶ್ರಾ, ಕಾರು ಕಂಟ್ರೋಲ್ ತಪ್ಪಿದ್ದರಿಂದ ಈ ಅವಘಢ ಸಂಭವಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದಿದ್ದು ನಿಜವಾದ್ರೆ ರಾಜೀನಾಮೆ ನೀಡುತ್ತೇನೆ: ಅಜಯ್ ಮಿಶ್ರಾ

    ಪ್ರಕರಣ ಸಂಬಂಧ ಈ ಹಿಂದೆ ಮಾತನಾಡಿದ್ದ ಅಜಯ್ ಮಿಶ್ರಾ, ಘಟನೆ ನಡೆದ ವೇಳೆ ನನ್ನ ಮಗ ಕಾರಿನಲ್ಲಿ ಇರಲಿಲ್ಲ. ಒಂದು ವೇಳೆ ಆತ ಸ್ಥಳದಲ್ಲಿ ಇದ್ದಿದ್ದು ನಿಜವಾಗಿದ್ದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಇದೀಗ ಮತ್ತೆ ಹೇಳಿಕೆ ನೀಡುವ ಮೂಲಕ ಮಗನನ್ನು ಅಪ್ಪ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಲಖೀಂಪುರದಲ್ಲಿ ನಾಲ್ವರು ರೈತರನ್ನು ಕೊಂದ ಪ್ರಕರಣ – ಇನ್ನೂ ಅರೆಸ್ಟ್ ಆಗಿಲ್ಲ ಮಂತ್ರಿ ಮಗ

    ದುರ್ಘನೆ ನಡೆದ ಸಂದರ್ಭದಲ್ಲಿ ನನ್ನ ಮಗ ಕಾರಿನಲ್ಲಿ ಇರಲಿಲ್ಲ. ಪ್ರತಿಭಟನೆ ನಡೆಸುತ್ತಿದ್ದ ರೈತರು ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಚಾಲಕನಿಗೂ ಗಾಯಗಳಾಗಿತ್ತು. ಗಾಯಗೊಂಡಿದ್ದರಿಂದ ಚಾಲಕ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾನೆ. ಪರಿಣಾಮ ಸ್ಥಳದಲ್ಲಿದ್ದ ರೈತರ ಮೇಲೆ ಕಾರು ಹರಿದಿದೆ. ಅವಘಡದಲ್ಲಿ ಜೀವ ಕಳೆದುಕೊಂಡು ರೈತರ ಬಗ್ಗೆ ನನಗೂ ಮರುಕವಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಲು ನಾನು ಒತ್ತಾಯಿಸುತ್ತೇನೆ ಎಂದು ಅಜಯ್ ಮಿಶ್ರಾ ಹೇಳಿದ್ದಾರೆ.

    ಒಟ್ಟಾರೆ ಪ್ರಕರಣ ಸಂಬಂಧ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ವಿರುದ್ಧ ಲಖೀಂಪುರ್ ಖೇರಿ ಠಾಣೆಯ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಇದುವರೆಗೆ ಆರೋಪಿಯ ಬಂಧನವಾಗಿಲ್ಲ. ಸದ್ಯ ಇದನ್ನು ವಿರೋಧ ಪಕ್ಷಗಳು ಪ್ರಶ್ನಿಸುತ್ತಿವೆ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR