Tag: ಲಕ್ಷ್ಮೀ ಹೆಬ್ಬಾಳ್ಕರ್

  • ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡಿಗರ ಪಾಲಿಗೆ ಪಿಶಾಚಿ, ದೆವ್ವ: ವಾಟಾಳ್ ನಾಗರಾಜ್

    ಲಕ್ಷ್ಮೀ ಹೆಬ್ಬಾಳ್ಕರ್ ಕನ್ನಡಿಗರ ಪಾಲಿಗೆ ಪಿಶಾಚಿ, ದೆವ್ವ: ವಾಟಾಳ್ ನಾಗರಾಜ್

    ಬೆಂಗಳೂರು: ಲಕ್ಷ್ಮಿ ಹೆಬ್ಬಾಳ್ಕರ್ ಕೆಟ್ಟ ಮಹಿಳೆಯಾಗಿದ್ದು, ಕನ್ನಡಿಗರ ಪಾಲಿಗೆ ಪಿಶಾಚಿ ಮತ್ತು ದೆವ್ವ ಎಂದು ವಾಟಾಳ್ ನಾಗರಾಜ್ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

    ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕನ್ನಡ ಒಕ್ಕೂಟ, ಪ್ರವೀಣ್ ಶೆಟ್ಟಿ ಬಣ, ಕರವೇ ಕಾರ್ಯಕರ್ತರು, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನಗರದ ಮೌರ್ಯ ಸರ್ಕಲ್‍ನಲ್ಲಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿ ಮತ್ತು ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್‍ಗೆ ಇಪ್ಪತ್ತೆಂಟು ಗಂಟೆಗಳ ಕಾಲ ಗಡುವು ನೀಡುತ್ತೇವೆ. ಹೆಬ್ಬಾಳ್ಕರ್ ಅವರನ್ನು ಮಹಿಳಾ ಅಧ್ಯಕ್ಷ ಗಿರಿಯಿಂದ ಕೆಳಗಿಳಿಸಿ ಇಲ್ಲದಿದ್ದರೆ ನಾವು ಬೆಳಗಾವಿಯಿಂದ ಗಡಿಪಾರು ಮಾಡುವುದ್ದಕ್ಕೆ ಜಿಲ್ಲಾಡಳಿತಕ್ಕೆ ಹೇಳುತ್ತೇವೆ ಎಂದು ಆಗ್ರಹಿಸಿದರು.

     

    ಒಂದು ವೇಳೆ ಹುದ್ದೆಯಿಂದ ಕೆಳಗಡೆ ಇಳಿಸದೇ ಇದ್ದಲ್ಲಿ, ಬೆಳಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್‍ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪ್ರತಿಭಟನೆ ಮಾಡುತ್ತೇವೆ. ಆಕೆಗೆ ತಲೆ ಸರಿಯಿಲ್ಲ ಆಕೆಯನ್ನು ನಿಮ್ಹಾನ್ಸ್‍ಗೆ ಸೇರಿಸಬೇಕು ಎಂದು ವಾಟಾಳ್ ನಾಗರಾಜ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ ಗೋವಿಂದು ಮಾತನಾಡಿ, ಲಕ್ಷ್ಮೀ ಹೆಬ್ಬಾಳ್ಕರ್‍ಗೆ ನಾಚಿಕೆಯಾಗಬೇಕು. ಕನ್ನಡಿಗರ ಮಾನ ಮರ್ಯಾದೆ ಹರಾಜು ಹಾಕಿದ್ದಾರೆ. ಅವರ ನಾಟಕದ ಕ್ಷಮೆ ನಮಗೆ ಬೇಕಾಗಿಲ್ಲ, ಅದನ್ನು ನಾವು ಒಪ್ಪಿಕೊಳ್ಳುವುದ್ದಿಲ್ಲ. ಲಕ್ಷ್ಮೀ ಅವರನ್ನು ಗಡಿಪಾರು ಮಾಡಲಿ ಮತ್ತು ಅವರ ರಾಜೀನಾಮೆ ಪಡೆದುಕೊಳ್ಳಬೇಕು. ಮುಖ್ಯಮಂತ್ರಿಗಳೇ, ಪರಮೇಶ್ವರ್, ದಿನೇಶ್ ಗುಂಡುರಾವ್ ಹೆಬ್ಬಾಳ್ಕರ್ ವಿರುದ್ಧ ಏನ್ ಕ್ರಮ ಕೈಗೊಳ್ಳುತ್ತೀರಾ ಎಂದು ಪ್ರಶ್ನಿಸಿ ಕಿಡಿಕಾರಿದರು.

    ಇಂಧನ ಸಚಿವ ಡಿಕೆ ಶಿವಕುಮಾರ್ ಲಕ್ಷ್ಮಿ ಅವರ ಸಮರ್ಥನೆಗೆ ಇಳಿದಿದ್ದಾರೆ. ನಿಮಗೆ ಮರಾಠಿ ಬರುತ್ತಾ? ಭಾಷೆ ಬರದೆ ಇದ್ದರೆ ಹೇಗೆ ಸಮರ್ಥನೆ ಮಾಡಿಕೊಳ್ಳುತ್ತಿರಾ? ಗ್ಲಾಮರ್ ಮತ್ತು ದುಡ್ಡು ಇದೆ ಅಂತಾ ಆಟವಾಡುತ್ತಿದ್ದೀರ? ಕನ್ನಡ ಪರ ಏನು ಕೆಲಸ ಮಾಡಿದ್ದೀರಾ? ಸಂಬಾಜಿ ಪಾಟೀಲ್ ಕನ್ನಡಿಗರ ಶವ ಯಾತ್ರೆ ಮಾಡುತ್ತೀನಿ ಎಂದಾಗ ಎಲ್ಲಿ ಹೋಗಿತ್ತು ನಿಮ್ಮ ಆಕ್ರೋಶ? ಶನಿವಾರ ಬೆಳಗ್ಗೆ ಬೆಳಗಾವಿಗೆ ಹೋಗಿ ದೊಡ್ಡ ಹೋರಾಟ ಮಾಡುತ್ತೇವೆ. ಆಕೆಯನ್ನು ಪಕ್ಷದಿಂದ ಕಿತ್ತು ಹಾಕದಿದ್ದರೆ ಉಗ್ರಹೋರಾಟ ನಡೆಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

  • ಕನ್ನಡಿಗರ ವಿರುದ್ಧ ಸಿಎಂ ಲಕ್ಷ್ಮೀ ಹೆಬ್ಬಾಳ್ಕರನ್ನ ಛೂ ಬಿಟ್ಟಿದ್ದಾರೆ: ಕರಂದ್ಲಾಜೆ

    ಕನ್ನಡಿಗರ ವಿರುದ್ಧ ಸಿಎಂ ಲಕ್ಷ್ಮೀ ಹೆಬ್ಬಾಳ್ಕರನ್ನ ಛೂ ಬಿಟ್ಟಿದ್ದಾರೆ: ಕರಂದ್ಲಾಜೆ

    ಬೆಂಗಳೂರು: ಕನ್ನಡಿಗರ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಿದ್ದರಾಮಯ್ಯ ಛೂ ಬಿಟ್ಟಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಚುನಾವಣೆ ವೇಳೆಯಲ್ಲಿ ಮಾತ್ರ ಕನ್ನಡ ಪ್ರೀತಿ ತೋರಿಸ್ತಾರೆ. ಧ್ಚಜದ ವಿಚಾರದಲ್ಲಿ ಆಗಿರಬಹುದು, ಹಿಂದೆ ಹೇಳಿಕೆ ಆಗಿರಬಹುದು, ಈ ವಿಚಾರಗಳಲ್ಲಿ ಕೇಂದ್ರಕ್ಕೆ ಪತ್ರ ಬರೆದಿದ್ರು. ಆದ್ರೆ ನಿಮ್ಮ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆಯ ಹೇಳಿಕೆಯ ಬಗ್ಗೆ ನಿಮ್ಮ ನಿಲುವು ಏನು ಎಂದು ಪ್ರಶ್ನಿಸಿದರು.

    ಕೊಲೆ ಮಾಡಿ ಕ್ಷಮೆ ಕೇಳಿದ್ರೆ ಕ್ಷಮಿಸಲ್ಲ ಕೋರ್ಟ್. ಮೊದಲು ಶಿಕ್ಷೆ ಆಗುತ್ತೆ, ಬಳಿಕ ಜೈಲಿನಲ್ಲಿದ್ದಾಗ ಕ್ಷಮಾದಾನ ಸಿಗುತ್ತೆ. ತಪ್ಪು ಮಾಡಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಷಮೆ ಕೇಳಿದ್ರೆ ಆಗಲ್ಲ. ಮೊದಲು ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

    ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು. ಕಾನೂನು ಎಲ್ಲರಿಗೂ ಒಂದೇ. ಸಿದ್ದರಾಮಯ್ಯ ಅವರೇ, ಪರಮೇಶ್ವರ್ ಅವರೇ ನಿಮ್ಮ ಮಹಿಳಾ ಘಟಕದ ಅಧ್ಯಕ್ಷೆಯನ್ನ ವಜಾ ಮಾಡಿ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿಸಿ ಎಂದರು.

    ಮಹಾಜನ್ ವರದಿ ಜಾರಿಯಾಗಬೇಕು ಎಂಬುದು ಬಿಜೆಪಿ ನಿಲುವು. ಭಾಷೆ, ನಾಡು, ಗಡಿ ಬಗ್ಗೆ ಕಾಂಗ್ರೆಸ್ ಗೊಂದಲ ಮೂಡಿಸುತ್ತಿದೆ. ಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ ಬಗ್ಗೆ ಪ್ರಕರಣ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಜೈ ಮಹಾರಾಷ್ಟ್ರ ಎಂದು ಭಾಷಣ ಮುಕ್ತಾಯಗೊಳಿಸುತ್ತಾರೆ. ಕರ್ನಾಟಕ ವಿರೋಧಿ ನೀತಿ ಕಾಂಗ್ರೆಸ್ ಪ್ರತಿಸಲ ಅನುಸರಿಸುತ್ತಾ ಬಂದಿದೆ ಎಂದು ಕಿಡಿಕಾರಿದರು.

    ಬೆಳಗಾವಿ ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟ ಇದೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಅದನ್ನು ಸಾಬೀತು ಪಡಿಸಲೆಂದೇ ಬಿಜೆಪಿ ಅವಧಿಯಲ್ಲಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿದ್ದು. ಅಧಿವೇಶನ ನಡೆಸುವಂತೆ ಮಾಡಿದ್ದು ನಾವು. ಇಷ್ಟಾದ ಮೇಲೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಮರ್ಥಿಸಿಕೊಳ್ತಿದ್ದಾರೆ ಎಂದರು.

    ಬೆಳಗಾವಿಯಲ್ಲಿ ಮಹಾರಾಷ್ಟ್ರಿಗರ ಪುಂಡಾಟಿಕೆ ಮಾಡಿದ್ರೆ ಏನು ಕ್ರಮ ಕೈಗೊಳ್ಳಲಾಗುತ್ತೋ ಅದೇ ಕ್ರಮವನ್ನು ಹೆಬ್ಬಾಳ್ಕರ್ ವಿರುದ್ಧ ಸರ್ಕಾರ ಕೈಗೊಳ್ಳಬೇಕು. ಕನ್ನಡದ ನೆಲದ ಮೇಲೆ ನಿಂತು ಕನ್ನಡಿಗರಿಗೆ ಅವಹೇಳನ ಮಾಡುವುದನ್ನು ಸಹಿಸಲ್ಲ. ಕನ್ನಡ ಧ್ವಜ ವಿಚಾರದಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಹಾಕುತ್ತಿದೆ. ನಾಡಗೀತೆಗೆ ಮತ್ತು ಧ್ವಜಕ್ಕೆ ನಾವೆಲ್ಲಾ ಗೌರವ ನೀಡುತ್ತಿದ್ದೇವೆ. ಆದರೆ ಹೆಬ್ಬಾಳ್ಕರ್ ಹೇಳಿಕೆಯಿಂದಾಗಿ ಕಾಂಗ್ರೆಸ್ ನ ಗೋಸುಂಬೆತನ ಬಹಿರಂಗವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಿದೆ ಎಂದರು.

    ಸುಳ್ಳು ಮಾಹಿತಿ ನೀಡಿ ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಮತದಾನ ಮಾಡಿರುವ ಆರ್‍ಬಿ ತಿಮ್ಮಾಪುರ ಅವರನ್ನು ಯಾವುದೇ ಕಾರಣಕ್ಕೂ ಮಂತ್ರಿ ಮಾಡಬಾರದು. ಈ ಸಂಬಂಧ ರಾಜ್ಯಪಾಲರಿಗೂ ದೂರು ನೀಡುತ್ತೇವೆ. ಅಲ್ಲದೆ ಇದರ ವಿರುದ್ಧ ರಾಜ್ಯಾದ್ಯಂತ ತೀವ್ರ ಪ್ರತಿಭಟನೆಯನ್ನೂ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

     

  • ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ರೆ ಎಲ್ಲರಿಗಿಂತ ಮೊದ್ಲು ನಾನು ಜೈ ಮಹಾರಾಷ್ಟ್ರ ಅಂತೀನಿ: ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ

    ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ರೆ ಎಲ್ಲರಿಗಿಂತ ಮೊದ್ಲು ನಾನು ಜೈ ಮಹಾರಾಷ್ಟ್ರ ಅಂತೀನಿ: ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ

    ಬೆಳಗಾವಿ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು ನಾನು ಜೈ ಮಹಾರಾಷ್ಟ್ರ ಅಂತ ಹೇಳುತ್ತೀನಿ ಅಂತ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಆಗಸ್ಟ್ 27ರಂದು ಬಸರೀಕಟ್ಟಿ ಗ್ರಾಮದಲ್ಲಿ ಮಾಡಿದ ಭಾಷಣದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಈ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಇದರ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ನಾನು ಈಗ ಕರ್ನಾಟಕದಲ್ಲಿ ಇದ್ದೇನೆ. ಆದರೆ ಗಡಿ ವಿಚಾರ ಸುಪ್ರೀಂ ಕೋರ್ಟ್‍ನಲ್ಲಿದೆ. ಪ್ರಕರಣ ಮುಗಿದು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು ನಾನೇ ಮಹಾರಾಷ್ಟ್ರ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಅಂತಾ ಹೇಳುವೆ. ಯಾವನಿಗೂ ಈ ರೀತಿ ಹೇಳುವ ಧೈರ್ಯ ಇಲ್ಲ. ಆದರೆ ನನಗೆ ಯಾರ ಭಯವೂ ಇಲ್ಲ. ನಾನು ಯಾರಿಗೂ ಹೆದರುವುದಿಲ್ಲ. ನಾನು ಹೆದರುವುದು ಆ ಭಗವಂತನಿಗೆ ಮತ್ತು ನನ್ನ ತಂದೆ-ತಾಯಿಗೆ ಮಾತ್ರ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

    ನನಗೆ ಜಾತಿ, ಧರ್ಮ, ವ್ಯಕ್ತಿಯ ಬಗ್ಗೆ ಯಾವುದೇ ನಂಬಿಕೆ ಇಲ್ಲ. ಯಾರಿಂದ ಏನೂ ಆಗಬೇಕಿಲ್ಲ. ನನಗೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭಿವೃದ್ಧಿ ಆಗಬೇಕು ಅಷ್ಟೇ ಎಂದಿದ್ದಾರೆ.

  • ಹಿಂದೂಗಳ ಗುಡಿಯಿರೋ ಜಾಗದಲ್ಲೇ ಕಸಾಯಿಖಾನೆ- ಸಿದ್ದು ಸರ್ಕಾರದ ನಡೆಗೆ ‘ಕೈ’ನಲ್ಲೇ ವಿರೋಧ

    ಹಿಂದೂಗಳ ಗುಡಿಯಿರೋ ಜಾಗದಲ್ಲೇ ಕಸಾಯಿಖಾನೆ- ಸಿದ್ದು ಸರ್ಕಾರದ ನಡೆಗೆ ‘ಕೈ’ನಲ್ಲೇ ವಿರೋಧ

    ಬೆಳಗಾವಿ: ರಾಜ್ಯದಲ್ಲಿ ಎರಡು ಹೈಟೆಕ್ ಕಸಾಯಿಖಾನೆ ಸ್ಥಾಪಿಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್‍ನಲ್ಲೇ ವಿರೋಧ ವ್ಯಕ್ತವಾಗಿದೆ. ಹಿಂದೂಗಳ ಗುಡಿಯಿರುವ ಬೆಳಗಾವಿಯ ಹಿರೇಬಾಗೇವಾಡಿಯಲ್ಲಿ ಕಸಾಯಿಖಾನೆ ನಿರ್ಮಾಣ ವಿರೋಧಿಸಿ ಕುಂದಾನಗರಿಯಲ್ಲಿ ಪ್ರತಿಭಟನೆ ನಡೆದಿದೆ.

    ಟ್ರ್ಯಾಕ್ಟರ್ ಮೂಲಕ ಆಗಮಿಸಿ ಚನ್ನಮ್ಮ ಸರ್ಕಲ್‍ನಲ್ಲಿ ಗ್ರಾಮಸ್ಥರು ನಡೆಸಿದ ಪ್ರತಿಭಟನೆಯಲ್ಲಿ ಬಿಜೆಪಿ ಶಾಸಕ ಸಂಜಯ್ ಪಾಟೀಲ್ ಪಾಲ್ಗೊಂಡಿದ್ದರು. ಅಲ್ಲದೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಪಾಲ್ಗೊಂಡಿದ್ರು. ಈ ಗ್ರಾಮದಲ್ಲಿ ಹಿಂದೂ-ಮುಸ್ಲಿಮರು ಸೌಹಾರ್ದಯುತವಾಗಿ ಬದುಕುತ್ತಿದ್ದಾರೆ. ಕಸಾಯಿಖಾನೆ ಸ್ಥಾಪನೆಯಿಂದ ಸೌಹಾರ್ದತೆಗೆ ಧಕ್ಕೆ ಬರಬಹುದು ಅಂತಾ ಲಕ್ಷ್ಮಿ ಹೆಬ್ಬಾಳ್ಕರ್ ಆತಂಕ ವ್ಯಕ್ತಪಡಿಸಿದ್ರು.

    ಎರಡು ಕಡೆಗಳಲ್ಲಿ 28 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಕಸಾಯಿಖಾನೆ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿತ್ತು. ಹಿರೇಬಾಗೇವಾಡಿಯಲ್ಲಿ 20 ಎಕರೆ ಗೋಮಾಳ ಭೂಮಿಯಲ್ಲಿ ಕಸಾಯಿಖಾನೆ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ. ಆದ್ರೆ ಸರ್ಕಾರದ ನಿರ್ಧಾರದ ವಿರುದ್ಧ ಗ್ರಾಮ ಪಂಚಾಯಿತಿ ವಿಶೇಷ ಸಭೆ ನಡೆಸಿ ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.

     

  • ವಿಶ್ವಗುರು ಬಸವಣ್ಣ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

    ವಿಶ್ವಗುರು ಬಸವಣ್ಣ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಲು ಹೊರಟ ಮಹಾನ್ ಮಹಾನವತಾವಾದಿ ಬಸವೇಶ್ವರರು ಕೊನೆಗೆ ಏನಾದರು… ಬಸವಣ್ಣನವರು ಆತ್ಮಹತ್ಯೆ ಮಾಡಿಕೊಂಡರು ಅಂತ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿಕೆ ನೀಡಿದ್ದಾರೆ.

    ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಆಯೋಜಿಸಿದ್ದ ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ದೇಶಿಸಿ ಮಾತನಾಡುವ ವೇಳೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‍ಗೆ ಮುಜುಗರ ತಂದಿಟ್ಟಿದ್ದಾರೆ. ಅಲ್ಲದೇ ಬಸವಣ್ಣನವರ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಈ ಬೆನ್ನಲ್ಲೇ, ಬಸವದಳದ ಕಾರ್ಯಕರ್ತರು ಲಕ್ಷ್ಮೀ ಹೆಬ್ಬಾಳ್ಕರ್‍ಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ರು. ಬಸವೇಶ್ವರರು ಆತ್ಮಹತ್ಯೆ ಮಾಡಿಕೊಂಡಿದ್ದರು ಅಂತಾ ಹೇಗೆ ಹೇಳಿದ್ರು ಅಂತಾ ತರಾಟೆಗೆ ತಗೊಂಡ್ರು. ಇದೇ ಸಂದರ್ಭದಲ್ಲಿ ಹೆಬ್ಬಾಳ್ಕರ್ ತಮ್ಮ ಮಾತನ್ನು ಸಮರ್ಥಿಸಿಕೊಂಡು ಅಲ್ಲಿಂದ ಕಾಲ್ಕಿತ್ತರು.

    ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿಯವರಿಗೆ ಅಕ್ರಮ ಸಂಬಂಧವಿತ್ತು ಎಂದಿದ್ದ ರಂಭಾಪುರಿ ಶ್ರೀಗಳ ವಿರುದ್ಧ ಪ್ರತಿಭಟನೆಗಳು ಮುಂದುವರೆದಿವೆ. ಬೀದರ್, ಧಾರವಾಡ, ವಿಜಯಪುರ, ಸಂಕೇಶ್ವರ, ಚಿಕ್ಕೋಡಿ, ಬೆಂಗಳೂರು ಸೇರಿದಂತೆ ಹಲವು ಕಡೆ ಪ್ರತಿಭಟನೆ ನಡೆದಿವೆ. ಕ್ಷಮೆ ಕೇಳೋವರೆಗೂ ಪ್ರತಿಭಟನೆ ನಿರಂತರ ಎಂಬ ಎಚ್ಚರಿಕೆ ನೀಡಿದ್ದಾರೆ.