Tag: ಲಕ್ಷ್ಮೀ ಹೆಬ್ಬಾಳ್ಕರ್

  • ನಡುವೆ ಅಂತರ ಕಾಯ್ದುಕೊಂಡ ಸತೀಶ್ ಜಾರಕಿಹೊಳಿ, ಹೆಬ್ಬಾಳ್ಕರ್

    ನಡುವೆ ಅಂತರ ಕಾಯ್ದುಕೊಂಡ ಸತೀಶ್ ಜಾರಕಿಹೊಳಿ, ಹೆಬ್ಬಾಳ್ಕರ್

    ಬೆಳಗಾವಿ: ಮಾಜಿ ಸಚಿವ ಸತೀಶ್ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವೇದಿಕೆ ಮೇಲೆ ಪಕ್ಕ ಕುಳಿತುಕೊಂಡರು ನಡುವೆ ಅಂತರ ಕಾಯ್ದುಕೊಂಡಿದ್ದಾರೆ.

    ನಗರದ ಸಿಪಿಇಡಿ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಒಂದೇ ಸೋಫಾ ಮೇಲೆ ಅಕ್ಕ ಪಕ್ಕ ಕುಳಿತರೂ ನಡುವೆ ಜಾಗ ಖಾಲಿ ಬಿಟ್ಟು ಕುಳಿತಿದ್ದಾರೆ. ಮಾತ್ರವಲ್ಲದೆ ತುಟಿ ಬಿಚ್ಚಿ ಸಹ ಮಾತನಾಡಿಲ್ಲ. ಒಬ್ಬರ ಮುಖ ಮತ್ತೊಬ್ಬರು ನೋಡದೇ ಇಡೀ ಕಾರ್ಯಕ್ರಮದಲ್ಲಿ ಪಕ್ಕದಲ್ಲಿ ಸುಮ್ಮನೇ ಕುಳಿತಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕ ಅಭಯ ಪಾಟೀಲ್, ಅನಿಲ್ ಬೆನಕೆ ಜೊತೆ ಚರ್ಚೆ ಮಾಡುತ್ತಿದ್ದರು. ಇತ್ತ ಸತೀಶ ಜಾರಕಿಹೊಳಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಜೊತೆಗೆ ಚರ್ಚೆ ನಡೆಸುತ್ತಿದ್ದರು.

    ಜನ ನೋಡುತ್ತಾರೆ ಎನ್ನುವುದನ್ನೂ ಅರಿಯದ ಉಭಯ ನಾಯಕರು ಕಾರ್ಯಕ್ರಮ ಪೂರ್ತಿ ಮಾತನಾಡದೆ ಕುಳಿತಿದ್ದರು. ಇಬ್ಬರೂ ಗೊತ್ತಿಲ್ಲದಂತೆ ಹಾಗೂ ನೋಡಿಲ್ಲದಂತೆ ನಟಿಸುವ ಮೂಲಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಎಲ್ಲರೂ ಅವರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

    ರಾಜ್ಯೋತ್ಸವದ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಧ್ವಜಾರೋಹಣ ನೆರವೇರಿಸಿದರು. ತೆರೆದ ವಾಹನದಲ್ಲಿ ಗೌರವವಂದನೆ ಸ್ವೀಕರಿಸಿ, ನಂತರ ತಂಡಗಳ ಪರಿವೀಕ್ಷಣೆ ನಡೆಸಿದರು.

  • ಹೆಬ್ಬಾಳ್ಕರ್‌ಗೆ ಇಡಿ ನೋಟಿಸ್ – ಸಹವಾಸದಿಂದ ಸನ್ಯಾಸಿ ಕೆಟ್ಟ ಎಂದ ಸಿ.ಟಿ ರವಿ

    ಹೆಬ್ಬಾಳ್ಕರ್‌ಗೆ ಇಡಿ ನೋಟಿಸ್ – ಸಹವಾಸದಿಂದ ಸನ್ಯಾಸಿ ಕೆಟ್ಟ ಎಂದ ಸಿ.ಟಿ ರವಿ

    ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಇಡಿ ನೋಟಿಸ್ ನೀಡಿದ್ದಕ್ಕೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾರ್ಮಿಕವಾಗಿ ಉತ್ತರಿಸಿದ್ದು, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತಾಗಿದೆ ಎಂದು ಹೇಳಿದ್ದಾರೆ.

    ವಿಕಾಸ ಸೌಧದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಅವರು, ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬಂತಾಗಿದ್ದು, ಡಿಕೆಶಿ ಜೊತೆ ವ್ಯವಹಾರಿಕ ನಂಟು ಹೊಂದಿದ್ದರಿಂದ ವಿಚಾರಣೆಗೆ ಹಾಜರಾಗುವಂತೆ ಇಡಿ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ನೋಟಿಸ್ ನೀಡಿದೆ ಎಂದು ತಿಳಿಸಿದ್ದಾರೆ.

    ನೆರೆ ಪರಿಹಾರದ ಕುರಿತು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡುವ ಬದಲು ಹತ್ತು ಗ್ರಾಮಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ, ಧನಾತ್ಮಕವಾಗಿ ಪ್ರತಿಕ್ರಿಯಿಸಲಿ. ಈಗಾಗಲೇ ಕೇಂದ್ರ ಸರ್ಕಾರ ನೆರೆ ಸಂತ್ರಸ್ತರಿಗೆ ಮಧ್ಯಂತರ ಪರಿಹಾರ ಬಿಡುಗಡೆ ಮಾಡಿದೆ. ನಮ್ಮ ಅಧಿಕಾರಿಗಳೂ ದೆಹಲಿಗೆ ಹೋಗಿದ್ದಾರೆ. ಶೀಘ್ರದಲ್ಲೇ ಪರಿಹಾರದ ಹಣ ಬಿಡುಗಡೆಯಾಗುತ್ತದೆ ಎಂದು ತಿಳಿಸಿದರು.

    ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿಯ ವಿಷಯದಲ್ಲಿ ಎಂದೂ ರಾಜಕೀಯ, ಪಕ್ಷಪಾತ ಮಾಡುವುದಿಲ್ಲ. ಕಾಂಗ್ರೆಸ್ ಅವಧಿಯಲ್ಲಿ ನೆರೆ ಸಂತ್ರಸ್ತರಿಗೆ 3,600ರೂ. ಗಳ ಪರಿಹಾರ ನೀಡಲಾಗುತ್ತಿತ್ತು. ಆದರೆ ಈಗ ತಲಾ 10,000ರೂ. ವಿತರಿಸಿದ್ದೇವೆ. ಮನೆ ನಿರ್ಮಾಣಕ್ಕೆ ಮೊದಲ ಹಂತದಲ್ಲಿ ತಲಾ ಒಂದು ಲಕ್ಷ ವಿತರಿಸಲಾಗುತ್ತಿದೆ. ಉಳಿದ ನಾಲ್ಕು ಲಕ್ಷ ಸಹ ಬಿಡುಗಡೆ ಆಗುತ್ತದೆ ಎಂದು ಭರವಸೆ ನೀಡಿದರು.

    ಅಲ್ಲದೆ ಇತ್ತೀಚೆಗೆ ಜಯಂತಿಗಳು ಜಾತಿ ಜಯಂತಿಗಳಾಗಿ ಪರಿವರ್ತನೆಯಾಗುತ್ತಿವೆ. ದಿನಕ್ಕೊಬ್ಬ ಸಂತರು, ಪ್ರಮುಖರ ಜಯಂತಿಗಳ ಪಟ್ಟಿ ಬೆಳೆಯುತ್ತಲೇ ಇದೆ. ಹೀಗಾಗಿ ಸದ್ಯದಲ್ಲೇ ಸಮಾಜದ ಪ್ರಮುಖರ ಸಭೆ ಕರೆದು ಜಯಂತಿಗಳ ಆಚರಣೆಯ ಕುರಿತು ಮರು ಚಿಂತನೆ ನಡೆಸಲಾಗುವುದು. ಜಯಂತಿಗಳಿಗೆ ಹೊಸ ರೂಪ ಕೊಡಲಾಗುವುದು ಎಂದರು.

  • ಡಿಕೆಶಿ ಬಿಡುಗಡೆಗೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ – ಹೆಬ್ಬಾಳ್ಕರ್ ಹರಕೆ

    ಡಿಕೆಶಿ ಬಿಡುಗಡೆಗೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ – ಹೆಬ್ಬಾಳ್ಕರ್ ಹರಕೆ

    ಉಡುಪಿ: ಇಡಿಯಿಂದ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಶೀಘ್ರ ಬಿಡುಗಡೆ ಆಗುವಂತೆ ಕೊಲ್ಲೂರಿನಲ್ಲಿ ಚಂಡಿಕಾ ಹೋಮ ನಡೆಸಲಾಯ್ತು.

    ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ಇವತ್ತು ಬೆಳಗ್ಗಿನಿಂದಲೇ ಚಂಡಿಕಾಹೋಮ ನೆರವೇರಿತು. ಮುಂಜಾನೆಯೇ ಡಿ.ಕೆ.ಶಿಯವರ ದೊಡ್ಡಪ್ಪ ಮತ್ತು ಚಿಕ್ಕಪ್ಪನ ಮಕ್ಕಳು ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

    ಚಂಡಿಕಾ ಹೋಮದ ಹರಕೆಯನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೊಂಡಿದ್ದರು ಎನ್ನಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತ ಕಾರ್ಯದರ್ಶಿ ಚಂಡಿಕಾಹೋಮ ಬುಕ್ಕಿಂಗ್ ಮಾಡಿದ್ದರು. ಡಿಕೆಶಿ ಫೋಟೋ ಮುಂದಿಟ್ಟು ಚಂಡಿಕಾಹೋಮ ನಡೆಸಲಾಯ್ತು. ಶಿವಕುಮಾರ್ ಅವರ ಸಂಕಷ್ಟಗಳೆಲ್ಲ ಪರಿಹಾರವಾಗಿ ಶೀಘ್ರ ಬಂಧಮುಕ್ತರಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆಯೂ ನಡೆಯಿತು. ರಾಜ್ಯ ಕಾಂಗ್ರೆಸ್‍ನ ಪದಾಧಿಕಾರಿಗಳು, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಭಾಗಿಯಾಗಿ ವಿಶೇಷ ಪೂಜೆ ಸಲ್ಲಿಸಿದರು.

  • ಕಾಂಗ್ರೆಸ್ ಸಚಿವರ ವಿರುದ್ಧ ಮತ್ತೆ ಸಿಡಿದೆದ್ದ ಲಕ್ಷ್ಮಿ ಹೆಬ್ಬಾಳ್ಕರ್

    ಕಾಂಗ್ರೆಸ್ ಸಚಿವರ ವಿರುದ್ಧ ಮತ್ತೆ ಸಿಡಿದೆದ್ದ ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮತ್ತೆ ಕಾಂಗ್ರೆಸ್ ನಾಯಕರ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುವ ಮೂಲಕ ಸಿಡಿದೆದ್ದಿದ್ದಾರೆ.

    ರೈತರ ವಿರೋಧದ ನಡುವೆಯೂ ಹಲಗಾ ಗ್ರಾಮದಲ್ಲಿ ಎಸ್‍ಟಿಪಿ ಪ್ಲಾಂಟ್ ಕಾಮಗಾರಿ ಆರಂಭ ಆದ ಹಿನ್ನೆಲೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಕಾಏಕಿ ಬೆಳಗ್ಗೆ 8 ಗಂಟೆಗೆ ಹೋಗಿ ರೈತರ ಜಮೀನು ಕಬ್ಜಾ ಮಾಡಿ ಎಂದು ಹೇಳಿ ಇಂದಿಗೆ ಒಂಬತ್ತು ದಿನಗಳೇ ಕಳೆದಿದೆ. ನಾನು ಇಷ್ಟು ದಿನ ಸಿಎಲ್‍ಪಿ(ಕಾಂಗ್ರೆಸ್ ಶಾಸಕಾಂಗ ಸಭೆ) ಸಭೆಗೆಂದು ಬೆಂಗಳೂರಿಗೆ ಹೋಗಿದ್ದೆ. ಅದಕ್ಕಿಂತ ಒಂದು ದಿನದ ಮೊದಲು ನಾನು ಜಿಲ್ಲಾಧಿಕಾರಿಗಳನ್ನು ಹಾಗೂ ಚಂದ್ರಪ್ಪ ಅವರನ್ನು ಡಿಸಿ ಕಚೇರಿಯಲ್ಲಿ ಭೇಟಿ ಮಾಡಿದ್ದೆ. ಆದರೆ ಆ ಸಂದರ್ಭದಲ್ಲಿ ಅವರು ನನ್ನ ಗಮನಕ್ಕೆ ತರಲಿಲ್ಲ ಹಾಗೂ ನಿಮ್ಮ ಸಹಕಾರ ನೀಡಿ ಎಂದು ಕೇಳಲಿಲ್ಲ ಎಂದರು.

    ಅಭಿವೃದ್ಧಿಗೆ ನಾನು ಎಂದಿಗೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಹಲಗಾ ಗ್ರಾಮಕ್ಕೆ ಹಾಗೂ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಪದೇ ಪದೇ ಅನ್ಯಾಯ ಆಗುತ್ತಿದೆ. 2008ರಲ್ಲಿ ಇದೇ ಹಲಗಾ ಗ್ರಾಮಸ್ಥರು ಜಮೀನನ್ನು ಸುವರ್ಣ ಸೌಧ ಕಟ್ಟಲು ವಶ ಪಡೆದುಕೊಂಡಿದ್ದರು. ಆಗ ರೈತರ ಹೋರಾಟ ನಡೆಯಿತು. 2009ರಲ್ಲಿ ಅಂದಿನ ಸರ್ಕಾರ ಎಸ್‍ಟಿಪಿ ಪ್ಲಾಂಟ್ ಹಲಗಾ ಊರಿನಲ್ಲಿ ಮಾಡಬೇಕು ಎಂದು ಹೇಳಿ ನಿರ್ಣಯ ತೆಗೆದುಕೊಂಡಿದ್ದರು. 1 ವರ್ಷದ ಮೊದಲು 13 ಲಕ್ಷ ರೂ. ಕೊಟ್ಟಿದ್ದರು. 1 ವರ್ಷದ ನಂತರ 3 ಲಕ್ಷ ರೂ. ನೀಡಿದ್ದಾರೆ. ಈ ರೀತಿ ಅನ್ಯಾಯ ಆಗಿದ್ದಕ್ಕೆ ರೈತರು ಜಮೀನು ನೀಡುತ್ತಿಲ್ಲ ಎಂದು ಹೇಳಿದ್ದಾರೆ.

    ಸುವರ್ಣಸೌಧದ ಸುತ್ತಮುತ್ತ ಗ್ರೀನ್ ಬೆಲ್ಟ್ ಎಂದು ಮಾಡಿದ್ದಾರೆ. ಗ್ರೀನ್ ಬೆಲ್ಟ್ ಮಾಡಿದರೆ ಅಲ್ಲಿ ಮನೆ ಕಟ್ಟಲು ಆಗುವುದಿಲ್ಲ, ಮಾರುವುದಕ್ಕೂ ಆಗಲ್ಲ. ಬಹಳಷ್ಟು ಬಡಜನರು ಇದ್ದಾರೆ. ಈ ಭಾಗದ ಜನರು ದುಃಖಗಳನ್ನು ಸರಿಪಡಿಸಬೇಕು ಎಂಬ ಉದ್ದೇಶದಿಂದ ಸುವರ್ಣಸೌಧ ಕಟ್ಟಿದ್ದಾರೆ. ನಾನು ರೈತರನ್ನು ಕರೆದು ಸಮಾಧಾನದಿಂದ ಮಾತನಾಡಿದ್ದೇನೆ. ಈ ಕಡೆ ಜಿಲ್ಲಾಡಳಿತದ ಬಳಿ ನಾವು ಮಾತನಾಡುತ್ತೇವೆ ಎಂದು ಉತ್ತರಿಸುತ್ತಾರೆ. ಕೆಯೂಡಬ್ಲೂಎಸ್ ರೈತರು ಬೆಳೆದಂತಹ ಬೆಳೆಗೆ ಬೆಲೆ ಜಾಸ್ತಿ ಮಾಡುತ್ತಿದ್ದೀರಿ. ಆದರೆ ಇದೂವರೆಗೂ ಪರಿಹಾರ ನೀಡಿಲ್ಲ. ಅನ್ಯಾಯ ಆಗಿದೆ ಇದನ್ನು ಸರಿ ಮಾಡುವ ಕೆಲಸ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಮಾಡಬೇಕಿದೆ ಎಂದರು.

    ಯಾವುದೇ ಕಾರಣಕ್ಕೂ ಬೆಳಗಾವಿ ಗ್ರಾಮೀಣದ ಜಮೀನು ಕೊಡುವುದಿಲ್ಲ ಎಂದು ನಿರ್ಧರಿಸಿದ್ದೇವೆ. ಈಗ ಏನೇ ಕೆಲಸ ಆಗಬೇಕು ಎಂದರೆ ಬೆಳಗಾವಿ ಗ್ರಾಮೀಣವನ್ನು ಹಿಡಿಯುತ್ತಾರೆ. ಇದೇ ಹಲಗಾ ಊರಿನ ಜನತೆ ಕುಡಿಯುವುದಕ್ಕೆ ನೀರು ಇಲ್ಲ. ನೀರು ಬೇಕು ಎಂದರೆ ಕಾರ್ಪೋರೇಶನ್ ನವರು ತಿರುಗಿ ಸಹ ನೋಡುವುದಿಲ್ಲ. ಜಿಲ್ಲಾಡಳಿತ ನಮ್ಮ ಕಡೆ ನೋಡುವುದಿಲ್ಲ. ನಮ್ಮ ಧ್ವನಿಗೆ ಯಾರೂ ಕಿವಿ ಕೊಡುವುದಿಲ್ಲ. ಅವರಿಗೆ ಹೃದಯಾನೇ ಇಲ್ಲ ಎಂದು ಆರೋಪಿಸಿದ್ದಾರೆ. ಮುಂದಿನ ಹೋರಾಟ ಜಿಲ್ಲಾ ಮಂತ್ರಿಗಳಿಗೆ ಬಯಸುತ್ತೇನೆ. ತಮ್ಮ ಒಂದು ನೇತೃತ್ವದಲ್ಲಿ ಒಂದು ನಿಯೋಗ ತೆಗೆದುಕೊಂಡು ತುರ್ತಾಗಿ ಸಿಎಂ ಅವರ ಜೊತೆ ಸಭೆ ನಡೆಯಬೇಕು. ಸಭೆಯಲ್ಲಿ ರೈತರ ಪರಿಹಾರ, ಅವರ ಭವಿಷ್ಯದ ಬಗ್ಗೆ ತೀರ್ಮಾನ ಮಾಡಬೇಕು. ಜಿಲ್ಲಾ ಮಂತ್ರಿಯೇ ಖುದ್ದಾಗಿ ನೋಡಿಕೊಳ್ಳಬೇಕು ಎಂದಿದ್ದಾರೆ.

  • ಫೆ.14 ಬಿಟ್ಟು ಇಂದು ಹುಟ್ಟು ಹಬ್ಬ ಆಚರಿಸಿದ ಲಕ್ಷ್ಮೀ ಹೆಬ್ಬಾಳ್ಕರ್!

    ಫೆ.14 ಬಿಟ್ಟು ಇಂದು ಹುಟ್ಟು ಹಬ್ಬ ಆಚರಿಸಿದ ಲಕ್ಷ್ಮೀ ಹೆಬ್ಬಾಳ್ಕರ್!

    ಬೆಳಗಾವಿ: ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಾವು ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ದಿನವಾದ ಇಂದು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ.

    ಶಾಸಕಿಯಾಗಿ ಆಯ್ಕೆಯಾದ ದಿನ ನನಗೆ ಮರುಜನ್ಮವಾಗಿದ್ದು, ಜನರಿಗೋಸ್ಕರ ಈ ಹುಟ್ಟು ಹಬ್ಬ ಎಂದು ಹೇಳಿ ಇಂದು ಹುಟ್ಟು ಹಬ್ಬವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಆಚರಿಸಿದ್ದಾರೆ. ಈ ಮೂಲಕ ಕ್ಷೇತ್ರದ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನವನ್ನು ಹೆಬ್ಬಾಳ್ಕರ್ ಮಾಡುತ್ತಿದ್ದಾರೆ.

    ಇಂದು ಬೆಳಗ್ಗೆ ಗಣೇಶ್ ಪುರದಲ್ಲಿರುವ ಹುಕ್ಕೇರಿ ಮಠಕ್ಕೆ ಭೇಟಿ ನೀಡಿದ ಹೆಬ್ಬಾಳ್ಕರ್ ವಿಶೇಷ ಪೂಜೆ ಸಲ್ಲಿಸಿದರು. ಇದಾದ ಬಳಿಕ ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡರು.

    ಮಠದ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕಿ, ಫೆ. 14ರಂದು ನನ್ನ ಹುಟ್ಟುಹಬ್ಬ, ಆದರೆ ಇದೇ ಮೊದಲ ಬಾರಿಗೆ ನಾನು ಶಾಸಕಿಯಾಗಿ ಆಯ್ಕೆಯಾಗಿದ್ದು ಇದು ನನ್ನ ಮರುಹುಟ್ಟು. ಹೀಗಾಗಿ ನನ್ನ ಹುಟ್ಟುಹಬ್ಬದ ದಿನವನ್ನು ಮುಂದೂಡಿ ಮೇ 12 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೇನೆ. ಶಾಸಕಿಯಾಗಿ ಆಯ್ಕೆಯಾಗಿದ್ದು ನನಗೆ ಮರುಜನ್ಮ, ನನ್ನ ಕ್ಷೇತ್ರದ ಜನರಿಗೋಸ್ಕರ ಇವತ್ತು ನನ್ನ ಹುಟ್ಟುಹಬ್ಬ ಎಂದು ಘೋಷಿಸಿಕೊಂಡು ಇಂದು ಆಚರಿಸಿಕೊಂಡಿದ್ದೇನೆ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.

  • ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌‌ರಿಂದ ನೀತಿ ಸಂಹಿತೆ ಉಲ್ಲಂಘನೆ

    ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌‌ರಿಂದ ನೀತಿ ಸಂಹಿತೆ ಉಲ್ಲಂಘನೆ

    ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮತಗಟ್ಟೆಯ ಒಳಗಡೆ ಮತಯಾಚಣೆ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ.

    ಬೆಳಗಾವಿಯ ಹಿಂಡಲಗಾ 60ರ ಮತಗಟ್ಟೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ತನ್ನ ತಾಯಿ, ಪುತ್ರ ಮತ್ತು ಸಹೋದರನ ಜೊತೆಗೆ ಬಂದು ಮತದಾನ ಮಾಡಿದ್ದಾರೆ.

    ಲಕ್ಷ್ಮೀ ಹೆಬ್ಬಾಳ್ಕರ್ ಮತದಾನ ಮಾಡಿದ ಬಳಿಕ ಮತಗಟ್ಟೆ ಆವರಣದಲ್ಲಿ ಮತದಾರರಿಗೆ ಕೈಮುಗಿದು ಇದೊಂದು ಬಾರಿ ಮತ ಹಾಕಿ ಎಂದು ಮನವಿ ಮಾಡಿಕೊಂಡಿದ್ದಾರೆ.

    ಮತಗಟ್ಟೆಯ ಆವರಣದ ಒಳಗಡೆ ಮತಯಾಚನೆ ಮಾಡುವಂತಿಲ್ಲ. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಮತಯಾಚನೆ ಮಾಡಿರುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ.

  • ಕಾಂಗ್ರೆಸ್ ‘ಪಂಚಮಸಾಲಿ’ ತಂತ್ರ!

    ಕಾಂಗ್ರೆಸ್ ‘ಪಂಚಮಸಾಲಿ’ ತಂತ್ರ!

    ಗದಗ: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಂಚಮಸಾಲಿ ಮತಗಳ ಮೇಲೆ ಕಣ್ಣಿಟ್ಟಿದ್ದು, ಈ ಬಾರಿ ಐವರು ಲಿಂಗಾಯತ ಸಮುದಾಯದವರಿಗೆ ಐದು ಟಿಕೆಟ್ ಕೊಟ್ಟಿದೆ. ಈಗ ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‍ಗೆ ವೋಟು ಹಾಕುವಂತೆ ಮನವಿ ಮಾಡುತ್ತಿದೆ.

    ಡಿ.ಆರ್.ಪಾಟೀಲ್ ನೋಡಿದರೆ ಪೂಜ್ಯ ಭಾವನೆ ಬರುತ್ತದೆ. ಎಂತಹ ವಿರೋಧಿಗಳು ಮತ ಹಾಕುವಂತ ವ್ಯಕ್ತಿ ಡಿ.ಆರ್. ಪಾಟೀಲ್ ಅವರಿಗೆ ಮತ ಹಾಕಿದರೆ ದೇವರಿಗೆ ಮತ ಹಾಕಿದಂತೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

    ಗದಗನಲ್ಲಿ ಆಯೋಜನೆ ಮಾಡಲಾಗಿದ್ದ ಲಿಂಗಾಯತ ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ನೀವು ದೇವರಿಗೆ ಮತ ಹಾಕುತ್ತಿದ್ದೀರಿ. ನಮ್ಮ ಪಂಚಮಸಾಲಿ ಸಮಾಜದ ಜನರು ಡಿ.ಆರ್ ಪಾಟೀಲ್ ಮತ ಹಾಕಿ. ಕಾಂಗ್ರೆಸ್ ಪಕ್ಷ ಐದು ಲಿಂಗಾಯತ ಮುಖಂಡರಿಗೆ ಟಿಕೆಟ್ ನೀಡಿದೆ. ಇವರನ್ನು ಗೆಲ್ಲಿಸುವ ಮೂಲಕ ಉಪಕಾರ ಸ್ಮರಣ ಮಾಡಬೇಕು ಎಂದು ಸಮಾಜಕ್ಕೆ ಕೈಮುಗಿದು ಮನವಿ ಮಾಡಿದ್ದಾರೆ.

    ಕಾಂಗ್ರೆಸ್ ಪಕ್ಷದ ಪಂಚಮಸಾಲಿ ಕಾರ್ಯಕರ್ತರು ಇದಕ್ಕೆ ಒಪ್ಪಿಗೆ ಸೂಚಿಸಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಪ್ರಧಾನಿ ಮೋದಿ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿಲ್ಲ. ಬರಿ ಪುಲ್ವಾಮಾ ಬಗ್ಗೆ ಮಾತನಾಡುತ್ತಿದ್ದಾರೆ. ಯುವಕರು ಮೋದಿಗೆ ಮರಳಾಗಿದ್ದಾರೆ. ತಾಯಂದಿರು ಮಕ್ಕಳ ಮನಸ್ಸು ಬದಲಿಸಬೇಕು ಎಂದು ಪ್ರಧಾನಿ ಮೋದಿ ವಿರುದ್ಧ ಹೆಬ್ಬಾಳ್ಕರ್ ವಾಗ್ದಾಳಿ ನಡೆಸಿದರು.

  • ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಪಿಆರ್‌ಒ ವಾರ್ – ರಮೇಶ್ ಜಾರಕಿಹೊಳಿಗೆ ತಿರುಗೇಟು ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್

    ಬೆಳಗಾವಿ: ನಾನು ನನ್ನ ಮತದಾರರಿಗೆ ಮಾತ್ರವೇ ಪಿಆರ್‌ಒ (ಪಬ್ಲಿಕ್ ರಿಲೇಷನ್ ಆಫೀಸರ್)ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪೌರಾಡಳಿತ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

    ಸಚಿವರ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಐದು ವರ್ಷದಿಂದ ಯಾವ ಪಿಆರ್‌ಒ , ಯಾವುದಕ್ಕೇ ಪಿಆರ್‌ಒ ಆಗಿದ್ದೆ? ಐದು ವರ್ಷದಿಂದ ಪಿಆರ್‌ಒ ಆಗಿದ್ದೀನಿ ಎಂದು ಹೇಳಿದ್ದಾರೆ. ನಾನು ಸರ್ಕಾರಿ ಕೆಲಸದಲ್ಲಿದ್ದೀನಾ ಅವರ ಪಿಆರ್‌ಒ ಆಗಲು. ನಾನು ಒಬ್ಬ ಶಾಸಕಿಯಾಗಿದ್ದೇನೆ. ರಾಜಕೀಯ ಶಾಶ್ವತ ಅಲ್ಲ. ಶತ್ರುಗಳಾಗಿರುವಾಗ ನಡೆದ ಪ್ರಸಂಗಗಳನ್ನು ಬಿಟ್ಟು ಬಿಡಬೇಕು. ನಾನು ಹಳೆಯ ಕಹಿ ನೆನಪುಗಳನ್ನು ಮರೆಯುತ್ತಿದ್ದೇನೆ. ನಾವು ಈಗ ಅಭಿವೃದ್ಧಿ ಬಗ್ಗೆ ಮಾತ್ರವೇ ಮಾತನಾಡಬೇಕು. ನಾವು ಒಂದೇ ಪಕ್ಷದಲ್ಲಿದ್ದೇವೆ ಎಂದು ತಿಳಿಸಿದರು.

    ನಾನು ನನ್ನ ಕ್ಷೇತ್ರದ ಮತದಾರರ ಪಿಆರ್‌ಒ . ಮಾನ ಮರ್ಯಾದೆ ಇದ್ದವರು, ಹಾಗೆಲ್ಲ ಮಾತನಾಡಬಾರದು. ನನಗೂ ಸಹಿಸಿಕೊಂಡು, ಸಹಿಸಿಕೊಂಡು ಸಾಕಾಗಿದೆ. ಪಿಆರ್‌ಒ ಎಂದು ಹೇಳುವುದು ಸರಿಯಲ್ಲ. ಇದನ್ನು ಇಲ್ಲಿಗೆ ನಿಲ್ಲಿಸಿ. ಹೀಗೆ ಪದೇ ಪದೇ ಮಾತನಾಡಬಾರದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

    ರಮೇಶ್ ಜಾರಕಿಹೊಳಿ ಹೇಳಿದ್ದೇನು?
    ಕಳೆದ ಐದು ವರ್ಷದಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪಿಆರ್‌ಒ ಆಗಿದ್ದರು. ಈಗ ಅವರು ಯಾಕಿಲ್ಲ? ಉಸ್ತುವಾರಿ ಸಚಿವರಾಗಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಲು ನಾನೇ ಹೋಗಬೇಕೆಂದೇನಿಲ್ಲ. ಕಳೆದ ವರ್ಷವೂ ಸಿದ್ದರಾಮಯ್ಯರನ್ನು ಸ್ವಾಗತ ಮಾಡಲು ಹೋಗಿರಲಿಲ್ಲ. ಉಸ್ತುವಾರಿ ಸಚಿವ ಶೋ ಮಾಡೋದು ಅಲ್ಲ. ಅದು ಕೆಲಸ ಮಾಡುವುದು. ನಾನು ಪ್ರಚಾರ ಪ್ರಿಯನಲ್ಲವೆಂದು ಹೇಳುವ ಮೂಲಕ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಯಾವತ್ತೂ ಅಧಿಕಾರ ಒಬ್ಬರ ಹತ್ರ ಇರಬಾರದು, ಹಸ್ತಾಂತರ ಆಗುತ್ತಿರಬೇಕು: ದಿನೇಶ್ ಗುಂಡೂರಾವ್

    ಯಾವತ್ತೂ ಅಧಿಕಾರ ಒಬ್ಬರ ಹತ್ರ ಇರಬಾರದು, ಹಸ್ತಾಂತರ ಆಗುತ್ತಿರಬೇಕು: ದಿನೇಶ್ ಗುಂಡೂರಾವ್

    ಬೆಂಗಳೂರು: ಅಧಿಕಾರ ಯಾವತ್ತೂ ಸಹ ಒಬ್ಬರ ಹತ್ತಿರ ಇರಬಾರದು, ಅದು ಸದಾ ಹಸ್ತಾಂತರವಾಗುತ್ತಿರಬೇಕೆಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

    ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪುಷ್ಪಾ ಅವರನ್ನು ಆಯ್ಕೆ ಮಾಡಿದ್ದರ ಬಗ್ಗೆ ಸಮರ್ಥನೆ ನೀಡಿದ ಅವರು, ಯಾವತ್ತು ಅಧಿಕಾರ ಸದಾ ಒಬ್ಬರ ಹತ್ತಿರ ಇರಬಾರದು. ಅದು ನಿಂತ ನೀರಲ್ಲ ಹೀಗಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಪುಷ್ಪ ಅಮರ್ ನಾಥ್ ಅವರಿಗೆ ರಾಜ್ಯ ಮಹಿಳಾ ಅಧ್ಯಕ್ಷೀಯ ಸ್ಥಾನವನ್ನು ನೀಡಲಾಗಿದೆ. ಅಲ್ಲದೇ ಮಹಿಳಾ ಕಾಂಗ್ರೆಸ್ಸಿನಲ್ಲಿ ಒಗ್ಗಟ್ಟಿಲ್ಲ. ಒಬ್ಬರಿಗೊಬ್ಬರು ಆರೋಪ ಮಾಡಿಕೊಳ್ಳುತ್ತಾರೆ ಎನ್ನುವ ಮಾತಿತ್ತು. ಆದರೆ ಈ ಮಾತುಗಳು ಸುಳ್ಳು ಎಂದರು.

    ಪುಷ್ಪಾ ಅವರು ಮೈಸೂರಿನವರಾಗಿದ್ದು ಅವರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರ ಬೆಂಬಲವೂ ಸಿಕ್ಕಿದ್ದರಿಂದ, ಅವರು ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ. ಪುಷ್ಪ ಅವರ ಪದಗ್ರಹಣದಿಂದ ರಾಜ್ಯದ ಮಹಿಳಾ ಕಾಂಗ್ರೆಸ್ಸಿನಲ್ಲಿ ಸುವರ್ಣಯುಗ ಆರಂಭವಾಗುತ್ತದೆ ಎನ್ನುವ ಲಕ್ಷಣಗಳು ಕಾಣಿಸುತ್ತಿವೆ. ಕಾಂಗ್ರೆಸ್ಸಿನಲ್ಲಿ ಮಹಿಳೆಯರಿಗೆ ಸರಿಯಾದ ಪಾಲು ಸಿಗುತ್ತಿಲ್ಲ ಎನ್ನುವುದನ್ನು ನಾನು ಪ್ರಮಾಣೀಕವಾಗಿ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.

    ಗ್ಯಾಸ್ ಫ್ರೀ ಕನೆಕ್ಷನ್ ಕೊಟ್ಟಿದ್ದೇವೆಂದು ಈಗ ಸಿಲಿಂಡರ್ ಬೆಲೆ ಹೆಚ್ಚಳ ಮಾಡಿದ್ದಾರೆ. ಇದರಿಂದ ಮಹಿಳೆಯರಿಗೆ ತುಂಬಾ ತೊಂದರೆ ಹಾಗೂ ಅನ್ಯಾಯವಾಗಿದೆ ಕೇಂದ್ರ ಸರ್ಕಾರವನ್ನು ಅವರು ದೂರಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಲಕ್ಷ್ಮಿ ಹೆಬ್ಬಾಳ್ಕರ್ ತಲೆ ದಂಡಕ್ಕೆ ಮುಹೂರ್ತ ಫಿಕ್ಸ್?

    ಲಕ್ಷ್ಮಿ ಹೆಬ್ಬಾಳ್ಕರ್ ತಲೆ ದಂಡಕ್ಕೆ ಮುಹೂರ್ತ ಫಿಕ್ಸ್?

    ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆಯಾಗಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಶೀಘ್ರದಲ್ಲಿಯೇ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಳಿಸಲು ಮುಹೂರ್ತ ಸಿದ್ಧವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ಹೌದು, ಶೀಘ್ರದಲ್ಲಿಯೇ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಜಿ ಆಗಲಿದ್ದಾರೆ. ಇಷ್ಟು ದಿನ ತೆರೆ ಮರೆಯಲ್ಲಿ ನಡೆಯುತ್ತಿದ್ದ ಪ್ರಯತ್ನಕ್ಕೆ ಈಗ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ಈಗಾಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಪದಚ್ಯುತಿಗೆ ದೆಹಲಿಯಲ್ಲಿ ಮುಹೂರ್ತ ನಿಗದಿಯಾಗುತ್ತಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

    ಲಕ್ಷ್ಮಿ ಹೆಬ್ಬಾಳ್ಕರ್ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕಾಗಿ ಮಹಿಳಾ ಕಾಂಗ್ರೆಸ್ ನಲ್ಲಿ ಲಾಬಿ ಹೆಚ್ಚಾಗಿದ್ದು, ಇನ್ನು 15 ದಿನದ ಒಳಗಾಗಿ ನೂತನ ಮಹಿಳಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಾಗಲಿದೆ. ಈಗಾಗಲೇ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಶ್ಮಿತಾ ದೇವ್ ರಾಜ್ಯದ 12 ಜನ ಮಹಿಳಾ ನಾಯಕಿಯರನ್ನು ಕರೆದು ಸಂದರ್ಶನ ನಡೆಸಿದ್ದಾರೆ. ಅಲ್ಲದೇ ಬುಧವಾರವೂ ಸಹ ರಾಜ್ಯದ 9 ಮಹಿಳಾ ಕಾಂಗ್ರೆಸ್ ಮುಖಂಡರನ್ನ ದೆಹಲಿಗೆ ಕರೆದು ಸಂದರ್ಶನ ನಡೆಸಿದ್ದಾರೆ. ಇಂದು 3 ಜನರ ಸಂದರ್ಶನ ನಡೆಯುತ್ತಿದೆ ಎನ್ನಲಾಗಿದೆ.

    ಪುಷ್ಪ ಅಮರ್ ನಾಥ್, ನಾಗಲಕ್ಷ್ಮಿ ಚೌದರಿ, ಕಮಲಾಕ್ಷಿ ರಾಜಣ್ಣ, ಶಾರದಾ ಗೌಡ ಹಾಗೂ ಗೀತಾ ರಾಜಣ್ಣ ಸೇರಿದಂತೆ ಒಟ್ಟು 12 ಜನ ಮಹಿಳಾ ನಾಯಕಿಯರ ಸಂದರ್ಶನ ಮಾಡಲಾಗಿದೆ. ಇವರಲ್ಲಿ ಒಬ್ಬರು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.

    ಹಾಲಿ ಅಧ್ಯಕ್ಷೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್, ಲೋಕಸಭಾ ಚುನಾವಣೆಯವರೆಗೂ ಮುಂದುವರಿಯಲು ಅವಕಾಶ ಕೊಡಿ ಎಂಬ ಮನವಿಗೆ ಸುಶ್ಮಿತಾ ದೇವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅನಿವಾರ್ಯವಾಗಿ ತಮ್ಮ ಸ್ಥಾನವನ್ನು ಬಿಟ್ಟುಕೊಡಲೇಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv