Tag: ಲಕ್ಷ್ಮೀವರ ತೀರ್ಥ ಸ್ವಾಮೀಜಿ

  • ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇವತ್ತು ನಡೆಯಲಿದ್ದು, ಶಿರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

    ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮಕ್ಕೆ ಏರ್ಪಾಟು ಮಾಡಿಕೊಂಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ಮಠದಲ್ಲಿರುವ ಮುಖ್ಯಪ್ರಾಣ ದೇವರು, ಅನ್ನವಿಠಲ ದೇವರಿಗೆ ಎಳನೀರಿನ ಅಭಿಷೇಕ ನಡೆಯಲಿದೆ. ಆರಾಧನಾ ಪ್ರಕ್ರಿಯೆಯ ನಂತರ ಸುಮಾರು 300 ಜನರಿಗೆ ಅನ್ನದಾನ ನಡೆಯಲಿದೆ. ಕಾಪು ತಾಲೂಕಿನ ಹಿರಿಯಡ್ಕ ಸಮೀಪದ ಶಿರೂರು ಗ್ರಾಮದಲ್ಲಿ ಈ ಎಲ್ಲಾ ವಿಧಿವಿಧಾನ ನಡೆಯುತ್ತಿದ್ದು, ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಆರಾಧನಾ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದೆ.

    ಜುಲೈ 19 ರಂದು ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ 13 ನೇ ದಿನಕ್ಕೆ ಆರಾಧನೆ ನಡೆಯಬೇಕಿತ್ತು. ಆದರೆ ವಾರದ ಹಿಂದೆಯಷ್ಟೇ ಪೊಲೀಸರು ಮೂಲಮಠವನ್ನು ದ್ವಂದ್ವ ಸೋದೆ ಮಠಕ್ಕೆ ಬಿಟ್ಟುಕೊಟ್ಟಿದ್ದರು. ಪ್ರಕರಣ ತನಿಖೆ ಹಂತದಲ್ಲಿ ಇದ್ದುದರಿಂದ ಆರಾಧನಾ ಪ್ರಕ್ರಿಯೆ ವಿಳಂಬವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಹು ಅಂಗಾಂಗ ವೈಫಲ್ಯದಿಂದ ಶಿರೂರು ಶ್ರೀ ಸಾವು?

    ಬಹು ಅಂಗಾಂಗ ವೈಫಲ್ಯದಿಂದ ಶಿರೂರು ಶ್ರೀ ಸಾವು?

    ಉಡುಪಿ: ಇಲ್ಲಿನ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಯದ್ದು ಸಹಜ ಸಾವು ಎಂದು ಮರಣೋತ್ತರ ಪರೀಕ್ಷೆಯ ಅಂತಿಮ ವರದಿ ಬಂದಿದೆ ಎನ್ನಲಾಗಿದೆ.

    ಶಿರೂರು ಸ್ವಾಮೀಜಿಯವರದ್ದು ಅನುಮನಾಸ್ಪದ ಸಾವು ಪ್ರಕರಣವಾಗಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಪೊಲೀಸರು ಕಾಯುತ್ತಿದ್ದರು. ಈ ಎರಡೂ ವರದಿಗಳನ್ನು ಹೋಲಿಕೆ ಮಾಡಿ ಅಂತಿಮ ವರದಿಯನ್ನು ಕೆಎಂಸಿ ವೈದ್ಯರು ನೀಡಲಿದ್ದಾರೆ. ಮರಣೋತ್ತರ ಪರೀಕ್ಷೆ ಅಂತಿಮ ವರದಿ ಎಫ್.ಎಸ್.ಎಲ್ ಇಂದು ಅಥವಾ ನಾಳೆ ಬರುವ ಸಾಧ್ಯತೆಯಿದೆ.

    ಮರಣೋತ್ತರ ವರದಿಯಲ್ಲಿ ಸಹಜ ಸಾವು ಎಂಬ ಉಲ್ಲೇಖವಿದೆ ಎನ್ನಲಾಗಿದೆ. ಶ್ರೀಗಳ ದೇಹದಲ್ಲಿ ವಿಷದ ಅಂಶವಿಲ್ಲ ಎಂಬ ವರದಿ ಪೊಲೀಸರ ಕೈಸೇರಿರುವ ಸಾಧ್ಯತೆ ಇದೆ. ಎರಡು ವರದಿ ಬಂದ ಬಳಿಕ ಸ್ವಾಮೀಜಿ ಸಾವಿಗೆ ಕಾರಣವನ್ನು ಮಣಿಪಾಲ ವೈದ್ಯರು ಪೊಲೀಸರಿಗೆ ವಿವರಿಸಲಿದ್ದಾರೆ.

    ಜುಲೈ 19ರಂದು ಸಾವನಪ್ಪಿದ್ದ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಹೊಟ್ಟೆಯಲ್ಲಿ ವಿಷಕಾರಿ ಅಂಶ ಸಿಕ್ಕಿದೆ ಅಂತ ಕೆಎಂಸಿ ವೈದ್ಯರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಬಹುಅಂಗಾಂಗ ವೈಫಲ್ಯದಿಂದ ಸ್ವಾಮೀಜಿ ಸಾವನ್ನಪ್ಪಿದ್ದಾರೆ ಎಂದೂ ವೈದ್ಯರು ಹೇಳಿದ್ದರು. ಈ ಹೇಳಿಕೆ ನಂತರ ಸ್ವಾಮೀಜಿ ಸಾವು ಸಾಕಷ್ಟು ಚರ್ಚೆಗಳಿಗೆ, ಅನುಮಾನಗಳಿಗೆ ಕಾರಣವಾಗಿತ್ತು. ಪೊಲೀಸರಿಗೆ ತನಿಖೆ ಕೂಡಾ ಬಹಳ ಸವಾಲಿನದ್ದಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶೀರೂರು ಮಠಾಧೀಶರು ಸಾವನ್ನಪ್ಪಿ 1 ತಿಂಗಳಾದರೂ ಎಫ್‍ಎಸ್‍ಎಲ್ ವರದಿ ಇಲ್ಲ, ಎಫ್‍ಐಆರ್ ದಾಖಲಾಗಿಲ್ಲ!

    ಶೀರೂರು ಮಠಾಧೀಶರು ಸಾವನ್ನಪ್ಪಿ 1 ತಿಂಗಳಾದರೂ ಎಫ್‍ಎಸ್‍ಎಲ್ ವರದಿ ಇಲ್ಲ, ಎಫ್‍ಐಆರ್ ದಾಖಲಾಗಿಲ್ಲ!

    ಉಡುಪಿ: ಶೀರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಂಶಯಾಸ್ಪದವಾಗಿ ಸಾವನ್ನಪ್ಪಿ ಒಂದು ತಿಂಗಳು ಕಳೆದಿದೆ. ಶ್ರೀಗಳ ಮರಣೋತ್ತರ ಪರೀಕ್ಷೆ ಮತ್ತು ಎಫ್‍ಎಸ್‍ಎಲ್ ವರದಿ ಪೊಲೀಸರ ಕೈಸೇರಿಲ್ಲ. ಹಾಗಾಗಿ ಪ್ರಕರಣದ ಎಫ್‍ಐಆರ್ ಕೂಡ ಪೊಲೀಸರು ದಾಖಲಿಸಿಕೊಂಡಿಲ್ಲ.

    ಜುಲೈ 19ಕ್ಕೆ ಸಾವನ್ನಪ್ಪಿರುವ ಸ್ವಾಮೀಜಿಯ ಸಾವಿನ ಕಾರಣ ನಿಗೂಢವಾಗಿಯೇ ಇದೆ. ಪೂರ್ವಾಶ್ರಮದ ತಮ್ಮ ಲಾತವ್ಯ ಆಚಾರ್ಯ ಇದೊಂದು ಅಸಹಜ ಸಾವು ಎಂದು ಮಾತ್ರ ದೂರು ನೀಡಿದ್ದರು. ಮರಣೋತ್ತರ ಪರೀಕ್ಷೆ ವರದಿ ಬರಲು ಒಂದು ವಾರ ಬೇಕಾಗುತ್ತದೆ. ಎಫ್ ಎಸ್ ಎಲ್‍ಗೆ 2 ವಾರಗಳು ಸಾಕು ಆದರೆ ದಿನ 30 ಕಳೆದರೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಕೈಸೇರಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಜಯರಾಮ್ ಅಂಬೇಕಲ್ಲು ಹೇಳಿದರು.

    ಎಫ್ ಎಸ್ ಎಲ್ ವರದಿ ಕೈಸೇರಲು ಕನಿಷ್ಟ ಎರಡು ವಾರ ಗರಿಷ್ಟ 8 ವಾರಗಳು ಬೇಕು. ಎಫ್ ಎಸ್ ಎಲ್ ವರದಿ ತಡವಾದಷ್ಟು ಸಾವಿಗೆ ಕಾರಣ ತಿಳಿಯಲು ಸಾಧ್ಯವಿಲ್ಲ ಎಂಬುದು ಶೀರೂರು ಶ್ರೀ ಕಾನೂನು ಸಲಹೆಗಾರ ರವಿಕಿರಣ್ ಮುರ್ಡೇಶ್ವರ ಅವರ ಸಂಶಯವಾಗಿದೆ. ದೇಹದಲ್ಲಿರುವ ಸಿಕ್ಕ ವಿಷದ ಅಂಶ ಪ್ರಯೋಗಾಲಯದಲ್ಲಿ ಪತ್ತೆಯಾಗಲು ಸಾಧ್ಯವಿಲ್ಲ ವಿಷ ವಿಷತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದರು.

    ಎಫ್ ಎಸ್ ಎಲ್ ವರದಿ ಬರುವ ತನಕ ಪೊಲೀಸ್ ತನಿಖೆ ನಡೆಸಲೂ ಆಗುತ್ತಿಲ್ಲ ಹಾಗಾಗಿ ಶೀರೂರು ಶ್ರೀ ಅಭಿಮಾನಿ ಸಮಿತಿ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದೆ. ಒಟ್ಟಿನಲ್ಲಿ ಶೀರೂರು ಶ್ರೀ ಪ್ರಕರಣ ಸಾಕಷ್ಟು ಕುತೂಹಲ ನಿರೀಕ್ಷೆಯ ಜೊತೆ ಸಂಶಯಗಳನ್ನು ಹುಟ್ಟುಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಶಿರೂರು ಶ್ರೀ ಧರಿಸಿದ್ದ 1ಕೋಟಿ ರೂ. ಮೌಲ್ಯದ ಚಿನ್ನ ಸೇಫ್- ಎಲ್ಲಿದೆ ಆ ಚಿನ್ನಾಭರಣಗಳು?

    ಶಿರೂರು ಶ್ರೀ ಧರಿಸಿದ್ದ 1ಕೋಟಿ ರೂ. ಮೌಲ್ಯದ ಚಿನ್ನ ಸೇಫ್- ಎಲ್ಲಿದೆ ಆ ಚಿನ್ನಾಭರಣಗಳು?

    ಉಡುಪಿ: ಶಿರೂರು ಸ್ವಾಮೀಜಿಯವರು ಧರಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಚಿನ್ನ ಭದ್ರವಾಗಿದೆ. ಈ ಚಿನ್ನಾಭರಣಗಳನ್ನು ಶೀರೂರು ಶ್ರೀಗಳ ಪೂರ್ವಶ್ರಮಕ್ಕೆ ಸಲ್ಲಿಕೆ ಮಾಡಲಾಗಿದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಶಿರೂರು ಶ್ರೀಗಳು ಧರಿಸುತ್ತಿದ್ದ ಚಿನ್ನಾಭರಣ ಸೇಫಾಗಿದೆ. ರಮ್ಯಾ ಶೆಟ್ಟಿ ಚಿನ್ನಾಭರಣ ಕದ್ದಿಲ್ಲ. ಸ್ವಾಮೀಜಿ ಆಪ್ತರೂ ಚಿನ್ನಾಭರಣ ಎಗರಿಸಿಲ್ಲ. ಕೆಲ ಮಾಧ್ಯಮಗಳಲ್ಲಿ ಚಿನ್ನಾಭರಣ ಕಾಣೆ ಎಂಬ ವದಂತಿ ಹಬ್ಬಿಸಲಾಗಿತ್ತು. ಆದ್ರೆ ಇದೀಗ ಚಿನ್ನಾಭರಣಗಳನ್ನು ಆಸ್ಪತ್ರೆಯ ವೈದ್ಯರು ಸ್ವಾಮೀಜಿ ಕುಟುಂಬಕ್ಕೆ ನೀಡಿದ್ದಾರೆ ಅಂತ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಶನಿವಾರ ಮರಣೋತ್ತರ ವರದಿ?;
    ಜುಲೈ 19 ರಂದು ಶೀರೂರು ಶ್ರೀ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಶ್ರೀಗಳ ಸಾವಿನ ಕುರಿತು ಇನ್ನೆರಡು ದಿನದಲ್ಲಿ ಮರಣೋತ್ತರ ಪರೀಕ್ಷೆ ವರದಿ ಬರಲಿದೆ. ಶನಿವಾರ ಮರಣೋತ್ತರ ಪರೀಕ್ಷೆಯ ವರದಿ ಸಿಗುವ ಸಾಧ್ಯತೆಗಳಿದ್ದು, 6 ವಾರದ ನಂತರ ವಿಧಿ ವಿಜ್ಞಾನ ಪ್ರಯೋಗಾಲಯದ(ಎಫ್‍ಎಸ್‍ಎಲ್) ವರದಿ ಕೈ ಸೇರುವ ಸಾಧ್ಯತೆಯಿದೆ. ಈ ಎರಡೂ ವರದಿ ಬಂದ ಬಳಿಕ ಸಾವಿನ ತನಿಖೆ ಮಹತ್ವ ಪಡೆಯಲಿದೆ.

    ಜುಲೈ 31ರಂದು ಆರಾಧನೆ:
    ಲಕ್ಷ್ಮೀವರತೀರ್ಥ ಸ್ವಾಮೀಜಿ ವೃಂದಾವನಸ್ಥ ಹಿನ್ನೆಲೆಯಲ್ಲಿ ಜುಲೈ 31 ರಂದು ಶಿರೂರು ಸ್ವಾಮೀಜಿ ಆರಾಧನೆ ಕಾರ್ಯಕ್ರಮವಿದೆ. ಶ್ರೀಗಳು ನಿಧನ ಹೊಂದಿದ ಹದಿಮೂರನೇ ದಿನ ಸೋದೆಮಠದ ನೇತೃತ್ವದಲ್ಲಿ ಈ ಆರಾಧನೆ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಹಿರಿಯಡ್ಕ ಸಮೀಪದ ಮೂಲಮಠ ಶೀರೂರಿನಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

    ಅನಗತ್ಯ ಮಾನಹಾನಿ:
    ಸ್ವಾಮೀಜಿಯ ಚಿನ್ನವನ್ನು ಸ್ವಾಮೀಜಿ ಆಪ್ತ ಬುಲೆಟ್ ಗಣೇಶ್ ಎಂಬವರು ಕದ್ದಿದ್ದಾರೆಂದು ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಗಣೇಶ್, ನಾನು ಆರೋಪಿಯಲ್ಲ. ನಾನು ಚಿನ್ನ ಕದ್ದಿಲ್ಲ. ನನ್ನನ್ನು ಯಾರೂ ಈವರೆಗೆ ವಿಚಾರಣೆ ಮಾಡಿಲ್ಲ. ಅನಗತ್ಯವಾಗಿ ನನ್ನ ಮಾನಹಾನಿ ಮಾಡಲಾಗುತ್ತಿದೆ ಅಂತ ಕಿಡಿಕಾರಿದ್ದಾರೆ.

    ಸ್ವಾಮೀಜಿ ಚಿನ್ನಕ್ಕೂ ನನಗೂ ಸಂಬಂಧವಿಲ್ಲ. ಸ್ವಾಮೀಜಿ ಜೊತೆ ಯಾವುದೇ ಆರ್ಥಿಕ ವ್ಯವಹಾರ ಇಲ್ಲ. ನಾನು ಸ್ವಾಮೀಜಿ ಪಾರ್ಟ್‍ನರ್ ಅಲ್ಲ. ನಾನು ಶಿರೂರು ಸ್ವಾಮೀಜಿಯ ಭಕ್ತನಾಗಿದ್ದು, ಅನುಮಾನಾಸ್ಪದ ಸಾವಿನ ತನಿಖೆಯಾಗಬೇಕು ಅಂತ ಅವರು ಆಗ್ರಹಿಸಿದ್ದಾರೆ.

  • ಶಿರೂರು ಸ್ವಾಮೀಜಿ ಬಳಿಯಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ!

    ಶಿರೂರು ಸ್ವಾಮೀಜಿ ಬಳಿಯಿದ್ದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ!

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಶ್ರೀ ಶಂಕಾಸ್ಪದ ಸಾವು ಹಿನ್ನೆಲೆಯಲ್ಲಿ ಅವರ ಚಿನ್ನ ಕದ್ದವರ್ಯಾರು ಅನ್ನುವ ಸಂಶಯ ಶುರುವಾಗಿದೆ.

    ಸ್ವಾಮೀಜಿ ಬಳಿಯಿದ್ದ ಒಂದು ಕೋಟಿ ಮೌಲ್ಯದ ಚಿನ್ನಾಭರಣ ನಾಪತ್ತೆಯಾಗಿದೆ. ಸ್ವಾಮೀಜಿ ಬಳಿ ಸುಮಾರು 4 ಕೆ.ಜಿ ಚಿನ್ನಾಭರಣವಿದ್ದು, ಚಿನ್ನದ ಮೇಲೆ ಅವರಿಗೆ ಅತಿಯಾದ ವ್ಯಾಮೋಹವಿತ್ತು. ಶಿರೂರು ಶ್ರೀ 5 ಕಡಗಗಳು, ಚಿನ್ನದ ಮಾಲೆಗಳು, ತುಳಸಿ ಮಾಲೆ ಧರಿಸುತ್ತಿದ್ದರು. ನಾಲ್ಕೈದು ಉಂಗುರಗಳನ್ನು ತೊಡುತ್ತಿದ್ದರು. ಇದೀಗ ಸ್ವಾಮೀಜಿ ಆಸ್ಪತ್ರೆ ಸೇರಿದಾಗ ಬಂಗಾರ ಕಳ್ಳತನವಾಗಿರುವ ಶಂಕೆಯಿದೆ.

    ಚಿನ್ನ ಎಗರಿಸಿದ್ದು ರಮ್ಯಾ ಶೆಟ್ಟಿಯಾ ಎನ್ನುವ ಸಂಶಯವಿದೆ. ಯಾಕಂದ್ರೆ ರಮ್ಯಾ ಶ್ರೀಗಳ ಚಿನ್ನದ ಮೇಲೆ ವ್ಯಾಮೋಹಿತಳಾಗಿದ್ದಳು. ಫೋಟೋ ತೆಗೆಸಿಕೊಂಡಿದ್ದಳು. ಮಠದ, ಶ್ರೀಗಳ ಆಪ್ತರ ಮೇಲೂ ಸಂಶಯವಿದೆ. ಶಿರೂರು ಸ್ವಾಮೀಜಿ ನಡೆದುಕೊಂಡು ಹೋಗುವಾಗ ಬಂಗಾರದ ಭಾರಕ್ಕೆ ಅವರು ಕುಸಿದು ಹೋಗುತ್ತಾರಾ ಅನ್ನುವಷ್ಟು ಚಿನ್ನ ಅವರ ಕೊರಳಲ್ಲಿ ಇತ್ತು.

    ಮಠದಲ್ಲೇ ಆಭರಣ ಬಿಟ್ಟಿದ್ದ ಸ್ವಾಮೀಜಿ:
    ಸಾವಿಗೂ ಕೆಲ ದಿನಗಳ ಹಿಂದೆ ಸ್ವಾಮೀಜಿಯವರು ತನ್ನ ಬಳಿ 3 ಕೆ.ಜಿ ಚಿನ್ನ ಇದೆ ಅಂತ ಮಾಧ್ಯಮಗಳಿಗೆ ತಿಳಿಸಿದ್ದರು. 3 ಕೆ.ಜಿ ಚಿನ್ನವಾದರೆ ಈವಾಗಿನ ಮಾರುಕಟ್ಟೆಯಲ್ಲಿ ಸರಿಸುಮಾರು 75 ಲಕ್ಷ ರೂ. ಗೂ ಅಧಿಕವಾಗುತ್ತದೆ. ಸ್ವಾಮೀಜಿ ಅವರು ತಮ್ಮ ಕುತ್ತಿಗೆ ಮತ್ತು ಕೈಗಳಲ್ಲಿ ಸುಮಾರು 1 ಕೆ.ಜಿಯಷ್ಟು ಚಿನ್ನಭಾರಣಗಳನ್ನು ಧರಿಸುತ್ತಿದ್ದರು. ಅಂದ್ರೆ ಸರಿ ಸುಮಾರು 10ರಿಂದ 20 ಲಕ್ಷ ರೂ. ಮೌಲ್ಯದಷ್ಟು ಚಿನ್ನಾಭರಣಗಳನ್ನು ಪ್ರತೀ ದಿನ ತೊಡುತ್ತಿದ್ದರು. ಈ ಆಭರಣಗಳು ಪುರಾತನ ಕಾಲದ್ದಾಗಿದೆ. ಆದ್ದರಿಂದ ಅವುಗಳಿಗೆ ಮಾರುಕಟ್ಟೆ ಬೆಲೆಗಿಂತಲೂ ಅಧಿಕ ಕೋಟ್ಯಂತರ ಬೆಲೆ ಇದೆ ಅಂತ ಚಿನ್ನಾಭರಣ ತಜ್ಞರೊಬ್ಬರು ತಿಳಿಸಿದ್ದಾರೆ.

    ಒಟ್ಟಿನಲ್ಲಿ ಸ್ವಾಮೀಜಿ ಮಣಿಪಾಲದ ಆಸ್ಪತ್ರೆಗೆ ಸೇರುವಾಗ ಅವರ ಮೈಮೇಲೆ ಚಿನ್ನಾಭರಣಗಳು ಇರಲಿಲ್ಲ. ಎಲ್ಲವನ್ನೂ ಮೂಲ ಮಠದಲ್ಲೇ ತೆಗೆದಿಟ್ಟು ಹೋಗಿದ್ದರು. ಆದ್ರೆ ಇದೀಗ ಅವುಗಳು ಏನಾಗಿದೆ? ಯಾರ ಕೈಯಲ್ಲಿವೆ ಅನ್ನೋದೇ ನಿಗೂಢವಾಗಿದ್ದು, ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

    ಮಹಿಳೆ ಲೂಟಿ ಆರೋಪ:
    ಸುಮಾರು 2 ವರ್ಷಗಳ ಹಿಂದಿನಿಂದ ಸ್ವಾಮೀಜಿಯವರಿಗೆ ಈ ಚಿನ್ನಾಭರಣಗಳನ್ನು ಧರಿಸಿಕೊಳ್ಳುವ ಖಯಾಲಿ ಆರಂಭವಾಗಿದೆ. ಅಂದ್ರೆ ಅವರ ಆಪ್ತ ಮಹಿಳೆಯೊಬ್ಬರು ಮಠಕ್ಕೆ ಸೇರಿಕೊಂಡ ಬಳಿಕ ಸ್ವಾಮೀಜಿ ಆಭರಣ ಧರಿಸಲು ಆರಂಭಿಸಿದ್ದಾರೆ. ಮೂಲತಃ ಸುಳ್ಯದವಳಾಗಿದ್ದರೂ ಆಕೆ ಮದುವೆಯಾಗಿ ಮುಂಬೈನಲ್ಲಿದ್ದವಳಾಗಿದ್ದಳು. ಹೀಗಾಗಿ ಆಕೆ ಚಿನ್ನದ ವ್ಯಾಪಾರಿಗಳನ್ನು ಮಠಕ್ಕೆ ಕರೆಸುತ್ತಿದ್ದು, ಅವರು 3-4 ತಿಂಗಳಿಗೊಮ್ಮೆ ತಮ್ಮೊಂದಿಗೆ ವೈವಿಧ್ಯಮಯ ಆ್ಯಂಟಿಕ್ ಆಭರಣಗಳನ್ನು ತರುತ್ತಿದ್ದರು. ಈ ವೇಳೆ ಆಕೆ ಆಭರಣಗಳನ್ನು ಆಯ್ಕೆ ಮಾಡುತ್ತಿದ್ದಳು, ಇನ್ನ ಸ್ವಾಮೀಜಿ ಹಣ ನೀಡುತ್ತಿದ್ದರು. ಈ ಆಭರಣಗಳನ್ನು ಆಕೆ ಮತ್ತು ಸ್ವಾಮೀಜಿ ಇಬ್ಬರೂ ಧರಿಸುತ್ತಿದ್ದರು. ಈ ಮೂಲಕ ಆಕೆ ಸ್ವಾಮೀಜಿ ಕೈಯಿಂದ ಲೂಟಿ ಮಾಡುತ್ತಿದ್ದಳು ಅಂತ ಮಠದ ಹಿಂದಿನ ಉಸ್ತುವಾರಿ ಸುನಿಲ್ ಕುಮಾರ್ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

    ಡಿವಿಆರ್ ಗಾಗಿ ನದಿಯಲ್ಲಿ ಶೋಧ:
    ಶಿರೂರು ಮೂಲಮಠದ ಎದುರುಗಡೆ ಸಿಸಿಟಿವಿ ಇತ್ತು. ಸ್ವಾಮೀಜಿ ಅವರ ನಿಧನದ ಬಳಿಕ ಈ ಸಿಸಿಟಿವಿಯ ಡಿವಿಆರ್ ನಾಪತ್ತೆಯಾಗಿತ್ತು. ಹೀಗಾಗಿ ಎರಡು ದಿನದಿಂದ ಡಿವಿಆರ್ ಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಸದ್ಯ ಡಿವಿಆರ್ ಗಾಗಿ ಇಂದು ಹಿರಿಯಡ್ಕ ಸಮೀಪ ಸ್ವರ್ಣಾ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.

    ಶೀರೂರು ಮೂಲ ಮಠದ ಪಕ್ಕದಲ್ಲಿ ಸ್ವರ್ಣಾ ನದಿ ಇದೆ. ದೋಣಿ, ತೆಪ್ಪ ಬಳಸಿ ಡಿವಿಆರ್ ಗಾಗಿ ಹುಡುಕಾಟ ನಡಸಲಾಗಿದೆ. ಅಲ್ಲದೇ ಮುಳುಗು ತಜ್ಞರಿಂದ ಆಯಸ್ಕಾಂತ ಮುಳುಗಿಸಿ ಕಬ್ಬಿಣದ ಡಿವಿಆರ್ ಮೇಲಕ್ಕೆಳೆಯಲು ಪ್ರಯತ್ನ ಮಾಡಲಾಗಿದೆ. ಆದ್ರೆ ಡಿವಿಆರ್ ನೀರಿಗೆಸೆದವರು ಯಾರು ಎಂಬ ಪ್ರಶ್ನೆ ಕಾಡುತ್ತಿದೆ.

  • ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಉಡುಪಿ ಶಿರೂರು ಮಠದ ಸಿಸಿಟಿವಿ ಡಿವಿಆರ್ ನಾಪತ್ತೆ!

    ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢ ಸಾವಿನ ಬಳಿಕ ಊಹಾಪೋಹಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದೀಗ ಮಠದ ಡಿವಿಆರ್ ನಾಪತ್ತೆಯಾಗಿದೆ.

    ಸ್ವಾಮೀಜಿಗಳ ಅಸಹಜ ಸಾವಿನ ಕುರಿತಂತೆ ಎಸ್ ಪಿ ಲಕ್ಷ್ಮಣ್ ನಿಂಬರ್ಗಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಈ ವೇಳೆ ಸಿಸಿಟಿವಿ ವಿಡಿಯೋಗಳನ್ನು ಸೇವ್ ಮಾಡುತ್ತಿದ್ದ ಡಿವಿಆರ್ ಇದೀಗ ಮೂಲ ಮಠದಿಂದ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅಲ್ಲದೇ ಶಿರೂರು ಮೂಲಮಠದಿಂದ ಕೆಲ ವಸ್ತುಗಳು ಕೂಡ ಕಾಣೆಯಾಗಿವೆ.

    ಶಿರೂರು ಮೂಲ ಮಠದ ಪ್ರವೇಶ ದ್ವಾರದಲ್ಲೇ ಒಂದು ಸಿಸಿಟಿವಿ ಇತ್ತು. ಇದರಲ್ಲಿ ಮಠಕ್ಕೆ ಬರುವ ಎಲ್ಲಾ ಭಕ್ತರ ಬಗ್ಗೆ ದಾಖಲಾಗುತ್ತಿತ್ತು. ಯಾಕಂದ್ರೆ ಇದೊಂದು ದಾರಿಯ ಮೂಲಕವೇ ಭಕ್ತರು ಮಠ ಪ್ರವೇಶವಾಗಬೇಕಿತ್ತು. ಹೀಗಾಗಿ ಪೊಲೀಸರು ಇದೊಂದೇ ಸಾಕ್ಷಿ ಅಂತ ಪೊಲೀಸರು ನಂಬಿದ್ದರು. ತನಿಖೆಯ ಆರಂಭದಲ್ಲಿಯೇ ಪೊಲೀಸರು ಡಿವಿಆರ್ ಸಿಗುತ್ತೋ ಇಲ್ಲವೋ ಎಂಬ ಗೊಂದಲದಲ್ಲಿದ್ದರು. ಅಲ್ಲದೇ ಡಿವಿಆರ್ ಅನ್ನು ಸ್ವತಃ ಸ್ವಾಮೀಜಿಯವರೇ ಬೇರೆ ಮಠಕ್ಕೆ ಶಿಫ್ಟ್ ಮಾಡಿದ್ದಾರೆಯೋ ಎನ್ನುವುದರ ಬಗ್ಗೆ ತನಿಖೆ ನಡೆದಿತ್ತು. ಆದ್ರೆ ಎಲ್ಲಿ ಹುಡುಕಾಡಿದ್ರೂ ಡಿವಿಆರ್ ಮಾತ್ರ ಕಾಣಿಸುತ್ತಿಲ್ಲ.

    ಸ್ವಾಮೀಜಿಯವರು ಆಸ್ಪತ್ರೆಗೆ ದಾಖಲಾದ ದಿನವೇ ಯಾರೋ ಮಠಕ್ಕೆ ಬಂದು ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿರಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಆದ್ರೆ ಏನೆಲ್ಲ ವಸ್ತುಗಳನ್ನು ಹಾಗೂ ಯಾರು ತೆಗೆದುಕೊಂಡು ಹೋಗಿದ್ದಾರೆಂಬ ಬಗ್ಗೆ ದಾಖಲೆಗಳು ಈ ಸಿಸಿಟಿವಿಯಲ್ಲಿ ಸಿಗಬೇಕಿತ್ತು. ಆದ್ರೆ ಡಿವಿಆರ್ ಅನ್ನೇ ತೆಗೆದುಕೊಂಡು ಹೋಗಿದ್ರೆ ಎಲ್ಲಾ ದಾಖಲೆಗಳು ನಾಪತ್ತೆ ಆಗಿರೋ ಸಾಧ್ಯತೆಗಳಿವೆ. ಒಟ್ಟಿನಲ್ಲಿ ಆ ದಿನ ಮಠಕ್ಕೆ ಬಂದವರು ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಮೂರು ತಿಂಗಳ ಹಿಂದೆ ಮಠದಲ್ಲಿ ಹಸುವಿನ ಕಳ್ಳತನವಾಗಿತ್ತು. ಆ ಸಂದರ್ಭದಲ್ಲಿ ಸಿಸಿಟಿವಿಯಲ್ಲಿ ದೃಶ್ಯಗಳು ಲಭ್ಯವಾಗಿದ್ದು, ಅದನ್ನು ಸ್ವತಃ ಸ್ವಾಮೀಜಿಗಳೇ ಮಧ್ಯಮಗಳಿಗೆ ನೀಡಿದ್ದರು. ಹೀಗಾಗಿ ಅಂದಿ ಇದ್ದ ಡಿವಿಆರ್ ಆ ನಂತ್ರ ಏನಾಗಿದೆ ಎಂಬುದೇ ಇದೀಗ ಪ್ರಶ್ನೆಯಾಗಿದೆ.

  • ಉಡುಪಿಯಲ್ಲಿ ತಪ್ತಮುದ್ರಾಧಾರಣೆ – ಭಕ್ತರಿಗೆ ಇಂದು ಮತ್ತೆ ನೆನಪಾದ್ರು ಶಿರೂರು ಶ್ರೀ

    ಉಡುಪಿಯಲ್ಲಿ ತಪ್ತಮುದ್ರಾಧಾರಣೆ – ಭಕ್ತರಿಗೆ ಇಂದು ಮತ್ತೆ ನೆನಪಾದ್ರು ಶಿರೂರು ಶ್ರೀ

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ದೈಹಿಕವಾಗಿ ಎಲ್ಲರ ನಡುವೆ ಇಲ್ಲದಿದ್ದರೂ ಅವರ ನೆನಪುಗಳು ಮಾತ್ರ ಹಾಗೇ ಉಳಿದುಕೊಂಡಿದೆ. ಈ ಪೈಕಿ ತಪ್ತ ಮುದ್ರಾಧಾರಣೆಯೂ ಒಂದು. ಕಾರಣ ಇಂದು ತಪ್ತ ಮುದ್ರಾಧಾರಣೆ.

    ಮುದ್ರಾಧಾರಣೆ ಅಂದ ತಕ್ಷಣ ಉಡುಪಿಲ್ಲಿರುವ ಶ್ರೀಕೃಷ್ಣ ಭಕ್ತರಿಗೆ ಮೊದಲು ನೆನಪಾಗೋದು ಶಿರೂರು ಸ್ವಾಮೀಜಿ. ಎಲ್ಲಾ ಮಠಗಳಿಗಿಂತ ಮೊದಲು ಶಿರೂರು ಮಠದಲ್ಲಿ ಮುದ್ರಾಧಾರಣೆ ಶುರುವಾಗುತ್ತಿತ್ತು. ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ಹೋಗುವವರಿಗೆ ಸಮಸ್ಯೆಯಾಗಬಾರದು ಅಂತ ಶಿರೂರು ಸ್ವಾಮೀಜಿ ಬೇರೆ ಮಠಗಳಿಗಿಂತ ಮೊದಲೇ ಮುದ್ರಾಧಾರಣೆ ಶುರುಮಾಡುತ್ತಿದ್ದರು. ಈ ಬಾರಿ ತಪ್ತಮುದ್ರಾಧಾರಣೆ ಮತ್ತೆ ಬಂದಿದೆ. ಆದ್ರೆ ಶಿರೂರು ಶ್ರೀ ನೆನಪು ಮಾತ್ರ.

    ತಪ್ತ ಮುದ್ರಾಧಾರಣೆಯಂದು ಜನಜಂಗುಳಿಯಿಂದ ತುಂಬಿಕೊಳ್ಳುತ್ತಿದ್ದ ಶಿರೂರು ಮಠ ಈ ಬಾರಿ ತಣ್ಣಗಿದೆ. ಪೊಲೀಸರು ಮಠವನ್ನು ಸುಪರ್ಧಿಗೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಶಿರೂರು ಶ್ರೀಗಳ ಭಕ್ತರು, ಅಭಿಮಾನಿಗಳಿಗೆ ಈ ದಿನ ಬಹಳ ಕಾಡಲಿದೆ.

    ಇಲ್ಲಿನ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಗೂಢವಾಗಿ ಮೃತಪಟ್ಟು ಐದು ದಿನಗಳು ಕಳೆದಿದೆ. ಪ್ರಕರಣ ತನಿಖೆ ಇನ್ನೂ ತನಿಖೆ ಹಂತದಲ್ಲಿದೆ.

  • ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಶಿರೂರು ಶ್ರೀ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್!

    ಉಡುಪಿ: ಶಿರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ದೊರೆತಿದೆ.

    ಶಿರೂರು ಶ್ರೀಗೆ ಭೂ ಮಾಫಿಯಾ ಜೊತೆ ಸಂಪರ್ಕ ಇದೆ ಎನ್ನಲಾಗುತ್ತಿದ್ದು, ಈ ಕುರಿತು ಹಲವು ಆಯಾಮಗಳಲ್ಲಿ ವಿಚಾರಣೆ ನಡೆಯುತ್ತಿದೆ. ಮಠ ಸಂಘರ್ಷ, ಭೂ ವ್ಯವಹಾರ, ಅನೈತಿಕ ಸಂಬಂಧದ ವಿಚಾರದಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ತನಿಖೆಗೆ ಉಡುಪಿ ಎಸ್ ಪಿ 5 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಇದನ್ನೂ ಓದಿ: ಊಟ ನೀಡ್ತಿದ್ದ ಮಹಿಳೆ ಮೈ ಮೇಲೆ ಶಿರೂರು ಶ್ರೀಗಳ ಆಭರಣಗಳು

    ಉಡುಪಿಯಲ್ಲಿರುವ ಪ್ರಮುಖ ಉದ್ಯಮಿ ಹಾಗೂ ಬಿಲ್ಡರ್ ಗಳ ತನಿಖೆ ನಡೆಸಲಾಗುತ್ತಿದೆ. ಇದರ ಜೊತೆಗೆ ಸ್ವಾಮೀಜಿಗೆ 26 ಕೋಟಿ ರೂ. ವಂಚನೆ ನಡೆದಿದೆ ಅನ್ನೋ ವಿಡಿಯೋ ಮತ್ತು ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಸ್ವಾಮೀಜಿಗಳ ರಿಯಲ್ ಎಸ್ಟೇಟ್ ಉದ್ಯಮ ಪಾಲುದಾರರ ತೀವ್ರ ವಿಚಾರಣೆ ಆರಂಭವಾಗಿದೆ. ಇದನ್ನೂ ಓದಿ: ಶಿರೂರು ಶ್ರೀಗೆ ಇಬ್ಬರು ಉದ್ಯಮಿಗಳಿಂದ ಮೋಸ- ಬರೋಬ್ಬರಿ 26 ಕೋಟಿ ರೂ. ದೋಖಾ

    ಸ್ವಾಮೀಜಿಗಳ ಬಳಿ ನೂರಾರು ಎಕರೆ ಜಮೀನು ಇದೆ. ಸುಮಾರು 30 ಕೋಟಿ ರೂ. ವೆಚ್ಚದ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಕಾರ್ಯದಲ್ಲಿವೆ. ಈ ವಿಚಾರದಲ್ಲಿಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮುಂಬೈ ಮೂಲದ ಉದ್ಯಮಿಯೊಬ್ಬರ ಜೊತೆ ಈ ಕಾಂಪ್ಲೆಕ್ಸ್ ನಿರ್ಮಾಣ ಮತ್ತು ಸೇಲ್ ಬಗ್ಗೆ ಸಾಕಷ್ಟು ಚರ್ಚೆಗಳು, ಜಟಾಪಟಿ ನಡೆದಿತ್ತು ಅನ್ನೋ ಮಾತುಗಳು ಕೂಡ ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿಯೂ ಕೂಡ ಪೊಲೀಸರು ಈಗಾಗಲೇ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.

    ದೂರು ದಾಖಲಿಸಿಕೊಂಡಿರೋ ಪೊಲೀಸರು ಶ್ರೀಗಳಿಗೆ ದಿನಾಲೂ ಫಲಾಹಾರ ತರುತ್ತಿದ್ದ ಮಹಿಳೆಯನ್ನು ಉಡುಪಿ ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.  ಇನ್ನು ಶ್ರೀಗಳ ಸಾವಿನ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿಸಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಕೂಡಾ ವಿಚಾರಣೆ ನಡೆಸಲಾಗಿದೆ.

  • ಶಿರೂರು ಶ್ರೀ ಅಸಹಜ ಸಾವು- ನನ್ನನ್ನೂ ಮುಕ್ತವಾಗಿ ವಿಚಾರಣೆ ನಡೆಸಿ ಅಂದ್ರು ಪೇಜಾವರ ಶ್ರೀ

    ಶಿರೂರು ಶ್ರೀ ಅಸಹಜ ಸಾವು- ನನ್ನನ್ನೂ ಮುಕ್ತವಾಗಿ ವಿಚಾರಣೆ ನಡೆಸಿ ಅಂದ್ರು ಪೇಜಾವರ ಶ್ರೀ

    ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅಸಹಜ ಸಾವು ಕುರಿತು ನನ್ನನ್ನು ಬೇಕಾದರೂ ಪೊಲೀಸರು ವಿಚಾರಣೆ ನಡೆಸಲಿ. ಈ ಕುರಿತು ಮುಕ್ತವಾಗಿ ತನಿಖೆ ಮಾಡಬಹುದು. ಒಟ್ಟಿನಲ್ಲಿ ನಿಷ್ಪಕ್ಷಪಾತ ತನಿಖೆಯಾಗಲಿ ಎಂಬುದೇ ನಮ್ಮ ಆಶಯ ಅಂತ ಪೇಜಾವರ ಶ್ರೀಗಳು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿರೂರು ಶ್ರೀಗೆ ಮೊದಲಿಂದಲೂ ಅನಾರೋಗ್ಯ ಇತ್ತು. ಹೀಗಾಗಿ ಅವರ ಸಾವು ಕೊಲೆಯಲ್ಲ. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಬೇಕಿತ್ತು ಅಂದ್ರು. ಇದೇ ವೇಳೆ ಕರಾವಳಿಯ ಸ್ವಾಮೀಜಿಗಳಾದ ಸಂತೋಷ್ ಗುರೂಜಿ, ಕೇಮಾರು ಸ್ವಾಮೀಜಿ, ವಿಶ್ವ ವಿಜಯರು ಸರಿಯಾಗಿ ವಿಚಾರ ಮಾಡಿ ಜವಾಬ್ದಾರಿಯುತ ಹೇಳಿಕೆ ಕೊಡಬೇಕೆಂದು ವಿನಂತಿ ಮಾಡಿಕೊಂಡರು. ಇದನ್ನೂ ಓದಿ: ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ

    ಮಠದವ್ರಿಂದಲೇ ಕೃತ್ಯ ಶಂಕೆ:
    ಶ್ರೀಗಳ ನಿಧನದಂದು ನಾನು ಉಡುಪಿಯಲ್ಲಿ ಇರಲಿಲ್ಲ. ಅನ್ನಾಹಾರ ವಿಷವಾಗಿದೆಯೋ ಗೊತ್ತಿಲ್ಲ. ಕಿಡ್ನಿ, ಲಿವರ್ ಸಮಸ್ಯೆ ಅಂತ ಕೆಲವರು ಹೇಳುತ್ತಾರೆ. ಮಹಿಳೆ ಜೊತೆ ಜಗಳ ಆಗಿದೆ ಎಂಬ ಊಹಾಪೋಹ ಇದೆ. ಜೊತೆಗಿರುವವರಿಂದ ಸಮಸ್ಯೆಯಾಯ್ತೋ ಗೊತ್ತಿಲ್ಲ. ಪಲಾವ್ ತಿಂದಿರುವ ಬಗ್ಗೆ ಸಹೋದರ ಹೇಳಿದ್ದಾರೆ. ಬೇರೆ ಯಾವ ಮಠದಿಂದ ಯಾವುದೇ ಕೃತ್ಯ ನಡೆದಿಲ್ಲ. ಅವರ ಮಠದವರಿಂದಲೇ ಕೃತ್ಯ ನಡೆದಿರಬಹುದು ಅಂತ ಶಂಕೆ ವ್ಯಕ್ತಪಡಿಸಿದ್ರು.

    ಶಿರೂರು ಸ್ವಾಮೀಜಿಗೆ ಮದ್ಯಪಾನದಿಂದ ಹೀಗಾಯ್ತೋ ಗೊತ್ತಿಲ್ಲ. ವನ ಮಹೋತ್ಸವಕ್ಕೆ ಬಂದ ವಿದ್ಯಾರ್ಥಿಗಳಿಗೂ ಇರಿಸು ಮುರುಸಾಗಿತ್ತು. ಈ ಬಗ್ಗೆ ಕೂಡಾ ಮರಣೋತ್ತರ ಪರೀಕ್ಷೆಯಲ್ಲಿ ಮಾಹಿತಿ ಸಿಗಬಹುದು ಅಂದ್ರು. ಇದನ್ನೂ ಓದಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಸನ್ಯಾಸ ಧರ್ಮ ಪಾಲಿಸಿಲ್ಲ:
    ಶಿರೂರು ಶ್ರೀ ಹಲವಾರು ಒಳ್ಳೆಯ ಕಾರ್ಯ ಮಾಡಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಕೆಲಸ ಮಾಡಿದ್ದಾರೆ. ಆದ್ರೆ ಅವರು ಸನ್ಯಾಸ ಧರ್ಮ ಪಾಲಿಸಿಲ್ಲ. ಶಿರೂರು ಸ್ವಾಮೀಜಿ ಪುಂಡಾಟಿಕೆ ಮಾಡುತ್ತಿದ್ದರು. ಕೆಲವೊಂದು ದುರ್ವ್ಯಸನಗಳು ಇತ್ತು. ಸ್ತ್ರೀಯರ ಮೇಲಿನ ಆಸಕ್ತಿ ಅವರಿಗೆ ಇತ್ತು. ಈ ಬಗ್ಗೆ ಪರ್ಯಾಯ ಸಭೆಯಲ್ಲೇ ಶ್ರೀಗಳನ್ನು ತಿದ್ದಿಕೊಳ್ಳಲು ಹೇಳಿದ್ದೆ. ಅಲ್ಲದೇ ಹಲವು ಬಾರಿ ವೈಯಕ್ತಿಕವಾಗಿಯೂ ನಾನು ಸಲಹೆ ನೀಡಿದ್ದೇನೆ. ಆದ್ರೆ ಲಕ್ಷ್ಮೀವರರು ಯಾವುದನ್ನೂ ಪಾಲಿಸಿಲ್ಲ ಅಂತ ಹೇಳಿದ್ರು. ಇದನ್ನೂ ಓದಿ: ಎಲ್ಲಿ ಹುಡುಕಿದ್ರೂ ಸ್ವಾಮೀಜಿ ಇಲ್ಲ – ಶಿರೂರು ಮಠದಲ್ಲಿ ರೂಬಿಯ ಮೂಕ ರೋಧನ!

  • ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮೀಜಿ ನಿಧನಕ್ಕೆ ಟ್ವಿಸ್ಟ್!

    ಉಡುಪಿ: ಉಡುಪಿಯ ಅಷ್ಠಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮಿವರ ತೀರ್ಥ ಸ್ವಾಮೀಜಿ ಸಾವಿನ ಬಳಿಕ ಹಲವು ಊಹಾಪೋಹಗಳು ಕೇಳಿಬರುತ್ತಿದ್ದು, ಇದೀಗ ಕುಡಿತದ ಚಟವೇ ಸ್ವಾಮೀಜಿಗಳ ನಿಧನಕ್ಕೆ ಕಾರಣವಾಗಿದೆ ಎಂಬ ಚರ್ಚೆ ಆರಂಭವಾಗಿದೆ.

    ಶ್ರೀಗಳು ಆಪ್ತರೊಬ್ಬರು ಈ ಕುರಿತು ಮಾತಾಡಿದ್ದಾರೆ ಎನ್ನಲಾಗಿರುವ ಆಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಸ್ವಾಮೀಜಿಗಳು ಕುಡಿತದ ದಾಸರಾಗಿರುವ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಶಿರೂರು ಶ್ರೀಗಳಿಗೆ ಮದ್ಯಪಾನ, ಸ್ತ್ರೀ ಸಂಪರ್ಕ ಇದ್ದಿರೋದಕ್ಕೆ ಹೀಗಾಯ್ತೋ ಏನೋ ಗೊತ್ತಿಲ್ಲ: ಪೇಜಾವರ ಶ್ರೀ

    ಆಡಿಯೋದಲ್ಲೇನಿದೆ?:
    ಕುಡಿತ ಚಟದಿಂದ ಶ್ರೀಗಳ ಲಿವರ್‍ಗೆ ತೊಂದರೆ ಆಗಿತ್ತು. ಐದಾರು ತಿಂಗಳ ಹಿಂದೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸ್ವಾಮೀಜಿಗೆ ಚಿಕಿತ್ಸೆ ನೀಡಲಾಗಿತ್ತು. ಈ ವೇಳೆ ಕುಡಿತದ ಚಟ ಬಿಟ್ರೆ ಹೆಚ್ಚು ವರ್ಷ ಬದುಕುತ್ತೀರಿ ಎಂದು ವೈದ್ಯರು ಹೇಳಿದ್ದರು. ಆದ್ರೆ ಮೂರೇ ತಿಂಗಳಿಗೆ ಮತ್ತೆ ಕುಡಿತ ಶುರು ಮಾಡಿದ್ರು ಅಂತ ಆಡಿಯೋದಲ್ಲಿ ಹೇಳಲಾಗಿದೆ. ಇದನ್ನೂ ಓದಿ: ಪಲಿಮಾರು ಶ್ರೀಗೆ 50, ಅಜ್ಜಗೆ 50ಲಕ್ಷ, 1 ಕೋಟಿ ಕೊಟ್ರೆ ಮ್ಯಾಟರ್ ಫಿನಿಶ್- ಶಿರೂರು ಶ್ರೀಗಳ ಆಡಿಯೋ ವೈರಲ್

    ಬಹು ಅಂಗಾಂಗ ವೈಫಲ್ಯದಿಂದ ತೀವ್ರ ಅಸ್ವಸ್ಥರಾಗಿದ್ದ ಶ್ರೀಗಳು ಗುರುವಾರ ಬೆಳಗ್ಗೆ ಹರಿಪಾದ ಸೇರಿದ್ದರು. ಶ್ರೀಗಳ ಸಾವಿನ ಬಳಿಕ ಅವರಿಗೆ ವಿಷಪ್ರಾಶನ ಮಾಡಿಸಲಾಗಿದೆಯೇ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತ್ತು. ಇದಕ್ಕೆ ಪೂರಕವಾಗಿರುವಂತೆ ಕೆಎಂಸಿ ಆಸ್ಪತ್ರೆಯ ವೈದ್ಯರೂ ದೇಹದಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಅಂದಿದ್ದರು. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು. ಸದ್ಯ ದೂರು ದಾಖಲಿಸಿಕೊಂಡಿರೋ ಪೊಲೀಸರು ಶ್ರೀಗಳಿಗೆ ದಿನಾಲೂ ಫಲಾಹಾರ ತರುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ. ಮಣಿಪಾಲ ಮೂಲದ ಮಹಿಳೆಯನ್ನು ಉಡುಪಿ ಪೋಲಿಸರು ವಿಚಾರಣೆ ಮಾಡ್ತಿದ್ದಾರೆ. ಇನ್ನು ಶ್ರೀಗಳ ಸಾವಿನ ಸಂಬಂಧ ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿಸಿದ್ದ ಅವರ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರನ್ನು ಕೂಡಾ ವಿಚಾರಣೆ ಮಾಡಲಾಗ್ತಿದೆ. ಇದನ್ನೂ ಓದಿ: ಉಡುಪಿಯ ಶಿರೂರು ಶ್ರೀಗಳು ವಿಧಿವಶ

    https://www.youtube.com/watch?v=-p-dNCjn3ok