Tag: ಲಕ್ಷಣ್ ಸವದಿ

  • ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಸಾರಿಗೆ ಸಿಬ್ಬಂದಿ ಮಾಹಿತಿ ಇಲ್ಲದಿರುವುದು ಸರ್ಕಾರದ ಬೇಜವಾಬ್ದಾರಿಯ ಸಂಕೇತ: ಎಎಪಿ

    ಬೆಂಗಳೂರು: ರಾಜ್ಯದ ಸಾರಿಗೆ ನೌಕರರಿಗೆ ಕೋವಿಡ್ ಸೋಂಕು ತಗುಲಿರುವುದು ಹಾಗೂ ಅವರು ಮೃತಪಟ್ಟಿರುವುದರ ಬಗ್ಗೆ ಸಾರಿಗೆ ಇಲಾಖೆಯ ಬಳಿ ಮಾಹಿತಿಯೇ ಇಲ್ಲದಿರುವುದು ಸರ್ಕಾರದ ಬೇಜಾವಾಬ್ದಾರಿತನವನ್ನು ತೋರಿಸುತ್ತದೆ ಎಂದು ಎಎಪಿಯ ರಾಜ್ಯ ಯುವಘಟಕದ ಅಧ್ಯಕ್ಷರಾದ ಮುಕುಂದ್ ಗೌಡರವರು ಕಿಡಿಕಾರಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಕುಂದ್ ಗೌಡರವರು, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸಿದ್ದರು. ಸರ್ಕಾರವು ಪ್ರಮುಖ ಬೇಡಿಕೆಯನ್ನೇ ಈಡೇರಿಸದಿದ್ದರೂ, ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕರ್ತವ್ಯಕ್ಕೆ ಮರಳಿದ್ದರು. ಮೊದಲಿನಿಂದಲೂ ನೌಕರರನ್ನು ತಾತ್ಸಾರದಿಂದ ನೋಡುತ್ತಿದ ಸಾರಿಗೆ ಇಲಾಖೆಯು ಮುಷ್ಕರದ ನಂತರ ಅವರನ್ನು ಶತ್ರುಗಳಂತೆ ಕಾಣುತ್ತಿದೆ. ಕೋವಿಡ್‍ಗೆ ಬಲಿಯಾದ ನೌಕರರಿಗೆ ಪರಿಹಾರ ನೀಡುವುದು ಹಾಗಿರಲಿ, ಎಷ್ಟು ನೌಕರರಿಗೆ ಸೋಂಕು ತಗುಲಿದೆ ಎಂಬ ಅಂಕಿಅಂಶ ಕೂಡ ಸರ್ಕಾರದ ಬಳಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.  ಇದನ್ನೂ ಓದಿ: ಅನ್‍ಲಾಕ್ ಬಳಿಕ ಸಹಜ ಸ್ಥಿತಿಯತ್ತ ಸಾರಿಗೆ 

    ಸಾರಿಕೆ ನೌಕರರು ಕೋವಿಡ್ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿರುವುದು, ಮೃತಪಟ್ಟಿರುವುದು ಹಾಗೂ ಪರಿಹಾರ ವಿತರಣೆ ಮಾಹಿತಿ ತಿಳಿಯಲು ನಾವು ಆರ್‍ಟಿಐ ಅರ್ಜಿ ಸಲ್ಲಿಸಿದ್ದೆವು. ನಾವು ಕೇಳಿದ ಮೂರು ಪ್ರಶ್ನೆಗಳಿಗೂ ಇಲಾಖೆಯು ತಮ್ಮ ಬಳಿ ಮಾಹಿತಿ ಇಲ್ಲವೆಂದು ಉತ್ತರ ನೀಡಿದೆ. ಅಧಿಕಾರಿಗಳ ಮಾಹಿತಿ ಹೊಂದಿರುವ ಸರ್ಕಾರವು ನೌಕರರನ್ನು ಮಾತ್ರ ಇಷ್ಟು ಕೇವಲವಾಗಿ ನೋಡುತ್ತಿರುವುದು ದುರಂತ. ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಇದು ಎತ್ತಿ ತೋರಿಸುತ್ತದೆ. ಕಷ್ಟಪಟ್ಟು ದುಡಿಯುವ ಕಾರ್ಮಿಕರನ್ನು ಹೀನಾಯವಾಗಿ ಕಾಣುವುದು ಯಾರಿಗೂ ಶೋಭೆ ತರುವಂಥದ್ದಲ್ಲ. ಕಾರ್ಮಿಕರು ಚೆನ್ನಾಗಿದ್ದರೆ ಮಾತ್ರ ಸಮಾಜ ಚೆನ್ನಾಗಿರುತ್ತದೆ ಎಂಬುದನ್ನು ಸಾರಿಗೆ ಸಚಿವರಾದ ಲಕ್ಷಣ್ ಸವದಿ ಅರಿತುಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

    ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರದ ಮಹಿಳಾ ಮುಖಂಡರಾದ ಉಷಾ ಮೋಹನ್‍ರವರು ಮಾತನಾಡಿ, ಸಿಬ್ಬಂದಿ ನನ್ನ ಕುಟುಂಬದ ಸದಸ್ಯರಿದ್ದಂತೆ ಎಂದು ಭಾಷಣ ಬಿಗಿಯುವ ಸಾರಿಗೆ ಸಚಿವರು ನೌಕರರ ಹಿತಕಾಪಾಡಲು ಏನು ಮಾಡಿದ್ದಾರೆ? ನೌಕರರಿಗೆ ಉಚಿತ ಸ್ಯಾನಿಟೈಸರ್ ನೀಡಲೂ ಅವರಿಗೆ ಸಾಧ್ಯವಾಗಿಲ್ಲ. ಮಹಾಮಾರಿ ಕೋವಿಡ್‍ನಿಂದ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸಲು ಯಾವ ಕ್ರಮವನ್ನೂ ಅವರು ಕೈಗೊಂಡಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಮೃತಪಟ್ಟ ಪ್ರತಿಯೊಬ್ಬ ನೌಕರರ ಕುಟುಂಬಕ್ಕೆ ಪರಿಹಾರ ವಿತರಿಸಬೇಕು. ಎಷ್ಟು ಸಿಬ್ಬಂದಿಗೆ ಸೋಂಕು ತಗುಲಿತ್ತು, ಎಷ್ಟು ಸಿಬ್ಬಂದಿ ಮೃತಪಟ್ಟಿದ್ದಾರೆ, ಎಷ್ಟು ಮಂದಿಗೆ ಪರಿಹಾರ ದೊರೆತಿದೆ ಎಂಬ ಅಂಶವನ್ನು ಶೀಘ್ರವೇ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

  • ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಪಕ್ಷಕ್ಕೆ ಬಂದರೆ ಸ್ವಾಗತ: ಲಕ್ಷ್ಮಣ್ ಸವದಿ

    ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಪಕ್ಷಕ್ಕೆ ಬಂದರೆ ಸ್ವಾಗತ: ಲಕ್ಷ್ಮಣ್ ಸವದಿ

    ವಿಜಯಪುರ: ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಮ್ಮ ಸಹೋದರಿ, ಅವರು ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸುತ್ತೇವೆ ಎಂದು ಅಥಣಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹೇಳಿಕೆ ಕೊಟ್ಟಿದ್ದಾರೆ.

    ಬೆಳಗಾವಿ ರಾಜಕೀಯ ಬದಲಿಸಬಲ್ಲೇ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಅವರು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವ ವಿಚಾರದಲ್ಲಿ ಹಾಗೆ ಹೇಳಿರಬಹುದು. ಅವರು ಸಿಕ್ಕರೆ ಈ ಬಗ್ಗೆ ಮಾತನಾಡುತ್ತೇನೆ. ರಾಜಕೀಯ ದೃವೀಕರಣ ಹಿನ್ನೆಲೆ ಅವರು ತಮ್ಮ ಪಕ್ಷ ಬಿಟ್ಟು ನಮ್ಮಲ್ಲಿ ಬರಬಹುದು. ಅವರು ನಮ್ಮ ಸಹೋದರಿ, ನಮ್ಮ ಪಕ್ಷಕ್ಕೆ ಬಂದರೆ ಸ್ವಾಗತಿಸಿಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:ಬೆಳಗಾವಿ ರಾಜಕೀಯ ಬದಲಿಸ್ತೀನಿ- ಲಕ್ಷ್ಮೀ ಹೆಬ್ಬಾಳ್ಕರ್

    ಉಪಚುನಾವಣೆ ಬಳಿಕ ಇನ್ನಷ್ಟು ಜನ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಬರಬಹುದು. ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ಬಹುತೇಕರಿಗೆ ಮನವರಿಕೆ ಆಗಿದೆ. ಅಲ್ಲಿನ ವಾತಾವರಣ ನೋಡಿ ಬಿಜೆಪಿಗೆ ಬಂದರೆ ಒಳ್ಳೆ ಭವಿಷ್ಯ ಇದೆ ಎಂದು ಅನೇಕರು ತಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಬಹಳಷ್ಟು ಜನ ಬಿಜೆಪಿಗೆ ಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

    ಶನಿವಾರ ಸಿಎಂ ಯಡಿಯೂರಪ್ಪ ನನ್ನ ಭಾಷಣದ ಬಳಿಕ ಭಾವುಕರಾಗಿದ್ದಾರೆ. ನಾನೇ ಅಭ್ಯರ್ಥಿ ಆಗಬೇಕು ಎಂದು ಕಾರ್ಯಕರ್ತರು ಬಯಸಿದ್ದರು. ಹೀಗಾಗಿ ಕಾರ್ಯಕರ್ತರಲ್ಲಿ ಗೊಂದಲಗಳಿದ್ದವು. ಶನಿವಾರ ಸಿಎಂ ಬಂದ ಮೇಲೆ ಆ ಗೊಂದಲಗಳಿಗೆಲ್ಲಾ ತೆರೆ ಬಿದ್ದಿದೆ. ನಾನು ಬಿಚ್ಚು ಮನಸ್ಸಿನಿಂದ ಎಲೆಕ್ಷನ್ ಮಾಡ್ತೇನೋ ಇಲ್ಲೋ ಅನ್ನೋ ಸಂಶಯ ಯಡಿಯೂರಪ್ಪ ಅವರಿಗೆ ಇತ್ತು. ಆದರೆ ಶನಿವಾರ ಅವರಿಗೆ ಎಲ್ಲವೂ ಸ್ಪಷ್ಟವಾಗಿ ಭಾವುಕರಾಗಿದ್ದರು ಎಂದು ಸಿಎಂ ಬಗ್ಗೆ ಮಾತನಾಡಿದರು.

    ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?
    ಶನಿವಾರ ರಾತ್ರಿ ಅಥಣಿ ಕ್ಷೇತ್ರದ ಕಕಮರಿ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಡೆದ ಪ್ರಚಾರದಲ್ಲಿ ಭಾಗವಹಿಸಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ನಾನು ಬೆಳಗಾವಿ ರಾಜಕಾರಣ ಬದಲು ಮಾಡಬಲ್ಲೆ. ಕೊಟ್ಟ ಕುದುರೆ ಏರಲು ಆಗದವನು ಇನ್ನೊಂದು ಕುದುರೆ ಏರುತ್ತೇನೆ ಅನ್ನೋನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಅನರ್ಹರ ವಿರುದ್ಧ ಗುಡುಗಿದ್ದರು.

  • ಟ್ರಾಫಿಕ್ ನಿಯಮ ಉಲ್ಲಂಘಿಸಿದ ಡಿಸಿಎಂ, ಎಂಎಲ್‍ಎ, ಬಿಜೆಪಿ ರಾಜ್ಯಾಧ್ಯಕ್ಷ

    ಟ್ರಾಫಿಕ್ ನಿಯಮ ಉಲ್ಲಂಘಿಸಿದ ಡಿಸಿಎಂ, ಎಂಎಲ್‍ಎ, ಬಿಜೆಪಿ ರಾಜ್ಯಾಧ್ಯಕ್ಷ

    ಕೊಪ್ಪಳ: ಜಿಲ್ಲೆಯ ಶಾಸಕರು, ಡಿಸಿಎಂ ಲಕ್ಷಣ ಸವದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕೊಪ್ಪಳದಲ್ಲಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾರೆ.

    ನಳಿನ್ ಕುಮಾರ್ ಕಟೀಲ್ ಹಾಗೂ ಡಿಸಿಎಂ ಲಕ್ಷಣ ಸವದಿ ಅವರು ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಸಂಚಾರ ಮಾಡಿದ್ದಾರೆ. ಅಲ್ಲದೆ ಹಿಂದೆ ಮುಂದೆ ಪೊಲೀಸ್ ವಾಹನಗಳಿದ್ದರೂ ನಿಯಮ ಉಲ್ಲಂಘನೆಗೆ ದಂಡ ವಿಧಿಸಿಲ್ಲ.

    ಸೀಟ್ ಬೆಲ್ಟ್ ಧರಿಸದಿದ್ದರೆ ಟ್ರಾಫಿಕ್ ನಿಯಮದ ಪ್ರಕಾರ ಒಂದು ಸಾವಿರ ದಂಡ ವಿಧಿಸಬೇಕಾಗುತ್ತದೆ. ಆದರೆ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರು ಬಿಜೆಪಿ ನಾಯಕರು ದಂಡ ಕಟ್ಟಲಿಲ್ಲ. ಇದನ್ನು ನೋಡಿದ ಸಾರ್ವಜನಿಕರು ಜನ ಸಾಮಾನ್ಯರಿಗೆ ಒಂದು ನ್ಯಾಯ? ಬಿಜೆಪಿ ನಾಯಕರಿಗೆ ಒಂದು ನ್ಯಾಯಾನಾ? ಎಂದು ಪ್ರಶ್ನಿಸುತ್ತಿದ್ದಾರೆ.

    ಸೀಟ್ ಬೆಲ್ಟ್ ಧರಿಸದ ಡಿಸಿಎಂ ಲಕ್ಷಣ ಸವದಿ ಅವರು ಕಾರ್ ಇಳಿಯುತ್ತಿದ್ದಂತೆ ಎಸ್‍ಪಿ ಹಾಗೂ ಡಿಸಿ ಹೂಗುಚ್ಚ ನೀಡಿ ಬರ ಮಾಡಿಕೊಂಡಿದ್ದಾರೆ.