Tag: ಲಂಡನ್ ನಲ್ಲಿ ಲಂಬೋದರ

  • ಸಂಗೀತ ನಿರ್ದೇಶಕ ಪ್ರಣವ್ ಕಣ್ಣಲ್ಲಿ ಲಂಡನ್ ಲಂಬೋದರ!

    ಸಂಗೀತ ನಿರ್ದೇಶಕ ಪ್ರಣವ್ ಕಣ್ಣಲ್ಲಿ ಲಂಡನ್ ಲಂಬೋದರ!

    ಬೆಂಗಳೂರು: ಪ್ರತಿಯೊಂದು ವಿಚಾರದಲ್ಲಿಯೂ ಲಂಡನ್ ನಲ್ಲಿ ಲಂಬೋದರ ಚಿತ್ರ ವಿಭಿನ್ನವಾಗಿರಬೇಕು ಅನ್ನೋದು ಚಿತ್ರತಂಡದ ಆರಂಭಿಕ ಪ್ರತಿಜ್ಞೆಯಾಗಿತ್ತು. ನಿರ್ದೇಶಕ ರಾಜ್ ಸೂರ್ಯ ಅವರಿಗೆ ಈ ವಿಚಾರದಲ್ಲಿ ಎಲ್ಲ ವಿಭಾಗದ ಪ್ರತಿಭಾನ್ವಿತರೂ ಸಾಥ್ ನೀಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಸಂಗೀತ ನಿರ್ದೇಶನ ಮಾಡಿರೋ ಪ್ರಣವ್ ಅಯ್ಯಂಗಾರ್ ಹಾಡುಗಳನ್ನೆಲ್ಲ ರೂಪಿಸಿದ ಪರಿ ಕಂಡು ಎಲ್ಲರೂ ಬೆರಗಾಗಿದ್ದಾರೆ.

    ಈ ಮೂಲಕವೇ ಒಂದೇ ಚಿತ್ರದಲ್ಲಿ ಸಂಗೀತದ ವಿಶೇಷ ತರಂಗಗಳನ್ನು ಪ್ರೇಕ್ಷಕರಿಗೆ ದಾಟಿಸಬಲ್ಲ ವಿಶಿಷ್ಟ ಸಂಗೀತ ನಿರ್ದೇಶಕನ ಆಗಮನವಾಗಿದೆ. ಕರ್ನಾಟಕ ಸಂಗೀತದ ಭದ್ರ ಬುನಾದಿ ಹೊಂದಿರುವ ಪ್ರಣವ್ ಅಯ್ಯಂಗಾರ್, ಈ ಚಿತ್ರದ ಪ್ರತೀ ಹಾಡುಗಳನ್ನೂ ಕೂಡಾ ಹೊಸಾ ಫೀಲ್ ಹುಟ್ಟಿಸುವಂತೆ ರೂಪಿಸಿದ್ದಾರೆ. ಈ ಹಾಡುಗಳೆಲ್ಲವೂ ಕೂಡಾ ಲಂಡನ್ ನಲ್ಲಿ ಲಂಬೋದರ ಚಿತ್ರದ ಬಗ್ಗೆ ಪ್ರೇಕ್ಷಕರು ಮತ್ತಷ್ಟು ಕಾತರರಾಗುವಂತೆಯೂ ಮಾಡಿವೆ. ಈ ಮೂಲಕವೇ ಪ್ರಣವ್ ಅಯ್ಯಂಗಾರ್ ಕನ್ನಡ ಚಿತ್ರರಂಗದ ಭರವಸೆಯ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

    ಮೈಸೂರು ಮೂಲದವರಾದ ಪ್ರಣವ್ ಅಯ್ಯಂಗಾರ್ ಆರಂಭದಿಂದಲೂ ಸಂಗೀತಾಸಕ್ತಿ ಹೊಂದಿದ್ದವರು. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಶಾಸ್ತ್ರೋಕ್ತವಾಗಿಯೇ ಅಭ್ಯಾಸ ಮಾಡಿರೋ ಅವರಿಗೆ ಪಾಶ್ಚಾತ್ಯ ಸಂಗೀತದ ಬಗೆಗೂ ಆಸಕ್ತಿಯಿದೆ. ಅಂಥಾದ್ದೇ ಸೆಳೆತದಿಂದ ಈಗ್ಗೆ ಹದಿನಾಲ್ಕು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ಅವರು ಪ್ರಣವ ಸ್ಟುಡಿಯೋಸ್ ಸಂಸ್ಥೆಯನ್ನು ಆರಂಭಿಸಿದರು. ನಂತರ ಅದರ ಕಡೆಯಿಂದ ಧಾರಾವಾಹಿಗಳ ಶೀರ್ಷಿಕೆ ಗೀತೆಗಳಿಗೆ ಸಂಗೀತ ನಿರ್ದೇಶನ ಮಾಡೋ ಮೂಲಕ ಕಿರುತೆರೆಗೂ ಪರಿಚಿತರಾದರು. ಇದುವರೆಗೂ ಪ್ರಣವ್ ನಮ್ಮಮ್ಮ ಶಾರದೆ, ಅರಸಿ 2, ಅಶ್ವಿನಿ ನಕ್ಷತ್ರ ಮುಂತಾದ ಹತ್ತಕ್ಕೂ ಹೆಚ್ಚು ಸೀರಿಯಲ್ ಗಳ ಶೀರ್ಷಿಕೆ ಗೀತೆಗಳನ್ನು ರೂಪಿಸಿದ್ದಾರೆ. ಇದಕ್ಕಾಗಿಯೇ ಆರ್ಯಭಟ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

    ಪ್ರಣವ ಸ್ಟುಡಿಯೋಸ್ ಸಂಸ್ಥೆಯನ್ನು ಕ್ರಿಯಾಶೀಲವಾಗಿಯೇ ಕಟ್ಟಿ ನಿಲ್ಲಿಸಿರೋ ಅವರು ಇದರಡಿಯಲ್ಲಿ ಸದಾ ಕ್ರಿಯೇಟಿವ್ ಕೆಲಸ ಕಾರ್ಯಗಳಿಗೆ ತೆರೆದುಕೊಳ್ಳುತ್ತಾ ಬಂದಿದ್ದಾರೆ. ಇದರಡಿಯಲ್ಲಿಯೇ ಹಲವಾರು ಕಾರ್ಪೋರೇಟ್ ಜಾಹೀರಾತುಗಳನ್ನೂ ರೂಪಿಸಿರೋ ಅವರು ಡಾಕ್ಯುಮೆಂಟರಿಗಳನ್ನೂ ಮಾಡಿದ್ದಾರೆ. ಹೀಗೆಯೇ ಹಲವು ದಿಕ್ಕಿನಲ್ಲಿ ತೊಡಗಿಸಿಕೊಂಡಿರೋ ಪ್ರಣವ್ ಅವರ ಪ್ರಧಾನ ಕನಸಾಗಿದ್ದದ್ದು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡುವುದು. 2010ರಲ್ಲಿಯೇ ಅವರೊಂದು ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದರಾದರೂ ಆ ನಂತರ ಪ್ರಣವ ಸ್ಟುಡಿಯೋಸ್ ಕೆಲಸ ಕಾರ್ಯಗಳಲ್ಲಿ ಕಳೆದು ಹೋಗಿದ್ದರು.

    ಹೀಗಿರುವಾಗಲೇ ಈಗೊಂದು ಎರಡು ವರ್ಷಗಳ ಹಿಂದೆ ಅವರ ಮುಂದೆ ಬಂದಿದ್ದು ಲಂಡನ್ ನಲ್ಲಿ ಲಂಬೋದರ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡೋ ಅವಕಾಶ. ಇದರಲ್ಲಿ ಅವರ ಬಾಲ್ಯ ಸ್ನೇಹಿತ ಸಂತೋಷ್ ಅವರೇ ನಾಯಕರಾಗಿಯೂ ಆಯ್ಕೆಯಾಗಿದ್ದರು. ನಿರ್ದೇಶಕ ರಾಜ್ ಸೂರ್ಯ ಹೇಳಿದ ಕಥೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದ ಪ್ರಣವ್ ಅವರ ಇಂಗಿತಕ್ಕೆ ತಕ್ಕುದಾಗಿಯೇ ಹಾಡುಗಳನ್ನು ರೂಪಿಸುವ ಹೊಣೆ ಹೊತ್ತಿದ್ದರು. ಅದಾಗಿ ವರ್ಷಗಟ್ಟಲೆ ಇದನ್ನೊಂದು ಧ್ಯಾನವೆಂಬಂತೆ ಪರಿಗಣಿಸಿದ್ದ ಪ್ರಣವ್ ಐದು ಹಾಡುಗಳನ್ನು ಒಂದಕ್ಕಿಂತ ಒಂದು ಭಿನ್ನವೆಂಬಂತೆ ರೂಪಿಸಿದ್ದಾರೆ.

    ಬರೀ ಹಾಡು ಮಾತ್ರವಲ್ಲದೇ ಶಾಮ್ ಅವರೊಂದಿಗೆ ಪ್ರಣವ್ ಕೂಡಾ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನೂ ನಿಭಾಯಿಸಿದ್ದಾರೆ. ಒಟ್ಟಾರೆ ಚಿತ್ರದ ತಿರುಳನ್ನು ಪರಿಣಾಮಕಾರಿಯಾಗಿ ಧ್ವನಿಸುವಂಥಾ ಹಿನ್ನೆಲೆ ಸಂಗೀತ ನೀಡಿದ ಖುಷಿಯೂ ಅವರಲ್ಲಿದೆ. ಮಜವಾದ ಕಥೆ ಹೊಂದಿರೋ ಲಂಡನ್ ನಲ್ಲಿ ಲಂಬೋದರ ಚಿತ್ರ ಅದ್ಭುತವೆಂಬಂಥಾ ಗೆಲುವೊಂದಕ್ಕೆ ರೂವಾರಿಯಾಗಲಿದೆ ಎಂಬ ಭರವಸೆ ಮತ್ತು ಈ ಸಿನಿಮಾವೇ ತಮ್ಮ ಕನಸಿಗೆ ಹೊಸಾ ದಿಕ್ಕು ತೋರಲಿದೆ ಎಂಬ ನಿರೀಕ್ಷೆ ಪ್ರಣವ್ ಅವರಲ್ಲಿದೆ.

  • ಲಂಡನ್ ನಲ್ಲಿ ಲಂಬೋದರ: ಟ್ರೈಲರ್ ರಿಲೀಸ್ ಮಾಡಲಿದ್ದಾರೆ ರಿಷಬ್ ಶೆಟ್ಟಿ!

    ಲಂಡನ್ ನಲ್ಲಿ ಲಂಬೋದರ: ಟ್ರೈಲರ್ ರಿಲೀಸ್ ಮಾಡಲಿದ್ದಾರೆ ರಿಷಬ್ ಶೆಟ್ಟಿ!

    ಬೆಂಗಳೂರು: ರಾಜ್ ಸೂರ್ಯ ನಿರ್ದೇಶನದ ಲಂಡನ್ ನಲ್ಲಿ ಲಂಬೋದರ ಚಿತ್ರ ಇದೇ ಮಾರ್ಚ್ 29ರಂದು ತೆರೆ ಕಾಣುತ್ತಿದೆ. ಇದೇ ಹೊತ್ತಿನಲ್ಲಿ ಈ ಚಿತ್ರದ ವಿಶಿಷ್ಟವಾದ ಟ್ರೈಲರ್ ಹಾಗೂ ಆಡಿಯೋ ಬಿಡುಗಡೆ ಮಾಡಲು ಚಿತ್ರ ತಂಡ ನಿರ್ಧರಿಸಿದೆ. ಅಂದಹಾಗೆ ನಿರ್ದೇಶಕ, ನಟ ರಿಷಬ್ ಶೆಟ್ಟಿ ಇದನ್ನು ಬಿಡುಗಡೆಗೊಳಿಸಲಿದ್ದಾರೆ.

    ನಾಳೆ ಸಂಜೆ ಈ ಚಿತ್ರದ ಟ್ರೈಲರ್ ಮತ್ತು ಆಡಿಯೋವನ್ನು ರಿಷಬ್ ಶೆಟ್ಟಿ ಬಿಡುಗಡೆಗೊಳಿಸಲಿದ್ದಾರೆ. ರಿಷಬ್ ಇದಕ್ಕೆ ಒಪ್ಪಿಕೊಂಡಿರೋದು ಚಿತ್ರ ಮೂಡಿ ಬಂದಿರೋ ಸೊಗಸಿನ ಕಾರಣಕ್ಕೆ. ಈ ಸಿನಿಮಾವನ್ನು ವೀಕ್ಷಿಸಿದ ರಿಷಬ್ ಥ್ರಿಲ್ ಆಗಿಯೇ ಆಡಿಯೋ ಮತ್ತು ಟ್ರೈಲರ್ ಬಿಡುಗಡೆ ಮಾಡಲು ಒಪ್ಪಿಕೊಂಡಿದ್ದಾರಂತೆ.

    ಸಿಂಪಲ್ ಸುನಿ ಬಳಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡಿರೋ ರಾಜ್‍ಸೂರ್ಯ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಭವಿಷ್ಯದ ಮೇಲೆ ನಂಬಿಕೆ ಮತ್ತು ಈ ನಡುವೆ ದಿನವಿಡೀ ನಡೆಯೋ ವಿದ್ಯಮಾನಗಳನ್ನು ನಾಯಕ ಹೇಗೆಲ್ಲ ಎದುರಿಸುತ್ತಾನೆಂಬುದನ್ನು ಹಾಸ್ಯ ಪ್ರಧಾನ ಶೈಲಿಯಲ್ಲಿ ಕಟ್ಟಿ ಕೊಡಲು ರಾಜ್ ಸೂರ್ಯ ಯತ್ನಿಸಿದ್ದಾರಂತೆ.

    ಯುಕೆಯಲ್ಲಿ ವಾಸವಾಗಿರೋ ಮೈಸೂರು ಮೂಲದ ಸಂತೋಷ್ ಈ ಚಿತ್ರದ ಮೂಲಕ ನಾಯಕನಾಗಿ ಬಣ್ಣ ಹಚ್ಚಿದ್ದಾರೆ. ಬಿಗ್‍ಬಾಸ್ ಸ್ಪರ್ಧಿಯಾಗಿದ್ದ ಶ್ರುತಿ ಲಂಬೋದರನ ನಾಯಕಿಯಾಗಿ ನಟಿಸಿದ್ದಾರೆ. ಅಚ್ಯುತ ಕುಮಾರ್ ಮತ್ತು ಸಾಧು ಕೋಕಿಲಾ ಮುಂತಾದವರೂ ನಟನೆಯಲ್ಲಿ ಸಾಥ್ ನೀಡಿದ್ದಾರೆ.

    ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿರೋ ಈ ಚಿತ್ರಕ್ಕೆ ರಂಜಿತ್ ರಾ.ಸ ಸಂಕಲನ, ರಾಘು ಅವರ ಕಲಾ ನಿರ್ದೇಶನವಿದೆ. ಲಂಡನ್‍ನಲ್ಲಿ ನೆಲೆಸಿರೋ ಕನ್ನಡಿಗರಾದ ಕಲ್ಯಾಣ್, ಡಾ. ಸಚ್ಚಿ, ಡಾ. ವಿಶ್ವನಾಥ್ ಸೇರಿದಂತೆ ಹದಿನೈದು ಮಂದಿ ಸೇರಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪ್ರಣವ ಅವರು ಹಾಡುಗಳಿಗೆ ಹೊಸಾ ಬಗೆಯ ಸಂಗೀತ ಸ್ಪರ್ಶ ನೀಡಿದ್ದಾರೆ.