ಬೀದರ್: ವರ್ಗಾವಣೆ ಮಾಡಿಸಲು ಅಂಗನವಾಡಿ ಕಾರ್ಯಕರ್ತೆಯ ಬಳಿ ಲಂಚ ಪಡೆಯುವಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಹಿಳಾ ತಾಲೂಕಾಧಿಕಾರಿ ಎಸಿಬಿ ಬಲೆಗೆ ಬಿದಿದ್ದಾರೆ.
ವರ್ಗಾವಣೆ ಮಾಡಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಶೋಭಾ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಇಂದು ಮುಂಗಡವಾಗಿ 30 ಸಾವಿರ ಲಂಚ ಪಡೆಯುತ್ತಿರುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ತಾಲೂಕಾಧಿಕಾರಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ.
ಹುಮ್ನಬಾದ್ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಶೋಭಾ ವಿರುದ್ಧ ಸಿದ್ದಾರ್ಥ ಧಾನಾಜೀ ಎಂಬುವರು ಎಸಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಎಸಿಬಿ ಪೊಲೀಸರು ದಾಳಿ ಮಾಡಿ ಲಂಚದ ಸಮೇತ ತಾಲೂಕಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಎಸ್‍ಪಿ ಮಹೇಶ್ ಮೇಗಣ್ಣನವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬೆಂಗಳೂರು: 7 ಲಕ್ಷ ಲಂಚ ಪಡೆಯುವ ವೇಳೆ ಮಹಿಳಾ ತಹಶೀಲ್ದಾರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆಜಿ ರೋಡ್‍ನಲ್ಲಿರುವ ತಹಶೀಲ್ದಾರ್ ಕಚೇರಿ ವಿಶೇಷ ಮಹಿಳಾ ತಹಶೀಲ್ದಾರ್ ಲಕ್ಷ್ಮೀ ಮತ್ತು ಕ್ಲರ್ಕ್ ಪ್ರಸನ್ನಕುಮಾರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳು. ಅಜಂ ಪಾಷಾ ಎಂಬುವರ ಬಳಿ 7 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ವಿಶೇಷ ತಹಶೀಲ್ದಾರ್ ಲಕ್ಷ್ಮೀ, 5 ಲಕ್ಷ ಹಣ ಪಡೆಯುವಾಗ ರೇಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.
ಜಮೀನು ಆರ್.ಟಿ.ಸಿ ಮಾಡಿ ಕೊಡುವ ಕೆಲಸಕ್ಕೆ ಲಕ್ಷ್ಮೀ ಮತ್ತು ಪ್ರಸನ್ನ ಕುಮಾರ್ ಸೇರಿಕೊಂಡು 7 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಲ್ಲಿ 5 ಲಕ್ಷ ತಹಶೀಲ್ದಾರ್ ಲಕ್ಷ್ಮೀಗೆ ಹಾಗೂ ಉಳಿದ ಎರಡು ಲಕ್ಷ ಕ್ಲರ್ಕ್ ಪ್ರಸನ್ನಕುಮಾರಿಗೆ ಎಂದು ಹಂಚಿಕೊಂಡಿದ್ದಾರೆ. ಈ ವೇಳೆ ಲಕ್ಷ್ಮೀ 5 ಲಕ್ಷ ಹಣ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಜೊತೆಗೆ 2 ಲಕ್ಷ ಲಂಚ ಪಡೆದ ಪ್ರಸನ್ನಕುಮಾರ್ ಕೂಡ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇನ್ನೂ ಕೇವಲ 20 ದಿನದಲ್ಲಿ ವಿಶೇಷ ತಹಶೀಲ್ದಾರ್ ಲಕ್ಷ್ಮೀ ನಿವೃತ್ತಿ ಹೊಂದಬೇಕಿತ್ತು. ಇವರು ಕೆ.ಜಿ ರಸ್ತೆಯಲ್ಲಿರುವ ಕಂದಾಯ ಭವನದಲ್ಲಿರುವ ವಿಶೇಷ ತಶೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
-ಕೈಯಲ್ಲಿ ಲಂಚದ ಹಣ ಮುಟ್ಟದ ಪೊಲೀಸಪ್ಪ
-ಲಂಚ ಪಡೆಯಲು ಪೇದೆಯ ಸೂಪರ್ ಪ್ಲ್ಯಾನ್
-ಪೊಲೀಸಪ್ಪನ ಕಳ್ಳಾಟ ಕ್ಯಾಮೆರಾದಲ್ಲಿ ಸೆರೆ
ಲಕ್ನೋ: ಮಾಸ್ಕ್ ಹಾಕದ ಯುವಕರಿಂದ ಪೊಲೀಸ್ ಪೇದೆ ಲಂಚ ಪಡೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹರ್ದೌಯಿ ಜಿಲ್ಲೆಯಲ್ಲಿ ಪೇದೆಯೋರ್ವ ಅತ್ಯಂತ ಚಾಣಕ್ಷತನದಿಂದ ಲಂಚ ಪಡೆದಿರುವ ವಿಡಿಯೋ ಸಾರ್ವಜನಿಕರ ಮೊಬೈಲಿನಲ್ಲಿ ಸೆರೆಯಾಗಿದೆ. ಪೇದೆಗೆ ಅಲ್ಲಿಯ ಟ್ರಾಫಿಕ್ ಪೊಲೀಸ್ ಸಹ ಸಾಥ್ ನೀಡಿದ್ದಾರೆ ಎನ್ನಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ಸೋಮವಾರ ಘಟನೆ ನಡೆದಿದ್ದು, ಮಂಗಳವಾರ ಪೊಲೀಸಪ್ಪ ಲಂಚದ ಕಳ್ಳಾಟ ಬಯಲಾಗಿದೆ.
ವಿಡಿಯೋದಲ್ಲಿ ಏನಿದೆ?: ಮಾಸ್ಕ್ ಧರಿಸದ ಇಬ್ಬರು ಯುವಕರನ್ನ ಪೇದೆ ತಡೆದಿದ್ದಾನೆ. ಕೊರೊನಾ ನಿಯಮ ಪಾಲಿಸದಕ್ಕೆ ದಂಡ ಹಾಕೋದಾಗಿ ಬೆದರಿಕೆ ಹಾಕಿದ್ದಾರೆ. ನಂತರ ನಿಧಾನವಾಗಿ ತನ್ನ ಕೈಯಲ್ಲಿ ಡೈರಿಯೊಂದನ್ನ ಬೈಕ್ ಮೇಲಿಟ್ಟು ಪೇದೆ ಸ್ವಲ್ಪ ಮುಂದೆ ಹೋಗುತ್ತಾನೆ. ಯುವಕರಿಬ್ಬರು ಹಣವನ್ನ ಪೇದೆಯ ಡೈರಿಯಲ್ಲಿಟ್ಟು ತೆರಳುತ್ತಾರೆ. ಯುವಕರು ಹೋದ ನಂತರ ಪೇದೆ ಡೈರಿಯನ್ನ ಎತ್ತಿಕೊಂಡು ಹೋಗಿದ್ದಾನೆ.
ವಿಡಿಯೋ ವೈರಲ್ ಬಳಿಕ ಪ್ರತಿಕ್ರಿಯಿಸಿರುವ ಎಸ್‍ಎಸ್‍ಪಿ, ಪೊಲೀಸರು ಲಂಚ ಪಡೆಯುವ ಬಗ್ಗೆ ಸಾರ್ವಜನಿಕರಿಂದ ದೂರುಗಳ ಬಂದಿವೆ. ವೈರಲ್ ಆಗಿರುವ ವಿಡಿಯೋ ಸಹ ನಮ್ಮ ಗಮನಕ್ಕೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯ ಮಾಸ್ಕ್ ಧರಿಸಿವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತಿದೆ. ಕೊರೊನಾ ನಿಯಮಗಳ ಪಾಲನೆ ಮಾಡದಿದ್ದಲ್ಲಿ ದಂಡ ವಿಧಿಸಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ಸಹ ನೀಡಿದೆ. ಆದ್ರೆ ಇದೇ ಆದೇಶವನ್ನ ಕೆಲ ಪೊಲೀಸರು ಬಂಡವಾಳ ಮಾಡಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಅಂತಹವುದು ಒಂದು ಘಟನೆ ಉತ್ತರ ಪ್ರದೇಶದ ಹರ್ದೌಯಿ ಜಿಲ್ಲೆಯಲ್ಲಿ ನಡೆದಿದೆ.
ಕಾರವಾರ: ಲಂಚ ಸ್ವೀಕರಿಸುತಿದ್ದ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮೇಲೆ ಎಸಿಬಿ ದಾಳಿ ನೆಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.
ಎಸಿಬಿ ಡಿವೈಎಸ್ಪಿ ಶ್ರೀಕಾಂತ್ ನೇತೃತ್ವದಲ್ಲಿ ದಾಳಿ ನಡೆದಿದ್ದು, ಜೋಯಿಡಾ ತಹಶೀಲ್ದಾರ್ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಹುಚ್ಚಣ್ಣನವರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ಆತನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ.
ಗೋಪಿಕಾ ಶಾಂತ ಸಾವಂತ್ ಇವರ ಹೆಸರು ಬದಲಾವಣೆಗೆ ಇವರ ಸಂಬಂಧಿ ಮೋಹನ್ ದೇಸಾಯಿ ಬಳಿ 11 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮುಂಜುನಾಥ್ ಹುಚ್ಚಣ್ಣನವರ್ ಇಂದು ಮೋಹನ್ ದೇಸಾಯಿಯಿಂದ ಜೋಯಿಡಾ ತಹಶೀಲ್ದಾರ್ ಕಚೇರಿಯಲ್ಲಿ ಮುಂಗಡ ಹಣವಾಗಿ ಎರಡು ಸಾವಿರ ಲಂಚ ಸ್ವೀಕರಿಸುವಾಗ ಹಣದ ಸಮೇತ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ದೂರು ನೀಡಿದ ದೂರುದಾರರ ಜೊತೆ ಮೋಹನ ದೇಸಾಯಿ, ಅಧ್ಯಕ್ಷರು ಕಾಳಿ ಬ್ರಿಗೇಡ್ ಅವುರ್ಲಿ ಫಟಕ. ರವಿ ರೇಡಕರ ಮುಖ್ಯ ಸಂಚಾಲಕರು ಕಾಳಿ ಬ್ರಿಗೇಡ್, ಸತೀಶ ನಾಯ್ಕ, ಪ್ರಭಾಕರ ನಾಯ್ಕ, ವಿಷ್ಣು ದೇಸಾಯಿ, ಕಿರಣ ನಾಯ್ಕ, ಅಜೀತ ಟೆಂಗ್ಸೆ, ರಾಜೇಶ ದೇಸಾಯಿ ಈ ಸಂದರ್ಭದಲ್ಲಿ ಇದ್ದರು.
ಬಳ್ಳಾರಿ: ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ತಹಶೀಲ್ದಾರ್ ಮೇಲೆ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಹಶೀಲ್ದಾರ್ ವಿಜಯಕುಮಾರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಆದೇಶ ಹೊರಡಿಸಿದ್ದಾರೆ.
ಮರಳು ಲಾರಿಗೆ ಅನುಮತಿ ನೀಡುವ ಸಲುವಾಗಿ ತಾಲೂಕು ತಹಶೀಲ್ದಾರ್ ವಿಜಯಕುಮಾರ್ ಲಂಚ ಕೇಳಿದ್ದರು. ತಹಶೀಲ್ದಾರ್ ಲಂಚ ಕೇಳಿದ ವಿಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ. ಕಳೆದ 20 ದಿನಗಳ ಹಿಂದೆ ಹೂವಿನ ಹಡಗಲಿ ತಾಲೂಕಿನ ಉಮೇಶ್ ನಾಯಕ್ ಎಂಬವರ ಮರಳು ಲಾರಿಯನ್ನು ಸೀಜ್ ಮಾಡಲಾಗಿತ್ತು. ಮರಳು ಲಾರಿ ಬಿಡುವ ಸಲುವಾಗಿ ಉಮೇಶ್ ನಾಯಕ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ನನ್ನದು ವಾರದ ಲೆಕ್ಕ ಇಲ್ಲ, ನನ್ನ ಜೊತೆಯಲ್ಲಿ ಮಾತನಾಡಬೇಡಿ. 50-50 ಆದರೂ ಕೊಡುತ್ತೀರಾ ಎಂದು ಬೇಡಿಕೆ ಇಟ್ಟಿದ್ದರು. ತಹಶೀಲ್ದಾರ್ ವಿಜಯಕುಮಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ವಿಡಿಯೋ ವೈರಲ್ ಆಗಿತ್ತು. ಅಲ್ಲದೇ ಕರ್ಣಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಅಧ್ಯಕ್ಷ ಚಂದ್ರಶೇಖರ ದೊಡ್ಡಮನಿ ಅವರು ಪತ್ರಿಕಾಗೋಷ್ಠಿ ನಡೆಸಿ ಕೂಡಲೇ ತಹಶೀಲ್ದಾರನ್ನು ಅಮಾನತು ಮಾಡುವಂತೆ ಒತ್ತಾಯ ಮಾಡಿ, ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಹೀಗಾಗಿ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ವಿಜಯಕುಮಾರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು: ಸಿಎಂ ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ 5 ಸಾವಿರ ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂದು ಆರೋಪ ಮಾಡಿತ್ತು. ಈ ಆರೋಪವನ್ನು ಸಿಎಂ ಪುತ್ರ ತಳ್ಳಿ ಹಾಕಿದ್ದಾರೆ.
ಇಂದು ಬೆಳಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ 5 ಸಾವಿಕ ಕೋಟಿ ಸಂಗ್ರಹ ಮಾಡಿದ್ದಾರೆ ಎಂದು ಆರೋಪಿಸಿ ಪತ್ರವನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ವಿಜಯೇಂದ್ರ, ಕಥೆ ಕಟ್ಟುವುದರಲ್ಲಿ ಕಾಂಗ್ರೆಸ್ ಎತ್ತಿದ ಕೈ ಎಂದಿದ್ದಾರೆ.
ಕಟ್ಟು ಕಥೆ ಕಟ್ಟುವುದರಲ್ಲಿ , ಹಸೀ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಜೊಳ್ಳು ಆರೋಪವನ್ನು ಮಾಡಲಾಗಿದೆ. ದುರುದ್ದೇಶ ಪೂರಿತ,ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯ ಕುಂದಿಸದು.
ಈ ವಿಚಾರವಾಗಿ ಟ್ವೀಟ್ ಮಾಡಿರುವ ವಿಜಯೇಂದ್ರ, ಕಟ್ಟು ಕಥೆ ಕಟ್ಟುವುದರಲ್ಲಿ, ಹಸಿ ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ಸಿಗರು ಎತ್ತಿದ ಕೈ, ನನ್ನನ್ನು ಗುರಿಯಾಗಿಸಿಕೊಂಡು ಮೈಸೂರಿನಲ್ಲಿಂದು ಇಂಥದ್ದೇ ಒಂದು ಹಾಸ್ಯಾಸ್ಪದವಾದ ಟೊಳ್ಳು ಆರೋಪವನ್ನು ಮಾಡಲಾಗಿದೆ. ದುರುದ್ದೇಶ ಪೂರಿತ, ರಾಜಕೀಯ ಪಿತೂರಿಯ ಆರೋಪಗಳಿಗೆ ನಾನೆಂದೂ ಬೆನ್ನು ತೋರುವುದಿಲ್ಲ. ಅಪಪ್ರಚಾರಗಳು ನನ್ನ ನೈತಿಕ ಸ್ಥೈರ್ಯ ಕುಂದಿಸದು ಎಂದು ಕಿಡಿಕಾರಿದ್ದಾರೆ.
ಇಂದು ಬೆಳಗ್ಗೆ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಈ ಕುರಿತು ಬಿಜೆಪಿ ಪಕ್ಷದ ಶಾಸಕರು ಹೈಕಮಾಂಡ್‍ಗೆ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದರು.
ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಮತ್ತು ವಿಡಿಯೋ ಕ್ಲೀಪಿಂಗ್‍ಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ 20 ದಿನಗಳ ಸಮಯ ನೀಡುತ್ತಿದ್ದೇವೆ. ಯಾವುದೇ ಕ್ರಮಕೈಗೊಳ್ಳದಿದ್ದಾರೆ ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದರು.
– ಹೈಕಮಾಂಡ್‍ಗೆ ಬಿಜೆಪಿ ಶಾಸಕರಿಂದಲೇ ಪತ್ರ
– ಸೆಪ್ಟೆಂಬರ್ ತಿಂಗಳಿನಲ್ಲಿ ದೆಹಲಿಯಲ್ಲಿ ದಾಖಲೆ ಬಿಡುಗಡೆ
ಮೈಸೂರು: ಮುಖ್ಯಮಂತ್ರಿ ಸಿಎಂ ಬಿಎಸ್ ಯಡಿಯೂರಪ್ಪ ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ 5 ಸಾವಿರ ಕೋಟಿ ರೂ. ಲಂಚ ಸಂಗ್ರಹಿಸಿರುವ ಆರೋಪ ಕೇಳಿಬಂದಿದೆ. ಈ ಕುರಿತ ಪತ್ರವೊಂದನ್ನು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಬಿಡುಗಡೆ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್, ಸಿಎಂ ಪುತ್ರ ಬಿ.ವೈ.ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5 ಸಾವಿರ ಕೋಟಿ ಸಂಗ್ರಹ ಮಾಡಿದ್ದಾರೆ. ಈ ಕುರಿತು ಬಿಜೆಪಿ ಪಕ್ಷದ ಶಾಸಕರು ಹೈಕಮಾಂಡ್‍ಗೆ ಬರೆದಿದ್ದಾರೆ. ಪತ್ರದಲ್ಲಿ ಬಿಜೆಪಿ ಶಾಸಕರೇ ಆರೋಪ ಮಾಡಿದ್ದಾರೆ ಎಂದು ಲಕ್ಷ್ಮಣ್ ಹೇಳಿದ್ದಾರೆ.
ವಿಜಯೇಂದ್ರ ಅವರ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೋ ಮತ್ತು ವಿಡಿಯೋ ಕ್ಲೀಪಿಂಗ್‍ಗಳನ್ನು ನಾವು ಸಂಗ್ರಹಿಸಿದ್ದೇವೆ. ಆದರೆ ಬಿಜೆಪಿ ಶಾಸಕರು ಬರೆದಿದ್ದಾರೆ ಎನ್ನಲಾದ ಪತ್ರದ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ನ್ಯಾಯಾಂಗ ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ 20 ದಿನಗಳ ಸಮಯ ನೀಡುತ್ತಿದ್ದೇವೆ. ಯಾವುದೇ ಕ್ರಮಕೈಗೊಳ್ಳದಿದ್ದಾರೆ ಸೆಪ್ಟೆಂಬರ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ದೆಹಲಿಯಲ್ಲಿ ಆಡಿಯೋ, ವಿಡಿಯೋ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ಲಕ್ಷ್ಮಣ್ ಅವರು ಆರೋಪಿಸಿದ್ದಾರೆ.
ಸದ್ಯ ಕಾಂಗ್ರೆಸ್ ಬಿಡುಗಡೆ ಮಾಡಿರುವ ಪತ್ರವೂ ಬಿಜೆಪಿ ಶಾಸಕರೇ ಹೈಕಮಾಂಡ್‍ಗೆ ಬರೆದಿದ್ದು, 7 ಶಾಸಕರು ಪತ್ರಕ್ಕೆ ಸಹಿ ಮಾಡಿದ್ದಾರೆ ಎನ್ನಲಾಗಿದೆ. 32 ಜನರ ಕೂಟವನ್ನು ವಿಜಯೇಂದ್ರ ಮಾಡಿಕೊಂಡಿದ್ದು, ಪರ್ಯಾಯ ಸರ್ಕಾರ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪ ಮಾಡಿದ್ದಾರೆ. 32 ಜನರ ಕೂಟದ ವಿವರ ಹಾಗೂ ಫೋಟೋ ಸಮೇತ ಪತ್ರದಲ್ಲಿ ವಿವರಣೆಯನ್ನು ಪತ್ರದಲ್ಲಿ ನೀಡಲಾಗಿದೆ. ಅವರ ಅಕ್ರಮ ಆಸ್ತಿ, ಹೂಡಿಕೆ ಬಗ್ಗೆಯೂ ಮಾಹಿತಿ ಲಭಿಸಿದೆ ಎಂದು ಆರೋಪಿಸಿದ್ದಾರೆ. ಪತ್ರದಲ್ಲಿ ವಿಜಯೇಂದ್ರ ಕುರಿತು ಗಂಭೀರ ಆರೋಪ ಕೇಳಿ ಬಂದಿದ್ದು, ಈ ಪತ್ರ ತನಿಖೆಗೆ ಒಳಪಡಿಸಬೇಕು. ಸರ್ಕಾರ ಈ ಬಗ್ಗೆ ತನಿಖೆ ನಡೆಸದಿದ್ದರೆ ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಲಕ್ಷ್ಮಣ್ ತಿಳಿಸಿದ್ದಾರೆ.
ಪತ್ರದ ಕುರಿತು ವಿವರಣೆಯನ್ನು ನೀಡಿದ ಲಕ್ಷ್ಮಣ್ ಅವರು, 31 ಜನರ ಕೂಟವನ್ನು ವಿಜಯೇಂದ್ರ ಅವರು ಮಾಡಿಕೊಂಡಿದ್ದಾರೆ. ಅದರಲ್ಲಿ ರಾಜ್ಯ ಸರ್ಕಾರದ ನೌಕರರ ವರ್ಗಾವಣೆ ದಂಧೆ ನಡೆಸಲು ಷಡಕ್ಷರಿ ಅವರು ನೋಡಿಕೊಳ್ಳುತ್ತಾರೆ. ಇವರ ಕಚೇರಿ ರಾಜ್ಯ ಸರ್ಕಾರಿ ನೌಕರರ ಕಚೇರಿ ಕಬ್ಬನ್ ಪರ್ಕ್ ಯಲ್ಲಿದೆ. 2ನೇ ಅವರು ಉಮೇಶ್ ಜಲಸಂಪನ್ಮೂಲ ಮತ್ತು ಪಿಡಬ್ಲೂಡಿ ಇಲಾಖೆಯ ಟೆಂಡರ್ ನಿರ್ವಹಣೆ. ಇವರು ಗುತ್ತಿಗೆದಾರರ ಆಯ್ಕೆ, ಕಮಿಷನ್ ಸಾಗಣೆ, ಕಪ್ಪು ಹಣ ನಿರ್ವಹಣೆ ಹಾಗೂ ಎಲ್ಲಾ ಇಲಾಖೆಗಳಲ್ಲಿ ಮಾಸಿಕ ಕಂತು ವಸೂಲಿ ಮಾಡುವ ಕೆಲಸ ಮಾಡುತ್ತಾರೆ. 3ನೇ ಅವರು ರಾಜಪ್ಪ, ಅಬಕಾರಿ ಮತ್ತು ಶಿಕ್ಷಣ ಇಲಾಖೆ ವರ್ಗಾವಣೆ, ನೇಮಕಾತಿ ದಂಧೆ, ಮುಖ್ಯಮಂತ್ರಿ ಹಾಗೂ ಸೂಪರ್ ಸಿಎಂ ನಡುವೆ ಸಮನ್ವಯ ನೋಡಿಕೊಳ್ಳುವುದು, ವಿಜಯೇಂದ್ರ ಅವರ ಆದೇಶಗಳನ್ನು ವಿಧಾನಸೌಧದಲ್ಲಿ ಅನುಷ್ಠಾನ ಮಾಡುವುದು ಹೀಗೆ ಹಲವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.
ಹೈದರಾಬಾದ್: ತಹಶೀಲ್ದಾರ್ ಲಂಚ ಪಡೆದುಕೊಳ್ಳುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳದವರಿಗೆ (ಎಸಿಬಿ) ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕೀಸರದ ತಹಶೀಲ್ದಾರ್ ಎರ್ವಾ ಬಲರಾಜು ನಾಗರಾಜು ಎಸಿಬಿ ಬಲೆಗೆ ಬಿದ್ದಿದ್ದಾನೆ. ಇವನು ಬರೋಬ್ಬರಿ 1.10 ಕೋಟಿಗಿಂತ ಹೆಚ್ಚು ಹಣವನ್ನು ಲಂಚವಾಗಿ ಪಡೆದುಕೊಳ್ಳುತ್ತಿದ್ದನು. ಆದರೆ ಶುಕ್ರವಾರ ರಾತ್ರಿ ಎಸಿಬಿ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.
ಎಎಸ್ ರಾವ್ ನಗರದ ತಹಶೀಲ್ದಾರ್ ನಿವಾಸದಲ್ಲಿ ದಾಳಿ ಮಾಡಲಾಗಿದೆ. ಆಗ ಬರೋಬ್ಬರಿ 1.10 ಕೋಟಿ ನಗದು ಹಣ ಪತ್ತೆಯಾಗಿದೆ. ಆದರೆ ತಹಶೀಲ್ದಾರ್ ಹೆಚ್ಚಾಗಿ 500 ರೂ. ಮುಖಬೆಲೆಯ ನೋಟುಗಳನ್ನು ಲಂಚವಾಗಿ ಸ್ವೀಕರಿಸಿದ್ದನು. ಹೀಗಾಗಿ ಶುಕ್ರವಾರ ರಾತ್ರಿ ನೋಟುಗಳ ಎಣಿಕೆ ಶುರುವಾಗಿದ್ದು, ಇಂದು ಬೆಳಗ್ಗೆ ತನಕ ಮುಂದುವರಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಂಪಲ್ಲಿ ದಯಾರದಲ್ಲಿ 28 ಎಕರೆ ಜಮೀನಿನ ವಿವಾದ ಇತ್ತು. ಇದನ್ನು ಅಧಿಕೃತ ಶ್ರೀ ಸತ್ಯ ಡೆವಲಪರ್ ಚೌಲಾ ಶ್ರೀನಾಥ್ ಪರವಾಗಿ ಕೆಲಸ ಮಾಡಿದ್ದಕ್ಕಾಗಿ ಈ ಹಣವನ್ನು ತಹಶೀಲ್ದಾರ್ ಲಂಚವಾಗಿ ಪಡೆದುಕೊಂಡಿದ್ದಾನೆ ಎಂದು ಹೇಳಲಾಗಿದೆ. ಹೀಗಾಗಿ ಚೌಲಾ ಶ್ರೀನಾಥ್, ತಹಶೀಲ್ದಾರ್ ನಾಗರಾಜು ಮತ್ತು ಲ್ಯಾಂಡ್ ಬ್ರೋಕರ್ ಕೆ.ಅಂಜಿ ರೆಡ್ಡಿಯನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ನಾಗರಾಜು ನಿವಾಸದ ಹೊರತಾಗಿ ಆತನ ಕಚೇರಿ ಆವರಣದಲ್ಲಿಯೂ ಎಸಿಬಿ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮ ಕಂದಾಯ ಅಧಿಕಾರಿ ಬಿ.ಸೈರಾಜ್‍ರನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
Telangana: Sleuths of Anti-Corruption Bureau (ACB) yesterday raided the residence of Erva Balaraju Nagaraju, Tehsildar of Keesara in Medchal-Malkajgiri district & recovered over Rs 1 crore in cash. pic.twitter.com/vi25yGrmbt
ಅಹಮದಾಬಾದ್: ಅತ್ಯಾಚಾರಿ ಆರೋಪಿಯ ಬಳಿ ಲಂಚ ಕೇಳಿ ಮಹಿಳಾ ಪಿಎಸ್‍ಐ ಸಿಕ್ಕಿ ಬಿದ್ದಿರುವ ಘಟನೆ ಗುಜರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.
ಪಶ್ಚಿಮ ಅಹಮದಾಬಾದ್‍ನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶ್ವೇತಾ ಜಡೇಜಾ ಲಂಚ ಕೇಳಿ ಸಿಕ್ಕಿಬಿದ್ದ ಪೊಲೀಸ್ ಅಧಿಕಾರಿ. ಆರೋಪಿಯ ವಿರುದ್ಧ ಸಾಮಾಜಿಕ ವಿರೋಧಿ ಚಟುವಟಿಕೆಗಳ ತಡೆ (ಪಿಎಎಸ್‍ಎ) ಕಾಯ್ದೆ ಆಡಿ ಪ್ರಕರಣ ದಾಖಲು ಮಾಡದೇ ಇರಲು ಶ್ವೇತಾ 35 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.
ಆರೋಪಿ ಕೆನಾಲ್ ಶಾ 2019ರಲ್ಲಿ ಅತ್ಯಾಚಾರ ಮಾಡಿದ್ದ, ಈ ಪ್ರಕರಣವನ್ನು ಶ್ವೇತಾ ಜಡೇಜಾ ಅವರು ವಿಚಾರಣೆ ಮಾಡುತ್ತಿದ್ದರು. ಈ ವೇಳೆ ಪಿಎಎಸ್‍ಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸದೇ ಇರಲು ಆರೋಪಿ ಕೆನಾಲ್ ಶಾನ ಸಹೋದರನ ಬಳಿ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಪಿಎಎಸ್‍ಎ ಕಾಯ್ದೆ ಅಡಿ ಪ್ರಕರಣ ದಾಖಲಿಸದೇ ಆರೋಪಿಯನ್ನು ಪೊಲೀಸರು ಜಿಲ್ಲಾ ಕಾರಾಗೃಹದಿಂದ ಬೇರೆ ಜೈಲಿಗೆ ಸ್ಥಳಾಂತರಿಸುವುದನ್ನು ತಡೆಯಲು ಶ್ವೇತಾ ಮುಂದಾಗಿದ್ದರು ಎನ್ನಲಾಗಿದೆ.
ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಯ ಪ್ರಕಾರ, ಪೊಲೀಸ್ ಅಧಿಕಾರಿ ಶ್ವೇತಾ ಜಡೇಜಾ ಅವರು, ಆರೋಪಿ ಕಡೆಯ ಮಧ್ಯವರ್ತಿಯ ಬಳಿ ಈಗಾಗಲೇ 20 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಇದಾದ ನಂತರ ಹೆಚ್ಚುವರಿಯಾಗಿ ಇನ್ನೂ 15 ಲಕ್ಷ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಈಗಾಗಲೇ 20 ಲಕ್ಷ ಪಡೆದು ಮತ್ತೆ 15 ಲಕ್ಷಕ್ಕೆ ಪೀಡಿಸುತ್ತಿದ್ದ ಕಾರಣ, ಆರೋಪಿ ಮಹಿಳಾ ಅಧಿಕಾರಿ ವಿರುದ್ಧ ದೂರು ನೀಡಿದ್ದಾನೆ.
ಆರೋಪಿ ನೀಡಿದ ದೂರಿನ ಆಧಾರದ ಮೇಲೆ ಶ್ವೇತಾ ಜಡೇಜಾರನ್ನು ಪೊಲೀಸರು ಬಂಧಿಸಿದ್ದು, ಸೆಷನ್ಸ್ ನ್ಯಾಯಾಲಯದ ಮುಂದೆ ನಿಲ್ಲಿಸಿದ್ದಾರೆ. ಈ ವೇಳೆ ವಿಚಾರಣೆ ಮಾಡಿದ ನ್ಯಾಯಾಲಯ ಪೊಲೀಸ್ ಅಧಿಕಾರಿನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ತುಮಕೂರು: ಕೊರೊನಾ ಅದೆಷ್ಟು ಜನರ ಉದ್ಯೋಗ ಕಿತ್ತುಕೊಂಡಿದೆ. ಆದರೆ ಕೆಲ ಅಧಿಕಾರಿಗಳು ಮಾತ್ರ ಕೊರೊನಾವನ್ನೇ ಅಸ್ತ್ರ ಮಾಡಿಕೊಂಡು ದುಡ್ಡು ಮಾಡ್ತಿದ್ದಾರೆ. ಲಾಕ್‍ಡೌನ್‍ನಿಂದಾಗಿ ಸ್ಯಾಲರಿ ಆಗಿಲ್ಲ ಅಂತ ಫಲಾನುಭವಿಗಳ ಬಳಿ ಅಧಿಕಾರಿಗಳು ವಸೂಲಿಗೆ ಇಳಿದಿದ್ದಾರೆ.
ಹೌದು. ಕೊರಟಗೆರೆ ತಾಲೂಕಿನ ಶಿವಪುರದ ನಿವಾಸಿ ರಮೇಶ್, ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷ ರೂ. ಮಂಜೂರಾತಿಗೆ ಅರ್ಜಿ ಹಾಕಿದ್ದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರ್ಜಿ ಪುರಸ್ಕೃತಗೊಂಡಿತ್ತು. ಆದರೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಅಂತಾರಲ್ಲ ಅದೇ ರೀತಿ ಚೆಕ್ ಪಾಸ್ ಆಗಲು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಿಬ್ಬಂದಿ 10 ಸಾವಿರ ರೂ ಲಂಚ ಕೇಳಿದ್ದಾರೆ. ಕೇಸ್ ವರ್ಕರ್‍ಗಳಾದ ವೆಂಕಟೇಶ್ ಹಾಗೂ ಸೋಮಶೇಖರ್ ಅಧಿಕಾರಿಗಳ ಹೆಸರು ಹೇಳಿ ಡೀಲ್ ಕುದುರಿಸಿದ್ದಾರೆ.
ಫಲಾನುಭವಿ: ದುಡ್ಡು ಏನೋ ಕೊಡೋಣ ಕನ್ಫರ್ಮ್ ಆಗಿ ಕೆಲಸ ಆಗುತ್ತೆ ಅಲ್ವಾ..? ಸಿಬ್ಬಂದಿ ವೆಂಕಟೇಶ್: ಆಗತ್ತೆ ಪಕ್ಕಾ ಆಗತ್ತೆ.. ಶೇ.100 ಇವತ್ತು ಆದರೆ ನಾಳೆ ಸಾಹೇಬ್ರ ಸಹಿ ಹಾಕಿಸಿ ಒಂದೆರಡು ದಿನದಲ್ಲಿ ಆಗತ್ತೆ. ಮ್ಯಾನೇಜರ್ ಅಕೌಂಟಿಂದ. ಫಲಾನುಭವಿ ಅಕೌಂಟಿಗೆ ಟ್ರಾನ್ಸಪರ್ ಆಗುತ್ತೆ. ಇವರು ಕನ್ಫರ್ಮ್ ಆಗಿ ನಾಳೆ ಸಹಿ ಹಾಕಿದರೆ ಸೋಮವಾರ ಅಷ್ಟೊತ್ತಿಗೆ ಇವರಿಗೆ ದುಡ್ಡು ಬರತ್ತೆ. ಫಲಾನುಭವಿ: ಎಷ್ಟು ಕೊಡಬೇಕು..? ಸಿಬ್ಬಂದಿ ವೆಂಕಟೇಶ್: ಅದೆಷ್ಟು ಮಾತಾಡಿದಾರೊ ಗೊತ್ತಿಲ್ಲ. ಆಗಲೇ ಫಿಕ್ಸ್ ಮಾಡಿದ್ದಾರೆ.
ಫಲಾನುಭವಿ: ನಾವೆನೋ ಬೇರೆ ಕೆಲಸಕ್ಕೆ ಬಂದಿದ್ವಿ. ಈ ಯಪ್ಪಾ ಅರ್ಜೆಂಟ್ ಮಾಡ್ದ. ಬೆಳಗ್ಗೆ ಕೊಟ್ಟು ಕಳಿಸ್ತಿನಿ. ನೀವು ಆದರೆ ನೋಡಿ ಒಂದ್ ಎರಡು ಸಾವಿರ ಉಳಿಸಿ. ಸಿಬ್ಬಂದಿ ಸೋಮಶೇಖರ: ಅಣ್ಣಾ ದೇವರಾಣೆ. ನಮಗೂ ಕೊರೋನಾದಿಂದ 3-4 ತಿಂಗಳಿಂದ ಸ್ಯಾಲರಿ ಆಗಿಲ್ಲ. ಇನ್ನೇನ್ ಅಂದರೆ ಅದರಲ್ಲಿ ನನ್ನದೇನು ಪಾತ್ರ ಇಲ್ಲ.
ಹೀಗೆ ಸಂಬಳ ಆಗಿಲ್ಲ ಅಂತ ಹಣ ವಸೂಲಿ ಕೆಲಸಕ್ಕೆ ಇಳಿದಿದ್ದಾರೆ. ಇದೆಷ್ಟು ಸರಿ ಅಂತ ಫಲನಾಭವಿ ರಮೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಅಲೆಮಾರಿ ಜನಾಂಗದ ಸ್ವಯಂ ಉದ್ಯೋಗಕ್ಕಾಗಿ ಸುಮಾರು 53 ಫಲಾನುಭವಿಗಳು ಆಯ್ಕೆಯಾಗಿದ್ದಾರೆ. ಇವರೆಲ್ಲರಿಗೂ ಕೂಡ ತಲಾ 10 ಸಾವಿರ ಫಿಕ್ಸ್ ಮಾಡಿದ್ದೀವಿ ಎಂದು ಲಂಚಬಾಕ ನೌಕರರು ಆಫ್ ದಿ ರೆಕಾರ್ಡ್‍ನಲ್ಲಿ ಹೇಳುತ್ತಾರೆ. ಲಾಕ್‍ಡೌನ್‍ನಿಂದಾಗಿ ಜನರಿಗೆ ಕೆಲಸ ಇಲ್ಲದೇ ಕೈಯಲ್ಲಿ ಕಾಸಿಲ್ಲ. ಈ ನಡುವೆ ಸರ್ಕಾರಿ ನೌಕರರು ಕೊರೊನಾ ನೆಪ ಹೇಳಿ ಬಡ ಜನರ ರಕ್ತ ಹೀರುತ್ತಿರುವುದು ನಿಜಕ್ಕೂ ನಾಚಿಕೆಯ ಸಂಗತಿ.