Tag: ಲಂಚ

  • ಲಾಕ್‍ಡೌನ್- ಅಂಗಡಿ ತೆರೆಯಲು ಲಂಚ ನೀಡದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    ಲಾಕ್‍ಡೌನ್- ಅಂಗಡಿ ತೆರೆಯಲು ಲಂಚ ನೀಡದ್ದಕ್ಕೆ ಮಾಲೀಕನ ಮೇಲೆ ಹಲ್ಲೆ

    – ಪೊಲೀಸರ ಮೂಲಕ ಹಲ್ಲೆ ಮಾಡಿಸಿದ ಪೌರಾಯುಕ್ತ
    – ಲಂಚ ನೀಡಿದವರಿಗೆ ಒಂದು ನ್ಯಾಯ, ನೀಡದಿರುವವರಿಗೆ ಒಂದು ನ್ಯಾಯ

    ಯಾದಗಿರಿ: ಅಂಗಡಿ ತೆರೆಯುವುದಕ್ಕೆ ಲಂಚ ನೀಡದ ವ್ಯಾಪಾರಿಯ ಮೇಲೆ ಪೊಲೀಸರ ಮೂಲಕ ಪೌರಾಯುಕ್ತ ಹಲ್ಲೆ ಮಾಡಿಸಿದ ಘಟನೆ ಜಿಲ್ಲೆಯ ಶಹಪುರದಲ್ಲಿ ನಡೆದಿದೆ. ಲಾಕ್‍ಡೌನ ಸಡಿಲಿಕೆ ಹಿನ್ನೆಲೆ ಶಹಪುರದ ಕಿರಾಣಿ ಅಂಗಡಿಗಳಿಗೆ ಪೌರಾಯುಕ್ತ ರಮೇಶ್ ಸಾವಿರಾರು ರೂಪಾಯಿ ಲಂಚದ ಬೇಡಿಕೆ ಇಡುತ್ತಿದ್ದಾರೆ.

    ಲಂಚ ನೀಡಿದವರಿಗೆ ವ್ಯಾಪಾರಕ್ಕೆ ಸಮಯ ಹೆಚ್ಚು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ರಮೇಶ್ ಓರ್ವ ಕಿರಾಣಿ ವ್ಯಾಪಾರಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆ. ಅಧಿಕಾರಿಯ ಮಾತಿಗೆ ವ್ಯಾಪಾರಿ ಆಗುವುದಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದಾಗಿ ಪೌರಾಯುಕ್ತ ರಮೇಶ್ ಪೊಲೀಸರಿಗೆ ಕುಮ್ಮಕ್ಕು ನೀಡಿ ನಡು ರಸ್ತೆಯಲ್ಲಿ ಮನ ಬಂದಂತೆ ವ್ಯಾಪಾರಿಗೆ ಥಳಿಸಿದ್ದಾರೆ. ಆಕ್ರೋಶಗೊಂಡ ವ್ಯಾಪಾರಿಗಳು ಶಹಪುರ ನಗರಸಭೆಗೆ ಮುತ್ತಿಗೆ ಹಾಕಿ, ಪೊಲೀಸರ ಮತ್ತು ನಗರಸಭೆ ಸಿಬ್ಬಂದಿ ದೌರ್ಜನ್ಯ ಖಂಡಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ.

    ನಾಳೆಯಿಂದ ಎಲ್ಲ ರೀತಿಯ ವ್ಯಾಪಾರ ವಹಿವಾಟು ನಿಲ್ಲಿಸಲು ನಿರ್ಧಾರ ಮಾಡಿದ್ದಾರೆ. ಸುದ್ದಿ ತಿಳಿದ ಸಹಾಯಕ ಆಯುಕ್ತ ಪ್ರಶಾಂತ್, ವ್ಯಾಪಾರಿಗಳ ಸಂಧಾನಕ್ಕೆ ಪ್ರಯತ್ನ ಪಟ್ಟರು. ಆದರೆ ಎಸಿ ಮಾತಿಗೆ ಬಗ್ಗದ ವ್ಯಾಪಾರಸ್ಥರು, ರಮೇಶ್ ಮತ್ತು ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.

  • ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

    ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

    ಮಡಿಕೇರಿ: ಆರ್.ಟಿ.ಸಿಯಲ್ಲಿ ಹೆಸರು ಸೇರ್ಪಡೆಗಾಗಿ ವ್ಯಕ್ತಿಯೊಬ್ಬರಿಂದ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗನನ್ನು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ಮಡಿಕೇರಿಯಲ್ಲಿ ವರದಿಯಾಗಿದೆ.

    ಮಡಿಕೇರಿ ತಾಲೂಕಿನ ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಎಂಬವರೇ ಬಂಧಿತ ಸರ್ಕಾರಿ ನೌಕರನಾಗಿದ್ದಾರೆ. ಕಾರಗುಂದ ನಿವಾಸಿ ಎಂ.ಎನ್ ಯೋಗೇಶ್ ಅವರ ಸರ್ವೇ ನಂಬರ್ 226/11ರಲ್ಲಿ 0.70 ಎಕರೆ ಹಾಗೂ 224/6ರಲ್ಲಿ 2.20 ಎಕರೆ ಆಸ್ತಿ ಇದ್ದು, ಆರ್.ಟಿ.ಸಿಯಲ್ಲಿ ಮೃತರ ಹೆಸರನ್ನು ತೆಗೆದು ಎಂ.ಎನ್. ಯೋಗೇಶ್ ಹೆಸರು ಸೇರ್ಪಡೆಗಾಗಿ ಮಾರ್ಚ್ ತಿಂಗಳಲ್ಲಿ ಮಡಿಕೇರಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿ ಕಾರಗುಂದ ಗ್ರಾಮ ಲೆಕ್ಕಿಗರ ಕಚೇರಿಗೆ ವಿಲೇವಾರಿಯಾಗಿತ್ತು. ಈ ನಡುವೆ ಯೋಗೇಶ್ ಅವರು ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಅವರ ಬಳಿ ವಿಚಾರಿಸಿದಾಗ ಖಾಲಿ ಕೈಯಲ್ಲಿ ಕಚೇರಿಗೆ ಬರಬೇಡವೆಂದು ಹೇಳಿದ್ದರು ಎನ್ನಲಾಗಿದೆ. ತದನಂತರ ಯೋಗೇಶ್ ಅವರು ಅನಾರೋಗ್ಯಕ್ಕೆ ಒಳಗಾದ ಸಂದರ್ಭ ಪೌತಿ ಖಾತೆಯಲ್ಲಿ ಹೆಸರು ಬದಲಾವಣೆ ಮಾಡಿಸಿ ಕೊಡುವಂತೆ ಕಾರಗುಂದ ನಿವಾಸಿಯಾದ ಬೊಳದಂಡ ನಾಚಪ್ಪ ಅವರನ್ನು ಯೋಗೇಶ್ ಕೋರಿದ್ದರು. ಅದರಂತೆ ಏಪ್ರಿಲ್ 8 ರಂದು ನಾಚಪ್ಪ ಅವರು ಗ್ರಾಮ ಲೆಕ್ಕಿಗರ ಕಚೇರಿಗೆ ತೆರಳಿ ವಿಚಾರಣೆ ನಡೆಸಿದ ಸಂದರ್ಭ ಖಾತೆ ಬದಲಾವಣೆಗೆ 2500ರೂ. ನೀಡುವಂತೆ ಗ್ರಾಮ ಲೆಕ್ಕಿಗ ದೇವಯ್ಯ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.

    ಈ ಹಿನ್ನೆಲೆಯಲ್ಲಿ ಏಪ್ರಿಲ್ 16 ರಂದು ಬೊಳದಂಡ ನಾಚಪ್ಪ ಅವರು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ ನಾಚಪ್ಪ ಅವರಿಂದ ಗ್ರಾಮ ಲೆಕ್ಕಿಗ ದೇವಯ್ಯ ಅವರು 2500ರೂ. ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭ ಮೈಸೂರು, ಕೊಡಗು ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿ ಗ್ರಾಮ ಲೆಕ್ಕಿಗನನ್ನು ಬಂಧಿಸಿ 2500ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.

  • ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

    ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

    ಯಾದಗಿರಿ: ಜಿಲ್ಲೆಯ ಗುರುಮಿಠಕಲ್ ತಾಲೂಕಿನ ತಹಶೀಲ್ದಾರ್ ಸಂಗಮೇಶ್ ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ದೊಡ್ಡಬನ್ನಪ್ಪ ಎಂಬವರ ಜಮೀನು ಮುಟಿಗೇಷನ್ ಮಾಡಿಕೊಡಲು ಸಂಗಮೇಶ್ ಹತ್ತು ಸಾವಿರ ರೂಪಾಯಿ ಲಂಚದ ಬೇಡಿಕೆಯನ್ನಿಟ್ಟಿದರು. ಇಂದು ಸಂಗಮೇಶ್ ತಮ್ಮ ಕಚೇರಿಯಲ್ಲಿ ಐದು ಸಾವಿರ ಮುಂಗಡ ಲಂಚ ಪಡೆಯುತ್ತಿರುವಾಗ ಎಸಿಬಿ ದಾಳಿ ನಡೆಸಿದೆ. ಎಸಿಬಿ ಎಸ್.ಪಿ. ಮಹೇಶ್ ಮೇಘಣ್ಣವರ್ ಮತ್ತು ಡಿವೈಎಸ್ ಪಿ ಉಮಾಶಂಕರ್, ಪಿಎಸ್ ಐ ಗುರುಪಾದ್ ಬಿರಾದಾರ್, ಸಿಬ್ಬಂದಿ ಅಮರ್, ವಿಜಯ್, ಗುತ್ತಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

    ದೊಡ್ಡ ಬನ್ನಪ್ಪ ಎಂಬವರು ಬಹಳಷ್ಟು ದಿನಗಳಿಂದ ತಮ್ಮ ಜಮೀನು ರೂಪಾಂತರ ಪತ್ರಕ್ಕಾಗಿ ತಹಶೀಲ್ದಾರರ ಕಚೇರಿಗೆ ಅಲೆದಾಡುತ್ತಿದ್ದರು. ತಹಶೀಲ್ದಾರರ ಲಂಚದ ದುರಾಸೆಯಿಂದ ದೊಡ್ಡ ಬನ್ನಪ್ಪನವರ ಕೆಲಸವನ್ನು ಮುಂದೂಡುತ್ತಿದ್ದರು ಎನ್ನಲಾಗಿದೆ. ಇದರಿಂದಾಗಿ ಬೇಸತ್ತ ದೊಡ್ಡಬನ್ನಪ ಎಸಿಬಿಯಲ್ಲಿ ದೂರು ದಾಖಲು ಮಾಡಿದ್ದರು. ಈ ವಿಚಾರವಾಗಿ ತಹಶೀಲ್ದಾರರ ಸಂಗಮೇಶ್ ಮೇಲೆ ತೀವ್ರ ನಿಗಾಯಿಟ್ಟಿದ್ದ ಎಸಿಬಿ ತಂಡ, ವಿಶೇಷ ಕಾರ್ಯಾಚರಣೆ ಮೂಲಕ ತಹಶೀಲ್ದಾರರನ್ನು ರೆಡ್ ಹ್ಯಾಂಡಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.

  • 20 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ

    20 ಲಕ್ಷ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಬಿಬಿಎಂಪಿ ಅಧಿಕಾರಿ

    ಬೆಂಗಳೂರು: ಬರೋಬ್ಬರಿ 20 ಲಕ್ಷ ರೂ. ಹಣ ಪಡೆಯುವ ವೇಳೆ ಬಿಬಿಎಂಪಿ ಅಧಿಕಾರಿ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ನಗರದ ಬೊಮ್ಮನಹಳ್ಳಿಯ ಯೋಜನೆ ವಿಭಾಗದ ಸಹಾಯಕ ನಿರ್ದೇಶಕ ದೇವೇಂದ್ರಪ್ಪ 20 ಲಕ್ಷ ರೂ. ಹಣ ಪಡೆಯುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕಟ್ಟಡವೊಂದಕ್ಕೆ ಓಸಿ ನೀಡಲು 40 ಲಕ್ಷ ಲಂಚ ಕೇಳಿದ್ದ ದೇವೇಂದ್ರಪ್ಪ, ಈ ಪೈಕಿ 20 ಲಕ್ಷ ರೂ. ಮುಂಗಡ ಹಣ ಪಡೆಯುವ ವೇಳೆ ಎಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಹಣ ನೀಡುವಾಗ ಮಾತ್ರವಲ್ಲದೆ, ಬಳಿಕ ಕಾರ್ ಪರಿಶೀಲನೆ ನಡೆಸಿದಾಗ ಸಹ ಕಾರಿನಲ್ಲಿ ಮತ್ತೆ 8 ಲಕ್ಷ ರೂ. ಸಿಕ್ಕಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಎಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೋಟ್ಯಧೀಶ ಅಧಿಕಾರಿಗಳನ್ನು ಸಹ ಎಸಿಬಿ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಇದರ ಬೆನ್ನಲ್ಲೇ ಇದೀಗ ಈ ಪ್ರಕರಣ ಬೆಳಕಿಗೆ ಬಂದಿದೆ.

  • ಎಸಿಬಿ ದಾಳಿ – ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಕಂಪ್ಯೂಟರ್‌ ಆಪರೇಟರ್‌

    ಎಸಿಬಿ ದಾಳಿ – ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದ ಕಂಪ್ಯೂಟರ್‌ ಆಪರೇಟರ್‌

    ಗದಗ: ಜಿಲ್ಲೆಯ ಶಿರಹಟ್ಟಿ ಪಟ್ಟಣ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಶರಣಪ್ಪ ಗೌಳಿ ಎಂಬಾತ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ಶರಣಪ್ಪ ಗೌಳಿ ಆಸ್ತಿ ಖಾತಾ ಬದಲಾವಣೆ ಹಾಗೂ ಕಂಪ್ಯೂಟರ್ ಉತಾರ ನೀಡಲು ಫಲಾನುಭವಿಗೆ ಲಂಚದ ಬೇಡಿಕೆ ಇಟ್ಟಿದ್ದ. ಸ್ಥಳೀಯ ಮಹೇಶ್ ಎಂಬುವರು ತಮ್ಮ ಆಸ್ತಿಯ ಖಾತಾ ಬದಲಾವಣೆ ಮಾಡಿ ಕಂಪ್ಯೂಟರ್ ಉತಾರ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿ ಹಲವು ತಿಂಗಳು ಕಳೆದರೂ, ಉತಾರ ಒದಗಿಸಿರಲಿಲ್ಲ. ಉತಾರ ನೀಡಲು 3,500 ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ.

    ಈ ಕುರಿತು ಅರ್ಜಿದಾರ ಮಹೇಶ್ ನೀಡಿರುವ ದೂರಿನ ಮೇರೆಗೆ ಎಸಿಬಿ ಅಧಿಕಾರಿಗಳು ಇಂದು ಮಧ್ಯಾಹ್ನ ಕಚೇರಿಯಲ್ಲಿ ಲಂಚ ಪಡೆಯುವ ವೇಳೆ ದಾಳಿ ಮಾಡಿದ್ದಾರೆ. ಎಸಿಬಿ ಡಿ.ಎಸ್ಪಿ ವಾಸುದೇವರಾಮ್ ಎನ್ ಅವರ ನೇತೃತ್ವದ ತಂಡ ದಾಳಿಮಾಡಿ ಆರೋಪಿ ಶರಣಪ್ಪ ಗೌಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

  • ಲಂಚ ಪಡೆಯುತ್ತಿದ್ದ ಗೃಹ ರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ

    ಲಂಚ ಪಡೆಯುತ್ತಿದ್ದ ಗೃಹ ರಕ್ಷಕ ದಳದ ಅಧಿಕಾರಿ ಎಸಿಬಿ ಬಲೆಗೆ

    ಮಡಿಕೇರಿ: ಸಿಬ್ಬಂದಿಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಗೃಹರಕ್ಷಕ ದಳದ ಅಧಿಕಾರಿಯೊಬ್ಬರನ್ನು ಭ್ರಷ್ಟಾಚಾರ ನಿಗ್ರಹದಳದ ಎಸಿಬಿ ಅಧಿಕಾರಿಗಳು ಬಂಧಿಸಿರುವ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಬಸ್ಸು ನಿಲ್ದಾಣದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿ ಸುನಿಲ್ ಎಂಬವರಿಂದ ಲಂಚ ಪಡೆಯುತ್ತಿದ್ದ ಆರೋಪದಡಿ ಗೃಹ ರಕ್ಷಕ ದಳದ ಅಧಿಕಾರಿ ರುದ್ರಪ್ಪ ಎಂಬವರನ್ನು ಬಂಧಿಸಲಾಗಿದೆ.

    ಪ್ರತಿ ತಿಂಗಳು ಗೃಹರಕ್ಷಕ ದಳದ ಸಿಬ್ಬಂದಿ ತಲಾ ಒಂದು ಸಾವಿರ ರೂ.ಗಳನ್ನು ನೀಡಬೇಕೆಂಬ ಬೇಡಿಕೆಯನ್ನು ರುದ್ರಪ್ಪ ಬಳಿ ಇಟ್ಟಿದ್ದಾರೆ ಎನ್ನಲಾಗಿದ್ದು, ತಪ್ಪಿದಲ್ಲಿ ಬೇರೆಕಡೆಗೆ ಕಳುಹಿಸುವುದಾಗಿ ಮಾನಸಿಕ ಹಿಂಸೆ ಹಾಗೂ ಕಿರುಕುಳವನ್ನು ಸಿಬ್ಬಂದಿಗೆ  ನೀಡುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿತ್ತು.

    ಅದರಂತೆ ಇಂದು ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಸಿಬ್ಬಂದಿ ಸುನಿಲ್ ಎಂಬವರಿಂದ ಒಂದು ಸಾವಿರ ರೂ.ಗಳನ್ನು ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಎಸಿಬಿ ಇನ್ಸ್ ಪೆಕ್ಟರ್ ಶ್ರೀಧರ್ ನೇತೃತ್ವದ ತಂಡ ದಾಳಿ ನಡೆಸಿ ರುದ್ರಪ್ಪ ಅವರನ್ನು ವಶಕ್ಕೆ ಪಡೆದಿದ್ದಾರೆ.

  • ಮೊಬೈಲ್ ಕಳ್ಳತನ ಪ್ರಕರಣ- 1 ಲಕ್ಷ ಲಂಚ ಕೇಳಿದ್ದ ಲೇಡಿ ಎಸ್‍ಐ ಎಸಿಬಿ ಬಲೆಗೆ

    ಮೊಬೈಲ್ ಕಳ್ಳತನ ಪ್ರಕರಣ- 1 ಲಕ್ಷ ಲಂಚ ಕೇಳಿದ್ದ ಲೇಡಿ ಎಸ್‍ಐ ಎಸಿಬಿ ಬಲೆಗೆ

    ಬೆಂಗಳೂರು: 1 ಲಕ್ಷ ರೂ. ಲಂಚ ಕೇಳಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಬ್ ಇನ್‍ಸ್ಪೆಕ್ಟರ್ ಸೌಮ್ಯ ಹಾಗೂ ಹೆಡ್ ಕಾನ್‍ಸ್ಟೇಬಲ್ ಜೆಪಿ ರೆಡ್ಡಿಯವರನ್ನು ಟ್ರ್ಯಾಪ್ ಮಾಡಿದ್ದಾರೆ.

    ಮೊಬೈಲ್ ಕಳ್ಳತನ ಪ್ರಕರಣದಲ್ಲಿ ಸಬ್ ಇನ್ಸ್‍ಪೆಕ್ಟರ್ ಸೌಮ್ಯ 1 ಲಕ್ಷ ರೂ. ಲಂಚ ಕೇಳಿದ್ದರು. ಲಂಚ ಪಡೆಯುವ ವೇಳೆ ಪಿಎಸ್‍ಐ ಮತ್ತು ಹೆಡ್ ಕಾನ್‍ಸ್ಟೇಬಲ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇಬ್ಬರನ್ನೂ ಬಂಧಿಸಿ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

    ಎಸಿಬಿ ಅಧಿಕಾರಿಗಳನ್ನು ಕಂಡು ತಪ್ಪಿಸಿಕೊಳ್ಳಲು ಯತ್ನಿಸಿ ಪೇದೆ ಕುಮಾರ್ ಸ್ಟೇಷನ್ ಮೇಲಿಂದ ಕೆಳಗೆ ಜಿಗಿದಿದ್ದು, ಘಟನೆಯಲ್ಲಿ ಕಾನ್‍ಸ್ಟೆಬಲ್ ಕುಮಾರ್ ಕಾಲು ಮುರಿದಿದೆ. ಒಂದು ಲಕ್ಷ ರೂ. ಲಂಚ ಪಡೆದಿದ್ದ ಹಣವನ್ನು ಪಿಎಸ್‍ಐ ಸೌಮ್ಯ ಕುಮಾರ್ ಕೈಗೆ ಕೊಟ್ಟಿದ್ದರು. ಹೀಗಾಗಿ ಕುಮಾರ್ ಎಸಿಬಿ ಅಧಿಕಾರಿಗಳನ್ನು ಕಂಡು ತಪ್ಪಿಸಿಕೊಳ್ಳುವ ಭರದಲ್ಲಿ ಮೇಲಿಂದ ಜಿಗಿದು ಕಾಲು ಮುರಿದುಕೊಂಡಿದ್ದಾರೆ.

  • ಕೈಯಲ್ಲಿ ಮುಟ್ಟಲ್ಲ, ನೀವೇ ಜೇಬಿಗಿಡಿ – ಲಂಚ ಪಡೆದ ಲೇಡಿ ಕಾನ್ಸ್ ಟೇಬಲ್ ಸಸ್ಪೆಂಡ್

    ಕೈಯಲ್ಲಿ ಮುಟ್ಟಲ್ಲ, ನೀವೇ ಜೇಬಿಗಿಡಿ – ಲಂಚ ಪಡೆದ ಲೇಡಿ ಕಾನ್ಸ್ ಟೇಬಲ್ ಸಸ್ಪೆಂಡ್

    – ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್

    ಮುಂಬೈ: ದ್ವಿಚಕ್ರ ವಾಹನ ಸವಾರರಿಂದ ಲಂಚ ಪಡೆದಿದ್ದ ಮಹಿಳಾ ಪೊಲೀಸ್ ಪೇದೆಯನ್ನ ಅಮಾನುತು ಮಾಡಿ ಪಿಂಪರಿ ಚಿಂಚವಾಡಾದ ಟಾಫಿಕ್ ವಿಭಾಗದ ಎಸಿಪಿ ಶ್ರೀಕಾಂತ್ ದಿಸ್ಲೇ ಆದೇಶಿಸಿದ್ದಾರೆ.

    ಪಿಂಪರಿ ನಗರದ ಶಗುಣ್ ಚೌಕ್ ಬಳಿ ಮಹಿಳಾ ಪೇದೆ ಸ್ವಾತಿ ಸೋನರ್ ಡ್ಯೂಟಿಗೆ ಹಾಕಲಾಗಿತ್ತು. ಕೊರೊನಾ ಭಯದಿಂದ ನೋಟುಗಳನ್ನ ಕೈಯಲ್ಲಿ ಮುಟ್ಟದ ಸ್ವಾತಿ ಸೋನರ್, ಯುವತಿಗೆ ಜೇಬಿಗೆ ಇಡುವಂತೆ ಹೇಳಿದ್ದಾರೆ. ಈ ಎಲ್ಲ ದೃಶ್ಯಗಳು ಸಾರ್ವಜನಿಕರ ಮೊಬೈಲನಲ್ಲಿ ಸರೆಯಾಗಿದ್ದವು. ವೀಡಿಯೋ ವೈರಲ್ ಬಳಿಕ ಎಚ್ಚೆತ್ತ ಅಧಿಕಾರಿಗಳು ಲಂಚ ಪಡೆದ ಪೇದೆಯನ್ನ ಅಮಾನತುಗೊಳಿಸಿದ್ದಾರೆ.

    ಹೆಲ್ಮೆಟ್ ಧರಿಸದೇ ಸ್ಕೂಟಿಯಲ್ಲಿ ಬಂದ ತಾಯಿ-ಮಗಳನ್ನ ಸ್ವಾತಿ ತಡೆದಿದ್ದಾರೆ. ಇಬ್ಬರ ಮಧ್ಯೆ ಕೆಲ ಸಮಯ ಮಾತುಕತೆ ನಡೆದಿದೆ. ಕೊನೆಗೆ ಯುವತಿ ಸ್ವಾತಿ ಪ್ಯಾಂಟ್ ಜೇಬಿಗೆ ಹಣ ಇಟ್ಟಿದ್ದಾರೆ. ವೀಡಿಯೋ ಆಧರಿಸಿ ಸ್ವಾತಿಯನ್ನ ಅಮಾನತು ಮಾಡಲಾಗಿದ್ದು, ಘಟನೆ ಸಂಬಂಧ ತನಿಖೆ ನಡೆಸಲು ತಂಡ ರಚಿಸಲಾಗಿದೆ ಎಂದು ಎಸಿಪಿ ಶ್ರೀಕಾಂತ್ ದಿಸ್ಲೇ ಹೇಳಿದ್ದಾರೆ.

  • ನೀರಿನ ವಿಚಾರಕ್ಕೂ ಲಂಚ – ಅಧಿಕಾರಿಗಳು ಎಸಿಬಿ ಬಲೆಗೆ

    ನೀರಿನ ವಿಚಾರಕ್ಕೂ ಲಂಚ – ಅಧಿಕಾರಿಗಳು ಎಸಿಬಿ ಬಲೆಗೆ

    ಬೆಂಗಳೂರು: ನೀರಿನ ವಿಚಾರಕ್ಕೂ ಲಂಚ ಕೇಳಿ ಅಧಿಕಾರಿಗಳಿಬ್ಬರು ಎಸಿಬಿ ಬಲೆಗೆ ಬಿದ್ದಿರುವ ಘಟನೆ ಸಿಲಿಕಾನ್ ಸಿಟಿಯ ಪೀಣ್ಯದಲ್ಲಿ ನಡೆದಿದೆ.

    ಎಸಿಬಿ ಬಲೆಗೆ ಬಿದ್ದ ಅಧಿಕಾರಿಯನ್ನು ಮಾಲಿನ್ಯ ನಿಯಂತ್ರಣ ಮಂಡಳಿಯ ಇಓ ಶಿವಕುಮಾರ್ ಮತ್ತು ಸಿಬ್ಬಂದಿ ಸೋಮಶೇಖರ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಬೆಂಗಳೂರಿನ ಪೀಣ್ಯದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

    ಲೋಕೇಶ್ ಎಂಬುವರು ವಾಟರ್ ಪ್ಲ್ಯಾಂಟ್ ನಿರ್ಮಿಸುವ ಸಲುವಾಗಿ ಲೈಸೆನ್ಸ್ ಪಡೆಯಲು ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಗೆ ಬಂದಿದ್ದಾರೆ. ಈ ವೇಳೆ ಲೈಸೆನ್ಸ್ ನೀಡಲು ಶಿವಕುಮಾರ್ ಮತ್ತು ಸೋಮಶೇಖರ್ ಲೋಕೇಶ್ ಅವರ ಬಳಿ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಇಂದು ಕಚೇರಿಯಲ್ಲೇ ಲೋಕೇಶ್ ಅವರಿಂದ 25 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.

  • ಸ್ಥಳೀಯರಿಂದ 3.40 ಲಕ್ಷ ಲಂಚ- ಪಿಎಸ್‍ಐ ಸೇರಿ 8 ಜನ ಪೊಲೀಸರು ಅಮಾನತು

    ಸ್ಥಳೀಯರಿಂದ 3.40 ಲಕ್ಷ ಲಂಚ- ಪಿಎಸ್‍ಐ ಸೇರಿ 8 ಜನ ಪೊಲೀಸರು ಅಮಾನತು

    – ಗಾಂಜಾ ಕೇಸ್‍ನಲ್ಲಿ ಫಿಟ್ ಮಾಡೋದಾಗಿ ಸ್ಥಳೀಯರಿಗೆ ಬೆದರಿಕೆ

    ಚಿಕ್ಕಮಗಳೂರು: ಕರ್ತವ್ಯ ಲೋಪ ಆರೋಪದಡಿ ಜಿಲ್ಲೆಯಲ್ಲಿ ಓರ್ವ ಪೊಲೀಸ್ ಸಬ್‍ ಇನ್‍ಸ್ಪೆಕ್ಟರ್ ಹಾಗೂ ಏಳು ಜನ ಪೇದೆಗಳನ್ನು ಅಮಾನತು ಮಾಡಲಾಗಿದೆ.

    ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, ನಗರದ ಬಸವನಹಳ್ಳಿ ಪೊಲೀಸ್ ಠಾಣೆಯ ಪಿಎಸ್‍ಐ ಸುಖೇತ್ ಸೇರಿದಂತೆ ಯುವರಾಜ್, ಲಕ್ಷ್ಮಣ್, ಪ್ರದೀಪ್ ಎಂಬ ಮೂವರು ಪೇದೆಗಳನ್ನ ಅಮಾನತು ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲೂ ಕರ್ತವ್ಯ ಲೋಪ ಆರೋದಡಿಯೇ ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ಪೇದೆಗಳಾದ ಶಶಿಧರ್, ಸ್ವಾಮಿ, ಅರುಣ್ ಕುಮಾರ್, ನವೀನ್ ಅವರನ್ನು ಅಮಾನತು ಮಾಡಲಾಗಿದೆ.

    ಅಮಾನತುಗೊಂಡ ಬಸವನಹಳ್ಳಿ ಪೊಲೀಸರು ಗಾಂಜಾ ಕೇಸ್‍ನಲ್ಲಿ ಫಿಕ್ಸ್ ಮಾಡುವುದಾಗಿ ಬೆದರಿಸಿ ಸ್ಥಳೀಯರಿಬ್ಬರಿಂದ 3.40 ಲಕ್ಷ ರೂ. ಪಡೆದಿದ್ದರು ಎಂದು ಹೇಳಲಾಗಿದೆ. ಇನ್ನು ಆಲ್ದೂರು ಠಾಣೆಯ ಪೊಲೀಸರು ಸಹ ಹೋಮ್ ಸ್ಟೇ ಮಾಲೀಕನಿಗೆ ಬೆದರಿಸಿ ಲಂಚ ಪಡೆದಿದ್ದರು ಎನ್ನಲಾಗಿದೆ. ಈ ಎರಡೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಓರ್ವ ಪಿಎಸ್‍ಐ ಹಾಗೂ ಏಳು ಸಿಬ್ಬಂದಿಯನ್ನು ಅಮಾನತು ಮಾಡಿದ್ದು, ಅಮಾನತಾದ ಎಲ್ಲರೂ ಇಲಾಖಾ ತನಿಖೆ ಎದುರಿಸಬೇಕಿದೆ.