Tag: ಲಂಚ

  • ನಿವೃತ್ತಿ ದಿನದಂದೇ ಲಂಚಕ್ಕೆ ಕೈ ಚಾಚಿ ಸರ್ಕಾರಿ ನೌಕರ ಅರೆಸ್ಟ್!

    ನಿವೃತ್ತಿ ದಿನದಂದೇ ಲಂಚಕ್ಕೆ ಕೈ ಚಾಚಿ ಸರ್ಕಾರಿ ನೌಕರ ಅರೆಸ್ಟ್!

    ಮುಂಬೈ: ನಿವೃತ್ತಿ ದಿನದಂದೇ ಲಂಚ ತೆಗೆದುಕೊಳ್ಳುತ್ತಿದ್ದ ಸರ್ಕಾರಿ ಲೆಕ್ಕ ಪರಿಶೋಧಕನನ್ನು ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ರೆಡ್‍ಹ್ಯಾಂಡ್ ಆಗಿ ಹಿಡಿದು ಬಂಧಿಸಿರುವ ಘಟನೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆದಿದೆ.

    58 ವರ್ಷದ ಸದಾಶಿವ ದ್ಯಾಂದೋಹಿಯವರು ಬಂಧಿತ ನೌಕರ. ಕೊಲ್ಲಾಪುರದ ಉಪ ಅರಣ್ಯ ಸಂರಕ್ಷಣಾ ಇಲಾಖೆಯಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದ ಈತ ಪ್ರಮಾಣಪತ್ರ ನೀಡುವ ಕುರಿತು ವ್ಯಕ್ತಿಯೊಬ್ಬರಿಗೆ 2 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ. ಈತನ ಬೇಡಿಕೆಯ ವಿರುದ್ಧ ವ್ಯಕ್ತಿಯು ಕೊಲ್ಲಾಪುರ ವಿಭಾಗದ ಭ್ರಷ್ಟಾಚಾರ ನಿಗ್ರಹಕ್ಕೆ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ಅಧಿಕಾರಿಗಳು ಬಲೆ ಬೀಸಿ 1500 ರೂಪಾಯಿ ಲಂಚ ಪಡೆಯುತ್ತಿರುವಾಗ ಬಂಧಿಸಿದ್ದಾರೆ.

    ಶುಕ್ರವಾರ ಸದಾಶಿವ್ ವೃತ್ತಿಯ ಕೊನೆಯ ದಿನ ಆಗಿತ್ತು. ನಿವೃತ್ತಿಯ ಕೇವಲ 2 ಗಂಟೆ ಮುಂಚೆ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ಪಡೆಯ ಅಧಿಕಾರಿಗಳ ಬಲೆಗೆ ಬಿದ್ದು ಬಂಧಿತನಾಗಿದ್ದಾನೆ.

  • ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ಲಂಚ ನೀಡದ ಮಟ್ಕಾ ದಂಧೆ ಆರೋಪಿಗೆ ಪೊಲೀಸರಿಂದ ಹಿಗ್ಗಾಮುಗ್ಗಾ ಥಳಿತ!

    ತುಮಕೂರು: ಲಂಚ ನೀಡಲಿಲ್ಲವೆಂದು ಮಟ್ಕಾ ದಂಧೆ ಆರೋಪಿಗೆ ಮೇಲೆ ಆಂಧ್ರ ಪ್ರದೇಶದ ಕಂಬದೂರು ಪೊಲೀಸರು ಮನಬಂದಂತೆ ಥಳಿಸಿದ ಘಟನೆ ಶನಿವಾರ ಬೆಳಕಿಗೆ ಬಂದಿದೆ.

    ಪಾವಗಡ ತಾಲೂಕಿನ ಡೊಡ್ಡಹಳ್ಳಿ ಗ್ರಾಮದ ನಿವಾಸಿ ವೀರೇಶ್ ಹಲ್ಲೆಗೆ ಒಳಗಾದ ಆರೋಪಿ. ಮಟ್ಕಾ ಆರೋಪದ ಮೇಲೆ ವೀರೇಶನನ್ನು ಆತನ ಮನೆಯಲ್ಲಿ ಮೇ 29 (ಮಂಗಳವಾರ) ಮಧ್ಯರಾತ್ರಿ ಆಂಧ್ರ ಪ್ರದೇಶದ ಕಂಬದೂರು ಪೆÇಲೀಸರು ಬಂದಿಸಿದ್ದರು. ಕೇಸ್ ವಾಪಾಸ್ ಪಡೆಯುತ್ತೇವೆ 10 ಲಕ್ಷ ರೂ. ಹಣ ನೀಡುವಂತೆ ಒತ್ತಾಯಿಸಿದ್ದಾರಂತೆ. ಇದಕ್ಕೆ ವೀರೇಶ್ ಒಪ್ಪದಿದ್ದಾಗ ಎರಡು ದಿನಗಳ ಕಾಲ ಅಜ್ಞಾತ ಸ್ಥಳದಲ್ಲಿರಿಸಿ, ಕಟ್ಟಿಹಾಕಿ ಮನಬಂದಂತೆ ಥಳಿಸಿದ್ದಾರೆ ಎಂದು ವೀರೇಶ್ ಹೇಳ್ತಾರೆ.

    ಗುರುವಾರ ಆಂಧ್ರ ಪ್ರದೇಶ ಪೊಲೀಸರಿಗೆ 2.5 ಲಕ್ಷ ರೂ. ನೀಡಿದ್ದರಿಂದ ಅಂದು ರಾತ್ರಿ ವೀರೇಶನನ್ನು ಬಿಟ್ಟು ಕಳುಹಿಸಿದ್ದಾರೆ. ಪೊಲೀಸರ ದೌರ್ಜನ್ಯಕ್ಕೆ ಒಳಗಾದ ವೀರೇಶನ ಸೊಂಟ, ಬೆನ್ನು ಮೂಳೆಗೆ ಬಲವಾದ ಪೆಟ್ಟು ಬಿದ್ದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ವೀರೇಶನ ಸಂಬಂಧಿಕರು ಆಂಧ್ರಪ್ರದೇಶ ಪೊಲೀಸರ ವರ್ತನೆ ಕಂಡಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಕೊಡಲು ಮುಂದಾಗಿದ್ದಾರೆ.

  • ಗಣಿನಾಡು ಆಸ್ಪತ್ರೆಯಲ್ಲಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ 10 ಸಾವಿರ ರೂ. ಲಂಚ ಪಡೆದ ವೈದ್ಯ!

    ಗಣಿನಾಡು ಆಸ್ಪತ್ರೆಯಲ್ಲಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ 10 ಸಾವಿರ ರೂ. ಲಂಚ ಪಡೆದ ವೈದ್ಯ!

    ಬಳ್ಳಾರಿ: ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಬಂದ ರೋಗಿಯ ಬಳಿ ಲಂಚ ಪಡೆದು ವೈದ್ಯರು ಸಿಕ್ಕಿಬಿದ್ದಿದ್ದಾರೆ. ಈ ದೃಶ್ಯವನ್ನು ಆಸ್ಪತ್ರೆಯಲ್ಲಿದ್ದವರು ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಈ ಘಟನೆ ಜಿಲ್ಲೆಯ ಹೂವಿನಹಡಗಲಿಯ ಆಸ್ಪತ್ರೆಯಲ್ಲಿ ನಡೆದಿದೆ. ದಾಸರಹಳ್ಳಿ ತಾಂಡದ ಮಹಿಳೆ ಮೋತಿಬಾಯಿ ಅವರು ಗರ್ಭಕೋಶ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ್ ರೋಗಿಯ ಸಂಬಂಧಿಕರ ಬಳಿ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.

    ರೋಗಿಯ ಸಂಬಂಧಿ 8 ಸಾವಿರ ಕೊಡುವುದಾಗಿ ಹೇಳಿದರೂ ಒಪ್ಪದ ಶಿವಕುಮಾರ್ 10 ಸಾವಿರ ಕೊಡಲೇಬೇಕು ಎಂದು ಹೇಳಿದ್ದಾನೆ. ಕೊನೆಗೂ ಸಹಾಯಕ ಹಣವನ್ನು ಪಡೆಯುತ್ತಾನೆ. ಇದನ್ನು ಆಸ್ಪತ್ರೆಯಲ್ಲಿದ್ದವರು ರೆಕಾರ್ಡ್ ಮಾಡಿದ್ದಾರೆ. ಅಲ್ಲದೇ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.

  • ಐಸಿಯುವಿನಲ್ಲಿರುವ ಮಗುವಿನ ಆರೈಕೆ ಮಾಡಲು 500ರೂ. ಲಂಚ ಕೊಡಬೇಕೆಂದ ನರ್ಸ್!

    ಐಸಿಯುವಿನಲ್ಲಿರುವ ಮಗುವಿನ ಆರೈಕೆ ಮಾಡಲು 500ರೂ. ಲಂಚ ಕೊಡಬೇಕೆಂದ ನರ್ಸ್!

    ತುಮಕೂರು: ನಗರದ ಜಿಲ್ಲಾಸ್ಪತ್ರೆಯ ನರ್ಸ್ ಗಳು ಮಾನವೀಯತೆಯನ್ನೇ ಮರೆತಿದ್ದಾರೆ. ಐಸಿಯುನಲ್ಲಿದ್ದ ಮಗುವನ್ನು ಸರಿಯಾಗಿ ಆರೈಕೆ ಮಾಡಲು ಲಂಚಕ್ಕಾಗಿ ಕೈಯೊಡ್ಡಿರುವ ಆರೋಪವೊಂದು ಕೇಳಿಬಂದಿದೆ.

    ಈ ಸಂಬಂಧ ಶನಿವಾರ ವಸಂತ ಹಾಗೂ ಜ್ಯೋತಿ ಎಂಬ ಇಬ್ಬರು ನರ್ಸ್‍ಗಳು ರೆಡ್ ಹ್ಯಾಂಡ್ ಸಿಕ್ಕಿಬಿದ್ದಿದ್ದಾರೆ. ಇವರ ಕೈ ಬಿಸಿಯಾಗದಿದ್ದರೆ ಆಗತಾನೇ ಹುಟ್ಟಿದ ನವಜಾತ ಶಿಶುಗಳು ಬದುಕುಳಿಯುವುದು ಕಷ್ಟ ಎನ್ನುವ ಮಟ್ಟಿಗೆ ಲಂಚಾವತಾರ ತಾಂಡವವಾಡುತ್ತಿದೆ. ಈ ಮೂಲಕ ನರ್ಸ್ ಗಳು ನರರಾಕ್ಷಸಿಯರಾಗಿದ್ದಾರೆ.

    ಶ್ವಾಸಕೋಶದ ತೊಂದರೆಯಿಂದ ನರಳುತಿದ್ದ ಶಿಶುವನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿತ್ತು. ಮಗುವಿನ ಕೇರ್ ತಗೋಬೇಕಾದರೆ 500 ರೂ. ಕೊಡಬೇಕು ಎಂದು ನರ್ಸ ವಸಂತಾ ಮಗುವಿನ ಪೋಷಕರ ಬಳಿ ಬೇಡಿಕೆ ಇಟ್ಟಿದ್ದಾಳೆ ಎನ್ನಲಾಗಿದೆ.

    ಆದ್ರೆ ಮಗುವಿನ ಪೋಷಕರು ಬಡವರಾಗಿದ್ದು, ಹೀಗಾಗಿ ಮಗುವಿನ ತಂದೆ 100 ರೂ. ಕೊಡಲು ಹೋದಾಗ ತಿರಸ್ಕರಿಸಿದ್ದಾರೆ. ಪುಡಿಗಾಸು ನಮಗೆ ಬೇಡಾ…ನಾವೂ ದುಡ್ಡು ನೋಡಿದವರೇ ಎಂದು ಧಮ್ಕಿ ಹಾಕಿದ್ದಾಳೆ. ಬಳಿಕ 200 ರೂ. ಕೊಟ್ಟಾಗ ತೆಗೆದುಕೊಂಡು ಸಹನರ್ಸ್ ಜ್ಯೋತಿಗೂ ಹಂಚಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

  • ಅಕ್ರಮ ಮರಳುಗಾರಿಕೆ ನಡೆಸಲು ಸ್ಟೇಷನ್‍ ನಲ್ಲೇ ಲಂಚ – ತೊಡೆತಟ್ಟಿ ನಡುರಸ್ತೆಯಲ್ಲೇ ಪಿಎಸ್‍ಐ ಗಲಾಟೆ

    ಅಕ್ರಮ ಮರಳುಗಾರಿಕೆ ನಡೆಸಲು ಸ್ಟೇಷನ್‍ ನಲ್ಲೇ ಲಂಚ – ತೊಡೆತಟ್ಟಿ ನಡುರಸ್ತೆಯಲ್ಲೇ ಪಿಎಸ್‍ಐ ಗಲಾಟೆ

    ಗದಗ: ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಪಿ.ಎಸ್.ಐ ಶಿವಾನಂದ ಎಸ್. ಲಮಾಣಿ ಇವರು ಅಕ್ರಮ ಮರಳು ದಂಧೆಕೊರರಿಂದ ಲಂಚ ಪಡೆಯುವ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಗದಗ ಎಸ್.ಪಿ ಸಂತೋಷ ಬಾಬು ಅವರು ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಿದ್ರೆ, ಇತ್ತ ಗಜೇಂದ್ರಗಡ ಪಿ.ಎಸ್.ಐ ಶಿವಾನಂದ ಲಂಚಪಡೆದು ಅಕ್ರಮಕ್ಕೆ ದಂಧೆಗೆ ದಾರಿ ಮಾಡಿಕೊಡುತ್ತಿದ್ದಾರೆ.

    ಟ್ರಾಕ್ಟರ್ ಹಾಗೂ ಟಿಪ್ಪರ್ ನಿಂದ ಅಕ್ರಮವಾಗಿ ಕಲ್ಲು, ಮಣ್ಣು, ಮರಳು ಇತರೆ ಯಾವುದೆ ವಸ್ತುಗಳನ್ನ ಸಾಗಿಸುವ ದಂಧೆಕೊರರು ಈ ಪಿಎಸ್‍ಐ ಅವರನ್ನು ಸಂಪರ್ಕಿಸಿ ತಿಂಗಳ ಮಾಮೂಲಿ ನೀಡಿ ಕೈ ಬೆಚ್ಚಗೆ ಮಾಡಬೇಕು. ಇಲ್ಲವಾದ್ರೆ ಅವರನ್ನ ಅಂದರ್ ಮಾಡಿ ಇಲ್ಲ ಸಲ್ಲದ ಕೇಸ್‍ಗಳನ್ನ ಜಡಿದುಬಿಡ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.

    ಗಜೇಂದ್ರಗಡ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮ ದಂಧೆಯಿಂದ ಪ್ರತಿ ತಿಂಗಳು ಸುಮಾರು 2 ಲಕ್ಷ ರೂಪಾಯಿ ಲಂಚ ಪಡೆಯುತ್ತಾರೆ ಎಂಬ ಆರೋಪನೂ ಇದೆ. ಲಂಚ ಕೊಡದಿದ್ರೆ ಅಟ್ಟಾಡಿಸಿಕೊಂಡು ಹೊಡೆದು, ಅವರ ಮೇಲೆ ಕೇಸ್ ದಾಖಲಿಸಿ ಮೂಲೆ ಗುಂಪು ಮಾಡ್ತಾರೆ.

    ತೊಡೆತಟ್ಟಿ ಸೆಡ್ಡು ಹೊಡೆದು ಬಾಯಿಗೆ ಬಂದಂತೆ ಅಶ್ಲೀಲವಾಗಿ ಬೈದು ಅವರ ಮೇಲೆ ದರ್ಪ ತೋರಿಸ್ತಾರೆ. ಈ ಎಲ್ಲಾ ದೃಶ್ಯಗಳು ಪಬ್ಲಿಕ್ ಟಿವಿಗೆ ಇದೀಗ ಲಭ್ಯವಾಗಿದೆ.

  • ರೈತರ ಬಳಿ ಸುಲಿಗೆಗೆ ಇಳಿದ ವೆಟರ್ನರಿ ಸಹಾಯಕ ವೈದ್ಯ- ಲಂಚ ಕೊಡದಿದ್ರೆ ಇಲ್ಲ ಚಿಕಿತ್ಸೆ

    ರೈತರ ಬಳಿ ಸುಲಿಗೆಗೆ ಇಳಿದ ವೆಟರ್ನರಿ ಸಹಾಯಕ ವೈದ್ಯ- ಲಂಚ ಕೊಡದಿದ್ರೆ ಇಲ್ಲ ಚಿಕಿತ್ಸೆ

    ಕೊಪ್ಪಳ: ಸರ್ಕಾರಿ ಕೆಲಸ ದೇವರ ಕೆಲಸ ಎಂದು ಹೇಳುತ್ತಾರೆ. ಆದರೆ ಕೆಲವು ಅಧಿಕಾರಿಗಳು ಸರ್ಕಾರಿ ಕೆಲಸ ಎಂದರೆ ಸುಲಿಗೆ ಮಾಡುವುದು ಎಂದು ತಿಳಿದಿದ್ದಾರೆ. ರೈತರ ಹಸುಗಳಿಗೆ ಚಿಕಿತ್ಸೆ ನೀಡಲು ಸರ್ಕಾರದಿಂದ ನೇಮಕವಾದವ ವೈದ್ಯರ ಸಹಾಯಕ ವಿರುದ್ಧ ಹಣ ಸುಲಿಗೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

    ಕೊಪ್ಪಳ ತಾಲೂಕಿನ ಇಂದರಗಿ ಗ್ರಾಮದ ಪಶುಚಿಕಿತ್ಸಾಲಯದ ವೈದ್ಯಕೀಯ ಸಹಾಯಕ ಲೋಕೇಶ್ ಎಂಬವರ ವಿರುದ್ಧ ಲಂಚದ ಆರೋಪ ಕೇಳಿ ಬಂದಿದೆ. ತಾಲೂಕಿನ ಟಣಕನಕಲ್ ಗ್ರಾಮದ ರೈತ ಯಮನೂರಪ್ಪ ನಾಯಕ್ 22 ಹಸುಗಳ ಡೈರಿ ಹೊಂದಿದ್ದಾರೆ. ನನ್ನ ಹಸುಗಳಿಗೆ ಚಿಕಿತ್ಸೆ ನೀಡಬೇಕಾದರೆ ಪತ್ರಿ ಹಸುವಿಗೆ 500 ರೂಪಾಯಿಯಂತೆ ಲಂಚ ಕೇಳಿದ್ದಾನೆ. 8 ಸಾವಿರ ರೂ. ಕೊಡೋದಾಗಿ ಹೇಳಿದ್ರೂ ಒಪ್ಪದ ಲೋಕೇಶ್ 10 ಸಾವಿರ ನೀಡುವಂತೆ ಕೇಳಿದ್ದಾನೆ ಎಂದು ರೈತ ಯಮನೂರಪ್ಪ ಹೇಳುತ್ತಾರೆ.

    ಈ ವಿಚಾರವನ್ನು ಮೇಲಾಧಿಕಾರಿಗಳಿಗೆ ಹೇಳಬಾರದು ಅಂತಲೂ ಲೋಕೇಶ್ ಹೇಳಿದ್ದು, ಅಲ್ಲದೆ ಕಮಿಷನ್ ಆಸೆಗೆ ಬಿದ್ದು ವಿನಾಕಾರಣ 10 ಸಾವಿರ ಮೌಲ್ಯದ ಔಷಧಿ ತರಿಸಲಾಗಿದೆ. ಈ ವಿಚಾರ ಪಶುಸಂಗೋಪನಾ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಲೋಕೇಶ್ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶಿವರಾಜ್ ಶೆಟ್ಟರ್ ತಿಳಿಸಿದ್ದಾರೆ.

  • ಲಂಚ ಕೇಳಿದ ಪೊಲೀಸ್ ಪೇದೆಗೆ ರಸ್ತೆಯಲ್ಲಿಯೇ ಸಾರ್ವಜನಿಕರಿಂದ ಥಳಿತ

    ಲಂಚ ಕೇಳಿದ ಪೊಲೀಸ್ ಪೇದೆಗೆ ರಸ್ತೆಯಲ್ಲಿಯೇ ಸಾರ್ವಜನಿಕರಿಂದ ಥಳಿತ

    ವಿಜಯಪುರ: ಲಂಚ ಕೇಳಿದ ಪೊಲೀಸ್ ಪೇದೆಗೆ ಸಾರ್ವಜನಿಕರು ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಜಿಲ್ಲೆಯ ಇಟಗಿ ಪೆಟ್ರೋಲ್ ಬಂಕ್ ಬಳಿ ನಡೆದಿದೆ.

    ಬಾಗಲಕೋಟೆಯ ಜಾಲಗೇರಿ ತಾಂಡ 1ರ ಕೆಲವರು ಬಾಗಲಕೋಟೆಯ ಬಸವೇಶ್ವರ ದೇವಸ್ಥಾನಕ್ಕೆ ಕ್ರೂಸರ್ ವಾಹನದಲ್ಲಿ ತೆರಳಿದ್ದರು. ಇಂದು ಬೆಳಿಗ್ಗೆ ದೇವರ ದರ್ಶನ ಮುಗಿಸಿಕೊಂಡು ಮತ್ತೆ ಹಿಂದಿರುಗಿ ಜಾಲಗೇರಿಗೆ ಬರುತ್ತಿದ್ದರು. ಈ ಸಂದರ್ಭದಲ್ಲಿ ವಿಜಯಪುರದ ಇಟಗಿ ಪೆಟ್ರೋಲ್ ಬಂಕ್ ಬಳಿ ಗಾಂಧಿ ಚೌಕ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಬಸವಾರಾಜ ಪುಜಾರಿ ಕ್ರೂಸರ್ ವಾಹನ ತಡೆದು 200 ರೂ. ಲಂಚ ಕೇಳಿದ್ದಾನೆ. ಆಗ ವಾಹನದಲ್ಲಿದವರು ಲಂಚ ನೀಡಲು ನಿರಾಕರಿಸಿ ಮುಂದೆ ಸಾಗಿದ್ದಾರೆ.

    ಪೊಲೀಸ್ ಪೇದೆ ಬಸವರಾಜ ಇದರಿಂದ ಕೋಪಗೊಂಡು ತನ್ನ ಬೈಕ್ ತಗೆದುಕೊಂಡು ಹೋಗಿ ಮತ್ತೆ ವಾಹನವನ್ನು ಅಡ್ಡಗಟ್ಟಿದ್ದಾನೆ. ಆಗ ವಾಹನದಲ್ಲಿದ್ದ ಬಾಲಕಿ ಅಶ್ವಿನಿಯ ತಲೆಗೆ ಪೆಟ್ಟು ಬಿದ್ದಿದೆ. ಇದರಿಂದ ಆಕ್ರೋಶಗೊಂಡ ಅಶ್ವಿನಿ ಸಂಬಂಧಿಕರು ಮತ್ತು ಸ್ಥಳದಲ್ಲಿದ್ದ ಸಾವರ್ಜನಿಕರು ಸೇರಿ ಪೇದೆಗೆ ರಸ್ತೆಯಲ್ಲಿಯೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಸದ್ಯಕ್ಕೆ ಗಾಯಗೊಂಡಿರುವ ಅಶ್ವಿನಿಯನ್ನು ಹಾಗೂ ಪೇದೆ ಬಸವರಾಜು ಅವನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಗಾಂಧಿ ಚೌಕ ಪೊಲೀಸ್‍ರ ಭೇಟಿ ನೀಡಿದ್ದಾರೆ.

  • ಅಪಘಾತದಲ್ಲಿ ಗಾಯಗೊಂಡವರಿಂದ್ಲೇ 2 ಸಾವಿರ ರೂ. ಲಂಚ ಪಡೆದ ಪೊಲೀಸರು!

    ಅಪಘಾತದಲ್ಲಿ ಗಾಯಗೊಂಡವರಿಂದ್ಲೇ 2 ಸಾವಿರ ರೂ. ಲಂಚ ಪಡೆದ ಪೊಲೀಸರು!

    ಚಾಮರಾಜನಗರ: ಅಪಘಾತವಾಗಿ ಗಾಯಗೊಂಡವರಿಂದಲೇ 2 ಸಾವಿರ ರೂ. ಪಡೆಯುವ ಮೂಲಕ ಪೊಲೀಸರು ಮಾನವೀಯತೆಯನ್ನು ಮರೆತ ಘಟನೆಯೊಂದು ನಡೆದಿದೆ.

    ಈ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೊಕಿನ ಲೊಕ್ಕನಹಳ್ಳಿ ಸಮೀಪ ನಡೆದಿದೆ. ಮರಳು ಸಾಗಿಸುತ್ತಿದ್ದ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸೇರಿದಂತೆ ಇಬ್ಬರು ಗಾಯಗೊಂಡಿದ್ದರು. ವಿಷಯ ತಿಳಿದ ಹನೂರು ಠಾಣೆಯ ಎಎಸ್‍ಐ ತೋಂಟದಾರ್ಯ ಹಾಗೂ ಮುಖ್ಯಪೇದೆ ಚಂದ್ರು ಗಾಯಾಳುಗಳನ್ನು ಸಕಾಲಕ್ಕೆ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುವ ಬದಲು ಅವರಿಂದಲೇ 2 ಸಾವಿರ ರೂ. ಲಂಚ ಪಡೆದು ಅಲ್ಲಿಂದ ಕಾಲ್ಕಿತ್ತಿದ್ದಾರೆ.

    ಈ ವಿಷಯ ತಿಳಿದ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಹನೂರು ಠಾಣೆ ಎದುರು ಜಮಾಯಿಸಿ ಪೊಲೀಸರ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಬಳಿಕ ಎಚ್ಚೆತ್ತ ಎಎಸ್‍ಐ ತೋಂಟದಾರ್ಯ ಹಾಗೂ ಮುಖ್ಯಪೇದೆ ಚಂದ್ರು ಎರಡು ಸಾವಿರ ಲಂಚದ ಹಣ ಹಿಂತಿರುಗಿಸಿ ಕ್ಷಮೆ ಕೇಳಿದ್ದಾರೆ.

  • 100 ರೂ. ಲಂಚ ಪಡೆದು ಏಸ್ ಗಾಡಿಯನ್ನು ಮುಂದಕ್ಕೆ ಬಿಟ್ಟ ರಾಮನಗರ ಪೇದೆ! ವಿಡಿಯೋ ನೋಡಿ

    100 ರೂ. ಲಂಚ ಪಡೆದು ಏಸ್ ಗಾಡಿಯನ್ನು ಮುಂದಕ್ಕೆ ಬಿಟ್ಟ ರಾಮನಗರ ಪೇದೆ! ವಿಡಿಯೋ ನೋಡಿ

    ರಾಮನಗರ: ಟ್ರಾಫಿಕ್ ಪೇದೆಯೊಬ್ಬರು ರಸ್ತೆಯಲ್ಲಿ ವಾಹನ ತಡೆಗಟ್ಟಿ ಲಂಚ ಸ್ವೀಕರಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ರಾಮನಗರ ಸಂಚಾರಿ ಠಾಣೆಯ ಪೇದೆ ಅರಸು ಎಂಬುವರು 100 ರೂಪಾಯಿಗೆ ದುಂಬಾಲು ಬಿದ್ದು ರಸ್ತೆಯಲ್ಲಿಯೇ ಹಣ ವಸೂಲಿ ಮಾಡಿರುವ ಘಟನೆ ನಗರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ.

    ಮೈಸೂರು ಕಡೆಯಿಂದ ಹೊರಟಿದ್ದ ಟಾಟಾ ಏಸ್ ವಾಹನವನ್ನು ತಡೆದಿರುವ ಪೇದೆ ಹೆಚ್ಚಿನ ಲೋಡ್ ಹಾಕಿರುವ ಬಗ್ಗೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ವಾಹನದಲ್ಲಿದ್ದ ವ್ಯಕ್ತಿ 50 ರೂಪಾಯಿ ಕೊಡಲು ಮುಂದಾದಾಗ ಬೈದು 100 ರೂಪಾಯಿ ಕೊಟ್ಟರೇ ಮಾತ್ರ ವಾಹನ ಬಿಡ್ತೇನೆ ಇಲ್ಲವೇ ಕೇಸ್ ಹಾಕ್ತೇನೆ ಎಂದು ದಬಾಯಿಸಿದ್ದಾರೆ.

    ಕೊನೆಗೆ ವಾಹನದಲ್ಲಿನ ವ್ಯಕ್ತಿ 100 ರೂ. ಕೊಟ್ಟಿದ್ದಾರೆ. ಲಂಚ ಸ್ವೀಕರಿಸಿದ ಕೂಡಲೇ ಪೇದೆ ಅರಸು ಅವರು ವಾಹನವನ್ನು ಮುಂದಕ್ಕೆ ಬಿಟ್ಟಿದ್ದಾರೆ.

    ನೂರು ರೂ. ನೀಡುತ್ತಿರುವ ದೃಶ್ಯದ ವಿಡಿಯೋವನ್ನು ಬೇರೊಂದು ವಾಹನದಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಣ ಮಾಡಿ ಫೇಸ್‍ಬುಕ್ ಗೆ ಅಪ್ಲೋಡ್ ಮಾಡಿದ್ದಾರೆ. ಈಗ ಪೇದೆ ಅರಸು ಲಂಚ ತೆಗೆದುಕೊಳ್ಳುವ ವಿಡಿಯೋ ವೈರಲ್ ಆಗಿದ.

    https://www.youtube.com/watch?v=BxM_XLSXLjQ

  • ವಿಡಿಯೋ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಲಂಚಾವತಾರ

    ವಿಡಿಯೋ: ಮೈಸೂರು ಮಹಾನಗರ ಪಾಲಿಕೆಯಲ್ಲಿ ಲಂಚಾವತಾರ

    ಮೈಸೂರು: ನಗರದ ಮಹಾ ನಗರಪಾಲಿಕೆಯಲ್ಲಿ ಲಂಚಾವತಾರದ ಸದ್ದು ಜೋರಾಗಿದೆ. ಪಾಲಿಕೆಯ ವ್ಯಾಪ್ತಿಯ ರೋಜ್ ಗಾರ್ ಯೋಜನೆಯಲ್ಲಿ ಸಾಲ ಕೊಡಿಸಲು ಪಾಲಿಕೆಯ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರನೊಬ್ಬ ಲಂಚ ಸ್ವೀಕರಿಸುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.

    ಪಾಲಿಕೆಯಲ್ಲಿ ಕ್ಲರ್ಕ್ ಎಂದು ಹೇಳಿಕೊಳ್ಳುವ ನೌಕರ ಶಿವಕುಮಾರ್ ಎಂಬಾತ ಲಂಚ ಸ್ವೀಕರಿಸಿದ್ದಾನೆ. ಸಾಲ ಕೊಡಿಸುವುದಾಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆಯುತ್ತಿದ್ದಾನೆ. ಮೂಲ ಹುದ್ದೆಯಲ್ಲಿ ಮಾಲಿ ಎಂದು ಉಲ್ಲೇಖವಾಗಿದ್ದರು ತಾನೂ ಕ್ಲರ್ಕ್ ಎಂದು ಹೇಳಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದಾನೆ.

    ತೇಜಸ್‍ಕುಮಾರ್ ಎಂಬವರಿಂದ 10 ಸಾವಿರ ಲಂಚ ಕೇಳಿ 3 ಸಾವಿರ ರೂ. ಹಣ ಸ್ವೀಕರಿಸಿದ್ದಾನೆ. 15 ದಿನದಲ್ಲಿ ಸಾಲ ಕೊಡಿಸುವ ಭರವಸೆ ನೀಡಿ ಹಣ ಪಡೆದಿದ್ದಾನೆ. ಪ್ರಶಾಂತ್ ಎಂಬ ಮಧ್ಯವರ್ತಿಯನ್ನ ಬಳಸಿಕೊಂಡು ಶಿವಕುಮಾರ್ ಲಂಚಾವತಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

    ಸಾಲ ಕೇಳಿ ಬರುವವರಿಗೆ ಪುಸಲಾಯಿಸಿ ಲಂಚ ಪಡೆಯುವ ಈತನ ಅಸಲಿ ಬಣ್ಣವನ್ನು ಸಾರ್ವಜನಿಕರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಹಣ ಕಳೆದುಕೊಂಡು ಸಾಲವು ದೊರೆಯದ ಸಾರ್ವಜನಿಕರು ಈತನ ವಿರುದ್ಧ ಧ್ವನಿ ಎತ್ತಿದ್ದಾರೆ.

    https://www.youtube.com/watch?v=WmC832D4pDw