Tag: ಲಂಚ

  • ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು, ಲಂಚ ಕೇಳ್ತಿರಲ್ಲ ನಾಚಿಕೆಯಾಗಲ್ವಾ?- ಅಧಿಕಾರಿಗಳಿಗೆ ರೈತರಿಂದ ತರಾಟೆ

    ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು, ಲಂಚ ಕೇಳ್ತಿರಲ್ಲ ನಾಚಿಕೆಯಾಗಲ್ವಾ?- ಅಧಿಕಾರಿಗಳಿಗೆ ರೈತರಿಂದ ತರಾಟೆ

    ಮಂಡ್ಯ: ಬರಗಾಲದಲ್ಲಿ ನಾವು ಬದುಕಿರೋದೆ ಹೆಚ್ಚು. ನಮ್ಮ ಹತ್ತಿರ ದುಡ್ಡು ಕೇಳ್ತಿರಲ್ಲ ನಾಚಿಕೆಯಾಗಲ್ವ ನಿಮ್ಗೆ. ಯಾರ ಮನೆ ಅಡವಿಟ್ಟು ದುಡ್ಡು ತಂದು ಕೊಡೋಣ. ಹೊಟ್ಟೆಗೆ ಅನ್ನ ತಿಂತೀರಾ? ಏನು ತಿಂತೀರಾ ಎಂದು ಅಧಿಕಾರಿಗಳನ್ನು ಜನ ಸಂಪರ್ಕ ಸಭೆಯಲ್ಲಿ ರೈತರರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದ ಕೆಆರ್ ಪೇಟೆಯಲ್ಲಿ ನಡೆದಿದೆ.

    ಕೆ.ಆರ್ ಪೇಟೆಯ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಚೇರಿ ಆವರಣದಲ್ಲಿ, ಜನಸಂಪರ್ಕ ಸಭೆ ಆಯೋಜಿಸಲಾಗಿತ್ತು. ಈ ವೇಳೆ ರೈತರ ರಕ್ತ ಕುಡಿಯಲು ಹುಟ್ಟಿದ್ದೀರ ನೀವು ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ ರೈತರು, ಲಂಚ ಕೊಟ್ಟವರಿಗೆ ವಿದ್ಯುತ್ ಟ್ರಾನ್ಸ್ ಫಾರಂ ಕೊಡುತ್ತಿದ್ದೀರಿ. 2013ರಲ್ಲಿ ಹಣ ಕಟ್ಟಿದವರಿಗೆ ಟಿಸಿ ಕೊಡದೇ, ಲಂಚ ಪಡೆದು ಬೇಕಾದವರಿಗೆ ಟಿಸಿ ಕೊಡುತ್ತಿದ್ದೀರಾ. ಟಿಸಿಗಳು ಕೆಟ್ಟು ಹೋದರೂ ಲಂಚ ಕೊಡದೆ ಅವುಗಳನ್ನು ಸರಿಪಡಿಸುವುದಿಲ್ಲ ಎಂದು ಆರೋಪಿಸಿದರು.

    ನಿಜವಾದ ರೈತರು ಬದುಕುವುದು ಹೇಗೆ. ನೀವೆಲ್ಲ ನಾಲ್ಕು ಅಕ್ಷರ ಕಲಿತಿದ್ದೀರ ಎಂದು ದೇವಲೋಕದಿಂದ ಇಳಿದು ಬಂದ ರೀತಿ ಆಡಬಾರದು. ನೀವು ಇಂಜಿನಿಯರಿಂಗ್ ಓದಿ ಬಂದಿಲ್ಲ. ನಿಮ್ಮ ಹೆಂಡತಿಯರಿಗೆ ಸೀರೆ ಕೊಡಿಸಲು ಹಣ ಹೇಗೆ ಹೊಂದಿಸುವುದು ಎಂಬುದನ್ನು ಓದಿ ಬಂದಿದ್ದೀರ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

    ರೈತರ ಆಕ್ರೋಶಕ್ಕೆ ಬೆದರಿದ ಮೇಲಾಧಿಕಾರಿಗಳು ಇನ್ನು ಮುಂದೆ ಈ ರೀತಿಯ ತಪ್ಪುಗಳು ಆಗುವುದಿಲ್ಲ. ಲಂಚಬಾಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸೋದಾಗಿ ಹೇಳಿ ರೈತರನ್ನ ಸಮಾಧಾನ ಪಡಿಸಿದರು.

  • ವೇದಿಕೆಯಲ್ಲಿಯೇ ಗ್ರಾ.ಪಂ. ಅಧ್ಯಕ್ಷನಿಂದ ಉಪ್ಪು ಮುಟ್ಟಿ ಪ್ರಮಾಣ

    ವೇದಿಕೆಯಲ್ಲಿಯೇ ಗ್ರಾ.ಪಂ. ಅಧ್ಯಕ್ಷನಿಂದ ಉಪ್ಪು ಮುಟ್ಟಿ ಪ್ರಮಾಣ

    ಚಾಮರಾಜನಗರ: ಲಂಚದ ಆರೋಪಕ್ಕೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹಾಗೂ ಬಾರ್ ಮಾಲೀಕ ವೇದಿಕೆಯಲ್ಲಿಯೇ ಉಪ್ಪು ಮುಟ್ಟಿ ಸಾರ್ವಜನಿಕವಾಗಿಯೇ ಪ್ರಮಾಣ ಮಾಡಿರುವ ಘಟನೆ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ನಡೆದಿದೆ.

    ಬೇಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಸತಿ ಯೋಜನೆಗೆ ಸಂಬಂಧಿಸಿದಂತೆ ಗ್ರಾಮ ಸಭೆ ನಡೆಯುತಿತ್ತು. ಗ್ರಾಮ ಸಭೆಯಲ್ಲಿ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರು ಸೇರಿದಂತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. ಈ ವೇಳೆ ಸಭೆ ನಡೆಯುತ್ತಿದ್ದ ವೇದಿಕೆ ಬಳಿ ಬಂದ ಬೇಗೂರಿನ ವೆಂಕಟೇಶ್ವರ, ಬಾರ್ ನ ಮಾಲೀಕ ಗೋವಿಂದಸ್ವಾಮಿ ಮತ್ತು ಗ್ರಾಮ ಪಂಚಾಯ್ತಿ ಅಧ್ಯಕ್ಷ ಚೇತನ್ ಬಾರ್ ತೆರೆಯುವ ಸಂಬಂಧ ಗ್ರಾಮ ಪಂಚಾಯ್ತಿಯಿಂದ ಅನುಮತಿ ನೀಡಲು 50 ಸಾವಿರ ಲಂಚ ಪಡೆದಿದ್ದರು ಎಂದು ಆರೋಪಿಸಿದ್ದಾರೆ.

    ಈ ವೇಳೆ ವೇದಿಕೆಯಲ್ಲಿಯೇ ಇದ್ದ ಅಧ್ಯಕ್ಷ ಚೇತನ್ ನಾನು ಯಾರಿಂದಲೂ ಲಂಚ ಪಡೆದಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು. ಅಲ್ಲದೇ ನಾನು ಲಂಚ ಪಡೆದುಕೊಂಡಿಲ್ಲ ಎಂದು ಉಪ್ಪು ಮುಟ್ಟಿ ವೇದಿಕೆಯಲ್ಲಿಯೇ ಪ್ರಮಾಣ ಮಾಡುತ್ತೇನೆ ಗೋವಿಂದಸ್ವಾಮಿ ವಿನಾಃ ಕಾರಣ ಆರೋಪ ಮಾಡುತ್ತಿದ್ದಾರೆ. ಬೇಕಿದ್ದರೆ ಅವರು ಸಹ ಉಪ್ಪು ಹಿಡಿದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ಗೋವಿಂದಸ್ವಾಮಿ ಸಹ ವೇದಿಕೆಯಲ್ಲಿಯೇ ನಾನು ಚೇತನ್ ಗೆ ಲಂಚ ನೀಡಿರುವುದಾಗಿ ಉಪ್ಪು ಮುಟ್ಟಿ ಪ್ರಮಾಣ ಮಾಡಿದರು.

    ಒಬ್ಬರು ಲಂಚ ಕೊಟ್ಟಿದ್ದೇನೆ ಅನ್ನುತ್ತಾರೆ ಮತ್ತೊಬ್ಬರು ಲಂಚ ಪಡೆದಿಲ್ಲ ಎನ್ನುತ್ತಾರೆ. ವಸತಿ ಯೋಜನೆಗೆ ಸಂಬಂಧಿಸಿದಂತೆ ಕರೆದಿದ್ದ ಗ್ರಾಮಸಭೆ ಲಂಚದ ಆರೋಪಕ್ಕೆ ವೇದಿಕೆಯಾಗಿ ಮಾರ್ಪಟ್ಟಿತ್ತು. ಲಂಚದ ಆರೋಪದ ಬಗ್ಗೆ ತನಿಖೆ ನಡೆದರೆ ಸತ್ಯಾಸತ್ಯತೆ ಹೊರಬರಲಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

  • ಕೋಲಾರ ಎಸ್‍ಎನ್‍ಆರ್ ಆಸ್ಪತ್ರೆಯ  ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ

    ಕೋಲಾರ ಎಸ್‍ಎನ್‍ಆರ್ ಆಸ್ಪತ್ರೆಯ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ

    ಕೋಲಾರ: ಎಸ್‍ಎನ್‍ಆರ್ ಜಿಲ್ಲಾಸ್ಪತ್ರೆಯಲ್ಲಿ ಲಂಚ ಪಡೆದ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾನೆ.

    ಕಂಪ್ಯೂಟರ್ ಆಪರೇಟರ್ ಜಗದೀಶ್, ಶೈಲಜಾ ಎಂಬುವರಿಗೆ ಹ್ಯಾಂಡಿಕ್ಯಾಪ್ಟ್ ಮೆಡಿಕಲ್ ಸರ್ಟಿಫಿಕೇಟ್ ಮಾಡಿಕೊಡುವುದಾಗಿ 15 ಸಾವಿರ ರೂ ಬೇಡಿಕೆಯನ್ನು ಇಟ್ಟಿದ್ದ. ಇಂದು 12 ಸಾವಿರ ರೂ. ಹಣವನ್ನು ಶೈಲಜಾನಿಂದ ಪಡೆಯುವ ವೇಳೆ ಜಿಲ್ಲಾಸ್ಪತ್ರೆಗೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ, ಲಂಚ ಪಡೆಯುತ್ತಿದ್ದ ಜಗದೀಶ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಜಿಲ್ಲಾಸ್ಪತ್ರೆಯಲ್ಲಿ ಜಗದೀಶ್ ಗುತ್ತಿಗೆ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಎಸಿಬಿ ಡಿವೈಎಸ್ಪಿ ರಘು ಕುಮಾರ್, ಇನ್ಸ್ ಪೆಕ್ಟರ್ ರಂಗಶಾಮಯ್ಯ ನೇತೃತ್ವದಲ್ಲಿ ದಾಳಿ ನಡೆದಿದೆ.

     

  • ಲಂಚ ನೀಡಲಿಲ್ಲವೆಂದು ರೋಗಿಗಳಿಗೆ ವೀಲ್‍ಚೇರ್ ನೀಡದ ಸಿಬ್ಬಂದಿ!

    ಲಂಚ ನೀಡಲಿಲ್ಲವೆಂದು ರೋಗಿಗಳಿಗೆ ವೀಲ್‍ಚೇರ್ ನೀಡದ ಸಿಬ್ಬಂದಿ!

    ಚಿಕ್ಕಮಗಳೂರು: ದಾನಿಗಳ ಹೆಸರಲ್ಲಿ ನಿರ್ಮಿಸಲಾಗಿರೋ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿಗೇನು ಕೊರತೆ ಇಲ್ಲ. ಆದರೆ ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಮಾತ್ರ ಮಾನವಿಯತೆಯ ಕೊರತೆ ಅಗಾಧವಾಗಿದೆ. ಇಲ್ಲಿನ ಸಿಬ್ಬಂದಿಗಳು ಲಂಚ ಕೇಳಿದ್ದಕ್ಕೆ ರೋಗಿಗಳ ಕಡೆಯವರು ಕೊಡಲಿಲ್ಲವೆಂದು ವೀಲ್ ಚೇರನ್ನೆ ಕೊಡದೆ ಅಮಾನವೀಯವಾಗಿ ವರ್ತಿಸಿದ್ದಾರೆ

    ಆಸ್ಪತ್ರೆ ಸಿಬ್ಬಂದಿ ವೀಲ್ ಚೇರ್ ನೀಡದ ಹಿನ್ನೆಲೆಯಲ್ಲಿ ರೋಗಿಯನ್ನು ಕುಟುಂಬಸ್ಥರು ಎತ್ತಿಕೊಂಡು ವೈದ್ಯರ ಬಳಿ ಹೋಗುತ್ತಿದ್ದಾರೆ. ಸಿಬ್ಬಂದಿಗಳ ಈ ವರ್ತನೆಗೆ ಸಾರ್ವಜನಿಕರು ಜಿಲ್ಲಾಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಜಿಲ್ಲಾಸ್ಪತ್ರೆಗೆ ಬರೋದೆ ಬಡ ರೋಗಿಗಳು. ಇಲ್ಲಿ ದಿನನಿತ್ಯ ಆಸ್ಪತ್ರೆ ಮೇಲಿನ ಆರೋಪಕ್ಕೆ ಪುಷ್ಟಿ ನೀಡುವಂತಹ ದೃಶ್ಯಗಳು ನಡೆಯುತ್ತಲೇ ಇರುತ್ತೆ. ಆಸ್ಪತ್ರೆಗೆ ಚಿಕಿತ್ಸೆಗೆ ಬರುವ ರೋಗಿಯ ಸಂಬಂಧಿಗಳು ಅಂತಹ ವಿಡಿಯೋವನ್ನ ಸೆರೆ ಹಿಡಿಯುತ್ತಲೇ ಇರುತ್ತಾರೆ. ಇದೀಗ ಮಹಿಳೆಯನ್ನು ಎತ್ತಿಕೊಂಡು ಹೋಗುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ.

    ಅನಾರೋಗ್ಯದಿಂದ ನರಳಾಡುತ್ತಿದ್ದ ಮಹಿಳೆಯನ್ನ ಸಂಬಂಧಿಕರೇ ಎತ್ತಿಕೊಂಡು ಡಾಕ್ಟರ್ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದಾರೆ. ಇಷ್ಟೆಲ್ಲಾ ನಡೆದರೂ ಜಿಲ್ಲಾ ಸರ್ಜನ್ ದೊಡ್ಡಮಲ್ಲಪ್ಪ ಮಾತ್ರ ತಮಗೇನು ಗೊತ್ತಿಲ್ಲದಂತಿದ್ದು, ನಮ್ಮ ಆಸ್ಪತ್ರೆಯಲ್ಲಿ ಅಂತಹ ಘಟನೆ ನಡೆದಿಲ್ಲ. ಕೂಡಲೇ ಕೂಲಂಕುಶವಾಗಿ ಪರಿಶೀಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ತೇನೆ ಎಂದು ಹೇಳುತ್ತಾರೆ.

  • ನನ್ನ ಇಲಾಖೆಯಲ್ಲಿ ಲಂಚ ನಡೆಯಲ್ಲ, ಇದ್ದರೆ ಹೇಳಿ ಬಲಿ ಹಾಕ್ತೀನಿ: ರೇವಣ್ಣ

    ನನ್ನ ಇಲಾಖೆಯಲ್ಲಿ ಲಂಚ ನಡೆಯಲ್ಲ, ಇದ್ದರೆ ಹೇಳಿ ಬಲಿ ಹಾಕ್ತೀನಿ: ರೇವಣ್ಣ

    ಬೆಂಗಳೂರು: ನನ್ನ ಇಲಾಖೆಯಲ್ಲಿ ಯಾವುದೇ ಲಂಚ ಕೊಡುಕೊಳ್ಳುವಿಕೆ ನಡೆಯುದಿಲ್ಲ. ಯಾವುದಾದರು ಅಂತಹ ಪ್ರಕರಣ ಇದ್ದರೆ ಹೇಳಿ, ಅವರಿಗೆ ಬಲಿ ಹಾಕುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.

    ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಹೇಮಾವತಿ ಮತ್ತು ಯಗಚಿ ನೀರಾವರಿ ಯೋಜನೆಯ ಸಭೆ ಬಳಿಕ ಮಾತನಾಡಿದ ಸಚಿವರು, ಲೋಕೋಪಯೋಗಿ ಇಲಾಖೆಯಲ್ಲಿ ವರ್ಗಾವಣೆಗೆ ಯಾವುದೇ ಲಂಚ ಪ್ರಕ್ರಿಯೆ ನಡೆದಿಲ್ಲ. ಒಂದು ವೇಳೆ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಪಾಂಡವಪುರ, ಕೆ.ಆರ್.ಪೇಟೆ ನಾಗಮಂಗಲ ನಾಲೆಗಳಿಗೆ ನೀರು ಬಿಡಲು ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಜುಲೈ 30 ರೊಳಗೆ ನೀರು ಬಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಆದೇಶಿಸಲಾಗಿದೆ ಎಂದರು.

    ತಮ್ಮ ಮನೆ ನವೀಕರಣ ವಿಚಾರಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾವುದೇ ವಾಸ್ತುವಿಗಾಗಿ ಮನೆ ನವೀಕರಣ ಮಾಡಿಲ್ಲ. ನಾನು ಹೊಲದಲ್ಲಿ ಮಲಗುವುದಕ್ಕೂ ಸಿದ್ಧ. ನಾವೇನು ಫೈಸ್ಟಾರ್ ಹೋಟೆಲ್‍ನಲ್ಲಿ ಇರಬೇಕು ಅಂತಾ ಇಲ್ಲ ಎಂದು ಹೇಳಿದರು.

  • ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿಯ ಜಿಲ್ಲಾಧಿಕಾರಿಯಲ್ಲಿ ಕೆಲಸ ಆಗ್ಬೇಕಾ, ಫಟಾಫಟ್ ಕೊಡ್ಬೇಕು ದುಡ್ಡು

    ಕಲಬುರಗಿ: ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

    ಕಚೇರಿಯಲ್ಲಿ ಯಾವುದೇ ಕೆಲಸವಾಗಬೇಕಾದರೂ ಐನೂರರಿಂದ ಸಾವಿರ ರೂಪಾಯಿ ನೀಡಲೇ ಬೇಕು. ಹಣ ಕೊಟ್ಟರೆ ಬೇಗ ಕೆಲಸವಾಗುತ್ತದೆ. ಹಣ ನೀಡದಿದ್ದರೆ ಸಿಬ್ಬಂದಿ ಅಲೆದಾಡಿಸುತ್ತಾರಂತೆ. ಇದಕ್ಕೆ ಸಾಕ್ಷಿಯೆನ್ನುವಂತೆ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಕೆಲ ಸಿಬ್ಬಂದಿ ಹಣ ತಗೆದುಕೊಂಡು ಕೀ ಪ್ಯಾಡ್ ಕೆಳಗೆ ಇಡುತ್ತಿರುವ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

    ಮನೆ, ಆಸ್ತಿ ಖರೀದಿ ಸೇರಿದಂತೆ ನೊಂದಣಿ ಮಾಡಿಸಲು ಬಂದವರಿಂದ ಸಿಬ್ಬಂದಿ ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿಯೇ ಈ ರೀತಿಯ ಭ್ರಷ್ಟಾಚಾರಗಳು ನಡೆಯುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಈ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕ್ತಾರಾ ಅನ್ನೋದನ್ನು ಕಾದುನೋಡಬೇಕಿದೆ.

  • ಪಬ್ಲಿಕ್ ಟಿವಿ ವರದಿ ಫಲಶೃತಿ: ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿಗಳ ಅಮಾನತು

    ಪಬ್ಲಿಕ್ ಟಿವಿ ವರದಿ ಫಲಶೃತಿ: ಲಂಚ ಪಡೆಯುತ್ತಿದ್ದ ಪೊಲೀಸ್ ಅಧಿಕಾರಿಗಳ ಅಮಾನತು

    ಬಳ್ಳಾರಿ: ಪಬ್ಲಿಕ್ ಟಿವಿಯಲ್ಲಿ ಲಂಚ ಪ್ರಕರಣ ವರದಿ ಆಗುತ್ತಿದ್ದಂತೆ ಹಗರಿಬೊಮ್ಮನಹಳ್ಳಿ ಠಾಣೆಯ ಪೊಲೀಸ್ ಅಧಿಕಾರಿಗಳ ಅಮಾನತಿಗೆ ಬಳ್ಳಾರಿ ಎಸ್‍ಪಿ ಅರುಣ್ ರಂಗರಾಜನ್ ಆದೇಶ ಹೊರಡಿಸಿದ್ದಾರೆ.

    ಪಿಎಸ್‍ಐ ಪುಲ್ಲಯ್ಯ ರಾಠೋಡ್ ಹಾಗೂ ಎಎಸ್‍ಐ ಪರಮೇಶ್ವರಪ್ಪ ಅಮಾನತು ಆಗಿರುವ ಪೊಲೀಸ್ ಅಧಿಕಾರಿಗಳು. ಪುಲ್ಲಯ್ಯ ರಾಠೋಡ್ ಹಾಗೂ  ಎಎಸ್‍ಐ ಪರಮೇಶ್ವರಪ್ಪ ರೈತರಿಂದ ಲಂಚ ವಸೂಲಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಇಬ್ಬರು ಅಧಿಕಾರಿಗಳು ಟ್ರ್ಯಾಕ್ಟರ್ ಗಳನ್ನು ಹಿಡಿದು, ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸುತ್ತಿದ್ದರು. ಆದರೆ ರೈತರು ಹಾಗೂ ಮಾಲೀಕರಿಂದ 5 ಸಾವಿರ ರೂ., 10 ಸಾವಿರ ರೂ. ಲಂಚ ಪಡೆದು ವಸೂಲಿ ಮಾಡಿ, ಟ್ರ್ಯಾಕ್ಟರ್ ಬಿಟ್ಟು ಕಳುಹಿಸುತ್ತಿದ್ದರು.  ಇದನ್ನು ಓದಿ:  ಹಗರಿಬೊಮ್ಮನಹಳ್ಳಿ ಠಾಣೆ ನಿರ್ವಹಣೆ ನೆಪದಲ್ಲಿ ಲಂಚಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು!

    ಮಂಗಳವಾರ ಪಿಎಸ್‍ಐ ಪುಲ್ಲಯ್ಯ ಹಾಗೂ ಎಎಸ್‍ಐ ಪರಮೇಶ್ವರಪ್ಪ ಇಬ್ಬರು ಸೇರಿ ಲಂಚ ವಸೂಲಿ ಮಾಡುತ್ತಿದ್ದಾಗ ಮಾನವ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚನ್ನವೀರ ಅವರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ವಿಡಿಯೋಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಅವರಿಗೆ ನೀಡಿ, ಲಂಚ ವಸೂಲಿ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ದೂರು ಸಲ್ಲಿಸಿದ್ದರು. ಪ್ರಕರಣದ ಕುರಿತು ಪಬ್ಲಿಕ್ ಟಿವಿಯಲ್ಲಿ ವರಿದಿಯಾಗುತ್ತಿದ್ದಂತೆ ಬಳ್ಳಾರಿ ಎಸ್‍ಪಿ ಅಮಾನತು ಆದೇಶ ಹೊರಡಿಸಿದ್ದಾರೆ.

  • ಹಗರಿಬೊಮ್ಮನಹಳ್ಳಿ ಠಾಣೆ ನಿರ್ವಹಣೆ ನೆಪದಲ್ಲಿ ಲಂಚಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು! – ವಿಡಿಯೋ ನೋಡಿ

    ಹಗರಿಬೊಮ್ಮನಹಳ್ಳಿ ಠಾಣೆ ನಿರ್ವಹಣೆ ನೆಪದಲ್ಲಿ ಲಂಚಕ್ಕೆ ಇಳಿದ ಪೊಲೀಸ್ ಅಧಿಕಾರಿಗಳು! – ವಿಡಿಯೋ ನೋಡಿ

    ಬಳ್ಳಾರಿ: ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ಲಂಚ ಬಾಕತನ ಮೀತಿ ಮೀರಿ ಬಿಟ್ಟಿದೆ. ಠಾಣೆಯ ನಿರ್ವಹಣೆಗೆ ಹಗರಿಬೊಮ್ಮನಹಳ್ಳಿ ಪೊಲೀಸ್ ಅಧಿಕಾರಿಗಳು ಜನರಿಂದಲೇ ಲಂಚ ವಸೂಲಿ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

    ಪಿಎಸ್‍ಐ ಪುಲ್ಲಯ್ಯ ರಾಠೋಡ್ ಹಾಗೂ ಎಎಸ್‍ಐ ಪರಮೇಶ್ವರಪ್ಪ ರೈತರಿಂದ ಲಂಚ ವಸೂಲಿ ಮಾಡುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಇಬ್ಬರು ಅಧಿಕಾರಿಗಳು ಟ್ರ್ಯಾಕ್ಟರ್ ಗಳನ್ನು ಹಿಡಿದು, ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸುತ್ತಿದ್ದರು. ಆದರೆ ರೈತರು ಹಾಗೂ ಮಾಲೀಕರಿಂದ 5 ಸಾವಿರ ರೂ., 10 ಸಾವಿರ ರೂ. ಲಂಚ ಪಡೆದು ವಸೂಲಿ ಮಾಡಿ, ಟ್ರ್ಯಾಕ್ಟರ್ ಬಿಟ್ಟು ಕಳುಹಿಸುತ್ತಿದ್ದರು.

    ಒಂದು ವೇಳೆ ದಂಡಕ್ಕಿಂತ ಹೆಚ್ಚಿನ ಹಣವನ್ನು ಏಕೆ ನೀಡಬೇಕು ಎಂದು ರೈತರು, ಟ್ರ್ಯಾಕ್ಟರ್ ಮಾಲೀಕರು ಪ್ರಶ್ನಿಸಿದರೆ, ಅಕ್ರಮವಾಗಿ ಮರಳು, ಕಲ್ಲು ಸಾಗಾಟದ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ದಂಡದ ಹಣಕ್ಕೆ ರಶೀದಿ ಕೇಳಿದರೆ, 2016ರ ಹಳೇ ದಿನಾಂಕಗಳ ರಶೀದಿ ನೀಡುತ್ತಿದ್ದಾರೆ.

    ಮಂಗಳವಾರ ಪಿಎಸ್‍ಐ ಪುಲ್ಲಯ್ಯ ಹಾಗೂ ಎಎಸ್‍ಐ ಪರಮೇಶ್ವರಪ್ಪ ಇಬ್ಬರು ಸೇರಿ ಲಂಚ ವಸೂಲಿ ಮಾಡುತ್ತಿದ್ದಾಗ ಮಾನವ ಹಕ್ಕುಗಳ ಸಂರಕ್ಷಣಾ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಚನ್ನವೀರ ಅವರು ತಮ್ಮ ಮೊಬೈಲ್‍ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋಗಳನ್ನು ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್ ಅವರಿಗೆ ನೀಡಿ, ಲಂಚ ವಸೂಲಿ ಮಾಡುತ್ತಿದ್ದ ಇಬ್ಬರು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ದೂರು ಸಲ್ಲಿಸಿದ್ದಾರೆ.

    https://www.youtube.com/watch?v=FeMFBwJfl8k

     

    https://www.youtube.com/watch?v=A4RTAFry3Uw

  • ಲಂಚಕ್ಕಾಗಿ ಪೀಡಿಸೋ ಅಧಿಕಾರಿಗಳಿಗೆ ರಾಯಚೂರು ಜಿಲ್ಲಾಧಿಕಾರಿಯಿಂದ ಫುಲ್ ಕ್ಲಾಸ್

    ಲಂಚಕ್ಕಾಗಿ ಪೀಡಿಸೋ ಅಧಿಕಾರಿಗಳಿಗೆ ರಾಯಚೂರು ಜಿಲ್ಲಾಧಿಕಾರಿಯಿಂದ ಫುಲ್ ಕ್ಲಾಸ್

    ರಾಯಚೂರು: ಜಿಲ್ಲೆಯಲ್ಲಿ ಕೆಲಸ ಮಾಡದೇ ಸಾರ್ವಜನಿಕರಿಗೆ ಲಂಚ ಕೊಡುವಂತೆ ಪೀಡಿಸುವ ಅಧಿಕಾರಿಕಾರಿಗಳಿಗೆ ಜಿಲ್ಲಾಧಿಕಾರಿ ಬಗಾದಿ ಗೌತಮ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಲಂಚ ತೆಗೆದುಕೊಂಡಿರುವ ಆರೋಪದ ಮೇಲೆ ಸಭೆ ನಡೆಸಿದ ಜಿಲ್ಲಾಧಿಕಾರಿ, ಡಿಸಿ ಕಚೇರಿ ಹಾಗೂ ನಗರಸಭೆ ವಿವಿಧ ವಿಭಾಗದ ಅಧಿಕಾರಿಗಳಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಬ್ಲಡಿ ಬೆಗ್ಗರ್ಸ್, ಬ್ರೋಕರ್ಸ್ ಅಂತ ಬೈದು ಅಧಿಕಾರಿಗಳ ಬಗ್ಗೆ ಕಿಡಿಕಾರಿದ್ದಾರೆ.

    ಪ್ರತಿಯೊಂದಕ್ಕೂ ಲಂಚಪಡೆಯುತ್ತಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಬೆಂಡೆತ್ತಿದ್ದಾರೆ. ಲಂಚಕ್ಕಾಗಿ ಜನರನ್ನ ಪೀಡಿಸುವ ಹಾಗೂ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳ ಅಮಾನತಿಗೆ ಪಟ್ಟಿಯನ್ನ ರೆಡಿ ಮಾಡಿರುವುದಾಗಿ ಜಿಲ್ಲಾಧಿಕಾರಿ ಬಗಾದಿ ಗೌತಮ್ ಎಚ್ಚರಿಸಿದ್ದಾರೆ.

     

  • ಪಾಸ್‍ಪೋರ್ಟ್ ಕಚೇರಿಯಲ್ಲಿ ಮಧ್ಯವರ್ತಿಗಳ ಲಂಚಬಾಕತನ ಬಯಲು ಮಾಡಿದ್ರು ಮೈಸೂರಿನ ವ್ಯಕ್ತಿ!

    ಪಾಸ್‍ಪೋರ್ಟ್ ಕಚೇರಿಯಲ್ಲಿ ಮಧ್ಯವರ್ತಿಗಳ ಲಂಚಬಾಕತನ ಬಯಲು ಮಾಡಿದ್ರು ಮೈಸೂರಿನ ವ್ಯಕ್ತಿ!

    ಮೈಸೂರು: ಮಕ್ಕಳ ಪಾಸ್‍ಪೋರ್ಟ್ ಮಾಡಿಸಲು ಹೋದ ತಂದೆಯೊಬ್ಬರು ಬೆಂಗಳೂರು ಪಾಸ್‍ಪೋರ್ಟ್ ಕಚೇರಿಯಲ್ಲಿರುವ ಮಧ್ಯಮರ್ತಿಗಳ ದಂಧೆಯನ್ನು ಬಯಲು ಮಾಡಿದ್ದಾರೆ.

    ಪ್ರತಿಭಾನ್ವಿತ ಮಕ್ಕಳನ್ನು ಸ್ಪರ್ಧೆಗೆ ವಿದೇಶಕ್ಕೆ ಕಳುಹಿಸಲು ಹಣಕ್ಕಾಗಿ ಪರದಾಡುತ್ತಿದ್ದ ತಂದೆ, ತನ್ನ ಮಕ್ಕಳ ಪಾಸ್ ಪೋರ್ಟ್ ಮಾಡಿಸಲು ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಹೋದಾಗ ಅಲ್ಲಿನ ಮಧ್ಯವರ್ತಿಗಳು ಸೃಷ್ಟಿ ಮಾಡಿರುವ ವ್ಯವಸ್ಥೆಯನ್ನು ರೆಕಾರ್ಡ್ ಮಾಡಿದ್ದಾರೆ.

    ಮೈಸೂರಿನ ಎಚ್.ಡಿ.ಕೋಟೆಯ ಹ್ಯಾಂಡ್ ಪೋಸ್ಟ್ ನ ಯರಳ್ಳಿ ಗ್ರಾಮದ ಮಂಜು ರಾವ್ ಬೀದಿ ಬೀದಿಯಲ್ಲಿ ಪಾತ್ರೆ ಮಾರಿ ಜೀವನ ಸಾಗಿಸುತ್ತಿದ್ದರು. ಇವರ ಇಬ್ಬರು ಮಕ್ಕಳಾ ಐಶ್ವರ್ಯ ಹಾಗೂ ನಿಖಿಲ್ ಮಲೇಷಿಯಾದಲ್ಲಿ ನಡೆಯುವ ಅಂತರಾಷ್ಟ್ರೀಯ ಕರಾಟೆ ಬಾಕ್ಸಿಂಗ್ ಗೆ ಆಯ್ಕೆಯಾಗಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಮಲೇಷಿಯಾಗೆ ಮಕ್ಕಳನ್ನು ಕಳಿಸಲು ಸಾಧ್ಯವಾಗುತ್ತೋ ಇಲ್ವೋ ಅಂತಾ ಮಂಜು ರಾವ್ ಚಿಂತೆಯಲ್ಲಿದ್ದಾರೆ.

    ಈ ನಡುವೆ ಮಕ್ಕಳ ಪಾಸ್ ಪೋರ್ಟ್ ಮಾಡಿಸಲು ಬೆಂಗಳೂರಿನ ಪಾಸ್ ಪೋರ್ಟ್ ಕಚೇರಿಗೆ ಹೋದಾಗ ಅಲ್ಲಿ ಸಂಪರ್ಕಕ್ಕೆ ಬಂದ ಮಧ್ಯವರ್ತಿ ತುರ್ತಾಗಿ ಮಕ್ಕಳ ಪಾಸ್ ಪೋರ್ಟ್ ಮಾಡಿಸಿ ಕೊಡಲು ಲಂಚ ಕೇಳಿದ್ದಾನೆ. ಐದು ಸಾವಿರ ಹಣ ಕೇಳುವ ಮಧ್ಯವರ್ತಿ ಕೊನೆಗೆ ಪಾಸ್ ಪೋರ್ಟ್ ಅಧಿಕಾರಿಗಳಿಗೆ ಎರಡು ಸಾವಿರ ಕೊಡಬೇಕು ನನಗೆ ಒಂದು ಸಾವಿರ ಎಂದು ಹೇಳಿ ಮೂರು ಸಾವಿರ ರೂಪಾಯಿ ಪಡೆದಿದ್ದಾನೆ. ಅಧಿಕಾರಿ ಲಂಚ ಪಡೆದ ವಿಡಿಯೋ ಮಾಡಿದ್ದು, ಅವರ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾರೆ.