Tag: ಲಂಚ

  • ಲಂಚ ಪಡೆದು ಕೆಲಸ ಮಾಡಿಕೊಡದಿದ್ದನ್ನ ಪ್ರಶ್ನಿಸಿದ್ದಕ್ಕೆ ಮಹಿಳಾ ಅಧಿಕಾರಿಯಿಂದ ಧಮ್ಕಿ!

    ಲಂಚ ಪಡೆದು ಕೆಲಸ ಮಾಡಿಕೊಡದಿದ್ದನ್ನ ಪ್ರಶ್ನಿಸಿದ್ದಕ್ಕೆ ಮಹಿಳಾ ಅಧಿಕಾರಿಯಿಂದ ಧಮ್ಕಿ!

    ಚಿಕ್ಕಬಳ್ಳಾರ: ಲಂಚ ಪಡೆದು ಕೆಲಸ ಮಾಡಿಕೊಡದಿದ್ದನ್ನು ಪ್ರಶ್ನಿಸಿದ್ದಕ್ಕೆ ಮಹಿಳಾ ಅಧಿಕಾರಿಯೊಬ್ಬರು ಧಮ್ಕಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ದೇವನಹಳ್ಳಿಯ ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಸ್ತರಣಾಧಿಕಾರಿ ಸರೋಜಾದೇವಿ ಧಮ್ಕಿ ಹಾಕಿದವರು. ಹೊಸಕೋಟೆ ತಾಲೂಕಿನ ನಂದಗುಡಿ ನಿವಾಸಿ ಮಂಜುನಾಥ್ ಅವರಿಗೆ ಸರೋಜಾದೇವಿ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಈ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಸರೋಜಾದೇವಿ ಪರಿಶಿಷ್ಟ ಜಾತಿಯ ಯುವಕರಿಗೆ ಟ್ಯಾಕ್ಸಿ ಹಾಗೂ ರೈತರ ಹೊಲದಲ್ಲಿ ಗಂಗಾ ಕಲ್ಯಾಣ ಯೋಜನೆ ಅಡಿ ಬೋರ್ವೆಲ್ ಕೊರೆಸಿಕೊಡುವುದಾಗಿ ಹೇಳಿ ಲಂಚ ಪಡೆದಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಲಂಚ ಪಡೆದ ಅವರು ಕೆಲಸ ಮಾಡಿಕೊಡದೇ ಹೊಸಕೋಟೆಯಿಂದ ದೇವನಹಳ್ಳಿಗೆ ವರ್ಗಾವಣೆಯಾಗಿದ್ದಾರೆ. ಸಾಲ ಮಾಡಿ ಹಣ ಕೊಟ್ಟಿದ್ದ ರೈತರು ಮತ್ತು ಯುವಕರು ಕೊಟ್ಟ ಹಣವನ್ನು ಮರಳಿ ಕೊಡುವಂತೆ ಕೇಳಿದ್ದಾರೆ. ಇದಕ್ಕೆ ಕೋಪಗೊಂಡ ಸರೋಜಾದೇವಿ ಅಸಭ್ಯವಾಗಿ ಮಾತನಾಡಿದ್ದಾರೆ.

    ಪರಿಶಿಷ್ಟ ಜಾತಿಯ ಕೋಟಾದಲ್ಲಿ ಟ್ಯಾಕ್ಸಿ ಕೊಡಿಸುವುದಾಗಿ ಹೇಳಿ ಸರೋಜಾದೇವಿ ನನ್ನ ಬಳಿ ಹಣ ಪಡೆದಿದ್ದಾರೆ. ಆದರೆ ಇಲ್ಲಿಯವರೆಗೂ ನನ್ನ ಕೆಲಸ ಮಾಡಿಕೊಟ್ಟಿಲ್ಲ. ಈ ಸಂಬಂಧ ವಿಚಾರಿಸಲು ಕರೆ ಮಾಡಿದ್ದಾಗ ಬಾಯಿಗೆ ಬಂದಂತೆ ಬೈದಿದ್ದಾರೆ. ನನಗೆ ಹಣ ವಾಪಸ್ ಕೊಡು ಅಂತ ಕೇಳುತ್ತಿಯಾ? ಮತ್ತೊಮ್ಮೆ ಹಣ ವಾಪಸ್ ಕೊಡು ಎಂದು ಕೇಳಿದರೆ ಊರಿಗೆ ಬಂದು ಹೊಡೆಯುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ಸರೋಜಾದೇವಿ ನನ್ನ ಮನೆಗೆ ಕೆಲ ಸಹಚರರನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಿದ್ದಾರೆ. ನನಗೆ ನ್ಯಾಯಕೊಡಿಸಿ ಎಂದು ಮಂಜುನಾಥ್ ಅಳಲು ತೊಡಿಕೊಂಡಿದ್ದಾರೆ.

    ವಿಸ್ತರಣಾಧಿಕಾರಿ ಸರೋಜಾದೇವಿ ಪಡೆದಿರುವ ಲಂಚದ ವಿಡಿಯೋ ಹಾಗೂ ಅವಾಚ್ಯ ಪದಗಳಿಂದ ನಿಂದಿಸಿರುವ ಆಡಿಯೋವನ್ನ ಮಂಜುನಾಥ್ ಬಿಡುಗಡೆಗೊಳಿಸಿದ್ದಾರೆ.

  • ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಭೂ ಮಾಪನ ಅಧಿಕಾರಿ

    ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಭೂ ಮಾಪನ ಅಧಿಕಾರಿ

    ಚಿಕ್ಕಬಳ್ಳಾಪುರ: ಜಮೀನು ಸರ್ವೆ ಮಾಡಲು 15 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದ ಭೂ ಮಾಪನ ಅಧಿಕಾರಿ ಎಸಿಬಿ ಬಲೆಗೆ ಬಿದ್ದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕು ಕಚೇರಿಯಲ್ಲಿ ನಡೆದಿದೆ.

    ಎಡಿಎಲ್‍ಆರ್ ಕಚೇರಿಯ ಲಕ್ಷ್ಮಣ್ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಸರ್ಕಾರಿ ಭೂ ಮಾಪನ ಅಧಿಕಾರಿ. ದೇವನಹಳ್ಳಿ ತಾಲೂಕಿನ ಸೋಲೂರು ಗ್ರಾಮದ ಸರ್ವೇ ನಂ 5 ಗೋಮಾಳದ ಜಮೀನನ ಪೈಕಿ 2 ಎಕರೆ ಜಮೀನನನ್ನು ನಾರಾಯಣಪ್ಪ ಎಂಬವರು ಅಕ್ರಮವಾಗಿ ಪೋಡಿ ಮಾಡಿಸಿಕೊಂಡಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದರು. ಈ ಸಂಬಂಧ ನಾರಾಯಣಪ್ಪ ಅವರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.

    ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಕೋರ್ಟ್, ಜಮೀನು ಸರ್ವೇ ಮಾಡುವಂತೆ ಎಡಿಎಲ್‍ಆರ್ ಭೂ ಮಾಪನ ಲಕ್ಷ್ಮಣ್ ಅವರಿಗೆ ಸೂಚನೆ ನೀಡಿತ್ತು. ಆದರೆ ಸರ್ವೇ ಮಾಡಲು ಹೋದ ಲಕ್ಷ್ಮಣ್ 15 ಸಾವಿರ ರೂ. ಲಂಚ ನೀಡುವಂತೆ ಗ್ರಾಮಸ್ಥರಿಗೆ ಕೇಳಿದ್ದರು. ಲಂಚ ಕೇಳಿದಕ್ಕೆ ಕೋಪಗೊಂಡ ಗ್ರಾಮಸ್ಥರು, ಎಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಲಕ್ಷ್ಮಣ್ ಅವರು ಗ್ರಾಮಸ್ಥರಿಂದ ತಾಲೂಕು ಕಚೇರಿಯ ಹೊರಗಡೆ ಇರುವ ಟೀ ಅಂಗಡಿ ಬಳಿ ಇಂದು 15 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳು ಲಕ್ಷ್ಮಣ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಪ್ರಕರಣ ದಾಖಲಿಸಕೊಂಡಿದ್ದಾರೆ.

  • ದಾಖಲೆ ಪತ್ರ ದೃಢೀಕರಿಸಲು 50 ರೂಪಾಯಿಗೆ ಕೈಯೊಡ್ಡುವ ವೈದ್ಯಾಧಿಕಾರಿ!

    ದಾಖಲೆ ಪತ್ರ ದೃಢೀಕರಿಸಲು 50 ರೂಪಾಯಿಗೆ ಕೈಯೊಡ್ಡುವ ವೈದ್ಯಾಧಿಕಾರಿ!

    ತುಮಕೂರು: ದಾಖಲೆ ಪತ್ರ ದೃಢೀಕರಣ ಮಾಡಲು ಜಿಲ್ಲೆಯಲ್ಲಿ ವೈದ್ಯಾಧಿಕಾರಿಯೊಬ್ಬರು 50 ರೂಪಾಯಿಗೆ ಕೈವೊಡ್ಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

    ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಸ್ಥಾನಿಕ ವೈದ್ಯಾಧೀಕಾರಿ ಡಾ.ರಾಧಿಕಾ ಅವರ ಲಂಚಾವತಾರದ ವಿಡಿಯೋ ವೈರಲ್ ಆಗಿದೆ. ಕೆಲವು ದಿನಗಳ ಹಿಂದೆ ವೃದ್ಧರೊಬ್ಬರ ವಯಸ್ಸಿನ ಪತ್ರದ ದೃಢೀಕರಣಕ್ಕಾಗಿ ಡಾ.ರಾಧಿಕಾ ಬಳಿ ಬಂದಿದ್ದರು. ಈ ವೇಳೆ ದೃಢೀಕರಣ ಪತ್ರಕ್ಕೆ ಸಹಿ ಹಾಕಲು ವೈದ್ಯೆ 50 ರೂ. ಲಂಚ ಕೇಳಿದ್ದಾರೆ. ಆಗ ವೃದ್ಧರ ಜೊತೆ ಬಂದ ವ್ಯಕ್ತಿ ವೈದ್ಯರಿಗೆ 500 ರೂ. ಮುಖಬೆಲೆಯ ನೋಟ್ ನೀಡಿದ್ದಾರೆ. ಆದ್ರೆ ವೈದ್ಯೆ ಕೇವಲ 50. ರೂ. ಪಡೆದು, ಉಳಿದ 450 ರೂ. ವಾಪಸ್ ಕೊಟ್ಟಿದ್ದಾರೆ.

    ಅಲ್ಲದೆ ದೃಢೀಕರಣ ಪತ್ರಕ್ಕೆ ಸಹಿ ಹಾಕಿದ್ದಕ್ಕೆ “ನಿನ್ನ ಬಾಯಲ್ಲಿ ಒಂದು ಮಾತು ಬರುತ್ತಿಲ್ಲವಲ್ಲಾ ಸೈನ್ ಹಾಕಿದಕ್ಕೆ ಹಣ ಕೊಡಬೇಕು ಅಂತ” ಎಂದು ಕೇಳಿ ವೈದ್ಯೆ ಹಣ ಪಡೆದಿದ್ದಾರೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣಗಲಲ್ಲಿ ಹರಿಬಿಟ್ಟಿದ್ದಾರೆ. ಈ ಮೂಲಕ ವೈದ್ಯೆಯ ಅಸಲಿಯತ್ತು ಬಟಾಬಯಲಾಗಿದೆ.

  • ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ – ಎಸಿಬಿಗೆ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್

    ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ – ಎಸಿಬಿಗೆ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್

    ತುಮಕೂರು: ನ್ಯಾಯ ಕೊಡಿಸಬೇಕಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಲಂಚ ಪಡೆಯುತ್ತಿದ್ದಾಗ ಕೋರ್ಟ್ ಆವರಣದಲ್ಲೇ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ಜಿಲ್ಲೆ ತಿಪಟೂರು ನ್ಯಾಯಾಲಯ ಆವರಣದಲ್ಲಿ ಕೆಇಬಿ ಎಂಜಿನಿಯರ್ ಗುರುಬಸವಸ್ವಾಮಿ ಎಂಬುವರಿಂದ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಪಿಪಿ ಪೂರ್ಣಿಮಾ ಅವರು ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

    ಏನಿದು ಪ್ರಕರಣ?
    2015ರಲ್ಲಿ ಗಾಳಿಮಳೆಗೆ ಬಿದಿದ್ದ ಮರ ಮತ್ತು ವಿದ್ಯುತ್ ಕಂಬದ ತೆರವು ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ನಡೆಸಿತ್ತು. ಆಗ ವೃದ್ಧೆಯೊಬ್ಬರು ಗಾಯಗೊಂಡಿದ್ದರು. ಬಳಿಕ ವೃದ್ಧೆ ಸಂಬಂಧಿಕರು ಎರಡೂ ಇಲಾಖೆ ವಿರುದ್ಧ ತಿಪಟೂರು ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದರು.

    ಈ ಪ್ರಕರಣದ ಸಂಬಂಧ 40 ಸಾವಿರ ರೂ. ಗೆ ಪೂರ್ಣಿಮಾ ಬೇಡಿಕೆ ಇಟ್ಟಿದ್ದರು. ಅದರಂತೆ 20 ಸಾವಿರ ರೂ.ಗಳನ್ನು ಅಕೌಂಟ್ ವರ್ಗಾವಣೆ ಮಾಡಿಸಿಕೊಂಡಿದ್ದರು. ಉಳಿದ 20 ಸಾವಿರ ರೂ.ಗಳನ್ನು ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ 3 ತಿಂಗಳಿಂದ ತಿಪಟೂರು ಕೋರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೂರ್ಣಿಮಾ ಅವರು ಈ ಹಿಂದೆ ಚಿಕ್ಕಮಗಳೂರು, ಕಡೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿ ಕೂಡಾ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.

    ಮೂಲತಃ ಪೂರ್ಣಿಮಾ ಅವರು ಭದ್ರಾವತಿಯ ಮೂಲವರಾಗಿದ್ದು, ಪ್ರಕರಣದ ಸಂಬಂಧ ಅವರನ್ನು ಎಪಿಪಿ ಕಚೇರಿಯಲ್ಲೇ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಲಂಚ ಸ್ವೀಕರಿಸುವ ವೇಳೆ ಶರಣಪ್ಪ ಎಂಬ ಡಿ ಗ್ರೂಪ್ ನೌಕರನನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ.

  • ಗರ್ಭಿಣಿ ಮೇಲೂ ಕನಿಕರ ತೋರದ ವೈದ್ಯೆ..!

    ಗರ್ಭಿಣಿ ಮೇಲೂ ಕನಿಕರ ತೋರದ ವೈದ್ಯೆ..!

    ಹಾಸನ: ಸರ್ಕಾರಿ ಆಸ್ಪತ್ರೆ ಮಹಿಳಾ ವೈದ್ಯರೊಬ್ಬರು ಗರ್ಭಿಣಿಯ ಬಳಿ ಲಂಚಪಡೆದಿದ್ದಾರೆ ಎನ್ನಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಹಾಸನ ಜಿಲ್ಲೆ ಅರಕಲಗೂಡು ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಅರಕಲಗೂಡು ಸರ್ಕಾರಿ ಆಸ್ಪತ್ರೆಯ ಡಾ. ಪುಷ್ಪಲತಾ ಲಂಚ ಪಡೆದ ವೈದ್ಯೆ.

    ಗರ್ಭಿಣಿ ಪ್ರತಿ ಬಾರಿಯಂತೆ ಈ ಬಾರಿಯೂ ವೈದ್ಯರ ಬಳಿ ಮಾಸಿಕ ಪರೀಕ್ಷೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಮಹಿಳೆಯಿಂದ ಒಂದು ಸಾವಿರ ಹಣ ಪಡೆಯುವ ದೃಶ್ಯಾವಳಿ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತನ್ನ ಪೋಷಕರೊಂದಿಗೆ ಆಸ್ಪತ್ರೆಗೆ ಬಂದ ಮಹಿಳೆ ಬಳಿ ವೈದ್ಯೆ ನಿರ್ಲಕ್ಷ್ಯವಾಗಿ ಮಾತನಾಡಿದ್ದಾರೆ. ಮತ್ತು ಲಂಚವನ್ನು ಪಡೆದಿದ್ದಾರೆ ಗರ್ಭಿಣಿಯ ಪೋಷಕರು ಆರೋಪಿಸಿರುವ ವೀಡಿಯೋ ವಾಟ್ಸಾಪ್ ಮತ್ತು ಫೇಸ್ ಬುಕ್‍ನಲ್ಲಿ ಹರಿದಾಡುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಲಂಚ ಕೇಳಿದ ತಹಶೀಲ್ದಾರ್ ವಾಹನಕ್ಕೆ ಎಮ್ಮೆ ಕಟ್ಟಿದ ರೈತ!

    ಭೋಪಾಲ್: ಅಧಿಕಾರಿ ಕೇಳಿದಷ್ಟು ಲಂಚ ನೀಡಲು ಹಣವಿಲ್ಲದೇ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಬಳಿ ಇದ್ದ ಎಮ್ಮೆಯನ್ನೇ ಆದಾಯ ಇಲಾಖೆ ಅಧಿಕಾರಿ ವಾಹನಕ್ಕೆ ಕಟ್ಟಿ ಕೆಲಸ ಮಾಡಿಕೊಡುವಂತೆ ವಿಚಿತ್ರವಾಗಿ ಬೇಡಿಕೆಯಿಟ್ಟು ಸುದ್ದಿಯಾಗಿದ್ದಾರೆ.

    ಟಿಕಮ್‍ಗಢ ಜಿಲ್ಲೆಯ ಖರ್ಗಾಪುರ ಪ್ರದೇಶದಲ್ಲಿರುವ ಆದಾಯ ಇಲಾಖೆ ಕಚೇರಿ ಬಳಿ ಈ ಘಟನೆ ನಡೆದಿದೆ. ದೇವಪುರ ಗ್ರಾಮದ ನಿವಾಸಿಯಾದ ಲಕ್ಷ್ಮೀ ಯಾದವ್(50) ಲಂಚದ ಬದಲಾಗಿ ಎಮ್ಮೆಯನ್ನೇ ತಹಶೀಲ್ದಾರ್ ಅವರ ವಾಹನಕ್ಕೆ ಕಟ್ಟಿದ್ದಾರೆ.

    ರೈತ ತಾನು ಖರೀದಿಸಿದ್ದ ಸ್ವಲ್ಪ ಜಮೀನನ್ನು ತನ್ನ ಸೊಸೆಯರ ಹೆಸರಿಗೆ ಮಾಡಿಸಲು ಆದಾಯ ಇಲಾಖೆ ಕಚೇರಿಗೆ ಹೋಗಿದ್ದರು. ಆಗ ಜಮೀನು ವರ್ಗಾವಣೆ ಮಾಡಿಕೊಡಲು ತಹಶೀಲ್ದಾರ್ 1ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರಿಂದ ಹೇಗೋ ಕಷ್ಟ ಪಟ್ಟು 50 ಸಾವಿರ ರೂಪಾಯಿಯನ್ನು ರೈತ ನೀಡಿದ್ದರು. ಆದರೆ ಪೂರ್ತಿ ಹಣವನ್ನು ನೀಡುವ ವರೆಗೂ ಕೆಲಸ ಮಾಡಿಕೊಡುವುದಿಲ್ಲ ಎಂದು ಅಧಿಕಾರಿ ಪಟ್ಟುಹಿಡಿದಿದ್ದಾರೆ.

    ಬಾಕಿ ಹಣವನ್ನು ಹೊಂದಿಸಲು ಆಗದೇ ಶನಿವಾರದಂದು ರೈತ ತನ್ನ ಬಳಿ ಇದ್ದ ಒಂದು ಎಮ್ಮೆಯನ್ನು ತಹಶೀಲ್ದಾರ್ ಅವರ ಸರ್ಕಾರಿ ವಾಹನಕ್ಕೆ ಕಟ್ಟಿಹಾಕಿದ್ದಾರೆ. ಬಳಿಕ ನನ್ನ ಬಳಿ ನಿಮ್ಮ ಬೇಡಿಕೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಈ ಎಮ್ಮೆಯನ್ನು ಇಟ್ಟುಕೊಂಡು ಜಮೀನು ವರ್ಗಾವಣೆ ಮಾಡಿಕೊಡಿ ಎಂದು ತನ್ನ ಅಸಹಾಯಕತೆಯನ್ನು ಹೇಳಿಕೊಂಡಿದ್ದಾರೆ.

    ಈ ಬಗ್ಗೆ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿ ಸೌರವ್ ಕುಮಾರ ಸುಮನ್ ಅವರು ಈ ವಿಚಾರದ ಬಗ್ಗೆ ಎಲ್ಲಾ ಮಹಿತಿ ಪಡೆದು, ಸಮಸ್ಯೆಯನ್ನು ಬಗೆಹರಿಸುವಂತೆ ಬಾಲದೇವಗಡದ ಉಪವಿಭಾಗ ಅಧಿಕಾರಿಗೆ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು- ಬಿ ರಿಪೋರ್ಟ್ ಸಲ್ಲಿಸಲು 3 ಲಕ್ಷ ರೂ. ಲಂಚ ಕೇಳಿದ ಪಿಎಸ್‍ಐ..!

    ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು- ಬಿ ರಿಪೋರ್ಟ್ ಸಲ್ಲಿಸಲು 3 ಲಕ್ಷ ರೂ. ಲಂಚ ಕೇಳಿದ ಪಿಎಸ್‍ಐ..!

    ಬಳ್ಳಾರಿ: ಅಧಿಕಾರಿಗಳು ಏನಾದರೂ ಕೆಲಸ ಮಾಡಿಕೊಟ್ಟರೆ ಅಷ್ಟೋ ಇಷ್ಟೋ ಲಂಚ ಪಡೆಯೋದು ಮಾಮೂಲು. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಪ್ರಕರಣವೊಂದರಲ್ಲಿ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ. ನಿಮ್ಮ ಬಳಿ ಹಣ ಇಲ್ಲದಿದ್ದರೆ ಪೋಸ್ಟ್ ಡೇಟ್ ಹಾಕಿ ಚೆಕ್ ಕೊಡಿ ಎಂದು ಕೇಳುತ್ತಾನೆ. ಅಲ್ಲದೆ ಲಂಚದ ಹಣಕ್ಕಾಗಿ ವೈದ್ಯನ ಮನೆ ಮುಂದೆ ಕುಳಿತುಕೊಂಡು ಲಂಚ ವಸೂಲಿ ಮಾಡಿಕೊಂಡು ಬಾ ಎಂದು ಕೇಳುತ್ತಾನೆ.

    ಕೃಷ್ಣ ನಾಯ್ಕ್ ಲಂಚ ಪಡೆದ ಪಿಎಸ್‍ಐ. ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಪಿಎಸ್‍ಐ ಆಗಿರುವ ಕೃಷ್ಣಾ, ಮೂರು ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾನೆ.

    2016ರ ಮೇ 28ರಂದು ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಗುಡೇಕೋಟೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಬಂದಿದ್ದ ಬಾಣಂತಿಗೆ ಓವರ್‍ಡೋಸ್ ಇಂಜೆಕ್ಷನ್ ನೀಡಿದ ಪರಿಣಾಮ ಬಾಣಂತಿ ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಕೋಟೆ ಸರ್ಕಾರಿ ಆಸ್ಪತ್ರೆಯ ವೈದ್ಯ ಮಧುಕುಮಾರ್ ಹಾಗೂ ಹಿರಿಯ ಶಸ್ತ್ರಚಿಕಿತ್ಸಾ ತಜ್ಞ ಪ್ರಕಾಶ್ ರೆಡ್ಡಿ ವಿರುದ್ಧ ದೂರು ದಾಖಲಾಗಿತ್ತು.

    ಬಾಣಂತಿ ಮೃತಪಟ್ಟ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ದಾಖಲಾದ ಪ್ರಕರಣದ ತನಿಖೆಗೆ ಇಳಿದ ಪಿಎಸ್‍ಐ ಕೃಷ್ಣ ನಾಯ್ಕ್ ವೈದ್ಯರ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಲು ಬರೋಬ್ಬರಿ ಮೂರು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆ. ಅಷ್ಟೇ ಅಲ್ಲದೆ ಗುಡೇಕೋಟೆ ವೈದ್ಯಾಧಿಕಾರಿ ಮಧುಕುಮಾರ್ ಬಳಿಯೂ ಈಗಾಗಲೇ ಮೂರು ಲಕ್ಷ ರೂ. ಲಂಚ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಪ್ರಕರಣದ ಬಗ್ಗೆ ಈಗಾಗಲೇ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆಯಾದ ನಂತರವೂ ಬಾಣಂತಿಗೆ ಆಪರೇಷನ್, ಚಿಕಿತ್ಸೆ ನೀಡದಿದ್ದರೂ ಪ್ರಕರಣದಲ್ಲಿ ಆರೋಪಿಯಾಗಿರುವ ವೈದ್ಯ ಪ್ರಕಾಶ್ ರೆಡ್ಡಿ ಅವರಿಗೂ ಮೂರು ಲಕ್ಷ ರೂಪಾಯಿ ಲಂಚ ನೀಡುವಂತೆ ಪಿಎಸ್‍ಐ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ನಿಮ್ಮ ಬಳಿ ಹಣ ಇಲ್ಲದಿದ್ದರೆ ಏನಾಯ್ತು ಪೊಸ್ಟ್ ಡೇಟ್ ಚೆಕ್ ನೀಡಿ, ಇಲ್ಲದಿದ್ದರೆ ನಿಮ್ಮ ಮನೆ ಮುಂದೆ ಆಪ್ತನನ್ನು ಕಳುಹಿಸಿ ಲಂಚ ವಸೂಲಿ ಮಾಡಿಸುತ್ತೀನಿ ಎಂದು ಭ್ರಷ್ಟ್ ಪಿಎಸ್‍ಐ ಹೇಳಿದ್ದಾರೆ.

    ವೈದ್ಯಕೀಯ ಚಿಕಿತ್ಸೆ ವೇಳೆ ರೋಗಿಗಳು ಮೃತಪಡೋದನ್ನು ನಾವೂ ನೋಡಿರುತ್ತೇವೆ. ಆದರೆ ಆಪರೇಷನ್ ಮಾಡದಿದ್ದರೂ ಚಿಕಿತ್ಸೆ ನೀಡದಿದ್ದರೂ ಪ್ರಕರಣದಲ್ಲಿ ಆರೋಪಿಯಾದ ವೈದ್ಯರ ಬಳಿ ಮೂರು ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟು ಪಿಎಸ್‍ಐ ಇದೀಗ ಸಿಕ್ಕಿಕೊಂಡಿದ್ದಾರೆ. ವೈದ್ಯರಿಗೆ ಪಿಎಸ್‍ಐ ಹಾಗೂ ಪಿಎಸ್‍ಐ ಆಪ್ತ ವ್ಯಕ್ತಿಯೊಬ್ಬರು ಲಂಚದ ಹಣಕ್ಕಾಗಿ ಬೇಡಿಕೆಯಿಟ್ಟು ಕಿರುಕುಳ ನೀಡಿದ ಆಡಿಯೋಗಳು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲಕ್ಷ ಕೊಡಿ, ಮರಳು ಹೊಡಿ ಸ್ಕೀಂ-ಅಕ್ರಮ ಮರಳು ವ್ಯವಹಾರಕ್ಕೆ ಪೊಲೀಸರೇ ಪೋಷಕರು

    ಲಕ್ಷ ಕೊಡಿ, ಮರಳು ಹೊಡಿ ಸ್ಕೀಂ-ಅಕ್ರಮ ಮರಳು ವ್ಯವಹಾರಕ್ಕೆ ಪೊಲೀಸರೇ ಪೋಷಕರು

    -ಘಟನೆ ಬೆಳಕಿಗೆ ಬರ್ತಿದ್ದಂತೆ ಪೊಲೀಸ್ ಅಧಿಕಾರಿಗಳೇ ಮಿಸ್ಸಿಂಗ್

    ಶಿವಮೊಗ್ಗ: ಇದು ಲಕ್ಷ ಕೊಡಿ, ಮರಳು ಹೊಡಿ ಸ್ಕೀಂ ಕಥೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಜಾರಿ ಮಾಡಿರುವ ಅಕ್ರಮ ಸ್ಕೀಂ ಇದಾಗಿದೆ. ಸ್ಕೀಂ ಜಾರಿ ಮಾಡಿದ ಪೊಲೀಸ್ ಅಧಿಕಾರಿಗಳು ಸದ್ಯ ತಲೆಮರೆಸಿಕೊಂಡಿದ್ದಾರೆ. ಸಾಮಾನ್ಯ ಪೊಲೀಸ್ ಪೇದೆಯಿಂದ ಇಡೀ ಪ್ರಕರಣ ಬೆಳಕಿಗೆ ಬಂದಿದೆ.

    ಜಿಲ್ಲೆಯಲ್ಲಿ ಮರಳು ಮಾಫಿಯಾವನ್ನು ಪೊಲೀಸರೇ ಅಪ್ಪ-ಅಮ್ಮ ಎರಡೂ ಆಗಿ ಸಾಕುತ್ತಿದ್ದಾರೆ. ಜಿಲ್ಲೆಯ ಪೊಲೀಸರಿಗೆ ಪ್ರತಿ ತಿಂಗಳು 1 ಲಕ್ಷ ರೂಪಾಯಿ ನೀಡಿದ್ರೆ ಬೇಕಾದಷ್ಟು ಮರಳನ್ನು ಬೇಕಾದ ಜಾಗದಿಂದ ಅಕ್ರಮವಾಗಿ ಎಲ್ಲಿಗೆ ಬೇಕಾದರೂ ಸಾಗಿಸಬಹುದು. ಈ ಅಕ್ರಮದ ಪಾಲುದಾರರಾದ ಶಿವಮೊಗ್ಗ ಡಿಎಸ್‍ಪಿ ಸುದರ್ಶನ್ ಹಾಗೂ ಎಸ್‍ಐ ಭಾರತಿ ಅವರು ಹಾಗೂ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ ಪೆಕ್ಟರ್ ಕುಮಾರಸ್ವಾಮಿ ಬಂಧನದ ಭೀತಿಯಲ್ಲಿ ರಜೆ ಹಾಕಿ ಹೋಗಿದ್ದಾರೆ. ಡಿಎಸ್‍ಪಿ ಹಾಗೂ ಎಸ್‍ಐ ಶಿವಮೊಗ್ಗ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಆದರೆ, ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರಸ್ವಾಮಿ ಇದರಲ್ಲಿ ನನ್ನದೇನೂ ಪಾತ್ರ ಇಲ್ಲ. ಎಸಿಬಿ ವಿಚಾರಣೆ ಎದುರಿಸಲು ಸಿದ್ಧ ಎನ್ನುತ್ತಿದ್ದಾರೆ. ಇವರೆಲ್ಲರನ್ನೂ ಅವರಿದ್ದ ಹುದ್ದೆಯಿಂದ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.

    ಈ ಸ್ಕೀಂ ಬೆಳಕಿಗೆ ಬಂದದ್ದೇ ವಿಶೇಷವಾಗಿದೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪಿಸಿ ಬಿ.ಕೆ.ಯಲ್ಲಪ್ಪ ಎಂಬಾತ ಎಸಿಬಿಗೆ ಟ್ರ್ಯಾಪ್ ಆದ ಮೇಲೆ ಇಲಾಖೆಯ ಹಿರಿಯ ಅಧಿಕಾರಿಗಳ ಬಣ್ಣ ಬಯಲಾಗಿದೆ. ಎಸಿಬಿಗೆ ಚನ್ನಗಿರಿಯ ಫೈರೋಜ್ ನೀಡಿರುವ ದೂರಿನಲ್ಲಿ ಈ ಕುರಿತು ಸಮಗ್ರ ಮಾಹಿತಿ ನೀಡಿದ್ದಾನೆ. ಮರಳು ಸಾಗಿಸಲು ಅನುಮತಿಗಾಗಿ ಓಡಾಡುತ್ತಿದ್ದ ಫೈರೋಜ್ ಗೆ ಗ್ರಾಮಾಂತರ ಪೊಲೀಸರ ನೆರವು ಪಡೆದರೆ ದಂಧೆ ನಡೆಸುವುದು ಸುಲಭ ಎಂಬ ಮಾಹಿತಿ ದೊರಕುತ್ತದೆ.

    ಈ ವೇಳೆ ಗ್ರಾಮಾಂತರ ಠಾಣೆ ಪೊಲೀಸ್ ಪೇದೆ ಯಲ್ಲಪ್ಪನನ್ನು ಸಂಪರ್ಕ ಮಾಡುತ್ತಾರೆ. ಯಲ್ಲಪ್ಪ ಡಿಎಸ್ಪಿ ಸುದರ್ಶನ್ ಹಾಗೂ ಇನ್ಸ್ ಪೆಕ್ಟರ್ ಭಾರತಿ ಅವರನ್ನು ಭೇಟಿ ಮಾಡಿಸುತ್ತಾನೆ. ಅಕ್ರಮ ಮರಳು ಸಾಗಾಣಿಕೆಗೆ ಮಾತುಕತೆ ನಡೆಸಿದ ಸ್ವತಃ ಡಿಎಸ್ ಪಿ ಸುದರ್ಶನ್ ಅವರು, ಎಷ್ಟು ಲಾರಿಗಳಿವೆ? ಲಾರಿ ನಂಬರ್ ಬರೆಸು ಎಂದು ಹೇಳುತ್ತಾರೆ. ನಂತರ ಪ್ರತಿ ತಿಂಗಳು ಒಂದು ಲಕ್ಷ ರೂಪಾಯಿ ಕೊಡಲು ಸೂಚನೆ ನೀಡುತ್ತಾರೆ. ಈ ಒಂದು ಲಕ್ಷ ರೂಪಾಯಿಯನ್ನು ಹದಿನೈದು ದಿನಕ್ಕೊಮ್ಮೆ 50 ಸಾವಿರದಂತೆ ನೀಡಲು ಪುಸ್ತಕದಲ್ಲಿ ಲೆಕ್ಕ ಬರೆಯುತ್ತಾರೆ. ಈ 50 ಸಾವಿರದಲ್ಲಿ 32 ಸಾವಿರ ರೂಪಾಯಿ ಮೊದಲು ನೀಡಿದ್ದು, ಉಳಿದ 17 ಸಾವಿರ ನೀಡಲು ಒತ್ತಾಯ ಮಾಡಿದಾಗ ಫೈರೋಜ್ ಎಸಿಬಿಗೆ ದೂರು ನೀಡಿದ್ದಾನೆ. ಈ 17 ಸಾವಿರ ರೂಪಾಯಿ ಪಡೆಯುವಾಗ ಯಲ್ಲಪ್ಪ ಎಸಿಬಿ ಬಲೆಗೆ ಸಿಲುಕಿ, ಈಗ ಇಲಾಖೆ ಹಿರಿಯ ಅಧಿಕಾರಿಗಳ ಮುಖವಾಡ ಬಯಲು ಮಾಡಿದ್ದಾನೆ.

     

    ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿ ನಾಪತ್ತೆ ಆಗಿದ್ದ ಡಿಎಸ್ ಪಿ ಸುದರ್ಶನ್ ಹಾಗೂ ಎಸ್ ಐ ಭಾರತಿ ಅವರಿಗೆ ಜಾಮೀನು ದೊರಕಿದೆ. ಆದರೆ, ಎಸಿಬಿ ಹಾಗೂ ಪೊಲೀಸ್ ಇಲಾಖೆ ಈ ಬಗ್ಗೆ ಸಮಗ್ರ ತನಿಖೆ ನಡೆಸಿದರೆ ಮಾತ್ರ ಮರಳು ದಂಧೆಯ ಕರಾಳ ಸ್ವರೂಪ ಹಾಗೂ ಅದರ ಹಿಂದೆ ಇರುವ ಹಿರಿಯ ಅಧಿಕಾರಿಗಳ ವಿವರ ಬಯಲಿಗೆ ಬರಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

    ಸರ್ಕಾರಿ ಸೌಲಭ್ಯ ಕೇಳಿದ್ರೆ ಲಂಚ ಕೇಳ್ತಾರೆ, ಇಲ್ಲಂದ್ರೆ ಮಂಚಕ್ಕೆ ಕರೀತಾರೆ – ಸಿಎಂ ಎಚ್‍ಡಿಕೆ ಕಾರ್ಯಕ್ರಮದಲ್ಲಿ ಮಹಿಳೆ ಅಳಲು

    ಚಿಕ್ಕಬಳ್ಳಾಪುರ: ಸರ್ಕಾರಿ ಸೌಲಭ್ಯ ಕೇಳಿಕೊಂಡು ಹೋದರೆ ಲಂಚ ಕೇಳುತ್ತಾರೆ ಇಲ್ಲ ಅಂದರೆ ಮಂಚಕ್ಕೆ ಕರೀತಾರೆ ಎಂದು ಸಿಎಂ ಕುಮಾರಸ್ವಾಮಿ ಅವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಸಿಎಂ ಮುಂದೆ ಅಳಲು ತೋಡಿಕೊಂಡಿದ್ದಾರೆ.

    ರೈತರ ಸಾಲಮನ್ನಾ ಯೋಜನೆಯ ಋಣಮುಕ್ತ ಪತ್ರ ವಿತರಿಸಲು ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಮಹಿಳೆ ಸಿಎಂ ಬಳಿ ತಮ್ಮ ಅಳಲು ತೋಡಿಕೊಳ್ಳಲು ಪ್ರಯತ್ನಿಸಿದರು. ಸಿಎಂ ಅವರಿಗೆ ತಮ್ಮ ಮನವಿ ತಿಳಿಸಲು ತೆರಳಿದ್ದ ವೇಳೆ ಮಧ್ಯ ಪ್ರವೇಶಿದ ಪೊಲೀಸರು ಮಹಿಳೆಯನ್ನು ಕಾರ್ಯಕ್ರಮ ಸ್ಥಳದಿಂದ ಹೊರ ಕರೆತಂದರು.

    ದೊಡ್ಡಬಳ್ಳಾಪುರ ನಗರ ಶಾಂತಿ ನಗರದ ನಿವಾಸಿಯಾದ ಛಾಯಾ ಅವರು ಸಿಎಂ ಬಳಿ ತಮ್ಮ ಸಮಸ್ಯೆ ಮುಂದಿಟ್ಟು ಸಹಾಯ ಕೇಳಲು ಪ್ರಯತ್ನಿಸಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ, ನನ್ನ ಪತಿ ಅಪಘಾತವೊಂದರಲ್ಲಿ ಕೈ ಮುರಿದುಕೊಂಡು ಅಂಗವಿಕಲರಾಗಿದ್ದರು. ಈ ವೇಳೆ ಕುಟುಂಬವನ್ನು ನಿರ್ವಹಿಸಲಾಗದೆ ಆತ್ಮಹತ್ಯೆ ಮಾಡಿಕೊಂಡರು. ನನಗೆ ಇಬ್ಬರು ಮಕ್ಕಳಿದ್ದು, ಅವರಿಗೆ ಶಿಕ್ಷಣ ಕೊಡಿಸಲು ಕೂಡ ನನಗೆ ಕಷ್ಟವಾಗಿದೆ ಎಂದರು.

    ಸ್ವಾಭಿಮಾನದಿಂದ ಬದಲು ಬಯಸಿ ಸರ್ಕಾರದ ಯೋಜನೆಗಳ ಸಹಾಯ ಪಡೆಯಲು ತೆರಳಿದರೆ ಲಂಚ ಕೇಳುತ್ತಾರೆ. ಹಣ ಇಲ್ಲ ಎಂದರೆ ನೀನೇ ಬಾ ಎಂದು ಕರೆಯುತ್ತಾರೆ ಎಂದು ಎಂದು ಹೇಳಿ ಕಣ್ಣೀರಿಟ್ಟರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 1 ಲಕ್ಷ ರೂ. ಬಿಲ್‍ಪಾಸ್‍ಗೆ ಶೇ.10 ಕಮಿಷನ್ ಕೇಳುತ್ತಿದ್ದ ಆಸಾಮಿ ಎಸಿಬಿ ಬಲೆಗೆ

    1 ಲಕ್ಷ ರೂ. ಬಿಲ್‍ಪಾಸ್‍ಗೆ ಶೇ.10 ಕಮಿಷನ್ ಕೇಳುತ್ತಿದ್ದ ಆಸಾಮಿ ಎಸಿಬಿ ಬಲೆಗೆ

    ಗದಗ: ನಗರದ ಕಾರ್ಯನಿರ್ವಾಹಕ ಅಭಿಯಂತರ ಉಪವಿಭಾಗಿಯ ಕಚೇರಿಯ ಡಾಟಾ ಎಂಟ್ರಿ ನೌಕರನೋರ್ವ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾನೆ.

    ವಿವೇಕಾನಂದ ಕಿಲ್ಲಿಪುಟ್ಟಿ ಎಸಿಬಿ ಬಲೆಗೆ ಬಿದ್ದ ಡಾಟಾ ಎಂಟ್ರಿ ನೌಕರ. ವಿವೇಕಾನಂದ ನಗರದ ಭೀಷ್ಮಕೆರೆ ಸಮೀಪ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದ. ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದಲ್ಲಿ 8.90 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿ ಮಾಡಲಾಗಿತ್ತು. ಅದರ ಬಾಕಿಬಿಲ್ ಪಾವತಿ ಮಾಡಲು ಗುತ್ತಿಗೆದಾರನಿಗೆ 85 ಸಾವಿರ ರೂ. ಬೇಡಿಕೆ ಇಟ್ಟಿದ್ದ.

    ಅಷ್ಟೇ ಅಲ್ಲದೆ ಬಿಲ್‍ಪಾಸ್ ಮಾಡಲು ಗುತ್ತಿಗೆದಾರರಿಂದ 1 ಲಕ್ಷ ರೂ.ಗೆ ಶೇ.10ರಷ್ಟು ಕಮಿಷನ್ ಪಡೆಯುತ್ತಿದ್ದ. ಹೀಗೆ ಲಂಚ ಪಡೆಯುವಂತೆ ಕಾರ್ಯನಿರ್ವಾಹಕ ಅಭಿಯಂತರ ಹಿರಿಯ ಅಧಿಕಾರಿ ಆರ್.ಜಿ.ಪಾಟೀಲ್ ಸೂಚನೆ ನೀಡಿದ್ದ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಗುತ್ತಿಗೆದಾರ ಪ್ರಕಾಶ ಅವರು ಎಸಿಬಿ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.

    ಅಧಿಕೃತ ಮಾಹಿತಿ ಮೇರೆಗೆ ಎಸಿಬಿ ಡಿವೈಎಸ್‍ಪಿ ವಾಸುದೇವ ರಾಮ್ ಹಾಗೂ ಸಿಪಿಐ ಆನಂದ ನೇತೃತ್ವದಲ್ಲಿ ದಾಳಿಮಾಡಿದಾಗ ಲಂಚ ಪಡೆಯುವ ವೇಳೆ ರೆಡ್ ಹ್ಯಾಂಡ್ ಆಗಿ ವಿವೇಕಾನಂದ ಸಿಕ್ಕಿಬಿದ್ದಿದ್ದಾನೆ. ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಕಡತಗಳ ಪರಿಶೀಲನೆಗೆ ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv