Tag: ಲಂಚ

  • ಜನಾರ್ದನ ರೆಡ್ಡಿಯಿಂದ ಜಡ್ಜ್ ಡೀಲ್: ಸತ್ಯ ಬಿಚ್ಚಿಟ್ಟ ನ್ಯಾಯಮೂರ್ತಿ ಶರ್ಮಾ

    ಜನಾರ್ದನ ರೆಡ್ಡಿಯಿಂದ ಜಡ್ಜ್ ಡೀಲ್: ಸತ್ಯ ಬಿಚ್ಚಿಟ್ಟ ನ್ಯಾಯಮೂರ್ತಿ ಶರ್ಮಾ

    ಹೈದರಾಬಾದ್: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಜಾಮೀನಿಗಾಗಿ 40 ಕೋಟಿ ರೂ. ಆಮಿಷವೊಡ್ಡಿದ್ದ ಸತ್ಯವನ್ನು ಸಿಬಿಐನ ಮಾಜಿ ವಿಶೇಷ ನ್ಯಾಯಾಧೀಶ ಬಿ.ನಾಗಮಾರುತಿ ಶರ್ಮಾ ಬಹಿರಂಗಪಡಿಸಿದ್ದಾರೆ.

    ಗಣಿಧಣಿ ಜನಾರ್ದನ ರೆಡ್ಡಿ 2012ರಲ್ಲಿ ಬಂಧನವಾಗಿದ್ದರು. ಈ ವೇಳೆ ರೆಡ್ಡಿ ಅವರು ಜಾಮೀನಿಗಾಗಿ ಹಣದ ಆಮಿಷವೊಡ್ಡಿದ್ದರು ಎಂದು ಶರ್ಮಾ ಅವರು ಹೈದರಾಬಾದ್‍ನ ಎಸಿಬಿ ಕೋರ್ಟಿನ ಜಡ್ಜ್ ಎದುರು ವಿವರವಾಗಿ ಹೇಳಿಕೆ ನೀಡಿದ್ದಾರೆ.

    ಜನಾರ್ದನ ರೆಡ್ಡಿ ಪರವಾಗಿ ಆಂಧ್ರ ಹೈಕೋರ್ಟ್ ರಿಜಿಸ್ಟ್ರಾರ್ ನನ್ನ ಮುಂದೆ ಲಂಚದ ಪ್ರಸ್ತಾವನ್ನಿಟ್ಟಿದ್ದರು. ಆದರೆ ನಾನು ಈ ಪ್ರಸ್ತಾಪವನ್ನು ಸಂಪೂರ್ಣವಾಗಿ ತಿರಸ್ಕರಿಸಿ ರಿಜಿಸ್ಟ್ರಾರ್ ಮನೆಯಿಂದ ಹೊರ ನಡೆದೆ ಎಂದಿದ್ದಾರೆ.

    ವಿಚಿತ್ರ ಅಂದರೆ ಶರ್ಮಾ ಅವರು ಈ ಹೇಳಿಕೆ ನೀಡುವಾಗ ಜನಾರ್ದನ ರೆಡ್ಡಿ ನ್ಯಾಯಾಲಯದಲ್ಲಿ ಹಾಜರಿದ್ದರು. ನಿಷ್ಕಳಂಕ ವ್ಯಕ್ತಿತ್ವದ ನಾಗಮಾರುತಿ ಶರ್ಮಾ, ಮೊದಲಿಗೆ ರೆಡ್ಡಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದರು. ನಂತರ ಮತ್ತೊಂದು ಕೋರ್ಟಿಗೆ ವರ್ಗವಾದಾಗ ಪಟ್ಟಾಭಿರಾಮ ರಾವ್ ನೇಮಕವಾಗಿದ್ದರು. ಪಟ್ಟಾಭಿರಾಮರಾವ್ ಅವರು ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡಿದ್ದರು. ಆದರೆ ಕೆಲವು ದಿನಗಳ ಬಳಿಕ ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಹಾಗೂ ಎಸಿಬಿ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ, ಪಟ್ಟಾಭಿರಾಮರಾವ್ ಅವರನ್ನು ಬಂಧಿಸಿ, ಜೈಲಿಗೆ ತಳ್ಳಿದ್ದರು. 2012ರಲ್ಲಿ ಸಿಬಿಐ ಅಧಿಕಾರಿಗಳು ಲಕ್ಷ್ಮಿ ನರಸಿಂಹ ರಾವ್ ಅವರನ್ನು ಬಂಧಿಸಿದ್ದರು.

    ಈ ಪ್ರಕರಣದ ಸಂಬಂಧ ಬಿ.ನಾಗಮಾರುತಿ ಶರ್ಮಾ ಹೇಳಿಕೆಯನ್ನು ದಾಖಲಿಸಿಕೊಂಡ ಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ಮುಂದೂಡಿದೆ.

  • ಭಾವಿ ಪತ್ನಿಯಿಂದ ಲಂಚ ಸ್ವೀಕರಿಸಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಇನ್ಸ್‌ಪೆಕ್ಟರ್

    ಭಾವಿ ಪತ್ನಿಯಿಂದ ಲಂಚ ಸ್ವೀಕರಿಸಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದ ಇನ್ಸ್‌ಪೆಕ್ಟರ್

    ಜೈಪುರ: ರಾಜಸ್ಥಾನದ ಪೊಲೀಸ್ ಅಧಿಕಾರಿಯೊಬ್ಬರು ಕ್ರಿಯೇಟಿವಿಟಿ ತೋರಿಸಲು ತಮ್ಮ ಭಾವಿ ಪತ್ನಿಯಿಂದ ಲಂಚ ಸ್ವೀಕರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ.

    ಮದುವೆಗೂ ಮುನ್ನ ಪ್ರಿ ವೆಡ್ಡಿಂಗ್ ವಿಡಿಯೋ ಶೂಟ್ ಮಾಡುವ ಟ್ರೆಂಡ್ ಈಗ ಜಾಸ್ತಿ ಆಗುತ್ತಿದೆ. ಇದೇ ರೀತಿ ವಿಭಿನ್ನವಾಗಿ ಶೂಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗಳಿಸಲೆಂದು ವಿಡಿಯೋ ಮಾಡಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಈಗ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಉದಯ್‍ಪುರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಧನ್‍ಪತ್ ಪತ್ನಿಯ ಜೊತೆ ಲವ್ ಸಂಬಂಧವನ್ನು ತೋರಿಸಲು ಪ್ರಿ ವೆಡ್ಡಿಂಗ್ ವಿಡಿಯೋ ಶೂಟ್ ಮಾಡಿಸಿದ್ದರು. ವಿಡಿಯೋದಲ್ಲಿ ಪತ್ನಿಯಾಗಿರುವ ಕಿರಣ್ ಸ್ಕೂಟಿಯೊಂದನ್ನು ಹತ್ತಿ ರಸ್ತೆಯಲ್ಲಿ ಬರುತ್ತಿರುತ್ತಾಳೆ. ಈ ಸಂದರ್ಭದಲ್ಲಿ ಧನ್‍ಪತ್ ರಸ್ತೆಯಲ್ಲಿ ವಾಹನ ತಪಾಸಣೆ ಮಾಡುತ್ತಿರುತ್ತಾರೆ. ಹೆಲ್ಮೆಟ್ ಹಾಕದೇ ಇರುವುದನ್ನು ಕಂಡು ಕಿರಣ್ ಗೆ ಗಾಡಿ ನಿಲ್ಲಿಸಲು ಸೂಚಿಸುತ್ತಾರೆ.

    ಇದಾದ ಬಳಿಕ ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿದ್ದಕ್ಕಾಗಿ ಕಿರಣ್‍ಗೆ ಧನಪತ್ ದಂಡ ವಿಧಿಸುತ್ತಾರೆ. ಆದರೆ ಕಿರಣ್ ದಂಡ ಪಾವತಿಸದೇ ಧನಪತ್ ಅವರ ಕಿಸೆಗೆ ನೋಟು ತುರುಕಿದ್ದಾಳೆ. ನೋಟು ಬಿದ್ದ ನಂತರ ಅಚ್ಚರಿಗೊಂಡು ಆಕೆಯನ್ನು ನೋಡುತ್ತಾ ಧನ್‍ಪತ್ ನಿಂತಿದ್ದಾಗ ಅವರ ಪರ್ಸ್ ಕಿತ್ತುಕೊಂಡು ಕಿರಣ್ ಪರಾರಿಯಾಗಿದ್ದಳು.

    ಈ ಪರ್ಸ್ ಪತ್ತೆ ಹಚ್ಚಿ ಕಿರಣ್‍ಳನ್ನು ಧನ್‍ಪತ್ ಭೇಟಿಯಾಗುತ್ತಾರೆ. ಈ ಭೇಟಿಯ ಬಳಿಕ ಇಬ್ಬರ ನಡುವೆ ಮಾತುಕತೆ ಆರಂಭವಾಗಿ ನಂತರ ಅದು ಪ್ರೀತಿಗೆ ತಿರುಗುತ್ತದೆ. ಈ ಲವ್ ಸ್ಟೋರಿಯ ವಿಡಿಯೋ ಯೂ ಟ್ಯೂಬಿಗೆ ಅಪ್ಲೋಡ್ ಆಗುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಕೆಂಡಾಮಂಡಲವಾಗಿದ್ದಾರೆ.

    ಸಮವಸ್ತ್ರವನ್ನು ದುರುಪಯೋಗಪಡಿಸಿಕೊಂಡಿದ್ದು ಮಾತ್ರವಲ್ಲದೇ ಪತ್ನಿಯಿಂದ ಲಂಚ ಸ್ವೀಕರಿಸುವ ಮೂಲಕ ಪೊಲೀಸ್ ಇಲಾಖೆಗೆ ಧನ್‍ಪತ್ ಅಗೌರವ ತೋರಿಸಿದ್ದಾರೆ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಐಜಿಪಿ ಡಾ. ಹವಾ ಸಿಂಗ್ ಘೋಮಾರಿಯಾ ಎಲ್ಲಾ ವಲಯಗಳ ಇನ್ಸ್‌ಪೆಕ್ಟರ್ ಅವರಿಗೆ ನೋಟಿಸ್ ಜಾರಿ ಮಾಡಿ, ಪೊಲೀಸ್ ಸಮವಸ್ತ್ರವನ್ನು ದುರುಪಯೋಗಪಡಿಸಿಕೊಳ್ಳುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಚರ್ಚೆ ಜೋರಾಗುತ್ತಿದ್ದಂತೆ ಯೂಟ್ಯೂಬ್‍ನಿಂದ ಈಗ ಈ ವಿಡಿಯೋವನ್ನು ತೆಗೆದು ಹಾಕಲಾಗಿದೆ.

  • ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐನ ಲಂಚಾವತಾರ

    ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐನ ಲಂಚಾವತಾರ

    ರಾಯಚೂರು: ಹಾಡಹಗಲೇ ನಡು ರಸ್ತೆಯಲ್ಲಿ ಟ್ರಾಫಿಕ್ ಎಎಸ್‍ಐ ಒಬ್ಬರು ಲಂಚ ಪಡೆಯುತ್ತಿರುವ ಘಟನೆ ರಾಯಚೂರಿನ ಹೆದ್ದಾರಿಯಲ್ಲಿ ನಡೆದಿದೆ.

    ರಾಯಚೂರು ನಗರದ ಮಧ್ಯೆ ಹಾದು ಹೋಗುವ ನಂದಿ ದೇವಾಸ್ಥಾನದ ಹತ್ತಿರದ ಹೆದ್ದಾರಿಯಲ್ಲಿ ಟ್ರಾಫಿಕ್ ಪೊಲೀಸರೊಬ್ಬರು ಆಂಧ್ರ ಮೂಲದ ಟ್ರಕ್ ಚಾಲಕನಿಂದ 300 ರೂಪಾಯಿ ಲಂಚ ಪಡೆಯುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.

    ದ್ವಿಚಕ್ರ ವಾಹನ, ಕಾರು, ಗೂಡ್ಸ್ ವಾಹನ ಮತ್ತು ಲಾರಿ ದಾಖಲೆ ಪರಿಶೀಲಿಸಿ ದಂಡ ವಿಧಿಸಬೇಕಾದ ಪೊಲೀಸರು ಲಂಚ ವಸೂಲಿ ದಂಧೆ ಮಾಡುತ್ತಿದ್ದಾರೆ. ವಿಡಿಯೋ ಮಾಡುತ್ತಿದ್ದರೂ ಕ್ಯಾರೆ ಎನ್ನದ ನಗರ ಟ್ರಾಫಿಕ್ ಪೊಲೀಸ್ ಠಾಣೆಯ ಎಎಸ್‍ಐ ಲಂಚ ತೆಗೆದುಕೊಳ್ಳುವಲ್ಲಿ ಮಗ್ನನಾಗಿದ್ದಾರೆ.

    ಪೊಲೀಸರಿಗೆ ಹಣ ನೀಡಿ ರಶೀದಿ ಪಡೆಯದೇ ದಾರಿಯುದ್ದಕ್ಕೂ ಎಷ್ಟು ಜನರಿಗೆ ಕೋಡಬೇಕು ಎಂದು ಲಾರಿ ಚಾಲಕ ಕೇಳಿದ್ದಾರೆ. ಈ ವೇಳೆ ಟ್ರಾಫಿಕ್ ಪೊಲೀಸ್ ಅವರಿವರದ್ದು ಬೇಡ ಇಲ್ಲಿ ಕೊಟ್ಟು ಮುಂದೆ ಹೋಗುತ್ತಾ ಇರು ಎಂದು ರಾಜಾರೋಷವಾಗಿ ಲಂಚ ಪಡೆದು ಬಿಲ್ ನೀಡದೆ ಬಿಟ್ಟು ಕಳಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

  • ಕೈ ನಾಯಕಿ ಕೊಲೆ ಪ್ರಕರಣ-ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪೊಲೀಸ್

    ಕೈ ನಾಯಕಿ ಕೊಲೆ ಪ್ರಕರಣ-ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪೊಲೀಸ್

    ವಿಜಯಪುರ: ಕೈ ನಾಯಕಿ ರೇಷ್ಮಾ ಪಡೇಕನೂರ ಕೊಲೆ ಪ್ರಕರಣದಲ್ಲಿ ಲಂಚ ಪಡೆಯುತ್ತಿದ್ದಾಗ ವಿಜಯಪುರ ಜಿಲ್ಲಾ ಪೊಲೀಸರೊಬ್ಬರು ಮಹಾರಾಷ್ಟ್ರದ ಎಸಿಬಿ ಬಲೆಗೆ ಬಿದ್ದಿದ್ದಾರೆ.

    ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಉಪವಿಭಾಗದ ರೈಟರ್ ಮಲ್ಲಿಕಾರ್ಜುನ ಪೂಜಾರಿ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರಿಯಾಜ್ ಕೊಕಟನೂರ್ ಎಂಬವರಿಂದ ಒಂದು ಲಕ್ಷ ರೂ. ಲಂಚ ಪಡೆಯುವಾಗ ಸೋಲಾಪುರ ಎಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ.

    ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ತೌಫಿಕ್ ಪೈಲ್ವಾನ್ ಕುಟುಂಬಸ್ಥರಿಗೆ ಬಸವನಬಾಗೇವಾಡಿ ಉಪವಿಭಾಗದ ಡಿವೈಎಸ್‍ಪಿ ಮಹೇಶ್ವರಗೌಡ ಹಾಗೂ ರೈಟರ್ ಪೂಜಾರಿ ಒಟ್ಟು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರಂತೆ. ನಂತರ ರಿಯಾಜ್ ಎಂಬ ಮಧ್ಯವರ್ತಿ ಮೂಲಕ 1.5 ಲಕ್ಷ ರೂ.ಗೆ ಈ ವ್ಯವಹಾರ ಕುದುರಿಸಿದ್ದನಂತೆ ಎಂದು ಹೇಳಲಾಗಿದೆ.

    ಇದಕ್ಕೆ ಒಪ್ಪಿದ್ದ ಪೈಲ್ವಾನ್ ಕುಟುಂಬಸ್ಥರು 1 ಲಕ್ಷ ನೀಡಲು ಒಪ್ಪಿದ್ದರಂತೆ. ಈ ಲಂಚದ ಹಣ ಪಡೆಯಲು ಬಂದಾಗ ನಿನ್ನೆ ರಾತ್ರಿ ಸೋಲಾಪುರ ಎಸಿಬಿ ಅಧಿಕಾರಿಗಳು ಪೂಜಾರಿ ಹಾಗೂ ರಿಯಾಜ್ ಇಬ್ಬರನ್ನು ಸೆರೆ ಹಿಡಿದಿದ್ದಾರೆ. ಅಲ್ಲದೆ ಡಿವೈಎಸ್‍ಪಿ ಮಹೇಶ್ವರಗೌಡರನ್ನು ಬಂಧಿಸಲು ಒಂದು ತಂಡವನ್ನು ವಿಜಯಪುರಕ್ಕೆ ಕಳುಹಿಸಿರುವುದಾಗಿ ಎಸಿಬಿ ಅಧಿಕಾರಿ ಅಜಿತ್ ಜಾಧವ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.

  • ಲಂಚ ಕೇಳಿದ್ದ ಆರೋಪ- ಮೂವರು NIA ಅಧಿಕಾರಿಗಳ ವರ್ಗಾವಣೆ

    ಲಂಚ ಕೇಳಿದ್ದ ಆರೋಪ- ಮೂವರು NIA ಅಧಿಕಾರಿಗಳ ವರ್ಗಾವಣೆ

    ನವದೆಹಲಿ: ಲಂಚ ಪಡೆಯಲು ಮುಂದಾದಗಿದ್ದ ಮೂವರು ರಾಷ್ಟ್ರೀಯ ತನಿಖಾ ದಳ(ಎನ್‍ಐಎ)ದ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ ಎಂದು ಎನ್‍ಐಎ ಸ್ಪಷ್ಟಪಡಿಸಿದೆ.

    ಪಾಕಿಸ್ತಾನ ಮೂಲದ ಭಯೋತ್ಪಾದಕ ಹಫೀಜ್ ಸಯ್ಯದ್‍ನ ಉಗ್ರ ಸಂಘಟನೆ ಫಲಾಹ್-ಇ-ಇನ್ಸಾನಿಯತ್ ಫೌಂಡೇಶನ್(ಎಫ್‍ಐಎಫ್)ಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಮೂವರು ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ದೆಹಲಿ ಮೂಲದ ಉದ್ಯಮಿಯೊಬ್ಬರು ಈ ಸಂಘಟನೆಗೆ ಧನ ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಕರಣದಿಂದ ನಿಮ್ಮ ಹೆಸರನ್ನು ಕೈ ಬಿಡಬೇಕಾದ್ರೆ 2 ಕೋಟಿ ರೂ. ಹಣ ನೀಡಬೇಕೆಂದು ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಎನ್‍ಐಎಗೆ ದೂರು ಸಲ್ಲಿಸಿದ್ದರು.

    ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಬೇರೊಂದು ವಿಭಾಗಕ್ಕೆ ವರ್ಗಾವಣೆಗೊಳಿಸಲಾಗಿದೆ. ಓರ್ವ ಹಿರಿಯ ಅಧಿಕಾರಿಯನ್ನು ಎನ್‍ಐಎ ಮತ್ತೊಂದು ವಿಭಾಗಕ್ಕೆ ವರ್ಗಾಯಿಸಿದ್ದು, ಇಬ್ಬರು ಕಿರಿಯ ಅಧಿಕಾರಿಗಳು ಮಾತೃ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಎನ್‍ಐಎ ತಿಳಿಸಿದೆ.

    26/11 ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ನಂತರ ಎನ್‍ಐಎ ಸ್ಥಾಪಿಸಲಾಗಿದೆ. ಭಯೋತ್ಪಾದನೆಯ ಪ್ರಕರಣಗಳನ್ನು ಇದು ಪ್ರತ್ಯೇಕವಾಗಿ ನಿರ್ವಹಿಸಲಿದೆ. ಇತ್ತೀಚೆಗೆ ಎನ್‍ಐಎಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ಕಾಯ್ದೆಗೆ ತಿದ್ದುಪಡಿ ತಂದು ವ್ಯಕ್ತಿಗಳನ್ನು ಭಯೋತ್ಪಾದಕರೆಂದು ಹೆಸರಿಸುವ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿತ್ತು.

  • ಸ್ವಾತಂತ್ರ್ಯ ದಿನ ಬೆಸ್ಟ್ ಕಾನ್ಸ್‌ಟೇಬಲ್ ಪ್ರಶಸ್ತಿ- ಮರುದಿನ ಲಂಚ ಪಡೆದು ಸಿಕ್ಕಿಬಿದ್ದ ಪೇದೆ

    ಸ್ವಾತಂತ್ರ್ಯ ದಿನ ಬೆಸ್ಟ್ ಕಾನ್ಸ್‌ಟೇಬಲ್ ಪ್ರಶಸ್ತಿ- ಮರುದಿನ ಲಂಚ ಪಡೆದು ಸಿಕ್ಕಿಬಿದ್ದ ಪೇದೆ

    ಹೈದರಾಬಾದ್: ಸ್ವಾತಂತ್ರ್ಯ ದಿನಾಚರಣೆಯಂದು ಬೆಸ್ಟ್ ಕಾನ್ಸ್‌ಟೇಬಲ್ ಪ್ರಶಸ್ತಿ ಪಡೆದ ಪೇದೆಯೊಬ್ಬರು, ಪ್ರಶಸ್ತಿ ಪಡೆದ 24 ಗಂಟೆಯಲ್ಲಿ ಲಂಚ ಪಡೆದು ಸಿಕ್ಕಿಬಿದ್ದಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

    ತೆಲಂಗಾಣದ ಮಹಬೂಬ್‍ನಗರದ ಐ-ಟೌನ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪಲ್ಲೆ ತಿರುಪತಿ ರೆಡ್ಡಿ ಲಂಚ ಪಡೆದ ಪೇದೆ. ಇವರಿಗೆ ಸ್ವಾತಂತ್ರ್ಯ ದಿನದಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೆಮಾ ರಾಜೇಶ್ವರಿ ಅವರ ಸಮ್ಮುಖದಲ್ಲಿ ಅಬಕಾರಿ ಸಚಿವ ವಿ.ಶ್ರೀನಿವಾಸ್ ಗೌಡ ಅವರಿಂದ ಬೆಸ್ಟ್ ಕಾನ್ಸ್‌ಟೇಬಲ್ ಎಂಬ ಗೌರವ ಮತ್ತು ಪ್ರಶಸ್ತಿಯನ್ನು ಪಡೆದಿದ್ದರು.

    ಪ್ರಶಸ್ತಿ ಪಡೆದ ಒಂದು ದಿನದೊಳಗೆ ಪೊಲೀಸ್ ಅಧಿಕಾರಿ ಮತ್ತೆ ಲಂಚ ಪಡೆದು ಸುದ್ದಿಯಾಗಿದ್ದಾರೆ. ತಿರುಪತಿ ರೆಡ್ಡಿ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸದೆ ಇರಲು 17,000 ಹಣವನ್ನು ಲಂಚವಾಗಿ ಪಡೆದ ಆರೋಪದ ಮೇಲೆ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಗದು ಸಮೇತ ರೆಡ್ ಹ್ಯಾಂಡ್ ಆಗಿ ಬಂಧಿಸಿದೆ.

    ರಮೇಶ್ ಎಂಬವರು ತಿರುಪತಿ ರೆಡ್ಡಿ ಅವರು ಸರಿಯಾದ ದಾಖಲೆಗಳನ್ನು ಹೊಂದಿದ್ದರೂ ಮರಳು ಸಾಗಿಸುವಾಗ ಲಂಚ ನೀಡುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂದು ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಕೆಲಸ ಆರಂಭಿಸಿದ ಎಸಿಬಿ ಅಧಿಕಾರಿಗಳ ಬಲೆಗೆ ರೆಡ್ಡಿ ಬಿದ್ದಿದ್ದಾರೆ. ನಗದು ಸಮೇತ ಪೇದೆಯನ್ನು ಬಂಧಿಸಿದ ನಂತರ, ರೆಡ್ಡಿ ಅವರನ್ನು ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

    ಕಳೆದ ತಿಂಗಳು ಭ್ರಷ್ಟಾಚಾರ ವಿರೋಧಿ ಅಧಿಕಾರಿಗಳು ಎರಡು ವರ್ಷಗಳ ಹಿಂದೆ ರಾಜ್ಯದ ‘ಅತ್ಯುತ್ತಮ ತಹಶೀಲ್ದಾರ್’ ಎಂದು ಪ್ರಶಸ್ತಿ ಪಡೆದಿದ್ದ, ಕಂದಾಯ ಅಧಿಕಾರಿಯ ಮನೆಯಿಂದ 93.5 ಲಕ್ಷ ನಗದು ಮತ್ತು 400 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದರು.

  • ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ನೀಡಲು ಕೇಳ್ತಾರೆ ಲಂಚ

    ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ನೀಡಲು ಕೇಳ್ತಾರೆ ಲಂಚ

    ಚಿತ್ರದುರ್ಗ: ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಆದರೆ ಅಲ್ಲಿ ಯಾವುದೇ ಚಿಕಿತ್ಸೆ ಹಾಗು ಸೇವೆ ಪಡೆಯಬೇಕೆಂದರೆ ರೋಗಿಗಳು ಹಣ ಕೊಡಲೇಬೇಕು. ಹೀಗಾಗಿ ಆಸ್ಪತ್ರೆಯಲ್ಲಿ ಗಾಡಿ ತಳ್ಳುವ ಸಿಬ್ಬಂದಿ ಸೇರಿದಂತೆ ಹೆರಿಗೆ ವಾರ್ಡಿನಲ್ಲಿರೋ ಸ್ಟಾಫ್ ನರ್ಸ್ ಗಳವರೆಗೆ ಲಂಚ ಕೇಳೋದು ಮಾಮೂಲಿಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಪುಟ್ಟ ಕಂದಮ್ಮಗಳ ಚಿಕಿತ್ಸೆಗಾಗಿ ಬಾಣಂತಿಯರು ಕಾದು ಕುಳಿತಿರುವ ದೃಶ್ಯಗಳು, ರೋಗಿಗಳು ಚಿಕಿತ್ಸೆಗಾಗಿ ಬಂದಿರುವ ದೃಶ್ಯಗಳು ಕಂಡುಬಂದರೆ, ಇನ್ನೊಂದೆಡೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಕಾಣಸಿಗುತ್ತದೆ. ಈ ಆಸ್ಪತ್ರೆ ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಆಸ್ಪತ್ರೆ, ಆದರೆ ಇಲ್ಲಿ ಚಿಕಿತ್ಸೆ ಅನ್ನೋದು ಮರೀಚಿಕೆಯಾಗಿದೆ. ರೋಗಿಗಳ ಸ್ಥಿತಿ ಸ್ವಲ್ಪ ಗಂಭೀರವಾದರೆ ಸಾಕು, ದಾವಣಗೆರೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಇಲ್ಲಿನ ವೈದ್ಯರು ಕಳಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಲ್ಲಿನ ಸಿಬ್ಬಂದಿಗಳಂತೂ ಮಹಾಚತುರರು, ಮಾತು ಆಡಿದರೆ ಹಣ ಕೊಡಿ ಎನ್ನುತ್ತಾರೆ. ತುರ್ತು ಚಿಕಿತ್ಸೆ ಪಡೆದು ವಾರ್ಡ್‍ಗೆ ಶಿಫ್ಟ್ ಆಗಬೇಕೆಂದರೂ ಸಿಬ್ಬಂದಿಗೆ ಲಂಚ ಕೊಡಬೇಕು. ಅಲ್ಲದೆ ಹೆರಿಗೆ ಮಾಡಿಸುವುದರಿಂದ ಹಿಡಿದು ಬಾಣಂತಿಯನ್ನು ವಾರ್ಡಿಗೆ ಕಳುಹಿಸುವಾಗಲೂ ಲಂಚ ಕೊಡಬೇಕು. ಇಲ್ಲವಾದರೆ ಹೆರಿಗೆ ಕೊಠಡಿಯಿಂದ ಬಾಣಂತಿಯನ್ನ ಇಲ್ಲಿನ ಸಿಬ್ಬಂದಿಗಳು ಶಿಫ್ಟ್ ಸಹ ಮಾಡಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಈ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡದ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.

    ಈ ಲಂಚಾವತಾರದಿಂದ ಬೇಸತ್ತ ನಾಗರಿಕರು ಈ ಪ್ರಕರಣದಲ್ಲಿ ರೋಗಿಗಳ ರಕ್ತ ಹೀರುತ್ತಿರುವ ಲಂಚಬಾಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಈ ಬಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಜಯಪ್ರಕಾಶ್ ಅವರನ್ನ ಕೇಳಿದರೆ, ಪ್ರಕರಣ ಕುರಿತು ಆಸ್ಪತ್ರೆಯ ಸಿಬ್ಬಂದಿಯನ್ನ ವಿಚಾರಣೆಗೊಳಪಡಿಸುತ್ತೇವೆ. ಅವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಕಸ ಗುಡಿಸುವವರಿಂದ ಹಿಡಿದು ಆಯುಷ್ಮಾನ್ ಕಾರ್ಡ್ ವಿತರಿಸುವ ಗುಮಾಸ್ತ ಕೂಡ ಲಂಚ ಪಡೆಯುತ್ತಿದ್ದಾರೆ. ಇಷ್ಟೇಲ್ಲ ನಡೆಯುತ್ತಿದ್ದರು ಸಹ ಜಿಲ್ಲಾ ಆರೋಗ್ಯ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎಂದು ನಾಮಫಲಕ ಹಾಕಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಲಂಚಾವತಾರದಲ್ಲಿ ಭಾಗಿಯಾಗಿರೋ ಆರೋಪಿಗಳಿಗೆ ಬಿಸಿ ಮುಟ್ಟಿಸಿ, ಉಳಿದವರನ್ನ ಎಚ್ಚರಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

  • ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ತಹಶೀಲ್ದಾರ್ ಕಚೇರಿ ಮೇಲೆ ಎಸಿಬಿ ದಾಳಿ – ನಕಲಿ ಅಧಿಕಾರಿಯನ್ನು ನೋಡಿ ದಂಗಾದ ಅಧಿಕಾರಿಗಳು

    ವಿಜಯಪುರ: ದಾಳಿ ವೇಳೆ ನಕಲಿ ಅಧಿಕಾರಿಯೊಬ್ಬ ಸಿಕ್ಕಿ ಬಿದ್ದ ಘಟನೆ ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ.

    ಅಧಿಕಾರಿಗಳು ಕೆಲಸ ಮಾಡಿಕೊಡಲು ಲಂಚ ಕೇಳುತ್ತಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಇಂದು ದೇವರ ಹಿಪ್ಪರಗಿ ತಹಶೀಲ್ದಾರ್ ಕಚೇರಿಗೆ ಎಸಿಬಿ ಅಧಿಕಾರಿಗಳಾದ ಡಿಎಸ್‍ಪಿ ಮಲ್ಲೇಶ್ ಹಾಗೂ ಇನ್ಸ್ ಪೆಕ್ಟರ್ ಸಚಿನ್ ಚಲವಾದಿ ದಾಳಿ ನಡೆಸಿದ್ದಾರೆ. ಈ ವೇಳೆ ಚಂದ್ರಹಾಸ ಹೊಸಮನಿ ನಕಲಿ ಅಧಿಕಾರಿಯಾಗಿ ಅಲ್ಲಿ ಕೆಲಸ ಮಾಡುತ್ತಿರುವುದು ಕಂಡುಬಂದಿದೆ.

    ಸರ್ಕಾರಿ ಸಿಬ್ಬಂದಿಯಂತೆ ತಹಶೀಲ್ದಾರ್ ಕಚೇರಿಯಲ್ಲೇ ಪ್ರತ್ಯೇಕ ಟೇಬಲ್, ಪ್ರತ್ಯೇಕ ತಿಜೋರಿ ಹೊಂದಿದ್ದ ಹೊಸಮನಿ ಸಿಂಧುತ್ವ ನೀಡಲು ಹಣಮಂತ ರೆಡ್ಡಿ ಎಂಬುವರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂಬಂಧ ಹಣಮಂತ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ನಕಲಿ ಅಧಿಕಾರಿ ಅನ್ನೋದು ಬಯಲಾಗಿದೆ.

    ಸಿಂಧುತ್ವ ವಿಭಾಗದ ಅಧಿಕಾರಿ ಎಂದು ಹೇಳಿಕೊಂಡಿದ್ದ ಹೊಸಮನಿ, ಜನರಿಂದ ಸಿಂಧುತ್ವಕ್ಕಾಗಿ ಹಣ ಪಡೆಯುತ್ತಿದ್ದ. ಈ ಚಂದ್ರಹಾಸ ಹೊಸಮನಿ ಮೂಲಕವೇ ತಹಶೀಲ್ದಾರ್ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲಾಗುತಿತ್ತು ಎಂದು ಸಾರ್ವಜನಿಕರ ಆರೋಪ ಮಾಡಿದ್ದಾರೆ. ಹೊಸಮನಿಯನ್ನು ತಹಶೀಲ್ದಾರ್ ಕಚೇರಿಯ ಸರ್ಕಾರಿ ಸಿಬ್ಬಂದಿ ಎಂದು ಭಾವಿಸಿದ್ದ ಜನರು ಮತ್ತು ಎಸಿಬಿ ಅಧಿಕಾರಿಗಳು ನಕಲಿ ಎಂದು ತಿಳಿದು ದಂಗಾಗಿದ್ದಾರೆ.

    ನಕಲಿ ಅಧಿಕಾರಿ ಹೊಸಮನಿಯನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿಗಳು, 25 ಕ್ಕೂ ಅಧಿಕ ಸಿಂಧುತ್ವ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರದಲ್ಲಿ ತನಿಖೆ ನಡೆಸಿ ಈತನಿಂದ ಹಣ ಪಡೆಯುತ್ತಿದ್ದ ಅಧಿಕಾರಿಗಳನ್ನು ಪ್ರಕರಣದಲ್ಲಿ ಆರೋಪಿಗಳನ್ನಾಗಿ ಮಾಡಲು ಎಸಿಬಿ ಅಧಿಕಾರಿಗಳು ಮುಂದಾಗಿದ್ದಾರೆ.

  • ಕೋರ್ಟ್ ಆವರಣದಲ್ಲೇ ಲಂಚಾವತಾರ – 5 ಸಾವಿರಕ್ಕೆ ಕೈವೊಡ್ಡಿದ ಪಬ್ಲಿಕ್ ಪ್ರಾಸಿಕ್ಯೂಟರ್

    ಕೋರ್ಟ್ ಆವರಣದಲ್ಲೇ ಲಂಚಾವತಾರ – 5 ಸಾವಿರಕ್ಕೆ ಕೈವೊಡ್ಡಿದ ಪಬ್ಲಿಕ್ ಪ್ರಾಸಿಕ್ಯೂಟರ್

    ಯಾದಗಿರಿ: ನ್ಯಾಯ ದೊರಕಿಸಬೇಕಿದ್ದ ಸರ್ಕಾರಿ ವಕೀಲರೊಬ್ಬರು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಯಾದಗಿರಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದಿದೆ.

    ಜಿಲ್ಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಹಿರಿಯ ವಕೀಲ ಗೋಪಾಲರಾವ್ ಅವರು ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ನ್ಯಾಯಾಲಯದ ಆವರಣದಲ್ಲಿರುವ ತನ್ನ ಕಚೇರಿಯಲ್ಲಿ, ಕಕ್ಷಿದಾರರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಅಬ್ಬೆ ತುಮಕೂರಿನ ನಿವಾಸಿ ವಿಶಾಲಕ್ಷಿ ಅವರಿಗೆ ಸಂಬಂಧಿಸಿದ ಪ್ರಕರಣ ಸಂಬಂಧ ವಾದಿಸಲು ಜಿಲ್ಲಾ ನ್ಯಾಯಾಲಯ ಗೋಪಾಲರಾವ್ ಅವರನ್ನು ನೇಮಿಸಿತ್ತು. ಸರ್ಕಾರಿ ವಕೀಲರು ಕಕ್ಷಿದಾರರಿಂದ ಯಾವುದೇ ಹಣ ತೆಗೆದುಕೊಳ್ಳಬಾರದೆಂಬ ನಿಯಮವಿದೆ. ಹೀಗಿದ್ದರೂ ವಿಶಾಲಕ್ಷಿ ಅವರ ಪ್ರಕರಣದಲ್ಲಿ ವಾದ ಮಂಡನೆ ಮಾಡಲು ವಕೀಲ ಗೋಪಾಲರಾವ್ 50 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.

    50 ಸಾವಿರ ರೂ. ನೀಡಲು ಇಲ್ಲದ ಕಾರಣ 10 ಸಾವಿರ ರೂ. ನೀಡಲು ವಿಶಾಲಕ್ಷಿ ಒಪ್ಪಿದ್ದರು. ವಕೀಲರಿಗೆ ನೀಡಲು ಹಣ ಇಲ್ಲದ ಸಂದರ್ಭದಲ್ಲಿ ವಿಶಾಲಕ್ಷಿ ಅವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಪಾಲರಾವ್ ಈಗಾಗಲೇ ಮುಂಗಡವಾಗಿ 5 ಸಾವಿರ ರೂಪಾಯಿ ಪಡೆದಿದ್ದು, ಇಂದು ಬಾಕಿ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನು ಓದಿ : ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ – ಎಸಿಬಿಗೆ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್

  • ವಾಹನಗಳ ಬ್ರ್ಯಾಂಡ್ ನೋಡಿ ಲಂಚ ಫಿಕ್ಸ್- ದೊಡ್ಡ ಗಾಡಿಗೆ ಜಾಸ್ತಿ ಕೊಡಿ : ಪೊಲೀಸಪ್ಪನ ವಿಡಿಯೋ ವೈರಲ್

    ವಾಹನಗಳ ಬ್ರ್ಯಾಂಡ್ ನೋಡಿ ಲಂಚ ಫಿಕ್ಸ್- ದೊಡ್ಡ ಗಾಡಿಗೆ ಜಾಸ್ತಿ ಕೊಡಿ : ಪೊಲೀಸಪ್ಪನ ವಿಡಿಯೋ ವೈರಲ್

    ಬೆಂಗಳೂರು: ವಾಹನಗಳ ಬ್ರ್ಯಾಂಡ್ ನೋಡಿ ಬೆಂಗಳೂರು ಟ್ರಾಫಿಕ್ ಪೊಲೀಸರು ಲಂಚ ಫಿಕ್ಸ್ ಮಾಡುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರ ಬಿದ್ದಿದೆ. ನಿಮ್ಮ ಕಾರು ಬ್ರ್ಯಾಂಡೆಡ್ ಆಗಿದ್ದರೆ ನೀವು ಹೆಚ್ಚು ಲಂಚ ನೀಡಬೇಕು.

    ಹೌದು. ಆಡಿ ಕಾರಲ್ಲಿ ಬರುತ್ತಿರಾ ದುಡ್ಡು ನೀಡಲು ಆಗುವುದಿಲ್ಲವೇ ಎಂದು ಬಾಯಿ ಬಿಟ್ಟು ಲಂಚ ಕೇಳಿದ್ದಾರೆ ಸಿಲಿಕಾನ್ ಸಿಟಿಯ ಟ್ರಾಫಿಕ್ ಪೊಲೀಸರು. ಹೀಗೆ ಬಾಯಿ ಬಿಟ್ಟು ಲಂಚ ಕೇಳಿದ ಮೈಕೋಲೇಔಟ್ ಪೊಲೀಸರ ವಿಡಿಯೋ ಈಗ ವೈರಲ್ ಆಗಿದೆ.

    ಮೈಕೋಲೇಔಟ್ ಪೊಲೀಸ್ ಠಾಣೆಯ ಪೇದೆ ಜೈಕೃಷ್ಣ ಲಕ್ಷ್ಮಿನಾರಾಯಣ ಎಂಬುವವರ ಕಾರನ್ನು ಅಡ್ಡಗಟ್ಟಿ ನಿಮ್ಮ ಕಾರಿನಲ್ಲಿ ಟಿಟೆಂಡ್ ಗ್ಲಾಸ್ ಇದೆ 2500 ರೂ. ದಂಡ ಕಟ್ಟಿ ಎಂದಿದ್ದಾರೆ. ಫೈನ್ ಏನು ಬೇಡ 500 ಕೊಡಿ ಸಾಕು ಎಂದು ಬಾಯಿ ಬಿಟ್ಟು ಲಂಚ ಕೇಳಿದ್ದಾರೆ.

    ಇದಕ್ಕೆ ಲಕ್ಷ್ಮಿನಾರಾಯಣ ಅವರು 100 ಕೊಡಲು ಹೋದಾಗ ಇಷ್ಟು ದೊಡ್ಡ ಕಾರು ಇಟ್ಕೊಂಡು ಐನೂರು ಕೊಡಲು ಸಾಧ್ಯವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನಾವು 5 ಜನ ಇದ್ದೇವೆ ಕಾಫಿ ಕುಡಿದುಕೊಂಡು ಹೋಗುತ್ತೇವೆ ಐನೂರು ಕೊಡಿ ಎಂದು ಬಹಿರಂಗವಾಗಿ ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.