ತುಮಕೂರು: ನಗರದ ಕ್ಯಾತಸಂದ್ರ ಪೊಲೀಸ್ ಠಾಣೆಯ ಪೇದೆಯೊಬ್ಬರ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.
ಗೋಕುಲ ಬಡಾವಣೆ ನಿವಾಸಿ ನಾಗೇಂದ್ರಯ್ಯ ಪೇದೆ ಕಿರಣ್ ಕುಮಾರ್ ವಿರುದ್ಧ ಆರೋಪ ಮಾಡಿದ್ದು, ಈ ಸಂಬಂಧ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. 10 ವರ್ಷದ ಹಿಂದೆ ನಾಗೇಂದ್ರಯ್ಯ ಇಸ್ಪಿಟ್ ಅಡ್ಡೆ ನಡೆಸುತ್ತಿದ್ದ ಎಂದು ಬಂಧಿಸಲಾಗಿತ್ತು. ಘಟನೆ ನಂತರದ ಇಸ್ಟಿಟ್ ಆಡಿಸುವುದನ್ನು ನಿಲ್ಲಿಸಿದ್ದ ಎನ್ನಲಾಗಿದೆ. ಆದರೂ ಪೇದೆ ಕಿರಣ್ ಕುಮಾರ್, ನಾಗೇಂದ್ರಯ್ಯಗೆ ಬೆದರಿಕೆ ಒಡ್ಡಿ ಹಣ ಕೊಡುವಂತೆ ಪೀಡಿಸುತ್ತಿದ್ದಾರೆ ಎಂಬ ಆರೋಪಿಸಲಾಗಿದೆ.
ತಿಂಗಳಿಗೆ 50 ಸಾವಿರ ರೂ. ಲಂಚ ಕೊಡಬೇಕು ಎಂದು ಕಿರಣ್ ಕುಮಾರ್ ಪದೇ ಪದೇ ಬಂದು ಕಿರುಕುಳ ನೀಡುತ್ತಿದ್ದಾನೆ. ಹಣ ಕೊಡದಿದ್ದರೆ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ನಾಗೇಂದ್ರಯ್ಯ ಆರೋಪಿಸಿದ್ದಾರೆ. ಜೊತೆಗೆ ಕಿರಣ್ ಕುಮಾರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಎಸ್‍ಪಿ ವಂಶಿಕೃಷ್ಣರ ಅವರಿಗೆ ಮನವಿ ಮಾಡಿಕೊಂಡಿದ್ದಾನೆ.
ಬೆಂಗಳೂರು: ಇ-ಖಾತೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಪಂಚಾಯತಿ ಪಿಡಿಒ ಹಾಗೂ ಕಂಪ್ಯೂಟರ್ ಆಪರೇಟರ್ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ಚೊಕ್ಕಹಳ್ಳಿ ಪಂಚಾಯತಿಯಲ್ಲಿ ನಡೆದಿದೆ.
ಪಂಚಾಯಿತಿಯಲ್ಲಿ ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪಿಡಿಒ ನರ್ಮದಾ ಹಾಗೂ ಕಂಪ್ಯೂಟರ್ ಆಪರೇಟರ್ ಮುನಿರಾಜು ಎಸಿಬಿ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ. ಇ-ಖಾತೆಯನ್ನು ಮಾಡಿಕೊಡಲು 6 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ ಇಬ್ಬರು ಇಂದು ಮುಂಗಡವಾಗಿ 4 ಸಾವಿರ ರೂ.ಗಳನ್ನು ಪಡೆಯುತ್ತಿದ್ದರು. ಈ ವೇಳೆ ಬೆಂಗಳೂರು ಗ್ರಾಮಾಂತರ ಎಸಿಬಿ ಡಿವೈಎಸ್‍ಪಿ ಗೋಪಾಲ್ ಜಗ್ಗಿನ್ ನೇತೃತ್ವದ ತಂಡ ದಾಳಿ ನಡೆಸಿ ಹಣದ ಸಮೇತ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ.
ಪಂಚಾಯಿತಿಯಲ್ಲಿ ಸಾಮಾನ್ಯ ಜನರು ಯಾವುದೇ ಕೆಲಸ ಮಾಡಿಕೊಡಿ ಎಂದು ಕೇಳಿದರೂ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿದ್ದರು. ಈ ಬಗ್ಗೆ ಹಲವು ದಿನಗಳಿಂದ ಎಸಿಬಿ ಕಚೇರಿಗೆ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಲಂಚ ಪಡೆಯುತ್ತಿದ್ದ ಅಧಿಕಾರಿಗಳು ಸದ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹಾವೇರಿ: ಹದಿನೈದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಹೆಸ್ಕಾಂ ಸೆಕ್ಷನ್ ಆಫೀಸರ್ ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ನಡೆದಿದೆ.
ಹಂಸಭಾವಿ ವಿಭಾಗದ ಸೆಕ್ಷನ್ ಆಫೀಸರ್ ಮಂಜುನಾಥ್ ಬೂದಿಹಾಳ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮಂಜುನಾಥ್ ಶೆಟ್ಟರ್ ಎಂಬುವರಿಗೆ ಇಪ್ಪತ್ತೈದು ಸಾವಿರ ರೂಪಾಯಿ ಲಂಚಕ್ಕೆ ಅಧಿಕಾರಿ ಮಂಜುನಾಥ್ ಬೇಡಿಕೆ ಇಟ್ಟಿದ್ದ.
ಆದರೆ ಕೊನೆಗೆ ಹದಿನೈದು ಸಾವಿರ ರೂಪಾಯಿಗೆ ಡೀಲ್ ಕುದುರಿಸಿ ಹಣ ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅಧಿಕಾರಿ ಮಂಜುನಾಥ್ ನನ್ನು ವಶಕ್ಕೆ ಪಡೆದಿದ್ದಾರೆ. ಎಸಿಬಿ ಡಿವೈಎಸ್ಪಿ ಸೋಮಲಿಂಗ ಕುಂಬಾರ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಹಾವೇರಿ ಎಸಿಬಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಚಾಮರಾಜನಗರ: ರೈತರಿಗೆ ಸಾಲ ತಿರುವಳಿ ಪತ್ರ ನೀಡಲು ಲಂಚ ಕೇಳಿದ ಬ್ಯಾಂಕ್ ಮ್ಯಾನೇಜರ್ ಎಸಿಬಿ ಬಲೆಗೆ ಬಿದ್ದಿದ್ದಾನೆ.
ಚಾಮರಾಜನಗರ ತಾಲೂಕಿನ ಆಲೂರು ಶಾಖೆಯ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಚಂದನ್ ಲಂಚ ಸ್ವೀಕರಿಸುವ ವೇಳೆ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ. ಎಸಿಬಿ ಡಿವೈಎಸ್ಪಿ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಇದೀಗ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಚಂದನ್ ರನ್ನು ಬಂಧಿಸಲಾಗಿದೆ
ರೈತರಾದ ಸಿಂಗನಪುರದ ಸಿದ್ದಪ್ಪಾಜಿ ಬಳಿ ವಿಜಯಾ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಚಂದನ್ ಸಾಲ ತೀರುವಳಿ ಪತ್ರ ನೀಡಲು 15 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದು, ಮೊದಲಿಗೆ 3 ಸಾವಿರ ರೂ. ಹಣವನ್ನು ಮುಂಗಡವಾಗಿ ನೀಡಿದ್ದಾರೆ. ಆದರೆ ಬಾಕಿ ಹಣವನ್ನು ನೀಡುವಂತೆ ಸಿದ್ದಪ್ಪಾಜಿ ಬಳಿ ಬೇಡಿಕೆಯಿಟ್ಟಿದ್ದು, ಬ್ಯಾಂಕ್ ಮ್ಯಾನೇಜರ್ ನಡವಳಿಕೆಯಿಂದ ಬೇಸತ್ತು ಸಿದ್ದಪ್ಪಾಜಿ ಎಸಿಬಿಗೆ ದೂರು ದಾಖಲಿಸಿದ್ದರು.
ಶಿವಮೊಗ್ಗ: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆಯಲ್ಲಿ ಕೆಲವು ಪೊಲೀಸರು ಶಾಮೀಲಾಗಿದ್ದಾರೆ ಎಂಬ ಆರೋಪ ಈ ಹಿಂದಿನಿಂದಲೂ ಕೇಳಿ ಬಂದಿತ್ತು. ಈ ಆರೋಪಕ್ಕೆ ಇಂದು ಪೊಲೀಸ್ ಪೇದೆಯೋರ್ವ ಎಸಿಬಿ ಬಲೆಗೆ ಬಿದ್ದಿರುವುದು ಮತ್ತಷ್ಟು ಪುಷ್ಠಿ ನೀಡಿದೆ.
ಹೌದು. ಶಿವಮೊಗ್ಗದಲ್ಲಿ ಇಂದು ಎಸಿಬಿ ಡಿವೈಎಸ್‍ಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಅಕ್ರಮ ಮರಳು ಸಾಗಾಣಿಕೆಗೆ ಅನುಕೂಲ ಮಾಡಿಕೊಡುವ ಸಂಬಂಧ ವ್ಯಕ್ತಿಯೊಬ್ಬರಿಂದ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದ ಪೊಲೀಸ್ ಪೇದೆಯೋರ್ವನನ್ನು ಎಸಿಬಿ ಅಧಿಕಾರಿಗಳು ಬಲೆಗೆ ಬೀಳಿಸಿದ್ದಾರೆ.
ತುಂಗಾನಗರ ಠಾಣೆಯ ಪೇದೆ ನಾರಾಯಣಸ್ವಾಮಿ ಎಸಿಬಿ ಬಲೆಗೆ ಬಿದ್ದ ಪೇದೆ. ದಾಳಿಯಲ್ಲಿ ಎಸಿಬಿ ಡಿವೈಎಸ್‍ಪಿ ಮನೋಜ್‍ಕುಮಾರ್, ಇನ್ಸ್‌ಪೆಕ್ಟರ್ ತಿಪ್ಪೇಸ್ವಾಮಿ ಸೇರಿದಂತೆ ಇತರೆ ಸಿಬ್ಬಂದಿ ಭಾಗಿಯಾಗಿದ್ದರು. ನಾರಾಯಣಸ್ವಾಮಿ ಶಿವಮೊಗ್ಗದ ಟಿಪ್ಪು ನಗರದ ನಿವಾಸಿ ಅಬ್ದುಲ್ ಸಲೀಂ ಬಳಿ ಇಂದು ಗೋಪಾಳ ಬಸ್ ನಿಲ್ದಾಣ ಸಮೀಪ 7 ಸಾವಿರ ರೂ. ಲಂಚ ಪಡೆಯುತ್ತಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ಪೇದೆಯನ್ನು ಹಾಗೂ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ.
ಯಾದಗಿರಿ: ಅರಣ್ಯ ಸಂಪತ್ತನ್ನು ರಕ್ಷಿಸುವ ಅರಣ್ಯಾಧಿಕಾರಿ ಬಯಸಿದ್ದು ಸರ್ಕಾರಿ ಸಂಬಳ ಅಲ್ಲ. ಲಕ್ಷ ಲಕ್ಷ ಗಿಂಬಳವನ್ನು ಮಾತ್ರ. ಕೆಲಸವಾಗಬೇಕಂದರೆ ರೈತರು ಮತ್ತು ವ್ಯಾಪಾರಿಗಳು ಈತನಿಗೆ ಗಿಂಬಳ ಕೊಡಲೇಬೇಕಾಗಿದೆ. ಅಧಿಕಾರಿಯ ಈ ಲಂಚವತಾರ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.
ಯಾದಗಿರಿ ಜಿಲ್ಲೆಯ ನಾರಾಯಣಪುರದ ವಲಯ ಅರಣ್ಯಾಧಿಕಾರಿ ವೆಂಕಟೇಶ್‍ಗೆ ಸರ್ಕಾರಿ ಸಂಬಳಕ್ಕಿಂತ ಬರೀ ಗಿಂಬಳನೇ ಲಕ್ಷ-ಲಕ್ಷ ಬರುತ್ತದೆ. ತಮ್ಮ ಕೆಲಸವಾಗಬೇಕು ಅಂದರೆ ರೈತರು ಮತ್ತು ವ್ಯಾಪಾರಿಗಳು ಈತನಿಗೆ ಲಕ್ಷ-ಲಕ್ಷ ಲಂಚ ನೀಡಬೇಕು.
ವ್ಯಾಪಾರಿ, ಭ್ರಷ್ಟ ಅಧಿಕಾರಿಯ ಸಂಬಾಷಣೆ: ವ್ಯಾಪಾರಿ: ಸರ್ ರಸ್ತೆಯಲ್ಲಿ ಯಾರಾದರೂ ಅಧಿಕಾರಿಗಳು ಕೇಳಿದ್ರೆ ಅವರಿಗೆ ಏನು ಹೇಳಬೇಕು..? ಭಷ್ಟ್ರ ಅಧಿಕಾರಿ: ಏಯ್, ಅದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಅವರು ಏನೂ ಮಾಡಲ್ಲ. ನೀವು ಯಾರಿಗೆ ಯಾವ ರೇಟ್ ಹೇಳಬೇಡಿ ನಾನು ಹೇಳ್ತೀನಿ. ಸಾಹೇಬ್ರಿಗೆ ಗೊತ್ತು ನನಗೆ ಗೊತ್ತು. ಅವರು ಏನಾದ್ರೂ ಕೇಳಿದ್ರೆ ನನ್ನ ಹೆಸರು ಹೇಳಿ ಅಷ್ಟೇ. ಸರ್ ಏನ್ ರೇಟ್ ಹೇಳಿದ್ದಾರೆ ಅದಕ್ಕೆ ನಾನು ವ್ಯಾಪಾರ ಮಾಡಿಕೊಳ್ಳುತ್ತೇನೆ.
ವ್ಯಾಪಾರಿ: ಸರ್, ಏನ್ ರೇಟ್ ಇದೆ ಅದಕ್ಕೆ ನಾನು ವ್ಯಾಪಾರ ಮಾಡಿಕೊಳ್ಳುತ್ತೇನೆ. ಇಲ್ಲಾಂದ್ರೆ ನಾವ್ ಯಾಕೆ ಇಲ್ಲಿಗೆ ಬರಬೇಕಿತ್ತು. ನಾವು ಓನರ್ ಅಂತ ಯಾಕೆ ಹೇಳಿಕೊಳ್ಳಬೇಕು. ಭ್ರಷ್ಟ ಅಧಿಕಾರಿ: ನಾನು ಮಾತನಾಡಿದ್ರೆ ಎಲ್ಲಾ ಬೇಗ ಆಗುತ್ತೆ. ಯಾಕೆಂದ್ರೆ ನನಗೆ ಈ ಹಿಂದೆ ತುಂಬಾ ಅನುಭವ ಆಗಿದೆ. ಈ ಹಿಂದೆ ನಾನು ಹಲವಾರು ಡೀಲ್ ಮಾಡಿದ್ದೀನಿ, ಬಿಜೆಪಿಯ ದೊಡ್ಡ ಲೀಡರ್ ಜೊತೆಯೂ ವ್ಯಾಪಾರ ಮಾಡಿದ್ದೀನಿ. 30 ಸಾವಿರ ರೂಪಾಯಿ ನಾಮ ಹಾಕಿದ್ದಾನೆ. ಇಲ್ಲೇ ಮರದ ಕಟ್ಟಿಗೆ ಹಾಗೇ ಬಿದ್ದಿದೆ. ಇಷ್ಟು ಮಾಲ್ ಇದೆ. ಅದಕ್ಕೆ ತಕ್ಕಂತೆ ದುಡ್ಡು ಕೊಟ್ಟು ತೆಗೆದುಕೊಂಡು ಹೋಗು ಅಂತ ಹೇಳಿದ್ದೇನೆ. ನಾನು ವ್ಯಾಪಾರ ಮಾಡುವುದೇ ಹಾಗೆ. ಇವತ್ತು ನಾನು ಹೇಳಿದಷ್ಟು ದುಡ್ಡು ಕೊಡು ಮಾಲ್ ತೆಗೊಂಡು ಹೋಗು. ನಾಳೆ ಅದನ್ನು ನೀನು ಕೋಟಿಗೆ ಮಾರಿಕೋ..
ಹೀಗೆ ರೈತರು ಬೆಳೆ ವಾಣಿಜ್ಯ ಮರಗಳನ್ನು ಕತ್ತರಿಸಲು ಅನುಮತಿ ನೀಡಲು ಹಣ ಪೀಕ್ತಿದ್ದಾನೆ. ಈತನ ಲಂಚಾವತರ ಇಷ್ಟೇ ಅಲ್ಲ, ಮರಗಳನ್ನ ಕತ್ತರಿಸಲು ಅನುಮತಿ ನೀಡಿದ್ಮೇಲೆ ಈ ಹೇಳಿದ ದರಕ್ಕೆ ಮಾರಾಟ ಮಾಡಬೇಕು.
ಒಟ್ಟಿನಲ್ಲಿ ಭ್ರಷ್ಟ ಅರಣ್ಯಾಧಿಕಾರಿ ವೆಂಕಟೇಶ್ ದುರಾಸೆ ಇಲ್ಲಿಗೆ ನಿಂತಿಲ್ಲ. ಸರ್ಕಾರಿ ಮರಗಳನ್ನು ಸಹ ಬಿಡದ ಈ ಲಂಚಕೋರ ಅಧಿಕಾರಿ ತನಗೆ ಹಣದ ಅವಶ್ಯಕತೆ ಇದ್ದಾಗ ಸರ್ಕಾರಿ ಮರಗಳನ್ನು ಕಡಿದು ವ್ಯಾಪಾರ ಮಾಡುವುದಾಗಿ ರೈತರು ದೂರಿದ್ದಾರೆ.
ತುಮಕೂರು: ವೃದ್ಧೆಯೊಬ್ಬರು ಹಣವಿಲ್ಲ ಎಂದು ಎಷ್ಟೇ ಬೇಡಿಕೊಂಡರೂ ವೈದ್ಯರು ಅವರ ಬಳಿ ಲಂಚ ಪಡೆಯುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಇದನ್ನು ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯ ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ನಾಗೇಶ್ ರೋಗಿಗಳಿಂದ ಲಂಚ ಪಡೆಯುತ್ತಿರುವ ದೃಶ್ಯಗಳು ಸೆರೆಯಾಗಿವೆ.
ವಿಡಿಯೋದಲ್ಲಿ ಏನಿದೆ?
ಡಾಕ್ಟರ್ ಚಿಕಿತ್ಸೆ ನೀಡುವಾಗ ವ್ಯಕ್ತಿಯೊಬ್ಬ ಯಾಕೆ ಹಣ ಪಡಿತೀರಿ ಎಂದು ಪ್ರಶ್ನೆ ಮಾಡ್ತಾರೆ. ನೀನು ಹಣ ಕೊಟ್ಟಿದ್ದರೆ ಬಂದು ಕೇಳು ಎಂದು ಅಹಂಕಾರದಿಂದ ಡಾಕ್ಟರ್ ಹೇಳ್ತಾರೆ. ಹೌದು, ನಾನು ಕೊಟ್ಟಿದ್ದೇನೆ ಅಂದಾಗ ವೈದ್ಯ ನಾಗೇಶ್, ಯಾವ ಊರಿನವನು ನೀನು ಎಂದು ಪ್ರಶ್ನೆ ಮಾಡಿದ್ದಾರೆ. ವ್ಯಕ್ತಿ ಇದೇ ಊರಿನವನು ಅಂದಾಗ, ಕಳೆದ 10 ತಿಂಗಳಿನಿಂದ ನನ್ನನು ಸೇರಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಸಂಬಳ ಅಗಿಲ್ಲ. ಈ ಬಗ್ಗೆ ಕಳೆದ 5 ತಿಂಗಳಿನಿಂದ ನಮ್ಮ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಅದ್ರೂ ಏನು ಪ್ರಯೋಜನ ಅಗಿಲ್ಲ. ಊರಿನಲ್ಲಿ ಜ್ವರ ಹರಡುತ್ತಿದೆ. ಆಸ್ಪತ್ರೆಯ ಕೆಲವು ಸಿಬ್ಬಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅದರೂ ನಾವು ಜನರಿಗೆ ಚಿಕಿತ್ಸೆ ನೀಡುತ್ತೇವೆ. ಅವರು ಹಣ ಕೊಡುತ್ತಾರೆ ನಾವು ತೆಗೆದುಕೊಳ್ಳುತ್ತೇವೆ ಇದರಲ್ಲಿ ನಮ್ಮದೇನು ತಪ್ಪಿಲ್ಲ ಎಂದು ಡಾಕ್ಟರ್ ನಾಗೇಶ್ ದುಡ್ಡು ಪಡೆದಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ವೃದ್ಧೆಯೊಬ್ಬರಿಂದ 50 ರೂ. ಪಡೆದು ಜೇಬಿಗಿಳಿಸಿಕೊಳ್ಳುತಿದ್ದ ದೃಶ್ಯವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ನರ್ಸ್ ಪ್ರತಿಯೊಂದಕ್ಕೂ ಹಣ ಕೇಳುತ್ತಾರೆ ಎಂಬ ದೂರುಗಳು ಕೇಳಿಬಂದಿವೆ. ರೋಗಿಗಳಿಗೆ ಮಾತ್ರೆ, ಗ್ಲೂಕೋಸ್, ಇಂಜೆಕ್ಷನ್ ಸೇರಿದಂತೆ ಇನ್ನಿತರೆ ಯಾವುದೇ ಸೌಲಭ್ಯ ಒದಗಿಸಬೇಕಾದಲ್ಲಿ ವೈದ್ಯರಿಗೆ ರೋಗಿಗಳು ಲಂಚದ ರೂಪದಲ್ಲಿ ಹಣ ನೀಡಬೇಕಾಗಿದೆ.
ಆಸ್ಪತ್ರೆಯ ಸಿಬ್ಬಂದಿ ಹಾಗೂ ವೈದ್ಯರ ಲಂಚಾವತಾರದಿಂದ ಸಾರ್ವಜನಿಕರು ರೋಸಿಹೋಗಿದ್ದಾರೆ. ವೃದ್ಧೆಯ ಬಳಿಯೇ ಲಂಚ ಪಡೆದಿರುವುದು ಸ್ಥಳೀಯರ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಯಾದಗಿರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಂದರೆ ಕಲೆ, ಸಾಹಿತ್ಯ, ಸಂಸ್ಕೃತಿಗಳ ಮೂಲಕ ಜನರಿಗೆ ನಾಗರಿಕತೆಯತ್ತ ಕೊಂಡೊಯ್ಯುವ ಇಲಾಖೆ ಎನ್ನುವ ಮಾತಿದೆ. ಆದರೆ ಯಾದಗಿರಿ ಈ ಇಲಾಖೆಯ ಮುಖ್ಯಾಧಿಕಾರಿ ನಾಗಕರಿಕತೆ ಇರಲಿ, ಕನಿಷ್ಠ ಮಾನವೀಯತೆ ಸಹ ಇಲ್ಲ.
ದತ್ತಪ್ಪ ಸಾಗನೂರ ಯಾದಗಿರಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮುಖ್ಯಾಧಿಕಾರಿ. ದತ್ತಪ್ಪಗೆ ಬಡ ಕಲಾವಿದರಂದರೆ ಕಿಂಚಿತ್ತೂ ಮರ್ಯಾದೆ ಇಲ್ಲ. ಇಲಾಖೆ ಜಿಲ್ಲೆಯ ಬಡ ಕಲಾವಿದರನ್ನು ಉತ್ತೇಜಿಸುವ ಮತ್ತು ಅವರ ಕಲೆಯನ್ನು ಗುರುತಿಸುವ ಸಲುವಾಗಿ, ಕಲಾವಿದರಿಗೆ ಅವರ ಕಲೆ ಸಂಬಂಧಿಸಿದ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿ ಅವರಿಗೆ ಗೌರವ ಧನ ನೀಡುತ್ತದೆ.
ಒಂದು ಕಾರ್ಯಕ್ರಮ ಕೊಟ್ಟರೆ ಒಬ್ಬ ಕಲಾವಿದನಿಗೆ 15 ಸಾವಿರ ರೂ. ಗೌರವಧನ ಸಿಗುತ್ತದೆ. ಜಿಲ್ಲೆಯ ಕಲಾವಿದರನ್ನು ಆಯ್ಕೆ ಮಾಡುವ ಜವಾಬ್ದಾರಿ ಇಲಾಖೆ ಮುಖ್ಯಾಧಿಕಾರಿ ದತ್ತಪ್ಪ ಸಾಗನೂರ ಮೇಲಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದತ್ತಪ್ಪ, ಪ್ರತಿ ಕಲಾವಿದನ ಬಳಿ 5 ಸಾವಿರ ಲಂಚ ಪಡೆಯುವುವದು ಈ ಅಧಿಕಾರಿಗೆ ಆಭ್ಯಾಸವಾಗಿದೆ. ಒಂದು ವೇಳೆ ಲಂಚಾವತಾರದ ಬಗ್ಗೆ ಯಾರಾದರೂ ಕಲಾವಿದ ಬಾಯಿ ಬಿಟ್ಟರೆ ಕೋಪಗೊಂಡು ಅವರನ್ನು ಅವಮಾನಿಸೋದು ಅಧಿಕಾರಿಯ ಕೆಲಸ.
ಲಂಚಬಾಕ ಅಧಿಕಾರಿ ಜಿಲ್ಲೆಯ ಹಗಲುವೇಶ ಕಲಾವಿದ ಶಂಕರಪ್ಪ ಶಾಸ್ತ್ರಿ ಎಂಬವರ ಮೇಲೆ ಅವಾಜ್ ಹಾಕಿದ್ದಾರೆ. ಕಿತ್ತು ತಿನ್ನುವ ಬಡತನಕ್ಕೆ ಶಂಕರಪ್ಪ ಶಾಸ್ತ್ರಿಗೆ, ಹಗಲುವೇಷ ಕಲೆ ಜೀವನಾಧಾರ. ಇದಕ್ಕಾಗಿ ಶಂಕರಪ್ಪ ಶಾಸ್ತ್ರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ದತ್ತಪ್ಪ ಸಾಗನೂರ ಹತ್ತಿರ ಕಾರ್ಯಕ್ರಮ ನೀಡಲು ಅವಕಾಶ ಕೇಳಿದ್ದಾರೆ. ಇದಕ್ಕೆ ದತ್ತಪ್ಪ 5 ಸಾವಿರ ರೂ. ಲಂಚ ಕೇಳಿದ್ದಾನೆ. ಈ ವಿಷಯವನ್ನು ಶಂಕರಪ್ಪ ತಮ್ಮ ಕಲಾವಿದ ಸ್ನೇಹಿತರ ಮುಂದೆ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿದು ಅಧಿಕಾರಿ ದತ್ತಪ್ಪ ಬಡ ಕಲಾವಿದನಿಗೆ ಕಾಲು ಕೈ ಕತ್ತರಿಸುತ್ತೀನಿ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ರಾಯಚೂರು: ಆರೋಗ್ಯ ಸಚಿವ ಶ್ರೀರಾಮುಲು ಸರ್ಕಾರಿ ಆಸ್ಪತ್ರೆಗಳ ಸ್ಥಿತಿಗತಿ ತಿಳಿಯಲು ರಾಯಚೂರಿನ ವೈದ್ಯಕೀಯ ಬೋಧಕ ಆಸ್ಪತ್ರೆ ರಿಮ್ಸ್ ನಲ್ಲಿ ಮಲಗಿಹೋಗಿದ್ದೇ ಬಂತು. ಆದರೆ ಜಿಲ್ಲೆಯ ಗ್ರಾಮೀಣ ಭಾಗದ ಆಸ್ಪತ್ರೆಗಳ ಸ್ಥಿತಿ ಮಾತ್ರ ಬದಲಾಗಿಲ್ಲ.
ಡಾ. ವಿಶ್ವನಾಥ್ ಸಿಂಧನೂರಿನ ಬಾದರ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆಯುಷ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಡಾಕ್ಟರ್ ದುಡ್ಡು ಕೊಡದಿದ್ದರೆ ಯಾವ ರೋಗಿಗೂ ಚಿಕಿತ್ಸೆಯನ್ನೇ ನೀಡುವುದಿಲ್ಲ. ಸುಮಾರು 10 ವರ್ಷಗಳಿಂದ ಇಲ್ಲೇ ವೈದ್ಯರಾಗಿರುವ ಡಾ.ವಿಶ್ವನಾಥ್ ಈ ವಿಚಾರದಲ್ಲಿ ಗ್ರಾಮಸ್ಥರ ಆಕ್ರೋಶಕ್ಕೂ ಗುರಿಯಾಗಿದ್ದಾರೆ.
ರೋಗಿಗಳು ಕಡಿಮೆ ಹಣ ಕೊಟ್ಟರೆ ಇಷ್ಟೇ ಕೊಡಬೇಕು ಎಂದು ಬೇಡಿಕೆ ಮಾಡಿ ರೋಗಿಗಳಿಂದ ಹಣ ಕೀಳುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. 200 ರೂಪಾಯಿಯಿಂದ ಒಂದೊಂದು ಚಿಕಿತ್ಸೆಗೆ ಒಂದೊಂದು ಫೀಸ್ ಅನ್ನು ಫಿಕ್ಸ್ ಮಾಡಿದ್ದಾರೆ. ಇದರ ಜೊತಗೆ ಒಮ್ಮೊಮ್ಮೆ ವಾರಗಟ್ಟಲೇ ಆಸ್ಪತ್ರೆಯ ಕಡೆ ಬಾರದೇ ಇದ್ದರೂ ಹಾಜರಾತಿಯಲ್ಲಿ ಮಾತ್ರ ಪ್ರತಿ ದಿನ ಹಾಜರಿ ಇರುತ್ತದೆ.
ಬಾದರ್ಲಿ ಸೇರಿದಂತೆ ಸುತ್ತಮುತ್ತಲ ಗಿಣಿವಾರ, ಒಳಬಳ್ಳಾರಿ, ಯದ್ಲಡ್ಡಿ, ಆರ್ ಎಚ್ ಕ್ಯಾಂಪ್ 5, ಅಲಬನೂರು, ಅರೆಕನೂರು ಗ್ರಾಮಗಳ ಜನ ಈ ಆಸ್ಪತ್ರೆಯ ಮೇಲೆಯೇ ಅವಲಂಬಿತರಾಗಿದ್ದಾರೆ.
ವೈದ್ಯನ ಹಣಬಾಕುತನಕ್ಕೆ ಬೇಸತ್ತು ಜನರೇ ತಮ್ಮ ಮೊಬೈಲ್ ನಲ್ಲಿ ಲಂಚಾವತಾರ ಸೆರೆ ಹಿಡಿದಿದ್ದಾರೆ. ಈ ಹಿಂದೆ ಹಿರಿಯ ಅಧಿಕಾರಿಗಳಿಗೆ ಮೌಖಿಕ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಖಾಸಗಿ ಆಸ್ಪತ್ರೆಗೆ ಹೋಗಲಾಗದೆ ಗ್ರಾಮೀಣ ಭಾಗದ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಹೋದರೆ ಇಲ್ಲೂ ಫೀಸ್ ಎಂದು ಈ ವೈದ್ಯ ಹಣ ಕೀಳುತ್ತಿದ್ದಾರೆ.
ಒಂದೆಡೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ ಅನ್ನೋ ಕೊರಗಿದ್ದರೆ ಇದ್ದ ವೈದ್ಯರಲ್ಲಿ ಇಂತಹವರು ರೋಗಿಗಳಿಂದ ಹಣ ವಸೂಲಿ ನಡೆಸಿದ್ದಾರೆ. ಒಂದು ವೇಳೆ ಈ ವೈದ್ಯನನ್ನ ಅಮಾನತು ಮಾಡಿದರೆ ಬೇರೆ ವೈದ್ಯರನ್ನ ನಿಯೋಜನೆ ಮಾಡ್ತಾರೋ ಇಲ್ವೋ ಅನ್ನೋ ಭಯ ಗ್ರಾಮಸ್ಥರಲ್ಲಿದೆ. ಕನಿಷ್ಠ ಈಗಲಾದರೂ ಮೇಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಹೊಣೆ ಹೊತ್ತಿರುವ ಆರೋಗ್ಯ ಸಚಿವ ಶ್ರೀರಾಮುಲು ಇಂತಹ ವೈದ್ಯರ ಕಡೆ ಗಮನಹರಿಸಬೇಕು ಎಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ.
ಚಿಕ್ಕಬಳ್ಳಾಪುರ: ನಗರ ಯೋಜನಾ ಪ್ರಾಧಿಕಾರದ ಮೇಲೆ ಎಸಿಬಿ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಚಿಕ್ಕಬಳ್ಳಾಪುರ ಶಾಸಕರಿಗೂ ಲಂಚದ ಹಣದಲ್ಲಿ 5 ಲಕ್ಷ ಕೊಡಬೇಕು ಎನ್ನುವ ಅಂಶ ಎಸಿಬಿ ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿರುವುದು ಉಪಚುನಾವಣೆ ಹೊತ್ತಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಹಾಗೆ ಗುರುವಾರ ಚಿಕ್ಕಬಳ್ಳಾಪುರ ನಗರ ಯೋಜನಾ ಪ್ರಾಧಿಕಾರದ ಸದಸ್ಯಾಧಿಕಾರಿ ಕೃಷ್ಣಪ್ಪ 3 ಲಕ್ಷ ಹಣ ಪಡೆಯುವಾಗ ಸಿಕ್ಕಿಬಿದ್ದಿದ್ದರು.
ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಚಿಕ್ಕಬಳ್ಳಾಪುರ ತಾಲೂಕು ಕುಪ್ಪಹಳ್ಳಿ ಬಳಿಯ ತಮ್ಮ ಲೇಔಟ್‍ನಲ್ಲಿ ಭೂ ಪರಿವರ್ತನೆಗೊಂಡ ಶೇ. 40ರಷ್ಟು ನಿವೇಶನಗಳ ಮಾರಾಟಕ್ಕೆ ಬಿಡುಗಡೆಗೆ ಅನುಮತಿ ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದರು. ಹೀಗಾಗಿ ಯೋಜನಾ ಸದಸ್ಯಾಧಿಕಾರಿ ಕೃಷ್ಣಪ್ಪ 9 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದು, 9 ಲಕ್ಷದಲ್ಲಿ 5 ಲಕ್ಷ ಹಣ ಶಾಸಕರಿಗೂ ಕೊಡಬೇಕು. ಇಲ್ಲವಾದರೆ ಎಂಎಲ್‍ಎ ಬಳಿ ಫೋನ್ ಮಾಡಿಸಿ ಕೇವಲ 4 ಲಕ್ಷ ಕೊಡಿ ಸಾಕು ಎಂದು ಹೇಳಿದ್ದಾರೆ.
ಈ ಬಗ್ಗೆ ಕಾಲ್ ರೆಕಾರ್ಡ್ ಮಾಡಿಕೊಂಡಿದ್ದ ಉದ್ಯಮಿ ರಾಮಾಂಜಿನಪ್ಪ ಎಸಿಬಿ ಗೆ ದೂರು ನೀಡಿದರು. ದೂರು ಪಡೆದಿದ್ದ ಎಸಿಬಿ ಗುರುವಾರ ಕಾರ್ಯಾಚರಣೆ ನಡೆಸಿ ಕೃಷ್ಣಪ್ಪ ಅವರನ್ನು ಬಲೆಗೆ ಬೀಳಿಸುವುದರಲ್ಲಿ ಯಶಸ್ವಿಯಾಗಿದೆ. ಆದರೆ ಉಪಚುನಾವಣೆ ಹೊತ್ತಲ್ಲಿ ಎಸಿಬಿ ದಾಖಲಿಸಿರುವ ಎಫ್‍ಐಆರ್ ನಲ್ಲಿ ಶಾಸಕರಿಗೂ 5 ಲಕ್ಷ ಹಣ ಕೊಡಬೇಕು ಎನ್ನುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಅನರ್ಹಗೊಂಡಿದ್ದು, ಎಫ್‍ಐಆರ್ ನಲ್ಲಿ ಉಲ್ಲೇಖವಾಗಿರುವ ಶಾಸಕ ಸುಧಾಕರ್ ಎನ್ನುವುದು ವಿರೋಧ ಪಕ್ಷದವರು ವಾದ. ಹೀಗಾಗಿ ಎಫ್‍ಐಆರ್ ಪ್ರತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದು, ಪರ ವಿರೋಧದ ಚರ್ಚೆಗಳು ಜೋರಾಗಿ ನಡೆದಿವೆ.