Tag: ಲಂಚ

  • ವೈನ್ ಶಾಪ್ ತೆರೆಯಲು ಹಣದ ಬೇಡಿಕೆ- ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ!

    ವೈನ್ ಶಾಪ್ ತೆರೆಯಲು ಹಣದ ಬೇಡಿಕೆ- ಲಂಚ ಪಡೆಯುತ್ತಿದ್ದಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ!

    ಹುಬ್ಬಳ್ಳಿ: ವೈನ್ ಶಾಪ್ ತೆರೆಯಲು ಅನುಮತಿ ನೀಡಲು ಲಂಚ ಪಡೆಯುತ್ತಿದ್ದ ಪಿಡಿಒ ಅಧಿಕಾರಿಯನ್ನ ಎಸಿಬಿ ಬಲೆಗೆ ಬಿದಿದ್ದಾರೆ. ಜಿಲ್ಲೆಯ ವರೂರು ಗ್ರಾಮ ಪಂಚಾಯಿತಿ ಪಿಡಿಒ ಬಸವರಾಜ್ ಬಡಿಗೇರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ.

    ಗ್ರಾಮದ ‘ಗಾಯತ್ರಿ ವೈನ್ಸ್’ ಮುಚ್ಚಿಸಲು ಮಹಿಳಾ ಸಂಘದವರು, ಗ್ರಾಮಸ್ಥರು ಅರ್ಜಿ ಕೊಟ್ಟಿದ್ದರು. ಇದನ್ನೇ ಹಣ ಪೀಕಲು ಬಳಸಿಕೊಂಡ ಪಿಡಿಒ ಬಸವರಾಜ್, ಗ್ರಾಮಸ್ಥರು ನೀಡಿರುವ ಅರ್ಜಿ ತಿರಸ್ಕಾರ ಮಾಡಿ ವೈನ್ ಶಾಪ್ ತೆರಯಲು ತೊಂದರೆ ಇಲ್ಲದಂತೆ ಮಾಡಲು 50 ಸಾವಿರ ರೂ. ನೀಡುವಂತೆ ಶಾಪ್ ಮ್ಯಾನೇಜರ್ ಬಳಿ ಬೇಡಿಕೆ ಇಟ್ಟಿದ್ದ.

    ಮೊದಲು ಈ ಬಗ್ಗೆ ಶಾಪ್ ಮ್ಯಾನೇಜರ್ ಗಮನ ನೀಡದ ಸಂದರ್ಭದಲ್ಲಿ ಪದೇ ಪದೇ ಫೋನ್ ಮಾಡಿ ಈ ಬಗ್ಗೆ ಪಿಡಿಒ ಎಚ್ಚರಿಕೆ ನೀಡಿದ್ದ. ಅಲ್ಲದೇ ನೇರ ಶಾಪ್ ಬಳಿ ತೆರಳಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ. ಈ ಸಂದರ್ಭದಲ್ಲಿ ಮ್ಯಾನೇಜರ್ ವಿಶಾಲ್ ಕಲಾಲ್ ಪಿಡಿಒ ಬಳಿ ಮನವಿ ಮಾಡಿ 40 ಸಾವಿರ ರೂ. ನೀಡುವುದಾಗಿ ಒಪ್ಪಿಸಿದ್ದರು.

    ಇತ್ತ ವಿಶಾಲ್ ಕಲಾಲ್ ತಮ್ಮ ಸಮಸ್ಯೆಯನ್ನು ತಿಳಿಸಿ ಎಸಿಬಿಯ ಮೊರೆ ಹೋಗಿದ್ದರು. ಇದರಂತೆ ಇಂದು ಹಣ ಲಂಚ ಪಡೆಯುವಾಗ ಹುಬ್ಬಳ್ಳಿಯ ಕಾರವಾರ ರಸ್ತೆ ಗಣೇಶ್ ವೇ ಬ್ರಿಜ್ ಹತ್ತಿರ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಪಿಡಿಒ ಸಿಕ್ಕಿದಿದ್ದಾನೆ. ಎಸಿಬಿ ಡಿವೈಎಸ್‍ಪಿ ವಿಜಯಕುಮಾರ ಬಿಸ್ನಳಿ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿದೆ.

  • ರಜೆ ಬೇಕಾ? ಮನೆಗೆ ಎಸಿ ಹಾಕ್ಸು: ತಹಶೀಲ್ದಾರ್ ಡಿಮ್ಯಾಂಡ್

    ರಜೆ ಬೇಕಾ? ಮನೆಗೆ ಎಸಿ ಹಾಕ್ಸು: ತಹಶೀಲ್ದಾರ್ ಡಿಮ್ಯಾಂಡ್

    ಚಿಕ್ಕಬಳ್ಳಾಪುರ: ತಹಶೀಲ್ದಾರ್ ದ್ವಿತೀಯ ದರ್ಜೆಯ ಸಹಾಯಕನಿಗೆ ಕರೆ ಮಾಡಿ ಮನೆಗೆ ಎಸಿ ಹಾಕಿಸಿಕೊಡು ಎಂದು ಡಿಮ್ಯಾಂಡ್ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.

    ಗೌರಿಬಿದನೂರು ತಹಶೀಲ್ದಾರ್ ರಾಜಣ್ಣ, ದ್ವೀತಿಯ ದರ್ಜೆ ಸಹಾಯಕ ಮಹಮದ್ ಹಸನ್ ಮುಲ್ಲಾ ಅವರಿಗೆ ಕರೆ ಮಾಡಿದ್ದು, ಮನೆಗೆ ಎಸಿ ವ್ಯವಸ್ಥೆ ಮಾಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.

    ಮಾರ್ಚ್ 23ರಂದು ಕರೆ ಮಾಡಿ, ಏನು ಕೆಲಸ ಮಾಡದೆ ನಿನಗೆ ಸಂಬಳ ಮಾಡಿಕೊಟ್ಟಿದ್ದೇನೆ. ಹಾಗಾಗಿ ನೀನು ನನ್ನ ಮನೆಗೆ ಎಸಿ ಹಾಕಿಸಿಕೊಡುವಂತೆ ಏರು ಧ್ವನಿಯಲ್ಲಿ ಡಿಮ್ಯಾಂಡ್ ಮಾಡಲಾಗಿದೆ. ತಹಶೀಲ್ದಾರ್ ಅಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಷ್ಟಕ್ಕೇ ಸುಮ್ಮನಾಗದೆ ಮನೆಗೆ ಎಸಿ ಹಾಕಿಸಿಕೊಡಲಿಲ್ಲ ಎಂದು ಮಹಮದ್ ಹಸನ್ ಮುಲ್ಲಾಗೆ ತಹಶೀಲ್ದಾರ್ ರಾಜಣ್ಣ ನೋಟಿಸ್ ನೀಡಿದ್ದಾರೆ. ಸಮರ್ಪಕವಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ.

    ಆಡಿಯೋದಲ್ಲಿ ಮಾತನಾಡಿರುವ ರಾಜಣ್ಣ, ನಾನು ಹೊಸದಾಗಿ ಮನೆ ಮಾಡಿದ್ದೇನೆ. ಈ ಬಿಸಿಲಲ್ಲಿ ಮನೆಯಲ್ಲಿ ಮಲ್ಕೊಳಕ್ಕೆ ಆಗುತ್ತಾ, ಬಿಸಿಲಲ್ಲಿ ಮಲಗಲು ಏನ್ ಬೇಕು ನಮಗೆ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ರಾಜಣ್ಣ ಎಸಿ ಬೇಕು ಎಂದು ಉತ್ತರಿಸಿದ್ದಾರೆ. ನಮಗೆ ಒಂದು ಎಸಿ ವ್ಯವಸ್ಥೆ ಮಾಡಿಸಿ ಮತ್ತೆ ಎಂದು ಕೇಳಿದ್ದಾರೆ. ಅಲ್ಲದೆ ಎಸಿ ಹಾಕಿಸಬೇಕ್ರೀ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾರೆ. ಅಲ್ಲದೆ ಎಸಿ ಹಾಕಿಸಿದರೆ ನಿಮಗೆ 28ರ ವರೆಗೂ ರಜೆ ಕೊಡುತ್ತೇನೆ ಎಂದು ಹೇಳಿದ್ದಾರೆ.

  • ಲಂಚ ಕೇಳಿದ ಎಫ್‍ಡಿಎ ಅಧಿಕಾರಿಯ ಬೆವರಿಳಿಸಿದ ನಿವೃತ್ತ ಯೋಧ

    ಲಂಚ ಕೇಳಿದ ಎಫ್‍ಡಿಎ ಅಧಿಕಾರಿಯ ಬೆವರಿಳಿಸಿದ ನಿವೃತ್ತ ಯೋಧ

    – 50 ಸಾವಿರಕ್ಕಾಗಿ 10 ವರ್ಷ ಕೆಲ್ಸ ಮಾಡಿಕೊಟ್ಟಿರಲಿಲ್ಲ

    ಕೋಲಾರ: ಲಂಚ ಕೇಳಿದ ತಾಲೂಕು ಕಚೇರಿಯ ಎಫ್‍ಡಿಎ ಕ್ಲಾರ್ಕ್ ಒಬ್ಬನಿಗೆ ಮಾಜಿ ಯೋಧರೊಬ್ಬರು ಕಚೇರಿಯಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕೋಲಾರ ಜಿಲ್ಲೆ ಮಾಲೂರು ತಾಲೂಕು ಕಚೇರಿಯಲ್ಲಿ ನಡೆದಿದೆ.

    ಮಾಲೂರು ತಾಲೂಕು ಮಣಿ ಶೆಟ್ಟಿಹಳ್ಳಿ ಗ್ರಾಮದ ಮಾಜಿ ಯೋಧ ವೆಂಕಟೇಶಪ್ಪನ ಜಮೀನಿನ ಕಡತ ವಿಲೇವಾರಿಗಾಗಿ ಕಳೆದ ಹತ್ತು ವರ್ಷಗಳಿಂದ ತಾಲೂಕು ಕಚೇರಿಗೆ ಬರುತ್ತಿದ್ದಾರೆ. ಹೀಗಿದರೂ ಎಫ್‍ಡಿಎ ಹಾಗೂ ತಾಲೂಕು ಕಚೇರಿ ಸಿಬ್ಬಂದಿ ಕೆಲಸ ಮಾಡಿಕೊಡದೆ ಸತಾಯಿಸುತ್ತಿದ್ದು, ಕೆಲಸ ಮಾಡಿಕೊಡಲು 50 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

    ಹಣ ಕೊಡದ ಹಿನ್ನೆಲೆ ಕೆಲಸ ಮಾಡಿಕೊಡದೆ ಇವತ್ತು ನಾಳೆ ಎಂದು ಸತಾಯಿಸುತ್ತಿದ್ದ ಸಿಬ್ಬಂದಿಗೆ ಕಚೇರಿಯಲ್ಲೇ ಇಂದು ಮಾಜಿ ಯೋಧ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳಲು ನೀನು ಲಂಚ ಕೇಳುವುದಾದರೆ ನಮ್ಮ ಮನೆಗೆ ಕಳಿಸು ಅವರನ್ನು ಕೂಲಿ ಮಾಡಿ ಸಾಕಿಕೊಳ್ಳುತ್ತೇನೆ. ನಾನೇನು ನಿಮ್ಮ ಮನೆ ಆಳಲ್ಲ, ನಿನಗ್ಯಾಕೆ ಲಂಚ ಕೊಡಬೇಕು ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇದರಿಂದ ಅವಮಾನಿತರಾದ ತಾಲೂಕು ಕಚೇರಿ ಸಿಬ್ಬಂದಿ ಮಾಜಿ ಯೋಧನನ್ನು ಸಮಾಧಾನಪಡಿಸಿ ಉಳಿದ ಕೆಲಸವನ್ನು ಮಾಡಿ ಕೊಡುವುದಾಗಿ ತಿಳಿಸಿ ಕಳುಹಿಸಿ ಕೊಟ್ಟಿದ್ದಾರೆ.

  • ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ- ವಿಡಿಯೋ ವೈರಲ್

    ವಿಜಯಪುರ: ಜಿಲ್ಲೆಯ ತೊಗರಿ ಖರೀದಿ ಕೇಂದ್ರದಲ್ಲಿ ರೈತರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ, ಇದೀಗ ಖರೀದಿ ಕೇಂದ್ರದ ಸಿಬ್ಬಂದಿ ರೈತರಿಂದ ಹಣ ವಸೂಲಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿನ ತೊಗರಿ ಖರೀದಿ ಕೇಂದ್ರದಲ್ಲಿ ಹಣ ವಸೂಲಿ ಮಾಡಿರುವ ವಿಡಿಯೋ ವೈರಲ್ ಆಗಿದೆ. ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ಇಸಾಕ್ ಬಡಿಗೇರ್ ರೈತರಿಂದ ಪ್ರತಿ ಕ್ವಿಂಟಲ್ ಗೆ 100 ರಿಂದ 150 ರೂಪಾಯಿ ವಸೂಲಿ ಮಾಡುತ್ತಿದ್ದಾನೆ. ಕಾಖಂಡಕಿ ತೊಗರಿ ಖರೀದಿ ಕೇಂದ್ರ ದಲ್ಲಿನ ಸಿಬ್ಬಂದಿಯ ಈ ವರ್ತನೆಯಿಂದ ರೈತರು ಬೇಸತ್ತಿದ್ದಾರೆ.

    ಪ್ರತಿ ರೈತರಿಂದ ಉಚಿತವಾಗಿ ತೊಗರಿ ಖರೀದಿ ಮಾಡಿಕೊಳ್ಳಬೇಕು ಎಂದು ಸರ್ಕಾರ ಆದೇಶ ನೀಡಿದರೂ, ಈ ಕಂಪ್ಯೂಟರ್ ಆಪರೇಟರ್ ಮಾತ್ರ ರಾಜಾರೋಷವಾಗಿ ರೈತರಿಂದ ಸುಲಿಗೆ ಮಾಡುತ್ತಿದ್ದಾನೆ. ಒಬ್ಬ ರೈತರಿಂದ 10 ಕ್ವಿಂಟಲ್ ತೊಗರಿ ಖರೀದಿ ಮಾಡಬೇಕು ಎಂದು ಸರ್ಕಾರದ ಸೂಚನೆಯಿಂದ ಪ್ರತಿ ರೈತರಿಂದಲೂ 10 ಕ್ವಿಂಟಲ್ ಗೆ ಕಡಿಮೆ ಎಂದರೂ ಸಾವಿರ ರೂಪಾಯಿ ಸುಲಿಗೆ ಮಾಡಲಾಗುತ್ತಿದೆ.

    ಎರಡು ದಿನಗಳ ಹಿಂದಷ್ಟೇ ಇಂತಹ ಅಕ್ರಮ ದಂಧೆಯ ತೊಗರಿ ಖರೀದಿ ಕೇಂದ್ರದ ಮೇಲೆ ಎಸಿಬಿ ದಾಳಿ ನಡೆಸಿತ್ತು. ಆದರೂ ಎಚ್ಚೆತ್ತುಗಳ್ಳದ ಖದೀಮರು ಅದೇ ಕೆಲಸ ಮುಂದುವರಿಸಿದ್ದು, ರೈತರಿಂದ ಸುಲಿಗೆ ಮಾಡುತ್ತಿದ್ದಾರೆ.

  • ಲಂಚ ಪಡೆದ ಪೇದೆಗೆ 10 ಸಾವಿರ ದಂಡ, 2 ವರ್ಷ ಕಠಿಣ ಜೈಲು ಶಿಕ್ಷೆ – ಕೋರ್ಟ್ ಆದೇಶ

    ಲಂಚ ಪಡೆದ ಪೇದೆಗೆ 10 ಸಾವಿರ ದಂಡ, 2 ವರ್ಷ ಕಠಿಣ ಜೈಲು ಶಿಕ್ಷೆ – ಕೋರ್ಟ್ ಆದೇಶ

    ಚಿಕ್ಕಮಗಳೂರು: ಪಾಸ್‍ಪೋರ್ಟ್ ಪರಿಶೀಲನೆಗೆ ಲಂಚ ಪಡೆದ ಪೇದೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ನಗರದ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯ ಈ ತೀರ್ಪನ್ನ ಪ್ರಕಟಿಸಿದೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಹರಮಕ್ಕಿ ಗ್ರಾಮದ ಅಜಿತ್ ಎಂಬವರು ಪಾಸ್‍ಪೋರ್ಟ್‍ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ಪರಿಶೀಲನೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಯಿಂದ ಗೋಣಿಬೀಡು ಠಾಣೆಗೆ ಕಳುಹಿಸಲಾಗಿತ್ತು. ಗೋಣಿಬೀಡು ಪೊಲೀಸ್ ಠಾಣಾ ಪೇದೆ ಗಿರೀಶ್ ಕುಮಾರ್ ವರದಿನೀಡಲು 3 ಸಾವಿರ ಲಂಚ ಕೊಡುವಂತೆ ಅರ್ಜಿದಾರ ಅಜಿತ್‍ಗೆ ಆಗ್ರಹಿಸಿ, ಕೊನೆಗೆ 2,500 ರೂ. ಹಣವನ್ನು ನೀಡಿ ಎಂದಿದ್ದರು.

    ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು, ಮೇ 28 2013ರಂದು ಗೋಣಿಬೀಡಿನ ರಾಮೇಶ್ವರ ಬೇಕರಿ ಬಳಿ ಪೇದೆ ಗಿರೀಶ್ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದರು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಉಮೇಶ್.ಎಂ.ಅಡಿಗ ಆರೋಪಿ ಗಿರೀಶ್‍ಗೆ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕ ವಿ.ಟಿ.ಥಾಮಸ್ ವಾದ ಮಂಡಿಸಿದರು.

  • ಲಂಚಬಾಕ ಪಾಲಿಕೆ ಎಂಜಿನಿಯರ್ ಎಸಿಬಿ ಬಲೆಗೆ

    ಲಂಚಬಾಕ ಪಾಲಿಕೆ ಎಂಜಿನಿಯರ್ ಎಸಿಬಿ ಬಲೆಗೆ

    ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪಾಲಿಕೆಯ ಸಹಾಯಕ ಎಂಜಿನಿಯರ್ ಲಂಚ ಪಡೆಯುವಾಗ ಅಧಿಕಾರಿಗಳು ಹಿಡಿದಿದ್ದಾರೆ.

    ಪಾಲಿಕೆ ಸಹಾಯಕ ಎಂಜಿನಿಯರ್ ಹಾಲೇಶಪ್ಪ 7 ಸಾವಿರ ರೂ. ಲಂಚ ಪಡೆಯುವಾದ ಎಸಿಬಿ ಬಲೆಗೆ ಸಿಕ್ಕ ಅಧಿಕಾರಿ. ನಗರದ ಗಾಂಧಿನಗರ ನಿವಾಸಿ ವೆಂಕಟೇಶ್ ಶೆಟ್ಟಿ ತಮ್ಮ ನಿವಾಸದ ಪಕ್ಕದಲ್ಲಿದ್ದ ಖಾಲಿ ನಿವೇಶವನ್ನು ವಾಣಿಜ್ಯ ಉದ್ದೇಶಕ್ಕೆ ಪರಿವರ್ತಿಸಿಕೊಡುವಂತೆ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದರು. ಆದರೆ ಪಾಲಿಕೆ ಎಂಜಿನಿಯರ್ ಹಾಲೇಶಪ್ಪ ವಾಣಿಜ್ಯ ಉದ್ದೇಶಕ್ಕಾಗಿ ನಿವೇಶನ ಪರಿವರ್ತನೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ.

    ಲಂಚ ನೀಡಲು ನಿರಾಕರಿಸಿದ ಹಾಗೂ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ನಿವೇಶನದ ಮಾಲೀಕ ವೆಂಕಟೇಶ್ ಶೆಟ್ಟಿ ಈ ಬಗ್ಗೆ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪಾಲಿಕೆ ಸಹಾಯಕ ಎಂಜಿನಿಯರ್ ಹಾಲೇಶಪ್ಪ 7 ಸಾವಿರ ರೂ. ಲಂಚ ಪಡೆಯುವಾಗ ಕಚೇರಿಯಲ್ಲಿಯೇ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

    ಲಂಚಬಾಕ ಎಂಜಿನಿಯರನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಭ್ರಷ್ಟ ಎಂಜಿನಿಯರ್ ಹಾಲೇಶಪ್ಪ ಈ ಹಿಂದೆ ಚಿಕ್ಕಮಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ ಲಂಚ ಪಡೆಯುವಾಗ ಲೋಕಾಯುಕ್ತ ದಾಳಿಗೂ ಒಳಗಾಗಿದ್ದ ಎನ್ನಲಾಗಿದೆ.

  • ಭೂ ಪರಿವರ್ತನೆಗೆ ರೈತರಿಂದ ಲಂಚ – ಎಸಿಬಿ ಬಲೆಗೆ ಅರಣ್ಯ ಇಲಾಖೆ ಗುಮಾಸ್ತ

    ಭೂ ಪರಿವರ್ತನೆಗೆ ರೈತರಿಂದ ಲಂಚ – ಎಸಿಬಿ ಬಲೆಗೆ ಅರಣ್ಯ ಇಲಾಖೆ ಗುಮಾಸ್ತ

    ಚಾಮರಾಜನಗರ: ಭೂ ಪರಿವರ್ತನೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅರಣ್ಯ ಇಲಾಖೆ ಗುಮಾಸ್ತನೋರ್ವ ಎಸಿಬಿ ಬಲೆಗೆ ಬಿದ್ದ ಘಟನೆ ಚಾಮರಾಜನಗರ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

    ಚಾಮರಾಜನಗರ ಅರಣ್ಯ ಕಚೇರಿಯಲ್ಲಿನ ಗುಮಾಸ್ತ ಪುಟ್ಟಸ್ವಾಮಿ ಸಿಕ್ಕಿ ಬಿದ್ದ ಅರಣ್ಯ ಇಲಾಖೆ ಗುಮಾಸ್ತ. ಹರದನಹಳ್ಳಿಯ ರೈತ ಲಿಂಗರಾಜು ತಮ್ಮ ಜಮೀನಿನ ಭೂ ಪರಿವರ್ತನೆ ಮಾಡಿಕೊಡಲು ಅರ್ಜಿ ಸಲ್ಲಿಸಿದಾಗ, ಈತ ಆ ಕೆಲಸ ಮಾಡಿಕೊಡಲು 3 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಅದರಂತೆ ಇಂದು ಕೆ.ಎಸ್.ಆರ್.ಟಿ.ಸಿ ನಿಲ್ದಾಣಕ್ಕೆ ಬಂದು ಹಣ ಕೊಡಲು ಪುಟ್ಟಸ್ವಾಮಿ ಹೇಳಿದ್ದನಂತೆ.

    ಹೀಗಾಗಿ ಇಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ರೈತನಿಂದ 2500 ರೂ. ಹಣ ಪಡೆಯುವಾಗ ಎಸಿಬಿ ಇನ್ಸ್ ಪೆಕ್ಟರ್ ದೀಪಕ್ ದಾಳಿ ನಡೆಸಿ ಹಣದ ಸಮೇತ ಪುಟ್ಟಸ್ವಾಮಿಯನ್ನು ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪುಟ್ಟಸ್ವಾಮಿಯನ್ನು ವಿಚಾರಣೆಗೊಳಪಡಿಸಿದ್ದಾರೆ.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ, ಪೇದೆ ಅಮಾನತು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‍ಐ, ಪೇದೆ ಅಮಾನತು

    ಕೊಪ್ಪಳ: ರೈತರನ್ನು ಸುಲಿಗೆ ಮಾಡಲು ಮುಂದಾಗಿದ್ದ ಜಿಲ್ಲೆಯ ಓರ್ವ ಪಿಎಸ್‍ಐ ಹಾಗೂ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತು ಮಾಡಿ ಎಸ್‍ಪಿ ಜಿ.ಸಂಗೀತಾ ಅವರು ಆದೇಶ ಹೊರಡಿಸಿದ್ದಾರೆ. ಅಮಾನತು ಆದ ಇಬ್ಬರು ಮಾಡಿದ ಅಕ್ರಮದ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಸುದ್ದಿ ಆಧರಿಸಿ ಅಮಾನತು ಮಾಡಿರುವುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

    ಕಾರಟಗಿ ಪೊಲೀಸ್ ಠಾಣೆಯ ಪಿಎಸ್‍ಐ ವಿಜಯಕೃಷ್ಣ ಹಾಗೂ ಅದೇ ಠಾಣೆಯ ಪೇದೆ ಭೀಮಣ್ಣ ಸೇವೆಯಿಂದ ಅಮಾನತು ಆದವರು. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕಂದಾ ಗ್ರಾಮದ ರೈತ ಭಾಷಾಸಾಬ್ ವಲಿಸಾಬ್ ಅವರಿಗೆ ವಿಜಯಕೃಷ್ಣ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ‘ದೂರು ಕೊಟ್ರೆ ಶೂಟ್ ಮಾಡ್ತೀನಿ’ – ಪಿಎಸ್‍ಐ ವಿರುದ್ಧ ಆರೋಪ

    ಶ್ರವಣಕುಮಾರ್ ಎಂಬಾತನ ಮಾತು ಕೇಳಿದ್ದ ಪಿಎಸ್‍ಐ ರೈತ ಭಾಷಾಸಾಬ್ ವಲಿಸಾಬ್‍ಗೆ ಬೆದರಿಕೆ ಹಾಕಿ, ಹಣಕ್ಕಾಗಿ ಪೀಡಿಸಿ ಆತನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದರು. ಇದರಿಂದಾಗಿ ಭಾಷಾಸಾಬ್ ಎಸ್‍ಪಿ, ಮುಖ್ಯಮಂತ್ರಿ, ಗೃಹ ಸಚಿವರಿಗೆ ಹಾಗೂ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಇದನ್ನು ಆಧರಿಸಿ ಪಬ್ಲಿಕ್ ಟಿವಿ ಜನವರಿ 26ರಂದು ಪಿಎಸ್‍ಐ ವಿಜಯಕೃಷ್ಣ, ಪೇದೆ ಬೀಮಣ್ಣನದ ಹಣ ವಸಲಿ ಬಗ್ಗೆ ಸುದ್ದಿ ಮಾಡಿತ್ತು. ಕೊಪ್ಪಳ ಎಸ್‍ಪಿ ಸಂಗೀತಾ ಅವರು ಗಂಗಾವತಿ ಸಿಪಿಐ ಅವರಿಂದ ವರದಿ ತರಿಸಿಕೊಂಡು ಜನವರಿ 29ರಂದು ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

    ಏನಿದು ಪ್ರಕರಣ?:
    ಕಾರಟಗಿ ಪೊಲೀಸ್ ಠಾಣೆ ಪೇದೆ ಭೀಮಣ್ಣ ಕಳೆದ ಮೂರು ತಿಂಗಳ ಹಿಂದೆ ಮುಕ್ಕುಂದ ಗ್ರಾಮದಲ್ಲಿ ಮರಳು ಸಾಗಾಟದ ಮಾಮೂಲಿ ವಸೂಲಿಗೆ ಪೊಲೀಸರು ಹೋಗಿದ್ದರು. ಆದರೆ ಭಾಷಾಸಾಬ್ ನಮ್ಮ ಗ್ರಾಮವು ನಿಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರಲ್ಲ ಎಂದು ಪೊಲೀಸರ ಬಳಿ ಗಲಾಟೆ ಮಾಡಿದ್ದರು. ಅಲ್ಲದೇ ಮೊಬೈಲ್‍ನಲ್ಲಿ ಗಲಾಟೆಯ ದೃಶ್ಯವನ್ನು ಸೆರೆಹಿಡಿದಿದ್ದರು. ಹೀಗಾಗಿ ಪೊಲೀಸರು ಭಾಷಾಸಾಬ್‍ರನ್ನ ಟಾರ್ಗೆಟ್ ಮಾಡಿದ್ದರು. ಆದ್ದರಿಂದಲೇ ಭಾಷಾಸಾಬ್ ವಿರುದ್ಧ ಸುಳ್ಳು ಕೇಸ್ ದಾಖಲು ಮಾಡಿ ಪೊಲೀಸರು ಹಗೆ ಸಾಧಿಸಿದ್ದರು.

    ಮಾಮೂಲಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಪೊಲೀಸರು ಟಾರ್ಗೆಟ್ ಮಾಡಿದ್ದರಿಂದ ಭಾಷಾಸಾಬ್ ಊರು ಬಿಟ್ಟು ಅಲೆಯುತ್ತಿದ್ದರು. ಅಷ್ಟೇ ಅಲ್ಲದೆ ಪಿಎಸ್‍ಐ ವಿಜಯಕೃಷ್ಣ ಗೂಂಡಾಗಳನ್ನ ಬಿಟ್ಟು ಭಾಷಾಸಾಬ್ ಅವರಿಗೆ ಧಮ್ಕಿ ಹಾಕಿದ್ದರು. ಉಸುಕು ದಂಧೆ ಮಾಡಿ ಪ್ರತಿ ತಿಂಗಳು 35 ಸಾವಿರ ರೂ. ಮಾಮೂಲಿ ನೀಡುವಂತೆ ಪಿಎಸ್‍ಐ ವಿಜಯಕೃಷ್ಣ ಅವರು ಕೇಳಿದ್ದ ಬಗ್ಗೆ ಭಾಷಾಸಾಬ್ ದೂರಿನಲ್ಲಿ ಉಲ್ಲೇಖಿಸಿದ್ದರು.

    ಇದೆಲ್ಲವನ್ನೂ ಮನಗಂಡ ಎಸ್‍ಪಿ ಸಂಗೀತಾ ಅವರು ಕರ್ತವ್ಯಲೋಪ, ಲಂಚಕ್ಕೆ ಬೇಡಿಕೆ, ಅಧಿಕಾರ ದುರುಪಯೋಗ, ಠಾಣಾ ವ್ಯಾಪ್ತಿ ಮೀರಿದ ವ್ಯಕ್ತಿಯ ಮೇಲೆ ದೌರ್ಜನ್ಯ, ಹಲ್ಲೆ ಮಾಡುವ ಮೂಲಕ ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಕೀಳರಿಮೆ ಮೂಡುವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತಿನ ನಡವಳಿ) ನಿಯಮಗಳು 1965ರ ನಿಯಮದ ಪ್ರಕಾರ ಅಮಾನತಿನಲ್ಲಿಡಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

  • ರೈತನಿಂದ 14 ಸಾವಿರ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

    ರೈತನಿಂದ 14 ಸಾವಿರ ಪಡೆಯೋವಾಗ ಎಸಿಬಿ ಬಲೆಗೆ ಬಿದ್ದ ಗ್ರಾಮಲೆಕ್ಕಾಧಿಕಾರಿ

    ಗದಗ: ರೈತನ ಜಮೀನಿನ ಪಹಣಿ ಬದಲಾವಣೆಗೆ ಲಂಚದ ಬೇಡಿಕೆಯಿಟ್ಟಿದ್ದ ಗ್ರಾಮಲೆಕ್ಕಾಧಿಕಾರಿ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿರೋ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆದಿದೆ.

    ಲಕ್ಷ್ಮೇಶ್ವರ ತಾಲೂಕಿನ ಪುಟ್ಟಗಾಂವ್ ಬಡ್ನಿ ಪಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಫಿರೋಜ್‍ಖಾನ್ ಗೋರಿಖಾನ್ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಫಿರೋಜ್‍ಖಾನ್ ಪುಟಂಗಾವ್ ಬಡ್ನಿ ಗ್ರಾಮದ ರೈತ ರಾಮಪ್ಪ ಅಣ್ಣಿಗೇರಿ ಅನ್ನುವರ ಜಮೀನಿನ ಪಹಣಿ ಬದಲಾವಣೆಗೆ 14 ಸಾವಿರ ರೂಪಾಯಿ ಲಂಚ ಇಟ್ಟಿದ್ದನು.

    ಮನೆಗೆ ಬಂದು ಹಣ ಕೊಟ್ಟರೆ ಪಹಣಿ ಮನೆಯಲ್ಲಿ ಕೊಡುತ್ತೇನೆ. ಹಣ ಮನೆಗೆ ತೆಗೆದುಕೊಂಡು ಬಾ ಎಂದು ರೈತನಿಗೆ ಗ್ರಾಮ ಲೆಕ್ಕಾಧಿಕಾರಿ ಫಿರೋಜ್‍ಖಾನ್ ಹೇಳಿದ್ದನು. ಮನೆಯಲ್ಲಿ ಹಣ ನೀಡುವ ವೇಳೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಎಸಿಬಿ ಡಿ.ವೈಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಎಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

  • ಸರ್ಕಾರಿ ಯೋಜನೆಗೆ ಒಳಪಡುವ ಎಲ್ಲರೂ ಎಸಿಬಿ ಚೌಕಟ್ಟಿಗೆ: ಡಿವೈಎಸ್ಪಿ ಗೋಪಾಲ್

    ಸರ್ಕಾರಿ ಯೋಜನೆಗೆ ಒಳಪಡುವ ಎಲ್ಲರೂ ಎಸಿಬಿ ಚೌಕಟ್ಟಿಗೆ: ಡಿವೈಎಸ್ಪಿ ಗೋಪಾಲ್

    ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ವತಿಯಿಂದ ಸಾರ್ವಜನಿಕ ಸಭೆಯನ್ನ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಗ್ರಾಮ ಪಂಚಾಯತಿ ಆವರಣದಲ್ಲಿ ಆಯೋಜಿಸಿದ್ದರು.

    ಸರ್ಕಾರಿ ಯೋಜನೆ ಮತ್ತು ಅನುದಾನದ ಹಣಕ್ಕೆ ಒಳಪಡುವವರು ಎಲ್ಲರೂ ಎಸಿಬಿ ಚೌಕಟ್ಟಿಗೆ ಬರುತ್ತಾರೆ. ಯಾರು ಲಂಚ ಕೇಳುವ ಹಾಗೂ ಸರ್ಕಾರಿ ಅಧಿಕಾರಿಗಳು ಕೆಲಸವನ್ನು ಮುಂದೂಡಿ ಹಣಕ್ಕೆ ಬೇಡಿಕೆ ಇಟ್ಟರೆ ಕ್ರಮ ಕೈಗೊಳ್ಳುತ್ತವೆ. ಸಾರ್ವಜನಿಕ ಸಭೆಯಲ್ಲಿ ಆ ಸ್ಥಳದಲ್ಲಿ ಪರಿಹಾರ ಜನರಿಗೆ ದೊರೆಯುತ್ತದೆ ಇಂತಹ ಸಭೆಗಳನ್ನು ಸದುಪಯೋಗಪಡಿಸುಕೊಳ್ಳಬೇಕೆಂದು ಡಿವೈಎಸ್ಪಿ ಗೋಪಾಲ್ ಜೋಗಿನ್ ನಾಗರಿಕರಿಗೆ ಸಲಹೆ ನೀಡಿದರು.

    ನಂತರ ಮಾತನಾಡಿದ ಎಸಿಬಿ ನಿರೀಕ್ಷಕ ಕುಮಾರಸ್ವಾಮಿ, ಸರ್ಕಾರಿ ಅಧಿಕಾರಿಗಳು ಯಾರೇ ಆಗಲಿ, ಸರ್ಕಾರಿ ಯೋಜನೆ ರೂಪಿಸಲು ಹಾಗೂ ಕೆಲಸ ನಿರ್ವಹಿಸಲು ಹಣಕ್ಕೆ ಬೇಡಿಕೆಯಿಟ್ಟಾಗ ದೂರು ನೀಡಿ. ದೂರು ನೀಡಿದವರ ಹೆಸರು ಗೌಪ್ಯವಾಗಿಡುಲಾಗುವುದು. ಜನರಿಗೆ ಕೆಲಸ ವಿಳಂಬ ಮಾಡಿದ್ದಾರೆ ಸರ್ಕಾರಿ ನೌಕರರ ವಿರುದ್ಧ ಸಾರ್ವಜನಿಕರು ಮೃದು ಧೋರಣೆ ತೋರಬಹುದು. ಆದರೆ ಭಯ ಪಡದೇ ಭ್ರಷ್ಟಚಾರಕ್ಕೆ ಇಳಿದಾಗ ದೂರು ನೀಡಿ ಎಂದರು.

    ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸೋಂಪುರ ಸುತ್ತಮುತ್ತ ಗ್ರಾಮ ಪಂಚಾಯತಿ ಪಿಡಿಓಗಳನ್ನು ಸಭೆಗೆ ಕರೆದಿದ್ದರೂ ಗೈರದಾವರೆ ಹೆಚ್ಚು. ಇದಕ್ಕೆ ಡಿವೈಎಸ್ಪಿ ಗೋಪಾಲ್ ಜೋಗಿನ್ ಮುಂದಿನ ಸಾರ್ವಜನಿಕ ಸಭೆಗಳಿಗೆ ಅಧಿಕಾರಿಗಳು ಗೈರಾಗಬಾರದು ಎಂದು ಸಂಬಂಧಪಟ್ಟ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿ ಸಿಇಓಗಳಿಗೆ ಪತ್ರ ಬರೆದು ಎಚ್ಚರಿಸುತ್ತೇವೆ. ಎಲ್ಲಾ ಸರ್ಕಾರಿ ಕಚೇರಿ ಮುಂದೆ ಎಸಿಬಿ ಕಚೇರಿ ಹಾಗೂ ಅಧಿಕಾರಿಗಳ ವಿಳಾಸ ಮತ್ತು ದೂರವಾಣಿ ಸಂಖ್ಯೆ ಇರಬೇಕು. ಯಾವ ಕಚೇರಿ ಮುಂದೆ ಈ ಎಸಿಬಿ ಕಚೇರಿ ವಿಳಾಸ ಇರದಿದ್ದರೆ ಕ್ರಮಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಪಂಚಾಯತಿ ಪಿಡಿಓಗಳಾದ ರವೀಂದ್ರ, ಗಂಗರಂಗಯ್ಯ, ಗ್ರಾಮ ಪಂಚಾಯತಿ ಸದಸ್ಯರು, ಕೃಷಿ ಅಧಿಕಾರಿಗಳು, ಇನ್ನಿತರರು ಹಾಜರಿದ್ದರು.