Tag: ರ್ಯಾಲಿ

  • ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ಭದ್ರತಾ ಲೋಪವಾಗಿಲ್ಲ, ಜನರಿಲ್ಲದೇ ಖಾಲಿ ಕುರ್ಚಿಗಳಿದ್ದ ಕಾರಣ ಪಿಎಂ ರ‍್ಯಾಲಿ ರದ್ದು: ಪಂಜಾಬ್‌ ಸಿಎಂ

    ನವದೆಹಲಿ: ಭದ್ರತಾ ಲೋಪದ ಕಾರಣದಿಂದಾಗಿ ಪಂಜಾಬ್‌ನಲ್ಲಿ ರ‍್ಯಾಲಿ ಮತ್ತು ಹುತಾತ್ಮರ ಸ್ಮಾರಕಕ್ಕೆ ಭೇಟಿ ನೀಡುವ ಕಾರ್ಯಕ್ರಮ ರದ್ದುಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಾಪಸ್ಸಾದರು ಎಂಬ ಬಿಜೆಪಿ ಆರೋಪವನ್ನು ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ತಳ್ಳಿಹಾಕಿದ್ದಾರೆ. ಸರ್ಕಾರದಿಂದ ಯಾವುದೇ ಭದ್ರತಾ ಲೋಪವಾಗಿಲ್ಲ, ಜನರೇ ಇಲ್ಲದ ಕಾರಣ ಬಿಜೆಪಿ ರ‍್ಯಾಲಿ ರದ್ದುಗೊಳಿಸಿದೆ ಎಂದು ಹೇಳಿದ್ದಾರೆ.

    ಹುಸೇನಿವಾಲಾದಲ್ಲಿರುವ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಬೇಕಿತ್ತು. ಆದರೆ ಕಾರ್ಯಕ್ರಮ ರದ್ದುಗೊಳಿಸಿ ಪ್ರಧಾನಿ ಮೋದಿ ಅವರು ವಾಪಸ್ಸಾಗಿದ್ದಾರೆ. ಹವಾಮಾನ ವೈಪರೀತ್ಯದಿಂದಾಗಿ ಕಾರ್ಯಕ್ರಮ ಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿಯನ್ನು ಕರೆದೊಯ್ಯಲು ಸಾಧ್ಯವಾಗಲಿಲ್ಲ. ಹೀಗಾಗಿ ಹೆಲಿಕಾಪ್ಟರ್‌ ಪ್ರಯಾಣ ಮೊಟಕುಗೊಳಿಸಿ, ರಸ್ತೆ ಮಾರ್ಗವಾಗಿ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ಕ್ರಮವಹಿಸಲಾಗಿತ್ತು. ಇದನ್ನೂ ಓದಿ: ಪಂಜಾಬ್ ಫ್ಲೈ ಓವರ್‌ನಲ್ಲಿ 20 ನಿಮಿಷ ಸಿಲುಕಿದ ಮೋದಿ – ಕಾರ್ಯಕ್ರಮ ರದ್ದು

    ಆದರೆ ಫ್ಲೈಓವರ್‌ ಬಳಿ ಬೃಹತ್‌ ಪ್ರತಿಭಟನೆ ನಡೆಯುತ್ತಿದ್ದರಿಂದ ಪ್ರಧಾನಿ ಮೋದಿ ಅವರು ಫ್ಲೈ ಓವರ್‌ನಲ್ಲೇ ಸಿಲುಕುವಂತಾಯಿತು. ಇದರಿಂದ ಅವರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಇದಕ್ಕೆ ಭದ್ರತಾ ಲೋಪ ಮತ್ತು ಪಂಜಾಬ್‌ ಸರ್ಕಾರವೇ ಕಾರಣ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

    ಆದರೆ ಈ ಆರೋಪವನ್ನು ಕಾಂಗ್ರೆಸ್‌ ತಳ್ಳಿ ಹಾಕಿದೆ. ಪ್ರಧಾನಿ ಮೋದಿ ಅವರು ಪಾಲ್ಗೊಳ್ಳಬೇಕಿದ್ದ ಸಮಾರಂಭದಲ್ಲಿ ಜನರೇ ಇರಲಿಲ್ಲ. ಬರೀ ಖಾಲಿ ಕುರ್ಚಿಗಳಷ್ಟೇ ಇದ್ದವು. 70 ಸಾವಿರ ಜನರು ಪಾಲ್ಗೊಳ್ಳಬೇಕಿದ್ದ ರ‍್ಯಾಲಿಯಲ್ಲಿ ಕೇವಲ 700 ಮಂದಿ ಮಾತ್ರ ಇದ್ದರು. ಆದ ಕಾರಣ ಕಾರ್ಯಕ್ರಮ ನಡೆಸದೇ ವಾಪಸ್ಸಾಗಿದ್ದಾರೆ ಎಂದು ಪಂಜಾಬ್‌ ಸಿಎಂ ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಜೀವಂತವಾಗಿ ಬಂದಿದ್ದೇನೆ, ನಿಮ್ಮ ಸಿಎಂಗೆ ಧನ್ಯವಾದ ಹೇಳಿ ಎಂದ ಮೋದಿ

    ಯಾವುದೇ ಭದ್ರತಾ ಲೋಪವಾಗಿಲ್ಲ. ಪಿಎಂ ರ‍್ಯಾಲಿ ಹಿನ್ನೆಲೆಯಲ್ಲಿ ಭದ್ರತೆಗೆ ಸಂಬಂಧಿಸಿದಂತೆ ನಾನು ನಿನ್ನೆ ರಾತ್ರಿಯೂ ಮೇಲ್ವಿಚಾರಣೆ ನಡೆಸಿದ್ದೇನೆ. ಪ್ರಧಾನಿ ಅವರ ರಸ್ತೆ ಮಾರ್ಗ ಪ್ರಯಾಣ ವ್ಯವಸ್ಥೆ ಕೊನೆ ಕ್ಷಣದಲ್ಲಿ ಮಾಡಲಾಗಿದೆ. ಅದಕ್ಕೂ ಮೊದಲು ಅವರು ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಯೋಜನೆ ಹಾಕಿಕೊಂಡಿದ್ದರು ಎಂದು ಸಿಎಂ ತಿಳಿಸಿದ್ದಾರೆ.

  • ಪ್ರಧಾನಿ, ಗೃಹ ಸಚಿವರ ಕಾರ್ಯಕ್ರಮಕ್ಕೆ ಸಾರ್ವಜನಿಕರ ಹಣ: ಪ್ರಿಯಾಂಕಾ ಗಾಂಧಿ

    ಪ್ರಧಾನಿ, ಗೃಹ ಸಚಿವರ ಕಾರ್ಯಕ್ರಮಕ್ಕೆ ಸಾರ್ವಜನಿಕರ ಹಣ: ಪ್ರಿಯಾಂಕಾ ಗಾಂಧಿ

    ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್‍ಯಾಲಿಗಳಿಗೆ ಜನರನ್ನು ಸೇರಿಸಲು ಉತ್ತರ ಪ್ರದೇಶ ಸರ್ಕಾರ ಸಾರ್ವಜನಿಕರ ಹಣವನ್ನು ವ್ಯಯಿಸುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆಕ್ರೋಶವ್ಯಕ್ತಪಡಿಸಿದ್ದಾರೆ.

    ಬಿಜೆಪಿಯ ಇಂಥ ಚಾಲಾಕಿ ರಾಜಕೀಯವನ್ನು ರಾಜ್ಯದ ಪ್ರತಿಯೊಬ್ಬರು ಅರ್ಥ ಮಾಡಿಕೊಂಡಿದ್ದಾರೆ. ಅವರು ರ್‍ಯಾಲಿಗಳಿಗೆ ಜನರನ್ನು ಸೇರಿಸಲು ಅಧಿಕಾರಿಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಮಾಧ್ಯಮಗಳ ವರದಿಗಳ ತುಣುಕನ್ನು ಟ್ವೀಟ್ ಜೊತೆಗೆ ಹಂಚಿಕೊಂಡು ವಾಗ್ದಾಳಿ ಮಾಡಿದ್ದಾರೆ. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

    ಟ್ವೀಟ್‍ನಲ್ಲಿ ಏನಿದೆ?: ಲಾಕ್‍ಡೌನ್ ಸಮಯದಲ್ಲಿ ಲಕ್ಷಾಂತರ ಕಾರ್ಮಿಕರು ದೆಹಲಿಯಿಂದ ಉತ್ತರ ಪ್ರದೇಶದ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ಹಿಂದಿರುಗುತ್ತಿದ್ದಾಗ ಬಿಜೆಪಿ ಸರ್ಕಾರ ಅವರಿಗೆ ಬಸ್ ವ್ಯವಸ್ಥೆ ಮಾಡಲಿಲ್ಲ. ಆದರೆ ಪ್ರಧಾನಿ ಮತ್ತು ಗೃಹ ಸಚಿವರ ಕಾರ್ಯಕ್ರಮಗಳಿಗೆ ಜನ ಸೇರಿಸಲು ಸರ್ಕಾರ ಕೋಟಿಗಟ್ಟಲೆ ಸಾರ್ವಜನಿಕರ ಹಣವನ್ನು ವೆಚ್ಚ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.

  • ಕೆಂಪುಕೋಟೆ ಮೇಲೆ ಬಾವುಟ ಪ್ರಕರಣ- ನಟ ದೀಪ್ ಸಿಧುಗೆ ಜಾಮೀನು

    ಕೆಂಪುಕೋಟೆ ಮೇಲೆ ಬಾವುಟ ಪ್ರಕರಣ- ನಟ ದೀಪ್ ಸಿಧುಗೆ ಜಾಮೀನು

    ನವದೆಹಲಿ: ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳ ಟ್ರಾಕ್ಟರ್ ರ‍್ಯಾಲಿಯಲ್ಲಿ ಕೆಂಪು ಕೋಟೆ ಮೇಲೆ ಬಾವುಟ ಹಾರಿಸಿದ್ದ ನಟ ದೀಪ್ ಸಿಧುಗೆ ದೆಹಲಿ ಕೋರ್ಟ್ ಜಾಮೀನು ನೀಡಿದೆ.

    ಜನವರಿ 26 ರ ಹಿಂಸಾಚಾರ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ದೀಪ್ ಸಿಧುಗೆ ಜಾಮೀನು ನೀಡಿದೆ. ಕಳೆದ ವಿಚಾರಣೆಯ ವೇಳೆ, ಜನವರಿ 26 ರಂದು ಕೆಂಪು ಕೋಟೆಗೆ ಹೋಗುವಂತೆ ಆಂದೋಲನ ನಡೆಸುತ್ತಿರುವ ರೈತರಿಗೆ ಯಾವುದೇ ಕರೆ ನೀಡಿಲ್ಲ ಎಂದು ದೀಪ್ ಸಿಧು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪ್ರತಿಭಟನೆಗಾಗಿ ಕರೆ ನೀಡಿದ್ದು ರೈತ ಮುಖಂಡರು. ದೀಪು ಸಿಧು ರೈತ ಸಂಘದ ಸದಸ್ಯರೂ ಅಲ್ಲ. ಸಿಧು ಜನಸಮೂಹವನ್ನು ಸಜ್ಜುಗೊಳಿಸಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ. ಹಿಂಸಾಚಾರದಲ್ಲಿ ಪಾಲ್ಗೊಂಡಿಲ್ಲ ಎಂದು ದೀಪ್ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

    ದೀಪ ಸಿಧು ಫೇಸ್‍ಬುಕ್‍ನಲ್ಲಿ ವೀಡಿಯೋ ಪೋಸ್ಟ್ ಮಾಡಿದ್ದು ತಪ್ಪು. ಆದ್ರೆ ಪ್ರತಿ ತಪ್ಪು ಅಪರಾಧವಲ್ಲ ಎಂದು ವಕೀಲರು ವಾದ ಮಂಡಿಸಿದ್ದರು. ನಾನು ವೀಡಿಯೋ ಪೋಸ್ಟ್ ಮಾಡಿದ ಕಾರಣ ಮಾಧ್ಯಮಗಳು ನನ್ನನ್ನು ಮುಖ್ಯ ಆರೋಪಿ ಎಂದು ಹೆಸರಿಸಿದೆ. ನನ್ನನ್ನು ಮುಖ್ಯ ಸಂಚುಕೋರನಾಗಿ ಮಾಧ್ಯಮಗಳು ಬಿಂಬಿಸಿದ್ದೇಕೆ ಎಂದು ನನಗೆ ಗೊತ್ತಿಲ್ಲ? ಏಪ್ರಿಲ್ 8 ರಂದು ಜಾಮೀನು ಅರ್ಜಿಯ ಸಂದರ್ಭದಲ್ಲಿ ಸಿಧು ತನ್ನ ವಕೀಲರ ಮೂಲಕ ಹೇಳಿದ್ದರು.

    ಪ್ರಕರಣ ಹಿನ್ನೆಲೆ:
    ಕೃಷಿಕಾನೂನು ಮತ್ತು ಎಪಿಎಂಸಿ ಕಾನೂನು ವಿರೋಧಿಸಿ ರೈತರ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಮತ್ತು ಕೆಂಪು ಕೋಟೆ ಮೇಲೆ ಧಾರ್ಮಿಕ ಧ್ವಜ ಹಾರಿಸಲು ಸಹಕರಿಸಿದ್ದನು. ಅಷ್ಟೇ ಅಲ್ಲದೇ ಅಲ್ಲಿಂದಲೇ ಫೇಸ್‍ಬುಕ್ ಲೈವ್ ಮಾಡಿದ್ದನು. ಸಿಧುನಿಂದಲೇ ಪ್ರತಿಭಟನೆ ಹಾದಿ ತಪ್ಪಿತು ಎಂದು ರೈತ ಮುಖಂಡರು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಧು ಬಂಧನವಾಗಿತ್ತು. ಸಂಬಂಧ ದೆಹಲಿಯ ವಿಶೇಷ ಪೊಲೀಸ್ ತಂಡ ನಟ, ಗಾಯಕ ದೀಪ್ ಸಿಧುನನ್ನು ಬಂಧಿಸಲಾಗಿತ್ತು. ಇದೀಗ ಸಿಧುಗೆ ಜಾಮೀನು ಸಿಕ್ಕಿದೆ.

  • ರ‍್ಯಾಲಿ ವೇಳೆ ಸೆಲ್ಫಿಗೆಂದು ಬಂದ ಅಭಿಮಾನಿಯನ್ನು ದೂಡಿದ ಜಯಾ ಬಚ್ಚನ್

    ರ‍್ಯಾಲಿ ವೇಳೆ ಸೆಲ್ಫಿಗೆಂದು ಬಂದ ಅಭಿಮಾನಿಯನ್ನು ದೂಡಿದ ಜಯಾ ಬಚ್ಚನ್

    ಕೋಲ್ಕತ್ತಾ: ಬಾಲಿವುಡ್ ನಟಿ ಕಮ್ ರಾಜಕಾರಣಿ ಜಯಾ ಬಚ್ಚನ್ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸಿ ಶುಕ್ರವಾರ ಹೌರದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ನೆಚ್ಚಿನ ನಟಿ ಜಯಾ ಬಚ್ಚನ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಯನ್ನು ದೂಡಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಮೊದಲಿನಿಂದಲೂ ಫೋಟೋ ಹಿಡಿದುಕೊಳ್ಳುವುದೆಂದರೆ ಜಯಾ ಬಚ್ಚನ್‍ಗೆ ಇಷ್ಟವಾಗುವುದಿಲ್ಲ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಅದರಲ್ಲೂ ಅನುಮತಿ ಇಲ್ಲದೇ ಫೋಟೋ ಕ್ಲಿಕ್ಕಿಸಿಕೊಳ್ಳುವವರೆಂದರೆ ಇನ್ನೂ ಇಷ್ಟವಾಗುವುದಿಲ್ಲ. ಈ ಹಿಂದೆ ಹಲವು ಪತ್ರಕರ್ತರು, ಛಾಯಾಗ್ರಹಕರು, ಅಭಿಮಾನಿಗಳ ವಿರುದ್ಧ ಇದೇ ವಿಚಾರವಾಗಿ ಕಿಡಿಕಾರಿದ್ದಾರೆ.

    ಸದ್ಯ ಇತ್ತೀಚೆಗೆ ನಡೆಸಿದ ರ‍್ಯಾಲಿ ವೇಳೆ ವ್ಯಕ್ತಿಯೋರ್ವ ಜಯಾ ಬಚ್ಚನ್ ಜೊತೆ ಫೋನ್ ಮೂಲಕ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಟ್ರೈ ಮಾಡಿದ್ದಾನೆ. ಈ ವೇಳೆ ಜಯಾ ಬಚ್ಚನ್ ವ್ಯಕ್ತಿಯ ತಲೆಯನ್ನು ತಳ್ಳಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಇದು ಅಸಭ್ಯಕರ ವರ್ತನೆ ಹಾಗೂ ಅವಮಾನಕರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ಮತ್ತೆ ಕೆಲವರು ಇದೇ ರೀತಿ ಪುರುಷ ರಾಜಕಾರಣಿಗಳು ಮಹಿಳೆಯರಿಗೆ ಮಾಡಿದ್ದರೆ, ಈ ಘಟನೆ ಹೆಚ್ಚು ಸುದ್ದಿಯಾಗುತ್ತಿತ್ತು ಎಂದು ಕಮೆಂಟ್ ಮಾಡಿದ್ದಾರೆ.

  • ರಾಜಧಾನಿಯಲ್ಲಿಂದು ವಿಂಟೇಜ್ ಕಾರುಗಳ ರಾಯಲ್ ರ‍್ಯಾಲಿ

    ರಾಜಧಾನಿಯಲ್ಲಿಂದು ವಿಂಟೇಜ್ ಕಾರುಗಳ ರಾಯಲ್ ರ‍್ಯಾಲಿ

    ಬೆಂಗಳೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸದ ಅಂಗವಾಗಿ ರಾಜಧಾನಿಯಲ್ಲಿಂದು ವಿಂಟೇಜ್ ಕಾರ್‌ಗಳ ರಾಯಲ್ ರ‍್ಯಾಲಿ ಮಾಡಲಾಗಿದೆ.

    ಸಾರಿಗೆ ಇಲಾಖೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಸ್ತೆ ಸುರಕ್ಷತೆ – ಜೀವನದ ರಕ್ಷೆ ಎಂಬ ಧ್ಯೇಯದೊಂದಿಗೆ ಜನರಲ್ಲಿ ರಸ್ತೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತ್ತು.

    ಈ ರ‍್ಯಾಲಿಯಲ್ಲಿ ವಿಶೇಷವಾಗಿ ವಿಂಟೇಜ್ ಕಾರ್, ಬೈಕ್ ಹಾಗೂ ಆಟೋಗಳ ರ‍್ಯಾಲಿ ನಡೆಸಲಾಯಿತು. ಈ ವಿಶೇಷ ಕಾರ್‌ಗ ರ‍್ಯಾಲಿಗೆ ಸಾರಿಗೆ ಆಯುಕ್ತ ನರೇಂದ್ರ ಹೊಲ್ಕರ್ ಚಾಲನೆ ನೀಡಿದರು. ನಗರದ ಕಸ್ತೂರಿ ನಗರದಿಂದ ಕಸ್ತೂರಬಾ ರೋಡ್‍ವರೆಗೂ ನಡೆದ ರಾಯಲ್ ಕಾರ್‌ಗಳ ರ‍್ಯಾಲಿ ಜನರ ಗಮನ ಸೆಳೆಯಿತು.


    ಈ ರ‍್ಯಾಲಿಯಲ್ಲಿ ಡೈಂಮ್ಲರ್ ಬಿಬಿ18, ಫೋರ್ಡ್ ಎ, ಆಸ್ಟೀನ್, ಮೋರೆಸ್ , ಕ್ಯಾಡಿಲ್ಯಾಕ್, ಮರ್ಸಿಡಿಸ್, ಅಂಬಾಸಿಡರ್, ಶೆವರ್ಲೆ, ಸೇರಿದಂತೆ ಹಲವು ಕಾರ್‌ಗಳಿದ್ದವು. ಮೈಸೂರು ಮಹಾರಾಜರು ಬಳಸುತ್ತಿದ್ದ ಕಾರು ಸೇರಿದಂತೆ ಹಲವು ದೇಶಗಳಿಂದ ಆಮದು ಆಗಿದ್ದ ಕಾರ್‍ಗಳಿದ್ದವು. ಬೈಕರ್ಸ್, ಲೇಡಿ ಆಟೋ ಡ್ರೈವರ್‍‍ಗಳು ರ‍್ಯಾಲಿ ಮಾಡುವುದರ ಮೂಲಕ ಸಾರ್ವಜನಿಕರಿಗೆ ರಸ್ತೆ ನಿಯಮಗಳ ಬಗ್ಗೆ ಅರಿವು ಮೂಡಿಸಿದರು.

    ಪ್ರತಿ ಬಾರಿಯೂ ರಸ್ತೆ ಸುರಕ್ಷತಾ ಸಪ್ತಾಹ ನಡೆಯುತ್ತಿದ್ದು ಸಾರಿಗೆ ಇಲಾಖೆ ಜನರಿಗೆ ಅರಿವು ಮೂಡಿಸುತ್ತಲೇ ಇರುತ್ತದೆ. ಆದರೆ ಈ ಬಾರಿ ಸ್ವಲ್ಪ ವಿಭಿನ್ನವಾಗಿ ಮತ್ತು ವಿಶೇಷವಾಗಿ ರೋಡ್ ರೂಲ್ಸ್‍ಗಳನ್ನ ಜನರಿಗೆ ಹೇಳಿ ಕೊಡಲಾಗಿದೆ.

  • ಸೇತುವೆ ಕಟ್ಟಿ ಗೋಡೆಗಳನ್ನಲ್ಲ: ರಾಹುಲ್ ಗಾಂಧಿ

    ಸೇತುವೆ ಕಟ್ಟಿ ಗೋಡೆಗಳನ್ನಲ್ಲ: ರಾಹುಲ್ ಗಾಂಧಿ

    ನವದೆಹಲಿ: ಕೃಷಿ ಕಾಯ್ದೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರ ಸೇತುವೆ ನಿರ್ಮಿಸಬೇಕೆ ಹೊರತು ಗೋಡೆಗಳನ್ನಲ್ಲ ಎಂದು ಟ್ವೀಟ್ ಮಾಡುವ ಮೂಲಕವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಮುಂದುವರಿಸಿದ್ದಾರೆ. ಸುತ್ತಮುತ್ತಲಿನ ಗ್ರಾಮಗಳಿಂದ ಬಂದು ರೈತರು ಕೈಜೋಡಿಸುತ್ತಿದ್ದಾರೆ. ಈ ವಿಚಾರವಾಗಿ ರಾಹುಲ್ ಗಾಂಧಿ ಸರ್ಕಾರ ವಿರುದ್ಧ ಟ್ವೀಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಭಾರತೀಯ ಸರ್ಕಾರ ಸೇತುವೆಗಳನ್ನು ಕಟ್ಟಿಸಿ, ಗೋಡೆಗಳನ್ನಲ್ಲ ಎಂದು ಒಂದೇ ಸಾಲಿನಲ್ಲಿ ಬರೆದುಕೊಂಡು ರೈತರ ಹೋರಾಟ ತಡೆಯಲು ನಿರ್ಮಿತವಾದ ಕೆಲವು ತಡೆಗೋಡೆಗಳ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಚಾಟಿ ಬೀಸಿದ್ದಾರೆ.

     

    ಘಾಜಿಪುರ್ ಗಡಿಯಲ್ಲಿ ನೂರಾರು ಪೊಲೀಸರು ಸೈನಿಕರಂತೆ ನಿಂತಿದ್ದಾರೆ. ಹತ್ತಾರು ಅಡಿಗಳಷ್ಟು ದೂರ ಸಿಮೆಂಟ್ ಬ್ಯಾರಿಕೇಡ್‍ಗಳನ್ನು ಜೋಡಿಸಲಾಗಿದೆ. ಬ್ಯಾರಿಕೇಡ್‍ನ ಮಧ್ಯೆ ಸಿಮೆಂಟ್ ಹಾಕಲಾಗಿದೆ. ಕಬ್ಬಿಣದ ಬ್ಯಾರಿಕೇಡ್‍ಗಳನ್ನು ಹಾಕಿ ರಾಡುಗಳನ್ನು ಹಿಡಿದು ನಿಂತಿದ್ದಾರೆ. ರೈತರ ಪ್ರತಿಭಟನೆ ತೀವ್ರವಾಗದಂತೆ ತಡೆಯಲು ಹಾಗೂ ದೆಹಲಿಯನ್ನು ಪ್ರವೇಶಿಸದಂತೆ ತಡೆಯಲು ಪೊಲೀಸರು ಭದ್ರಕೋಟೆ ನಿರ್ಮಿಸಿರುವ ಫೋಟೋಗಳನ್ನು ರಾಹುಲ್ ಗಾಂಧಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

  • ಸರ್ಕಾರದ ವಿರುದ್ಧ ಗದಗನಲ್ಲಿ ಅನ್ನದಾತರ ಆಕ್ರೋಶ

    ಸರ್ಕಾರದ ವಿರುದ್ಧ ಗದಗನಲ್ಲಿ ಅನ್ನದಾತರ ಆಕ್ರೋಶ

    ಗದಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ, ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಕ್ಕಾಗಿ ಆಗ್ರಹಿಸಿ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ.

    ನೂರಾರು ರೈತರು ಟ್ರ್ಯಾಕ್ಟರ್  ರ‍್ಯಾಲಿ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೂ ಬೃಹತ್ ಪ್ರತಿಭಟನಾ  ರ‍್ಯಾಲಿ ನಡೆಸಿದರು.

    ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಬೇಕು, ರೈತರ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಬೆಳೆಗಳಿಗೆ ಖರೀದಿ ಕೇಂದ್ರ ಸ್ಥಾಪಿಸುವುದರ ಜೊತೆಗೆ ಎಲ್ಲಾ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದರು. ಮುಂಡರಗಿಯ ಕೊಪ್ಪಳ ಸರ್ಕಲ್ ನಲ್ಲಿ ರಸ್ತೆತಡೆ ಮಾಡಿ ಮಾನವ ಸರಪಳಿ ನಿರ್ಮಿಸಿದರು.

    ತಹಶೀಲ್ದಾರ ಕಚೇರಿ ಎದುರು ಸಹ ಅರಭಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ, ರಸ್ತೆ ಮಧ್ಯ ಕುಳಿತ ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟಕ್ಕೆ ಅನೇಕ ರೈತಪರ, ಕನ್ನಡಪರ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು. ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.

  • ರ‍್ಯಾಲಿ ವೇಳೆ ಟ್ರ್ಯಾಕ್ಟರ್ ಮಗುಚಿ ಬಿದ್ದು ಯುವಕ ಸಾವು

    ರ‍್ಯಾಲಿ ವೇಳೆ ಟ್ರ್ಯಾಕ್ಟರ್ ಮಗುಚಿ ಬಿದ್ದು ಯುವಕ ಸಾವು

    ನವದೆಹಲಿ: ಆಸ್ಟ್ರೇಲಿಯಾದಲ್ಲಿ ಉನ್ನತವ್ಯಾಸಂಗ ಮಾಡುತ್ತಿದ್ದ ಯುವಕ, ದೆಹಲಿಯ ಕೃಷಿಕಾನೂನು ವಿರೋಧಿಸಿ ನಡೆಯುತ್ತಿರುವ ರ‍್ಯಾಲಿಯಲ್ಲಿ ಟ್ರ್ಯಾಕ್ಟರ್ ಮಗುಚಿ ಬಿದ್ದು ಸಾವನ್ನಪ್ಪಿದ್ದಾನೆ.

    ಮೃತನನ್ನು ನರ್ವೀತ್ ಸಿಂಗ್ (27) ಎಂದು ಗುರುತಿಸಲಾಗಿದೆ. ಈತ ಆಸ್ಟ್ರೇಲಿಯಾದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದನು. ಇದೀಗ ರೈತ ರ‍್ಯಾಲಿ ಪ್ರಭಟನೆ ವೇಳೆ ಟ್ರ್ಯಾಕ್ಟರ್ ಮಗುಚಿ ಬಿದ್ದು ಸಾವನ್ನಪ್ಪಿದ್ದಾನೆ.

    ಆಸ್ಟ್ರೇಲಿಯಾದಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಇತ್ತೀಚೆಗಷ್ಟೇ ಹಿಂದಿರುಗಿದ್ದನು. ರಾಂಪುರದ ಬಿಲಾಸ್ ಪುರ್ ಪ್ರದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ತೆರಳಿದ್ದನು. ಆದರೆ ಯುವಕ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ವಿಚಾರ ಈತನ ಕುಟುಂಬದವರಿಗೆ ತಿಳಿದಿರಲಿಲ್ಲ. 3 ದಿನಗಳ ಹಿಂದೆ ದೆಹಲಿಗೆ ಹೋಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾನೆ. ರ‍್ಯಾಲಿ ವೇಳೆ ಟ್ರ್ಯಾಕ್ಟರ್ ಮಗುಚಿಬಿದ್ದ ಪರಿಣಾಮ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

    ರೈತರು ಪ್ರತಿಭಟನೆ ವೇಳೆ ಟ್ರ್ಯಾಕ್ಟರ್‍ನನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸುತ್ತಿದ್ದರು. ಹೀಗಾಗಿ ರಸ್ತೆಯಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‍ಗೆ ಗುದ್ದಿ ಟ್ರ್ಯಾಕ್ಟರ್ ಮಗುಚಿ ಬಿದ್ದಿದೆ. ನಾವು ರಕ್ಷಣೆಗೆ ತೆರಳುವ ವೇಳೆ ಪರಿಸ್ಥಿತಿ ಇನ್ನಷ್ಟು ಬಿಗಿಡಾಯಿಸಿತ್ತು. ಈ ಅಪಘಾತದಲ್ಲಿ ನರ್ವೀತ್ ಸಿಂಗ್ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಇತ್ತ ರೈತರು ಪೊಲೀಸರು ಟಿಯರ್ ಗ್ಯಾಸ್ ಪ್ರಯೋಗಿಸಿದ್ದರಿಂದ ಟ್ರ್ಯಾಕ್ಟರ್ ಮೇಲೆ ನಿಯಂತ್ರಣ ಕಳೆದುಕೊಂಡೆವು. ಆಗ ಅಪಘಾತದಲ್ಲಿ ನರ್ವೀತ್ ಸಿಂಗ್ ಸಾವನ್ನಪ್ಪಿದ್ದಾನೆ ಎಂದು ಆರೋಪಿಸುತ್ತಿದ್ದಾರೆ.

  • ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ ಸಂಬಂಧ 15 ಎಫ್‍ಐಆರ್

    ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ ಸಂಬಂಧ 15 ಎಫ್‍ಐಆರ್

    ನವದೆಹಲಿ: ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾಚಾರ ಸಂಬಂಧ ಪೊಲೀಸರಿಗೆ ಗಾಯ ಮತ್ತು ಹಲವು ವಾಹನಗಳನ್ನು ಧ್ವಂಸ ಮಾಡಿರುವ ಹಿನ್ನೆಲೆ 15 ಎಫ್‍ಐಆರ್ ದಾಖಲು ಮಾಡಲಾಗಿದೆ.

    ಕೃಷಿ ಕಾನೂನು ವಿರೋಧಿಸಿ ನಡೆಯುತ್ತಿರುವ ರೈತರ ಟ್ರ್ಯಾಕ್ಟರ್ ಹಿಂಸಾಚಾರಕ್ಕೆ ತಿರುಗಿದೆ. ಇದೀಗ ಪೊಲೀಸರು 15 ಎಫ್‍ಐಆರ್ ದಾಖಲು ಮಾಡಿದ್ದಾರೆ. ಇನ್ನು ಹೆಚ್ಚಿನ ಎಫ್‍ಐಆರ್ ದಾಖಲಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ದೆಹಲಿಯ ಮುಖರ್ಬಾ ಚೌಕ್, ಗಾಝಿಫುರ್, ಐಟಿಓ ಸೀಮ್ ಪುರಿ, ನಾಂಗ್ಲೋಯಿ ಟಿ ಪಾಯಿಂಟ್, ಟಿಕ್ರಿ ಗಡಿ, ಕೆಂಪುಕೋಟೆ ಮುಂತಾದ ಕಡೆಯಲ್ಲಿ ಗಲಭೆ ನಿರ್ಮಾಣವಾಗಿತ್ತು. ಈ ವೇಳೆ 7 ಬಸ್, 17 ಖಾಸಗಿವಾಹನಗಳು ಸೇರಿದಂತೆ ಒಟ್ಟು 17 ವಾಹನಗಳನ್ನು ಧ್ವಂಸವಾಗಿವೆ. 86ಕ್ಕೂ ಹೆಚ್ಚು ಪೋಲಿಸರಿಗೆ ಗಾಯಗಳಾಗಿವೆ. ಗಾಜಿಪುರ್ ಮತ್ತು ಟಿಕ್ರಿ ಗಡಿ ಭಾಗಗಳಲ್ಲಿ ಹಾಕಲಾಗಿದ್ದ ಬ್ಯಾರಿಕೇಡ್‍ಗಳನ್ನು ಧ್ವಂಸ ಮಾಡಲಾಗಿದೆ.

    ಶಾಂತಿಯುತವಾದ ರ‍್ಯಾಲಿಯನ್ನು ನಡೆಸಲು ದೆಹಲಿ ಪೊಲೀಸರು ಸಂಯುಕ್ತ ಕಿಸಾನ್ ಮೋರ್ಚಾ ಜೊತೆಯಲ್ಲಿ ಮಾತುಕಥೆಯನ್ನು ನಡೆಸಿತ್ತು. ಆದರೆ ರ‍್ಯಾಲಿ ಪ್ರಾರಂಭವಾಗುತ್ತಿದ್ದಂತೆ ಸ್ವರೂಪವೇ ಬದಲಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ರು ವಿಫಲರಾದರು.

  • ರೈತರ ಪರೇಡ್ ಶಾಂತಿ, ಶಿಸ್ತಿನಿಂದ ನಡೆಯುತ್ತೆ: ಕೋಡಿಹಳ್ಳಿ ಚಂದ್ರಶೇಖರ್

    ರೈತರ ಪರೇಡ್ ಶಾಂತಿ, ಶಿಸ್ತಿನಿಂದ ನಡೆಯುತ್ತೆ: ಕೋಡಿಹಳ್ಳಿ ಚಂದ್ರಶೇಖರ್

    ಬೆಂಗಳೂರು: ನಾಳೆ ಸಿಲಿಕಾನ್ ಸಿಟಿಯಲ್ಲಿ ನಡೆಯುವ ರೈತರ  ರ‍್ಯಾಲಿ ಶಾಂತಿ ಮತ್ತು ಶಿಸ್ತಿನಿಂದ ನಡೆಯುತ್ತದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ನಾಳೆ ಬೆಂಗಳೂರಿನಲ್ಲಿ ರೈತರು ನಡೆಸುತ್ತಿರುವ ಟ್ರ್ಯಾಕ್ಟರ್  ರ‍್ಯಾಲಿ ಕುರಿತಾಗಿ ಮಾತನಾಡಿದ ಅವರು, ರೈತರ  ರ‍್ಯಾಲಿಯನ್ನು ಪೊಲೀಸರು ಅಡ್ಡಿಪಡಿಸುವ ಕೆಲಸ ಆಗಲ್ಲ. ಶಾಂತಿ ಮತ್ತು ಶಿಸ್ತಿಗೆ ಅವಕಾಶ ನೀಡಬೇಕು. ಟ್ರ್ಯಾಕ್ಟರ್ ಸಂಖ್ಯೆ, ಬೇರೆ ವಾಹನಗಳ ಸಂಖ್ಯೆ, ಜನರ ಸಂಖ್ಯೆ ಕಡಿಮೆ ಮಾಡಿಕೊಳ್ಳಿ ಎಂದು ಪೊಲೀಸ್ ಇಲಾಖೆಯವರು ತಿಳಿಸಿದ್ದಾರೆ ಎಂದಿದ್ದಾರೆ.

    ನೈಸ್ ಜಂಕ್ಷನ್ ಮಾದಾವರದಿಂದ ಪರೇಡ್ 20 ಸಾವಿರ ರೈತರು, 8 ಹತ್ತು ಸಾವಿರ ವಾಹನಗಳ ಬಳಕೆ ಸಾಧ್ಯತೆ ಇದೆ. ಬೆಂಗಳೂರಿನ ಸುತ್ತ ಮುತ್ತಲಿನ ಜಿಲ್ಲೆಗಳ ರೈತರು ಕೂಡ ಭಾಗಿಯಾಗಲಿದ್ದಾರೆ. ರಾಜ್ಯಪಾಲರ, ಸಿಎಂ ಧ್ವಜಾರೋಹಣ ಆದ ನಂತರ ನೈಸ್ ಜಂಕ್ಷನ್‍ನಿಂದ ನಮ್ಮ  ರ‍್ಯಾಲಿ ಪ್ರಾರಂಭವಾಗಲಿದೆ. ಗೊರಗುಂಟೆಪಾಳ್ಯ, ಯಶವಂತಪುರ, ಮಲ್ಲೇಶ್ವರಂ, ಶೆಷಾದ್ರಿಪುರಂ ಮಾರ್ಗವಾಗಿ ನಡೆಯುತ್ತದೆ. ರಾಷ್ಟ್ರ ಧ್ವಜಕ್ಕೆ ಗೌರವವನ್ನು ಸಲ್ಲಿಸಿ ಈ  ರ‍್ಯಾಲಿ ಪ್ರಾರಂಭವಾಗುತ್ತದೆ. ಕಲ್ಲು ಹೊಡೆಯುವುದು, ಕಚೇರಿ ನುಗ್ಗುವುದು, ಗಲಾಟೆ ಇಂಹದ್ದು ಇರುವುದಿಲ್ಲ. ಶಿಸ್ತು ಬದ್ಧವಾಗಿ ರೈತರ ಪರೇಡ್ ನಡೆಯುತ್ತದೆ.

    ಪೊಲೀಸರು ತಡೆದ್ರೆ ಉಗ್ರ ಹೊರಾಟ ನಡೆಸುತ್ತೇವೆ. ಪೊಲೀಸರು ತಡೆದರೆ ಬೆಂಗಳೂರು ಲಾಕ್ ಬೆಂಗಳೂರು ಪ್ರವೇಶ ಆಗದಂತೆ ಲಾಕ್ ಮಾಡುತ್ತೇವೆ. ನಾಳೆ ಪರೇಡ್ ತಡೆದರೆ ರೈತರ ಹೋರಾಟ ನಿರಂತರವಾಗಿ ದೆಹಲಿಯಂತೆ ನಡೆಯಲಿದೆ. ಹೀಗಾಗಿ ತಡೆಯುವುದಿಲ್ಲ ಎನ್ನುವ ನಂಬಿಕೆ ನನಗೆ ಇದೆ ಎಂದು ಹೇಳಿದ್ದಾರೆ.