Tag: ರೌಡಿ ಶೀಟರ್

  • ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದ!

    ಪೊಲೀಸರ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನಿಸಿ ಗುಂಡೇಟು ತಿಂದ!

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಒಬ್ಬನು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಕ್ಕೆ ಖಾಕಿ ಪಡೆ ಗುಂಡೇಟಿನ ರುಚಿ ತೋರಿಸಿದ್ದಾರೆ.

    ರಾಜಧಾನಿಯಲ್ಲಿ ಮತ್ತೆ ಪೊಲೀಸರ ಗನ್ ಸದ್ದು ಮಾಡಿದ್ದು, ರೌಡಿ ಶೀಟರ್ ವಿನೋದ್ ಅಲಿಯಾಸ್ ಪಚ್ಚೆ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ ಪಚ್ಚಿ ರಾಬರಿ, ಸೇರಿದಂತೆ ಹಲವು ಕೊಲೆ ಯತ್ನದಲ್ಲಿ ಭಾಗಿಯಾಗಿದ್ದನು. ಹೀಗೆ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ವಿನೋದ್‍ನನ್ನು ಸೆರೆಹಿಡಿಯಲು ಬಲೆ ಬೀಸಿದ್ದರು. ಈ ವೇಳೆ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ಮಾಡಲು ಮುಂದಾದಾಗ ಖಾಕಿ ಪಡೆ ಶೂಟೌಟ್ ನಡೆಸಿದ್ದಾರೆ.

    ಶುಕ್ರವಾರ ರಾತ್ರಿ ಆರೋಪಿ ಬನ್ನೇರುಘಟ್ಟ ರಸ್ತೆಯಲ್ಲಿರುವ ಇಂಡಿಯನ್ ಕ್ರಿಶ್ಚಿಯನ್ ಸೆರಮನಿ ಬಳಿ ಇರುವ ಬಗ್ಗೆ ಖಚಿತ ಮಾಹಿತಿ ಪೊಲೀಸರಿಗೆ ದೊರಕಿತ್ತು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಸರೆಂಡರ್ ಆಗುವಂತೆ ಆರೋಪಿಗೆ ಹೇಳಿದ್ದಾರೆ. ಆದರೆ ಆತ ಪೊಲೀಸರ ಮೇಲೆಯೆ ಮಚ್ಚಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಅಶೋಕ ನಗರ ಇನ್ಸ್‌ಪೆಕ್ಟರ್ ಶಶಿಧರ್, ಆರೋಪಿಯ ಕಾಲಿಗೆ ಗುಂಡು ಹೊಡೆದಿದ್ದಾರೆ. ಪರಿಣಾಮ ಆರೋಪಿಯ ಬಲಗಾಲಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ.

    ಸದ್ಯ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬೌರಿಂಗ್ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಪ್ರೀತಿ ಒಲ್ಲೆ ಎಂದಿದ್ದಕ್ಕೆ ಪಾಗಲ್ ಪ್ರೇಮಿಯಿಂದ ಬೆಂಗ್ಳೂರು ಗಗನಸಖಿಯ ಕಿವಿಕಟ್!

    ಪ್ರೀತಿ ಒಲ್ಲೆ ಎಂದಿದ್ದಕ್ಕೆ ಪಾಗಲ್ ಪ್ರೇಮಿಯಿಂದ ಬೆಂಗ್ಳೂರು ಗಗನಸಖಿಯ ಕಿವಿಕಟ್!

    ಬೆಂಗಳೂರು: ಪ್ರೀತಿಸಲ್ಲ ಎಂದು ಹೇಳಿದ್ದಕ್ಕೆ ರೌಡಿ ಶೀಟರ್ ಗಗನ ಸಖಿಯ ಕಿವಿಯನ್ನು ಹರಿದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

    ರೌಡಿ ಶೀಟರ್ ಅಜಯ್ ಅಲಿಯಾಸ್ ಜಾಕಿ ಯುವತಿಗೆ ಬೆದರಿಕೆ ಹಾಕಿ ಕಿವಿಯನ್ನು ಚಾಕುವಿನಿಂದ ಕಿವಿಯನ್ನು ಕತ್ತರಿಸಿದ್ದಾನೆ. ಗಗನ ಸಖಿ ಮೇಲೆ ಹಲ್ಲೆ ನಡೆಸಿ ಅಜಯ್ ಈಗ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಏನಿದು ಪ್ರಕರಣ?
    ಯುವತಿ ಇಂಡಿಗೊ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದು, ಕಳೆದ ಫೆಬ್ರವರಿಯಲ್ಲಿ ಜಾಕಿ ಪ್ರಪೋಸ್ ಮಾಡಿದ್ದ. ಇದಕ್ಕೆ ಒಪ್ಪದ ಯುವತಿ ಜಾಕಿ ಲವ್ ಪ್ರಪೋಸ್ ರಿಜೆಕ್ಟ್ ಮಾಡಿದ್ದಳು. ನಂತರ ಮನೆಯವರಿಗೆ ತಿಳಿಸಿ ರೌಡಿ ಅಜಯ್‍ಗೆ ಎಚ್ಚರಿಕೆ ಕೊಡಿಸಿದ್ದಳು.

    ಇದಕ್ಕೆ ಬಗ್ಗದ ಜಾಕಿ ಯುವತಿಯ ಮನೆಗೆ ತೆರಳಿ ಕಾರು ಹಾಗೂ ಬೈಕ್ ಗ್ಲಾಸ್‍ಗಳನ್ನು ಪುಡಿ ಮಾಡಿದ್ದ. ಈತನ ಕಾಟದಿಂದ ಬೇಸತ್ತ ಗಗನಸಖಿಯ ಮನೆಯವರು ದೂರು ನೀಡಿದ ಹಿನ್ನೆಲೆಯಲ್ಲಿ ಜಾಲಹಳ್ಳಿ ಪೊಲೀಸರು ಜಾಕಿಯನ್ನು ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದರು.

    ರೌಡಿಶೀಟರ್ ಪಟ್ಟಿಗೆ ಸೇರಿಸಿದ್ದಕ್ಕೆ ಯುವತಿಯ ಮೇಲೆ ಸೇಡು ತೀರಿಸಲು ಜಾಕಿ ಕಾದು ಕುಳಿತ್ತಿದ್ದ. ಮೇ 12ರಂದು ಸಂಜೆ ಯುವತಿ ಕೆಲಸ ಮುಗಿಸಿ ಸಂಜೆ ಮನೆಗೆ ಕ್ಯಾಬ್‍ನಲ್ಲಿ ಬರುತ್ತಿದ್ದ ವೇಳೆ ಹೆಬ್ಬಾಳ ಬಳಿ ಜಾಕಿ ಹಲ್ಲೆ ನಡೆಸಿದ್ದಾನೆ.

    ಹೆಬ್ಬಾಳ ಸಿಗ್ನಲ್ ಬಳಿ ಯುವತಿ ಇದ್ದ ಕ್ಯಾಬ್ ನಿಂತಾಗ, ಹಿಂದೆ ಬೇರೊಂದು ಕಾರಿನಲ್ಲಿದ್ದ ಜಾಕಿ ಬಂದು ಕ್ಯಾಬ್ ಹತ್ತಿದ್ದಾನೆ. ಬಳಿಕ ಚಾಕು ತೋರಿಸಿ ಕ್ಯಾಬ್ ಡ್ರೈವರ್ ಗೆ ಕಾರನ್ನು ಚಲಾಯಿಸುವಂತೆ ಹೆದರಿಸಿದ್ದಾನೆ. ಈ ವೇಳೆ ಕ್ಯಾಬ್ ಡ್ರೈವರ್ ಪ್ರತಿರೋಧ ತೋರಿದಾಗ ಡ್ರೈವರ್ ಭುಜಕ್ಕೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

    ನಂತರ ಯುವತಿಯ ಬಳಿ ನನ್ನ ಪ್ರೀತಿಸು, ನನ್ನ ಮೇಲಿನ ಕೇಸನ್ನು ಹಿಂದಕ್ಕೆ ಪಡೆದುಕೋ, ನಿನ್ನಿಂದಾಗಿ ನನ್ನ ಮೇಲೆ ರೌಡಿಶೀಟರ್ ಓಪನ್ ಆಗಿದೆ ಎಂದು ಹೇಳಿದ್ದಾನೆ. ಈ ಮಾತಿಗೆ ಯುವತಿ ಒಪ್ಪದೇ ಇದ್ದಾಗ ಚಾಕುವಿನಿಂದ ಯುವತಿಯ ಕಿವಿಗಳನ್ನು ರೌಡಿ ಕತ್ತರಿಸಿದ್ದಾನೆ. ಗಾಯಗೊಂಡಿರುವ ಯುವತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ರೌಡಿ ಜಾಕಿಯನ್ನ ಕೂಡಲೇ ಬಂಧಿಸುವಂತೆ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ಖಡಕ್ ಸೂಚನೆ ನೀಡಿದ್ದಾರೆ. ಸದ್ಯ ಜಾಕಿಯ ಹಿಂದೆ ಬಿದ್ದಿರುವ ಕೋಡಿಗೆಹಳ್ಳಿ ಠಾಣೆ ಪೊಲೀಸರು, ನಾಲ್ಕು ದಿನದಿಂದ ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ರೌಡಿ ಶೀಟರ್​ಗಳ  ಅಟ್ಟಹಾಸ- ರಾಡ್‍ನಿಂದ 7 ವಿದ್ಯಾರ್ಥಿಗಳ ಮೇಲೆ ಹಲ್ಲೆ

    ರೌಡಿ ಶೀಟರ್​ಗಳ ಅಟ್ಟಹಾಸ- ರಾಡ್‍ನಿಂದ 7 ವಿದ್ಯಾರ್ಥಿಗಳ ಮೇಲೆ ಹಲ್ಲೆ

    ಧಾರವಾಡ: ರೌಡಿ ಶೀಟರ್ ಪಟ್ಟಿಗೆ ಸೇರಿರುವ ಮೂವರು ಸಹೋದರರು ಜೊತೆಗೂಡಿ 7 ಮಂದಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.

    ವಿದ್ಯಾರ್ಥಿಗಳ ಮೈಮೇಲೆ ರಕ್ತ ಹೆಪ್ಪುಗಟ್ಟುವ ಹಾಗೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ. ರೌಡಿಶೀಟರ್ ಗಳನ್ನು ಮಂಜುನಾಥ ಹಿರೇಮನಿ, ತಿರುಪತಿ ಹಿರೇಮನಿ ಹಾಗೂ ಅನುರಾಗ್ ಹಿರೇಮನಿ ಎಂದು ಗುರುತಿಸಲಾಗಿದ್ದು, ಈ ಮೂವರು ಲಕ್ಷ್ಮಿಸಿಂಗನಕೆರೆ ಬಡಾವಣೆಯ ನಿವಾಸಿಗಳು. ಇವರು ಕ್ಷುಲ್ಲಕ ಕಾರಣಕ್ಕೆ ಮನಸ್ಸೋ ಇಚ್ಛೆ ರಾಡ್ ನಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

    ಕಳೆದ ಎರಡು ದಿನಗಳ ಹಿಂದೆಯೇ ಈ ಘಟನೆ ನಡೆದಿದೆ. ಆದರೆ ಹಲ್ಲೆಯಿಂದ ಭಯಗೊಂಡಿದ್ದ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಅಂಜಿದ್ದಾರೆ. ಧಾರವಾಡದ ಕಾಲೇಜೊಂದರಲ್ಲಿ ಪದವಿ ಓದುವ 7 ವಿದ್ಯಾರ್ಥಿಗಳ ಮೇಲೆ ಈ ಹಲ್ಲೆ ನಡೆದಿದ್ದು, ಹಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳ ಮೈಮೇಲೆ ಬರೆ ಬಿದ್ದಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈಗಾಗಲೇ ಈ ವಿದ್ಯಾರ್ಥಿಗಳು ಎಸಿಪಿಯನ್ನು ಕದ್ದು ಮುಚ್ಚಿ ಭೇಟಿಯಾಗಿದ್ದಾರೆ ಎಂಬ ಮಾಹಿತಿ ಇದೆ. ಆದರೆ ರೌಡಿಗಳು ಮತ್ತೆ ಹಲ್ಲೆ ಮಾಡಬಹುದು ಎಂಬ ಭಯದಿಂದ ವಿದ್ಯಾರ್ಥಿಗಳು ಇನ್ನೂ ದೂರು ದಾಖಲಿಸಿಲ್ಲ ಎಂಬುದಾಗಿ ತಿಳಿದುಬಂದಿದೆ.

  • ರೌಡಿಶೀಟರ್ ಕೊಲೆ – ಸ್ಯಾಂಡಲ್‍ವುಡ್ ನಟಿ, ತಾಯಿ ಅರೆಸ್ಟ್

    ರೌಡಿಶೀಟರ್ ಕೊಲೆ – ಸ್ಯಾಂಡಲ್‍ವುಡ್ ನಟಿ, ತಾಯಿ ಅರೆಸ್ಟ್

    ರಾಮನಗರ: ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟಿ ಹಾಗೂ ಆಕೆಯ ತಾಯಿಯನ್ನು ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

    ಚಿತ್ರನಟಿ ಪ್ರಿಯಾಂಕಾ (ಸವಿತಾ) ಹಾಗೂ ಆಕೆಯ ತಾಯಿ ನಾಗಮ್ಮ ಬಂಧಿತ ಆರೋಪಿಗಳಾಗಿದ್ದಾರೆ.

    ಏನಿದು ಪ್ರಕರಣ: ಚನ್ನಪಟ್ಟಣ ತಾಲೂಕಿನ ರಾಂಪುರದ ತೋಟದ ಮನೆಯೊಂದರಲ್ಲಿ ಜನವರಿ 29 ರಂದು ರೌಡಿ ಶೀಟರ್ ಸುನಿಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಭೀಕರವಾಗಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚನ್ನಪಟ್ಟಣ ಗ್ರಾಮಾಂತರ ಪೋಲೀಸರು ತೀವ್ರ ತನಿಖೆ ನಡೆಸಿದ್ದರು. ಹಳೆ ಮನೆ ವಿಚಾರವಾಗಿಯೇ ಸುನೀಲ್ ನನ್ನು ಕೊಲೆ ಮಾಡಲಾಗಿದೆ ಎಂದು ಆತನ ಪೋಷಕರು ಆರೋಪಿಸಿದ್ದರು. ಅಲ್ಲದೆ ಕೊಲೆಯಲ್ಲಿ ನಟಿ ಪ್ರಿಯಾಂಕ ಮತ್ತು ಅವರ ತಾಯಿ ನಾಗಮ್ಮ ಕೈವಾಡವಿದೆ ಎಂದೂ ದೂರಿದ್ದರು.

    ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಿದ ಪೊಲೀಸರು ಸುನಿಲ್ ನನ್ನು ಕೊಲೆ ಮಾಡಿದ್ದ ಮನು ಅಲಿಯಾಸ್ ಮಾದೇಗೌಡ, ಶಿವರಾಜ್ ಉರುಫ್ ಕುದುರೆ ಎಂಬವರನ್ನ ಬಂಧಿಸಿದ್ದರು. ಇವರನ್ನು ವಿಚಾರಣೆ ನಡೆಸಿದಾಗ ನಟಿ ಪ್ರಿಯಾಂಕ ಮತ್ತು ನಾಗಮ್ಮರ ಹೆಸರು ಸಹ ಕೇಳಿಬಂದಿತ್ತು. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಇಬ್ಬರನ್ನು ಇದೀಗ ಪೋಲೀಸರು ಬಂಧಿಸಿದ್ದಾರೆ.

    ಕೊಲೆಗೆ ಕಾರಣವೇನು?
    ನಟಿ ಪ್ರಿಯಾಂಕ ಅವರ ಕಾರಿನ ಚಾಲಕನಾಗಿ ಸುನಿಲ್ ಕೆಲಸ ಮಾಡುತ್ತಿದ್ದನು. ಸಂಬಂಧದಲ್ಲಿ ಸುನಿಲ್ ನಟಿಯ ಅತ್ತೆಯ ಮಗನಾಗಿದ್ದಾನೆ. ಆದರೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಸುನೀಲ್ ನನ್ನು ಕೆಲಸದಿಂದ ಕಿತ್ತು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ಸುನೀಲ್ ಪದೇ ಪದೇ ಫೋನ್ ಮಾಡಿ ಬೆದರಿಸಿ ನಟಿಯಿಂದ ಹಣ ವಸೂಲಿ ಮಾಡುತ್ತಿದ್ದನು. ಸುನಿಲ್‍ಗೆ ಹಣ ನೀಡಿ ಬೇಸತ್ತ ಪ್ರಿಯಾಂಕ ತನ್ನ ಸಂಬಂಧಿಕರಿಗೆ ಹೇಳಿ ಕೊಲೆ ಮಾಡಿಸಿದ್ದಳು. ಪ್ರಕರಣವನ್ನ ಭೇದಿಸಿದ ಪೊಲೀಸರು ಇದೀಗ ತಾಯಿ, ಮಗಳನ್ನು ಬಂಧಿಸಿದ್ದಾರೆ.

    ನಟಿ ಪ್ರಿಯಾಂಕ ಕನ್ನಡದ ‘ಐಪಿಸಿ ಸೆಕ್ಷನ್ 300’ ಎಂಬ ಚಿತ್ರಗಳಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಹಾಗೂ ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ಚಿತ್ರದಲ್ಲಿ ಹಾಸ್ಯ ನಟಿಯಾಗಿ ಅಭಿನಯಿಸಿದ್ದರು. ತೆಲುಗಿನ ಚಿತ್ರವೊಂದರಲ್ಲಿಯೂ ನಟಿಸಿದ್ದಾರೆ.

  • ಆಸ್ತಿಗಾಗಿ ರೌಡಿಶೀಟರ್ ಪತ್ನಿ ಮೇಲೆ ಸಂಬಂಧಿಕರಿಂದ ಹಲ್ಲೆ!

    ಆಸ್ತಿಗಾಗಿ ರೌಡಿಶೀಟರ್ ಪತ್ನಿ ಮೇಲೆ ಸಂಬಂಧಿಕರಿಂದ ಹಲ್ಲೆ!

    ಬೆಂಗಳೂರು: ರೌಡಿಶೀಟರ್ ಓರ್ವನ ಪತ್ನಿ ಮೇಲೆ ಆಸ್ತಿಗಾಗಿ ನಾದಿನಿ ಹಾಗೂ ಮೈದುನ ಹಲ್ಲೆ ಮಾಡಿ ಮನಸ್ಸೋ ಇಚ್ಛೆ ಥಳಿಸಿರುವ ಘಟನೆ ಬೆಂಗಳೂರು ಬಾಣಸವಾಡಿಯಲ್ಲಿ ನಡೆದಿದೆ.

    ಕಮ್ಮನಹಳ್ಳಿಯ ನಿವಾಸಿ ಪ್ರೇಮಾವತಿ ಮೇಲೆ ಹಲ್ಲೆ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ರೌಡಿಶೀಟರ್ ಶಿವು ಹೃದಯಾಘಾತದಿಂದ ಮೃತಪಟ್ಟಿದ್ದನು. ಆದ್ರೆ ಇದು ಸಹಜ ಸಾವಲ್ಲ ಎಂದು ಅನುಮಾನ ವ್ಯಕ್ತಪಡಿಸಿದ ಪತ್ನಿ, ಪತಿಯ ಸಾವಿನ ತನಿಖೆ ಕೋರಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಇದರಿಂದ ಸಿಟ್ಟಿಗೆದ್ದ ಪ್ರೇಮಾವತಿಯ ಮೈದುನ ಹಾಗೂ ನಾದಿನಿ ಬುಧವಾರ ರಾತ್ರಿ ವೇಳೆ ಏಕಾಏಕಿ ದಾಳಿ ಮಾಡಿ ಹಿಗ್ಗಾಮುಗ್ಗ ಹೊಡೆದಿದ್ದಾರೆ.

    ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮಾವತಿ, ಆಸ್ತಿಯ ವಿಚಾರವಾಗಿ ನಾದಿನಿ ಪರಿಮಳ ಹಾಗೂ ಪತಿಯ ಕುಟುಂಬ ನನ್ನ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ನಾದಿನಿ ಪರಿಮಳ ಮಗಳು ಮೋನಿಷಾ ಹಾಗೂ ಮೈದುನಾ ಸತೀಶ್ ಮೇಲೆ ಪ್ರೇಮಾವತಿ ದೂರು ನೀಡಿದ್ದು, ಬಾಣಸವಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ರೌಡಿ ಲಕ್ಷ್ಮಣನ ಕೊಲೆ ಪ್ರಕರಣ – ಆರೋಪಿ ಕ್ಯಾಟ್‍ರಾಜನ ಕಾಲಿಗೆ ಪೊಲೀಸ್ ಗುಂಡು

    ಬೆಂಗಳೂರು: ಕುಖ್ಯಾತ ಪಾತಕಿ ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಸಂಬಂಧ ಆರೋಪಿ ಕ್ಯಾಟ್ ರಾಜನ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.

    ಪ್ರಕರಣದಲ್ಲಿ ರೌಡಿ ಲಕ್ಷ್ಮಣ ಕೊಲೆ ಮಾಡಲು ಬಳಸಿದ್ದ ಮಚ್ಚನ್ನು ರಿಕವರಿ ಮಾಡಲು ಕರೀಂ ಸಾಬ್ ಪಾಳ್ಯಕ್ಕೆ ಹೋದಾಗ ಕ್ಯಾಟ್ ರಾಜ ತಿರುಗಿಬಿದ್ದಿದ್ದ. ಈ ವೇಳೆ ಪೊಲೀಸರ ಮೇಲೆ ಕಲ್ಲು ಎಸೆದಿದ್ದ. ಈ ಮೂಲಕ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಲು ಮುಂದಾಗಿದ್ದನು.

    ಕ್ಯಾಟ್‍ರಾಜ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗುತ್ತಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಎರಡೂ ಕಾಲುಗಳಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಕ್ಯಾಟ್ ರಾಜನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಕ್ಯಾಟ್‍ರಾಜ ಕೊಲೆ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ಸಿಸಿಬಿ ವಶಕ್ಕೆ ನೀಡಿದ್ದು, ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಬಂಧನ ಮಾಡಲಾಗಿದೆ. ಉಳಿದವರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಕ್ಯಾಟ್ ರಾಜ ಬಿಟ್ಟರೆ ಸದ್ಯ ಶ್ರೀಕಂಠ ಎಂಬವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದಹಾಗೇ ಲಕ್ಷ್ಮಣ ಹತ್ಯೆಯಲ್ಲಿ 6 ಜನರ ಆರೋಪಿಗಳು ಭಾಗಿಯಾಗಿದ್ದರು. ಹತ್ಯೆ ನಡೆದ ದಿನವೇ ಎಲ್ಲಾ ಆರೋಪಿಗಳು ಪೊಲೀಸರ ಮುಂದೇ ಶರಣಾಗಬೇಕೆಂದು ತೀರ್ಮಾನಿಸಿದ್ದರು. ಆದರೆ ಗ್ಯಾಂಗ್‍ನಲ್ಲಿ ಒಬ್ಬನ ಬರ್ತ್ ಡೇ ಇದ್ದ ಕಾರಣ ಪಾರ್ಟಿ ಮಾಡಲು ಸ್ಥಳದಿಂದ ಪರಾರಿಯಾಗಿದ್ದರು.

    ಲಕ್ಷ್ಮಣನನ್ನು ಹತ್ಯೆ ಮಾಡಲು ಆರೋಪಿಗಳು ಮಹಿಳೆಯ ಸಹಾಯ ಪಡೆದಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದ್ದು, ಲಕ್ಷ್ಮಣ ಅಂದು ಎಷ್ಟೊತ್ತಿಗೆ ಆಗಮಿಸುತ್ತಾನೆ ಎಂಬುವುದು ಆಕೆಗೆ ಮಾತ್ರ ತಿಳಿದಿತ್ತು ಎನ್ನಲಾಗಿದೆ. ಈ ಸಂಬಂಧ ಲಕ್ಷ್ಮಣ ಬಳಿ ಲಾಡ್ಜ್ ರೂಮ್ ಒಂದರ ಕೀ ಪತ್ತೆಯಾಗಿದೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ಸ್ಟಾರ್ ನಟನ ಹತ್ಯೆಗೆ ನಡೆದಿತ್ತು ಪ್ಲಾನ್..!

    ಸ್ಯಾಂಡಲ್‍ವುಡ್ ಸ್ಟಾರ್ ನಟನ ಹತ್ಯೆಗೆ ನಡೆದಿತ್ತು ಪ್ಲಾನ್..!

    ಬೆಂಗಳೂರು: ರೌಡಿಶೀಟರ್ ಗೆ ಸುಪಾರಿ ನೀಡಿ ಸದ್ದಿಲ್ಲದೆ ಸ್ಯಾಂಡಲ್‍ವುಡ್ ನ ಸ್ಟಾರ್ ನಟನ ಹತ್ಯೆಗೆ ಪ್ಲಾನ್ ನಡೆದಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ.

    ಹೌದು. ಆಶ್ಚರ್ಯ ಅನಿಸಿದರೂ ನೀವು ನಂಬಲೇಬೇಕು. ಏಕೆಂದರೆ ಆ ನಟ ಖುದ್ದಾಗಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಮುಂದೆ ಕೂತು ಜೀವಭಯವಿರುವ ಬಗ್ಗೆ ಮಾತನಾಡಿದ್ದಾರೆ. ಸುಪಾರಿ ಕೊಟ್ಟವರು ಯಾರು ಗೊತ್ತಿಲ್ಲ. ಆದರೆ ರೌಡಿಶೀಟರ್ ಒಬ್ಬ ನನ್ನ ಮುಗಿಸೋಕೆ ಪ್ಲಾನ್ ಮಾಡಿದ್ದಾನೆ ಎಂದು ನಟ ಹೇಳಿದ್ದಾರೆ.

    ನಟ ರೌಡಿಶೀಟರ್ ಭರತ್ ಅಲಿಯಾಸ್ ಸ್ಲಂ ಭರತನ ಮೇಲೆ ಬೊಟ್ಟು ಮಾಡಿದ್ದಾರೆ. ಸ್ಲಂ ಭರತ್ ಅಂಡ್ ಗ್ಯಾಂಗ್, ನನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ನಟ ಹೇಳಿದ್ದಾರೆ. ರೌಡಿ ಪೆರೇಡ್ ಮಾಡಿ ವಾರ್ನ್ ಮಾಡಿದರೂ ಈತ ಕಸುಬು ಬಿಡುತ್ತಿಲ್ಲ ಎಂದು ಭರತನ ಕಾಲಿಗೆ ಗುಂಡಿಕ್ಕಿ ಅರೆಸ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ.

    ಅಸಲಿಗೆ ಭರತನೇ ಡೀಲ್‍ಗೆ ಇಳಿದಿದ್ನಾ ಅಥವಾ ಭರತನ ಹೆಸರೇಳಿಕೊಂಡು ಬೇರೆ ಯಾರಾದರೂ ಈ ಕೃತ್ಯ ಮಾಡಿದ್ದಾರಾ ಅನ್ನೋದು ಗೊತ್ತಿಲ್ಲ. ನಟನ ಹೆಸರೇಳಿದರೆ ಬೇರೆಯವರು ಆ ನಟನ ಹಿಂದೆ ಬೀಳಬಹುದು ಎನ್ನುವ ಕಾರಣಕ್ಕೆ ಪೊಲೀಸರು ಹೆಸರು ರಿವೀಲ್ ಮಾಡಲು ಒಪ್ಪುತ್ತಿಲ್ಲ. ಸದ್ಯ ಪರಪ್ಪನ ಅಗ್ರಹಾರ ಜೈಲಲ್ಲಿರುವ ಭರತ್ ರಿಲೀಸ್ ಆದ ನಂತರ ಇದಕ್ಕೆಲ್ಲಾ ಸ್ಪಷ್ಟ ಉತ್ತರ ಸಿಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗ್ಳೂರಲ್ಲಿ ಮತ್ತೆ ಗುಂಡಿನ ಸದ್ದು – ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡೇಟು

    ಬೆಂಗ್ಳೂರಲ್ಲಿ ಮತ್ತೆ ಗುಂಡಿನ ಸದ್ದು – ಕುಖ್ಯಾತ ರೌಡಿ ಶೀಟರ್ ಕಾಲಿಗೆ ಗುಂಡೇಟು

    ಬೆಂಗಳೂರು: ಕುಖ್ಯಾತ ರೌಡಿಶೀಟರ್‍ ಮೇಲೆ ಪೊಲೀಸರು ಗುಂಡು ಹಾರಿಸಿರುವ ಘಟನೆ ನಗರದ ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ತಬ್ರೇಜ್ ಗುಂಡೇಟು ತಿಂದ ರೌಡಿಶೀಟರ್. ಈತನ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈತನ ಉಪಟಳ ಮಿತಿ ಮೀರಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ನ್ಯಾಯಾಲಯದ ವಾರೆಂಟ್ ಇದ್ದರು ಕೂಡ ಪೊಲೀಸರ ಕೈಗೆ ಸಿಕ್ಕದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ತಬ್ರೇಜ್ ಬಂಧನಕ್ಕೆ ಪೊಲೀಸರು ಬಲೆ ಪ್ರಯತ್ನಿಸಿದ್ದರು. ಆದರೆ ಭಾನುರಾತ್ರಿ ಪೊಲೀಸರ ಕೈಗೆ ಸಿಗದೆ ಎಸ್ಕೇಪ್ ಆಗಿದ್ದ. ಬಳಿಕ ಇಂದು ಬೆಳಗ್ಗೆ ತಬ್ರೇಜ್ ಬಗ್ಗೆ ಖಚಿತ ಮಾಹಿತಿ ಪಡೆದ ಎಸ್‍ಐ ಪ್ರದೀಪ್ ಅವರು ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಇನ್ಸ್ ಪೆಕ್ಟರ್ ಎಡ್ವಿನ್ ಪ್ರದೀಪ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

    ಪೊಲೀಸ್ ಗುಂಡು ಹಾರಿಸಿದ ಪರಿಣಾಮ ತಬ್ರೇಜ್ ಬಲಗೈ ಮತ್ತು ಬಲಗಾಲಿಗೆ ಗುಂಡು ತಾಕಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿ ಕಾಲಿಗೆ ಗುಂಡು ಹಾರಿಸುವ ಮುನ್ನ ಶರಣಾಗುವಂತೆ ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದ್ದು, ಪೊಲೀಸರ ಎಚ್ಚರಿಕೆಗೆ ಬಗ್ಗದ ಕಾರಣ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾರ್ಟಿ ವೇಳೆ ರೌಡಿಶೀಟರ್ ನ ಹತ್ಯೆಗೈದಿದ್ದ ಆರೋಪಿಗಳು ಅಂದರ್

    ಪಾರ್ಟಿ ವೇಳೆ ರೌಡಿಶೀಟರ್ ನ ಹತ್ಯೆಗೈದಿದ್ದ ಆರೋಪಿಗಳು ಅಂದರ್

    ಬೆಂಗಳೂರು: ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ನನ್ನು ಬರ್ಬರವಾಗಿ ಕೊಲೆ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಪೋಲಿಸರು ಯಶಸ್ವಿಯಾಗಿದ್ದಾರೆ.

    ಆದರ್ಶ್, ಕಾರ್ತಿಕ್, ಸುನೀಲ್, ನಂಜಪ್ಪ ಹಾಗೂ ಪವನ್ ಬಂಧಿತ ಆರೋಪಿಗಳು. ಇವರು ಮಚ್ಚು ಲಾಂಗ್‍ಗಳಿಂದ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಆಗಿದ್ದ ನಾಗರಾಜ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು.

    ವಿವಿ ಪುರಂ ಪೋಲಿಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ನಾಗರಾಜ್ ತನ್ನ ಗೆಳೆಯರೊಂದಿಗೆ ಡಿಸೆಂಬರ್ 11ರಂದು ಬನ್ನೇರುಘಟ್ಟ ಬಳಿಯ ಮೈಲಸಂದ್ರದಲ್ಲಿರುವ ಗ್ರೀನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಪಾರ್ಟಿ ಮಾಡುತ್ತಿದ್ದನು. ಈ ವೇಳೆ ಏಕಾಏಕಿ ಲಾಂಗು-ಮಚ್ಚುಗಳ ಜೊತೆ ಎಂಟ್ರಿ ಕೊಟ್ಟ ಹಂತಕರು ನಾಗರಾಜ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದರು.

    ಈ ಪ್ರಕರಣ ದಾಖಲಿಸಿಕೊಂಡ ಬನ್ನೇರುಘಟ್ಟ ಪೋಲಿಸರು ಹತ್ಯೆಯಾದ ಆರು ದಿನದಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಳಿಕ ಬಂಧಿತ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕಳಿಸುವಲ್ಲಿ ಬನ್ನೇರುಘಟ್ಟ ಪೋಲಿಸರು ಯಶಸ್ವಿಯಾಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರೌಡಿಶೀಟರ್ 7 ಸ್ಟಾರ್ ಕಾಲಿಗೆ ಗುಂಡೇಟು – ಮೂವರು ಪೊಲೀಸ್ ಪೇದೆಗಳಿಗೂ ಗಾಯ

    ರೌಡಿಶೀಟರ್ 7 ಸ್ಟಾರ್ ಕಾಲಿಗೆ ಗುಂಡೇಟು – ಮೂವರು ಪೊಲೀಸ್ ಪೇದೆಗಳಿಗೂ ಗಾಯ

    ಕಲಬುರಗಿ: ನಗರದ ಕುಖ್ಯಾತ ರೌಡಿಶೀಟರ್ 7 ಸ್ಟಾರ್ ಪ್ರದೀಪ್ ಕಾಲಿಗೆ ಪೊಲೀಸರು ಶೂಟ್ ಮಾಡಿದ್ದು, ಗಾಯಾಳು ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

    ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಪ್ರದೀಪ್‍ನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಆದರೆ ಈ ವೇಳೆ ಪೊಲೀಸರ ಮೇಲೆಯೇ ಆತ ಮಾರಕಾಸ್ತ್ರಗಳಿಂದ ಹಲ್ಲೆಗೆ ಯತ್ನ ಮಾಡುವ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದನು. ಇದೇ ಸಂದರ್ಭದಲ್ಲಿ ಆತ್ಮರಕ್ಷಣೆಗಾಗಿ ಆಶೋಕ ನಗರದ ಸಿಪಿಐ ಪ್ರದೀಪ್ ಕಾಲಿಗೆ ಗುಂಡಿಟ್ಟಿದ್ದಾರೆ.

    ಘಟನೆಯಲ್ಲಿ ಪೊಲೀಸ್ ಪೇದೆಗಳಾದ ವೆಂಕಟೇಶ್, ತೌಸಿಫ್ ಮತ್ತು ಬಸವರಾಜ್ ಅವರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆರೋಪಿ ಪ್ರದೀಪ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಮೇಲೆ ಕೊಲೆ ಯತ್ನ, ದರೋಡೆ, ಮೀಟರ್ ಬಡ್ಡಿ ಸೇರಿದಂತೆ 17 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ.

    ಪ್ರದೀಪ್ ಆಟಾಟೋಪಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದ್ದ ಪೊಲೀಸರು ಆತನ ಬಂಧನಕ್ಕಾಗಿ ವಿಶೇಷ ಪೊಲೀಸ್ ತಂಡ ರಚನೆ ಮಾಡಿದ್ದರು. ಆರ್ ಜೆ ನಗರ ಠಾಣೆ ಪೊಲೀಸರಿಂದ ಪ್ರದೀಪ್ ಮೇಲೆ ರೌಡಿಶೀಟರ್ ತೆರೆಯಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews