Tag: ರೌಡಿ ಶೀಟರ್

  • ಸಾರ್ವಜನಿಕವಾಗಿ ಉಗುಳಿ ಸಿಕ್ಕಿಹಾಕಿಕೊಂಡ ಕುಖ್ಯಾತ ರೌಡಿ ಸಲೀಂ

    ಸಾರ್ವಜನಿಕವಾಗಿ ಉಗುಳಿ ಸಿಕ್ಕಿಹಾಕಿಕೊಂಡ ಕುಖ್ಯಾತ ರೌಡಿ ಸಲೀಂ

    ಹುಬ್ಬಳ್ಳಿ: ಕಲಬುರಗಿಯಲ್ಲಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ಸಲೀಂ ಬಳ್ಳಾರಿಯನ್ನು ಹುಬ್ಬಳ್ಳಿ ನೇಕಾರ ನಗರದ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಪೊಲೀಸರ ಕೈಗೆ ಸಿಕ್ಕಾಗಲೂ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿದ್ದ ಸಲೀಂ ಬಳ್ಳಾರಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಲಬುರಗಿಯಲ್ಲಿ ಕೊಲೆ ಮಾಡಿರುವ ಸಲೀಂ ಬಳ್ಳಾರಿ ತಲೆಮರೆಸಿಕೊಂಡಿದ್ದು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಕಲಬುರಗಿ ಪೊಲೀಸರು ಹುಡುಕುವುದನ್ನು ಸ್ಥಗಿತಗೊಳಿಸಿದ್ದರು. ಈತ ಅನೇಕ ಪ್ರಕರಣಗಳಲ್ಲಿ ಬೇಕಾಗಿರುವ ವ್ಯಕ್ತಿಯಾಗಿದ್ದ.

    ಕಲಬುರಗಿಯಲ್ಲಿ ಸುಪಾರಿ ಪಡೆದು ಕೊಲೆ ಮಾಡಿರುವ ಸಲೀಂ ಬಳ್ಳಾರಿ ಹುಬ್ಬಳ್ಳಿ ನೇಕಾರ ನಗರಕ್ಕೆ ಬಂದು ತಲೆಮರೆಸಿಕೊಂಡಿದ್ದ. ಅಲ್ಲದೇ ಇಲ್ಲಿ ಪರಿಚಯ ಮರೆಮಾಚಿ ಜೀವನ ನಡೆಸುತ್ತಿದ್ದ. ಆದರೆ ನಿನ್ನೆ ಸಲೀಂ ಸಾವಜಿ ಹೊಟೇಲ್ ಗೆ ಊಟಕ್ಕೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಲಾಕ್‍ಡೌನ್ ಹಿನ್ನೆಲೆಯಲ್ಲಿ ಊಟ ಇಲ್ಲ ಎಂದು ಹೋಟೆಲ್ ಅವರು ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಸಲೀಂ ಸಾರ್ವಜನಿಕವಾಗಿ ಉಗುಳಿದ್ದಾನೆ.

    ಇದನ್ನು ಕಂಡು ಆಕ್ರೋಶಗೊಂಡ ಸಾರ್ವಜನಿಕರು ಆತನನ್ನು ಹಿಡಿದು ಥಳಿಸಿದ್ದಾರೆ. ಇದೇ ವೇಳೆ ವಿದ್ಯುತ್ ಕಂಬಕ್ಕೆ ಗುದ್ದಿ ಸಲೀಂ ತಲೆಗೆ ಗಾಯ ಮಾಡಿದ್ದಾನೆ. ಆಗ ಸ್ಥಳೀಯರು ಕಸಬಾ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಇತನನ್ನು ಸಲೀಂ ಬಳ್ಳಾರಿ ಎಂದು ಕಂಡು ಹಿಡಿದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ವಶಕ್ಕೆ ಪಡೆದಿದ್ದಾರೆ.

  • ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ರೌಡಿ ಶೀಟರ್ ಮೇಲೆ ಫೈರಿಂಗ್

    ರಾಮನಗರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು- ರೌಡಿ ಶೀಟರ್ ಮೇಲೆ ಫೈರಿಂಗ್

    ರಾಮನಗರ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ರೌಡಿ ಶೀಟರ್ ಮೇಲೆ ರಾಮನಗರ ಜಿಲ್ಲೆಯ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಗುಂಡು ಹಾರಿಸಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಸಮೀಪದ ಸೂಲಿಕೆರೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.

    ಮಾಗಡಿ ತಾಲೂಕಿನ ನೆಲಮಾಕನಹಳ್ಳಿ ಗ್ರಾಮದ ನಿವಾಸಿ ಕಿರಣ್ ಅಲಿಯಾಸ್ ತಮಟೆ ಪೊಲೀಸರಿಂದ ಗುಂಡೇಟು ತಿಂದ ರೌಡಿ ಶೀಟರ್. 20 ದಿನಗಳ ಹಿಂದೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಕಣ್ಣೂರು ಗ್ರಾಮದ ನಿವಾಸಿ ಲೋಕನಾಥ್ ಅವರ ಮೇಲೆ ಹಲ್ಲೆ ನಡೆಸಿ ತನ್ನ ಸಹಚರರ ಜೊತೆ ಡಕಾಯಿತಿ ಮಾಡಿದ್ದ.

    ಪ್ರಕರಣದ ಸಂಬಂಧ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ನಂತರ ಶನಿವಾರ ಕಿರಣ್ ನನ್ನು ಬಂಧಿಸಲಾಗಿತ್ತು. ಪ್ರಕರಣದ ತನಿಖೆ ವಿಚಾರವಾಗಿ ಬೆಳಗ್ಗೆ ಕಿರಣ್ ನನ್ನು ಸೂಲಿಕೆರೆ ಸಮೀಪದ ಹಳೇ ಭೈರೋಹಳ್ಳಿ ಬಳಿ ಕರೆದೊಯ್ಯಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ಪೇದೆ ವೀರಭದ್ರಗೆ ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ. ಈ ವೇಳೆ ಮಾಗಡಿ ಸರ್ಕಲ್ ಇನ್ಸ್ ಪೆಕ್ಟರ್ ಮಂಜುನಾಥ್ ಆರೋಪಿ ಕಿರಣ್ ನ ಎಡಗಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ.

    2016ರಲ್ಲಿ ಕೆಂಗೇರಿಯ ಮಾರಹನುಮ ಅಲಿಯಾಸ್ ಚಿಚಿ ಎಂಬಾತನನ್ನು ಕಿರಣ್ ಮರ್ಡರ್ ಮಾಡಿದ್ದ. ಅಲ್ಲದೆ ಕೆಂಗೇರಿ, ತಾವರೆಕೆರೆ, ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ 11 ಪ್ರಕರಣಗಳು ದಾಖಲಾಗಿವೆ. ಪೊಲೀಸರ ಗುಂಡೇಟು ತಿಂದಿರುವ ಕಿರಣ್ ಹಾಗೂ ಪೇದೆ ವೀರಭಧ್ರ ಅವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

  • ಟ್ರಾಫಿಕ್ ಪೊಲೀಸರಿಗೇ ಉಗಿದ ರೌಡಿಶೀಟರ್- ಸಾರ್ವಜನಿಕರಿಂದ ಗೂಸಾ

    ಟ್ರಾಫಿಕ್ ಪೊಲೀಸರಿಗೇ ಉಗಿದ ರೌಡಿಶೀಟರ್- ಸಾರ್ವಜನಿಕರಿಂದ ಗೂಸಾ

    ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದಲ್ಲದೇ, ತಡೆಯೋಕೆ ಬಂದ ಟ್ರಾಫಿಕ್ ಪೊಲೀಸರಿಗೆ ಉಗಿದು ಸಿನಿಮಾ ಸ್ಟೈಲ್ ನಲ್ಲಿ ಎಸ್ಕೇಪ್ ಆಗುತ್ತಿದ್ದ ರೌಡಿಶೀಟರ್ ಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

    ನಗರದ ಪುಲಿಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕ್ಲಾರೆನ್ಸ್ ಶಾಲೆ ಬಳಿ ಈ ಘಟನೆ ನಡೆದಿದ್ದು, ರೌಡಿಶೀಟರ್ ಅರ್ಬಾಜ್ ಅಹಮದ್ ಸಾರ್ವಜನಿಕರಿಂದ ಗೂಸ ತಿಂದಿದ್ದಾನೆ. ಎಂದಿನಂತೆ ಟ್ರಾಫಿಕ್ ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವ್ಯಕ್ತಿಯೊಬ್ಬ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿಕೊಂಡು ಬರುತ್ತಿದ್ದ. ಇದನ್ನು ಕಂಡ ಸಂಚಾರಿ ಪೇದೆ ಮಂಜುನಾಥ್ ಬೈಕ್ ಸವಾರನನ್ನು ತಡೆದಿದ್ದಾರೆ.

    ರೌಡಿಶೀಟರ್ ಅರ್ಬಾಜ್ ಅಹಮದ್ ತನ್ನನ್ನು ಹಿಡಿಯುತ್ತಾರೆ ಎಂದು ಭಾವಿಸಿ, ತನ್ನ ಪಲ್ಸರ್ ಬೈಕ್ ನ್ನು ಏಕಾಏಕಿ ಸಿನಿಮಾ ಸ್ಟೈಲ್ ನಲ್ಲಿ ವ್ಹೀಲಿಂಗ್ ಮಾಡಿ ಗಾಡಿಯನ್ನು ಉಲ್ಟಾ ತಿರುಗಿಸಿಕೊಂಡಿದ್ದ. ಇದನ್ನು ನೋಡಿದ ಪೊಲೀಸ್ ಪೇದೆ ರೌಡಿಶೀಟರ್ ನನ್ನು ಹಿಡಿಯಲು ಯತ್ನಿಸಿದ್ದರು. ಇದರಿಂದ ಕೋಪಗೊಂಡ ರೌಡಿಶೀಟರ್ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಂಡು ಪೊಲೀಸರ ಮುಖಕ್ಕೆ ಎಂಜಲು ಉಗಿದು ಅವಾಚ್ಯ ಪದಗಳಿಂದ ಬೈದು ಎಸ್ಕೇಪ್ ಆಗಿದ್ದ.

    ಇದರಿಂದ ರೊಚ್ಚಿಗೆದ್ದ ಪೊಲೀಸರು, ರೌಡಿಶೀಟರ್ ನನ್ನು ಹಿಂಬಾಲಿಸಿದ್ದರು. ಕೊನೆಗೆ ಮುಂದಿನ ಸಿಗ್ನಲ್ ಬಳಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಈ ವಿಷಯ ತಿಳಿದ ಸಾರ್ವಜನಿಕರು ರೌಡಿಶೀಟರ್ ಅರ್ಬಾಜ್ ಅಹಮದ್‍ಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಪುಲಿಕೇಶಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಮಿನಿಸ್ಟರ್ ಆಗ್ತಿದ್ದಂತೆ ರೌಡಿ ಬೋರ್ಡಿನಿಂದ ಗೋಪಾಲಯ್ಯನ ಫೋಟೋ ಔಟ್

    ಮಿನಿಸ್ಟರ್ ಆಗ್ತಿದ್ದಂತೆ ರೌಡಿ ಬೋರ್ಡಿನಿಂದ ಗೋಪಾಲಯ್ಯನ ಫೋಟೋ ಔಟ್

    ಬೆಂಗಳೂರು: ಮಿನಿಸ್ಟರ್ ಆಗುತ್ತಿದ್ದಂತೆ ರೌಡಿ ಬೋರ್ಡಿನಲ್ಲಿದ್ದ ಸಚಿವ ಗೋಪಾಲಯ್ಯನ ಫೋಟೋವನ್ನು ಸಿಸಿಬಿ ಪೊಲೀಸರು ತೆಗೆದು ಹಾಕಿದ್ದಾರೆ.

    ಹೌದು. ಎರಡು ಬಾರಿ ಶಾಸಕರಾಗಿ ಅವಧಿ ಪೂರ್ಣಗೊಳಿಸಿದರೂ ರೌಡಿಗಳ ಬೋರ್ಡಿನಿಂದ ಆಹಾರ ನಾಗರಿಕ ಪೂರೈಕೆ ಸಚಿವ ಕೆ ಗೋಪಾಲಯ್ಯ ಅವರ ಫೋಟೋವನ್ನು ಸಿಸಿಬಿ ಪೊಲೀಸರು ತೆಗೆದಿರಲಿಲ್ಲ. ಆದರೆ ಈಗ ಮಂತ್ರಿಯಾಗುತ್ತಿದ್ದಂತೆ ಅವರ ಫೋಟೋವನ್ನು ಅಲ್ಲಿಂದ ತೆಗೆದು ಹಾಕಲಾಗಿದೆ.

    ಕಾಮಕ್ಷಿಪಾಳ್ಯದ ಮಾಜಿ ರೌಡಿ ಶೀಟರ್ ಆಗಿದ್ದ ಗೋಪಾಲಯ್ಯ ಸಿಸಿಬಿಯ ರೌಡಿ ಲಿಸ್ಟ್ ನಲ್ಲಿ ಇದ್ದರು. ಇಷ್ಟು ದಿನ ಅಲ್ಲೇ ಇದ್ದ ಫೋಟೋವನ್ನು ನಿನ್ನೆ ಸಿಸಿಬಿ ಪೊಲೀಸರು ತೆಗೆದು ಹಾಕಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗದ ರೌಡಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಗೋಪಾಲಯ್ಯ ಫೋಟೋ ಇತ್ತು. ಜೇಡರಹಳ್ಳಿ ಕೃಷ್ಣಪ್ಪ, ಮುಲಾಮ, ಹೆಬ್ಬೆಟ್ಟು ಮಂಜ, ಧರಣಿ ಮತ್ತು ಬಸವ, ರಾಮನ ಫೋಟೋ ಇರುವ ಲಿಸ್ಟ್‍ನಲ್ಲಿ ಗೋಪಾಲಯ್ಯನ ಫೋಟೋ ಇತ್ತು.

    ಈಗ ಅವರ ಫೋಟೋವನ್ನು ತೆಗೆದು ಹಾಕಲಾಗಿದ್ದು, ಸಾಕಷ್ಟು ಟೀಕೆಗಳು ಕೇಳಿಬರುತ್ತಿವೆ. ಹಳೆ ಬೋರ್ಡ್ ಮತ್ತು ಹೊಸ ಎಡಿಟೆಡ್ ಬೋರ್ಡ್ ಎರಡೂ ಫೋಟೋಗಳು ಲಭ್ಯವಾಗಿದ್ದು, ಹೊಸ ಬೋರ್ಡ್ ನಲ್ಲಿ ಫೋಟೋ ಕಾಣಿಸುತ್ತಿಲ್ಲ. ಮುತ್ತಪ್ಪ ರೈ, ಅಗ್ನಿ ಶ್ರೀಧರ್, ಬಚ್ಚನ್ ಸೇರಿ ಹಲವರ ಫೋಟೋಗಳು ಇನ್ನೂ ಹಾಗೆ ಇವೆ. ಆದರೆ ಏಕಾಏಕಿ ಗೋಪಾಲಯ್ಯ ಫೋಟೋವನ್ನು ಕಣ್ಮರೆಯಾಗಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.

    ಈ ಬಗ್ಗೆ ಸ್ಪಷ್ಟನೆ ಕೊಡಬೇಕಾದ ಸಿಸಿಬಿ ಅಧಿಕಾರಿಗಳು ನುಣುಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ದಿನ ಸಿಸಿಬಿ ಗೋಡೆ ಮೇಲೆ ಇರುತ್ತಿದ್ದ ಫೋಟೋ ಇನ್ನು ಮಂದೆ ಎಲ್ ಇಡಿ ಟಿವಿಯಲ್ಲಿ ಕಾಣಿಸಿಕೊಳ್ಳಲಿವೆ. ರೌಡಿಗಳ ಫೋಟೋ ಟಿವಿ ಪರದೆಯಲ್ಲಿ ಡಿಸ್‍ಪ್ಲೇ ಮಾಡಲು ಸಿಸಿಬಿ ಸಿದ್ಧತೆ ನಡೆಸಿದೆ ಎನ್ನಲಾಗಿದೆ.

  • ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು- ಒಂದೂವರೆ ವರ್ಷದ ಬಳಿಕ ಸೆರೆಸಿಕ್ಕ ರೌಡಿಶೀಟರ್

    ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು- ಒಂದೂವರೆ ವರ್ಷದ ಬಳಿಕ ಸೆರೆಸಿಕ್ಕ ರೌಡಿಶೀಟರ್

    ತುಮಕೂರು: ಒಂದೂವರೆ ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ತುಮಕೂರು ನಗರದ ರೌಡಿಶೀಟರ್ ಸ್ಟೀಫನ್ ಫರ್ನಾಂಡಿಸ್‍ನನ್ನು ಪೊಲೀಸರು ಬೆಂಗಳೂರಿನಲ್ಲಿ ಹೆಡೆಮುರಿ ಕಟ್ಟಿದ್ದಾರೆ.

    ತುಮಕೂರಿನ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಶೀಟರ್ ಸ್ಟೀಫನ್ ಫರ್ನಾಂಡಿಸ್ ಅಲಿಯಾಸ್ ಗುಂಡ ರೌಡಿಶೀಟರ್ ಆಗಿದ್ದ. ಒಟ್ಟು 15 ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದು, 2015 ರಲ್ಲಿ ನಡೆದ ಪ್ರಕರಣದಲ್ಲಿ ಆರೋಪಿಯಾಗಿದ್ದ ಈತ ತಲೆಮರೆಸಿಕೊಂಡಿದ್ದ. ಆರೋಪಿ ಬೆಂಗಳೂರಿನಲ್ಲಿ ಸಿಕ್ಕಿಬಿದ್ದಿದ್ದು, ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತನ ಮೇಲೆ ಫೈರಿಂಗ್ ಮಾಡಿ ಬಂಧಿಸಲಾಗಿದೆ.

    ಬಂಧಿಸಿದ ನಂತರ ಶಸ್ತ್ರಾಸ್ತ್ರಗಳನ್ನು ಇರಿಸಿದ್ದ ಜಾಗಕ್ಕೆ ಸ್ಟೀಫನ್ ಫರ್ನಾಂಡಿಸ್‍ನನ್ನು ಪೊಲೀಸರು ಕರೆದೊಯ್ದಿದ್ದಾರೆ. ಬಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಲ್ಲಗಟ್ಟ ಸಮೀಪ ಹೋಗುತ್ತಿದ್ದಂತೆ ರೌಡಿಶೀಟರ್ ಸ್ಟೀಫನ್ ಫರ್ನಾಂಡಿಸ್ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಆರೋಪಿ ಗಾಯಗೊಂಡು ಕೆಳಗೆ ಬಿದ್ದಿದ್ದು, ಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಅರೋಪಿ ತುಮಕೂರು ನಗರದಲ್ಲಿ ಹಫ್ತಾ ವಸೂಲಿ ಮಾಡಲು ತಂಡ ಕಟ್ಟಿಕೊಂಡಿದ್ದ. ಈತನನ್ನು ಸೆರೆ ಹಿಡಿಯಲು ಸುಮಾರು ಒಂದೂವರೆ ವರ್ಷಗಳಿಂದ ಪೊಲೀಸರು ಬಲೆ ಬೀಸಿದ್ದರು. ನಗರದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮೂರು ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿತ್ತು. ನಿರಂತರ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸ್ ತಂಡಕ್ಕೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬ ಸ್ಟೀಫನ್ ಫರ್ನಾಂಡಿಸ್‍ಗೆ ಸಹಾಯ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ನಂತರ ಬೆಂಗಳೂರಿನ ಬಗಲಗುಂಟೆ ಪೊಲೀಸ್ ಠಾಣೆ ಮತ್ತು ಸೋಮ ದೇವನಹಳ್ಳಿ ಪೊಲೀಸ್ ಠಾಣೆಯ ಅಧಿಕಾರಿಗಳ ಸಹಕಾರದೊಂದಿಗೆ ತುಮಕೂರಿನ ಜಯನಗರ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

  • ಜೈಲಿನಿಂದ ಬಂದ ಒಂದೇ ದಿನಕ್ಕೆ ಮಸಣ ಸೇರಿದ ರೌಡಿಶೀಟರ್

    ಜೈಲಿನಿಂದ ಬಂದ ಒಂದೇ ದಿನಕ್ಕೆ ಮಸಣ ಸೇರಿದ ರೌಡಿಶೀಟರ್

    -ಕಾರಿನಲ್ಲೇ ಕೊಚ್ಚಿ ಕೊಲೆ

    ಮಂಗಳೂರು: ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಒಂದೇ ದಿನದಲ್ಲಿ ರೌಡಿಶೀಟರ್ ಓರ್ವ ಬರ್ಬರವಾಗಿ ಹತ್ಯೆಗೀಡಾದ ಘಟನೆ ದಕ್ಷಿಣ ಕನ್ನಡದ ಬಿ.ಸಿ.ರೋಡ್ ನಲ್ಲಿ ನಡೆದಿದೆ.

    ಕೇರಳ ಮೂಲದ ಮುತ್ತಾಸಿಮ್ ಯಾನೆ ತಸ್ಲಿಮ್ ಬರ್ಬರವಾಗಿ ಕೊಲೆಯಾದ ನಟೋರಿಯಸ್ ರೌಡಿ. ಮುತ್ತಾಸಿಮ್ ಮೃತದೇಹ ಕಾರಿನಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ನ ನಗ್ರಿ ಮೈದಾನದಲ್ಲಿ ಇನ್ನೋವಾ ಕಾರ್ ಅನಾಥವಾಗಿ ನಿಂತಿದ್ದನ್ನು ನೋಡಿದ ಸ್ಥಳೀಯರು ಹತ್ತಿರ ಹೋಗಿ ಗಮನಿಸಿದ್ದು, ಆಗ ಅದರೊಳಗೆ ಮೃತದೇಹ ಕಂಡಿದೆ. ತಕ್ಷಣ ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಪರಿಶೀಲಿಸಿದಾಗ ಈತ ಮುತ್ತಾಸಿಮ್ ಎಂದು ಗೊತ್ತಾಗಿದೆ.

    ಭೂಗತ ಜಗತ್ತಿನ ನೇರ ಸಂಪರ್ಕ ಹೊಂದಿದ್ದ ಮುತ್ತಾಸಿಮ್ ಕಳೆದ ವರ್ಷ ಮಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿ ಬೆಳಗಾವಿ ಜೈಲಿನಲ್ಲಿದ್ದನು. ಎರಡು ದಿನದ ಹಿಂದೆ ಜಾಮೀನು ಪಡೆದು ಹೊರ ಬಂದಿದ್ದನು. ಆದರೆ ಆ ಬಳಿಕ ಆತ ನಾಪತ್ತೆಯಾಗಿದ್ದು, ದುಷ್ಕರ್ಮಿಗಳು ಆತನನ್ನು ಬೆಳಗಾವಿಯಿಂದಲೇ ಕಿಡ್ನಾಪ್ ಮಾಡಿ ತಂದಿದ್ದು ಒಂದು ದಿನದ ಬಳಿಕ ಆತನನ್ನು ಹತ್ಯೆ ಮಾಡಿ ಕಾರಿನಲ್ಲೇ ಮೃತದೇಹವನ್ಬು ಬಿಟ್ಟು ಪರಾರಿಯಾಗಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

  • ನನ್ನ ತಂಟೆಗೆ ಬಂದ್ರೆ ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡುತ್ತೇನೆ ಎಂದವ ಅರೆಸ್ಟ್

    ನನ್ನ ತಂಟೆಗೆ ಬಂದ್ರೆ ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡುತ್ತೇನೆ ಎಂದವ ಅರೆಸ್ಟ್

    ಬೆಂಗಳೂರು: ಕುಡಿದ ಮತ್ತಿನಲ್ಲಿ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದ ರೌಡಿಶೀಟರ್ ಅನ್ನು ಸಿಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿದ್ದಾರೆ.

    ರೌಡಿಶೀಟರ್ ಮೋಹನ್ ಅಲಿಯಾಸ್ ದಡಿಯಾ ಮೋಹನ್ ಬಂಧಿತ ಆರೋಪಿ. ಕಳೆದ ಎರಡು ದಿನಗಳ ಹಿಂದೆ ರೌಡಿಶೀಟರ್ ದಡಿಯಾ ಮೋಹನ್ ಕುಡಿದ ಮತ್ತಿನಲ್ಲಿ ಕತ್ರಿಗುಪ್ಪೆ ರಸ್ತೆಯ ಎಂ.ಎಂ ಬಾರ್ ಬಳಿ ಗಲಾಟೆ ಮಾಡುತ್ತಿದ್ದ. ಇದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದರು.

    ಸ್ಥಳಕ್ಕೆ ಬಂದ ಪೊಲೀಸರು ಮೋಹನ್ ಅನ್ನು ವಶಕ್ಕೆ ಪಡೆಯಲು ಯತ್ನಿಸಿದ ವೇಳೆ ರೌಡಿಶೀಟರ್ ಪೊಲೀಸರಿಗೆ ಅವಾಚ್ಯ ಪದಗಳಿಂದ ನಿಂದಿಸಿದಲ್ಲದೇ, ಜೀವಬೆದರಿಕೆ ಹಾಕಿ ಅಲ್ಲಿಂದ ಎಸ್ಕೇಪ್ ಆಗಿದ್ದ. ನನ್ನ ತಂಟೆಗೆ ಬಂದರೆ ಪೊಲೀಸ್ ಠಾಣೆಗೆ ನುಗ್ಗಿ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಸಿಕೆ ಅಚ್ಚುಕಟ್ಟು ಪೊಲೀಸರಿಂದ ಆರೋಪಿಯನ್ನು ಬಂಧಿಸಲಾಗಿದೆ.

  • ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗ್ಬೇಡಿ- ರೌಡಿಗಳಿಗೆ ಖಡಕ್ ವಾರ್ನಿಂಗ್

    ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗ್ಬೇಡಿ- ರೌಡಿಗಳಿಗೆ ಖಡಕ್ ವಾರ್ನಿಂಗ್

    ಆನೇಕಲ್: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ರೌಡಿಗಳನ್ನು ಕರೆಸಿ ಬೆಂಗಳೂರು ಹೊರವಲಯ ಆನೇಕಲ್ ಪೊಲೀಸ್ ಠಾಣಾ ವಿಭಾಗದಲ್ಲಿ ಪೊಲೀಸರು ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.

    ಕೊಲೆ, ಕಳ್ಳತನ, ದರೋಡೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಗಳಲ್ಲಿ ಸುಮಾರು 50ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನು ಪೊಲೀಸ್ ಠಾಣೆಗೆ ಕರೆಸಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

    ಮುಂದಿನ ದಿನಗಳಲ್ಲಿ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಸಮಾಜದಲ್ಲಿ ಒಳ್ಳೆಯ ರೀತಿಯಲ್ಲಿ ಬದುಕಬೇಕೆಂದು ಎಚ್ಚರಿಕೆಯನ್ನು ನೀಡಿದ್ದಾರೆ. ಅದರಲ್ಲೂ ಆನೇಕಲ್ ಸುತ್ತಮುತ್ತ ಗಾಂಜಾ ಮಾರಾಟ ಹಾಗೂ ಮನೆಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಇಂತಹ ಪ್ರಕರಣಗಳು ಕಂಡುಬಂದಾಗ ಕಾನೂನು ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದೆ. ಒಳ್ಳೆಯ ನಡವಳಿಕೆಯಿಂದ ನಡೆದುಕೊಂಡರೆ, ರೌಡಿ ಶೀಟರ್ ಪಟ್ಟಿಯಿಂದ ಕೈ ಬಿಡಲಾಗುತ್ತದೆ ಎಂಬ ವಿಷಯವನ್ನು ಆನೇಕಲ್ ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣ ಲಮಾಣಿ, ಸಬ್ ಇನ್ಸ್ ಪೆಕ್ಟರ್ ಮುರಳೀಧರ್ ರೌಡಿ ಶೀಟರ್ ಗಳಿಗೆ ಮನವರಿಕೆ ಮಾಡಿಕೊಟ್ಟರು.

  • ಜೈಲಿಂದ ಬಂದ ವಾರಕ್ಕೆ ರೌಡಿ ಶೀಟರ್ ಬರ್ಬರ ಕೊಲೆ- 6 ಮಂದಿ ಬಂಧನ

    ಜೈಲಿಂದ ಬಂದ ವಾರಕ್ಕೆ ರೌಡಿ ಶೀಟರ್ ಬರ್ಬರ ಕೊಲೆ- 6 ಮಂದಿ ಬಂಧನ

    ಬೆಂಗಳೂರು: ನಗರದ ಡಿಜೆ ಹಳ್ಳಿ ರೌಡಿ ಶೀಟರ್ ಸೂರ್ಯ ಬರ್ಬರ ಕೊಲೆ ಪ್ರಕರಣದಲ್ಲಿ ಪೊಲೀಸರು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಹತ್ಯೆ ನಡೆದ ಒಂದು ವಾರದಲ್ಲೇ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

    ಡಿ.27 ರಂದು ರೌಡಿಶೀಟರ್ ಸೂರ್ಯನನ್ನು ನಗರದ ಶಾಂಪುರ ರೈಲ್ವೇ ನಿಲ್ದಾಣದ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ರೌಡಿಶೀಟರ್ ಸೂರ್ಯ ಕಳೆದ ವರ್ಷ ಭಾವ, ರೌಡಿಯಾಗಿದ್ದ ಚಾಲ್ಸ್ ಕುಮಾರನನ್ನು ಕೊಲೆ ಮಾಡಿ ಜೈಲು ಸೇರಿದ್ದ. ಈ ಪ್ರಕರಣದಲ್ಲಿ ಕಳೆದ ವಾರವಷ್ಟೇ ಸೂರ್ಯ ಜೈಲಿನಿಂದ ಬಿಡುಗಡೆಯಾಗಿದ್ದ.

    ಸೂರ್ಯ ಬಿಡುಗಡೆ ವಿಷಯ ತಿಳಿದ ಚಾಲ್ಸ್ ಕುಮಾರನ ಸಹಚರರು ಡಿ.27ರ ರಾತ್ರಿ ಎಣ್ಣೆ ಪಾರ್ಟಿ ಮಾಡಲು ಆತನನ್ನು ತಮ್ಮ ಸ್ಥಳಕ್ಕೆ ಕರೆಯಿಸಿಕೊಂಡಿದ್ದರು. ಪಾರ್ಟಿ ನಡೆದ ಬಳಿಕ ಸೂರ್ಯ ಮೇಲೆ ಮಾರಕಾಸ್ತ್ರಗಳಿಂದ 6 ಮಂದಿ ಆರೋಪಿಗಳು ಹಲ್ಲೆ ನಡೆಸಿ, ಅಲ್ಲಿಂದ ರೈಲ್ವೇ ನಿಲ್ದಾಣದವರೆಗೂ ಅಟ್ಟಾಡಿಸಿ ಕೊಂಡು ಬಂದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು.

    ಘಟನೆಯಲ್ಲಿ ರೌಡಿಶೀಟರ್ ಸೂರ್ಯ ತೀವ್ರ ಗಾಯಗೊಂಡು ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಸಹಾಯಕ್ಕೆ ಅಂಗಲಾಚುತ್ತಿದ್ದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿತ್ತು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಪೊಲೀಸರು 6 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

  • ಕೈ ಕಚೇರಿಯಲ್ಲಿ ರೌಡಿಶೀಟರ್ – ರಿಜ್ವಾನ್‍ಗೆ ಟಿಕೆಟ್ ನೀಡುವಂತೆ ರೌಡಿ ಬ್ಯಾಟಿಂಗ್

    ಕೈ ಕಚೇರಿಯಲ್ಲಿ ರೌಡಿಶೀಟರ್ – ರಿಜ್ವಾನ್‍ಗೆ ಟಿಕೆಟ್ ನೀಡುವಂತೆ ರೌಡಿ ಬ್ಯಾಟಿಂಗ್

    ಬೆಂಗಳೂರು: ರಿಜ್ವಾನ್‍ಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷರಿಗೆ ರೌಡಿಶೀಟರ್ ಒಬ್ಬ ಮನವಿ ಮಾಡಿದ್ದು, ಕಾಂಗ್ರೆಸ್‍ನಲ್ಲಿ ರೌಡಿ ಶೀಟರ್ ಗಳ ಅಬ್ಬರ ಜಾಸ್ತಿಯಾಗುತ್ತಿದೆಯಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

    ಹೌದು. ಇಂದು ಶಿವಾಜಿನಗರದ ರೌಡಿಶೀಟರ್ ಇಶ್ತಿಯಾಕ್ ಅಹ್ಮದ್ ಕೆಪಿಸಿಸಿ ಕಚೇರಿಯಲ್ಲಿ ಕಾಣಿಸಿಕೊಂಡಿದ್ದು, ರಿಜ್ವಾನ್ ಅರ್ಷದ್ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಅವರಿಗೆ ಮನವಿ ಮಾಡಿದ್ದಾನೆ. ಈಗ ಈ ಸುದ್ದಿ ಬಹಳಷ್ಟು ಚರ್ಚೆಯಾಗುತ್ತಿದ್ದು, ಶತಮಾನದ ಪಕ್ಷ ಕಾಂಗ್ರೆಸ್ ರೌಡಿ ಶೀಟರ್ ಗಳಿಗೆ ಮಣೆ ಹಾಕುತ್ತಿದ್ಯಾ ಎಂಬ ಅನುಮಾನಗಳು ಮೂಡುತ್ತೀವೆ.

    ಇಶ್ತಿಯಾಕ್ ಕಾಂಗ್ರೆಸ್ ಕಚೇರಿಗೆ ಬರುವುದು ಇದು ಮೊದಲಲ್ಲ. ಎರಡು ವಾರದ ಹಿಂದೆಯೂ ಕೆಪಿಸಿಸಿ ಕಚೇರಿಗೆ ಇಶ್ತಿಯಾಕ್ ಅಹ್ಮದ್ ಬಂದಿದ್ದ. ಆಗ ಈ ವಿಚಾರದ ಬಗ್ಗೆ ಅಧ್ಯಕ್ಷರಾದ ದಿನೇಶ್ ಗೂಂಡುರಾವ್ ಅವರನ್ನು ಕೇಳಿದಾಗ, ರೌಡಿ ಶೀಟರ್ ಆಗಮನವನ್ನು ಸಮರ್ಥಿಸಿಕೊಂಡಿದ್ದು, ಯಾವ ಪಕ್ಷದಲ್ಲಿ ರೌಡಿ ಶೀಟರ್ ಇಲ್ಲ ಹೇಳಿ ಎಂದು ಮಾಧ್ಯಮಗಳ ಬಾಯಿ ಮುಚ್ಚಿಸಿದ್ದರು. ಪ್ರಮುಖ ನಾಯಕರೇ ರೌಡಿಗಳಿಗೆ ಮಣೆ ಹಾಕಿದರೆ ಮುಂದೇನು ಎಂದು ಕೈ ಕಾರ್ಯಕರ್ತರು ಈಗ ಕಳವಳ ವ್ಯಕ್ತಪಡಿಸಿದ್ದಾರೆ.

    ಇಂದು ಕೆಪಿಸಿಸಿ ಅಧ್ಯಕ್ಷ ಕಚೇರಿಗೆ ಬಂದಿದ್ದ ರೌಡಿ ಇಶ್ತಿಯಾಕ್ ಅಹ್ಮದ್ ನಾನು ಹೇಳಿದ ರೀತಿಯಲ್ಲಿ ರಿಜ್ವಾನ್ ಅರ್ಷದ್ ಟಿಕೆಟ್ ನೀಡಿದರೆ ಮಾತ್ರ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಇಲ್ಲ ಎಂದರೆ ನಾನು ನಿಮ್ಮ ಪರ ಕೆಲಸ ಮಾಡಲ್ಲ ಎಂದು ಹೇಳಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಪದೇ ಪದೇ ಕಾಂಗ್ರೆಸ್ ಪಾಳ್ಯದಲ್ಲಿ ರೌಡಿ ಶೀಟರ್ ಕಾಣಿಸಿಕೊಳ್ಳುತ್ತಿದ್ದು, ಈ ವಿಚಾರದ ಬಗ್ಗೆ ರಾಜಕೀಯ ವಲಯದಲ್ಲಿ ಬಹಳ ಚರ್ಚೆಯಾಗುತ್ತದೆ.